03 January 2018

ಹಳೆಯಂಗಡಿಯ ಹೊಸ ಸಾಹಸ - ಸೈಕಲ್ ಸಂಘ

ಮಂಗಳೂರು ಕರಾವಳಿಯ ಚಳಿಗಾಲ ನಿಜದಲ್ಲಿ ಸೈಕಲ್ ಚಟುವಟಿಕೆಗಳಿಗೆ ಬಹಳ ಉತ್ತಮ ಕಾಲ. ಸಹಜವಾಗಿ ಅಂದು (೩೦-೧೨-೨೦೧೭) ಬೆಳಿಗ್ಗೆ ಎಂಟಕ್ಕೆ ಸೈಕಲ್ ಉಡುಪಿ ದಾರಿಯಲ್ಲಿ ಪೆಡಲೊತ್ತತೊಡಗಿದವ ಸುಮಾರು ೨೦ ಕಿಮೀ ಸವಾರಿಯನ್ನು ಒಂಬತ್ತಕ್ಕೆ ಸರಿಯಾಗಿ ವಿರಮಿಸಿದ ಸ್ಥಳ - ಹಳೆಯಂಗಡಿ ಸಪಪೂ ಕಾಲೇಜು ವಠಾರ. ಅಲ್ಲಿ ಮುಕ್ತ ವೇದಿಕೆಯ ಮೇಲೆ ಸುಮಾರು ಇಪ್ಪತ್ತು ಸೈಕಲ್ಲುಗಳು ಪರಿಸರ ಪ್ರಿಯ ಘೋಷವಾಕ್ಯಗಳೊಡನೆ ಸಜ್ಜಾಗಿದ್ದರೆ, ನೂರಕ್ಕೂ ಮಿಕ್ಕು ಮಕ್ಕಳು, ಅಧ್ಯಾಪಕರು ಮಹತ್ತಿನ ಸಂಭ್ರಮದಲ್ಲಿದ್ದರು. ಕಾಲೇಜಿನ ಪ್ರಾಂಶುಪಾಲೆ - ಪಿ.
ಜಯಶ್ರೀಯವರು, ತನ್ನ ಅಧ್ಯಾಪಕರುಗಳು ನಿಯತ ಶಿಕ್ಷಣದ ಹೊರಗೂ ನಡೆಸುವ ವಿದ್ಯಾರ್ಥಿಪರ ಚಟುವಟಿಕೆಗಳಿಗೆ ಬೆಂಬಲ ಕೊಡುವುದರಲ್ಲಿ ಹೆಸರುವಾಸಿ. "ಮನೆಯೆ ಮೊದಲ ಪಾಠಶಾಲೆ" - ಎನ್ನುವ ಮಾತಿದೆ. ಆದರೆ ಇದು ಹೆಚ್ಚಾಗಿ ಬಳಕೆಯಾವುಗುದು ಕೇವಲ ಮಾತಿನ ಚಂದಕ್ಕೆ ಮಾತ್ರ. ನಾವು ತಯಾರಿಸಿದ ‘ಕಸ’ಕ್ಕೆ ಜವಾಬ್ದಾರಿ ಮಾತ್ರ ಇನ್ನೊಬ್ಬರೆಂದು ನಡೆಯುತ್ತಿರುವ ದಿನಗಳಿವು. ಮಕ್ಕಳ ಔಪಚಾರಿಕ ವಿದ್ಯಾ ಸಂಸ್ಕಾರದೊಡನೆ ಏಳ್ಗೆ ಮತ್ತು ಹಾನಿತಡೆಗಳಿಗೆಲ್ಲ ಸಮಾಜ ಸುಲಭವಾಗಿ ಶಿಕ್ಷಣ
ಸಂಸ್ಥೆಗಳನ್ನೇ ಹೊಣೆ ಮಾಡುತ್ತವೆ. ಅದರ ಅರಿವಿದ್ದೂ ಅಂದು
ಕಾಲೇಜಿನಲ್ಲೊಂದು ಅಘೋಷಿತ ಸೈಕಲ್ ಸಂಘದ ಅಂಕುರಾರ್ಪಣೆ ನಡೆಯಿತು. ಇದು ದಾಖಲೆ ಪುಸ್ತಕಗಳಲ್ಲಿ ನಮೂದಾಗುಳಿಯುವ ಸಾಂಕೇತಿಕ ಕಲಾಪವಲ್ಲ. ಆಯ್ದ ಸುಮಾರು ಹದಿನೈದು ಹುಡುಗರು, ಇಬ್ಬರು ಅಧ್ಯಾಪಕರ ಸೈಕಲ್ ಮಹಾಯಾನವನ್ನೇ ಹೊರಡಿಸಿದ್ದರು. ತನ್ನ ಚುಟುಕು ಉದ್ಘಾಟನಾ ಮಾತುಗಳಲ್ಲಿ, ಸೈಕಲ್ ರ್ಯಾಲಿಯ ಆರೋಗ್ಯಪರ ಭೌತಿಕ ಪ್ರಯೋಜನದೊಡನೆ, ಪರಿಸರಪ್ರೇಮದ ಅನುಸಂಧಾನವನ್ನು ಸ್ಪಷ್ಟಪಡಿಸಿದರು. ಭೋರ್ಗರೆವ ಹೆದ್ದಾರಿಯಗುಂಟ ಮಕ್ಕಳನ್ನು ಬೀಳ್ಕೊಡುವ ಆತಂಕವನ್ನು ಎಚ್ಚರಿಕೆಯ ನುಡಿಗಳಲ್ಲಿ ಹುದುಗಿಸಿಟ್ಟು, ಹಸಿರು
ಪತಾಕೆ ತೋರಿಸಿದರು. 



ಇದೆಲ್ಲ ಶುರುವಾದದ್ದು ಒಂದು ಆಕಸ್ಮಿಕದಲ್ಲಿ! ಇದಕ್ಕೆ ಸುಮಾರು ನಾಲ್ಕು ತಿಂಗಳ ಹಿನ್ನೆಲೆಯಿದೆ. ಹಳೆಯಂಗಡಿ ಸರಕಾರೀ ಪದವಿಪೂರ್ವ ಕಾಲೇಜಿನ ಕನ್ನಡ ಅಧ್ಯಾಪಿಕೆ - ಜ್ಯೋತಿ ಚೇಳಾಯ್ರು, ನನ್ನ ಅಲ್ಪಸ್ವಲ್ಪ ಪುಸ್ತಕದಂಗಡಿಯ ಪರಿಚಯದ ಬಲದಲ್ಲಿ ಕಾಲೇಜಿನ ಪರಿಸರ ಸಂಘಕ್ಕೆ, ನನ್ನನ್ನು ಹಿಡಿದು ಹಾಕಿದ್ದು (ನೋಡಿ: ೮-೯-೧೭ರ ಸೈಕಲ್ ಸರ್ಕೀಟ್ ೩೩೯, ಶೀರ್ಷಿಕೆ - ಹಳೆಯಂಗಡಿ ಸಪಪೂ ಕಾಲೇಜಿನ ನಡೆ
ನದಿಯೆಡೆಗೆ!) ನಿಮ್ಮಲ್ಲಿ ಬಹುತೇಕರು ಓದಿಯೇ ಇರುತ್ತೀರಿ. ಆಗ ಆಕಸ್ಮಿಕವೆಂಬಂತೆ ಪರಿಚಿತರಾದವರು, ಅಲ್ಲಿನ ಇನ್ನೊಬ್ಬ ತರುಣ ಅಧ್ಯಾಪಕ - ಅನಿಲ್ ವಿ. ಚೆರಿಯನ್. ಇವರು ನನ್ನನ್ನು ಸ್ವಲ್ಪ ಹೆಚ್ಚೇ ಅನುಸರಿಸಿದರು. ಅದರ ಫಲವಾಗಿ ಆ ಕಾಲೇಜು ಶಾಂಭವಿ ತೀರದಲ್ಲಿ ನಡೆಸಿದ ಎನ್ನೆಸ್ಸೆಸ್ ಶಿಬಿರಕ್ಕೂ (ಶಿಬಿರಾಧಿಪತಿ - ಪ್ರಾಯದಲ್ಲಿ ಅನಿಲ್‍ಗೆ ಹಿರಿಯರಾದರೂ ಉತ್ಸಾಹದಲ್ಲಿ ಏನೂ ಕಡಿಮೆಯಿಲ್ಲದ ಇಂಗ್ಲಿಷ್ ಅಧ್ಯಾಪಕ ಪ್ರೇಮನಾಥ ಶೆಟ್ಟಿಗಾರ್) ನಾನು ಹೋಗುವಂತಾದ್ದೂ (ನೋಡಿ: ೩-೧೦-೧೭ರ ಸೈಕಲ್ ಸರ್ಕೀಟ್ ೩೪೨, ಶೀರ್ಷಿಕೆ -
ಶಾಂಭವಿ ತೀರದಲ್ಲಿ ಪರಿಸರ ಶುದ್ಧಿ) ನೀವು ತಿಳಿದೇ ಇದ್ದೀರಿ. ಆದರೂ ಅನಿಲ್ ಆಸಕ್ತಿ ಬತ್ತಲಿಲ್ಲ ಎನ್ನುವಂತೆ ಮೊನ್ನೆ ಫೋನಾಯಿಸಿದ್ದರು "ಸಾರ್, ನಾನೂ ನಿಮ್ಮಂತೆ ಒಂದು ಸೈಕಲ್ ಕೊಂಡಿದ್ದೇನೆ! ಕಾಲೇಜಿನಲ್ಲಿ ಮಕ್ಕಳಿಗೂ ಇದರ ಪ್ರೇರಣೆ ಕೊಡುತ್ತಿದ್ದೇನೆ. ಪ್ರಥಮ ಪ್ರಯತ್ನವಾಗಿ ಇದೇ ಮೂವತ್ತರಂದು ಕಾಲೇಜಿನಿಂದ ಮಲ್ಪೆಯವರೆಗೆ - ಆದಷ್ಟೂ ಬೀಚ್ ರಸ್ತೆಯಲ್ಲಿ, ಒಂದು ಸೈಕಲ್ ರ್ಯಾಲೀ ನಡೆಸುತ್ತಿದ್ದೇವೆ. ಶೆಟ್ಟಿಗಾರ್ ಸಾರ್ ಕೂಡಾ ಸುಮಾರು ಮೂರು ದಶಕಗಳ ಮೇಲೆ, ಯಾರದೋ ಸೈಕಲ್ ಹಿಡಿದು ಹೊರಟಿದ್ದಾರೆ. ನೀವೂ ಜತೆಗೊಡಬೇಕು." ಇಷ್ಟು ಧನಾತ್ಮಕ
ಉತ್ಸಾಹಕ್ಕೆ ನಾನಾದರೂ ಹೇಗೆ ಹೇಳಲಿ "ಇಲ್ಲ"?



ಪ್ರಥಮ ಪದವಿಪೂರ್ವ ತರಗತಿಯ ಸುಮಾರು ಹದಿನೈದು ಹುಡುಗರು, ಇಬ್ಬರು ಅಧ್ಯಾಪಕರ ತಂಡ. ಪ್ರಥಮ ಪ್ರಯೋಗದ ಎಚ್ಚರದಲ್ಲಿ, ಮೊದಲು ಘೊಷಿಸಿಕೊಂಡ ಮಲ್ಪೆ ಲಕ್ಷ್ಯವನ್ನು ಬದಲಿಸಿ, ಕಾಪುವಿಗೆ ಮಿತಿಗೊಳಿಸಿದ್ದರು. ತಂಡದಲ್ಲಿ ನಾಲ್ಕೈದು ಮಾತ್ರ ಹೊಸ ತಲೆಮಾರಿನ ಸೈಕಲ್ಲುಗಳು, ಉಳಿದಂತೆ ಎಲ್ಲ (ಏಕ ಗೇರಿನ,) ಸಾಂಪ್ರದಾಯಿಕ, ಎಷ್ಟೋ ಕಂಯಿಕುಂಯಿ ಹಾಡುವಷ್ಟೂ ಹಳತಾದ ಸೈಕಲ್ಲುಗಳೇ. ಆದರೆ ಸವಾರರ ಉತ್ಸಾಹ ನವನವೀನ. ಕಾಲೇಜಿನ ದಿಬ್ಬದೆತ್ತರದಿಂದಿಳಿದು, ಬಳಸು
ದಾರಿಯಲ್ಲಿ ಹಳೆಯಂಗಡಿ ಪೇಟೆಯೊಳಗೆ ಹಾಯ್ದು, ನಂದಿನಿ ತೀರದಲ್ಲಿ ಯಾನಾರಂಭವಾಯ್ತು. ಎಡಬದಿಯಲ್ಲಿ, ಒಂದೇ ಸಾಲಿನಲ್ಲಿ, ಪರಸ್ಪರ ಕನಿಷ್ಠ ಐದು ಮೀಟರಾದರೂ ಅಂತರ ಉಳಿಸಿಕೊಂಡು, ಸುತ್ತಣ ದೃಶ್ಯಗಳಿಗೆ ಸಾಕ್ಷಿಯಾಗುತ್ತ ಸಾಗಬೇಕು ಇತ್ಯಾದಿ ಎಚ್ಚರದ ನುಡಿಗಳೆಲ್ಲದರ (ಅಕ್ಷರಶಃ ಅಲ್ಲದಿದ್ದರೂ) ಆಶಯವನ್ನು ಮಕ್ಕಳು ಸಾಕಷ್ಟು ಚೆನ್ನಾಗಿಯೇ ಪಾಲಿಸಿದರು. 



ನಂದಿನಿ ನದಿ ಮುಖಜ ಭೂಮಿಯ (ಹಿನ್ನೀರು) ಸಹಕಾರದಲ್ಲಿ ಎದ್ದಿದ್ದ ಸಿಗಡಿ ಕೃಷಿ ಹೊಂಡಗಳು, ದೈವಾರಾಧನೆಯ ವೈವಿಧ್ಯಮಯ ಬಿಂಬಗಳು, ಸೌಕರ್ಯಗಳ ಅತಿಶಯಕ್ಕಿಳಿದು ಎದುರೇಟು ತಿನ್ನುತ್ತಿರುವ ನಿದರ್ಶನಗಳು, (ಜಲಮೂಲಗಳ ಮೇಲಿನ ಅತಿಕ್ರಮಣ - ಬಂಡೆಗೋಡೆಯೂ ಸೇರಿದಂತೆ ವಿವಿಧ ಮನುಷ್ಯ ರಚನೆಗಳು ಮತ್ತು ಕಡಲಕೊರೆತ) ಮೀನುಗಾರರ ಚಟುವಟಿಕೆಗಳ ಸೂಕ್ಷ್ಮಗಳು, ಈಚೆಗೆ ಬಂದ ಓಖಿ ಚಂಡಮಾರುತದ ಪರಿಣಾಮಗಳು, ಸಾರ್ವಜನಿಕ ಕಾಮಗಾರಿಗಳ ಅದರಲ್ಲೂ ಹೆದ್ದಾರಿ ಅಭಿವೃದ್ಧಿಯ ನಿಧಾನದ್ರೋಹದ ವಿಷಾದ ಚಿತ್ರಗಳೇ ಮುಂತಾದವು ನೇರಾನೇರವಲ್ಲದಿದ್ದರೂ ಮಕ್ಕಳನ್ನು ಪ್ರಭಾವಿಸಿದ್ದು ಖಂಡಿತ. 



ನಿತ್ಯದ ಶೈಕ್ಷಣಿಕ ಬಿಗಿತಗಳಿಂದ ಮುಕ್ತವಾದ ವಿದ್ಯಾರ್ಥಿ ಅಧ್ಯಾಪಕ ಒಡನಾಟ, ಹುಡುಗರ ವಿಭಿನ್ನ ಸಾಮರ್ಥ್ಯಗಳಿಗೆ ಅಂದರೆ, ಸವಾರಿ ಸಮರ್ಥ, ರಿಪೇರಿ ತಜ್ಞ, ನೀರೋ ಲಘು ತಿನಿಸುಗಳನ್ನೋ ಪರಸ್ಪರ ಹಂಚಿಕೊಳ್ಳುವ ಸಹಕಾರಿ ಎಂಬಿತ್ಯಾದಿ ಪರಿಣತಿಗಳು ಅಲ್ಲಿಗೆ ಸಹಜವಾಗಿ ಕಂಡರೂ ಜೀವನದೋಟದಲ್ಲಿ ಗಟ್ಟಿಯಾಗಿ ನಿಲ್ಲುವ ನೆನಪುಗಳನ್ನೆ ಕಟ್ಟಿಕೊಟ್ಟಿತು ಈ ಸೈಕಲ್ಲೋಟ. ಹಸಿರಿನ ಗದ್ದೆಗಳ ಅಂಚು, ಪಡುಗಡಲನ್ನೇರಿ ಬರುವ ಗಾಳಿಯ ಒತ್ತಡ ಎದುರಿಸಲು ಅತ್ತಲೇ ವಾಲಿದ ತೆಂಗಿನ ತೋಪುಗಳ ಎಡೆಯಲ್ಲಿನ ಗಾಳಿಯ ತೀಡು, ಹಿನ್ನೀರ ಜಾಲಗಳನ್ನು ಬಳಸುತ್ತ ಹಾವಾಡುವ
ದಾರಿಯಲ್ಲಿನ ನೆರಳಿನಲ್ಲಿ ಹುರುಪೇರುತ್ತ, ಆಗೀಗ ಅಧ್ಯಾಪಕರುಗಳ ಕಡಿವಾಣ ಬಿಗಿಯುತ್ತ ಯಾನ ಸಾಗಿತು. ಹತ್ತೆಂಟು ಕವಲು ದಾರಿಗಳಲ್ಲಿ ಸರಿ ಹುಡುಕುತ್ತಾ ಕಾಂಕ್ರೀಟ್, ಡಾಮರ್, ಕಚ್ಚಾ ಎಂದು ಬೇಧವೆಣಿಸದೇ ಬಹುತೇಕ ಸಮತಟ್ಟಿನ ಜಾಡೇ ಆದರೂ ಇಳಿಜಾರುಗಳಲ್ಲಿ ಹುಚ್ಚುಗಟ್ಟಿ, ಏರುಗಳಲ್ಲಿ ಏದುಬ್ಬಸ ಬಿಟ್ಟು (ಉಚ್ಚಿಲದ ಗುಡ್ಡೆಯ ಮೇಲಿದ್ದ ಆಲಡೆಗೇರುವ ದಾರಿಯಲ್ಲಿ ಬಹುತೇಕರು ಸೈಕಲ್ ಇಳಿದು ನೂಕಿಯೂ), ಆಗೀಗ ಹೆದ್ದಾರಿಗೆ ನುಗ್ಗಿ, ಮತ್ತೆ ಕಡಲಕಿನಾರೆ ಬಯಸಿ, ಹನ್ನೆರಡು ಗಂಟೆಯ ಸುಮಾರಿಗೆ ಕಾಪು ದೀಪಸ್ತಂಭದ ಬುಡ ತಲಪಿತು ಪರಿಸರಯಾನದ ಏಕಮುಖ. 



ಕಾಪು ಪೇಟೆಯ ಒಳಗಿನ ಬಾಲಾಜಿ ಹೋಟೆಲಿನಲ್ಲಿ ಊಟ ಮುಗಿಸಿದೆವು. ಹೆದ್ದಾರಿ ಅಭಿವೃದ್ಧಿಯ ಸ್ವರೂಪ ಮರುಭೂಮಿಗೆ ಭಿನ್ನವಲ್ಲ. ಮತ್ತಲ್ಲಿನ ಘನ ವಾಹನಗಳ ಧಾವಂತದಲ್ಲಿ ಬಡ ಸೈಕಲ್ ಉಪೇಕ್ಷೆಗೀಡಾಗುವುದೂ ಮರೆಯುವಂಥದ್ದಲ್ಲ. ಹಾಗಾಗಿ ನಮ್ಮ ಮರುಯಾನ ಪಡುಬಿದ್ರೆಯವರೆಗೆ ಮತ್ತದೇ ಕಡಲಕಿನಾರೆಯನ್ನೇ ಅನುಸರಿಸಿತ್ತು. ಲೆಕ್ಕಕ್ಕೆ ಚಳಿಗಾಲವೇ ಆದರೂ ದಕ ಜಿಲ್ಲೆಯ ತೇವಭರಿತ ವಾತಾವರಣದಲ್ಲಿ ಬಿಸಿಲ ಚುರುಕು ಹೆಚ್ಚಿದ ಭಾವ ಎಲ್ಲರನ್ನೂ ಕಾಡುತ್ತಿತ್ತು. ‘ಬಡ’ಶಾಲಾ
ಮಕ್ಕಳಾದ್ದರಿಂದ ಒಯ್ದ ಕೆಲವೇ ಲಘು ತಿನಿಸುಗಳು ಎಂದೋ ಖಾಲಿಯಾಗಿದ್ದವು. ನೀರಂಡೆಗಳನ್ನು ಅಲ್ಲಲ್ಲಿ ಮನೆಬಾವಿ ನೀರುಗಳಿಂದ ಮರುಪೂರಣಗೊಳಿಸಿಕೊಳ್ಳುವುದೂ ನಡೆದಿತ್ತು. ಆದರೂ ನಿಯತ ಅಭ್ಯಾಸದೋಟವಿಲ್ಲದೇ ತೋಡಗಿದ್ದ ತುಸು ದೀರ್ಘ ಸವಾರಿ, ದಿನದ ಬಹುಭಾಗ ಸೈಕಲ್ ಮೆಟ್ಟಿದ ಸುಸ್ತು ಹಲವರನ್ನು ಕೇವಲ ಚಕ್ರನೋಟಕರನ್ನಾಗಿಸಿತ್ತು. ಹಾಗಾಗಿ ಪೂರ್ವಾಹ್ನದಲ್ಲಿ ಬಳಸಿದ ಅಷ್ಟೂ ಬಳಸಂಬಟ್ಟೆಯನ್ನು ಅನುಸರಿಸದೆ ತಂಡ ಪಡುಬಿದ್ರೆಯಲ್ಲಿ ಹೆದ್ದಾರಿ ಸೇರಿತು. ಅಲ್ಲಿನ ಹೋಟೆಲ್ ಒಂದರಲ್ಲಿ (ಅತಿಥಿ ಉಪಚಾರ್‍) ಲಘೂಪಹಾರ, ಚಾ ಹಾಕಿ
ಕೊನೆಯ ಅಂತರವನ್ನು ಸಾಕಷ್ಟು ವಿರಾಮದಲ್ಲೇ ನಡೆಸಿತು. ನಿಯಂತ್ರಿತ ಏರು, ಬಹುತೇಕ ಇಳಿಜಾರೇ ಇದ್ದ, ಹೆದ್ದಾರಿಯ ನುಣ್ಣನೆ ಮತ್ತು ನೇರ ಜಾಡಿನಲ್ಲಿ ತಂಡ ಹಳೆಯಂಗಡಿಯ ಕಾಲೇಜು ಸೇರುವಲ್ಲಿಗೆ ಮಕ್ಕಳ ಪರಿಸರ ಮಹಾಯಾನ ಸಮಾಪ್ತಗೊಂಡಿತ್ತು. 





ಭಾಷಣದ ಮೂಲಕ ಉಪದೇಶಗಳು, ಪ್ರದರ್ಶಿಕೆಗಳು ಏನೇ ಇದ್ದರೂ ರೂಢಿಗತ ಸಣ್ಣ ತಪ್ಪುಗಳು ಯಾರಿಂದಲೂ ನಡೆಯುವುದಿದೆ. ಅಂಥ ಸಣ್ಣ ಒಂದೆರಡು ತಪ್ಪು ಮಕ್ಕಳಿಂದ ಆದದ್ದಿದ್ದರೂ ಮರುಕ್ಷಣದಲ್ಲಿ ಎಂಬಂತೆ ಅವರು ಬುದ್ಧಿಪೂರ್ವಕ ತಿದ್ದುಪಡಿಗಳನ್ನು ಮಾಡಿಕೊಂಡದ್ದು ಸೈಕಲ್ ಪರಿಸರ ಯಾನದ ಯಶಸ್ಸನ್ನೇ ಸಾರಿತು. ಸಾಲಿಗ್ರಾಮ ಮಕ್ಕಳ (ಯಕ್ಷಗಾನ) ಮೇಳದ ಯಜಮಾನರಾದ ಎಚ್. ಶ್ರೀಧರ ಹಂದೆಯವರು, ಕಳೆದ ಮೂರು ನಾಲ್ಕು ದಶಕಗಳಿಂದ, ಪ್ರತಿ ವರ್ಷ ಎಂಬಂತೆ ಹೊಸ ಹೊಸ ಮಕ್ಕಳನ್ನು ಪ್ರಾಥಮಿಕ  ಹಂತದಿಂದ, ಒಂದು ಪ್ರದರ್ಶನದ ಮಟ್ಟಕ್ಕೇರಿಸುತ್ತಲೇ ಮೇಳವನ್ನು ಜೀವಂತವಾಗಿಟ್ಟಿದ್ದಾರೆ. ಈ ಅಪಾರ ಶ್ರಮದ ಬಗ್ಗೆ ಸಂದರ್ಶಕರು ಯಾರೋ ಪ್ರಶ್ನಿಸಿದಾಗ, "ಮಕ್ಕಳು ಮುಂದೆ ದೊಡ್ಡ ಯಕ್ಷಗಾನ ಕಲಾವಿದರಾಗದಿದ್ದರೂ ಯಕ್ಷಗಾನಕ್ಕೆ ಆರೋಗ್ಯಪೂರ್ಣ ಪ್ರೇಕ್ಷಕರಂತೂ ಖಂಡಿತ ಆಗುತ್ತಾರೆ" ಎಂದು ದೃಢವಾಗಿ ಹೇಳುತ್ತಾರೆ. (ನೋಡಿ: ಸಾಲಿಗ್ರಾಮ ಮಕ್ಕಳ ಮೇಳ) ಅದನ್ನೇ ತುಸು ಬದಲಿಸಿ ಹೇಳುವುದಾದರೆ, ಪರಿಸರ ಘೋಷಣೆಯ ಸೈಕಲ್ ಯಾನ ಊರನ್ನು ಪ್ರಭಾವಿಸುವುದುದಿರಲಿ, ಭಾಗವಹಿಸಿದ ಕನಿಷ್ಠ ಹದಿನೆಂಟು ಮಂದಿಯನ್ನಂತೂ ಜಾಗೃತರನ್ನಾಗಿಸುವುದು ಖಂಡಿತ. ತಂಡವನ್ನು ಹಾರ್ದಿಕವಾಗಿ ಬೀಳ್ಕೊಂಡು ನಾನು ಮಂಗಳೂರುಮುಖಿಯಾದೆ. ನನ್ನ ಬೆಳಗ್ಗಿನ ಯಾನಾವಧಿಗೆ ಹೋಲಿಸಿದರೆ ಮರುಯಾನ ಹೆಚ್ಚುವರಿ ಇಪ್ಪತ್ತು ಮಿನಿಟನ್ನೇ ಬಳಸಿತ್ತು. ಆದರೆ ಒಂದು ಅರ್ಥಪೂರ್ಣ ಚಟುವಟಿಕೆಯಲ್ಲಿ ಪ್ರೇರಕ-ಭಾಗಿಯಾದ ಧನ್ಯತೆ ನನ್ನನ್ನು ಪೂರ್ಣ ಆವರಿಸಿತ್ತು.





4 comments:

  1. Haleyangadi makkala Cycle Sanghakke subhavagali.

    ReplyDelete
  2. ಒಳ್ಳೆಯ ಅಭ್ಯಾಸಕ್ಕೆ ಪ್ರೋತ್ಸಾಹಕೊಟ್ಟ ಎಲ್ಲರಿಗೂ ಅಭಿನಂದನೆ.

    ReplyDelete