(ಕೊಡಗಿನ ಸುಮಗಳು – ಜಿಟಿನಾ ಸಮಗ್ರ ಕಥಾ ಸಂಕಲನದ ಕೊನೆಯ ಮತ್ತು ಹನ್ನೆರಡನೆಯ ಕತೆ - ೧೯೪೯)
ನಾನು ಎಸ್‌ಎಸ್‌ಎಲ್‌ಸಿ
ಪರೀಕ್ಷೆಗೆ ಕುಳಿತ ವರ್ಷವದು (೧೯೪೨ ಮಾರ್ಚ್). ಪರೀಕ್ಷೆ ಮುಗಿದ ಮೇಲೆ ನನ್ನ
ಚಿಕ್ಕಪ್ಪನವರಲ್ಲಿಗೆ ಹೋದೆನು, ಕೆಲವು ದಿನಗಳನ್ನು ಅಲ್ಲಿ ಕಳೆಯಲೆಂದು. ಅವರು ಕಾರುಗುಂದ ಎಂಬ
ಹಳ್ಳಿಯಲ್ಲಿ ವೈದ್ಯರಾಗಿದ್ದರು. ಅವರ ಮನೆಯು ಎತ್ತರ ನೆಲೆಯಲ್ಲಿ ಪ್ರಕಾಶಮಾನವಾಗಿಯೂ
ಆಹ್ವಾದಕರವಾಗಿಯೂ ನಿಂತಿತ್ತು. ಒಂದು ಬದಿಯಲ್ಲಿ ಮಡಿಕೇರಿ ಭಾಗಮಂಡಲದ ರಸ್ತೆಯು ನೇರವಾಗಿ
ಓಡುತ್ತದೆ. ಇನೊಂದು ಕಡೆ ನಾಪೋಕ್ಲಿಗೆ ಹೋಗುವ ದಾರಿ ಕವಲೊಡೆದಿದೆ. ರಸ್ತೆಗಳ ಮಧ್ಯದಲ್ಲಿ ಒಂದು
ದ್ವೀಪದಂತೆ ಈ ಮನೆಯು ಇದೆ. ಹಗಲು ನಮಗೆ ಜನರ ಅಭಾವವೇ ಇರಲಿಲ್ಲ. ಔಷಧಿಗೆ ಬರುವವರು ಬಲುಮಂದಿ
ಇರುತ್ತಿದ್ದರು. ಸುತ್ತಲಿನ ಹಳ್ಳಿಗಳಿಗೆ ಇಲ್ಲಿ ದಾಕುದಾರರು ಇರುವುದಾಗಿತ್ತು. ಇಲ್ಲವಾದರೆ
ಒಳ್ಳೆ ಔಷಧಿ ದೊರೆಯಲು ಮತ್ತೆ ಹನ್ನೆರಡು ಮೈಲು ದೂರದ ಮಡಿಕೇರಿಗೆ ಹೋಗಬೇಕು. ಚಿಕ್ಕಪ್ಪ
ಕಾರುಗುಂದದಲ್ಲಿ ಔಷಧಾಲಯ ಸ್ಥಾಪಿಸಿ ಒಂದು ತಿಂಗಳಾಗಿತ್ತು ಅಷ್ಟೆ. ಆದ್ದರಿಂದ ಅವರಿಗೆ ಸುತ್ತಲಿನ
ಜನರ ಪರಿಚಯ ಚೆನ್ನಾಗಿ ಆಗಿರಲಿಲ್ಲ. ಆದರೆ ನನಗೆ ಸಮಯ ಹೋಗಲು ಯಾವ ತೊಂದರೆಯೂ ಇರಲಿಲ್ಲ. ಸೈಕಲ್
ತೆಗೆದುಕೊಂಡು ದೊಡ್ಡ ದಾರಿಯಲ್ಲಿ ದೂರ ಸವಾರಿ ಹೋಗುವುದು. ನಾಪೋಕ್ಲು ಕಡೆ ಹೋದರೆ ಒಂದೂವರೆ ಮೈಲಿನಲ್ಲಿಯೇ ಕಾವೇರಿ
ಹೊಳೆಯು ಸಿಗುವುದು. ಅದರ ಪರಂಬು (ಮಳೆಗಾಲದಲ್ಲಿ ಪ್ರವಾಹದ ನೀರು ನಿಂತು ಫಲವತ್ತಾದ ಹೊಳೆಯ ಕರೆಯ
ಬಯಲು) ವಿಶಾಲವಾಗಿ ಸುಂದರವಾಗಿ ಹಬ್ಬಿದೆ, ಅಲ್ಲಿ ಹೋಗಿ ಮಲಗಿಕೊಂಡು ಮುಗಿಲನ್ನೂ ನಿಬಿಡವಾಗಿ ಬೆಳೆದಿರುವ
ಕಾಡುಗಳನ್ನೂ ನೋಡುವದು; ನೇರಿಳೆ ಹಣ್ಣುಗಳನ್ನು ತಿನ್ನಲು ಹೋಗಿ ಕೆಂಪಿರುವೆಗಳಿಂದ ಕಡಿಸಿಕೊಂಡು ಕೈ ಕುಡುಗುವುದು; ಇನ್ನು ಮನೆಯಲ್ಲಿಯೇ ಕುಳಿತಾಗ ಮಕ್ಕಳೊಡನೆ ಆಡುವುದು, ಕೆಣಕಿ ಅಳಿಸುವುದು; ಅಡುಗೆಮನೆಯೊಳಗೆ ಅವಲಕ್ಕಿ ಕಾಯನ್ನು ಮೆಲ್ಲುತ್ತ ಚಿಕ್ಕಮ್ಮನೊಡನೆ ಪಟ್ಟಾಂಗ - ಇವೇ
ಮುಂತಾದವುಗಳು ನನ್ನ ಮುಖ್ಯ ಕಾರ್ಯಗಳಾಗಿದ್ದುವು. ಒಮ್ಮೊಮ್ಮೆ ಹಳ್ಳಿಯವರು ಮಡಿಕೇರಿಯ ಈ
ಪ್ರಭೃತಿಯನ್ನು ನೋಡಬೇಕೆಂದು ಬಯಸುತ್ತಿದ್ದರು. ಆಗ ಚಿಕ್ಕಪ್ಪ ನನ್ನನ್ನು ಕರೆಯುತ್ತಿದ್ದರು.
ನನ್ನೊಡನೆ ಕೆಲವು ಮಾತಾಡಿ, ಆ ಹಳ್ಳಿಗನು ಇಂದಿಗೆ ಧನ್ಯನಾದೆ
ಎಂಬಂತೆ ಹೋಗುತ್ತಿದ್ದ. ನಾನು ಇದು ಬಹಳ ವಿನೋದಕರವಾಗಿದೆಯಂದು ಒಳಗೆ ಹೋಗುತ್ತಿದ್ದೆನು. ಸಾಯಂಕಾಲ
ಪೇಷಂಟುಗಳಿಲ್ಲದಿದ್ದರೆ ನಾನೂ ಚಿಕ್ಕಪ್ಪನೂ ಸ್ವಲ್ಪ ದೂರ ತಿರುಗಾಡಿಕೊಂಡು ಹೋಗುತ್ತಿದ್ದೆವು.
ಆದರೆ ದಾರಿಯಲ್ಲಿ ಕೆಲವರು “ಸ್ವಲ್ಪ ಬನ್ನಿ, ಸ್ವಾಮಿ” ಎಂದು ಕರೆದುಕೊಂಡು ತಮ್ಮ ಮನೆಗೆ ಹೋಗಿ
ಖಾಯಿಲಸ್ತರನ್ನು ತೋರಿಸುತ್ತಿದ್ದರು. ನಾನು ಅವರನ್ನು ಹಿಂಬಾಲಿಸಬೇಕಿತ್ತು. ಅಲ್ಲಿ ಕಾದು ಕಾದು
ಬೇಸರ ಬರುತ್ತಿತ್ತು. ಹೊರಡುವಾಗ ಮಾತ್ರ ಹಾಲು, ಬಾಳೇಹಣ್ಣು, ನೇರಿಳೇ ಹಣ್ಣು ಇವೆಲ್ಲ ತಿನ್ನಲು ದೊರೆಯುತ್ತಿದ್ದುವು. ಯಾರು
ನನಗೆ ಸರಿಯೆನ್ನುವ ಭಾವನೆಯಿಂದ ಆ ದಿನಗಳನ್ನು ಸಂತೋಷದಿಂದ ಕಳೆಯುತ್ತಿದ್ದೆನು.
ಒಂದು ರಾತ್ರಿ
ನಾವೆಲ್ಲರೂ ಮಲಗಿ ನಿದ್ರೆಮಾಡಿದ್ದೆವು. ನನಗೆ ಒಂದು ಕನಸು ಬಿದ್ದಹಾಗಿತ್ತು. ಯೂರೋಪಿನಲ್ಲಿ
ನಡೆಯುತ್ತಿದ್ದ ಯುದ್ಧ ನಮ್ಮ ದೇಶಕ್ಕೂ ಬಂತು. ನಮ್ಮ ಮನೆಯ ಮೇಲೂ ಬಾಂಬು ಸುರಿಯುತ್ತಿದ್ದಾರೆ.
ರಕ್ತದ ಹೊಳೆ ಹರಿಯುತ್ತಿದೆ... ನಾನು ಗಾಬರಿಯಿಂದ ಎದ್ದೆನು. ಹೊರಗಿನ ಬಾಗಿಲನ್ನು ಯಾರೋ ದಡ ಬಡ
ಎಂದು ಬಡಿಯುತ್ತಿದ್ದರು. “ಸ್ವಾಮಿ, ಸ್ವಾಮಿ” ಎಂದು ಕರೆಯುತ್ತಿದ್ದರು. ಮನೆಯಿಡೀ ಕತ್ತಲೆ.
ಕನ್ನಡಿಯ ಕಿಟಕಿಯಿಂದ ಹೊರಗಿನ ಪ್ರದೇಶ ಸ್ವಲ್ಪ ಬೆಳ್ಳಗೆ ಕಂಡಹಾಗೆ ಆಗುತ್ತಿತ್ತು. ಯಾರಪ್ಪ
ಇಷ್ಟುಹೊತ್ತಿಗೆ ಬರುವವರು ಎಂದು ನನಗೆ ಹೆದರಿಕೆಯೇ ಆಯ್ತು. ಕಳ್ಳರ ಒಂದು ಗುಂಪೇ ಬಂದಿರಬಹುದೇ? ಅಷ್ಟರಲ್ಲೇ ಚಿಕ್ಕಪ್ಪ ಎದ್ದು ಕಂದೀಲು ಹಿಡಿದುಕೊಂಡು ಹೋಗಿ ಕದ ತೆರೆದರು. ಅವರು ಕದ
ತೆರೆಯುವುದನ್ನು ನಾನು ಹಾಸಿಗೆಯಿಂದಲೇ ನೋಡುತ್ತಿದ್ದೆನು. ಅಯ್ಯೋ, ಹಾಗೆ ತೆರೆಯಬೇಡಿ, ಹೊರಗಿನವರು ಕೊಲೆಗಡಕನಾಗಿದ್ದರೆ ? ಕಳ್ಳರ ಒಂದು ಪಂಗಡವೇ ಬಂದಿದ್ದರೆ, ಬೇಡ, ಬೇಡ ಎಂದು ಕೂಗಬೇಕು ಎಂದು ನನಗೆ ಅನಿಸಿತು. ಆದರೆ ಬಾಯಿ ಬಿಡಲಿಕ್ಕೆ ನನಗೆ ಹೆದರಿಕೆ. ಅಷ್ಟರಲ್ಲೇ
ಅವರು ಬಂದು ಬಾಗಿಲು ತೆರೆದು ಅಲ್ಲೇ ನಿಂತು, “ಯಾರಪ್ಪ, ಏನು?” ಎಂದರು. ನನಗೆ ಹೊರಗೆ ಯಾರಿದ್ದರೆಂದು ಕಾಣಲಿಲ್ಲ. ಚಿಕ್ಕಮ್ಮನು ಎದ್ದು ಅಲ್ಲಿಗೆ ಹೋದರು.
ನಾನೂ ಧೈರ್ಯಮಾಡಿ ಎದ್ದೆನು.
“ನನ್ನ ಅಜ್ಜಿಗೆ
ಸಕತ್ತು ಖಾಯಿಲೆ, ನೀವು ನೋಡಲು ಒಂದು ಸಲ ಬಂದಿದ್ದರೆ ಆಗುತ್ತಿತ್ತು.”
“ಸರಿಯಾಯ್ತು, ಈಗ ಈ ರಾತ್ರಿಯಲ್ಲಿ?”
“ಇಲ್ಲ ಸ್ವಾಮಿ, ಅವಳಿಗೆ ಸಕತ್ತು. ಈಗಾಗಲೇ ಸತ್ತಹೋದಳೋ ಏನೋ.” ನಾನು ಬಾಗಿಲ ಹಿಂದೆ ನಿಂತಿದ್ದೆ. ಹೊರಗಿನವರು
ಕಾಣಲಿಲ್ಲ.
“ಏನಾಗಿದೆ ಅವಳಿಗೆ?”
“ನನಗೇನೂ ಗೊತ್ತಿಲ್ಲ, ಸ್ವಾಮೀ. ಅವಳು ಹುಚ್ಚುಚ್ಚಾಗಿ ಕೂಗುತ್ತಾಳೆ. ಜ್ವರ ಕೆಂಡದ ಹಾಗೆ ಸುಡುತ್ತದೆ. ನೀವು ಬಂದು
ನೋಡಿ.”
“ನಾನೀಗ ಔಷಧಿ
ಕೊಡುತ್ತೇನೆ. ಬೆಳಿಗ್ಗೆ ಬಂದು ನೋಡುತ್ತೇನೆ, ಎಲ್ಲಿ ಇರುವುದು
ನೀನು?”
“ನೀವು ಈಗಲೇ ಬರಬೇಕು.
ಇಲ್ಲವಾದರೆ ನಿಮ್ಮನ್ನು ಬಿಡೋದೇ ಇಲ್ಲ. ಇಲ್ಲೇ ಕಡಿಯತ್ತೂರು ಹೊಳೆಯಿಂದಾಚೆಗೆ.”
“ಈ ಅಪರಾತ್ರಿಯಲ್ಲಿ
ಬರುವುದೇನು ತಮಾಷೆಯೇ? ಜ್ವರ ಬರುವಾಗ ಔಷಧಿಗೆ ಬರದೇ, ಸಾಯಲು ಬೀಳುವಾಗ ಬರುತ್ತಾರಲ್ಲ.”
“ನೀವು ಬರದೇ ನಾನು
ಹೋಗುವುದೇ ಇಲ್ಲ” ಎಂದು ಮುಂದೆ ನುಗ್ಗಿ ಅವರ ಕಾಲು ಹಿಡಿಯಲು ಬಗ್ಗಿದನು.
“ಛೇ, ಛೇ, ಕಾಲನ್ನೆಲ್ಲ ಹಿಡಿಯಬೇಡ” ಎಂದು ಚಿಕ್ಕಪ್ಪ ಹಿಂದೆ ಸರಿದರು. ಅವನು ತೆವಳಿಕೊಂಡು ಬಂದು
ಹೊಸ್ತಿಲ ಮೇಲೆ ಕುಳಿತನು. ಚಿಕ್ಕಪ್ಪನದು ದಾಕ್ಷಿಣ್ಯ ಪ್ರಕೃತಿ. ಯಾರಿಗೂ ಹುಬ್ಬು ಗಂಟುಹಾಕಿ
ಜೋರಿನ ಮಾತು ಹೇಳುವುದು ಅವರಿಗೆ ಸಾಧ್ಯವಿಲ್ಲ. ಅವರಿಗೆ ಅವನ ವಿಷಯದಲ್ಲಿ ದಯೆ ಮೊಳೆತಿರಬೇಕು.
ಅಂತೆಯೇ ಆ ರಾತ್ರಿ ಹೊರಟರು. ಅವನನ್ನು ಕೇಳಿ ಆ ಖಾಯಿಲೆಯ ವಿವರ ತಿಳಿದುಕೊಂಡರು. ಐದಾರು
ದಿನಗಳಿಂದ ಬಂದ ಜ್ವರ ಕುದಿಯುತ್ತಿದೆಯಂತೆ. ಔಷಧಿಯ ಒಂದು ಸಣ್ಣ ಡಬ್ಬಿ. ಇಂಜಕ್ಷನ್ ಪೆಟ್ಟಿಗೆ
ಎಲ್ಲವನ್ನೂ ಸಿದ್ಧಪಡಿಸಿದರು.
“ಈ ರಾತ್ರಿ
ಹೋಗುವುದೇನು ಹುಡುಗಾಟಿಕೆಯೇ?
ಈ ಸ್ಥಳಗೊತ್ತಿಲ್ಲ. ಅವನನ್ನು ನೋಡಿದರೆ ನನಗೇನೋ ಹೆದರಿಕೆಯಾಗುವುದು. ಈಗ ಬರೋದಿಲ್ಲ ಎಂದು
ಹೇಳಿ ಪಡಿ ಮುಚ್ಚಿದರೆ ಏನು ಮಾಡುತ್ತಾನೆ?” ಎಂದು ಪಿಸುಗುಟ್ಟಿದರು ಚಿಕ್ಕಮ್ಮ. ನನಗೂ ಇದು ಹೌದೆಂದು ಅನಿಸಿತು. ಅವನನ್ನು ನೋಡಿದರೆ -
ಗುಳಿಬಿದ್ದು ಕೆಂಪಾದ ಕಣ್ಣು,
ಕೆದರಿದ ತಲೆ, ಅರ್ಧ ಬೆಳೆದ ಗಡ್ಡಮೀಸೆ,
ಚಪ್ಪಟೆಯಾದ ಮುಖ, ಹರಕು ಬಟ್ಟೆ - ಆ ಸೀಮೆಯೆಣ್ಣೆಯ ದೀಪದ ಕುರುಡು ಬೆಳಕಿನಲ್ಲಿ ಅವನು ನಿಜವಾಗಿ ಮನುಷ್ಯನೋ
ಅಥವಾ ಭೂತವೋ ಎಂದು ನನಗೆ ಹೆದರಿಕೆಯಾಯಿತು. ಅವನು ಭಯಂಕರವಾಗಿ ತೋರುತ್ತಿದ್ದನು. ಆದರೆ ಚಿಕ್ಕಪ್ಪ
ಹೊರಟರು. ಅವರು ಒಂದು ನಿಶ್ಚಯ ಮಾಡಿದ ಮೇಲೆ ಯಾರಿಂದಲೂ ಅದನ್ನು ಮುರಿಯಲು
ಸಾಧ್ಯವಾಗುತ್ತಿದ್ದಿಲ್ಲ. ನಡೆದರು ಮುಂದೆ ಚಿಕ್ಕಪ್ಪ.
“ಅವರು ಒಬ್ಬರೇ
ಹೋಗುತ್ತಾರಲ್ಲ. ಅವನು ಯಾರೋ ಏನೋ? ನೀನಾದರೂ ಹೋಗು ನಾರಾಯಣ, ಜೊತೇಲಿ” ಎಂದರು ನನಗೆ ಚಿಕ್ಕಮ್ಮ.
ಚಿಕ್ಕಪ್ಪನ ಜತೆಯಲ್ಲಿ
ಎಲ್ಲಿಗೂ ಎಷ್ಟು ಹೊತ್ತಿಗೂ ಹೋಗಲು ನಾನು ಸಣ್ಣವನಾಗಿರುವನಿಂದಲೇ ಸಿದ್ಧ. ಅವರಿಗಿಂತ ಬಲಶಾಲಿ, ಧೈರ್ಯಶಾಲಿ ಬೇರೆ ಯಾರೂ ಇಲ್ಲವೆಂದೇ ನನ್ನ ಅಭಿಪ್ರಾಯ. ಆದ್ದರಿಂದ ಇಷ್ಟು ಹೊತ್ತು ಸುಮ್ಮನೆ
ಹೆದರಿದೆನಲ್ಲ ಎಂದು ನನಗೆ ನಗು ಬಂದಿತು.
“ನಾರಾಯಣ ಬರಲಿ ಆಗದಾ?”
“ಬೇಡ, ಅವನು ಯಾಕೆ ಈ ರಾತ್ರಿಯಲ್ಲಿ, ನಿದ್ರೆ ಮಾಡಲಿ.”
“ನನಗೆ ನಿದ್ರೆ
ಮಾಡಿಯಾಗಿಹೋಯ್ತು. ನಾನೂ ಬರ್ತೇನೆ” ಎಂದು ನಾನು ಹಠಮಾಡಿದೆನು.
“ಹಾಗಾದರೆ
ನಿನ್ನಿಷ್ಟ.”
“ನೀವ್ಯಾಕೆ ಚಿಕ್ಸಾಮೀ, ಕಾಡು, ಹಳ್ಳ.....”
ಅವನು ಬಾಯಿಬಿಟ್ಟ
ಕೂಡಲೇ ನನಗೆ ಮೈ ಜುಮ್ಮೆಂದಾಯಿತು. ಬಚ್ಚಬಾಯಿ, ಮಹಾನಾತ, ಆದರೆ ಚಿಕ್ಕಪ್ಪ ಇದ್ದಾರೆ ನನಗೆ ಹೆದರಿಕೆಯಿಲ್ಲ.
“ಅದೇನೂ ಪರವಾ ಇಲ್ಲ”
ಎಂದು ನಾನು ಅವನ ಕಡೆ ನೋಡಲಾರದೆ ಬೇರೆಕಡೆ ತಿರುಗಿ ಹೇಳಿದೆನು.
ನಾವು ಹೊರಡುವಾಗ
ಮಧ್ಯರಾತ್ರಿಯ ಒಂದು ಘಂಟೆಯಾಗಿತ್ತು.
ಅವನು ಔಷಧಿಯ ಗಂಟನ್ನು
ಹೊತ್ತುಕೊಂಡನು. ಕೈಯಲ್ಲಿ ಒಂದು ಲಾಂದ್ರವನ್ನೂ (Lantern) ಹಿಡಿದುಕೊಂಡಿದ್ದನು. ನಮ್ಮ ಲಾಂದ್ರವನ್ನು
ನಾನು ಹಿಡಿದುಕೊಂಡೆನು. ಮುಂದೆ ದಾರಿ ತೋರಿಸುತ್ತ ಅವನು, ಮಧ್ಯ ಪರಮಧೈರ್ಯಸ್ಥನಾದ ನಾನು, ಹಿಂದೆ ಚಿಕ್ಕಪ್ಪ ಹೀಗೆ ಆ ಕಾಲುದಾರಿಯಲ್ಲಿ ನಡೆದೆವು.
ಕೃಷ್ಣಪಕ್ಷದ
ಪ್ರಥಮಾರ್ಧ. ಮನೆಯಿಂದ ಹೊರಡುವಾಗ ತಿಂಗಳು ಸುಮಾರು ಮೇಲೆ ಬಂದಿತ್ತು. ಮನೆಯ ಸುತ್ತಲಿನ ಕಾಡುಗಳಿಂದ ಜಿರೋ ಎಂದು ಹುಳುಗಳ ಕೂಗು ಕೇಳುತ್ತಿತ್ತು.
ಜಗ್ ಜಗ್ ಎಂದು ಮರಗಳ ಮೇಲೆ ಮೀನುಂಬುಳುಗಳು ಒಟ್ಟಿಗೆ ಬೆಳಕು ಬೀರಿ ಮರೆಯಾಗುತ್ತಿದ್ದುವು.
ಹಿಂದುಗಡೆ ಬೆಳ್ಳಗೆ ನಮ್ಮ ಮನೆ,
ಕತ್ತಲೆಯ ಕಡಲಿನಲ್ಲಿ ಒಂದು ದ್ವೀಪ. ಇನ್ನೂ ದೂರದಲ್ಲಿ ಕರಿ ಮುಸುಕನ್ನೆಳೆದುಕೊಂಡು ಭಾರೀ
ಬೆಟ್ಟಗಳು ನಿಂತಿದ್ದುವು. ಅವುಗಳ ಅಂಚು ದಿಗಂತದ ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ತೋರುತ್ತಿತ್ತು. ಒಂದು
ಗಭೀರತೆ. ಒಂದು ಭಯ ಸುತ್ತಲೂ ವ್ಯಾಪಿಸಿತ್ತು, ನಮ್ಮ ಅಥವಾ ನನ್ನ ಜೀವವನ್ನು ತಿನ್ನುತ್ತಿತ್ತು. ಆದರೆ
ಚಿಕ್ಕಪ್ಪ ಇದ್ದಾರೆ ಎಂದು ಪುನಃ ಧೈರ್ಯ. ನಾವು ಮನೆಯಿಂದ ಕಾಲುದಾರಿಯಲ್ಲಿ ಸ್ವಲ್ಪ ದೂರ
ಹೋಗುವಾಗಲೇ ದಾರಿಯಿಡೀ ಕತ್ತಲಾಯಿತು. ಮರಗಳು ನಿಬಿಡವಾಗಿ ಎರಡು ಕಡೆಗಳಲ್ಲಿಯೂ
ಹೆಣೆದುಕೊಂಡಿದ್ದುವು. ಸುತ್ತಲೂ ಕಾಡು, ಬಂದ ದಾರಿಯಲ್ಲಿಯೇ ಹಿಂದೆ ನೋಡಿದರೆ ಕಾಡು. ಕತ್ತಲೆಯ ರಾಶಿ ಮಯ
ಮಯ ಅನ್ನುತ್ತಿತ್ತು. ಮೇಲೆ ನೋಡಿದರೆ ಆಕಾಶದ ಛಾಯೆ ಮರಗಳ ಎಲೆಗಳ ಮರೆಯಲ್ಲಿ ಹೌದೋ ಅಲ್ಲವೋ
ಎಂಬಂತೆ ಭಾಸವಾಗುತ್ತಿತ್ತು. ಮೀನುಂಬುಳಗಳೂ ಆ ಕಾಡಿನಲ್ಲಿ ಮರೆಯಾಗಿದ್ದುವು. ಬಹುಶಃ, ಅವುಗಳೂ ಮರಗಳ ಮೇಲ್ಭಾಗದಲ್ಲಿ ಕುಳಿತಿರುವುವೋ ಏನೋ, ಕತ್ತಲೆಗೆ ಹೆದರಿ! ಸದ್ದು
ವಿಶೇಷವಿಲ್ಲ. ನಮ್ಮ ಕಾಲಿನ ಜೋಡುಗಳ ಶಬ್ದ. ಮತ್ತೆ ತರಗೆಲೆ ಮೆಟ್ಟುವಾಗ ಆಗುವ ಚರಪರ ಶಬ್ದ.
ಲಾಂದ್ರದ ಮಸಕು ಬೆಳಕಿನಲ್ಲಿ ನಮ್ಮ ನೆರಳುಗಳೂ ಒಮ್ಮೆ ಉದ್ದವಾಗುತ್ತ ಒಮ್ಮೆ ಗಿಡ್ಡವಾಗುತ್ತ
ಹಿಂದಕ್ಕೂ ಮುಂದಕ್ಕೂ ಆ ಕಪ್ಪು ಗೋಡೆಯಮೇಲೆ ಓಲಾಡುತ್ತ ಸಾಗುತ್ತಿದ್ದುವು. ಹಗಲು ನಾನು
ಸೈಕಲ್ಲಿನಲ್ಲಿನ ಒಬ್ಬನೇ ಹೋಗುತ್ತಿದ್ದ ದಾರಿಯದು - ಕಾವೇರಿ ಹೊಳೆಯ ಹಾದಿ. ಆಗ ಮಹಾ ಧೈರ್ಯಸ್ಥನ
ಹಾಗೆ ಯಾರು ನನಗೆ ಸಮವೆಂದು ಹಾಡುತ್ತ ಹೋಗುತ್ತಿದ್ದೆ. ಆದರೆ ಕೇವಲ ೧೨ ಘಂಟೆಗಳ ಅಂತರದಲ್ಲಿ
ನಿಸರ್ಗವು ಯಾವ ಪಾತಾಳದ ಗುಹೆಯನ್ನು, ಯಾವ ವಿಲಯರುದ್ರನ ಗರ್ಭವನ್ನು ಹೊಕ್ಕಿತ್ತು - ಅದೆಂತಹ ಅಪಾಯದ
ನೆಗೆತ ! ನಾನು ಹೀಗೆಲ್ಲ ಆಗಬಹುದೆಂದು ಊಹಿಸಿಯೂ ಇರಲಿಲ್ಲ. ನಾನೊಬ್ಬನೇ ಆ ದಾರಿಯಲ್ಲಿ ಆ
ಸಮಯದಲ್ಲಿ ಹೋಗಿದ್ದರೆ ಇಷ್ಟರ ಒಳಗೇ ಮರಗಟ್ಟಿ ಹೋಗಿರುತ್ತಿದ್ದೆ. ಈಗ ಬಂದೆಯಾ? ನುಂಗುತ್ತೇನೆ ಎಂದು ಹುಲಿಯೋ ಭೂತವೋ ಬ್ರಹ್ಮರಾಕ್ಷಸನೋ ಬಾಯಿ ಕಳೆದುಕೊಂಡು ನಿಂತಂತೆಯೇ
ನನಗನ್ನಿಸುತ್ತಿತ್ತು. ಆಗಾಗ ಹಿಂದೆ ತಿರುಗಿ ನೋಡಿ ಚಿಕ್ಕಪ್ಪ ಇದ್ದಾರೆಂದು ಧೈರ್ಯ
ತಳೆಯುತ್ತಿದ್ದೆ.
“ನೋಡು ನಿನಗೆ ಹೆದರಿಕೆಯಲ್ಲವೇ? ಬರಬೇಡವೆಂದರೆ ಯಾಕೆ ಹೊರಟೆ?”
“ಹೆದರಿಕೆಯಂತೆ, ಯಾಕಾಗಿ? ಹೆದರಿಕೆಯೇ ಇಲ್ಲ ನನಗೆ” ಎಂದು ಗಟ್ಟಿಯಾಗಿಯೇ ಒದರಿದೆ, ಮೂಳೆಯೇ ನಡುಗುತ್ತಿತ್ತು. ಹೆದರಿ!
ಕಾವೇರಿ ಹೊಳೆಯು
ಬಂದಿತು. ಅದು ಬೇಸಗೆಯಲ್ಲಿ ತೋಡಿನ ಹಾಗೆ ಹರಿಯುತ್ತದೆ. ಜೋಡುಗಳನ್ನು ಕೈಯಲ್ಲಿ ಹಿಡಿದುಕೊಂಡು
ಹೊಳೆಯನ್ನು ದಾಟಿದೆವು. ದಂಡೆಯ ಮರಳಿನಲ್ಲಿ ಕಾಲುಗಳನ್ನು ಸರಪರ ಎಂದು ಎಳೆಯುತ್ತ, ಮರಳನ್ನು ಝಾಡಿಸಲು ಆಗಾಗ ಕಾಲುಗಳನ್ನು ಕುಡುಗುತ್ತ ಮುಂದೆ ಪರಂಬಿಗೆ ಹತ್ತಿದೆವು.
“ಇನ್ನೆಷ್ಟು ದೂರ, ಇಲ್ಲೇ ಹತ್ತಿರವೆಂದೆಯಲ್ಲ” ಎಂದರು ಚಿಕ್ಕಪ್ಪ.
“ಆ ತಿರುಗಾಸಿನಿಂದ
ಮುಂದೆ. ಹತ್ತಿರವಾಯಿತು. ಹೀಗೆ ಬನ್ನಿ” ಎಂದನು ಮಾರ್ಗದರ್ಶಕ.
“ಇನ್ನೇನು ಒಂದು
ಫರ್ಲಾಂಗು ಉಂಟೋ?”
“ಹ್ಞಾ, ಅಷ್ಟೇ.”
ಆದರೆ ಪರಂಬಿನಲ್ಲಿ
ಅಡ್ಡ ತಿರುಗಿ ಎಷ್ಟೋ ತಿರುಗಾಸುಗಳನ್ನು ಕಳೆದು ಮುಂದೆ ಹೋದೆವು. ಅವನ ಮನೆ ಬರಲಿಲ್ಲ. ಬೆಳಕು
ಚೆನ್ನಾಗಿ ಹಬ್ಬಿದ್ದ ಸುಂದರವಾದ ಪರಂಬಿನ ಬಯಲನ್ನು ಬಿಟ್ಟು ಬಂದು ಕಾಡೊಳಗೆ ನುಗ್ಗಿದೆವು.
“ಏನು ನಿನ್ನ
ಮನೆಯಿನ್ನೂ ಬರಲಿಲ್ಲ?”
“ನೋಡಿ ಈಗ ಬಂದಿತು, ಅಲ್ಲೇ ಮುಂದೆ.”
ಹಳ್ಳಿಯವರ ಒಂದು
ಫರ್ಲಾಂಗೆಂದರೆ ಅದು ನಿಜಕ್ಕೂ ಒಂದು ಮೈಲಿಗೆ ಕಡಿಮೆಯಿರುವುದಿಲ್ಲ. ಒಂದು ಕೊಂಬಿನ ಕೂಗಳತೆ, ಹತ್ತಿರ ಎಂದರೆ ಅದು ನಾಲ್ಕು ಮೈಲಾಗುವುದು. ಕಾಡು ಮೊದಲಿಗಿಂತಲೂ ಭೀಕರವಾಗಿತ್ತು. ಮೊದಲಿನ
ಕಾಡಾದರೆ ನಾಪೋಕ್ಲಿಗೆ ಹೋಗುವ ದಾರಿ ಕಡೆಯದು. ನನಗೆ ಹಗಲು ಅಲ್ಲಿ ನಡೆದು ತಿಳಿದಿತ್ತು. ಆದರೆ
ಅದು ಎಲ್ಲಿಯೋ ಏನೋ ನನಗೆ ದಿಕ್ಕು ತಿಳಿಯದಾಯಿತು. ಹೆದರಿಕೆ ಜೋರಾಗುತ್ತಿತ್ತು. ದೆವ್ವಗಳು ಹೀಗೆ
ಬಂದು ಮನುಷ್ಯರನ್ನು ದೂರ ಕರೆದುಕೊಂಡು ಹೋಗಿ ಅಲ್ಲಿ ರಾಕ್ಷಸಾಕಾರ ತಾಳಿ ಕೊಂದು
ತಿಂದುಬಿಡುವುವೆಂದು ಕೇಳಿದ್ದೇನೆ. ಅಲ್ಲೇ ಮನೆಯಲ್ಲಿ ಸುಖವಾಗಿ ಮಲಗಿ ಗೊರಕೆ
ಹೊಡೆಯಬಹುದಿತ್ತಲ್ಲ. ಇಲ್ಲಿಗೇಕೆ ಬಂದೆ ಚಿಂತಿಸುತ್ತಿದ್ದೆ. ಆದರೆ ಚಿಕ್ಕಪ್ಪ ಜತೆಯಲ್ಲಿರುವಾಗ
ಯಾವ ಹೆದರಿಕೆ? ಅದೂ ಅಲ್ಲದೆ ನನಗೆ ಗಾಯತ್ರಿ ತಿಳಿದಿದೆ. ಜನಿವಾರದ ಗಂಟನ್ನು ಭದ್ರವಾಗಿ ಹಿಡಿದುಕೊಂಡು
ಮನಸ್ಸಿನಲ್ಲಿಯೇ ಗಾಯತ್ರೀ ಜಪ ಮಾಡತೊಡಗಿದೆನು.
ಹೊಳೆಯಿಂದ ಒಂದು
ಫರ್ಲಾಂಗು ಎಂದು ಇದ್ದ ದೂರ, ರಬ್ಬರು ಎಳೆದಾಗ ಉದ್ದವಾಗುವಂತೆ, ನಡೆದಂತೆ ಹಿಗ್ಗುತ್ತ ಸಾಗಿತು. ಅಂತೂ ಕೊನೆಗೆ ಆ ಬಡಪಾಯಿಯ ಮನೆ
ಬಂದಿತು. ಕನಿಷ್ಠ ಪಕ್ಷ ಎರಡು ಮೈಲು ದೂರ ಹೊಳೆಯಿಂದ ಅಲ್ಲಿಗೆ ಇರಬೇಕೆಂದು ನಾನು ಊಹಿಸಿದೆ.
ಅದೊಂದು ಹುಲ್ಲುಜೋಪಡಿ. ಆ ಲಾಂದ್ರದ ಬೆಳಕಿನಲ್ಲಿ, ಕತ್ತಲೆಯ ಮಧ್ಯೆ ಒಂದು ಬೂದಿಯ ರಾಶಿ ನಿಂತ ಹಾಗೆ ಕಂಡೆ. “ಅಕೊಳ್ಳಿ
ಬಂತು ಸ್ವಾಮೀ” ಎಂದನು.
ಸುತ್ತಲೂ ಮನೆಯನ್ನು
ನುಂಗುವಂತೆ ಕಾಡುಗಿಡಗಳು ಹಬ್ಬಿದ್ದುವು. ಎಲ್ಲ ಕಡೆಗಳಲ್ಲಿಯೂ ಈ ದುರ್ಗ ಅಭೇದ್ಯ. ನಾನು ಬಂದ ಕಡೆ ನೋಡಿದರೂ ಕತ್ತಲೆಯ
ಕಾಡೇ. ಇಲ್ಲಿಯೂ ಒಂದು ಮನೆಯು ಇರಬಹುದೇ ಎಂದು ನನಗಾಶ್ಚರ್ಯ! ಚಂದ್ರನು ನೆತ್ತಿನಿಂದ ಕೆಳಗೆ (ಯಾವ
ಕಡೆಗೆ ಎಂದು ನನಗೆ ತಿಳಿಯಲಿಲ್ಲ) ಇದ್ದನು. ನನಗೆ ಮೈಗೆ ತಣ್ಣೀರು ಚೆಲ್ಲಿದಂತೆ ಆಗುತ್ತಿತ್ತು.
ಅವನು ಗುಡಿಸಲು
ಬಾಗಿಲನ್ನು ನೂಕಿ ತೆರೆದು “ಅಜ್ಜೀ, ಅಜ್ಜೀ” ಎಂದು ಕೂಗಿದನು. ಒಳಗಿನಿಂದ ಒಂದು ಮಂದಪ್ರಕಾಶ ಹೊರಗೆ
ಬಂದಿತು. ನಾವು ಅಂಗಳದಲ್ಲಿಯೇ ನಿಂತಿದ್ದೆವು. ಡಾಕ್ಟರರ ಪೆಟ್ಟಿಗೆಗಳನ್ನು ಅವನು ಒಳಗಿಟ್ಟು
ನಮ್ಮನ್ನು ಒಳಗೆ ಬರಲು ಕರೆದನು. “ಬನ್ನಿ ಸ್ವಾಮೀ, ಅವಳೇ ನನ್ನಜ್ಜಿ” ಎಂದು ನಿಟ್ಟುಸಿರುಗರೆದನು.
ಆ ಮಸಕು
ಬೆಳಕಿನಲ್ಲಿಯೇ ಅದೊಂದು ಹೊಲಸುಗೂಡು ಎಂದು ನನಗನಿಸಿತು. ಗೋಡೆಯೇ ಇಲ್ಲ. ಬಿದಿರು ದಬ್ಬೆಯನ್ನು
ಕಟ್ಟಿದ್ದರು. ಒಂದು ದುರ್ವಾಸನೆ ಅಲ್ಲೆಲ್ಲ ತುಂಬಿತ್ತು. ನನಗೆ ಹೊರಗೇ ನಿಲ್ಲಬೇಕೆಂದಾಯಿತು.
ಆದರೆ ಚಿಕ್ಕಪ್ಪ ಒಳಗೆ ಹೋದಮೇಲೆ, ನಾನು ಅವರ ಅಂಗರಕ್ಷಕ ಹೊರಗೆ ನಿಲ್ಲುವುದು ಸರಿಯೇ? ಅತ್ತಿತ್ತ ನೋಡಲೂ ನನಗೆ ಧೈರ್ಯವಿಲ್ಲ - ಕೆಂಪು ಕಣ್ಣುಗಳೋ, ಕೋರೆದಾಡೆಯ ಮುಖವೂ ಕಂಡರೇ?
ಹ್ವಾ ಸಿಕ್ಕಿದೆಯಾ? ಎಂದು ಕೇಳಿದರೆ? ನನ್ನ ಎದೆಯು ವೇಗವಾಗಿ ಹೊಡೆಯತೊಡಗಿತು - ಒನಕೆ ತೆಗೆದುಕೊಂಡು ಕುಟ್ಟಿದಂತೆ
ನನಗಾಗುತ್ತಿತ್ತು. ಚಳಿಯಾಗಬೇಕಾದ ಹವೆಯಾದರೂ ಮೈ ಬೆವರಿತ್ತು. ಅಂತೂ ಹೊರಗೆ ನಿಲ್ಲಲೂ ಆರದೇ, ಒಳಗೆ ಹೋಗಲೂ ಒಗ್ಗದೇ ಚಿಕ್ಕಪ್ಪನವರನ್ನು ಹಿಂಬಾಲಿಸಿದೆನು.
ನುಗ್ಗಿದ ಹಾಗೇ ಎಡಗಡೆ
ಹರಕು ಚಾಪೆಯಲ್ಲಿ ಮುದುಕಿ ಮುದುರಿ ಮಲಗಿದ್ದಳು. ಅದೊಂದು ಚಿಂದಿ ಬಟ್ಟೆಯ ರಾಶಿಯೆಂದು ನಾನು
ಮೊದಲು ಊಹಿಸಿದೆನು.
“ಅಜ್ಜೀ ಡಾಕ್ಟ್ರು
ಬಂದರು ನೋಡು.”
ಚಿಕ್ಕಪ್ಪ ಸ್ಟೆತಸ್ಕೋಪ್ ತೆಗೆದುಕೊಂಡು ಮುಂದೆ
ಬಗ್ಗಿದರು. ಮುದುಕಿಗೆ ಪ್ರಜ್ಞೆಯೇ ಇರಲಿಲ್ಲ. ಬಹಳ ಹೊತ್ತು ಚಿಕ್ಕಪ್ಪ ಪರೀಕ್ಷೆ ಮಾಡಿದರು. ಅವನು
ಮೂಲೆಯಲ್ಲಿ ನಿಂತು ನೋಡುತ್ತಿದ್ದನು.
“ಮಗೂ ನಾನು ಬಂದೆ, ನಾನು ಬಂದೆ ಚಿನ್ನಾ” ಎಂದು ಅವಳು ಚೀರಿದಳು. ನನಗೆ ಗಾಬರಿಯಾಗಿ ಎದೆಯು ಒಡೆಯುವಂತೆ ಆಯಿತು.
“ಬೇಡಬೇಡ ಅಜ್ಜೀ, ನನ್ನನ್ನು ಬಿಟ್ಟು ಹೋಗಬೇಡ ಡಾಕ್ಟ್ರು ಬಂದಿದ್ದಾರೆ. ಕಣ್ಣುಬಿಟ್ಟು ನೋಡು ಎಂದು ಅವನು
ಅಳುತ್ತ ಹೇಳಿದನು.” ಕುಡಿಯುವ ನೀರನ್ನು ತರಲು ಚಿಕ್ಕಪ್ಪ ಅವನಿಗೆ ಹೇಳಿದರು. ಅವನು ಹೊರಗೆ ಹೋಗಿ
ಒಂದು ಮಸಿ ಹಿಡಿದ ಕುಡಿಕೆಯಲ್ಲಿ ನೀರನ್ನು ತಂದನು. ಮದ್ದಿನ ಪೆಟ್ಟಿಗೆಯಿಂದ ಸ್ಪಿರಿಟ್ ದೀಪವನ್ನು
ತೆಗೆದು ಉರಿಸಿದರು. ಅವಳಿಗೊಂದು ಇಂಜಕ್ಷನ್ (ಸೂಜಿಮದ್ದು) ಕೊಟ್ಟರು. ಮತ್ತೆ ತಂದಿದ್ದ ಕೆಲವು
ಔಷಧಿಯ ಸೀಸೆಗಳಿಂದ ಔಷಧಿಯ ಪುಡಿಗಳನ್ನು ತೆಗೆದು ಸಣ್ಣ ಪೊಟ್ಟಣಗಳಾಗಿ (ಹೋಮ್ಯೋಪತಿ ಮದ್ದು)
ಮಾಡಿಕೊಟ್ಟರು.
“ಎರಡು ಗಂಟೆಗಳಿಗೊಂದು
ಪೊಟ್ಣ ಕೊಡು. ಅಕ್ಕಿ ಹುರಿದು ಗಂಜಿ ಮಾಡಿಕೊಡು. ಮತ್ತೆ ತಲೆಗೆ ತಣ್ಣೀರು ಬಟ್ಟೆ ಇಡಬೇಕು” ಎಂದರು
ವೈದ್ಯರು. ಅವನ್ನು ಭಕ್ತಿಯಿಂದ ಕಿವಿಗಳನ್ನರಳಿಸಿ ಕೇಳಿದನು. ಅವನ ಆಗಿನ ವಿಕಾರಸ್ವರೂಪವನ್ನು
ನೋಡಿ ನನಗೆ ಅಸಹ್ಯವಾಯಿತು.
“ಮತ್ತೆ ಅವಳ
ಪ್ರಾಣಕ್ಕೆ....”
“ಈಗ ಏನು ಹೇಳಲೂ
ಸಾಧ್ಯವಿಲ್ಲ. ಇನ್ನೆರಡು ದಿವಸವಾಗಬೇಕು, ನಾಳೆ ಮಧ್ಯಾಹ್ನದವರೆಗೆ ಮದ್ದುಂಟು, ಮತ್ತೆ ಮನೆಗೆ ಬಾ.”
ಅವನ ಮುಖ
ಸಣ್ಣದಾಯಿತು. ಆ ನೆರಿಗಟ್ಟಿದ ಗಡ್ಡ ಅರ್ಧ ಹೆರೆದ ಮುಖ ಇನ್ನೂ ಭಯಕಾರಕವಾಗಿ ತೋರಿತು.
ಅಬ್ಬ, ಅಂತೂ ಒಂದು ಸಲ ಮುಗಿಯಿತಲ್ಲ ಎಂದು ನಾನು ನಿಟ್ಟುಸಿರು ಬಿಟ್ಟು ಹೊರಟೆ. ಆದರೆ ಹೊರಗೆ ಮಾತ್ರ
ಮೊದಲಾಗಿ ಕಾಲಿಡಲು ನನಗೆ ಧೈರ್ಯವಿರಲಿಲ್ಲ.
“ನಮಗೀಗ ಕಾವೇರಿ
ಹೊಳೆವರೆಗಾದರೂ ದಾರಿ ತೋರಿಸಬೇಕಲ್ಲ” ಎಂದರು ಚಿಕ್ಕಪ್ಪ.
“ನಿಮ್ಮ ಮನೆಯವರೆಗೂ
ಬಂದುಬಿಡುತ್ತೇನೆ, ಸ್ವಾಮೀ! ದೇವರು ಬಂದ ಹಾಗೆ ತಾವು ಬಂದಿರಿ. ಈ ಪಾಪಿಯ ಮೇಲೆ ಇಷ್ಟಾದರೂ ದಯ ಬಂದಿತಲ್ಲ!”
ಎಂದು ಅವನು ನಡುಗುವ ಧ್ವನಿಯಿಂದ ಹೇಳಿದನು. ನಾನು ನಮ್ಮ ಲಾಂದ್ರವನ್ನು ಹಿಡಿದು ಹೊರಗೆ ಇಳಿದೆನು.
ತಂಗಾಳಿಯನ್ನು ಉಚ್ಛ್ವಸಿಸಿ ಸಮಾಧಾನವಾಯ್ತು.
“ಅಜ್ಜೀ, ಅಜ್ಜೀ, ಔಷಧಿ ತಿನ್ನು ಅಜ್ಜೀ” ಎಂದು ಅವನು ಹೇಳುತ್ತಿದ್ದುದು ಕೇಳುತ್ತಿತ್ತು.
ಕೆಲವು
ನಿಮಿಷಗಳಲ್ಲಿಯೇ ಅವನು ಹೊರಗೆ ಬಂದನು.
“ಏನು ಔಷಧಿ
ತಿನ್ನಿಸಿದೆಯಾ?”
“ತಿನ್ನಿಸಿದ
ಹಾಗಾಯ್ತು. ನನ್ನನ್ನು ಬಚಾವು ಮಾಡಿದಿರಿ ಸ್ವಾಮೀ ಈ ದಿನ
ನೀವು” ಎಂದು ಅವನು ಮುಂದೆ ಹೊರಟನು. ನಾನು ನಡುವೆ, ಚಿಕ್ಕಪ್ಪ ಹಿಂದೆ. ಗಂಟನ್ನು ಅವನೇ
ಹೊತ್ತುಕೊಂಡನು. ಚಂದ್ರನು ಇನ್ನೂ ಕೆಳಗೆ ಇಳಿದಿದ್ದನು. ಆದ್ದರಿಂದ ನಾವು ಬಂದು ತಲುಪಿದಾಗಲೇ
ಪಶ್ಚಿಮಾಭಿಮುಖಿಯಾಗಿದ್ದ ಅಂದುಕೊಂಡೆ.
“ನೀನು ಯಾರೆಂದು
ತಿಳಿಯಲಿಲ್ಲವಲ್ಲ. ಈ ಕಾಡಿನ ಮಧ್ಯೆ ಇದ್ದೀಯಲ್ಲ. ನಿನ್ನ ಕಸಬೇನು?”
“ಸ್ವಾಮೀ ಇವತ್ತು
ನಿಮ್ಮಿಂದ ದಯೆ ಅನ್ನುವುದನ್ನು ಕಂಡೆನು.”
“ಅದೇನು ಮಹಾ. ನೀನು ಯಾರೆಂದು
ಹೇಳು.”
“ಅದನ್ನು ಹೇಳಿದರೆ
ನೀವು ಕೂಡಲೇ ಪೊಲೀಸಿಗೆ ಹೇಳುತ್ತೀರಿ. ಆದರೆ ಆ ಪಾಪದ ಅಜ್ಜಿ ಬದುಕಿರುವವರೆಗೆ ಹಾಗೆ ಮಾಡಬೇಡಿ.”
“ನೀನು ಯಾರಾದರೂ ನಾನು
ಯಾಕೆ ಪೊಲೀಸಿಗೆ ಹೇಳಬೇಕು? ಧೈರ್ಯವಾಗಿ ಹೇಳು.”
“ನನ್ನ ಹೆಸರು
ಬಿದನೂರು ಸಿಂಗಪ್ಪ....”
“ಏನು ನೀನು ಸಿಂಗಪ್ಪ, ಕೇಡಿ ಸಿಂಗಪ್ಪನೋ?”
“ಹೌದು ಸ್ವಾಮೀ ನಾನೇ
ಕೇಡಿ ಸಿಂಗಪ್ಪ, ನರರಕ್ತ ಹೀರಿದ ಸಿಂಗಪ್ಪ. ಹೆದರುತ್ತೀರಾ?”
“ಅಯ್ಯೋ” ಚೀರಿದೆನು
ನಾನು. ಹೆದರಿ ಚಿಕ್ಕಪ್ಪನವರ ಹಿಂದೆ ನಿಂತೆನು.
“ನೀವು ನನ್ನಿಂದ
ಹೆದರಬೇಕಾಗಿಲ್ಲ ಸ್ವಾಮೀ. ನೀವು ಬರೋದೇ ಇಲ್ಲ ಅಂದಿದ್ದರೆ ನೋಡಿ ನಿಮ್ಮ ರಕ್ತ ಹೀರುತ್ತಿದ್ದೆ.
ಆದರೆ ನೀವು ನನ್ನ ಅಜ್ಜಿಗೆ ಔಷಧಿ ಕೊಟ್ಟವರು....” ಎಂದು ಒಂದು ಚೂರಿಯನ್ನು ಜೇಬಿನಿಂದ ತೆಗೆದು
ತೋರಿಸಿದನು. ಆ ಲಾಂದ್ರದ ಬೆಳಕಿನಲ್ಲಿಯೂ ಅದು ಫಳ ಫಳ ಎಂದು ಹೊಳೆಯಿತು.
“ಆದರೆ ನೀವು ಒಳ್ಳೇ
ಮನುಷ್ಯರು, ನಡೆಯಿರಿ.” ಅವನು ಮುಂದೆ ನಡೆದನು. ನಾನು ಚಿಕ್ಕಪ್ಪನ ಜತೆಯಲ್ಲಿಯೇ ಆ ಅಗಲಕಿರಿದಾದ
ದಾರಿಯಲ್ಲಿ ಕಷ್ಟದಿಂದ ನಡೆಯತೊಡಗಿದೆನು.
“ನೀನು ಸಿಂಗಪ್ಪನೇ
ಹೌದೇ? ಈಗ ಸುಮಾರು ತಿಂಗಳ ಹಿಂದೆ ಉಡುವತ್ತು ಮೊಟ್ಟೆಯಲ್ಲಿ ನಡೆದ ಅಂಚೆ ಗಿರಿಯಪ್ಪನ ಖೂನಿಗೆ ನಿನ್ನ
ಮೇಲೆ ಗುಮಾನಿಯಿಂದ ಪೊಲೀಸರು ಹುಡುಕುತ್ತಿದ್ದರಲ್ಲ?”
“ಪೊಲೀಸಿನವರಿಗೇನು? ಯಾರಾದರೂ ಸಿಕ್ಕಿದರೆ ಅವರಿಗೆ ಛಡಿ ಹೊಡೆಯುವುದೇ ಅವರ ಕಾರ್ಯ. ನಾನೇ ಗಿರಿಯಪ್ಪನನ್ನು ಕೊಂದು
ರಕ್ತ ಕುಡಿದುದು. ಆದರೆ ಪೊಲೀಸರಿಗೆ ನಾನು ಎಲ್ಲಿದ್ದೇನೆಂದೂ ಗೊತ್ತಿಲ್ಲ. ನನ್ನ ಕತೆ ಗೊತ್ತುಂಟೋ
ನಿಮಗೆ?”
“ನೀನು ಮಹಾ
ಕೇಡಿಯೆಂದು ಕೇಳಿದ್ದೇನೆ. ನಿನ್ನ ವಿಷಯ ಹೇಳಬಹುದಾದರೆ ಹೇಳು. ಆದರೆ ನನ್ನಿಂದ ನಿನಗೆ ಯಾವ ಕೇಡೂ
ಆಗಲಾರದು. ಇದು ಮಾತು.”
“ಕೇಡಾದರೆ ನಾನು
ಹೆದರಲಾರೆ. ನನ್ನ ರಕ್ತದ ಆಸೆ ತೀರಿಸಿಕೊಳ್ಳುತ್ತೇನೆ. ಆದರೆ ನೀವು ಒಳ್ಳೆಯವರು. ನನಗೆ ದಯೆ
ತೋರಿಸಿದಿರಿ. ಪೊಲೀಸಿನವರಿಗೆ ಮಾತ್ರ ನನ್ನ ವಿಷಯ ತಿಳಿಸಬೇಡಿ. ನನ್ನ ಕತೆ ಕೇಳಿ.
“ಮದೆನಾಡಿನಲ್ಲಿ ನಾನು
ಹುಟ್ಟಿದೆ. ನಮ್ಮ ಮನೆಯಲ್ಲಿ ನಾನು ನನ್ನ ತಮ್ಮ ಮತ್ತೆ ತಮ್ಮ ತಂದೆ ತಾಯಿ ಮಾತ್ರ ಇದ್ದೆವು. ಅಪ್ಪ
ನನ್ನನ್ನು ಕರೆದುಕೊಂಡು ಗದ್ದೆಗೆ, ಕಾಡಿಗೆ ಎಲ್ಲ ಹೋಗುತ್ತಿದ್ದ. ಅವನು ನನಗೆ ಹೊಡೆದದ್ದೇ
ಇರಲಿಲ್ಲ. ಆದರೆ ಅವ್ವ ಬಹಳ ಹೊಡೆಯುತ್ತಿದ್ದಳು. ಸಣ್ಣ ಸಣ್ಣ ತಪ್ಪಿಗೆ ಛಡಿ ಏಟು
ಬೀಳುತ್ತಿದ್ದಿತು. ಒಂದು ಹೊಳೆಯಲ್ಲಿ ಮಿಂದೆನೆಂದು ಬಾಸುಂಡೆ ಬರುವಹಾಗೆ ಬಡಿದಳು - ಆದರೆ ಇವೆಲ್ಲ
ಅಪ್ಪ ಮನೆಯಲ್ಲಿ ಇಲ್ಲದಾಗ. ನನಗೆ ಅವ್ವನ ಮೇಲೆ ಬಹಳ ಸಿಟ್ಟು ಬರುತ್ತಿತ್ತು. ದೊಡ್ಡವನಾದಮೇಲೆ
ನಿನಗೆ ನಾನು ಖಂಡಿತ ಪಾಠ ಕಲಿಸುತ್ತೇನೆ ನೋಡು ಎಂದು ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತಿದ್ದೆ.
ನನ್ನ ತಮ್ಮನಿಗೂ - ಅವನು ಮಗುವಾಗಿದ್ದ - ಅವಳು ತುಂಬ ಹೊಡೆಯುತ್ತಿದ್ದಳು, ಆದರೆ ನನಗೇ ಬಲವಾದ ಪೆಟ್ಟು. ತಮ್ಮನ ಮೇಲೆ ನನಗೆ ತುಂಬಾ ಪ್ರೀತಿಯಿತ್ತು.
“ಒಂದು ದಿವಸ ಯಾವುದೋ
ಒಂದು ಹಬ್ಬ. ನಮ್ಮ ಮನೆಯಲ್ಲಿ ಭಾರೀ ಭಾರೀ ಒಂದು ಹಂದಿ ಬೆಳೆದಿತ್ತು. ಅದನ್ನು ಅಪ್ಪ
ಹಿಡಿದುಕೊಂಡ. ಆಗ ಹತ್ತಿರದ ಮನೆಯ ಕಾಳಪ್ಪನೂ ಬಂದನು. ಇಬ್ಬರೂ ಸೇರಿ ಆ ಹಂದಿಯ ಕೈಕಾಲುಗಳನ್ನು
ಬಲವಾಗಿ ಕಟ್ಟಿದರು. ಅದು ಅರಚುತ್ತ ನೆಲದಮೇಲೆ ಉರುಳುತ್ತಿತ್ತು. ಹಳೇ ಬೊಡ್ಡು ಬಾಳು ಕತ್ತಿಯನ್ನು
ಅವ್ವನು ಮನೆಯೊಳಗಿನಿಂದ ತಂದುಕೊಟ್ಟಳು. ನಾನು ಹಂದಿ ಕೂಗುವುದನ್ನು ನೋಡಿ ನಗುತ್ತ ನಿಂತೆ. ಅಪ್ಪ
ಕತ್ತಿ ಹಿಡಿದುಕೊಂಡು ಹೊರಟ. ಕಾಳಪ್ಪ ಆ ಹಂದಿಯ ಮುಸುಡನ್ನು ಅಮುಕಿ ಹಿಡಿದನು. ಬಾಳುಕತ್ತಿ ಎತ್ತಿ ಅದರ ದಪ್ಪವಾದ ಕುತ್ತಿಗೆಗೆ ಒಂದು
ಏಟನ್ನು ಅಪ್ಪನು ಹೊಡೆದನು. ನನಗೆ ಅದನ್ನು ನೋಡಿ ಭಾರೀ ಸಂತೋಷವಾಯಿತು. ನನಗೇ ಹೊಡೆಯಲಿಕ್ಕೆ
ಸಿಕ್ಕಿದ್ದರೆ ಎಂದಾಯಿತು. ಬಾಳು ಕತ್ತಿ ಅದರ ಕೊಬ್ಬಿದ ಕುತ್ತಿಗೆಯಲ್ಲಿ ಒಂದು ಗಾಯ ಮಾಡಿ ಹಿಂದೆ
ಚಿಮ್ಮಿತು, ಹಂದಿಯು ಅರಚಿತು, ಉರುಳಿತು, ಉರುಚಿತು. ಕಾಳಪ್ಪ ಬಲವಾಗಿ ಹಿಡಿದನು. ನಾನು ನಗಾಡಿದೆನು. ಅಪ್ಪನು ಇನ್ನೊಂದೇಟು ಬಲವಾಗಿ
ಅಲ್ಲಿಗೆ ಹೊಡೆದನು. ಈ ಗಾಯ ಆಳವಾಗಿ, ಅಲ್ಲಿಂದ ರಕ್ತ ಹರಿಯಿತು. ಹಂದಿ ಮಲಗಿದಲ್ಲೇ ಹೊರಳಿ ಅಂಗಳದ ಆ ಕಡೆಗೆ ಉರುಳಿತು. ಅದರ ಕೂಗು
ಕರ್ಕಶವಾಗಿತ್ತು. ನನಗೆ ಹಿತಕರವಾಗಿತ್ತು. ನಾನು ಹೇ ಕೂಗುತ್ತೀಯಾ ಹಂದಿ ಎಂದು ಅದರ ಹಿಂದೆಯೇ
ಓಡಿದೆನು. ಕಾಳಪ್ಪ ಪುನಃ ಹಿಡಿದನು. ಅಪ್ಪ ಆ ಗಾಯದೊಳಗೆ ಕತ್ತಿಯನ್ನು ನುಗ್ಗಿಸಿ ಕರಕರ ಎಂದು ಅದರ
ಕುತ್ತಿಗೆಯನ್ನು ಕೊಯ್ದನು. ಎಷ್ಟು ಚಂದ, ಎಷ್ಟು ಚಂದ, ಎಷ್ಟು ಚಂದ ಎಂದು ನಾನು ಅಲ್ಲಿಯೇ ಕುಣಿದಾಡಿದೆನು. ಅಂಗಳವಿಡೀ
ರಕ್ತಮಯವಾಯಿತು, ಹಂದಿಯ ತಲೆ ತುಂಡಾಗಿ ಅಡ್ಡ ಬಿದ್ದಿತು. ನಾನು ಓಡಿಹೋಗಿ ಸತ್ತ ಹಂದಿಯ ಮೇಲೆ ಕೂತೆ. ಅದರ
ಕುತ್ತಿಗೆಯಿಂದ ರಕ್ತ ಚಿಮ್ಮಿತು. ಅಪ್ಪ ಏಳೋ ಅಂದನು. ನಾನು ಅಲ್ಲಿಯೇ ನಿಂತು ಎಷ್ಟು ಚಂದ ನಾನು
ನೋಡಲೇ ಇಲ್ಲ ಎಂದುಕೊಂಡೆನು. ಸುರಿಯುತ್ತಿದ್ದ ರಕ್ತವನ್ನು ತುದಿ ಬೆಟ್ಟಿನಲ್ಲಿ ಮುಟ್ಟಿ
ಚೀಪಿದನು. ಅದೆಷ್ಟು ರುಚಿ! ಅದರ ಮುಚ್ಚಿದ್ದ ಕಣ್ಣುಗಳನ್ನು ಬಿಡಿಸಿ ಒಂದು ಕಡ್ಡಿಯಿಂದ ಚುಚ್ಚಲು
ನೋಡಿದೆನು. ನಡೀತೀಯೋ ಇಲ್ಲವೊ ಮಾರಿ ಎಂದು ಅವ್ವನು ಕೋಲು ತಂದಳು. ನಾನು ದೂರ ಓಡಿದೆನು. ರಕ್ತದ
ರುಚಿಯಿಂದ ಬಾಯಿ ಚಪ್ಪರಿಸುತ್ತ ನಿಂತುಕೊಂಡೆನು. ಮತ್ತೆ ಅದರ ಚರ್ಮ ಸುಲಿದು, ಕಡಿದು ಹೋಳು ಮಾಡಿ ಏನೇನೋ ಮಾಡಿದರು. ಅದರ ಕುತ್ತಿಗೆ ಕೊಯ್ದುದನ್ನು ಪುನಃ ಪುನಃ
ಯೋಚಿಸಿಕೊಂಡು ಎಂಥ ಅದ್ಭುತವೆಂದು ನಾನು ಆನಂದಪಡುತ್ತಿದ್ದೆನು. ಆ ದಿನ ನಮಗೆ ಹಂದಿಯ ಉದಕ
(ಮೇಲೋಗರ) ಇತ್ತು. ಇನ್ನೂ ಯಾರಾರೋ ಬಂದಿದ್ದರು. ಹಂದಿ ಮಾಂಸದ ಊಟ ಒಳ್ಳೇ ರುಚಿಯಾಗಿತ್ತು.
“ನಾನೂ ಒಂದು ಹಂದಿಯ
ಕುತ್ತಿಗೆ ಕೊಯ್ಯಬೇಕೆಂದು ನನಗೆ ಆಸೆಯಾಯಿತು. ಆದರೆ ಅಷ್ಟು ದೊಡ್ಡ ಹಂದಿಯೆಲ್ಲಿ? ಅಪ್ಪ ಅವ್ವ ಎಲ್ಲ ಗದ್ದಗೆ ಹೋದಾಗ ನಾನು ಮನೆಯಲ್ಲಿಯೇ ಕುಳಿತುಕೊಂಡು ಇರುತ್ತಿದ್ದೆ. ಅವರು
ಹೋದ ಮೇಲೆ ನಾನು ಹೊರಗೆ ಹೋಗಿ ಕೋಳಿಮರಿಗಳನ್ನು ಹಿಡಿದು ಅವುಗಳ ಕುತ್ತಿಗೆ ಮುರಿಯುತ್ತಿದ್ದೆನು.
ಹಾಗೆ ಆ ಮರಿಯನ್ನು ಕೈಯಲ್ಲಿ ಹಿಡಿದಾಗ ಅದು ಸಣ್ಣ ರೆಕ್ಕೆಗಳನ್ನು ಪಟಪಟನೆ ಬಡಿಯುತ್ತಿತ್ತು.
ತಾಯಿ ಕೋಳಿಯು ಬೆರಸುತ್ತಿತ್ತು. ನನಗೆ ಆಗ ರಂಗೇರುತ್ತಿತ್ತು. ಮರಿಯ ಕುತ್ತಿಗೆ ಮುರಿದು ರಕ್ತ
ಹೀರುವುದೆಂದರೆ ನನಗೆ ತುಂಬಾ ಖುಷಿಯ ಆಟವಾಯಿತು. ಮನೆಯಲ್ಲಿ ಸಾಕಷ್ಟು ಕೋಳಿಗಳೂ ಮರಿಗಳೂ
ಇದ್ದುದರಿಂದ ಇದು ಅವ್ವನಿಗೆ ತಿಳಿಯಲೇ ಇಲ್ಲ. ಸತ್ತ ಮರಿಯನ್ನು ನಾನು ದೂರ ಎಸೆದು
ಬಿಡುತ್ತಿದ್ದೆ. ಆದರೆ ಒಂದು ದಿವಸ ಅವ್ವ ಇದನ್ನೆಲ್ಲಿಯೂ ನೋಡಿಯೇ ಬಿಟ್ಟಳು. ನನಗೆ ಬಾರುಕೋಲಿನ
ಛಡಿ ಏಟು - ಈಗಲೂ ನನಗೆ ಸಿಟ್ಟು ಏರುತ್ತದೆ - ಬಿತ್ತು. ಮೈಯ್ಯೆಲ್ಲ ಬಾಸುಂಡೆ ಬಂದಿತು. ಅಪ್ಪನೂ
ಗದರಿಸಿದನು. ಕೋಳಿಗಳನ್ನೇ ಕೊಂದು ರಕ್ತ ಹೀರುತ್ತೇನೆ ಎಂದು ನಾನು ನಿಶ್ಚಯ ಮಾಡಿದೆನು. ಆದರೆ
ಅವ್ವ ಕೋಳಿಗಳನ್ನು ಹೊರಗೆ ಬಿಡಲಿಲ್ಲ ಮತ್ತು ನನ್ನನ್ನು ಅವಳ ಜೊತೆಯಲ್ಲಿಯೇ ಕರೆದುಕೊಂಡು
ಹೋಗುತ್ತಿದ್ದಳು. ಗದ್ದೆಯಲ್ಲಿ ಹಸಿ ಹುಲ್ಲು ಕೊಯ್ಯುವ ಕೆಲಸವನ್ನೂ ಕಾಡಿನಿಂದ ಸೌದೆ ಹೆಕ್ಕಿ
ತರುವ ಕೆಲಸವನ್ನೋ ಕೊಡುತ್ತಿದ್ದಳು. ನನಗೆ ಭಾರೀ ಸಿಟ್ಟು ಬರುತ್ತಿತ್ತು. ಆದರೆ ಅವಳ ಏಟು
ಉಂಟಲ್ಲ. ಅಪ್ಪನಿಗೆ ದೂರು ಹೇಳಿದರೆ? ಅಪ್ಪನಿಗೂ ನಾನು ಹೆದರುತ್ತಿದ್ದೆನು. ಎಷ್ಟು ದಿವಸವಾಯಿತೆಂದು
ನನಗೆ ಲೆಕ್ಕ ಗೊತ್ತಿರಲಿಲ್ಲ. ಆದರೆ ಕೋಳಿಮರಿಯ ರಕ್ತ ಹೀರದೇ ನನಗೆ ತಡೆಯಲಿಕ್ಕಾಗಲಿಲ್ಲ. ಬಾಳೆಯ
ಕಂದುಗಳನ್ನು ಕತ್ತಿಯಿಂದ ಕಡಿಯುತ್ತಿದ್ದೆ. ಬೇಲಿಯ ಗಿಡಗಳನ್ನು ಮುರಿದು ಎಸೆಯುತ್ತಿದ್ದೆ. ಮನೆಯ
ಹಿಂದಿನ ಬರೆಯನ್ನು ಅಗೆದಗೆದು ಹಾಕುತ್ತಿದೆ. ಇಲ್ಲಿಯೂ ಅವ್ವನು ನೋಡಿದರೆ ನನಗೆ ಬಾಸುಂಡೆಯೇ ಗತಿ.
ನಾನಾಗ ಸುಮಾರು ದೊಡ್ಡವನಾಗಿದ್ದೆ. ಅವ್ವನಷ್ಟೇ ಎತ್ತರವಾಗಿದ್ದೆ. ಅಪ್ಪನ ಹೆಗಲಿಗೆ
ಬರುತ್ತಿದ್ದೆ. ಮತ್ತೊಂದು ದಿನದಿಂದ ದನ ಕಾಯಲಿಕ್ಕೆಂದು ನನ್ನನ್ನು ಬಾಣೆಗೆ ಕಳಿಸಿದರು. ತಮ್ಮ ಅವ್ವನ
ಜೊತೆಯಲ್ಲಿ ಗದ್ದೆಗೆ ಹೋಗುತ್ತಿದ್ದ. ದನಕಾಯುವ ಕೆಲಸ ಬಹಳ ಬೇಜಾರದ್ದು. ಬೆಳಗ್ಗೆ ದನಗಳ
ಜೊತೆಯಲ್ಲಿ ಹಡ್ಲಿಗೆ (ಬಯಲು) ಹೋದರೆ ಸಾಯಂಕಾಲವೇ ಹಿಂದೆ ಬರುವುದು. ಮಧ್ಯಾಹ್ನ ತಮ್ಮ ಬುತ್ತಿ
ತಂದುಕೊಡುತ್ತಿದ್ದ. ರಾತ್ರಿಯಾಗುವವರೆಗೂ ದನಗಳ ಹಿಂದೆಯೇ ಅಲೆಯಬೇಕು. ಯಾವುದಾದರೊಂದು ಕರು
ಹಿಂದಕ್ಕೆ ಬರದಿದ್ದರೆ, ಬೇರಾವುದಾರೂ ದನ ಗದ್ದೆಗೆ ಇಳಿದರೆ ನನಗೆ ಪೆಟ್ಟು. ಹಿಂದಕ್ಕೆ ಹೊಡೆಯಬೇಕು ಎಂದು ಸಿಟ್ಟು
ಬರುತ್ತಿತ್ತು. ಆದರೆ ಅಪ್ಪ ಒಂದೇಟು ಹೊಡೆಯದಿದ್ದರೂ ನಾನು ಅವನಿಗೆ ಹೆದರುತ್ತಿದ್ದೆ.
“ಆ ಹಂದಿಯ
ಕುತ್ತಿಗೆಯನ್ನು ಕೊಯ್ದಂತೆ ಒಂದು ಹಸುವಿನ ಕರುವಿನ ಕುತ್ತಿಗೆಯನ್ನೂ ಕತ್ತರಿಸಬೇಕೆಂದು ಒಂದು ದಿನ
ನನಗೆ ಫಕ್ಕನೆ ಹೊಳೆಯಿತು. ಅಷ್ಟು ದಿನಗಳ ಬೇಜಾರವೆಲ್ಲವೂ ಆಗ ಮಾಯವಾಯಿತು. ನನಗೆ ಸಂತೋಷ
ಉಕ್ಕಿತು. ಕೂಡಲೇ ಒಂದು ಕರುವನ್ನು ಹಿಡಿದುಕೊಂಡೆನು. ನನ್ನ ಕೈಯ್ಯಲ್ಲಿದ್ದ ಕತ್ತಿಯಿಂದ ಅದರ
ಕುತ್ತಿಗೆಗೆ ಬಲವಾದ ಒಂದು ಏಟನ್ನು ಹೊಡೆದನು. ಹಂದಿಯ ಹಾಗೆ ಕರುವು ಒದ್ದಾಡಲಿಲ್ಲ - ಅದರ
ಕತ್ತಿಗೆ ಅರ್ಧ ಗಾಯವಾಗಿ ಕರುವು ದೂರಕ್ಕೆ ಹಾರಿತು. ನಾನು ಅಲ್ಲಿಗೆ ಓಡಿ ಹೋಗಿ ಅದರ ಕುತ್ತಿಗೆಯನ್ನು
ಪೂರ್ಣವಾಗಿ ಕತ್ತರಿಸಿದೆನು. ನೆತ್ತರು ಹಾರಿತು, ಕಡಿದ ಭಾಗಕ್ಕೆ ಬಾಯನ್ನು ಇಟ್ಟು ರಕ್ತವನ್ನು ಹೀರಿದೆ. ಕೋಳಿ, ಹಂದಿ ರಕ್ತದಷ್ಟು ಇದು ನನಗೆ ರುಚಿಸಲಿಲ್ಲ. ಆದರೆ ಆ ಕಡಿಯುವ ಕೆಲಸ ಎಷ್ಟು ಸಂತೋಷದ್ದು!
ಅಷ್ಟರಲ್ಲೇ ನನಗೆ ಅವ್ವನ ನೆನಪಾಯಿತು. ಕರುವನ್ನೆಳೆದು ಹತ್ತಿರದ ಬಿದಿರು ಹಿಂಡಲಿನ ಬುಡಕ್ಕೆ ಎಸೆದೆನು.
ಹೊಳೆಯಲ್ಲಿ ಕತ್ತಿಯನ್ನೂ ನನ್ನ ಕೈ ಬಾಯಿಗಳನ್ನೂ ತೊಳೆದನು. ಸಂಜೆಯಾಗುವಾಗ ನಾನು ಉಳಿದ
ದನಕರುಗಳನ್ನು ಅಟ್ಟಿಕೊಂಡು ಉಲ್ಲಾಸದಿಂದ ಮನೆಗೆ ಹಿಂತಿರುಗಿದೆ. ಗೋಪಿ ಕರುವೆಲ್ಲಿ ಎಂದು ಅವ್ವ
ಕೇಳಿದಳು. ನನಗೆ ಗೊತ್ತಿಲ್ಲವೆಂದು ತಲೆಯಲ್ಲಾಡಿಸಿದೆ. ಸರಿ ಛಡಿ ಬಿತ್ತು. ನಾನು ಅವ್ವನಿಗಿಂತ
ಉದ್ದವಾಗಿದ್ದರೂ ಅದನ್ನು ಸಹಿಸಿದೆ. ನನ್ನನ್ನು ಸಣ್ಣ ಮಗುವೆಂದೇ ಅವಳು ತಿಳಿದಿದ್ದಳೋ ಏನೋ? ಅಪ್ಪ ಬಂದು ಹೆಚ್ಚಿಗೆ ಬೀಳುತ್ತಿದ್ದ ಪೆಟ್ಟನ್ನು ತಡೆದನು. ನನಗೆ ಎಲ್ಲಿಯಾದರೂ
ಓಡಿಹೋಗಬೇಕೆಂದಾಯ್ತು. ಹಸಿವು ಜೋರಾಗುತ್ತಿತ್ತು. ಊಟಮಾಡಿ, ಮಧ್ಯರಾತ್ರಿ ಎದ್ದು
ಓಡಿಹೋಗುವುದೆಂದು ಮಲಗಿದೆ. ಮಧ್ಯರಾತ್ರಿಯಾಯಿತೆಂದು ಫಕ್ಕನೆ ಎದ್ದು ನೋಡುವಾಗ ಮಾರನೇ ದಿನ ಬೆಳಗಾಗಿತ್ತು.
ಹಾಳು ನಿದ್ರೆ ನನಗೆ ಗಾಢವಾಗಿ ಬಂದಿತ್ತು. ಮರುದಿನ ಅಪ್ಪ ಅವ್ವ ಎಲ್ಲರೂ ಕರುವನ್ನು ಹುಡುಕಲು
ಹೋದರು. ನಾನು ದನ ನೋಡಲು ಹೋದೆ. ಆ ಬಿದಿರುಮೆಳೆಯ ಹತ್ತಿರ ಅವರು ಪರೀಕ್ಷೆಮಾಡುವುದನ್ನು ನಾನು
ದೂರದಿಂದ ನೋಡಿದೆನು. ಆದರೆ ಅವರು ಅಲ್ಲಿಂದ ಸುಮ್ಮನೆ ಗದ್ದೆಗೆ ಮರಳಿದರು. ಅವ್ವ ನನಗೆ
ಹೊಡೆಯಲಿಕ್ಕೆ ಬರಲಿಲ್ಲ. ಮತ್ತೆ ನಾನು ಅಲ್ಲಿಗೆ ಹೋಗಿ ನೋಡುವಾಗ ಆ ಕರುವಿನ ಅರ್ಧದೇಹವನ್ನು
ಯಾವುದೋ ಪ್ರಾಣಿ ತಿಂದಹಾಗಿತ್ತು. ಅಂತೂ ಇನ್ನೊಂದು ಪೆಟ್ಟಿನ ಹೊಡೆತ ನನಗೆ ತಪ್ಪಿತು ಎಂದು
ಖುಷಿಯೂ ಆಯಿತು. ಇನ್ನೂ ಕಡಿದು ಕುಡಿಯುವ ಆನಂದ ಅನುಭವಿಸಬೇಕೆಂದೂ ಅನಿಸಿತು. ಆದರೆ
ಮರುದಿವಸದಿಂದಲೇ ನನ್ನನ್ನು ದನ ಕಾಯಲು ಹೋಗಬಿಡಲಿಲ್ಲ. ನನ್ನ ತಮ್ಮ ಆ ಕೆಲಸ ಮಾಡಹೊರಟ. ನಾನು ಗುದ್ದಲಿಯಿಂದ ಸುಮ್ಮಸುಮ್ಮನೆ
ಮಣ್ಣು ಅಗೆಯುವುದು, ಗಿಡಗಳ ತಲೆ ಕತ್ತರಿಸುವುದು ಹೀಗೆಲ್ಲ ಮಾಡುತ್ತ ನನ್ನ ಸೇಡನ್ನು ತೀರಿಸಿಕೊಳ್ಳುತ್ತಿದ್ದೆ.
ಆದರೆ ಕೋಳಿಮರಿಯೂ ಇಲ್ಲ, ಕರುವೂ ಇಲ್ಲ, ಹಂದಿಯಂತೂ ಇಲ್ಲವೇ ಇಲ್ಲ. ನಾನು ಅವ್ವನ ಮೇಲೆ ಸಿಟ್ಟಿನಿಂದ ಕುದಿಯುತ್ತಿದೆ. ಹಲ್ಲು
ಕಡಿಯುತ್ತಿದ್ದೆ.
“ಮತ್ತೆಷ್ಟೋ
ದಿವಸವಾಯಿತು. ಮಳೆಗಾಲ ಕಳೆದು ಬೆಳೆ ಕೆಲಸದ ಸಮಯ. ಅಪ್ಪ ಯಾವಾಗಲೂ ನನ್ನನ್ನು ತನ್ನ ಜೊತೆಯಲ್ಲಿ
ಕರೆದುಕೊಂಡು ಹೋಗುತ್ತಿದ್ದನು. ಅವನು ದೂರ ಎಲ್ಲಿಯಾದರೂ ಹೋದರೆ ಅವ್ವನ ಕಣ್ಣು ಯಾವಾಗಲೂ ನನ್ನ
ಮೇಲೆಯೇ ಇರುತ್ತಿತ್ತು. ಆ ಬೆಳೆ ಕೆಲಸದ ಸಮಯದಲ್ಲಿ ನಾನು ಗದ್ದೆಯಲ್ಲಿ ತಿರುಗುತ್ತಿದ್ದೆ.
ದೂರದಲ್ಲಿ ಒಂದು ಹಸುವನ್ನು ನಮ್ಮ ಗದ್ದೆಯನ್ನು ಮೇಯುತ್ತಿತು. ಹೋಗು ಅದನ್ನು ಬೆರಸು ಸಿಂಗಾ
ಎಂದನು ಅಪ್ಪ. ನಾನು ಕತ್ತಿಯನ್ನು ಹಿಡಿದುಕೊಂಡೇ ಓಡಿದೆನು. ನಾನು ಓಡುತ್ತಿದ್ದ ಹಾಗೆಯೇ ಹಸು
ಅಲ್ಲಿಂದ ಧಾವಿಸಿತು. ಗದ್ದೆಗಳನ್ನು ತುಳಿದು, ಬೇಲಿಯನ್ನು ಹಾರಿ, ಹೊರಗೆ ಬಯಲಿಗೆ ಜಿಗಿಯಿತು. ನಾನು ಅದನ್ನೇ ಕಡಿದೇ ಬಿಡಬೇಕು, ಅಥವಾ ಒಂದು ಏಟನ್ನಾದರೂ ಕತ್ತಿಯಿಂದ ಹೊಡೆಯಲೇಬೇಕೆಂದು ಹಠದಿಂದ ಓಡಿದೆನು. ಆಗಲೇ ಯಾಕೋ ನಮ್ಮ
ದನ ಬೆರಸುತ್ತೀಯ? ಎಂದು ಯಾರೋ ಕೂಗಿದರು. ನಾನು ಆ ಪೋರ ಸಣ್ಣನನ್ನು ನೋಡಿ ನೀನ್ಯಾರೋ ಕೇಳಲಿಕ್ಕೆ? ಎಂದು ಉತ್ತರ ಕೊಟ್ಟೆನು. ಆ ಹೈದನು ನೋಡು ಅಪ್ಪನ ಹತ್ತಿರ ಹೇಳುತ್ತೇನೆ. ನಡೀತೀಯೋ ಇಲ್ಲವೋ
ದೂರ? ಎಂದನು. ನನ್ನ ಹೆಗಲಿನವರೆಗೂ ಬರದ ಆ ಪೊರ್ಕಿ ಹೈದನ ಧೈರ್ಯ ನೋಡಿ! ಏನ್ಮಾಡ್ತಿಯೋ! ಎಂದು
ನಾನು ಕೇಳಿದೆನು. ನೀನು ನಮ್ಮ ದನದ ಮೈ ಮುಟ್ಟು ನೋಡುವ ಎಂದನು. ಮುಟ್ಟುತ್ತೇನೆ. ಅಲ್ಲ.
ಕಡಿಯುತ್ತೇನೆ. ಬಾ ನೋಡು ನಾನು ಆ ದನದ ಹಿಂದೆ ಓಡಿದೆನು. ಅವನು ಏ ಅಪ್ಪಾ ಬಾ ಇಲ್ಲಿ ಎಂದು
ಕೂಗುತ್ತ ನನಗೆ ಕಲ್ಲನ್ನು ಬೀಸಿ ಬೀಸಿ ಹೊಡೆದನು. ಒಂದೆರಡು ನನಗೆ ತಗಲಿದುವು. ನನಗೆ ಸಿಟ್ಟು ತಡೆಯದಾಯಿತು.
ಬಾರೋ ಮಗನೇ ಎಂದು ಅಲ್ಲಿಯೇ ನಿಂತೆನು. ಅವನು ಕಲ್ಲು ಹೊಡೆಯುತ್ತಾ ಹತ್ತಿರ ಬಂದನು, ನನ್ನ ಕೈಯಲ್ಲಿದ್ದ ಕತ್ತಿಯು ಕುಣಿಯಿತು, ರಕ್ತದ ದಾಹ ಏರಿತು. ನಿನಗೆ ಬರಲಿ ಬುದ್ಧಿ ಎಂದು ಅವನೆಡೆಗೆ
ಹಾರಿ ಅವನ ಕುತ್ತಿಗೆಗೇ ಹೊಡೆದನು. ಕರ‍್ಕ್ ಎಂದು ಬಾಳೆದಿಂಡು ತುಂಡಾಗುವಂತೆ ಅದು ತುಂಡಾಗಿ ದೂರ
ರಟ್ಟಿತು - ಆಹಾ ಅದೆಂಥ ಧಿಮಾಕಿನ ಕೆಲಸ. ಅವನ ರಕ್ತವನ್ನು ಚೆನ್ನಾಗಿಯೇ ಹೀರಿದೆನು. ಮನುಷ್ಯ
ರಕ್ತ ತುಂಬಾ ರುಚಿ. ಈಗ ಸುಮಾರು ತಿಂಗಳಿಂದ ಮನುಷ್ಯ ರಕ್ತ ಕುಡಿಯದೇ ನನಗೆ ಬಾಯಾರಿಕೆಯಾಗಿದೆ.
ಪಾಠ ಕಲಿತೆಯಾ, ಹಾಗೆ ಬಿದ್ದಿರು ಎಂದು ನಾನು ಅಲ್ಲಿಂದ ಮನೆಗೆ
ಹೋದೆ. ನನ್ನ ಉತ್ಸಾಹದ ಕೋಡಿ ಬಿರಿದಿತ್ತು. ಮೈಯ, ಬಟ್ಟೆಯೆಲ್ಲ ರಕ್ತಮಯವಾಗಿತ್ತು. ಅವ್ವ
ನೋಡಿ ಇದೇನೋ ಸಿಂಗ ಎಂದು ಕೇಳಿದುದಕ್ಕೆ ನಾನು
ಮಾತಾಡಲಿಲ್ಲ. ಹೇಳ್ತೀಯೋ ಇಲ್ಲವೋ ಎಂದು ಅವಳಿಂದ
ಪೆಟ್ಟು ಬಿತ್ತು. ಆದರೆ ನನಗೆ ಮನಸ್ಸಿನಲ್ಲಿ ಹರ್ಷ ತುಂಬಿತ್ತು, ಆ ಪೆಟ್ಟುಗಳನ್ನು ನಾನು ಲೆಕ್ಕಿಸಲೇ ಇಲ್ಲ. ಮನುಷ್ಯ ರಕ್ತ ಎಷ್ಟು ರುಚಿ ಎಂದೇ ನನ್ನ ತಲೆಗೆ
ಅಂಟಿ ಹೋಯಿತು.
“ಆದರೆ ನನ್ನನ್ನು
ಸುಮ್ಮನೆ ಬಿಡಲಿಲ್ಲ. ಅವತ್ತು ರಾತ್ರಿಯೇ ಕರೀಬಟ್ಟೆ ಹಾಕಿಕೊಂಡವರು - ಪೊಲೀಸರು ಎಂದು ಮತ್ತೆ
ತಿಳಿಯಿತು - ನನ್ನನ್ನು ಹಿಡಿದು ಕೊಂಡು ಹೊರಟರು. ಅವನು ಕಾಡುಹಂದೀನ ಹೊಡೆದಾಗ ಹಾರಿದ ರಕ್ತ ಇದು
ದೇವರೂ ಎಂದು ಅಪ್ಪನು ಅವರಿಗೆ ಹೇಳುತ್ತಿದ್ದನು. ಅವ್ವ, ತಮ್ಮ ಇವರೆಲ್ಲ ದೂರ ನಿಂತಿದ್ದರು. ಇನ್ನೂ ಯಾರಾರೋ, ಹತ್ತಿರದ ಮನೆಯವರೂ ಬೇರೆಯವರೂ ಅಲ್ಲಿಗೆ ಬಂದಿದ್ದರು. ನನಗೆ ಇವೆಲ್ಲ ಏನೆಂದು ತಿಳಿಯಲಿಲ್ಲ.
ನನ್ನನ್ನು ಎಲ್ಲಿಗೆ ಯಾಕೆ ಆ ಪೊಲೀಸರು ಹಿಡಿದುಕೊಂಡು ಹೋಗುತ್ತಾರೆಂದು ಆಗ ತಿಳಿಯಲಿಲ್ಲ.
ದೂರದಲ್ಲಿ ಒಳ್ಳೇ ಬಟ್ಟೆ, ಹ್ಯಾಟು ಹಾಕಿಕೊಂಡವನೊಬ್ಬನು ನಿಂತಿದ್ದನು. ಅವನು ನನ್ನನ್ನು ಕೇಳಿದನು ನೀನು ಸಣ್ಣಣ್ಣನನ್ನು
ಕೊಂದೆಯಾ? ಹೌದು, ಅವನ ಕುತ್ತಿಗೆಯನ್ನು ಕತ್ತರಿಸಿ ರಕ್ತವನ್ನೇ ಹೀರಿದೆ. ಅಬ್ಬ ಅವನ ಸೊಕ್ಕೇ! ಎಂದು
ನಾಲಗೆಯನ್ನು ಚಪ್ಪರಿಸಿ ಹೇಳಿದೆನು. ಅಯ್ಯೋ ಏನ್ಮಾಡಿದೆ ಸಿಂಗಾ ಎಂದನು ಅಪ್ಪ. ಅಪ್ಪ ಯಾಕೆ ಹೀಗೆ
ಮಾಡುತ್ತಾನೆ ಎಂದು ನನಗೆ ತಿಳಿಯಲಿಲ್ಲ. ಆ ಪೊಲೀಸರು ನನ್ನನ್ನು ಹಿಡಿದುಕೊಂಡು ಹೋದರು. ಉಳಿದವರು
ಯಾರೂ ಜೊತೆಯಲ್ಲಿ ಬರಲಿಲ್ಲ.
“ನನ್ನನ್ನು ಮೋಟಾರ್
ಕಾರಿನಲ್ಲಿ ಕೂರಿಸಿ ಆ ರಾತ್ರಿ ಮಡಿಕೇರಿಗೆ ಕರೆದುಕೊಂಡು ಹೋದರು. ಕಗ್ಗತ್ತಲೆಯ ಹೊಲಸು
ಕೋಣೆಯಲ್ಲಿ ಕೂಡಿ ಪಡಿಯಿಕ್ಕಿ ಬೀಗ ಜಡಿದರು. ಅಲ್ಲಿ ಮಲಗಲು ಏನೂ ಇರಲಿಲ್ಲ. ನನಗೆ ಚಳಿಯೂ
ಆಗುತ್ತಿತ್ತು. ಆದರೆ ನಿದ್ರೆ ಜೋರು ಬರುತ್ತಿದ್ದುದರಿಂದ ನೆಲದ ಮೇಲೆಯೇ ಮಲಗಿ ನಿದ್ರೆ
ಮಾಡಿದೆನು. ಇದೆಲ್ಲ ಯಾಕೆ, ಸಣ್ಣಣ್ಣನನ್ನು ನಾನು ಕಡಿದರೆ ನನಗೇಕೆ ಹೀಗೆ ಕಷ್ಟಕೊಡಬೇಕು ಎಂದು ನನಗೆ ತಿಳಿಯಲಿಲ್ಲ.
ನಿಜಕ್ಕೂ ನೋಡಿ ಈಗಲೂ ಹೇಳುತ್ತೇನೆ, ನನ್ನದು ಅದರಲ್ಲಿ ಏನೂ ತಪ್ಪು ಇರಲಿಲ್ಲ. ಮಾರನೇ ದಿನದಿಂದ
ನನಗೆ ಛಡಿ ಏಟುಗಳನ್ನು ಬಾರುಕೋಲುಗಳಿಂದ ಬಾರಿಸುತ್ತಿದ್ದರು. ಅವ್ವ ಹೊಡೆದ ಒಂದು ಪೆಟ್ಟೂ ಅಷ್ಟು
ಬಿರುಸಾಗಿರಲಿಲ್ಲ. ನಾನು ಅಯ್ಯೋ ಅಯ್ಯೋ ಅಪ್ಪಾ ಎಂದು ಅರಚುತ್ತಿದ್ದೆ. ಮೈಯೆಯಲ್ಲಾ ಹುಣ್ಣಿನ
ಹಾಗೆ ನೋಯುತ್ತಿತ್ತು. ದೊಡ್ಡ ದೊಡ್ಡ ಬಾಸುಂಡೆಗಳೆದ್ದವು ಕೆಲವುಗಳಿಂದ ರಕ್ತ ಸೋರಲು
ಶುರುವಾಯಿತು. ಅವರು ಹೋದ ಮೇಲೆ ಆ ರಕ್ತವನ್ನು ನಾನು ನೆಕ್ಕುತ್ತಿದ್ದೆ. ಆದರೆ ನೋಡಿ, ಬೇರೆಯವರ ರಕ್ತದಷ್ಟು ನಮ್ಮ ರಕ್ತ ರುಚಿಯಿರುವುದಿಲ್ಲ. ಎಷ್ಟೋ ದಿವಸ ಹೀಗೆ ಕಳೆಯಿತು. ನಾನು
ಸತ್ತು ಹೋಗುತ್ತಿದ್ದೇನೆ ಎಂದು ನನಗನಿಸುತ್ತಿತ್ತು. ಮತ್ತೆ ಒಂದು ದಿವಸ ನನ್ನ ಕೈ ಕಾಲಿಗೆ ಸರಪಳಿ
ಕಟ್ಟಿ ಎಲ್ಲಿಗೋ ಕರೆದುಕೊಂಡು ಹೋದರು. ಅಲ್ಲಿ ತುಂಬಾ ಜನರಿದ್ದರು. ಒಂದು ಕಟಕಟೆ ಗೂಡಿನಲ್ಲಿ
ನನ್ನನ್ನು ನಿಲ್ಲಿಸಿ ಒಂದು ಸರಪಳಿಯಿಂದ ನನ್ನನ್ನು ಅದಕ್ಕೆ ಕಟ್ಟಿದರು. ನನಗೆ ಮಂಕು ಕವಿದಂತೆ
ಆಗಿತ್ತು. ಕೂರಬೇಕೆಂದರೆ ಕೂರಲು ಆಗಲಿಲ್ಲ. ನಿಂತು ನಿಂತು ಹುಣ್ಣುಗಳು ನೋಯುತ್ತಿದ್ದುವು. ಯಾರೋ
ಎತ್ತರದಲ್ಲಿ ಕುಳಿತವನೊಬ್ಬನು ನನ್ನನ್ನು ಏನೇನೋ ಪ್ರಶ್ನೆ ಕೇಳಿದವನ ರಕ್ತ ಹೀರಿದರೆ
ಹೇಗಾದೀತೆಂದು ಯೋಚಿಸುತ್ತ ನಿಂತಿದ್ದೆ. ಸ್ವಲ್ಪ ಹೊತ್ತಿನ ಮೇಲೆ ನನ್ನನ್ನು ಇನ್ನೆಲ್ಲಿಗೋ
ಕರೆದುಕೊಂಡು ಹೋದರು. ದಾರಿಯಲ್ಲಿ ಅಪ್ಪ ಅಡ್ಡ ಬಂದು ಏನು ಮಾಡಿದೆ ಸಿಂಗಾ,
ಹೀಗೆ ಮಾಡಿದೆಯಾ! ಎಂದು ಅತ್ತನು. ನನಗೂ ಅಳು ಬರುವಂತಾಯಿತು.
ಒಂದು ದಿವಸವೂ ಅವನು ನನಗೆ ಹೊಡೆದಿರಲಿಲ್ಲ, ಈಗ ಮೈಯೆಲ್ಲ ಬಾಸುಂಡೆಗಳು. ಆದರೆ ಪೊಲೀಸಿನವರು ನನ್ನನ್ನು
ಎಳೆದುಕೊಂಡು ಬೇರೆ ಕಡೆಗೆ ಹೋದರು.”
ಕಾವೇರಿ ಹೊಳೆಯು
ಬಂದಿತು. ಜೋಡು ಹಾಕಿಕೊಂಡ ನಮ್ಮ ಕಾಲುಗಳು ಅದರ ದಂಡೆಯಲ್ಲಿ ಮುಂದುವರಿಯಲಿಲ್ಲ. ಆಗ ನಮಗೆ
ಎಲ್ಲಿದ್ದೇವೆ ಎಂಬ ಅರಿವಾಯಿತು. ಅಲ್ಲಿಂದ ನಮ್ಮ ಮನೆಗೆ ಒಂದೂವರೆ ಮೈಲು ದೂರ. ತಿಳಿದ ಹಾದಿ.
“ನಿನಗೆ ಹೊತ್ತಾದರೆ
ಹೋಗು. ಅಲ್ಲಿ ಆ ಮುದುಕಿ ನರಳುತ್ತಿದ್ದಾಳೆ. ಅವಳಿಗೆ ಉಪಚಾರ ಮಾಡು. ಆದರೆ ನಿನ್ನ ವಿಷಯ ಪೂರ್ಣ
ತಿಳಿಯಬೇಕೆಂದು ಆಸೆಯುಂಟು ನಾನು ಯಾರಿಗೂ ಹೇಳುವುದಿಲ್ಲ” ಎಂದರು ಚಿಕ್ಕಪ್ಪ.
“ನನಗೆ ಇನ್ನು ಬೇಗ
ಹಿಂದೆ ಹೋಗಬೇಕು ಸ್ವಾಮೀ, ಬೆಳಗಾದ ಮೇಲೆ ನಾನಿಲ್ಲೆಲ್ಲ ಬರುವಂತಿದೆಯೇ? ಇನ್ನು ಯಾವಾಗ ಬಂದು ನಿಮ್ಮನ್ನು ನೋಡುವುದೋ ಏನೋ? ಬೇಗ ಹೇಳಿ ಮುಗಿಸಿಬಿಟ್ಟು ಹಿಂದೆ ಹೋಗುತ್ತೇನೆ. ನಡೀರಿ ಹೋಗುವ. ನನ್ನನ್ನವರು ಬೇರೆ ಊರಿಗೆ ಕರೆದುಕೊಂಡು ಹೋದರು. ಆ ಹೊಸ ಸ್ಥಳದಲ್ಲಿ ನನಗೆ ತುಂಬಾ
ಕಷ್ಟವಾಯಿತು. ಯದ್ವಾತದ್ವಾ ಕೆಲಸ. ಹೊಟ್ಟೆಗೆ ಅನ್ನ ಸಾಲದು. ಹೊರಗೆ ಹೋಗಲು ಬಿಡುತ್ತಿದ್ದಿಲ್ಲ.
ಕೆಲಸ ಮಾಡದಿದ್ದರೆ ಛಡಿ ಏಟು ಬೀಳುತ್ತಿತ್ತು. ಆ ಹುಡುಗನನ್ನು ಕೊಂದದ್ದಕ್ಕೆ ಈ ಶಿಕ್ಷೆ ಎಂದು
ತಿಳಿದುಕೊಂಡೆನು. ಆದರೆ ನನ್ನದೇನು ತಪ್ಪು, ಸ್ವಾಮೀ, ಅವನನ್ನು ಕೊಂದದ್ದರಲ್ಲಿ?
ಅಪ್ಪಹಂದಿಯನ್ನು ಕೊಯ್ಯಬಹುದಂತೆ, ನಾನು ಇದನ್ನು ಮಾಡಬಾರದೋ ಹಾಗೆ ಎಷ್ಟೋ ವರ್ಷಗಳು ಕಳೆದುವು; ಎಷ್ಟೆಂದು ನನಗೆ ಗೊತ್ತಿಲ್ಲ. ನನ್ನನ್ನು ಪುನಃ ಮಡಿಕೇರಿಗೆ ಕರೆದುಕೊಂಡು ಹೋಗಿ. ಇನ್ನು
ನೀನು ಎಲ್ಲಿಗೆ ಬೇಕಾದರೂ ತೊಲಗಿ ಹೋಗು. ಆದರೆ ಸರಿಯಾಗಿ ನಡೆದುಕೋ. ಆರು ತಿಂಗಳಿಗೊಮ್ಮೆ ನಿನ್ನ
ವಾಸಸ್ಥಳವನ್ನು ಸಮೀಪದ ಪೊಲೀಸು ಠಾಣೆಗೆ ತಿಳಿಸಬೇಕು. ಇಲ್ಲವಾದರೆ ನೋಡು, ಮೊದಲಿನ ಹಾಗೆ ಎಂದು ಹೇಳಿ ಹೊರಗೆ ಬಿಟ್ಟರು.
“ನನಗೆ ಗಡ್ಡ ಮೀಸೆ
ಪೊದೆ ಬೆಳೆದಿತ್ತು. ಮಂಕು ಮುಚ್ಚಿದವನಂತೆ. ಹುಚ್ಚನಂತೆ ಹೊರಗೆ ಹೊರಟೆ. ಆದರೆ ಎಲ್ಲಿಗೆ
ಹೋಗುವುದು ? ನಾನು ಏನು ತಪ್ಪು ಮಾಡದೇ ನನ್ನನ್ನು ಈ ರೀತಿ ಶಿಕ್ಷಿಸಿದರಲ್ಲಾ. ಇವರಿಗೆ ಪಾಠ ಕಲಿಸಬೇಕು
ಎಂದು ನನಗೆ ಖಂಡಿತವಾಗಿಯೂ ನಂಬಿಕೆಯಾಯ್ತು. ಅಲ್ಲಿಂದ ಹೊರಡುವಾಗ ನನಗೆ ಸ್ವಲ್ಪ ದುಡ್ಡನ್ನು
ಕೊಟ್ಟಿದ್ದರು. ನಾನು ಪೇಟೆಗೆ ಹೋಗಿ ಕ್ಷೌರ ಮಾಡಿಸಿಕೊಂಡೆನು. ಮತ್ತು ಒಂದು ಹೊಟೇಲಿನಲ್ಲಿ ಊಟ
ತೀರಿಸಿ ಎಲ್ಲಿಗೆ ಹೋಗುವುದು,
ಏನು ಮಾಡುವುದು ಎಂದು ತಿಳಿಯದೇ ಅಲೆಯುತ್ತಿದ್ದೆನು. ನನ್ನನ್ನು ಈ ರೀತಿ
ಗೋಳುಹುಯ್ದುಕೊಂಡರಲ್ಲ ಇವರಿಗೆ ಪಾಠ ಕಲಿಸಬೇಕು ಎಂದು ನನಗೆ ಹೆಚ್ಚೆಚ್ಚು ಅನಿಸತೊಡಗಿತು. ಹಾಗೆಯೇ
ಸಿಟ್ಟೂ ಏರುತ್ತಿತ್ತು, - ಅದೇನು ಹೊಡೆತ, ಕೆಲಸ. ಆ ಪೊಲೀಸಿನವರ ಗೋಣನ್ನೇ ಮುರಿದರೆ, ಅದು ಎಷ್ಟು ಚೆನ್ನಾಗಿದ್ದೀತು, ಆ ರಕ್ತವನ್ನು ಹೀರಲು ಎಷ್ಟು ರುಚಿಯಾಗಿದ್ದೀತು ಎಂದು ನಾನು ಬಾಯಿ ಚಪ್ಪರಿಸಿದೆ. ಈಗಲೂ ನನಗೆ
ಆಸೆ ಹೋಗಲಿಲ್ಲ, ಹೆಚ್ಚಾಗುತ್ತಲೇ ಉಂಟು. ನನ್ನ ಸಿಟ್ಟನ್ನು ಮರದ ಗೆಲ್ಲೊಂದನ್ನು ಮುರಿದು ತೀರಿಸಲು
ನೋಡಿದೆನು. ಮುಂದೆ ಹೊರಟೆ. ಆದರೆ ಏನು ಮಾಡುವುದೆಂದು ತಿಳಿಯಲಿಲ್ಲ. ಪೇಟೆಗೆ ಪುನಃ ಹೋಗಿ ಒಂದು
ಹರಿತವಾದ ಕತ್ತಿಯನ್ನು ಕೊಂಡುಕೊಂಡೆ. ಛತ್ರದಲ್ಲಿಯೋ, ದೇವಸ್ಥಾನದ ಪೌಳಿಯಲ್ಲಿಯೋ ಮಗಲುತ್ತ ದಿನಗಳನ್ನು ಕಳೆದೆ.
ಕೂಲಿಗೆಲಸದಲ್ಲಿ ಏನು ಹಣ ದೊರೆಯುವುದು? ನನಗೆ ದೇಹದಲ್ಲಿ ಹೆಚ್ಚು ತ್ರಾಣವೂ ಇರಲಿಲ್ಲ. ಅಲ್ಲದೇ ರಕ್ತ ಪಿಪಾಸೆ ಮಿತಿಮೀರಿತು.
ರಾತ್ರಿಹೊತ್ತು ಬೀದಿಯಲ್ಲಿ ಸಿಕ್ಕಿದ ಪೊಲೀ ನಾಯಿಗಳ ಕುತ್ತಿಗೆ ಕಡಿದು ಸೇಡು ತೀರಿಸಲು ನೋಡಿದೆ.
ಆದರೆ ಮನುಷ್ಯ ರಕ್ತ ಕುಡಿಯದೇ ನನಗೆ ದಿನದಿಂದ ದಿನಕ್ಕೆ ಬಾಯಾರಿಕೆ ಏರುತ್ತಿತ್ತು; ಸಿಟ್ಟು ಹೆಚ್ಚುತ್ತಿತ್ತು. ಇದು ನೋಡಿ ಈಗ ಒಂದು ವರ್ಷದ ಹಿಂದೆ ಎಂದು ತೋರುವುದು. ನಾನೊಂದು
ದಿವಸ ಬೆಳಗ್ಗೆ ಮುಂದಿನ ದಾರಿ ತೋರುವುದೋ ಎಂದುಕೊಂಡು ಹೋಗುತ್ತಿದ್ದೆನು. ಆಗ ಆ ಕಾಲುಹಾದಿಯಲ್ಲಿ
ಯಾರೋ ಒಬ್ಬನು ಒಂದು ದೊಡ್ಡ ಗಂಟನ್ನು ಹೊತ್ತುಕೊಂಡು ಕೈಯ್ಯಲ್ಲಿ ಗೆಜ್ಜೆಗಳಿಂದ ಕೂಡಿದ ಕಬ್ಬಿಣದ
ಸರಳನ್ನು ಹಿಡಿದುಕೊಂಡು ಮಡಿಕೇರಿಯಿಂದ ಇಳಿದಿಳಿದು ಹೋಗುತ್ತಿದ್ದನು. ನನಗೆ ಮೊದಲು ಛಡಿ ಹೊಡೆದ
ಪೊಲೀಸಿನವನ ಹಾಗೆಯೇ ಅವನು ಕಂಡನು. ನನ್ನ ಕೋಪವೇರಿತು. ಆದರೆ ಆಗ ಅವನಿಗೆ ನಾನು ಏನನ್ನೂ
ಮಾಡಲಿಲ್ಲ. ಮಾಡುವ ಹಾಗೆಯೂ ಇರಲಿಲ್ಲ. ದುಡುಕಿದ್ದರೆ ಪುನಃ ಜೈಲು, ಛಡಿ ಏಟು. ಅಲ್ಲಿದ್ದ ಬೇರೆ ಜನರೊಡನೆ ಅವನು ಯಾರು ಎಂದು ವಿಚಾರಿಸಿದೆನು. ಅವನು
ಮಡಿಕೇರಿಯಿಂದ ಬೆಟ್ಟಕ್ಕೇರಿಗೆ ಟಪ್ಪಾಲು ಹೊತ್ತುಕೊಂಡು ಹೋಗುವ ಗಿರಿಯಪ್ಪ ಎಂದು ತಿಳಿಯಿತು.
ಮತ್ತೆ ಅವರು ಮಾತಾಡಿಕೊಳ್ಳುತ್ತಿದ್ದುದೂ ಕೇಳಿತು - ಈಗ ಯುದ್ಧ ಸಮಯವಾದುದರಿಂದ ಹೊರಗೆ ಹೋದ ಸೈನಿಕರು
ತುಂಬ ಹಣವನ್ನು ಕಳಿಸುತಿದ್ದಾರೆ. ಇವನೊಬ್ಬನೇ ಆ ಚೀಲದಲ್ಲಿ ಅಷ್ಟು ಹಣವನ್ನು ಈ ಕಡೆ ಹಳ್ಳಿಗಳಿಗೆ
ಕೊಂಡೊಯ್ಯುತ್ತಾನೆ, ಎಂದು ಮುಂತಾಗಿ ಮಾತಾಡಿಕೊಂಡರು. ನನಗೆ ಕೂಡಲೇ ಹಾದಿಹೊಳೆಯಿತು. ನೆತ್ತರಿನ ದಾಹ ಜೋರಾಯಿತು.
ಇದಕ್ಕೆ ಯಾವ ಉಪಾಯವೆಂದು ಆಲೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಂದೆನು. ನನಗೆ ತಂಗಲು ಗುಟ್ಟಾದ
ಒಂದು ಸ್ಥಳ ಮಡಿಕೇರಿಯ ಸುತ್ತ ಎಲ್ಲಿಯಾದರೂ ಬೇಕೆಂದು ನಿಶ್ಚೈಸಿದೆ. ಮತ್ತೆ ನಾಪೋಕ್ಲು, ಮೂರ್ನಾಡು, ಭಾಗಮಂಡಲದ ಈ ಕಡೆಗಳಲ್ಲಿ ಅಲೆದೆ. ಮದೆನಾಡಿಗೆ ಹೋಗಬಾರದು ಎಂದು ಹೋಗಲಿಲ್ಲ. ಈ ಹಳ್ಳಿಗಳಲ್ಲಿ
ನನಗೆ ಊಟ ಸಿಕ್ಕುತ್ತಿತ್ತು. ಆದರೆ ರಕ್ತ ಸಿಕ್ಕಲಿಲ್ಲ. ಒಂದು ದಿವಸ ಭಾಗಮಂಡಲದಿಂದ ನಾಪೋಕ್ಲಿಗೆ
ನಡೆದುಕೊಂಡು ಹೋಗುತ್ತಿದ್ದಾಗ ಈ ಮುದುಕಿಯ ಮನೆಗೆ ಮಧ್ಯಾಹ್ನದ ಹೊತ್ತಿಗೆ ಅಕಸ್ಮಾತ್ತಾಗಿ
ಹೋದೆನು. ಅವಳು ನಿಜವಾಗಿ ನನ್ನ ಅಜ್ಜಿಯಲ್ಲ. ಅವಳ ಮನೆ ನಾವು ಈಗ ಹೊಳೆದಾಟಿದೆವಲ್ಲ, ಅಲ್ಲಿಂದ ಒಂದು ಮೈಲು ಆ ಕಡೆಗೆ ಇತ್ತು. ಅವಳು ನನಗೆ ತುಂಬಾ ಉಪಚಾರ ಮಾಡಿದಳು. ನನಗೆ ಹೀಗೆ
ಯಾಕೆ ಮಾಡುತ್ತಾಳೆ ಎಂದು ಆಶ್ಚರ್ಯವಾಯಿತು. ಅವಳಿಗೊಬ್ಬ ಮೊಮ್ಮಗ ಇದ್ದನಂತೆ. ಅವನು ಯುದ್ಧಕ್ಕೆ
ಹೋಗಿ ಸತ್ತನಂತೆ ಎಂದು ಮುಂತಾಗಿ ಹೇಳುತ್ತ ಅತ್ತಳು. ನಾನು ಅವಳ ಮೊಮ್ಮಗನ ಹಾಗೆಯೇ ಅವಳಿಗೆ
ಕಂಡನಂತೆ. ನನಗೆ ಯಾರೂ ಗತಿಯಿಲ್ಲವೆಂದು ಕೇಳಿ, ತನ್ನ ಜತೆಯಲ್ಲಿಯೇ ಇರಲು ಅವಳು ಹೇಳಿದಳು. ನನಗೆ ಬೇಕಾದದ್ದೂ
ಅದೇ. ನಾನು ಈಗ ನೀವು ನೋಡಿದ ಜೋಪಡಿಯನ್ನು ಕಟ್ಟಿದೆನು. ಯಾರಿಗೂ ತಿಳಿಯಬಾರದೆಂದು ಅದನ್ನು ಆ
ಕಾಡಿನ ಆಳದಲ್ಲಿ ನಾನೊಬ್ಬನೇ ಹೊಸೆದೆನು. ಮತ್ತೊಂದು ರಾತ್ರಿ ಅಜ್ಜಿಯನ್ನು ಪುಸಲಾಯಿಸಿ ಅಲ್ಲಿಗೆ
ಕರೆದುಕೊಂಡು ಹೋದೆನು. ಅವಳು ಅಲ್ಲಿಯೇ ಇರುತ್ತಾಳೆ. ಅಲ್ಲೊಂದು ಮನೆಯುಂಟೆಂದು ಕೂಡ ಬೇರೆಯವರಿಗೆ
ತಿಳಿಯದು. ಇಷ್ಟಾಗುವಾಗ ಸುಮಾರು ತಿಂಗಳುಗಳು ಉರುಳಿದವು. ಮಳೆ ಹಿಡಿಯಲು ತೊಡಗಿತು. ನಮಗೆ ಊಟಕ್ಕೆ
ಆಗಬೇಕಲ್ಲ. ರಕ್ತದ ಆಸೆ ಹೆಚ್ಚುತ್ತಿತ್ತು. ಆ ಟಪ್ಪಾಲು ಹೊರುವವನ ವಿಲೇವಾರಿ ಇನ್ನು
ತೆಗೆದುಕೊಳ್ಳಬೇಕೆಂದು ನಿಶ್ಚಯಿಸಿದೆನು. ಒಂದು ದಿವಸ ಕೋಳಿ ಕೂಗುವ ಮೊದಲೇ ನಾನು ಈ ಗುಡಿಸಲಿನಿಂದ
ಹೊರಟು, ಸೋನೆಮಳೆಯಲ್ಲಿ ನೆನೆಯುತ್ತ ಉಡುವತ್ತು ಮೊಟ್ಟೆಗೆ ನಡೆದನು. ಅಲ್ಲಿ ನೋಡಿ, ಅವನು ಬರುವ ಹೊತ್ತಿಗೆ ಬೇರೆ ಜನರು ತಿರುಗುತ್ತಿರುವುದಿಲ್ಲ. ನಾನಲ್ಲಿ ಅಡಗಿ ಕತ್ತಲೆಯ
ದಾರಿಯಲ್ಲಿ ಕುಳಿತುಕೊಂಡೆ. ಬರಲಿ ನನಗೆ ಛಡಿ ಹೊಡೆದ ಪೊಲೀಸು. ಈಗ ಟಪ್ಪಾಲು ಹೊರುತ್ತಾನೋ ಬರಲಿ, ಎಂದು ಕತ್ತಿ ಮಸೆಯುತ್ತಾ ಕುಳಿತುಕೊಂಡೆನು. ನಾನು ಅಲ್ಲಿಗೆ ತಲುಪುವಾಗ ಸರಿಯಾಗಿ
ಬೆಳಕಾಗಿದ್ದಿಲ್ಲ. ಆದ್ದರಿಂದ ಅಲ್ಲಿ ನಾನು ಸುಮಾರು ಹೊತ್ತಕಾಯಬೇಕಾಗಿತ್ತು. ಮತ್ತೆ ಹೊತ್ತು
ಎಷ್ಟು ಆಯಿತೆಂದೂ ಆ ಮಳೆ, ಮೋಡ, ಕಾಡಿನಿಂದಾಗಿ ತಿಳಿಯುತ್ತಿರಲಿಲ್ಲ. ಬರುವನೋ ಇಲ್ಲವೋ ಎಂದು ಸಿಟ್ಟಿನಿಂದ ಅಲ್ಲಿದ್ದ
ಗಿಡಗಳನ್ನು ತುಂಡು ಮಾಡಿದೆನು. ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ದೂರದ ತಿರುಗಾಸಿನಿಂದ ಅವನು
ಇಳಿದಿಳಿದು ಬರುವುದನ್ನು ನೋಡಿದೆನು. ಆ ದಿನ ಕಂಡಂತೆಯೇ, ಅವನೇ ಇವನು. ನಾನು ಕತ್ತಿಯನ್ನು
ಸರಿಯಾಗಿ ಹಿಡಿದುಕೊಂಡು ದಾರಿ ಕರೆಯ ಮರದ ಬದಿಯಲ್ಲಿ ಅಡಗಿ ನಿಂತೆನು. ಅವನು ಮುಂದೆ ಮುಂದೆ ನಡೆದು
ಬಂದನು, ನಾನು ಅವಿತು ಕುಳಿತು ಸ್ಥಳದಿಂದ ಮುಂದೆ ಹೋದೆನು. ಆ ಗಳಿಗೆ ನಾನು ಹೊರಗೆ ದಾರಿಗೆ ಹಾರಿ
ಅವನು ಹಿಂತಿರುಗಿ ನೋಡುವ ಮೊದಲೇ ನನ್ನ ಶಕ್ತಿ ತೀರ ಪ್ರಯೋಗಿಸಿ ಅವನ ಕುತ್ತಿಗೆಯನ್ನು ಕಡಿದೆನು.
ಒಂದೇ ಏಟಿಗೆ ಅದು ತುಂಡಾಗಿ ದೂರ ರಟ್ಟಿತು. ತಲೆಯ ಗಂಟು ಅಲ್ಲೇ ನೆಲಕ್ಕೆ ಬಿತ್ತು. ದೇಹದಿಂದ
ಚಿಮ್ಮುವ ರಕ್ತವನ್ನು ಹೀರಿ - ಆಹಾ ಅದೆಷ್ಟು
ರುಚಿ - ನಾನು ಆ ಗಂಟಲನ್ನು ಹೊತ್ತುಕೊಂಡು ಕಾಡೊಳಗೆ ಓಡಿಯೇ ಬಿಟ್ಟೆನು. ನನಗೆ ರಕ್ತ ಹೀರಿ ಹೊಸ
ಹುರುಪು ಬಂದಿತ್ತು. ಸಂತೋಷದಿಂದ ಮುಳ್ಳೂ ಕೆಸರು ಎಂದು ಲೆಕ್ಕಿಸದೆ ಕಾಡಿನೊಳಗೆ ತೂರಿಹೋದೆ. ನಾನು
ರಾತ್ರಿಯವರೆಗೂ ಹಾಗೆ ಕಾಡಿನಲ್ಲಿ ಕಳೆದನು. ಮಳೆ, ಚಳಿ, ಗಾಲಿ ಇವಾವುಗಳಿಂದಲೂ ನನಗೆ ಕಷ್ಟವಾಗಲಿಲ್ಲ. ರಾತ್ರಿಯಾದ ಮೇಲೆ
ಬೆಟ್ಟಕ್ಕೇರಿ - ನಾಪೋಕ್ಲು ದಾರಿ ಕಡೆಗೆ ಅರುವತ್ತೊಕ್ಲಿಗಾಗಿ ನಡೆದನು. ಅಲ್ಲಿ ನನಗೆ ದಾರಿ
ಸಿಕ್ಕುವುದು ಕಷ್ಟವಾಗಲಿಲ್ಲ. ಗದ್ದೆಗಳನ್ನು ದಾಟಿ, ಗುಡ್ಡ ಹತ್ತಿ ಆ ಜಾಡಿಗೆ ತಲುಪಿದೆನು. ನಾನು ಉಡುವತ್ತು
ಮೊಟ್ಟೆಗೇ ಹೋಗಿದ್ದರೆ ಎಲ್ಲಿಯಾದರೂ ಪೊಲೀಸಿನವರು ಕಾಯುತ್ತಿದ್ದರೆ ಎಂದು ಕಾಡು ದಾರಿಯಲ್ಲಿಯೇ
ಹೋದೆನು. ಮತ್ತೆ ಕಡಿಯತ್ತೂರಿಗೆ ಹಾದಿ ಹಿಡಿದು ನನ್ನ ಜೋಪಡಿಗೆ ಮಧ್ಯರಾತ್ರಿಯೋ ಇನ್ನೆಷ್ಟು
ಹೊತ್ತೋ ತಲುಪಿದೆನು. ನನ್ನ ಬಟ್ಟೆಯೆಲ್ಲವೂ ಚಿಂದಿ, ಹರಿದು ಹೋಗಿತ್ತು. ಕಾಲು ಕೈಗಳಿಗೆ ಮುಳ್ಳು ತಗಲಿ ರಕ್ತ
ಸುರಿಯುತ್ತಿತ್ತು. ನಾನೆಲ್ಲಿಗೋ ಬೇಟೆಗೆ ಹೋಗಿದ್ದನೆಂದು ಅಜ್ಜಿಗೆ ಹೇಳಿದೆನು. ನನ್ನ ಬಟ್ಟೆ, ಖಾಲಿ ಟಪ್ಪಾಲು ಚೀಲ ಇವನ್ನೆಲ್ಲ ಸುಟ್ಟು ಹಾಕಿದನು. ಆ ಚೀಲದೊಳಗೆ ನನಗೆ ಸಾವಿರದೈನೂರು
ರೂಪಾಯಿ ದೊರೆತುವು. ಇನ್ನೇನಾಗಬೇಕು ನನಗೆ ? ಅಜ್ಜಿಯು ನನ್ನ ಗಾಯಗಳಿಗೆಲ್ಲ ಮದ್ದು ಅರೆದು ಹಚ್ಚಿ
ಗುಣಮಾಡಿದಳು. ಮತ್ತೆ ನೋಡಿ ಎಂಟೋ ಹತ್ತೋ ತಿಂಗಳು ಮುಗಿದುವು. ನಾವು ಸುಖವಾಗಿಯೇ ಇದ್ದೆವು.
ಅಜ್ಜಿಗೆ ಈಗೊಂದು ವಾರದಿಂದ ಜ್ವರ ಅಂಟಿರುವುದು. ನನಗೆ ಪೊಲೀಸರ ಹೆದರಿಕೆ ತಪ್ಪಿರುವುದಿಲ್ಲ.
ಅವರು ಹೇಳಿದಂತೆ ನಾನು ಯಾವ ಠಾಣೆಗೂ ಹೋಗಿ ನನ್ನ ಇರವನ್ನು ಹೇಳಲಿಲ್ಲ. ರಕ್ತದ ಆಸೆ ಪುನಃ
ನನ್ನನ್ನು ಬಾಧಿಸುತ್ತಿದೆ.
“ನಿಮ್ಮ ಹತ್ತಿರ
ಇದನ್ನು ಹೇಳಬೇಕೆಂದು ಆಯಿತು. ಆದರೆ ಯಾಕೆಂದು ಗೊತ್ತಾಗುವುದಿಲ್ಲ. ನೋಡಿ ಇದನ್ನು ಬೇರೆ ಯಾರಿಗೂ
ಹೇಳಲಿಲ್ಲ. ಅಜ್ಜಿಯನ್ನು ಪರೀಕ್ಷೆ ಮಾಡಲು ನೀವು ಬರಲು ಒಪ್ಪದಿದ್ದರೆ ನಿಮ್ಮ ರಕ್ತ
ಹೀರುತ್ತಿದ್ದೆ. ನನ್ನ ವಿಷಯ ನಿಮ್ಮಿಂದ ಎಲ್ಲಿಯಾದರೂ ಹೊರಗೆ ಹೋದರೆ ನೋಡಿ. ನಾನು ನಿಮ್ಮ ರಕ್ತ
ಹೀರದೆ ಬಿಡಲಾರೆ. ನಿಮಗೆ ನನ್ನಲ್ಲಿಗೆ ಬಂದದ್ದಕ್ಕೆ ಏನು ಕೊಡಬೇಕು?”
“ನನಗೆ ಅದಕ್ಕೆ ಏನೂ
ಬೇಡ. ಆದರೆ ನೀನು ಇನ್ನಾದರೂ ಒಳ್ಳೆಯ ದಾರಿಯಲ್ಲಿ ಇರು.”
“ನೀವೇನನ್ನುತ್ತೀರಿ? ನಾನು ಕೆಟ್ಟ ದಾರಿಯಲ್ಲಿ ಹೋಗಲೇ ಇಲ್ಲ. ನನಗೆ ರಕ್ತದ ದಾಹ ಇನ್ನೂ ಹಿಂಗಿಲ್ಲ. ಆದರೆ
ಹೊತ್ತಾಯಿತು. ನಾನು ಹೇಳಿದುದು ನೆನಪಿನಲ್ಲಿರಲಿ. ನಿಮ್ಮ ಮನೆ ಹತ್ತಿರವಾಯಿತು. ನೀವು
ಅಜ್ಜಿಯನ್ನು ನೋಡಲು ಬಂದು ತುಂಬ ಉಪಕಾರ ಮಾಡಿದ್ದೀರಿ. ಅವಳು ಬದುಕಿ ಉಳಿದರೆ ನಿಮ್ಮಲ್ಲಿಗೆ
ರಾತ್ರಿ ಔಷಧಿಗೆ ಬರುತ್ತೇನೆ. ಆದರೆ ನಾನು ಹೇಳಿದುದು ಜ್ಞಾಪಕದಲ್ಲಿರಲಿ.”
ಅವನು ಲಾಂದ್ರವನ್ನು
ನಂದಿಸಿ ಹಿಂದೆ ಹೊರಟನು. ಕತ್ತಲೆಯ ಒಡಲೊಳಗೆ ಕರಗಿ ಮರೆಯಾದನು.
ನಾವಿಬ್ಬರೂ ಮಾತಾಡದೇ
ಮುನ್ನಡೆದೆವು. ಏನು ಭಯಂಕರವಪ್ಪಾ, ಹೀಗೂ ನಡೆಯಲು ಸಾಧ್ಯವೇ ಎಂದು ನನ್ನ ಎದೆಯು ನಡುಗುತ್ತಿತ್ತು.
ಈಗ ಚಿಕ್ಕಪ್ಪನವರ ಹಿಂದೆ ನಡೆಯಲು ಧೈರ್ಯವಿಲ್ಲ, ಮುಂದೆ ಹೆಜ್ಜೆಹಾಕಲು ಕೆಚ್ಚಿಲ್ಲ. ಜತೆಯಲ್ಲಿ ನಡೆಯಲು
ಸ್ಥಳವಿಲ್ಲ. ಅಂತೂ ಸ್ವಲ್ಪ ದೂರ ಈ ಮುಳ್ಳಿನ ಹಾದಿಯ ಮೇಲೆ ತೆವಳುವಾಗಲೇ ಪುಣ್ಯವಶಾತ್ ಮನೆಯು
ಬೆಳ್ಳಗೆ ದೂರದಿಂದ ಕಂಡಿತು.
ಚಂದ್ರನು ಇನ್ನೂ
ಕೆಳಗೆ ಇಳಿದಿದ್ದನು. ಮಂದವಾಗಿ ತಂಗಾಳಿ ಬೀಸುತ್ತಿತ್ತು. ನಾವು ಮನೆ ಮೆಟ್ಟಲು ಹತ್ತುವಾಗಲೇ ಚಿಕ್ಕಮ್ಮ
ಕದ ತೆರೆದರು. ಅವರು ನಾವು ಹೋದಮೇಲೆ ನಿದ್ರೆಯೇ ಮಾಡಲಿಲ್ಲವಂತೆ. ಘಂಟೆ ನಾಲ್ಕಾಗಿತ್ತು.
ಏನು ವಿಷಯ, ಏನು ವಿಶೇಷ?
ನಾವಿಬ್ಬರೂ ಬಾಯಿ
ಬಿಡಲಿಲ್ಲ.
ಟೈಫಾಯ್ಡ್ ಜ್ವರ ಆ
ಮುದುಕಿಗೆ, ಬದುಕುವ ಹಾಗೆಯೇ ಇಲ್ಲ, ಎಂದು ಕೊನೆಗೆ ಚಿಕ್ಕಪ್ಪ ಬಲಾತ್ಕಾರದಿಂದ ಒಂದು ಸುಳ್ಳು ಹೇಳಿದರು.
ಮುಂದೆ ನಾನು ಎಸ್ ಎಸ್
ಎಲ್‌ಸಿಯಲ್ಲಿ ತೇರ್ಗಡೆಯಾಗಿ ಮಂಗಳೂರು ಸೇರಿದೆ ಅದೇ ಆಗಸ್ಟ್ (೧೯೪೨) ತಿಂಗಳಿನಲ್ಲಿ ಸತ್ಯಾಗ್ರಹ, ಗೋಳೀಬಾರು ಇವೆಲ್ಲ ನಡೆದುವು. ಇನ್ನು ಕಾಲೇಜು ವಿದ್ಯಾಭ್ಯಾಸ ಸಾಧ್ಯವಿಲ್ಲ. ಒಳ್ಳೆಯದೇ
ಆಯಿತು. ಎಲ್ಲ ಬಿಟ್ಟು ಮನೆಯಲ್ಲಿ ಸ್ವಸ್ಥ ಕೂರುವುದೆಂದು ನಾನು ನಿಶ್ಚಯಿಸಿ ಮಡಿಕೇರಿಗೆ ಹೊರಡಲು
ತಯಾರು ಮಾಡಿದ್ದೆ. ಅದೇ ದಿವಸ ಚಿಕ್ಕಪ್ಪನವರ ಬಹಳ ಅಪರೂಪದ ಕಾಗದ ಬಂದಿತು.
“.... ಆ ರಾತ್ರಿ ನಮಗೊಂದು ಭಯಂಕರ ಅನುಭವವಾಯ್ತು. ನೋಡು, ಆ ವ್ಯಕ್ತಿಯನ್ನು ಪೊಲೀಸರು ಒಂದು ತಿಂಗಳ ಹಿಂದೆ ಸೆರೆ
ಹಿಡಿದರು. ಅವನು ಇನ್ನೂ ಯಾರನ್ನೋ ಖೂನಿ ಮಾಡಿದನಂತೆ. ಪಾಶಿಗೆ ಕೊಡುವ ಶಿಕ್ಷೆ ಅವನಿಗೆ
ವಿಧಿಸಿದ್ದಾರೆ. ಈ ಕಾಗದ ನಿನಗೆ ತಲುಪುವಷ್ಟರಲ್ಲಿ ಅವನು ಈ ಲೋಕದಲ್ಲಿರುವುದಿಲ್ಲ...
“ಆದ್ದರಿಂದ ನಾನಿದನ್ನು ಬರೆದು ಬಹಿರಂಗಪಡಿಸುತ್ತಿದ್ದೇನೆ.
“ಆದ್ದರಿಂದ ನಾನಿದನ್ನು ಬರೆದು ಬಹಿರಂಗಪಡಿಸುತ್ತಿದ್ದೇನೆ.
-ಕೊಡಗಿನ ಸುಮಗಳು ಮುಗಿಯಿತು-
Katheyo athavaa nijavo?M.L.SAMAGA
ReplyDeleteಕೊಡಗಿನ ಸುಮಗಳು ಈಗ ಲೇಖಕನ ಸ್ವಗತ,ಮುನ್ನುಡಿಗಳೊಡನೆ ಆಸಕ್ತರ ಸಮಗ್ರ ಓದು ಅಥವಾ ತಂತಮ್ಮ ವಿದ್ಯುನ್ಮಾನ ಸಲಕರಣೆಗಳಲ್ಲಿ ಉಚಿತವಾಗಿ ಸಂಗ್ರಹಿಸಲು ಅನುಕೂಲವಾಗುವಂತೆ ಇಲ್ಲೇ ಪುಸ್ತಕ ವಿಭಾಗದಲ್ಲಿ ಲಭ್ಯ. ಈ ಕತೆಯ ನೈಜತೆ ಮತ್ತು ಒಟ್ಟು ಕತಾಸಂಕಲನದ ಕುರಿತೂ ಲೇಖಕನ ಅಭಿಪ್ರಾಯಗಳು, ನನ್ನ (ಪ್ರಕಾಶಕನ) ಅಭಿಪ್ರಾಯಗಳೂ ಅಲ್ಲಿವೆ, ದಯವಿಟ್ಟು ಗಮನಿಸಿ.
Delete