28 February 2014

ತಡೆಬೇಲಿಯೊಳಗಿನ ಕೋಣ!

(ಮಾನಸಗಂಗೋತ್ರಿ ದಿನಗಳು - ೩)

ಕನ್ನಡ ಭಾಷೆಯ ಶಕ್ತಿ, ವ್ಯಾಪ್ತಿಗಳನ್ನು ಕುರಿತ ಮಾತು ಬರುವಾಗ ವಿಜ್ಞಾನ, ವಾಣಿಜ್ಯ ಮುಂತಾದ ಜನಪದದ ಎಲ್ಲ ಶಿಸ್ತುಗಳನ್ನು ತಲಪುವ ಸಾಹಿತ್ಯಗಳನ್ನು  ಧಾರಾಳ ಉದಾಹರಿಸುತ್ತೇವೆ. ಅಧಿಕಾರ, ಸವಲತ್ತು, ಪ್ರಶಸ್ತಿಗಳ ಮಾತು ಬರುವಾಗ ಶುದ್ಧ ಸಾಹಿತ್ಯ ಸಂಬಂಧವನ್ನು ಮಾತ್ರ ಪರಿಗಣಿಸುತ್ತೇವೆ. ಇದು ಇಂದಿನ ಕನ್ನಡದ ಅವನತಿಗೆ ಬಹುದೊಡ್ಡ ಕಾರಣವೆಂದೇ ನಾನು ತಿಳಿದಿದ್ದೇನೆ. ಈ ಅವಸ್ಥೆ ಸಂಸ್ಥೀಕರಣಗೊಂಡ ಯಾವುದೇ ವ್ಯವಸ್ಥೆಯನ್ನು ಕಾಡುವಂತೆ ನಲ್ವತ್ತು ವರ್ಷಗಳ ಹಿಂದೆ ನಮ್ಮ ಇಂಗ್ಲಿಷ್ ವಿಭಾಗಕ್ಕೂ ಅನ್ವಯಿಸುತ್ತಿತ್ತು ಎಂದೇ ನಾನು ನಂಬಿದ್ದೇನೆ. ಸಾಹಿತ್ಯ ಅಧ್ಯಯನ ಎನ್ನುವುದು ಅನುಭವದ ವಿಸ್ತರಣೆಗೆ ದ್ವಾರವಾಗದೆ, ಈಗಾಗಲೇ ಬಂದ ಮುದ್ರಿತ ಅಕ್ಷರಗಳಲ್ಲಿ ಕಳೆದುಹೋಗಿತ್ತು; ಅಧ್ಯಯನ ಎಂದರೆ ಪಿಷ್ಟಪೇಷಣ!

ಮಾಸ್ಟರ್ ಡಿಗ್ರಿಯ ಎರಡು ವರ್ಷದ ಉದ್ದಕ್ಕೂ ಇಲಾಖೆಗೆ ಪಠ್ಯೇತರ ಎಂಬ ವಿಚಾರವೇ ಅವಹೇಳನಕಾರಿಯಾಗಿ ಇದ್ದಂತಿತ್ತು. ಕನಿಷ್ಠ ಮಿತಿಗೆ ಪಾಠಪಟ್ಟಿ, ಅಧ್ಯಯನದ ವ್ಯಾಪ್ತಿ ವಿಶ್ವಮುಖಿ ಎನ್ನುವ ನನ್ನ ಭಾವ ಅಮೂರ್ತವಾಗಿಯೇ ಅಲ್ಲಿ ಚಡಪಡಿಸಿದ್ದು ಅಪಾರ (ಆಗ ಅನುಭವದ ಕೊರತೆಯಿಂದ ಇದನ್ನು ಕಂಡುಕೊಳ್ಳದಾಗಿದ್ದೆ). ಮಹಾರಾಜಾ ಕಾಲೇಜಿನಲ್ಲಿದ್ದಾಗಲೇ ಕರ್ಮವೀರ, ಉದಯವಾಣಿಯೇ ಮುಂತಾದ ಪತ್ರಿಕೆಗಳಲ್ಲಿ ಕೆಲವು, ಪತ್ರಿಕೋದ್ಯಮ ಇಲಾಖೆಯ ಪ್ರಯೋಗ ಪತ್ರಿಕೆಗೆ ಖಾಯಂ ಟಿಪ್ಪಣಿ, ಲೇಖನಗಳನ್ನು ಕೊಡುತ್ತಿದ್ದೆ. ಅದನ್ನು ಎಂಎ ಅವಧಿಯಲ್ಲೂ ಮುಂದುವರಿಸಿದೆ. ಶೇಕ್ಸ್‌ಪಿಯರ್ ಪಾಠ ಆಗುತ್ತಿದ್ದಾಗ, ನಮ್ಮ ಕಟ್ಟಡದ ಕೆಳಗೇ ನಿಂತುಕೊಂಡಿದ್ದ ಆಟೋರಿಕ್ಷಾ ಒಂದರ ರಿಪೇರಿ ನಡೆದಿತ್ತು. ನಾನು ಅಧ್ಯಾಪಕರ ಪ್ರವಚನಕ್ಕೆ ಕಿವುಡಾಗಿ ರಿಕ್ಷಾ ಅಂಡ್ ಶೇಕ್ಸ್ಪಿಯರ್ (ರಾಜಾರಾವ್ ಪುಸ್ತಕ ಕ್ಯಾಟ್ ಅಂಡ್ ಶೇಕ್ಸ್ಪಿಯರ್ ಸ್ಫೂರ್ತಿ!) ಲೇಖನ ಬರೆಯುತ್ತಿದ್ದೆ!


ಕುಲಪತಿ ದೇಜಗೌ ತಲೆಯ ಮೇಲೆ  ನರಿಬಾಲ ಸಿಕ್ಕಿಸಿದ ಚಪಾತಿ, ಮೈಗೆ ಕರಿ ಘೋಶದ ಪಾಶ್ಚಾತ್ಯ ಪೋಷಾಕು ಬಿಟ್ಟು ಅದು ಮೊದಲು ಪ್ರಾದೇಶಿಕ ದಿರಿಸಿನೊಡನೆ ಪದವಿಪ್ರದಾನ ಸಮಾರಂಭ ಏರ್ಪಡಿಸಿದ್ದರು. ಗೊರೂರು ರಾಮಸ್ವಾಮಿ ಐಯ್ಯಂಗಾರ್, ರಾಜಾರಾಮಣ್ಣಟಿಎಂಎ ಪೈ ಮುಂತಾದವರು ಗೌರವ ಡಾಕ್ಟೋರೇಟ್ ಸ್ವೀಕರಿಸುವ ಭವ್ಯ ವ್ಯವಸ್ಥೆ. ನಾನು ಮನಸ್ಸು ಮಾಡಿದ್ದರೆ ಸ್ನಾತಕ ಪದವಿಯನ್ನು ಅಲ್ಲಿ ಗುಂಪಿನಲ್ಲಿ ಗೋವಿಂದಾಂತ ಸ್ವೀಕರಿಸಬಹುದಿತ್ತು. ಆದರೆ ನನಗೆ ವರದಿಗಾರನ ಹುಮ್ಮಸ್ಸು. ಆಗ ಪೋಲಿಸ್ ಬಂದೋಬಸ್ತ್ ಇಂದಿನಂತೆ ತೀವ್ರವಿರಲಿಲ್ಲ. ನಾನು ಡಬ್ಬಿ ಕ್ಯಾಮರಾ (ಅಗ್ಫಾ ಕ್ಲಿಕ್-೪) ಹಿಡಿದಷ್ಟರಲ್ಲೇ ಪತ್ರಕರ್ತನ ಮಾನ್ಯತೆ ಪಡೆದು, ಆರಂಭದ ಮೆರವಣಿಗೆಯ ಚಿತ್ರಗಳನ್ನು ಚೆನ್ನಾಗಿಯೇ ಹಿಡಿದೆ. ಮೆರವಣಿಗೆ ವೇದಿಕೆಯ ಮೇಲೆ ಸ್ಥಿತವಾಗಿ, ಕಲಾಪ ತೊಡಗುವುದರೊಳಗೆ ಒಮ್ಮೆಲೇ ಜಯಪ್ರಕಾಶ ಮಾವಿನಕುಳಿ (ಆಗ ಸಮಾಜಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿ) ಮುಂತಾದ ಬಂಡಾಯಗಾರರು ಯಾವುದೋ ಕಾರಣಕ್ಕೆ ಒಮ್ಮೆಲೇ ಕರಪತ್ರ ತೂರುತ್ತಾ ಬೊಬ್ಬೆ ಹೊಡೆಯುತ್ತಾ ರಂಗ ಪ್ರವೇಶಿಸಿದರು. (ಮಾವಿನಕುಳಿಯವರು ಮಹಾರಾಜಾ ಕಾಲೇಜಿನ ನೆನಪುಗಳನ್ನೇ ಬರೆದುಕೊಡುತ್ತೇನೆಂದು ತಿಂಗಳುಗಳ ಹಿಂದೆ ಹೇಳಿದ್ದಾರೆ. ಅದರ ಬೆನ್ನಿಗೆ ಸ್ನಾತಕೋತ್ತರ ನೆನಪುಗಳನ್ನೂ ಬರೆದಾಗ ಈ ಕ್ರಾಂತಿಯ ಕಾರಣಗಳನ್ನು ಖಂಡಿತ ವಿಶದಗೊಳಿಸುತ್ತಾರೆ ಎಂದು ನಂಬಿದ್ದೇನೆ) ಆದರೆ ಐದು ಹತ್ತು ಮಿನಿಟಿನಲ್ಲೇ ಪೊಲಿಸರು ಪರಿಸ್ಥಿತಿಯನ್ನು ಶಾಂತಗೊಳಿಸಿದರು. ಮತ್ತೆ ಪ್ರಥಮವಾಗಿ ಕನ್ನಡದಲ್ಲೇ ನಡೆದ ಪ್ರತಿಜ್ಞಾವಿಧಿ ಮುಂತಾದ ಕಲಾಪಗಳನ್ನು ನಾನು ಪೂರ್ಣ ಕಂಡಿದ್ದೆ, ಮೆಚ್ಚಿ ಬರೆದಿದ್ದೆ ಕೂಡಾ. ಆದರೆ ಇಂದು ಅದರ ಪ್ರತಿ ನನ್ನಲ್ಲುಳಿದಿಲ್ಲ.

ನನ್ನ ಸಹಪಾಠಿಗಳಲ್ಲಿ ಕೆಲವರನ್ನು ಒತ್ತಾಯ ಮಾಡಿ ಸೈಕಲ್ಲಿನಲ್ಲಿ ಹೊರಡಿಸಿ ಚಾಮುಂಡಿ ಬೆಟ್ಟಕ್ಕೆ ಒಯ್ದು ಬಂಡೆ ಏರುವ ಕಲೆ ಪರಿಚಯಿಸಿದ್ದೆ. ಪ್ರಥಮ ವರ್ಷದಲ್ಲಿ ನಮ್ಮ ವಿದ್ಯಾರ್ಥಿ ಬಳಗವೇ ಬಂದಷ್ಟು ಮಂದಿಯನ್ನು ಕೂಡಿಕೊಂಡು ನಂಜನಗೂಡಿಗೊಂದು ಪಿಕ್ನಿಕ್ ಇಟ್ಟುಕೊಂಡಿತ್ತು. (ಆ ಕುರಿತು ೧೯೭೩ರಲ್ಲೇ ನಾನು ಬರೆದ ಪುಟ್ಟ ಪ್ರವಾಸ ಕಥನವನ್ನು ಯಥಾವತ್ತು ಕೊನೆಯಲ್ಲಿ ಅನುಬಂಧವಾಗಿ ಕೊಡುತ್ತಿದ್ದೇನೆ.) ಎರಡನೇ ವರ್ಷಕ್ಕೆ ಬಂದಾಗ ಹೆಚ್ಚು ಬುದ್ಧಿ ಉಪಯೋಗಿಸಿ ನಾಯಕಮಣಿಗಳು ಗೋವಾ ಯಾತ್ರೆಯನ್ನೇ ಆಯೋಜಿಸಿದ್ದರು. ನನ್ನಲ್ಲಿ ಎನ್ಸಿಸಿ ಅಗತ್ಯದಲ್ಲಿ ಮೂರು ಬಾರಿ ಸ್ವತಂತ್ರವಾಗಿ (ರಾಜಾಸ್ತಾನ, ಜಬ್ಬಲ್ ಪುರ ಮತ್ತು ಅಸ್ಸಾಂ) ರೈಲಿನಲ್ಲಿ ಪ್ರಯಾಣಿಸಿದ ಗಟ್ಟಿ ಅನುಭವ ಇತ್ತು. ಆದರೆ ಎಂಎ ನಾಯಕಮಣಿಗಳು ನನ್ನನ್ನು ಕೇಳಿಕೊಳ್ಳಲಿಲ್ಲ; ಮೇಲೆ ಬಿದ್ದು ಮಾಡುವ ಸ್ವಭಾವ (ಗರ್ವ ಅಲ್ಲ, ಹಿಂಜರಿಕೆ) ನನ್ನದೂ ಅಲ್ಲ. ಆ ಗೋವಾ ಯಾತ್ರೆ ಒಂದು ಕೆಟ್ಟ ಪ್ರವಾಸವೇ ಆಯ್ತು. ಆದರೆ ಅನುಭವ ಸಿಹಿಯಲ್ಲ, ಅದರ ನೆನಪೇ ಸಿಹಿ ಎಂಬಂತೆ ಗೋವಾ ಪ್ರವಾಸ್ದ ಬಗ್ಗೆ ಅಂದೇ ನಾನು ಬರೆದ ಇಂಗ್ಲಿಷ್ ಲೇಖನವನ್ನೂ ಇಲ್ಲಿ ಕೆಳಗೆ ಎರಡನೇ ಅನುಬಂಧವಾಗಿ ಸೇರಿಸುತ್ತಿದ್ದೇನೆ.

ನನ್ನ ಹವ್ಯಾಸಕ್ಕೆ ಜೀವಾಳವಾಗಿದ್ದ ದಖ್ಖಣ ಪರ್ವತಾರೋಹಣ ಸಂಸ್ಥೆ (ದಪಸಂ) ೧೯೭೩ರಲ್ಲಿ ಕರ್ನಾಟಕಕ್ಕೇ ಪ್ರಥಮವಾಗಿ ಹಿಮಾಲಯದಲ್ಲೊಂದು ಶಿಖರವನ್ನು ಸ್ವತಂತ್ರವಾಗಿ ಏರುವ ತಂಡ ಸಂಘಟಿಸತೊಡಗಿತು. ಸಂಸ್ಥೆಯ ಹಿರಿಯ ಮತ್ತು ದೃಢ ಸದಸ್ಯನಾಗಿಯೂ ಮೈಸೂರಿನಲ್ಲಿದ್ದ ಪೊಲಿಸ್ ಅಧಿಕಾರಿಗಳ ತರಬೇತಿ ಸಂಸ್ಥೆಗೆ ಪರ್ವತಾರೋಹಣ ತರಬೇತಿ ಕೊಡುವಲ್ಲಿ ದಪಸಂ ವತಿಯಿಂದ ಅನುಭವೀ ಶಿಕ್ಷಕನಾಗಿಯೂ ಎರಡು ವರ್ಷಗಳ ಹಿಂದೆ ಉದಕಮಂಡಲದ ವಲಯದಲ್ಲಿದ್ದ ತಾತಾರ್ಶಿಖರಾರೋಹಣದ ಸಾಹಸ ಕಥನದೊಡನೆ ಅದ್ವಿತೀಯ ಲೇಖಕನಾಗಿಯೂ ಮೆರೆದ (ಅಳಿದೂರಿಗೆ ಉಳಿದವನೇ ಗೌಡ!) ನನ್ನ ಆಯ್ಕೆ ಖಚಿತವಿತ್ತು. ನಾನು ಭಾಗಿಯಾಗುವ ಪೂರ್ಣ ಕನಸೂ ಕಟ್ಟಿಕೊಂಡಿದ್ದೆ. ಆದರೆ ಅಂತಿಮ ಎಂಎಯಲ್ಲಿದ್ದುಕೊಂಡು ಸುಮಾರು ತಿಂಗಳೊಂದರ ಕಾಲ ಶೈಕ್ಷಣಿಕ ಗೈರುಹಾಜರಿಯನ್ನು ತಂದೆ ಒಪ್ಪಲೇ ಇಲ್ಲ. ತಾತಾರಾರೋಹಣದಲ್ಲಿದ್ದ ಮತ್ತು ನನ್ನ ಎಂಎ ಸಹಪಾಠಿಯೂ ಆಗಿದ್ದ ನಿರ್ಮಲ ಪ್ಯಾಟ್ರಿಕ್ ಹಾಗೂ ಅಂದಿನ್ನೂ ಸ್ನಾತಕಪದವೀಧರನೂ ಆಗಿರದ (ಪ್ರಸ್ತುತ ಇಂಗ್ಲಿಷ್ ವಿಭಾಗದ ಹಿರಿಯ ಅಧ್ಯಾಪಕ!) ಸಿ.ಪಿ ರವಿಚಂದ್ರ ತಂಡದ ಅತಿ ಕಿರಿಯ ಸದಸ್ಯನಾಗಿ ಆಯ್ಕೆಯಾಗಿ ಹೋಗಿ ಬಂದರು.

ಹಿಮಾಲಯ ತಪ್ಪಿದ ನನ್ನ ಹತಾಶೆಯನ್ನು ಕಳೆಯಲು ಒಮ್ಮೆ ನಾನು ದಪಸಂ ಗೆಳೆಯರನ್ನು ಕೂಡಿಕೊಂಡು ಮಾನವಿಕ ವಿಭಾಗದ ಗೋಡೆಯ ಮೇಲೆ ಶಿಲಾವರೋಹಣದ ಪ್ರದರ್ಶನವನ್ನು ಏರ್ಪಡಿಸಿದೆ. ಈ ಕುರಿತು ವಿಭಾಗದ ಹಾಗೂ ಸಾರ್ವಜನಿಕ ಪ್ರಕಟಣ ಫಲಕಗಳಲ್ಲೆಲ್ಲ ಕೈಯಾರೆ ಬರೆದ ಕರೆಯೋಲೆ ಹಾಕಿದ್ದಲ್ಲದೆ ಸಿಕ್ಕಿದವರಲ್ಲೆಲ್ಲ ಬಾಯ್ದೆರೆ ಕರೆದು, ಪ್ರಚಾರವೂ ನಡೆಸಿದೆ. ಪ್ರದರ್ಶನದಂದು ಕನ್ನಡ ಅಧ್ಯಯನ ಸಂಸ್ಥೆಯಲ್ಲಿನ ಕನ್ನಡ ವಿಶ್ವಕೋಶ ವಿಭಾಗದಲ್ಲಿದ್ದ ನನ್ನ ತಂದೆ ಸಂಜೆ ಕಛೇರಿ ಮುಗಿಸಿ ಹೋಗುವಾಗ ಎಚ್ಚೆಸ್ಕೆಯವರೊಡನೆ ಬಂದು ನಿಂತು ನೋಡಿದರು. ಉಳಿದಂತೆ ಆಚೀಚೆ ಓಡಾಡುತ್ತಿದ್ದ ನಾಲ್ಕೆಂಟು ವಿದ್ಯಾರ್ಥಿಗಳು ಮಾತ್ರ ನಮ್ಮ ಪ್ರೇಕ್ಷಕರು. 

ಇಂಥವೆಲ್ಲಾ ನಮ್ಮ ಇಂಗ್ಲಿಷ್ ಇಲಾಖೆಯ ಕಲಾಪಗಳನ್ನು ಕಣ ಮಾತ್ರವೂ ಪ್ರಭಾವಿಸುತ್ತಿರಲೇ ಇಲ್ಲ! ನಮ್ಮ ವಿಭಾಗದಿಂದ ಅಧ್ಯಾಪಕರು ಬಿಡಿ, ಬಹುತೇಕ ವಿದ್ಯಾರ್ಥಿಗಳೂ ಹಾಜರಿರಲಿಲ್ಲ. ಪಾಪ, ಗ್ರಂಥಾಲಯದ ಸ್ಮಶಾನಮೌನದಲ್ಲಿ ಹೆನ್ರಿ ದಾವೀತ ಥೋರೋ ವಾಲ್ಡನ್ ಸರೋವರದ ದಂಡೆಯ ಮೇಲೆ ಏಕಾಂತ ವಾಸ ನಡೆಸಿದ್ದನ್ನು ಅರ್ಥೈಸಿಕೊಳ್ಳಲು ರೆಫರೆನ್ಸ್ ಬುಕ್ ಹುಡುಕುತ್ತಿದ್ದಿರಬೇಕು. ಅಥವಾ ವರ್ಡ್ಸ್‌ವರ್ತ್‌ನ ಪ್ರಕೃತಿಗೀತೆಗಳ ಛಂದೋವಿನ್ಯಾಸವನ್ನು ಸಿಗಿದು ಬುಧವಾರ ಇಲಾಖೆಯಲ್ಲಿ ತೋರಣ ಕಟ್ಟಲು ಖ್ಯಾತ ವಿಮರ್ಶಕನ ಅಭಿಪ್ರಾಯಗಳನ್ನು ಗಂಭೀರವಾಗಿ ನಕಲು ಹೊಡೆಯುತ್ತಿದ್ದಿರಬೇಕು (ಆಗಿನ್ನೂ ಜೆರಾಕ್ಸ್ ಯಂತ್ರ ಬಂದಿರಲಿಲ್ಲ. ಇಲ್ಲವಾದರೆ ಇಂದಿನಂತೆ ಪುಟಗಟ್ಟಳೆ ನಕಲು ತೆಗೆದು ನೇರ ವೇದಿಕೆಯಲ್ಲೇ ಪ್ರಥಮ ಬಾರಿಗೆ ಓದಿಬಿಡಬಹುದಿತ್ತು! ಇನ್ನೂ ಮುಂದುವರಿದ ಕಥೆಯಲ್ಲಿ ವಿದ್ಯಾರ್ಥಿಯೊಬ್ಬ ಪ್ರಬಂಧ ಎಂದರೆ ನೂರೆಂಟು ಬೆಸುಗೆ ಮಾತುಗಳ ಜೊತೆಗೆ ಕೊಟ್ಟ ನೂರೆಂಟು ಸೇತುಗಳು (ಲಿಂಕ್) ಮಾತ್ರವಂತೆ!).

ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿ ಕಿರಿದರಿಂದ ಹಿರಿದಕ್ಕೆ ವಿಕಸಿಸುತ್ತಾನೆ. ಅಂದರೆ ನನ್ನ ಕಲ್ಪನೆಯಲ್ಲಿ, ಮಿದುಮೊಳಕೆಯಿಂದ ಶಾಖೋಪಶಾಖೆ ವಿಸ್ತರಿಸಿ ಸರ್ವವ್ಯಾಪಿಯಾಗುವ ಮರವಿತ್ತು. ಆದರೆ ವಾಸ್ತವದಲ್ಲಿ ಭಾಷಾ ಮಹಾವೃಕ್ಷದ, ಇಂಗ್ಲಿಷ್ ಕೊಂಬೆಯ, ಸಾಹಿತ್ಯ ಟಿಸಿಲಿನ, ಪಾಠಪಟ್ಟಿಯೆಂದೊಂದಷ್ಟು ಪರ್ಣಗುಚ್ಛದ, ಹುಳತಿನ್ನದೆ ಉಳಿದರೂ ನಿಶ್ಚಿತ ಅವಧಿಗೆ (ಎರಡು ವರ್ಷ) ಬಣ್ಣಕಳೆದು ಕಳಚಲೇ ಬೇಕಾದ ಎಲೆಯಂತೆ ಎಮ್ಮೆ ಅನ್ನಿಸಿದ್ದು ನಿಜಕ್ಕೂ ವಿಷಾದಕರ. (ಭಾಷಾ ಸಾಗರವನ್ನು ಸಂಗಮಿಸುವ ಇಂಗ್ಲಿಷ್ ನದಿಯ ಉಪೋಪೋಪ ತೊರೆಯೋ ಬರಿಯ ಹನಿಯೋ ತಾನೇ ಸಾಗರ ಎಂದು ಹೆಮ್ಮೆ ಪಟ್ಟಂತೆ ಎಮ್ಮೆ!)  ಮೂರು ಗಂಟೆಯ (ಆರೋ ಎಂಟೋ ಪ್ರಶ್ನೆಗಳಲ್ಲಿ) ಆಯ್ಕಾ (ಪರೀಕ್ಷೆ) ಬರವಣಿಗೆಯ ಬಲದಲ್ಲಿ ಎಲ್ಲ ಬಲ್ಲವನು, ಅರ್ಥಾತ್ ಮಾಸ್ಟರ್ ಎಂದು ಘೋಷಿಸುವ, ಅದಕ್ಕೂ ಮಿಗಿಲಾಗಿ ಅದರದೇ ವರ್ಗೀಕರಣಗಳು ಭವಿಷ್ಯವನ್ನು ನಿರ್ಧರಿಸುವ ಪರಿ ನನಗೆ ಹಿಡಿಸಲೇ ಇಲ್ಲ. ಪುಸ್ತಕ ವ್ಯಾಪಾರಿಯಾಗಿ ಮೂವತ್ತಾರು ವರ್ಷಗಳುದ್ದಕ್ಕೆ ಸಾವಿರಾರು ಸ್ನಾತಕೋತ್ತರ ವಿದ್ಯಾರ್ಥಿಗಳು (ಇಂಗ್ಲಿಷ್ ಒಂದನ್ನೆ ಹೇಳುತ್ತಿಲ್ಲ, ಎಲ್ಲಾ ವಿಭಾಗಗಳು) ಅದಕ್ಕೂ ಮಿಕ್ಕು ಅಷ್ಟೇ ಅಧ್ಯಾಪಕರನ್ನು  ಪುಸ್ತಕ ವ್ಯಾಪಾರಿಯ ನೆಲೆಯಲ್ಲಿ ಕಂಡ ಮೇಲೆ ನನ್ನ ಭಾವನೆಗೆ ಪುಷ್ಟಿಯಷ್ಟೇ ಸಿಕ್ಕಿದೆ. (ಈ ನಿಯಮಕ್ಕೆ ಹೊರತಾದವರು ಕೆಲವರಿದ್ದಾರೆ ಮತ್ತಂಥವರ ಬಗ್ಗೆ ನನಗೆ ಅಪಾರ ಗೌರವವೂ ಉಂಟು.) ಇಂದು ವಿದ್ಯಾಲಯಗಳು ಉಳಿದಿಲ್ಲ; ಇರುವುದು ಪದವಿ ಪೂರೈಕೆಯ ಉದ್ದಿಮೆ!

ಸ್ವೋದ್ಯೋಗಿಯಾಗಿ ೧೯೭೫ರಲ್ಲಿ ಮಂಗಳೂರಿನಲ್ಲಿ ಪುಸ್ತಕ ಮಳಿಗೆ ತೆರೆದೆ. ನನ್ನಜ್ಜ, ತಂದೆ, ಕುಟುಂಬವೆಲ್ಲ ಸಾಹಿತ್ಯ, ವಿದ್ಯಾಪೋಷಣೆಯನ್ನು ಸಾಕಷ್ಟು ಮಾಡಿದವರೇ ಆದ್ದರಿಂದ ನಾನು ಓದಿನ ಸಂಸ್ಕೃತಿಗೆ ದೂರವಾಗದೇ ಪುಸ್ತಕ ಮಳಿಗೆಯನ್ನೇ ನಡೆಸಿದೆ. ಅದೂ ಹೊಟ್ಟೆಪಾಡಿನ ವ್ಯಾಪಾರವಾಗಿ ಬೆಳೆಸಲಿಲ್ಲ - ಪಠ್ಯ, ಗೈಡು, ಸ್ಟೇಶನರಿ ಮುಂತಾದ ಸುಲಭ ವ್ಯಾಪಾರದ ಮಾಲು, ಸಂಸ್ಥಾ ಬಟವಾಡೆಯಂಥ ಸಗಟು ವ್ಯವಹಾರದ ಚಾಪಲ್ಯಗಳನ್ನು ಹತ್ತಿಕ್ಕಿದೆ. ಎಲ್ಲರ ಸಾಮಾನ್ಯ ಓದಿಗೂ ಒದಗುವ, ಇನ್ನೂ ಸರಳವಾಗಿ ಹೇಳುವುದಿದ್ದರೆ ಪದವಿಗಳನ್ನು ಆಶ್ವಾಸಿಸದೇ ವ್ಯಕ್ತಿತ್ವನ್ನು ಉಜ್ವಲಗೊಳಿಸುವ ಯಾವುದೇ ವಿಷಯಗಳ ಓದಿಗೆ ನನ್ನ ಮಳಿಗೆಯನ್ನು ಚೂಪುಗೊಳಿಸಿ ನಡೆಸಿದೆ. ನನ್ನ ದೊಡ್ಡ ಆಶಯದಂತೆ ಜೀವನವನ್ನು ಯಶಸ್ವಿಗೊಳಿಸಿದೆ. ಜೊತೆಗೆ ಇತರ ವಿಚಾರಗಳ ಬಗ್ಗೆ ಕುತೂಹಲ ಉಳಿಸಿಕೊಂಡೆ, ಸಮಯ ಹೊಂದಾಣಿಕೆಯಲ್ಲಿ ಅವಕಾಶವಿದ್ದ ಎಲ್ಲವನ್ನು ಬೆಲೆ ಕೊಟ್ಟು ಅನುಭವಿಸಿದೆ. ಸಹಜವಾಗಿ ಪರ್ವತಾರೋಹಿಯಿದ್ದವ ಪರಿಸರಪ್ರಿಯನಾಗಿ ವಿಕಸಿಸಿದೆ. ಕಾಗೆ ಗುಬ್ಬಿಯಿಂದಾಚೆ ಹಕ್ಕಿ, ಹುಲಿ ಆನೆಯಿಂದಾಚೆ ಪ್ರಾಣಿ ಎಂದಿತ್ಯಾದಿ ವಿವರಗಳ ಗುರುತು, ಪಟ್ಟಿ, ಲೆಕ್ಕಾಚಾರಗಳಲ್ಲಿ ಇಂದಿಗೂ ನಾನು ಗಟ್ಟಿಯಿಲ್ಲ. ಆದರೆ ಅವುಗಳ ಅಗತ್ಯದ ಬಗ್ಗೆ, ಅವನ್ನು ಶುದ್ಧರೂಪದಲ್ಲಿ ಉಳಿಸಿಕೊಳ್ಳುವ ಬಗ್ಗೆ ಮನಸ್ಸಿನಲ್ಲಿ ಕವಲಿಲ್ಲದ ಪ್ರೀತಿಯಿರುವುದಕ್ಕೇ ಪುಸ್ತಕ ವ್ಯಾಪಾರಿತನದ ನಿವೃತ್ತಿಯನ್ನು ಇಲ್ಲಿ ಪ್ರವೃತ್ತಗೊಳಿಸಿದೆ. (ಪುಸ್ತಕೋದ್ಯಮವನ್ನು ತ್ಯಜಿಸಲು ಕಾರಣಗಳನ್ನು ಇಲ್ಲಿ - ಅತ್ರಿ ಮುಚ್ಚಿ, ವಾನಪ್ರಸ್ಥ! ಓದಬಹುದು.)

ಇಂಗ್ಲಿಷ್ ವಿಭಾಗದ ಕಲಾಪದಲ್ಲಿ ನನ್ನ ಪರಿಸರ ಸಂಬಂಧೀ ಚಟುವಟಿಕೆಗಳ ಬಗ್ಗೆ ಅದರಲ್ಲೂ ಮುಖ್ಯವಾಗಿ ನೇತ್ರಾವತಿನದಿ ತಿರುವಿನ ಕುರಿತು ಕೆಲವು ಪ್ರಶ್ನೆಗಳು ಬಂದವು. ಅಲ್ಲಿ ಕಿರಿದರಲ್ಲಿ ವಿವರಣೆಯನ್ನು ಕೊಟ್ಟೆನಾದರೂ ಇಲ್ಲಿ ಪ್ರತ್ಯೇಕ ಲೇಖನಗಳೇ ಇರುವುದರಿಂದ ವಿಸ್ತರಿಸುತ್ತಿಲ್ಲ. ನನಗೆ ಅಯಾಚಿತ ಈ ಅವಕಾಶ ಕೊಟ್ಟು, ಆತ್ಮಶೋಧಕ್ಕೆ ಅವಕಾಶ ಮಾಡಿಕೊಟ್ಟ ವಿಭಾಗ ಮುಖ್ಯಸ್ಥ, ಪ್ರೊಫೆಸರ್ ಮಹದೇವ್ ಅವರಿಗೆ ಕೃತಜ್ಞ. ನನ್ನ ಮಾತುಗಳ ಕೊನೆಯಲ್ಲಿ, ಗೆಳೆಯ (ಡಾ| ಸಿಪಿ) ರವಿಚಂದ್ರ ತನ್ನ ನೆನಪಿನ ಕೋಶದಿಂದ, ನನ್ನನ್ನು ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಿಯವಾಗುವಂತೆ ಮಾಡಿದ್ದಕ್ಕೂ ಕೃತಜ್ಞ. ಕೊನೆಯಲ್ಲಿ ಇದರ ಓದುಗರಿಗೆ ಅದರಲ್ಲೂ ಮುಖ್ಯವಾಗಿ ನನ್ನ ಸಹಪಾಠಿಗಳು ಮತ್ತು ಎಲ್ಲಾ ಸ್ನಾತಕೋತ್ತರ ಅಧ್ಯಯನ ಮಾಡಿದವರಿಗೆ ಒಂದು ಹೇಳಲೇಬೇಕಾದ ಮಾತು:

ನಾನು ನಿಮ್ಮಂಥವರಿಂದ ನಿರೀಕ್ಷಿಸುವುದು ಎರಡು: ೧. ನಾನು ಮಹಾರಾಜಾ ಕಾಲೇಜು ಸರಣಿಯಲ್ಲೂ ಈ ಮೂರು ಕಥನದಲ್ಲೂ ವ್ಯವಸ್ಥೆಯನ್ನು ತುಸು ಧಿಕ್ಕರಿಸಿ ಬರೆದಿದ್ದೇನೆ. ನನಗೆ ಇದು ದೊಡ್ಡ ಕ್ರಾಂತಿಕಾರಿ ಎಂಬ ಭ್ರಮೆ ಇಲ್ಲ. ಇದು ವೈಯಕ್ತಿಕ ಸೋಲನ್ನು ಸಮರ್ಥಿಸಿಕೊಳ್ಳುವ ಅಗತ್ಯದಲ್ಲಿ ಮೂಡಿದ್ದೂ ಅಲ್ಲ. ಇನ್ನೂ ಮುಖ್ಯವಾಗಿ ಆ ವ್ಯವಸ್ಥೆಯನ್ನು ಬಹುಸಂಖ್ಯೆಯಲ್ಲಿ ಒಪ್ಪಿ ನಡೆದವರನ್ನು ಪರೋಕ್ಷವಾಗಿಯಾದರೂ ಅವಮಾನಿಸುವ ಉದ್ದೇಶದ್ದೂ ಅಲ್ಲ. ೨. ಅದನ್ನೇ ನಂಬಿ, ಶ್ರಮಿಸಿ, ಸಾಧಿಸಿಕೊಂಡವರು, ಜೀವನವನ್ನೂ  ಕಂಡುಕೊಂಡವರು (ಮುಖ್ಯವಾಗಿ ಇಂಗ್ಲಿಷ್ ಅಧ್ಯಾಪಕ ಬಳಗ) ದಯವಿಟ್ಟು ನನಗೆ ದಕ್ಕದ ಆ ಒಳ್ಳೇ ಮುಖವನ್ನು ಪ್ರತಿಕ್ರಿಯೆಯಾಗಿ ಅವಶ್ಯ ದಾಖಲಿಸಬೇಕಾಗಿ ಕೇಳಿಕೊಳ್ಳುತ್ತೇನೆ. (ಬರಹ ಎಷ್ಟು ಉದ್ದವಿದ್ದರೂ ಸರಿ, ಲಿಪಿ ಅಥವಾ ಭಾಷೆ ಇಂಗ್ಲಿಷ್ ಆದರೂ ಅಡ್ಡಿಯಿಲ್ಲ.) ವ್ಯಕ್ತಿಗಳ ಮಾತು ಬರುವಾಗ ಸುಲಭದಲ್ಲಿ ಸಾಮಾನ್ಯವಾಗಿ ಎಲ್ಲರೂ ತಮ್ಮ ನೆನಪುಗಳನ್ನು ರಮ್ಯಗೊಳಿಸುವ ಚಪಲಕ್ಕೆ ಬೀಳುತ್ತಾರೆ. ನಾವು ಯಾರಿಗೂ ಅವಮಾನ ಮಾಡಬೇಕಿಲ್ಲ. ಆದರೆ ನಮಗೆ ದಕ್ಕಿದಷ್ಟನ್ನು ಪ್ರಾಮಾಣಿಕವಾಗಿ ದಾಖಲಿಸುವ ಮೂಲಕ ಇತಿಹಾಸಕ್ಕೆ ನ್ಯಾಯ ಕೊಡುವ ಪ್ರಜ್ಞೆ ಉಳಿಸಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಅವೆಲ್ಲಕ್ಕೂ ಕಾಲದ ಈ ದೂರದಲ್ಲಿ ನಿಂತು ನಿರಪೇಕ್ಷವಾಗಿ ವಿಮರ್ಶಿಸುವುದು ಎಷ್ಟೋ ಮಂದಿಗೆ ಮಾರ್ಗದರ್ಶಕವೂ ಆಗಬಹುದು ಎನ್ನುವುದು ನನ್ನ ನಂಬಿಕೆ. ಎಷ್ಟೋ ನಿವೃತ್ತರು ಆರ್ಥಿಕವಾಗಿ ಯಶಸ್ವಿ, ಕೌಟುಂಬಿಕವಾಗಿ ತೃಪ್ತರೆಂದು ತೋರುವವರು "ನನ್ನ ಜೀವನವನ್ನು ಹಾಳುಮಾಡಿಕೊಂಡೆ" ಎನ್ನುವುದು ಕೇಳಿದ್ದೇನೆ. ವ್ಯತಿರಿಕ್ತವಾಗಿ ಆದದ್ದೆಲ್ಲಾ ಒಳಿತೇ ಆಯಿತು ಎನ್ನುವ ನನ್ನ ದೃಷ್ಟಿಕೋನಕ್ಕೆ ನಿಮ್ಮೆಲ್ಲರ ಪ್ರತಿಕ್ರಿಯಾ ಬರಹ ಬಹುದೊಡ್ಡ ಬಲ ಕೊಡಬಲ್ಲುದು. ಇಷ್ಟವನ್ನು ಬಿಟ್ಟು ಹಣದ ಹಿಂದಿನ ಹುಚ್ಚು ಓಟಕ್ಕಿಳಿದ ಕಿರಿಯರಿಗೆ, (ಅವರಿದನ್ನೆಲ್ಲಿ ಓದುತ್ತಾರೆ ಎನ್ನುವುದಾದರೆ) ಪ್ರೇರಕ ಶಕ್ತಿಗಳಾದ ಹಿರಿಯರಿಗೆ ಕೈದೀಪವಾದರೂ ಆಗಬಲ್ಲುದು.
ಅನುಬಂಧಗಳು [೧೯೭೨ರಿಂದ ಸುಮಾರು ೭೪ರವರೆಗೆ ಛಾಯಾಚಿತ್ರಕತೆ’ ಎಂಬ ಹೆಸರಿನಲ್ಲಿ ನಾನೇ ತೆಗೆದ ಚಿತ್ರ ಹಾಗೂ ವಿವರವಾದ ಬರಹ ಸಹಿತ ಎರಡು ಆಲ್ಬಂಗಳನ್ನು ನನ್ನದೇ ಕುಶಿಗಾಗಿ ಮಾಡಿಕೊಂಡಿದ್ದೆ. ಮೊದಲೇ ಹೇಳಿದಂತೆ ಅದರಲ್ಲಿ ಮಾನಸಗಂಗೋತ್ರಿ ದಿನಗಳಿಗೆ ಪೂರಕವಾದ ಎರಡು ಪ್ರವಾಸ ಕಥನಗಳನ್ನು ಇಲ್ಲಿ ಅನುಬಂಧವಾಗಿ ದಾಖಲಿಸುತ್ತಿದ್ದೇನೆ. ಗಮನಿಸಿ: ಮುಖ್ಯವಾಗಿ ಇಂಗ್ಲಿಷ್ ಪ್ರವಾಸ ಕಥನದಲ್ಲಿನ ವ್ಯಾಕರಣದೋಷ ಮತ್ತು ಒಟ್ಟಾರೆ ಅಭಿಪ್ರಾಯಾದಿಗಳನ್ನು ನಾನು ಇಂದಿನ ಪರಿಷ್ಕರಣೆಗೆ ಒಳಪಡಿಸಿಲ್ಲ, ಸಹಿಸಿಕೊಳ್ಳಿ. ಚಿತ್ರಗಳಲ್ಲಿ ಒಳ್ಳೆಯವನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದೇನೆ.]

ಒಂದು: ನಷ್ಟ ಭರ್ತಿ

ಪರೀಕ್ಷಾಪೂರ್ವ ಬೇಸರದ ದಿನಗಳಾರಂಭ ಸಂತಸದ ಟೇಪು ಕತ್ತರಿಸುವುದರಲ್ಲಾಗಲೆಂದು ನಮ್ಮ ಇಂಗ್ಲಿಷ್ ವಿಭಾಗದ (ಎರಡೂ ವರ್ಷದವರು ಸೇರಿ) ೨೪ ಮಂದಿ (ಇದು ವಿಭಾಗದ ಒಟ್ಟು ಸಂಖ್ಯೆಯಲ್ಲ, ಉಳಿದವರು ಬರಲಿಲ್ಲ ಅಷ್ಟೆ.) ನಂಜನಗೂಡಿಗೆ ಹೊರಟೆವು. ನಾಲ್ಕು ದಿನಗಳ ಕಾರ್ಯಕ್ರಮದೊಡನೆ ಎಲ್ಲೆಲ್ಲೋ ಸುತ್ತುವ ಕಾರ್ಯಕ್ರಮಗಳು ಮಾತಿನ ಬಲೆಗೇ ಬಲಿಯಾಗಿ ಒಂದು ದಿನಕ್ಕಿಳಿದಿತ್ತು. ತಲಕಾಡು, ನಾಗರಹೊಳೆಗಳೆಲ್ಲವನ್ನು ಮುಟ್ಟಿ ಬಂದು ನಂಜನಗೂಡಿನಲ್ಲಿ ಕೊನೆಗಂಡಿತ್ತು; ನಂಜಪ್ಪನ ಭಕ್ತರ ನಿತ್ಯತೇರಿಗೆ ೨೪ ಜನರ ಹೊರೆಯಾಯ್ತು. ಶುಕ್ರವಾರದ ಸಂತೆಯ ಬಿಸಿ, ಮಾರಣೇದಿನ ನಡೆಯಲಿದ್ದ ರಥೋತ್ಸವದ ಸಂದಣಿಯೊಡನೆ ರೈಲೇರಿದ ನಮಗೆ ಉಸಿರಾಡಲಷ್ಟೇ ಅವಕಾಶವಿತ್ತೆಂದರೆ ಅತಿಶಯೋಕ್ತಿಯಾಗಲಾರದು. ಹೀಗೆ ಹೊರಟ ನಮಗೆ ನಂಜನಗೂಡಿನಲ್ಲೂ ಶಾಂತಿಯಿಲ್ಲ. ಪೇಟೆಯುದ್ದಕ್ಕೂ ಗಜಿಬಿಜಿ ಜನ. ವಿಶೇಷವಾಗಿ ಕೋಟು, ಟೈಗಳನ್ನು ಧರಿಸಿ ಬಂದಿದ್ದ ಶಿವಾನಂದರಿಗೆ ವಧುಪರೀಕ್ಷೆಗೆ ಹೊರಟ ದಿಬ್ಬಣವೆಂದೇ ಶ್ರೀದೇವಿ ಘೋಷಿಸಿಯೇ ಬಿಟ್ಟರು. ಪಿಕ್ನಿಕ್ಕನ್ನು ಬಹಳ ಉತ್ಸಾಹದಿಂದ ಸಂಘಟಿಸಿದ್ದ ಶ್ರೀನಿವಾಸ್ ಮತ್ತು ಗೆಳೆಯರು ತಯಾರಿಸಿ ತಂದಿದ್ದ ಆಹಾರದ ಬಕೆಟ್ಟುಗಳೊಡನೆ ನಮ್ಮ ತಂಡ ದೇವಸ್ಥಾನವನ್ನು ಸಮೀಪಿಸಿತು. ಹೀಗೇ ನಮ್ಮ ಮೆರವಣಿಗೆ ಜನಸಂದಣಿ ಮಣಿಸಿ ದೇವಾಲಯದೊಳಗೂ ಮುಂದುವರಿಯುವುದು ಕಷ್ಟವೆಂದು ತೋರಿತು. ಮೊದಲು ತಿಂಡಿ ಮುಗಿಸಿ ಬಿಡೋಣವೆಂದು ನಿರ್ಧಾರವಾಯ್ತು. ವಿಷವನ್ನೇ ಆಹಾರವೆಂದು ಉಂಡವನಿಗೆ (ನಂಜುಂಡ) ನಮ್ಮ ಹಸಿಹೊಟ್ಟೆಯ ನಿವೇದನೆ ಮೆಚ್ಚುಗೆಯಾಗಲಾರದೆಂದು ನಂಬಿ ನದಿ ದಂಡೆಯತ್ತ ತಿರುಗಿದೆವು. ಅಲ್ಲಿ ಭಕ್ತರ ಪರಮ ಪವಿತ್ರವಾದ ಮಲಗಳಿಗೆ ನಮ್ಮ ಅಪವಿತ್ರ ಪಾದರಕ್ಷೆಯನ್ನು ಸೋಂಕಿಸುವ ಅಪರಾಧ ಮಾಡದೆ ಮೇಲಿನ ಮಂಟಪದ ಬಳಿ ಸೇರಿದೆವು. ಕಲ್ಲನಾಗಣ್ಣನ ಕಟ್ಟೆಯ ಬದಿಯಲ್ಲಿ ನೆರಳನ್ನೂ ಸಾಧಾರಣ ಶುಚಿತ್ವವನ್ನೂ ಕಂಡು ಆನಂದತುಂದಿಲರಾಗಿ ಕುಳಿತೆವು. ರಾಜಮಹಾರಾಜರುಗಳನ್ನು ಹಿಂಬಾಲಿಸುವ ವಂದಿಮಾಗಧರಂತೆ, ಮಂತ್ರಿಮಹಾಶಯರುಗಳನ್ನು ಪುಟಿದುಬ್ಬಿಸುವ ಬಾಲಬಡುಕರಂತೆ, ನಮ್ಮ ಬಕೆಟ್ ಬಲದ ದಿಬ್ಬಣವನ್ನು ಹಿಂಬಾಲಿಸಿ ಬಂದ ಭಿಕ್ಷುಕರ ತಂಡವೂ ಸ್ವಲ್ಪ ಅಂತರವುಳಿಸಿ ತಂಗಿತ್ತು! ಅವರು ನಮ್ಮನ್ನೇ ನೆಚ್ಚಬೇಕಿಲ್ಲವೆನ್ನುವಂತೆ ತುಸು ದೂರದಲ್ಲಿ ಇನ್ನೊಂದೂ ತಂಡವೂ ಹೀಗೇ ಇನ್ನೊಂದೇ ಭೋಜನಯಜ್ಞ ನಿರತವಾಗಿತ್ತು. ನಾವು ಎರಡು ಬಕೆಟ್ಟನ್ನು (ಬಹುಶಃ ಖಾರಾಬಾತ್, ಕೇಸರೀಬಾತ್) ಶೇಷವುಳಿಯದಂತೆ ಖಾಲಿಮಾಡುವ ಹೊಣೆಯನ್ನು ಪೂರೈಸಿದೆವು. ಕೈ, ಬಕೆಟ್ ತೊಳೆಯುವಲ್ಲಿ ನೀರಿನ ಕೊಬ್ಬಿದ ಮೀನುಗಳು ಸಹಕರಿಸಲು ಬಂದಾಗ ಕಾರ್ಯನಿರತನಾಗಿದ್ದ ಮಂಜೇಶರಿಗೆ ಕಪಿಲಾ ನದಿ ಮಧ್ಯಾಹ್ನಕ್ಕೆ ಬೇಡವೇ ಎಂದೊಡ್ಡಿದ ಅನುಪಮ ಖಾದ್ಯವಾಗಿಯೇ ಕಾಣಿಸಿತ್ತಂತೆ!

ಅನಂತರ ನಮ್ಮ ತಂಡ ಎರಡಾಯಿತು - ಆಸ್ತಿಕರು ಮತ್ತು ಅತಿ ಆಸ್ತಿಕರು. ಅಥವಾ ಬುದ್ಧಿವಂತರು ಹೇಳುವಂತೆ ನಾಸ್ತಿಕರು ಮತ್ತು ಕಲಾವಿಮರ್ಶಕರು. ಮೊದಲಿನ ಜಾತಿ ಅನ್ನ ದೇವರ ಮೇಲೆ ಇನ್ನು ದೇವರು ಉಂಟೇ ಎಂದು ಭಜಿಸಲು ಹತ್ತಿರದ ಪ್ರವಾಸಿ ಬಂಗ್ಲೆಯತ್ತ ಪಾದ ಬೆಳೆಸಿತು. ಅನ್ನ ಹೊಟ್ಟೆಯೊಳಗಿದ್ದರೇ ಲೇಸು ಇಲ್ಲವಾದರೆ ಬೂಸು ಎಂದು ಗೊಣಗಿಕೊಂಡೇ ಉಳಿದೆರಡು ಬಕೆಟ್ಟುಗಳನ್ನೂ ಇವರು ಹೊತ್ತುಕೊಂಡು, ತಿರುಗಿ ಸಂತೆ ದಾಟಿ ಬಂಗ್ಲೆ ಜಗುಲಿ ಸೇರಿಕೊಂಡಿತು. ಕೆಲವರು ಅಲ್ಲಿನ ಮರದ ನೆರಳಿನಲ್ಲಿ ಒಂದೆರಡು ಸುತ್ತು ಮಾಯದ ಎಲೆಗಳನ್ನು ಹಿಡಿದು ಭಜನೆ ಮಾಡಿ (ಇಸ್ಪೇಟ್ ಆಟ) ಬೇಸತ್ತರು! ಆ ಹುಡುಗರೆಲ್ಲ ಒಬ್ಬೊಬ್ಬರಾಗಿಯೇ ಚದುರಿ, ನದಿನೀರಿನಲ್ಲಿ ಕಲೆತರು. ನೀರ ಸೆಳವಿನರಿವಿರದ ಕಾರಣ ದಂಡೆಯಲ್ಲೇ ಇಲ್ಲದ ಕಪಿಚೇಷ್ಟೆಗಳನ್ನು ಮಾಡುತ್ತಿದ್ದರೆ ಕೆಲವರು ದಡದಲ್ಲೇ ಸೂರ್ಯಸ್ನಾನ ನಿರತರಾಗಿದ್ದರು. ಅತ್ತ ಅತಿ ಆಸ್ತಿಕರು (ಆಥವಾ ಕಲಾವಿಮರ್ಶಕರು) ದೇವಳದಲ್ಲಿ ದೇವನೊಬ್ಬನನ್ನು ಬಿಟ್ಟು ಎಲ್ಲವನ್ನೂ ನೋಡಿ, ಸ್ಥಳಪುರಾಣವನ್ನು ಕೆದಕಿ, ವಿದ್ಯಾಪ್ರವಾಸದ ಜ್ಞಾನೋದ್ದೇಶವನ್ನು ಸಾಧಿಸಿದ ಹೆಮ್ಮೆಯಿಂದ ಬೀಗಿ, ಉರಿ ಬಿಸಿಲಿಗೆ ಬಾಡಿ, ತಿರುಗಾಟದಿಂದ ಕುಗ್ಗಿ ಬಂಗ್ಲೆಗೆ ಬಂದರು. ಹುಡುಗಿಯರು ದಂಡೆಯಲ್ಲೇ ವಿಹಾರಕ್ಕಿಳಿದರು. ಅವರ ವಿಹಾರ ಹೆಚ್ಚಿದ್ದರೆ ಗೊಸರಿಗೆ ಸಿಕ್ಕಿಕೊಳ್ಳುವ ಭಯವೂ ಇತ್ತು! ಹೆಚ್ಚಿನ ಹುಡುಗರು ಮಾತ್ರ ನದಿಯ ಈಜಾಟವನ್ನೇ ನೆಚ್ಚಿದರು. ಕೆಲವರು ಮೊದಲಿಗರ ಭಯದ ಎಲ್ಲೆಯನ್ನುತ್ತರಿಸಿ ನದಿಯ ನಡುಗಡ್ಡೆಯನ್ನೂ ಮುಟ್ಟಿ ಬಂದರು. ಸರಿಯುತ್ತಿದ್ದ ಕಾಲವನ್ನು ಛೇಡಿಸಿ, ಮತ್ತೆರಡು ಬಕೆಟನ್ನು (ಬಹುಶಃ ಪುಳಿಯೊಗರೆ, ಮೊಸರನ್ನ) ಖಾಲಿ ಮಾಡುವ ದಿವ್ಯ ಹೊಣೆಯನ್ನು ಅಗುಳುಳಿಯದಂತೆ ಪೂರೈಸಿ, ಗುಂಪು ಫೋಟೋಕ್ಕೊಮ್ಮೆ ಮುಖವೊಡ್ಡಿ ಮರಳಿ ತೇರನ್ನು ಸೇರಿತು. ಇಂಗ್ಲಿಷ್ ವಿಭಾಗದ ಪ್ರವಾಸ ಇರಲಿಲ್ಲ ಎಂಬ ಮಾತು ಬಾರದಂತೆ, ಹೋಗಿಯೂ ಹೋಗದಂತೆ, ನಷ್ಟಭರ್ತಿಯ ನೆಪದಂತೆ ಪ್ರಯಾಸದಲ್ಲೇ ಪ್ರವಾಸವನ್ನು ಕಂಡುಕೊಂಡು ಮನೆ ಸೇರಿದೆವು.

ಎರಡು: Soury Goa

Bye Mysore: The 24 member party of English Department of Manasagangothri, Mysore started on its tour to Goa on the 17th of October 1973. The party lead by the literary club president, Raghavan journeyed by train to Arasikere, back folding the blanket green fields, giggling Jowar and hissing vasts of Sugar cane. We had breakfast at KR Nagar. Back waters of KRS - the river Cauvery, Lakshmana teertha and Hemavathy bid us goodbye. The passenger train with its lulling, some-times boring pace reached Arasikere in the noon.

A Town of important railway junction is Arasikere. There the spicy meal with the juicy sweet beeda filled the time gap. At 3.30 pm the train from Bangalore with its utmost generosity took us in. But the hostile carriages negated seating. We settled down along the corridors. Giddy Sharanappa was afraid of the train being derailed as it often used to joggle sideward. Chandru for the fourth time, but with the freshness of a first timer, was narrating his achievements in some places, often expecting a critical comment or an appreciation from his dumb neighbor (that was me!). The poor neighbor lost in the wilderness of ignorance said nothing but smiled intelligently occasionally.

Unlimited limit: The train bound to Miraj keeping up the IST (I mean, Indian stretchable time) left us on the plat form of Londa one hour behind schedule. The other train which according to the official sources had to be on its way to Vasco, was still in the station proving its nationality too! It was full beyond unlimited limits. Still we clung to it as it dashed out of the station at 3.30 (am) in the morning. The steam engine drew the carriages to its destination as the bright moon drew the speeding surroundings to milky magnificence.

Western ghats challenged afresh; train nosed down and began the descent. It strung the hills round and straight with the creaking brakes applied at times. Train went in and out through eerie tunnels and valleys. Unknown depth on one side, eye bounding heights on the other. There to our left on the skyline was a yawning little valley of two great peaks. It had a patch of blue sky in the background, from which the silvery white mass falls to a short depth and shatters into wider and still wider vision giving the onlookers an idea of the great mythological Ganga here re-enacting the coming down drama (avatarana) every moment. (ನೋಡಿ: ದೂದ್ ಸಾಗರ್) These and many more wonders of nature did not give us a moment to think a wink of sleep. Our train journey wound up at the biggest city of Goa – Madgao, when the day light was out.

To Panjim: After finishing breakfast we left Madgao to Panjim or Panaji, the 34 mile distant capital city of Goa by bus. The hillocks covered with the golden grass, paddy fields and coconut trees gave us a feeling of freshness with all the stink and dirt of 28 hour journey. At the time of Goa liberation a great bridge on the way to Panjim had been destroyed partially. After the restoration of peace the Engineers of the Indian army had it repaired temporarily, which now asks for limited weight at certain points.

 So we had to vacate the bus and cross the river on the bridge by walking, while the bus followed us empty.

The hot sun was at his height when we got down at Panjim bus station. From there we walked a miserable route to our pre-arranged lodge.  Bath, meal and rest were the utterance of everybody at that time. In the evening we had an unofficial but late visit to the longest beach in Goa – Callangute. Pedantic sun wouldnot wait and we sadly missed his demise!

Modernity: Kismet lodge provided us with one big hall for nineteen men and one room for five women with only two latrines and bathrooms in common. The nearby hotel Jayalakshmi, managed by the well known Udupi people gave us the boarding. Tourist bureau in Panjim has three guided tours. With them, in two days one can have an overall picture of Goan beaches, falls, lakes, temples, churches, ports, forts and main towns while covering the rural part enroute in a luxury bus. The expense wouldnot exceed Rs. 20 per head. The whole tour programme is conducted by well trained guides.

Friday morning with a tight tummy we boarded tourist coach Mahalsa Narayanai. At 8.30 am Desai, the senior most guide welcomed us to the guided tour no 3, which is supposed to be the lengthiest. Desai is a man full of statistical datas and dry factualism. We went through the streets of Panjim and caught the way to Madgao. Enroute the guide without arousing the tourists’ interest talked about the population of a certain bypassing town, its stand - if any, in Goa and such other things. We had 20 minutes tea break in Madgao. Then we went to nearby Colva beach. There the given 45 minutes was well utilized by sea bath. Knee high waves would satisfy the non bathers too. The buntings to the sea i.e., the nodding coconut trees would fill one’s mind entirely.

Marmagoa, the next place of our visit is a city with both the ports (Air & Sea), has the status equivalent to that of Bombay or Calcutta. We went down to see its harbor. The mechanized ore filling operation was the main attraction there. Next the bus carried us to the city of history famed Vasco da gama. There we had a lunch-break of an hour. In that time many also located the black market for foreign goods in Vasco.


Nunnery Go!: In the afternoon we went to a spot from where the vehicles and the people had to be ferried across a river. The other side though not an island is still called the Island of Pilan or Pillar. In the island of Pilan the bus had to climb a hillock on steep and curvy road. On the top stands the church of Lady of Pilan and the attached nunnery. The Chapel is on the first floor wherein the Lady of Pilan, Jesus Christ and Mary the mother are formed in the apertures in the wall with the tinted cut glasses.

In front of it is the tomb of the lady of Pilan made of Italian marble. The hill top gives a panoramic view of sea and land, of blue and green. While returning the bus deviated and brought us down to Panjim without ferrying again.

Eldorado: Evening in Goa must not to be wasted on streets but be spent on beaches. So that evening many went to the nearby Miramar beach and a few cine-fanactics caught Victoria-203 in Eldorado, air tight theatre! We whistled away the night.

Saturday, we went on guided tour no. 1. The guide was an young man of 24. “Well Ladies and Gentlemen” said he in a jarring tone and blabbered something to the effect of a routine mantram of a priest. But he was intelligent (or ignorant?) enough to not to be a statistical adviser!  He posed riddles and cracked jokes and in a jiffy won our appreciation. The Luxury coach – Silver arrow, alias Sharmeelee first took us to Dhone Paulo, a place where the rivers Zuari and Mandovi join the Arabian sea. From Dhone Paulo there are regular ship service to Vasco, which saves half the time required to travel on roads.

No trip in Goa is complete without a visit to a beach. So the next place of our visit was Miramar beach. On the side of the main Panjim road is a big circle and a well maintained garden. This provides the entrance to the Miramar beachers. Here we spent ten minutes and pushed on to see the cathedrals of Goa. We crossed the river Zuari on the lengthiest bridge in Goa, named after Jawaharlal Nehru, as he happened to lay the foundation stone.

Antiquity: The first church we visited was Bam Jesus Basilica. The bronze carvings on the shrine wall is worth seeing. In a corner the body of saint Xavier is kept safe and it attracts worldwide devotees and tourists once in every ten years. Next the oldest church in Goa – Se Premacial De-Goa or Se Cathedral, was visited. It is full of legends & antiquity. This has the maximum number of shrines, counting to 14 in all.  The age and the nature has eaten away the left frontal tower. St. Xavier’s body is usually exhibited here.


The famous Mangeshi, Shanta Durga, Ramanatha temples were visited later. These have a history but nothing special to present.

Exactly at the meal time we were back in Panjim. In the evening four of us went to Callanghute and the remaining went on marketing. That day I had a fine sea bath and the luck to see the sun set. The last phase of it was covered by few strips of clouds which took to bloody colours signifying the death of another day.

Flu strikes: October 20th dawned with five of our friends ill. The nearby Goa Govt. Hospital was very hospital in its treatment. That day few had been to Vasco via Dhone Paulo. In the afternoon they returned with five more complaint of flu. Though it was Saturn’s day Docs treated them well. But still 3 girls in the room and 7 boys in the hall bed-ridden; a sorry sight indeed! Added to this our leader who had been to Madgao to reserve the return seats came back in the evening with a morose face. The student concession voucher which we possessed had not been attested by the Mysore station. So a responsible member – Shekar, was made to rush back to Mysore, to set right the mistake. We had to bear the fact that an extra day spent in Goa meant a fleet less in our purse.  

Waiting for Shekar: Sunday in Panjim with the low tide in finance and bed ridden count down made the distant Mysore whither. In the evening a few visited Callanghute. There the clouds played wicked. The hope of the dawning bright day was wrapped by the inky clouds. That night we got a telegram from Mysore: `OK. Coming 22nd 0800 Hrs. Shekar.’

Monday dawned. Exactly at 8 in the morning the whole party was at Madgao railway station. The train from Londa rushed in and lumbered out; where is Shekar! Exactly at 9.30 am the train toward Mysore drew in and chuckled away. The next was at 10.30 in the night. Luggages were piled, the sick cuddled on the dirty platform and the others sighed with the shunting steam engines. Evening with a down pour brought Sehkar on the double. Obviously he had missed the connecting train at Hubli and had to catch the bus to Madgao. Now everybody buckled up to catch the night train. Then an authoritative railway officer advised us to catch the morning train for few good reasons. With that beds were made again on the same platform. The night train came and cleared the crowd. For the sick, girls and the precious luggage a room was rented in a nearby hotel and others slept on the platform!

Shun Goa: Tuesday we awaited the happy moment to come. The train arrived a bit late. Everything and everybody except two at the ticket window were happily on board. Then it was Shekar with a sullen face asked us all to dismount the chariot to home sweet home! With all that run up and down to Mysore, the concession voucher did not hold good. By then the purse of the team would not bear the load of full charges to Mysore. But at the very last moment something was chistled out (though Ganapa, his father – as the saying in Kannada). We boarded the train again but with the tickets to Davanagere – a midway station.


Oh Mysore! : Noon in Londa. Next we were connected to the Karnataka express. Excluding the ten urgentees – who got the extension ticket to Mysore, others got down at Davanagere in the middle of the night. They took shelter in some place, waited until they borrowed money from some distant relatives came to meet the ticket charges to Mysore. The next morning (25th –Deepavali day) they took the early Bus to Mysore. The so called urgentees without the proper connecting train, were delayed at Arasikere only to be in Mysore on the eve of Deepavali. Experienced say that Goa has a sweet Fenny but to us it tasted SSSSour!

4 comments:

  1. Dear Ashok,
    Thanks for taking us back in time(four decades+).
    Memories are always a mixture of pleasant and not so pleasant ones.
    But they were,indeed ,adventurous ,keeping in mind the inexperienced and uncorrupted people.
    Excellent effort and please carry on.

    ReplyDelete
  2. ನೆನಪುಗಳ ಚಿತ್ರ ಚೆನ್ನಾಗಿದೆ. ನೀವು ಓದಿ ಮುಗಿಸಿದ ಕೆಲವು ವರ್ಷಗಳ ನಂತರ ಮಾನಸಗಂಗೋತ್ರಿ ಯ ವಿದ್ಯಾರ್ಥಿನಿಯಾದ ನನ್ನ ಅನುಭವಗಳನ್ನೂ ಬರೆಯಬೇಕೆನಿಸಿತು. ಹಾಸ್ಟೆಲ್ ನ ನೆನಪುಗಲು ಸಿಹಿನೆನಪುಗಳೇ ...

    ReplyDelete
  3. ಹಳೆಯ ಮಿತ್ರ ಸಿ.ಪಿ.ರವಿಚಂದ್ರರನ್ನು ಕಂಡು ಸಂತೋಷವಾಯಿತು- ಟಿ.ಎಸ್. ಗೋಪಾಲ್

    ReplyDelete
  4. Your account of our Nanjangoodu trip,along with the photos, is wonderful to say the least. But the Goa trip was a mixture of ignorance and inexperience! Right through the tiring train journey and indifferent accomodation, some of our friends falling sick,and the troubles encountered for not being careful enough with the
    concession forms--all that mixed bag of chance and fortune--I think we were all sustained by a spirit of adventure though naive. With a mature and experienced leader in control, much of the misery might have been avoided though.And yet,I remember not one who made me feel guilty. We were all very generous and grateful that we did make the trip against many odds after all!
    You deserve all credit for giving us an account as you saw it all. Thank you.

    ReplyDelete