(ಸೈಕಲ್ ಅಭಿಯಾನ ೨೦೧೩)
ಜಂಟಿ ಸೈಕಲ್ ಬಳಸುತ್ತ ನಾವು ವರ್ಷವೇನೋ ಕಳೆದೆವು. ಆದರೆ ಒಂಟಿಯಾಗಿ ನನಗೆ ಎರಡೆರಡು ಬಾರಿ ಸೈಕಲ್ ರ್ಯಾಲೀ ಅನುಭವ ಕೊಟ್ಟ ಆರೆಕ್ಸ್ ಲೈಫ್ ಬಳಗದ ವರ್ಷಾವಧಿ ಸೈಕಲ್ ರ್ಯಾಲೀಯಲ್ಲಿ ಭಾಗವಹಿಸಲಾಗದ
ಬೇಸರವುಳಿದೇ ಇತ್ತು. ಅದು ಇಂದು (೨೦೧೩ ಡಿಸೆಂಬರ್ ೮) ತೀರಿತು. ಸುಮಾರು ಒಂದು ಸಾವಿರದ ಒಂಬೈನೂರಕ್ಕಿಂತ ಹೆಚ್ಚಿನ ಸೈಕಲ್ ಸಾಗರದಲ್ಲಿ (ಸೈ-ಸಾಗರ) ಈ ಬಾರಿ ಏಕೈಕ ಜಂಟಿ ಸವಾರರು (ಹಾಗಾಗಿ ಅನಿವಾರ್ಯವಾಗಿ ಗಣ್ಯತೆಯನ್ನೂ ಪಡೆದವರು) ನಾನು ಮತ್ತು ದೇವಕಿ. “ನೋಂದಾವಣೆ ಲೆಕ್ಕಕ್ಕೆ ಸಂ. ೧೪೮೧ ಒಂದೇ ಆದರೂ ತಲೆ ಲೆಕ್ಕಕ್ಕೆ ಎರಡೆಂದೇ ದಾಖಲಿಸಿಕೊಳ್ಳಿ” ಎಂದೇ ಸೇರಿದವರು. ನಾನು ಭಾಗವಹಿಸಿದ ಅವರ ೨೦೧೧ರ ರ್ಯಾಲೀ ಬೆಂಗ್ರೆಯವರೆಗೆ
ಸಾಗಿ, ದೋಣಿಯಾನದ ಹೆಚ್ಚಿನ ಆಕರ್ಷಣೆಯನ್ನು ಒದಗಿಸಿತ್ತು. ಅಂದು (ಮೊದಲ ಬಾರಿ ಸವಾರರ
ಸಂಖ್ಯೆ ಸಾವಿರ ದಾಟಿತ್ತು) ಮೊಗವೀರ ಮಹಾಸಭಾದ
ಸದಸ್ಯರು ಬಹಳ ಚುರುಕಾಗಿಯೇ ದೋಣಿಗಟ್ಟಳೆ ಸೈಕಲ್ ಮತ್ತು ಭಾಗಿಗಳನ್ನು ದಾಟಿಸಿಕೊಟ್ಟಿದ್ದರು. ಅವರ ಸೇವಾಮನೋಭಾವ, ವೃತ್ತಿಪರತೆಗಳ ಬಗ್ಗೆ ಯಾರಿಗೂ ಸಂದೇಹವಿರುವುದು ಸಾಧ್ಯವಿಲ್ಲ. ಆದರೆ ಮಂಗಳೂರಿನ ಈ ವರ್ಷಾವಧಿ ಕಲಾಪದಲ್ಲಿ ಬಹುತೇಕ ಭಾಗಿಗಳು ಎಂಟು
ವರ್ಷದಿಂದ ಹದಿನೈದರ ಒಳಗಿನವರು. ಇವರಲ್ಲಿ (ದೊಡ್ಡವರೂ ಸೇರಿದಂತೆ) ಬಹುದೊಡ್ಡ ಸಂಖ್ಯೆ ಅನ್ಯ ದಿನಗಳಲ್ಲಿ ಸಾರ್ವಜನಿಕ ದಾರಿಗಳಲ್ಲಿ ಸೈಕಲ್ ಬಿಟ್ಟವರಲ್ಲ. ಅವರೆಲ್ಲ ಮುಖ್ಯವಾಗಿ ಸಂಘಟಕರ ಕರೆ “ಈ ರ್ಯಾಲೀ (ಸ್ಪರ್ಧೆಯಲ್ಲ,) ಮನೋಲ್ಲಾಸಕ್ಕಾಗಿ ಒಂದು ಆರೋಗ್ಯಕರ ಸೂಚನೆ” ಎಂಬುದನ್ನು ಮನಸಾರೆ
ಒಪ್ಪಿ ಬರುತ್ತಾರೆ, ದೊಡ್ಡ ಹಬ್ಬದಂತೇ ಆಚರಿಸುತ್ತಾರೆ (ಇಂಧನ ಉಳಿಸಿ, ವಾಯುಮಾಲಿನ್ಯ ತಡೆ, ಹಸುರುಮನೆ ಪರಿಣಾಮ ವಿರೋಧ, ಜಾಗತಿಕ ತಾಪಮಾನ
ನಿಯಂತ್ರಣ ಇತ್ಯಾದಿ ದೊಡ್ಡ ಮಾತುಗಳು ಒತ್ತಟ್ಟಿಗಿರಲಿ, ಬಿಡಿ). ಈ ಸಂಭ್ರಮ ದೋಣಿ ಯಾನದಲ್ಲೇನಾದರೂ ಆಕಸ್ಮಿಕಗಳಿಗೆ ಕಾರಣವಾದರೆ ಎನ್ನುವ
ಭಯ ನನ್ನನ್ನು ಕಾಡಿತ್ತು. ಕಾರಣವೇನೇ ಇರಲಿ, ವರ್ಷದಿಂದ ವರ್ಷಕ್ಕೆ ಏರುತ್ತಲೇ ಬಂದ ಭಾಗಿಗಳ ಸಂಖ್ಯೆಯನ್ನು ಒಂದೇ ಆಯಾಮದಲ್ಲಿ ಸುಧಾರಿಸುವ
ಸಲುವಾಗಿಯಾದರೂ ದೋಣಿಯಾನ ನಿಲ್ಲಿಸಿದ್ದು ಸರಿಯೇ ಆಯ್ತು. ಮತ್ತಿನ ವರ್ಷದಲ್ಲಿ ಎಂಸಿಎಫ್ ಕಾರ್ಖಾನೆಯ ಹಿತ್ತಲಿನ ಹಳ್ಳಿಪರಿಸರದಲ್ಲಿ ದಾರಿಯಲ್ಲೇ ಸುತ್ತಾಡಿ
ಮರಳುವಲ್ಲಿಗೇ ರ್ಯಾಲೀ ದಾರಿಯಿತ್ತು. ಈ ಬಾರಿಯೂ ಹಾಗೇ
ಆಯೋಜಿತವಾಗಿತ್ತು; ದಾರಿ ಮಾತ್ರ ತುಸು ಭಿನ್ನ.
ಲೇಡಿಹಿಲ್ ವೃತ್ತದಿಂದ ಕೂಳೂರು ತಣ್ಣೀರುಬಾವಿ. ಆ ಕೊನೆಯಲ್ಲಿ ಇಂಡಿಯನ್ ಆಯಿಲ್ ಡಿಪೋದತ್ತ ಸಾಗುವ ಕಿನಾರೆ ದಾರಿ, ಮತ್ತೆ ಮಂಗಳೂರಿನತ್ತ ಮುಖ. ಕೊಟ್ಟಾರದ ಕೊನೆಯಲ್ಲಿ ಮಾಲೇಮಾರ್ ವಲಯಕ್ಕೊಂದು ಸುತ್ತು ಹಾಕಿ, ಕುಂಟಿಕಾನಕ್ಕಾಗಿ ಭಾರತ್ ಮಾಲ್ ಅಂಗಳದಲ್ಲಿ ಮುಕ್ತಾಯ. ಚಿಕ್ಕಿ, ಬೆಲ್ಲ, ನೀರು, ಕಿತ್ತಳೆ ಹಣ್ಣು, ಹುರಿಗಡ್ಲೆ, ಖರ್ಜೂರ, ದ್ರಾಕ್ಷೆ, ಕೊಕಾಕೋಲಾವೇ ಮೊದಲಾದವನ್ನು
ಅಲ್ಲಲ್ಲಿ ‘ದಾರಿಖರ್ಚು’ ಅಥವಾ ಉತ್ತೇಜಕಗಳನ್ನಾಗಿ ವಿತರಿಸಿದರು. ಕೊನೆಯಲ್ಲಿ ರುಚಿಕರವಾದ ಮತ್ತು ಭರ್ಜರಿ ಉಪಾಹಾರ - ಬಿರಿಯಾನಿ - ಮೊಸರುಬಜ್ಜಿ, ನೀರುದೋಸೆ - ಗಸಿ, ಜಿಲೇಬಿ, ಕಾಫಿ, ಮೊಸುಂಬಿಯನ್ನೂ ಕೊಟ್ಟರು. ಕೊಕಾಕೋಲಾವೊಂದನ್ನುಳಿದು
ಎಲ್ಲ ತಿನಿಸು, ಪಾನೀಯಗಳೂ ಸಹಜ ಆಹಾರ ಪದ್ಧತಿಗೆ ಒಗ್ಗುವಂಥವೇ ಇತ್ತು. (ಕೊಕಾಕೋಲ ಕಂಪೆನಿ ರ್ಯಾಲಿಯ ಪ್ರಾಯೋಜನೆಯಲ್ಲಿ ಕೈಸೇರಿಸಿದ್ದಿರಬಹುದು, ಅವರ ಪಾನೀಯವನ್ನು ಉಚಿತವಾಗಿ ಒದಗಿಸಿದ್ದೂ ಇರಬಹುದು. ಆದರೆ ವಿಚಾರಶೀಲರು ಇದನ್ನು ಎಂದೂ ಆರೋಗ್ಯಕರ ಆಹಾರ ಪಟ್ಟಿಯಲ್ಲಿ
ಸೇರಿಸಲಾರರು ಎನ್ನುವುದನ್ನು ಮರೆಯಬಾರದು.)
ರ‍್ಯಾಲೀ ಸಂಚಾರದ ದಾರಿಗಳನ್ನು ಇತರ ವಾಹನ ನಿರ್ಬಂಧಿತ ಪ್ರದೇಶ ಮಾಡಿಸಿದ್ದರು. ಆಯಕಟ್ಟಿನ ಕವಲು ಪ್ರದೇಶಗಳಲ್ಲಿ ಮಾರ್ಗಸೂಚಕ ಫಲಕಗಳನ್ನು ಪ್ರದರ್ಶಿಸಿದ್ದರು. ಅಷ್ಟಲ್ಲದೆ ಸೈ-ಸಾಗರದಲ್ಲಿ ಆದಷ್ಟು ಸಣ್ಣ ತುಕಡಿಗಳನ್ನು ಮಾಡಿ, ಕೆಲವು ಮಿನಿಟುಗಳ ಅಂತರ ಕೊಟ್ಟು ಬಿಡುವ ಎಚ್ಚರವನ್ನೂ ವಹಿಸಿದ್ದರು. ಪ್ರತಿ ತುಕಡಿಗೂ ಮುಂದು ಹಿಂದುಗಳಲ್ಲಿ ದಾರಿ ತೋರುವ, ಶುಶ್ರೂಷೆಗೊದಗುವ ಸಿಬ್ಬಂದಿ ಮತ್ತು ವಾಹನಗಳ ವ್ಯವಸ್ಥೆ ಕೊಟ್ಟಿದ್ದರು. ಪ್ರತಿ ಇಳಿಜಾರು, ತಿರುವು, ಹೊಂಡ, ತಿನಿಸುಪಾನೀಯಗಳ
ವಿತರಣಾ ಕೇಂದ್ರಗಳಲ್ಲೆಲ್ಲಾ ಸ್ವಯಂಸೇವಕರ ಉತ್ಸಾಹ, ಉಪಚಾರ ಭಾಗಿಗಳ ಆಯಾಸವನ್ನೂ ಮರೆಸುವಂತಿತ್ತು. ವ್ಯಾವಹಾರಿಕವಾಗಿ ಹೇಳುವುದಿದ್ದರೆ, ಸಂಘಟಕರು ನೋಂದಾವಣೆಗೆಂದು
ಪಡೆದ ತಲಾ ಮೂವತ್ತು ರೂಪಾಯಿಗೆ ಏನೇನೂ ನಷ್ಟವಿಲ್ಲದ ‘ಒಪ್ಪಂದ’ - ಮಂಗಳೂರು ಸೈಕಲ್
ರ್ಯಾಲಿ ೨೦೧೩.
ವರ್ಷ ಬಿಟ್ಟು ಹಿಂದಿನ ರ್ಯಾಲೀಯಿಂದ (ಕ್ಷಮಿಸಿ, ಕಳೆದ ವರ್ಷ ರ್ಯಾಲೀ ನಡೆದಿದೆ, ಮೊದಲೇ ಸೂಚಿಸಿದಂತೆ, ನನಗೆ ಭಾಗವಹಿಸಲಾಗಲಿಲ್ಲ) ಸಂಘಟಕರು ಅನುಷ್ಠಾನದಲ್ಲಿ ತುಂಬ ಸುಧಾರಿಸಿದ್ದು ಕಂಡುಬಂತು. ಸಭಾ ಸಂವಹನಕ್ಕೆ ಮಾತ್ರ ಧ್ವನಿವರ್ಧಕಗಳನ್ನು ಬಳಸಿದ್ದರು. ಉಳಿದಂತೆ ಮಕ್ಕಳ ಕಲರವ, ಸೈಕಲ್ ಕಿಣಿಕಿಣಿ, ಪರಿಸರದ ಸದ್ದುಗಳು
ನಿಜಭಾವ ವಿಕಸನಕ್ಕೆ ಅವಕಾಶ ಕಲ್ಪಿಸಿದವು. (ಎರಡು ವರ್ಷದ ಹಿಂದೆ
ಎರಡು ಜೀಪೇರಿ ಬಂದ ಭಾರೀ ಡೋಲುಗಳೆಬ್ಬಿಸಿದ ಗದ್ದಲವನ್ನು ನಾನು ಸೈಕಲ್ಲುಗಳ ಸ್ವಭಾವಕ್ಕೊಗ್ಗದ ‘ಶಬ್ದಮಾಲಿನ್ಯ’ವೆಂದೇ ಟೀಕಿಸಿದ್ದೆ) ತಿನಿಸು ಪಾನೀಯಗಳ
ಆವರಣಗಳ ಬಳಕೆ ಅನಿವಾರ್ಯವಾದಲ್ಲೂ ಸಂಘಟಕರು ಪರಿಸರಪ್ರೇಮದ ಕಾಳಜಿ ತೋರಿದ್ದರು. (ಉದಾ: ಖರ್ಜೂರೇತ್ಯಾದಿ
ತುಂಬಿಸಿದ ಲಕೋಟೆ, ಕೊಕಾಕೋಲಾ ಕೊಟ್ಟ ಲೋಟಗಳು ಕಾಗದದವು. ಉಪಾಹಾರ ಒದಗಿಸಿದ್ದು ಹಾಳೆ ತಟ್ಟೆಯಲ್ಲಾದರೆ ಕಾಫಿಚಾಗಳನ್ನು ಸ್ಟೀಲ್
ಲೋಟೆಯಲ್ಲೇ ಅಂದರೆ ಮರುಬಳಸುವಂತದ್ದರಲ್ಲೇ ಕೊಟ್ಟಿದ್ದರು!) ಆದರೆ ಭಾಗಿಗಳು...
“ಮತ್ತೆ ಬೇಕಾದರೆ ಕೇಳಿ ತಿನ್ನಿ, ಆದರೆ ತಿನಿಸನ್ನು
ಎಸೆದು ಹಾಳುಮಾಡಬೇಡಿ” ಎಂದು ಉಪಾಹಾರ ಬಡಿಸುವವರು ಕರೆ ಕೊಡುತ್ತಿದ್ದುದನ್ನು ಕೇಳಿ ಸಂತಸಪಟ್ಟೆ. ಅಷ್ಟಾಗಿಯೂ ತಿಂದ ತಟ್ಟೆಗಳನ್ನು ಬಿಟ್ಟಲ್ಲಿ ತಿನಿಸು ಧಾರಾಳ ಚೆಲ್ಲಾಡಿತ್ತು. ವರ್ಷದಿಂದ ವರ್ಷಕ್ಕೆ ಭಾಗಿಗಳು ಹೆಚ್ಚುತ್ತಿರುವಂತೆ ಹೊಸಬರು, ಅದರಲ್ಲೂ ಅರಿವಿಲ್ಲದ ಎಳೆಯರು ಹೆಚ್ಚುವುದು ಸಹಜವೇ. ಆದರೆ ಅವರನ್ನು ವರ್ಷಕ್ಕೊಮ್ಮೆ ಕೇವಲ ಮೂರು ನಾಲ್ಕು ಗಂಟೆಗಳ ಸಾಹಸಾನುಭವಕ್ಕೆ
ಒಳಪಡಿಸುವುದಷ್ಟೇ ರ್ಯಾಲೀ ಸಂಘಟಕರಿಗೆ ಸಿಗುವ ಅವಕಾಶ. ಅದರಲ್ಲಿ ಅವರು
ಶಿಸ್ತುಪಾಠ ಮಾಡುವುದಾಗಲೀ ಶಿಕ್ಷಿಸುವುದಾಗಲೀ ಹೆಚ್ಚಾಗುತ್ತದೆ. (ಬಹುಶಃ ಆ ಕಾರಣಕ್ಕಾಗಿಯೇ ಮತ್ತು ತಂತಮ್ಮ ಎಳೆಯರಿಗೆ ಹೆಚ್ಚಿನದನ್ನು ಕೊಡಬಲ್ಲವರಿಗಾಗಿ, ಇದೇ ಸಂಘಟಕರು ಐದಾರು ವಾರಾಂತ್ಯಗಳ ಸರಣಿಯಲ್ಲಿ ಸೈಕಲ್ ಸಂಯೋಜಿತ
ಪರಿಸರ ಶಿಬಿರಗಳನ್ನೇ ನಡೆಸುತ್ತಾರೆ ಎಂದು ಕೇಳಿದ್ದೇನೆ. ನನಗೆ ಪ್ರತ್ಯಕ್ಷ ದರ್ಶನವಾಗಿಲ್ಲ, ಇವರ ಜಾಲತಾಣದಲ್ಲೂ
ಸವಿವರ ಉಲ್ಲೇಖ ಕಂಡಿಲ್ಲ.) ಹಾಗಾಗಿ ಸೈಕಲ್ ರ್ಯಾಲಿಯ ಹಿನ್ನೆಲೆಯಲ್ಲಿ ಮತ್ತೆ “ಮನೆಯೆ ಮೊದಲ ಪಾಠಶಾಲೆ” ಎನ್ನುವುದನ್ನು ಪೋಷಕರು ನೆನಪಿಸಿಕೊಳ್ಳಬೇಕು. ಸರಕಾರದ ‘ಪ್ರಚಾರ ತಂತ್ರ’ಗಳು (ಹಣವಿನಿಯೋಗ ಮುಖ್ಯ, ಲಕ್ಷ್ಯ ಸಾಧನೆಯಲ್ಲ), ಶಿಕ್ಷಣ ಸಂಸ್ಥೆಗಳು
ಕಡ್ಡಾಯವಾಗಿ ನಡೆಸುವ ಉತ್ಸವಗಳು (ಪರಿಸರದಿನ, ವನ್ಯಸಪ್ತಾಹ, ಭೂಮಿ ದಿನ, ವನಮಹೋತ್ಸವ, ನೀರುಳಿಸಿ ಇತ್ಯಾದಿ) ನಿಜ ಪ್ರೇರಣೆ ನೀಡುವುದಕ್ಕಿಂತ ‘ಹರಕೆ’ ಸಂದಾಯವಾಗುವುದೇ ಹೆಚ್ಚು. ಹಿಂದಿನ ರ್ಯಾಲೀಗಳಲ್ಲಿ ಸಂಘಟಕರು ಪರಿಸರ ಶುದ್ಧಿಗಾಗಿ ವಿಶೇಷ ಕಂಠಶೋಷಣೆ ಮಾಡುವುದನ್ನು ಕೇಳಿದ್ದೆ. ಕೊನೆಯಲ್ಲಿ ‘ಕಸ’ವನ್ನು ಸಿಕ್ಕಲ್ಲಿ ಎಸೆಯದೆ ಉಳಿಸಿ ತಂದವರಿಗೆ ಪ್ರೋತ್ಸಾಹಕ ಬಹುಮಾನ
ಕೊಟ್ಟು ಎಲ್ಲರಿಗೆ ಪ್ರೇರಣೆ ಕೊಡಲು ಪ್ರಯತ್ನಿಸಿದ್ದನ್ನೂ ಕಂಡಿದ್ದೆ. ಆದರೆ ಫಲಿತಾಂಶ ಅವರಿಗೆ ತೀವ್ರ ನಿರಾಶೆಯನ್ನೇ ಉಂಟುಮಾಡಿರಬೇಕು. ಬಹುಶಃ ಅದಕ್ಕೆ ಈ ಬಾರಿ ನೋಂದಾವಣೆಯೊಡನೆ ಕೊಡುತ್ತಿದ್ದ ಸೂಚನಾ
ಪತ್ರದಲ್ಲಿನ ಒಂದೆರಡು ವಾಕ್ಯಗಳನ್ನು ಬಿಟ್ಟರೆ ಉಳಿದಂತೆ ಅವರು ‘ಉಪದೇಶ ಬಿಟ್ಟ’ ಹಾಗಿದ್ದರು. ಬಹುತೇಕ ಭಾಗಿಗಳು ಕಿತ್ತಳೆಸಿಪ್ಪೆ, ಲಕೋಟೆ, ಲೋಟಗಳೆಲ್ಲವನ್ನೂ
ಬಳಸಿದಲ್ಲೇ ರಾಣಾರಂಪವಾಗಿ ಎಸೆದು ನಡೆದಿದ್ದರು. ಮೆಡಿಮಿಕ್ಸ್ನವರ ಉಚಿತ ಬೀಸಣಿಗೆ
ಹಂಚಿದ್ದರು. ಅವು ‘ಕೈ’ಮುರಿದುಕೊಂಡು ಕೊನೆಯ ಸಭಾಕಲಾಪದ ವೇಳೆ ಆಟಿಕೆಯಾಗಿ ಆಕಾಶಕ್ಕೇರುತ್ತಿದ್ದದ್ದು
ನೋಟಕರಿಗೆ ಮೋಜನ್ನೇನೋ ಉಂಟು ಮಾಡಿತು. ಆದರೆ ವಿಲೇವಾರಿ
ಮಾಡುವ ಕಸದ ಮೊತ್ತಕ್ಕೆ ಅನಾವಶ್ಯಕ ಸೇರಿಯೂ ಹೋಯ್ತು! ಇಷ್ಟಾದರೂ ಅದೇ ಸಂಜೆ ನಾನು ಆ ಎಲ್ಲ ವಿತರಣಾ ಕೇಂದ್ರಗಳನ್ನು ಅನ್ಯ ಕಾರ್ಯಾರ್ಥ ಸಂದರ್ಶಿಸಿದಾಗ
ಕಸ, ಕೊಳೆಯ ಲೇಶವಿಲ್ಲದಂತೆ ಚೊಕ್ಕವಾಗಿದ್ದದ್ದು ಕಂಡು ಬೆರಗಾದೆ! ತಮ್ಮ ಕಲಾಪದ ಅವಧಿಯ ‘ಕಸ’ಕ್ಕೆ ತಾವೇ ಜವಾಬ್ದಾರಿ ಹೊತ್ತು ವಿಲೇವಾರಿ ನಡೆಸಿದ ‘ಆರೆಕ್ಸ್ ಲೈಫ್’ ಕೇವಲ ತನ್ನ ವೃತ್ತಿಯ
ಆರ್ಥಿಕ ಯಶಸ್ಸು ಅಥವಾ ಪ್ರಚಾರವನ್ನಷ್ಟೇ ಲಕ್ಷಿಸಿದ್ದಲ್ಲ. ಒಟ್ಟು ಸಮಾಜದ ಬಾಧ್ಯತೆಯೂ ತನಗಿದೆ ಎಂಬುದನ್ನು ಪ್ರಮಾಣಿಸಿದ್ದಕ್ಕೆ, ಅವರಿಗೆ ದೊಡ್ಡ ಅಭಿನಂದನೆ!
ಜಂಟಿ ಸೈಕಲ್ಲಿನ ಸಮಸ್ಯೆ: ಮೊದಲೇ ಹೇಳಿದಂತೆ
ಜ್ಯೋತಿ ಸೈಕಲ್ಲಿನವರು ನಮಗೊಂದು ಜಂಟಿ ಸೈಕಲ್ ತರಿಸಿಕೊಡುವಲ್ಲಿ ಎರಡನ್ನು ತರಿಸುವ ಅನಿವಾರ್ಯತೆಯನ್ನು
ಒಪ್ಪಿಕೊಂಡಿದ್ದರು; ಸೈಕಲ್ಲೂ ಬಂದಿತ್ತು. ಕಾಲಾಂತರದಲ್ಲಿ ಅದು ಮಂಗಳೂರಿನೊಳಗೇ ಇನ್ಯಾರಿಗೋ ಮಾರಿಹೋಗಿತ್ತು. ಆದರೆ ನಮ್ಮೆಲ್ಲರ ನಿರೀಕ್ಷೆ ಹುಸಿಮಾಡಿ ಆ ಇನ್ನೊಂದು ಜೋಡಿ ಈ ರ್ಯಾಲಿಗೆ ಬರಲೇ
ಇಲ್ಲ. ಅವರ ಹಿನ್ನೆಲೆ, ಸಂಪರ್ಕ ಸುಳುಹುಗಳು ನನಗಿಲ್ಲ. ನಾವಾದರೋ ಸುಮಾರು
ಒಂದೂವರೆ ವರ್ಷದಿಂದ ಮಂಗಳೂರಿನೊಳಗೆ ಜಂಟಿ ಸೈಕಲ್ ಸವಾರಿ ನಡೆಸಿ ಸಾಕಷ್ಟು ಪಳಗಿದ್ದೆವು. (ಅದೊಂದು ದಿನ ಪಿಂಟೋ ಓಣಿಯ ಏರನ್ನು ನಾವು ದಮ್ಮು ಕಟ್ಟಿ ಸೈಕಲ್ಲಿನಲ್ಲಿ
ಏರಿಸುತ್ತಿರುವಾಗ ಬಿಜಾಪುರಿ ಸಂಸಾರವೊಂದು ಪಕ್ಕದಲ್ಲಿ ನಡೆಯುತ್ತಿತ್ತು. ಆತ ಅಳುತ್ತಿದ್ದ ತಮ್ಮ ಮಗುವನ್ನು ಸಮಾಧಾನಿಸುವ ಭರದಲ್ಲಿ “ನೋಡೋ ಎಂಗ್ ಸೈಕಲ್ ಮ್ಯಾಲೇ ಒದ್ಲ್ಯಾಡ್ತಾರೇ” ಎಂದದ್ದು ತುಂಬ
ಪ್ರಾಮಾಣಿಕ ವಿಮರ್ಶೆಯೇ ಸರಿ!) ನನ್ನ ಊಹೆಯಲ್ಲಿ ಆ ಇನ್ನೊಂದು ಜಂಟಿ ಸೈಕಲ್ ಜೋಡಿಗೆ ರಸ್ತೆಗಿಳಿದಾಗ
ವಾಸ್ತವದ ಕಾಠಿಣ್ಯ ಕಾಡಿರಬೇಕು; ಸೈಕಲ್ ಅವರ ಮನೆಯ
ಅಲಂಕಾರವನ್ನು ಹೆಚ್ಚಿಸಿಕೊಂಡು ಬಣ್ಣಮಾಸದೆ, ನೆಗ್ಗದೆ ಉಳಿದಿರಬೇಕು!
ರ‍್ಯಾಲೀ ಕೊನೆಯಲ್ಲಿ ನಾನು ಉಪಾಹಾರ ತೆಗೆದುಕೊಳ್ಳುತ್ತಿದ್ದಾಗ ಜ್ಯೋತಿ ಸೈಕಲ್ಸಿನ ಓರ್ವ ಪಾಲುದಾರರು
ನಮ್ಮ ಜಂಟಿ ಸೈಕಲ್ ತಯಾರಕ ಸಂಸ್ಥೆಯ (ಟಿ.ಐ. ಸೈಕಲ್ಸ್ ಅಥವಾ
ಬಿ.ಎಸ್.ಎ) ವತಿಯಿಂದ ಚೆನ್ನೈಯಿಂದ ಬಂದಿದ್ದ ಇಬ್ಬರು ಹಿರಿಯ ಪ್ರತಿನಿಧಿಗಳನ್ನು
ಪರಿಚಯಿಸಿಕೊಟ್ಟರು. ನಾವು ಜಂಟಿ ಸೈಕಲ್ ಕೊಂಡಾಗಿನಿಂದ ಅನುಭವಿಸುತ್ತಿರುವ ಯಾಂತ್ರಿಕ
ಸಮಸ್ಯೆಗಳನ್ನು (ಹಿಂದೆಯೇ ಕಂಪೆನಿಗೆ ಪತ್ರವನ್ನೂ ಹಾಕಿದ್ದನ್ನು ನೆನಪಿಸುತ್ತ) ಪ್ರಸ್ತಾವಿಸಿದೆ. ಅವರಲ್ಲಿ ಗಣೇಶ್ ಎನ್ನುವವರು, ಆ ಕುರಿತು ನನ್ನಲ್ಲಿ
ದೂರವಾಣಿಯಲ್ಲಿ ಸಂಭಾಷಿಸಿದವನು ತಾನೇ ಎಂದೂ ಹೇಳಿಕೊಂಡರು. ನಾನು ಕೂಡಲೇ ಸೈಕಲ್ಲಿನ ಕುರಿತ ನನ್ನ ಸಮಸ್ಯೆಗಳನ್ನು ವಿವರಿಸಿದೆ.
ಜಂಟಿ ಸೈಕಲ್ ಎರಡು ಪೆಡಲಿಗರ ಸೌಕರ್ಯಕ್ಕಾಗಿ ಹೆಚ್ಚಿನುದ್ದವೇನೋ ಇದೆ, ಆದರೆ ಹಾಗೆ ಹೆಚ್ಚಿದ ನೂಕುಬಲವನ್ನು ಸದುಪಯೋಗಪಡಿಸುವಂತೆ ಇತರ ವಿನ್ಯಾಸಗಳಲ್ಲಿ
ನಾವು ಅನುಭವಿಸುತ್ತಿರುವಂತೆ ಮೂರು ತೀವ್ರ ಕೊರತೆಗಳಿವೆ. ಸಾಮಾನ್ಯ ಸೈಕಲ್ಲುಗಳಿಗಿಂತ ಇದು ಒಂದು ಇಂಚು ತಗ್ಗು. ಎರಡು ಚಕ್ರಗಳ ನಡುವಣ ಅಂತರ ಹೆಚ್ಚು. ಸಹಜವಾಗಿ ನಮ್ಮ
ದಾರಿಗಳಲ್ಲಿನ ವೇಗತಡೆ ದಿಬ್ಬಗಳನ್ನು ದಾಟುವಲ್ಲಿ ಸೈಕಲ್ಲಿನ ನಾವು ತುಳಿಯುವಲ್ಲಿರುವ ಹಲ್ಲಿನ ಚಕ್ರಗಳು (ಕ್ರ್ಯಾಂಕ್ ವೀಲ್) ನೆಲ ಉಜ್ಜುವ ಅಪಾಯವಿರುತ್ತದೆ. ಅಂಥಲ್ಲೇನು ತುಸು
ಎಡ ಅಥವಾ ಬಲ ತಿರುವುಗಳಲ್ಲಿ ಸೈಕಲ್ ವಾಲಿದರೂ ಪೆಡಲನ್ನು ಸಹಜ ಪೂರ್ಣಸುತ್ತು ತುಳಿಯುವುದು ಅಸಾಧ್ಯವೇ
ಆಗಿಬಿಡುತ್ತದೆ. ತುಸು ಎತ್ತರಿಸಿದ ಎದುರು ಸೀಟಿನಲ್ಲಿ ಕುಳಿತ ನಾನು ಹಿಂದಿನ ದೇವಕಿಯ
ದಾರಿನೋಟಕ್ಕೆ ಸದಾ ಅಡ್ಡಿಯಾಗಿಯೇ ಇರುತ್ತೇನೆ. ಹಾಗಾಗಿ ಪ್ರತಿ
ದಿಬ್ಬ, ತೀವ್ರ ತಿರುವು, ಮಣ್ಣದಾರಿಗಳಲ್ಲಿ ಹಾದುಹೋಗುವಾಗ ಮೊಳಕೆ ಎದ್ದ ಕಲ್ಲುಗಳ ಬಗ್ಗೆ ದೇವಕಿಗೆ ಮುನ್ನೆಚ್ಚರಿಕೆ
ಕೊಡುತ್ತಲೇ ಇರಬೇಕು. ಅದು ಮರೆತಾಗ ಎಷ್ಟೋ ಬಾರಿ ಪೆಡಲ್, ನಮ್ಮ ಪಾದರಕ್ಷೆಯ ತಳ ನೆಲ ಉಜ್ಜಿದ್ದು ಇದೆ. ಅಂಥ ಪ್ರತಿಸಲವೂ “ಅದೃಷ್ಟಕ್ಕೆ ಪಾದ ಸಮತಳದಲ್ಲಿತ್ತು” ಎಂದುಕೊಂಡದ್ದಾಗಿದೆ. ಎಂದಾದರೂ ಏರು ದಾರಿಯಲ್ಲಿ ಸಿಗುವ ವೇಗತಡೆಯ ದಿಬ್ಬ ಹತ್ತಿಸುವ ಉಮೇದಿನಲ್ಲಿ
ಪಾದ ಮುಂದೆ ಬಾಗಿದ್ದೇ ಆದರೆ ರಸ್ತೆ ಮತ್ತು ಪೆಡಲುಗಳ ನಡುವೆ ಬೆರಳು, ಪಾದ ಸಿಕ್ಕಿ ತೀವ್ರ ಜಖಂಗೊಳ್ಳುವುದು ಖಾತ್ರಿ.
ಭಾರದ ಲೆಕ್ಕದಲ್ಲಿ ಸಾಮಾನ್ಯ ಸೈಕಲ್ಗಿಂತ ಜಂಟಿ ಸೈಕಲ್ ವಿಶೇಷ ಹೆಚ್ಚಿನದ್ದೇನೂ ಅಲ್ಲ. ಇಳಿದು ನೂಕುವುದಿದ್ದರೆ ಎಂಥ ತೀವ್ರ ಚಡಾವಿನಲ್ಲೂ ದೇವಕಿಯೊಬ್ಬಳೇ
ಸುಧಾರಿಸುತ್ತಾಳೆ. ಅನಿವಾರ್ಯ ಸಂದರ್ಭಗಳಲ್ಲಿ ಎಷ್ಟೋ ಮಾರ್ಗವಿಭಾಜಕಗಳಲ್ಲಿ ಇದನ್ನು
ನಾನೊಬ್ಬನೇ ಸುಲಭವಾಗಿ ಎತ್ತಿ ದಾಟಿಸುವುದೂ ಇದೆ. ಅದೇ ನೂಕುಬಲ ಅಥವಾ ಪೆಡಲ್ ಶಕ್ತಿಯಲ್ಲಿ ಜಂಟಿ ಸೈಕಲ್ ಸ್ಪಷ್ಟ ಎರಡು ಪಟ್ಟು ಹೆಚ್ಚಿನದ್ದಾಗಬೇಕಿತ್ತು. ಅಂದರೆ ಸಾಮಾನ್ಯ ಸೈಕಲಿಗೆ ಸವಾರಿ ಅಸಾಧ್ಯವಾದ ಏರೂ ಇದಕ್ಕೆ ಸುಲಭಸಾಧ್ಯವಾಗಬೇಕಿತ್ತು. ಆದರೆ ವಾಸ್ತವದಲ್ಲಿ ಸಣ್ಣ ಏರೂ ನಮಗೆ ದಮ್ಮು ಕಟ್ಟುವ ಸವಾಲೇ ಆಗುತ್ತಿದೆ. ಕ್ರ್ಯಾಂಕ್ ವೀಲ್ ಸಣ್ಣ ಮತ್ತು ಸಾಮಾನ್ಯ ಫ್ರೀ ವೀಲ್ ಮಾತ್ರ ಇರುವುದರಿಂದ
ನಮ್ಮ ಶಕ್ತಿಯ ದುರ್ವ್ಯಯ ಮಾತ್ರ ಆಗುತ್ತಿದೆ. ಇದನ್ನು ಸಾಮಾನ್ಯ
ಸೈಕಲ್ಲಿನ ಎತ್ತರಕ್ಕೂ ಪೆಡಲ್ ಶಕ್ತಿಗೂ ಪದೋನ್ನತಿ ಮಾಡಿ ಕೊಡಿ. ವೇಗ ಮತು ಬಲೋತ್ಕರ್ಷಗಳಿಗೆ ಸಹಕಾರಿಯಾದ ಗೇರುಗಳನ್ನು ಅಳವಡಿಸಿ ಕೊಡಿ. ಖರ್ಚು ನಾವು ಭರಿಸುತ್ತೇವೆ ಎಂದೇ ತಯಾರಕರನ್ನು ಬರವಣಿಗೆಯಲ್ಲಿ
ಕೋರಿದ್ದೆ.
ಪಶ್ಚಿಮ ಘಟ್ಟದ ಸೆರಗಿನಲ್ಲೇ ಇರುವ ನಮ್ಮೂರಿನ ವಿಪರೀತ ಏರುಗಳು ಜಂಟಿ ಸೈಕಲ್ಲಿಗೆ ಹಗುರವಾಗಬೇಕಿತ್ತು
ಎನ್ನುವಂತೇ ಇಳಿಜಾರುಗಳು ನಿರಪಾಯಕಾರಿಗಳಾಗಬೇಕಿತ್ತು. ಇದಕ್ಕೆ ತೀರಾ ಅವಶ್ಯವಾದ ಭದ್ರ ಬಿರಿ ಅಥವಾ ಬ್ರೇಕ್ ಬಿ.ಎಸ್.ಎ ಕೊಟ್ಟಿಲ್ಲ. ಮೋಟಾರ್ ವಾಹನಗಳಲ್ಲಿ ಜವಾಬ್ದಾರಿಯುತ ಚಾಲನೆಯ ಪಾಠ ಹೇಳುವಾಗ ‘ಏರಿದ ಗೇರಿನಲ್ಲೇ
ಇಳಿಸಬೇಕು’ ಎನ್ನುವ ಮಾತು ಕೇಳುತ್ತೇವೆ. ನಮ್ಮ ಜಂಟಿ ಸೈಕಲ್ಲಿನಲ್ಲಿ ನಾವು ಇದನ್ನು ಹೆದರಿಕೆಯಲ್ಲಿ ಅಕ್ಷರಶಃ ಪಾಲಿಸುತ್ತಲೇ ಇದ್ದೇವೆ. ಕಾರಣ ಇದರ ತೀರಾ ಅಸ್ಥಿರ ಮತ್ತು ದುರ್ಬಲ ಬಿರಿ ವ್ಯವಸ್ಥೆ. ನಾವು ಪೆಡಲ್ ಮೆಟ್ಟಿ ಏರಿಸಲಾಗದ ಏರುಗಳನ್ನು ವಾಪಾಸಾಗುವಾಗ ಇಳಿಸುವಲ್ಲೂ
ಕುಳಿತು ನಿಯಂತ್ರಿಸಲಾಗದ ಸ್ಥಿತಿ ಈ ಸೈಕಲ್ಲಿನದ್ದು. ಸೈಕಲ್ ಉದ್ದವಾದ್ದರಿಂದ ಸಹಜವಾಗಿ ಬಹು ದೀರ್ಘ ಸರಿಗೆ ಬಿರಿಯೇನೋ ಇದೆ. ಆದರೆ ಇದು ಸೈಕಲ್ ಲೆಕ್ಕದಲ್ಲಿ ತುಸು ಹಗುರ ಮತ್ತು ಒಬ್ಬ ಸವಾರನ ಭಾರವನ್ನಷ್ಟೇ
ಹಿಡಿದಿಡಬಲ್ಲ ಸಾಮಾನ್ಯ ಸೈಕಲ್ಲಿನ ಬಿರಿಗಿಂತ ದುರ್ಬಲವೇ ಆಗಿದೆ! ಜ್ಯೋತಿ ಸೈಕಲ್ ಕಂಪೆನಿಯವರ ಸಲಹೆ ಮೇರೆಗೆ ನಾನು ತುಸು ಬೇರೊಂದು ವ್ಯವಸ್ಥೆಯನ್ನು (ದುಡ್ಡುಕೊಟ್ಟು) ಅಳವಡಿಸಿಕೊಂಡೆವಾದರೂ ಪ್ರಯೋಜನದಲ್ಲಿ ಉತ್ತಮಿಕೆಯಾಗಿಲ್ಲ. ಹೊಸಬರು ಯಾರೇ ನಮ್ಮಲ್ಲಿ ಜಂಟಿ ಸೈಕಲ್ ಸವಾರಿಯ ಅನುಭವ ಬಯಸಿ ಬಂದಾಗ ನಾವು ತಗ್ಗು ಚಕ್ರ, ಸೈಕಲ್ಲಿನ ಉದ್ದ, ಸಮತೋಲನದ ಕಷ್ಟಗಳನ್ನೇನೂ ವಿವರಿಸಲು ಹೋಗುವುದಿಲ್ಲ. ಆದರೆ “ಬ್ರೇಕ್ ಸಾಕಾಗೋದಿಲ್ಲ ಎಚ್ಚರಿಕೆ! ಎಚ್ಚರಿಕೆ!!” ಹೇಳುವುದನ್ನು
ಮಾತ್ರ ಮರೆಯುವುದು ಸಾಧ್ಯವೇ ಇಲ್ಲ.
ಕಂಪೆನಿಯ ಪ್ರತಿನಿಧಿ ಮುಖ ದಾಕ್ಷಿಣ್ಯಕ್ಕೆ ಜಂಟಿ ಸೈಕಲ್ಲುಗಳಿಗೆ ಬೇಡಿಕೆಯೇ ಇಲ್ಲ ಎಂದು
ಜಾರಿಕೊಳ್ಳಲು ಪ್ರಯತ್ನಿಸಿದ. ಸಿದ್ಧ ಮಾರುಕಟ್ಟೆ
ಇಲ್ಲದಿದ್ದರೆ, ಅರ್ಥಮಾಡಿಕೊಂಡು ಮಾರುಕಟ್ಟೆಯನ್ನು ಸಜ್ಜುಗೊಳಿಸುವುದೇ ಜಾಣತನ ಎಂದು
ನಾನು ಸೂಚಿಸಿದೆ. ಒಳ್ಳೆಯ ಮಾದರಿಯನ್ನು ಕೊಡದೇ ಇದ್ದರೆ, ಪ್ರತಿಕ್ರಿಯೆಗಳನ್ನು ಗುಣಾತ್ಮಕವಾಗಿ ಗ್ರಹಿಸದೇ ಹೋದರೆ ಬೇಡಿಕೆ
ಏರುವುದಾದರೂ ಹೇಗೆ ಎನ್ನುವ ನನ್ನ ನೇರ ಸವಾಲಿಗೆ ಆತನಲ್ಲಿ ಉತ್ತರವಿರಲಿಲ್ಲ. ಇನ್ನೋರ್ವ, ಅಧಿಕಾರದಲ್ಲಿ
ಹಿರಿಯ ಬಾಯಿಬಿಡಲೇ ಇಲ್ಲ. ಒಟ್ಟಾರೆ ಇಬ್ಬರೂ ನನ್ನ ಸಮಸ್ಯೆಯ ಬಗ್ಗೆ, ಉತ್ತಮೀಕರಣದ ಕುರಿತು ಯಾವುದೇ ಆಶ್ವಾಸನೆ ಕೊಡದೆ ಜಾಣತನ ತೋರಿದರು.
ಸೈಕಲ್ಲಿನಲ್ಲಿ ವಿಶ್ವಯಾನ ಮಾಡಿ ಬಂದ ಗೆಳೆಯ ಗೋವಿಂದ ವರ್ಷದ ಹಿಂದೆಯೇ ನನಗೆ ಅಂತರ್ಜಾಲದಲ್ಲಿ
ಅನೇಕ ಜಂಟಿ ಸೈಕಲ್ ತಯಾರಕರ ಸೇತುಗಳನ್ನೇ ಒದಗಿಸಿದ್ದ. ಆದರೆ ಅವೆಲ್ಲ ವಿದೇಶೀ ಕಂಪೆನಿಗಳು. ಆ ಜಾಲತಾಣಗಳ ಜಂಟಿ
ಸೈಕಲ್ಲುಗಳಲ್ಲಿ ಬರಿಯ ಎರಡು ಚಕ್ರದವು ಮಾತ್ರ ಇರಲಿಲ್ಲ. ವಿಶಿಷ್ಟ ಸಂಕೋಲೆಯಂತೆ ಮೂರು ನಾಲ್ಕು ಚಕ್ರಗಳಿದ್ದವು, ರಸ್ತೆ ರೈಲಿನಂತೇ ಕಾಣುವವೂ ಇದ್ದವು. ಸವಾರರು ಇಬ್ಬರಲ್ಲ
ಮತ್ತೆರಡು ಮಕ್ಕಳೊಡನೆ ಪುಟ್ಟ ಕುಟುಂಬವೇ ತನ್ನೆಲ್ಲ ಮೋಜಿನ ಸಾಮಾನುಗಳೊಡನೆ ವಾರಾಂತ್ಯದ ಬಿಡುವಿನ
ಸವಾರಿಗೆ ಹೊರಟಂತೆಯೂ ಇತ್ತು. (ಉದಾಹರಣೆಗೆ ಇಲ್ಲಿ
ಚಿಟಿಕೆ ಹೊಡೆದು ಇಮೇಜಸ್ ಆಫ್ ಟ್ಯಾಂಡೆಮ್ ಸೈಕಲ್ಸ್ ನೋಡಿ) ಅಲ್ಲಿ ಸಿದ್ಧ ಮಾದರಿಗಳನ್ನಷ್ಟೇ ಮಾರುವವರಲ್ಲ, ವೈಯಕ್ತಿಕ ಬೇಡಿಕೆಗನುಗುಣವಾಗಿ ಮತ್ತು ಸ್ಪರ್ಧಾತ್ಮಕ ಬೆಲೆಗಳಲ್ಲಿ ಎಂಥಾ ಸೈಕಲ್ಲುಗಳನ್ನು
ತಯಾರಿಸಿಕೊಡುವವರಿದ್ದಾರೆ. (ಏಳಡಿ ಎತ್ತರದವನಿಗೆ
ಎರಡಡಿ ಸೈಕಲ್ ಕೊಟ್ಟು, “ನಮ್ಮಲಿರುವುದಿದು. ಬೇಕಾದರೆ ನಿನ್ನ ಕಾಲು ಕತ್ತರಿಸಿಕೋ” ಎನ್ನುವ ಸಲಹೆ
ಕೊಡುವುದಿಲ್ಲ!) ರ‍್ಯಾಲಿಗೆ ಬಂದಿದ್ದ ಬಿ.ಎಸ್.ಎ ಕಂಪೆನಿಯ ಪ್ರತಿನಿಧಿ ಚೆನ್ನೈಯಿಂದ ಚರವಾಣಿಸಿದ್ದಾಗಲೂ ನಡೆಸಿದ
ಸಂಭಾಷಣೆಯಾದರೂ ಏನು? ಸ್ಪಷ್ಟ ಬರವಣಿಗೆಯಲ್ಲಿದ್ದ
ನನ್ನ ಪತ್ರದ ವಿವರಗಳನ್ನು ಓದಿ ಅರ್ಥೈಸಿಕೊಳ್ಳದೇ ಹೊಸದಾಗಿ ಸಮಸ್ಯೆ ವಿಚಾರಿಸುವ ಠಕ್ಕು. “ಐ ಹ್ಯಾವ್ ಯುವರ್ ಲೆಟರ್. ಪ್ಲೀಸ್ ಟೆಲ್
ಮಿ ಯುವರ್ ಪ್ರಾಬ್ಲೆಂ ಸಾರ್.” ನನಗೆ ಸಹಜವಾಗಿ ಹೊಳೆದದ್ದು - “ಯಾಕೆ ನಾನು ಬರೆದದ್ದು
ಅರ್ಥವಾಗಲಿಲ್ಲವೇ?” ಸೌಜನ್ಯಕ್ಕಾಗಿ ಹಾಗೆ ಕೇಳದೆ, ಸಮಸ್ಯೆಗಳನ್ನು ವಿವರಿಸಿದ್ದೆ. ಆಗ ಆತ ಸಕ್ಕರೆಯಂಥ ಮಾತುಗಳಲ್ಲಿ ನನಗೇನೂ ಅಗತ್ಯವಿಲ್ಲದ ಕಂಪೆನಿಯ
ಒಳಾಡಳಿತದ ವಿವರಗಳನ್ನು ಬಿಡಿಸಿ ಹೇಳಿ ನನ್ನನ್ನು ಬೆರಗುಗೊಳಿಸಿದ ತೃಪ್ತಿ ಪಟ್ಟುಕೊಂಡ. “Ours is a heavy export oriented company. Your letter
has been forwarded from PR to Vice MD who looks after the production. And in
time he will refer it to the research wing.” ಮತ್ತೆ ಸಭ್ಯತೆಯ ಎಲ್ಲೆ ಮೀರದಿರುವುದಕ್ಕಾಗಿ ನಾನು ಮೌನಿಯಾಗಿದ್ದೆ. ಶಾಲೆಗಳಿಗೆ ಉಚಿತ ಸೈಕಲ್ ಯೋಜನೆ, ಭಾರತಕ್ಕಿಂಥ ನಿಕೃಷ್ಟ ಸ್ಥಿತಿಯಲ್ಲಿರುವ ಕೆಲವು ದೇಶಗಳಿಗೆ ಸಿದ್ಧಮಾದರಿಗಳನ್ನು
ಕಳಿಸುವಲ್ಲೇ ತೃಪ್ತರಾದವರಿಗೆ ನಾನು ಏನೂ ಹೇಳಿದರೇನು!
ಎರಡು ವರ್ಷಗಳ ಹಿಂದೆ ಸೈಕಲ್ ಸವಾರಿ ಕುರಿತಂತೆ ಎರಡು ಕಂತು, ಅನಂತರ ಜಂಟಿ ಸೈಕಲ್ ಸವಾರಿ ಕುರಿತಂತೆಯೂ ಎರಡು ಕಂತುಗಳಲ್ಲಿ ಈಗಾಗಲೇ
ಇಲ್ಲಿ ಬರೆದುಕೊಂಡದ್ದನ್ನು ನೀವೆಲ್ಲ ಓದಿಯೇ ಇರುತ್ತೀರಿ. ಅವುಗಳಿಂದ ಸೈಕಲ್ ಬಗ್ಗೆ ಜಾಗೃತಿ ಹೆಚ್ಚಿತೋ ಬಿಟ್ಟಿತೋ ನನಗೆ ತಿಳಿದಿಲ್ಲ. ಇಲ್ಲೇ ಇನ್ಫೋಸಿಸ್ಸಿನ ತರುಣ ಗೆಳೆಯ ಸಂದೀಪ್, ಮೈಸೂರಿಗೆ ಹೋಗಿ, ಯಾವುದೋ ಲಟಾರಿ ಸೈಕಲ್ ಹಿಡಿದು ಟ್ರಯತ್ಲಾನಿನಲ್ಲಿ (ಒಂದೇ ‘ಓಟ’ದಲ್ಲಿ ಏಳ್ನೂರೈವತ್ತು ಮೀ ಕಾಡುಕೆರೆಯಲ್ಲಿ ಈಜು, ಚಂಡಿ ಬದಲಿಸದೇ ಇಪ್ಪತ್ತು ಕಿಮೀ ಸೈಕಲ್ ಸವಾರಿ ಮತ್ತು ಕೊನೆಯಲ್ಲಿ
ಐದು ಕಿಮೀ ಓಡುವುದು ಸೇರಿದೆ. www.sandeepcr.bloggerspot.com) ಸ್ಪರ್ಧಿಸಿ ಎರಡನೇ ಸ್ಥಾನವನ್ನು ಗಳಿಸಿದ್ದ. ಅದು ಯಾವುದೋ ಪತ್ರಿಕೆಯ ಪ್ರಾದೇಶಿಕ ಪುಟದಲ್ಲಷ್ಟೇ ಮಿಂಚಿ ಮರೆವಿಗೆ
ಸಂದಿತು. ಬೆಳೆಯುವ ಮಂಗಳೂರಿಗೆ ಸಂದೀಪರಂಥವರು ಬೇಕು, ಹೆಚ್ಚಬೇಕು ಎಂಬ ಭಾವ ಇಲ್ಲ. ಇತ್ತ ಪರಿಸರ ಕಾಳಜಿಯಲ್ಲಿ
ಅತ್ಯುನ್ನತ ಕೆಲಸ ನಡೆಸುತಿರುವ ‘ಡೌನ್ ಟು ಅರ್ತ್’ ನಿಯತಕಾಲಿಕದ ಸಂಪಾದಕಿ
ಸುನೀತ ನಾರಾಯಣ್ ದಿಲ್ಲಿಯಲ್ಲಿ ಸೈಕಲ್ ಸವಾರಿ ನಡೆಸುತ್ತಿದ್ದಾಗ ದೊಡ್ಡ ವಾಹನದ ದೌರ್ಜನ್ಯಕ್ಕೆ ಸಿಕ್ಕಿ
ಮಾರಕ ಆಘಾತ ಪಡೆದರು. ಸ್ವತಃ ಸುನೀತ ಆಸ್ಪತ್ರೆಯಿಂದ ಬರೆಯಿಸಿದ (ಎರಡೂ ಕೈ ಮುರಿದು ಬರೆಯಲಾಗದ ಸ್ಥಿತಿಯಲ್ಲಿರುವುದರಿಂದ) ಸಂಪಾದಕೀಯದ ಮುನ್ನೆಲೆಯಲ್ಲಿ ಖ್ಯಾತ ಲೇಖಕ ನಾಗೇಶ ಹೆಗಡೆಯವರು ಸೈಕಲ್ಲಿನ
ಬಗ್ಗೆ ರಾಷ್ಟ್ರೀಯ ಮಟ್ಟದ ವಿಚಾರ - ‘ಉಳ್ಳವರ ಉಳಿವಿಗಾಗಿ ಉಳಿದವರ ಬಲಿ’ ಎಂದೇ ಸವಿವರ ಹಂಚಿಕೊಂಡರು.
ನಮ್ಮಂಗಳದ ಸಂದೀಪನೇ
ಕಾಣದವರಿಗೆ, ನೇರ ಸಂಬೋಧನೆಗಳನ್ನೇ (ಒಂದು ಉದಾ: ನನ್ನದೇ ಕೊಳಚೆನೀರಿನ ಕುರಿತ ಲೇಖನ) ಜಾಣಕುರುಡಿನಲ್ಲಿ ಮರೆಯುವವರಿಗೆ, ಎಲ್ಲಿನ ಸುನೀತ. ಎಲ್ಲಿನ ದಿಲ್ಲಿ. ಕದ್ರಿ ಪಾರ್ಕಿನೊಳಗೆ ‘ಬರಲಿದೆ’ ಎಂದೇ ನಾನು ಕೇಳಿದ್ದ ಸೈಕಲ್ ಪಾರ್ಕ್ ಅದೇ ಜಾಗದಲ್ಲಿ ಇನ್ನೂ ಏನೇನೋ
‘ಬರಲಿದೆ’ ಕಲ್ಲುಗಳ ಅಡಿಗೆ ಬಿದ್ದು, ಕಡತಗಳಲ್ಲಿ ಬೆಚ್ಚಗುಳಿದಿರಬೇಕು. ಎಲ್ಲಿಂದೆಲ್ಲಿನ
ರಸ್ತೆಗಳ ಅಗಲೀಕರಣ (ಚತುಷ್ಪಥವೂ ಸೇರಿ), ಕಾಂಕ್ರಿಟೀಕರಣಗಳು ಯಂತ್ರಚಾಲಿತ ವಾಹನಗಳ ಸೌಕರ್ಯವೊಂದನ್ನೇ ಲಕ್ಷ್ಯವಾಗಿಟ್ಟುಕೊಂಡಿವೆ. ಮಳೆನೀರ ಚರಂಡಿಗಳು ಮತ್ತು ಶ್ರೀಸಾಮಾನ್ಯರನ್ನು (ಪಾದಚಾರಿಗಳನ್ನು) ಪೂರ್ಣ ಅಲಕ್ಷಿಸಿ ವಿಶಿಷ್ಟ ಡಾಮರು, ಕಾಂಕ್ರೀಟ್, ಇಂಟರ್ಲಾಕ್ ಹಾಸುಗಳನ್ನು ಬಿಡಿಸುವಲ್ಲೇ ಅಭಿವೃದ್ಧಿಯ ಪರಾಕಾಷ್ಠೆಯನ್ನು
ಮಾತ್ರ ಕಾಣುವಂತಾಗಿದೆ. ಈ ಸ್ಥಿತಿಯಲ್ಲಿ ಸೈಕಲ್ ರ್ಯಾಲೀಯ ಯಶಸ್ಸಿಗೆ ಉಬ್ಬುವುದಾದರೂ ಹೇಗೆ? ಸೈಕಲ್ಲುಗಳಿಗೆ ಅಪಾಯರಹಿತ ದಾರಿಗಳೆಲ್ಲಿವೆ? ಸೈ-ಸಾಗರಕ್ಕೆ ಉತ್ತರೋತ್ತರ
ಅಭಿವೃದ್ಧಿರಸ್ತು ಎಂದು ಆಶಿಸುವವರು ಯಾರು? ಬಹುಕಾಲದ ಹಂಬಲಿಕೆಯಲ್ಲಿ
ಬಿಜಾಪುರದಲ್ಲೇನೋ ತೀವ್ರ ಸ್ಪರ್ಧಾತ್ಮಕ ಸೈಕಲ್ ಓಟಕ್ಕಾಗಿಯೇ ವಿಶಿಷ್ಟ ಮೈದಾನ (ವೆಲೋಡ್ರಂ) ಸಜ್ಜುಗೊಂಡದ್ದನ್ನು
ಕೇಳಿದೆ. ರಾಜ್ಯ ಸರಕಾರವಂತೂ ಪಕ್ಷಾತೀತವಾಗಿ ಶಾಲಾ ಮಕ್ಕಳಿಗೆ ಉಚಿತ ಸೈಕಲ್
ವಿತರಿಸುವ ಅಮಲಿನಿಂದ ಇನ್ನೂ ಪೂರ್ತಿ ಹೊರಬಂದಿಲ್ಲ. ಅವುಗಳನ್ನು ಮೀರಿ ಇಲ್ಲಿ, ಊರೂರುಗಳಲ್ಲಿ
ನಿತ್ಯದ ಸಾಮಾನ್ಯ ಸೈಕಲ್ ಸವಾರಿಗೆ ಅವಕಾಶ ಕಲ್ಪಿಸುವ ದಿನಗಳನ್ನು ನಾನು ಕಾದೇ ಇದ್ದೇನೆ.
ಸಂಘಟಕರು ಪ್ರಾರಂಭದಲ್ಲಿಯೇ ಕಸವನ್ನು ಎಲ್ಲೆಂದರಲ್ಲಿ ಬಿಸಾಡದಂತೆ ಸೂಚನೆ ಕೊಟ್ಟರೆ - ಭಾಗವಹಿಸುವ ಹೆಚ್ಚಿನವರು ಮಕ್ಕಳಾದ್ದರಿಂದ - ಸಮಸ್ಯೆಯ ಪರಿಹಾರ ಸುಲಭ ಎಂದು ಸಂಘಟಕರಿಗೆ ಸಲಹೆ ಕೊಡಬೇಕೆಂದು ಯೋಚಿಸುತ್ತಿದ್ದೆ. ಆದರೆ, ಸಂಘಟಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ, ಆದರೆ ಪ್ರಯೋಜನ ಮಾತ್ರ ಆಗಿಲ್ಲ ಎಂದು ನಿಮ್ಮ ಲೇಖನ ಹೇಳುತ್ತಿದೆ. ಗೆಳೆಯ ಮಹೇಶ ಮಯ್ಯ ಸಹ ಇದನ್ನೇ ಹೇಳಿದ್ದ. ನನಗೆ ನಂಬಿಕೆ ಬಂದಿರಲಿಲ್ಲ.
ReplyDeleteಖರ್ಜೂರ ಇತ್ಯಾದಿ ಒಣ ಹಣ್ಣು ಕೊಟ್ಟ ಸ್ಥಳದಲ್ಲಿ ನಾನು ಅದನ್ನು ತಿನ್ನುತ್ತಾ, ಬದಿಯಲ್ಲೇ ಇದ್ದ, ರ್ಯಾಲಿಯಲ್ಲಿ ಭಾಗವಹಿಸಿದ್ದ ಹುಡುಗನೊಬ್ಬನನ್ನು ಉದ್ದೇಶಿಸಿ ಹೇಳಿದೆ: "ನಿಜವಾಗಿ ಅದರ ಕಾಗದ ಕಿಸೆಯಲ್ಲಿ ಹಾಕಬೇಕು. ದಾರಿಯಲ್ಲೆಲ್ಲ ಹಾಕುವುದಲ್ಲ". ಹುಡುಗ ಹೇಳಿದ: "ಇಲ್ಲೆಲ್ಲ ಬೀಳಿ ಆಗಿದೆ. ಇನ್ನೇನು ಮಾಡುವುದು?"
ನಮ್ಮ ಮನೆಯ ಕಸವನ್ನು ಪುರಸಭೆ/ನಗರಪಾಲಿಕೆಯ ಕಸದ ತೊಟ್ಟಿಗೆ ಹಾಕುವುದಕ್ಕೂ, ನಮ್ಮ ಮಲವನ್ನು ಇನ್ನೊಬ್ಬನ ತಲೆಯ ಮೇಲೆ ಹೊರಿಸುವುದಕ್ಕೂ ಹೆಚ್ಚು ವ್ಯತ್ಯಾಸ ನನಗಂತೂ ಕಾಣಿಸುವುದಿಲ್ಲ.
ಏನೇ ಇರಲಿ, ನಿಮ್ಮ ಲೇಖನ ಚೆನ್ನಾಗಿದೆ, ಅಭಿನಂದನೆಗಳು.
-ಎಚ್. ಸುಂದರ ರಾವ್
ಶೆಖೆ ಮತ್ತು ಅಧಿಕ ತೇವಾಂಶ ಇರುವ ಮಂಗಳೂರಿನಲ್ಲಿ ಸೈಕಲ್ ರ‍್ಯಾಲಿ ಆಯೋಜಿಸುವ ಆರೆಕ್ಸ್ ಲೈಫ್ ಸಂಸ್ತೆಗೆ ಮತ್ತು ಅದರಲ್ಲಿ ಭಾಗವಹಿಸುವ ಎಲ್ಲ ಅಭ್ಯರ್ತಿಗಳಿಗೆ ಅಭಿನಂದನೆಗಳು. ನೀವು ಮತ್ತು ನಿಮ್ಮ ಯಜಮಾನತಿ ದೇವಕಿ ಮಂಗಳೂರಿನಲ್ಲಿ ಜಂಟಿ ಸೈಕಲ್ ಸವಾರಿ ಮಾಡುತ್ತಿದ್ದು ಯುವ ಜನರಿಗೆ ತಮ್ಮ ನಿಜ ಜೀವನದಲ್ಲಿ ಪರಿಸರ ಮಾಲಿನ್ಯ ತಡೆಗಟ್ಟುವ ದ್ರಷ್ಟಿಯಿಂದ ಸೈಕಲ್ ಸವಾರಿಯ ಪಾತ್ರದ ಮಹತ್ವವನ್ನು ಎತ್ತಿ ತೋರಿಸುತ್ತಿದ್ದೀರಿ. ತಮ್ಮ ಕಲಾಪದ ಅವಧಿಯ ‘ಕಸ’ಕ್ಕೆ ತಾವೇ ಜವಾಬ್ದಾರಿ ಹೊತ್ತು cleanliness drive ವಿಲೇವಾರಿ ನಡೆಸಿದ ‘ಆರೆಕ್ಸ್ ಲೈಫ್’ ಸಂಸ್ತೆಯ ಕಾರ್ಯ ಅಭಿನಂದನೀಯ.
ReplyDeleteಕಳೆದ ತಿಂಗಳು ೧೪ ಸದಸ್ಯರ ತಂಡದ ನೇತ್ರತ್ವದ ಭಾರ ಹೊತ್ತು ಬೆಂಗಳೂರು-ಮಡಿಕೇರಿ ಮೂರು ದಿನಗಳ ಸೈಕಲ್ ಯಾನ ಮುಗಿಸಿ ಬಂದ ನನ್ನ ದಾಹ ಇನ್ನೂ ಮುಗಿದಿಲ್ಲ.
ನಿಮ್ಮ ಸೈಕಲ್ ರ‍್ಯಾಲಿ ಅನುಭವಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ಮಡಿಕೇರಿಯ ರೋಟರಿ ಸಂಸ್ತೆಗೆ ಸೈಕಲ್ ಯಾನದಲ್ಲಿ ಭೇಟಿ ನೀಡಿದಾಗ ಅದರ ಕಾರ್ಯದರ್ಶಿ ಜಿ.ಆರ್ ರವಿಶಂಕರ್ ಇವರ ಆಕಸ್ಮಿಕ ಪರಿಚಯ ಹಾಗೂ ನಮ್ಮಿಬ್ಬರಿಗೂ ಅವರೊಡನೆ ಇರುವ ಸಂಬಂದದ ಪರಿಚಯವಾಯಿತು.
ReplyDeleteನನ್ನ ಪ್ರತಿಕ್ರಿಯೆ ಈ ಸೈಕಲು ಕಂಪೇನಿಗೆ ಸಿಮಿತಗೊಳಿಸುವೆ. ಯಾಕೆಂದರೆ ಸೈಕಲು ಉದ್ಯಮ ಬೆಳೆಯಲು ಇವರೇ ಅಡ್ಡಿ ಹಾಗೂ ಇಂತಹ ಉದ್ಯಮಗಳು ಮುಚ್ಚಿದರೆ ಹಾಗೂ ಅರೋಗ್ಯಕರ ಸ್ಪರ್ಧೆ ಉಂಟಾದರೆ ನಮಗೆ ಉತ್ತಮ ಗುಣಮಟ್ಟದ ಮಾಲು ಲಭ್ಯ. ಮೂವತ್ತು ವರ್ಷ ಹಿಂದೆ ಅಂದಿನ ಮದ್ರಾಸಿನಲ್ಲಿರುವ ಆ ಸೈಕಲು ಕಂಪೇನಿ ಮುಖ್ಯ ಕಛೇರಿಗೆ ಹೋಗಿದ್ದೆ. ನಾನು ಮದ್ರಾಸಿಗೆ ಹೋದ ಉದ್ದೇಶ ಕೆಲವು ದೇಶಗಳ "ವಿಸಾ" ಪಡಕೊಳ್ಳಲು ಆದರೂ ಅಕಸ್ಮಾತ್ ಪರದೇಶದಲ್ಲಿರುವಾಗ ಬಿಡಿಬಾಗ ತೊಂದರೆ ಬಂದರೆ ಎನ್ನುವ ಕಾರಣಕ್ಕೆ ಇವರ ಬೇಟಿಗೆ ಹೋದದ್ದು ಹೌದು.
ReplyDeleteನನ್ನ ಕೋರಿಕೆ ಅವರಿಗೆ ಆರ್ಥಿಕವಾಗಿ ಯಾವ ಭಾರವೂ ಬೀಳುತ್ತಿರಲಿಲ್ಲ. ಆದರೂ ಅವರ ವರ್ತನೆ ನಿಜಕ್ಕೂ ಹೇಸಿಗೆ ಅನಿಸುವಂತಾದ್ದು. ಅಂದು ಹಾಗೂ ಇಂದು ಪರದೇಶದ ಸೈಕಲುಗಳು ನಮ್ಮಲ್ಲಿಗೆ ಬಾರದಂತೆ ತಡೆದು ಪ್ರಾಚೀನ ಕಾಲದ ಅಚ್ಚಿನಲ್ಲಿಯೇ ಕಳಪೆ ಸೈಕಲುಗಳ ತಯಾರಿ ಮಾರಾಟದಲ್ಲಿಯೇ ಇವರು ತೃಪ್ತರು ಎನ್ನಲು ವಿಷಾದವಾಗುತ್ತದೆ.
ಕೊನೆಗೆ ಇವರ ಬುರ್ನಾಸ್ ಸೈಕಲು ಬಿಸಾಕಿ ಹೊಸತಾಗಿ “ಹೀರೊ” ಕೊಂಡು ಪರದೇಶಕ್ಕೆ ಹೋದೆ. ಆ ಕಂಪೇನಿ ಮುಖ್ಯಸ್ಥರು [ನನ್ನ ನೆನಪಿನ ಪ್ರಕಾರ ಒಂ ಪ್ರಕಾಶ್ ಮುಂಜಾಲ್ ಸ್ವತಹ ಸಹಿ ಹಾಕಿದ ಪತ್ರ ] ನಾನು ವಿದೇಶದಲ್ಲಿರುವಾಗಲೇ ನನಗೆ ಪತ್ರಿಸಿದ್ದರು ಎನ್ನುವುದು ಸಂತಸದ ವಿಚಾರ :-)
ಮುಂದೆ ಸೈಕಲು ಉದ್ಯಮ ಆರೋಗ್ಯಕರವಾಗಿ ಬೆಳೆಯಲಿ ಎಂದು ನಾವು ಹಾರೈಸಬಹುದಷ್ಟೇ. ಕಳೆದ ವರ್ಷ ಸೈಕಲು ಅಮದು ಸಿಮಿತಗೊಳಿಸಲು ಕೇಂದ್ರ ಸರಕಾರದ ಕಡೆಯಿಂದ ಕನಿಷ್ಟ ಶೇಕಡ ೩೦ರಷ್ಟು ಕಸ್ಟಂ ಸುಂಕ ಹೆಚ್ಚಿಸಲಾಗಿದೆ.
ನಮ್ಮಲ್ಲಿ ಕೆಲವು ತಂತ್ರಜ್ಞಾನಗಳನ್ನು ಎಷ್ಟೇ ಬೇಡಿಕೆಯಿದ್ದರೂ ಅಭಿವೃದ್ಧಿ ಪಡಿಸದೇ ಇರುವ ಒಂದು ಮನಸ್ಥಿತಿ ಇದೆ. ಸೈಕಲ್ ತಂತ್ರಜ್ಞಾನವನ್ನು ಈಗಾಗಲೇ ಅನೇಕರು ಸುಧಾರಿಸಿದ್ದಾರೆ. ಅದನ್ನೇ ಇಲ್ಲಿಗೆ ತಂದರೆ ಸಾಕು. ಇದಕ್ಕಾಗಿ ಹೊಸ ಸಂಶೋಧನೆ ಮತ್ತು ಅಭಿವೃದ್ಧಿಯ ಕೆಲಸವೇನೂ ಇಲ್ಲ. ಕಾರು, ಬೈಕುಗಳ ತಂತ್ರಜ್ಞಾನ ಬಂದ ಹಾಗೆ ಇದೇಕೆ ಬರುವುದಿಲ್ಲ ಎಂದು ನಾನೂ ಬಹಳ ತಲೆಕೆಡಿಸಿಕೊಂಡು ಕೊನೆಗೆ ಇಂಟರ್ ನೆಟ್ ನಲ್ಲಿ ದೊರೆಯುವ ನೂರೆಂಟು "ಸಂಚಿನ ಸಿದ್ಧಾಂತ"ಗಳನ್ನೇ ನಿಜ ಎಂದು ನಂಬಿಕೊಂಡಿದ್ದೇನೆ. ಈ ಹಿಂದೆ ಜನರಲ್ ಮೋಟಾರ್ಸ್ ನವರು ಬ್ಯಾಟರಿ ಚಾಲಿತ ಕಾರಿನ ಪೇಟೆಂಟ್ ಖರೀದಿಸಿ ಮತ್ತೆ ಅದನ್ನು ಉತ್ಪಾದಿಸದೇ ಉಳಿದ ತರ್ಕವೇ ಇಲ್ಲಿಗೂ ಅನ್ವಯಿಸಬಹುದೇನೋ? ಭಾರತದಲ್ಲಿ ಹಳ್ಳಿಗೂ ನಗರಕ್ಕೂ ಎಲ್ಲಾ ವರ್ಗದ ಜನರಿಗೆ ಆಪ್ಯಾಯಮಾನವಾಗುವ ವಾಹನವೊಂದರ ತಂತ್ರಜ್ಞಾನ ಬಾರದೇ ಇರುವುದರ ಹಿಂದೆ ಕೆಲವು ಸೋಮಾರಿ ಉದ್ಯಮಿಗಳನ್ನು ಕಾಪಾಡುವ ಉದ್ದೇಶವಿದೆಯೆಂಬ ಅನುಮಾನ ಬರುತ್ತಿದೆ.
ReplyDeleteಹೌದು ಅನಿಸುತ್ತದೆ. ಒಂದು ಉತ್ತರ ನಿಮ್ಮ ಕೊನೆಯ ವಾಕ್ಯದಲ್ಲಿಯೇ ಇದೆ. ಕೆಲವು ವರ್ಷ ಹಿಂದೆ ರಾಹುಲ್ ಬಜಾಜ್ ಹೊಸ ತಂತ್ರಜ್ನಾನ ಮೊಸೈಕಲು ಹೊರಗಡೆಯಿಂದ ಬರುವುದನ್ನು ತಡೆಗಟ್ಟಲು ಬೊಬ್ಬಿಟ್ಟದ್ದನ್ನು ನೆನಪಿಸಿಕೊಳ್ಳಿ. ಸುನಿತಾ ನಾರಾಯಣ್ ಅವರ ಪ್ರಯತ್ನದಿಂದಾಗಿ ದೆಹಲಿಯ ರಸ್ತೆಗಳಿಂದ ಅಟೊರಿಕ್ಷ ಹೊರದೂಡುವ ಸನ್ನಿವೇಶ ಬಂದ ನಂತರವೇ ಇವರು ಹೊಸ ತಂತ್ರಜ್ನಾನ ಅಳವಡಿಸಿದ್ದು. ಹಾಗೆ ಕಿರಿಯ ಬಜಾಜ್ ಸಹೋದರರು ವ್ಯವಹಾರಕ್ಕೆ ಇಳಿಯದಿರುತ್ತಿದ್ದರೆ “ಹೊಸತನ “ ತೋರದೆ ಇದ್ದರೆ ಇಂದು ಬಜಾಜ್ ಆಟೊ ಸಹಾ ಜಾವ ತರಹ ಇತಿಹಾಸಕ್ಕೆ ಸೇರ್ಪಡೆಯಾಗುತಿತ್ತು. ಆದರೆ ಸೈಕಲು ಮಟ್ಟಿಗೆ ಇಂತಹ ಒತ್ತಡ ಇಲ್ಲ. ಅಮದಾಗುವ ಇಂದನ ತೈಲ ಉಳಿಸಲು ಕರೆಕೊಡುವ ಮೊಯಿಲಿ ಸೈಕಲು ಮೇಲಿನ ಸುಂಕ ಕಡಿಮೆ ಮಾಡಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ.
Delete