ಶ್ಯಾಮಲಾ
ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’
ಅಧ್ಯಾಯ – ೮
ನನ್ನ ಪತ್ರಲೇಖನ ಹವ್ಯಾಸ ಆರಂಭವಾದುದು,
ಸಣ್ಣ ಚಿಕ್ಕಪ್ಪನಿಗೆ ನಾನು ಬರೆಯುತ್ತಿದ್ದ ಪತ್ರಗಳಿಂದ. ಚಿಕ್ಕಪ್ಪ ಮದುವೆಯಾಗಿ ಮುಂಬೈಗೆ ಹಿಂದಿರುಗಿದ
ಮೇಲೆ ನಾನು ಅವರಿಗೆ ಪತ್ರ ಬರೆಯುಲು ಆರಂಭಿಸಿದೆ. ಮದುವೆಯಾದ ಮರುವರ್ಷವೇ ಚಿಕ್ಕಮ್ಮ ಬಸುರಿಯಾಗಿ ಅವಳಿ
ಹೆಣ್ಣು ಶಿಶುಗಳಿಗೆ ಜನ್ಮವಿತ್ತಿದ್ದರು. ಈಗ ರಾಮಕೃಷ್ಣ ವಿದ್ಯಾಲಯವಿರುವಲ್ಲಿ ಇದ್ದ ರಾಮಕೃಷ್ಣ ನರ್ಸಿಂಗ್
ಹೋಮ್‌ನಲ್ಲಿ ಡಾ. ಕುಲಾಸೋ ಹಾಗೂ ಡಾ. ಎಂ.ಎಸ್.ಪ್ರಭು ಅವರು ಚಿಕ್ಕಮ್ಮನ ಹೆರಿಗೆ ಮಾಡಿಸಿದ್ದರು. ಶಿಶುಗಳಿಗೆ
ಬಾಟ್ಲಿಯಲ್ಲಿ ಹಾಲು ಮತ್ತು ಚಿಕ್ಕಮ್ಮನಿಗೆ ಬಾಟ್ಲಿಯಲ್ಲಿ ಕಾಫಿ ತೆಗೆದುಕೊಂಡು ಬೆಸೆಂಟ್ ಶಾಲೆಯ ನಮ್ಮ
ಮನೆಯಿಂದ ನಾನು ನಡೆದು ಹೋಗುತ್ತಿದ್ದೆ. ನನಗಾಗ ಹತ್ತು ವರ್ಷವಷ್ಟೇ. ಎಳೆಯ ಶಿಶುಗಳನ್ನು ಎತ್ತಿಕೊಂಡು
ಆಡಿಸುವುದು, ಮುದ್ದಿಸುವುದು ನನಗೆ ಆಗಲೂ ಇಷ್ಟ; ಈಗಲೂ
ಇಷ್ಟ. ಹೀಗೆ ಚಿಕ್ಕಪ್ಪನ ಮಕ್ಕಳು, - ಅನುಪಮಾ, ನಿರುಪಮಾ - ಅನು, ನಿರು - ನನ್ನ ಮುದ್ದಿನ ಕೂಸುಗಳಾದರು.
[ಗುಡ್ಡೆಮನೆ ಚಿಣ್ಣರು] ಮತ್ತೆರಡು ವರ್ಷಗಳಲ್ಲಿ ಚಿಕ್ಕಮ್ಮ ಪುನಃ ಬಸುರಿಯಾಗಿ ಅದೇ ಆಸ್ಪತ್ರೆಯಲ್ಲಿ ಪುನಃ ಅವಳಿ ಹೆಣ್ಣು ಶಿಶುಗಳನ್ನೇ ಪ್ರಸವಿಸಿದರು. ಹೆರಿಗೆ ಸಮಯ ಈ ಬಾರಿಯೂ ಆಸ್ಪತ್ರೆಯಲ್ಲಿ ಜೊತೆಗಿದ್ದ ನಮ್ಮಮ್ಮ ಮನೆಗೆ ಮರಳಿ, ನಗುತ್ತಾ ಆಂಟಿಯೊಡನೆ ಅಂದರು," ಸುಂದರಿಯ ಅಳುವೇ ಅಳು. ಅದಕ್ಕೆ ಡಾಕ್ಟರ್ " ಅಳುವುದ್ಯಾಕೆ? ಇನ್ನೊಮ್ಮೆ ಒಟ್ಟಿಗೆ ನಾಲ್ಕು ಗಂಡು ಹೆತ್ತರಾಯ್ತಲ್ಲ?" ಎಂದು ತಮಾಷೆ ಮಾಡಿ ನಗಿಸ್ಲಿಕ್ಕೆ ನೋಡಿದ್ರು." ಈ ಚಿಕ್ಕ ಅವಳಿಗಳು ಸುಕನ್ಯಾ, ಸುಜನ್ಯಾ - ನಮ್ಮ ಸುಕ, ಸುಜಿ - ಹುಟ್ಟಿದಾಗ ನಾನು ಚಿಕ್ಕಪ್ಪನಿಗೆ ಬರೆದಿದ್ದ ಪತ್ರದಲ್ಲಿ ಅವರ ಜನನದ ಸಮಯ, ಹಾಗೂ ಶಿಶುಗಳ ವರ್ಣನೆ ಎಲ್ಲವೂ ಇದ್ದು, ಈಗ ನಾಲ್ಕು ವರ್ಷಗಳ ಹಿಂದೆ ಚಿಕ್ಕಪ್ಪನ ಮರಣಾನಂತರ ಅವರ ಕಪಾಟಿನಲ್ಲಿ ಸಿಕ್ಕಿದ ಈ ಪತ್ರದಿಂದ ಅವರಿಗೆ ತಮ್ಮ ಜನನದ ಘಳಿಗೆ ತಿಳಿದು ಬಂತು.
ಮಗು ನಿರು ಪುಟ್ಟ ಶಿಶುವಾಗಿದ್ದಾಗ,
ನಮ್ಮಮ್ಮ ಒಂದಿನ ಮಗುವನ್ನು ಮಡಿಲಲ್ಲಿರಿಸಿ ಆಡಿಸುತ್ತಿದ್ದಾಗ, ತಮ್ಮ ಮುರಲಿ ಮಗುವಿನ ಬಾಯಿಗೆ ಪೆಪ್ಪರಮಿಂಟ್
ಹಾಕಿ, ಅದು ಗಂಟಲಲ್ಲಿ ಸಿಕ್ಕಿ ಅವಸ್ಥೆಯೇ ಆಗುವುದರಲ್ಲಿತ್ತು. ಅಮ್ಮ ಹೇಗೋ ಅದನ್ನು ಹೊರತೆಗೆಯುವಲ್ಲಿ
ಯಶಸ್ವಿಯಾಗಿದ್ದರು. ಕುತ್ತಿಗೆಯಿನ್ನೂ ಧೃಢವಾಗಿರದ ಎಳೆಯ ಮಗು ಅನು, ಎತ್ತಿ ತಿರುಗುತ್ತಿದ್ದ ನನ್ನ
ಕೈಗಳಿಂದ ಹಿಂದಕ್ಕೆ ವಾಲಿ ಕೆಳಗೆ ಬಿದ್ದಿದ್ದಳು. ಅಡಿಗೆಕೋಣೆಯ ಸೆಗಣಿ ಸಾರಿಸಿದ ನೆಲವದು. ಪುಣ್ಯಕ್ಕೆ
ಮಗುವಿಗೇನೂ ಆಗಿರಲಿಲ್ಲ. (ಸ್ವಾರಸ್ಯವೆಂದರೆ, ಕೆಲ ವರ್ಷಗಳ ಬಳಿಕ, ನನ್ನ ಮೊದಲ ಮಗು ಕೂಡಾ ಇದೇ ಅನುವಿನ ಕೈಯಿಂದ ಇದೇ ಸ್ಥಳದಲ್ಲಿ ಹೀಗೇ ಹಿಂದಕ್ಕೆ ವಾಲಿ ಬಿದ್ದು
ಬಿಟ್ಟಿದ್ದ. ಆಗಲೂ ಮಗುವಿಗೇನೂ ಆಗಿರಲಿಲ್ಲ.) ಬೊಂಬಾಯಿಗೆ ಹೋಗಿದ್ದ ಶಾರದತ್ತೆ ಮರಳಿ ಬಂದಿದ್ದರು.
ಮಕ್ಕಳ ತೊಟ್ಟಿಲು ತೂಗುತ್ತಾ, ಮೆಲುದನಿಯಲ್ಲಿ ಹಾಡುತ್ತಾ, ಒಳ ಹೊರಗೆ ಓಡಾಡುತ್ತಾ ಕೆಲಸದಲ್ಲಿ ಮಗ್ನರಾಗಿರುತ್ತಿದ್ದರು.
ದೊಡ್ಡಮ್ಮ, ಮಕ್ಕಳು -ಸುರೇಶಣ್ಣ, ಸತೀಶ, ದೇವಲ, ಗಿರಿ, ಮತ್ತು ಚಿಕ್ಕ ಮಗು ಸದಾ. ಸುರೇಶಣ್ಣ ತಂಟೆಪೋಕರಿಯಾದರೆ,
ಸತೀಶನದು ಅಷ್ಟೇ ಸಾಧುಸ್ವಭಾವ! ಇನ್ನು ತನ್ನ ಪಾಡಿಗೆ
ತಾನು ಆಡುತ್ತಾ, ತಿನ್ನುತ್ತಾ ಇರುತ್ತಿದ್ದ ದೇವಲ, ಮಧ್ಯಾಹ್ನ ಮಲಗಿದಳೆಂದರೆ, ಸಂಜೆ ಏಳುವಾಗ ಕಾಲುಗಳನ್ನು
ನೆಲಕ್ಕೆ ಉಜ್ಜಿ ಉಜ್ಜಿ, ರಚ್ಚೆ ಹಿಡಿದು ಆರ್ಭಟ ಕೊಡುವ ಬಾಲೆ! ಇದು ನಿತ್ಯದ ಪರಿಪಾಠವಾಗಿತ್ತು. ಆಡಿ,
ಓಡಿ ಬಿದ್ದು ಗಾಯ ಮಾಡಿಕೊಳ್ಳುವ ಗಿರಿ! ಬೆಳ್ಳಗಿದ್ದ, ಹೆಚ್ಚೇನೂ ತೊಂದರೆ ಕೊಡದ ಶಾಂತ ಮಗು, ಸದಾ. ರಜಾದಿನಗಳಲ್ಲಿ ನಾವು ಮಕ್ಕಳೂ ಮಂಗಳೂರಿಂದ ಬಂದು ಜೊತೆಗೂಡುತ್ತಿದ್ದೆವು.
ಅವಳಿ ಮಕ್ಕಳು ನಾಲ್ವರೂ ಸಮರೂಪಿಗಳಾಗಿರದೆ,
ನಾಲ್ವರೂ ಭಿನ್ನರೂಪರು. ದೊಡ್ಡವರಿಬ್ಬರು ಆರೋಗ್ಯವಂತರಾಗಿದ್ದರೆ, ಚಿಕ್ಕವರಲ್ಲಿ ಸುಕ ಕ್ಷೀಣಳಿದ್ದಳು.
ನಿರು, ಗುಂಗುರುಗೂದಲ ಮುದ್ದಾದ ಮಗುವಾಗಿದ್ದು, ಕೊಂಡಾಟಕುಟ್ಟಿಯಾಗಿದ್ದರೆ, ಅನು ತಂಗಿಯರನ್ನು ಸಂಭಾಳಿಸಿಕೊಂಡು
ಹೋಗುವ ಹಿರಿಯಕ್ಕನಂತಿದ್ದಳು. ಸುಜಿ ಸಪೂರವಿದ್ದರೂ ಬಲು ಚುರುಕಾಗಿದ್ದಳು. ದಿನವಿಡೀ ಆಡಿ ಓಡಿ ಸುಸ್ತಾಗುವ
ಸುಜಿ, ಮುಸ್ಸಂಜೆಯ ಪ್ರಾರ್ಥನೆ ಸಮಯಕ್ಕೆ ನಾವೆಲ್ಲ ದೇವರನಾಮ ಹಾಡುತ್ತಿರುವಂತೆಯೇ ಅಲ್ಲೇ ಕವುಚಿ ಬಿದ್ದು
ಗೋಂಕುರುಕಪ್ಪೆಯಾಗಿ ನಿದ್ದೆ ಹೋಗುತ್ತಿದ್ದಳು. ಮತ್ತವಳನ್ನು ಎಬ್ಬಿಸಿ ಉಣಿಸುವಲ್ಲಿ ಚಿಕ್ಕಮ್ಮ ಸೋಲುತ್ತಿದ್ದರು. ಮಧ್ಯಾಹ್ನದ ಹೊತ್ತು ಚಿಕ್ಕಮ್ಮ, ತಮ್ಮ ತೆಂಕಲಾಗಿನ
ಕೋಣೆಯಲ್ಲಿ ಚಾಪೆಯ ಮೇಲೆ ಕುಳಿತು ಬಾಗಿ, ಮುಂಬೈಯಲ್ಲಿದ್ದ ಚಿಕ್ಕಪ್ಪನಿಗೆ ಪತ್ರ ಬರೆಯುತ್ತಿದ್ದರು.
ಬಳಿಯಲ್ಲೇ ಕುಳಿತು ಕಥೆ ಪುಸ್ತಕ ಓದುತ್ತಾ ನಾನು ನೋಡುತ್ತಿದ್ದೆ. ಪತ್ರದ ಆರಂಭದಲ್ಲಿ ಸಂಬೋಧನೆ
" ಪ್ರಾಣೇಶ್ವರಾ" ಎಂದಿರುತ್ತಿತ್ತು. (ಮುಂದೆ ನನ್ನ ಮದುವೆಯಾಗಿ, ಮುಂಬೈಯಲ್ಲಿದ್ದ ನಮ್ಮವರಿಗೆ
ಪತ್ರ ಬರೆಯಬೇಕಾಗಿ ಬಂದಾಗ 'ಪ್ರಾಣೇಶ್ವರಾ' ನನಗೆ ನಾಟಕೀಯವಾಗಿ ಕಂಡಿತ್ತು. ಅಮ್ಮನೊಡನೆ ಕೇಳಿ ಅಮ್ಮನ
ಸಲಹೆಯಂತೆ ಇಂಗ್ಲಿಷ್ ಸಂಬೋಧನೆಯನ್ನೇ ಆರಿಸಿಕೊಂಡಿದ್ದೆ.)
[ನೀಲೂ, ಸುಜಿ]
ಕೆಲವು ಸಂಜೆಗಳಲ್ಲಿ ನಾವು ಗುಡ್ಡೆಮನೆ
ಮಕ್ಕಳೆಲ್ಲರೂ ಹೊಳೆಯಾಚೆಗೆ ಎತ್ತರದಲ್ಲಿದ್ದ ಗುಡ್ಡದ ಮೇಲೇರಿ ವಿಹರಿಸುವುದಿತ್ತು. ಅಲ್ಲಿಂದ ಸೂರ್ಯಾಸ್ತ
ವೀಕ್ಷಣೆ ಮುದ ನೀಡುತ್ತಿತ್ತು. ದಕ್ಷಿಣಕ್ಕೆ ತಲಪಾಡಿ ಹೊಳೆ, ಉತ್ತರಕ್ಕೆ ನಮ್ಮ ಉಚ್ಚಿಲ ಹೊಳೆ ಹರಿಯುತ್ತಿದ್ದ
ನೋಟ ಹಾಗೂ ಕಣ್ಣು ಹಾಯ್ದಷ್ಟೂ ದೂರ ತೆಂಗಿನ ತೋಟ, ಅದನ್ನು ಸೀಳಿಕೊಂಡು ಸಾಗುವ ರೈಲುಬಂಡಿಯ ಸಿಳ್ಳು
ಹಾಗೂ ಆ ಹಸಿರಿನ ನಡುವೆ ಮೇಲೇರುತ್ತಿದ್ದ ಉಗಿಬಂಡಿಯ ಹೊಗೆ ಕಣ್ಮನ ತುಂಬುತ್ತಿತ್ತು. ಕೆಲವೊಮ್ಮೆ ಅಣ್ಣಂದಿರ
ಗೆಳೆಯ ಕೊರಗಪ್ಪಣ್ಣನೂ ಇಲ್ಲಿ ನಮ್ಮ ಜೊತೆಗೂಡುವುದಿತ್ತು. ನಮ್ಮ ಮನೆಯೆದುರಿನ ಗದ್ದೆಯಲ್ಲಿ ನಡೆವ
ಕಂಬಳದಲ್ಲಿ ಕೊರಗಪ್ಪಣ್ಣ ಕಂಬಳದ ಕೋಣವನ್ನೋಡಿಸುತ್ತಿದ್ದರು. ಒಮ್ಮೆ ವಿಜಯಿಯೂ ಆಗಿದ್ದರು. ರಸ್ತೆಯಿಂದ
ಈ ಗದ್ದೆಗಿಳಿವಲ್ಲಿ ದಿಬ್ಬದ ಮೇಲೆ ಹುಣಿಸೆ ಹಣ್ಣಿನ ಮರವಿದ್ದು, ಕರೆಗಾಳಿ ಬೀಸುವಾಗ ಹುಣಿಸೆ ಹಣ್ಣುಗಳು
ಟಪಟಪನೆ ಕೆಳಗುದುರುತ್ತಿದ್ದುವು. ಮರದ ಕೆಳಗೆ ಪೊಟ್ಟು ಬಾವಿಯೊಂದಿದ್ದು ನಾವು ನೋಡುತ್ತಿರುವಂತೆಯೇ
ಹಾವುಗಳು ಅದರೊಳಗೆ ಸರಿದು ಹೋಗುತ್ತಿದ್ದುವು.
ಮನೆಯ ಎದುರು ಬಲಕ್ಕೆ ರಸ್ತೆಯ ಪಕ್ಕ ಸುಬ್ಬಚ್ಚನ ಮನೆಯಿತ್ತು. ಪಕ್ಕದಲ್ಲಿ ಅವರ ಸೋಡಾ ಅಂಗಡಿ. ಬಣ್ಣದ ಸೋಡಾ, ಜಿಂಜರ್ ಸೋಡಾ ಎಂದು ನಮ್ಮ ಹುಡುಗು ಪಾಳ್ಯಕ್ಕೆ ಬಲು ಆಕರ್ಷಣೆ. ಯಾರಾದರೂ ನೆಂಟರು ಬಂದವರಿಗೆ ಸೋಡಾ ತರ ಹೋಗಲು ಎಲ್ಲರೂ ತುದಿಗಾಲಲ್ಲಿ ಸಿಧ್ಧ. ಸುಬ್ಬಚ್ಚನ ಮನೆಯಂಗಳದಲ್ಲಿ ಬಣವೆಯಿದ್ದು, ಆ ಉಪ್ಪರಿಗೆ ಮನೆಯ ಆಕರ್ಷಣೆಯಿತ್ತು. ಶ್ಯಾಮಿಗೆ ಮಾಡಲು ಮರದ ದೊಡ್ಡ ಒತ್ತು ಶ್ಯಾಮಿಗೆ ಮಣೆಯನ್ನು ಅಲ್ಲಿಂದಲೇ ತರಲಾಗುತ್ತಿತ್ತು. ಶ್ಯಾಮಿಗೆ ಹಿಡಿಯಲು ಅಡಿಕೆ ಹಾಳೆ ಐಸಕುಂಞಿಯ ಹಿತ್ತಿಲಿಂದ ಬರುತ್ತಿತ್ತು. ಸುಬ್ಬಚ್ಚನ ಮಗ ರಾಘಣ್ಣ ಮತ್ತು ನಮ್ಮ ಸುರೇಶಣ್ಣನ ಗೆಳೆತನ ಬಲವಾಗಿತ್ತು.
ದಪ್ಪ ಕಾಲಂದುಗೆ, ದೊಡ್ಡ ಕೆಂಪು ಹರಳಿನ ಮೂಗಿನ ನತ್ತು, ಭಾರದ ಕಿವಿಯೋಲೆಗಳ ವೃಧ್ಧೆ ಗಾಣಿಗರ ಕುಂಭಕ್ಕ, ಮೂಲ್ಯರ ಗಂಗಯ್ಯಣ್ಣನೊಂದಿಗೆ ನಮ್ಮಜ್ಜಿಯನ್ನು ಕಂಡು ಮಾತಾಡಿಸಿ ಹೋಗಲು ಬರುತ್ತಿದ್ದರು. ವಯೋವೃಧ್ಧರೂ, ಪಕ್ವ ಜೀವನಾನುಭವಿಗಳೂ ಆದ ಈ ಹಿರಿಜೀವಗಳನ್ನು ಕಾಣುವುದೂ, ಅವರ ತೂಕದ ಮಾತುಗಳನ್ನು ಆಲಿಸುವುದೂ ಬಲು ಹಿತವೆನಿಸುತ್ತಿತ್ತು.
ಆಟಿ ತಿಂಗಳಲ್ಲಿ ಆಟಿ ಕಳಂಜ ಹಾಗೂ ಸೋಣದಲ್ಲಿ ಸೋಣದ ಮದ್‌ಮಾಲ್ (ಮದುಮಗಳು) ಮನೆಯಂಗಳಕ್ಕೆ ಬಂದರೆ ನಮಗೆ ಮಕ್ಕಳಿಗೆ ಹಬ್ಬ. ಆಟಿ ಕಳಂಜನ ಓಲೆ ಕೊಡೆ, ಸೋಣದ ಮದ್‌ಮಾಲ್ ಕುಣಿತದ ಪದಗತಿ ಆ ಡೋಲು, ಪಾಡ್ದನ ತುಂಬ ಇಷ್ಟವಾಗುತ್ತಿತ್ತು. ಚೆನ್ನಮ್ಮಕ್ಕ ಅಂಗಳದಲ್ಲಿ ಭತ್ತ ಕುಟ್ಟುವಾಗ ನಮ್ಮ ಬೆಲ್ಯಮ್ಮನೂ ಪಾಡ್ದನ ಹಾಡುತ್ತಿದ್ದರು. ಆದರೆ ಅವನ್ನು ಆಗ ಗಮನವಿಟ್ಟು ಆಲಿಸದ ನಷ್ಟ ನನ್ನದಾಗಿದೆ. ಬಿಳಿ ಮುಂಡು, ಶಲ್ಯ ಉಟ್ಟು, ಬಿಳಿ ಮುಂಡಾಸು ತೊಟ್ಟು, ಶಂಖ ಊದುತ್ತಾ, ಜಾಗಟೆ ಬಡಿಯುತ್ತಾ ಬರುವ ದಾಸಯ್ಯನ ಜೋಳಿಗೆಗೆ ಅಜ್ಜಿ, ಅತ್ತೆ ಮೊರದಲ್ಲಿ ಅಕ್ಕಿ, ತೆಂಗಿನ ಕಾಯಿ ಒಯ್ದು ಸುರಿವುದನ್ನು ನೋಡುವುದೂ ಒಂದು ಸಂಭ್ರಮ! ನಮ್ಮದೇ ಗದ್ದೆಯ ಅಕ್ಕಿಯಿಂದ ಮಾಡುತ್ತಿದ್ದ ತಿಂಡಿಗಳು ಅದೆಂಥ ಕಂಪು ಬೀರುತ್ತಿದ್ದುವು! ಅಡಿಗೆ ಮನೆಯಲ್ಲಿ ನೀರ್ದೋಸೆ, ಓಟುಪೋಳೆ, ನೈಯಪ್ಪ, ಕಡುಬುಗಳು ಸಿಧ್ಧವಾಗುವಾಗ ಅದೆಂಥ ಪರಿಮಳ! ಎಷ್ಟು ರುಚಿ! ಏನು ಮಾಡಿದರೂ ಈ ತಿಂಡಿಗಳಿಗೆ ಈಗ ಆ ರುಚಿ, ಪರಿಮಳ ಬರದು.

ಮನೆಯ ಹಿಂದೆ ಹಿತ್ತಿಲ ಅಂಚಿಗಿದ್ದ
ತೆಂಗುಗಳಲ್ಲಿ ಒಂದು ತೆಂಗು, ದರೆಯ ಮೇಲಕ್ಕೆ ಅಡ್ಡಲಾಗಿ ಒರಗಿ ಕೊಂಡಂತೆ ಗದ್ದೆಯ ಮೇಲೆ ಬಾಗಿತ್ತು.
ನಾವು ಆ ತೆಂಗಿನ ಮೈ ಮೇಲೆ ಕವುಚಿ ಒರಗಿ, ಮುಂದು ಮುಂದಕ್ಕೆ ಹೋಗಿ ಮತ್ತೆ ನೆಟ್ಟಗೆ ಕುಳಿತು ಜೀಕುತ್ತಿದ್ದೆವು.
ಮಳೆಗಾಲದ ದಿನಗಳಲ್ಲಿ ಗದ್ದೆಯಲ್ಲಿ ಹೊಳೆನೀರು ತುಂಬಿಕೊಂಡಾಗ, ನೀರಲ್ಲಿ ಗಾಳಿಯಲೆ ಬೀಸಿದಾಗೆಲ್ಲ ಈ
ತೆಂಗಿನ ಪ್ರತಿಬಿಂಬ ನೀರಲ್ಲಿ ಹಾವು ಹರಿದಂತೇ ಕಾಣಿಸುತ್ತಿತ್ತು. ದರೆಯ ಅಂಚಿಗೆ ನಿಂತು ಹೀಗೆ ಹಾವಿನಂತೆ
ಆಡುವ ಆ ಪ್ರತಿಬಿಂಬವನ್ನು ನೋಡುತ್ತಿರುವುದು ನನಗೆ ಬಲು ಇಷ್ಟವಾಗಿತ್ತು. ನನ್ನ ಪ್ರೀತಿಯ ಆ ತೆಂಗಿನ
ಮರ ಇಲ್ಲವಾಗಿ ಎಷ್ಟೋ ವರ್ಷಗಳು ಸಂದರೂ, ಈಗಲೂ ಕೆಲವೊಮ್ಮೆ ಅದು ನನ್ನ ಕನಸಲ್ಲಿ ಕಾಣುವುದಿದೆ. ಗದ್ದೆಯಲ್ಲಿ
ಹೊಳೆಯ ಪ್ರವಾಹದ ನೀರು ಕೆಂಪಗೆ ತುಂಬಿಕೊಂಡಾಗಲೂ, ನಾವು ಮಕ್ಕಳು ಆ ನೀರಲ್ಲಿ ಮನಸೋ ಇಚ್ಛೆ ಈಜಾಟ ಎಂದುಕೊಂಡು
ಆಡುವುದಿತ್ತು. ಈ ನೀರಾಟಕ್ಕೆ ನಮಗೆ ಯಾವುದೇ ಪ್ರತಿಬಂಧ ಇರಲಿಲ್ಲ. ಊಟದ ಸಮಯಕ್ಕೆ ಮನೆ ಸೇರಿಕೊಂಡರಾಯ್ತು.
ಈಗ ನಮ್ಮಾ ನೀರಾಟವನ್ನು ನೆನೆವಾಗ, ನಮ್ಮ ಮಕ್ಕಳನ್ನು ನಾವು ಹೀಗೆ ಮುಕ್ತವಾಗಿ ಆಡಲು ಬಿಟ್ಟೇವೇ ಎಂಬ
ಪ್ರಶ್ನೆ ಕಾಡದಿರುವುದಿಲ್ಲ. ಹಿರಿಯರ ವಾತ್ಸಲ್ಯದಾಸರೆಯ, ಒಡನಾಡಿಗಳ ಪ್ರೀತಿ ಬಾಂಧವ್ಯದ, ಪ್ರಕೃತಿಯ
ಮಡಿಲ ಸ್ವಚ್ಛಂದ ಆಟ, ನಲಿವಿನ ಮುಕ್ತಬಾಲ್ಯವದು! ಮರೆತೀತಾದರೂ ಎಂತು? !
(ಮುಂದುವರಿಯಲಿದೆ)
No comments:
Post a Comment