06 May 2014

ಅನುವಾದಕರ ನಾಲ್ಕು ಮಾತುಗಳು

[ಡೇವಿಡ್ ಕಾಪರ್ಫೀಲ್ಡ್‌ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ ಕನ್ನಡ ಭಾವಾನುವಾದ .ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ನಾಲ್ಕನೇ ಕಂತು
ನನ್ನ ಎಸ್ಸೆಸೆಲ್ಸಿ ಕ್ಲಾಸಿನಲ್ಲಿ ಸಂಕ್ಷಿಪ್ತಗೊಳಿಸಲಾಗಿದ್ದಡೇವಿಡ್ ಕಾಪರ್ ಫೀಲ್ಡ್ ಕಾದಂಬರಿನಾನ್ ಡಿಟೈಲ್ ಪುಸ್ತಕವಾಗಿ ನಾನು ಓದಬೇಕಾಗಿ ಬಂತು. ನಮ್ಮ ಬಹು ಗೌರವದ, ಮೆಚ್ಚಿನ ಉಪಾಧ್ಯಾಯರು - ಶ್ರೀ ಯು. ಕಣ್ಣಪ್ಪನವರು, ನಮಗೆಲ್ಲ ಅಪ್ಪಣೆ, ಪ್ರೇರಣೆ-ಪ್ರೋತ್ಸಾಹ ಕೊಟ್ಟ ಕಾರಣವಾಗಿ ನಾನು ಮೂಲಡೇವಿಡ್ ಕಾಪರ್ಫೀಲ್ಡ್ನ್ನೂ ಚಾರ್ಲ್ಸ್ ಡಿಕನ್ಸರ ಇತರ ಅನೇಕ ಕಾದಂಬರಿಗಳನ್ನೂ ಓದಿದೆ. ಬೇರೆ ಲೇಖಕರ ಕಾದಂಬರಿಗಳನ್ನು ನಾನು ಆಗಲೂ ಅನಂತರವೂ ಹೆಚ್ಚಿನ ಸಂಖ್ಯೆಯಲ್ಲಿ ಓದಲಿಲ್ಲ. ಕಾರಣದಿಂದಲೋ ಅಥವಾ ನ್ಯಾಯವಾಗಿಯೋ ಚಾರ್ಲ್ಸ್ ಡಿಕನ್ಸರಿಗಿಂತ ಉತ್ತಮ ಕಾದಂಬರೀಕಾರರಿಲ್ಲವೆಂದು ಆಗ (...ಕಪ್ಪೆಯಂತೆ) ನಿಶ್ಚೈಸಿಬಿಟ್ಟೆ. ಕಾರಣಗಳಿಂದಲೂ ನನ್ನ ಜೀವನಾನುಭಗಳಿಂದಲೂಡೇವಿಡ್ ಕಾಪರ್‌ಫೀಲ್ಡ್ ಕಾದಂಬರಿ ನನ್ನ ಅಚ್ಚುಮೆಚ್ಚಿನದಾಗಿ ಹೋಗಿದೆ.
ನನ್ನ ಸೋದರಳಿಯ ನಾರಾಯಣ ಸುಮಾರು ಹದಿನಾಲ್ಕು ವರ್ಷಗಳ ಹಿಂದೆ, ನಾನು ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಬೇಕೆಂದು ಸಲಹೆಯಿತ್ತನು. ಸಾಧಾರಣ ಸಮಯದಲ್ಲೇ ನನಗೊಂದು ಕಠಿಣ ಖಾಯಿಲೆ ಬಂದು, ಅದರ ಸಂಬಂಧ ವಿಶ್ರಾಂತಿ ದೊರಕಿದಾಗ ಭಾಷಾಂತರ ಕಾರ್ಯವನ್ನು ಮಾಡಿ ಮುಗಿಸಿದೆ. ಇದರ ಜೊತೆಯಲ್ಲೇ ಫ್ರೆಂಚ್ ಕಾದಂಬರಿ (ಇಂಗ್ಲಿಷ್ ಮೂಲದಿಂದ) ‘ಲಾ ಮಿಸರೆಬಲ್ಸ್ನ್ನುದುಃಖಾರ್ತರು ಎಂದು ಹೆಸರಿತ್ತು ಅನುವಾದಿಸಿದೆ.
ನನ್ನ ಎರಡು ಭಾಷಾಂತರಗಳನ್ನು (ಈಗ ದಿವಂಗತ) ವೇದಾಂತ ಶಿರೋಮಣಿ, ಕಡವ, ಶ್ರೀ ಶಂಭುಶರ್ಮರು ಓದಿ, ಅಗತ್ಯಬಿದ್ದಲ್ಲಿ ನನ್ನಿಂದ ತಿದ್ದಿಸಿ, ತನ್ನ ಸಂತೋಷವನ್ನು ವ್ಯಕ್ತಪಡಿಸಿದರು. ಮಾತ್ರವಲ್ಲದೆ ಎರಡೂ ಕಾದಂಬರಿಗಳನ್ನು ತುಲನಾತ್ಮಕವಾಗಿ ಗ್ರಹಿಸಿ, ಇದುದುಃಖಾರ್ತರಿಗಿಂತಲೂ ಮೇಲ್ಮಟ್ಟದ್ದು ಎಂದು ಪ್ರಶಂಸಿಸಿದರು. ಇವರ ಪ್ರಶಂಸೆ ಕಾರಣವಾಗಿ ನನ್ನ ಕೈ ಬರಹದ ಪ್ರತಿ ಹಾಳಾಗದೆ ನನ್ನಲ್ಲಿ ಉಳಿದಿತ್ತು. ಶ್ರೀ ಶಂಭುಶರ್ಮರನ್ನು ನಾನಿಂದು ಕೃತಜ್ಞತಾಪೂರ್ವಕವಾಗಿ, ಗೌರವದಿಂದ ಸ್ಮರಿಸುತ್ತೇನೆ.

ದುಃಖಾರ್ತರು ಪ್ರಿಂಟು-ಪ್ರಕಟಣೆಗೊಂಡಿರುವುದಾದರೂಡೇವಿಡ್ ಕಾಪರ್‌ಫೀಲ್ಡ್ ಮೂಲೆಗೆ ಬಿದ್ದಿತ್ತು. ಇಂಥ ಸಂದರ್ಭದಲ್ಲಿ ನಾರಾಯಣನ ಸಾಹಸ ಬುದ್ಧಿ, ಸಹಕಾರ ಬುದ್ಧಿ, ಕುಗ್ಗದ ತಗ್ಗದ ಜೀವನ ಸ್ಫೂರ್ತಿ ಮತ್ತು ಸ್ವಲ್ಪ ಮಟ್ಟಿಗೆ ಮೈಕಾಬರ್ ಬುದ್ಧಿ ಎದುರು ಬಂದು ಕಾದಂಬರಿ ಪ್ರಿಂಟಾಗುತ್ತಿದೆ, ಪ್ರಕಟಗೊಳ್ಳುತ್ತಿದೆ. ಅವನ ಶ್ರಮ, ತ್ಯಾಗ, ಕೆಲಸ ಎಷ್ಟು ನಡೆದಿವೆ - ಸಂದರ್ಭದಲ್ಲಿ, ನನಗೆ ಮಾತ್ರ ಗೊತ್ತಾಗಿದೆ. ನನಗಿಂತ ಎಷ್ಟೋ ಚಿಕ್ಕವನಾದ ಚಿ| ನಾರಾಯಣನಿಗೆ ನನ್ನ ಅನಂತ ಆಶೀರ್ವಾದಗಳು.
ಶ್ರೀ ಡಾ| ಕೆ. ಶಿವರಾಮ ಕಾರಂತರು ೧೯೧೯ರಿಂದಲೇ ನನ್ನ ಪರಿಚಿತರೂ, ಅನಂತರ ನಮ್ಮ ನೆರೆಕರೆಯ ಸ್ನೇಹಿತರೂ ಆಗಿದ್ದರು. ಅವರ ಸಮಯದ ಅವಕಾಶವನ್ನೂ ಸಮಯದ ಬೆಲೆಯನ್ನೂ ಅರಿತಿರುವ ನಾನು ಅವರಿಂದ (ಆಖೈರು ಪ್ರೂಫ್ ತಿದ್ದಿದ) ಪುಸ್ತಕವನ್ನು ಹೇಗೆ ಓದಿಸಲಿ, ಮುನ್ನುಡಿಯನ್ನು ಯಾಚಿಸಲಿ ಎಂದು ಹೆದರುತ್ತಿದ್ದೆ. ಒಮ್ಮೆ ನೋಡೋಣವೆಂದು ವಿಚಾರಿಸಿದೆ - ‘ಆಖೈರು ಪ್ರೂಫ್ ತಿದ್ದಿ ಮುಗಿದ ಇಡೀ ಪುಸ್ತಕವನ್ನು ಕೊಟ್ಟರೆ, ಓದಿ ಮುನ್ನುಡಿ ಕೊಡಬಹುದು ಎಂಬರ್ಥದ ಉತ್ತರವಿತ್ತರು. ಓದದೆ ದಾಕ್ಷಿಣ್ಯಕ್ಕೆ, ಪ್ರಾಮಾಣಿಕತನವನ್ನು ಮೀರಿ, ತನ್ನ ಅಭಿಪ್ರಾಯವನ್ನು ಕೊಡಕೂಡದೆಂಬ ಅವರ ನಿಷ್ಠೆಗೆ, ಆತ್ಮ ಸಂಸ್ಕೃತಿಗೆ ನಾವು ಎಷ್ಟು ಗೌರವಿಸಿದರೂ ಸಾಲದು. ಅವರು ತಮ್ಮ ಮುನ್ನುಡಿಯನ್ನು ನನಗೆ ಕೊಟ್ಟದ್ದು ಮಹಾ ಅನುಗ್ರಹವೆಂದು ಗ್ರಹಿಸುತ್ತಾ ಅವರನ್ನು ಹಾರ್ದಿಕವಾಗಿ ವಂದಿಸುತ್ತೇನೆ.
ಇದರ ಪ್ರೂಫ್ ಓದಿ ತಿದ್ದುತ್ತಿದ್ದ ಕಾಲದಲ್ಲಿ ತಾವೂ ಕೇಳಿ, ಸಂತೋಷಿಸಿ, ನಮ್ಮ ಕಾರ್ಯ ಸಾಧನೆಯು ಸಂತೋಷಪ್ರದವಾಗುವಂತೆ ಸಲಹೆಯೀಯುತ್ತಿದ್ದ ನಾರಾಯಣನ ಮಿತ್ರ ವೃಂದಕ್ಕೂ ನನ್ನ ವಂದನೆಗಳು.
ಗ್ರಂಥವನ್ನು ಸುಂದರವಾಗಿ ಮುದ್ರಿಸಿದ ಮೆ| ಬೃಂದಾವನ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಪ್ರೈ.ಲಿ., ಬೆಂಗಳೂರು ಇವರ ಉಪಕಾರವನ್ನು ಸಂತೋಷದಿಂದ ಸ್ಮರಿಸುತ್ತೇನೆ.
ದೇವಸ್ಥಾನಗಳಲ್ಲಿ ದೇವರ ದಿವ್ಯ ಪ್ರಸಾದಕ್ಕಾಗಿ ಕೈಯೊಡ್ಡಿ ನಿಂತಿರುವ ಹಿರಿಯರ ಕಾಲೆಡೆಯಲ್ಲಿ ನುಗ್ಗಿ ತನಗೂ ಪ್ರಸಾದ ಬೇಕೆಂದು ಕೈಯೊಡ್ಡುವ ಕಿರುಬಾಲಕನಂತಿದೆ ನನ್ನ ಪ್ರಸಂಗ. ತಾವು ಕಾದಂಬರಿಗಳನ್ನೋ ಇತರ ಸಾಹಿತ್ಯ ವಿಷಯಗಳನ್ನೋ ಬರೆದು ಸಮಾಜದ ಸಂತೋಷ ಬಯಸುವ ಹಿರಿಯ ಸಾಹಿತಿಗಳ ಎಡೆಯಲ್ಲಿ ಅವರ ಮತ್ತು ಎಲ್ಲರಿಗೂ ಆಧಾರಸ್ತಂಭದಂತಿರುವ ಓದುಗರ, ಎರಡು ಶುಭಾಶಯಕ್ಕಾಗಿ ನಾನಿಂದು ಕೈಯ್ಯೊಡ್ಡಿ ನಿಂತಿದ್ದೇನೆ.
.ಪಿ.ಸುಬ್ಬಯ್ಯ
ಆರ್ಯಾಪು ಗ್ರಾಮದ ಮರಿಕೆ ಮನೆ, ದಕ
ತಾ| ೧೯-೧೦-೧೯೬೬ 
ನಾನು ಸುತ್ತಲಿನ ಅನುಭವವನ್ನು ಪಡೆಯುತ್ತೇನೆ
ಅಧ್ಯಾಯ ಎರಡು, ಮುಂದುವರಿದ ಭಾಗ
ನಾವು ಒಳಗೆ ಬಂದ ಕೂಡಲೇ ಪೆಗಟಿಯು ಕದವನ್ನು ಮುಚ್ಚಿದಳು. ನಾವೆಲ್ಲರೂ ಯಾವಾಗಲೂ ಕುಳಿತಿರುತ್ತಿದ್ದ ಕೋಣೆಗೇ ಹೋದೆವು. ತಾಯಿಯು ದಿನ ಮಾತ್ರ - ಯಾವಾಗಿನಂತೆ ಬೆಂಕಿಯ ಎದುರು ಕುಳಿತುಕೊಳ್ಳುವ ಬದಲು - ಕೋಣೆಯ ಇನ್ನೊಂದು ತುದಿಗೆ ಹೋಗಿ ಏಕಾಂಗಿಯಾಗಿ ಕುಳಿತಳು. ಅವಳಿಗೆ ಹಾಗಿರುವುದೇ ಅಂದು ಸಂತೋಷವೆಂಬಂತೆ ಅವಳಷ್ಟಕ್ಕೆ ಏನೋ ಒಂದು ಪದವನ್ನು ಮೆಲ್ಲಗೆ ಹೇಳುತ್ತಿದ್ದಳು.
ಪೆಗಟಿಯು ಅವಳ ಎದುರು ಬಂದು ನಿಂತು -
ಸಂಜೆಯ ಕಾಲಕ್ಷೇಪ ಸುಖವಾಗಿತ್ತೇ? ಎಂದು ಕೇಳಿದಳು. ಮಾತುಗಳಲ್ಲಿ ಪೆಗಟಿಯ ನಿತ್ಯದ ಸಲಿಗೆಯಿರಲಿಲ್ಲ - ಪೆಗಟಿಯು ಒಂದು ಸಿಪಾಯಿ ನಿಂತಿದ್ದಂತೆ ನೆಟ್ಟಗೆ ನಿಂತು, ಕೈಯಲ್ಲೊಂದು ದೀಪ ಹಿಡಿದುಕೊಂಡು, ಇತರ ಕೆಲಸಗಳ ನಡುವೆ ಸಾಂಪ್ರದಾಯಿಕವಾಗಿ ವಿಚಾರಿಸಿದವಳಂತೆ ಮಾತನ್ನಾಡಿದ್ದಳು.
ಓಹೋ, ಕಾಲವು ಸುಖವಾಗಿ ದಾಟಿತು. ನೀನು ವಿಚಾರಿಸಿದುದು ಸಂತೋಷ ಅಂದಳು ನನ್ನ ತಾಯಿ.
ಜನರಿಲ್ಲದ ಹಳ್ಳಿಗಳಲ್ಲಿ ಅಪರಿಚಿತರಾದರೂ ಚಿಂತೆಯಿಲ್ಲ - ಯಾರಾದರೂ ಬಂದು ಹೋಗುತ್ತಿರುವುದು ಸಂತೋಷವಪ್ಪ ಅಂದುಕೊಂಡಳು ಪೆಗಟಿ.
ಇಂದಿನ ಸಂಜೆಯು ಸಂತೋಷದಿಂದ ಕಳೆಯಿತು ಎಂದು ಮಾತ್ರ ತಾಯಿ ಪುನಃ ಹೇಳಿದಳು.
ಪೆಗಟಿ ನಿಂತಲ್ಲಿಂದ ಅಲ್ಲಾಡಲಿಲ್ಲ. ತಾಯಿಯು ಮೃದುವಾಗಿ ತನಗೆ ತಾನೇ ಹಾಡಿಕೊಂಡಿದ್ದಳು. ನನಗೆ ಇದ್ದಕ್ಕಿದ್ದ ಹಾಗೆಯೇ ನಿದ್ರೆ ಬಂತು. ಸ್ವಲ್ಪ ಹೊತ್ತು - ಎಷ್ಟು ಹೊತ್ತೆಂದು ಸ್ಪಷ್ಟವಾಗಿ ತಿಳಿಯಲಾರದಷ್ಟು ಹೊತ್ತು - ನಿದ್ರೆ ಮಾಡಿ, ಇವರಿಬ್ಬರ ಮಾತುಗಳಿಂದ ಸ್ವಲ್ಪ ಸ್ವಲ್ಪವಾಗಿ ನಾನು ಎಚ್ಚತ್ತೆನು. ನಾನು ಸಂಪೂರ್ಣವಾಗಿ ಎಚ್ಚತ್ತು ನೋಡುವಾಗ ತಾಯಿಯೂ ಪೆಗಟಿಯೂ ಅಳುತ್ತಲಿದ್ದರು. ಆಗ ನನಗೆ ಮೊದಲು ಕೇಳಿಸಿದುದು ಪೆಗಟಿಯ ಮಾತುಗಳು. ಪೆಗಟಿ ಅಂದಳು -
ಇಂಥವನನ್ನು ದಿವಂಗತ ಮಿಸ್ಟರ್ ಡೇವಿಡ್ ಕಾಪರ್‌ಫೀಲ್ಡರು ನೋಡಿದ್ದರೆ ಎಂದೂ ಒಪ್ಪುತ್ತಿರಲಿಲ್ಲ - ಮಟ್ಟಿಗೆ ಪಣತೊಟ್ಟು ಹೇಳುವಷ್ಟು ಧೈರ್ಯ ನನಗಿದೆ.”
ದೇವರೇ, ಇಂಥ ಅವಸ್ಥೆಯೂ ಬಂದಿತೇ, ಪೆಗಟಿ! ನಿನ್ನ ಬಾಯಿಂದ ಬರಬೇಕಾದ ಮಾತು ಇದೇಯೇ? ಮದುವೆಯ ವಿಷಯವನ್ನರಿಯದ ಚಿಕ್ಕ ಪುಟ್ಟ ಹುಡುಗಿಯೇ ನಾನು, ಪೆಗಟಿ? ತನ್ನ ಆಳಿನಿಂದಲೇ ರೀತಿ ಹೇಳಿಸಿಕೊಳ್ಳುವ ಯಜಮಾನಿಯು ಎಲ್ಲಿಯಾದರೂ ಇರಬಹುದೇ? ಗ್ರಹಿಸಿ ನೋಡು, ಪೆಗಟಿ, ನನಗೆ ಬೇರೆ ಯಾರಿದ್ದಾರೆ? ಕಷ್ಟ ಬಂದಾಗ ಸಹಾಯಕ್ಕಾಗಿ ಯಾರ ಕಡೆ ನೋಡಲಿ?” ಎಂದು ಮೊದಲಾಗಿ ತಾಯಿ ಅಳುತ್ತಾ ಹೇಳಿದಳು.
ನೀನು ಮದುವೆಯಾದವಳೆಂದು ಒಪ್ಪುತ್ತೇನೆ. ಆದರೆ...” ಎಂದು ಪೆಗಟಿ ಮಾತು ಮುಂದರಿಸುವ ಮೊದಲೇ ತಾಯಿ ಅಂದಳು -
ಹಾಗಾದಮೇಲೆ ನನ್ನ ನಿಸ್ಸಹಾಯಕ ಸ್ಥಿತಿಯಲ್ಲಿ, ನೀನೂ ಸಹ ಹೀಗನ್ನಬಹುದೇ? ಹಾಗನ್ನಲು ನಿನಗಾದರೂ ಅಧಿಕಾರವಿದೆಯೇ? ಅಥವಾ ಅಧಿಕಾರದ ವಿಷಯ ಹಾಗಿರಲಿ, ನಿನಗೆ ಮನಸ್ಸಾದರೂ ಹೇಗೆ ಬಂತು, ಪೆಗಟಿ?”
ಅದಕ್ಕಾಗಿಯೇ - ಅಂದರೆ, ನಿನಗೆ ಹಿತಚಿಂತಕರು ಯಾರೂ ಇಲ್ಲದಿರುವಾಗ - ನೀನು ಸಂಬಂಧಕ್ಕೆ ಒಪ್ಪಬಾರದೆಂದು ನಾನನ್ನುವುದು. ಇದು ಒಳ್ಳೆಯ ಸಂಬಂಧವಲ್ಲ, ನೋಡು ಎಂದು ಮೊದಲಾಗಿ ಹೇಳುತ್ತಾ ತನ್ನ ಕೈಯ್ಯಲ್ಲಿದ್ದ ದೀಪವನ್ನೇ ತಾಯಿಯ ಮುಖಕ್ಕೆ ಎಸೆದುಬಿಡುವಳೋ ಎಂಬಂತೆ ಪೆಗಟಿ ತೋರಿದಳು.
ಮೊದಲೇ ಪ್ರಾರಂಭಿಸಿದ್ದ ಅಳುವನ್ನು ತಾಯಿ ಮತ್ತಷ್ಟು ಹೆಚ್ಚಾಗಿ ಮಾಡಿಕೊಂಡು, ಅಳುತ್ತಲೂ ಮಾತಾಡುತ್ತಲೂ ಪೆಗಟಿಗೆ ಉತ್ತರಕೊಡತೊಡಗಿದಳು -
ಹೀಗೊಂದು ಹಿಂಸೆಯನ್ನೇಕೆ ಕೊಡುತ್ತಿದ್ದೀಯಾ, ಪೆಗಟಿ? ಏನೋ ಕೆಲವು ಮಾತುಗಳನ್ನು ಮಾತ್ರ ಆಡಿರುತ್ತೇವೆ. ಯಾವ ವಾಗ್ದಾನವೂ ಆಗಿರುವುದಿಲ್ಲ. ಅವನು ನನ್ನನ್ನು ನೋಡಿ ಮರುಳಾಗಿರುವನು ಎಂದು ಒದರಿದೆಯಲ್ಲಾ - ಅದೇನಿದ್ದರೂ ನಾನು ಮಾಡುವುದೇನು? ಇತರರು ಅವರಿಗೆ ಕುಷಿ ಬಂದಂತೆ ನನ್ನನ್ನು ಕುರಿತು ಗ್ರಹಿಸಿಕೊಂಡರೆ ಅವರಿಗಾಗಿ ನಾನು ತಲೆ ಬೋಳಿಸಿಕೊಂಡು ಕುರೂಪಿಯಾಗಿ ಕುಳಿತಿರಬೇಕೆನ್ನುವಿಯಾ? ನಿನ್ನಂತರಂಗದ ಬಯಕೆ ಹಾಗಿದ್ದರೆ ಹೇಳಿಬಿಡು ಪೆಗಟಿ.”
ಉತ್ತರವು ಪೆಗಟಿಯನ್ನು ಇರಿಯಿತು. ಅವಳೂ ಅಳಲಾರಂಬಿಸಿದಳು. ತಾಯಿ ನನ್ನ ಹತ್ತಿರ ಬಂದು -
ಡೇವೀ, ನಿನ್ನಲ್ಲಿ ನನಗೆ ಪ್ರೀತಿ ಕಡಿಮೆಯಾಗಿ ಹೀಗೆ ಮಾಡುತ್ತಿದ್ದೇನೆಂದು ಪೆಗಟಿ ಓರೆಯಲ್ಲಿ ಒದರುತ್ತಾಳಲ್ಲಾ, ಅದು ನ್ಯಾಯವೇ?” ಎಂದು  ಹೇಳುತ್ತಾ ನನ್ನನ್ನು ಅಪ್ಪಿಕೊಂಡಳು.
ಹಾಗೆ ಯಾರೂ, ಯಾವಾಗಲೂ ಹೇಳಲಿಲ್ಲ ಎಂದು ಹೇಳುತ್ತಾ ಪೆಗಟಿ ಮತ್ತಷ್ಟು ಜೋರಾಗಿ ಅಳತೊಡಗಿದಳು.
ಯಾರೂ ಹೇಳಲಿಲ್ಲ! - ನೀನು ಹೇಳಿದ ಮಾತುಗಳ ಅರ್ಥ ಹಾಗಲ್ಲದೆ ಮತ್ತೆ ಹೇಗೆ? ಹೊಸ ಲಂಗ ನನಗೆ ಅಗತ್ಯವಿದ್ದರೂ ಹಳೆ ಲಂಗದಲ್ಲೇ ನಾನು ದಿನದೂಡುತ್ತಿರುವುದು ಯಾರಿಗೆ ಹಣ ಉಳಿಸುವುದಕ್ಕೋಸ್ಕರ ಮತ್ತೆ? - ಈಗ ಮೂರು ತಿಂಗಳಾಯ್ತು, ನನ್ನ ಲಂಗ ಹರಿದು!” ಎಂದನ್ನುತ್ತಾ, ತಾಯಿ ತನ್ನ ಕೆನ್ನೆಯನ್ನು ನನ್ನ ಮುಖಕ್ಕೆ ಒತ್ತಿಟ್ಟುಕೊಂಡು, ಪುನಃ ಮಾತಾಡತೊಡಗಿದಳು -
ನಾನು ನಿನ್ನನ್ನು ಸಾಕೋದಿಲ್ಲವೇ, ಡೇವಿ? ನಾನು ನಿನ್ನ ವೈರಿಯೇ, ಡೇವಿ? ನಾನು ನಿನಗೆ ಜೋರು ಮಾಡ್ತೇನೆಯೇ, ಡೇವಿ? ಇದೆಲ್ಲಾ ಹೌದೆಂದು ಬೇಕಾದರೂ ಹೇಳು, ಡೇವಿ - ಪೆಗಟಿ ನಿನ್ನ ಕಡೆಯವಳು. ಅವಳು ಮಾತ್ರ ನಿನ್ನನ್ನು ಪ್ರೀತಿಸುವವಳೆಂದೇ ಬೇಕಾದರೂ ಹೇಳಿಬಿಡು ಎಂದು ಮೊದಲಾಗಿ ಗದ್ಗದ ಕಂಠದಿಂದ ಉದ್ದುದ್ದವಾಗಿ ಹೇಳಿದಳು.
ಇಷ್ಟಾಗುತ್ತಾ, ನಮಗೆ ಅರಿಯದೇ, ನಾವು ಮೂವರೂ ಅಳತೊಡಗಿದೆವು. ಸ್ವರದಲ್ಲಿ ಅವರಿಬ್ಬರ ಅಳುವಿನ ಸ್ವರಕ್ಕಿಂತಲೂ ನನ್ನದು ಮೇಲಾಗಿತ್ತು. ನನ್ನ ದುಃಖಾತಿರೇಕದಲ್ಲಿ ನಾನು ಪೆಗಟಿಯನ್ನು ನೋಡಿ -
ಮೂರ್ಖಿ, ಮೃಗ ಎಂದಂದುಬಿಟ್ಟೆ. ಪೆಗಟಿಗೆ ನನ್ನ ಮಾತು ಕೇಳಿ ಒಂದು ಕಡೆಯಿಂದ ದುಃಖವೂ, ಮತ್ತೊಂದು ಕಡೆಯಿಂದ ನನ್ನ ಮೇಲಿನ ಪ್ರೀತಿಯೂ ಹೆಚ್ಚಿತು. ಅವಳು ನನ್ನ ತಾಯಿಯ ಕ್ಷಮೆಯನ್ನು ಬೇಡಿದಳು. ತಾಯಿಯನ್ನು ಅಪ್ಪಿಕೊಂಡು ತನ್ನ ಕೆಲವು ಗುಂಡಿಗಳನ್ನು ಕಳೆದುಕೊಂಡಳು. ಕೊನೆಗೆ ನನ್ನನ್ನೂ ಅಪ್ಪಿಕೊಂಡು ಇನ್ನೂ ಕೆಲವು ಸ್ಫೋಟನಗಳನ್ನು ನಡೆಸಿದಳು. ಹೀಗೆಲ್ಲಾ ಆಗುತ್ತಾ ನಾವು ರಾಜಿಯಾದೆವು.
ಇಷ್ಟೆಲ್ಲಾ ಆದ ಕೆಲವು ದಿನಗಳ ಅನಂತರವೋ ಅಥವಾ, ಒಂದೆರಡು ವಾರಗಳ ಅನಂತರವೋ - ಅಂತೂ, ಒಂದು ಆದಿತ್ಯವಾರ ದಿನ ಮೊದಲು ಪ್ರಸ್ಥಾಪಿಸಿರುವ ಗೃಹಸ್ಥರು ಇಗರ್ಜಿಯಿಂದ ನಮ್ಮ ಜತೆಯಲ್ಲೇ ನಮ್ಮ ಮನೆಗೆ ಬಂದರು. ನಮ್ಮಲ್ಲಿದ್ದ ಪ್ರಖ್ಯಾತವಾದ ಒಂದುಜಿರೇನಿಯಂ ಹೂವನ್ನು ನೋಡಲು ಬಂದದ್ದೆಂದು ಗೃಹಸ್ಥರು ನನ್ನೊಡನೆ ಹೇಳಿದ್ದು ಈಗಲೂ ಜ್ಞಾಪಕವಿದೆ. ಆದರೆ, ಅವರು ಹೂವನ್ನು ಕಂಡಾಗ ವಿಶೇಷವಾಗಿ ಅದನ್ನು ಕುರಿತು ಗಮನಕೊಟ್ಟಂತೆ ಕಾಣಲಿಲ್ಲ. ಜಿರೇನಿಯಂ ನಮ್ಮ ಕೋಣೆಯ ಕಿಟಕಿಯ ದಂಡೆಯಲ್ಲಿ ಒಂದು ಚೆಟ್ಟಿಯಲ್ಲಿತ್ತು. ಕೋಣೆಯಲ್ಲಿ ಕುಳಿತು ಮಾತಾಡುತ್ತಾ ಹೂವಿನ ಒಂದೆರಡು ಕುಸುಮಗಳನ್ನು ತನಗೆ ಕೊಡಬೇಕೆಂದು ಗೃಹಸ್ಥರು ತಾಯಿಯನ್ನು ಯಾಚಿಸಿದರು. ಕುಸುಮಗಳನ್ನು ಎಷ್ಟು ಬೇಕಾದರೂ ಅವರು ತೆಗೆದುಕೊಳ್ಳಬಹುದೆಂದು ತಾಯಿ ಹೇಳಿದರೂ, ತಾಯಿಯೇ ಕುಸುಮಗಳನ್ನು ಕುಯ್ದುಕೊಡಬೇಕೆಂದು ಅವರು ಹಟ ಮಾಡಿದರು. ಕೊನೆಗೆ ತಾಯಿ ಒಂದೆರಡು ಕುಸುಮಗಳನ್ನು ಕೊಯ್ದು ಅವರಿಗೆ ಕೊಟ್ಟಳು. ಗೃಹಸ್ಥರು ಕುಸುಮಗಳನ್ನು ಸದಾ ಕಾಪಾಡಿಕೊಂಡು ತಾನು ಇಟ್ಟುಕೊಳ್ಳುವುದಾಗಿ ತಾಯಿಯೊಡನೆ ಸಂತೋಷಭರಿತರಾಗಿ ಹೇಳಿದಾಗ, ಒಂದೆರಡು ದಿನಗಳಲ್ಲಿ ಒಣಗಿಹೋಗುವ ಹೂವಿನ ಎಸಳಿನ ವಿಷಯದಲ್ಲಿ ಅವರಿಗೆ ಏನೂ ತಿಳಿವಳಿಕೆಯಿಲ್ಲವೆಂದೂ - ಅವರೊಬ್ಬ ದೊಡ್ಡ ಹೆಡ್ಡರೇ ಎಂದೂ ನಾನು ಗ್ರಹಿಸಿಕೊಂಡೆನು.
ಹೀಗೆ ಕೆಲವು ದಿನಗಳು ಕಳೆಯುತ್ತಾ ಬಂದ ಹಾಗೆ ಸಂಜೆಯ ಸಮಯದಲ್ಲಿ ಪೆಗಟಿ ನಮ್ಮ ಜತೆಯಲ್ಲಿ ಕುಳಿತಿರುವುದು ಕಡಿಮೆಯಾಯಿತು. ಆದರೂ ನಮ್ಮ ಮೂವರೊಳಗಣ ಪ್ರೀತಿ ಸ್ವಲ್ಪವೂ ಕಡಿಮೆಯಾಗಲಿಲ್ಲ. ಆದರೆ, ತಾಯಿ ಪೆಗಟಿಯನ್ನು ಕಂಡರೆ ಮೊದಲಿಗಿಂತಲೂ ಹೆಚ್ಚಾಗಿ ಹೆದರುತ್ತಿದ್ದಳು. ವಿಧದ ತಾಯಿಯ ಹೆದರಿಕೆಗೆ ಕಾರಣವನ್ನು ನಾನು ಅರಿಯಲಾರದವನಾಗಿದ್ದರೂ - ತಾಯಿ ಅವಳ ಒಳ್ಳೆಯ ಉಡುಪುಗಳನ್ನೆಲ್ಲಾ ಬಿಡದೆ ತೊಟ್ಟು ಮಾಸುವುದನ್ನು ಪೆಗಟಿಯು ಆಕ್ಷೇಪಿಸಿರಬೇಕು, ಅಥವಾ, ನೆರೆ ಗೃಹಸ್ಥರ ಮನೆಗೆ ಆಗಾಗ ಹೋಗುವುದು ಸರಿಯಲ್ಲವೆಂದು ಪೆಗಟಿ ಅಂದಿರಬೇಕು. ಎರಡರ ಪೈಕಿ ಯಾವುದೋ ಒಂದು ಕಾರಣವಾಗಿರಬೇಕೆಂದು ನಾನು ಊಹಿಸಿಕೊಂಡಿದ್ದೆ.
ಕರಿ ಮೀಸೆಯ ಗೃಹಸ್ಥರು ಆಗಾಗ ನಮ್ಮ ಮನೆಗೆ ಬರತೊಡಗಿದರು. ಅವರ ಬರೋಣವು ಎಷ್ಟೇ ಹೆಚ್ಚಿದರೂ ಅವರನ್ನು ಕುರಿತಾದ ನನ್ನ ಹೆದರಿಕೆಯೂ, ದ್ವೇಷವೂ ಮೊದಲಿನಂತೆಯೇ ಇದ್ದುವುಅವರ ಮೇಲೆ ಒಂದು ವಿಧವಾದ ಮಾತ್ಸರ್ಯವೂ ನನ್ನಲ್ಲಿ ಉತ್ಪನ್ನವಾಯಿತು. ನಮ್ಮ ಸುಖಸಂತೋಷಗಳ ಮಧ್ಯೆ ಸ್ವಯಂಪ್ರೇರಿತರಾಗಿ ತಾವು ಸಹಾಯಕರೆಂಬಂತೆ, ಅನಗತ್ಯವಾಗಿ ಅವರು ಪ್ರವೇಶಿಸುತ್ತಿದ್ದರೆಂದು ನಾನು ತಿಳಿಯತೊಡಗಿದೆ. ತರ್ಕಗಳಿಂದ ತೋರಿಸಿಕೊಡಲಾಗದಿದ್ದರೂ, ನಿಜವಾಗಿಯೂ ನಮ್ಮಲ್ಲಿ ಅನೇಕರ ಕುರಿತು, ಒಂದು ವಿಧದ ಮಾರ್ಮಿಕ, ಅಂತರಂಗ ಪ್ರೇರಣೆಯಿಂದ, ಜಿಗುಪ್ಸೆ, ವಿರೋಧ, ದ್ವೇಷ ಉಂಟಾಗುವ ಕ್ರಮದಲ್ಲಿ, ನನಗೆ ಗೃಹಸ್ಥರನ್ನು ಕುರಿತು ಅಂತರಂಗದಲ್ಲೇ ವಿರೋಧ, ದ್ವೇಷ ಉಂಟಾಗಿತ್ತು. ನಮಗೂ ಅವರಿಗೂ ನಡೆದು ಹೋಗುತ್ತಿದ್ದ ಚಿಕ್ಕ ಚಿಕ್ಕ ಪ್ರಸಂಗಗಳ ಬಲೆಯಿಂದ ಅವರನ್ನು ಕುರಿತಾದ ನಮಗಿದ್ದ ದ್ವೇಷದ ಕಾರಣಗಳನ್ನು ಹೆಕ್ಕಿ ತೆಗೆಯುವ ಶಕ್ತಿ ನನಗೆ ಆಗ ಇರಲಿಲ್ಲ.
ಹೀಗೆ ದಿನ ಕಳೆಯುತ್ತಾ ಗೃಹಸ್ಥರ ಹೆಸರು ಮಿಸ್ಟರ್ ಮರ್ಡ್‌ಸ್ಟನ್ ಎಂದು ನನಗೆ ತಿಳಿಯಿತು. ಒಂದು ದಿನ ಬೆಳಿಗ್ಗೆ ಮಿ. ಮರ್ಡ್‌ಸ್ಟನ್ನರು ಕುದುರೆಯನ್ನೇರಿ ನಮ್ಮ ಮನೆಗೆ ಬಂದರು. ನಮ್ಮ ಹಣ್ಣಿನ ತೋಟದಲ್ಲಿ ಇದ್ದ ತಾಯಿಯನ್ನು ಕಂಡು, ಕುದುರೆಯನ್ನು ನಿಲ್ಲಿಸಿ, ತಾನು ಲೌಸ್ಟಾಫಿನ ಕೆಲವು ಸ್ನೇಹಿತರನ್ನು ನೋಡಲು ಹೋಗುವುದಾಗಿಯೂ, ನಾನು ಇಷ್ಟಪಟ್ಟರೆ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿಬರುವುದಾಗಿಯೂ ತಿಳಿಸಿದರು.
ಅಂದಿನ ಬೆಳಗ್ಗಿನ ಬಿಸಿಲು, ಚಳಿ, ಗಾಳಿ, ಬೆಳಕು ಯಾರನ್ನಾದರೂ ಹೊರಗೆ ಹೋಗಿ ತಿರುಗಾಡಲು ಪ್ರೇರೇಪಿಸುವಷ್ಟು ಚೆನ್ನಾಗಿದ್ದುವು. ಮಿ. ಮರ್ಡ್‌ಸ್ಟನ್ನರು ಏರಿಬಂದಿದ್ದ ಕುದುರೆಗೆ ಅಂಥಾ ಮನಸ್ಸುಂಟಾಗಿ ನಿಂತಲ್ಲಿ ನಿಲ್ಲದೆ ಹೋಗೋಣವೆಂದು ತವಕಪಡುತ್ತಿದ್ದಿತು. ನಾನು ಗೃಹಸ್ಥರ ಜತೆಯಲ್ಲಿ ಹೋಗಲು ಸಮ್ಮತಿಸಿದೆ. ನನ್ನನ್ನು ಪೆಗಟಿಯು ಮಹಡಿಯ ಮೇಲೆ ಕರೆದುಕೊಂಡು ಹೋಗಿ ದುಸ್ತು ಮಾಡತೊಡಗಿದಳು. ನನಗೆ ತಲೆಬಾಚಿ, ದುಸ್ತು ಆಗುವವರೆಗೆ ಮಿ. ಮರ್ಡ್‌ಸ್ಟನ್ನರು ಬೇಲಿಯ ಹೊರಗಡೆಯಿಂದ ಒಳಗಿದ್ದ ನನ್ನ ತಾಯಿಯೊಡನೆ ಮಾತಾಡುತ್ತಿದ್ದರು. ಅವರಿಬ್ಬರೂ, ಮಧ್ಯೆ ಚಿಕ್ಕ ಬೇಲಿಯಿದ್ದರೂ, ಅತ್ತಿಂದಿತ್ತ ತಿರುಗಾಡುತ್ತಾ ಮಾತಾಡುತ್ತಾ ಒಮ್ಮೊಮ್ಮೆ ಇಬ್ಬರೂ ಒಟ್ಟಾಗಿ ಕುತೂಹಲದಿಂದ, ಬಗ್ಗಿ, ಒಂದು ಹೂವನ್ನೋ ಗಿಡವನ್ನೋ ನೋಡುತ್ತಿದ್ದರು. ನಮ್ಮ ಮಹಡಿಯಿಂದ ಅದೆಲ್ಲ ಕಾಣಿಸುತ್ತಿತ್ತು. ಅವರು ಬಗ್ಗಿ ನೋಡುತ್ತಿದ್ದ ಸಮಯದಲ್ಲೆಲ್ಲ ನನ್ನ ತಲೆಬಾಚುತ್ತಿದ್ದ ಪೆಗಟಿ ತಲೆಯನ್ನು ಹಣಿಗೆಯಿಂದ ನನಗೆ ನೋವಾಗುವಷ್ಟು ಒತ್ತಿ ಬಾಚುತ್ತಿದ್ದಳು.
ನನ್ನ ದುಸ್ತು ಆದನಂತರ ನನ್ನನ್ನು ಕರೆದುಕೊಂಡು ಹೋಗಿ ಕುದುರೆಯ ಮೇಲೆ ಕುಳ್ಳಿರಿಸಿದರು. ನನ್ನ ಹಿಂದೆ ಮಿ. ಮರ್ಡ್‌ಸ್ಟನ್ನರು ಕುಳಿತು ನಾವು ಲೌಸ್ಟಾಫಿನ ಕಡೆ ಹೊರಟೆವು. ಕುದುರೆಯ ಮೇಲೆ ಕುಳಿತಿದ್ದ ನನ್ನನ್ನು ಮಿ. ಮರ್ಡ್‌ಸ್ಟನ್ನರು ಒಂದು ಕೈಯಿಂದ ಹಿಡಿದುಕೊಂಡಿದ್ದರು. ನಾನು ಒಮ್ಮೊಮ್ಮೆ ಏನೇನೋ ನೆಪಮಾಡಿಕೊಂಡು ಅವರ ಮುಖವನ್ನು ನೋಡುತ್ತಿದ್ದೆ. ಅವರ ಕಣ್ಣು, ಮುಖದ ಮೇಲಿನ ರೋಮ, ಮೀಸೆ ಎಲ್ಲವೂ ಕರ್ರಗಿದ್ದುವು. ಅವರು ಮುಖವನ್ನು ನುಣ್ಣಗೆ ಕ್ಷೌರ ಮಾಡಿದ್ದುದರಿಂದ ಚರ್ಮದ ಮೇಲೆ ಕರಿಚುಕ್ಕೆಗಳಿದ್ದಂತೆ ರೋಮದ ಬುಡ ತೋರುತ್ತಿದ್ದುವು. ತಿದ್ದಿದ ಹುಬ್ಬು, ಮೀಸೆ, ಕರ್ರಗಿನ ಕಣ್ಣು, ಬಲವಾದ ದವಡೆಗಳಿದ್ದ ಮಿ. ಮರ್ಡ್‌ಸ್ಟನ್ನರು ಸುಂದರ ಪುರುಷರೆಂದೇ ನಾನು ಭಾವಿಸಿದೆ. ಮತ್ತು, ಈಗ ಗ್ರಹಿಸುವಾಗ, ನನ್ನ ಹೆಡ್ಡು ತಾಯಿಯೂ ನಾನು ಗ್ರಹಿಸಿದಂತೆಯೇ ಗ್ರಹಿಸಿರಬೇಕೆಂದು ತೋರುತ್ತದೆ. ನಾವು ಹೀಗೆ ಕುದುರೆಯ ಮೇಲೆ ಮುಂದರಿಸಿಹೋಗಿ ಲೌಸ್ಟಾಫಿಗೆ ತಲಪಿದೆವು.
ಲೌಸ್ಟಾಫ್ ಸಮುದ್ರ ಕರೆಯ ಒಂದು ಚಿಕ್ಕ ಊರು. ನಾವು ಅಲ್ಲಿನ ಒಂದು ಹೋಟೆಲಿಗೆ ಹೋದೆವು. ಹೋಟೆಲಿನ ಒಳಗೆ ಕುರ್ಚಿಗಳನ್ನೆಲ್ಲ ಸಾಲಾಗಿ ಇಟ್ಟುಕೊಂಡು ಇಬ್ಬರು ಹಾಯಾಗಿ ಮಲಗಿದ್ದರು. ಅವರು ಎಡೆಬಿಡದೆ ಸಿಗರೇಟು ಸೇದುತ್ತಿದ್ದರು. ನಮ್ಮನ್ನು ಕಂಡ ಕೂಡಲೆ ಫಕ್ಕನೆ ಎದ್ದುನಮಸ್ಕಾರ, ಮಿ. ಮರ್ಡ್‌ಸ್ಟನ್ ಎಂದರು. ಅವರಲ್ಲಿ ಒಬ್ಬನು ನನ್ನನ್ನು ನೋಡುತ್ತಾ, ಸಲಿಗೆಯಿಂದ -
ಪೋರ ಯಾರು? ನೀನು ಬರುವುದು ತಡವಾದದ್ದನ್ನು ಕಂಡು ನೀನು ಬದುಕಿದ್ದೀಯೋ ಸತ್ತೇ ಹೋದೆಯೋ ಎಂದು ಹೆದರಿದ್ದೆವು ಎಂದನ್ನುತ್ತಾ ಒರಟಾಗಿ ಹಹ್ಹಹ್ಹಾ ಎಂದು ನಗಾಡಿದನು.
ಇವನು ಚಿಕ್ಕ ಡೇವಿಡ್ ಅಂದರು ಮಿ. ಮರ್ಡ್‌ಸ್ಟನ್ನರು.
ಡೇವಿಡ್ ಸರಿ, ಆದರೆ ಡೇವಿಡ್ ಜೋನ್ಸ್ ಏನು?”
ಅಲ್ಲ, ಡೇವಿಡ್ ಕಾಪರ್‌ಫೀಲ್ಡ್ ಎಂದುತ್ತರವಿತ್ತರು ಮಿ. ಮರ್ಡ್‌ಸ್ಟನ್ನರು.
ಓಹೋ - ಅವನೋ - ಮನೋಹರೀ ವಿಧವೆಯ ರಗಳೆ!”
ಇಷ್ಟು ಒಬ್ಬನು ಹೇಳಿ ಪೂರೈಸುವುದರೊಳಗೆ ಮತ್ತೊಬ್ಬ -
ದಿವಂಗತ ಡೇವಿಡ್ ಕಾಪರ್‌ಫೀಲ್ಡನ ವಿಧವೆ - ಸುಂದರಿಯ - ಮಗನೇನು?” ಎಂದು ಕೇಳಿದನು.
ಕ್ವಿನಿಯನ್, ನಮ್ಮಲ್ಲಿ ಚುರುಕಿನವರಿದ್ದಾರೆ, ಎಚ್ಚರ ಅಂದರು ಮರ್ಡ್‌ಸ್ಟನ್ನರು.
ಯಾರು?” ಎಂದು ಕ್ವಿನಿಯನ್ ಪ್ರಶ್ನಿಸಿದನು.
ಚುರುಕಿನವರು ನಮ್ಮ ಮಧ್ಯೆ ಯಾರು, ಎಲ್ಲಿ, ಇದ್ದಾರೆಂದು ನಾನೂ ಕಣ್ಣು ತಿರುಗಿಸಿ ನೋಡಿದೆನು.
ಶಫೀಲ್ಡಿನ ಬ್ರೂಕ್ಸ್ ಎಂದು ಮಿ. ಮರ್ಡ್‌ಸ್ಟನ್ನರಂದರು. ಹೆಸರು ಕೇಳಿ ನನಗೆ ಸಮಾಧಾನವಾಯಿತು. ಚುರುಕಿನವನು ನಾನಾಗಿರಬಹುದೋ ಎಂದು ಶಂಕಿಸುತ್ತಿದ್ದ ನನಗೆ ಸಂಶಯ ನಿವಾರಣೆಯಾಗಿ ನಾನೂ ಅವರ ಮಾತುಕತೆ ವಿನೋದಗಳಲ್ಲಿ ಭಾಗವಹಿಸುವಂತಾಯಿತು. ಶಫೀಲ್ಡ್‌ನ ಬ್ರೂಕ್ಸನ ಹೆಸರು ಕೇಳಿ ಅವರೆಲ್ಲರೂ ತುಂಬಾ ನಗಾಡಿದರು. ನಾನೂ ಅವರ ಜತೆ ಸೇರಿ ನಗಾಡಿದೆ.
ಅವರೆಲ್ಲರೂ ಸೇರಿ ಬ್ರೂಕ್ಸಿನ ಆರೋಗ್ಯವರ್ಧನೆಗೆ ಅಂದುಕೊಂಡು ವೈನ್ ಮತ್ತು ಬಿಸ್ಕೆಟುಗಳನ್ನು ತರಿಸಿ ನನಗೂ ಕೊಟ್ಟು -
ಶಫೀಲ್ಡಿನ ಬ್ರೂಕ್ಸ್ ಹಾಳಾಗಿ ಹೋಗಲಿ ಎಂದು ಹೇಳಪ್ಪಾ ಎಂದು ಹೇಳಿದರು. ಅವರು ಹೇಳಿಕೊಟ್ಟಂತೆ ನಾನು ಹೇಳಿದನಂತರ ನಾವೆಲ್ಲಾ ವೈನ್ ಕುಡಿದೆವು. ಪುನಃ ನಾವೆಲ್ಲರೂ ಜತೆ ಸೇರಿ ಉತ್ಸಾಹಭರಿತರಾಗಿ ನಗಾಡಿದೆವು.
ಅನಂತರ ಹಸುರು ಹುಲ್ಲಿನ ಮೇಲೆ ತಿರುಗಾಡಿದೆವು. ಬಂಡೆಗಳನ್ನೇರಿ ದೂರದರ್ಶಿಗಳನ್ನು ಹಿಡಿದುಕೊಂಡು ಸೃಷ್ಟಿ ವೈಚಿತ್ರ್ಯವನ್ನು ನೋಡಿದೆವು. ದೂರದರ್ಶಿಯಲ್ಲಿ ನಾನು ವಿಶೇಷವೇನನ್ನೂ ಕಾಣದಿದ್ದರೂ ಅವರು ತೋರಿಸಿದ ಗೌರವಕ್ಕಾಗಿ ಎಲ್ಲವನ್ನೂ ಕಂಡವನಂತೆ ನಟಿಸಿ, ಗಾಂಭೀರ್ಯದಿಂದ ನಾನೂ ಕಂಡೆನೆಂದು ಹೇಳಿದೆ.
ಅನಂತರ ಸಮುದ್ರ ಕರೆಯಲ್ಲಿದ್ದ ಒಂದು ದೋಣಿಯನ್ನೇರಿದೆವು. ನನ್ನನ್ನು ಒಬ್ಬ ನಾವಿಕನ ಜತೆಯಲ್ಲಿ ಬಿಟ್ಟು ಮಿ. ಮರ್ಡ್‌ಸ್ಟನ್ ಮತ್ತೂ ಮೊದಲಿನ ಇಬ್ಬರು ನಾವಿಕರೂ ದೋಣಿಯ ಒಳಭಾಗಕ್ಕೆ ಹೋದರು. ಅವರು ಅಲ್ಲಿ ಏನೇನೋ ರಿಕಾರ್ಡುಗಳನ್ನು ತನಿಖೆ ನೋಡುತ್ತಿದ್ದುದನ್ನು ಒಂದು ಕಂಡಿಯಿಂದ ನಾನೂ ಒಮ್ಮೊಮ್ಮೆ ನೋಡುತ್ತಿದ್ದೆ. ಒಳಗಿನಿಂದ ಬರುತ್ತಿದ್ದ ಸಿಗರೇಟಿನ ಹೊಗೆ ಹೊಗ್ಗಂಡಿಗಾಗಿ ಮೇಲೆ ಬಂದು ಗಾಳಿಯಲ್ಲಿ ತೇಲಿಹೋಗುತ್ತಿತ್ತು. ನನ್ನ ಜತೆಯಲ್ಲಿ ಒಬ್ಬ ನಾವಿಕ ಮಾತ್ರವಿದ್ದುದರಿಂದ ನಾನೂ ಒಬ್ಬ ಸಮಾಜ ಧರ್ಮವನ್ನರಿತ ಗೃಹಸ್ಥನಾಗಬೇಕೆಂದು ಗ್ರಹಿಸಿ ಅವನೊಡನೆ ಮಾತಾಡಲು ಹೊರಟೆ. ಜತೆಯಲ್ಲಿದ್ದವನ ಹೆಸರನ್ನು ನನಗೆ ಯಾರು ಹೇಳಿಕೊಟ್ಟಿರದಿದ್ದರೂ ಅವನ ಬನಿಯನ್ನಿನ ಮೇಲೆ ದೊಡ್ಡ ಅಕ್ಷರಗಳಲ್ಲಿಸ್ಕೈಲಾರ್ಕ್ ಎಂದು ಬರೆದಿದ್ದುದನ್ನು ಕಂಡು ಅದೇ ಅವನ ಹೆಸರಾಗಿರಬೇಕೆಂದೂ, ಅವನ ಮನೆಯೇ ದೋಣಿಯಾಗಿದ್ದುದರಿಂದ ಅವನ ವಿಳಾಸ, ಹೆಸರು ಮೊದಲಾದುವನ್ನು ರೀತಿ ಬರೆದುಕೊಂಡಿರಬೇಕೆಂದೂ ಗ್ರಹಿಸಿಕೊಂಡೆ. ನವೀನ ಕ್ರಮದ ಹೆಸರಿನ ಬೋರ್ಡನ್ನು ಕಂಡು ಸಂತೋಷಪಟ್ಟೆ. ಅವನನ್ನು ಮಿಸ್ಟರ್ ಸ್ಕೈಲಾರ್ಕ್ ಎಂದು ಸಂಬೋಧಿಸಿ ಮಾತಾಡಲಾರಂಭಿಸಿದಾಗ ಮಾತ್ರ ಹೆಸರು ಅವನ ದೋಣಿಯದು ಎಂದು ತಿಳಿದೆ. ಪ್ರಸಂಗದಲ್ಲಿ ನನಗೆ ಸ್ವಲ್ಪ ನಾಚಿಕೆಯಾದರೂ ಅಂದಿನ ಪ್ರಯಾಣ ವಿಶೇಷ ಅನುಭವಕಾರಿಯಾಗಿದ್ದಿತು.
ದಿನ ರಾತ್ರಿಯಾಗುವುದರ ಮೊದಲು ನಮ್ಮ ಮನೆಗೆ ತಲುಪಿದೆವು. ಮಿ. ಮರ್ಡ್‌ಸ್ಟನ್ನರು ನನ್ನನ್ನು ನಮ್ಮ ಮನೆಯಲ್ಲಿ ಬಿಟ್ಟು ಅವರ ಮನೆ ಕಡೆಗೆ ಹೋದರು. ರಾತ್ರಿ ನನ್ನ ದಿನದ ಅನುಭವವನ್ನೆಲ್ಲ ತಾಯಿಗೆ ಕೂಲಂಕಷವಾಗಿ ವರದಿ ಮಾಡಿದೆ. ಅವಳ ರೂಪವನ್ನು ಕುರಿತು ಅವರು ಮನೋಹರಿ. ಸುಂದರಿ ಎಂದದ್ದನ್ನು ಕೇಳುವಾಗ ತಾಯಿಯ ಮುಖ ಕೆಂಪಾಗಿ ತೇಜೋಮಯವಾಗುತ್ತಿತ್ತು. ಶಫೀಲ್ಡಿನ ಬ್ರೂಕ್ಸ್ ಯಾರಿರಬಹುದೆಂದು ತಾಯಿಯನ್ನು ವಿಚಾರಿಸಿದ್ದಕ್ಕೆ ಅವನೊಬ್ಬ ಕತ್ತಿ, ಚೂರಿ, ಮಚ್ಚುಗಳ ತಯಾರಕನಿರಬೇಕೆಂದು ತಾಯಿ ತಿಳಿಸಿದಳು.
ದಿನ ರಾತ್ರಿ ನಾವು ಮಲಗುವ ಮೊದಲು ತಾಯಿಯು ಮತ್ತೊಮ್ಮೆ ಲೌಸ್ಟಾಫಿನ ಬುದ್ಧಿಯಿಲ್ಲದ ಜನ ಏನೇನೆಂದರೆಂದು ತಿಳಿಸಬೇಕೆಂದಳು.
ಅಪ್ಪಾ ಡೇವಿ, ಅವರಂದದ್ದೇನು - ನನ್ನ ಕುರಿತು ಎಂದು ತಾಯಿ ಕೇಳಿದಳು.
ಮನೋಹರಿ...” ಎಂದು ಹೇಳಿ ನಾನು ಮುಂದುವರಿಸುವ ಮೊದಲೇ ನನ್ನ ಬಾಯಿಗೆ ಅಡ್ಡ ಕೈಯಿಟ್ಟು,
ಹಾಗೆ ಹೇಳಲು ಕಾರಣವಿಲ್ಲ - ಹಾಗೆ ಹೇಳಲಿಲ್ಲ - ಏನೇನಾದರೂ ಹೇಳಬೇಡ ಎಂದು ತಾಯಿಯಂದಳು.
ನಾನು ಬಿಡಿಸಿಕೊಂಡು -
ಇಲ್ಲ, ಮನೋಹರೀ, ಸುಂದರೀ, ಸ್ಫುರದ್ರೂಪೀ, ಮಿಸೆಸ್ ಕಾಪರ್‌ಫೀಲ್ಡ್ ಎಂದಂದರು ಎಂದು ಹೇಳತೊಡಗಿದೆ.
ಪುನಃ ತಾಯಿ ನನ್ನ ಬಾಯನ್ನು ಮುಚ್ಚಿ ತಡೆಯತೊಡಗಿದಳು.
ಇಲ್ಲಾ, ಖಂಡಿತವಾಗಿಯೂ ಹೇಳಿದರು. ಸುಂದರೀ, ಸ್ಫುರದ್ರೂಪೀ, ಮುದ್ದುಮುಖದ ವಿಧವೆ, ಎಂದು ಸಹಾ ಹೇಳಿದರು ಎಂದು ನನ್ನ ಸತ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದೆ.
ಕೊನೆಗೆ ತಾಯಿ ಸ್ವಲ್ಪ ಗುಟ್ಟಾಗಿಯೇ ಅನ್ನುವಂತೆ -
ಎಂಥ ಬುದ್ಧಿಯಿಲ್ಲದವರು. ನಾಚಿಕೆಯೂ ಇಲ್ಲದವರು - ಅಲ್ಲವೇ, ಡೇವಿ? ಅವರಂದದ್ದನ್ನು ಇನ್ನು ಪೆಗಟಿಗೆ ಹೇಳಿ ಅವಳನ್ನು ಸಿಟ್ಟಿಗೆ ಏಳಿಸಬೇಡ ನಾನೊಬ್ಬಳು ಸಿಟ್ಟಾದುದು ಸಾಕು ಅಂದಳು. ದಿನ ನನ್ನನ್ನು ಬಹಳವಾಗಿ ಮುದ್ದಿಸಿದಳು. ಅನಂತರ ಮಲಗಿ ನಿದ್ರಿಸಿದೆವು.
ನಮ್ಮೊಳಗೆ ಮಾತುಗಳೆಲ್ಲ ನಡೆಯುವಾಗ ತಾಯಿಯ ಮುಖ ಕಳೆಯೇರಿ ಅವಳು ಬಹು ಚದುರೆಯಾಗಿ ತೋರಿದಳು. ದಿನದ ಅವಳ ಚಂದದ ಮುಖ, ಅವಳು ನನ್ನೊಡನೆ ಮಾತಾಡುತ್ತಿದ್ದಾಗ ನನ್ನ ಮುಖದ ಮೇಲೆ ಬೀಳುತ್ತಿದ್ದ ಬಿಸಿಗಾಳಿ ಈಗಲೂ ನನ್ನ ಸ್ಮರಣೆಯಲ್ಲಿ ಸ್ಪಷ್ಟವಾಗಿ ಉಳಿದಿವೆ.
ಇಂಥ ರೂಪ, ಸ್ಪರ್ಶದ ನೆನಪು ಈಗಲೇ ಅವೆಲ್ಲ ನನ್ನೆದುರೇ ಇರುವಷ್ಟು ಸ್ಪಷ್ಟವಾಗಿ ಉಳಿದಿರುವಾಗ, ನನ್ನ ಪಾಲಿಗೆ ಅವಳು ಮೃತಪಟ್ಟಿದ್ದಾಳೆಂದಾಗಲಿ, ಮುಂದಿನ ದಿನಗಳಲ್ಲಿ ಅವಳ ರೂಪ ಬದಲಾಗಿದ್ದುದನ್ನು ನಾನು ನೋಡಿದ್ದರೂ - ಅವಳು ಸುಂದರಿ, ಸ್ಫುರದ್ರೂಪಿಯಲ್ಲದೆ ಬೇರೆ ರೀತಿಯಲ್ಲಿ ಇದ್ದಳೆಂದಾಗಲೀ ನಾನು ಹೇಳಿದರೆ ನ್ಯಾಯವಾಗಬಹುದೇ ಎಂದು ಅನೇಕ ಸರ್ತಿ ಗ್ರಹಿಸಿದ್ದು ಇದೆ.
ತಾಯಿ ಮತ್ತೂ ನನ್ನೊಳಗೆ ನಡೆದ ಮಾತುಕತೆಗಳನ್ನು ನಾನು ಪೆಗಟಿಗೆ ಸ್ವಲ್ಪವೂ ತಿಳಿಸಲಿಲ್ಲ. ಕೆಲವು ದಿನಗಳನಂತರ ನನ್ನ ತಾಯಿ ಪೂರ್ವದ ನೆರೆ ಗೃಹಸ್ಥರ ಮನೆಗೆ ಹೋಗಿದ್ದಾಗ, ನಾನೂ ಪೆಗಟಿಯೂ ಕುಳಿತು ಹರಟೆ ಹೊಡೆಯತೊಡಗಿದೆವು. ಆಗ ಸ್ವಲ್ಪ ರಾತ್ರಿಯೂ ಆಗಿತ್ತು. ಪೆಗಟಿ ಏನೇನೋ ಆಲೋಚಿಸುತ್ತಿದ್ದಂತೆ ತೋರುತ್ತಾ - ನನ್ನನ್ನು ಒಮ್ಮೊಮ್ಮೆ ನೋಡಿ, ಹೇಳಬೇಕೋ ಬೇಡವೋ ಎಂದು ಶಂಕಿಸುತ್ತಿರುವಂತೆ ಮಾಡುತ್ತಾ - ಕೊನೆಗೆ ಕೇಳಿದಳು -
ನನ್ನಣ್ಣನ ಯಾರ್ಮತ್ ಮನೆಗೆ ಒಂದಾವರ್ತಿ ನಾವಿಬ್ಬರೂ ಹೋದರಾಗಬಹುದೇನು, ಡೇವಿ? ಎರಡು ವಾರ ಗಮ್ಮತ್ತಿನಿಂದ ಅಲ್ಲಿ ಇದ್ದು ಬರುವ?”
ನಿನ್ನಣ್ಣನ ಮರ್ಜಿ ಹೇಗೆ - ಅದನ್ನು ಮೊದಲು ತಿಳಿಯಬೇಕು ಎಂದು ಬುದ್ಧಿವಂತನಂತೆ ಕೇಳಿದೆ.
ಅವನ ಮರ್ಜಿ! ಹೇಳುವುದೇನು? ಅವನು ಬಹಳ ಒಳ್ಳೆಯವನು. ಅಲ್ಲಿ ಸಮುದ್ರವಿದೆ - ದೋಣಿ, ಹಡಗು, ಬೆಸ್ತರವರು, ಆಟ ಆಡಲು ಜನಬೇಕಾದರೆ ನಮ್ಮ ಹೇಮ್ - ಎಲ್ಲಾ ಅನುಕೂಲ ಅಲ್ಲಿದೆ, ಡೇವಿ.”
ವಿವರಗಳನ್ನು ಕೇಳಿ ನನಗೆ ಸಂತೋಷವಾಯಿತು. ಆದರೆ ತಾಯಿ ಇದಕ್ಕೊಪ್ಪಬಹುದೋ, ಒಪ್ಪಲಾರಳೋ ಎಂಬ ಶಂಕೆ ನನಗಿತ್ತು. ಹಾಗಾಗಿ ತಾಯಿಯನ್ನು ಕೇಳದೆ, ಅವಳು ಸಮ್ಮತಿಸದೆ, ಹೋಗುವುದು ಅಸಾಧ್ಯವೆಂದೆ.
ಅವಳನ್ನು ಒಪ್ಪಿಸುವ ಕೆಲಸ ನನ್ನದು ಅಂದಳು ಪೆಗಟಿ.
ಆದರೆ ನಾನೊಬ್ಬ ಮನೆಯ ಗಂಡಸಾಗಿರುವಾಗ, ಒಂದು ವಿಷಯದಲ್ಲಿ ನನಗೆ ದಾರಿ ತೋಚದೆ ಕಷ್ಟಪಟ್ಟೆ. ಆಲೋಚನೆಗಾಗಿ ಎರಡೂ ಮೊಣಕೈಗಳನ್ನು ಮೇಜಿನಮೇಲೆ ಊರಿಕೊಂಡು, ಅಂಗೈಗಳಿಂದ ಗಲ್ಲವನ್ನು ಹಿಡಿದುಕೊಂಡು ಪೆಗಟಿಯನ್ನು ಕೇಳಿದೆ -
ನಾವಿಬ್ಬರೂ ಇಲ್ಲಿಂದ ಹೋದರೆ ಅಮ್ಮನ ಜೊತೆಗೆ ಇರುವವರು ಯಾರು?”
ಪ್ರಶ್ನೆಗೆ ಉತ್ತರ ಕೊಡುವುದು ಪೆಗಟಿಗೆ ಖಂಡಿತವಾಗಿಯೂ ಕಷ್ಟವಾಗಬಹುದೆಂದು ನಾನು ನಿರೀಕ್ಷಿಸಿದ್ದೆ. ಆದರೆ ಅವಳು ಸ್ವಲ್ಪ ಬೇರೆ ಕೆಲಸದಲ್ಲಿ ಮಗ್ನಳಾದಂತೆ ಮಾಡಿಕೊಂಡು,
ಅಬ್ಬಾ! ನಿನ್ನ ಪ್ರಶ್ನೆಯೇ! ಮಿಸೆಸ್ ಗ್ರೈಪರಳ ಮನೆಗೆ ತುಂಬಾ ನೆಂಟರು ಬರುವರಂತೆ. ನಿನ್ನ ತಾಯಿ ನಾಲ್ಕು ದಿನ ಅಲ್ಲಿಗೆ ಹೋಗಿಬರುವಳು ಎಂದಂದಳು.
ಹಾಗಾದರೆ ನನ್ನಡ್ಡಿಯಿಲ್ಲ ಅಂದೆ ನಾನು.
ತಾಯಿ ಬರುವ ಸಮಯವನ್ನು ಬಹು ಕಾತರತೆಯಿಂದ ಕಾದುಕೊಂಡಿದ್ದು ಅವಳು ಬಂದ ಕೂಡಲೇ ಮಹಾ ವಿಷಯವನ್ನು ತಿಳಿಸಿದೆನು. ನನ್ನ ಮಟ್ಟಿಗೆ ವಿಷಯ ಹೊಸತೂ, ಆಶ್ಚ್ಯರ್ಯಕರವಾದದ್ದೂ ಮತ್ತು ಸಂತೋಷದ್ದೂ ಆಗಿದ್ದರೂ ತಾಯಿಗೆ ಅದು ಹಾಗೆಲ್ಲ ಕಂಡುಬಂದಂತೆ ತಾಯಿಯ ಮುಖ ನೋಡುವಾಗ ಕಾಣಲಿಲ್ಲ. ಅವಳು ಆಗಲೇ, ಸುಲಭವಾಗಿ ಸಮ್ಮತಿಯಿತ್ತಳು. ನನ್ನ ಊಟದ ಮತ್ತು ದಾರಿ ಖರ್ಚಿನ ಏರ್ಪಾಡುಗಳೆಲ್ಲ ಆಗಲೇ ಮಾಡಲಾದುವು.
ನಮ್ಮ ಪ್ರಯಾಣಕ್ಕೆ ಏನೆಲ್ಲ ವಿಘ್ನಗಳು ಬರಲಿವೆಯೋ - ಭೂಕಂಪವೋ, ಬೆಂಕಿಯೋ, ಬಿರುಗಾಳಿಯೋ ಬಂದು ನಮ್ಮ ಪ್ರಯಾಣದ ಸಂತೋಷ ನಿಲ್ಲುವುದೋ ಎಂದು ಹೆದರಿ ದಿನ ಕಳೆಯಬೇಕಾಯ್ತು. ಅಂತೂ ಕೊನೆಗೆ ಪ್ರಯಾಣಕ್ಕಾಗಿ ಗೊತ್ತು ಮಾಡಿದ್ದ ದಿನ ನನಗೆ ಆಶ್ಚರ್ಯವಾಗುವಂತೆ ಬಂತೇ ಬಂತು. ಒಂದು ಬಾಡಿಗೆ ಗಾಡಿಯಲ್ಲಿ ನಾವು ಹೋಗಬೇಕೆಂದು ಹಿಂದಿನ ದಿನವೇ ಏರ್ಪಾಡಾಗಿತ್ತು. ಇಜಾರು ಬೂಟ್ಸುಗಳನ್ನು ಹಾಕಿಕೊಂಡು ಮಲಗಲು ಬಿಡುವ ಹಾಗಿದ್ದಿದ್ದರೆ ನಾನು ಹಾಗೆಯೇ ಮಾಡಲೂ ತಯಾರಿದ್ದೆ.
ವಿಷಯವನ್ನಿಲ್ಲಿ, ಈಗ ಸ್ವಲ್ಪ ಹಗುರವಾಗಿ ಹೇಳುತ್ತಿರುವೆನಾದರೂ ನಾನು ಯಾರ್ಮತ್ತಿಗೆ ಹೋಗಲು ಹೊರಟ ದಿನವನ್ನು ಆಲೋಚಿಸಿದರೆ, ಈಗಲೂ ದುಃಖ ಬರುತ್ತದೆ. ನಾನು ಹೊತ್ತು ಮನೆಯನ್ನು ಬಿಟ್ಟು ಹೊರಡುವಾಗ ಆಗಲೇ ಏನನ್ನೆಲ್ಲ ಕಳೆದುಕೊಳ್ಳಲಿಕ್ಕೆ ಇತ್ತೆಂಬುದನ್ನು ಆಗ ನಾನು ತಿಳಿದಿರಲಿಲ್ಲ. ಮನೆಯನ್ನೂ ತಾಯಿಯನ್ನೂ ಎಂದೂ ಬಿಟ್ಟಗಲದವನು ಪಯಣಕ್ಕಾಗಿ ನಾನು ಎಷ್ಟು ಹಾತೊರೆಯುತ್ತಿದ್ದೆನೆಂದು ಜ್ಞಾಪಿಸಿಕೊಂಡಾಗಲೆಲ್ಲ ನನ್ನ ಕಣ್ಣುಗಳಲ್ಲಿ ನೀರು ಸುರಿಯುತ್ತದೆ.
ಮನೆಯನ್ನು ಬಿಟ್ಟು ಬಂಡಿ ಹತ್ತುವಾಗ ತಾಯಿ ಬಂದು ನನ್ನನ್ನಪ್ಪಿಕೊಂಡು ಮುದ್ದಾಡಿದಳು. ಆಗ ನನಗೆ ಕೇಳಿಸಿದ ಅವಳ ಹೃದಯದ ಬಡಿತ ಈಗಲೂ ಕೇಳುತ್ತಿರುವಂತೆ ಭ್ರಮೆಯುಂಟಾಗುತ್ತದೆ. ಅಂದು ತಾಯಿ ಮುದ್ದಾಡುತ್ತಾ ಮನಸ್ವಿಯಾಗಿ ಅತ್ತು ಆನಂದಿಸಿದುದರ ನೆನಪು ಈಗಲೂ ಬಹು ಸ್ಪಷ್ಟವಾಗಿದೆ. ಅಂದಿನ ದಿನದ ಆನಂದವೂ, ಅಳುವೂ ನನಗೆ ಪರಮ ಪವಿತ್ರದ ಸ್ಮರಣೆಗಳಾಗಿ ಉಳಿದಿವೆ. ಪುನಃ ಪುನಃ ಗಾಡಿಬಳಿಗೆ ಬಂದು ನನ್ನನ್ನು ಆಲಿಂಗಿಸಿ ಮುದ್ದಾಡಿದ ನನ್ನ ತಾಯಿಯ ಮುದ್ದು ಮುಖವು ನನ್ನ ಸ್ಮರಣೆಯಲ್ಲಿ ಶಾಶ್ವತವಾಗಿ ನಿಂತಿದೆ. ಪೆಗಟಿಯೂ ನಾನೂ ಕೊನೆಗೆ ಗಾಡಿಯನ್ನು ಹತ್ತಿದೆವು.
ನಾವು ಗಾಡಿ ಹತ್ತುವಾಗಲೇ ಮಿ. ಮರ್ಡ್‌ಸ್ಟನ್ನರು ಬಂದು ನಿಂತಿದ್ದರು. ತಾಯಿ ಬಳಿ ಇಂತಹ ಅಲ್ಪ ವಿಷಯದಲ್ಲಿ ಮನಸ್ಸು ಪಲ್ಲಟವಾಗಲೆಡೆಕೊಡಬಾರದೆಂದು ಅವರು ನಮಗೆ ಕೇಳಿಸುವಂತೆಯೇ ತಾಯಿಗೆ ಬೋಧಿಸುತ್ತಿದ್ದರು. ಇದನ್ನು ಕೇಳಿ ಬಂಡಿಯೊಳಗೆ ಕುಳಿತಿದ್ದ ಪೆಗಟಿಗೂ ನನಗೂ ಸಿಟ್ಟು ಬಂತು.
ಬಂಡಿಯು ಮುಂದರಿದಂತೆಯೇ - ನಾನು ತಾಯಿಯಿಂದ ಹೆಚ್ಚೆಚ್ಚು ದೂರ ಹೋದಂತೆಯೇ - ನನ್ನ ಜತೆಯಲ್ಲಿದ್ದ ಪೆಗಟಿಯೂ ಸಹ ನನ್ನನ್ನು ನಡುದಾರಿಯಲ್ಲಿ ಬಿಟ್ಟು ಊರಿಗೆ ಹಿಂತಿರುಗಿದರೆ ನನ್ನ ಗತಿ ಏನಾಗಬಹುದೆಂದು ಹೆದರಿದೆ.
(ಮುಂದುವರಿದಿದೆ)
ವಿ.ಸೂ: ಡೇವಿಡ್ ಕಾಪರ್ ಫೀಲ್ಡ್ಕೇಳು ಪುಸ್ತಕದ ಪೂರ್ಣ ಎರಡನೇ ಅಧ್ಯಾಯ ಇಲ್ಲಿ ಕೇಳಿ.

No comments:

Post a Comment