ಮುಂದಾಗಿ ಕೇಳಿಕೊಂಡ ಪ್ರಕಾರ ಅಲ್ಲಿನ ಗೆಳೆಯ ಪ್ರತಾಪ್ ಕೊಟ್ಟ
ಸಂಪರ್ಕ ವ್ಯಕ್ತಿ ಚೆಂಗಪ್ಪ, ಆಗಲೇ ಎರಡೆರಡು ಬಾರಿ ಚರವಾಣಿಸಿ ವಿಚಾರಿಸಿಕೊಂಡದ್ದಾಗಿತ್ತು. ಅವರು ನಮಗೆ ಮಾರ್ಗದರ್ಶಿಯಾಗಿ ನಿಯೋಜಿಸಿದ ಪ್ರವೀಣ್, ಇನ್ನು ನಾವು ಬರುವುದಿಲ್ಲವೆಂದು ಯೋಚಿಸಿ, ಬದಲಿ ಕಾರ್ಯಕ್ರಮಕ್ಕಿಳಿಯುವ ತುಸು ಮೊದಲಷ್ಟೇ ತಲಪಿದ್ದಕ್ಕೆ ಆತ ನಮ್ಮ
ಜೀಪ್ ಏರಿಕೊಳ್ಳುವುದೂ ಆಗಿತ್ತು.
ಸ್ವಂತ ವಾಹನವಿದ್ದು, ಚಾಲನೆಯಲ್ಲೇ ಸಾಗಣಾವೃತ್ತಿ ನಿರತ ಪ್ರವೀಣರಿಗೆ ಆ ವಲಯದ
ಮಾರ್ಗಜಾಲವೆಲ್ಲ ಚಿರಪರಿಚಿತ. ಅವರ ಸೂಚನೆಯಂತೆ ನಾವು ಶಾಂತಳ್ಳಿ ಮಾರ್ಗವಾಗಿ ಒಳ-ಒಳಮಾರ್ಗಗಳನ್ನು ದರ್ಶಿಸುತ್ತಾ ಇನ್ನು ಮುಂದಿಲ್ಲದ ಕೊನೆಗಳನ್ನು 
ಕಾಣುತ್ತ
ಹೊರಟೆವು. ಕೆಲವು ವ್ಯಕ್ತಿಗಳನ್ನು ಮಾತಾಡಿಸುತ್ತಾ ಅವರ ಒತ್ತಾಯಪೂರ್ವಕ ಕಾಫಿ, ಚಾ ಕುಡಿಯುತ್ತಾ ಭಗ್ತಿಯ ದಾರಿಯನ್ನೂ ಕಂಡದ್ದಾಯ್ತು.
ಆದರೆ ಎಂಟೊಂಬತ್ತು ಕಿಮೀ ಉದ್ದದ ದಾರಿಯ ಕೊನೆಯ ಭಾಗಗಳಲ್ಲಿ ಆನೆಯೂ ಹೂತು
ಹೋಗುವ ಸ್ಥಿತಿಯ ಬಗ್ಗೆ ಪ್ರವೀಣರಿಗೆ ಸ್ವಂತ ಅನುಭದಲ್ಲೇ ಹೇಳಲು ಸಾಕಷ್ಟಿತ್ತು. ಮತ್ತೆ ವಾತಾವರಣದ ವಿಪರೀತದಲ್ಲಿ ಪೂರ್ವಸಿದ್ಧತೆಯಿಲ್ಲದೆ
ಮುಂದುವರಿದರೆ ಅಡ್ಡಬೀಳುವ ಮರಗಳ ಬಂಧಿಯಾಗುವ ಸಾಧ್ಯತೆ, ಹೊರಗಿನ ಸಹಾಯ ಬಯಸುವುದಾದರೆ ಎಲ್ಲಾ
ಸಂಪರ್ಕವಲಯ ಮೀರಿರುವ ವಾಸ್ತವ, ಎಲ್ಲಕ್ಕೂ ಮಿಗಿಲಾಗಿ ಜೀಪಿರಲಿ ನಡೆದೂ ದಾಟಲಾಗದ ಸೇತುವೆಯೇ ಇಲ್ಲದ
ಕೆಲವು ತೊರೆಗಳ ಅಪಾಯ ನಮ್ಮನ್ನು ಪೂರ್ಣ ನಿರುತ್ತೇಜನಗೊಳಿಸಿತು. ಹನಿಕಡಿಯದ ಮಳೆಯಲ್ಲಿ ಕಟ್ಟೇರು,
ಕಗ್ಗಾಡಿನ ಸುಮಾರು
ಎರಡು ಕಿಮೀಗೇ ಭಗ್ತಿಯ ಭೇಟಿಗೆ ತಿಂಗಳಕಾಲದ ಭಡ್ತಿ ಕೊಟ್ಟು ಹಿಮ್ಮುಖರಾದೆವು.
ಕುಮಾರಧಾರಾ ನದಿಗಾಗಿ (ಮುಂದುವರಿದಂತೆ ನಮ್ಮದೇ ನೇತ್ರಾವತಿಯೂ ಸರಿ) ಗಗನಕ್ಕೆ ತೆರೆದಿಟ್ಟ ಆಲಿಕೆ
- ಬಹುಮುಖ್ಯ ಜಲಾನಯನ
ಪ್ರದೇಶ, ಈ ವಲಯ. ಮನುಷ್ಯನ ಹಸ್ತಕ್ಷೇಪವಲ್ಲದಿದ್ದರೆ
ಬಹುತೇಕ ಇಲ್ಲಿನ ಪ್ರತಿ ಚರಂಡಿ, ತೋಡು, ಝರಿ,
ಜಲಪಾತ, ತೊರೆ, ಹೊಳೆ ಬೆಳ್ಳಿಬೆಳಕಾಗಿ, ಅಬ್ಬರದ ಸಮೂಹಗಾನವಾಗಿ ಮೆರೆಯುವುದನ್ನು ನೋಡುವ ಭಾಗ್ಯ ಮಳೆಗಾಲಕ್ಕೇ
ಮುಟ್ಟುವ ಕಲ್ಪನೆಗಳನ್ನು
ಹರಿಬಿಡುವ ಮಡಿಕೇರಿಯ ಏಕಮಾತ್ರ ಆಕರ್ಷಣೆ ಕೇಂದ್ರ ಆ ವಲಯ.
ನನಗೆ ಆಘಾತವಾಯ್ತು. ಗಾಂಧಿಮಂಟಪದ ಹಿನ್ನೆಲೆಯಲ್ಲಿ ಸೌಂದರ್ಯದ ಕಲ್ಪನೆಯಿಲ್ಲದ ಶಾಲಾ
ಕಟ್ಟಡಗಳು ಹಬ್ಬಿದ್ದವು, ಮುನ್ನೆಲೆಯಲ್ಲಿ ಎಣ್ಣೆಮಡ್ಡಿ ಗೊಸರಿನ ಕಾರ್ಯಾಗಾರವೋ ವಾಹನ
ತಂಗುದಾಣವೋ ಹರಕು ಕಬ್ಬಿಣ ಬೇಲಿ ಸಹಿತ ವ್ಯಾಪಿಸಿತ್ತು –
ಹೇ ರಾಮ್! ಮುಂದುವರಿದಂತೆ ಚಿರಿಪಿರಿ ಮಳೆಗೂ ಅಂಜದಂತೆ ಅಸಂಖ್ಯ ಪ್ರವಾಸೀ
ವಾಹನಗಳು, ಜನಜಾತ್ರೆ ನೋಡುತ್ತಲೇ ನಾವು ಹೆದರಿ ನನ್ನ ನೆನಪಿನ ಗೌಳಿಬೀದಿಯತ್ತ
ಮುಂದುವರಿದೆವು. ಅಲ್ಲಿನೊಂದು `ದೊಡ್ಡ ಹೋಟೆಲ್’ಗೆ ನುಗ್ಗಿದೆವು. ಮತ್ತೆ ತಪ್ಪುದಂಡವೋ ಎಂಬಂತೆ ಭಾರೀ
ಬಿಲ್ಲನ್ನೇ ಎತ್ತಬೇಕಾಯ್ತು! (ಒಂದು ನೀರುಳ್ಳಿ ಪಕೋಡ, ಎರಡು ಕಾಫಿಗೆ ರೂ ನೂರಾ ಅರವತ್ತೆಂಟು!)
ಕಾಣುವಂತೆ ಒಂದು ಕಛೇರಿ, ಎರಡು ಮನೆಗೆ ವ್ಯವಸ್ಥಿತ ಹಳೇ
ಕೃಷಿಭೂಮಿಯಾಗಿಯೇ ಅರೇಕಲ್ಲು ಮೆರೆದಿತ್ತು; ನಮ್ಮ ನಿರೀಕ್ಷೆ ಹುಸಿಯಾಗಿತ್ತು. ಮುಂದೆ ಹುಡುಕಾಟಕ್ಕೆ ಅನುಕೂಲವಾಗುವಷ್ಟು ದಿನದ ಬೆಳಕೂ ಉಳಿದಿರಲಿಲ್ಲ. ಆದರೂ ಸಿಕ್ಕ ಒಂದೆರಡು ಹಳ್ಳಿಗರೊಡನೆ
ಮಾತುಕತೆ ಬೆಳೆಸಿದೆವು. ಆಗ “ಅಯ್ಯೋ ಇದು ಸುಮಾರು ಮೂರುದಶಕಗಳ ಹಿಂದೆ ನಾನು ಬೈಕಿನ ತಂಡ ಕಟ್ಟಿ
ಕಾಡು ನುಗ್ಗಲು ಬಂದ ಜಾಡಲ್ಲವೇ?” ಎಂದು ಉದ್ಗರಿಸುವಂತಾಯ್ತು. ಹೌದು, ಅಂದು ಏಳೆಂಟು ಬೈಕುಗಳಲ್ಲಿ ಅಂದರೆ, ಹದಿನೈದಿಪ್ಪತ್ತು ಮಂದಿ ಇದೇ ಸಂಪಾಜೆಗೆ ದಾಳಿಯಿಟ್ಟಿದ್ದೆವು. ನಮ್ಮ ಬರೋಣವನ್ನು ತಿಳಿದ ಹಿರಿಯ ಮಿತ್ರ ದೇವೀಪ್ರಸಾದ್ ಬಹಳ
ಪ್ರೀತಿಯಿಂದ ಬೆಳಗ್ಗಿನ ಉಪಾಹಾರಕ್ಕೆ ನಮ್ಮನ್ನೊಪ್ಪಿಸಿ,
ವಾಸ್ತವದಲ್ಲಿ ಎರಡು
ಹೊತ್ತಿಗಾಗುವಷ್ಟನ್ನು ರುಚಿಕಟ್ಟಾಗಿ ತಿನ್ನಿಸಿ ಕಳಿಸಿದ್ದರು. ಮುಂದುವರಿದು ಮುಚ್ಚಿಹೋದ ಕಾಡದಾರಿಯನ್ನು ಅನಾವರಣಗೊಳಿಸುತ್ತ
ಸುಬ್ರಹ್ಮಣ್ಯ ಸೇರಬೇಕೆಂಬ ನಮ್ಮ ಹಂಬಲವನ್ನು, ಬಿದಿರಮುಳ್ಳುಗಳ ಆಘಾತದಲ್ಲಿ ಸರಣಿ
ಪಂಚೇರ್ ಅನುಭವಿಸಿ ಕೈಬಿಡಬೇಕಾಯ್ತು.
ಆದರೆ ಅಷ್ಟರಲ್ಲಿ ನಮ್ಮ ಇರವನ್ನು
ಗುರುತಿಸಿ ಬಂದ ಕಿರಿಯ ಗೆಳೆಯ ಲೈನ್ಕಜೆ ರಾಮಚಂದ್ರ ಮತ್ತೆ ನನ್ನ ಕುಟುಂಬ-ಸ್ನೇಹಿತರೇ ಆದ ಅವರ ತಂದೆ ಸಿದ್ಧಿ ಗಣಪತಿ ಭಟ್ಟರ ಆತಿಥ್ಯದ ಸುಳಿಗೆ
ಸಿಕ್ಕಿಬಿದ್ದೆವು. ಅವರು ಪ್ರಾಥಮಿಕವಾಗಿ ಕೊಟ್ಟ ಕಡುಬಿನ ಉಪಚಾರ, ಚೇತರಿಸಿಕೊಳ್ಳುವ ಮುನ್ನ ಹೊರಿಸಿದ ಊಟದ ಹೊರೆಯನ್ನೆಲ್ಲ ಹೊಟ್ಟೆಗೆ
ಹಾಕಿಕೊಂಡು ಮರಳಿದ್ದು ಮರೆಯಲುಂಟೇ?  ಇಂದು ಗಣಪತಿ ಭಟ್ಟರು ಇಹದಲ್ಲಿಲ್ಲ, ರಾಮಚಂದ್ರ ಊರಲ್ಲಿಲ್ಲ. ಆದರೂ ಪರಿಚಯದ ಎಳೆ ಸಿಕ್ಕರೆ ಉಳಿದ ಆ
ಮನೆಯವರಾದರೂ ಆತಿಥ್ಯ (ಊಟ, ವಾಸ) ಹೇರಿಯಾರೆಂಬ ಭಯದಲ್ಲಿ ಔಪಚಾರಿಕ ಭೇಟಿಯ ಯೋಚನೆ ಬಿಟ್ಟೆವು. ಆದರೆ ನಿರೇನ್ ನೆನಪನ್ನು ಕೆಣಕಿದ ಇನ್ನೊಂದು ಎಳೆಯನ್ನು ದರ್ಶಿಸದೇ
ನಡೆಯುವುದು ನಮ್ಮಿಂದಾಗಲಿಲ್ಲ.
ಕಗ್ಗಾಡಿನ ಮೂಲೆಗಳೊಡನೆ ನಮಗೆ
ಸಾಮಾನ್ಯವಾಗಿ ಕಲ್ಪಿಸಲಾಗುವ ಜನಜೀವನ (ಆದಿವಾಸಿಗಳು ಎಂಬ ನೆಲೆಯಲ್ಲಿ) ಮಲೆಕುಡಿಯರದು. ಹಾಗೇ ಅರೇಕಲ್ಲಿನ ಕೊನೆಯಲ್ಲಿ ಸಿಕ್ಕ
ಬಾಲಕೃಷ್ಣರ ಬಳಿ ದಾರಿಯಲ್ಲಿ ಬಲಕೊಳ್ಳದಲ್ಲಿ ಕಾಣಿಸಿದ ಹಳತಾದರೂ ವ್ಯವಸ್ಥಿತ ಮನೆ ಬಗ್ಗೆ
ವಿಚಾರಿಸಿದೆವು. “ಓ ಅದು ಪುತ್ತೂರಿನ ಪೀಡಿದು” ಎಂದು ತೀರಾ ಆತ್ಮೀಯ ಧ್ವನಿಯಲ್ಲಿ ಹೇಳಿದರು. ಪುತ್ತೂರಿನವರೇ ಆದ ನಿರೇನ್ ಕೂಡಲೇ “ಅಂದ್ರೇ ಫಿಲೊಮಿನಾ ಕಾಲೇಜಿನ….”
ಎಂದು
ಮುಂದುವರಿಸುವುದರೊಳಗೆ ಅತ್ತಣಿಂದ ಅನುಮೋದನೆಯೂ ಅವರ ಈಚಿನ ಸಂಕಟಗಳ ಹೆಚ್ಚಿನ ವಿವರಗಳೂ
ಹರಿಯತೊಡಗಿದುವು. ನನಗೆ ಅವರ ಹೆಸರು, ಪರಿಚಯವೇನೂ ಇರಲಿಲ್ಲ. ಆದರೆ ನಿರೇನ್ ಅವರ ದಂತಕಥೆಯಂಥ ಖ್ಯಾತಿಯನ್ನು ತನ್ನ ತಂದೆಯಿಂದ ತುಂಬ
ಕೇಳಿದ್ದರು, ಬೆರಗುಗಣ್ಣಿನ ಬಾಲನಾಗಿ ಹಲವು ಚಟುವಟಿಕೆಗಳನ್ನು ದೂರದಿಂದಲೇ
ನೋಡಿದ್ದರು. ಅವರನ್ನಿಲ್ಲಿ ಕಾಣುವ, ಅದೂ ತೀರಾ ಬಳಲಿದ್ದಾರೆಂದು ತಿಳಿದಾಗ
ಎರಡು ಸಮಾಧಾನದ ಮಾತಾಡಿ ಹೋಗುವ ನಿರ್ಧಾರದಲ್ಲಿ ನಮಗೆ ಭಿನ್ನಾಭಿಪ್ರಾಯಗಳಿರಲಿಲ್ಲ. ನಮಗೆ ಅಯಾಚಿತವಾಗಿ, ಮೇಷ್ಟ್ರ ನೆರೆಹೊರೆಯ ವಾಸಣ್ಣ
ಮಾರ್ಗದರ್ಶಿಯಾದರು. 
ಸುಮಾರು ಅರ್ಧ ದಾರಿಯಲ್ಲಿ, ಅಂದರೆ ಜೇಡ್ಲ ಎಂಬ ಜಾಗದಲ್ಲಿ, ಎಡದ ಮಣ್ಣ ದಾರಿಗೆ ಹೊರಳಿ, ನೂರಡಿಗೇ ಸಿಕ್ಕ ಭಾರೀ ದನದ ಕೊಟ್ಟಿಗೆಯ
ಒತ್ತಿನ ಉರುಬಲಿನ ಹೊರಗೇ ಜೀಪಿಳಿದೆವು. ಒಳಗೆ ಮಾಮೂಲೀ ಅಡಿಕೆ ಬೆಳೆಗಾರರಂತೆ ಮಳೆಗಾಲದ ಪ್ರಭಾವದಿಂದ ಅಂಗಳವನ್ನು ಕಾಪಾಡಿಕೊಳ್ಳುವ ಎಚ್ಚರ ಕಾಣಲಿಲ್ಲ. ನೀರು ನಿಂತು, ಹುಲ್ಲು ಕೆಸರು ತುಂಬಿತ್ತು. ತಚಪಚ ಮಾಡಿ, ಎತ್ತರಿಸಿ ಕಟ್ಟಿದ ಮನೆಯ
ಮೆಟ್ಟಿಲೇರಿದೆವು. ಒತ್ತುತ್ತಿದ್ದ ಕತ್ತಲಿನಲ್ಲೂ ಎದುರು ಬಾಗಿಲಿಗೆ ಅಥವಾ ಕಿಟಕಿಯ
ಕನ್ನಡಿಯಲ್ಲಿ ಕಾಣುವಂತೆ ಒಳಗೂ ವಿದ್ಯುತ್ ಬೆಳಕು ಇರಲಿಲ್ಲ.
ಅಲ್ಲೆಲ್ಲ ಮಾಮೂಲೆನಿಸಿದ
ಮಳೆಗಾಲದ ಕಡಿತವಿದ್ದಿರಬಹುದು. ನಾವು ಮಾಡಿನ ದಂಬೆಯಡಿಗಿಟ್ಟ ಅಂಡೆಯಿಂದ ಕಾಲಿಗಷ್ಟು ನೀರು
ಚೇಪಿಕೊಳ್ಳುತ್ತಿದ್ದಂತೆ, ವಾಸಣ್ಣ “ಅಣ್ಣೇರ”ನ್ನು ಕರೆದು ಬಾಗಿಲು ತೆರೆಸಿದ್ದರು. ಟಾರ್ಚ್ ಬೆಳಗಿದ ಹುಡುಗನೊಬ್ಬ ನಮ್ಮನ್ನು ಒಳಕೋಣೆಗೇ ಒಯ್ದ. ಅಲ್ಲಿ ಸೌರವಿದ್ಯುತ್ತಿನ ಮಂಕು ದೀಪದಡಿಯಲ್ಲಿ, ಮಂಚದ ಮೇಲೆ ಕುಳಿತಿದ್ದ ಸುಮಾರು ಎಂಬತ್ತೆರಡರ ಹರಯ ಮತ್ತು
ಬಳಲಿಕೆಯಲ್ಲೂ ನೇರ ನಿಲುವಿನ ವ್ಯಕ್ತಿಯನ್ನು ಕಾಣುತ್ತಿದ್ದಂತೆ ನಾವು ನಮಸ್ಕಾರ ಹೇಳಿ ಪ್ರವರ
ಒಪ್ಪಿಸಿದೆವು.
ಸರದಿಯಲ್ಲಿ ನಾನು ಅತ್ರಿ ಪುಸ್ತಕ ಮಳಿಗೆಯ
ಪರಿಚಯ ಹೇಳಿಕೊಂಡೆ, “ಗೊತ್ತು ಗೊತ್ತು.” ಮುಂದುವರಿದು, ಪುತ್ತೂರಿನ ನನ್ನಜ್ಜನ ಪರಿಚಯ
ಹೇಳಿಕೊಂಡೆ. “ಸಂತೋಷ, ಅವರ ಕುಟುಂಬವೆಲ್ಲ ಖ್ಯಾತ ಕೃಷಿಕರು, ಸಂಟ್ಯಾರು ಬಳಿ ಇದ್ದಾರೆ, ಗೊತ್ತು, ಗೊತ್ತು” ಎಂದೇ ಮುಗಿಸಿದರು. ಕೊನೆಯದಾಗಿ ಎಂಬಂತೆ ನನ್ನ ತಂದೆಯ ಹೆಸರು ಹೇಳಿದೆ. ಕೂಡಲೇ ಅವರ ಮುಖ ವಿಶೇಷವಾಗಿ ಅರಳಿತು. ಎರಡೂ ಕೈಗಳನ್ನು ತಲೆಯ
ಮೇಲೆ ಮುಗಿದು ಹಿಡಿದು “ಓಓ ನನ್ನ ಗುರುಗಳು, ಅಲೋಶಿಯಸ್ ಕಾಲೇಜಿನ ಅಧ್ಯಾಪಕರು, ಅಲ್ಲಿಗೆ ಎನ್ಸಿಸಿ ತಂದವರು, ಕಡು ಶಿಸ್ತುಗಾರ, ಆದರೂ ಹುಡುಗರ ಗೌರವ ಎಲ್ಲರ ಮೆಚ್ಚುಗೆ ಗಳಿಸಿದವರು...” ಓತಪ್ರೋತ ಐದು ಮಿನಿಟು ಕೊಂಡಾಡಿ “…ಇದು ಸಂಕ್ಷಿಪ್ತವಾಗಿ ನಾನು ಹೇಳಬಹುದಾದ ತಿಳಿದ ಜಿ.ಟಿ ನಾರಾಯಣರಾಯರ ಪರಿಚಯ” ಎಂದು ಮುಗಿಸಿದಾಗ ನಾವಿಬ್ಬರೂ ಸಂಕೋಚದಲ್ಲಿ ಮುದುರಿದ್ದೆವು. ನಾವು ನೋಡಬಂದವರಾದರೂ ಬರಿಯ ತಾಪೇದಾರಿ ಮನುಷ್ಯನೇ?
ಸುಮಾರು ನೂರಾನಲ್ವತ್ತು ವರ್ಷಗಳ ಹಿಂದೆ ವೆಂಕಟ್ರಾಮಯ್ಯನವರ
ಅಜ್ಜ ಕೊಂಡು, ಸಾಂಪ್ರದಾಯಿಕ ಕೃಷಿ ರೂಢಿಸಿದ ನೆಲವಿದು. ವೆಂಕಟ್ರಾಮಯ್ಯನವರು ಅದನ್ನು
ಮುಂದುವರಿಸಿದ ತಾರುಣ್ಯದ ದಿನಗಳಲ್ಲೂ ಈ ಸಾಂಪ್ರದಾಯಿಕ ಕೃಷಿ (ಅಡಿಕೆ, ತೆಂಗು, ಬಾಳೆ, ಬತ್ತ), ಪೂರಕವಾಗಿ ಜಾನುವಾರು ಸಾಕಣೆ ಆರ್ಥಿಕವಾಗಿ ಲಾಭದಾಯಕ ವೃತ್ತಿಯೇನೂ ಆಗಿರಲಿಲ್ಲ. ಆದರೆ ಕಾಲೇಜಿನ ವೃತ್ತಿಯೊಡನೆ ಸ್ವಂತ ನೆಲದ ಆಡಳಿತವೂ ಇವರ ಕೈಗೆ ಬಂದ
ಕಾಲದಲ್ಲಿ ಕರ್ತವ್ಯಪ್ರಜ್ಞೆಯೊಂದರಿಂದಲೇ ಎರಡನ್ನೂ ನಿಷ್ಠಾಪೂರ್ಣವಾಗಿ ನಡೆಸಿದ್ದು ಇವರ ಸಾಧನೆ. ಇವರು ಮದುವೆ, ಸಂಸಾರದ ದಾರಿ ಸವೆಸಲಿಲ್ಲ. ಆದರೆ ಇವರಲ್ಲಿದ್ದ ವೃತ್ತಿ, ಸೊತ್ತನ್ನು ಎಂದೂ ಕಡಿಮೆ ಮಾಡಲಿಲ್ಲ. ಜಾನುವಾರು ಸಂಪತ್ತು ಇಪ್ಪತ್ತು ಮೂವತ್ತಿದ್ದದ್ದು ಎಂಬತ್ತೈದರವರೆಗೂ ವಿಸ್ತರಿಸಿದ್ದಿತ್ತಂತೆ. ಹಾಗೆಂದು ಗಂಡು, ಮುದಿ, ಗೊಡ್ಡೆಂದು ಯಾವುದನ್ನೂ ಇವರು ಮಾರಿದವರಲ್ಲ. ಅವುಗಳ ಪರೋಕ್ಷ ಲಾಭ – ಗೊಬ್ಬರಕ್ಕಷ್ಟೇ ತೃಪ್ತರಾಗಿಯೂ
ಉಳಿಸಿಕೊಂಡರು. ಆ ಪ್ರಭಾವದಲ್ಲಿ ಇವರ ತೋಟ  ಈ ವಲಯದ ಅತ್ಯುತ್ತಮ ಅಡಿಕೆ ಇಳುವರಿಯ ದಾಖಲೆಗಳನ್ನು
ಸರಿಗಟ್ಟಿದ್ದೂ ಇತ್ತಂತೆ. ಕಾಲಾನುಕ್ರಮದಲ್ಲಿ ಬಯಲು ಒಕ್ಕಲ ವಶವಾಗಿ, ಅಡಿಕೆಗೆ ಹಳದಿ ರೋಗ ಬಡಿದು, ಉಳಿಕೆಗೆ ಆನೆ ನುಗ್ಗಿ, ಕೊಟ್ಟಿಗೆ ಮತ್ತು ಜಾನುವಾರು ಹಿತವಂಚಕರಿಂದ ಬಳಲಿ “ಇವತ್ತು ನನ್ನ ಕೃಷಿ ಆದಾಯ ದೊಡ್ಡ ಸೊನ್ನೆ” ಎಂದು ವೆಂಕಟ್ರಾಮಯ್ಯನವರು ಎರಡೆರಡು ಬಾರಿ ವಿಷಾದಪೂರ್ವಕವಾಗಿ
ಹೇಳಿಕೊಂಡರು.
ತೊಂಬತ್ತೆಂಟರ ಹರಯ, ಅಂದರೆ ಕಳೆದ ವರ್ಷ ತೀರಿಹೋಗುವವರೆಗೂ ವೆಂಕಟ್ರಾಮಯ್ಯನವರಿಗೆ
ಮನೆಯಲ್ಲಿ ಜೊತೆಗೊಟ್ಟ ಜೀವ ಅವರ ತಾಯಿ! ಅನಂತರ ಒಂದು ಲೆಕ್ಕದಲ್ಲಿ ಕಾಡಿದ
ಖಿನ್ನತೆ ಇವರು ಮನೆಯೊಳಗೇ ಕುಸಿದು ದೈಹಿಕ ಆಘಾತಕ್ಕೂ ಕಾರಣವಾಯಿತಂತೆ. ಆಗ ಇವರು ನಿಷ್ಕಾಮವಾಗಿ ವಿದ್ಯಾರ್ಥಿಗಳ ಮೇಲೆ ಹೂಡಿದ್ದ `ಪ್ರೀತಿ ಸಂಪತ್ತು’ ಅಪೂರ್ವವಾಗಿ ಒದಗಿಬಂದಿತ್ತು. ಮಂಗಳೂರಿನ ಮೂರು ತಿಂಗಳ ಮತ್ತೆ ಪುತ್ತೂರಿನ ಎರಡು ತಿಂಗಳ
ಆಸ್ಪತ್ರೆವಾಸವಲ್ಲದೆ, ಉತ್ತರೋತ್ತರವಾಗಿಯೂ ನಗರವಾಸವನ್ನೇ ಒದಗಿಸುವ ಮಟ್ಟಕ್ಕೂ ಅದು
ವಿಸ್ತರಿಸಿತ್ತಂತೆ. ಇವರು ಆಸ್ಪತ್ರೆಯಲ್ಲಿದ್ದ ದಿನಗಳಲ್ಲಿ ಮಂಗಳೂರಿನ ಯಾವುದೋ
ಕ್ರೀಡಾಕೂಟಕ್ಕೆ ಬಂದಿದ್ದ ಪಿ.ಟಿ. ಉಷಾ ಕೂಡಾ ಇವರ ಕ್ರೀಡಾ/ವಿದ್ಯಾರ್ಥಿಪ್ರೀತಿಯ ಖ್ಯಾತಿಗೆ ಸೋತು, ಆಸ್ಪತ್ರೆಗೆ ಭೇಟಿಕೊಟ್ಟು ಸಹಾಯ ಹಸ್ತ ಚಾಚಿದ್ದರಂತೆ. ಆದರೆ ಸ್ವಾಭಿಮಾನೀ ವೆಂಕಟ್ರಾಮಯ್ಯನವರು ಗದಗದ ಒಬ್ಬ ತರುಣನನ್ನಷ್ಟೇ
ಸಹಾಯಕ್ಕಿಟ್ಟುಕೊಂಡು ಮೂಲನೆಲೆಗೇ ಮರಳಿದ್ದರು. ಅದರ ಮೇಲೆ ಅವರ ಸೇವೆಗೆ ನಾವು, ನಮ್ಮನ್ನೊಪ್ಪಿಸಿಕೊಂಡದ್ದು ಕೇವಲ ಮಾತಿನ ಅಲಂಕಾರವಾದದ್ದು
ಆಶ್ಚರ್ಯವೇನಲ್ಲ.
ಸುಳ್ಯದ ಸುರಭಿಯಲ್ಲಿ ಊಟ ಮಾಡಿ, ಹತ್ತೂವರೆ ಗಂಟೆಯ ಸುಮಾರಿಗೆ ಮಂಗಳೂರು, ಮನೆ ಸೇರಿದೆವು. ನಿರೀಕ್ಷೆಯಂತೆ ಘಟ್ಟದೆತ್ತರದ ಭಗ್ತಿ, ಅಲ್ಲಿನ ಏಕಾಂಗೀ ಜೀವನಯಾಪನೆ ಕಾಣದಿದ್ದರೂ ಜೀವನಮೌಲ್ಯಗಳ ಎತ್ತರದಲ್ಲಿ
ವೆಂಕಟ್ರಾಮಯ್ಯನವರ ಏಕಾಂಗೀ ಸಾಹಸ ನಮ್ಮ ಪ್ರಯಾಣವನ್ನು ಸಾರ್ಥಕಗೊಳಿಸಿತ್ತು.
ಭಗ್ತಿ ಕಾಣದಿದ್ದರೂ ಭಕ್ತಿಪೂರ್ವ ವ್ಯಕ್ತಿ ಯನ್ನು ಭೇಟಿಯಾದದ್ದು ಲಾಭವೇ ಸರಿ.
ReplyDeleteಮಾಲಾ
ಹಾಗೆ ಅವರ ಇಂಗ್ಲಿಷ್ ಬುಲೆಟ್ ಬೈಕು ರಾಯಲ್ ಎನ್ಪೀಲ್ಡ್.. ಬಗ್ಗೆ ನೀವು ಒಂದೆರಡು ವಾಕ್ಯ ಸೇರಿಸಿದ್ದರೆ.. ನಮ್ಮಂತಹ ಬುಲೆಟ್ ಪ್ರಿಯರಿಗೆ ಇನ್ನೂ ಖುಷಿಕೊಡುತ್ತಿತ್ತು. ಅದು ಬೈಕು.. ಈಗ ಎನ್ಟಿ ರಾಜ್ ಗೋಪಾಲನ ಮಗನಲ್ಲಿದೆ.. ಪಿಡಿ... ಹೆಸರಿನ ಅರ್ಥ ವೆಂಕಟರಾಮಯ್ಯ.. ಎನ್ನುವುದು ಪುತ್ತೂರಿನ ಇತಿಹಾಸದ ಪುಸ್ತಕ ವಿದ್ದರೆ ಅದರಲ್ಲಿ ಕಾಣಿಸಬೇಕಾದೀತು..
ReplyDelete