18 September 2017

ಶ್ರದ್ಧಾಂಜಲಿಯ ಹನಿ

ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೨)
 ಏರ್ಯ ಲಕ್ಷ್ಮೀನಾರಾಯಣ ಆಳ್ವರ ಮುನ್ನುಡಿ
ಯಾವುದೋ ಒಂದು ಶುಭ ಗಳಿಗೆಯಲ್ಲಿ `ಅಭಿರುಚಿ ಬಂಟ್ವಾಳ’ ಇವರು ಬಾಗಲೋಡಿ ದೇವರಾಯರ ಸಂಸ್ಮರಣ ಕಾರ್ಯಕ್ರಮವನ್ನು ಹಮ್ಮಿಕೊಂಡರು (೧೧-೧೦-೨೦೦೨). ಅಂದು ಬಾಗಲೋಡಿಯವರ ಪರಿಚಯ ಇದೆ ಎಂಬ ನೆಲೆಯಲ್ಲಿ ಪ್ರಧಾನ ಭಾಷಣಗಾರರಾಗಿ ಕನ್ನಡದ ಹಿರಿಯ ಲೇಖಕ, ಚಿಂತಕ ಜಿ.ಟಿ. ನಾರಾಯಣರಾಯರನ್ನು ಕರೆದಿದ್ದರು. ಅಧ್ಯಕ್ಷನಾಗಿ ಸ್ಥಳೀಯನಾದ ನನ್ನನ್ನು ಆಹ್ವಾನಿಸಿದ್ದರು. ಬಾಗಲೋಡಿಯವರ ಕಥೆಗಳ ಕುರಿತು ಮಾತಾಡಲು ಮಹಾಲಿಂಗಭಟ್ಟರನ್ನು ಬರಹೇಳಿದ್ದರು.

ಅಂದು ಜಿಟಿಯವರು ಬಾಗಲೋಡಿಯವರ ಕಾಲೇಜು ವಿದ್ಯಾರ್ಥಿ ಕಾಲದಿಂದ ಹಿಡಿದು ಕೊನೆಯ ದಿನಗಳವರೆಗಿನ, ತಮಗೆ ನೇರವಾದ ಸಂಪರ್ಕದಿಂದ ತಿಳಿದ ಘಟನೆಗಳ ಸುರುಳಿಯನ್ನು, ತಮ್ಮದೇ ಪ್ರಬುದ್ಧ ಧಾಟಿಯಲ್ಲಿ ಬಿಚ್ಚುತ್ತ ಹೋದಂತೆ, ನೆರೆದ ಶ್ರೋತೃಗಳೆಲ್ಲ ಭಾವವಶರಾಗಿದ್ದರು. ಕನ್ನಡ ಸಾರಸ್ವ ಲೋಕದ ಅನನ್ಯ ಪ್ರತಿಭಾವಂತ ಲೇಖಕನೊಬ್ಬನ ಮರೆಯಲ್ಲಿದ್ದ ಬಾಳಿನ ಅನಾವರಣವನ್ನು ಸಮರ್ಥರೀತಿಯಲ್ಲಿ ಜಿಟಿಯವರು ನಡೆಸಿದ್ದರು. ಬಾಗಲೋಡಿಯವರ ಅಷ್ಟು ಸಮೀಪದ ಸಂಪರ್ಕ ಇವರಿಗೆ ಇತ್ತು ಎಂಬುದು ನನಗೆ ಆ ತನಕ ತಿಳಿದಿರಲಿಲ್ಲ. ಅವರ ಕಥಾಸಾಹಿತ್ಯದಿಂದ ಅತ್ಯಂತ ಪ್ರಭಾವಿತನಾಗಿದ್ದ ನಾನಂತೂ ನಾರಾಯಣರಾಯರ ಅನುಭವ ಮಾತಿನ ಮೂಲಕ ಚಿತ್ರಿತವಾಗುತ್ತಿದ್ದ ಬಾಗಲೋಡಿಯವರ ಬದುಕನ್ನು ಅನುಭವಿಸುವುದರಲ್ಲಿ ತನ್ಮಯನಾಗಿದ್ದೆ.


ಕೊನೆಗೆ ನನ್ನ ಅಧ್ಯಕ್ಷ ಭಾಷಣದಲ್ಲಿ, ಜಿಟಿಯವರ ಮೇಲಿರುವ ಆತ್ಮೀಯತೆಯ ನೆಲೆಯಲ್ಲಿ, ಹೇಳಿದ್ದೆ “ನಾರಾಯಣರಾಯರೇ! ನೀವು ವಿಶ್ವದ ವಿವಿಧ ಕ್ಷೇತ್ರಗಳ ಪ್ರತಿಭಾವಂತರ ಜೀವನ ಚರಿತ್ರೆಯನ್ನು ಅತ್ಯಂತ ಸಮರ್ಥವಾಗಿ ಬರೆದು ಪ್ರಕಟಿಸಿದ್ದೀರಿ. ಆದರೆ ನಮ್ಮವರೇ ಆದ ಪ್ರತಿಭಾವಂತ ಲೇಖಕ ಬಾಗಲೋಡಿಯವರ ಇಷ್ಟು ಸಮೀಪದ ಸಂಪರ್ಕ ಇದ್ದೂ ಅವರ ಬದುಕಿನ ಹಲವಾರು ಘಟನೆಗಳ ನೇರ ತಿಳಿವಳಿಕೆ ಇದ್ದೂ ಈ ತನಕ ಅದನ್ನು ಬರೆಯದೆ ಇದ್ದುದು ಏಕೆ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ನೀವು ಇದನ್ನು ಖಂಡಿತವಾಗಿಯೂ ಬರೆದು ಪ್ರಕಟಿಸಬೇಕು. ಕನ್ನಡ ಸಾಹಿತ್ಯಲೋಕಕ್ಕೆ ಇದು ಅತ್ಯಂತ ಉಪಯುಕ್ತ ಮಾಹಿತಿ ಗ್ರಂಥವಾಗುತ್ತದೆ. ಇದು ನಾನು ಅಧ್ಯಕ್ಷಸ್ಥಾನದ ಅಧಿಕಾರದ ನೆಲೆಯಿಂದ ಹೇಳುವ ಮಾತು!”

ನಾಡಿನ ಪುಣ್ಯ, ನನ್ನ ಆತ್ಮೀಯತೆಯ ಈ ಮಾತನ್ನು ರಾಯರು ಇಷ್ಟು ಗಂಭೀರವಾಗಿ ತೆಗೆದುಕೊಂಡಾರು ಎಂದು ನಾನು ನಂಬಿರಲಿಲ್ಲ. ಸಮಾರಂಭ ಮುಗಿದು ಸುಮಾರು ಇಪ್ಪತ್ತೈದು ದಿನಗಳ ಅನಂತರ ಅವರಿಂದ ನನಗೊಂದು ಪತ್ರ ಬಂತು. ನನ್ನ ಆಲಸ್ಯ ಪ್ರವೃತ್ತಿಯಿಂದ ನಾನು ಉತ್ತರಿಸಿರಲಿಲ್ಲ. ೬-೧೧-೨೦೦೨ ಮತ್ತೊಂದು ಪತ್ರ. “ನೀವು ಅಂದು ಪ್ರೀತಿಯಿಂದ ನೀಡಿದ ಆದೇಶದಂತೆ” ತಾನು ದೇವರಾಯರ ಕುರಿತು ಬರೆಯಲು ಪ್ರಾರಂಭಿಸಿ ಬಹಳಷ್ಟು ಭಾಗ ಮುಗಿಸಿರುವುದಾಗಿಯೂ ಮಹಾಲಿಂಗ ಭಟ್ಟರಿಗೆ ಮತ್ತು ಬಾಗಲೋಡಿಯವರ ಸಂಬಂಧಿಕರಿಗೆ, ಅವರ ಜೊತೆ  ಕಾಲೇಜಿನಲ್ಲಿ ಕೆಲಸ ಮಾಡಿದವರಿಗೆಲ್ಲ ಲೇಖನಗಳಿಗಾಗಿ ಬರೆದಿರುವುದಾಗಿಯೂ ತಿಳಿಸಿದ್ದರು. ಜೊತೆಗೆ ನಾನೂ ಬಾಗಲೋಡಿಯವರ ಕುರಿತು ಆ ಸಭೆಯ ಸಂದರ್ಭದಲ್ಲಿ ಮಾತಾಡಿದ್ದನ್ನು ಬರೆದು ಕಳುಹಿಸಬೇಕಾಗಿಯೂ `ಆದೇಶಿ’ಸಿದ್ದರು.

ನಾನು ಎಂಥ ಒರಟ ನೋಡಿ. ನಾರಾಯಣ ರಾಯರು ನನ್ನ `ಪ್ರೀತಿಯ ಆದೇಶ’ವನ್ನು ನೂರಕ್ಕೆ ನೂರು ನಡೆಸಿಕೊಡುವ ಹಂತದಲ್ಲಿ ಅವರು ನನಗೆ ನೀಡಿದ ಆದೇಶವನ್ನು ಪಾಲಿಸಲೇ ಇಲ್ಲ!

ಇದರ ನಡುವೆ ದಕ್ಷಿಣ ಕನ್ನಡ ಜಿಲ್ಲಾ ೧೪ನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಅಲ್ಲಿ ಸಮ್ಮೇಳನ ಮಂಟಪದ ಪ್ರಧಾನದ್ವಾರಕ್ಕೆ ಬಾಗಲೋಡಿ ದೇವರಾಯರ ಹೆಸರನ್ನು ಇಡುವಂತೆ ಸ್ವಾಗತ ಸಮಿತಿಗೆ ಸೂಚಿಸಿದೆ. ಅವರು ಬಲು ಸಂತೋಷದಿಂದ ಮಹಾದ್ವಾರಕ್ಕೆ ಆ ಹೆಸರನ್ನು ಇಟ್ಟಿದ್ದರು. ನಾನೂ ಸಭಾವೇದಿಕೆಗೆ ಆ ಮಹಾದ್ವಾರದ ಮೂಲಕವೇ ಸಮ್ಮೇಳನಾಧ್ಯಕ್ಷನಾಗಿ ಹಾದು ಹೋಗಿದ್ದೆ. ಆಗ ಪುಲಕಗೊಂಡಿದ್ದೆ. ಆದರೂ ನಾರಾಯಣರಾಯರು ಹೇಳಿದಂತೆ ಬಾಗಲೋಡಿಯವರ ಕುರಿತು ನಾಲ್ಕು ಮಾತುಬರೆದು ಕೊಡಲಿಲ್ಲ.

ಮತ್ತೆ ೨೨-೧-೨೦೦೩ರಂದು ರಾಯರಿಂದ ಕ್ಷಿಪಣಿ ಬಂತು. “ದೇವಸ್ಮರಣೆ ಕೃತಿ ನಿಮ್ಮ ಮತ್ತು ನನ್ನ ನಿರೀಕ್ಷೆ ಮೀರಿ ಸುಂದರ ಸುಪುಷ್ಟ ಕೃತಿ ಆಗಲಿದೆ. ಫೆಬ್ರವರಿ ಮೊದಲ ವಾರದಲ್ಲಿ ಮುದ್ರಣ ಹಂತ ತಲಪಲಿದೆ.... ದೇವರಾಯರನ್ನು ಕುರಿತು ನೀವು ಚುಟುಕಾಗಿಯಾದರೂ ಒಂದು ಲೇಖನ ಬರೆದು ನನಗೆ ಒಡನೆ ಕಳುಹಿಸಿದರೆ ಅದರಿಂದ ಕೃತಿಯ ಮೌಲ್ಯ ವರ್ಧಿಸಲಿದೆ.”

ಬಾಗಲೋಡಿಯವರ ಕುರಿತು “ಬರೆಯಿರಿ, ಬರೆಯಿರಿ” ಎಂದು ನಾರಾಯಣರಾಯರು ಹೇಳುತ್ತಾರಲ್ಲ, ನಾನು ಹೇಗೆ ಏನು ಬರೆಯಲಿ? ಬಾಗಲೋಡಿಯವರ ಎಲ್ಲ ಕಥೆಗಳನ್ನು ನಾನು ಓದಿದ್ದು ಸಹೃದಯಿಯಾಗಿ, ರಸಗ್ರಹಣಕ್ಕಾಗಿ, ವಿಮರ್ಶಾದೃಷ್ಟಿಯಿಂದಲ್ಲ. ಅವರನ್ನು ಕಂಡುದು ದೂರದಿಂದ. ಮಾತುಕತೆ ಇಲ್ಲವೇ ಇಲ್ಲ. ಹೀಗೆ ಕೃತಿ ಮತ್ತು ಕೃತಿಕಾರರ ಕುರಿತು ಬರೆಯುವ ಧೈರ್ಯ ಸಾಲದೆ ಮೌನವಾಗಿದ್ದೆ.

ನಾನು ಬಾಗಲೋಡಿಯವರ ಮೊದಲ ಕಥಾಸಂಗ್ರಹ ಹುಚ್ಚ ಮುನಸೀಫ ಮತ್ತು ಇತರ ಕತೆಗಳು, ಇದನ್ನು ಓದಲು ಕೊಂಡುಕೊಂಡುದೂ ಬಾಗಲೋಡಿಯವರು ಬರೆದಿದ್ದಾರೆಂದಲ್ಲ; ಮಾಸ್ತಿಯವರು ಪ್ರಕಟಿಸಿದ್ದಾರಲ್ಲ, ಆದ್ದರಿಂದ ಒಳ್ಳೆಯದಿರಬಹುದು ಎಂದು. ಮಾಸ್ತಿಯವರ ಪ್ರಕಟಣೆಯ ಶಿಫಾರಸು ನನ್ನನ್ನು ಬಾಗಲೋಡಿಯವರ ಕಥೆಗಳನ್ನು ಓದಲು ಪ್ರೇರೇಪಿಸಿತು. ಕಥೆಗಳನ್ನು ಓದಿದ ಬಳಿಕ ಈ ಕಥೆಗಳಿಗೆ ಯಾರದೇ ಶಿಫಾರಸಿನ ಅಗತ್ಯ ಇಲ್ಲ. ಇವು ಸ್ವಯಂ ಪ್ರಕಾಶ ಉಳ್ಳವು. ಕನ್ನಡ ಸಾಹಿತ್ಯ ಲೋಕದಲ್ಲಿ ಸದಾ ಉಳಿಯುವಂಥವು ಎಂದು ನನಗೆ ಖಚಿತವಾಯಿತು.

ಮುಂದೆ ಒಮ್ಮೆ ಅಕ್ಷರದಲ್ಲಿ ಮಾತ್ರ ಓದಿದ್ದ ಬಾಗಲೋಡಿಯವರು, ಮಂಗಳೂರು ಸರಕಾರಿ ಕಾಲೇಜಿಗೆ ಪ್ರಾಧ್ಯಾಪಕರಾಗಿ ಬಂದಾಗ ಪ್ರತ್ಯಕ್ಷ ಕಾಣುವ ಭಾಗ್ಯ ಒದಗಿ ಬಂತು. ಆದರೆ ಅದು ಕಾಣುವಷ್ಟರಲ್ಲೆ ಕೊನೆಯಾಯಿತು. ಅವರು ಮಂಗಳೂರಲ್ಲಿರುವಂತೆಯೆ ಐ.ಎಫ್.ಎಸ್ ತೇರ್ಗಡೆಯಾಗಿ ವಿದೇಶೀ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ತರುವಾಯದ ದಿನಗಳಲ್ಲಿ ಅವರು ಯಾವುದೋ ದೇಶಕ್ಕೆ ಭಾರತದ ರಾಯಭಾರಿಯಾಗಿ ನೇಮನಗೊಂಡರೆಂದು ಎಲ್ಲೋ ಓದಿದ ನೆನಪು.

ಮತ್ತೆ ಅವರ ಹೆಸರು ದಟ್ಟವಾಗಿ ಕಣ್ಣಿಗೆ ಹೊಳೆದುದು ಅವರ ಆರಾಧನಾ ಕಥಾ ಸಂಕಲನ ಕೈಗೆ ಬಂದಾಗ. ಅದರಲ್ಲಿ ಅವರು ಬರೆದ ಮುನ್ನುಡಿಯಂತೂ ತೀವ್ರವಾದ ನೋವಿನಿಂದ ಕೂಡಿದ ಸಂವೇದನೆಯೊಂದನ್ನು ನನ್ನಲ್ಲಿ ಹುಟ್ಟಿಸಿತು. ಆ ಸಂಕಲನದ ಮೊದಲ ಕಥೆ - ಬರ್ಲಿನಿನಿಂದ ಭಾಗೀರಥಿಗೆ, ನನ್ನನ್ನು ಬಹಳ ಕಾಲ ಒಂದು ಮೋಡಿಗೆ ಒಳಪಡಿಸಿತ್ತು. ಭಾರತೀಯರ ಮನಸ್ಸಿನಲ್ಲಿ ಸದಾ ನೆನಪಿನಲ್ಲಿ ಉಳಿದಿರುವ ಮ್ಯಾಕ್ಸ್ ಮುಲ್ಲರನ ಹೆಸರು ಮತ್ತು ಪ್ರವೃತ್ತಿಗಳನ್ನು ಪೂರ್ಣವಾಗಿ ಬಳಸಿಕೊಂಡು ಒಂದು ಮಾಯಾಲೋಕಕ್ಕೆ ನಮ್ಮನ್ನು ಸಾಗಿಸಿ ಹೆಣೆದಿರುವ ಈ ಕಥೆ ಸತ್ಯವೇ ಇರಬಹುದೇನೋ ಎನ್ನುವಷ್ಟು ಪರಿಣಾಮವನ್ನು ನನ್ನಲ್ಲಿ ಉಂಟು ಮಾಡಿತ್ತು. ಜೊತೆಗೆ ಇದು ಅವರ ಬದಲಾದ ಮನೋಸ್ಥಿತಿಗೆ ಹಿಡಿದ ಕನ್ನಡಿಯೂ ಆಗಿತ್ತು.

ಮುಂದೆ ನಾನು ಅವರ ಹೆಸರನ್ನು ಕೇಳಿದ್ದು, ವೃತ್ತಪತ್ರಿಕೆಗಳು ಅವರ ಸಾವಿನ ಸುದ್ದಿಯನ್ನು ತಿಳಿಸಿದಾಗ. ಇಷ್ಟು ಕಡಿಮೆ ತಿಳಿದೂ ಬಾಗಲೋಡಿಯವರು ತಮ್ಮ ಕಥೆಗಳ ಮೂಲಕ ನನ್ನ ಮನಸ್ಸಿನಲ್ಲಿ ಸದಾ ಉಳಿದಿದ್ದರು.

ಮತ್ತೆ ಅವರು ನನ್ನ ಕಣ್ಣ ಮುಂದೆ ಜೀವಂತವಾಗಿ ನಡೆದಾಡಿದ್ದು ಮೊನ್ನೆ ಬಂಟ್ವಾಳದಲ್ಲಿ, ಜಿಟಿ ನಾರಾಯಣರಾಯರು ಬಾಗಲೋಡಿಯವರ ಕುರಿತಾದ ತಮ್ಮ ನೆನಪಿನ ಸುರುಳಿಯನ್ನು ಎಳೆ ಎಳೆಯಾಗಿ ಬಿಚ್ಚಿದಾಗ. ನಾರಾಯಣರಾಯರು ಆ ಪ್ರತಿಭಾವಂತ ಜೀವದ ಕೊನೆಯ ದಿನಗಳನ್ನು ಹೇಳುತ್ತಿರುವಂತೇ ಎರಡು ತೊಟ್ಟು ನೀರು ನನ್ನ ಕಣ್ಣಿನಿಂದ ನನಗರಿಯದಂತೆಯೇ ಜಗುಳಿ ಬಿತ್ತು.

ಆ ಕಣ್ಣಹನಿಗಳೇ ನಾನು ಬಾಗಲೋಡಿಯವರಿಗೆ ಸಲ್ಲಿಸುವ ಶ್ರದ್ಧಾಂಜಲಿ. ಹೆಚ್ಚು ಮಾತೇಕೆ? ಇಷ್ಟು ಸಾಕು!
ದೇವಸ್ಮರಣೆಯನ್ನು ಓದುವ ನೀವೂ ನನ್ನೊಂದಿಗೆ ಶ್ರದ್ಧಾಂಜಲಿ ಅರ್ಪಿಸುತ್ತೀರೆಂದು ಭಾವಿಸಿದ್ದೇನೆ.

(ಏರ್ಯ ಲಕ್ಷ್ಮೀನಾರಾಯಣ ಆಳ್ವ, ೧೦-೨-೨೦೦೩, ಸಾಕೇತ, ಮೊಡಂಕಾಪು ೫೭೪೨೧೯, ಬಂಟ್ವಾಳ ತಾಲೂಕು)

ಜಿ.ಟಿ. ನಾರಾಯಣ ರಾಯರ ಪ್ರಸ್ತಾವನೆ

ಏರ್ಯ ಲಕ್ಷ್ಮೀನಾರಾಯಣ ಆಳ್ವರು ಪ್ರಸ್ತಾವಿಸಿರುವ `ಹನಿ’ ಹೇಗೆ ತನ್ನ ಅಂತರ್ಗತ ತ್ರಾಣದಿಂದಲೇ ‘ದೇವಸ್ಮರಣೆ’ ಎಂಬ ಪ್ರಸ್ತುತ ತೀರ್ಥಕುಂಡವಾಗಿ ಉದ್ಭವಿಸಿತು ಎಂಬುದನ್ನು ನೆನೆಯುವಾಗ ಮಣಿಪಾಲದ ವಿರಿಂಚಿ ಟಿ.ಎಂ.ಎ. ಪೈಯವರು ಉದ್ಗರಿಸಿದ ಸೂಕ್ತಿ (೧೯೪೦ರ ದಶಕ) ಮನಃಪಟಲದಲ್ಲಿ ಮಿನುಗುತ್ತದೆ: ಯಾವುದೇ ಗತಿಶೀಲ ಮಹಾಮೌಲ್ಯ ತನ್ನ ನಿರ್ವಾಹಕರನ್ನೂ ಅಭಿವ್ಯಕ್ತಿ ವಿಧಾನವನ್ನೂ ಸಂಪನ್ಮೂಲಗಳನ್ನೂ ತಾನೇ ಕಂಡರಿಸುತ್ತದೆ. ಇದೇ ಧ್ವನ್ಯರ್ಥ ಕೊಡುವ ಪ್ರಸಿದ್ಧ ಕವಿವಾಣಿ “ಶ್ರೀಕುವೆಂಪುವ ಸೃಜಿಸಿದೀ...... ಜಗದ್ಭವ್ಯ ರಾಮಾಯಣಂ.”

ದೇವಸ್ಮರಣೆ! ಪ್ರೇರಣೆ ಏನು? ಎರಡು ಪೂರಕ ಪ್ರಭಾವಗಳ ಆಕಸ್ಮಿಕ ಮಧುರ ದಾಂಪತ್ಯವದು: ಬಾಗಲೋಡಿ ದೇವರಾಯ (೧೯೨೭-೮೫) ಎಂಬ ವಿನೂತನ ಪ್ರತಿಭೆಯ ಉಲ್ಕಾಸದೃಶ ಜೀವನ ಮತ್ತು ಚಿಂತನೆ-ಸಾಧನೆ ಒಂದೆಡೆ. `ಅಭಿರುಚಿ’ ಜೋಡುಮಾರ್ಗದ ಸುಸಂಕೃತ ಸಾಹಿತ್ಯೋಲ್ಲಾಸಗಳ ಹೃದಯ ಸಂವೇದನೆ ಇನ್ನೊಂದೆಡೆ. ಈ ಗೆಳೆಯರು ಸಾಕಷ್ಟು ಸಂಶೋಧನೆಗೈದು ದೇವರಾಯರ ಒಬ್ಬ ಸಹಪಾಠಿ ಮಿತ್ರ ನಾನೆಂಬ ಸಂಗತಿಯನ್ನು ಉತ್ಖನಿಸಿದರು. ಉಳಿದ ವಿವರಗಳನ್ನು ಆಳ್ವರು ತಮ್ಮ ಎಂದಿನ ಸ್ವಚ್ಛ ಬಗೆ, ನಡೆಗಳಂತೆ ನುಡಿಗಳಲ್ಲಿ ಕೂಡ ದಾಖಲಿಸಿದ್ದಾರೆ - `ಹನಿ’ಯಲ್ಲಿ.
ಹನಿಯೊಂದು ಸಾಗರಕೆ ನಮಿಸಿ ನುಡಿಯಿತು, “ಎಲೈ
ಘನಮಹಿಮ! ನಿನ್ನಾಳ ನಾನರಿಯೆ – ಸಲ್ಲಿಪೆನ್
ಮನತುಂಬಿ ವಂದನೆಯ.” “ಅಣುರೂಪಿ! ನೀನಿರದೊ
ಡೆನಗೆಲ್ಲಿ ನೆಲೆ? ಸ್ವೀಕರಿಸು ನಮನ” ಅತ್ರಿಸೂನು.

ಇಲ್ಲಿ `ಹನಿ’ಯ ಬದಲು ಏರ್ಯ ಎಂದೂ `ಸಾಗರ’ದ ಬದಲು ಬಾಗಲೋಡಿ ಎಂದೂ ಓದಿಕೊಂಡರೆ ಉಳಿದ ವಿವರಗಳು ಸ್ವಯಂಸ್ಪಷ್ಟ.

ಆಳ್ವರ ಪ್ರೀತಿಯ `ಆದೇಶ’ವನ್ನು ಕೃತಜ್ಞತಾಪೂರ್ವಕವಾಗಿ `ಮನಸಾಶಿರಸಾ’ ತತ್ಕ್ಷಣ ವಹಿಸಿಕೊಂಡೆ. (`ಕೃತಜ್ಞತಾಪೂರ್ವಕ’ ಯಾಕೆಂದರೆ ದೇವರಾಯರು ಮಡಿದ ತರುಣದಲ್ಲೇ ಕುಶಿ ಹರಿದಾಸ ಭಟ್ಟರೂ ನಾನೂ `ದೇವತರ್ಪಣ’ ಎಂಬ ಹೆಸರಿನ ಸ್ಮಾರಕ ಗ್ರಂಥ ಪ್ರಕಟಿಸಬೇಕೆಂದು ಸಂಕಲ್ಪಿಸಿದ್ದೆವು. ಕುಶಿಯವರ ಅಸಂಖ್ಯ ಬಹುರೂಪಿ ಕ್ರಿಯಾಕಲಾಪಗಳ ನಡುವೆ ಕಾಲ ಸಂದೇ ಹೋಯಿತು. ಅವರೂ ಸಂದು ಹೋದರು. ಆದ್ದರಿಂದ ಈಗ ನನ್ನ ಕರ್ತವ್ಯ ಉಭಯ ಆತ್ಮೀಯ ಮಿತ್ರರಿಗೂ ತರ್ಪಣ ಸಮರ್ಪಣ. ಇದರತ್ತ ನನ್ನ ಲಕ್ಷ್ಯ ಸೆಳೆದದ್ದಕ್ಕಾಗಿ ಏರ್ಯರಿಗೆ ಕೃತಜ್ಞತೆ. (ಅಂದ ಹಾಗೆ ಕುಶಿಯವರ ಜೀವಿತಾವಧಿ ೧೯೨೪-೨೦೦೦) ನಾನು ಮೈಸೂರಿಗೆ ಮರಳಿದೊಡನೆ ಈ ಮುಂದಿನ ಮಾರ್ಗಸೂಚಕ ಪತ್ರವನ್ನು ಸಂಬಂಧಿಸಿದವರಿಗೆ ಕಳಿಸಿದೆ (ಉದ್ಧೃತಾಂಶ):

Abhiruchi Jodumarga, a cultural group in DK dt. Organised recently (October 11, 2002) an intimate meet called Bagalodi namana, K Mahalinga Bhat of St. Aloysius college, who had known Bagalodi only through his short stories, gave a scholarly analysis of the contents and gave an insight into Devarao’s genius. I spoke on Bagalodi as a classmate friend and scholar. Eralier I had collected some information from two of our classmates, P.Setu Madhava Rao and V. Gurumurti, which I narrated at that intimate meeting. Even as I was about to finish the talk a thought occurred to me: why have I note attempted so far to record my impressions of the departed noble soul? At least now I should – yes, I will on my return to Mysore. As if the President of the evening’s lively function Aerya Lakshminarayana Alva had read my thought, he began his very personal address in a mock serious tone, “I am angry with GTN. Why has he not yet recorded such wonderful memoirs all these years?” Spontaneously I stood up and assurured him and the audience, “I will! Abhirucui has shown the way and Aerya has ordained a firman!”

ಮುಂದಿನ ಗೀತೆಯನ್ನು ದೇವಸ್ಮರಣೆ ಹಾಡುತ್ತದೆ.
ನನ್ನ ಯೋಜನೆ ಯೋಚನೆ, ಸಮಾಲೋಚನೆ ಮುಂತಾದವು ಮಂಥನವಾಗುವ ಮೊದಲೇ ಮಗ ಅಶೋಕ ಆಶ್ವಾಸನೆ ನೀಡಿದ, “ಈ ಪುಸ್ತಕ ಅತ್ರಿ ಬುಕ್ ಸೆಂಟರಿನ ಇನ್ನೂ ಒಂದೆ ಹೆಮ್ಮೆಯ ಪ್ರಕಟಣೆ ಆಗುತ್ತದೆ.” ಹೆಸರು ಇಟ್ಟಾಗಿದೆ, ಕುಲಾವಿ ಹೊಲಿದಾಗಿದೆ, ತೊಟ್ಟಿಲು ಕಟ್ಟಿಯೂ ಆಗಿದೆ. ಉಳಿದಿರುವುದೇನು? “ಕೂಸನೆ ಕಂಡಿರಾ?” ಎಂದು ದಾಸವಾಣಿಗೆ ದನಿಗೂಡಿಸುವುದೇ ಅಥವಾ “ತಸ್ಮಾದ್ಯುಧ್ಯಸ್ತ ಭಾರತ” ಎಂದು ಕಳಕ್ಕೆ ಧುಮುಕುವುದೇ? ಲೇಖನ ಸಂಕಲನ, ಸಂಪಾದನೆ ಮತ್ತು ಮುದ್ರಣ ತಪಾಸಣೆ ಮಾಡಲು ಮುಂದಾದೆ (ನವೆಂಬರ್ ೨೦೦೨).

ದೇವಸ್ಮರಣೆ ಕೇವಲ ವೈಯಕ್ತಿಕ ದಾಖಲೆಗಳ ಮೊತ್ತವಾಗಬಾರದು. ದೇವರಾಯರು ಉತ್ತು ಬಿತ್ತಿ ಬೆಳೆದು ಪೈರೆತ್ತಿದುದರ ತಾತ್ತ್ವಿಕ ವಿವೇಚನೆಯೂ ಅದರ ಗುಣಮಾಪನೆಯೂ ಆಗಬೇಕೆಂಬುದು ನನ್ನ ಖಚಿತ ನಂಬಿಕೆ. ದೇವರಾಯರ ಪತ್ನಿ ವಿಜಯಲಕ್ಷ್ಮೀ ರಾವ್ ನನಗೆ ಹೇಳಿದ ಮಾತು ಮತ್ತು ಬರೆದ ಕಾಗದ ಇದೇ ಭಾವನೆಯನ್ನು ದೃಢೀಕರಿಸಿದುವು. “Personally I feel that, writers should have only their works discussed and highlighted, with some information about their places of birth and educational qualifications etc.”

ದೇವರಾಯರ ಸೋದರಳಿಯಂದಿರಾದ ವಿ. ರಘುಚಂದ್ರ ಹೆಬ್ಬಾರ (ಮಂಗಳೂರು) ಮತ್ತು ಎಂ. ಅರವಿಂದ ಶರ್ಮ (ಬೆಂಗಳೂರು) ನೀಡಿರುವ ಸಹಕಾರ, ಒದಗಿಸಿರುವ ಮಾಹಿತಿ ಮತ್ತು ಸಲ್ಲಿಸಿರುವ ಸೇವೆ ಅವಿಸ್ಮರಣೀಯ. ಅನಸೂಯಾದೇವಿ (ದೇವರಾಯರ ತಂಗಿ) ಅಮೂಲ್ಯ ದಾಖಲೆಗಳನ್ನೂ ಎಂ. ನಂದಿನಿ (ದೇವರಾಯರ ಆಪ್ತ ಮಿತ್ರ ದಿವಂಗತ ಎಂ ಜನಾರ್ದನರ ಪುತ್ರಿ) ಅಪೂರ್ವ ಚಿತ್ರಗಳನ್ನೂ ಎರವಲಿತ್ತಿದ್ದಾರೆ. ಬೆಂಗಳೂರಿನ ಸಾಹಿತ್ಯಪ್ರೇಮಿ ಕೆ.ಎಸ್. ನವೀನ್, ಮೈಸೂರು ವಿಶ್ವವಿದ್ಯಾನಿಲಯ ಗ್ರಂಥಾಲಯದ ಪಾರ್ವತಿ ಸುರೇಶ್, ನಾಗಸುಂದರ ಮತ್ತು ಗ್ರಂಥಪಾಲ ರಮೇಶ್ ಗಾಂಧಿಯವರು `ಪ್ರಬುದ್ಧ ಕರ್ನಾಟಕದ’ದ ಸಂಪುಟಗಳನ್ನು ಶೋಧಿಸಿ ದೇವರಾಯರ ಲೇಖನವನ್ನು (ಮುದ್ರಿತ ಪುಸ್ತಕದಲ್ಲಿ ಪುಟ ೧೧೯) ಒದಗಿಸಿದ್ದಾರೆ. ದೇವರಾಯರ ಸ್ಫಟಿಕ ಪರಿಶುಭ್ರ ವ್ಯಕ್ತಿತ್ವದ ಮೂರು ಹೊಳಹುಗಳನ್ನು ಇಲ್ಲಿ ಉಲ್ಲೇಖಿಸುವುದು ಉಚಿತವಾಗಿದೆ.

(ಮುದ್ರಿತ) ಪುಟ ೧೨೮ರಲ್ಲಿ ಪ್ರಕಟವಾಗಿರುವ ಉಪನ್ಯಾಸವನ್ನು – Utility of Sanskrit in Modern Age, ಗಮನಿಸಬೇಕು. ಅದರ ಕೆಲವು ಪ್ರತಿಗಳನ್ನು ರಘುಚಂದ್ರ ಹೆಬ್ಬಾರರು ಬೆಂಗಳೂರು ನಿವಾಸಿಯಾಗಿದ್ದ ವಿಜಯಲಕ್ಷ್ಮಿಯವರಿಗೆ ರವಾನಿಸಿದರು (೧೯೮೯ ಫೆಬ್ರವರಿ). ದೇವರಾಯರು ಆ ಮೊದಲೇ ಕೀರ್ತಿಶೇಷರಾಗಿದ್ದಾರೆಂಬುದು ನೆನಪಿರಲಿ.

ವಿಜಯಲಕ್ಷ್ಮಿಯವರು ಹೆಬ್ಬಾರರಿಗೆ ಬರೆದ ಉಪಕಾರ ಸ್ಮರಣೆ ಕಾಗದದಿಂದ (ಫೆ. ೧೮) ಉದ್ಧೃತಾಂಶ: “I just received the 12 booklets that you sent to me, containing the address given by Deva. Thank  you for it. I very much appreciated the profile written by you on him. Your description of him as `an intellectual genius’ is very apt. Indeed he was so. He had plans to write on so many other matters both in English and Kannada. His jottings in his note book remind one of Aldous Huxley, God creates geniuses, endows them with enormous talents, and takes them away before they flower."

ಭಾರತೀಯ ವಿದೇಶಾಂಗ ಸೇವೆಯನ್ನು ದೇವರಾಯರು ಸೇರಿದ ಮರು ವರ್ಷ ಪ್ರವೇಶಿಸಿದ ಎನ್. ಕೃಷ್ಣನ್ ಎಂಬವರು ಈಗ (೨೦೦೩) ಬೆಂಗಳೂರಿನಲ್ಲಿ ನೆಲಸಿದ್ದಾರೆ. ಅರವಿಂದ ಶರ್ಮರು ಇವರಿಂದ ಕಲೆಹಾಕಿದ ವಿವರ ಸ್ವಾರಸ್ಯಕರವಾಗಿದೆ. “ಕೃಷ್ಣನ್ ಅವರು ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಒಂದೆರಡು ಬಾರಿ ದೇವರಾಯರನ್ನು ಭೇಟಿಯಾಗಿದ್ದರು. ಇವರ ಪ್ರಕಾರ ದೇವರಾಯರೊಬ್ಬ ಮಹಾನ್ ಪಂಡಿತ, ಬಹುಶ್ರುತ. ಆದರೆ ಏಕಾಂಗಿ (ಕೃಷ್ಣನ್ ಬಳಸಿದ ಪದ recluse). ಸಮಸ್ಯೆಗಳ ಬಗ್ಗೆ ತಮ್ಮದೇ ಅಭಿಪ್ರಾಯವಿದ್ದವರು. ಎಂದೇ ಸುಲಭವಾಗಿ ರಾಜಿಮಾಡಿಕೊಳ್ಳದವರು. ಈ ಕಾರಣಗಳಿಂದಾಗಿ ಅವರ ಪಾಂಡಿತ್ಯ ಪ್ರತಿಭೆಗಳನ್ನು ಇಲಾಖೆಗೆ ಗುರುತಿಸಲಾಗಲಿಲ್ಲ. ರಾಯರ ಪಾಂಡಿತ್ಯಕ್ಕೆ ಒಂದು ನಿದರ್ಶನ. ಸಿಖ್ಖ್ ಜನಾಂಗದ ಒಬ್ಬಾತ ಇವರ ಸಹೋದ್ಯೋಗಿ ಆಗಿದ್ದ. ಈತ ತನ್ನ ದಾಡಿಯನ್ನು ಸಪಾಯ್ ಮಾಡಿದ್ದ. ರಾಯರಾದರೋ ಪುಷ್ಕಳ ಶ್ಮಶ್ರುಧಾರಿ ಆಗಿದ್ದರು! ಉಭಯರೂ ಪರಸ್ಪರ ಲಘು ವಿನೋದ ಸಂವಾದದಲ್ಲಿ ಮಗ್ನರಾಗಿದ್ದಾಗ ಖುದ್ದು ಸಿಖ್ಖನಿಗೇ ಬೆರಗು ಬರಿಸುವಂತೆ ರಾಯರು `ಗುರುಗ್ರಂಥಸಾಹಿಬ್’ ಶಬದ್ ಗಳನ್ನು ಪುಂಖಾನುಪುಂಖವಾಗಿ ಉರುಳಿಸುತ್ತಲೇ ಹೋದರು!”

ಶಿವರಾಮ ಕಾರಂತರು ಹುಚ್ಚುಮನಸ್ಸಿನ ಹತ್ತು ಮುಖಗಳು ಕೃತಿಯಲ್ಲಿ ಕಂಡಿರುವ ದೇವರಾಯರ ಮುಖ (ಮುದ್ರಿತ ಪುಟ ೨೭೨):
“ಕಾಠ್ಮಂಡುವಿನಲ್ಲಿ ವಿಮಾನದಿಂದ ಇಳಿದಾಗಲೇ ಈ ಉಭಯ ಮಿತ್ರರು [ದೇವರಾಯರು, ದೀಕ್ಷಿತರು] ನನಗಾಗಿ ಕಾದಿದ್ದರು. ನಾನು ದೇವರಾಯರ ಮನೆಯಲ್ಲಿ ಉಳಿದುಕೊಂಡು, ಅವರ ನೆರವಿನಿಂದ ಪಾಟನ್, ಭಾಟಗಾಂವ್ ನಗರಗಳನ್ನೂ ಕಾಠ್ಮಂಡುವಿನ ಪಶುಪತಿನಾಥ, ಸ್ವಯಂಭೂನಾಥ ದೇಗುಲಗಳನ್ನೂ ಕಾಣುವ ಅವಕಾಶ ದೊರೆಯಿತು. ಮಿತ್ರ ಕಮಲದೀಕ್ಷಿತರ ಆದರಾತಿಥ್ಯವೂ ಲಭಿಸಿತು. ಅಷ್ಟೇ ಅಲ್ಲ, `ದೇವರಾಯರು’ ನನ್ನನ್ನು ಭಾರತ ಸಂಸ್ಕೃತಿಯ ರಾಯಭಾರಿಯನ್ನಾಗಿಯೂ ಮಾಡಿಬಿಟ್ಟರು. ಭಾರತ – ನೇಪಾಲ ಮೈತ್ರಿ ಸಂಘದ ಪರವಾಗಿ ಒಂದು ಸಭೆಯನ್ನು ಜರಗಿಸಿ, ನನಗೆ ಸನ್ಮಾನ ಮಾಡಿ, ಅದರ ಲಾಂಛನವಾಗಿ ಒಂದು ನೇಪಾಲಿ ಟೊಪ್ಪಿಯನ್ನು ಸಹ ನನ್ನ ತಲೆಗೆ ತೊಡಿಸಿದರು!

“ಬಲು ಮೊದಲು ದೇವರಾಯರು ಮಂಗಳೂರಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಆಗ ಸಾಹಿತಿಯೂ ಆಗಿ ಅವರು ಹೆಸರನ್ನು ಗಳಿಸಿದ್ದರು. ಅವರ ಔದಾರ್ಯ ಪ್ರೀತಿಗಳನ್ನು ನಾನೆಷ್ಟು ಎಣಿಸಿದರೂ ಸಾಲದು. ಅವರು ಭಾರತ ನೇಪಾಳಗಳೊಳಗಿನ ಮೈತ್ರಿಯನ್ನು ಬೆಳೆಯಿಸಲು ವಿಶೇಷ ಶ್ರಮವನ್ನು ವಹಿಸಿದ ಒಬ್ಬ ಪ್ರಾಮಾಣಿಕ ರಾಯಭಾರಿಯೆಂದರೆ ಹೆಚ್ಚಾಗದು.”

ದೇವರಾಯರು ಪ್ರತಿನಿಧಿಸಿದ ಚಿರಮಾನವೀಯ ಮೌಲ್ಯಗಳೇನು? ಅವರ ಅಪಾರ ವೈದುಷ್ಯದ ಹಿನ್ನೆಲೆ ಹೇಗಿದ್ದಿರಬಹುದು? ಸಾಹಿತ್ಯ ಕ್ಷೇತ್ರಕ್ಕೆ ಅವರು ಬಳುವಳಿಯಿತ್ತಿರುವ ವಾಙ್ಮಯದ ಗುಣಮಟ್ಟ ಅಳೆಯಬಹುದೇ? ಅವರನ್ನು ವಿದೇಶಾಂಗ ಸೇವೆಯ `ದೂರತೀರಕೆ’ “ಯಾವ ಮೋಹನ ಮುರಲಿ ಕರೆಯಿತು?” ಬಾಗಲೋಡಿಯವರ ಅಗಾಧ ಸಾಧನೆಯ ಪ್ರಧಾನ ಶ್ರುತಿಯನ್ನು `ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?’ ಎಂಬ ಚಿರಂತನ ಪ್ರಶ್ನೆಯಲ್ಲಿ ಅರಸಬಹುದೇ?

ದೇವಸ್ಮರಣೆ ಇಂಥ ಪಂಚಾಮೃತವಾಗಿ ಒದಗಬೇಕು. `ಕಿನ್ನಿಕಂಬಳದ ಮೂರಿ ಬಾಗಲೋಡಿ’ ಒಂದು ಪವಾಡವಲ್ಲ. ಬದಲು, ನಿಸರ್ಗಲಭ್ಯ ಪ್ರತಿಭೆಯನ್ನು ಸದ್ವಿನಿಯೋಗಿಸಿ, `ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗೃತಿ ಸಂಯಮೀ’ ಸೂತ್ರಕ್ಕೆ ಬರೆದಿರುವ ಜೀವಂತ ಭಾಷ್ಯ, ಮತ್ತು –
ಏರಿರದ ಬಂಡೆಗಳು ಧರೆಯೊಳಗೆ ನೂರಾರು
ಏರಲಾಗದ ಬಂಡೆ ಸೃಷ್ಟಿಯೊಳಗಿಲ್ಲವೋ!
ದಾರಿ ಕಡಿಯುತ ಹೆಜ್ಜೆಯಿಡುವಾತ ದಿಟ್ಟದಿಟ
ಬಾರಿಬಾರಿಗು ಹೊಸತ ಕಾಣುವನು ಅತ್ರಿಸೂನು.
- ಈ ಅಮೂರ್ತ ಅನುಭವದ ಮೂರ್ತರೂಪವಾಗಿ ಓದುಗರಿಗೆ ವೇದ್ಯವಾಗಬೇಕು ಎಂಬ ನಿಲವಿನಿಂದ ಪ್ರಸ್ತುತ ಸಂಕಲನವನ್ನು ಸಂಪಾದಿಸಲಾಗಿದೆ.

ದೇವರಾಯರ ಜೀವನಸಿದ್ಧಿ, ಲೇಖಕರ ನಿಶಿತ ಬುದ್ಧಿ ಮತ್ತು ಆನುಷಂಗಿಕವಾಗಿ ಸಂಪಾದಕನ ಅಂತಃಶುದ್ಧಿ – ಇವುಗಳ ಮಧುರ ಮೇಳನವಿದು. ಈ ಬಂಧುರ ಹೂರಣಕ್ಕೆ ಒಪ್ಪುವ ಸುಂದರ ತೋರಣ ಕಟ್ಟಿದವರು ಶ್ರೀ ಶಕ್ತಿ ಎಲೆಕ್ಟ್ರಿಕ್ ಪ್ರೆಸ್ಸಿನ ರಾ.ವೆಂ ಶ್ರೀನಿವಾಸ ಮೂರ್ತಿ ಮತ್ತು ರಾ.ಶ್ರೀ ಮೋಹನಮೂರ್ತಿ – ದೇವಸ್ಮರಣೆಯ ಗೌರವ ಸಂಪಾದಕರಿವರೆಂದರೆ ಅದು ಅತಿಶಯೋಕ್ತಿಯಲ್ಲ. ಸಿ.ಕೆ.ದೇವಿಕ ಅಷ್ಟೆ ನಿಷ್ಠೆಯಿಂದ ಗಣಕ ಬೆರಳಚ್ಚಿಸಿದ್ದಾರೆ ಮತ್ತು ಕಾರ್ಮಿಕ ಬಂಧುಗಳು ಒಲವಿನಿಂದ ಮುದ್ರಣ ಮಾಡಿದ್ದಾರೆ. ನಮ್ಮ ಸೊಸೆ ರುಕ್ಮಿಣಿಮಾಲಾ ಕರಡುಪ್ರತಿ ಪರಿಷ್ಕರಿಸಿದ್ದಾಳೆ. ಕೃತಿಯ ಹೂರಣ-ತೋರಣ ಸೌಂದರ್ಯಕ್ಕೆ ಕಾರಣರಾದ ಸರ್ವ ಚೇತನಗಳಿಗೂ ಹಾರ್ದಿಕ ನಮನಗಳು.

ಡಿವಿಜಿಯವರ ಹಕ್ಕಿಯ ಪಯಣದ ಈ ಸಾಲುಗಳು ದೇವರಾಯರ ಸಾರ್ಥಕ ಜೀವನದ ಆಧಾರಶ್ರುತಿ ಆಗಿರಬಹುದೇ?
ಹಕ್ಕಿ ಹಕ್ಕಿ ಎಲ್ಲಿಗೆ?
ಪಯಣವೆಲ್ಲಿಗೆ?
ಎಲ್ಲಿಗೆಂದರಲ್ಲಿಗೆ
ಹಳ್ಳದಿಂದ ತಿಟ್ಟಿಗೆ
ಹಳ್ಳಿಯಿಂದ ದಿಳ್ಳಿಗೆ
ಅಲ್ಲಿಗಿಲ್ಲಿಗೆ

ಗೂಡಿನಿಂದ ಕಾಡಿಗೆ
ಕಾಡಿನಿಂದ ಗೂಡಿಗೆ
ನಾಡಿನಿಂದ ನಾಡಿಗೆ
ಬೀಡಿನಿಂದ ಬೀಡಿಗೆ
ಇಲ್ಲಿಗಲ್ಲಿಗೆ

ಹಕ್ಕಿ, ಹಕ್ಕಿ, ಕೆಲಸವೇನು?
ರೆಕ್ಕೆ ದುಡಿಸಿ ಫಲಿತವೇನು?

ಆಟಪಾಟ ಊಟವು
ಊಟ ಕಣ್ಣ ನೋಟವು
ಗಾಳಿಯೊಳೀಜಾಟವು
ಬಾನಿನ ತೇಲಾಟವು

ಬಾಯ್ಗೆ ದೊರೆತುದೂಟವು
ಕೊರಲ ಕೂಗು ಪಾಟವು
ಮನವು ಆಡಿದಾಟವು
ಚಣದ ಆಟವು

ಹಕ್ಕಿ, ಹಕ್ಕಿ, ಕಂಡುದೇನು?
ಕಂಡು ನೀನುಂಡುದೇನು?

ಸೊರ್ಗದಿಂದ ಭೂತಲ
ಶಾಂತಿಯಿಂದ ಗದ್ದಲ
ಸುರರು ಬೆಳೆದ ತೋಟವು
ದುರುಳರ ಮರುಳಾಟವು
ದೇವದೇವನುದ್ಯಾನ
ಮನಿಸ ಮಾಡಿದ ಹೈರಾಣ

ಹಕ್ಕಿ ಹಾಡದಾವುದು?
ರಾಗವಾವುದು?

ಹಾಡಿದೆನೆ? ಏನದು?
ಹಾಡಲೆನಗೆ ಬಾರದು.
ರಾಗವೆನಗೆ ಕಲಿಪರಾರು?
ಕೇಳ್ವರಾರು? ಹೇಳ್ವರಾರು?
ಕೊರಗನೆದೆಯೊಳಿಡುವರಾರು?
ಸ್ವರ ಕೊರಲೊಳಿಡುವರಾರು?
ಮಿಡಿವುದೇನೊ ಮನದೊಳು
ನುಡಿವುದೇನೊ ಬಾಯೊಳು.
ಕೂಗು ರಾಗವಪ್ಪುದೇನು?
ಮಾತು ಗೀತೆಯಪ್ಪುದೇನು?
ಇನಿದೊ ಕಟುವೊ ದನಿಯದೆಂತೊ
ಅಣಗಿರುವ ಕಡುಮರ್ಮವೇನೊ
ಬ್ರಹ್ಮನಿರ್ಮಿತಿಯರ್ಥವ
ತಿಮ್ಮಲಿಂಗನು ತಿಳಿಯುವ

(ಜಿ.ಟಿ. ನಾರಾಯಣ ರಾವ್, ಮೈಸೂರು. ೧೫-೩-೨೦೦೩)
(ಮುಂದುವರಿಯಲಿದೆ)


2 comments:

  1. Ashokavardhanarige vandanegalu, hosa maadhyamada moolaka Devaraayara bagge (nanna mattige) hosa aayaamavannu theredittaddakkaagi. Devarayara asaadhaarana vyakthitvavannu avara kaalada madilalli kale haaki samagravaagi parichayisida GTN avarige naaneshtu aabhaari! Hithalagida maddalla yembanthe, devaraayarannu naavu vishwavidyanilayagalalli hecchu gamanisilla. Avara kathegalannu eegalaadaru namma vidyaarthigalige parichaysuva hambala chiguride. Vandanegalondige (haagu kannada beralachchu baaradhe english lipiyalli kannadavannu baredhu sumadhura bhaasheyannu nimage klishtagolisiddakkagi kshame yaachisuttha), nimmava, ravishankar rao

    ReplyDelete
  2. ಓದುವ, ಸಹಜವಾಗಿ ಪ್ರತಿಕ್ರಿಯಿಸುವ ಮಂದಿ ಹೆಚ್ಚಿದಂತೆ ನನ್ನ ಧನ್ಯತೆಯ ತೂಕ ಹೆಚ್ಚುತ್ತ ಹೋಗುತ್ತದೆ. ಕನ್ನಡ ಲಿಪಿಗೆ ಅಂತರ್ಜಾಲದಲ್ಲೇ ಉಚಿತವಾಗಿ ಸಿಗುವ ಬರಹ - ಯೂನಿಕೋಡ್ ನಿಮ್ಮನುಕೂಲದಲ್ಲಿ ಬಳಸಿ ನೋಡಿ - ತುಂಬ ಸುಲಭವಿದೆ. ಅದರ ಕೊರತೆ ಉಂಟೆಂದು ಕ್ಷಮೆಯಾಚಿಸುವ, ಪ್ರತಿಕ್ರಿಯಿಸದಿರುವ ಕೆಲಸ ಮಾಡಬೇಡಿ. ಕೃತಜ್ಞತೆಗಳೊಂದಿಗೆ

    ReplyDelete