01 November 2013

ಎತ್ತಿನ ಹೊಳೆ ಮತ್ತು ಸುಂದರರಾಯರು

ಜೋಡುಮಾರ್ಗದ ಸುಂದರರಾಯರಿಗೂ ನನಗೂ ಆ-ಅತ್ರಿ ಅಥವಾ ಆ-ಆರೋಹಣ (ಆಜನ್ಮ ಇದ್ದ ಹಾಗೆ!) ಗೆಳೆತನ. ಪ್ರಾಯದಲ್ಲಿ ನನ್ನಿಂದ ತುಸು ಹಿರಿಯರಾದರೂ ಔಪಚಾರಿಕ ಕಲಿಕೆಯಲ್ಲಿ, ಹಾಗಾಗಿ ವೃತ್ತಿ ರಂಗದಲ್ಲೂ ನನ್ನಿಂದ ತುಸು ಕಿರಿಯರು. ಇವರು ಇಲ್ಲೇ ಮಂಗಳೂರು ವಿಶ್ವವಿದ್ಯಾನಿಲಯದ ಪೂರ್ವಾಶ್ರಮ ಅರ್ಥಾತ್ ಮೈಸೂರು ವಿಶ್ವವಿದ್ಯಾನಿಯಲದ ಸ್ನಾತಕೋತ್ತರ ಕೇಂದ್ರ - ಮಂಗಳಗಂಗೋತ್ರಿಯಲ್ಲೇ ಕನ್ನಡ ಎಂಎ ಮಾಡಿ ‘ಸಂಶೋಧನಾ’ ಪದವಿಗೂ ತುಸು ಮಣ್ಣು ಹೊತ್ತಿದ್ದರು. ಆದರೆ ಕಾರಣ ಏನೇ ಇರಲಿ (ನನಗೆ ಸ್ಪಷ್ಟ ಗೊತ್ತಿಲ್ಲ), ನನ್ನ ಹಾಗೇ ಕಲಿತದ್ದೊಂದು ಮಾಡಿದ್ದೊಂದು ಎಂಬಂತೆ ಜೋಡುಮಾರ್ಗದಲ್ಲಿ ಮುದ್ರಣಾಲಯ (ನೇಸರ ಮುದ್ರಣ) ತೆರೆದರು. ಅವರ ಹುಟ್ಟು, ಬಾಲ್ಯ ಮಾತ್ರವೇನು ಇಂದಿಗೂ ಹೊಕ್ಕುಳ ಬಳ್ಳಿ ಸೆಳೆತ ಕೊಪ್ಪದ್ದೇ ಇದೆ. ಆದರೆ ಪ್ರಜ್ಞೆ ನಿಂತ ನೆಲದ್ದು, ಬಳಕೆಯ ಜನರದ್ದು. ಪುತ್ತೂರಿಗೆ ಹೋಗಿ ಸಂಗೀತ (ವಿಶೇಷವಾಗಿ ಕೊಳಲು) ಕಲಿತರು. ಅದಕ್ಕೂ ಹೆಚ್ಚಿಗೆ ಒಳ್ಳೆಯ ಶೋತೃವಿಗೆ ಬೇಕಾದ ಶಿಕ್ಷಣ ಪಡೆದರು. ಮುಂದುವರಿದು ತಮ್ಮ ಕ್ರಿಯಾಶೀಲ ಭಾಗಿತ್ವವನ್ನು ಜೋಡುಮಾರ್ಗದ ಸಾಂಸ್ಕೃತಿಕ ಸಂಘಟನೆ ಅಭಿರುಚಿಗೆ ಕೊಟ್ಟು ಸಂಗೀತ, ನಾಟಕ, ಸಾಹಿತ್ಯ ಕಲಾಪಗಳಿಗೆ ಗುಣೈಕ ವೇದಿಕೆಯಾಗುವಲ್ಲೂ ನಿರತರಾಗಿದ್ದಾರೆ.


‘ವ್ಯಾಪಾರಂ ದ್ರೋಹಚಿಂತನಂ’ ಎಂದೇನೋ ಖಾಸಗಿ ವೃತ್ತಿರಂಗದ ಬಗ್ಗೆ ಜನಪದ ಮಾತು ನಾನು ಬೇಕಾದ್ದು ಕೇಳಿದ್ದೇನೆ; ಸುಂದರರಾಯರಿಗೂ ಇದು ತಿಳಿಯದ್ದಲ್ಲ. ಆದರೆ ಅದು ನಿಜವಲ್ಲ ಎಂಬಂತೆ ಸುಮಾರು ಮೂರು ದಶಕಗಳ ಕಾಲ ಮುದ್ರಣಾಲಯ ನಡೆಸಿ ಗೆದ್ದರು. ಪೆರ್ಲದಲ್ಲಿ ಬಹು ಹಿಂದಿನಿಂದ ವಿದ್ವಾನ್ (ಪೆರ್ಲಪಂಡಿತರೆಂದೇ ಖ್ಯಾತರಾದವರು) ಕೃಷ್ಣ ಭಟ್ಟರು ತಮ್ಮೊಂದು ಮುದ್ರಣಾಲಯ ನಡೆಸಿದ್ದರು (ಗುರುಕುಲ ಮುದ್ರಣ. ಕೃಷ್ಣಭಟ್ಟರು ಈಚೆಗೆ ದಿವಂಗತರಾದರೂ ಮುದ್ರಣಾಲಯವನ್ನು ಅವರ ಮಗ ಚೆನ್ನಾಗಿಯೇ ಮುಂದುವರೆಸಿದ್ದಾರೆ). ಅದಕ್ಕೊಂದು ಖ್ಯಾತಿ ಇತ್ತು - ನೀವು ವಿಷಯ (ಮದುವೆ, ಮುಂಜಿ, ಗೃಹಪ್ರವೇಶ, ಕರಪತ್ರ ಇತ್ಯಾದಿ ಮಾತ್ರವಲ್ಲ, ಎಷ್ಟೋ ಉದಯೋನ್ಮುಖ ‘ಸಾಯಿತಿ’ಗಳ ಕೃತಿರತ್ನಗಳನ್ನೂ!) ಕೊಟ್ಟರೆ ಸಾಕು. ಪಂಡಿತರು ಕ್ಲಪ್ತ ಕಾಲದಲ್ಲಿ ಕೇವಲ ವೃತ್ತಿಪರ ಮುದ್ರಣ ದರದಲ್ಲಿ ಸುಭಗ, ಸುಂದರ ಸಾಹಿತ್ಯ ಮುದ್ರಿಸಿ ಕೊಡುತ್ತಿದ್ದರು! ಸುಂದರರಾಯರೂ ಸ್ವಂತ ಶೈಕ್ಷಣಿಕ ಬಲದಲ್ಲಿ ಅಂಥದ್ದೇ ಸೇವೆಗೆ ಹೆಸರಾದರು. ಅದನ್ನು ಮೀರಿ ತನ್ನ ವಿಭಿನ್ನ ಆಸಕ್ತಿಗಳ ತಾಕತ್ತಿನಲ್ಲಿ ಸಾಮಾಜಿಕ (ಮುದ್ರಣೇತರ) ಸಮಸ್ಯೆಗಳಿಗೂ ಪ್ರಜಾಸತ್ತಾತ್ಮಕವಾದ ಸಲಹೆಗಳನ್ನು ಕೊಟ್ಟರು, ಪರಿಹಾರಗಳನ್ನು ಹುಡುಕತೊಡಗಿದರು.

ಇದರಲ್ಲವರಿಗೆ ಬಸರೂರಿನ ಬಳಕೆದಾರರ ವೇದಿಕೆ ನಡೆಸುತ್ತಿದ್ದ ಪ್ರೊ| ರವೀಂದ್ರನಾಥ ಶಾನುಭಾಗರು ಬಲುದೊಡ್ಡ ಆದರ್ಶವನ್ನೂ ಬಲವನ್ನೂ ಕೊಟ್ಟರೆನ್ನುವುದನ್ನು ಸ್ವತಃ ರಾಯರೇ (ತಮ್ಮ ಜಾಲತಾಣದಲ್ಲಿ) ಬರೆದುಕೊಂಡಿದ್ದಾರೆ. ಈ ವಲಯದ ಹಲವು ಸಮಸ್ಯೆಗಳನ್ನು ಸುಂದರರಾಯರು (ತಮ್ಮ ಕೆಲವು ಗೆಳೆಯರ ಸಹಕಾರಗಳೊಡನೆ) ಬಗೆಹರಿಸುವುದರೊಡನೆ, ಬಸರೂರಿನ ವೇದಿಕೆ ನಡೆಸುತ್ತಿದ್ದ ಪತ್ರಿಕೆಯ ಮುದ್ರಣ, ಪ್ರಸರಣಗಳಲ್ಲೂ ತೀವ್ರವಾಗಿ ತೊಡಗಿಕೊಂಡಿದ್ದರು. ಈ ‘ಪ್ರೀತಿಯ ಕಸರತ್ತು’ ಇಂದು ಪ್ರತ್ಯಕ್ಷವಾಗಿ ಬಳಕೆದಾರರ ವೇದಿಕೆ ಅಥವಾ ಪತ್ರಿಕೆ ಇಲ್ಲದಿದ್ದರೂ ರಾಯರನ್ನು ‘ಏಕಭಟ ಸೈನ್ಯ’ದಂತೆ ಸಾಮಾಜಿಕ ಸಮಸ್ಯೆಗಳಿಗೆ ಹುರಿಗೊಳಿಸಿದೆ.

ಪುಸ್ತಕವ್ಯಾಪಾರದ ನನ್ನ ವೃತ್ತಿ ಮತ್ತು ಈ ವಲಯದ ದೊಡ್ಡ ಪಟ್ಟಣವೆಂಬ ನೆಲೆಯಲ್ಲಿ ಮಂಗಳೂರು, ಅತ್ರಿ ಅಥವಾ ನನ್ನನ್ನು ಹೆಚ್ಚು ‘ಜನಪ್ರಿಯ’ಗೊಳಿಸಿತ್ತು.  ಸಹಜವಾಗಿ, ನಾನೆಷ್ಟು ತಗ್ಗಿ ನಡೆದರೂ ಅತ್ರಿ ಮುಚ್ಚಿದ್ದು, ಪುಸ್ತಕವ್ಯಾಪಾರಿಯಾಗಿ ನಾನು ನಿವೃತ್ತನಾದ್ದು ರಾಜ್ಯಾದ್ಯಂತ ಸುದ್ದಿ ಮಾಡಿತ್ತು. ಅದೇ ನನಗೂ ಒಂದು ವರ್ಷ ಮೊದಲೇ ಜೋಡುಮಾರ್ಗದಲ್ಲಿ ನೇಸರ ಮುದ್ರಣ ಮುಚ್ಚಿ, ಸುಂದರರಾಯರೂ ನಿವೃತ್ತಿ ಪಡೆದದ್ದು ಸಣ್ಣ ಪರಿಚಿತ ವಲಯದಲ್ಲಷ್ಟೇ ‘ಸೋಮಾರಿ ಮಾತು’ ಆಗಿಹೋಯಿತು. (ಪ್ರಚಾರ ನಿರ್ಮೋಹದಲ್ಲಿ ರಾಯರು ನನಗಿಂತ ಒಂದು ಕೈ ಮುಂದೆಯೇ ಇರುವುದರಿಂದ ಅವರೇನೂ ಚಿಂತಿಸಲಿಲ್ಲ, ಬಿಡಿ.) ಈ ನಿವೃತ್ತಿಯನ್ನು ರಾಯರು ತಮ್ಮ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಕೆಲಸ ಮುಂದುವರಿಸಲು ದೊಡ್ಡ ಅವಕಾಶವೆಂದೇ (ನಿವೃತ್ತಿ ಎಂದರೆ ವಿಶ್ರಾಂತ ಎಂದರ್ಥವಲ್ಲ) ಯೋಜಿಸಿದ್ದರು.

ಮೊದಲೇ ಹೇಳಿದಂತೆ (ಆ-ಆರೋಹಣ) ನನ್ನ ಕಾಡು, ಬೆಟ್ಟದ ಓಡಾಟಗಳಲ್ಲಿ ಸುಂದರರಾಯರ ಸಾಂಗತ್ಯ ಸದಾ ನಿಕಟವಾಗಿತ್ತು. ಇಲ್ಲಿ ಇವರ ಬಹುಮುಖೀ ಆಸಕ್ತಿಗೆ ಸರಿಯಾಗಿ ಹೊಸ ಹೊಸ ‘ಸಾಮಾಜಿಕ ಕಂಟಕ’ಗಳನ್ನು ಕಾಣತೊಡಗಿದರು. ವನ್ಯ ರಕ್ಷಣೆಯ ಉತ್ಸಾಹದಲ್ಲಿ ನಾವು “ಮರಕಡಿಯಬೇಡಿ” ಎಂಬಲ್ಲಿಗೆ ನಿಂತರೆ, ಜಾಗೃತ ಪ್ರಜೆಯ ನೆಲೆಯಲ್ಲಿ ರಾಯರು “ಕಡಿದದ್ದು ಯಾಕೆ” ಎನ್ನುವುದನ್ನೂ ಶೋಧಿಸತೊಡಗಿದರು. ಇದಕ್ಕೆ ಒಂದೇ ಸಣ್ಣ ಉದಾಹರಣೆ: ಸುಬ್ರಹ್ಮಣ್ಯದಲ್ಲಿ ‘ಜ್ಯೋತಿಷ ಸಮ್ಮೇಳನ’ದ ಹೆಸರಿನಲ್ಲಿ ಒಮ್ಮೆಲೆ ಸುಮಾರು ಆರೆಕ್ರೆ ವ್ಯಾಪ್ತಿಯಲ್ಲಿ ಮರಗಳುರುಳಿ ನೆಲ ತಟ್ಟಾಗತೊಡಗಿತ್ತು. ರಾಯರ ಪತ್ರ ಕೂರಂಬುಗಳಲ್ಲಿ ಯೋಜನೆಯೇ ಬರ್ಖಾಸ್ತಾಯಿತು. (ಜಾಗೆದು ಗುರ್ತೇ ಸಿಕ್ತಿಲ್ಲೆ!’ ಇದರಿಂದ ತೊಡಗಿದ ಲೇಖನ ಸರಣಿ ಗಮನಿಸಿ) ದುರಂತವೆಂದರೆ ಸಮ್ಮೇಳನದ ಯೋಜನೆಗೆ ಗರಿಕಟ್ಟಿಕೊಂಡು ಕುಣಿದಿದ್ದ ಮಾಧ್ಯಮಗಳಿಗೆ ‘ಬರ್ಖಾಸ್ತು’ವಿನಲ್ಲಿ ಕನಿಷ್ಠ ಸುದ್ದಿಯ ಮೌಲ್ಯವೂ ಕಾಣಲಿಲ್ಲ!!

ಸುಂದರರಾಯರು ನೇತ್ರಾವತಿ ತಟದಲ್ಲೇ ಇದ್ದುದರಿಂದ ನಮ್ಮ ಬಹುತೇಕ ಪಶ್ಚಿಮಘಟ್ಟದ ಓಡಾಟಗಳಲ್ಲೆಲ್ಲಾ ಇವರಿಗೆ ನೇತ್ರಾವತಿ ಜಲಾನಯನ ಪ್ರದೇಶದ ದರ್ಶನವೇ ಆಗುತ್ತಿತ್ತು. ಮಳೆಗಾಲದ ನೇತ್ರಾವತಿಯ ಉಬ್ಬರ ಬಂಟ್ವಾಳವನ್ನು ಮುಳುಗಿಸಿದಾಗ, ಮರಳೆತ್ತುವವರು ನೇತ್ರಾವತಿಯ ಉದರವನ್ನು ಬಗೆದಾಗ, ಲಾರಿ ತೊಳೆಯುವುದರಿಂದ ತೊಡಗಿ ಊರಿನ ಕೊಚ್ಚೆಕಣಿ ನೇತ್ರಾವತಿಯನ್ನು ಕಲುಷಿತಗೊಳಿಸಿದಾಗ, ಮಂಗಗಳೂರಿನ ಅಸಹಜ ದಾಹ ನೇತ್ರಾವತಿಯನ್ನು ಆಪೋಷಣೆ ತೆಗೆದುಕೊಳ್ಳಲು ಸಜ್ಜಾದಾಗಲೆಲ್ಲ ರಾಯರು ಸಾಮಾನ್ಯನಂತೇ ಕೂಡಿತಾದಷ್ಟು ಸ್ಥಳಪರಿಶೀಲನೆ ನಡೆಸುತ್ತಿದ್ದರು. ವಿರಾಮದಲ್ಲಿ ಮನೆಯ ನೆರಳಿನಲ್ಲಿದ್ದುಕೊಂಡು ಒಟ್ಟು ಸಾಮಾಜಿಕ ಹಿತ ಅಥವಾ ದೀರ್ಘಕಾಲೀನ ಸತ್ಯಗಳನ್ನು ಲಕ್ಷಿಸಿ, ಮೂಲಪಾಠ - ಬಳಕೆದಾರರ ಹೋರಾಟ ಮತ್ತು ಮಾಹಿತಿ ಹಕ್ಕಿನ ಪೂರ್ಣ ಬಳಕೆಯೊಡನೆ ಪತ್ರ ಸಮರ ನಡೆಸುತ್ತಿದ್ದರು. ಸುಂದರರಾಯರ ಇಂಥ ಹೋರಾಟಗಳ ಹಲವು ನೈಜ ಚಿತ್ರಗಳು ಯಾವ ವೈಭವೀಕರಣಗಳಿಲ್ಲದೆ ಅವರ ಜಾಲತಾಣದಲ್ಲಿ (www.sundararao.blogspot.com) ಕಾಲಕಾಲಕ್ಕೆ ಬರುತ್ತಲೇ ಇವೆ. ಕೆಲವು ವರ್ಷಗಳ ಹಿಂದೆ ಇಂಥ ಚಟುವಟಿಕೆಗಳ ಒಂದು ಭಾಗವಾಗಿಯೇ ‘ನೇತ್ರಾವತಿ ನದಿ ತಿರುವು’ನ್ನು ಸುಂದರರಾಯರು ಕೈಗೆತ್ತಿಕೊಂಡಿದ್ದರು.

ಮಾಹಿತಿ ಹಕ್ಕಿನ ಬಲದಲ್ಲಿ ನೇತ್ರಾವತಿ ನದಿ ತಿರುವು ಯೋಜನೆಯ ಸಂಪೂರ್ಣ ವರದಿಯನ್ನು ಮೊದಲು ತರಿಸಿಕೊಂಡರು. ವರದಿಯನ್ನು ನೋಡಿದ ಹಂತದಲ್ಲೇ ರಾಯರಿಗಾಗಲೀ ಅವರ (ನಾನೂ ಸೇರಿದಂತೆ) ಬಳಗಕ್ಕಾಗಲೀ ಯೋಜನೆಯ ಪೊಳ್ಳಿನ ಬಗ್ಗೆ ಸಂದೇಹಗಳೇನೂ ಉಳಿದಿರಲಿಲ್ಲ. ಆದರೆ ಅದನ್ನು ನಾಟಕೀಯವಾಗಿ ಸಾರ್ವಜನಿಕರಿಗೆ ಮನದಟ್ಟು ಮಾಡಿಸುವ, ಸಾರ್ವಜನಿಕ ಮಾಧ್ಯಮಗಳ ಮೂಲಕ ಹೆಚ್ಚಿನ ಜನಾಭಿಪ್ರಾಯ ರೂಢಿಸಿ, ಜನಪ್ರತಿನಿಧಿಗಳೆಂದೇ ಕಾಣಿಸಿಕೊಳ್ಳುವವರಿಗೂ ಯೋಜನೆಯನ್ನು ನಿರ್ವಿವಾದವಾಗಿ ತಿರಸ್ಕರಿಸಲು ಒತ್ತಡ ರೂಪಿಸುವ ಆವಶ್ಯಕತೆಯಿತ್ತು. ಅದಕ್ಕಾಗಿ ಆ ಯೋಜನಾ ಬ್ರಹ್ಮ ಪರಮಶಿವಯ್ಯನವರನ್ನು ಮಂಗಳೂರಿಗೆ ಕರೆಸಿ, ಅವರ ವರದಿಯನ್ನು ಸಾರ್ವಜನಿಕದಲ್ಲಿ ಸಮರ್ಥಿಸಿಕೊಳ್ಳುವುದಕ್ಕೂ ಪ್ರಶ್ನೋತ್ತರಕ್ಕೂ ಒಲಿಸಿದರು.

ಸಭೆ ಭರ್ಜರಿಯೇ ಇತ್ತು, ಆದರೆ ಪರಮಶಿವಯ್ಯ ಹುಟ್ಟದ/ಹುಟ್ಟಲಾಗದ ಕೂಸಿನ ಕುಲಾವಿಯ ಅಂದವನ್ನೇನೋ ಕರುಣಾಜನಕವಾಗಿ ಬಿಂಬಿಸಿದರು! ಆದರೆ ದುರಂತವೆಂದರೆ ನೇತ್ರಾವತಿ ನದಿ ತಿರುವಿನ ಕುರಿತು ಸಾಮಾನ್ಯಜ್ಞಾನದ ಒಂದು ಸಣ್ಣ ಪ್ರಶ್ನೆಯನ್ನೂ ಉತ್ತರಿಸದಾದರು!! ಚಿತ್ರದುರ್ಗ, ಚಿಕ್ಕಬಳ್ಳಾಪುರಾದಿ ಊರುಗಳ ಬರದ ಭೀಕರ ಸ್ಥಿತಿ ಅವರು ಹೇಳದೆಯೂ ಚಿಂತಾಜನಕ ಎಂದು ನಮಗೆ ತಿಳಿದಿದ್ದುದನ್ನೇ ಅವರು ವಿವರಿಸಿದ್ದರು. ಅವರಿಗೆ ನೀರು ‘ವಂಚಿಸದ,’ ‘ಮಾನವೀಯತೆ’ ಮೆರೆಯುವ ಅವಕಾಶವನ್ನು ನಮ್ಮೆದುರು ಸವಿನಯ ಮಂಡಿಸಿದ್ದರು. ಆದರೆ ಯೋಜನೆಯ ಸಾವಿರದೊಂದು ಹುಳುಕಿಗೆ ಪರಿಹಾರ ಬಿಡಿ, ವರದಿ ಹೇಳುವ ನೆಲದ ಒಂದು ತುಣುಕನ್ನಾದರೂ ಪ್ರತ್ಯಕ್ಷ ನೋಡಿದ, ಅಲ್ಲಿನ ಭೂಸ್ಥಿತಿಯ ಪ್ರಾಥಮಿಕ ಪರಿಚಯದ ಮಾತೂ ಇವರಲ್ಲಿ ಇರಲೇ ಇಲ್ಲ. ಪ್ರಶ್ನೆಗಳ ಧಾಳಿಯಲ್ಲಿ ಪರಮಶಿವಯ್ಯ ಕೊನೆಕೊನೆಯಲ್ಲಿ ಬರಪೀಡಿತ ಪ್ರದೇಶಗಳ ‘ಧೀಮಂತ ಪ್ರತಿನಿಧಿ’ಯಾಗುವುದರಲ್ಲೂ ಸೋತು, ತನ್ನ ಪ್ರಾಯದ ಹಿರಿಮೆಯನ್ನು ನಿರ್ಲಜ್ಜವಾಗಿ ಹೇಳಿಕೊಂಡು ಮುಖ ಉಳಿಸಿಕೊಳ್ಳುವ ಮಟ್ಟಕ್ಕಿಳಿದರು!

ಪಕ್ಷರಾಜಕೀಯದ ಹುನ್ನಾರದಲ್ಲಿ ನೇತ್ರಾವತಿ ನದಿ ತಿರುವು ಕರಾವಳಿ ವಲಯವನ್ನು ವಂಚಿಸುತ್ತದೆ ಎನ್ನುತ್ತಿದ್ದವರಿಗೆ ‘ನಮ್ಮದೇ ಪಕ್ಷ’ ಬಂದಾಗಲೂ ಸ್ಥಿತಿ ಬದಲಾಗದ್ದು ಕಂಡು ಆಶ್ಚರ್ಯವಾಗಿರಬೇಕು. ಆದರೆ ನಮ್ಮ ಬಳಗವಾಗಲೀ ಸುಂದರರಾಯರೇ ಆಗಲಿ ಸ್ಪಷ್ಟ ತಿಳಿದಿದ್ದೆವು - ಧ್ವಜ ಯಾವುದೇ ಇರಲಿ, ‘ಆಡಳಿತ ಪಕ್ಷ’ ಯಾವತ್ತೂ ಬಹುಜನಪರವಾಗಿರುವುದಿಲ್ಲ. ಯಡ್ಡಿ ಸರಕಾರ “ಭಾವ ಅಲ್ಲ, ಅಕ್ಕನ ಗಂಡ” ಎಂದು ಒಮ್ಮೆಲೆ ‘ಎತ್ತಿನ ಹೊಳೆ’ ಯೋಜನೆ ತೇಲಿಬಿಟ್ಟಿತು. ಅದನ್ನೇ ಕಾಡ್ಮನೆ ಹೊಳೆ, ಕೇರಿ ಹಳ್ಳ, ಹೊಂಗಡಳ್ಳ ಎಂದಿತ್ಯಾದಿಯೂ ಹೆಸರಿಸಬಹುದಿತ್ತು! ಇವು ಇನ್ನಷ್ಟೂ ಹಳ್ಳ, ಹೊಳೆ ಸೇರಿಯೇ ಶಿರಾಡಿ ಘಾಟಿಯಿಳಿಯುವ ಕೆಂಪೊಳೆಯಾಗುತ್ತದೆ ಅಥವಾ ಗುಂಡ್ಯ ಹೊಳೆಯಾಗುತ್ತದೆ ಅಥವಾ ಕುಮಾರಧಾರಾವಾಗುತ್ತದೆ ಅಥವಾ ಕೊನೆಯದಾಗಿ ಹೇಳಬೇಕಾದರೆ ನೇತ್ರಾವತಿಯೇ ಪ್ರತ್ಯಕ್ಷವಾಗುತ್ತದೆ ಎನ್ನುವುದು ಯಾವುದೇ ಪ್ರಾಥಮಿಕ ನಕ್ಷೆ ನೋಡಬಲ್ಲವನಿಗೂ ತಿಳಿಯುತ್ತದೆ. ಹಾಗೆಂದು ಸುಮ್ಮನೆ ಕೂರಲುಂಟೇ. ಸುಂದರ ರಾಯರು ಅಧಿಕೃತ ಮಾಹಿತಿ ತರಿಸಿದರು. ಅದರ ಆಧಾರ ಮತ್ತು ಹೆಚ್ಚುವರಿ ಮಾಹಿತಿಗಳ ಬಲದಲ್ಲಿ ರಾಯರೂ ಸೇರಿದಂತೆ ನಮ್ಮ ಬಳಗ ಎರಡೆರಡು ಬಾರಿ ಸ್ಥಳ ಪರಿಶೀಲನೆ ನಡೆಸಿತು. ಎತ್ತಿನ ಹಳ್ಳ ಯೋಜನೆಯ ಠಕ್ಕನ್ನು ಹೊಸದಾಗಿ ಖಂಡಿಸುವ, ವಿರೋಧಿಸುವ ಎಲ್ಲ ಪ್ರಯತ್ನಗಳಲ್ಲಿ (ನೇತ್ರಾವತಿ ತಿರುವನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಜಾಥಾದ ಒಂದು ದೃಶ್ಯ



ಈಗ ಸುಂದರರಾಯರು ಸಕ್ರಿಯರಾಗಿದ್ದಾರೆ. ಅದರ ಒಂದು ಮುಖವಾಗಿ ಅವರು ತನ್ನ ಜಾಲತಾಣದಲ್ಲಿ ಸಾಧಾರ ಪ್ರಸ್ತುತಪಡಿಸುವ ಈ ಲೇಖನವನ್ನು ಸಾರ್ವಜನಿಕರೂ ಮಾಧ್ಯಮಮಿತ್ರರೂ ತಾಳ್ಮೆಯಿಂದ ಓದಬೇಕು, ಹೆಚ್ಚಿದ ಅರಿವಿನೊಡನೆ ‘ಎತ್ತಿನಹೊಳೆ’ ಎಂದು ಹೆಸರು ಮರೆಸಿದ ‘ನೇತ್ರಾವತಿ ನದಿ ತಿರುವು’ ಎಂಬ ಮಹಾ ಪ್ರಾಕೃತಿಕ ಅಪಚಾರವನ್ನು ನಿಲ್ಲಿಸಲು ದುಡಿಯಬೇಕು.

ಸುಂದರರಾವ್ ತನ್ನ ಜಾಲತಾಣದಲ್ಲಿ ‘ಎತ್ತಿನಹೊಳೆ ಎನ್ನುವ ನೇತ್ರಾವತಿ ತಿರುವು ಯೋಜನೆ: ಹಿನ್ನೆಲೆ, ಮಳೆಯ ಲೆಕ್ಕಾಚಾರ ಮತ್ತು ಕಾನೂನು’ ಎಂಬ ದೀರ್ಘ ಶಿರೋನಾಮೆಯ ಮತ್ತು ಅಷ್ಟೇ ದೀರ್ಘ ಲೇಖನದಲ್ಲಿ ಸಮಸ್ಯೆಯನ್ನು ಆಮೂಲಾಗ್ರ ನೋಡುವ, ಲಭ್ಯ ಎಲ್ಲ ದಾಖಲೆಗಳೊಡನೆ ತಮ್ಮ ವಾದವನ್ನು ಬಲಪಡಿಸುವ ಕೆಲಸ ನಡೆಸಿದ್ದಾರೆ. ಕೇವಲ ಕೊರತೆ, ಪೂರೈಕೆಯ ಸರಳ ತತ್ತ್ವವನ್ನು ಮೀರಿದ ಈ ಬರಹಕ್ಕೆ ನಿಮ್ಮೆಲ್ಲರ ಬಲು ತಾಳ್ಮೆಯ ಓದನ್ನೂ ತಮಗೆ ಲಭ್ಯವಿರುವ ಎಲ್ಲ ಪ್ರಸರಣವನ್ನೂ ಅವಶ್ಯ ಕೊಡುವಿರಾಗಿ ನಂಬಿದ್ದೇನೆ.

ಈಗ ಸುಂದರರಾಯರ ಜಾಲತಾಣಕ್ಕೆ ಹೋಗಲು ಇದನ್ನು ಬಳಸಿರಿ. www.sundararao.blogspot.com

1 comment:

  1. ನಮ್ಮ ಕೈಲಿ ಎಷ್ಟು ಸಾಧ್ಯವೋ ಅಷ್ಟು ಪ್ರಕೃತಿಯನ್ನ ಹಾಳುಗೆಡವುತ್ತಿದ್ದೇವೆ, ಕಾಡಿನಲ್ಲಿ ಯೋಜನೆ ಬರುತ್ತಿರುವದರಿಂದ MOEF ನಿಂದ ಒಪ್ಪಿಗೆ ಪತ್ರ ಪಡೆಯಬೇಕು,, ಆದರೆ ಅಕಸ್ಮಾತ ಈ ಯೋಜನೆ ಕುಡಿಯವ ನೀರಿನದು ಅಂತ ತೋರಿಸಿ ಕೊಟ್ಟರೆ ನಿರಕ್ಷೇಪಣಾ ಪತ್ರದ ಅವಶ್ಯಕತೆಯೇ ಇಲ್ಲ..

    ReplyDelete