-
ಭಾರವಿ ದೇರಾಜೆ
[ಮಹಾರಾಜಾಕಾಲೇಜಿನ ನನ್ನ ಸಹಪಾಠಿ, ಗೆಳೆಯ ದೇರಾಜೆ ಮೂರ್ತಿಯ ಹಿರೀ ಮಗ - ಭಾರವಿ. ಈತ ಸಮಾಜಸೇವಾ ಅಧ್ಯಯನಗಳ ಕಾಲೇಜೆಂದೇ ಖ್ಯಾತವಾದ ಮಂಗಳೂರಿನ ರೋಶನಿ ನಿಲಯದ ಸ್ನಾತಕೋತ್ತರ ಪದವೀಧರ. ಅದಕ್ಕೂ ಮಿಗಿಲಾಗಿ ಅಲ್ಲಿಂದ ಹೊರ ಬಂದ ಕೂಡಲೇ `ವೃತ್ತಿ ಭದ್ರತೆ’ ಎಂಬ ಕಿಸೆ ತುಂಬ ಕಾಸು, ಕಣ್ತುಂಬಾ ನಿದ್ರೆಯ ತಾಪೇದಾರಿ ನೆಚ್ಚದೆ, ತನ್ನ ಪದವಿಯನ್ನು ನಿತ್ಯ ಅಗ್ನಿಪರೀಕ್ಷೆಗೊಳಪಡಿಸುವಂತೆ, ಅದೂ ಎಳೆವರಯದಲ್ಲೇ (`ಚಿರಂತನ’ ಟ್ರಸ್ಟ್, ಸುರತ್ಕಲ್) ವೃದ್ಧಾಶ್ರಮ ಕಟ್ಟಿ, ನಡೆಸುತ್ತಲಿದ್ದಾನೆ. ಇನ್ನು ಅಜ್ಜ (ದೇರಾಜೆ ಸೀತಾರಾಮಯ್ಯ), ಅಪ್ಪ, ಮಾವ (ಐಂದ್ರಜಾಲಿಕ ಶಂಕರ್) ಇವರಿಂದ ಆನುವಂಶಿಕವೋ ಎಂಬಂತೆ ಹಲವು ಕಲಾಪರಿಣತಿಗಳನ್ನು ಸಾಧಿಸಿದ್ದಾನೆ ಮತ್ತು ಕೆಲವು ಕೂಟ ಸಂಘಟನೆಗಳಲ್ಲೂ ಯಶಸ್ವಿಯಾಗಿದ್ದಾನೆ. ಅಂಥವನಿಗೆ ತನ್ನ ವಿಶೇಷ ಪಾಂಡಿತ್ಯದ - ತಬ್ಲಾ ವಾದನದಲ್ಲಿ, ನಮ್ಮ ನಡುವೆ ಇದ್ದೂ ಮರವೆಗೆ ಸಂದಂತಿದ್ದ ಹಿರಿಯ ಕಲಾಕಾರರೊಬ್ಬರನ್ನು ಕಂಡಾಗ ಹೇಗನ್ನಿಸಿರಬೇಕು! ಅವರ ಬಗ್ಗೆ ಇದುವರೆಗಿನ ತನ್ನ ಅವಜ್ಞೆ, ಬಹುತೇಕ ಸಾರ್ವಜನಿಕರದ್ದೂ ಹೌದೆಂದೇ ಆತನಿಗೆ ಸರಿಯಾಗಿಯೇ ಕಾಣಿಸಿದೆ. ಹಾಗಾಗಿ ಒಂದು ಸಂಕ್ಷಿಪ್ತ ವ್ಯಕ್ತಿ ಪರಿಚಯವನ್ನು ಲೇಖಿಸಿದ್ದಾನೆ. ಈಗ ಓದಿ, ಕೇಳಿ ಭಾರವಿಯ ಬರಹ - ಅಶೋಕವರ್ಧನ]
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಹುಟ್ಟಿ ಬೆಳೆದು, ತಮ್ಮ ೯೫ರ ಇಳಿವಯಸ್ಸಿನಲ್ಲಿ ಮಂಗಳೂರಿನಲ್ಲೇ ನೆಲೆಸಿರುವ ವಿದ್ವಾನ್ ಎನ್.ವಿ. ಮೂರ್ತಿರಾಯರು ನಮ್ಮೂರಿನ ಸಂಗೀತಾಭಿಮಾನಿಗಳಿಗೆ ಅಪರಿಚಿತರಾಗಿರುವುದು ಒಂದು ರೀತಿಯ ದುರಂತವೇ ಎಂಬ ಕಟು ಸತ್ಯವು, ಅವರನ್ನು ಈಗಾಗಲೇ ತಿಳಿದಿರುವ ಹಾಗೂ ಅವರ ಮೇರು ವ್ಯಕ್ತಿತ್ವ ಪರಿಚಯದ ಈ ಸಂಗ್ರಹವನ್ನು ಓದಿದ ಪ್ರತಿಯೊಬ್ಬನೂ ಒಪ್ಪಬಲ್ಲ ವಿಚಾರವಾಗಿದೆ.
ಬಾಲ್ಯದಲ್ಲಿ ಪುತ್ತೂರಿನಲ್ಲಿ ತಬಲಾದ ತನ್ನ ಪ್ರಾರಂಭಿಕ ಶಿಕ್ಷಣವನ್ನು ಪಡೆದ ಮೂರ್ತಿಯವರು, ಮುಂದೆ ಹಿಂದುಸ್ಥಾನಿ ಸಂಗೀತ ಕ್ಷೇತ್ರದ ದಂತಕತೆಗಳ ಸಾಲಿನಲ್ಲಿ ನಿಲ್ಲುವ ಶೆಹನಾಯಿ ಮಾಂತ್ರಿಕ ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್,
ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರ್, ಬಾನ್ಸುರಿ ಕಲಾವಿದ ಪಂಡಿತ್ ಪನ್ನಾಲಾಲ್ ಘೋಷ್, ಖ್ಯಾತ ಗಾಯಕರಾದ ಪಂಡಿತ್ ಭೀಮಸೇನ್ ಜೋಷಿ, ಪಂಡಿತ್ ಬಸವರಾಜ ರಾಜಗುರು, ಬೇಗಂ ಪರ್ವೀನ್ ಸುಲ್ತಾನ, ಸರೋದ್ ಕಲಾವಿದ ಮಹಮ್ಮದ್ ಖಾನ್ ಮೊದಲಾದ ಅನೇಕ ಕಲಾವಿದರಿಗೆ ತಬಲಾ ಸಾಥ್ ನೀಡಿದವರು.
ಇವರು ತನ್ನ ತಬಲಾದ ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಿನ ಶ್ರೀ ರಾಮಕೃಷ್ಣ ಪ್ರಭುಗಳಲ್ಲೂ ನಂತರ ಮೈಸೂರಿನ ಆಸ್ಥಾನ ವಿದ್ವಾಂಸರಾದ ಶ್ರೀ ಡಿ. ಶೇಷಪ್ಪನವರಲ್ಲೂ ತದನಂತರ ತಬಲಾ ದಿಗ್ಗಜರಾದ ಉಸ್ತಾದ್ ಶೇಖ್ ದಾವೂದ್‌ರ ಬಳಿ ತಬಲಾದ ಹೆಚ್ಚಿನ ಪಾಠಗಳನ್ನು ಪಡೆದುಕೊಂಡವರು. ಉಸ್ತಾದ್ ಅಹಮ್ಮದ್ ಜಾನ್ ತಿರಕ್ವಾ ಅವರಿಂದಲೂ ಕೆಲವು ಪಾಠಗಳನ್ನು ಪಡೆದುಕೊಂಡಿದ್ದಾರೆ.
ಅತಿವಿರಳ ಹಾಗೂ ಅಪರೂಪದ ವ್ಯಕ್ತಿತ್ವದ ಈ ಮಹಾನ್ ಕಲಾವಿದ ಬಾಲ್ಯದಲ್ಲಿ ಬಡತನದ ನಡುವೆಯೂ ತಬಲಾ ಶಿಕ್ಷಣವನ್ನು ಮುಂದುವರಿಸುವ ಹಠದೊಂದಿಗೆ ಮೈಸೂರಿಗೆ ತೆರಳಿ, ದೈನಂದಿನ ಆಹಾರ ವಸತಿಯ ನಿರ್ವಹಣೆಗಾಗಿ ಹೋಟೇಲುಗಳಲ್ಲಿ ದುಡಿಯುತ್ತಾ ತಬಲಾದ ಜೊತೆ ಮೃದಂಗವನ್ನೂ ಕಲಿತು ಮುಂದೆ ಕರ್ನಾಟಕೀ ಶಾಸ್ತ್ರೀಯ ಸಂಗೀತದ ಉಚ್ಚ ಶ್ರೇಣಿಯ ಗಾಯಕರಾದ ವಿದ್ವಾನ್ ಚಂಬೈ ವೈದ್ಯನಾಥ ಭಾಗವತರ್ ಇವರ ಅಚ್ಚುಮೆಚ್ಚಿನ ಪಕ್ಕವಾದ್ಯ ಕಲಾವಿದರಾಗಿ ದೇಶದಾದ್ಯಂತ
ಅವರ ಸಂಗೀತ ಕಚೇರಿಗಳಲ್ಲಿ ಅವರಿಗೆ ಸಮರ್ಥವಾಗಿ ಮೃದಂಗ ಸಹಕಾರ ನೀಡಿದವರು.
ಅಲ್ಲದೆ ಖ್ಯಾತ ವಿದ್ವಾಂಸರುಗಳಾದ ಜಿ.ಎನ್. ಬಾಲಸುಬ್ರಹ್ಮಣ್ಯ, ಮಧುರೈ ಮಣಿ ಅಯ್ಯರ್, ಮುಡಿಗುಂಡಮ್ ವೆಂಕಟ್ರಾಮ ಅಯ್ಯರ್, ಮುಸುರಿ ಸುಬ್ರಹ್ಮಣ್ಯ ಅಯ್ಯರ್, ಚಿತ್ತೂರು ಸುಬ್ರಹ್ಮಣ್ಯ ಪಿಳ್ಳೆ, ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಎಮ್.ಎಸ್. ಸುಬ್ಬುಲಕ್ಷ್ಮಿ, ಪಾಲ್ಘಾಟ್ ರಾಮ ಭಾಗವತರ್, ಸೆಮ್ಮನ್ಗುಡಿ ಶ್ರೀನಿವಾಸ ಅಯ್ಯರ್, ಟೈಗರ್ ವರದಾಚಾರ್, ಮೈಸೂರು ಅಸ್ಥಾನ ವಿದ್ವಾಂಸ ದೇವೇಂದ್ರಪ್ಪ, ಚಕ್ರಕೋಡಿ ನಾರಾಯಣ ಶಾಸ್ತ್ರಿ, ಡಿ.ಕೆ ಪಟ್ಟಮ್ಮಾಳ್, ಮಹಾರಾಜಪುರಂ ವಿಶ್ವನಾಥ ಅಯ್ಯರ್, ಮಹಾರಾಜಪುರಂ ಸಂತಾನಂ ಅಯ್ಯರ್, ಎಮ್. ಬಾಲಮುರಳಿಕೃಷ್ಣ, ಅಲ್ಲದೆ ಪಿಟೀಲು ಚೌಡಯ್ಯ, ಲಾಲ್ಗುಡಿ ಜಯರಾಮ್, ಎಮ್. ಎಸ್. ಗೋಪಾಲಕೃಷ್ಣನ್ ಮೊದಲಾದ ಪಿಟೀಲು ವಿದ್ವಾಂಸರಿಗೂ ಕೊಳಲು ಮಾಂತ್ರಿಕರಾದ ಟಿ. ಆರ್. ಮಹಾಲಿಂಗಮ್, ಎನ್. ರಮಣಿ, ವೀಣೆ ಕಲಾವಿದರಾದ ಚಿಟ್ಟಿ ಬಾಬು, ಮೈಸೂರು ದೊರೆಸ್ವಾಮಿ ಅಯ್ಯಂಗಾರ್,
ಮೊದಲಾದ ಖ್ಯಾತ ನಾಮರೊಂದಿಗೆ ಅನೇಕ ಕಛೇರಿಗಳಲ್ಲಿ ಮೃದಂಗ ನುಡಿಸಿ ಸೈ ಎನಿಸಿಕೊಂಡವರು.
ಮದರಾಸಿನ ಪ್ರತಿಷ್ಠಿತ ವೇದಿಕೆಯೊಂದರಲ್ಲಿ ಅಹಮ್ಮದ್ ಹುಸೈನರ ಸಿತಾರ್ ವಾದನಕ್ಕೆ ಮೂರು ಗಂಟೆಗಳ ಕಾಲ ತಬಲಾ ಸಾಥ್ ನೀಡಿ ಮರುಕ್ಷಣ ಅದೇ ವೇದಿಕೆಯಲ್ಲಿ ಪ್ರಾರಂಭವಾದ ವಿದ್ವಾನ್ ಬಾಲಮುರಳಿ ಕೃಷ್ಣರ ಹಾಡುಗಾರಿಕೆಗೆ ಮತ್ತೆ ಮೂರು ಗಂಟೆ ಮೃದಂಗ ನುಡಿಸಿದವರು.
ವಿವಿಧ ನೃತ್ಯ ಪ್ರಕಾರಗಳಾದ ಭರತನಾಟ್ಯ, ಕೂಚುಪುಡಿ, ಕಥಕ್, ಮೊಹಿನಿಯಾಟ್ಟಮ್ ಕಲಾವಿದ ಕಲಾವಿದೆಯರಿಗೆ ಸಮರ್ಥ ಸಾಥ್ ನೀಡಿ ಸೈ ಎನಿಸಿಕೊಂಡವರು. ಭರತನಾಟ್ಯ ಪ್ರವೀಣೆ ಬಾಲ ಸರಸ್ವತಿ, ಕಮಲಾ ಲಕ್ಷ್ಮಣ್ ಮತ್ತು ಅವರ ಸಹೋದರಿಯರು, ಲಲಿತ, ಪದ್ಮಿನಿ, ರಾಗಿಣಿ, ಸುಲೋಚನ, ವೈಜಯಂತಿಮಾಲ, ಹೇಮಮಾಲಿನಿ, ಮೊದಲಾದವರಿಗೆ ದೇಶದಾದ್ಯಂತ ಪಕ್ಕವಾದ್ಯ ಕಲಾವಿದರಾಗಿ ಸಹಕರಿಸಿರುತ್ತಾರೆ.
ಇವರ ಮೃದಂಗ ವಿದ್ಯಾಭ್ಯಾಸ ಮೈಸೂರಿನ ಆಸ್ಥಾನ ವಿದ್ವಾಂಸರಾದ ವಿದ್ವಾನ್ ಟಿ.ಎಮ್. ಪುಟ್ಟಸ್ವಾಮಯ್ಯರ ಬಳಿಯೂ ಬಳಿಕ ಮದರಾಸಿನಲ್ಲಿ ವಿದ್ವಾನ್ ಪಾಲ್ಘಾಟ್ ಮಣಿ ಅಯ್ಯರ್ ಇವರ ಬಳಿಯೂ ನಡೆದಿತ್ತು.
೧೯೫೩ ರ ಜುಲೈ ತಿಂಗಳಿನಲ್ಲಿ ತನ್ನ ಮೊದಲ ವಿದೇಶ ಪ್ರವಾಸದ ಭಾಗವಾಗಿ ಚೀನಾ ದೇಶಕ್ಕೆ ಭೇಟಿ ನೀಡಿದರು. ಮುಂದೆ ೧೯೬೧ರಲ್ಲಿ ಕಮಲಾ ಲಕ್ಷ್ಮಣ್ ಅವರೊಂದಿಗೆ, ರೋಮ್, ಸ್ವಿಡ್ಜರ್ಲ್ಯಾಂಡ್, ಜರ್ಮನಿ, ಹಾಲೆಂಡ್, ಬೆಲ್ಜಿಯಂ, ಇಂಗ್ಲೆಂಡ್, ಝಕೋಸ್ಲಾವಾಕಿಯಾ, ಯುಗೋಸ್ಲಾವಿಯಾ, ಹಂಗೇರಿ, ರಷ್ಯಾ ದೇಶದ ನಾನಾ ನಗರಗಳಲ್ಲಿ ತಮ್ಮ ಕಲಾ ಸೇವೆಯನ್ನು ಮಾಡಿರುತ್ತಾರೆ. ೧೯೬೩ರಲ್ಲಿ ಜಪಾನ್, ಬ್ಯಾಂಕಾಕ್, ಸಾನ್ ಪ್ರಾನ್ಸಿಸ್ಕೋ, ವಾಶಿಂಗ್ಟನ್, ಲಾಸ್ ಎಂಜಲೀಸ್, ವೆಸ್ಟ್ ಇಂಡೀಸ್, ಪ್ಯಾರೀಸ್, ನಗರಗಳಲ್ಲಿ ಕಲಾ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ೧೯೬೬ರಲ್ಲಿ ಪ್ಯಾರೀಸ್, ಪೋಲ್ಯಾಂಡ್, ಜರ್ಮನಿ ಭೇಟಿ ನೀಡಿ ವಿವಿಧ ಸಂಗೀತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುತ್ತಾರೆ.
ಮೂರ್ತಿಯವರು ತಮ್ಮ ಜೀವನದ ಬಹುಪಾಲು ಕಳೆದದ್ದು ಮದರಾಸಿನಲ್ಲಿ. ಅಲ್ಲಿ ಅವರು ಆಕಾಶವಾಣಿ ಹಾಗೂ ದೂರದರ್ಶನದ ಕಲಾವಿದರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಎನ್.ವಿ ಮೂರ್ತಿಯವರು ಹಿಂದುಸ್ಥಾನಿ ಹಾಗೂ ಕರ್ನಾಟಕೀ ಶಾಸ್ತ್ರೀಯ ಸಂಗೀತ ಕ್ಷೇತ್ರಗಳಲ್ಲಿ ತಮ್ಮ ಮಾನಸಿಕ ಸಂತೋಷ ಹಾಗೂ ನೆಮ್ಮದಿಗಾಗಿ ದುಡಿದರೆ, ಅವರು ತನ್ನ ಜೀವನೋಪಾಯಕ್ಕೆ ಆಯ್ಕೆ ಮಾಡಿಕೊಂಡದ್ದು ಹಾಗೂ ಅವರಿಗೆ ಆರ್ಥಿಕ ಬಲವನ್ನು ಒದಗಿಸಿದ್ದು, ಚಿತ್ರರಂಗ. ಸುಮಾರು ೫ ಸಾವಿರಕ್ಕೂ ಅಧಿಕ ಚಿತ್ರಗೀತೆಗಳಿಗೆ ಪಕ್ಕವಾದ್ಯ ನುಡಿಸಿದ ಖ್ಯಾತಿ ಇವರದು. ಸಿತಾರ್, ಸಂತೂರ್, ಜಲತರಂಗ, ಕಾಷ್ಠ ತರಂಗ, ಶೀಶ ತರಂಗ ಇತ್ಯಾದಿ ವಾದ್ಯಗಳನ್ನೂ ನುಡಿಸುವ ಪರಿಣತಿಯನ್ನು ಹೊಂದಿದ್ದ ಮೂರ್ತಿಯವರು 'ಜ್ಯಾಕ್ ಆಫ಼್ ಆಲ್ ಮಾಸ್ಟರ್ ಆಫ಼್ ನನ್'
ಎಂಬ ಮಾತಿಗೆ ಅಪವಾದವೆಂದೇ ಹೇಳಬಹುದು. ಆಮಂತ್ರಣ ಪತ್ರಿಕೆಯೂ ಸೇರಿದಂತೆ ಪ್ರಚಾರದ ಎಲ್ಲೆಡೆಗಳಲ್ಲೂ ಪಕ್ಕವಾದ್ಯ ಕಲಾವಿದರಿಗೆ ಸಿಗಬೇಕಾದ ಮಾನ್ಯತೆಗಾಗಿ ಹೋರಾಟ ನಡೆಸಿದವರು.
ಸನಾದಿ ಅಪ್ಪಣ್ಣ ಚಿತ್ರದ 'ಕರೆದರೂ ಕೇಳದೆ' ಎಂಬ ಅದ್ಬುತ ಸಂಗೀತ ಸಂಯೋಜನೆಯ ಹಾಡಿನಲ್ಲಿ ಬಿಸ್ಮಿಲ್ಲಾ ಖಾನ್ ಜೊತೆ ತಬಲಾ ನುಡಿಸಿದ್ದು ಮೂರ್ತಿರಾಯರು.
ತಬಲಾ ಮೃದಂಗ ಮಾತ್ರವಲ್ಲದೆ ಚಿತ್ರರಂಗಕ್ಕೆ ಅನುಕೂಲವಾಗುವ ತಬಲಾ ತರಂಗ ಸ್ವಂತವಾಗಿ ಅಭ್ಯಸಿಸಿ ಸಾವಿರಾರು ಹಾಡುಗಳಿಗೆ, ನೃತ್ಯಗಳಿಗೆ ತಬಲಾ ತರಂಗ ನುಡಿಸಿರುತ್ತಾರೆ. ಇವರು ಭಾಗವಹಿಸಿದ ಕೆಲವು ಹೆಸರಾಂತ ಚಲನ
ಚಿತ್ರಗಳೆಂದರೆ. ಹಂಸಗೀತೆ, ಸನಾದಿ ಅಪ್ಪಣ್ಣ, ಶಂಕರಾಭರಣಂ, ಕಲೈ ಕೋವಿಲ್, ಚಂದ್ರಲೇಖ, ಕೊಂಜುಂ ಸಲಂಗೈ, ಕಣವನೇ ಕಣ್ಕಂಡ ದೈವಂ, ತಿಲ್ಲಾನಾ ಮೋಹನಾಂಬಾಳ್, ವೀರ ಪಾಂಡ್ಯ ಕಟ್ಟ ಬೊಮ್ಮನ್,
ಸಂಪೂರ್ಣ ರಾಮಾಯಣಂ, ಬಭ್ರುವಾಹನ , ಆನಂದ ಭೈರವಿ, ಇತ್ಯಾದಿ.
ಆ ಪೀಳಿಗೆಯ ಎಲ್ಲಾ ಹೆಸರಾಂತ ಸಂಗೀತ ನಿರ್ದೇಶಕರುಗಳೊಂದಿಗೆ, ಗಾಯಕ ಗಾಯಕಿಯರೊಂದಿಗೆ ಕೆಲಸ ಮಾಡಿದ ಹಾಗೂ ಅವರೆಲ್ಲರ ಮೆಚ್ಚುಗೆಗೆ ಪಾತ್ರರಾದ ಹಿರಿಮೆ ನಮ್ಮೆಲ್ಲರ ಹೆಮ್ಮೆಯ
ನೇರಂಕಿ ವಿಷ್ಣು ಮೂರ್ತಿರಾಯರದ್ದು. ಅವರೀಗ ನಮ್ಮೊಂದಿಗಿದ್ದಾರೆ ಎಂಬ ಹೆಮ್ಮೆ (ದಕ್ಷಿಣ-) ಕನ್ನಡದ ಎಲ್ಲಾ ಸಂಗೀತಾಭಿಮಾನಿಗಳದ್ದು.
(ಆಧಾರ - ಆರೂರು ಮಂಜುನಾಥ್ ರಾವ್ ಬರೆದ, ೭೪ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹೊರತಂದ ಎನ್ ವಿ ಮೂರ್ತಿರಾಯರ ಕುರಿತಾದ ಪುಸ್ತಕ)
I was surprised to hear that Sri Murthi Rao had accompanied Tabla in Sanadi Appanna. Bharavi's effort is commendable. Ashokvardhanji, thanks for bringing this information.
ReplyDeleteNarayan Yaji
ಇಂತಹ ಹಿರಿಯ, ಮೇರು ಸದೃಶ ಪ್ರತಿಭೆಯ ಬಗ್ಗೆ ನಮಗೆ ಈವರೆಗೂ ಗೊತ್ತಿಲ್ಲದೇ ಹೋಗಿದ್ದಕ್ಕೆ ಯಾವ ರೀತಿ ಪ್ರತಿಕ್ರಿಯಿಸಬೇಕೋ ತಿಳಿಯುತ್ತಿಲ್ಲ!
ReplyDeleteಕಲಾವಿದ ತಾನೇ ತನ್ನ ಮುಖವಾಣಿಯಾಗಿ ಮುಖಸ್ತುತಿ ಮಾಡಿಕೊಳ್ಳುವ ಈ ಕಾಲದಲ್ಲಿ ಇಂತಹ ಕಲಾವಿದರೂ ಇದ್ದಾರೆ ಎನ್ನುವುದೇ ಕಲಾಕ್ಷೇತ್ರದ ಪುಣ್ಯಾವಶೇಷ.ಪರಿಚಯಿಸಿ ನಮ್ಮಂತವರಿಗೆ ಉಪಕರಿಸಿದ್ದೀರಿ.ಧನ್ಯವಾದಗಳು.
ReplyDeleteನಾವು ಈ ವರೆಗೆ ಅರಿಯದಿದ್ದ ನಮ್ಮೂರಿನ ಮಹಾನ್ ಕಲಾವಿದ, ಸಂಗೀತಗಾರರನ್ನು ಪರಿಚಯಿಸಿದ ಲೇಖಕರಿಗೆ ಅಭಿನಂದನೆ ಹಾಗೂ ಧನ್ಯವಾದ. ಅರಿತು ತುಂಬಾ ಸಂತೋಷವಾಯ್ತು.
ReplyDeleteಇವರ ಕುರಿತು ಗೊತ್ತೇ ಇರಲಿಲ್ಲ.ನಿಜಕ್ಕೂ ದೊಡ್ಡ ಕಲಾವಿದರು.ಪರಿಚಯಿಸಿದ್ದಕ್ಕೆ ಧನ್ಯವಾದಗಳು.
ReplyDeleteಮಹಾನ್ ಕಲಾವಿದರಿಗೆ ನಮೋ ನಮಃ. ಪರಿಚಯಿಸಿದ ಲೇಖಕರಿಗೆ ಮತ್ತು ನಿಮಗೆ ಧನ್ಯವಾದಗಳು.
ReplyDeleteExcellent narration. What a talent. Keep going bharavi. U r blessed. Thanks for information.
ReplyDeleteಉತ್ತಮ ಲೇಖನ. ನಾವೆಲ್ಲ ಕೇಳಿ ಮೆಚ್ಚದ ಅಜ್ಞಾತ ತಬಲಾ ಕಲಾವಿದರ ಸಾಧನೆಯ ಪರಿಚಯ ಸಾರ್ಥಕವಾಗಿದೆ
ReplyDeleteಇಂಥ ಸಿದ್ಧ ಪ್ರಸಿದ್ಧರ ಒಡನಾಡಿಯಾಗಿ ಹಲವು ಅಚ್ಚಳಿಯದ ಕಲಾಕೃತಿಗಳಿಗೆ ತಮ್ಮ ಪ್ರತಿಭೆಯ ಕೊಡುಗೆಯನ್ನಿತ್ತ ನಮ್ಮದೇ ಜಿಲ್ಲೆಯ ಈ ಅಪ್ರತಿಮ ಕಲಾವಿದರು ಹೇಗೆ ಎಲೆಮರೆಯ ಕಾಯಾಗಿಯೇ ಉಳಿದರು ಎಂಬುದೇ ಅಚ್ಚರಿಯ ವಿಷಯ. ಅವರನ್ನು ಪರಿಚಯಿಸಿದ ಭಾರವಿ ನಿಜವಾಗಿಯೂ ಸ್ತುತ್ಯಾರ್ಹರು
ReplyDelete