04 February 2014

ಪಂಜರದ ಅರಗಿಳಿ

(ನಾಲ್ಕನೇ ಸಣ್ಣ ಕತೆ -೧೯೪೮)
[ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೬ ರಿಂದ ೧೯೫೨ರ ನಡುವೆ ಕೆಲವು ಸಣ್ಣ ಕತೆಗಳನ್ನು ಬರೆದು, ಕಾಲದ ಕೆಲವು ನಿಯತಕಾಲಿಕಗಳಲ್ಲಲ್ಲದೆ ಎರಡು ಸಂಕಲನವಾಗಿಯೂ ಪ್ರಕಟಿಸಿದ್ದರು. ಅವನ್ನೆಲ್ಲ ಕೇವಲ ಐತಿಹಾಸಿಕ ದಾಖಲೆಗಾಗಿ ನಾನು ಒಟ್ಟು ಮಾಡಿ ೧೯೯೩ರಲ್ಲಿ ಕೊಡಗಿನ ಸುಮಗಳು ಹೆಸರಿನಲ್ಲಿ ಪ್ರಕಟಿಸಿದ್ದೆ. ಈಗ ಮತ್ತದೇ ಕಾರಣಕ್ಕಾಗಿ ಇಲ್ಲಿ ಅನಿಯತ ಧಾರಾವಾಹಿಯಾಗಿ ಕೊಡುವಲ್ಲಿ ಇದು ನಾಲ್ಕನೇ ಹೆಜ್ಜೆ. ಆಸಕ್ತರು ಹಿಂದಿನ ಮೂರೂ ಕತೆಗಳ ಸರಣಿ ನೋಡಲು ಇಲ್ಲಿ ಚಿಟಿಕೆ ಹೊಡೆಯಬಹುದು. ಹೀಗೆ ಎಲ್ಲ ಕತೆಗಳ ಪ್ರಕಟಣಾ ಕೊನೆಯಲ್ಲಿ ಇಡಿಯ ಸಂಕಲನವನ್ನು ವಿ-ಪುಸ್ತಕವಾಗಿಯೂ ಸಾರ್ವಜನಿಕಕ್ಕೆ ಮುಕ್ತಗೊಳಿಸಲಿದ್ದೇನೆ.  - ಅಶೋಕವರ್ಧನ]

[೧೯೯೩ರಂದು ಜಿಟಿನಾ ಬರೆದ ಅರಿಕೆಯ ಮುಂದುವರಿದ ಮಾತುಗಳು: ೧೯೫೧ರಲ್ಲಿ ವನಸುಮ ಕತಾಸಂಕಲನಕ್ಕೆ ಬರೆದ ಮುನ್ನುಡಿಯಿಂದ ಉದ್ಧೃತಾಂಶ: ಸಾಹಿತ್ಯದ ಸವಿಯನ್ನು ಲೇಖಕನಿಗೆ [=ನನಗೆ] ಊಡಿಸಿದವರು ಅವನ ಬಾಲ್ಯದ ಗುರುಗಳಾದ ಶ್ರೀ ಎನ್.ಎಸ್. ರಾಮಚಂದ್ರ ಅವರು. ಸಕಲ ಸಂದರ್ಭಗಳಲ್ಲಿಯೂ ಲೇಖಕನಿಗೆ ಉಚಿತ ಹಿತೋಕ್ತಿಗಳನ್ನೂ ಪ್ರೋತ್ಸಾಹವನ್ನೂ ನೀಡಿ ಅವನ ಸಾಹಿತ್ಯತೃಷ್ಣೆಯನ್ನು ವರ್ಧನೆಮಾಡಿದವರು ಶ್ರೀ ಎಂ.ಎಸ್. ಅನಂತಪದ್ಮನಾಭರಾಯರು. ಮಹನೀಯರುಗಳಿಗೆ ಪುಟ್ಟ ಪುಸ್ತಕವನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಲು ಸಂತೋಷವಾಗುವುದು. ಗುರುವರ್ಯರುಗಳಿಗೆ ಕೀರ್ತಿಯನ್ನು ತರಲಿ, ತಾರದಿರಲಿ ಅರ್ಪಣೆಯಲ್ಲಿನ ಉದ್ದೇಶವು ಸದ್ಭಾವಪ್ರಚೋದಿತ.

೧೯೫೩ರಲ್ಲಿ ಕೊಡಗಿನ ಕತೆಗಳು ಮುನ್ನುಡಿಯಿಂದ ಉದ್ಧೃತಾಂಶ: ಲೇಖಕನಿಗೆ ಪ್ರೌಢ ಶಾಲೆಯ ಮೂರು ದರ್ಜೆಗಳಲ್ಲಿಯೂ ಕನ್ನಡ ಭಾಷೆಯ ಗುರುಗಳಾಗಿದ್ದವರು ಪೂಜ್ಯ ಶ್ರೀ ಜಿ.ಎಸ್. ಕೇಶವಾಚಾರ್ಯರು. ಶ್ರಿಮಾನ್ ಕೇಶವಾಚಾರ್ಯರು ವಿದ್ವಾಂಸರು, ಶುದ್ಧ ಸಾಹಿತ್ಯ ಪ್ರೇಮಿಗಳು, ಕನ್ನಡ ಸಾಹಿತ್ಯದಲ್ಲಿ ಅಪಾರ ವಿಶ್ವಾಸವಿರುವವರು ಮತ್ತು ಗಮಕಿಗಳು. ಅವರ ಕನ್ನಡ ಪಾಠಗಳನ್ನು ಆಲೋಚಿಸುವಾಗ ಇಂದಿಗೂ ಲೇಖಕನು ಹರ್ಷಪುಳಕಿತನಾಗುತ್ತಾನೆ. ಲೇಖಕನಿಗೆ ಕನ್ನಡ ಸಾಹಿತ್ಯದಲ್ಲಿರುವ ಪ್ರೇಮಾಭಿಮಾನ ಮತ್ತು ಪ್ರಸ್ತುತ ಗ್ರಂಥದಲ್ಲಿ ತಿಳಿದಷ್ಟು ಶುದ್ಧ ಸಾಹಿತ್ಯವನ್ನು ನೀಡಲು ಮಾಡಿರುವ ಪ್ರಯತ್ನ ಶ್ರೀ ಕೇಶವಾಚಾರ್ಯರ ನಿರಂತರ ವಾತ್ಸಲ್ಯಪೂರ್ವಕ ಶ್ರಮದ ಫಲಿತಾಂಶ.

ಇಂದು (೧೯೯೩) ಸಂಕಲನವನ್ನು ಅದೇ ಸಮರ್ಪಣಭಾವದಿಂದ ಹಿರಿಯ ಚೇತನಗಳಿಗೆ ಅರ್ಪಿಸುತ್ತಿದ್ದೇನೆ. ಬಾಲಶಿಕ್ಷೆ ತರಗತಿಯಲ್ಲಿ ನನಗೆ ಕನ್ನಡದ ಅಆಇಈ ಕಲಿಸಿದ ಶ್ರೀ ರಾಮಚಂದ್ರ ಅವರು ಮಾತ್ರ ಇಂದು ನಮ್ಮ ಜೊತೆಯಲ್ಲಿದ್ದಾರೆ:
ಬಾನಿನಲ್ಲಿ ಬರೆದ ಗೆರೆಯ ಹಾಗೆ ಮೆರೆವೆಯೋ
ಅಗಾಧ ಆಳದಲ್ಲಿ ನನ್ನ ಕರೆವೆಯೋ
ಇಲ್ಲೆ ನಾನು ಎಲ್ಲೊ ನೀನು ಕಿವಿಯೊಳುಲಿವೆಯೋ
- ಅಂಬಿಕಾತನಯದತ್ತ]

ಈಗ ಸುಮಾರು ನೂರೈವತ್ತು ವರ್ಷಗಳ ಹಿಂದಿನ ಸಂಗತಿ ಕಾವೇರಿಯಿಂದಮಾ ನೇತ್ರಾವತಿವರಮಿರ್ದ ನಾಡದಾ ಕೊಡಗು. ಇದರ ಅಧಿಪತಿ ವೀರಶೈವ ಪಂಥದ ಲಿಂಗರಾಜನು. ಇವನು ಎಷ್ಟು ಕ್ರೂರಿಯೋ ಅಷ್ಟೇ ಉದಾರಿಯೂ ಹೌದು. ಕೇವಲ ಸಣ್ಣಪುಟ್ಟ ತಪ್ಪುಗಳಿಗೂ ಮರಣ ದಂಡನೆಯನ್ನು ವಿಧಿಸಿ, ಶಿಕ್ಷೆಯನ್ನು ಅತಿ ಭೀಷಣ ರೀತಿಯಿಂದ ನೆರವೇರಿಸಿ ಅದನ್ನು ನೋಡಿ ಆನಂದಿಸುತ್ತಿದ್ದನು. ರಾಜಾಸೀಟಿನ ಬಂಡೆಗಳ ಮೇಲಿಂದ ನೂಕಿಸುವುದು, ಆನೆಯಿಂದ ತಲೆ ತುಳಿಸುವುದು, ಸೆಳವಿರುವ ಹೊಳೆಯ ಮಡುವಿಗೆ ಕೈಕಾಲು ಕಟ್ಟಿ ಎಸೆಯುವುದು ಇವೇ ಮುಂತಾದ ಅಮಾನುಷ ರೀತಿಗಳಿಂದ ತಪ್ಪಿತಸ್ಥರನ್ನು ಕೊಲ್ಲಿಸುತ್ತಿದ್ದನು. ಹಾಗೆಯೇ ಅಲ್ಪೋಪಕಾರಗಳಿಗೆ ಅವನಿಗೆ ಮೆಚ್ಚಿಗೆಯಾದರೆ ಜಹಗೀರು, ಉಂಬಳಿ, ಜಮ್ಮಗಳಿಂದ ಜನರನ್ನು ಗೌರವಿಸುತ್ತಿದ್ದನು. ಆಗಿನ ಕಾಲದ ಎಲ್ಲಾ ರಾಜರಂತೆ ವೈಭವಶಾಲಿಯೂ ನಿರಂಕುಶ ಪ್ರಭುವೂ ಉದಾರಿಯೂ ಆದವನು ಲಿಂಗರಾಜ. ಪ್ರಜಾಪ್ರಭುತ್ವವಿಲ್ಲದಿದ್ದರೂ ಪ್ರಜೆಗಳು ಸುಖ ಸಂತುಷ್ಟಿಯಿಂದಲೇ ಇರುತ್ತಿದ್ದರು. ರಾಜನ ಕಠಿಣ ಶಿಕ್ಷೆಗೆ ಹೆದರಿ ಜನರು ಸದಾ ಸನ್ಮಾರ್ಗದಲ್ಲಿಯೇ ನಡೆಯುತ್ತಿದ್ದರು. ಆದರೂ ದೊಡ್ಡವರ ಮನಸ್ಸೂ, ಸಮುದ್ರದ ಅಲೆಗಳೂ ತೀರ ಅಸ್ಥಿರ. ಹಾಗಾಗಿ ಆಗಾಗ್ಗ ಅನೇಕರು ರಾಜನ ಕ್ರೂರ ಶಿಕ್ಷೆಗೆ ಈಡಾಗುತ್ತಿದ್ದರು.

ಲಿಂಗರಾಜನ ರಾಜಧಾನಿ ಮಡಿಕೇರಿ. ಪುರ ಮಧ್ಯದ ಉನ್ನತ ಪ್ರದೇಶದಲ್ಲಿ ರಾಜವೈಭವಕ್ಕೊಪ್ಪುವ ಅರಮನೆ. ಇಲ್ಲಿ ರಾಜನ, ಅವನ ಅಂತಃಪುರದವರ, ಪರಿವಾರದವರ ವಾಸ. ಕೋಟೆಯ ಪ್ರಾಕಾರಗಳಿಂದ ನೋಡಿದರೆ ಇಡೀ ಮಡಿಕೇರಿಯು ಸುತ್ತಲೂ ಹಬ್ಬಿರುವುದು, ಒಂದು ಚಿತ್ರಪಟದಲ್ಲಿ ಚಿತ್ರಿಸಿದಂತೆ, ಸುಂದರವಾಗಿ ತೋರುವುದು. ರಾಜಾಸೀಟು ಅವನ ಕೇಳೀ ಶೈಲ. ಬೆಟ್ಟದ ಅಂಚಿನಲ್ಲಿ ಪ್ರತಿ ಸಾಯಂಕಾಲವೂ ರಾಜನು ಬಂದು ಕುಳಿತುಕೊಳ್ಳುತ್ತಿದ್ದುದರಿಂದ ಸ್ಥಳಕ್ಕೆ (ಫರಂಗಿ ವಿದ್ಯೆ ಕೊಡಗಿಗೆ ಬಂದ ಅನಂತರ) ರಾಜಾಸೀಟು ಎನ್ನುವ ಪವಿತ್ರ ನಾಮಧೇಯ ದೊರೆಯಿತು. ಮಡಿಕೇರಿಯಲ್ಲಿರುವಾಗ ಪಟ್ಟಣದ ಎಲ್ಲಾ ಭಾಗಗಳಲ್ಲಿಯೂ ಅವನಿಗೆ ಸಂಚರಿಸಬೇಕು. ಚೆನ್ನಾಗಿ ಸಿಂಗರಿಸಿಕೊಂಡು, ಸೊಕ್ಕಿ ಬೆಳೆದ ಬಿಳಿ ಕುದುರೆಯ ಮೇಲೆ ಕುಳಿತು, ಠೀವಿಯಿಂದ ಮಡಿಕೇರಿಯ ಯಾವ ಮೂಲೆಗೂ ಅವನು ಹೋಗುತ್ತಿದ್ದನು. ಸಮೀಪದ ಹಳ್ಳಿಗಳವರೆಗೂ ಹೋಗಿ ಬರುವುದಿತ್ತು. ವಾಯುವಿಹಾರಾನಂತರ ರಾಜಾಸೀಟಿಗೆ ಹೋಗಿ ಅಲ್ಲಿ ಒಂದು ಅರ್ಧ ಗಂಟೆ ಕುಳಿತು ಹುಕ್ಕಾ ಸೇದಿ ಹಿಂತಿರುಗುವುದು ವಾಡಿಕೆ. ಪೇಟೆಯಲ್ಲಿ ಹೋಗುವಾಗ ರಾಜನ ಸಮೀಪ ಯಾರು ಬೇಕಾದರೂ ಹೋಗಿ ತಮ್ಮ ಅಹವಾಲುಗಳನ್ನೂ ಕಷ್ಟಗಳನ್ನೂ ಹೇಳಿಕೊಳ್ಳಬಹುದಾಗಿತ್ತು. ಅವನು ಇವನ್ನೆಲ್ಲ ಸಹನೆಯಿಂದ ಕೇಳಿ ಸರಿಪಡಿಸುತ್ತಿದ್ದನು. ಜತೆಗಲ್ಲಿ ಬರುತ್ತಿದ್ದ ಕಾರಕೂನನಿಗೆ ಇವುಗಳನ್ನು ಪಟ್ಟಿ ಮಾಡಿಕೊಳ್ಳುವುದೇ ಕೆಲಸ.  ರಾಜಾಸೀಟಿನಲ್ಲಿ ರಾಜನು ಸಂಜೆಯ ತಂಗಾಳಿಯನ್ನು ಯಥೇಚ್ಛವಾಗಿ ಸೇವಿಸಿ, ಹುಕ್ಕಾದ ಹೊಗೆಯನ್ನು ಅದಕ್ಕೆ ಸುಳಿಸುಳಿಯಾಗಿ ಮಿಶ್ರಿಸಿ, ಪ್ರಕೃತಿಯೊಡನೆ ತನ್ಮಯನಾಗುತ್ತಿದ್ದನು. ರಾಜ್ಯದ ಹೊಣೆಗಾರಿಕೆಯನ್ನೂ ಶತ್ರುಗಳ ಕೀಟಲೆಯನ್ನೂ ಹೊತ್ತು ಮರೆತು, ಮನಸ್ಸನ್ನು ಸ್ವಚ್ಛಂದವಾಗಿ ತರಂಗ ತರಂಗವಾಗಿ ಹಬ್ಬಿರುವ ಬೆಟ್ಟ ಕಣಿವೆಗಳಲ್ಲಿ ಹರಿಯಲು ಬಿಡುತ್ತಿದ್ದನು. ರಾಜಾಸೀಟಿನ ದೃಶ್ಯ ಅನುಪಮ ಅದ್ವಿತೀಯ. ದೇವ ಶಿಲ್ಪಿ ತನ್ನ ಸಕಲ ಶಕ್ತಿ ಸಾಮರ್ಥಗಳನ್ನೂ ಒಂದು ಅದ್ಭುತ ದೃಶ್ಯವನ್ನು, ಪವಾಡವನ್ನು ನಿರ್ಮಿಸಲು ವೆಚ್ಚಿಸಿದನೋ ಕೃತಿ ಸಾಫಲ್ಯವನ್ನು ಪಡೆದನೋ ಎಂಬಂತೆ ಇದೆ ಇಲ್ಲಿಯ ಮನೋಹರ ದೃಶ್ಯ, ಸೃಷ್ಟಿ ಸೌಂದರ್ಯದ ಬೆರಗು.

ಒಂದು ದಿವಸ ಲಿಂಗರಾಜನು ಎಂದಿನಂತೆ ಸಂಜೆಯ ಹೊತ್ತು ಕುದುರೆ ಸವಾರಿ ಮಾಡುತ್ತಾ ಬ್ರಾಹ್ಮಣರ ಅಗ್ರಹಾರದ ಕಡೆಗಾಗಿ ಹೋಗುತ್ತಿದ್ದನು. ಅಲ್ಲೇ ಸಮೀಪದಲ್ಲಿ ಹುಲ್ಲುಗಾವಲಿನಲ್ಲಿ ಆಡುತ್ತಿದ್ದ ಸಣ್ಣ ಮಕ್ಕಳು ರಾಜನು ಬರುತ್ತಿದ್ದುದನ್ನು ನೋಡಿ ಆಟವಾಡುವುದನ್ನು ಬಿಟ್ಟು ಸಾಲಾಗಿ ನಿಂತು ನೋಡತೊಡಗಿದರು. ರಾಜನು ಮಡಿಕೇರಿಯಲ್ಲಿರುವಾಗ ಸಾಧಾರಣ ವಾರಕ್ಕೊಂದಾವರ್ತಿ ಕಡೆ ಬರುತ್ತಿದ್ದರೂ ಮಕ್ಕಳಿಗೆ ದೃಶ್ಯ ಆಕರ್ಷಣೀಯವಾಗಿತ್ತು. ಅಲಂಕಾರ ಪುರುಷ, ವೈಭವದಿಂದ ರಾಜನು ಕುದುರೆಯ ಮೇಲೇರಿ ಜಬರದಸ್ತಿನಿಂದ ದೌಲತ್ತಿನಿಂದ ಹಾಗೆ ಅಡ್ಡಹಾಯುವಾಗ ದೊಡ್ಡವರೇ ಬೆರಗಾಗಿ ನಿಂತು ನೋಡುತ್ತಿದ್ದರು. ಹಾಗಿರುವಾಗ ಮಕ್ಕಳು ಆಟ ನಿಲ್ಲಿಸಿ ನೋಡಿದುದರಲ್ಲಿ ಆಶ್ಚರ್ಯವೇನು? ರಾಜನು ನಾಲ್ಕು ಕಡೆಗೂ ದೃಷ್ಟಿ ಬೀರುತ್ತಿದ್ದನು. ಪ್ರಜೆಗಳು ಅರ್ಪಿಸುವ ವಂದನೆಗಳನ್ನು ದರ್ಪದಿಂದಲೂ ಠೀವಿಯಿಂದಲೂ ಸ್ವೀಕರಿಸುತ್ತಿದ್ದನು. ಮಕ್ಕಳು ನಿಂತು ನೋಡುತ್ತಿದ್ದರು. ರಾಜನೂ ಅವರನ್ನು ನೋಡಿದನು. ನೋಡುತ್ತಿದ್ದ ಹಾಗೆಯೇ ಒಬ್ಬಳು ಸಣ್ಣ ಹುಡುಗಿಯು ರಾಜನ ದೃಷ್ಟಿಯನ್ನು ಆಕರ್ಷಿಸಿದಳು. ರಾಜನು ಕುದುರೆಯನ್ನು ನಿಲ್ಲಿಸಿ ಹುಡುಗಿಯನ್ನು ತನ್ನ ಬಳಿಗೆ ಬರುವಂತೆ ಕರೆದನು. ಅವಳು ಹೆದರಿಕೊಂಡು ಮಕ್ಕಳ ಹಿಂದೆ ಅಡಗಿದಳು. ರಾಜನು ಮುಗುಳ್ನಗುತ್ತ ತಾನೇ ಕುದುರೆಯಿಂದ ಇಳಿದುಕೊಂಡು ಹೋಗಿ, ನನ್ನ ಜತೆಯಲ್ಲಿ ಬರುವೆಯಾ ಮಗೂ? ಎಂದು ಮೃದುವಾಗಿ ಕೇಳಿದನು. ಎಂಟು ವರ್ಷದ ಹುಡುಗಿಯ ಮುಖ ಕೆಂಪಾಯಿತು. ಉಳಿದ ಹುಡುಗಿಯರು, ಹುಡುಗರು ದೂರ ಸರಿದು ಏನೆಂದು ತಿಳಿಯದೆ ಏನಾಗುವುದೆಂದು ಗೊತ್ತಾಗದೆ ಕಣ್ಣರಳಿಸಿ ನಿಂತರು. ಹುಡುಗಿಯು ಮಾತಾಡಲಿಲ್ಲ. ನಿನಗೆ ಒಳ್ಳೆಯ ಮಿಠಾಯಿ ಕೊಡುತ್ತೇನೆ, ಚಂದದ ಬೊಂಬೆಗಳನ್ನು ಕೊಡುತ್ತೇನೆ. ಬಾಮ್ಮಾ ಬಾ! ರಾಜನು ನಸುನಗುತ್ತಾ ನುಡಿದನು. ಹುಡುಗಿಯು ಕಣ್ಣನ್ನು ಅಗಲವಾಗಿ ಬಿಟ್ಟಳು. ತಿಂಡಿಗಳು ಆಟದ ಬೊಂಬೆಗಳು, ರಾಜನು ತನ್ನ ಹತ್ತಿರ ಬಂದು ಹಸನ್ಮುಖದಿಂದ ಮಾತನಾಡುವುದು ಇವೆಲ್ಲ ಅವಳಿಗೆ ಒಂದು ಸಂತೋಷಕರ ಸ್ವಪ್ನದಂತೆ ತೋರಿದುವು. ಅಷ್ಟರಲ್ಲಿಯೇ ಅಲ್ಲಿ ಸಮೀಪದಲ್ಲಿ ಸೇರಿದ್ದವರು ಬೀದಿಯ ಜನರು, ಅಲ್ಲಿ ಬಂದು ಸುದೂರದಲ್ಲಿ ಆಶ್ಚರ್ಯದಿಂದ ನಿಂತರು. ಹುಡುಗಿಯ ಮುಖಭಾವದಿಂದ ಅವಳು ಬರಲು ಒಪ್ಪಿದಳೆಂದು ರಾಜನು ಅರಿತನು. ಅಲ್ಲಿ ಸೇರಿದ್ದ ಬ್ರಾಹ್ಮಣರೊಡನೆ ಹುಡುಗಿ ಯಾರು? ಎಂದು ಕೇಳಿದನು. ಅವಳು ಹುಜೂರರ ಕರಣೀಕರ ಮಗಳು ಎಂದನು ಅಲ್ಲಿದ್ದ ವಿಪ್ರ ಮಹಾಶಯನೊಬ್ಬನು. ಓಹೋ ನಮ್ಮ ಸುಬ್ಬಯ್ಯನವರ ಮಗಳೇ? ಉತ್ತಮವಾಯಿತು. ಬಾಮ್ಮಾ ನಾವು ಹೋಗೋಣ ಎಂದು ರಾಜನು ಹುಡುಗಿಯನ್ನು ಕೈ ಹಿಡಿದು ಕರೆದುಕೊಂಡು ಹೋದನು. ತನ್ನ ಕುದುರೆಯ ಮೇಲೆ ಕುಳ್ಳಿರಿಸಿ ಅರಮನೆಗೇ ಸೀದಾ ಹೋದನು. ಹುಡುಗಿ ಗಂಭೀರವಾಗಿ, ಅಲುಗಾಡದೇ, ಕುದುರೆಯ ಮೇಲೆ ರಾಜನ ಮುಂದೆ ಕುಳಿತುಕೊಂಡು ಹೋದಳು. ಉಳಿದವರು ರಾಜನು ಮರೆಯಾಗುವವರೆಗೂ ಎವೆಯಿಕ್ಕದೇ ನಿಂತು ನೋಡುತ್ತಿದ್ದರು. ದೇವಿ ಎಂತಹ ಅದೃಷ್ಟವಂತೆ ಎಂದಳು ಒಬ್ಬಳು. ! ಅಲ್ಲ ಕಣೇ! ರಾಜರು ಅವಳನ್ನು ಕಾಳಿಕಾ ದೇವಿಗೆ ಬಲಿಕೊಡಲು ಕರೆದುಕೊಂಡು ಹೋಗಿರಬೇಕು. ಅವರು ನಗುತ್ತಿರಲಿಲ್ಲವೇ! ಹಾಗೆ ಬಲಿಕೊಡಲು ಆಗಿದ್ದರೆ ಕೈ ಹಿಡಿದು ಮೆಲ್ಲನೆ ಕರೆದುಕೊಂಡು ಹೋಗುತ್ತಿದ್ದರೇ? ಹೀಗೆ ತಮಗೆ ಬೇಕಾದ ಹಾಗೆ ಹುಡುಗರೂ ಹುಡುಗಿಯರೂ ವ್ಯಾಖ್ಯಾನ ಮಾಡಿದರು. ಹಲವರಿಗೆ ಘಟನೆಯಿಂದ ಒಂದು ಅವ್ಯಕ್ತ ಅಸೂಯೆ ಮೂಡಿತು. ಆದರೆ ಕಾಳಿಗೆ ಬಲಿಕೊಡಲು ದೇವಿಯನ್ನು ರಾಜನು ಕರೆದುಕೊಂಡು ಹೋದನೆ ಎಂಬ ಊಹೆಯಿಂದ ಒಂದು ಬಗೆಯ ಕ್ರೂರಾನಂದವೂ ಆಯಿತು. ದೊಡ್ಡವರು ಇದೇನಪ್ಪಾ! ರಾಜನ ದೃಷ್ಟಿ ಸಣ್ಣ ಹುಡುಗಿಯ ಮೇಲೆ ಬಿತ್ತು! ರಾಜನಿಗೆ ಮಕ್ಕಳಿದ್ದಾರೆ. ಆದರೆ ದೇವಿಯು ಸೌಂದರ್ಯದ ಗಣಿಯಂತೆ ಸಣ್ಣ ಪ್ರಾಯದಲ್ಲಿಯೇ ಇದ್ದಾಳೆ. ಇಂಥವಳು ತನ್ನ ಅರಮನೆಯಲ್ಲಿ ಬೆಳೆಯಲಿ ಎಂದು ರಾಜನ ಉದ್ದೇಶವಾಗಿರಬೇಕು ಎಂದರು. ಬ್ರಾಹ್ಮಣ ಸುಬ್ಬಯ್ಯನವರ ಮನೆಯಲ್ಲಿ ಹುಟ್ಟಿದ್ದರೂ ವಸಂತ ಕಾಲೇ ಸಂಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ ಎಂದು ಸೇರಿಸಿದನು ಇನ್ನೊಬ್ಬ ಬುಧವರೇಣ್ಯ. ಶೂದ್ರ ರಾಜನು ಬ್ರಾಹ್ಮಣರ ಹುಡುಗಿಯನ್ನು ರೀತಿ ಕರೆದೊಯ್ಯುವುದು ನಮ್ಮ ಕುಲಕ್ಕೇ ಅಮಂಗಳವೆಂದು ಹೇಳಲು ಹೆದರಿದರೂ ದೃಷ್ಟಿ ಚಾಂಚಲ್ಯದಿಂದಲೂ ಭ್ರೂಭಂಗಿಯಿಂದಲೂ ಹಾಗೆ ಸೂಚಿಸಿದನು ಇನ್ನೊಬ್ಬ ಭೂಸುರೋತ್ತಮನು.

ಚುಚ್ಚು ಸುದ್ದಿಯು ಸುಬ್ಬಯ್ಯನವರ ಕಿವಿಗೆ ಮುಟ್ಟಲು ಬಹಳ ಹೊತ್ತು ಹಿಡಿಯಲಿಲ್ಲ. ಅಲ್ಲೇ ಸಮೀಪದಲ್ಲಿ ಅವರ ಮನೆಯಿತ್ತು. ದಿನ ನಿತ್ಯದ ರಾಜ್ಯದ ಕಾರ್ಯಗಳನ್ನು ಮುಗಿಸಿ ಬಂದು ಬ್ರಾಹ್ಮಣರ ಗುರುಮಠಕೆ ಸಂಬಂಧಿಸಿದ ಲೆಕ್ಕಪತ್ರ ಮುಂತಾದವುಗಳಲ್ಲಿ ಮಗ್ನರಾಗಿದ್ದ ಅವರಿಗೆ ತನ್ನ ಮಗಳನ್ನು ರಾಜನು ಕರೆದೊಯ್ದನು ಎನ್ನುವ ಸುದ್ದಿ ಸಿಡಿಲು ಬಡಿದಂತೆ, ಮನೆಯ ಮಾಡು ತನ್ನ ಮೇಲೆ ಕಳಚಿ ಬಿದ್ದಂತೆ ಆಯಿತು. ಒಂದು ನಿಮಿಷ ಮನೆಯೇ ಸ್ತಬ್ಧವಾಯಿತು. ಮಹಾವರ್ಷಾಘಾತದ ಮೊದಲು ಪ್ರಕೃತಿ ಶಾಂತವಾಗಿರುವಂತೆ, ಸುಬ್ಬಯ್ಯನವರ ಮನೆಯಿಡೀ ನಿಶ್ಶಬ್ದವಾಯಿತು. ಅವರ ಮನೆಯ ನೆರೆಹೊರೆಯವರು ಎಲ್ಲರೂ ಈಗಾಗಲೇ ಅಲ್ಲಿ ಸೇರಿದ್ದರು. ಯಾರೂ ಏನೂ ಹೇಳುವಂತಿಲ್ಲ. ಸುಬ್ಬಯ್ಯನವರ ಹುಲಿಮೀಸೆಗಳು ತಕಪಕನೆ ಕುಣಿದುವು. ಕಣ್ಣುಗಳು ಕೆಂಡವನ್ನು ಕಾರುವಂತೆ ಗರಗರನೆ ತಿರುಗಿದುವು. ಪೂರ್ವ ಕಾಲದ ಋಷಿಗಳ ಸಾಮರ್ಥ್ಯ ಪ್ರಭಾವಗಳು ಇದ್ದಿದ್ದರೆ ಇಷ್ಟರಿಂದಲೇ ಲಿಂಗರಾಜನು ಉರಿದು ಹೋಗುತ್ತಿದ್ದನು. ಸುಬ್ಬಯ್ಯನವರು ತಿಳಿಗೇಡಿಯಲ್ಲ, ದುಡುಕುವವರಲ್ಲ. ಆದರೂ ಅವರ ಬಾಯಿಯಿಂದ ಅಯ್ಯೋ ಮೂರ್ಖ, ಏನನ್ನು ಮಾಡಿದೆ ಎಂಬ ಉದ್ಗಾರಗಳು ಹೊರಟವು. ಆದರೆ ಅಷ್ಟರಲ್ಲಿಯೇ ಅವರಿಗೆ ತಾನು ಹೇಳಿದ ಮಾತುಗಳು ಕಟುತ್ವದ ಅರಿವಾಗಿ ನಾಲಗೆಯನ್ನು ಬಿಗಿಹಿಡಿದರು. ಲಿಂಗರಾಜನ ಆಳ್ವಿಕೆಯಲ್ಲಿ ಗೋಡೆಗಳಿಗೂ ಕಿವಿಯಿದ್ದುವು ಎಂದು ಜನರು ಆಡಿಕೊಳ್ಳುತ್ತಿದ್ದರು. ಹಿಂದೆ ಅನೇಕ ಜನರಿಗೆ ರೀತಿ ಮನೆಯಲ್ಲಿಯೇ ಆದರೂ ಹಿಡಿತ ತಪ್ಪಿ, ರಾಜವಿರುದ್ಧೋಕ್ತಿಗಳನ್ನು ಆಡಿದುದರ ಫಲಿತಾಂಶವಾಗಿ ಕ್ರೂರ ಶಿಕ್ಷೆಗಳು ವಿಧಿಸಲ್ಪಟ್ಟಿದ್ದುವು. ಸುಬ್ಬಯ್ಯನವರ ಒಂದು ಮಾತಾಗಲೀ ಅವರ ಕೋಪದ ಸುಳಿವಾಗಲೀ ರಾಜನಿಗೆ ತಲಪಿದರೆ ಮತ್ತೆ ಅವರ ಗತಿ ರಾಜಾಸೀಟಿನ ಪಾತಾಳ ಗಹ್ವರ ಚುಂಬನವೇ. ಬೇರೆ ಯಾರಿಗೂ ಬಾಯಿಬಿಡಲು ಧೈರ್ಯವಿಲ್ಲ. ಹೀಗೆ ಎಲ್ಲರೂ ಕಳವಳದಿಂದ ಕುಳಿತಿದ್ದರು. ಸಂಜೆ ಮಸಕಾಗಿ ಕತ್ತಲಾಯಿತು. ಸುಬ್ಬಯ್ಯನವರ ಪತ್ನಿ ಗೌರಮ್ಮನವರು ಒಂದು ಮಿಣುಕು ಹಣತೆಯನ್ನು ತಂದು ಚಾವಡಿಯಲ್ಲಿಡುವುದೂ ರಭಸದ ಗಾಳಿ ಬೀಸಿ ಅದು ಆರಿ ಹೋಗುವುದೂ ಸಮವಾಯಿತು. ಆಗಲೇ ರಾಜನ ಓಲೇಕಾರನು ಧಾವಿಸಿ ಕರಣೀಕರ ಮನೆಯನ್ನು ಪ್ರವೇಶಿಸಿದನು. ಗೌರಮ್ಮನವರ ಎದೆ ಬಿರಿಯುವಂತಾಯಿತು; ಆಕಾಶವೇ ಕವಿದು ಬಿದ್ದಂತೆ ಅನ್ನಿಸಿತು - ಸಂಜೆಯ ಹೊತ್ತು ಅಪಶಬ್ದಗಳು ಯಜಮಾನರ ಬಾಯಿಯಿಂದ ಹೊರಟಿರುವುವು, ದೀಪ ನಂದಿ ಹೋಯಿತು. ಆಗಲೇ ಯಮರಾಜನ ಕರೆಯಂತೆ ರಾಜದೂತನ ಆಗಮನ. ಅಪಶಕುನ ಪರಂಪರೆ, ಮನೆಯ ಮುಂದೆ ಬೆಕ್ಕುಗಳೆರಡು ಜಗಳವಾಡಿ ವಿಕಾರ ಭಯಂಕರ ಆರ್ತನಾದ ಮಾಡಿ, ಯಾರಿಂದಲೋ ಅಟ್ಟಲ್ಪಟ್ಟು ದೂರ ಓಡಿ, ಅಲ್ಲಿಂದ ಗುರುಗುಟ್ಟುತ್ತಿದ್ದುವು. ಕಠಿಣ ದುಃಖ ಪ್ರಸಂಗಗಳಲ್ಲಿ ಮನಸ್ಸು ತಳಮಳಗೊಂಡಿರುವಾಗ, ತರಹದ ಯಃಕಶ್ಚಿತ್ ವಿಷಯಗಳೂ ಸಾಗರ ವೈಶಾಲ್ಯವನ್ನೂ ದಂಡಕಾರಣ್ಯ ಭೀಕರತೆಯನ್ನೂ ತಾಳಿ ಕಾಡುವುವು. ದೂತನು ತಾವು ಈಗಿಂದಲೇ ಅರಮನೆಗೆ ಹೊರಟು ಬರಬೇಕೆಂದು ಮಹಾಪ್ರಭುಗಳವರು ಅಪ್ಪಣೆ ಮಾಡಿದ್ದಾರೆ ಎಂದನು. ಏಕೆ, ಏನು ಎನ್ನುವ ಪ್ರಶ್ನೆಗಳಿಗೆ ಉತ್ತರವೀಯಲು ಅವನಿಗೆ ತಿಳಿದಿರಲಿಲ್ಲ. ಸುಬ್ಬಯ್ಯನವರು ಕೂಡಲೇ ಸ್ತಿಮಿತಮನಸ್ಕರಾಗಿ, ಎಂದಿನ ಉಡುಪನ್ನು ಧರಿಸಿ, ಜರಿ ರುಮಾಲು, ಪೋಷಾಕುಗಳಿಂದ ಅಲಂಕೃತರಾಗಿ ರಾಜಾಸ್ಥಾನದ ಕಡೆಗೆ ರಭಸದಿಂದ ತೆರಳಿದರು. ತಾಬೇದಾರಿಕೆಯಲ್ಲಿ ಒಂದೊಂದು ವರ್ತನೆಯೂ ಸರಿಯಾಗಿಯೇ ನಡೆಯಬೇಕು. ಗೌರಮ್ಮನವರು ತನ್ನ ಮಾಂಗಲ್ಯದ ಉಳಿವಿಗೆ, ಯಜಮಾನರ ರಕ್ಷಣೆಗೆ, ಮಗಳ ಅಭ್ಯುದಯಕ್ಕೆ ಎಲ್ಲದಕ್ಕೂ ಎಲ್ಲಾ ದೇವ ದೈವಗಳಿಗೆ ಹರಕೆ ಹೇಳಿಕೊಂಡರು. ಸುಬ್ಬಯ್ಯನವರು ಹೋದ ಮೇಲೆ ನೆರೆಕರೆಯವರು ಒಬ್ಬೊಬ್ಬರೇ ಪಿಸು ಮಾತಾಡುತ್ತಾ ಜಾರಿದರು. ಮನೆಯವರು - ತಾಯಿ ಮತ್ತು ಮಗ, ಇತರ ಆಳುಗಳು - ಚಾವಡಿಯಲ್ಲಿಯೇ ಏನು ಮಾಡುವುದೆಂದು ತಿಳಿಯದೇ ಉಳಿದರು.

ಸುಬ್ಬಯ್ಯನವರ ಬರವನ್ನೇ ಎದುರು ನೋಡುತ್ತಾ ರಾಜನು ಅರಮನೆಯ ಹೊರ ಪ್ರಾಕಾರದಲ್ಲಿ ನಿಂತಿದ್ದನು. ಉದ್ವಿಗ್ನತೆಯನ್ನುಳಿದು ಎಂದಿನಂತೆ ಸುಬ್ಬಯ್ಯನವರು ಮುಖ ಮಾಡಿಕೊಂಡು, ರಾಜನಿಗೆ ನಮಿಸಿದರು. ಅವರಿಗೆ ಆಶ್ಚರ್ಯ, ಸಂಭ್ರಮ, ಸಂತೋಷಗಳಾಗುವಂತೆ ನಂಬಲೂ ಆಗದಿರುವಂತೆ, ರಾಜನೆಂದನು, ಬರಬೇಕು, ಬರಬೇಕು, ಕರಣೀಕರು! ಎಂದು ಭುಜದ ಮೇಲೆ ಕೈಹಾಕಿಕೊಂಡೇ ಕರೆದುಕೊಂಡು ಒಳ ಹೊಕ್ಕನು. ಬಲಿಕೊಡುವ ಮೊದಲು ಕುರಿಯನ್ನು ಅಲಂಕಾರ ಮಾಡಿ, ಪ್ರೀತಿಯಿಂದ ಮೈದಡವುತ್ತಾರಲ್ಲವೇ, ಹಾಗಾಯಿತು ಕರಣೀಕರಿಗೆ. ಒಳಗಿನ ವಿಶಾಲ ಸಾಲೆಯಲ್ಲಿ ಅವರು ಮಂಡಿಸಿದರು. ರಾಜನೇ ಮಾತನ್ನು ಪ್ರಾರಂಭಿಸಿದನು. ಕರಣೀಕರೇ, ಅವೇಳೆಯಲ್ಲಿ ನಿಮ್ಮನ್ನು ಏಕೆ ಬರಹೇಳಿದೆನೆಂದು ನಿಮಗೆ ತಿಳಿದಿರಲೇಬೇಕು. ನಿಮ್ಮ ಮಗಳಂತೆ ಅವಳು, ನಾನು ಸಂಜೆ ಅಗ್ರಹಾರದ ಕಡೆಗೆ ಹೋಗಿದ್ದಾಗ ಕಂಡೆನು. ಅವಳು ತನ್ನ ರೂಪದಿಂದಲೂ ವರ್ಚಸ್ಸಿನಿಂದಲೂ ನನ್ನ ಸಂಪೂರ್ಣ ವಿಶ್ವಾಸವನ್ನು ಸೆಳೆದಿದ್ದಾಳೆ. ಇಂಥ ಯೋಗ್ಯತೆ ಇರುವ ಹುಡುಗಿ ನಿಮ್ಮ ಮಗಳು ಎಂದು ಕೇಳಿ ತುಂಬಾ ಸಂತೋಷವಾಯಿತು. ಸುಬ್ಬಯ್ಯನವರು ಕಣ್ಣೇ ಸರ್ವಸ್ವವಾಗಿ ನೋಡುತ್ತಿದ್ದರು. ಅವಳು ನಮ್ಮ ಅರಮನೆಯಲ್ಲಿ ಬೆಳೆಯಲಿ. ರಾಜರ ಅಂತಃಪುರವನ್ನು ಸೇರಲು ಯೋಗ್ಯಳಾದ ಕನ್ಯೆ ಅವಳು. ನನ್ನ ಮಗ ವೀರನು ಈಗ ಇನ್ನೂ ಹುಡುಗ.  ಇಬ್ಬರೂ ಪ್ರಾಪ್ತ ವಯಸ್ಕರಾದಾಗ ಅವರಲ್ಲಿ ವಿವಾಹವೆಸಗಬೇಕೆಂದೇ ನನ್ನ ಇಚ್ಛೆ ಎಂದನು. ರಾಜನ ಇಚ್ಛೆ ಎಂದರೆ ದಂಡದ ಆದೇಶ ಎಂಬ ಧ್ವನಿ ಕರಣೀಕರಿಗೆ ಗೊತ್ತಿತ್ತು.

ಸುಬ್ಬಯ್ಯನವರು ಮಾತಾಡಲಿಲ್ಲ. ಆದರೆ ಚಾಣಾಕ್ಷನಾದ ರಾಜನಿಗೆ ಬ್ರಾಹ್ಮಣನ ಮುಖಭಂಗಿಗಳಿಂದಲೇ ಅವರ ಅಸಮಾಧಾನ ಅರಿಯಲು ಕಷ್ಟವಾಗಲಿಲ್ಲ.
ನಿಮ್ಮ ಅಸಂತುಷ್ಟಿ ಏನು? ಬ್ರಾಹ್ಮಣರ ಹುಡುಗಿ ನಮ್ಮೊಡನೆ ಸಂಬಂಧವೆಸಗುವುದು, ಮಠಾಧಿಕಾರಿಗಳಾದ ನಿಮಗೆ ಸಮ್ಮತವಿಲ್ಲವಲ್ಲವೇ? ಆದರೆ ನಿಮ್ಮ ಹುಡುಗಿಗೇ ಅದು ಇಷ್ಟವಿದ್ದರೆ? ನಿಮಗೆ ನಿಮ್ಮ ಮಗಳ ಮೇಲೆ ತುಂಬಾ ಪ್ರೇಮವಿದೆ. ಅವಳನ್ನೇ ಕೇಳೋಣ. ಅವಳಿಗೆ ಇಲ್ಲಿ ಇರಲು ಇಷ್ಟವೇ ಅಥವಾ ನಿಮ್ಮೊಡನೆ ಹಿಂತಿರುಗಿ ಬರಲು ಇಷ್ಟವೇ ಎಂದು. ಆಗಬಾರದೇ? ರಾಜನು ಹಸನ್ಮುಖಿಯಾಗಿಯೇ ಇದ್ದನು. ಸುಬ್ಬಯ್ಯನವರ ಮುಖದಲ್ಲಿ ಆಶೋಜ್ಯೋತಿಯೊಂದು ಮಿಂಚಿತು. ಕ್ಷಣದಲ್ಲಿ ತನ್ನ ಮಗಳು ದೇವಿಯನ್ನು ತಾನು ಮುದ್ದಿಸಿದುದು, ಅಪ್ಪಾ, ಅಪ್ಪಾ ಕಥೆ ಹೇಳಿ ಎಂದು ಅವಳು ಯಾವಾಗಲೂ ಕಥೆ ಕೇಳಲು ತನ್ನ ಹತ್ತಿರ ಬರುತ್ತಿದ್ದುದು, ಹಿಂದೊಮ್ಮೆ ಅವಳು ಸಣ್ಣ ಮಗುವಾಗಿರುವಾಗ ಅವಳು ಏನೋ ಒಂದು ಹಠದಿಂದ ಅತ್ತು ಅತ್ತು ಯಾರು ಏನು ಹೇಳಿದರೂ ಸಮಾಧಾನವಾಗದೇ ಇದ್ದಾಗ, ತಾನು ಕಚೇರಿಯಿಂದ ಬಂದು ಎರಡು ಸಲ ಎತ್ತಿ ಆಡಿಸುವಾಗ ಸುಮ್ಮನಾದುದು - ಮುಂತಾದ ಚಿತ್ರಗಳು ವಿದ್ಯುತ್ತಿನ ವೇಗದಿಂದ ಮಿಂಚಿ ಮಾಯವಾದುವು. ಆಗಬಹುದು, ಪ್ರಭುಗಳೇ ಎಂದು ನಮ್ರತೆಯಿಂದ ಬಿನ್ನೈಸಿದರು.

ರಾಜನೇ ಎದ್ದು ದೇವಿಯನ್ನು ಕರೆದು ತರಲು ಒಳಗೆ ಹೋದನು. ಅವಳಾಗಲೇ ಹೊಸ ಉಡುಗೆಗಳಿಂದ ಅಲಂಕೃತಳಾಗಿ ಸುರಕನ್ನೆಯಂತೆ ಶೋಭಿಸುತ್ತಿದ್ದಳು. ಬಡ ಬ್ರಾಹ್ಮಣ ಹುಡುಗಿಯಂತೆ ಜಿಡ್ಡು ಹಿಡಿದ ಹಣೆಯಿಂದಲೂ, ಸಿಕ್ಕಾದ ಹರಡಿದ ಕೂದಲುಗಳಿಂದಲೂ, ಮಾಸಿಮಲಿನವಾದ ಬಟ್ಟೆಯಿಂದಲೂ ಅಳುವಂತಿರಲಿಲ್ಲ. ಕೈಯಲ್ಲಿ ಬೊಂಬೆಗಳೇನು, ಉಡುಪಿನ ಸೌಂದರ್ಯವೇನು, ನೋಟದಲ್ಲಿ ಸಂತೋಷವೇನು! ಎಂತಹ ಬದಲಾವಣೆ ಮೂರು ನಾಲ್ಕು ತಾಸುಗಳಲ್ಲಿ. ಪ್ರಾಂಗಣಕ್ಕೆ ಬೆಳಕೇ ಬಂದಂತೆ ನಗುನಗುತ್ತಾ ದೇವಿಯು ಬಂದಳು. ತಂದೆಯನ್ನು ನೋಡಿ ಅಪ್ಪಾ ನೀವು ಇಲ್ಲಿಯೇ ಇರುತ್ತೀರಾ? ಎಂಥಾ ಚಂದದ ಮನೆ ಇದು. ಎಷ್ಟು ದೊಡ್ಡದು! ನನಗೆ ಆಟವಾಡಲು ಬೇಕಾದಷ್ಟು ಬೊಂಬೆಯಿದೆ, ಒಂದು ದೊಡ್ಡ ಕೋಣೆ ತುಂಬಾ ಬಟ್ಟೆ ನನ್ನದೇ ಆಗಿದೆ. ನೀವೂ, ಅಣ್ಣ, ಅಮ್ಮ ಎಲ್ಲರೂ ಇಲ್ಲಿಗೇ ಬಂದುಬಿಡಬೇಕು ಎಂದಳು. ಮುಂದೆ ಪ್ರಶ್ನೆಯೇ ಉಳಿಯಲಿಲ್ಲ. ಸುಬ್ಬಯ್ಯನವರ ಮುಖ ಮುದುರಿತು. ರಾಜನೇ ಮುಂದುವರಿಸುತ್ತ ಮಗೂ, ನೀನು ಅಪ್ಪಯ್ಯನೊಡನೆ ಹೋಗುತ್ತೀಯಾ? ಅಥವಾ ನಿನ್ನದೇ ಆದ ದೊಡ್ಡ ಮನೆಯಲ್ಲಿ ಇರುತ್ತೀಯಾ? ಎಂದು ಕೇಳಿದನು. ನಾನು ಇಲ್ಲಿಯೇ ಇರುತ್ತೇನೆ. ಅವರೇ ಇಲ್ಲಿಗೆ ಬಂದಿರಲಿ ಎಂದಳು ಹುಡುಗಿ ಮುಗ್ದತೆಯಿಂದ, ಚಪಲತೆಯಿಂದ. ರಾಜನು ಹುಡುಗಿಯನ್ನು ಹಿಂದಕ್ಕೆ ಕಳಿಸಿದನು.

ಕರಣೀಕರೇ ಹುಡುಗಿಯ ಇಷ್ಟ, ನಮ್ಮ ಇಷ್ಟ ಎಲ್ಲ ಹೀಗೆಯೇ ಇವೆ. ನೀವು ಇನ್ನು ವಿಷಯವನ್ನು ಮರೆಯಬೇಕು. ನಿಮ್ಮ ಮಗಳನ್ನು ನಾವು ಅತ್ಯಂತ ವಿಶ್ವಾಸದಿಂದ, ಪ್ರೇಮದಿಂದ ನೋಡಿಕೊಳ್ಳುತ್ತೇವೆ. ನಮಗೆ ಹುಡುಗಿ, ಉತ್ತಮ ಕುಲಸಂಭೂತೆ  ದೊರಕಿದುದು ಹೆಮ್ಮೆಯ ವಿಷಯ. ರಾಜಕುಲದೊಡನೆ ಸಂಬಂಧ ಬೆಳೆಸುವುದು ನಿಮಗೂ ಗೌರವದ ವಿಷಯವಲ್ಲವೇ? ನಿಮ್ಮ ಮನೆಯವರೆಲ್ಲರೂ ಯಾವಾಗ ಬೇಕಾದರೂ ಇಲ್ಲಿಗೆ ಬಂದು ನಿಮ್ಮ ಮುದ್ದು ಮಗಳನ್ನು ಕಂಡು ಮಾತಾಡಿಕೊಂಡು ಹೋಗಬಹುದು, ಆಗಬಹುದಲ್ಲವೇ? ರಾಜನು ಎದ್ದನು. ಕರಣೀಕರು ವಿಷಯವನ್ನರಿತವರು, ತಾನು ಪ್ರತಿಭಟನೆಯನ್ನು ವ್ಯಕ್ತಪಡಿಸಿದರೆ ಆಗುವ ಪರಿಣಾಮವನ್ನು ತಿಳಿದವರು. ಮೌನವಾಗಿಯೇ ರಾಜನಿಗೆ ನಮಸ್ಕಾರ ಮಾಡಿ ಅಲ್ಲಿಂದ ಹೊರಟರು. ಹೊರಟರೋ ಹೊರಡಿಸಲ್ಪಟ್ಟರೋ ಅಂತೂ ಮನೆ ಕಡೆಗೆ ಅರಿವಿಲ್ಲದೇ ನಿದ್ರೆಯಲ್ಲಿ ನಡೆಯುವವರಂತೆ ಸಾಗಿದರು. ಚಾವಡಿಯಲ್ಲಿ ಕಾದು ಕಾದು ಬೇಸತ್ತ ಗೌರಮ್ಮ ಅವರ ಮಗ ಮತ್ತು ಇತರ ಸಂಬಂಧಿಕರು ಯಜಮಾನರು ಹಿಂತಿರುಗಿದುದನ್ನು ನೋಡಿ ನಿಟ್ಟುಸಿರು ಬಿಟ್ಟರು - ಅಷ್ಟು ಹೊತ್ತೂ ಉಸಿರನ್ನು ಹಿದಿದುಕೊಂಡೇ ಇದ್ದರೋ ಎಂಬಂತೆ. ಹೋದ ಉದ್ದೇಶವೇನು, ಪರಿಣಾಮವೇನು ಎಂದು ಗೌರಮ್ಮನವರ ಚಿಂತೆಯಲ್ಲ, ಮಾಂಗಲ್ಯಸೂತ್ರ ಕಡಿಯದೇ ಉಳಿಯಿತಲ್ಲ ಎಂದೇ ಸಂತೋಷ. ಸುಬ್ಬಯ್ಯನವರು ನಿಧಾನವಾಗಿ ಮನದ ದುಗುಡವನ್ನು ಮನೆಯವರ ಮುಂದೆ ಹೊರಗೆಡವಿದರು. ಭಾರವಾದ ಹೊರೆಯನ್ನು ಮೆಲ್ಲನೆ ಕೆಳಗಿಳಿಸುವಂತೆ ರಾಜನು ಆಸೆ ತೋರಿಸಿ, ಬಣ್ಣ ಬಣ್ಣದ ಬೊಂಬೆಗಳನ್ನಿತ್ತು ನಮ್ಮ ಮಗಳನ್ನು ವಶಪಡಿಸಿಕೊಂಡಿರುವನು. ಇನ್ನು ಏನು ಮಾಡುವುದೂ ಸಾಧ್ಯವಿಲ್ಲ ಎಂದು ಮುಕ್ತಾಯಗೊಳಿಸಿದರು. ಆಗಲೇ ಕಂಬನಿಯ ಬಿಂದುವೊಂದು ಅವರರಿವಿಲ್ಲದೇ ಜಗುಳಿತು. ಹಣದ ರಾಶಿಯನ್ನೇ ಲೀಲಾಜಾಲವಾಗಿ ಲೆಕ್ಕಿಸಿ ಅಂಕಿತದಲ್ಲಿಡುವ ಕರಣೀಕರಿಗೆ ಹಸುಳೆಯನ್ನು ತನ್ನೆಡೆಗೆ ಬರುವಂತೆ ಮಾಡಲಾಗಲಿಲ್ಲವಲ್ಲಾ ಎಂದು ತುಂಬ ವ್ಯಥೆಯಾಯಿತು. ರಾಜನು ನಿಮ್ಮ ಮಗಳನ್ನೇ ಬೇಕಾದರೆ ಕೇಳೋಣ ಎಂದು ಮುಂತಾಗಿ ಹೇಳಿದಾಗ ತಾನು ಆಗಬಹುದು ಎಂದದ್ದೇ ಮೋಸವಾಯಿತು. ಮತ್ತೆ ರಾಜನು ಒಳಗೆ ಹೋಗಿ ಹುಡುಗಿಯನ್ನು ಕರೆದುಕೊಂಡು ಬರುವಾಗ ಆಕೆಗೆ ಚೆನ್ನಾಗಿಯೇ ಬೋಧಿಸಿ ಕರೆದು ತಂದಿರಬೇಕು. ಅಥವಾ ತಾನು ಹಿಂದಿನ ದಿವಸ ಏನೋ ಕ್ಷುದ್ರ ಕಾರಣಕ್ಕಾಗಿ ಸಿಟ್ಟಾದುದನ್ನು ನೆನೆದು ಅವಳು ಹಾಗೆ ಹೇಳಿದಳೇ? ಅಂತೂ ಕನ್ನಡಿ ಒಡೆದು ಹೋದದ್ದೇ; ಹಾಲು ಚೆಲ್ಲಿ ಹೋದದ್ದು ಇನ್ನು ದೊರೆಯುವಂತಿಲ್ಲ. ಸಂದರ್ಭ ಕೈ ಮೀರಿತು ಎಂದು ದುಃಖಿಸಿದರು ಕರಣೀಕ ದಂಪತಿಗಳು. ಮಠಾಧಿಕಾರಿ ಕರಣೀಕರು, ಸಿಂಹವಾಣಿಯಿಂದ ಅಧರ್ಮ ಮಾರ್ಗಿಗಳನ್ನು ಶಿಕ್ಷಿಸುವ ಧೀರೋದಾತ್ತ ಕರಣೀಕರು, ರಾಜನ ಮುಂದೆ ತಲೆಬಾಗಬೇಕಾಯಿತು, ಮನಸ್ಸಿಗೆ ಒಪ್ಪಿಗೆಯಿಲ್ಲದಿದ್ದರೂ ರಾಜವಾಣಿಗೆ ತಥಾಸ್ತು ಎನ್ನಬೇಕಾಯಿತು.

ಮುಂದೆ ಅನೇಕ ದಿವಸಗಳು ಸಂದುವು. ಸುಬ್ಬಯ್ಯನವರು ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ರಾಜನ ಹೆದರಿಕೆಗಾಗಿ - ಅವನು ಅನ್ಯಥಾ ಭಾವಿಸಬಾರದಲ್ಲಾ ಎಂಬ ಅಂಜಿಕೆಯಿಂದ - ಮಗಳನ್ನು ನೋಡಿಬರಲು ಒಂದೆರಡು ಸಲ ಅವರೂ ಅವರ ಹೆಂಡತಿಯೂ ಅರಮನೆಗೆ ಹೋಗಿದ್ದರು. ದೇವಿಗೆ ಅಲ್ಲಿ ಯಾವ ಕೊರತೆಯೂ ಇರಲಿಲ್ಲ. ಹೆಸರಿಗನುಗುಣವಾಗಿ ದೇವಿಯಂತೆಯೇ ಅಲ್ಲಿ ಅವಳು ಮೆರೆಯುತ್ತಿದ್ದಳು, ಬೆಳೆಯುತ್ತಿದ್ದಳು. ಕರಣೀಕ ದಂಪತಿಗಳನ್ನು  ರಾಜಕುಟುಂಬದ ಭಾವೀ ಸಂಬಂಧಿಕರನ್ನು, ರಾಜ ಪರಿವಾರದವರು ಬಹಳ ವಿಜೃಂಭಣೆಯಿಂದ, ಮರ್ಯಾದೆಯಿಂದ ಎದುರುಗೊಂದು ಉಪಚರಿಸಿ ಮನ್ನಣೆ ಮಾಡಿ ಕಳುಹಿಸುತ್ತಿದ್ದರು. ಆದರೆ ಭಾರದ ಮನಸ್ಸಿಗೆ ಬಾಹ್ಯೋಪಚಾರಗಳು ಇನ್ನೂ ಭಾರವನ್ನೇ ಹೊರಿಸಿದಂತೆ ಆಗುವುವು. ಬೇಕೆಂದೇ ಗಾಯವನ್ನು ಮಾಡಿ ಮತ್ತೆ ನೋವಾಯಿತೇ ಎಂದು ಉಪಚಾರ ಮಾತು ಆಡಿದರೆ ಹೇಗಾಗಬಹುದು? ನಿರ್ವಾಹವಿಲ್ಲ.

ಸುಬ್ಬಯ್ಯನವರಿಗೆ ಇನ್ನೊಂದು ಯೋಚನೆ ಹೊಳೆಯಿತು. ಅರಮನೆಯಲ್ಲಿ ಜೋಯಿಸರೂ ಪೂಜಾರಿಗಳೂ ರಾಜನಿಗೆ ಪುರೋಹಿತರೂ ಆದ ಗಣಪತಿ ಭಟ್ಟರನ್ನು ಹಿಡಿದು ಪ್ರೇರೇಪಿಸಿದರೆ ಕಾರ್ಯವಾಗಬಹುದು ಎಂದು ಚಿಂತಿಸಿದರು. ಸುಬ್ಬಯ್ಯನವರಿಗೆ ಗಣಪತಿ ಭಟ್ಟರು ನೆಂಟರು ಮತ್ತು ಚಿರಪರಿಚಿತರು. ಭಟ್ಟರಿಗೆ ಕರಣೀಕರಲ್ಲಿ ಭಕ್ತಿ ಗೌರವ ಅಪಾರ - ಇವರು ಹಿರಿಯರು, ಉಚ್ಚ ಉದ್ಯೋಗದಲ್ಲಿರುವವರು, ಅಲ್ಲದೇ ಗುರುಮಠದ ಪ್ರತಿನಿಧಿಗಳು. ಜೋಯಿಸರಿಗೆ ಅರಮನೆಯಲ್ಲಿ ಅಧಿಕ ಪ್ರಭಾವವಿತ್ತು. ಆದ್ದರಿಂದ ದೇವಿಗೆ ಇವರ ಮುಖಾಂತರ ಬಹಳ ಗುಟ್ಟಾಗಿ ಬುದ್ಧಿ ಹೇಳಿಸಿ, ಹಿಂತಿರುಗುವಂತೆ ಪ್ರಯತ್ನಿಸಬಾರದೇ ಎಂದು ಹಂಬಲಿಸಿದರು ಕರಣೀಕರು. ಭಟ್ಟರು ಕೆಲಸವನ್ನು ದಕ್ಷತೆಯಿಂದ ನೆರವೇರಿಸಿದರೆ ಆಗ ತನ್ನ ಮಗಳು ತಂದೆಯಲ್ಲಿಗೇ ಹೋಗಬೇಕೆಂದು ಹಠ ಹಿಡಿದರೆ, ರಾಜನಿಗೆ ಅದನ್ನು ಅಲ್ಲಗಳೆಯುವುದು ಸಾಧ್ಯವಾಗಲಾರದು. ದೇವಿಯು ಹಿಂತಿರುಗಿ ಬರಬಹುದು. ಇದು ಕರಣೀಕರ ತೆಳುಮೋಡದಂತಹ ಆಶಯ. ಹಂಬಲ, ದುಃಖ ಪ್ರಸಂಗಗಳಲ್ಲಿ ಒಂದೇ ಆಶಾಕಿರಣವನ್ನು ಬೃಹದೀಕರಿಸಿ ಸೂರ್ಯರೂಪಕ್ಕೆ ತರುವ ಶಕ್ತಿ ಮನಸ್ಸಿಗಿದೆ. ಸುಬ್ಬಯ್ಯನವರು ಇದು ಹೀಗೇ ಆಗುವುದು ಖಂಡಿತ ಎಂದು ನಂಬಿದರು. ಒಂದೆರಡು ದಿವಸ ತಲೆ ತಿರುಗಿ ಹಾಗಿದ್ದರೂ ಮಗಳು ತಂದೆ ತಾಯಿಯ ಮನೆಗೆ ಬಾರದೆ ಇನ್ನೆಲ್ಲಿ ಉಳಿದಾಳು? ಆದರೆ ಜೋಯಿಸರು ಪ್ರಸ್ತಾಪಕ್ಕೆ ಪ್ರೋತ್ಸಾಹವನ್ನೇ ನೀಡಲಿಲ್ಲ. ಸಿಂಹದ ಬಾಯಿಯಿಂದ ಬಿಡಿಸಿಕೊಂಡು ಬರಬಹುದು, ಕೈಲಾಸ ಪರ್ವತವನ್ನು ಅಲುಗಾಡಿಸಿ ಅದರ ತಳದಿಂದ ನಿಧಿಯ ಕಸಿದುಕೊಂಡು ಬರಬಹುದು, ಘೋರ ಸಮುದ್ರ ಗರ್ಭದಿಂದ ರತ್ನವನ್ನು ಎಳೆದುಕೊಂಡೇ ಬರಬಹುದು. ಆದರೆ ಲಿಂಗರಾಜನೊಡನೆ - ಜ್ವಾಲಾಮುಖಿಯೊಡನೆ - ಸೆಣಸಾಟ ಬೇಡ, ಬೇಡವೆಂದು ಜೋಯಿಸರು ಬಹುವಾಗಿ ಹೇಳಿದರು. ಹಿತವಾಕ್ಯಗಳನ್ನು ನುಡಿದರು. ಎಲ್ಲ ಕಾರಣಗಳೂ ಪ್ರಬಲವೆಂದೇ ಕರಣೀಕರಿಗೆ ಅರಿವಾಗಿದ್ದರೂ ತಮ್ಮ ಊಹೆ, ಕಾರಣ ಇದಕ್ಕಿಂತ ತ್ರಿಗುಣಿತ ಪ್ರಬಲವೆಂದು ದೃಢವಾಗಿ ನಂಬಿದ್ದರು. ಇದೊಂದು ನನ್ನ ದೂರದ ಆಸೆ. ದೇವಿಯು ಅಲ್ಲೇ ಉಳಿದು ಶೂದ್ರ ಕುಲದ ಸಂಬಂಧವಾದರೆ ನಾನು ಉಳಿಯುವಂತೆಯೇ ಇಲ್ಲ. ಜಾಗರೂಕತೆಯಿಂದ ನೀವು ನಡೆಸಿದರೆ ಜಯವು ಖಂಡಿತ. ದೇವಿಯ ಮನೋಗುಣ ನನಗೆ ಗೊತ್ತಿದೆ. ಒಂದು ವೇಳೆ ನೀವು ಉದ್ಯಮದಲ್ಲಿ ಯಶಸ್ವಿಗಳಾಗದೇ ಇದ್ದರೂ ರಾಜನಿಗೆ ವಿಷಯವು ತಿಳಿಯುವುದಿಲ್ಲ. ಕೊನೆಗೆ ಗಣಪತಿ ಭಟ್ಟರು ಕಠಿಣಾಪಾಯ ಸನ್ನಿವೇಶಕ್ಕೆ - ಹಿಮಾಲಯ ಪ್ರಪಾತದಲ್ಲಿ ಕಾಲಿಡಲು - ಒಪ್ಪಿದರು.

ಅರಮನೆಯಲ್ಲಿ ಮರುದಿವಸ ಗಣಪತಿ ಭಟ್ಟರು ದೇವರ ಪೂಜೆಗೆ ಹೋಗುವಾಗ, ಯಾರಿಗೂ ಸಂಶಯ ಬಾರದಂತೆ ದೇವಿಯನ್ನು ಕರೆದುಕೊಂಡು ಹೋದರು. ದೇವರಮನೆಗೆ ಹೋಗುವಾಗ, ಯಾರಿಗೂ ಸಂದೇಹ ಬರಲು ಅವಕಾಶವಿಲ್ಲ. ಅಲ್ಲಿ ಮೈಯೆಲ್ಲ ಕಿವಿಯಾಗಿ, ಕಣ್ಣಾಗಿ ಅತಿ ಜಾಗರೂಕತೆಯಿಂದ ಸುಬ್ಬಯ್ಯನವರು ಹೇಳಿದ ಮಾತನ್ನು ಹೇಳಲು ಹೊರಟು ಹಿಂಜರಿದರು; ನಡುಗಿದರು. ಕಡೆಗೆ ರಾಜನ ಮಗಳೊಬ್ಬಳು ಓಡಿ ಬಂದಳು, ಹೀಗೆ ದಿವಸ ಕಾರ್ಯ ನೆರವೇರಲಿಲ್ಲ. ಆತುರದಿಂದ ಎದುರು ನೋಡುತ್ತಿದ ಕರಣೀಕರಿಗೆ ಭಟ್ಟರು ಅನಿವಾರ್ಯ ಪ್ರಸಂಗವನ್ನು ವಿವರಿಸಿದರು. ಮರುದಿವಸ ಕಾರ್ಯವನ್ನು ನೆರವೇರಿಸುವುದಾಗಿ ಭರವಸೆಯಿತ್ತರು. ಮುಂದಿನ ದಿನ ಹಿಂದಿನ ದಿವಸದಂತೆಯೇ ಸಂದರ್ಭ. ಪುರೋಹಿತರು ಜಾಗರೂಕತೆಯಿಂದ ದೇವಿಗೆ ಬೋಧಿಸಿದರು. ಪೂರ್ಣ ಬೋಧಿಸಿದರೋ ಇಲ್ಲವೋ ಹುಡುಗಿಯ ಪ್ರತಿಕ್ರಿಯೆಯನ್ನು ನೋಡಲು ಸಹ ಸಮಯವಿರಲಿಲ್ಲ. ರಾಜನು ಪೂಜೆಯನ್ನು ನೋಡಲು ಆಕಸ್ಮಿಕವಾಗಿ ಬಂದೇ ಬಿಟ್ಟನು. ಬಂದನೋ ಜೋಯಿಸರಿಗೆ ಯಮನನ್ನೇ ತಂದನೋ! ಗಡಗಡನೆ ನಡುಗಿದರು ಭಟ್ಟರು. ದೇವಿಯು ಲಿಂಗರಾಜನನ್ನು ನೋಡಿಕೊಂಡು ತಾನು ಹೇಳುವುದರ ಅರಿವಿಲ್ಲದೇ, ಬಾಲಿಶ ಸ್ವಭಾವದಿಂದ, ದೊಡ್ಡಪ್ಪಾ, ನಾನು ಹೋಗೋದಿಲ್ಲ ಇಲ್ಲೇ ಇರ್ತೇನೆ ಎಂದಳು. ಶಿವಲಿಂಗವೊಡೆದು ಪ್ರಳಯ ರುದ್ರನು ಅವತರಿಸಿದನೋ ಎಂದು ಎದೆಯೊಡೆದು ಗಣಪತಿ ಭಟ್ಟರು ನಿಂತರು, ಏನು ಮಗಳೇ ಅವರು ಹೇಳಿದ್ದು? ಎಂದು ಲಿಂಗರಾಜನು ಪ್ರಶ್ನಿಸಿದನು. ಹುಡುಗಿ ಸಂದರ್ಭದ ಗಭೀರತೆಯನ್ನು ಅರಿಯದೇ ದೊಡ್ಡಪ್ಪ, ನನ್ನನ್ನು ಅಪ್ಪನ ಮನೆಗೆ ಹೋಗು ಎಂದು ಇವರು ಹೇಳುತ್ತಾರೆ. ನಾನು ಇಲ್ಲಿಯೇ ಇರುತ್ತೇನೆ. ನನಗೆ ಇಲ್ಲಿಯೇ ಇರಲು ಸಂತೋಷ ಎಂದು ಹೇಳಿದಳು. ಗಣಪತಿ ಭಟ್ಟರು ಕುಸಿದು ಕುಕ್ಕರಿಸಿದರು ತಮ್ಮ ಮನಸ್ಸಿನ ಭಾರಕ್ಕೆ. ತಲೆಭಾರವಾದ ಹುಲ್ಲು ಮುಂಡ ಕುಸಿಯುವಂತೆ ಕುಸಿದರು. ಆಗಿನ ಅವರ ಮುಖದ ದೈನ್ಯಭಾವ, ಅಸಹಾಯ ಸ್ಥಿತಿ, ಕಣ್ಣುಗಳಲ್ಲಿ ಕರುಣಾಜನಕ ದುಃಖಸೂಚಕ ಚಿಹ್ನೆಗಳೆಲ್ಲ ರಾಜನ ರೌದ್ರತೆ, ಕ್ರೋಧೋದ್ದೀಪಿತಾಕ್ಷುಗಳಿಗೆ ಬದ್ಧ ವಿರೋಧವಾಗಿದ್ದುವು. ರಾಜನು ಗುಡುಗಿದನು ಓಹೋ ಮೂರ್ಖ ಬ್ರಾಹ್ಮಣಾ! ನೀನು ಕೆಲಸವನ್ನೂ ಮಾಡಲು ಹೊರಟಿರುವೆಯಾ? ನನ್ನ ಅನ್ನ ಉಂಡು ನನ್ನ ವಿರುದ್ಧ ಒಳಸಂಚು. ಕರಣೀಕರಿಗಿಲ್ಲದ ಪರಿವೆ ನೀನಗೇಕಯ್ಯಾ? ನಿನ್ನಂಥ ಅಪಾಯಕಾರಿ ಹಾರುವ ಬದುಕಿರುವುದು ಸಲ್ಲದು. ರಾಜಸೇವಕರು ಅಲ್ಲೇ ಸಿದ್ಧವಾಗಿದ್ದರು. ಜೋಯಿಸರನ್ನು ಆಗಲೇ ತುರಂಗದೆಡೆಗೆ ಒಯ್ಯಲಾಯಿತು. ದೇವಿಯು ಒಳ ಸಾರಿದಳು, ಏನಾಯಿತು, ಏಕೆ ಹಾಗಾಯಿತು ಎಂದು ತಿಳಿಯದೇ. ಹಣತೆಯನ್ನು ಮನೆಯ ಹುಲ್ಲು ಮಾಡಿಗೆ ಹಿಡಿದು ಮುಗ್ದತೆಯಿಂದ ಮಗು ನೋಡುವ ಸ್ಥಿತಿ ಅವಳದಾಯಿತು. ರಾಜನಿಗೆ ಸಂಜೆ ಒಂದು ರುದ್ರಾನಂದದ ದೃಶ್ಯ ಸನ್ನಿಹಿತವಾಯಿತು.

ಸಾಯಂಕಾಲ ರಾಜಾಜ್ಞೆಯನ್ನು ನೆರವೇರಿಸಿಯೇ ಬಿಟ್ಟರು, ಪುರೋಹಿತರು ಎಂದು ಹಿಂಜರಿಯಲಿಲ್ಲ. ರಾಜನ ಕೋಪ, ನೆರೆಯ ನೀರು, ಕಾಳ್ಗಿಚ್ಚು ಇವೆಲ್ಲ ತುಂಬ ಅಪಾಯಕಾರಿಗಳು. ರಾಜಾಸೀಟಿನ ಶಿಖರದಿಂದ ಕೆಳಗಿನ ಪಾತಾಳಕ್ಕೆ ಜೋಯಿಸರನ್ನು ತಳ್ಳಲಾಯಿತು. ಮುದಿ ಬ್ರಾಹ್ಮಣ ಮೊದಲೇ ಜೀವಚ್ಛವದಂತೆ ಆಗಿದ್ದವರು ರಾಜನ ಹೂಂಕಾರದಿಂದಲೇ ಪೂರ್ಣ ಜೀವ ಕಳೆದುಕೊಂಡಿದ್ದರು. ಮತ್ತೆ ಶವಸದೃಶ ದೇಹವನ್ನು ಅಲ್ಲಿದ ನೂಕುವುದೊಂದೇ ರಾಜಭಟರಿಗೆ ಇದ್ದ ಕೆಲಸ. ರಾಜನಿಗೆ ವಿಷಯದಲ್ಲಿ ಯಾರೂ ಏನೂ ಪಿಟ್ ಅನ್ನುವಂತಿರಲಿಲ್ಲ. ಹೇಳಿದವರಿಗೂ ಅದೇ ದುರ್ಗತಿ. ಕರಣೀಕರಿಗೆ ಭಯಂಕರ ಪರಿಣಾಮ ತಿಳಿಯುವಾಗ ಭಟ್ಟರ ಹತ್ಯೆಯಾಗಿ ಹೋಗಿತ್ತು. ಅವರು ದಿವಸ ಮಠದ ಸಂಬಂಧವಾಗಿ ವಿಚಾರಣೆಗಳನ್ನು ಮಾಡಲು, ಹಣ ಕೂಡಿಸಲು ಸಮೀಪದ ಗ್ರಾಮಗಳಿಗೆ ಹೋಗಿದ್ದರು. ಹಿಂತಿರುಗುವಾಗ ಮಡಿಕೇರಿಯ ಜನರೆಲ್ಲರೂ ಸಂಗತಿಯನ್ನೇ ಗುಜುಗುಜು ಮಾತಾಡಿಕೊಳ್ಳುತ್ತಿದ್ದರು. ಅವರಿಗೆಲ್ಲ ಬಗೆಹರಿಯುವ ಸಮಸ್ಯೆಯೆಂದರೆ ಮುದುಕ ಬ್ರಾಹ್ಮಣನು ಏನು ರಾಜದ್ರೋಹವನ್ನು ಬಗೆದಿರಬಹುದೆಂದು. ವಜ್ರಾಘಾತದಂತೆ ವಿಷಯ ಸುಬ್ಬಯ್ಯನವರಿಗೆ ತಿಳಿಯಿತು. ಭೂಮಿ ತನ್ನನ್ನು ಏಕೆ ನುಂಗಲೊಲ್ಲದು, ಆಕಾಶದ ಒಂದು ನಕ್ಷತ್ರ ತನ್ನ ಮೇಲೆ ಕಳಚಿಬಿದ್ದು ಏಕೆ ನಾಶಮಾಡಲೊಲ್ಲದು, ಎಂತಹ ದುರ್ಘಟನೆ ಸಂಭವಿಸಿ ಹೋಯಿತು. ತಾನು ಮಡಿಕೇರಿಯಲ್ಲಿದ್ದಿದ್ದರೆ ರಾಜನ ಬಳಿಗೆ ಹೋಗಿ ಅಡ್ಡ ಬಿದ್ದು ನಿಜ ಸಂಗತಿಯನ್ನುರುಹಿ, ತಾನೇ ಬಲಿಯಾಗಬಹುದಾಗಿತ್ತು. ಈಗ ತನ್ನ ತಪ್ಪಿಗೆ ವೃದ್ಧ ಬ್ರಾಹ್ಮಣನು ಬಲಿಯಾಗುವಂತೆ ಆಯಿತಲ್ಲಾ ಎಂದು ಪರಿಪರಿಯಾಗಿ ಪರಿತಪಿಸಿದರು, ದುಃಖಿಸಿದರು. ಮುಂದೆ ಯಾಂತ್ರಿಕವಾಗಿ ರಾಜಾಸೀಟಿನ ಕಡೆಗೆ ಯಾವ ಉದ್ದೇಶವೂ ಇಲ್ಲದೇ ನಡೆಯಹೊರಟರು. ಆದರೆ ದಾರಿಯಲ್ಲಿಯೇ ಅವರ ಮನೆಯ ಕೆಲಸದಾಳುಗಳು ಅವರ ಬೆನ್ನಟ್ಟಿ ಬಂದಂತೆ ಬಂದು ಮನೆಯ ಕಡೆಗೆ ಎಳೆದುಕೊಂಡು ಹೋದಂತೆ ಹೋದರು. ಸಂದರ್ಭದ ಭೀಕರತೆಯನ್ನೂ ಉದ್ವಿಗ್ನತೆಯನ್ನೂ ಅರಿತ ಗೌರಮ್ಮನವರು ಪತಿದೇವರು ಮನೆಗೆ ಬರುವಾಗ ದುಷ್ಟ ಘಟನೆಯ ವಿಷಯ ತಿಳಿದು ಅನಾಹುತವಾಗಬಾರದಲ್ಲ ಎಂದು ಸೇವಕರನ್ನು ಅವರು ಬರುವ ದಾರಿಯ ಕಡೆಗೆ ಅಟ್ಟಿದ್ದರು. ಸುಬ್ಬಯ್ಯನವರ ಕಠಿಣಾಜ್ಞೆಗಳೆಲ್ಲವನ್ನೂ ಅಲಕ್ಷಿಸಿ ಆಳುಗಳು ಅವರನ್ನ ಮನೆ ಕಡೆಗೆ ಎಳೆದುಕೊಂಡು ಹೋದರು. ಗೌರವಮ್ಮನವರ ದೂರದೃಷ್ಟಿ ಇಲ್ಲದಿದ್ದರೆ ಪರಿಸ್ಥಿತಿ ಬಹುಶಃ ಭೀಕರವಾಗುತ್ತಿತ್ತು, ಅಪಾಯದ್ದಾಗುತ್ತಿತ್ತು.

ಮುಂದೆ ಕರಣೀಕರು ಸುಖವಿಲ್ಲವೆಂದು ಒಂದು ತಿಂಗಳು ರಜೆ ತೆಗೆದುಕೊಂಡು ಪುತ್ತೂರು ಸಮೀಪದ ಅವರ ಆಸ್ತಿಗೆ ಹೋದರು. ರಜೆಯನ್ನು ಕೊಡುವ ಮೊದಲು, ಇವರ ಮಗನನ್ನು ಮಡಿಕೇರಿಯಲ್ಲಿಯೇ ಬಿಟ್ಟುಹೋಗಬೇಕೆಂದು ರಾಜಾಜ್ಞೆಯಾಯಿತು. ಚಾಣಾಕ್ಷ ರಾಜನು ಕರಣೀಕರು ಎಲ್ಲಿಯಾದರೂ ತನ್ನ ರಾಜ್ಯವನ್ನೇ ಬಿಟ್ಟು ಹೋದಾರೋ ಎಂದು ಶಂಕಿಸಿದ್ದನು. ಅವರಂತಹ ಬುದ್ಧಿವಂತರನ್ನೂ ತೀಕ್ಷ್ಣಮತಿಗಳನ್ನೂ ಕಳೆದುಕೊಳ್ಳಲು ರಾಜನಿಗೆ ಇಷ್ಟವಿರಲಿಲ್ಲ. ಸುಬ್ಬಯ್ಯನವರಿಗೆ ಮನಸ್ಸಿನಲ್ಲಿಲ್ಲದ ಶಾಂತಿ ಹೊರಗೆಲ್ಲಿ ದೊರೆಯುವುದು? ಗಿರಿಸಾಲುಗಳು, ಗದ್ದೆ ಬಯಲುಗಳು, ಹೊಳೆ ಕೊಳಗಳು ಇವೆಲ್ಲವುಗಳೂ ನಮ್ಮ ಮನಸ್ಸಿನಲ್ಲಿರುವ ಸಂತೋಷ ಸಂತೃಪ್ತಿಗಳನ್ನು ದ್ವಿಗುಣಿತ ತ್ರಿಗುಣಿತವಾಗಿ ಅನುರಣನೆ ಮಾಡಲು ಶಕ್ತಿಯುಳ್ಳವು. ಮೂಲತಃ ಅತ್ಯಾವಶ್ಯಕವಾದ ಶಾಂತಿ ತೃಪ್ತಿಗಳು ನಮ್ಮೊಳಗೆ ಇಲ್ಲದಿದ್ದಲ್ಲಿ ಇವೆಲ್ಲ ಕೃತಕವಾಗುವುವು. ಹಾಲಿನ ಹೊಳೆ ಹರಿದರೂ ಜೇನಿನ ಮಳೆಗರೆದರೂ ಜಿಹ್ವೇಂದ್ರಿಯವೇ ಇಲ್ಲದವನಿಗೆ ಇವುಗಳಿಂದ ಪ್ರಯೋಜನವೇನು? ಬದಲು ಇವು ಉಸಿರು ಕಟ್ಟಿಸಬಹುದು, ಗದ್ದೆಗಳ ಏರಿಯಲ್ಲಿ ಅಲೆದರೂ ಒಂದೇ ಅಡಿಕೆ ತೋಟದ ತಂಪಿನಲ್ಲಿ ತಿರುಗಿದರೂ ಒಂದೇ. ಬಲ್ಲೇರಿ ಬೆಟ್ಟವನ್ನು ಹತ್ತಿ ಇಳಿದರೂ ಒಂದೇ. ಎಲ್ಲಿಯೂ ಶಾಂತಿಯಿಲ್ಲ. ಹೇಗೆ ಬರಬೇಕು? ಗಣಪತಿ ಭಟ್ಟರು ಶಾಂತಿಯ ಕಲಶವನ್ನೇ ಸೆಳೆದುಕೊಂಡು ಹೋಗಿದ್ದರು. ಜೋಯಿಸರ ಕೊಲೆ ಬೇರೆ ಕಾರಣಗಳಿಂದಾಗಿರಬಹುದೇ ಎಂದು ಕರಣೀಕರಿಗೆ ಒಮ್ಮೊಮ್ಮೆ ಸಂದೇಹ ಮೂಡುತ್ತಿತ್ತು. ದೇವಿಯು ತಪ್ಪನ್ನು ಮಾಡಿರಬಹುದೆಂದು ಅವರಿಗೆ ಊಹಿಸಲು ಸಾಧ್ಯವಾಗಲಿಲ್ಲ.

ಎಂತೆಂತಹ ಭೂಕಂಪನದ, ನೆರೆಯ, ಯುದ್ಧದ ಉದ್ರೇಕ, ಉತ್ಪಾತ, ಸೂರೆಗಳನ್ನು ಮರೆಮಾಡುವ, ಮಾಸಿ ಅದರ ಮೇಲೆ ಹೊಸ ಚಿತ್ರ ಬರೆಯುವ ನಿತ್ಯ ಕುಶಲಿ, ಅನುಪಮ ಕಲಾವಂತ ಕಾಲನ ಪ್ರಭಾವಕ್ಕೆ ಕರಣೀಕರೂ ಹೊರಗಾಗಲಿಲ್ಲ. ದುರ್ಧರ ಪ್ರಸಂಗವೊಂದರ ಉದ್ವಿಗ್ನತೆಯಲ್ಲಿ ಮನಸ್ಸು ಏನನ್ನು ಬೇಕಾದರೂ ತ್ಯಾಗಮಾಡಲು ಸಿದ್ಧವಾಗುವುದು. ಆದರೆ ದಿನವಳಿದಂತೆ ಅಭಿಪ್ರಾಯ ಬದಲಾಗಿ, ಬಹುಶಃ ಅದು ಹಾಗೇ ಆಗಬೇಕಾಗಿದ್ದಿರಬಹುದು, ಬ್ರಹ್ಮಸಂಕಲ್ಪ ಹಾಗಿದ್ದರೆ ನಾವೇನು ಮಾಡಲಾಗುವುದು ಎಂದು ಮುಂತಾಗಿ ರೂಪಾಂತರ ಹೊಂದುವುದು. ರೀತಿಯ ಒಂದು ಪ್ರಕೃತಿ ನಿಯಮಿತ ಭಾವನೆ ಮನುಷ್ಯರಲ್ಲಿಲ್ಲದಿದ್ದರೆ ಯಾರಿಗೂ ಬದುಕುವುದು ಸಾಧ್ಯವಾಗುತ್ತಿರಲಿಲ್ಲ.

ಸುಬ್ಬಯ್ಯನವರು ಒಂದು ತಿಂಗಳ ರಜೆಯನ್ನು ಎರಡು ತಿಂಗಳುಗಳಿಗೆ ಮುಂದುವರಿಸಿ ಅದೂ ಮುಗಿದ ಅನಂತರ ಮಡಿಕೇರಿಗೆ ಹಿಂತಿರುಗಿದರು. ಸಮಾಧಾನವಾಗಿಯೇ ಇದ್ದರು. ನಿತ್ಯಕಾರ್ಯಗಳನ್ನು ಎಂದಿನಂತೆಯೇ ನೆರೆವೇರಿಸಲಾರಂಭಿಸಿದರು. ರಾಜಾಸೀಟಿನ ಕಡೆಗೆ ಮಾತ್ರ ಹೋಗುವ ಧೈರ್ಯಮಾಡಲಿಲ್ಲ. ರಾಜನು ಎಂದಿನಂತೆಯೇ ಮೃದು ಭಾಷಿಯಾಗಿದ್ದನು, ಕಠೋರ ಕ್ರೂರಿಯೂ ಆಗಿದ್ದನು. ಕರಣೀಕರು ಮಾತ್ರ ರಾಜನನ್ನು ಕಂಡಾಗ ವಿಷ ಸರ್ಪದಂತೆ ಹೆದರುತ್ತಿದ್ದರು. ಯಾರೇ ಅಲ್ಲಿದ್ದರೂ ಸ್ಥಾನಕ್ಕೆ ಮನ್ನಣೆ ಸಲ್ಲಬೇಕಷ್ಟೆ!

ಹೀಗೆ ಒಂದು ವರ್ಷವೇ ಕಳೆಯಿತು. ಒಂದು ದಿವಸ ರಾಜನು ತನ್ನ ಪ್ರಮುಖಾಧಿಕಾರಿಗಳ ಸಭೆಯನ್ನು ಕರೆದನು. ಕರಣೀಕರೂ ಅದಕ್ಕೆ ಆಮಂತ್ರಿಸಲ್ಪಟ್ಟಿದ್ದರು. ರಾಜನ ಮುಖದ ಮಂದಹಾಸ ಆಗ ಕೆಲವು ತಿಂಗಳುಗಳಿಂದ ಮಾಯವಾಗಿತ್ತು. ಅದೇ ಹಿಂದಿನ ಒಂದು ತಿಂಗಳಿನಲ್ಲಂತೂ ಅವನು ಹತ್ತು ವರ್ಷ ಪ್ರಾಯವೇರಿದವನಂತೆ ಕಾಣುತ್ತಿದ್ದನು. ರಾಜ್ಯಕ್ಕೆ ಯಾವ ತೊಂದರೆಯಿರಲಿಲ್ಲ. ಶತ್ರುಗಳಿಂದ ಏನೂ ಬಾಧೆಯಿರಲಿಲ್ಲ. ತೋರುವಂತೆ ರಾಜನಿಗೆ ಆರೋಗ್ಯವೂ ಚೆನ್ನಾಗಿತ್ತು, ಇನ್ನೇಕೆ ಹೀಗೆ ಚಿಂತೆ ಎಂದು ರಾಜನನ್ನು ನೋಡಿದವರು ಆಲೋಚಿಸುತ್ತಿದ್ದರು. ಆದ್ದರಿಂದ ಸಭೆಗೆ ಎಲ್ಲರೂ ಏನೋ ವಿಶೇಷ ವಿಷಯವಿರಬೇಕು ಎಂದು ಶಂಕೆ ಕುತೂಹಲಗಳಿಂದ ಹೋದರು. ಇವರ ಊಹೆ ಸರಿಯಾಗಿತ್ತು. ರಾಜನು ಗಂಭೀರವಾಗಿ ಸೂಕ್ಷ್ಮವಾಗಿ ಪ್ರಸಂಗವನ್ನು ವಿವರಿಸಿದನು. ಈಗ ನಾಲ್ಕೈದು ತಿಂಗಳುಗಳಿಂದ ನನಗೆ ಶಾಂತಿಯಿಲ್ಲ, ಊಟಮಾಡುವಾಗ ಅನ್ನವೆಂದು ಬಾಯಿಗೆ ತೆಗೆದರೆ ಅದು ಸೆಗಣಿಯಾಗುವುದು. ಆದರೆ ಬೇರೆಯವರು ಅದು ಅನ್ನವೆಂದೇ ಹೇಳುವರು. ಮನಸ್ಸಿಗೆ ಹಗಲಿನಲ್ಲಿಯೂ ಒಂದು ವಿಧವಾದ ಭಯ, ಯಾರೋ ನನ್ನನ್ನು ಎಳೆಯುವುದು, ಗುದ್ದುವುದು, ಒದೆಯುವುದು ಎಲ್ಲಾ ಮಾಡಿದ ಹಾಗಾಗುವುದು. ರಾತ್ರಿ ಪಲ್ಲಂಗದ ಮೇಲೆ ಪವಡಿಸಿದರೆ ಬೆಳಗಾಗೇಳುವಾಗ ಬಚ್ಚಲ ಮನೆಯಲ್ಲಿ ನೆಲದ ಮೇಲೆ ಬಿದ್ದಿರುತ್ತೇನೆ. ಇನ್ನೂ ತರಹದ ಉದಾಹರಣೆಗಳು ಹಲವಾರು. ಇದರಿಂದ ನನಗೆ ಸಮಾಧಾನ ಶಾಂತಿಯೆಂಬುದೇ ಇಲ್ಲ. ಯಾವುದರಲ್ಲಿಯೂ ಸುಖವಿಲ್ಲ ಎಂದಾಗಿದೆ ಎಂದು ಹೇಳಿದನು. ಕಲ್ಲುರುಟಿ, ಮೋಹಿನಿ, ಪಿಶಾಚಿ ಮುಂತಾದ ದುಷ್ಟ ಶಕ್ತಿಗಳ ಪೀಡನೆಯಿಂದ, ಮಾಟ ಛಿದ್ರಗಳ ದೋಷದಿಂದ ರೀತಿ ಆಗುವುದನ್ನು ಕೇಳಿದ, ಕಂಡ ಕರಣೀಕರು ಮಾಂತ್ರಿಕರನ್ನು ಕರೆಸಿ ವಿಚಾರ ಮಾಡಬೇಕೆಂದು ಸೂಚಿಸಿದರು. ಎಲ್ಲರೂ ಇದನ್ನು ಸರಿಯೆಂದು ಸಮ್ಮತಿಸಿದರು. ಆಗಿಂದಾಗಲೇ ಮಲೆಯಾಳದ ಪ್ರಸಿದ್ಧ ಮಂತ್ರವಾದಿಗಳಾದ ನೀಲೇಶ್ವರ ತಂತ್ರಿಗಳಿಗೆ ಕರೆಹೋಯಿತು. ಅವರು ಬರುವವರೆಗೂ ರಾಜನಿಗೂ ಪ್ರಮುಖರಿಗೂ ತೃಪ್ತಿಯಿಲ್ಲ. ಒಂದು ವಾರದಲ್ಲಿಯೇ ತಂತ್ರಿಗಳ ಆಗಮನವಾಯಿತು. ಅವರು ರಾಜನ ಜಾತಕವನ್ನು ತೆಗೆದುಕೊಂಡು, ಎಲ್ಲಾ ಸ್ಥಿತಿಗಳನ್ನು ಕೂಲಂಕಷವಾಗಿ ವಿಚಾರಮಾಡಿ, ಮಂತ್ರವೆಸಗಿ, ಕವಡೆಗಳನ್ನೆಣಿಸಿ ಒಂದು ನಿರ್ಧಾರಕ್ಕೆ ಬಂದರು. ಮಂತ್ರವಾದಿಗಳ ಮಾತು: ಪ್ರಭುಗಳು ಈಗ ಎರಡು ವರ್ಷಗಳ ಅವಧಿಯಲ್ಲಿ ಒಂದು ಬ್ರಹ್ಮ ಹತ್ಯೆಯನ್ನು ಮಾಡಿಸಿದ್ದಾರೆ. ಬ್ರಾಹ್ಮಣನು ಈಗ ಬ್ರಹ್ಮರಾಕ್ಷಸನಾಗಿದೆದ್ದಾನೆ. ರಾಜನು ಮೌನ, ಪ್ರಮುಖರು ಮೌನ, ಕರಣೀಕರ ದೃಷ್ಟಿ ಚಂಚಲವಾಯಿತು. ತಂತ್ರಿಗಳು ಮುಂದುವರಿಸಿದರು ಇದನ್ನು ಗತಿಗಾಣಿಸದೇ ಬಿಟ್ಟರೆ ತುಂಬ ಹಾನಿಯುಂಟು.
ಹಾಗಾದರೆ ಏನು ಮಾಡಬೇಕು? ರಾಜನ ಮಾತು.
ಬ್ರಹ್ಮ ರಾಕ್ಷಸನಿಗೆ ಸ್ಥಾನವನ್ನು ಕಲ್ಪಿಸಿ ಅಲ್ಲಿ ಅದನ್ನು ಪ್ರತಿಷ್ಠಾಪಿಸಬೇಕು. ಅಲ್ಲಿ ಈಶ್ವರಾರಾಧನೆಯನ್ನು ಮಾಡುತ್ತಾ ರಾಕ್ಷಸನು ಇರುವನು. ಮತ್ತೆ ಪ್ರಭುಗಳಿಗೆ ಉಪದ್ರವವು ತಪ್ಪುವುದು.
ಅದನ್ನು ಮಾಡಿಸುವೆವು. ಅಲ್ಲಿಯವರೆಗೂ ಬ್ರಹ್ಮರಾಕ್ಷಸನ ತೊಂದರೆಯನ್ನು ತಾಳುವುದು ಹೇಗೆ?
ಪ್ರಭುಗಳು ಇಷ್ಟಪಟ್ಟರೆ ಇಂದು ಮಂತ್ರದ ತಾಯಿತ ಕಟ್ಟಿ ತಾತ್ಕಾಲಿಕವಾಗಿ ಬ್ರಹ್ಮರಾಕ್ಷಸನಿಂದ ಉಪದ್ರವವಿಲ್ಲದಂತೆ ಮಾಡಬಹುದು. ಆದರೆ ಇದು ಶಾಶ್ವತವಾದ ರಕ್ಷೆಯಲ್ಲ. ರಾಜನು ಇದಕ್ಕೆ ಸಮ್ಮತಿಯಿತ್ತನು.

ಮುಂದೆ ಒಂದು ವರ್ಷದಲ್ಲಿಯೇ ಗಣಪತಿ ಭಟ್ಟರ ಮನೆಯಿದ್ದ ಸ್ಥಳದಲ್ಲಿ, ತಂತ್ರಿಗಳ ಸೂಚನೆಯಂತೆ ಒಂದು ಸುಂದರ ಭವ್ಯ ಈಶ್ವರ ಮಂದಿರ ನಿರ್ಮೀತವಾಯಿತು. ದೇಶದ ನಾನಾ ಭಾಗಗಳಿಂದ ಉತ್ತಮ ಶಿಲೆಗಳನ್ನು ತರಿಸಿ ದೇವನಿಲಯವನ್ನು ಕಟ್ಟಿದರು. ರಾಜನು ಪ್ರತಿ ದಿವಸ ಸ್ವತಃ ಅಲ್ಲಿಗೆ ಹೋಗಿ ಮೇಲ್ವಿಚಾರಣೆ ನಡೆಸುತ್ತಿದ್ದನು. ಉನ್ನತ ಪ್ರದೇಶದಲ್ಲಿ ಪ್ರಾಕಾರದಿಂದಾವೃತವಾಗಿ, ನಾಲ್ಕು ದಿಕ್ಕುಗಳನ್ನೂ ದಿಟ್ಟಿಸಿ ನೋಡುವಂತಹ ಮುಗಳಿಯಿಂದಲಂಕೃತವಾದ ದೇವಾಲಯ. ಎದುರಿನಲ್ಲಿ ವಿಶಾಲವಾದ ಕೊಳ. ಅದರ ಮಧ್ಯದಲ್ಲಿ ಒಂದು ಮಂಟಪ. ಎಲ್ಲವೂ ಕಲೆಯ ಪ್ರತೀಕಗಳಾಗಿದ್ದುವು. ದೇವಾಲಯದ ಹೊರಗಿನ ಚಾವಡಿ, ಕೆರೆ ಕಟ್ಟೆ ಎಲ್ಲದಕ್ಕೂ ಮುರಕಲ್ಲು ಹಾಸಿದರು. ಶಿವಲಿಂಗವನ್ನು ಕಾಶಿಯಿಂದ ರಾಜನ ಪ್ರತಿನಿಧಿಗಳು ಭಕ್ತಿಯಿಂದ ತಂದರು. ಒಂದು ಶುಭ ದಿವಸದಲ್ಲಿ ಈಶ್ವರ ಲಿಂಗ ಪ್ರತಿಷ್ಠಾಪನೆಯನ್ನು ಅಲ್ಲಿ ಮಾಡಿ, ಶ್ರೀ ಓಂಕಾರೇಶ್ವರನೆಂದು ಅದಕ್ಕೆ ನಾಮಕರಣ ಮಾಡಿದರು. ಸಕಲ ಕಾರ್ಯಗಳೂ ಶಾಸ್ತ್ರೋಕ್ತವಾಗಿ ವೇದಾಗಮಗಳಲ್ಲಿ ನಿರೂಪಿತವಾಗಿರುವಂತೆ ನಡೆದುವು. ಲಿಂಗ ಸ್ಥಾಪನೆಯಾದನಂತರ ಒಂಬತ್ತನೇ ದಿನದಲ್ಲಿ ಬ್ರಹ್ಮರಾಕ್ಷಸನನ್ನು ಅಲ್ಲಿ ಪ್ರತಿಷ್ಠೆ ಮಾಡಿ ದೇವಾಲಯದ ಮುಖ್ಯ ದ್ವಾರದಲ್ಲಿ ನುಗ್ಗುವಾಗ ಎಡಗಡೆಯ ಸ್ಥಾನವನ್ನು ಕೊಟ್ಟರು. ರಾಜನ ಮನಸ್ಸು ಹಗುರವಾಯಿತು. ಶಾಂತಿಯನ್ನು ಹೊಂದಿತು. ದೇವಾಲಯವನ್ನು ವೈಭವದಿಂದ ವಿಜೃಂಭಣೆಯಿಂದ ನಡೆಸಿಕೊಂಡು ಬರಲು ತನ್ನ ಸರಕಾರದಲ್ಲಿಯೇ ಒಂದು ಸಮಿತಿಯನ್ನು ಏರ್ಪಡಿಸಿದನು. ಬ್ರಾಹ್ಮಣ ಸಂತರ್ಪಣೆ, ಅನ್ನದಾನ, ನಿತ್ಯಪೂಜೆ, ಉತ್ಸವಗಳು ಇವೆಲ್ಲ ಯಥಾಯೋಗ್ಯವಾಗಿ ನೆರವೇರಲು ಬೇಕಾದಷ್ಟು ಭೂಮಿ ಗದ್ದೆಗಳನ್ನು ದೇವಾಲಯಕ್ಕೆ ಜಹಗೀರಾಗಿ ಇತ್ತನು. ಪ್ರತಿದಿನವೂ ಮಧ್ಯಾಹ್ನ ರಾತ್ರಿ ಪೂಜೆಯ ಹೊತ್ತಿಗೆ ದೇವಾಲಯಕ್ಕೆ ಹೋಗಿಬರುವುದು ಲಿಂಗರಾಜನ ದೈನಂದಿನ ಕಾರ್ಯಗಳಲ್ಲಿ ಒಂದಾಯಿತು. ಮುಂದಕ್ಕೆ ಬ್ರಹ್ಮರಾಕ್ಷಸನ ಉಪದ್ರವ ರಾಜನಿಗೆ ಇರಲಿಲ್ಲ. ಆದರೆ ಹೆಬ್ಬಾಗಿಲನ್ನು ದಾಟುವಾಗ ಮಾತ್ರ ಅವನಿಗೆ ಮನಸ್ಸು ಪುಕಪುಕ ಎಂದೆನ್ನಿಸುತ್ತಿತ್ತು.

ಒಂದು ದಿವಸ ಅವನು ಪೂಜೆಯ ಹೊತ್ತಿಗೆ ಹೋಗುವಾಗ ಹೆಬ್ಬಾಗಿಲಿನಲ್ಲಿ ಯಾರೋ ಆತನನ್ನು ಹಿಡಿದು ಹಿಂದೆ ತಳ್ಳಿದ ಹಾಗಾಯಿತು. ಹಿಂದೆ ಮುಂದೆ ಯಾರೂ ಕಾಣಲಿಲ್ಲ. ಕೂಡಲೇ ರಾಜನಿಗೆ ಅರಿವಾಯಿತು. ತಾನು ದಿವಸ ಶುಚಿಯಾಗಿ ಬರಲಿಲ್ಲವೆಂದು, ಮೈಲಿಗೆಯಾಗಿತ್ತೆಂದು. ಹಾಗೆಯೇ ಹಿಂತಿರುಗಿದನು. ರಾಜನಿಗೆ ಬಹುಶಃ ರಾಕ್ಷಸ ಮರ್ಯಾದೆ ತೋರಿಸಿರಬೇಕು. ಬೇರೆಯವರನ್ನು, ಸ್ನಾನ ಮಾಡದೇ ಭಕ್ತಿಯಿಲ್ಲದೇ ಹೋಗುವವರನ್ನು, ಬ್ರಹ್ಮರಾಕ್ಷಸನು ಒದೆದು ಹಿಂದಟ್ಟುತ್ತಿದ್ದನು! ಇಂತಹ ಕಾರಣಿಕವುಳ್ಳ ಶ್ರೀ ಓಂಕಾರೇಶ್ವರ ದೇವಾಲಯವು ಪ್ರತಿಯೊಬ್ಬನಲ್ಲಿಯೂ ಭಕ್ತಿಶ್ರದ್ಧೆಯನ್ನೂ ಬೀರುತ್ತ ತನ್ನ ಪ್ರಭಾವವನ್ನು ಪಸರಿಸುತ್ತಿತ್ತು. ಇದರ ದ್ವಾರಪಾಲಕನಂತೆ ನಿತ್ಯಜೀವಂತ ಬ್ರಹ್ಮರಾಕ್ಷಸನಿದ್ದನು. ಶ್ರೀ ಓಂಕಾರೇಶ್ವರನು ಗರ್ಭಗುಡಿಯಿಂದಲೇ ಲೋಕ ಕಲ್ಯಾಣವೆಸಗುತ್ತಿದ್ದನು.

ಇನ್ನುಳಿದಿರುವುದು ಒಂದು ವಿಷಯ. ಮುಂದೆ ಮೂರು ವರ್ಷಗಳು ಉರುಳುವಾಗ ವೃದ್ಧ ಲಿಂಗರಾಜನು ಮಹದೇವಿಯಮ್ಮನಿಗೂ (ದೇವಿಯ ಸಂಪೂರ್ಣ ನಾಮಧೇಯ) ತನ್ನ ಮಗ ವೀರರಾಜನಿಗೂ ವಿಜೃಂಭಣೆಯಿಂದ ವಿವಾಹವನ್ನು ಮಾಡಿದನು. ಕೊಡಗು ದೇಶದ ಜನರೆಲ್ಲಾ ತಿಂದುಂಡು ನವ ರಾಜದಂಪತಿಗಳನ್ನು ಹರಸಿದರು. ಕರಣೀಕರನ್ನೂ ಅವರ ಪತ್ನೀಪುತ್ರರನ್ನೂ ವಿಶೇಷ ಮರ್ಯಾದೆಯಿಂದ ಗೌರವದಿಂದ ಸ್ವಾಗತಿಸಲಾಯಿತು. ಲಿಂಗರಾಜನು ಸ್ವತಃ ಅವರನ್ನು ಮನ್ನಣೆ ಮಾಡಿದ್ದನು. ಕಟ್ಟುಕಟ್ಟಳೆಯನ್ನು ಮೀರಲಾರದವರಾಗಿ, ರಾಜಾಮಂತ್ರಣವನ್ನು ತಿರಸ್ಕರಿಸಲು ಧೈರ್ಯವಿಲ್ಲದವರಾಗಿ ಕರಣೀಕರು ಅಲ್ಲಿಗೆ ಬಂದು ಯಾಂತ್ರಿಕವಾಗಿ ಮದುವೆಯಲ್ಲಿ ಭಾಗಿಗಳಾಗಿದ್ದರು. ಉಚ್ಚಕುಲಸಂಭೂತೆ ತಮ್ಮ ಪುತ್ರಿ ನೀಚಕುಲ ಸಂಬಂಧ ಮಾಡುವುದು ಅವರಿಗೆ ಸರ್ವಥಾ ಮಾನ್ಯವಿರಲಿಲ್ಲ. ಮದುವೆಯ ಮೆರವಣಿಗೆಯು ಮಡಿಕೇರಿಯ ಮುಖ್ಯ ಮಾರ್ಗಗಳಲ್ಲಿ ಹಿಂದೆಂದೂ ಆಗದಷ್ಟು ವೈಭವದಿಂದ ಮೆರೆಯಿತು. ಒಂದು ಚಿಕ್ಕ ಮಾರ್ಗವನ್ನೇ ಇದಕ್ಕಾಗಿ ವಿಶಾಲಪಡಿಸಿ ಅದನ್ನು ತಳಿರುತೋರಣಗಳಿಂದ ಸಿಂಗರಿಸಿದ್ದರು. ಮಾರ್ಗಕ್ಕೆ ರಾಜಪತ್ನಿಯ ಗೌರವಾರ್ಥವಾಗಿ ಮಹದೇವಪೇಟೆ ಎಂದು ಲಿಂಗರಾಜನು ಹೆಸರಿಟ್ಟನು.  

ಮತ್ತೆ ಹದಿನೈದು ವರ್ಷಗಳು ಸಂದುವು. ಅವಧಿಯಲ್ಲಿ ಲಿಂಗರಾಜನು ತೀರಿ ಹೋಗಿ ವೀರರಾಜನು ಕೊಡಗಿನ ಗದ್ದುಗೆಯನ್ನೇರಿದ್ದನು. ಇವನು ಸತ್ಕಾರ್ಯವೊಂದಕ್ಕೂ ಹೆಸರು ಪಡೆದಿರಲಿಲ್ಲ. ಪಿತ್ರಾರ್ಜಿತವಾದ - ರಾಜಕುಲಗಳಿಗೆ ಸಹಜವಾದ - ದುರ್ಗುಣಗಳೂ ಸ್ವಯಾರ್ಜಿತವಾದ ದುಷ್ಟ ಚೇಷ್ಟೆಗಳೂ ಇವನಲ್ಲಿ ಮನೆಮಾಡಿದ್ದುವು. ಲಿಂಗರಾಜನಿಗೆ ಮಗನ ದುರ್ಬುದ್ಧಿಯ ಅರಿವು ಇತ್ತು. ಆದರೆ ಅವನ ಸಕಲ ಪ್ರಯತ್ನಗಳೂ ಮಗನನ್ನು ಹಠವಾದಿಯನ್ನಾಗಿ ಮಾಡಿದ್ದುವು. ತಂದೆಯ ಔದಾರ್ಯ ಧಾರಾಳ ಬುದ್ಧಿ ಯಾವುದೂ ಇವನಲ್ಲಿರಲಿಲ್ಲ. ಅರಸನಾದ ಮೇಲಂತೂ ವೀರರಾಜನು ಸ್ವಚ್ಛಂದ ಮನಃಪ್ರವೃತ್ತಿಯವನಾದನು. ಇವನ ಕ್ರೌರ್ಯ, ನಿರಂಕುಶ ಪ್ರಭುತ್ವ, ವಿಷಯಲಂಪಟತೆ ಇವುಗಳಿಗೆ ಮಿತಿಯೇ ಇರಲಿಲ್ಲ. ಜನರೆಲ್ಲ ನೊಂದರು, ಖತಿಗೊಂಡರು. ಆದರೆ ಎದುರು ನಿಲ್ಲುವ ಧೈರ್ಯ ಯಾರಿಗಿದೆ? ಎಷ್ಟೋ ಜನರು ಕೊಡಗು ದೇಶವನ್ನೇ ಬಿಟ್ಟು ಓಡಿಹೋದರು. ಮಹದೇವಮ್ಮನನ್ನಂತೂ ಅವನು ಕಸದಂತೆ ಕಾಣುತ್ತಿದ್ದನು. ಪಾಪ, ಪುಣ್ಯಾತ್ಮಗಿತ್ತಿ, ಲಿಂಗರಾಜನ ಮುದ್ದಿನ ಸೊಸೆ, ಕರಣೀಕರ ಮಗಳು ಒಂದು ದಿವಸವೂ ಪತಿದೇವನಿಂದ ಒಳ್ಳೆಯ ಮಾತನ್ನು ಕೇಳಲಿಲ್ಲ. ಇವನ ಸಂಗಡಿಗರದು ಬೇರೆಯೇ ಒಂದು ದುಷ್ಟರ ಪಾಳೆಯವೇ ಇತ್ತು. ಗಿಡುಗಗಳ ಮಧ್ಯೆ ಸಿಕ್ಕಿದ ಪಾರಿವಾಳದಂತೆ ಅವಳ ಸ್ಥಿತಿಯಾಯಿತು. ಹೆಣ್ಣು ಜೀವ ಕಸಿವಿಸಿಗೊಂಡಿತು. ನಿತ್ಯದುಃಖಿನಿ ಹತಭಾಗ್ಯೆಯಾದಳು ಮಹದೇವಮ್ಮ. ತನ್ನ ಬಾಲ್ಯದ ನೆನಪು ಕನಸಿನ ಸ್ಮರಣೆಯಂತಿತ್ತು - ಕನ್ನಡಿಯೊಳಗಿನ ಕೊಪ್ಪರಿಗೆಯಂತಿತ್ತು. ಇದನ್ನು ನೆನೆದು ದುಃಖಿಸುತ್ತಿದ್ದಳು. ವೃದ್ಧರಾದ ಕರಣೀಕರು ತಮ್ಮ ರಾಜಾಸ್ಥಾನದ ಕಾರ್ಯವನ್ನು ಎಂದಿನಂತೆ ಆದರೆ ನಿರುತ್ಸಾಹದಿಂದ ಮಾಡಿ ಹೋಗುತ್ತಿದ್ದರು. ಮಗಳ ವೇದನೆಯ ಅರಿವು ಅವರಿಗಿತ್ತು. ಆದರೆ ಅವರು ಏನು ಮಾಡುವುದು? ಲಿಂಗರಾಜನಿರುವಾಗ ಬೇಕಾದಾಗ ಹೋಗಿ ಮಗಳನ್ನು ಕಂಡು ಮಾತಾಡಿ ಬರಬಹುದಿತ್ತು. ಆದರೆ ಈಗ ಮಗಳ ಹೆಸರನ್ನೂ ರಾಜನ ಎದುರು ಹೇಳಿ ಪ್ರಸ್ತಾವಿಸುವ ಧೈರ್ಯವಿರಲ್ಲ. ಹಾರಿ ಹಾರಿ ಬೀಳುತ್ತಿದನು. ಗೊಂಡಾರಣ್ಯದಲ್ಲಿ ಸಿಕ್ಕಿಹೋದ ವೃದ್ಧ ಪ್ರಯಾಣಿಕರಿಬ್ಬರು ಒಬ್ಬರಿಗೊಬ್ಬರು ದಾರಿ ತೋರಿಸುತ್ತಾ ದಿಕ್ಕಿಲ್ಲದೇ ಗುರಿಯಿಲ್ಲದೇ ಅಲೆಯುವಂತೆ ಕರಣೀಕ ದಂಪತಿಗಳ ಸ್ಥಿತಿಯಾಗಿತ್ತು. ನೊಂದ ಕರಣೀಕರ ವೃದ್ಧ ಹೃದಯ, ಅವರ ಮಡದಿಯ ಬೆಂದ ಹೃದಯ ಇವು ಒಂದನ್ನೊಂದು ಸಮಾಧಾನಪಡಿಸುತ್ತಾ ಮಗಳ ದುಃಖವನ್ನು ನೆನೆದು ಪರಿತಪಿಸುತ್ತಾ ಇದ್ದುವು.

ಮುಂದಿನ ಬೇಸಗೆಯ ಅಂತ್ಯದೊಡನೆಯೇ ಕರಣೀಕರ ಆರೋಗ್ಯದ ಕೊನೆಯೂ ಬಂದಿತು. ಒಂದೆರಡು ಮಳೆ ಸುರಿಯುವಾಗಲೇ ಜ್ವರ ಹಿಡಿದು ಅದು ದಿನದಿಂದ ದಿನಕ್ಕೆ ಏರಿತು. ಹೆಂಡತಿ ಮಗ ಸೊಸೆ ಆರೈಕೆ ಮಾಡಿದರು. ನೆಂಟರು ಇಷ್ಟರು ಬಂದು ಬಂದು ನೋಡಿಕೊಂಡು ಹೋದರು. ಒಂದು ರಾತ್ರಿ ಪರಿಸ್ಥಿತಿ ವಿಕೋಪವಾಯಿತು. ಜ್ಞಾನ ಮಾತ್ರ ಅವರಿಗೆ ಸರಿಯಾಗಿತ್ತು. ಅಷ್ಟರವರೆಗೆ ಅವರು ಬಾಯಿಬಿಟ್ಟು ಹೇಳದಿದ್ದ ಒಂದು ಇಚ್ಛೆಯನ್ನು ಆಗ - ಮಗಳನ್ನು ಕಂಡರೆ ಆಗಬಹುದೆಂದು - ವ್ಯಕ್ತಪಡಿಸಿದರು. ಅಯ್ಯೋ, ವಿಷಮ ಸ್ಥಿತಿಯಲ್ಲಿರುವವರ ಕೊನೆಯ ಆಸೆಯನ್ನು ಪೂರೈಸುವುದು ತಮಗೆ ಸಾಧ್ಯವಿಲ್ಲವಲ್ಲ ಎಂದು ದುಃಖಿಸಿದರು ಗೌರಮ್ಮ. ಮಗನು ತಾನು ರಾಜನೊಡನೆ ವಿನಯದಿಂದ ಮರ್ಯಾದೆಯಿಂದ ಮಾತಾಡಿ ನೋಡುವೆನು ಎಂದು ಹೊರಟನು. ಅಷ್ಟರಲ್ಲಿಯೇ ಒಂದು ಅನಿರೀಕ್ಷಿತ ಘಟನೆ ಹಠಾತ್ತಾಗಿ ಸಂಭವಿಸಿತು. ಮನೆಯ ಹಿಂಬಾಗಿಲಿನಿಂದ ಕತ್ತಲೆಯ ಮೊತ್ತವನ್ನು ಸೀಳಿಕೊಂಡು ಬರುವಂತೆ ಬಂದಳು ರಾಜಮಡದಿ, ಕರಣೀಕರ ಹಂಬಲವೇ ರೂಪುವಡೆದು ಬಂದಂತೆ ಬಂದಳು ಮಹದೇವಮ್ಮ, ಸಾದಾ ಹೆಂಗಸಿನಂತೆ ಬಂದಳು. ವರ್ಷಕಾಲದ ಕಾರ್ಮೋಡಗಳೆಡೆಯಿಂದ ಒಮ್ಮೆಗೇ ಚಂದ್ರನು ತೋರಿ ಹಿಮಾಂಶುವನ್ನು ಬೀರುವಂತೆ ಬಂದಳು ಮ್ಲಾನಚಂದ್ರವದನೆ. ಕರಣೀಕರಿಗೆ ತಾನೆಲ್ಲಿರುವೆನೆಂಬ ಅರಿವೇ ಮರೆತು ಹೋಯಿತು. ದಿಗ್ಭ್ರಾಂತರಾಗಿ ದಿಟ್ಟಿಸುತ್ತಾ ಯಾರು ದೇವಿಯೇ, ಯಾರು ನನ್ನ ದೇವಿಯೇ ಬಾಮ್ಮಾ! ಎಂದು ಕೂಗಿದರು. ಎಲ್ಲರಿಗೂ ಆಶ್ಚರ್ಯ, ಕಳವಳ, ಗೌರಮ್ಮನವರು ಬೆರಗಾಗಿ ಅವಳನ್ನೇ ನೋಡಿದರು. ಪಾಪ, ಎಷ್ಟು ಕ್ಷೀಣಿಸಿ ಹೋಗಿದ್ದಾಳೆ, ನೊಂದ ಜೀವ ಎಂದುಕೊಂಡರು ತಾಯಿ ಗೌರಮ್ಮ.
ಹೊತ್ತಿಗೆ ಹೇಗೆ ಬಂದೆಯಮ್ಮಾ? ನಾನು ನಿನ್ನನ್ನೆ ಚಿಂತಿಸುತ್ತಿದ್ದೆ, ಸೌಖ್ಯವೇ?
ಅಪ್ಪಯ್ಯ, ನಾನು ನಿಮ್ಮ ಪಾಲಿಗೆ ಹಳೆಯ ದೇವಿಯೇ. ನಿಮ್ಮ ಅಸ್ವಸ್ಥ ಸ್ಥಿತಿಯು ತಿಳಿಯಿತು. ಆದರೆ ನನಗೆ ಹೊರಗೆ ಹೊರಡುವ ಸ್ವಾತಂತ್ರ್ಯವೇ ಇಲ್ಲ. ಗುಟ್ಟಾಗಿ ಹೊರಟುಬಂದಿದ್ದೇನೆ; ಯಾರಿಗೂ ಹೇಳಬೇಡಿ.
ಅಂತೂ ಬಂದೆಯಾ ಮಗಳೇ, ಬಹಳ ಸಂತೋಷವಾಯಿತಮ್ಮಾ ನಿನ್ನನ್ನು ನೋಡಿ.
ನನಗೆ ಒಂದೊಂದು ಕ್ಷಣವೂ ಒಂದೊಂದು ಯುಗದಂತೆ ಆಗುತ್ತಿದೆ. ಅಗ್ನಿಕುಂಡದ ಮೇಲೆ ನಿಂತಂತಾಗುತ್ತದೆ. ನನಗೆ ಬೇಗ ಹೋಗಬೇಕು. ಅಂದು ಬುದ್ಧಿಯಿಲ್ಲದೆ ಪಂಜರವನ್ನು ಹೊಕ್ಕು ಅರಗಿಳಿಯಂತೆ ಬೆಳೆದೆನು, ಇಂದು ಬೋನಿನಲ್ಲಿರುವ ಸಹಾಯಹೀನ ಸಿಂಹಿಣಿಯಂತಾಗಿದ್ದೇನೆ. ನನಗೆ ಜೀವನವೇ ಬೇಡವೆಂದಾಗುತ್ತದೆ. ನಿಮ್ಮನ್ನು ಪುನಃ ನೋಡುವ ಭಾಗ್ಯ ಉಂಟೋ ಇಲ್ಲವೋ ನನಗೆ! ನಾನು ಹೋಗಿಬರುತ್ತೇನೆ. ನೀವು ಹುಷಾರಾಗಿ!

ಆಕಾಶವು ಪುನಃ ಮೇಘಾವೃತವಾಯಿತು. ಹಿಂಬಾಗಿಲಿನಿಂದಲೇ ಮಗಳು ಹೋದಳು. ಅದೇ ದಾರಿಯನ್ನು ಹಿಂಬಾಲಿಸುತ್ತಾ ಕರಣೀಕರು ರಾಮ ರಾಮ ಎಂದರು. ಮರು ನಿಮಿಷದಲ್ಲಿಯೇ ಅವರ ಆತ್ಮ ಶ್ರೀರಾಮನಲ್ಲಿ ಐಕ್ಯವಾಗಿತ್ತು.

2 comments:

  1. ಈ ಕತೆ ಸತ್ಯದ್ದೋ? ಕಲ್ಪನೆಯೋ? ಯಾವುದಾದರೂ ಆಧಾರಗಳಿವೆಯೆ? ಇದ್ದರೆ ತಿಳಿಸಿ. ಕಾರಣ ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನದ ನಿರ್ಮಾಣದ ಹಿಂದಿನ ಪ್ರಚಲಿತ ಕತೆಗಿಂತ ಇದು ಬಹಳಷ್ಟು ಭಿನ್ನವಿದೆ. ಯಾವುದೇ ಪುಸ್ತಕದಲ್ಲಿಯೂ ದಾಖಲಾದ ಉದಾಹರಣೆಯಿಲ್ಲ. ಪುರಾವೆ ಇರುವುದೇ ಹೌದಾದರೆ ನಿಜಕ್ಕೂ ವಿಶೇಷ ಸೇರ್ಪಡೆ.

    ReplyDelete
  2. This kind of incidences used to happen in olden days. This also used to happen during British Rule. It is recorded that Ramappayya of Sullia Region, brother of Diwan Lakshminaranappayya used to forcibly collect young Girls and used to provide to British Officers for their entertainment. British Have greatly contributed to change the Genes of Kodagu People !! This has been recorded in History. Ramappayya, who was cruel and used to acquire properties of peasants, was eventually killed by Kedambadi Rame Gowda.
    But, British created this kind of stories projecting Haleri Kings as "Cruel" and dethroned Chickka Veera Raja.

    ReplyDelete