ಶ್ಯಾಮಲಾ
ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ
ಅಧ್ಯಾಯ – ೫
ರಾಜ್ಯ ಹೆದ್ದಾರಿಗಳಿನ್ನೂ ರೂಪುಗೊಳ್ಳದಿದ್ದ ದಿನಗಳವು. ಊರಿನತ್ತ ನಮ್ಮ ರೈಲು ಪಯಣಕ್ಕೆ ರೈಲ್ವೇ ಸ್ಟೇಶನ್ ತಲುಪಲು ಸಾಬಿಯ ಜಟಕಾಕ್ಕೆ ಹೇಳ ಹೋಗುವುದೇ ನಮಗೆ ದೊಡ್ಡ ಸಂಭ್ರಮ. ಬಿಜೈ ಚರ್ಚ್ ಬಳಿಯಲ್ಲಿ ಸಾಬಿಗಳ ಕುದುರೆ ಲಾಯವಿತ್ತು. ಅಣ್ಣ ಮತ್ತು ನಾನು ಓಡೋಡುತ್ತಾ ಹೋಗಿ ಸಾಬಿಗೆ ಹೇಳಿ ಬರುತ್ತಿದ್ದೆವು. ಕುದುರೆಗಳೆಂದರೆ ಬಾಲ್ಯದಿಂದಲೂ ನನಗೆ ಅದೇನೋ ಮೋಹ. ಸಂಜೆ ಐದೂವರೆಯ ರೈಲಿಗೆ, ಬೆಳಿಗ್ಗೆ ನಾಲ್ಕೂವರೆಯ ರೈಲಿಗೆ
ಹೋಗಲೆಂದು ನಮ್ಮ ಮನೆ ಬಾಗಿಲಿಗೆ ಬರುವ ಜಟಕಾ ಏರಿ ಕುಳಿತು ಕೊಳ್ಳುವ ಪೈಪೋಟಿ. ಎದುರಿನ ಸೀಟಲ್ಲಿ ಕುಳಿತುಕೊಂಡರೆ, ಹಿಂದಿನ ಸೀಟು ಆಕರ್ಷಕವಾಗಿ ಕಂಡು ಅಲ್ಲಿ ತೂರಿಕೊಳ್ಳುವ ಯತ್ನ; ಹಾಗೇ ಹಿಂದಿನ ಸೀಟಲ್ಲಿ ಕುಳಿತರೆ ಕುದುರೆಗೂ ಸಾಬಿಗೂ ಹತ್ತಿರವಾದ ಎದುರಿನ ಸೀಟಿನ ಹಂಬಲ! ಕುದುರೆಯ ಕ್ಲಕ್ ಕ್ಲಕ್ ನಡೆ; ಬಂಡಿಗಾಲಿಗಳ ಝಲ್ ಝಲ್; ಸಾಬಿಯ ಚಾಟಿಯ ಸ್ವಿಶ್! ಮುಂಜಾವದ ನರುಗತ್ತಲಲ್ಲಿ ಜಟಕಾದ ಕಂದೀಲು, ಹಾದಿಯಲ್ಲಿ ಬೀರುತ್ತಾ ಸಾಗುವ ಬೆಳಕಿನ ವಿನ್ಯಾಸ! ಎಂಥ ಮಧುರವಾದ ನೆನಪದು! ಬಿಜೈಯ ಕುದುರೆಲಾಯವೂ, ಕುದುರೆಗಳೂ ನಗರದಿಂದ ಮಾಯವೇ ಆಗಿ ಹೋದುದು ನನ್ನ ಪಾಲಿನ ದೊಡ್ಡ ನಷ್ಟ.
ರೈಲಿನ ಪಯಣದಲ್ಲಿ ನೇತ್ರಾವತಿ ನದಿ ಸೇತುವೆಯ ಮೇಲೆ ರೈಲಿನ ಘಡ ಘಡ ಮತ್ತು ಕೆಳಗೆ ಹರಿವ ನೀರಿನ ನೋಟ. ರಾತ್ರಿಯ ಪಯಣದಲ್ಲಿ ಸುತ್ತಣ ಕತ್ತಲನ್ನು ಸೀಳಿಕೊಂಡು ರೈಲು ಸಾಗುವಾಗ ಮೂಡುವ ಕತ್ತಲು ಬೆಳಕಿನ ವಿನ್ಯಾಸ. ಊರು ಸೇರುವ ತವಕದಲ್ಲಿ ತೊಕ್ಕೋಟು ಸ್ಟೇಶನ್‌ನ ಎರಡು ನಿಮಿಷಗಳ ನಿಲುಗಡೆಯೂ ಅಸಹನೆ ತರುತ್ತಿತ್ತು. ಉಳ್ಳಾಲ ಸ್ಟೇಶನ್ನಲ್ಲಿಳಿದು ರೈಲುಹಳಿಗುಂಟ ಸಾಗುವಾಗ ಕಾಲ್ಗಳು ಒಯ್ದಷ್ಟು ವೇಗವಾಗಿ ನಾವು ನಡೆಯುತ್ತಿದ್ದೆವು. ದಾರಿಗುಂಟ ಇಕ್ಕೆಲಗಳಲ್ಲೂ ಕಣ್ತುಂಬುವ ಹಚ್ಚಹಸಿರ ಬೋಗನ್ ವಿಲ್ಲಾ ಪೊದೆಗಳಲ್ಲಿ ಗುಲಾಬಿ, ಕೆಂಪು ಹೂಗೊಂಚಲುಗಳು. ಕೆಳಗೆ ಕೆಲ ನೀರ ಹೊಂಡಗಳು. ಮುಂದೆ ನಡೆದಂತೆ ಜಟಾಯು ಸಂಕದ ಬಳಿ ಸಂಕದ ಅಜ್ಜಿಯ ಮನೆ, ಮುಂದಕ್ಕೆ ಕೊಪ್ಪಳ ಅಜ್ಜನ ಮನೆ, ಉಚ್ಚಿಲ ಶಾಲೆ, ಅದರ ಪಕ್ಕ ತಲೆಬಾಡಿ ಅಜ್ಜಂದಿರ ಮನೆ, ಹೊಸಮನೆ, ತಾಳಿಕುಂಜ, ಅಲ್ಲೊಂದು ಪುಟ್ಟ ಹೊಟೇಲು, ಪಕ್ಕದಲ್ಲಿ ರೈಲ್ವೇ ಯಾರ್ಡ್‌ನ ಪುಟ್ಟ ಕ್ಯಾಬಿನ್, ಹೀಗೆ ಎರಡು ಮೈಲಿಯಷ್ಟು ನಡೆದು ಅಜ್ಜಿಮನೆಯೆದುರಿನ ವಿಶಾಲ ಗದ್ದೆಗಳು ಕಣ್ಣಿಗೆ ಬಿದ್ದುದೇ, ನಾವು ಓಡೋಡುತ್ತಾ ದಿಬ್ಬವಿಳಿದು, ಕೇದಿಗೆ ಬಲ್ಲೆಯೆಡೆಯಿಂದ ಹಾಯ್ದು, ಗದ್ದೆಹುಣಿಯಲ್ಲಿ ಓಡುತ್ತಾ, ಗದ್ದೆಗಳಾಚೆ ದೂರದಲ್ಲಿ ಕಾಣಿಸುತ್ತಿದ್ದ
ಅಜ್ಜಿಮನೆಯತ್ತ ಧಾವಿಸುತ್ತಿದ್ದೆವು. ದಿಬ್ಬದ ಕೆಳಗೆ ಕೇದಿಗೆ ಬಲ್ಲೆ ಬಳಿ ಯಾವಾಗಲೂ ಚಕ್ಕುಲಿ ವಾಸನೆ ಬರುತ್ತಿದ್ದು, ಅದು ಕಂದೋಡಿ ಹಾವಿನ ಉಸಿರಿನ ವಾಸನೆ ಎಂಬ ಎಚ್ಚರಿಕೆ ಇರುತ್ತಿತ್ತು. ಗುಡ್ಡೆಮನೆ ಹಿತ್ತಿಲಲ್ಲಿ ಮಾತ್ರ ಎಂದೂ ವಿಷದ ಹಾವುಗಳು ಕಾಣಿಸಿದ್ದಿಲ್ಲ. ಹುಣ್ಣಿಮೆ ರಾತ್ರಿಗಳಲ್ಲಿ ನಾವು ಅಂಗಳದಲ್ಲಿ ಕುಳಿತು ಉಣ್ಣುತ್ತಿದ್ದೆವು. ಬೆಳೆದು ದೊಡ್ಡವರಾಗಿ 'ಹೊರಗಾಗುವ' ಶಿಕ್ಷೆಗೆ ಒಳಗಾದಾಗ ಅಂಗಳದೆದುರಿನ ತೆರೆದ ಕೊಟ್ಳುವಿನಲ್ಲಿ ಮಲಗುತ್ತಿದ್ದೆವು. ಹಾವುಗಳ ಭಯವೇ ಅಲ್ಲಿರಲಿಲ್ಲ.
ತಲೆಬಾಡಿ ಮನೆ, ಸುತ್ತು ಜಗಲಿಯ ವಿಶಾಲ ಮನೆ. ತೆನೆ, ಚಾವಡಿ, ಬಾಜಿರ ಕಂಬಗಳು, ಮಲಗುವ ಕೋಣೆಗಳು, ವಿಶಾಲ ಊಟದ ಕೋಣೆ, ಅಡಿಗೆ ಮನೆ, ಅಂಗಳದ ತುದಿಯ ಪುಟ್ಟ ಬಾವಿ, ಬಾವಿಯ ಪಕ್ಕದ ಸಿಮೆಂಟ್ ತೊಟ್ಟಿ, ಹೂದೋಟ. ಒಳಗೆ ಚಾವಡಿಯ ದೇವರ ಮೂಲೆಯಲ್ಲಿ ದೊಡ್ಡ ದೊಡ್ಡ ದೇವರ ಪಟಗಳು; ಗೋಡೆಯಲ್ಲಿ ರವಿವರ್ಮನ ಕ್ಯಾಲೆಂಡರ್ಗಳು; ಮನೆಯವರ ಫೋಟೋಗಳು .ಮುಸ್ಸಂಜೆಗೆ ದೀಪ ಹಚ್ಚಿದ ಮೇಲೆ
ಕೂಡುಕುಟುಂಬದ ಮನೆಮಕ್ಕಳೆಲ್ಲ ಬಾಜಿರ ಕಂಬದ ಬಳಿ ಕುಳಿತು ಹಾಡುವ ಭಜನೆ, ಕೀರ್ತನೆಗಳು. ಮನೆಯ ಬಲಕ್ಕಿದ್ದ ದೋಣಿ ಸಾಮಗ್ರಿಯ ಕೋಣೆ . ಅದರ ಪಕ್ಕಕ್ಕೆ ಕಿರು ಅಫೀಸ್ ಕೋಣೆ . ದೊಡ್ಡಜ್ಜನ ಮಗ ಜನಾರ್ದನಣ್ಣ ಊರಿಗೆ ಬಂದಾಗಲೆಲ್ಲ ಅಲ್ಲಿ ಕತೆ ಪುಸ್ತಕಗಳನ್ನು ಓದುತ್ತಾ, ಪಿಕ್ಚರ್ ಪೋಸ್ಟ್ ನೋಡುತ್ತಾ , ಸಿನೆಮಾ ಹಾಡುಗಳನ್ನು ಹಾಡುತ್ತಾ ಇರುತ್ತಿದ್ದರು . ಮನೆ ಹಿಂದಿನ ಹಾದಿಯಲ್ಲಿ ದೋಣಿ ನಿರ್ಮಾಣದ ಶಿಬಿರವಿದ್ದು, ತರತರದ ದೋಣಿಗಳು ಅಲ್ಲಿ ತಯಾರಾಗುತ್ತಿದ್ದುವು. ಈ ದೋಣಿಗಳಿಗೆ ಗಿರಾಕಿಗಳಾಗಿ ಗುಜರಾತಿನ ವ್ಯಾಪಾರಿಗಳು ಬರುತ್ತಿದ್ದರು.
ತಲೆಬಾಡಿ ಹಿತ್ತಿಲು ಬಹಳ ವಿಶಾಲವಾಗಿತ್ತು. ಇದೇ ಮನೆಯಲ್ಲಿ ನಮ್ಮಮ್ಮನ ಮದುವೆ, ೧೯೪೬ರ ಆಗಸ್ಟ್ ೩೦ - ಚೌತಿಯ ಹಬ್ಬದ ದಿನದಂದು ನಡೆಯಿತಂತೆ. ಬೆಸೆಂಟ್ ಶಾಲೆಯಲ್ಲಿ ಆಟ ಟೀಚರಾಗಿದ್ದು, ಶಾಲಾ ಹಾಸ್ಟೆಲ್ ಪದ್ಮ ವಿಹಾರದ ವಾರ್ಡನ್ ಆಗಿದ್ದ ನಮ್ಮಮ್ಮನ ಮದುವೆಯ ದಿನ ರೈಲು ಸಂಚಾರ ರದ್ದಾಗಿತ್ತು. ಆದರೂ ಶಾಲಾ ಮಕ್ಕಳನೇಕರು ಆ ದೂರವನ್ನು ನಡೆದು ಕ್ರಮಿಸಿ ಮದುವೆಗೆ ಹಾಜರಾಗಿದ್ದರಂತೆ. ಮಂಗಳೂರಲ್ಲಿ ತಮ್ಮ ಸೋದರತ್ತೆಯ ಮನೆಯಲ್ಲಿದ್ದ ನಮ್ಮಮ್ಮನ ಮದುವೆ ಊರಲ್ಲಿ ಮಾವನ ಮನೆಯಲ್ಲಿ ನಡೆದುದರ ಹಿಂದೆ ದೊಡ್ಡದೊಂದು ಕಥೆಯೇ ಇದೆ. ಈ ಕಥೆ, ಮಂಗಳೂರ ಆ ಮನೆಗಳ ಏಳು,ಬೀಳುಗಳ ಐತಿಹ್ಯವನ್ನೇ ತೆರೆದಿಡುತ್ತದೆ.
[ತಾಯ್ತಂದೆಯರ ಮದುವೆಯ ಆಮಂತ್ರಣ ಪತ್ರಿಕೆ] ಮುಂಬಯಿಯ
ಜಾಸ್ಮಿನ್ ಮಿಲ್ಸ್ನಲ್ಲಿದ್ದು, ಊರಿಗೆ ಬರುವಾಗಲೆಲ್ಲ ತಂಗಿ ಮಂಜುಳನಿಗೂ, ನನಗೂ ಸ್ಯಾಟಿನ್, ವೆಲ್ವೆಟ್, ನೈಲಾನ್ ಬಟ್ಟೆಗಳನ್ನು ತರುತ್ತಿದ್ದ ತಲೆಬಾಡಿ ದೊಡ್ಡಜ್ಜನ ಕಾಣಿಕೆಗಳು ತುಂಬ ಆಕರ್ಷಕವಾಗಿದ್ದುವು. ಅಂಥಾ ಚೆಲುವಾದ ಕೆಂಪು ಫ್ರಾಕ್ ತೊಡುತ್ತಿದ್ದ ತಂಗಿ ಮಂಜುಳಳನ್ನು ಕೆಂಪಂಗಿ ಮನೋರಮೆಯೆಂದೂ, ರೆಡ್ ರೈಡಿಂಗ್ ಹುಡ್ ಎಂದೂ ಟೀಚರ್ಸ್ ಕರೆಯುತ್ತಿದ್ದರು. ನಾನು ಕಾಲೇಜಲ್ಲಿದ್ದಾಗ ಅಜ್ಜ ತಂದಿತ್ತ ಬೇಬಿ ಪಿಂಕ್ ನೈಲೆಕ್ಸ್ ಸೀರೆಯಂತೂ ಅಷ್ಟೊಂದು ಆಕರ್ಷಕವಾಗಿತ್ತು.
ಅಜ್ಜ ಮಾತ್ರ ಪರಮ ಗಾಂಧೀವಾದಿಯಾಗಿದ್ದು, ಸದಾ ಖದ್ದರ್ ಉಡುಪನ್ನೇ ತೊಡುತ್ತಿದ್ದರು. ಪಿ.ಕೆ.ಉಚ್ಚಿಲ್ ಎಂದು ನಾಮಾಂಕಿತರಾದ ಅವರೂ,
ಅವರ ತಮ್ಮ, ಸ್ವಾತಂತ್ರ್ಯಯೋಧ ಕರುಣಾಕರಜ್ಜನೂ ಸದಾ ಖಾದಿಧಾರಿ. ಉಚ್ಚಿಲ ಶಾಲೆಯ ಕೆಲಸದಲ್ಲಿ ಈ ಅಜ್ಜಂದಿರೆಲ್ಲ ನನ್ನ ತಂದೆಯ ಸಹವರ್ತಿಗಳಾಗಿದ್ದರು.
ತಲೆಬಾಡಿಯ ಹಿರಿಯಾಸ್ತಿ ಹಂಚಿಹೋಗಿ ಈಗಲ್ಲಿ ಹಲವು ಮನೆಗಳೆದ್ದಿವೆ.
ಉಳಿದಿರುವವರಲ್ಲಿ
ಶತಾಯುಷ್ಯದತ್ತ ನಡೆದಿರುವ ತೊಂಭತ್ತೇಳರ ಹಿರಿಯಜ್ಜ ನಾರಾಯಣಜ್ಜ ನಮ್ಮ ಸಮಾಜದ ಆಗುಹೋಗುಗಳ ಬಗ್ಗೆ, ರೀತಿ, ರಿವಾಜುಗಳ ಬಗ್ಗೆ ನಿಜವಾದ ಮಾಹಿತಿಕೋಶದಂತಿದ್ದಾರೆ. ತೊಂಭತ್ತೈದರ
ಕರುಣಾಕರಜ್ಜ,
ಹೆದ್ದಾರಿಯ ಬಳಿಯ ತಮ್ಮ ಮನೆಯಲ್ಲಿ, ನಮ್ಮ ನೆರೆಯಲ್ಲಿ
ವಾಸವಾಗಿದ್ದಾರೆ.
ಸದಾ ಎವರ್‌ಗ್ರೀನ್ ಹೀರೋನಂತಿದ್ದ ಕಿರಿಯ ಮನೋಜಜ್ಜ ಈಗ ಸ್ವಲ್ಪ ನಲುಗಿದ್ದಾರೆ. ಈ ಎಲ್ಲ ಅಜ್ಜಂದಿರ ಓರ್ವಳೇ ಸೋದರಿಯ ಮಗಳು ಶಾರದ ಚಿಕ್ಕಮ್ಮನ ಹೆಸರಲ್ಲಿ 'ಶಾರದಾ ನಿವಾಸ' ಎದ್ದು ನಿಂತಿದೆ. ಚೆಲುವಾದ ಹಳೆಯ ತಲೆಬಾಡಿ ಮನೆ ಅಳಿಸಲ್ಪಟ್ಟು, ಅದರ ಸ್ಥಾನದಲ್ಲಿ ಹೊಸದಾದ ' ಶಾರದಾ ನಿವಾಸ '
ಚೆಲುವಾಗಿಯೇ ಇದೆ; ಆದರೂ ಹಳೆಯದನ್ನು ಮೋಹಿಸುವ ನನ್ನ ಕಣ್ಗಳು ಅಲ್ಲಿ ಹಳೆಯ ತಲೆಬಾಡಿ
ಮನೆಯನ್ನು ಅರಸುತ್ತಿವೆ.
(ಮುಂದುವರಿಯಲಿದೆ)
ಅಷ್ಟೊಂದು ಅಜ್ಜಂದಿರಿರುವ ನೀವೇ ಧನ್ಯರು
ReplyDelete