(ಸಹಪಾಠಿ ಮಿತ್ರರು ಕಂಡ ಬಾಗಲೋಡಿ ೨)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ
೬)
- ಪಿ. ಸೇತುಮಾಧವರಾವ್
ದೇವರಾಯರ ಮತ್ತು ನನ್ನ ಸಂಬಂಧಗಳನ್ನು ಮೂರು ಕಾಲ ವಿಭಾಗಗಳಾಗಿ ಗುರುತಿಸಬಹುದು. ೧. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಾವು ಸಹಪಾಠಿಗಳಾಗಿದ್ದ ಎರಡು ವರ್ಷಗಳು ಮತ್ತು ಮದ್ರಾಸಿನಲ್ಲಿ ನಮ್ಮಿಬ್ಬರ ಆಂಗ್ಲಭಾಷೆಯ ಉನ್ನತ ಅಭ್ಯಾಸದ ಮೂರು ವರ್ಷಗಳು. ೨. ಮಂಗಳೂರು ಸರಕಾರಿ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ನಾವು ಸಹೋದ್ಯೋಗಿಗಳಾಗಿದ್ದ ಎರಡು ವರ್ಷಗಳು. ೩. ಭಾರತ ಸರಕಾರದ ವಿದೇಶಾಂಗ ಖಾತೆಯಲ್ಲಿ ದೇವರಾಯರು ಸೇವೆಗೈಯುತ್ತಿದ್ದ ಸುಮಾರು ೩೪ ವರ್ಷಗಳು. (ಚಿತ್ರ: ಲೇಖಕ ಪಿ. ಸೇತುಮಾಧವ ರಾಯರದು)
ಬಾಗಲೋಡಿ ದೇವರಾವ್ ಮತ್ತು ನಾನು ೧೯೪೨ರಿಂದ
೧೯೪೪ರವರೆಗಿನ ಎರಡು ವರ್ಷಗಳ ಕಾಲ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಹಪಾಠಿಗಳು.ಆದರೆ ಆಗ
ನಮ್ಮ ಒಡನಾಟ ಕಡಿಮೆ ಎನ್ನಬೇಕು. ೨೨೫ ವಿದ್ಯಾರ್ಥಿಗಳನ್ನು ಒಳಗೊಂಡ ಇಂಗ್ಲಿಷ್ ತರಗತಿ ಒಂದು
ಸಾರ್ವಜನಿಕ ಸಭೆಯಂತೆ ಇದ್ದುದರಿಂದ ಅಲ್ಲಿ ನಾವು ಮಾದರಿ ಸಭಾಸದರಂತೆ ಇರುತ್ತಿದ್ದೆವು. ಭೌತಶಾಸ್ತ್ರ, ಗಣಿತ ಮತ್ತು ರಸಾಯನಶಾಸ್ತ್ರಗಳ ತರಗತಿಗಳಲ್ಲಿ ದೇವರಾಯರ ಸ್ಥಾನ ಒಂದನೆಯ ಅಥವಾ ಎರಡನೆಯ ಸಾಲಿನಲ್ಲಿ. ಜಿ.ಟಿ. ನಾರಾಯಣರಾವ್ ಮತ್ತು ನಾನು ಕೊನೆಯ ಸಾಲಿನಲ್ಲಿ, ಅಕ್ಕಪಕ್ಕದಲ್ಲಿ ಸ್ಥಾನ ಪಡೆದಿದ್ದೆವು. ಈ ವ್ಯವಸ್ಥೆಯಲ್ಲಿ ನಮ್ಮ ಕೈವಾಡವೇನೂ ಇರಲಿಲ್ಲ, ಇರುವಂತೆಯೂ ಇಲ್ಲ. ಕಾಲೇಜಿನ ಆಡಳಿತದ ನಿರ್ದೇಶನದಂತೆ ಎಲ್ಲವೂ ನಡೆಯಬೇಕಿತ್ತು, ನಡೆಯುತ್ತಿತ್ತು. ಬಾಗಲೋಡಿ ಹಿಂದಿ ತರಗತಿಯಲ್ಲಿದ್ದರು. ನಾನು ಸಂಸ್ಕೃತದ, ಜಿಟಿ ಕನ್ನಡದ ವಿದ್ಯಾರ್ಥಿಗಳು.
ಸಾರ್ವಜನಿಕ ಸಭೆಯಂತೆ ಇದ್ದುದರಿಂದ ಅಲ್ಲಿ ನಾವು ಮಾದರಿ ಸಭಾಸದರಂತೆ ಇರುತ್ತಿದ್ದೆವು. ಭೌತಶಾಸ್ತ್ರ, ಗಣಿತ ಮತ್ತು ರಸಾಯನಶಾಸ್ತ್ರಗಳ ತರಗತಿಗಳಲ್ಲಿ ದೇವರಾಯರ ಸ್ಥಾನ ಒಂದನೆಯ ಅಥವಾ ಎರಡನೆಯ ಸಾಲಿನಲ್ಲಿ. ಜಿ.ಟಿ. ನಾರಾಯಣರಾವ್ ಮತ್ತು ನಾನು ಕೊನೆಯ ಸಾಲಿನಲ್ಲಿ, ಅಕ್ಕಪಕ್ಕದಲ್ಲಿ ಸ್ಥಾನ ಪಡೆದಿದ್ದೆವು. ಈ ವ್ಯವಸ್ಥೆಯಲ್ಲಿ ನಮ್ಮ ಕೈವಾಡವೇನೂ ಇರಲಿಲ್ಲ, ಇರುವಂತೆಯೂ ಇಲ್ಲ. ಕಾಲೇಜಿನ ಆಡಳಿತದ ನಿರ್ದೇಶನದಂತೆ ಎಲ್ಲವೂ ನಡೆಯಬೇಕಿತ್ತು, ನಡೆಯುತ್ತಿತ್ತು. ಬಾಗಲೋಡಿ ಹಿಂದಿ ತರಗತಿಯಲ್ಲಿದ್ದರು. ನಾನು ಸಂಸ್ಕೃತದ, ಜಿಟಿ ಕನ್ನಡದ ವಿದ್ಯಾರ್ಥಿಗಳು.
ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ
ಒಂದು ಭಾಷಣ ಸ್ಪರ್ಧೆಯಲ್ಲಿ ದೇವರಾಯರು ಪ್ರಥಮ ಸ್ಥಾನ ಗಳಿಸಿದ ಬಳಿಕ ಅವರ ಪರಿಚಯ ವಿದ್ಯಾರ್ಥಿಲೋಕಕ್ಕೆ
ಆಯಿತು.
೧೯೪೪ರಿಂದ ೪೭ರತನಕ ದೇವರಾಯರು ಮದ್ರಾಸಿನ
ಕ್ರಿಶ್ಚಿಯನ್ ಕಾಲೇಜಿನಲ್ಲಿಯೂ ನಾನು ಪ್ರೆಸಿಡೆನ್ಸಿ ಕಾಲೇಜಿನಲ್ಲಿಯೂ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ
ಉನ್ನತ ವ್ಯಾಸಂಗ ಮಾಡುತ್ತಿದ್ದಾಗ ಅಲ್ಲೊಮ್ಮೆ ಭೇಟಿಯಾಗುತ್ತಿದ್ದೆವು.
ಈ ಎರಡು ಕಾಲೇಜುಗಳ ಇಂಗ್ಲಿಷ್ ವಿಭಾಗದ
ಒಂದು ಚರ್ಚಾಕೂಟದಲ್ಲಿ ದೇವರಾಯರು ಎಲ್ಲರ ಗಮನ ಸೆಳೆದರು. “ಮದ್ರಾಸು ವಿಶ್ವವಿದ್ಯಾಲಯದ ಇಂಗ್ಲಿಶ್
ಭಾಷೆ ಮತ್ತು ಸಾಹಿತ್ಯದ ಉನ್ನತ ವಿಭಾಗದಲ್ಲಿಯ ಪಠ್ಯಕ್ರಮ ಪುರಾತನ ಕಾಲದ್ದಾಗಿದ್ದು ಅದರಲ್ಲಿ ೨೦ನೇ
ಶತಮಾನದ ಸಾಹಿತ್ಯಾಂಶ ತೀರ ನಿರಾಶಾದಾಯಕವಾಗಿದ್ದು, ಇದನ್ನು ರದ್ದುಪಡಿಸಿ ಪುರೋಗಾಮಿಯಾದ ಪಠ್ಯಕ್ರಮವನ್ನು
ತಯಾರಿಸಬೇಕೆಂದು” ದೇವರಾಯರು ಗುಡುಗಿದರು.
ಪ್ರೆಸಿಡೆನ್ಸಿ ಕಾಲೇಜಿನ ಇಂಗ್ಲಿಷ್
ವಿಭಾಗದ ಮುಖ್ಯಸ್ಥರಾಗಿದ್ದ ವಿ.ಕೆ. ಅಯ್ಯಪ್ಪನ್ ಪಿಳ್ಳೈ ಅವರು ಅಧ್ಯಕ್ಷಪೀಠದಿಂದ ವಿಶ್ವವಿದ್ಯಾನಿಲಯದ
ಕಾರ್ಯವೈಖರಿಯನ್ನು ಸಮರ್ಥಿಸುತ್ತ, “ಸಾಹಿತ್ಯ ಸೃಷ್ಟಿಯಾದ ಕೂಡಲೇ ಅದನ್ನು ವಿದ್ಯಾರ್ಥಿಗಳ ಮೇಲೆ ಹೇರದಿರುವುದು
ಸರಿಯಾದ ಧೋರಣೆ. ಏಕೆಂದರೆ ಎಷ್ಟೋ ಬಾರಿ ಜಳ್ಳು ಕೂಡ ಸಾಹಿತ್ಯದ ಸೋಗಿನಲ್ಲಿದ್ದು ಅದನ್ನು ಓದುಗರೇ
ಕಿತ್ತೆಸೆಯುತ್ತಾರೆ. ಆ ಬಳಿಕವಷ್ಟೇ ಉಳಿದ ಸತ್ತ್ವಯುತ ಸಾಹಿತ್ಯವನ್ನು ವಿದ್ಯಾರ್ಥಿಗಳು ಓದುವುದು
ಯುಕ್ತ” ಎಂದರು. ಆದ್ರೆ ದೇವರಾಯರ ಹುರುಪಿನ ಆಕ್ರಮಣದಿಂದ ತಾನು ಪ್ರಭಾವಿತನಾಗಿದ್ದೇನೆ. ೨೦ನೆಯ ಶತಮಾನದ
ಇಂಗ್ಲಿಷ್ ಸಾಹಿತ್ಯವನ್ನು ತೆರೆದ ಕಣ್ಣುಗಳಿಂದ ಪುನಃ ಕಾಣುವಂತೆ ತನ್ನ ಸಹೋದ್ಯೋಗಿಗಳನ್ನು ಪ್ರೋತ್ಸಾಹಿಸುವುದಾಗಿ
ಆಶ್ವಾಸನೆಯಿತ್ತರು.
ಈ ವಿಷಯವನ್ನು ಇಷ್ಟು ವಿಸ್ತಾರವಾಗಿ
ಬರೆದುದಕ್ಕೆ ಕಾರಣವಿದೆ. ೧೯೪೬ರಲ್ಲಿ ನಡೆದ ಇಂಗ್ಲಿಷ್ ಆನರ್ಸ್ ಲಿಖಿತ ಪರೀಕ್ಷೆಗಳ ಬಳಿಕ ನಡೆದ ಮೌಖಿಕ
ಪರೀಕ್ಷೆಯ ಸಮಯದಲ್ಲಿ ಪಿಳ್ಳೈಯವರು ದೇವರಾಯರನ್ನು ವಿಶ್ವವಿದ್ಯಾಲಯದ ಪಠ್ಯ ಕ್ರಮವನ್ನು ದಟ್ಟವಾಗಿ
ಟೀಕಿಸಿದ ಒಳ್ಳೆಯ ವಿದ್ಯಾರ್ಥಿಯೆಂದು ಗೌರವದಿಂದ ನೆನಪಿಸಿಕೊಂಡರು.
ಪ್ರೆಸಿಡೆನ್ಸಿ ಕಾಲೇಜಿನ ಇನ್ನೊಬ್ಬ
ಪ್ರಾಧ್ಯಾಪಕರಾಗಿದ್ದ ಬಿ. ರಾಘವ ಬಾಳಿಗರು ನನ್ನೊಡನೆ ಕೇಳಿದ್ದರು “ಈ ದೇವರಾಯರೆಂದರೆ ಯಾರು? ಅವರ
ಉತ್ತರ ಪುಸ್ತಕಗಳನ್ನು ಓದುತ್ತಿದ್ದಾಗ ನನ್ನನ್ನು ಅವರು ಹಲವು ಬಾರಿ ನಿಘಂಟುವಿನತ್ತ ಓಡಿಸಿದರು!”
ದೇವರಾಯರ ಇಂಗ್ಲೀಷ್ ಶೈಲಿಯನ್ನು ಬಲ್ಲವರು
ಈ ಮಾತಿನ ಸತ್ಯವನ್ನು ಒಪ್ಪಿಕೊಳ್ಳಲೇಬೇಕು! [ಮುಂದೆ ಬರುವ Penchant for Enchanting Words ಲೇಖನ
ನೋಡಿ]
ದೇವರಾಯರು ಮತ್ತು ನಾನು ಮಂಗಳೂರಿನ
ಸರಕಾರಿ ಕಾಲೇಜಿನಲ್ಲಿ ಸುಮಾರು ಎರಡು ವರ್ಷ ಇಂಗ್ಲಿಷ್ ವಿಭಾಗದಲ್ಲಿ ಸಹೋದ್ಯೋಗಿಗಳಾಗಿದ್ದ ಕಾಲವನ್ನು
ನಾನು ಇಂದಿಗೂ ಉತ್ಸಾಹದಿಂದಲೂ ಸಂತೋಷದಿಂದಲೂ ಸ್ಮರಿಸಿಕೊಳ್ಳುತ್ತೇನೆ.
ಪಾಶ್ಚಾತ್ಯ ಪದ್ಧತಿಯ ಉಡುಪು ಆಗ ಪ್ರಾಧ್ಯಾಪಕರಿಗೆ
ಕಡ್ಡಾಯವಾಗಿತ್ತು. ದೇವರಾಯರು ಒಂದು ದಿನ ಕಾಲೇಜನ್ನು ಪ್ರವೇಶಿಸಿದಾಗ ವೇಳೆ ೯-೫೫ ಆಗಿತ್ತು. ಅವರು
ನೇರವಾಗಿ ತಮ್ಮ ತರಗತಿ ಪ್ರವೇಶಿಸಿ ಪ್ರವಚನ ಆರಂಭಿಸಿದರು. ಎರಡು ಮೈಲಿಯಷ್ಟು ದಾರಿಯನ್ನು ವೇಗವಾಗಿ
ಕ್ರಮಿಸಿ ಪ್ರವಚನ ಮಾಡುತ್ತಿದ್ದಂತೆಯೇ ಅವರಿಗೆ ಸೆಕೆ ತಡೆಯಲಾಗಲಿಲ್ಲ. ವಿದ್ಯಾರ್ಥಿಗಳ ಸಮ್ಮತಿ ಪಡೆದು
ತಾವು ಧರಿಸಿದ್ದ ಕೋಟನ್ನು ಆಸನದ ಸುತ್ತ ಹೊದೆಸಿ ಪ್ರವಚನವನ್ನು ಸಮರ್ಥವಾಗಿ ಮುಂದುವರಿಸಿ ಮುಗಿಸಿದರು.
ಅವರಿಗಾಗಲಿ ವಿದ್ಯಾರ್ಥಿಗಳಿಗಾಗಲಿ ಇದರಲ್ಲಿ ಆಭಾಸವೇನೂ ಕಾಣಲಿಲ್ಲ. ೧೦-೩೦ರ ಹೊತ್ತಿಗೆ ಕಾಲೇಜಿನ
ಪ್ರಿನ್ಸಿಪಾಲರು ಕಾರಿನಿಂದ ಇಳಿದು ತಮ್ಮ ಆಫೀಸಿಗೆ ಹೋಗುವ ದಾರಿಯಲ್ಲಿ ದೇವರಾಯರ ತರಗತಿಯನ್ನು ಗಮನಿಸಿದರು.
ಭಾರತ ಸರಕಾರದ ವಿದೇಶಾಂಗ ಖಾತೆಯ ಸೇವೆಗೆ
ಆರಿಸಲ್ಪಟ್ಟಿರುವ ಒಬ್ಬ ವ್ಯಕ್ತಿ ತರಗತಿಯಲ್ಲಿ ತನ್ನ ಕೋಟು ಕಳಚಿ ಘೋರ ಅಪರಾಧ ಎಸಗಿರುವುದರ ಕುರಿತು
ಪ್ರಿನ್ಸಿಪಾಲರು ಹಿರಿಯ ಸಹೋದ್ಯೋಗಿಯೊಬ್ಬರ ಬಳಿ ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಹೋದ್ಯೋಗಿಯ
ಸಲಹೆಯನ್ನು ನಿರ್ಲಕ್ಷಿಸಿ, ಪ್ರಾಧ್ಯಾಪಕರಿಗಾಗಿ ಇರುವ ಸುತ್ತೋಲೆಗಳ ಪುಸ್ತಕದಲ್ಲಿ, ಪ್ರಾಧ್ಯಾಪಕರು
ಕಾಲೇಜಿನಲ್ಲಿ ಧರಿಸಬೇಕಾದ ಉಡುಪಿನ ವಿಚಾರ ಎಲ್ಲರಿಗೂ ಎಚ್ಚರಿಕೆಯನ್ನು ನೀಡಿದರು. ಸುತ್ತೋಲೆಯನ್ನು
ಪ್ರಾಧ್ಯಾಪಕರ ಕೋಣೆಯಲ್ಲಿ ಓದಿದ ದೇವರಾಯರು ಪ್ರತಿಕ್ರಿಯಿಸಲಿಲ್ಲ.
ಅಂದು ಅಪರಾಹ್ನ ದೇವರಾಯರು ತರಗತಿಯನ್ನು
ಪ್ರವೇಶಿಸುತ್ತಲೇ ವಿದ್ಯಾರ್ಥಿಗಳ ಸಮೂಹವೇ ಅವಾಕ್ಕಾಯಿತು. ಆದರೆ ಆ ಬಳಿಕ ದೇವರಾಯರ ಪ್ರವಚನ ಎಂದಿನಂತೆಯೇ
ನಡೆಯಿತು. ದೇವರಾಯರು ಖಾದಿಮುಂಡು ಮತ್ತು ಜುಬ್ಬಾ ಧರಿಸಿ ತರಗತಿಯನ್ನು ಪ್ರವೇಶಿಸಿದ್ದರು! ಉಡುಪುಗಳನ್ನು
ಕುರಿತ ಸುತ್ತೋಲೆಗಳು ಮರುಕಳಿಸಲಿಲ್ಲ.
ಇನ್ನೊಂದು ಬಾರಿ ದಕ್ಷಿಣ ಕನ್ನಡದ ಕಲೆಕ್ಟರರನ್ನು
ಕಾಲೇಜಿನ ಕ್ಯಾಂಟೀನ್ ಉದ್ಘಾಟನೆಗೆ ಆಹ್ವಾನಿಸಲಾಗಿತ್ತು. ಪ್ರಾಧ್ಯಾಪಕರೆಲ್ಲರನ್ನೂ ಅವರಿಗೆ ಪರಿಚಯಿಸುತ್ತ
ಪ್ರಿನ್ಸಿಪಾಲರು ದೇವರಾಯರು ಭಾರತದ ವಿದೇಶಾಂಗ ಇಲಾಖೆಯಲ್ಲಿ ಸೇವೆಗೆ ಆರಿಸಲ್ಪಟ್ಟ ವಿಚಾರ ತಿಳಿಸಿದರು.
ಕಲೆಕ್ಟರ್ ಸಾಹೇಬರು ದೇವರಾಯರನ್ನು ಉದ್ದೇಶಿಸಿ ಗಂಭೀರವಾಗಿ ಹೇಳಿದರು, “ಭಾರತ ಸರಕಾರ ನಿಮ್ಮನ್ನು
ತರಬೇತಿಗಾಗಿ ನನ್ನ ಬಳಿ ಕಳುಹಿಸಲಿ ಎಂದು ಆಶಿಸುತ್ತೇನೆ.” ಕ್ಷಣಾರ್ಧದಲ್ಲಿ ದೇವರಾಯರು ಉದ್ಗರಿಸಿದರು,
“ಹೌದು! ಕ್ಯಾಂಟೀನುಗಳನ್ನು ಉದ್ಘಾಟಿಸಲು ಕಲಿಯಬೇಕಲ್ಲ!”
ಪ್ರೌಢಶಾಲೆಯಿಂದ ಕಾಲೇಜಿಗೆ ಹೊಸತಾಗಿ
ಸೇರ್ಪಡೆಗೊಂಡ ವಿದ್ಯಾರ್ಥಿಗಳು ಓದಲೇಬೇಕಾದ ಕೆಲವು ಇಂಗ್ಲಿಷ್ ಪುಸ್ತಕಗಳ ಯಾದಿಯನ್ನು ಬರೆದುಕೊಳ್ಳುವಂತೆ
ದೇವರಾಯರು ವಿದ್ಯಾರ್ಥಿಗಳಿಗೆ ಸೂಚಿಸಿದರು. ಕೆಲವು ವಿದ್ಯಾರ್ಥಿಗಳ ಅಸಡ್ಡೆಯಿಂದ ಖೇದಗೊಂಡ ಅವರು ಆ
ಪುಸ್ತಕಗಳನ್ನು ಓದುವುದು ಅವರಿಗೆ ಬಹಳ ಹಿತಕರವಾಗಿದ್ದರೂ ಅದು ಅವರಿಗೆ ಬಿಟ್ಟ ವಿಷಯ. ಆದರೆ ಆ ಪುಸ್ತಕಗಳ
ಯಾದಿಯನ್ನು ಬರೆದುಕೊಳ್ಳುವುದು ಕಡ್ಡಾಯವೆಂದು ಸಾರಿದರು. ತಾವು ಪ್ರತಿ ವಿದ್ಯಾರ್ಥಿ ಬರೆದುಕೊಂಡಿರುವ
ಯಾದಿಯನ್ನು ಪರಿಶೀಲಿಸುವೆನೆಂದೂ ತಪ್ಪಿತಸ್ಥರು ನಾಲ್ಕಾಣೆ ದಂಡ ತೆರಬೇಕೆಂದೂ ತಿಳಿಸಿದರು.
ಮರುದಿನ ಕಾಲೇಜಿನ ಪ್ರಿನ್ಸಿಪಾಲರ ಕರೆಗೆ
ಓಗೊಟ್ಟು ಅವರ ಕೊಠಡಿಯನ್ನು ಪ್ರವೇಶಿಸಿದಾಗ ರಾಯರಿಗೆ ತೀವ್ರ ಆಘಾತವಾಯಿತು. ವಿದ್ಯಾರ್ಥಿಗಳಿಗೆ ದಂಡವನ್ನು
ವಿಧಿಸುವ ಹಕ್ಕು ಪ್ರಿನ್ಸಿಪಾಲರಿಗೆ ಅಲ್ಲದೆ ಇನ್ಯಾರಿಗೂ ಇಲ್ಲವೆಂದು ಪ್ರಿನ್ಸಿಪಾಲರು ಅಧಿಕಾರವಾಣಿಯಿಂದ
ತಿಳಿಸಿದರು. ಅಲ್ಲದೆ ಕಾಲೇಜಿನ ತರಗತಿಗಳಲ್ಲಿ ದೇವರಾಯರು ಮತ್ತು ಇನ್ನೊಬ್ಬ ಪ್ರಾಧ್ಯಾಪಕರಂಥ (ಅವರ
ಹೆಸರನ್ನು ನಾನು ತಡೆಹಿಡಿಯಬಯಸುತ್ತೇನೆ) ಅಧ್ಯಾಪಕರಿಂದ ಶಿಸ್ತು ಕುಸಿಯುತ್ತಿದೆ ಎಂದು ನೇರವಾಗಿ ಆರೋಪಿಸಿದರು.
ದೇವರಾಯರು ತಮ್ಮ ಆಸನವನ್ನು ಬಿಟ್ಟೆದ್ದು, “ಸ್ವಾಮೀ! ಅಸಮರ್ಪಕ ಪ್ರಾಧ್ಯಾಪಕರೊಂದಿಗೆ ನನ್ನನ್ನು ಹೋಲಿಸುವುದರ
ವಿರುದ್ಧ ನಾನು ತೀವ್ರವಾಗಿ ಪ್ರತಿಭಟಿಸುತ್ತೇನೆ. ಎರಡನೆಯದಾಗಿ ನನ್ನ ತರಗತಿಗಳಲ್ಲಿಯ ಶಿಸ್ತು ಮಾನ್ಯ
ಪ್ರಿನ್ಸಿಪಾಲರ ತರಗತಿಗಳಲ್ಲಿಯ ಶಿಸ್ತಿಗಿಂತ ಎಷ್ಟೋ ಪಾಲುವಾಸಿ” ಎಂದು ಬರೆ ಕಾಸಿ ಕೊಠಡಿಯಿಂದ ನಿರ್ಗಮಿಸಿಯೇ
ಬಿಟ್ಟರು. ತರಗತಿಯಲ್ಲಿ ದಂಡ ಹೇರುವ ಬಯಕೆ ದೇವರಾಯರಿಗೆ ಇರಲೇ ಇಲ್ಲ. ಅದು ವಿದ್ಯಾರ್ಥಿಗಳಿಗೆ ಚುರುಕು
ಮುಟ್ಟಿಸಲಿಕ್ಕೆ ಅವರು ಬಳಸಿದ ಒಂದು ತಂತ್ರ ಮಾತ್ರ!
ಈ ಸಂದರ್ಭದಲ್ಲಿ ಅಯ್ಯಪ್ಪನ್ ಪಿಳ್ಳೈಯವರ
ಹೃದಯ ವೈಶಾಲ್ಯದ ಬಗ್ಗೆ ಒಂದೆರಡು ಉದಾಹರಣೆಗಳನ್ನು ನೀಡ ಬಯಸುತ್ತೇನೆ. ಇಂಗ್ಲಿಷ್ ವಿಭಾಗದ ಮೌಖಿಕ
ಪರೀಕ್ಷೆಗಳ ಬಳಿಕ, ಪರೀಕ್ಷಾ ಮಂಡಲಿಯ ಸದಸ್ಯರೂ ಕ್ರಿಶ್ಚಿಯನ್ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರೂ
ಆಗಿದ್ದ ಮಾರ್ಟಿನ್ ಅವರು, ಮೌಖಿಕ ಮತ್ತು ಲಿಖಿತ ಪರೀಕ್ಷೆಗಳ ಮೂಲಕ ದೇವರಾಯರ ವಿದ್ವತ್ತನ್ನು ಅಳೆಯಬಾರದು
ಎಂದು ಸೂಚಿಸಿದರಂತೆ. ಅವರ ವಿದ್ವತ್ತಿನ ಕುರಿತು ತಮಗೆ ಬಹಳಷ್ಟು ತಿಳಿದಿದೆ. ಆದ್ದರಿಂದ ಪರೀಕ್ಷೆಗಳಲ್ಲಿ
ಅವರಿಗೆ ದ್ವಿತೀಯ ಶ್ರೇಣೀಯ ಅಂಕಗಳು ಲಭಿಸಿವೆಯಾದರೂ ಅವರು ಪ್ರಥಮ ಶ್ರೇಣಿಯಲ್ಲಿರಲು ಅರ್ಹರು ಎಂದು
ಪ್ರತಿಪಾದಿಸಿದರು. ಪಿಳ್ಳೈ ಇದಕ್ಕೆ ತಮ್ಮ ಸಹಮತವನ್ನು ಸೂಚಿಸಿ ದೇವರಾಯರನ್ನು ಪ್ರಥಮ ಶ್ರೇಣಿಗೆ ಏರಿಸುವಲ್ಲಿ
ಸಹಕರಿಸಿದರು.
ತಮ್ಮ ಕಾಲೇಜಿನ ವಿದ್ಯಾರ್ಥಿಯೊಬ್ಬನ
ಹೆಸರನ್ನು ಸೂಚಿಸಿ, ಇದೇ ಮಾನದಂಡದ ಪ್ರಕಾರ ಆತನನ್ನು
ಪ್ರಥಮ ಶ್ರೇಣಿಗೆ ಏರಿಸಬಹುದೆಂದು ಪಿಳ್ಳೈ ನುಡಿದಾಗ ಮಾರ್ಟಿನ್ ಆ ಸಲಹೆಗೆ ಒಪ್ಪಿಗೆ ನೀಡಿದರಂತೆ.
ಈ ವಿದ್ಯಾರ್ಥಿ ತರಗತಿಯಲ್ಲೂ ಹೊರಗೂ ಪಿಳ್ಳೈಯವರಿಗೆ ತೀವ್ರ ಅಸಮಾಧಾನ ನೀಡುತ್ತಿದ್ದ. ಆದರೆ ಆತನ ವಿದ್ವತ್ತನ್ನು
ಪಿಳ್ಳೈ ಗೌರವಿಸಬಯಸಿದ್ದರು.
ಕಾಲೇಜಿನ ಅಧ್ಯಾಪಕ ವೃಂದ ಭಾರತ ಸರಕಾರದ
ವಿದೇಶಾಂಗ ಇಲಾಖೆಯನ್ನು ಸೇರಲು ನಿರ್ಗಮಿಸುತ್ತಿದ್ದ ದೇವರಾಯರನ್ನು ಪ್ರೀತಿಯಿಂದ ಬೀಳ್ಕೊಡುವ ಸಮಾರಂಭವನ್ನು
ಏರ್ಪಡಿಸಿತ್ತು. ದೇವರಾಯರ ಅಂದಿನ ಉದ್ಗಾರ ನನ್ನ ಕಿವಿಗಳಲ್ಲಿ ಇಂದಿಗೂ ಪ್ರತಿಧ್ವನಿಸುತ್ತಿದೆ, “ದಯವಿಟ್ಟು
ನನ್ನನ್ನು ನಿಮ್ಮ ಮಿತ್ರಕೂಟದಿಂದ ಹೊರದಬ್ಬಲು ಅವಸರಪಡಬೇಡಿ. ವೈದ್ಯರು ನನ್ನ ಆರೋಗ್ಯ ತಪಾಸಣೆ ಮಾಡುವ
ಸಂದರ್ಭದಲ್ಲಿ ನನ್ನ ಪಿತ್ತಕೋಶವೋ ಅಥವಾ ಒಂದು ಮೂತ್ರ ಪಿಂಡವೋ ಕಾಣೆಯಾಗಿದೆಯೆಂದು ಕಂಡುಹಿಡಿದು ನನ್ನನ್ನು
ಹಿಂದಕ್ಕಟ್ಟಬಹುದು!”
ಕೆಲವು ವರ್ಷಗಳ ಬಳಿಕ ಅನಾರೋಗ್ಯದಿಂದ
ಅವರು ಕೆಲಕಾಲ ಸರಕಾರೀ ಸೇವೆಯಿಂದ ಕಡ್ಡಾಯ ನಿವೃತ್ತಿ ಅನುಭವಿಸಿದುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.
ವಿದೇಶಾಂಗ ಖಾತೆ ಸೇರಿದೊಡನೆ ದೇವರಾಯರನ್ನು
ಭಾರತ ಸರಕಾರ ಇಂಗ್ಲೆಂಡಿಗೆ ಕಳುಹಿಸಿ ಅಲ್ಲಿಯ ವಿಶ್ವವಿದ್ಯಾಲಯಗಳಲ್ಲಿ ಜರ್ಮನ್, ರಶ್ಯನ್ ಮೊದಲಾದ
ಭಾಷೆಗಳನ್ನೂ ರಾಜನೀತಿ ಶಾಸ್ತ್ರವನ್ನೂ ಅಭ್ಯಸಿಸಲು ನಿರ್ದೇಶಿಸಿತು; ಬಳಿಕ ಅಂದಿನ ಸೋವಿಯತ್ ಒಕ್ಕೂಟದಲ್ಲಿದ್ದ
ಭಾರತದ ರಾಯಭಾರಿ ಕಛೇರಿಯಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಿತು.
ಭಾರತದಿಂದ ಮಾಸ್ಕೋಗೆ ಬಂದಿಳಿಯುತ್ತಿದ್ದ
ರಾಜಕಾರಣಿಗಳ ಕ್ಷುಲ್ಲಕತೆಯಿಂದ ದೇವರಾಯರು ಕ್ರುದ್ಧರಾಗುತ್ತಿದ್ದರು. ಭಾರತ ಸರಕಾರದ ವರಿಷ್ಠರ ಮೇಲೆ
ಬಹಳ ಪ್ರಭಾವ ಬೀರುತ್ತಿದ್ದ ರಾಜಕಾರಣಿಯೊಬ್ಬರನ್ನು ಮಾಸ್ಕೋದ ಸುತ್ತ ಒಯ್ಯುವ ಜವಾಬ್ದಾರಿ ಒಮ್ಮೆ ದೇವರಾಯರ
ಮೇಲೆ ಬಂದಿತ್ತು. ಆ ರಾಜಕಾರಣಿ ಪ್ರಯಾಣದುದ್ದಕ್ಕೂ ಸೋವಿಯತ್ ಒಕ್ಕೂಟದ ಸಾಧನೆಗಳ ಗುಣಗಾನ ಮಾಡುತ್ತಿದರು.
ಮಾಸ್ಕೋದಲ್ಲಿದ್ದ ಕೊಳಚೆ ಪ್ರದೇಶಗಳನ್ನು ಅವರಿಗೆ ತೋರಿಸಲು ದೇವರಾಯರು ಉದ್ಯುಕ್ತರಾದಾಗ ಆ ರಾಜಕಾರಣಿ
ರೊಚ್ಚಿಗೆದ್ದು ತಾನು ಜವಾಹರಲಾಲರ ಹತ್ತಿರ ದೇವರಾಯರ ಉದ್ಧಟತೆ ವಿರುದ್ಧ ವರದಿ ಮಾಡುವೆನೆಂದು ಸಿಡಿ
ನುಡಿದರು!
ಸೋವಿಯತ್ ಒಕ್ಕೂಟದಲ್ಲಿ ಸೇವೆ ಸಲ್ಲಿಸುತ್ತಿದ್ದ
ಕಾಲ ಬಾಗಲೋಡಿಯವರ ಮನಸ್ಸಿಗೆ ಅಶಾಂತಿ ತಂದಿತು. ದೈಹಿಕವಾಗಿಯೂ ಅವರ ಆರೋಗ್ಯ ಕುಸಿದು ಅವರು ಮುಂಬಯಿಗೆ
ಮರಳಿ ಅಲ್ಲಿ ಚಿಕಿತ್ಸೆ ಪಡೆಯಬೇಕಾಯಿತು.
ಅವರಿಗೆ ತಿಳಿಸದೆಯೇ ಭಾರತ ಸರಕಾರ ಒಂದು
ವೈದ್ಯಕೀಯ ಮಂಡಳಿಯನ್ನು ನೇಮಿಸಿ ಅವರನ್ನು ಭಾರತ ಸರಕಾರದ ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿಗೊಳಿಸಿತು.
ಇದು ದೇವರಾಯರ ಜೀವನದ ಅತ್ಯಂತ ದುಃಖದ ಕಾಲ.
ಭಾರತದ ಕೆಲವು ಧುರೀಣರು ದೇವರಾಯರಿಗೆ
ನ್ಯಾಯ ದೊರಕಿಸಿ ಕೊಡುವ ಆಶ್ವಾಸನೆಗಳನ್ನಿತ್ತರೇ ವಿನಾ ಕಾರ್ಯಪ್ರವೃತ್ತರಾಗಲಿಲ್ಲ. ಆದರೆ ಭಾರತ ಸರಕಾರದ
ಆರೋಗ್ಯ ಇಲಾಖೆಯ ಮಿತ್ರರ ಒಂದು ಸಲಹೆ ಅವರಿಗೆ ತುಂಬ ಮುದ ತಂದಿತ್ತು. ದೇವರಾಯರನ್ನು ಸರಕಾರಿ ಸೇವೆಗೆ
ಅನರ್ಹರೆಂದು ಘೋಷಿಸಿದ ವೈದ್ಯಕೀಯ ಮಂಡಳಿಯಲ್ಲಿ ಅವರ ಅನಾರೋಗ್ಯದ ಪರಿಣತಿಯಿದ್ದ ವೈದ್ಯರನ್ನು ಸರಕಾರ
ನೇಮಿಸದಿದ್ದುದರಿಂದ ಆ ಮಂಡಳಿಯ ತೀರ್ಪನ್ನು ಅನೂರ್ಜಿತಗೊಳಿಸಬೇಕೆಂದು ದೇವರಾಯರು ಭಾರತ ಸರಕಾರಕ್ಕೆ
ಮನವಿ ಮಾಡಿದರು. ಸರಕಾರ ಇವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಆ ನಿರ್ದೇಶನವನ್ನು ರದ್ದುಪಡಿಸಿತು.
ದೇವರಾಯರು ಕೂಡಲೇ ಕಿನ್ನಿಕಂಬಳದಲ್ಲಿಯ ತಮ್ಮ ತಂದೆಯ ಮನೆಗೆ ಮರಳಿ ಅಲ್ಲಿ ಉಳಿದು ವೈದ್ಯಕೀಯ ನೆರವು
ಪಡೆದರು.
ಹೀಗೆ ದೇವರಾಯರ ಮತ್ತು ನನ್ನ ನಡುವಿನ
ಬಾಂಧವ್ಯದ ಮೂರನೆಯ ಅಧ್ಯಾಯ ಪ್ರಾರಂಭವಾಯಿತು. ನಾನು ಆಗಾಗ ಕಿನ್ನಿಕಂಬಳಕ್ಕೆ ಹೋಗಿ ಅವರ ಮನಸ್ಸನ್ನು
ಭೂತಕಾಲದಿಂದ ಭವಿಷ್ಯತ್ಕಾಲದತ್ತ ತಿರುಗಿಸಿ ನಿರಾಶೆಯನ್ನು ತೊಡೆದು ಹಾಕಿ ಅವರಲ್ಲಿ ಆಶೆಯನ್ನು ತುಂಬಲು
ಪ್ರಯತ್ನಪಟ್ಟೆ.
ಭಾರತ ಸರಕಾರ ಹೊಸತೊಂದು ವೈದ್ಯಕೀಯ
ಮಂಡಳಿಯನ್ನು ಮದ್ರಾಸಿನಲ್ಲಿ ಸ್ಥಾಪಿಸಿ ಆ ಮಂಡಳಿಯ ಎದುರು ಹಾಜರಾಗಿ ತಮ್ಮ ಆರೋಗ್ಯ ಸಾಬೀತುಪಡಿಸುವಂತೆ
ದೇವರಾಯರನ್ನು ಆದೇಶಿಸಿತು. ಅವರ ಆರೋಗ್ಯದಲ್ಲಿ ಸುಧಾರಣೆಯಾಗಿತ್ತು. ಅವರು ಮದ್ರಾಸನ್ನು ತಲಪಿದ ಕೂಡಲೇ
ನಾನೂ ಅವರನ್ನು ಕೂಡಿಕೊಂಡೆ. ಈ ಹೊಸ ವೈದ್ಯಕೀಯ ಮಂಡಳಿಯ ಸದಸ್ಯರಾಗಿ ಹೆಸರಾಂತ ವೈದ್ಯ ಕೆ. ಸಂಜೀವಿಯವರ
ನೇಮಕವಾಗಿದೆಯೆಂದು ನಮಗೆ ತಿಳಿಯಿತು. ಇದರಿಂದ ನನಗೆ ತುಂಬ ಸಮಾಧಾನವಾಯಿತು. ಏಕೆಂದರೆ ನಾನು ಪ್ರೆಸಿಡೆನ್ಸಿ
ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಸಂಜೀವಿಯವರ ಸೋದರ ಕೆ. ಸ್ವಾಮಿನಾಥನ್ ನಮ್ಮೆಲ್ಲರ ನೆಚ್ಚಿನ
ಪ್ರಾಧ್ಯಾಪಕರಾಗಿದ್ದರು.
ದೇವರಾಯರನ್ನು ಹುರಿದುಂಬಿಸುವ ಇಚ್ಛೆಯಿಂದ
ಅವರನ್ನು ನನ್ನ ಗುರುವಿಗೆ ಪರಿಚಯಿಸಿದೆ. ಅಲ್ಲದೆ ಭಾರತ ಸರಕಾರದ ಸೇವೆಗೆ ಅವರ ಅರ್ಹತೆಯನ್ನು ಸಾಬೀತುಪಡಿಸಲು
ಅವರ ಸಹಾಯವನ್ನು ಯಾಚಿಸಿದೆ. ಮರುದಿನವೇ ಸ್ವಾಮಿನಾಥನ್ ಅವರು ದೇವರಾಯರಿಗೆ ಒಂದು ಸಂದೇಶವನ್ನು ಕಳುಹಿಸಿದರು.
ಸಂಜೀವಿ ಹೊಸ ವೈದ್ಯಕೀಯ ಮಂಡಳಿಯ ಅಧ್ಯಕ್ಷರು. ಇನ್ನೊಬ್ಬ ವೈದ್ಯರು ದೇವರಾಯರನ್ನು ವೈದ್ಯಕೀಯ ಪರೀಕ್ಷೆಗೆ
ಒಳಪಡಿಸುವರು. ಈ ಈರ್ವರೂ ಸರಕಾರೀ ಸೇವೆಗೆ ಪುನಃ ಪ್ರವೇಶಿಸುವ ಅಭ್ಯರ್ಥಿಗಳನ್ನು ಸಹಾನುಭೂತಿಯಿಂದ
ಕಾಣುವವರೆಂದು ಸಂದೇಶದಲ್ಲಿ ಅವರು ತಿಳಿಸಿದರು.
ವೈದ್ಯಕೀಯ ಮಂಡಳಿ ದೇವರಾಯರನ್ನು ಭಾರತ
ಸರಕಾರದ ಸೇವೆಗೆ ಅರ್ಹರೆಂದು ದೃಢೀಕರಿಸಿತು. ಆ ಬಳಿಕ ನಡೆದುದೆಲ್ಲ ಆಧುನಿಕ ಚರಿತ್ರೆಯ ಭಾಗವಾಗಿದೆ.
ಈ ವಿಚಾರದಲ್ಲಿ ಕೆ. ಸ್ವಾಮಿನಾಥನ್ ಆಗಲಿ ಕೆ. ಸಂಜೀವಿ ಆಗಲಿ ಯಾರ ಮೇಲೂ ಒತ್ತಡ ಹೇರಲಿಲ್ಲ.
ಸ್ವಾಮಿನಾಥನ್ ಅವರ ವಿಚಾರ ಒಂದು ಮಾತು.
ಇಂಗ್ಲಿಷ್ ಭಾಷೆಯ ಉನ್ನತ ವ್ಯಾಸಂಗಕ್ಕೆ ಬರುತ್ತಿದ್ದ ಹಲವಾರು ವಿದ್ಯಾರ್ಥಿ ವಿದ್ಯಾರ್ಥಿನಿಯರಲ್ಲಿ
ಅವರು ಸಾಹಿತ್ಯ ಪ್ರೇಮ, ಮಾನವಕುಲದ ಪ್ರೇಮ, ಸತ್ಯ ನಿಷ್ಠೆ, ದೇಶ ಪ್ರೇಮಗಳನ್ನು ಉದ್ದೀಪನಗೊಳಿಸಿದ
ಮಹಾನ್ ಚೇತನ. ಪ್ರಾಧ್ಯಾಪಕ ಹುದ್ದೆಯಿಂದ ನಿವೃತ್ತರಾದ ಬಳಿಕ ಮಹಾತ್ಮ ಗಾಂಧಿಯವರ ಸಮಗ್ರ ಕೃತಿಗಳ ಪ್ರಧಾನ
ಸಂಪಾದಕರಾಗಿ ನಿಯೋಜಿಸಲ್ಪಟ್ಟ ಅವರು ಪ್ರತಿದಿನ ೯ರಿಂದ ೪ರತನಕ ನವದೆಹಲಿಯ ಆಫೀಸಿನಲ್ಲಿ ದುಡಿದು ೯೦ನೆಯ
ವಯಸ್ಸಿನಲ್ಲಿ ತಮ್ಮ ನೇತೃತ್ವದಲ್ಲಿ ಸಂಪೂರ್ಣಗೊಳಿಸಿದ ಎಲ್ಲ ಸಂಪುಟಗಳನ್ನೂ ಭಾರತ ಸರಕಾರಕ್ಕೆ ಒಪ್ಪಿಸಿ
ಮದ್ರಾಸಿಗೆ ಹಿಂತಿರುಗಿದರು. ಪುನಃ ಕೆಲವು ಮಾಹಿತಿಗಳು ಅವರ ಬಳಿಗೆ ಬಂದುವು. ಅವನ್ನು ಮದ್ರಾಸಿನಲ್ಲೇ
ಪರಿಶೀಲಿಸಿ ದೆಹಲಿಗೆ ಕಳುಹಿಸುವ ಸೌಕರ್ಯವನ್ನು ಸೌಜನ್ಯವನ್ನೂ ಸರಕಾರ ಕಲ್ಪಿಸಿತು. ಈ ಕಾರ್ಯವನ್ನು
ಅವರು ಸಂಪೂರ್ಣಗೊಳಿಸಿದರು. ಸ್ವಾಮಿನಾಥನ್ ತಮ್ಮ ೯೩ನೆಯ ವಯಸ್ಸಿನಲ್ಲಿ ನಿಧನರಾದರು.
ದೇವರಾಯರು ಭಾರತ ಸರಕಾರದ ಸೇವೆಯಲ್ಲಿದ್ದ
ದಿನಗಳಂದು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣಿಸುತ್ತಿದ್ದಾಗ ಮಂಗಳೂರನ್ನು ಹಾದು ಹೋಗುತ್ತಿದ್ದರು.
ಅವರ ಮಿಂಚಿನ ಭೇಟಿ ನನ್ನನ್ನು ಇತರರನ್ನು (ಬಹುಶಃ ದೇವರಾಯರನ್ನು ಕೂಡಾ) ನಿರಾಶೆಗೊಳಿಸುತ್ತಿತ್ತು.
ಎಂದೋ ಭಾರತ ಸರಕಾರದ ವಿದೇಶಾಂಗ ಖಾತೆಯ ಕಾರ್ಯದರ್ಶಿಯಾಗಬೇಕಿದ್ದ ದೇವರಾಯರು ಪಶ್ಚಿಮ ಯುರೋಪಿನಲ್ಲಿಯ
ಮತ್ತು ಉತ್ತರ ಅಮೆರಿಕದಲ್ಲಿಯ ಭಾರತದ ದೂತಾವಾಸಗಳಲ್ಲಿ ನವೆಯಬೇಕಾಯಿತು.
ಪ್ರತಿಬಾರಿ ವಿದೇಶದಿಂದ ಬಂದ ಕೂಡಲೆ
ಮತ್ತು ವಿದೇಶಕ್ಕೆ ಪ್ರಯಾಣ ಮಾಡುವ ಮೊದಲು ಅವರು ಕಟೀಲಿನ ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆಯುತ್ತಿದ್ದರು.
ತಮ್ಮ ಮಗನಿಗೆ ದುರ್ಗಾಪ್ರಸಾದ ಎಂಬ ಹೆಸರನ್ನಿಟ್ಟಿದರು. ನಮ್ಮಲ್ಲಿಗೆ ಬಂದಾಗಲೆಲ್ಲ ವಿದೇಶಗಳ ಪ್ರಾತಿನಿಧಿಕ
ಬೊಂಬೆಗಳನ್ನು ತರುತ್ತಿದ್ದರು. ಕೊನೆಗೊಮ್ಮೆ ಮುಖವಿಡೀ ಗಡ್ಡ ಬೆಳೆಸಿದ್ದರು!
ಸುದೀರ್ಘ ಕಾಲ ಭಾರತದ ವಿದೇಶ ಖಾತೆಯ
ಸೇವೆಯ ಮೂಲಕ ದೇಶ ಸೇವೆ ಮಾಡಿದ ದೇವರಾಯರ ಜೀವನವನ್ನು ಅವಲೋಕಿಸಿದ ನನ್ನಂಥ ಹಲವು ಮಿತ್ರರನ್ನು ಒಂದು
ನಿರಾಶೆ ಕಾಡಿದೆ. ಉನ್ನತ ಶಿಕ್ಷಣವನ್ನು ಬಯಸಿ ಬರುತ್ತಿದ್ದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು
ರೂಪಿಸುವ ಮಹತ್ತರವಾದ ಮತು ಸುಂದರ ಅವಕಾಶದಿಂದ ದೇವರಾಯರು ವಂಚಿತರಾದರು. ಇಂಥ ಮಹಾನ್ ಆಕಾಂಕ್ಷೆಗಳಿಂದ
ನಮ್ಮೆಡೆಗೆ ಧಾವಿಸುತ್ತಿದ್ದ ಈ ದೇಶದ ಆಶಾಕಿರಣಗಳಾದ ವಿದ್ಯಾರ್ಥಿಗಳ ಸಂಪರ್ಕ, ಒಡನಾಟ, ಅವರಿಗೆ ಮಾರ್ಗದರ್ಶನ
ನೀಡುವ ಧನ್ಯತೆ ನನ್ನ ವೃತ್ತಿ ಜೀವನದ ಅತ್ಯಂತ ಅಮೂಲ್ಯವಾದ ಲಾಭ ಎಂದು ನಾನು ಭಾವಿಸಿದ್ದೇನೆ. ಈ ವಿದ್ಯುತ್
ಸ್ಪರ್ಶ ಈಗಲೂ ನನ್ನ ಜೀವನವನ್ನು ಅರ್ಥಪೂರ್ಣಗೊಳಿಸುತ್ತದೆ.
ಶೇಕ್ಸ್‍ಪಿಯರನ ನಾಟಕವಾದ ಎಂಟನೆಯ ಹೆನ್ರಿಯ
ಮೂರನೆಯ ಅಂಕದಲ್ಲಿ ಪದಚ್ಯುತಿ ಮತ್ತು ಗಡೀಪಾರಿಗೆ ತಳ್ಳಲ್ಪಟ್ಟ ಕಾರ್ಡಿನಲ್ ವೂಲ್ಫೀ ಎಂಬ ರಾಜನ ಸಲಹೆಗಾರನ
ಉದ್ಗಾರವನ್ನು ಇಲ್ಲಿ ಸ್ಮರಿಸಿಕೊಳ್ಳಬಯಸುತ್ತೇನೆ:
Had I but serv’d my God with
half the zeal
I serv’d my king, he would
not in mine age
Have left me naked to mine
enemies.
(ನನ್ನ ರಾಜನ ಸೇವೆಯಲ್ಲಿ ನಾನು ತೋರಿದ
ಅರ್ಧಪಾಲು ಶ್ರದ್ಧೆಯನ್ನು ನನ್ನ ದೇವರ ಸೇವೆಯಲ್ಲಿ ತೋರಿದ್ದರೆ, ನನ್ನ ವೃದ್ಧಾಪ್ಯದಲ್ಲಿ ಆ ದೇವರು
ನನ್ನನ್ನು ವೈರಿಗಳ ನಡುವೆ ಅಸಹಾಯಕನನ್ನಾಗಿ ತಳ್ಳುತ್ತಿದ್ದಿಲ್ಲ.)
ಶೇಕ್ಸ್‍ಪಿಯರನ ಶಬ್ದಗಳಾದ `ನನ್ನ ದೇವರ’
ಎಂಬಲ್ಲಿ ‘ನನ್ನ ವಿದ್ಯಾರ್ಥಿಗಳ’ ಹಾಗೂ `ಆ ದೇವರು’ ಎಂಬಲ್ಲಿ `ಆ ವಿದ್ಯಾರ್ಥಿಗಳ’ ಎಂದು ಬದಲಾಯಿಸಿದರೆ
ನನ್ನ ಅರ್ಥ ಸಂಪೂರ್ಣವಾಗುತ್ತದೆ.
ನಮ್ಮ ಜೀವನ ಕೆಲವೊಮ್ಮೆ ಅನಿರೀಕ್ಷಿತ
ತಿರುವುಗಳಿಂದ ಸಂಪದ್ಭರಿತವಾಗಬಹುದು ಅಥವಾ ದುಃಖಮಯವಾಗಬಹುದು. ಆದರೆ ಈ ಪರಿಣಾಮ ಅಥವಾ ಫಲಿತಾಂಶ ನಮಗೆ
ಗೋಚರಿಸುವಾಗ ಕಾಲ ಮೀರಿರುತ್ತದೆ. ಸದಾ ನಗುಮೊಗವನ್ನೇ ಪ್ರಪಂಚಕ್ಕೆ ತೋರಿಸುತ್ತಿದ್ದ ದೇವರಾಯರ ಜೀವನದಿಂದ
ಬಹಳಷ್ಟು ಜನರು ಪ್ರಭಾವಿತರಾಗಿದ್ದರು.
ಅವರ ಅಸಂಖ್ಯ ಗೆಳೆಯರ ಕನಸುಗಳನ್ನು
ಬದಿಗಿರಿಸಿ ಎಲ್ಲರ ಒಂದು ಹಾರೈಕೆಯನ್ನು ಓದುಗರ ಮುಂದಿರಿಸಬಯಸುತ್ತೇನೆ. ಭಾರತ ಸರಕಾರದ ವಿದೇಶಾಂಗ
ಖಾತೆಯಲ್ಲಿ ಶಿಸ್ತುಬದ್ಧ ಸೇವೆ ಸಲ್ಲಿಸಿ ಹಲವಾರು ದೇಶಗಳ ಜನರಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದ
ಧೀಮಂತ ಬಾಗಲೋಡಿ ದೇವರಾಯರ ನೆನಪು ನಮ್ಮ ದೇಶದ ಜನರಿಗೆ ಸದಾ ಸ್ಫೂರ್ತಿ ನೀಡಲಿ!
ದೇವರಾಯರ ಕೀರ್ತಿ –
ಮುಟ್ಟಿದೆ ದಿಙ್ಮಂಡಲಗಳ ಅಂಚ, ಆಚೆಗೆ
ಚಾಚಿದೆ ತನ್ನಯ ಚುಂಚ,
ಬ್ರಹ್ಮಾಂಡಗಳನು ಒಡೆಯಲು ಎಂದೋ, ಬಲ್ಲರು
ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ?
– ಅಂಬಿಕಾತನಯದತ್ತ.
(ಮುಂದುವರಿಯಲಿದೆ)
Beautiful! Apt and praiseworthy! A narration that raised our souls!
ReplyDelete