[ಜಿಟಿ ನಾರಾಯಣ ರಾಯರಿಂದ ಸಂಪಾದಕೀಯ ಟಿಪ್ಪಣಿ: ವೃತ್ತಿಪ್ರಕಾಶಕರು ಅನುಭವದಿಂದ ಕಲಿಯುವ ಪಾಠ ಒಂದುಂಟು. ಬದುಕಿನಲ್ಲಿ ಬಿಟ್ಟಿ ಕೂಳಿಲ್ಲ (ಬೌತವಿಜ್ಞಾನದಲ್ಲಿ ಇದು ಉಷ್ಣಗತಿವಿಜ್ಞಾನದ ಎರಡನೆಯ ನಿಯಮ ಎಂಬ ಗಂಭೀರ ಅಭಿಧಾನ ಹೊತ್ತು ಸಿದ್ಧಾಂತಕೋವಿದರಿಗೂ ತಂತ್ರವಿದ್ಯಾಪಾರಂಗತರಿಗೂ ಏಕ ರೀತಿಯ ಸವಾಲಾಗಿದೆ. ಹುಸಿ/ಹಸಿ ವಿಜ್ಞಾನಿಗಳಿಗಾದರೋ ಕಲ್ಪನಾಲೋಕಕ್ಕೆ ಜಿಗಿಯಲು ಅದ್ಭುತ ರಾಕೆಟ್ಟನ್ನು ಒದಗಿಸಿದೆ!) ಹವ್ಯಾಸಿ ಪ್ರಕಾಶಕರು ಹೀಗಲ್ಲ: ಪುಸ್ತಕ ಪ್ರಕಾಶನ ಇವರಿಗೆ ಜೀವನಯಾಪನೆಯ ಮಾರ್ಗವಲ್ಲ. ಬದಲು, ಸರಸ್ವತೀ ಪೂಜಾ ಕೈಂಕರ್ಯ. ಉದ್ದೇಶ ಘನ ನಿಜ, ನಿರ್ವಹಣೆ? ಬದುಕಿನಲ್ಲಿ ಬಿಟ್ಟಿ ಕೂಳು ಗಳಿಸಲು ಹಲಬಗೆಯ ತಂತ್ರಗಳ ಅನ್ವೇಷಣೆ, ಹೇಗೂ ಇರಲಿ, ಇಂಥ ಜ್ಞಾನಸೇವಕರು ಗಮನಿಸಲೇ ಬೇಕಾದ ಒಂದು ವ್ಯಾಪಾರ ಸೂತ್ರವಿದೆ: ಪುಸ್ತಕದ ಹೂರಣ ತೋರಣಗಳು ಗಟ್ಟಿ ಆಗಿದ್ದು ಗ್ರಾಹಕರ ಆವಶ್ಯಕತೆಗೆ ಪೂರೈಕೆ ಆಗುವಂತಿರಬೇಕು. ಮತ್ತು ಈ ನೆಲೆಯಲ್ಲಿ ಮಾರಾಟ ಬೆಲೆ, ವ್ಯಾಪಾರ ವಟ್ಟಾ, ಸಾಗಣೆ ವೆಚ್ಚ ಮುಂತಾದವು ನಿಗದಿ ಆಗಬೇಕು. ಇದಲ್ಲವಾದರೆ ಹವ್ಯಾಸಿಗೆ (ಹವೆ+ಆಸಿ) ಉಳಿಯುವುದು ಕೇವಲ ಅಹವೆಯ ಆಸೆ ಮತ್ತು ಹತಾಶೆ]
ಉಡುಪಿಯ ಫಲಿಮಾರು ಮಠಕ್ಕೆ ದಿನಾಂಕ ೩೦-೮-೧೯೯೬ರಂದು ನಾನು ಬರೆದ ಪತ್ರ:
ನಾನು ವೃತ್ತಿ ಪುಸ್ತಕ ವ್ಯಾಪಾರಿ, ನಿಮ್ಮ ಪ್ರಕಟಣೆ – ತಂತ್ರಸಾರವನ್ನು, ಮಠಕ್ಕೆ ಹೆಚ್ಚು ಹತ್ತಿರದವರೂ ನನ್ನ ಹಿತೈಷಿಗಳೂ ಆಗಿರುವ ಎಚ್.ಕೃಷ್ಣ ಭಟ್ಟರ ಮೂಲಕ ಅನೇಕ ಸಲ ತರಿಸಿ ಮಾರಿದವನು. ಅವರು ರಾಗೋಪೈ ಸಂಶೋಧನ ಕೇಂದ್ರದ ವ್ಯವಸ್ಥೆಯನ್ನು ನನಗಾಗಿ ಇದಕ್ಕೆ ಬಳಸಿಕೊಂಡಿದ್ದಾರೆ. ಹಾಗೇ ಈ ಬಾರಿ ೧೫ ಪ್ರತಿ ತರಿಸಿಕೊಂಡೆ. ಪ್ರತಿಸಲವೂ ನೀವು ಪುಸ್ತಕೋದ್ಯಮದ ಸರ್ವಸಮ್ಮತ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ನನ್ನಷ್ಟಕ್ಕೇ ಅಸಮಾಧಾನಪಟ್ಟುಕೊಂಡಿದ್ದೆ. ಆದರೆ ಈ ಬಾರಿ ಮುದ್ರಿತ ಬೆಲೆ ರೂ ೧೦೦ನ್ನು ಮುದ್ರೆ ಹೊಡೆದು ರೂ ೧೨೫ಕ್ಕೆ ಏರಿಸಿದ್ದು ಮತ್ತು ವ್ಯಾಪಾರೀ ವಟ್ಟಾದಲ್ಲಿ ನನಗೆ ಹನ್ನೆರಡೂವರೆ ಶತಾಂಶ ಮಾತ್ರ ಸಿಕ್ಕುವಂತೆ ಇಳಿಸಿದ್ದು ನನ್ನನ್ನು ತೀವ್ರವಾಗಿ ತಟ್ಟಿದೆ. ದಯವಿಟ್ಟು ನನ್ನ ದೀರ್ಘ ವಿವರಣೆಯನ್ನು ಮನಗೊಟ್ಟು ಓದಿ ಸಹಾಯಕ್ಕೆ ಒದಗುವಿರೆಂದು ಭಾವಿಸುತ್ತೇನೆ.
ನಾಲ್ಕು ಪುಸ್ತಕ ಮಾರಿದ ಕೂಡಲೇ ಯಾರಿಗೂ ಪುಸ್ತಕವ್ಯಾಪಾರಿ ಪಟ್ಟ ಬರಲಾರದು. ಆತ ಸಾರ್ವಜನಿಕರ ಅಗತ್ಯಗಳನ್ನು ಊಹಿಸಿ, ವಿವಿಧ ಬಗೆಯ ಪುಸ್ತಕಗಳನ್ನು ಹಲವಾರು ಸ್ಥಳಗಳಿಂದ ತರಿಸಿ, ವ್ಯವಸ್ಥಿತವಾಗಿ ನೆರಹಬೇಕು. ಇದಕ್ಕೆ ಆತ ತನ್ನ ಸಂಸ್ಕಾರ, ವೇಳೆ ಮತ್ತು ಹಣಗಳನ್ನು ದೊಡ್ಡ ರೂಪದಲ್ಲಿ ಸದಾ ಹೂಡುತ್ತಿರಬೇಕು. ಅನಂತರ ಈ ಒಟ್ಟಣೆಯನ್ನು ಊಹಿಸಿದಷ್ಟೇ ಅಲ್ಲವಾದರೂ ಬಹ್ವಂಶ ಮಾರಿ ಮುಗಿಸುವುದರಲ್ಲಿ ವ್ಯಾಪಾರಿತ್ವ ಬರುತ್ತದೆ. ಕಣಜ ತುಂಬುವ ಕ್ರಿಯೆ ಒಮ್ಮೆಗೆ ದೊಡ್ಡದಿರುತ್ತದೆ. ಆದರೆ ಕರಗುವ ಕ್ರಿಯೆ ದೀರ್ಘಕಾಲೀನ, ಸಣ್ಣ ಕಂತುಗಳು. ಅದರಲ್ಲೂ ಅಂದಾಜು ಎಲ್ಲೂ ಎಡವಬಹುದು. ಮೂರೇ ಹೋಗುವಲ್ಲಿ ಹತ್ತು ಪ್ರತಿ ತರಿಸಿದ್ದಿರಬಹುದು. ಮಾರಿ ಹೋಗುವ ಅವಧಿ ತಿಂಗಳು ಮಾತ್ರ ಎಂದುಕೊಂಡಲ್ಲಿ ವರ್ಷವೇ ಸಲ್ಲುವುದಿದೆ. ಗಟ್ಟಿ ಎಂದುಕೊಂಡ ಸಾಹಿತ್ಯ ಜಳ್ಳಾಗಿರಬಹುದು. ಒಳ್ಳೆಯದೇ ಇದ್ದು ಗಿರಾಕಿ ಖಾಯಿಸು ಮಾಡದಿರಬಹುದು. ಹಾಗೆಂದು ತರಿಸಿದ್ದೆಲ್ಲ ಮಾರಿ ಮುಗಿದ ಮೇಲೇ ಇನ್ನಷ್ಟು ತರಿಸಿಯೇನು ಎಂಬ ನಿಲವೂ ಸಾಧುವಲ್ಲ. ಜಿನಸಿನ ಅಂಗಡಿಯವನು ಅಕ್ಕಿಯನ್ನೋ ಬೆಲ್ಲವನ್ನೋ ಮೂಟೆ ಖಾಲಿಯಾಗುವವರೆಗೆ ಮಾರಬಹುದು. ಗಿರಾಕಿ ಹೊಸ ದಾಸ್ತಾನಿಗೆ ಕಾದಾನು; ಅವು ಆವಶ್ಯಕ ವಸ್ತುಗಳು. ಪುಸ್ತಕ ಹಾಗಲ್ಲ. ಹೆಚ್ಚಿನ ಪುಸ್ತಕಾಂಕ್ಷಿಗಳಿಗೆ ಅಂದಂದಿನ ಪ್ರಭಾವಳಿಗಷ್ಟೇ ವರ್ತಿಸಿ ಗೊತ್ತು. ಇವರು ಒಮ್ಮೆ ಕೇಳಿದಾಗ ಇಲ್ಲ ಎಂದರೆ ತಿರುಗಿ ಬಂದಾರೆಂಬ ವಿಶ್ವಾಸವಿಲ್ಲ. ಹೇಗಾದರೂ ಆ ಪುಸ್ತಕವನ್ನು ಪಡೆಯಬೇಕೆಂದು ಛಲ ಹಿಡಿಯುವವರ ಸಂಖ್ಯೆ ಸದಾ ಇಳಿಮುಖದಲ್ಲೇ ಇರುತ್ತದೆ. ನಿಮಗೆಲ್ಲ ತಿಳಿದೇ ಇರುವ ಕಬ್ಯಾಡಿಯವರ ಪ್ರಶ್ನಮಾರ್ಗಂ ಪುಸ್ತಕದ್ದೇ ಸಣ್ಣ ಉದಾಹರಣೆ ನೋಡಿ: ಅದು ಮರುಮುದ್ರಣ ಬಂತೆಂಬ ಜಾಹೀರಾತು ನೋಡಿದ್ದೇ ಜನ ಸಮೀಪದ ಪುಸ್ತಕದ ಅಂಗಡಿಗಳಿಗೆ ಧಾವಿಸಿದರು. ನನಗೆ ಸಕಾಲಕ್ಕೆ ಪ್ರತಿಗಳು ಮುಟ್ಟಿದ್ದುವು. ಬಿರುಸಿನ ವ್ಯಾಪಾರ ನಡೆಸಿದೆ. ಅದೇ ಪುತ್ತೂರಿನ ಶೋಭಾ ಪುಸ್ತಕ ಭಂಡಾರದವರಿಗೆ ಆ ಪುಸ್ತಕದ ಪ್ರತಿಗಳು ಸಕಾಲದಲ್ಲಿ ಮುಟ್ಟಲಿಲ್ಲ. ಮುಂದೆ ಮುಟ್ಟಿದಾಗ ಗಿರಾಕಿಗಳು ಉಳಿದಿರಲಿಲ್ಲ! ಎಲ್ಲೋ ಕೆಲವರು ಮಂಗಳೂರಿನ ದೂರಕ್ಕೆ ಬಂದು ನನ್ನಲ್ಲಿ ಕೊಂಡಿರಬಹುದು, ಹೆಚ್ಚಿನವರು ಪುಸ್ತಕದ ಯೋಚನೆಯನ್ನೇ ಬಿಟ್ಟರು. ಅಂಥ ಸಂದರ್ಭಗಳಲ್ಲಿ `ಎಲ್ಲಿಲ್ಲದಿದ್ದರೂ ಅತ್ರಿಯಲ್ಲಿ ಸಿಗುತ್ತದೆ’ ಎಂಬ ತಪ್ಪು ಅಭಿಪ್ರಾಯ ಸಾಮಾನ್ಯರಲ್ಲಿ ಬೆಳೆಯುವುದೂ ಇದೆ. ಈ ನಿರಂತರತೆ ನಮ್ಮ ಬಗ್ಗೆ ವಿಶ್ವಾಸಾರ್ಹತೆಯನ್ನು ಬೆಳೆಸುವುದಂತೂ ನಿಜ. ಜಾಹೀರಾತಿನ ಹೊಳೆ ಹರಿಸಿ, ಅಂಕಿ ಅಂಶಗಳ ಮಾಯಾಜಾಲ ಹರಡಿ ಗಿರಾಕಿ ಹೊಡೆಯುವ ದಂಧೆ ಪುಸ್ತಕ ಲೋಕದಲ್ಲಿ ಇಲ್ಲ.
ನಿಮ್ಮದು ಪ್ರಧಾನ ಗುರಿ ಭಕ್ತಿಯಾದರೆ ನನ್ನದು ಜ್ಞಾನ. ಭಕ್ತಿ ಪಾರಮ್ಯಕ್ಕೆ ಜ್ಞಾನಮಾರ್ಗವನ್ನು ತೋರುವಂತೆ ನೀವು ಪ್ರಕಾಶನಕ್ಕಿಳಿದಿದ್ದೀರಿ. ನಾನು ಭಕ್ತಿ ಸಹಾಯಕವಾಗುವ ಸಾವಿರಾರು ಪುಸ್ತಕಗಳನ್ನು ಸೇರಿಸುವಲ್ಲಿ ಮಾತ್ರ ನಿಮ್ಮೊಡನೆ ಇದ್ದೇನೆ. ವಾಸ್ತವದಲ್ಲಿ ಜ್ಞಾನ-ಭಕ್ತಿಗಳು ಪರಸ್ಪರ ಪೂರಕ, ಸ್ಪರ್ಧಿಗಳಂತೂ ಅಲ್ಲವೇ ಅಲ್ಲ. ಹಾಗಿರುವಾಗ ನನ್ನಂಥವರ, ಅಂದರೆ ಪುಸ್ತಕ ವ್ಯಾಪಾರಿಗಳ, ಆವಶ್ಯಕತೆಯ ಒಂದಂಶವನ್ನು ಪೂರೈಸಬಲ್ಲ ಪ್ರಕಾಶಕರಾದ ನೀವು ವಿರೋಧಿಯಾಗಿ ಕಾಣುತ್ತಿರುವುದು ಕೇವಲ ವಿಶ್ಲೇಷಣೆಯ ಕೊರತೆಯಿಂದ ಎಂದು ಭಾವಿಸಿ ಇಷ್ಟು ಬರೆಯುತ್ತಿದ್ದೇನೆ.
ಮಾರಿ ಹೋಗುವ ಪ್ರತಿ ಪುಸ್ತಕದ ಲಾಭಾಂಶದಲ್ಲಿ ಮಾರಿಹೋಗದ ಅಷ್ಟೂ ಪುಸ್ತಕ ರಾಶಿ ಪಾಲು ಕೇಳುತ್ತದೆ. ಅಂದರೆ, ನಿರ್ವಹಣೆ ಖರ್ಚುಗಳಾದ ಮಳಿಗೆ ಬಾಡಿಗೆ, ವಿದ್ಯುತ್, ಸಾಗಣೆ ಹಾಗೂ ಬ್ಯಾಂಕ್ ವೆಚ್ಚ, ಸಹಾಯಕರ ಸಂಬಳ, ಅವಲಂಬಿಗಳ ಜೀವನ ವೆಚ್ಚ ಇತ್ಯಾದಿ ಇತ್ಯಾದಿ. ನಾನು ಒಂದೊಂದನ್ನೂ ಗುಣ, ವಟ್ಟಾದರ, ಖರ್ಚಿನ ಹೊರೆ ಎಣಿಸಿಯೇ ಕೊಂಡು ತಂದರೂ ಮಾರುವಾಗ ಅವು ಅಂಗಡಿಯ ಅಂಶವೇ ಆಗುವುದು ಅನಿವಾರ್ಯವಾಗುತ್ತದೆ. ಇದನ್ನು ಮಥಿಸಿಯೇ ಪುಸ್ತಕರಂಗ ಬಲು ಹಿಂದಿನಿಂದ ವ್ಯಾಪಾರಿ ವಟ್ಟಾವನ್ನು ೩೩.೩೩%, ಅಂದರೆ ಮುದ್ರಿತ ಬೆಲೆಯ ಮೂರನೇ ಒಂದಂಶವೆಂದೇ ನಿಗದಿಸಿದೆ. ಹಾಗೇ ಯಾವುದೇ ಆಡಳಿತ ವ್ಯವಸ್ಥೆ ಪುಸ್ತಕಗಳಿಗೆ ಕರಭಾರ ಹೇರಿದ್ದೂ ಇಲ್ಲ. ಸಹಾಯ, ಬಹುಮಾನ, ಸಮ್ಮಾನಗಳು ಪುಸ್ತಕಲೋಕಕ್ಕೆ ಸಂದಷ್ಟು ಜಗತ್ತಿನಲ್ಲೇ ಇನ್ಯಾವ ರಂಗಕ್ಕೂ ಸಂದದ್ದಿಲ್ಲ. ಸಂಪ್ರದಾಯ ಶರಣರೂ ಅದರ ನಿರ್ದೇಶಕರೂ ಆದ ನೀವು ಪುಸ್ತಕಲೋಕದಲ್ಲಿ ಸಂಪ್ರದಾಯವನ್ನು ಬುದ್ಧಿಪೂರ್ವಕ ಮುರಿಯುವುದನ್ನು ನಾನಂತೂ ಊಹಿಸಲಾರೆ. ಪುಸ್ತಕ ತಯಾರಿಯ ಖರ್ಚಿನ ಅನಿವಾರ್ಯತೆಯನ್ನು ಅಂದರೆ, ಅಚ್ಚುಕೂಟದ ವೆಚ್ಚ, ಲೇಖಕನ ಸಂಭಾವನೆ ಇತ್ಯಾದಿ ಒಪ್ಪಿಕೊಳ್ಳುವಷ್ಟೇ ಸಹಜವಾಗಿ ನೀವು ವ್ಯಾಪಾರಿ ವಟ್ಟಾವನ್ನು ಒಪ್ಪಿ ನಡೆಸಿ.
ಭಕ್ತರಿಗಾಗಿ ಪುಸ್ತಕ ಪ್ರಪಂಚಕ್ಕಿಳಿದ ಮಠಗಳ ಪಟ್ಟಿ ಸಾಕಷ್ಟು ದೊಡ್ಡದೇ ಇದೆ. ರಾಮಕೃಷ್ಣ ಮಠ ರಾಷ್ಟ್ರ ಮಟ್ಟದಲ್ಲಿ, ಬೈಬಲ್ ಸೊಸಾಯಿಟಿಗಳು ಜಾಗತಿಕ ಮಟ್ಟದಲ್ಲಿ ಅದ್ವಿತೀಯ ಕೆಲಸ ನಡೆಸಿರುವುದು ನಿಮಗೆ ಗೊತ್ತಿಲ್ಲದ್ದೇನೂ ಅಲ್ಲ. ಇವರ ವ್ಯಾಪಾರೀ ಸಹಯೋಗ ತುಂಬ ಚೆನ್ನಾಗಿದೆ. ಗುಜರಾತಿನಲ್ಲೊಂದು ಪಾದ್ರಿಗಳ ಕೂಟದ ಪ್ರಕಾಶನ ಸಂಸ್ಥೆಯಿದೆ. ಇದರ ಲೇಖಕ ವರ್ಗ ಕ್ರೈಸ್ತರೇ ಆದರೂ ಬಹುತೇಕ ಪ್ರಕಟಣೆಗಳು ಮಾನವ ಧರ್ಮ ಪ್ರತಿಪಾದನೆಯವೇ ಆಗಿವೆ. ಅವರಿಗೆ ನಾನು ಪೂರ್ಣ ಅಪರಿಚಿತ. ಆದರೂ ಅವರು ನನ್ನಿಂದ ಮುಂಗಡ ಕೇಳದೇ ಅವರದೇ ಖರ್ಚಿನಲ್ಲಿ ನಾನು ಕೇಳಿದ ಪುಸ್ತಕಗಳನ್ನು ನೇರ ಕಳಿಸುತ್ತಾರೆ. ಅವರು ಕೊಡುವ ವ್ಯಾಪಾರಿ ವಟ್ಟಾ ೨೫% ಆದರೂ ಅದರ ನಿಜಮೌಲ್ಯ ೩೫% (ಸಾಗಣೆ, ಬ್ಯಾಂಕ್ ವೆಚ್ಚವಿಲ್ಲ, ಮುಂಗಡದ ರಗಳೆಯೂ ಇಲ್ಲ) ಎಂದರೆ ಅತಿಶಯೋಕ್ತಿಯಾಗದು. ಇಂಥವರ ಕಡಿಮೆ ಬೆಲೆಯ, ಉದಾತ್ತ ಪುಸ್ತಕ ಕೊಂಡವರು ತರಿಸಿ ಇಟ್ಟದ್ದಕ್ಕೆ ನನ್ನನ್ನು ಸ್ಮರಿಸಿದರೂ ಪರಮಗೌರವ ಸಲ್ಲುವುದು ಪ್ರಕಟಿಸಿದ ಮಠಕ್ಕೇ ಸರಿ. ನಿಮ್ಮ ಅಥವಾ ನಿಮ್ಮ ಶಿಷ್ಯ ವರ್ಗದ ಔದಾರ್ಯವನ್ನು ಬರಿಯ ಎರಡು ಕೈಗಳಲ್ಲಿ ಹಂಚಿ ಬಳಲಬೇಡಿ, ನಮ್ಮ ಮೂಲಕ ಸಹಸ್ರಬಾಹುಗಳಾಗಿ.
ವ್ಯಕ್ತಿಯನ್ನೂ ವೃತ್ತಿಪರ ಸಂಸ್ಥೆಯನ್ನೂ ಒಂದೇ ಮಾನದಲ್ಲಿ ಅಳೆಯಬೇಡಿ. ನಿಮ್ಮ ಸೇವಾ ಸಂಕಲ್ಪದ ಹೊರೆ ವ್ಯಕ್ತಿಗೆ ಪೂರ್ಣ ಬೀಳದಂತೆ ನೀವು ಮುದ್ರಿತ ಬೆಲೆಯಲ್ಲಿ ರಿಯಾಯಿತಿ ತೋರಬಹುದು. ಹಾಗೇ ಪುಸ್ತಕ ವ್ಯಾಪಾರಿಗೂ ರಕ್ಷಣೆ ಕೊಡಿ. ಪ್ರತಿಯೋರ್ವ ವಿಚಾರವಂತನಿಗೂ ಅವನದೇ ಲೌಕಿಕ, ಪಾರಲೌಕಿಕ ಯೋಜನೆಗಳು ಇರುತ್ತವೆ. ಸಮಾಜ ವ್ಯವಸ್ಥೆ ಒಪ್ಪಿಕೊಂಡವರು ಪರಸ್ಪರ ವಿರುದ್ಧ ಯೋಜನೆಯವರನ್ನು ಪ್ರಭಾವಿಸಲು ಪ್ರಯತ್ನಿಸಬಹುದು, ವಿನಾ ಖಂಡಿಸಲು ಅಲ್ಲ. ನೀವು ಪ್ರಾಮಾಣಿಕವಾಗಿ ಕೃಷ್ಣ ಭಕ್ತಿ ಪ್ರಸರಣಕ್ಕೆ ತೊಡಗಿಸಿದಂತೆ, ನಾನು ವಿಜ್ಞಾನದ ಮೂಲಕ ವೈಚಾರಿಕತೆಯನ್ನು ಜನರಲ್ಲಿ ಹರಡಲು ಸಂಕಲ್ಪಿಸಿದವನಿದ್ದೇನೆ. ಲಗತ್ತಿಸಿದ ಪಟ್ಟಿ ನೋಡಿ. ಈ ಪುಸ್ತಕಗಳನ್ನು ಪೂರ್ತಿ ನನ್ನ ಖರ್ಚಿನಲ್ಲಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಲೋಕಾರ್ಪಣಗೊಳಿಸುತ್ತಿದ್ದೇನೆ. ಆದರೂ ಇತರ ಪುಸ್ತಕ ವ್ಯಾಪಾರಿಗಳಿಗೆ ೩೩.೩೩% ವಟ್ಟಾ ಕೊಡುವುದರಲ್ಲಿ ಹಿಂಜರಿದಿಲ್ಲ. ಇವುಗಳಲ್ಲಿ ಕಾಗದ ಮತ್ತು ಮುದ್ರಣ ವೆಚ್ಚಗಳನ್ನು ನಾನು ಮಾರುಕಟ್ಟೆಯ ದರದಲ್ಲೇ ಕೊಡುತ್ತಿದ್ದೇನೆ. ಬಹುತೇಕ ಲೇಖನ ಹಾಗೂ ಒಟ್ಟಾರೆ ಸಂಪಾದನೆಯ ಹೊಣೆಗಾರಿಕೆಯನ್ನು ಮಾತ್ರ ತಂದೆ – ಜಿಟಿ ನಾರಾಯಣ ರಾವ್, ಯಾವುದೇ ಸಂಭಾವನೆ ಇಲ್ಲದೇ ನಡೆಸಿಕೊಡುತ್ತಿದ್ದಾರೆ. ನನ್ನ ಪ್ರಕಟಣೆಗಳಲ್ಲಿ ತೀರಾ ಹೊಸತು (೧೯೯೬) – ಸೂಪರ್ನೋವಾ, ಇದನ್ನು ಉದಾಹರಣೆಯಾಗಿ ಗಮನಿಸಿ. ನಕ್ಷತ್ರಗಳ ಹುಟ್ಟು, ಸಾವಿನ ಬಗ್ಗೆ ನಿಖರ ಮಾಹಿತಿ ಕೊಡಲು ೧೭೬ ಪುಟ, ೨೯ ಚಿತ್ರ, ಸುಂದರ ಡಿಟಿಪಿ ಮುದ್ರಣದೊಡನೆ ಬಂದೂ ಬೆಲೆ ಕೇವಲ ರೂ ೨೪. ಅದೇ ನೀವು ತಂತ್ರಸಾರದ ಮುದ್ರಿತ ಬೆಲೆಯನ್ನೇ ಏರಿಸಿ ಭಕ್ತರೊಡನೆ ಎರಡು ಮಾತಾಡಿದಂತೆ, ವಟ್ಟಾದರ ಕಡಿದು ನನ್ನ ವಿಚಾರ ಸ್ವಾತಂತ್ರ್ಯವನ್ನೇ ಧಿಕ್ಕರಿಸಿದಂತೆ ಆಗಿದೆ. ಇದು ನಿಮ್ಮ ಪರಮಗುರಿ ಸಾಧನೆಯ ದಾರಿಯಲ್ಲಿ ತಪ್ಪಿ, ಕೆಸರು ಮೆಟ್ಟಿದಂತಾಗಿದೆ.
ಭಗವಂತನ ನಲ್ನುಡಿ ಇತ್ಯಾದಿ ಪ್ರಕಟಿಸಿದ ಪುತ್ತಿಗೆ ಮಠದವರೂ ಇಂಥದ್ದೇ ಅನುದ್ದೇಶಿತ ತಪ್ಪು ಮಾಡಿದ್ದರು. ನಾನು ಪತ್ರ ಬರೆದಾಗ ಸ್ವಾಮಿಗಳು ಮಂಗಳೂರು ಮೊಕ್ಕಾಂನಲ್ಲಿದ್ದರು. ಅಲ್ಲಿಗೇ ದೂರವಾಣಿ ಸಂಭಾಷಣೆ ನಡೆಸಿದ್ದೆ. ಸ್ವಾಮಿಗಳು ಒಪ್ಪಿಕೊಂಡರು. ಈಗ ಅವರ ಪ್ರಕಟಣೆಗಳನ್ನು ಚೆನ್ನಾಗಿಯೇ ನಡೆಸಿಕೊಡುತ್ತಿದ್ದಾರೆ. ಈ ಕುರಿತು ಸುಬ್ರಹ್ಮಣ್ಯ ಮಠಾಧೀಶರಲ್ಲೂ ತಾವು ಅವಶ್ಯ ವಿಚಾರ ವಿನಿಮಯ ನಡೆಸಬಹುದು. ನಿಮ್ಮೆಲ್ಲ ಪ್ರಕಟಣೆಗಳ ಪಟ್ಟಿ ಕಳಿಸಿ, ಕಾಲಕಾಲಕ್ಕೆ ಹೊಸ ಸೇರ್ಪಡೆಗಳ ವಿವರ ತಿಳಿಸಿ. ನನ್ನ ಬೇಡಿಕೆ ತಲಪಿದ್ದೇ ಪುಸ್ತಕಗಳನ್ನು ೩೩.೩೩% ವಟ್ಟಾ ಸಹಿತ ಬಿಲ್ ಮಾಡಿ ನನ್ನಲ್ಲಿಗೆ ಪ್ರತಿನಿಧಿ ಮೂಲಕವೋ ಲಾರಿ ಮೂಲಕವೋ ಕಳಿಸಿಕೊಡಿ. ಅದೇ ಪ್ರತಿನಿಧಿ ಮೂಲಕ ಅಥವಾ ಮರುಟಪಾಲಿಗೆ ನೀವು ಸೂಚಿಸಿದಂತೇ ಪಾವತಿ ಕಳಿಸಲು ನಾನು ಸದಾ ಬದ್ಧ. ಜಿಜ್ಞಾಸುಪ್ರಿಯನಾದ ಕೃಷ್ಣನ ಸೇವಕರಾದ ನೀವು ನ್ಯಾಯ ಸಲ್ಲಿಸುವಿರೆಂಬ ಭರವಸೆ ನನಗಿದೆ.
೬-೯-೧೯೯೬ರಂದು ಫಲಿಮಾರು ಮಠದ ಮ್ಯಾನೇಜರರಿಂದ ಜಾರಿಕೆಯ ಮಾತುಗಳ ಚುಟುಕು ಪತ್ರ ಬಂತು. ಅದಕ್ಕೆ ಪ್ರತಿಕ್ರಿಯೆಯಾಗಿ ೧೨-೯-೧೯೯೬ರಂದು ಮತ್ತೆ ನಾನು ಬರೆದ ಪತ್ರ:
ನಿಮ್ಮ ಸಹೃದಯ ಪ್ರತಿಕ್ರಿಯೆಗೆ ಕೃತಜ್ಞತೆಗಳು. ಪ್ರಕಾಶನದಲ್ಲಿ ನೀವು ಉಳಿಸಿಕೊಳ್ಳಬಯಸುವ ಖಾಸಗಿತನವನ್ನು ನಾನು ಒಪ್ಪಬಹುದಿತ್ತು. ಹಾಗೇ ವ್ಯಾಪಾರೀ ಕ್ರಮದ ಬಗ್ಗೆ ನಿಮ್ಮದೇ ಧೋರಣೆ ತಳೆಯುವ ಸ್ವಾತಂತ್ರ್ಯವೂ ನಿಮಗೆ ಖಂಡಿತವಾಗಿಯೂ ಇದೆ. ಆದರೆ ೧. ತಂತ್ರಸಾರದ ಲೇಖಕ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಪ್ರವಚನಗಳಿಂದ ಉಡುಪಿಯಿಂದಾಚೆ ಬಲು ದೂರದವರೆಗೂ ಪರಿಚಿತರು. ವೈವಿಧಯಮಯ ವಿಚಾರಗಳಿಂದ, ಅಂದರೆ ಕವನ, ವಿಮರ್ಶೆ, ಅನುವಾದ ಇತ್ಯಾದಿಗಳಿಂದ ಮಠದ ಕಕ್ಷೆ ಮೀರಿ ಒಳ್ಳೆಯ ಬೇಡಿಕೆಯುಳ್ಳ ಲೇಖಕರು. ಇಂಥವರ ಪುಸ್ತಕಗಳನ್ನು ಬರಿಯ ಉಡುಪಿಗೆ ಬರುವ ಶ್ರೀಪಾದರ ಶಿಷ್ಯರ ಮೂಲಕವಷ್ಟೇ ವಿತರಿಸುವುದು ಸರಿಯಾಗದು. ಸಾಲದ್ದಕ್ಕೆ
೨. ತಂತ್ರಸಾರದ ವಿಷಯವಾಗಲೀ ಪ್ರಚಾರವಾಗಲೀ ಮಠದ ಮಿತಿಯೊಳಗೆ ಉಳಿದಿಲ್ಲ. ಇದರ ಮೊದಲ ಆವೃತ್ತಿ - ಮಧ್ವ ಸಿದ್ಧಾಂತ ಗ್ರಂಥಾಲಯದ ಪ್ರಕಟಣೆಯನ್ನು, ಆಗಲೇ ಜನ ಕೊಂಡು ಕೆಲವರ ಮನೆಯಲ್ಲಿ ಸಂಗ್ರಾಹ್ಯವಾಗಿ ಹಲವರ ಮನದಲ್ಲಿ ಬಯಕೆಯಾಗಿ ನೆಲಸಿ ಬಿಟ್ಟಿದೆ. ದ್ವಿತೀಯಾವೃತ್ತಿಯ ಬಿಡುಗಡೆಯ ಸುದ್ಧಿ, ಸಾದರ ಸ್ವೀಕಾರ ಮತ್ತು ವಿಮರ್ಶೆಗಳು ಉದಯವಾಣಿಯಂಥ ಸಾರ್ವಜನಿಕ ಪತ್ರಿಕೆಯಲ್ಲಿ ಬಂದು ವ್ಯಾಪಕ ಪ್ರಚಾರ ಆಗಿದೆ. ಜನರ ನಿರೀಕ್ಷೆಯಲ್ಲಿ ಎಲ್ಲ ಪುಸ್ತಕಗಳಂತೆ ಲಭ್ಯವಿರಬೇಕಾದ್ದನ್ನು ನೀವು ಕೇವಲ ನನಗೆ ಬರೆದ ಪತ್ರದಲ್ಲಷ್ಟೇ ಸೀಮಿತ ವಿತರಣೆ ಸಾಧ್ಯ ಎಂದರೆ ಅದು ಸಾರ್ವಜನಿಕ ವಿತರಣೆಯಾಗುತ್ತದೆಯೇ? ಜನ ನಮ್ಮ ಬಗ್ಗೆ ಆಡಿಕೊಳ್ಳುವುದು ಇರಲಿ, ಮಠದ ಔದಾರ್ಯದ ಬಗ್ಗೆಯೇ ಸಂಶಯದ ಮಾತುಗಳಾಡುತ್ತಾರೆ. ಸರಕಾರಿ ಪುಸ್ತಕ ವಿತರಣೆಯ ವೈಫಲ್ಯವನ್ನು ನೀವು ಅನುಕರಿಸಿದಂತಾಗುತ್ತದೆ. ಅವರು ನೂರಾರು ಸುಲಭ ಬೆಲೆಯ ಪುಸ್ತಕಗಳನ್ನು – ಕೆಲವನ್ನೇ ಹೆಸರಿಸುವುದಿದ್ದರೆ ಶ್ರೀರಾಮಾಯಣ ದರ್ಶನಂ, ಡಿವಿಜಿ ಕೃತಿಶ್ರೇಣಿ, ರತ್ನಕೋಶ ಇತ್ಯಾದಿ, ಅಚ್ಚಿಸಿದರೂ ಮಾಧ್ಯಮಗಳ ಮೂಲಕ ರಂಗಿನ ಪ್ರಚಾರ ಗಿಟ್ಟಿಸಿದರೂ ವಿತರಣೆಯಲ್ಲಿ ಎಲ್ಲಿಂದೆಲ್ಲಿಗೂ ಮೋಸವೇ! ಜಿಲ್ಲಾ ಕೇಂದ್ರಗಳಲ್ಲಿ ಪುಸ್ತಕ ವಿತರಣೆಗೆಂದೇ ತೆರೆದ ಸಂಸ್ಕೃತಿ ಇಲಾಖೆಯ ಶಾಖೆಗೂ ಸರಿಯಾಗಿ ಪುಸ್ತಕ ಮುಟ್ಟಿಸದ, ಬೆಂಗಳೂರಿಗೆ ಹೋದರೂ ಸಕಾಲಕ್ಕೆ ಪುಸ್ತಕ ಒದಗಿಸದ ಸಂಸ್ಕೃತಿ ಇವರದು. ಹಾಗೇ ನಿಮ್ಮ ಮಠದ ಸೇವಾ ಕೈಂಕರ್ಯದಲ್ಲಿ ಪುಸ್ತಕ ವಿತರಣೆ ಒಂದು ಐಬಾಗಿ ಕಾಣಬಾರದು.
೩. ನಾನು ಮೊದಲ ಪತ್ರದಲ್ಲೇ ಬರೆದಂತೆ ಪುಸ್ತಕೋದ್ಯಮ ನಿಮ್ಮ ಪರಮ ಧರ್ಮವಲ್ಲ; ಪರಧರ್ಮ. ದಯವಿಟ್ಟು ಇಲ್ಲಿಯ ಸಂಪ್ರದಾಯ ಉಳಿಸಿಕೊಡಿ. ಇದರ ಕನಿಷ್ಠ ಅಗತ್ಯಗಳನ್ನೇ ನಿರಾಕರಿಸಿ ನೀವು ಗರಿಷ್ಠ ಸೌಲಭ್ಯಗಳ ಮಾತಾಡುವುದು ಸರಿಯಲ್ಲ. ಪುಸ್ತಕೋದ್ಯಮದ ದೊಡ್ಡವರು ಎರಡು ಹಂತದ ವ್ಯಾಪಾರಿ ಧೋರಣೆ ಇಟ್ಟುಕೊಳ್ಳುವುದುಂಟು. ವ್ಯಾಪಾರಿ ಎಂದು ಶ್ರುತಪಟ್ಟಲ್ಲಿ ಕನಿಷ್ಠ ವಟ್ಟಾದರ ಅಂದರೆ, ೩೩.೩೩%, ತಪ್ಪಿಸಿದ್ದಿಲ್ಲ. ಮುಂದುವರಿದು ಮರಿದಾಸ್ತಾನುಗಾರರು ಹುಟ್ಟಿ, ವಿತರಣೆ ವ್ಯಾಪಕವಾಗುವಂತೆಯೂ ತೊಡಗಿಸಿದ ಹಣದ ಬಹ್ವಂಶ ಮೊದಲಲ್ಲೇ ದೊಡ್ಡ ಗಂಟಾಗಿ ಮರಳುವಂತೆಯೂ ಮುಂದಿನ ಪ್ರಕಟಣೆಗಳಿಗೆ ನಿಧಿ ಬಲಗೊಳಿಸುವಂತೆಯೂ ಹೆಚ್ಚಿನ ರಿಯಾಯಿತಿಯ ಸಗಟು ದರ ನಿರ್ಧರಿಸುವುದುಂಟು. ಉದಾಹರಣೆಗೆ ಒಟ್ಟಾರೆ ನೂರು ಪ್ರತಿಗಳ ಮೇಲಾದರೆ ೪೦%, ಬಿಲ್ ಮೊತ್ತ ಹತ್ತು ಸಾವಿರ ಕಳೆದದ್ದೇ ೭% ಏರಿಸುವವರೆಲ್ಲ ಕನ್ನಡ ಪುಸ್ತಕೋದ್ಯಮದಲ್ಲೇ ಇದ್ದಾರೆ!
ವೇದಾಂತದ ಪುಸ್ತಕಗಳು ಎಷ್ಟು ನಮೂನೆಯವು ಬಂದರೂ ಬೇಡಿಕೆ ಹಿಂಗದು. ಆದರೆ ಜನಪ್ರಿಯತೆಯ ಸ್ಪರ್ಧೆಯಲ್ಲಿ ಇವು ಕಾದಂಬರಿ ಅಥವಾ ಆರೋಗ್ಯದ ಪುಸ್ತಕಗಳ ಜೊತೆಗೆ ಹೆಗಲು ಕೊಡಲಾರವು. ಆದರೂ ತಂತ್ರಸಾರವನ್ನು ದೊಡ್ಡ ಸಂಖ್ಯೆಯಲ್ಲಿ ಕೊಳ್ಳಲು ನನಗೆ ಸೂಚಿಸುತ್ತಿದ್ದೀರಿ. ಇದು ರೂ ೧೨೫ರ ದೊಡ್ಡ ಬೆಲೆಯ ಪುಸ್ತಕವಾಗಿ ಮಠಕ್ಕೆ ಏಕೈಕವಿರಬಹುದು. ಆದರೆ ಅಂಗಡಿಯಲ್ಲಿ ಹತ್ತರೊಡನೆ ಒಂದು. ನನ್ನದು ಪುಸ್ತಕವನ್ನು ಕೀಳ್ಗಳೆಯುವ ಮಾತಲ್ಲ, ಓರ್ವ ಬಿಡಿ ಮಾರಾಟಗಾರನ ನಿವೇದನೆ. ನಾನು ಸಗಟು ವಿತರಣೆಗಾರನಲ್ಲವಾದ್ದರಿಂದ ಒಂದೇ ಪುಸ್ತಕದ ಮೇಲೆ ಒಮ್ಮೆಗೇ ಎಂಟೊಂಬತ್ತು ಸಾವಿರ ಹೇಗೆ ಹೂಡಲಿ? ಅಕಸ್ಮಾತ್ ಸಾಲ ಮಾಡಿ ಹೂಡಿದ್ದೇ ಆದರೂ ಈಗಿನ ಅಂದಾಜಿನಲ್ಲಿ ಎಲ್ಲ ಮಾರಿ ನಾನು ಹೂಡಿದ ಹಣ ಹಿಂದೆ ಬರುವಾಗ ಮೂರು ನಾಲ್ಕು ವರ್ಷಗಳಾದರೂ ಸಂದಾವು. ಆಗ ನಿವ್ವಳ ಲಾಭಾಂಶಕ್ಕಿಂತ ಬ್ಯಾಂಕ್ ಬಡ್ಡಿದರದ ನಷ್ಟವೇ ದೊಡ್ಡದಾಗುತ್ತದೆ. ಪುರಾಣಪುರುಷರು ಶಾಪ ಕೊಡುವಾಗಲೂ ಅನುಕಂಪದಿಂದ ವಿಮೋಚನೆಗೆ ದಾರಿ ಇಡುತ್ತಿದ್ದರಂತೆ. ಇನ್ನು ವರವನ್ನೇ ಕೊಡುವುದಿದ್ದರೆ ತಮ್ಮನ್ನೇ ಕೊಡುವಷ್ಟು ಉದಾರವಾಗಿದ್ದುದನ್ನು ಕೇಳಿದ್ದೇನೆ; ಅನುಮಾನದ ಹೆಜ್ಜೆಯಿಟ್ಟವರು ವಿರಳ. ಬಲಿ, ಶಿಬಿ ಮುಂತಾದವರ ಕತೆ ನಿಮಗೆ ನಾನು ಹೇಳಬೇಕೇ. ಶಿಶುಪಾಲನಿಗೆ ನೂರು ಕ್ಷಮೆ ಕೊಟ್ಟವನು ‘ಪಾಂಡವರ ಮನೆಯಲ್ಲಿ ಕುದುರೆಗಳ ತಾ ತೊಳೆದ.’ ಇಂಥವನ ಸೇವಕರ ಅಗ್ರಪಂಕ್ತಿಯಲ್ಲಿರುವ ನೀವು ವಿಷಯವನ್ನು ನಾನು ಇಷ್ಟು ಹಿಂಜಿದ ಮೇಲೆ ವ್ಯಾಪಾರಿ ವಟ್ಟಾ೩೩.೩೩% ಕೊಡಲು ದೊಡ್ಡ ಪ್ರತಿ ಸಂಖ್ಯೆ ನಿಗದಿಸಬಹುದೇ? ನನ್ನೆಲ್ಲ ವಿನಂತಿಗಳು ಕೇವಲ ನನಗಾಗಿಯೇ ಅಲ್ಲ. ಒಟ್ಟಾರೆ ನಿಮ್ಮ ವ್ಯಾಪಾರೀ ಧೋರಣೆ ಉದಾರವಾಗಬೇಕು ಎಂಬುದು ಆಂತರ್ಯ. ಆಗ ಸಹಜವಾಗಿ ನಾನೊಬ್ಬ ಒಮ್ಮೆಗೆ ನೂರು ಪ್ರತಿ ಕೊಳ್ಳದಿದ್ದರೇನು ಇತರ ಪುಸ್ತಕ ವ್ಯಾಪಾರಿಗಳು ಬಂದು ಹಲವು ನೂರುಗಳನ್ನೇ ನಿಮ್ಮಿಂದ ಖರೀದಿಸುವುದು ಖಾತ್ರಿ. ಅಧ್ಯಾತ್ಮ ಪುಸ್ತಕಗಳ ವಿತರಣೆ, ಮಾರಾಟವಷ್ಟೇ ವೃತ್ತಿಯಾಗಿಸಿಕೊಂಡಿರುವ ವೇದಾಂತ ಬುಕ್ ಹೌಸ್, ಕುಲಕರ್ಣಿ ಬುಕ್ ಡಿಪೋ, ಟಿಎನ್ ಕೃಷ್ಣಯ್ಯ ಶೆಟ್ಟಿ ಅಂಡ್ ಸನ್ಸಿನಂಥ ಖ್ಯಾತನಾಮರು ನಿಮ್ಮಲ್ಲಿಗೆ ಬೇಡಿಕೆ ಕಳಿಸಿ ನೀವು ಸಾವಿರಗೈಗಳ ಸರದಾರರಾಗುವುದು ಸಹಜವೂ ಸುಲಭವೂ ಇದೆ.
೪. ಸಾಗಣೆ ಬಗ್ಗೆ ನಿಮಗೆ ಸುಲಭವಾದೀತೆಂಬ ಅಂದಾಜಿನಲ್ಲಿ ಪ್ರತಿನಿಧಿ ಮೂಲಕ ಕಳಿಸಿಕೊಡಿ ಎಂದಿದ್ದೆ. ಸುಬ್ರಹ್ಮಣ್ಯ ಮತ್ತು ಪುತ್ತಿಗೆ ಮಠಾಧೀಶರು ಹೀಗೇ ಕಳಿಸುತ್ತಾರೆ. ಅದು ಬಿಟ್ಟು ಅಂಗಡಿಯ ಒಂದೊಂದೂ ಪುಸ್ತಕ ಸಂಗ್ರಹಿಸಲು ನಾನು ಅಥವಾ ಯಾರೂ ಉಡುಪಿ, ಬೆಂಗಳೂರು, ಮುಂಬೈ, ವಾರಾಣಾಶಿ ಎಂದಿತ್ಯಾದಿ ಓಡಾಡುವುದು ತೀರಾ ಅಪ್ರಾಯೋಗಿಕ. ಇಂದು ಅಂಚೆ, ಕೊರಿಯರ್, ಲಾರಿ, ರೈಲು ಇತ್ಯಾದಿ ಸರಕು ಸಾಗಣೆಯ ಹಲವು ಅಂಗಗಳು ಉಡುಪಿಯಲ್ಲೂ ಸಾಕಷ್ಟು ಬಲವಾಗಿಯೇ ನೆಲೆಸಿವೆ. ಪುಸ್ತಕಗಳಿಗೆ ಪೆಟ್ಟಾಗದಂತೆ ಕಟ್ಟುವ, ಲಾರಿ ತುಂಬುವ ಶ್ರಮವನ್ನಷ್ಟು ನೀವು ಉಡುಪಿಯಲ್ಲೇ ಮಾಡಿದರೆ ಸಾಕು. ಪಾವತಿಯ ವಿಶ್ವಾಸಾರ್ಹತೆಗೆ ಬ್ಯಾಂಕಿನ ಮಧ್ಯವರ್ತಿತ್ವವನ್ನು ನೀವು ಧಾರಾಳ ಬಳಸಿಕೊಳ್ಳಬಹುದು. ಪೆರ್ಲ ಕೃಷ್ಣ ಭಟ್ಟರು ಸಂಪಾದಿಸಿ, ಅನುವಾದಿಸಿ ಕೊಟ್ಟ ಸಾರ್ಥ ಷೋಡಶ ಸಂಸ್ಕಾರ ರತ್ನಮಾಲದ ಉದಾಹರಣೆ ನೋಡಿಯಾದರೂ ನಿಮ್ಮ ನಿಲುವನ್ನು ವಿಮರ್ಶಿಸಿಕೊಳ್ಳಿ. ಇದರ ಮೊದಲ ಮುದ್ರಣದಿಂದ ಇಂದಿನ ಮೂರನೆಯ ಮುದ್ರಣದವರೆಗೂ – ಅದೂ ಮುಗಿದಿದೆ, ಪ್ರಕಟಿಸಿದವರು ವಿಶ್ವಕರ್ಮ ಬ್ರಾಹ್ಮಣ ಸಮಾಜ. ಅವರ ಉದ್ದೇಶ ತಮ್ಮವರಿಗೆ ಒಳ್ಳೆಯ ಆಕರ ಗ್ರಂಥ ಕೊಡುವುದೇ ಇದ್ದರೂ ವಿತರಣೆ ಮಾಡಿದ ಮುಖ್ಯರೆಲ್ಲರೂ ಕೊಂಡ ಬಹುತೇಕ ಓದುಗರೂ ವಿಶ್ವಕರ್ಮೇತರರೇ. ಸ್ವರಸಹಿತ, ಉತ್ತಮ ಕಾಗದ, ಮುದ್ರಣ ಹಾಗೂ ಗಟ್ಟಿ ರಟ್ಟಿನ ಸುಮಾರು ನಾನೂರು ಪುಟಗಳ ಪುಸ್ತಕಕ್ಕೆ ಬೆಲೆ ಕೇವಲ ತೊಂಬತ್ತು ರೂಪಾಯಿ. ವ್ಯಾಪಾರಿ ವಟ್ಟಾವೇನೋ ೨೦% ಕೊಡುತ್ತಾರೆ. ಆದರೆ ನಾನೊಂದು ದೂರವಾಣಿ ಕರೆ ಮಾಡಿದರೆ ಸಾಕು, ಕೇಳಿದಷ್ಟು ಪ್ರತಿಗಳನ್ನು ಅವರದೇ ವೆಚ್ಚದಲ್ಲಿ ಅಂಗಡಿಗೇ ಮುಟ್ಟಿಸುತ್ತಾರೆ. ಇನ್ನೂ ಮುಖ್ಯವಾಗಿ ಅಷ್ಟೂ ಪುಸ್ತಕಗಳ ನಿವ್ವಳ ಮೌಲ್ಯವನ್ನು ಅವು ಮಾರಿಹೋದಮೇಲೇ ನನ್ನಿಂದ ಪಡೆಯುತ್ತಾರೆ. ಇದುವರೆಗೆ ನಾನು ಕನಿಷ್ಠ ಒಂದು ಸಾವಿರ ಪ್ರತಿಗಳಷ್ಟಾದರೂ ಷೋಡಶ ಸಂಸ್ಕಾರ ರತ್ನಮಾಲಾ ಪುಸ್ತಕ ಮಾರಿರಬೇಕು!
ಬೆಂಗಳೂರಿನ ಭಾರತ ದರ್ಶನ ಪ್ರಕಾಶನದ ಉದಾಹರಣೆಯೊಂದಿಗೆ ಪತ್ರ ಮುಗಿಸುತ್ತೇನೆ: ಇವರ ೬೦೦ ಪುಟಗಳ, ಗಟ್ಟಿ ರಟ್ಟಿನ, ಶುದ್ಧ ಮುದ್ರಣದ ಪುಸ್ತಕ ಒಂದಕ್ಕೆ ನಂಬಲಸಾಧ್ಯವಾದ ಬೆಲೆ ರೂ ೨೬ ಮಾತ್ರ. ಇಂಥ ೩೨ ಸಂಪುಟಗಳ ಮಹಾಭಾರತ, ೧೧ ಸಂಪುಟಗಳ ರಾಮಾಯಣ ಮತ್ತೀಗ ಸಮಗ್ರ ಭಾಗವತದ ದಾರಿಯಲ್ಲಿ ಬಂದ ಏಳು ಸಂಪುಟಗಳೆಲ್ಲಕ್ಕೂ ಕಳೆದ ಹದಿನೈದು ವರ್ಷಗಳಿಂದ ನಾನು ಈ ಜಿಲ್ಲೆಯ ಏಕಮಾತ್ರ ಪ್ರತಿನಿಧಿ. ಇವೆಲ್ಲವುಗಳ ಅಮಿತ ದಾಸ್ತಾನನ್ನು ನಾನು ಕೇಳಿದಂದು ಉಚಿತವಾಗಿ ಲಾರಿಯಲ್ಲಿ ಕಳಿಸಿಕೊಡುತ್ತಾರೆ. ವ್ಯಾಪಾರೀ ವಟ್ಟಾ ೧೦%ನ್ನು ನಾನು ಪುಸ್ತಕಗಳು ಮಾರಿಹೋದಂತೆ ಅನಿರ್ದಿಷ್ಟವಾಗಿ ಕೊಟ್ಟರೂ ತೆಗೆದುಕೊಳ್ಳುವ ಔದಾರ್ಯ ಇವರದು. ಹಾಗೇ ಫಲಿಮಾರು ಮಠ ಎನ್ನಿ ಅಥವಾ ಹೃಷಿಕೇಶ ಪ್ರಕಾಶನವೇ ಇರಲಿ, ನನ್ನಂಥವರನ್ನು ಮೇಲಿನ ಉದಾಹರಣೆಗಳಿಗೆ ಸಾಟಿಯಾಗುವಂತೆ ಬೆಳೆಸಿ, ಬಳಸಿಕೊಳ್ಳುವ ಪುಸ್ತಕೋದ್ಯಮಿಯೂ ಆಗಲಿ ಎಂದು ಹಾರೈಸುತ್ತೇನೆ. ಮತ್ತೆ ನಿಮ್ಮ ತಾಳ್ಮೆಯ ಓದು, ವಿಶ್ವಾಸದ ಉತ್ತರ ಕಾದಿರುತ್ತೇನೆ.
ಮಠದಿಂದ ಉತ್ತರ ಬರಲಿಲ್ಲ. ಆದರೆ ಮುಂದೆ ಬನ್ನಂಜೆಯವರದೇ ಖಾಸಗಿ ಪ್ರಕಾಶನ ಈ ಪ್ರಕಟಣೆಯ ವಿತರಣೆಯನ್ನೂ ಶುದ್ಧ ವ್ಯಾವಹಾರಿಕವಾಗಿ ವಹಿಸಿಕೊಂಡದ್ದರಿಂದ ನನ್ನ ಅಹವಾಲು ಕೊನೆಗೊಂಡಿತು. ಮಠದ ಇತರ ಪ್ರಕಟಣೆಗಳ ಚಿಂತೆ ನಾನು ಕಟ್ಟಿಕೊಳ್ಳಲಿಲ್ಲ.
[ಪ್ರಸ್ತುತ ಅಧ್ಯಾಯಕ್ಕೆ ಪೂರಕವಾಗಿ ಸಂಪಾದಕೀಯ ಉದ್ಧರಣ: ಪಾವೆಂ ಆಚಾರ್ಯರ `ಸುಭಾಷಿತ ಚಮತ್ಕಾರ’ದಿಂದ:
ಮೂಲ: ತೀಕ್ಷ್ಣಾದುದ್ವಿಜತೇ ಮೃದೌ ಪರಿಭವತ್ರಾಸಾನ್ನ ಸಂತಿಷ್ಠತೇ
ಮೂರ್ಖಂದ್ವೇಷ್ಟಿ ನಗಚ್ಛತಿ ಪ್ರಣಯಿತಾಮತ್ಯಂತವಿದ್ವತ್ಸ್ವಪಿ
ಶೂರೇಭ್ಯೋಪಥಿಕಂ ಬಿಭೇತುಪಹಸತ್ಯೇಕಾಂತಭೀರೂನಹೋ
ಶ್ರೀರ್ಲಬ್ಧ ಪ್ರಸರೇವ ವೇಶವನಿತಾ ದುಃಖೋಪಚರ್ಯಾಭೃಶಮ್
ಅನುವಾದ: ನಿಷ್ಟುರಗೆ ರೋಸಿ ಹಿಂಗುವಳು; ಮೆತ್ತಗಿನವನು ಸೋಲಬಹುದೆಂದು ನಿಲಳು;
ಧಿಕ್ಕರಿಸುವಳು ಮೂರ್ಖನನ್ನು; ಘನಪಂಡಿತನನಾದರೂ ಮೆಚ್ಚಿಕೊಳಳು;
ಶೂರನಾದರೆ ಅಂಜಿದಂತೋಡುವಳು; ಮತ್ತೆ ಭೀರುವಾದರೆ ನಗುವಳು –
ಹೆಸರ ಸೊಕ್ಕಿನ ಸೂಳೆಯಂತೆ ರಾಜ್ಯಶ್ರೀಯ ಮರ್ಜಿ ಬಿಗಿ, ಕಾಯ್ದುಕೊಳಲು
.
(ಮುಂದುವರಿಯಲಿದೆ)
ನಿಮ್ಮ ಲೇಖನ ಈಚಿನದೆಂದೇ ಭ್ರಮಿಸಿ ಉದ್ದಕ್ಕೂ ಓದುತ್ತ ಹೋದೆ, 'ಅರೆ! ಅಶೋಕ ವರ್ಧನರು ಮತ್ತೆ ಪುಸ್ತಕ ವ್ಯಾಪಾರಕ್ಕೆ ಬಂದ್ರಾ?' ಎಂಬ ಅಚ್ಚರಿಯಿಂದ ಮುಂದೆ ಓದುತ್ತ ಹೋದಂತೆ ಅದು ಹಿಂದಿನದೆಂದು ಗೊತ್ತಾಯಿತು. ಪರವಾಗಿಲ್ಲ. ಓಲ್ಡ್ ಈಸ ಗೋಲ್ಡ್....
ReplyDeleteಪ್ರಕಾಶನ ಕ್ಷೇತ್ರಕ್ಕೆ ನಾನು ತೀರಾ ಹೊಸಬಳು... ನಿಮ್ಮ ಲೇಖನದಿಂದ ಹಲವಾರು ವಿಷಯಗಳು ತಿಳಿದವು... ಮಾರಾಟಗಾರರೊಬ್ಬರ ಅವಸ್ಥೆಗಳು ಅಂದಜಾದವು...
ReplyDeleteಬರವಣಿಗೆಯನ್ನೇನೋ ಮಾಡಿಬಿಡಬಹುದು... ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದೋ ? ಬೇಡವೋ ? ಹೇಗೆ ? ಯಾರಲ್ಲಿ ? ಅಥವಾ ನಮ್ಮ ಬರವಣಿಗೆಗಳು ನಮ್ಮೊಂದಿಗೆ ಅಸ್ಥಿತ್ವ ಕಳೆದುಕೊಂಡುಬಿಡುತ್ತವಾ ? ಎಂಬ ಹಲವಾರು ಪ್ರಶ್ನೆಗಳು ನನ್ನನ್ನು ಕಾಡುತ್ತಿವೆ...
ಮುದ್ರಣ ಮಾಧ್ಯಮವೇ ಇಲ್ಲವಾಗುತ್ತಿರುವ ಕಾಲವಿದು. ನೀವು ದುಡ್ಡು ಮಾಡುವ ಉದ್ದೇಶವಿಲ್ಲದೆಯೂ ಪುಸ್ತಕ ಪ್ರಕಾಶನಕ್ಕೆ ಇಳಿದು, ನಾಳೆ ಐನೂರೋ ಸಾವಿರವೋ ಪ್ರತಿಗಳನ್ನು ಮನೆಯಲ್ಲಿಟ್ಟುಕೊಂಡು ಅಯ್ಯೋ ಇದನ್ನೇನು ಮಾಡಲಿ ಎಂದು ಗೋಳಾಡುವ ಸಂದರ್ಭ ಎಳೆದು ಹಾಕಿಕೊಳ್ಳಬೇಡಿ. ಪ್ರಕಾಶಕರು ಯಾರಾದರೂ ಸಿಕ್ಕರೆ ನಿಮ್ಮ ಹಕ್ಕು, ಹಣದ ಬಗ್ಗೆ ಖಾತ್ರಿಯಾದರೆ ಕೊಟ್ಟು ಕೈತೊಳೆದುಕೊಳ್ಳಿ. ಇಲ್ಲವಾದರೆ ನಾನೀಗ ಮಾಡುತ್ತಿರುವಂತೆ ಯಾವುದೇ ಖರ್ಚಿಲ್ಲದೇ ಈ ವಿದ್ಯುನ್ಮಾನ ಮಾಧ್ಯಮಕ್ಕಿಳಿಯಿರಿ. ನಿಮ್ಮದೇ ಜಾಲತಾಣ ತೆರೆದು ಅನುಕೂಲವಾದಾಗ ಏನು ಬೇಕಾದರೂ ಪ್ರಕಟಿಸುತ್ತ ಬನ್ನಿ. ಹಾಗೆ ಹೊಸ ಲೇಖನ ಏರಿಸಿದಾಗೆಲ್ಲ ಪರಿಚಿತರಿಗೆಲ್ಲ ಮಿಂಚಂಚೆ ಹಾಕಿ ಜಾಗೃತಿಗೊಳಿಸಿ, ಫೇಸ್ ಬುಕ್ ಬಳಸಿಕೊಂಡು ಧರ್ಮಕ್ಕೆ ಪ್ರಚಾರ ಮಾಡಿಕೊಳ್ಳಿ
DeleteE - ಪುಸ್ತಕದಿಂದ ಎಂಥ ಉಪಯೋಗ ? ನನಗೆ ಪುಸ್ತಕದ ತರ ಬೇಕು.... ಪ್ರಿಂಟಿಂಗ್ ತುಂಬಾ ಖರ್ಚು ಬರ್ತದೆ ಅಂತಲೂ ಗೊತ್ತು... ಈಗಲ್ಲ... ಯಾವಾಗಾದರೊಮ್ಮೆ ಪುಸ್ತಕ ರೂಪದಲ್ಲಿ ನೋಡುವಾಸೆ.. ನಾಲ್ಕು ಪುಸ್ತಕಕ್ಕಾಗುವಷ್ಟು ಬರೆದಾಯಿತು...ಮಕ್ಕಳು 25 ನೇ ಮದುವೆ ವಾರ್ಷಿಕೋತ್ಸವಕ್ಕೆ ಪುಸ್ತಕ ಮಾಡಿಸಿ ಕೊಡ್ತಾರಂತೆ.. ಯಾರು ಓದುತ್ತಾರೊ ಇಲ್ವೋ.. ನನಗೆ ನೇವರಿಸುವುದಕ್ಕೆ ಬೇಕು ಅಷ್ಟೇ..
Deleteಕಂಪ್ಯೂಟರ್ ನಲ್ಲಿ ಇರುವ ಲೇಖನಗಳನ್ನು ನೇವರಿಸೊದಕ್ಕೆ ಆಗಲ್ವೇ... ಯಾರಿಗೂ ಗಿಫ್ಟ್ ಕೊಡೊದಕ್ಕಲ್ಲ...ಎಂಟತ್ತು ಪುಸ್ತಕ ಪ್ರಿಂಟ್ ಸಾಕು..." ನಿಮ್ಮಜ್ಜಿ ಬರೆದದ್ದು " ... ಅಂಥ ನೆನಪಿಗೆ... ಮೊಮ್ಮಕ್ಕಳಿಗೆ...
ಅವು ತೆರೆದು ನೋಡದ್ರು... ಮನೆಯಲ್ಲಿ ರೆಕಾರ್ಡು ಇಡಬೇಕು ... ಫೋಟೋ ತೆಗೆದಿಡ್ತೀವಲ್ಲ ಹಾಗೆ... ಹಾರ್ಟ್ ಡಿಸ್ಕ್ ಕ್ರಾಷ್ ಆಯ್ತು ಅಂಥ ವಿಷಯ ಕೇಳಿದಾಗಲೆಲ್ಲ.... ಅವಸರ ಆಗ್ತದೆ...
ನನ್ನ ಜಾಲತಾಣದಲ್ಲಿ ಪುಸ್ತಕ ವಿಭಾಗ ತೆರೆದು ನೋಡಿ. ಹದಿನೇಳು ವಿ-ಪುಸ್ತಕಗಳನ್ನು ಈಗಾಗಲೇ ಕೊಟ್ಟಿದ್ದೇನೆ. ಅವು ಈ ಮಾಧ್ಯಮ ಇರುವವರೆಗೂ ಶಾಸ್ವತವಾಗಿ, ಹೊಸತಾಗಿಯೇ ಉಳಿದಿರುತ್ತದೆ. ಅವನ್ನು ನೀವು ಯಾರಿಗೆ ಬೇಕಾದರೂ ಕೇವಲ ಒಂದು ಚಿಟಿಕೆ ಹೊಡೆಯುವ ಮೂಲಕ ಎಷ್ಟೂ ಹಂಚಬಹುದು (ಇದನ್ನು ವಾಣಿಜ್ಯ ವ್ಯವಹಾರ ಮಾಡಿಕೊಂಡವರು ಮಾರುವುದೂ ಮಾಡುತ್ತಾರೆ - ಬಿಡಿ) ಅವರು ಇದನ್ನು ಗಣಕದ ತೆರೆಯಮೇಲೇ ಓದಬಹುದು, ಅವರ ಸ್ಮಾರ್ಟ್ ಫೋನೋ, ಟ್ಯಾಬ್ಲೆಟ್ಟೋ ಮುಂತಾದ ವಿದ್ಯುನ್ಮಾನ ಸಲಕರಣೆಗಳಿಗೆ ಇಳಿಸಿಕೊಳ್ಳಬಹುದು. ಮತ್ತೆ ಕೊನೆಯದಾಗಿ ನಿಮ್ಮ ಬಯಕೆಯಂತೆ ಎಂದೂ ಯಾವುದೇ ಡಿಟಿಪಿ ಪ್ರೀಂಟ್ ಮಾಡುವವನಲ್ಲಿ ಇದರ ಸೇತು ಕೊಟ್ಟರೆ ನಿಮ್ಮ ಕಣ್ಣೆದುರೇ ನಿಮಗೆ ಬೇಕಾದಷ್ಟು ಪ್ರತಿಗಳನ್ನು ಮುದ್ರಿಸಿ, ಸ್ಪೈರಲ್ ಬೈಂಡಿಂಗಿನಲ್ಲಿ ಕೊಡುತ್ತಾರೆ - ಧಾರಾಳ ನೇವರಿಸಿಕೊಳ್ಳಿ :-) ಮೊಮ್ಮಕ್ಕಳು (ಹೊಸ ತಲೆಮಾರಿನವರಲ್ಲವೇ) ಧೂಳು ಹಿಡಿದು, ಮಾಸಿದ ಪುಸ್ತಕ ನೋಡಿ ಅಜ್ಜಿ ಬಗ್ಗೆ ಕನಿಕರಿಸುವುದಕ್ಕಿಂತ "ಅಜ್ಜಿ ಇಷ್ಟು ಮಾಡ್ರನ್ನೇ" ಎಂದು ಮೆಚ್ಚಿಕೊಂಡಾರು. ಇನ್ನು ನಿಮ್ಮ ಖುಷಿ. ಶುಭವಾಗಲಿ
DeleteThe attitude of most of the mutts (mathas) with regard to book trade is no different than the Governments of the nehruin mould. They talk peculiar trash if you tell them prudence, often they treat the indenting or intending buyers as petitioners for some benefits
ReplyDeleteno point telling them about book trade fundamentals