“ಬಾರೇ ಬಾರೇ ಚಂದದ ಚೆಲುವಿನ ತಾರೇ! ಬಾರೇ ಬಾರೇ....” ಕೊಳದ ನೀರಿನಲ್ಲಿ ಎತ್ತರಿಸಿದ ಕಣ್ಣನ್ನಷ್ಟೇ ಬಿಟ್ಟು ಹಾಡುತ್ತಿದ್ದನೊಬ್ಬ! ಅಂಚಿನ ಗೊಸರಿನ ಮೇಲೆ ಒಂಬತ್ತು ಜೋಡಿ ಬೆರಳುಗಳ ಮುದ್ರೆ ಬೀಳುವಷ್ಟೇ ಹಗುರಕ್ಕೆ ಕುಳಿತು ಧ್ವನಿ ಸೇರಿಸಿದ್ದನಿನ್ನೊಬ್ಬ. ತುಸು ಆಚೆಗೆ ಹುಲ್ಲಿನ ಎಡೆಯಲ್ಲಿ ಮೈಮರೆಸಿಯೂ ಮರೆತಂತೆ ಹಾಡುವವ ಮಗುದೊಬ್ಬ. ಪೊದರ ತಳದ ಕೊಳೆತ ಎಲೆಗಂಟಿದ ಕಸಕ್ಕೂ ಕಿರಿದಾದ ಮೂರ್ತಿಯಾದರೇನು ಗಾನಗೋಷ್ಠಿಗೆ ಕುಂದಿಲ್ಲದ ಎತ್ತರದ ಧ್ವನಿಯವನೀತ, ಕೆರೆಗೆ ವಾಲಿದ ಹಸಿರಗೆಲ್ಲಿನಲ್ಲಿ ಜೋಕಾಲಿಯಾಡುತ್ತ ಸಮೂಹಗಾನಕ್ಕೆ ಕಂಠಕೊಟ್ಟವನಾತ. ಹಸಿರಂಗಿ ಹಳದಿ ಚಡ್ಡಿಯವನಂತೂ ಗಾನಲಹರಿಯಲ್ಲಿ ಆ ಎತ್ತರದಿಂದ ಇನ್ನೊಂದೇ ಬಿತ್ತರಕ್ಕೆ ತೇಲಾಡುತ್ತಿದ್ದ. ಒಡಕು ಬಂಡೆಯ ಇರುಕಿನಲ್ಲಿ, ಭಾರೀ ಮರದ ಬೊಡ್ಡೆಗಂಟಿ, ಸುಯ್ಗುಟ್ಟುವ ವಾಟೆಗೆ ನೇತುಬಿದ್ದಂತೆಲ್ಲ ಕಂಡ, ಕಾಣದ ತಾಣಗಳಿಂದ, ಸರ್ವವ್ಯಾಪೀ ಸ್ಥಿತಿಯಲ್ಲಿ, ಘೋರಾಂಧಕಾರವೇ ಮಧುರಭಾವ ತಳೆದಂತೆ, ಹನಿ ಕುಟ್ಟುವ ತಾಳಕ್ಕೆ, ಬಿಬ್ಬಿರಿಗಳು ಹಿಡಿದ ಶ್ರುತಿಗೆ ಪಲ್ಲವಿಸುತ್ತಿದ್ದ ರಾಗ ಒಂದೇ “ಬಾರೇ ಬಾರೇ ಬಾರೇ ಬಾರೇ......”
ಈ ಕಪ್ಪೆ-ಗಾನಗೋಷ್ಠಿಗೆ ಮತ್ತೆ ಸಾಕ್ಷಿಯಾಗುವ ಭಾಗ್ಯ ನನಗೆ ಒದಗಿದ್ದು ಮೊನ್ನೆ (೯,೧೦ಮತ್ತು ೧೧-೬-೨೦೧೭) ಬಿಸಿಲೆಯ ಅಶೋಕವನದಲ್ಲಿ, ಡಾ| ಕೆವಿ ಗುರುರಾಜರ (ಕೆವಿಜಿ) ನೇತೃತ್ವದಲ್ಲಿ, ಸತತ ಆರನೇ ವರ್ಷದಲ್ಲಿ ನಡೆಯುತ್ತಿರುವ `ಕಪ್ಪೆ ಗುರುತಿಸಿ ಶಿಬಿರ’ದಲ್ಲಿ. ಶಿಬಿರದ ಸಂಘಟನಾ ನೆಪಕ್ಕೆ ತುಮಕೂರಿನ ಗುಬ್ಬಿಲ್ಯಾಬ್ಸ್ ಮತ್ತು ಮಂಗಳೂರಿನ ಕುದುರೆಮುಖ ವೈಲ್ಡ್ ಲೈಫ್ ಫೌಂಡೇಶನ್ ನಿಲ್ಲುತ್ತವೆ. ಶಿಬಿರಾರ್ಥಿಗಳನ್ನು ಒಟ್ಟು ಮಾಡುವ ಹೊಣೆ ಹೊತ್ತ ವಿನೀತ್ ಕುಮಾರ್, ಪ್ರತಿ ಸಲದಂತೆ, “ಇಪ್ಪತ್ತು –
ಇಪ್ಪತ್ತೈದು ಮಂದಿ ಸಾಕು” ಎಂದೇ ಹೇಳುತ್ತಿದ್ದರು. ಹಳಬರು ಹಿಂದುಳಿದು, ಹೊಸಬರಿಗೆ ಅವಕಾಶವಾಗಬೇಕು ಎಂದು ಅವರು ಬಯಸಿದರೂ ಒತ್ತಾಯದಲ್ಲೇ ಬಂದ ಕೆಲವು ಹಳೆ ಮುಖಗಳೂ ಸೇರಿ, ನನ್ನನ್ನುಳಿದು, ಸುಮಾರು ಮೂವತ್ತೈದು ಮಂದಿಯ ಯುವಪಡೆಯೇ ಅಲ್ಲಿತ್ತು. ಬೆಂಗಳೂರು ಮಂಗಳೂರುಗಳ ದೂರದಿಂದ ಸ್ವಂತ ವ್ಯವಸ್ಥೆಗಳಲ್ಲಿ ಬಂದು, ಕಷ್ಟಗಳನ್ನೂ ಸೀಮಿತ ಸೌಕರ್ಯಗಳನ್ನೂ ನಗುನಗುತ್ತಲೇ ಅನುಭವಿಸಿ, ಎಲ್ಲ ಖರ್ಚುಗಳನ್ನು ಸಂತೋಷದಲ್ಲೇ ಕೊಟ್ಟಿದ್ದರು ಶಿಬಿರಾರ್ಥಿಗಳು. ಕಲಿಕೆ, ವೃತ್ತಿ, ಅನ್ಯಾಸಕ್ತಿಗಳು ಹಲವಿದ್ದರೂ ಮೂರು ದಿನದ ಶಿಬಿರದ ಕೊನೆಯಲ್ಲಿ ಘನ ಕಪ್ಪೆರಾಯಭಾರಿಗಳೂ ಆಗಿ ಮರಳಿದ್ದು ನಿಜದ ಅದ್ಭುತ.
ಸುಮಾರು ಮುನ್ನೂರು ಮಿಲಿಯ (ಮೂವತ್ತು ಕೋಟಿ) ವರ್ಷಗಳ ಹಿಂದೆ ಪ್ರಥಮ ಬಾರಿಗೆ ಜೀವ ನೀರಿನಿಂದ ನೆಲಕ್ಕೆ ಜಿಗಿಯಿತು. ಇದು ಮಾನವ ಚಂದ್ರನ ಮೇಲೆ ಹೆಜ್ಜೆಯೂರಿದ್ದಕ್ಕೂ ಮಿಗಿಲು! ಅದನ್ನು ಸಾಧಿಸಿದ ಕುಲ (ಉಭಯಚರಿ) ಕಪ್ಪೆಗಳದು. ಅಂದಿನಿಂದ ಇಂದಿನವರೆಗೂ ಉಳಿದು ಬಂದು, ಬೆರಗು ಹುಟ್ಟಿಸುವಂತೆ ವರ್ಷಾವಧಿ ಮತ್ತದೇ ಮಹಾನ್ ಜಗನ್ನಾಟಕವನ್ನು ಆಡುತ್ತವೆ ಈ ಕಪ್ಪೆಗಳು. ಆದರೆ ಜೀವವಿಕಾಸದ ಸರದಿಯಲ್ಲಿ ಕೇವಲ ಎರಡು ಮಿಲಿಯ (ಎರಡು ಲಕ್ಷ) ವರ್ಷಗಳ ಹಿಂದಷ್ಟೇ ಬಂದ
ನಾವು (ಮಾನವರು), ಅದನ್ನು ಇನ್ನೂ ಸಮರ್ಪಕವಾಗಿ ಅರ್ಥ ಮಾಡಿಕೊಳ್ಳಲು ಸೋತಿದ್ದೇವೆ. ಅದನ್ನು ಸ್ವಲ್ಪವಾದರೂ ತುಂಬಿಕೊಡಲು ತಿಂಗಳ ಹಿಂದೆ ಕಬಿನಿಯಲ್ಲಿ ವನ್ಯ ಸಂರಕ್ಷಣೆಯ ಉನ್ನತ ಚಿಂತನಾ ಕಮ್ಮಟ ನಡೆದಷ್ಟೇ ಗಂಭೀರವಾಗಿ, ಬಿಸಿಲೆಯ ಪ್ರಾಥಮಿಕ ಪಾಠಗಳ ಶಿಬಿರ ನಡೆಯಿತು.
ಮೊದಲೆರಡು ಶಿಬಿರಗಳನ್ನು (ಭಾಗ ೧: ಮಂಡೂಕೋಪಖ್ಯಾನ, ಭಾಗ ೨: ಕಪ್ಪೆ ಕಮ್ಮಟ ಮತ್ತು ಅದ್ವಿತೀಯ ಕಪ್ಪೆ ಶಿಬಿರ) ವ್ಯವಸ್ಥಾಪಕನ ನೆಲೆಯಲ್ಲಿ ಅನುಭವಿಸಿದವ ನಾನು. ನಾಲ್ಕನೇ ವರ್ಷದ ಶಿಬಿರಕ್ಕೆ (ಬಿಸಿಲೆಯ ಕೊನೆಯ ದಿನಗಳು) ಕೇವಲ ಒಂದು ರಾತ್ರಿಯ ಭೇಟಿ ಕೊಡುವುದಷ್ಟೇ ನನಗೆ ಸಾಧ್ಯವಾಗಿತ್ತು. ಮೂರನೇ ಮತ್ತು ಐದನೇ ವರ್ಷಗಳ ಶಿಬಿರ ಅನ್ಯ ಕಾರಣಗಳಿಂದ ನನಗೆ ಬಿಟ್ಟೂ ಹೋಗಿತ್ತು. ಈ ಸಲ “ಏನೇ ಬರಲಿ, ಕಪ್ಪೆ ಇರಲಿ” ಎಂದು ನಿರ್ಧರಿಸಿದ್ದೆ. ಅನ್ಯ ಕಾರಣಗಳಿಗಾಗಿ ಶುಕ್ರವಾರ ಮುಂಜಾನೆ ನನ್ನ ಕಾರನ್ನೇ ಹೊರಡಿಸುವವನೂ ಇದ್ದೆ.
ತಿಂಗಳ ಹಿಂದೆ ಸೈಕಲ್ ಮಿತ್ರ ಅನಿಲ್ ಶೇಟ್ ಮತ್ತು ಪ್ರವೀಣ್ “ಹೊಸ ಕಯಾಕ್ ಕೊಂಡಿದ್ದೇವೆ, ಸವಾರಿಗೆ ಜತೆಗೊಡಿ” ಎಂದು ಆಹ್ವಾನಿಸಿದ್ದರು. ಅಲ್ಲಿ ಪ್ರವೀಣರ ದೋಣಿ ಸಂಗಾತಿಯಾಗಿ ಆಕಸ್ಮಿಕ ಪರಿಚಯಕ್ಕೆ ಸಿಕ್ಕವರು ಪಶುವೈದ್ಯ ಯಶಸ್ವಿ ನಾರಾವಿ. ಅಲ್ಲಿ ಹೆಚ್ಚು ಮಾತಾಡಲಾಗಿರಲಿಲ್ಲ. ಆದರೆ ಈ ತರುಣ ವೈದ್ಯ ಮತ್ತು ಅವರ ಶಿರಸಿ ಮೂಲದ ಗೆಳೆಯ ಉದಯ ಹೆಗಡೆ (ಬೆಂಗಳೂರಿನಲ್ಲಿ ಟೆಕ್ಕಿ) ಜೊತೆಗೂಡಿಕೊಂಡು ಹಲವು ವನ್ಯ (ಮುಖ್ಯವಾಗಿ ಹಾವುಗಳು) ಛಾಯಾಗ್ರಹಣ ಮತ್ತು ಚಾರಣ
ಸಾಹಸಗಳನ್ನು ಮಾಡುತ್ತಲೇ ಬಂದಿದ್ದರು. ಅದಕ್ಕೆ ಮಾಹಿತಿ ಸಂಗ್ರಹ ಕಾಲದಲ್ಲಿ ಅವರು ನನ್ನ ಪರಿಚಯ ಇಲ್ಲದೆಯೂ ಸಿಕ್ಕ ನನ್ನ ಜಾಲತಾಣವನ್ನು ಸಾಕಷ್ಟು ಜಾಲಾಡಿದ್ದರಂತೆ. ಈಗ ದೋಣಿ ನೆಪದಲ್ಲಿ ಸಿಕ್ಕ ಪರಿಚಯ ಬಲದಲ್ಲಿ ಮೊನ್ನೆ ಬುಧವಾರ ನನಗೆ ದೂರವಾಣಿಸಿದರು, “ನಿಮ್ಮ ಅಶೋಕವನದಲ್ಲಿ ಒಂದೆರಡು ದಿನ ಕಪ್ಪೆ ನೋಡಲು ಅನುಮತಿ ಕೊಡ್ತೀರಾ?” ನಾನವರಿಗೆ ಅನುಮತಿಗಿಂತಲೂ ಹೆಚ್ಚಿನ ಸೌಕರ್ಯ - ಕಪ್ಪೆ ಶಿಬಿರದ ಭಾಗಿಯಾಗುವ ಅವಕಾಶ, ತೆರೆದಿಟ್ಟೆ; ಕಚ್ಚಿಕೊಂಡರು. ಉದಯ ಹೆಗಡೆ ಬೆಂಗಳೂರಿನಿಂದ ನೇರ ಬಿಸಿಲೆಗೂ ಯಶಸ್ವಿ ನನಗೆ ಕಾರಿನ ಜತೆಗಾರನಾಗಿಯೂ ಸೇರಿಕೊಂಡರು.
ಶುಕ್ರವಾರ ಬೆಳಿಗ್ಗೆ, ಕಾಲದ ಮಳೆಯೇ ಮುನ್ಮಳೆಯೇ ಎಂಬ ಸಂಶಯದಲ್ಲೇ ನಾವು ಕಾರೇರಿ ಬಿಸಿಲೆಯತ್ತ ಹೊರಟೆವು. ಉಪ್ಪಿನಂಗಡಿಯಲ್ಲಿ ಉಪಾಹಾರ ಮುಗಿಸುತ್ತಿದ್ದಂತೆ ಮಂಗಳೂರಿನ ಶಿಬಿರಾರ್ಥಿಗಳನ್ನು ತುಂಬಿಕೊಂಡ ರೋಹಿತ್ ಕಾರು ಅದೇ (ಆದಿತ್ಯ) ಹೋಟೆಲಿಗೆ ಬಂದಿತ್ತು. ಇನ್ನಷ್ಟು ಭಾಗಿಗಳನ್ನು ತುಂಬಿಕೊಂಡ ಇನ್ನೊಂದೇ ಕಾರು ಪುತ್ತೂರಿನಿಂದ ಬರುವುದೂ ಇತ್ತು. ನಾವು ಗಳಿಸಿದ್ದ ಸಮಯವನ್ನು ಕಾಡು ನೋಡುವ ಸಂತೋಷಕ್ಕೆ ವಿನಿಯೋಗಿಸುವಂತೆ ಮುಂದೆ ಹೋದೆವು. ಕುಳ್ಕುಂದ – ಬಿಸಿಲೆ ದಾರಿಯ ವಿಸ್ತರಣೆ ಮತ್ತು ಕಾಂಕ್ರಿಟೀಕರಣ ಸಾಕಷ್ಟು ಪ್ರಗತಿ ಕಂಡಿತ್ತು. ಅಪಾಯಕಾರೀ ಕಣಿವೆಯ ಅಂಚುಗಳಿಗೇನೋ ಬಲವಾದ ತಡೆಬೇಲಿಗಳು ಬಂದಿದ್ದವು. ಆದರೆ ಇನ್ನೊಂದು ಮಗ್ಗುಲಿನ ದರೆಯನ್ನು ಕತ್ತರಿಸಿದ್ದ ಕ್ರಮದಲ್ಲಿ ಅಸಂಖ್ಯ ಮರ, ಬಂಡೆಗಳು ದಾರಿಗೆ ಎಂದೂ ಮಗಚುವ ಅಪಾಯ ಹೊಡೆದು ಕಾಣುತ್ತಿತ್ತು. “ನಾವು ಇಂದು ಪಾರಾದರೂ ಮರಳುವ ದಾರಿಯಲ್ಲಿ ಸಿಕ್ಕಿಬೀಳುವುದು ಖಾತ್ರಿ” ಎಂದುಕೊಳ್ಳುತ್ತಲೇ ಸಾಗಿದೆವು. ಅಲ್ಲಿ ಇಲ್ಲಿ ನಿಂತು, ನೋಡುತ್ತ, ಇದೇ ದಾರಿಯುದ್ದಕ್ಕೆ ಕಳ್ಳಬೇಟೆಯವರೊಡನೆ ನಿಶಾಚಾರಣ ನಡೆಸಿದ್ದರಿಂದ ತೊಡಗಿ, ಈಚೆಗೆ ರಜೆಯೊಂದರ ಮಝಾ ತೆಗೆಯಲೆಂದು ಬಂದಾಗ ಮೂರು ನಾಲ್ಕು ಕಿಮೀ ನಡೆದದ್ದರವರೆಗೆ ನೆನಪಿಸಿಕೊಳ್ಳುತ್ತ ಹೋದೆವು.
ಕೊನೆಯ ಸುಮಾರು ಮೂರು ಕಿಮೀ ಉದ್ದಕ್ಕೆ ಅಗಲೀಕರಣ, ಅಂಚಿನ ಕಚ್ಚಾಮೋರಿ, ಕಿರುಸೇತುವೆಗಳು ಮತ್ತು ಮಾರ್ಗದ ಪ್ರಾಥಮಿಕ ನೆಲಗಟ್ಟೆಲ್ಲ ಹಾಕಿದ್ದಾಗಿದೆ; ಕಾಂಕ್ರಿಟೀಕರಣ ಮಾತ್ರ ಬಾಕಿ. ನಮ್ಮ `ಅಶೋಕವನ’ದ ಶಿಬಿರತಾಣದ ಒಳದಾರಿ ಮುಚ್ಚಿಹೋದದ್ದು ಕಾಣಿಸಿತು – “ಒಳ್ಳೇದಾಯ್ತು” ಅಂದುಕೊಂಡೆ. ಕುಖ್ಯಾತ ಬೀಟೀಸ್ಪಾಟಿನ ನವೀಕರಣದ ಅಲೆ ಅದನ್ನು ಇನ್ನಷ್ಟು ನಗೆಪಾಟಲು ಮಾಡುವಂತಿತ್ತು. ಅದರ ನಡೆಮಡಿಯಲ್ಲಿ ಚೆನ್ನಾಗಿಯೇ ಇದ್ದ ಕಗ್ಗಲ್ಲ ಹಾಸನ್ನು ಕಿತ್ತು, ಬಹುವರ್ಣದ ಇಂಟರ್ಲಾಕು ಹಾಕಿದ್ದಾರೆ! ವೃತ್ತಾಕಾರದ ಮಂಟಪದ ಮಾಡಿಗೆ ಹೊಸ ಹೊದಿಕೆ ಹಾಕಿದ್ದಾರೆ. ಇನ್ನೂ ಸಾಗಣೆ ಕಾಣದ ಹಳೆ ಕಲ್ಲ ಚಪ್ಪಡಿಗಳು, `ಪ್ರಕೃತಿಪ್ರಿಯರ’ ದಾಂಧಲೆಗೆ ಕೈಕಾಲು ಮುರಿದುಕೊಂಡ ಕಾಂಕ್ರೀಟ್ ಆಸನಗಳು ಮತ್ತು ಮುಸುಕೆಳೆದು ಕುಳಿತ ಒಂದು ಭಾರೀ ಯಂತ್ರ (ವಿದ್ಯುಜ್ಜನಕ?) ಇನ್ನೂ ಅಭಿವೃದ್ಧಿ ಕಲಾಪ ಬಾಕಿಯಿದೆ ಎಂದೇ ಸೂಚಿಸಿತು. ಒಂಬತ್ತು ಗಂಟೆಯ ಸುಮಾರಿಗೆ ನಾವು ಬಿಸಿಲೆ ಗೇಟ್ ತಲಪಿದ್ದೆವು. ಅಲ್ಲಿನ ನಮ್ಮ ಖಾಯಂ ಉದರಪೋಷಕರಾದ ದೇವೇಗೌಡ ಕಮಲಮ್ಮ ದಂಪತಿ (ತುಳಸಿ ಹೋಟೆಲ್), “ಇನ್ನು ಯಾರೂ ಬಂದಿಲ್ಲ” ಎಂದೇ ತಿಳಿಸಿದರು. ಹಾಗಾಗಿ ನಾನು ಮೊದಲೇ ಯೋಜಿಸಿದ್ದಂತೆ, ಅದೇ ದಾರಿಯಲ್ಲಿ ಮತ್ತೂ ಹದಿನೈದಿಪ್ಪತ್ತು ಕಿಮೀ ಮುಂದುವರಿದು, ಹೆತ್ತೂರಿನ ನಾಡ ಕಚೇರಿಯಲ್ಲಿ ಅಶೋಕವನದ ಭೂಕಂದಾಯ ಕಟ್ಟುವ ಕರ್ತವ್ಯವನ್ನೂ ಪೂರೈಸಿಬಿಟ್ಟೆ.
ಗುಬ್ಬಿ ಲ್ಯಾಬ್ಸಿನ ಸುಧೀರ ಮತ್ತೊಂದೆರಡು ಗೆಳೆಯರು ಕಾರಣಾಂತರಗಳಿಂದ ಹಿಂದಿನ ದಿನವೇ ಸ್ವಂತ ವ್ಯಾನಿನಲ್ಲಿ ಬಂದು ಬಿಸಿಲೆಯಲ್ಲಿ ಝಂಡಾ ಊರಿದ್ದರು. ಶಿಬಿರದ ಪ್ರಧಾನ ಜೀವಾಳ ಕೆವಿ ಗುರುರಾಜ್, ತಮ್ಮ ಕಾರಿನಲ್ಲಿ ಬೆಂಗಳೂರಿನ ಒಂದಷ್ಟು ಶಿಬಿರಾರ್ಥಿಗಳನ್ನು ಸೇರಿಸಿಕೊಂಡೇ ಬಂದಿದ್ದರು. ಬೆಂಗಳೂರಿನಿಂದ ಗೆಳೆಯ ಸಂದೀಪ್ ಮತ್ತು (ಅವರ ಹೆಂಡತಿ) ಮಹಾಲಕ್ಷ್ಮಿ ಹಿಂದಿನ ಅಪರಾತ್ರಿ ಸಕಲೇಶಪುರ ತಲಪಿ, ಬಸ್ ನಿಲ್ದಾಣದಲ್ಲೇ ತೂಕಡಿಸಿ, ಬೆಳಗ್ಗಿನ ಮೊದಲ ಬಸ್ ಹಿಡಿದು ಬಿಸಿಲೆಯಲ್ಲಿ ಹಾಜರಾಗಿದ್ದರು. ಸುಬ್ರಹ್ಮಣ್ಯ, ಸೋಮವಾರಪೇಟೆಗಳಿಂದ ದ್ವಿಚಕ್ರಿಗಳಾಗಿ ಬಂದವರೂ ಸೇರಿದಂತೆ, ಸುಮಾರು ಮೂವತ್ತೈದು ಮಂದಿಯ ಶಿಬಿರ, ಯೋಜನೆಯಂತೆ ಮಧ್ಯಾಹ್ನ ಊಟ ಮುಗಿಸಿದ್ದೇ ಯಾವ ಔಪಚಾರಿಕತೆಗಳು ಇಲ್ಲದೇ ಕಲಾಪಕ್ಕಿಳಿದಿತ್ತು.
ಕಪ್ಪೆ ಶಿಬಿರದ ಬಹುಪಾಲು ಚಟುವಟಿಕೆಗಳು ಬಿಸಿಲೆ ಹಳ್ಳಿಯ ಸಾರ್ವಜನಿಕ ಸ್ಥಳಗಳಲ್ಲೇ ನಡೆಯುತ್ತವೆ. ಶುದ್ಧ ವನ್ಯ ಕಲಾಪ ಮಾತ್ರ ನಮ್ಮ ಖಾಸಗಿ ಭೂಮಿ – ಅಶೋಕವನದಲ್ಲಿ ನಡೆಯುತ್ತದೆ. ಆದರೂ ನಾವು ಮೊದಲ ವರ್ಷದಿಂದ ಇಂದಿನವರೆಗೂ ಶಿಬಿರದ ಕುರಿತು ಅರಣ್ಯ ಇಲಾಖೆಗೆ ತಿಳುವಳಿಕೆ ಮತ್ತು ಮುಕ್ತ ಆಹ್ವಾನ ಕೊಟ್ಟೇ ನಡೆಸುತ್ತಿದ್ದೇವೆ. ಆದರೆ ಇಲಾಖೆಯ ಅಜ್ಞಾನ ಬಹಳ ದೊಡ್ಡದು. ಕೆಲವು ಅಧಿಕಾರಿಗಳಿಗೆ `ಕಪ್ಪೆಗಳ ಅಧ್ಯಯನ’ ದೊಡ್ಡ ನಗೆಯ ಸಂಗತಿಯಾದರೆ, ಇನ್ನೂ ಕೆಲವರಿಗೆ ಏನೋ ಕಳ್ಳ ವ್ಯವಾಹಾರದ ಗುಮಾನಿ!
ಬ್ರಿಟಿಷ್ ಕಾಲದಲ್ಲಿ ಅರಣ್ಯವೆಂದರೆ ನೇರ ಮನುಷ್ಯ ಉಪಯೋಗಕ್ಕೇ (ಉಪಭೋಗ!) ಇರುವ ಮರವೊಂದೇ ಸತ್ಯ. ಅಲ್ಲಿ ಅಲ್ಪ ಸ್ವಲ್ಪ ಸೊಪ್ಪು, ಹೂ, ಕಾಯಿ, ಹಣ್ಣು, ತೊಗಟೆ, ಬೇರು, ಗೆಡ್ಡೆ ಎಂದು ಕಂಡರೂ ಪ್ರಧಾನವಾಗಿ ಅವರು ಲೆಕ್ಕವಿಟ್ಟದ್ದು ಮತ್ತು ತೆಗೆದಾಗ ಮರುನಾಟಿ ಮಾಡಿ ಬೆಳೆಸಿದ್ದೂ ಘನ ಮರಗಳನ್ನೇ! ದೀಪದ ಕಂಬ, ರೈಲ್ವೇ ಹಳಿ, ಗೃಹೋಪಯೋಗೀ ಮೋಪು,
ಸೌದೆಗಳ ಮಿತಿಯನ್ನು ಮೀರಿ ಅರಣ್ಯ ಇಲಾಖೆ ವನ್ಯವನ್ನು ಕಂಡದ್ದೇ ಇಲ್ಲ. ಹಾಗಾಗಿ ಸಂಶೋಧಕರು, ಉನ್ನತ ಚಿಂತಕರು ಸೇರಿ ಸ್ವತಂತ್ರ ಭಾರತದಲ್ಲಿ `ಅರಣ್ಯ ಇಲಾಖೆ’ ಅಲ್ಲ, ವನ್ಯ ಇಲಾಖೆ ಬೇಕು ಎಂದೇ ಸಾಧಿಸಿದರು. ಅಂಥವು ಕೇವಲ ಮರಗಳ ಮೊತ್ತವಲ್ಲ, ಜೀವವೈವಿಧ್ಯದ ಆಡುಂಬೊಲವೆಂದೇ ಗುರುತಿಸಿ, ವನಧಾಮಗಳೆಂದು ಹೆಸರಿಸಿ ಪೂರ್ಣ ರಕ್ಷಣೆ ಘೋಷಿಸಿದರು. ಆದರೂ ಮೊನ್ನೆ ಕಬಿನಿಯಲ್ಲಿ ಉಲ್ಲಾಸ ಕಾರಂತರು ಉದ್ಗರಿಸಿದಂತೆ “ಆರು ದಶಕಗಳಿಗೂ ಮಿಕ್ಕು ಸ್ವಾತಂತ್ರ್ಯ ನಮ್ಮಲ್ಲಿದ್ದರೂ ನಮ್ಮ ಇಲಾಖೆಗೆ ಸ್ಪಷ್ಟ ವನ್ಯ ಪುನರುಜ್ಜೀವನದ ಕಲಾಪಪಟ್ಟಿ ನಿರೂಪಿಸುವುದು ಆಗಿಲ್ಲ”.
ಅಂತಾರಾಷ್ಟ್ರೀಯ ಮಟ್ಟದ ಕಪ್ಪೆ ಸಂಶೋಧಕನೆಂದೆನ್ನಿಸಿಕೊಂಡ ಗುರುರಾಜರು, ಉಲ್ಲಾಸರ ಮಾತಿನ ಭಾವವನ್ನು ಇನ್ನೊಂದೇ ರೀತಿಯಲ್ಲಿ (ಸಖೇದ) ಹೇಳುತ್ತಾರೆ, “ಭಾರತೀಯ ಜೀವವೈವಿಧ್ಯದಲ್ಲಿ ಉಭಯಚರಿಗಳ ಮೂಲಾಂಶವನ್ನೇ ನಾವಿನ್ನೂ ನಿಗದಿಪಡಿಸುವುದಾಗಿಲ್ಲ. ಅಖಿಲ ಭಾರತ ಮಟ್ಟದಲ್ಲಿ ನೋಡಿದರೆ ಗಂಭೀರವಾಗಿ ಕಪ್ಪೆಯ ಬೆನ್ನಿಗೆ ಬಿದ್ದವರು ಇಂದಿಗೂ ಇಪ್ಪತ್ತು – ಮೂವತ್ತೇ ಮಂದಿ. ಇವರಾದರೂ ಕಪ್ಪೆಗಳ ಆಂಗಿಕ ರಚನೆಗಳ ಔಚಿತ್ಯ, ಜೀವನ ಚಕ್ರದ ವಿವರಗಳು, ವರ್ತನಾ ವಿಜ್ಞಾನವೇ ಮುಂತಾದವನ್ನು ಅಧ್ಯಯನ ಮಾಡುವ ಉನ್ನತ ಆಸೆಗಳನ್ನು ಬದಿಗೊತ್ತಿ, ಕೇವಲ ತೋರನೋಟಕ್ಕೆ
ಸಿಗುವ ಬಗೆತರದ ಕಪ್ಪೆಗಳ ಆಂಗಿಕ ವಿವರಗಳನ್ನು ವೈಜ್ಞಾನಿಕ ಭಾಷೆಯಲ್ಲಿ ಸ್ಪಷ್ಟಪಡಿಸಿಕೊಳ್ಳುತ್ತ, ವೈವಿಧ್ಯ ಗಣನೆ ಮಾಡುವವರಷ್ಟೇ ಆಗಿದ್ದಾರೆ.” ಹಾಗಾಗಿ ಕೆವಿಜಿ ಏನು, ಎಲ್ಲ ಜೀವವಿಜ್ಞಾನದ ಪರಿಣತರೂ ಕಪ್ಪೆಗಳ ಕುರಿತು ಬಹುತೇಕ ಸಂದೇಹಗಳಿಗೆ ಪ್ರಾಂಜಲವಾಗಿ “ಗೊತ್ತಿಲ್ಲ” ಎಂದೇ ಉತ್ತರಿಸುತ್ತಾರೆ. “ಕಪ್ಪೆ ಗುರುತಿಸುವಲ್ಲಿ ನಿಮ್ಮ ವಿದ್ಯಾರ್ಹತೆ ಬಗ್ಗೆ ಸಂದೇಹವಿಟ್ಟುಕೊಳ್ಳಬೇಡಿ. ಈ ಶಿಬಿರಕ್ಕೆ ಮತ್ತೆ ಮತ್ತೆ ಬರುವವರು ಹೆಚ್ಚಿನದೇನೋ ನಿರೀಕ್ಷೆಯಲ್ಲಿ ಬರುವುದೂ ತಪ್ಪು. ಇಲ್ಲಿ ಪ್ರಾಥಮಿಕ ಪಾಠಗಳನ್ನು ಕಲಿತು ನೀವೇ ವಿಜ್ಞಾನಿಗಳಾಗಿ” ಎಂದೇ ಕೆವಿಜಿ ಮತ್ತೆ ಮತ್ತೆ ಹೇಳುತ್ತಾರೆ. ಇಂಥ ಪ್ರಯತ್ನಗಳ ಫಲವಾಗಿ, ಕಳೆದ ಶತಮಾನದ ಕೊನೆಯಲ್ಲಿ ಎರಡಂಕಿ ಮೀರದಷ್ಟಿದ್ದ ಭಾರತೀಯ ಕಪ್ಪೆಗಳ ವೈವಿಧ್ಯದ ಸಂಖ್ಯೆ ಇಂದು ಮೂರು ಶತಕವನ್ನೇ ಮೀರಿ ಭರದಿಂದ ಬೆಳೆದಿದೆ.
ತೆಳು ನೀರಿನಾಳದಲ್ಲಿ ಹುಗಿದೋ ತೆರೆದ ಕಡ್ಡಿಗಂಟಿಸಿ ಮೇಲೆ ಕೆಸರು ಮೆತ್ತಿಯೋ ಒಡಕು ವಾಟೆಯ ಸಂದಿನ ತೊಟ್ಟು ನೀರಿಗೆ ನುಗ್ಗಿಯೋ ತಗ್ಗುಗಳ ತತ್ಕಾಲೀನ ನೀರಿಗೆ ತುರ್ತು ವಿಕಸನವನ್ನೇ ಹೊಂದಿಸಿಕೊಂಡೋ ಗೊದಮೊಟ್ಟೆಯ ಸ್ಥಿತಿಯನ್ನೇ ಮೊಟ್ಟೆಯೊಳಗೇ ಪೂರೈಸಿ ಮರಿಗಳನ್ನೇ ಕಾಣಿಸುವವರೆಗೂ ಮೊಟ್ಟೆ ರಕ್ಷಣಾ ಕಲಾಪಗಳನ್ನು ರೂಢಿಸಿಕೊಂಡ ನೂರೆಂಟು ಕಪ್ಪೆಗಳಿವೆ. ನೀರಿನಾಳದಿಂದಲೋ ಭೂಗರ್ಭದಿಂದಲೋ ತೊಡಗಿ ಮಹಾವೃಕ್ಷದ ತುದಿಯವರೆಗೂ ಕಪ್ಪೆ ಎಂಬ ವಾಮನ
ತ್ರಿವಿಕ್ರಮನಂತೇ ವ್ಯಾಪಿಸಿ ತೋರುತ್ತದೆ ತನ್ನ ಮಹಿಮೆ. ಒಂದೆರಡು ಸೆಂಟಿಮೀಟರ್ ಗಾತ್ರದಿಂದ (ಮರಿಯಲ್ಲ, ಪ್ರೌಢ) ತೊಡಗಿ ಗೇಣುದ್ದದ ಅಳತೆಯವೂ ಕಪ್ಪೆ ಕುಲದಲ್ಲಿವೆ. ಹವಾಮಾನ, ಭೂರಚನೆ ಮತ್ತು ನೀರು ಹಸಿರುಗಳನ್ನವಲಂಬಿಸಿ ಒಂದು ವಲಯದಿಂದ ಇನ್ನೊಂದಕ್ಕೆ ಸಂಪೂರ್ಣ ವಿಭಿನ್ನ ಅವತಾರಗಳನ್ನು ತಾಳಿವೆ ಕಪ್ಪೆಗಳು. ಹಾಗೆಂದು ವಿಸ್ತೃತ ಭೂಮಂಡಲವನ್ನೇ ನೋಡಿದರೆ ಖಂಡಾಂತರ ಚಲನೆಗೂ ಬಲವಾದ ಪುರಾವೆ ಕೊಡುವಷ್ಟು ಕೆಲವು ಕಪ್ಪೆಜಾತಿ ವಿಶ್ವವ್ಯಾಪಿಯೂ ಆಗಿವೆ. ಆದರೆ ಬಹುತೇಕ ಕಪ್ಪೆಗಳು ಜೀವಮಾನವೇನು, ಅಸಂಖ್ಯ ತಲೆಮಾರುಗಳನ್ನೂ ಸೂಕ್ತ ವಲಯ ಐದು ಹತ್ತು ಮೀಟರ್ ವ್ಯಾಸಗಳಿಗೆ ಕುಗ್ಗಿದಾಗಲೂ ಹೊಂದಿಸಿಕೊಂಡು ಉಳಿದ ಸಾಹಸವನ್ನು ಕಾಣುತ್ತೇವೆ. ಹಾಗೇ ಇಂದು, ಮನುಷ್ಯ ಉಪದ್ವ್ಯಾಪದಲ್ಲಿ ಪೂರ್ಣ ನಶಿಸಿಯೇ ಹೋಗಿರಬಹುದಾದ ಕಪ್ಪೆ ವೈವಿಧ್ಯವೂ ಇದ್ದಿರಲೇಬೇಕು ಎಂದು ಅಂದಾಜಿಸುವುದಷ್ಟೇ ನಮಗುಳಿದಿದೆ!
ಮೊದಲ ಮಧ್ಯಾಹ್ನ ಊಟವಾದ ಕೂಡಲೇ ಎಲ್ಲರೂ ಸಭಾಭವನದಲ್ಲಿ ಕುಳಿತು ಸಣ್ಣದಾಗಿ ಪರಸ್ಪರ ಪರಿಚಯ ಮಾಡಿಕೊಂಡೆವು. ಬೆನ್ನಿಗೆ ಕೆವಿಜಿ ಹೊಸಬರನ್ನು ಲೆಕ್ಕಕ್ಕಿಟ್ಟುಕೊಂಡು, ಸಣ್ಣ ಪೀಠಿಕಾ ಮಾತುಗಳನ್ನಾಡಿದರು. ಮತ್ತೆ ಸಣ್ಣ ಕ್ಷೇತ್ರಕಾರ್ಯ. ಮುಂದೆ ಸಂಜೆಯ ಚಾ. ಅನಂತರ ರಾತ್ರಿಯ ದೊಡ್ಡ ಕ್ಷೇತ್ರಕಾರ್ಯ, ಊಟ, ನಿದ್ರೆ. ಮುಂದಿನ ಒಂದೂವರೆ ದಿನವೂ ಇದೇ ಶಿಸ್ತಿನಲ್ಲಿ ಒಂದಕ್ಕೊಂದು ಪೂರಕವಾಗುತ್ತ ಆದರೆ ಅವಿರತವೆನ್ನುವಂತೇ ನಡೆಯಿತು ಶಿಬಿರ ಕಲಾಪಗಳು. ಭವನದೊಳಗೆ ಮಂಕು, ಬಿಸುಪೆಂದು ಬಹಳ ಹೊತ್ತು ಮುದುರಿ ಜಡಬೀಳಬಾರದು, ಹೊರಗೆ ಚಳಿ ಮಳೆ ಕೆಸರು ಜಿಗಣೆಯೆಂದು ಬಳಲಿ ಬೇಸತ್ತು ಹೋಗಲೂಬಾರದು ಎನ್ನುವುದು ಇಲ್ಲಿನ ತತ್ತ್ವ.
ಕೆವಿಜಿ ತನ್ನ ಮಾತುಗಳಲ್ಲಿ ಇಲ್ಲಿ ವಾರ್ಷಿಕ ಶಿಬಿರ ತೊಡಗಿದ ಆರು ವರ್ಷಗಳಲ್ಲಿ ಜಾಗತಿಕವಾಗಿ ಕಪ್ಪೆ ತಿಳುವಳಿಕೆಯಲ್ಲಿ ಮೂಡಿದ ಬದಲಾವಣೆ ಮತ್ತು ಹೊಸತನ್ನು ಹಂಚಿಕೊಂಡರು. ವಿಧವಿಧವಾದ ಕಪ್ಪೆ ಸ್ವಾರಸ್ಯಗಳ ಉದಾಹರಣೆಗಳನ್ನೂ ಕೊಟ್ಟರು. ಪೂರಕವಾಗಿ ಸ್ಥಿರ ಹಾಗೂ ಚಲಚಿತ್ರಗಳ ತುಣುಕುಗಳನ್ನೂ ತನ್ನ ಲ್ಯಾಪ್ ಟಾಪ್ ಹಾಗೂ ಪ್ರಾಜೆಕ್ಟರ್ ಸಹಾಯದಲ್ಲಿ ಒದಗಿಸಿದ್ದರು. ಸಂದೇಹಗಳು ಕಾಡಿದಲ್ಲಿ, ಪ್ರಶ್ನೆಗಳು ಮೊಳೆತಲ್ಲಿ, ವಿವರಣೆಗಳು ಬೇಕಾದಲ್ಲಿ, ಕೆವಿಜಿಯ ಸಮಾಧಾನ ಸಭಾಭವನದ ಆರಾಮದಲ್ಲಿ ಉದಾಸೀನವಾದದ್ದಿಲ್ಲ, ಪೊದರು ಕತ್ತಲು ಮಂಜಿನ ಮರೆಯಲ್ಲಿ ವಿಳಂಬಿಸಿದ್ದಿಲ್ಲ, ಮಳೆ ತೊರೆ ಬಿಬ್ಬಿರಿಗಳ ಗದ್ದಲಕ್ಕೆ ತಡವರಿಸಿದ್ದೂ ಇಲ್ಲ. ಕೇಳಿದ್ದನ್ನೇ ಕೇಳಿದರೂ ಹೊಸತೆಂಬಂತೆ – “ಸೂಪರ್”, ಕೇಳುವವನ ಮಾತಿನಲ್ಲಿ ಸಣ್ಣ ಹೊಳಹಿದ್ದರೂ ಅದ್ಭುತವೆನ್ನುವಂತೆ – “ಸಖತ್ತಲ್ಲಾ” ಕೊಟ್ಟೇ ಕೆವಿಜಿ ಪ್ರತಿಕ್ರಿಯಿಸುತ್ತಿದ್ದರು. ತನ್ನ ತಿಳುವಳಿಕೆಯನ್ನು (ಬಹುತೇಕ ಕಪ್ಪೆ-ವಿಜ್ಞಾನದ ಸದ್ಯದ ಮಿತಿಯನ್ನು) ಮೀರಿದ್ದವಾದರೆ, ಅಷ್ಟೇ ವಿನಯಪೂರ್ವಕವಾಗಿ ತನ್ನ ಅಶಕ್ತತೆಯನ್ನು ನಿವೇದಿಸುವುದರೊಡನೆ ಕೇಳಿದವರೇ ಅದರ ಶೋಧನೆಗಿಳಿಯುವಂತೆ ಪ್ರೇರಣೆಯನ್ನೂ ಕೊಡುತ್ತಿದ್ದರು. ಉತ್ಸಾಹ, ನಗೆ, ಹಾಸ್ಯಪ್ರಜ್ಞೆಗಳಂತು ಕೆವಿಜಿಯಲ್ಲಿ ಎಂದೂ ಮಾಸಿದ್ದಿಲ್ಲ. ಇವನ್ನು ಮೀರಿಯೂ `ಹುಡುಕು’ವವರ ಅನುಕೂಲಕ್ಕೆ ಕೆವಿಜಿ ತಮ್ಮ ಸಂಗ್ರಹದಿಂದ ಕೆಲವು ಆಯ್ದ ಪುಸ್ತಕಗಳನ್ನೂ ತಂದು ಅಲ್ಲಿ ಎಲ್ಲರಿಗೂ ಮುಕ್ತವಾಗಿ ಸಿಗುವಂತೇ ಇರಿಸಿದ್ದರು.
ಈ ಬಾರಿ ಪೂರ್ಣ ಮಳೆಗಾಲ ಬಿಸಿಲೆಯಲ್ಲಿ ಇನ್ನೂ ತೊಡಗಿಯೇ ಇರಲಿಲ್ಲ. ಭವನದ ಒತ್ತಿನ ಕೆರೆ ಗೊಸರ ಹೊಂಡವಾಗಿಯೇ ಇತ್ತು. ರಾತ್ರಿಯಲ್ಲೂ ಕಪ್ಪೆಗಳ `ಪ್ರೇಮ ಚಟುವಟಿಕೆ’ಗಳು ಹೆಚ್ಚು ಜಾಗೃತವಾಗಿರಲಿಲ್ಲ. ಸಣ್ಣ ಕ್ಷೇತ್ರ ಕಾರ್ಯಗಳಿಗೆ ಸಭಾಭವನದ ಆಸುಪಾಸು, ಅಶೋಕವನಕ್ಕೆ ಹೋಗುವ ಕಾಲುದಾರಿ, ಕೆರೆಗಳೆರಡರ ಏರಿ, ದಾರಿಯೊತ್ತಿನ ಕಲ್ಲಕೋರೆಗಳನ್ನು ಬಳಸಿಕೊಂಡಿದ್ದೆವು. ವಿಸ್ತೃತ ಕ್ಷೇತ್ರಕಾರ್ಯಕ್ಕೆ ಮೊದಲ ಮುಸ್ಸಂಜೆ, ಎಲ್ಲ ತಮ್ಮ ವಾಹನಗಳನ್ನೇರಿ ಅಶೋಕವನದ ಅಂಚಿಗೆ ಹೋದೆವು. ಕತ್ತಲಾವರಿಸುವ ಮೊದಲೇ ದಟ್ಟಕಾಡಿನ ಒಳಹೊಕ್ಕು, ವರ್ಷಪೂರ್ತಿ ಹರಿಯುವ ತೊರೆ ವಲಯದ ಉದ್ದಕ್ಕೆ, ಪೂರ್ಣ ಕತ್ತಲಲ್ಲಿ ಸುಮಾರು ಒಂದೂವರೆ ಗಂಟೆ ಹುಡುಕಾಟ ಮಾಡಿ ಮರಳಿದೆವು.
ಹಾಗೇ ಎರಡನೇ ರಾತ್ರಿ ಹೊನ್ನಾಟ್ಲಿನ ಮಹಾಬಂಡೆ – ಅಡ್ಡಗಲ್ಯಾರು, ಮತ್ತದರ ಸುತ್ತಮುತ್ತಣ ತೆರೆದ ಹುಲ್ಲಗುಡ್ಡೆಯಲ್ಲಿ ಸರ್ವೇಕ್ಷಣೆ ಮಾಡಿದೆವು. ಬೆಳಗ್ಗಿನ ಕಾಫಿ ತಿಂಡಿಗೂ ಮುನ್ನಿನ ಕಿರುಚಾರಣಕ್ಕೆ ಮೊದಲ ದಿನ ತುಳಸಿ ಹೋಟೆಲಿನ ಎದುರಿನ ಕಲ್ಲುಗುಡ್ಡ ಏರಿದ್ದೆವು. ಪಿರಿಪಿರಿ ಮಳೆ, ದಟ್ಟ ಮಂಜು ನಮ್ಮನ್ನು ಪಶ್ಚಿಮ ಘಟ್ಟದ ವಿಹಂಗಮ ನೋಟದಿಂದ ವಂಚಿಸಿದವು. ಆದರೆ ಅಂತಿಮ ದಿನದಂದು ಹಾಗೆ ದಾರಿಯಲ್ಲೇ ಬೀಟೀಸ್ಪಾಟಿಗೆ ನಡೆದಾಗ ನಮ್ಮ ಅದೃಷ್ಟ ಖುಲಾಯಿಸಿತ್ತು; ಮೋಡ ಹರಿದು ಶಿಖರ ಕಣಿವೆಗಳ ದರ್ಶನವಾಗಿತ್ತು. ಅಲ್ಲಿ ಅರಣ್ಯ ಇಲಾಖೆಯ ಸುಂದರೀಕರಣದ ಭಾಗವಾಗಿ ಬಂದ ನವರಂಗಿನ ನಡೆಮಡಿಯ ಮೇಲೆ ಮಳೆಗಾಲದ ಪಾಚಿ ಬೆಳೆದಾಗ, `ಮಝಾ ಉಡಾಯಿಸುವವರು’ ಬಂದು, ಜಾರಿ ಬೀಳುವ ಚಿತ್ರ ಕಲ್ಪಿಸಿಕೊಂಡಾಗ ತುಸು ಬೇಸರವೂ ಆಯ್ತು.
ಸಭಾಂಗಣದ ಕಲಾಪಗಳಲ್ಲಿ ಮುಖ್ಯ ಮಾತುಗಾರ ಕೆವಿಜಿ ಇದ್ದಂತೇ ಕೆಲವರು ಸಣ್ಣ ಅವಧಿಯ ಪ್ರಸ್ತುತಿಗಳನ್ನೂ ಕೊಟ್ಟರು. ಮಣಿಪಾಲದ ಮುರಕಲ್ಲ ಪರಿಸರದ ಕಪ್ಪೆಗಳ ಕುರಿತು ಕೆಲಸ ಮಾಡಿದ ಮಧುಶ್ರೀ ಮುಡ್ಕೆ, ಕಪ್ಪೆ ಜಾಗೃತಿಯನ್ನು ಜನಪರ ಮಾಡುವ ಕುರಿತು ಸ್ವಾನುಭವದ ಮಾತುಗಳನ್ನಾಡಿದರು. ಕುದುರೆಮುಖ ಗಣಿಯೋಜನೆಯನ್ನೆತ್ತಂಗಡಿ ಮಾಡುವಲ್ಲಿ ಮೊದಲು, ಮತ್ತೆ ವನಧಾಮವನ್ನು ನಿರ್ಮಾನುಷ ಮಾಡುವಲ್ಲಿ ಪರಿಣಾಮಕಾರಿ ಕೆಲಸ ಮಾಡುತ್ತಲೇ ಇರುವ ನಿರೇನ್ ಜೈನ್ ಮಾತಾಡಿದರು. ಇವರು ವನ್ಯಪರಿಸರ ರಕ್ಷಣೆಗಾಗಿಯೇ ನಡೆಸಿದ ಚಟುವಟಿಕೆಗಳೆಲ್ಲ ಪಾರದರ್ಶಕವಾಗಿಯೇ ಇದ್ದವು. ಆದರೆ ಆಶ್ಚರ್ಯಕರವಾಗಿ ಅವು ವನ್ಯ ಇಲಾಖೆಗೆ ಅಪ್ರಿಯವಾದದ್ದು, ಅದು ಕೊಟ್ಟ ಕಾಟಗಳನ್ನೂ ನಿರೇನ್ ಸೂಕ್ಷ್ಮವಾಗಿ ಪರಿಚಯಿಸಿ ವನ್ಯಸಂರಕ್ಷಣಾ ಹೋರಾಟದ ವಿಪರೀತ ಮುಖವನ್ನೂ ಕಾಣಿಸಿದರು.
ಖಾಸಗಿ ನೆಲೆಯಲ್ಲಿ ಶುದ್ಧ ವೈಜ್ಞಾನಿಕ ಸಂಶೋಧನೆಗಳನ್ನು ಬೆಂಬಲಿಸುವುದರೊಡನೆ, ಅವನ್ನು ಜನಮನದಲ್ಲಿ ಬಿತ್ತರಿಸುವ ಕೆಲಸವನ್ನೂ ಮಾಡುತ್ತಿರುವ ಗುಬ್ಬಿ ಲ್ಯಾಬ್ಸಿನ ನಿರ್ದೇಶಕ ಎಚ್.ಎಸ್.ಸುಧೀರ್ ಕೂಡಾ ಮಾತಾಡಿದರು. ಇವರು ನಿರಂತರ ಕಪ್ಪೆ ಶಿಬಿರಗಳ ಯಶಸ್ಸು ಮತ್ತು ಜೈವಿಕ ಸಂಶೋಧನಾ ರಂಗದಲ್ಲಿ ಈ ವಲಯದ ಅಸಂಖ್ಯ ಸಾಧ್ಯತೆಗಳನ್ನು ಧಾರಾಳ ಗುರುತಿಸಿದ್ದರು. ಹಾಗಾಗಿ, ಇದೇ ಸೆಪ್ಟೆಂಬರಿನಲ್ಲಿ ಇಲ್ಲೇ ಮರಗಳ ಕುರಿತು ಹೊಸತೇ ಒಂದು ಕಮ್ಮಟ ನಡೆಸುವ ಹೊಳಹನ್ನು ಹಂಚಿಕೊಂಡರು. ಬಯಲು ಸೀಮೆಯ ಭಾಗವಾಗಿಯೇ ಗುಬ್ಬಿ ಲ್ಯಾಬ್ಸ್ ಇದೆ. ಅದಕ್ಕೆ ಜೈವಿಕ ವೈವಿಧ್ಯದ ಬಹುಮುಖ್ಯ ನೆಲೆಯಾದ ಪಶ್ಚಿಮಘಟ್ಟಗಳ ವಲಯದಲ್ಲಿ ಇಲ್ಲಿ ಅಶೋಕವನ ಒದಗಿದೆ. ಹಾಗೇ, ಅತ್ತ ಉತ್ತರಕನ್ನಡ ಜಿಲ್ಲೆಯಲ್ಲಿ ಅಶೋಕ ಹೆಗಡೆಯವರೂ ಒಂದು ಖಾಯಂ ನೆಲೆ ಒದಗಿಸಿರುವುದನ್ನು ಸಂತೋಷದಲ್ಲೇ ಉಲ್ಲೇಖಿಸಿದರು. ಈ ಮೂರು ಕೇಂದ್ರಗಳ ಸಮನ್ವಯದಲ್ಲಿ ಇನ್ನಷ್ಟು ಪ್ರಕೃತಿಪರ ಚಟುವಟಿಕೆಗಳನ್ನು ನಡೆಸುವ ಮಾತೂ ಸುಧೀರ್ ಮಾತಿನಲ್ಲಿ ಬಂತು. ಶಿಬಿರಾರ್ಥಿಗಳನ್ನು ಸಮನ್ವಯ ಮಾಡುವಲ್ಲಿ ನಾಯಕತ್ವವಹಿಸಿದ ವಿನೀತ್, ಸ್ವತಃ ಜೀವವಿಜ್ಞಾನದ ಸ್ನಾತಕೋತ್ತರ ಪದವಿ ಮುಗಿಸಿದ ಸಂಶೋಧಕ. ಈತ ಕಪ್ಪೆಗಳ ಕರೆಯನ್ನು ಧ್ವನಿಮುದ್ರಿಸಿ, ಗುರುತಿಸುವ ತನ್ನ ಯೋಜನೆಯನ್ನೂ ಪ್ರಸ್ತುತಪಡಿಸಿದ್ದರು.
ಕಪ್ಪೆಗಳು ರಾತ್ರಿ ಕಾಲದಲ್ಲಿ ಚಟುವಟಿಕೆಗಳನ್ನು ಹೆಚ್ಚಿಸುವುದು ನಮಗೆ ತಿಳಿದೇ ಇದೆ. ಸಹಜವಾಗಿ ಹೆಚ್ಚಿನ ಶಿಬಿರಾರ್ಥಿಗಳೆಲ್ಲ ಒಳ್ಳೆಯ ಟಾರ್ಚು, ದೃಶ್ಯ, ಧ್ವನಿ ದಾಖಲಿಸುವ ಸಲಕರಣೆಗಳಿಂದ ಸಜ್ಜಾಗಿಯೇ ಇದ್ದರು. ಶಿಬಿರದ ಕೊನೆಕೊನೆಯ ಕಲಾಪವೊಂದರಲ್ಲಿ ಆ ಎಲ್ಲ ಸಂಗ್ರಹಗಳನ್ನು ಎಲ್ಲರೆದುರು ಪ್ರದರ್ಶಿಸಿ, ಅವರಿಂದಲೇ ವಿವರಣೆಗಳನ್ನು ಹೊರಡಿಸಿದ ಕ್ರಮ ತುಂಬ ಚೆನ್ನಾಗಿತ್ತು. ಇದು ವೈಯಕ್ತಿಕ ಹೆಚ್ಚುಗಾರಿಕೆಯನ್ನು (ಸ್ವಾರ್ಥ? ಸ್ವಾಮ್ಯ?) ಅಳಿಸಿತು. ಶಿಬಿರದ ಯಶಸ್ಸನ್ನು ಸಾರುವುದರೊಡನೆ ಅದುವರೆಗೆ ಅಸ್ಪಷ್ಟವಾಗಿ ಗ್ರಹಿಸಿದ್ದೆಲ್ಲವನ್ನು ಎಲ್ಲರಲ್ಲಿ ಪುನರ್ಮನನಗೊಳಿಸಿ ಗಟ್ಟಿಗೊಳಿಸಿತು.
ಎರಡನೇ ಮಧ್ಯಾಹ್ನಕ್ಕಾಗುವಾಗಲೇ ಎಲ್ಲೋ ಮರ ಬಿದ್ದ ನೆಪದಲ್ಲಿ ಹೋದ ಕರೆಂಟು ಮತ್ತೆ ನಾವಿರುವವರೆಗೆ ಬರಲೇ ಇಲ್ಲ. ಭಾರೀ ಮಳೆ ಇಲ್ಲದಿದ್ದರೂ ಮೋಡಗವಿದ ವಾತಾವರಣದಲ್ಲಿ ಇದು ಸಭಾಕಲಾಪಗಳನ್ನೂ ನಮ್ಮ ದೈನಂದಿನ ನೀರಿನ ಬಳಕೆಯನ್ನೂ ತುಸು ಕಾಡಿತು. ಆದರೆ ಶಿಬಿರಾರ್ಥಿಗಳ ಚೈತನ್ಯವನ್ನಲ್ಲ.
Wonderful reading of a passion,, a hucchu . Well articulated.your style has also changed,
ReplyDeleteಉತ್ತಮ ಕೆಲಸ. ಗುರುರಾಜ್ ಸಂತತಿ ಸಾವಿರವಾಗಲಿ. ಕಪ್ಪೆಗಳದ್ದು ಅದರ ಸಾವಿರ ಪಟ್ಟು...
ReplyDeleteಉಭಯಚರಿಯ ಸಾಹಚರ್ಯಕ್ಕೆಳಸಿದ್ದು, ಎಳೆಎಳೆಯಾಗಿ ಚಿತ್ರಿಸಿದ್ದು ಎಲ್ಲಾ ತುಂಬಾ ಖುಷಿ ಕೊಟ್ಟಿದೆ.
ReplyDeleteAshokere, Onde Ondhu Shabda , ee blogige... SAKATH ALLA ,, Copyright KV Gururaja
ReplyDeleteಪ್ರಕೃತಿ ಸಕಲ ಸಂಪನ್ನ ಗಳಲ್ಲಿ ಕಪ್ಪೆ ಗಳಿಗೆ ಜೀವ ಕೊಡುವ ಇಂತಹ ತಂಡಕ್ಕೆ ಶಹಬಾಸ್ ಎನ್ನುವುದು ಬರಿಯ ಒಣ ಮಾತು ಆಗಬಹುದು....ನಿಜಕ್ಕೂ ಇಂತಹ ಹವ್ಯಾಸವನ್ನು ನಿಸ್ವಾರ್ಥವಾಗಿ ಮಾಡುತ್ತ ಮುಂದಿನ ಪೀಳಿಗೆಗೂ ಕಪ್ಪೆಗಳು ಬೇಕು ಬೇಕು ಎನ್ನುವ ಇವರ ಕಾಳಜಿಗೆ ಶರಣು....
ReplyDelete