ಜಿಟಿ ನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೇಳು
ಅಧ್ಯಾಯ ಅರವತ್ತ ಒಂದು [ಮೂಲದಲ್ಲಿ ೩೫]
ಮಿತ್ರ-ಸಹೋದ್ಯೋಗಿ-ಕವಿ ನಿಸಾರ್ ಅಹಮದ್ರ ನುಡಿಗಳಲ್ಲಿ, ‘ಇದು ಸೃಷ್ಟಿ, ಕಪಿ ಮುಷ್ಟಿ, ಮಂತ್ರ
ಮರೆತ ಆಲಿಬಾಬನೆದುರಲಿ ಮುಚ್ಚಿರುವ ಗವಿಬಾಗಿಲು.’ ಬೆಂಗಳೂರಿನಲ್ಲಿ ನಾನಿದ್ದ
ಆ ನಾಲ್ಕು ವರ್ಷಗಳಲ್ಲಿ, ೧೯೬೫-೬೯, ನನ್ನ ಅನುಭವ ಮಾತ್ರ ‘ಮಂತ್ರವರಿತು ಉಚ್ಚರಿಸಿದ ಆಲಿಬಾಬ ಕಂಡ ದಿವ್ಯ
ದೃಶ್ಯ ಬೆಂಗಳೂರು!’ ಅಂದರೆ ಆಗ ತಂತಾವೇ ನನಗೊದಗಿದ ಅವಕಾಶಗಳು ಅಸಂಖ್ಯ. ಆ ಪೈಕಿ ರಾಮನ್ ದರ್ಶನ ಸಂದರ್ಶನ ಮತ್ತು ಸಿಎನ್ಎಸ್ ಸಹಯೋಗ ಮುಖ್ಯವಾದವು.
ಆ ಶುಭ ಮುಂಜಾನೆ ನನಗೆ ಮೈಸೂರು ವಿಶ್ವವಿದ್ಯಾನಿಲಯದ
ಪ್ರತಿಷ್ಠಿತ ತ್ರೈಮಾಸಿಕ ‘ಪ್ರಬುದ್ಧ ಕರ್ನಾಟಕ’ದ ಸಂಪಾದಕ ಜೆ.ಆರ್.ಲಕ್ಷ್ಮಣರಾಯರಿಂದ ಅನಿರೀಕ್ಷಿತವಾಗಿ ಒಂದು ಪತ್ರ ಬಂತು.
ಅದರ ಸಾರ: ಈ ಪತ್ರಿಕೆ ಸದ್ಯವೇ ತನ್ನ ಚಿನ್ನದ ಹಬ್ಬ ಆಚರಿಸಲಿದೆ, ತದಂಗವಾಗಿ
ವಿಶೇಷ ಬೃಹತ್ಸಂಪುಟವನ್ನು ಪ್ರಕಟಿಸಲು ಯೋಜಿಸಿದೆ, ಇದಕ್ಕೆ ನಾನು ಸರ್ ಸಿ.ವಿ.ರಾಮನ್ ಅವರ ಜೀವನ ಮತ್ತು ಸಾಧನೆ ಬಗ್ಗೆ ಒಂದು ಲೇಖನ ಬರೆದು
ಕಳಿಸಬೇಕು.
ಲಕ್ಷ್ಮಣರಾಯರು ಕನ್ನಡದ ಹಿರಿಯ ವಿಜ್ಞಾನಲೇಖಕರೆಂದು
ಮಾತ್ರ ನನಗೆ ಗೊತ್ತಿತ್ತು. ಪರಿಚಯವಿರಲಿಲ್ಲ. ಅವರ ‘ಪರಮಾಣು ಚರಿತ್ರೆ’ ೧೯೪೦ರ ದಶಕದಲ್ಲಿ ಪ್ರಕಟವಾದುದನ್ನು ಓದಿ ಮೆಚ್ಚಿದ್ದೆ.
ಇನ್ನು ನಾನಂತೂ ಮೈಸೂರು ವಿಶ್ವವಿದ್ಯಾನಿಲಯದ ಕಕ್ಷೆಗೆ ಪೂರ್ತಿ ಹೊರಗಿನವ.
ಇತ್ತ ರಾಮನ್? ಜಗತ್ತಿನ ಒಬ್ಬ ಶ್ರೇಷ್ಠ ಮತ್ತು ಜೀವಂತ
ಭೌತವಿಜ್ಞಾನಿ, ಬೆಂಗಳೂರುನಿವಾಸಿ ಎಲ್ಲ ನಿಜ. ಆದರೆ ಈ ಗುರುತರ ಹೊಣೆ ಹೊರಲು ನನ್ನ ಸಾಮರ್ಥ್ಯ? ಋಣಾತ್ಮಕವಲ್ಲದಿದ್ದರೂ
ಶೂನ್ಯವಂತೂ ಹೌದು. ಆದ್ದರಿಂದ ಲಕ್ಷ್ಮಣರಾಯರ ಕೋರಿಕೆಗೆ ನನ್ನ ತತ್ಕ್ಷಣದ ಪ್ರತಿಕ್ರಿಯೆ ನಕಾರ. ಆದರೂ ಈ ಕೆಲಸವನ್ನು ಅವರು ನನ್ನಿಂದಲೇ
ಮಾಡಿಸಿದರು. ಹೇಗೆ?
ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ನಿಸರ್ಗ
ತನ್ನದೇ ನಿಗೂಢ ಕಾರಣಕ್ಕಾಗಿ ಹನುಮಂತ-ಸಾಮರ್ಥ್ಯವನ್ನು ಗರ್ಭಿಸಿಟ್ಟಿರುತ್ತದೆ,
ಇನ್ನೆಲ್ಲೋ ಒಬ್ಬ ಜ್ಞಾನ-ವಯೋವೃದ್ಧ-ಸಹೃದಯ ಜಾಂಬವಂತನನ್ನೂ ಸೃಷ್ಟಿಸಿರುತ್ತದೆ, ಯುಕ್ತ ಮುಹೂರ್ತದಲ್ಲಿ,
ಅಂದರೆ ಹಿರಿ ಸವಾಲೊಂದು ಹಠಾತ್ತನೆ ಎದುರಾದಾಗ, ಈ ಜಾಂಬವಂತ
ಆ ಹನುಮಂತನಿಗೆ ಕುಮ್ಮಕ್ಕು ಕೊಡುತ್ತಾನೆ. ಆಗ ಏನಾಗುತ್ತದೆ?
ಕುಮ್ಮಕ್ಕು ಕೊಟ್ಟಾಗ ಕಪಿ ಕಡಲ ಜಿಗಿಯುವುದು
ಕಿಮ್ಮತ್ತು ಹೂಡದೇ ಯಶವಿಲ್ಲ, ಕಾರ್ಯದಲಿ
ಗಮ್ಮತ್ತು ಗಳಿಸುವುದೆ ನಿಜತೃಪ್ತಿ - ಚಿಂತಿಸುತ
ಸುಮ್ಮನೆಯೆ ಕಾಲವನು ಕಳೆಯದಿರು ಅತ್ರಿಸೂನು
ತಮಿಳು ನಾಡಿನ ತಿರುಚಿನಾಪಳ್ಳಿಯಲ್ಲಿ
ಮಧ್ಯಮವರ್ಗದ ಕುಟುಂಬವೊಂದರಲ್ಲಿ ರಾಮನ್ ಜನಿಸಿದರು (೭ ನವಂಬರ್ ೧೮೮೮).
ಇವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟ ರಾಮನ್. ತಂದೆ ಚಂದ್ರಶೇಖರ
ಅಯ್ಯರ್, ತಾಯಿ ಪಾರ್ವತಿ ಅಮ್ಮಾಳ್. ಚಂದ್ರಶೇಖರ
ಅಯ್ಯರರು ಸ್ಥಳೀಯ ಎಸ್ಪಿಜಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು.
ಗಣಿತ ಮತ್ತು ಭೌತ ವಿಜ್ಞಾನ ಇವರು ಕಲಿಸುತ್ತಿದ್ದ ವಿಷಯಗಳು. ಖಗೋಳ ಹಾಗೂ ಸಂಗೀತ ಶಾಸ್ತ್ರಗಳಲ್ಲಿ ಅಪಾರ ಆಸಕ್ತಿ. ಕಾಲ ಮತ್ತು
ಪರಿಸರಗಳಿಗೆ ಮೀರಿದ ಮನೋಧರ್ಮ ಈ ಮಹನೀಯರದು. ದೂರದ ವಿಶಾಖಪಟ್ಟಣದ ಮಿಸೆಸ್
ಎವಿಎನ್ ಕಾಲೇಜಿನಿಂದ ಗಣಿತ ಮತ್ತು ಭೌತವಿಜ್ಞಾನಗಳ ಪ್ರಾಧ್ಯಾಪಕತ್ವದ ಆಹ್ವಾನ ಬಂದಾಗ (೧೮೯೨) ಸಾಹಸ ಪ್ರವೃತ್ತಿಯ ಅಯ್ಯರರು ಪತ್ನಿ, ಅಣುಗ ರಾಮನ್ ಸಮೇತ ಅಕ್ಷರಶಃ ಅಲ್ಲಿಗೆ ಗಾಡಿ ಕಟ್ಟಿದರು. ತಮಿಳುನಾಡಿನ
ಒರತೆ ತೆಲುಗುದೇಶದಲ್ಲಿ ನೀರು ಹೀರಿ ಬೆಳೆಯತೊಡಗಿತು. ಮಗನ ಅಸಾಧಾರಣ ಮೇಧಾಶಕ್ತಿಯನ್ನು
ಗುರುತಿಸಿದ್ದ ತಂದೆ ತಾಯಿ ಆತನಿಗೆ ಯುಕ್ತ ಪ್ರೋತ್ಸಾಹ ನೀಡಿದರು. ಈತ ಭವಿಷ್ಯದಲ್ಲಿ
ಮಹಾಪುರುಷನಾಗುತ್ತಾನೆ ಎಂದು ಅವರು ಕನಸು ಕಂಡದ್ದು ಸ್ವಾಭಾವಿಕವೇ.
ಮಿಸೆಸ್ ಎವಿಎನ್ ಕಾಲೇಜಿನಲ್ಲಿ ತಂದೆಯ
ಶಿಷ್ಯನಾಗಿ ರಾಮನ್ನರ ವಿದ್ಯಾಭ್ಯಾಸ ಮುಂದುವರಿಯಿತು. ಹದಿನಾಲ್ಕನೆಯ ವಯಸ್ಸಿನಲ್ಲಿ
ಎಫ್ಎ ಪರೀಕ್ಷೆಯನ್ನು ಉತ್ತಮ ಶ್ರೇಣಿಯಲ್ಲಿ ಮುಗಿಸಿದರು (೧೯೦೨). ಬಿಎ ಪದವಿಗೆ ಅಭ್ಯಸಿಸುವ ಸೌಕರ್ಯ ವಿಶಾಖಪಟ್ಟಣದಲ್ಲಿ
ಆಗ ಇರಲಿಲ್ಲ. ಇದಕ್ಕಾಗಿ ಅವರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜನ್ನು ಜನವರಿ
೧೯೦೩ರಲ್ಲಿ ಪ್ರವೇಶಿಸಿದರು. ಇಲ್ಲಿವರೆಗಿನ ಅವರ ಜೀವನ ಇತರ ಎಲ್ಲ ಪ್ರತಿಭಾವಂತ
ವಿದ್ಯಾರ್ಥಿಗಳ ಮಾದರಿಯಲ್ಲಿಯೇ ವಿಕಾಸಗೊಂಡಿತ್ತು.
ಮದ್ರಾಸ್ ಮಹಾನಗರದ ಪ್ರೌಢ ಕಾಲೇಜಿನ
ಪರಿಸರದಲ್ಲಿ ಈ ಪ್ರತಿಭೆ ಪ್ರವಹಿಸಿದ್ದು ಅಸಂಖ್ಯಾತ ಕವಲುಗಳಾಗಿ - ಆಯ್ಕೆ ಮಾಡಿಕೊಂಡಿದ್ದ
ವಿಜ್ಞಾನ ವಿಷಯಗಳು ಪ್ರಥಮಾಕರ್ಷಣೆ, ನಿಜ; ಆದರೆ
ಇಂಗ್ಲಿಷ್ ಸಾಹಿತ್ಯ, ಭಾರತೀಯ ಇತಿಹಾಸ, ವೇದಂತ,
ಪುರಾಣ ಇವುಗಳಲ್ಲೆಲ್ಲ ಇವರಿಗೆ ಅದಮ್ಯ ಕುತೂಹಲ ಆಸಕ್ತಿಗಳಿದ್ದುವು. ಓದು, ಗ್ರಹಿಕೆ ಅತಿಕ್ಷಿಪ್ರ. ಸಾಮಾನ್ಯರು
ಒಂದು ದಿವಸವಿಡೀ ಓದಿದರೂ ಗ್ರಹಿಸದಿದ್ದುದಕ್ಕಿಂತ ಹೆಚ್ಚು ಸಾರವನ್ನು ಈ ತರುಣ ಕೇವಲ ಗಂಟೆಗಳ ಕಾಲದಲ್ಲಿ
ಬುದ್ಧಿಗತ ಮಾಡಿಕೊಳ್ಳುತ್ತಿದ್ದನಲ್ಲದೆ ಅದನ್ನು ಕುರಿತು ಸಮರ್ಥವಾಗಿ ಚರ್ಚಿಸಲೂ ಸಿದ್ಧನಾಗಿರುತ್ತಿದ್ದ.
ಆದ್ದರಿಂದ ರಾಮನ್ ತಮ್ಮ ಪ್ರಾಧ್ಯಾಪಕರ ಪ್ರೀತಿ ವಿಶ್ವಾಸಗಳನ್ನು ಗಳಿಸಿದುದು ತೀರ
ಸ್ವಾಭಾವಿಕ. ಇದರಿಂದ ಇವರಿಗೆ ಕೆಲವು ಪಾಠ ಮತ್ತು ಪ್ರಯೋಗ ತರಗತಿಗಳಿಂದ
ವಿನಾಯತಿ ದೊರೆಯಿತು. ಈ ಗಳಿಕೆ ವೇಳೆಯನ್ನು ತಮ್ಮ ವಿಶೇಷಾಸಕ್ತಿಯ ವಿಷಯಗಳ
ಅಭ್ಯಾಸಕ್ಕೋಸ್ಕರ ವಿನಿಯೋಗಿಸಿಕೊಂಡರು.
ಭೌತವಿಜ್ಞಾನದ ಕಾಂತಕ್ಷೇತ್ರ ಈ ಹಸಿಕಬ್ಬಿಣವನ್ನು
ಪ್ರಬಲವಾಗಿ ಆಕರ್ಷಿಸಿತು. ಇದು ಕಬ್ಬಿಣವಲ್ಲ, ಉಕ್ಕು - ಚಿರಕಾಂತಕ್ಷೇತ್ರ
ಪಡೆಯಲು ಅರ್ಹತೆ ಇದ್ದ ಲೋಹ. ರಾಮನ್ ಹೆಸರಿಗೆ ಬಿಎ ವಿದ್ಯಾರ್ಥಿ.
ಆದರೆ ಇವರ ಅರಿವು ಬಲು ಎತ್ತರಮಟ್ಟದ್ದು. ಉಚ್ಚ ಮೌಲ್ಯದ
ಎಲ್ಲ ಗ್ರಂಥಗಳೂ ಇವರ ಮಿದುಳಿನ ಹಸಿವೆಗೆ ಉಣಿಸು. ಸ್ವಂತ ಪ್ರಯೋಗ ಮಾಡಿ
ಹಲವಾರು ತತ್ತ್ವಗಳ ಸತ್ಯಾಸತ್ಯವನ್ನು ಪರೀಕ್ಷಿಸಿ ನೋಡಬೇಕೆಂದು ಇವರಿಗೆ ತೀವ್ರ ದಾಹವಿತ್ತು.
ಆದರೆ ಸ್ನಾತಕ ವರ್ಗದ ಭೂರಿಯಲ್ಲಿ ಈ ಸರ್ವಂಕಷತೆಗೆ ಯೋಗ್ಯ ಪುರಸ್ಕಾರ ಲಭಿಸಲಿಲ್ಲ.
ಬಿಎ ಪರೀಕ್ಷೆ ಮುಗಿಯಿತು (೧೯೦೫). ಆಗ ಇವರೇರಿದ ಎತ್ತರ ಇತರಾರೂ ಏರಿರದುದು - ಇವರೊಬ್ಬರೇ ಪ್ರಥಮ ದರ್ಜೆ
ಪಡೆದವರು, ವಿಶ್ವವಿದ್ಯಾನಿಲಯದ ಚಿನ್ನದ ಪದಕ ಇವರಿಗೇ ಮೀಸಲು. ಇಷ್ಟು ಮಾತ್ರವಲ್ಲ. ಅತ್ಯುತ್ತಮ ಇಂಗ್ಲಿಷ್ ಪ್ರಬಂಧಕ್ಕಾಗಿ ಕಾಲೇಜಿನ
ಒಂದು ವಿಶೇಷ ಬಹುಮಾನ ಸಹ ದೊರೆಯಿತು - ಹದಿನಾರು ವರ್ಷದ ಪ್ರತಿಭಾನ್ವಿತ
ರಾಮನ್.
ಸ್ನಾತಕೋತ್ತರದಾರಿ ಸ್ಪಷ್ಟವಾಗಿ ಭೌತವಿಜ್ಞಾನದೆಡೆಗೆ
ಟಿಸಿಲೊಡೆಯಿತು. ಅಲ್ಲಿಯ ಸೋಪಾನಗಳು ಎರಡು - ಎಂಎ ಪ್ರಥಮ ವರ್ಷ ಮತ್ತು
ದ್ವಿತೀಯ ವರ್ಷ. ಪ್ರೆಸಿಡೆನ್ಸಿ ಕಾಲೇಜಿನಲ್ಲಿಯೇ ಓದು ಮುಂದುವರಿಯಿತು.
ಭೌತ ಜಗತ್ತಿನ ಒಂದೊಂದು ವಿದ್ಯಮಾನವೂ ಈ ತರುಣನಿಗೆ ಕುತೂಹಲಕಾರಿಯಾದದ್ದು ಮಾತ್ರವಲ್ಲ,
ಹೊಸ ಸವಾಲನ್ನೂ ಒಡ್ಡುತ್ತಿತ್ತು. ಯಾವ ನೈಸರ್ಗಿಕ ವಿದ್ಯಮಾನವೇ
ಆಗಲಿ, ಅದು ಹಾಗೆ ಇರಬೇಕಾದದ್ದು ಸೃಷ್ಟಿ ನಿಯಮವೆನ್ನುವ ಜಡ ಮನೋಭಾವ ಇವರದಲ್ಲ.
ಅದು ನಿಜವೇ ಇರಬಹುದು, ಆದರೆ ಅದು ಬೇರೆ ರೀತಿ ಏಕೆ ಇರಬಾರದು
ಎಂಬುದು ಇವರ ಮೂಲ ಪ್ರಶ್ನೆ. ಇಂಥ ಚಿಕಿತ್ಸಕ ದೃಷ್ಟಿಯಿಂದ ನೋಡಿದಾಗ ಮಾತ್ರ
ಸೃಷ್ಟಿ ಲಕ್ಷಣದಲ್ಲಿ ಹುದುಕಿರುವ ಗಹನ ಸತ್ಯಗಳು ಆವಿಷ್ಕಾರಗೊಳ್ಳುತ್ತವೆ.
ರಾಮನ್ನರ ಪಾದರಸ ಬುದ್ಧಿ ನೆಲೆ ಅರಸಿ
ಅಲೆಯುತ್ತಿದ್ದಾಗ ಯುಕ್ತ ಸನ್ನಿವೇಶ ತಾನಾಗಿಯೇ ಒದಗಿಬಂತು - ಇವರ ಸಹಪಾಠಿಯೊಬ್ಬ ಧ್ವನಿಗೆ
ಸಂಬಂಧಿಸಿದ ಒಂದು ಪ್ರಯೋಗ ಮಾಡಿದ. ಫಲಿತಾಂಶಗಳು ಅಸಂಗತವಾಗಿದ್ದುವೆಂದು
ಅವನಿಗೆ ಅನಿಸಿತು. ಪ್ರೊಫೆಸರರೊಡನೆ ಸಂದೇಹ ಚರ್ಚಿಸಿದಾಗ ಸಮರ್ಪಕ ಪರಿಹಾರ
ದೊರೆಯಲಿಲ್ಲ. ಪ್ರಯೋಗ ಒಡ್ಡಿದ್ದ ಅಡ್ಡಗೋಡೆ ರಾಮನ್ನರ ಕುಶಾಗ್ರಮತಿಗೆ ಸವಾಲಾಯಿತು.
ವಿಷಯವನ್ನು ಅವರು ಕೂಲಂಕಷವಾಗಿ ಪ್ರಾರಂಭದಿಂದಲೂ ವಿವೇಚಿಸಿದರು. ಸಮಗ್ರವಾಗಿ ಪರಿಶೀಲಿಸಿದರು - ಈಗ ಅಸಾಂಗತ್ಯಗಳು ಉಳಿದಿರಲಿಲ್ಲ.
ಅದೇ ಸಮಸ್ಯೆ, ನೋಡಿದ ದೃಷ್ಟಿ ಬೇರೆ, ಈ ಜಾಣ್ಮೆ ಫಲ ನೀಡಿತ್ತು. ತಾವೇ ಪ್ರಯೋಗವನ್ನು ಮಾಡಿ ಸಾಕಷ್ಟು
ವಿವರಗಳನ್ನು ಸಂಗ್ರಹಿಸಿ ಶಿಷ್ಟ ಗ್ರಂಥಗಳ ತೀರ್ಮಾನಗಳೊಡನೆ ಹೋಲಿಸಿ ತಮ್ಮ ನಿಲವಿನ ಯಥಾರ್ಥ್ಯವನ್ನು
ದೃಢಪಡಿಸಿಕೊಂಡರು. ಇಂಗ್ಲೆಂಡಿನ ಸುಪ್ರಸಿದ್ಧ ಭೌತವಿಜ್ಞಾನ ವಿದ್ವಾಂಸ ರ್ಯಾಲೆ ಅವರೊಡನೆ ರಾಮನ್ ತಮ್ಮ ಈ ಸುಧಾರಣೆಯನ್ನು ಕುರಿತು ಪತ್ರ ವ್ಯವಹಾರ ನಡೆಸಿದರು.
ಲಾರ್ಡ್ ರ್ಯಾಲೆ ಈ ತರುಣ ವಿಜ್ಞಾನಿಯ ಸಾಹಸವನ್ನು ಮೆಚ್ಚಿ
ಪ್ರಶಂಸಿಸಿದರು. ಪ್ರಯೋಗ ಪರಿಣತಮತಿ ರಾಮನ್ನರ ವ್ಯಕ್ತಿತ್ವದ ಲಘು ರೇಖೆಯನ್ನು
ಇಲ್ಲಿ ಕಾಣುತ್ತೇವೆ.
ಬೆಳಕಿನ ವಿಚಾರವಾಗಿ ಹೆಚ್ಚು ಹೆಚ್ಚು
ಬೆಳಕು ಪಡೆಯಬೇಕು ಎಂದು ಇವರಿಗೆ ಕುತೂಹಲ. ಹಲವಾರು ಪ್ರಯೋಗಗಳನ್ನು
ಮಾಡಿ ಲಭ್ಯ ವಿವರಗಳನ್ನು ಕ್ರಮಬದ್ಧವಾಗಿ ಅಳವಡಿಸಿ ವಿವರಣೆಗಳನ್ನೂ ತೀರ್ಮಾನಗಳನ್ನು ಬರೆದು ಪ್ರಬಂಧ
ರಚಿಸಿ ಅವನ್ನು ಪರಿಶೀಲನೆಗೋಸ್ಕರ ತಮ್ಮ ಗುರುಗಳಾಗಿದ್ದ ಪ್ರೊ ಜೋನ್ಸರಿಗೆ ಕೊಟ್ಟರು. ಅದರ ಒಂದು ಪ್ರತಿಯನ್ನು ಲಂಡನ್ನಿನ ‘ಫಿಲಸಾಫಿಕಲ್ ಮ್ಯಾಗಝೀನ್’ ಎಂಬ ವಿಜ್ಞಾನ ಪತ್ರಿಕೆಗೆ
ಪ್ರಕಟಣೆಯ ಸಲುವಾಗಿ ಕಳಿಸಿದರು. ಅದು ಸ್ವೀಕೃತವಾದಾಗ ಈ ತರುಣನಿಗೆ ಆದ ಸಂತೋಷ,
ದೊರೆತ ಕುಮ್ಮಕ್ಕು ಅಪಾರ. ನವಂಬರ್ ೧೯೦೬ರ ಸಂಚಿಕೆಯಲ್ಲಿ
ವಿದ್ಯಾರ್ಥಿ ರಾಮನ್ನರ (ಪ್ರಾಯ ಹದಿನೆಂಟು) ಪ್ರಥಮ
ಸಂಶೋಧನ ಪತ್ರ On the obliquity factor in Diffraction ಪ್ರಕಟವಾಯಿತು.
ಪ್ರಾಯೋಗಿಕ ಭೌತವಿಜ್ಞಾನದಲ್ಲಿ ಹೊಸ ಜಾಡು ಹಿಡಿದು ನಡೆಯಲು ಇದೊಂದು ಬುನಾದಿ ಕಲ್ಲು.
ಇವರ ಮುಂದಿನ ಸಂಶೋಧನ ಪತ್ರ ಅಚ್ಚಾದದ್ದು ಸುಪ್ರಸಿದ್ಧ ಬ್ರಿಟಿಷ್ ವಿಜ್ಞಾನ ಪತ್ರಿಕೆ
‘ನೇಚರ್’ನಲ್ಲಿ.
ಇಳಿವಯಸ್ಸಿನಲ್ಲಿ ರಾಮನ್ ರಚಿಸಿದ
ಗ್ರಂಥ ‘ಫಿಸಿಯಾಲಜಿ ಆಫ್ ವಿಶನ್’ (೧೯೬೮), ಇದರ ಪ್ರಥಮ ಅಧ್ಯಾಯದಲ್ಲಿ ಇವರು ಬರೆದಿರುವ ಕೆಲವು ಮಾತುಗಳನ್ನು ಇಲ್ಲಿ ಉಲ್ಲೇಖಿಸಬಹುದು
“...ಮೇಲಿನ ಪರಿಚ್ಛೇದದಲ್ಲಿ ನಮೂದಿಸಿರುವ ಯಾವ ಪರಿಕಲ್ಪನೆಗಳನ್ನೂ ಪರಿಸ್ಥಿತಿಯ
ವಾಸವಾಂಶಗಳೊಡನೆ ಸಮನ್ವಯಗೊಳಿಸಲು ಬರುವುದಿಲ್ಲವೆಂದು ಈ ಲೇಖನ ಪರಿಶೀಲನೆಗಳಿಂದ ಗೊತ್ತಾಗಿದೆ.
ಇವು ದೃಷ್ಟಿಯ ಸ್ವಭಾವವನ್ನು ಕುರಿತು ಒಂದು ಹೊಸ ಚಿತ್ರವನ್ನೂ ನಮ್ಮ ದೃಗನುಭವಗಳಿಗೆ
ಹೊಸ ಅರ್ಥಗಳನ್ನೂ ರೂಪಿಸಿವೆ...” ‘ನಮ್ಮ ದೃಗನುಭವಗಳಿಗೆ
ಹೊಸ ಅರ್ಥರೂಪಣೆ’ ಇದು ಪ್ರಾಯೋಗಿಕ ವಿಜ್ಞಾನಿ ರಾಮನ್ನರ ಜೀವನ ಸಂಗೀತದ ಪಲ್ಲವಿ.
ಪ್ರೊ ಜೋನ್ಸರಿಗೆ ರಾಮನ್ ಅಚ್ಚುಮೆಚ್ಚಿನ
ಶಿಷ್ಯ. ಎಂಎ ಪರೀಕ್ಷೆಯನ್ನು ಬರೆದೊಡನೆಯೇ (೧೯೦೭),
ಫಲಿತಾಂಶ ಬರುವ ಮುನ್ನವೇ, ಇವರನ್ನು ಯೂರೋಪಿಗೆ ಉನ್ನತ
ವ್ಯಾಸಂಗದ ಸಲುವಾಗಿ ಕಳಿಸಬೇಕೆಂದು ನಿರ್ಧರಿಸಿದರು. ಉನ್ನತ ಭೌತವಿಜ್ಞಾನದ
(ಸಮಗ್ರವಾಗಿ ವಿಜ್ಞಾನದ) ಅಭ್ಯಾಸ ಮತ್ತು ಸಂಶೋಧನೆಗಳಿಗೆ
ಅಂದು ಭಾರತದಲ್ಲಿ ಅವಕಾಶವಿರಲಿಲ್ಲ, ಭವಿಷ್ಯವೂ ಇರಲಿಲ್ಲ. ಏನಿದ್ದರೂ ಗ್ರೇಟ್ ಬ್ರಿಟನ್, ಯೂರೋಪ್ಗಳೇ ವಿಜ್ಞಾನಿಗಳ ಕಾಶಿ. ಆದ್ದರಿಂದ ಜೋನ್ಸ್ ತಮ್ಮ ಶಿಷ್ಯನ ನಾಳೆಯನ್ನು
ಕುರಿತು ತಳೆದ ನಿಲವು ಸಮರ್ಪಕವಾಗಿಯೇ ಇತ್ತು. ಸರಕಾರ ಈ ಶಿಫಾರಸನ್ನು ಅಂಗೀಕರಿಸಿತು.
ಆದರೆ ವೈದ್ಯಕೀಯ ಪರೀಕ್ಷೆಯ ಅಡಚಣೆ ದಾಟುವಾಗ ರಾಮನ್ ಸೋಲು ಅನುಭವಿಸಿದರು.
ವರದಿಯ ಸಾರಾಂಶ ಹೀಗಿತ್ತು - ರಾಮನ್ ಕೃಶಾಂಗಿ,
ದಕ್ಷಿಣ ಭಾರತದ ಬೆಚ್ಚಗಿನ ವಾತಾವರಣದಲ್ಲಿ ವಿಶಿಷ್ಟವಾದ ಆಹಾರ, ಜೀವನ ಕ್ರಮ ಮುಂತಾದವನ್ನು ಬೆಳೆಸಿಕೊಂಡು ಬಂದಿದ್ದ ತರುಣ: ಈತ
ಯೂರೋಪಿನ ತೀವ್ರ ವಾತಾವರಣ ಮತ್ತು ಭಿನ್ನ ಪರಿಸರದಲ್ಲಿ ಬದುಕಿ ಉಳಿಯಲಾರ. ಯೂರೋಪ್ ಪ್ರವಾಸ, ಆದ್ದರಿಂದ ಉನ್ನತ ವ್ಯಾಸಂಗ (?) ಎಲ್ಲವೂ ರದ್ದಾದವು.
ಆ ಬ್ರಿಟಿಷ್ ವೈದ್ಯನಿಂದ ತಮಗೆ ಆದರ ಮಹದುಪಕಾರವನ್ನು
ರಾಮನ್ ಅಹಮದಾಬಾದಿನಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಿನ ೧೯೬೮ರ ವಾರ್ಷಿಕಾಧಿವೇಶನದಲ್ಲಿ ಸ್ಮರಿಸುತ್ತ ಅದರಿಂದ
ಹೇಗೆ ತಾವು ಭಾರತದಲ್ಲಿಯೇ ಉಳಿದು ಸ್ವಸಾಮರ್ಥ್ಯದಿಂದ ಸಂಶೋಧನೆ ನಡೆಸುವುದು ಸಾಧ್ಯವಾಯಿತೆಂಬುದನ್ನು
ವಿನೋದಮಿಶ್ರಿತವಾಗಿ ಹೇಳಿದರು.
೧೯೦೭ರಷ್ಟು ಹಿಂದಿನ ಭಾರತ. ಸ್ವದೇಶೀಯವಾದದ್ದು
ಯಾವುದರಲ್ಲೂ ಮೌಲ್ಯವಿಲ್ಲದಿರಲು ಸಾಧ್ಯವಿಲ್ಲ ಎಂಬುದಾಗಿ ಗಣ್ಯ ಜನ ನಂಬುತ್ತಿದ್ದ ಕಾಲ. ಅಂದು ವಿಜ್ಞಾನವನ್ನೇ - ಇದನ್ನು ನೇಟಿವ್ ವಿಜ್ಞಾನ
ಎಂದು ವ್ಯಂಗ್ಯ ಮಿಶ್ರಿತವಾಗಿ ಕರೆಯುವುದಿತ್ತು - ವೃತ್ತಿಯಾಗಿ ಆಧರಿಸಬೇಕೆಂದು
ಬಯಸಿದ ಧೀಮಂತನಿಗೆ ತೆರೆದ ದಾರಿಗಳೇ ಇರಲಿಲ್ಲ. ಇದ್ದದ್ದು ಬೇರೆ ಒಂದು - ಅಖಿಲ ಭಾರತೀಯ ಸ್ಪರ್ಧಾಪರೀಕ್ಷೆಗೆ
ಕುಳಿತು ಉಚ್ಚ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಸರಕಾರದ ವರಿಷ್ಠಾಧಿಕಾರಿಯಾಗಿ ಅಧಿಕಾರ, ಹಣ, ಸುಖ, ಸಂತೃಪ್ತಿ ಪಡೆಯುವುದು.
ಹಣದಿಂದ ಸಕಲ ಇಷ್ಟಾರ್ಥ!
ತಮ್ಮ ಮೊದಲ ಪ್ರಯತ್ನ ವಿಫಲಗೊಂಡ ತರುವಾಯ
ಜೋನ್ಸರು ಶಿಷ್ಯನಿಗೆ ತೋರಿಸಿದ್ದು ಈ ಸುಲಭ ದಾರಿಯನ್ನು. ಸ್ಪರ್ಧಾಪರೀಕ್ಷೆಗೆ ಕೂರಲು
ಸಹ ಸರಕಾರದ ಪರವಾನಿಗೆ ಬೇಕಾಗಿತ್ತು. ಜೋನ್ಸರ ಪ್ರೇರಣೆಯಿಂದ ಮದ್ರಾಸು ಸರಕಾರ
ರಾಮನ್ನರ ಹೆಸರನ್ನು ಸೂಚಿಸಿತು. ಪರೀಕ್ಷೆ ಕೋಲ್ಕಟದಲ್ಲಿ. ಪರೀಕ್ಷೆಯ ವಿಷಯಗಳು ಚರಿತ್ರೆ, ಅರ್ಥಶಾಸ್ತ್ರ, ಸಂಸ್ಕೃತ ಮುಂತಾದವು. ಇದ್ದ ಅವಕಾಶ ಕೆಲವೇ ದಿವಸಗಳು,
ಕಲಿತ ಭೌತವಿಜ್ಞಾನ ಮತ್ತು ಕಲಿಯಬೇಕಾಗಿದ್ದ ಮಾನವಿಕ ವಿಷಯಗಳು - ಉಭಯ ಸಾಮಾನ್ಯವಾದದ್ದು
ಏನು? ತೋರ್ಕೆಗೆ ಏನೂ ಇಲ್ಲ. ಅಂತರ್ಗತವಾಗಿದ್ದದ್ದು
ರಾಮನ್ನರ ನಿಶಿತ ಪ್ರತಿಭೆ; ಅದು ಒದಗಿಸುವ ಕಸೂತಿಯ ಸಂಕೀರ್ಣದಲ್ಲಿ ಎಳೆಗಳನ್ನು
ಎಳೆಗಳ ಗೋಜಲಿನಲ್ಲಿ ಕಸೂತಿಯನ್ನೂ ನೋಡುವ ದೃಷ್ಟಿ. ಪರೀಕ್ಷೆ ನಾಳೆ.
ಇಂದು ಮದ್ರಾಸಿನಿಂದ ತಂತಿ ಬಂತು - ಎಂಎ ಡಿಗ್ರಿ ಪರೀಕ್ಷೆಯಲ್ಲಿ
ಮೊದಲ ದರ್ಜೆ ಮೊದಲ ಸ್ಥಾನ ಗಿಟ್ಟಿಸಿ, ವಿಶ್ವವಿದ್ಯಾಲಯದ ಇತಿಹಾಸದಲ್ಲಿ
ಆತನಕ ಯಾರೂ ಗಳಿಸದಿದ್ದಷ್ಟು ಅಂಕಗಳನ್ನು ಪಡೆದು ದಾಖಲೆ ಸ್ಥಾಪಿಸಿದ್ದರು. ಭೌತದೇವಿಯ ಭಂಡಾರದ ಮುದ್ರೆಯನ್ನೊಡೆದಿದ್ದರು ರಾಮನ್, ಇದರಿಂದ
ಅವರಿಗೆ ದೊರೆತ ನೂಕುಬಲ ಅಥವ ಕುಮ್ಮಕ್ಕು ಅಪಾರ.
ಫೆಬ್ರುವರಿ ೧೯೦೭ರಲ್ಲಿ ಅವರು ಇಂಡಿಯನ್
ಆಡಿಟ್ಸ್ ಅಂಡ್ ಅಕೌಂಟ್ಸ್ ಸರ್ವಿಸ್ (ಐಎ ಅಂಡ್ ಎಎಸ್) ಪರೀಕ್ಷೆ
ಬರೆದರು. ಭಾರತದಲ್ಲಿಯೇ ಇದ್ದುಕೊಂಡು ಬರೆಯಬಹುದಾಗಿದ್ದ ಪರೀಕ್ಷೆ ಇದೊಂದೇ.
ಐಸಿಎಸ್, ಅಂದರೆ ಇಂಡಿಯನ್ ಸಿವಿಲ್ ಸರ್ವಿಸ್,
ಪರೀಕ್ಷೆ ಬರೆಯಲು ಯೂರೋಪಿಗೆ ಹೋಗಬೇಕಾಗಿತ್ತು. ಪರೀಕ್ಷೆಯ
ಫಲಿತಾಂಶ ನಿರೀಕ್ಷೆಯನ್ನು ದೃಢೀಕರಿಸಿತು - ಪ್ರಥಮಸ್ಥಾನ. ಹೆಬ್ಬೆಟ್ಟೆಂದೂ ತೋರುಬೆಟ್ಟಾಗದು.
ಜೂನ್ ೧೯೦೭, ಚಂದ್ರಶೇಖರ ವೆಂಕಟರಾಮನ್
ಭಾರತ ಸರಕಾರದ ಅರ್ಥಶಾಖೆಯ ಉಚ್ಚ ಅಧಿಕಾರಿ - ಅಸಿಸ್ಟೆಂಟ್ ಅಕೌಂಟೆಂಟ್
ಜನರಲ್, ಆಗಿ ನೇಮನಗೊಂಡರು. ಕಾರ್ಯಕ್ಷೇತ್ರ ಕೋಲ್ಕಟ.
ಹತ್ತೊಂಬತ್ತರ ಕೌಮಾರ್ಯದಲ್ಲಿ ಲಭಿಸಿದ ಯಶಸ್ಸು, ಪ್ರಾಪ್ತವಾದ
ಹೊಣೆಗಾರಿಕೆ, ಏರಿದ ಎತ್ತರ ಅಪೂರ್ವವಾದವು ನಿಜ, ಆದರೆ ಇಲ್ಲಿ ಅವರು ಇಟ್ಟ ಹೆಜ್ಜೆ ಅದ್ವಿತೀಯವಲ್ಲ. ಸಮಾನಪ್ರತಿಭೆಯ
ಬೇರೆ ಯಾರೂ ಈ ದಾರಿಯಲ್ಲಿ ಸಾಗಬಹುದಿತ್ತು. ಹುದ್ದೆ ಖಾತ್ರಿಯಾದೊಡನೆಯೇ
ರಾಮನ್ ಬಾಳಸಂಗಾತಿಯನ್ನು ಅರಸಿ ಲೋಕಸುಂದರಿ ಎಂಬ ಕನ್ಯೆಯನ್ನು ಸ್ವಂತೇಚ್ಛೆಯಿಂದ ಆಯ್ದು ಮದುವೆ
(೬ ಮೇ ೧೯೦೭) ಆದರು. ಇವರ ವಿವಾಹ
ಅಂದಿನ ದಿವಸಗಳಲ್ಲಿ ಸ್ವಲ್ಪಮಟ್ಟಿಗೆ ಸಂಪ್ರದಾಯದ ವಿರುದ್ಧವಾಗಿತ್ತು. ಉದಾತ್ತ
ಧ್ಯೇಯವಾದಿಗಳು ರಾಮನ್. ಆರ್ಥಿಕ ಅಂತಸ್ತಿಗಿಂತ ಬುದ್ಧಿಶ್ರೀಮಂತಿಕೆಯೇ ಹಿರಿದೆಂದು
ಭಾವಿಸಿದ್ದವರು ಲೋಕಸುಂದರಿ. ಇಲ್ಲಿಗೆ ರಾಮನ್ ಜೀವನದ ಒಂದು ಘಟ್ಟ ಮುಗಿಯುತ್ತದೆ.
ವಧೂಪರೀಕ್ಷೆಗೆಂದು ಯುವಕ ರಾಮನ್ ಆಕೆಯ
ಮನೆಗೆ ಹೋದರು (೧೯೦೭). ಮನೆಯೊಳಗೆ ಕಾಲಿಡುವ ಮೊದಲೇ ಮೆಲು ಗಾಳಿಯಲ್ಲಿ
ತೇಲಿಬಂದ ನಾದ ವೀಣೆಯದು, ಜೊತೆಗೆ ವೀಣಾನಿಂದಿತ ಶಾರಿರದ್ದು - ಲೋಕಸುಂದರಿ ವೀಣೆ ನುಡಿಸುತ್ತ ಹಾಡುತ್ತಿದ್ದರು. ‘ರಾಮ ನೀ ಸಮಾನಮೆವರೋ’ ಎಂಬ ತ್ಯಾಗರಾಜರ
ಕೃತಿಯನ್ನು! ಆಗಲೇ ರಾಮನ್
ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ
ರಾಶಿಕೂಟ ಋಣಸಂಬಂಧವುಂಟೆಂದು ಹೇಳಿರಯ್ಯಾ
ಚಂದ್ರಬಲ ತಾರಾಬಲ ಉಂಟೆಂದು ಹೇಳಿರಯ್ಯಾ
ನಾಳಿನ ದಿನಕಿಂದಿನ ದಿನ ಲೇಸೆಂದು
ಹೇಳಿರಯ್ಯಾ
ಕೂಡಲ ಸಂಗಮ ದೇವನ ಪೂಜಿಸಿದ ಫಲ ನಿಮ್ಮದಯ್ಯಾ!
ಎಂದಿರಬೇಕು. ನೂತನ ದಂಪತಿಗಳು
ಕೋಲ್ಕಟದಲ್ಲಿ ಬಿಡಾರ ಹೂಡಿದರು. ಅಲ್ಲಿಯ ಇಗರ್ಜಿಯಲ್ಲಿ ಪ್ರತಿ ಆದಿತ್ಯವಾರ
ಸೇರುತ್ತಿದ ಪ್ರಾರ್ಥನಾ ಸಭೆಗೆ ರಾಮನ್ ಹಾಜರಾಗುತ್ತಿದ್ದರು. ಉದ್ದೇಶ:
ಪಾಶ್ಚಾತ್ಯ ಸಂಗೀತ ಶ್ರವಣ. ಆದರೆ ಈ ಸೂಕ್ಷ್ಮ ಅರಿಯದ ಇವರ
ಕರ್ಮಠ ಬ್ರಾಹ್ಮಣ ಬಾಣಸಿಗ ತಮಿಳುನಾಡಿಗೆ ಪಲಾಯನಗೈದು ರಾಮನ್ ದಂಪತಿಗಳು ಕ್ರಿಶ್ಚಿಯನರಾಗಿ ಮತಾಂತರಗೊಂಡರೆಂಬ
ವದಂತಿ ಹಬ್ಬಿಸಿದ್ದಿತ್ತು. ಕೋಣನ ಮುಂದೆ ಕಿನ್ನರಿ ಬಾರಿಸತಕ್ಕದ್ದಲ್ಲ!
ರಾಮನ್ ದಂಪತಿಗಳಿಗೆ ಇಬ್ಬರು ಗಂಡುಮಕ್ಕಳು. ಹಿರಿಮಗ ಚಂದ್ರಶೇಖರನ್
ವಕೀಲರಾಗಿದ್ದಾರೆ. ಅವರ ತಮ್ಮ ರಾಧಾಕೃಷ್ಣನ್ ಆಸ್ಟ್ರೇಲಿಯಾದಲ್ಲಿ ಖಭೌತ
ವಿಜ್ಞಾನಿಯಾಗಿದ್ದರು. ತಮ್ಮ ತಂದೆಯವರ ಮರಣಾನಂತರ ಇವರು ರಾಮನ್ ಇನ್ಸ್ಟಿಟ್ಯೂಟಿನ ನಿರ್ದೇಶಕತ್ವ ವಹಿಸಿಕೊಂಡಿದ್ದಾರೆ (೧೯೭೦).
ಜ್ಞಾನಪಿಪಾಸುಗಳು ಅಕ್ಷರಶಃ ಗರಬಡಿದವರಂತೆ
ಇರುತ್ತಾರೆ. ಅಧಿಕಾರ ಮತ್ತು ಸಂಪತ್ತು ಒದಗಿಸುವ ಪ್ರತಿಷ್ಠೆ ಅಥವಾ ಸ್ಥಾನಭದ್ರತೆ ಇವರಿಗೆ
ನೆಮ್ಮದಿ ನೀಡುವುದಿಲ್ಲ. ಗರಕ್ಕೆ (ಗ್ರಹ)
ಶಾಂತಿ ಅದು ಬೇಡುವ ಅಥವಾ ಸೂಚಿಸುವ ದಾರಿಯಲ್ಲಿ ನಡೆಯುವುದರಿಂದ ಮಾತ್ರ ಲಭಿಸೀತಷ್ಟೆ.
ರಾಮನ್ನರ ಅಧಿಕಾರ ಜೀವನದಲ್ಲಿ
ಅವರ ವಿಜ್ಞಾನದ ತೊರೆ ಒಂದು ಕ್ಷಣ ಬತ್ತಿದಂತೆ ತೋರಿತು. ಆದರೆ ಅದು ನೆಲದಡಿಯಲ್ಲಿ ಹರಿಯುತ್ತಲೇ ಇತ್ತು.
ಒಂದು ಸಂಜೆ ಅವರು ಕಚೇರಿಯಿಂದ ಮನೆಗೆ
ಮರಳುತ್ತಿದ್ದಾಗ ‘ದಿ ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಷನ್ ಆಫ್ ಸೈನ್ಸ್’ ಎಂದು ಅಂಕಿತವಾಗಿದ್ದ
ದೊಡ್ಡ ನಾಮಫಲಕ ಅವರ ಗಮನ ಸೆಳೆಯಿತು (೨೧೦ ಚೌಬಝಾರ್ ಸ್ಟ್ರೀಟ್,
ಕೋಲ್ಕಟ). ಆ ಸಂಸ್ಥೆಯನ್ನು ಹೊಕ್ಕರು. ಅದರ ಸ್ಥಾಪಕರು ಮಹೇಂದ್ರಲಾಲ್ ಸರ್ಕಾರ್. ಅವರ ಮಗ ಅಮೃತಲಾಲ್ ಸರ್ಕಾರರನ್ನು
ಅಂದು ರಾಮನ್ ಭೇಟಿ ಮಾಡಿ, ಕಛೇರಿ ಕೆಲಸ ಇಲ್ಲದ ವೇಳೆ - ಎಂದರೆ ಕೆಲಸದ ದಿವಸಗಳಲ್ಲಿ
ಬೆಳಗ್ಗೆ ಮತ್ತು ಸಾಯಂಕಾಲ, ರಜಾ ದಿವಸಗಳಲ್ಲಿ ಪೂರ್ತಿ - ತಮಗೆ ಅಲ್ಲಿ ವ್ಯಾಸಂಗ
ಮತ್ತು ಸಂಶೋಧನೆ ಮುಂದುವರಿಸಲು ಎಡೆಮಾಡಿಕೊಡಬೇಕೆಂದು ಕೋರಿದರು.
ಆ ಸನ್ನಿವೇಶದ ಮೌಲಿಕತೆ ಹೀಗಿತ್ತು: ಮಹಾವಿಜ್ಞಾನಿಗೆ
ಒಂದು ಪ್ರಯೋಗಶಾಲೆ ಬೇಕಾಗಿತ್ತು; ಪ್ರಯೋಗಶಾಲೆಗೆ ಒಬ್ಬ ಕರ್ತೃತ್ವಶಾಲಿಯ
ಆವಶ್ಯಕತೆಯಿತ್ತು. ರಾಮನ್ನರ ಕೋರಿಕೆ ಸುಲಭವಾಗಿ ಮಂಜೂರಾದದ್ದು ಆಶ್ಚರ್ಯವಲ್ಲ.
ಆ ಎರಡು ವರ್ಷಗಳ ಕಾಲ ಬಲುವೇಗದಿಂದ ಉರುಳಿತು. ಕಚೇರಿ ಕೆಲಸ,
ವಿಜ್ಞಾನದ ಕೆಲಸ - ಇವೆರಡರ ನಡುವೆ ಆಂದೋಲಿಸುತ್ತಿದ್ದ
ರಾಮನ್ ತಮ್ಮ ಅನುಯಾಯಿಗಳ ಮೇಲೆ ಮಾಡಿದ ಪರಿಣಾಮ ಮಹತ್ತರವಾದದ್ದು. ರಾಮನ್ನರ
ವೈಯಕ್ತಿಕ ಶಿಸ್ತು ಮತ್ತು ಶ್ರದ್ಧೆ, ಕ್ರಮಬದ್ಧ ಮುನ್ನಡೆ, ಅಚ್ಚುಕಟ್ಟು ಕೆಲಸ, ಹಿಂಗದ ಕುತೂಹಲ - ಇವು ಇತರರಿಗೆ ಆದರ್ಶಪ್ರಾಯವಾದುವು, ಅವರ ಮೆಚ್ಚುಗೆ ಗಳಿಸಿದುವು.
ಧ್ವನಿ ಕಂಪನಗಳು ಮತ್ತು ಸಂಗೀತೋಪಕರಣಗಳು ಇವನ್ನು ಕುರಿತು ಅವರು ಸಂಶೋಧನೆ ಮಾಡುತ್ತಿದ್ದರು.
ಇಷ್ಟರಲ್ಲಿಯೇ (೧೯೦೯) ಅವರನ್ನು
ಕೇಂದ್ರ ಸರಕಾರ ಅಸಿಸ್ಟೆಂಟ್ ಅಕೌಂಟೆಂಟ್-ಜನರಲ್ ರಂಗೂನಿಗೆ ವರ್ಗಾಯಿಸಿತು.
ವಿಜ್ಞಾನದ ಹೃದಯವನ್ನು ಕೊಲ್ಕಟದಲ್ಲಿಯೇ ಬಿಟ್ಟು ರಂಗೂನಿಗೆ ತೆರಳಿದರು.
ರಂಗೂನಿನಲ್ಲಿ ಅವರು ಅಧಿಕಾರದಲ್ಲಿದ್ದ
ಅವಧಿಯಲ್ಲಿ ನಡೆದ ಒಂದು ಘಟನೆ ಅವರ ವ್ಯಕ್ತಿತ್ವದ ಒಂದು ಮುಖವನ್ನು ಚೆನ್ನಾಗಿ ಎತ್ತಿತೋರಿಸುತ್ತದೆ. ಅವರ ಮೇಲಧಿಕಾರಿ
ಅಕೌಂಟೆಂಟ್-ಜನರಲ್ ಆಗಿದ್ದಾತ ಆಳುವ ಆಂಗ್ಲ ಪ್ರಭುಗಳ ಸಂತಾನದವ,
ಗರ್ವ ಅಹಂಕಾರಗಳ ಮುದ್ದೆ. ಅವನ ಮುಸುಡಿನಲ್ಲಿ ನೇಟಿವುಗಳನ್ನು
ಕಂಡರೆ ತಿರಸ್ಕಾರ ಅರಿಯುತ್ತಿತ್ತು. ಆತನ ಒಂದು ಹುಕುಮನ್ನು ರಾಮನ್ ಟೀಕಿಸಿ
ಷರಾ ಬರೆದಿದ್ದರು. ಇದರಿಂದ ರೌದ್ರಾವತಾರ ತಾಳಿದ ಪ್ರಭು ರಾಮನ್ನರ ಕೋಣೆಗೆ
ದಡಬಡಾಯಿಸಿ ಬಂದು ಆ ಪತ್ರವನ್ನು ಅವರ ಮೇಜಿನ ಮೇಲೆ ಕುಕ್ಕಿ, ಅಲ್ಲಿದ್ದ
ಕೆಂಪುಶಾಯಿಯ ಕುಪ್ಪಿ ಹೆಕ್ಕಿ, “ಮಿಸ್ಟರ್ ರಾಮನ್! ‘ಈ ಕುಪ್ಪಿಯಲ್ಲಿ
ಕಪ್ಪು ಶಾಯಿ ಇದೆ’ ಎಂದು ನಾನು ಹೇಳಿದರೆ, ‘ಅದು ಕಪ್ಪುಶಾಯಿ ಖಂಡಿತವಾಗಿಯೂ
ಖರೆ ಸಾರ್’ ಎಂದು ಹೇಳಬೇಕಾದದ್ದು ನಿಮ್ಮ ಕರ್ತವ್ಯ, ತಿಳಿಯಿತೇ?” ಎಂದು ಜರೆದು ಮಾತಾಡಿದ.
ಅಭಿಮಾನಧನ ರಾಮನ್ ಸೆಟೆದೆದ್ದು ಮಾರಸ್ತ್ರ
ಎಸೆದರು, “ನೀವು ಹಾಗೆ ಹೇಳಿದ್ದಾದರೆ ‘ನೀವು ಕುರುಡರು ಅಥವಾ ಹುಚ್ಚರು ಅಥವಾ ಎರಡೂ’ ಎಂದು ಹೇಳಬೇಕಾದದ್ದು
ನನ್ನ ಕರ್ತವ್ಯ.”
ರಂಗೂನಿನಲ್ಲಿ ರಾಮನ್ ಹೆಚ್ಚು ಕಾಲ
ಇರಲಿಲ್ಲ. ೧೯೧೦ರ ಮಾರ್ಚ್ನಲ್ಲಿ ಅವರ ತಂದೆ ತೀರಿಕೊಂಡರು.
ಆರು ತಿಂಗಳ ರಜೆಯಲ್ಲಿ ಮದ್ರಾಸಿಗೆ ಮರಳಿದರು. ತಮ್ಮ ತಂದೆಯವರ
ಉತ್ತರಕ್ರಿಯೆ ಮುಗಿದ ಅನಂತರ ಉಳಿದ ದಿವಸಗಳನ್ನು ಮದ್ರಾಸು ವಿಶ್ವವಿದ್ಯಾಲಯದ ಪ್ರಯೋಗಶಾಲೆಯಲ್ಲಿ ಕಳೆದರು.
ಈ ಐದಾರು ತಿಂಗಳ ಅವಧಿ ಅವರಿಗೆ ತಮ್ಮ ಅನ್ವೇಷಣೆಯನ್ನು ಮುಂದುವರಿಸಲು ಬಹಳ ಉಪಯುಕ್ತವಾಯಿತು.
ರಜೆ ಮುಗಿದ ತರುವಾಯ ಅವರು ರಂಗೂನಿಗೆ ಮರಳಬೇಕಾಗಲಿಲ್ಲ. ಈಗ ಅವರು ನಾಗಪುರದ ಕಚೇರಿಯ ಮುಖ್ಯಸ್ಥರು, ಡೆಪ್ಯೂಟಿ ಅಕೌಂಟೆಂಟ್-ಜನರಲ್ ದರ್ಜೆ (೧೯೧೦ ಪ್ರಾಯ ೨೨).
ಅಂದು ಬಿಳಿಯರ ಉಕ್ಕಿನ ಜಾಲ ತೀರ ಕೆಳಮಟ್ಟದ
ಅಧಿಕಾರಿಗಳವರೆಗೂ ಸಾಂದ್ರವಾಗಿ ಹರಡಿತ್ತು. ಅಖಿಲ ಭಾರತೀಯ ಸ್ಪರ್ಧಾಪರೀಕ್ಷೆಯಲ್ಲಿ
ಜಯಶೀಲರಾಗಿದ್ದ ಬೆರಳೆಣಿಕೆಯ ‘ನೇಟಿವ್’ಗಳಿಗೆ ಮಾತ್ರ ಉನ್ನತ ಅಧಿಕಾರಿಗಳಾಗಲು
ಸಾಧ್ಯವಿತ್ತು. ಇಂಥವರನ್ನು ಮೂರು ವಿಧದ ಕಿರುಕುಳಗಳು ಬಾಧಿಸುತ್ತಿದ್ದುವು - ವೈಸ್ರಾಯ್ ಮುಂತಾದ ವರಿಷ್ಠ ಅಧಿಕಾರಿಗಳ ದೃಷ್ಟಿಯಲ್ಲಿ ನಂಬಿಕೆಗೆ ಅರ್ಹತೆ ಪಡೆದಿರದ ಆದರೆ ತಾಳಿಕೊಳ್ಳಬೇಕಾದ
ತಾಬೆದಾರರಿವರು; ಕೈಕೆಳಗಿನ ಬಿಳಿ ನೌಕರರ ವರ್ಣಮತ್ಸರದ ಫಲವಾಗಿ ಅವರ ವಿಶ್ವಾಸ
ಸಹಕಾರ ಗಳಿಸದ ಉನ್ನತ ಅಧಿಕಾರಿಗಳಿವರು; ಬಾರತೀಯರ ದೃಷ್ಟಿಯಲ್ಲಿ ತ್ರಿಶಂಕುಗಳಿವರು.
ನಾಗಪುರಕ್ಕೆ ರಾಮನ್ ಬಂದಾಗ ಈ ‘ಹುಡುಗ’ನನ್ನು ಬಿಳಿಯ ತಾಬೆದಾರರು ಒಪ್ಪಲಿಲ್ಲ. ಅವರ ದರ್ಪ ದಬ್ಬಾಳಿಕೆ
ವಿಷಮ ಸ್ಥಿತಿಯೈದಿದ್ದುವು. ಮಾನವ ಗತಿವಿಜ್ಞಾನದ ಈ ನೂತನ ಪ್ರಯೋಗಶಾಲೆಯಲ್ಲಿ
ರಾಮನ್ ನಡೆಸಿದ ಪ್ರಯೋಗಗಳೂ ಪ್ರಯೋಗ ವಿಧಾನಗಳೂ ಬೇರೆಯೇ. ಪಟ್ಟಭದ್ರ ಹಕ್ಕುಗಳಿದ್ದು
ಅವುಗಳ ಒತ್ತುಗಂಬಗಳಿಂದಲೇ ತಮ್ಮ ಸ್ಥಾನಗಳ ನೆಲೆ ಕಾಪಾಡಿಕೊಂಡು ಬಂದಿದ್ದ ಹಲವಾರು ಅಧಿಕಾರಿಗಳಿಗೆ
ರಾಮನ್ನರ ಋಜುಮಾರ್ಗ ಸಹಿಸಲಾಗಲಿಲ್ಲ. ರಾಮನ್ ಅನನುಭವಿ, ತರುಣ, ನೇಟಿವ್ ಅಧಿಕಾರಿ ಎಂದು ಮುಂತಾಗಿ ಅವಹೇಳನೆ ಮಾಡುವ ದೂರು
ಕಾಗದಗಳನ್ನು ಕೈಕೆಳಗಿನ ಆಂಗ್ಲ ಮತ್ತು ಇತರ ಅಧಿಕಾರಿಗಳು ವರಿಷ್ಠಾಧಿಕಾರಿಯಾದ ಅಕೌಂಟೆಂಟ್ ಜನರಲ್ರಿಗೆ ಕಳಿಸಿದರು. ಅವರು ನ್ಯಾಯಪರರಾಗಿದ್ದುದೊಂದು ಸುದೈವ.
ಪರಿಸ್ಥಿತಿಯನ್ನು ಸರಿಯಾಗಿ ವಿಮರ್ಶಿಸಿ ತಿಳಿದುಕೊಂಡು ಅವರು ರಾಮನ್ನರ ನ್ಯಾಯನಿಷ್ಠುರತೆ,
ದಕ್ಷತೆ, ದಿಟ್ಟತನಗಳನ್ನು ಪ್ರಶಂಸಿಸಿ ಯುಕ್ತ ಆದೇಶ ಹೊರಡಿಸಿದರು.
ಕಚೇರಿ ಕೆಲಸ ಸುಸೂತ್ರವಾಯಿತು. ನಾಗಪುರದಿಂದ ಕೊಲ್ಕಟಕ್ಕೆ
ನವಂಬರ್ ೧೯೧೧ರಲ್ಲಿ ವರ್ಗಪಡೆದು ಆ ಆತ್ಮೀಯ ಮತ್ತು ಪ್ರಿಯ ನಗರವನ್ನು ರಾಮನ್ ಪುನಃ ಪ್ರವೇಶಿಸಿದರು.
ಹೀಗೆ ಹೃದಯ ಮತ್ತು ದೇಹ ಮತ್ತೆ ಒಂದುಗೂಡಿದವು.
ಆಗ ಕೊಲ್ಕಟ ವಿಶ್ವವಿದ್ಯಾಲಯದ ಕುಲಪತಿ
ಆಗಿದ್ದವರು ಸುಪ್ರಸಿದ್ಧ ಆಡಳಿತಗಾರ ವಿದ್ಯಾಕಾರಣಿ ಸರ್ ಆಶುತೋಷ ಮುಖರ್ಜಿಯವರು. ಈ ದೇಶದ ಪ್ರಗತಿ ವೈಜ್ಞಾನಿಕ ಮನೋಧರ್ಮದ
ಬೆಳೆವಣಿಗೆಯಿಂದ ಮಾತ್ರ ಸಾಧ್ಯ ಎಂಬುದನ್ನು ಚೆನ್ನಾಗಿ ಮನಗಂಡಿದ್ದ ಅವರು ೧೯೧೫ರಲ್ಲಿ ವಿಶ್ವವಿದ್ಯಾಲಯದ
ವಿಜ್ಞಾನ ಕಾಲೇಜನ್ನು ಪ್ರಾರಂಭಿಸಿದರು. ಉದಾರಿಗಳೂ ಶ್ರೀಮಂತರೂ ಆದ ಸರ್
ತಾರಕಾನಾಥ ಪಲಿತರೂ ಡಾ ರಾಸ್ ಬೆಹಾರಿ ಘೋಷರೂ ಈ ಕಾಲೆಜಿಗೆ ಮುಕ್ತಕರಗಳಿಂದ ಧನಸಹಾಯ ಮಾಡಿದ್ದರು.
ಪಲಿತರ ಗೌರವಾರ್ಥ ಕೊಲ್ಕಟ ವಿಶ್ವವಿದ್ಯಾಲಯದಲ್ಲಿ ಅವರ ಹೆಸರಿನಲ್ಲಿ ಭೌತವಿಜ್ಞಾನದ
ಒಂದು ಪೀಠವನ್ನು (chair - ಪ್ರಾಧ್ಯಾಪಕತ್ವ) ಪ್ರಾರಂಭಿಸಲಾಗಿತ್ತು.
ಅಂದರೆ, ವಿಜ್ಞಾನದ ಅಭಿವೃದ್ಧಿಗೋಸ್ಕರ ಹಣ ಒದಗಿ ಬಂತು;
ಹುದ್ದೆ ಏರ್ಪಟ್ಟಿತು. ಆದರೆ ಸತ್ತ್ವನೀಡಬಲ್ಲ ಸಮರ್ಥ ಎಲ್ಲಿದ್ದಾನೆ?
ಆಶುತೋಷ ಬಾಬುಗಳು ಸಂಸ್ಥೆಗಳ ಸ್ಥಾಪನಾಚಾರ್ಯರು, ಕನಸುಗಾರರು.
ಗುಣ ಎಲ್ಲಿದ್ದರೂ ಅದನ್ನು ಅರಸಿ ಹೋಗಿ ತಮ್ಮ ಸಂಸ್ಥೆಗಳಿಗೆ ಆಹ್ವಾನಿಸಿ ಕರೆದು ತರುವ
ಆಚಾರ್ಯಪುರುಷರು. ಅವರ ಅರ್ಜುನಲಕ್ಷ್ಯ ರಾಮನ್ನರ ಮೇಲೆ ಬಿತ್ತು.
ಈ ಹಿಂದೆಯೇ ಇವರ ವಿಜ್ಞಾನದಾಹ, ಪ್ರಯೋಗಶೀಲತೆ ಮತ್ತು ಅಸಾಧಾರಣ
ಚೈತನ್ಯಗಳನ್ನು ತಿಳಿಯುವ
ಯೋಗ ಆಶುತೋಷರಿಗೆ ಒದಗಿತ್ತು. ಪಲಿತ್ ಪೀಠದ ಆಹ್ವಾನ ಬಂದಾಗ (೧೯೧೭) ರಾಮನ್ ತಮ್ಮ ಜೀವನ ಪಥದ ಇನ್ನೊಂದು ಕೈಗಂಬದ ಬಳಿ ನಿಂತಿದ್ದರು.
ಅದರಲ್ಲಿದ್ದುದು ಎರಡು ತೋರುಗೈಗಳು. ಸ್ಪಷ್ಟ ಭವಿಷ್ಯವಿರುವ
ಅಧಿಕಾರಮಾರ್ಗವನ್ನು ಒಂದು ತೋರಿಸುತ್ತಿತ್ತು. ಅದರಲ್ಲೇ ಮುಂದುವರಿದುದಾದರೆ
ಭಾರತದ ಅಕೌಂಟೆಂಟ್-ಜನರಲ್ ಆಗಿ, ಎಂದರೆ ವರಿಷ್ಠ
ಅಧಿಕಾರಸ್ಥಾನವನ್ನೇರಿ ರಾರಾಜಿಸಬಹುದು; ತೋರ ನಿವೃತ್ತಿವೇತನ ಪಡೆದು ನಿಶ್ಚಿಂತವಾಗಿ
ಜೀವನ ಸಂಧ್ಯೆಯನ್ನು ಕಳೆಯಬಹುದು. ಇನ್ನೊಂದು ತೋರಿಸುತ್ತಿದ್ದುದು ಅಸ್ಪಷ್ಟ
ಭವಿಷ್ಯದ ವಿಜ್ಞಾನ ಮಾರ್ಗವನ್ನು; ಇದರಲ್ಲಿ ‘ಅಧಿಕಾರ’ ಇಲ್ಲ;
ದೊರೆಯುವ ಆರ್ಥಿಕ ಸಂಭಾವನೆ ಕಡಿಮೆ; ತಿರುಗಾಸಿನಿಂದ ಮುಂದೆ
ಏನಿದೆಯೋ ಗೊತ್ತಿಲ್ಲ. ವಿಜ್ಞಾನ ಅವರ ಪ್ರಥಮ ಪ್ರೇಮ. ಅದರ ಪೋಷಣೆಯೊಂದೇ ಅವರಿಗೆ ನೆಮ್ಮದಿ ನೀಡಬಲ್ಲ ವೃತ್ತಿ.
ಪಲಿತ್ ಪೀಠವನ್ನು ರಾಮನ್ ಸ್ವೀಕರಿಸಿದಾಗ
ಆಶುತೋಷ ಬಾಬುಗಳು ಆಡಿದ ಮಾತು ಗಮನಾರ್ಹವಾಗಿದೆ. “ಸರ್ ತಾರಾನಾಥರಿಂದ ದತ್ತಿಯಾಗಿರುವ
ಭೌತವಿಜ್ಞಾನದ ಪೀಠ ಅಲಂಕರಿಸಲು ಶ್ರೀ ಚಂದ್ರಶೇಖರ ವೆಂಕಟರಾಮನ್ ಬಂದಿರುವುದು ನಮ್ಮ ಅದೃಷ್ಟ. ಅತ್ಯಂತ ಕಠಿಣ
ಸನ್ನಿವೇಶಗಳಲ್ಲಿಯೂ ಬಿಡುವಿರದ ಕೆಲಸದ ಮಧ್ಯೆಯೂ ಈ ಮಹನೀಯರು ದುಡಿದು ಪ್ರಸಿದ್ಧಿಸಿರುವ ಸಂಶೋಧನ ಪತ್ರಗಳು
ಯೂರೋಪಿನಲ್ಲೆಲ್ಲ ಇವರಿಗೆ ಖ್ಯಾತಿ ತಂದಿವೆ. ಆರ್ಥಿಕವಾಗಿ ಲಾಭದಾಯವಲ್ಲದ
ಈ ಹುದ್ದೆಯನ್ನು ಸ್ವೀಕರಿಸುವಲ್ಲಿ ಶ್ರೀ ರಾಮನ್ನರು ಪ್ರದರ್ಶಿಸಿರುವ ತ್ಯಾಗಮನೋಧರ್ಮ ಮತ್ತು ಸಾಹಸ
ಪ್ರವೃತ್ತಿ ಅಭಿನಂದನಾರ್ಹ. ವಿದ್ಯಾಮಂದಿರದಲ್ಲಿ ಸತ್ಯಾನ್ವೇಷಣೆ ಮಾಡಲು
ಬರುವ ವಿಜ್ಞಾನಿಗಳಿಗೆ ಎಂದೂ ಕೊರತೆ ಬರಲಾರದು ಎಂದು ಈ ಒಂದು ನಿದರ್ಶನ ಧೈರ್ಯ ನೀಡುತ್ತದೆ.”
ಸಮರ್ಥ ವಿಜ್ಞಾನಿಗಳು ದಕ್ಷ ಆಡಳಿತಗಾರರಾಗಿವುದು
ಸಾಧ್ಯವೇ ಎಂಬುದೊಂದು ಬೌದ್ಧಿಕ ಪ್ರಶ್ನೆ. ವಿಜ್ಞಾನವೆಂದರೆ ನಿಸರ್ಗದೊಡನೆ
ವ್ಯವಹಾರ. ಇಲ್ಲಿ ಗೊತ್ತಿರುವ ಅಥವಾ ಯುಕ್ತ ವಿಧಾನಗಳಿಂದ ಗೊತ್ತುಮಾಡಬಹುದಾದ,
ವಿಧಿನಿಯಮಗಳೊಡನೆ ಒಡನಾಟ. ಆಡಳಿತೆಯಾದರೋ ವ್ಯಕ್ತಿಗಳೊಡನೆ
ವ್ಯವಹಾರ; ಇಲ್ಲಿ ಒಂದೊಂದು ಘಟನೆಯೂ ಅತಿ ಸಂಕೀರ್ಣ; ನಿಷ್ಕೃಷ್ಟವಾಗಿ ಅದರ ಪೂರ್ವೋತ್ತರಗಳನ್ನು ಅರಿಯುವಂತಿಲ್ಲ. ರಾಮನ್ನರ
ಉದಾಹರಣೆ ಮೇಲಿನ ಪ್ರಶ್ನೆಗೆ ಸಾಧ್ಯವಿದೆ ಎಂಬ ಉತ್ತರ ನೀಡುವುದು. ಜೂನ್
೧೯೦೭ರಿಂದ ೧೯೧೭ರ ತನಕ ಭಾರತೀಯ ಅರ್ಥಖಾತೆಯ ಅಧಿಕಾರಿಗಳಾಗಿದ್ದ ಅವರು ಸಾಧಿಸಿದ ಹಿರಿಮೆಯನ್ನು ಲಕ್ಷಿಸಿದ
ಭಾರತ ಸರಕಾರದ ವಿತ್ತ ಸದಸ್ಯ ಹೃತ್ಪೂರ್ವಕ ಧನ್ಯವಾದಗಳನ್ನು ರಾಮನ್ನರಿಗೆ ಅರ್ಪಿಸಿದ್ದು ಇತ್ತು.
ಹಣ ಚಲಾವಣೆ, ಉಳಿತಾಯ ಖಾತೆ, ಜೀವವಿಮೆ, ಸಾರ್ವಜನಿಕ ಹಣಕಾಸಿನ ವ್ಯವಹಾರ, ಸರ್ಕಾರದ ಖಾತೆಗಳ ಲೆಕ್ಕಪತ್ರಗಳ ತಪಾಸಣೆ ಮತ್ತು ಪರಿಶೋಧನೆ - ಇವೇ ವಿವಿಧ ರಂಗಗಳಲ್ಲಿ
ರಾಮನ್ ಮುದ್ರೆ (ರಾಮನ್ ಪರಿಣಾಮ?) ಸ್ಪಷ್ಟವಾಗಿ
ಬಿದ್ದಿತ್ತು. ಏಕಕಾಲದಲ್ಲಿ ಉಭಯ ಕ್ಷೇತ್ರಗಳಲ್ಲಿಯೂ ಅದ್ವಿತಿಯರಾಗಿ ದುಡಿದ
ಸವ್ಯಸಾಚಿಗಳಿವರು.
ಪಲಿತ್ ಪೀಠಸ್ಥರಾದ ರಾಮನ್ನರ ದುಡಿಮೆ
ಪುನಃ ಎರಡು ಕ್ಷೇತ್ರಗಳಲ್ಲಿ ಮುಂದುವರಿಯಿತು - ಕೊಲ್ಕಟ ವಿಶ್ವದ್ಯಾಲಯದಲ್ಲಿ
ಹಾಗೂ ಇಂಡಿಯನ್ ಅಸೋಸಿಯೇಶನ್ನಿನಲ್ಲಿ. ಎರಡನೆಯದರ ಪ್ರಯೋಗಮಂದಿರ ತಾನೇ ಅವರ
ಆಡುಂಬೊಲ! ೧೯೧೯ರಲ್ಲಿ ಈ ಸಂಸ್ಥೆಯ ಕಾರ್ಯದರ್ಶಿ ಅಮೃತಲಾಲ್ ಸರ್ಕಾರರು ಗತಿಸಿದಾಗ
ಆ ಸ್ಥಾನಕ್ಕೆ ರಾಮನ್ನರೇ ಚುನಾಯಿತರಾದರು. ಭಾರತೀಯ ವಿಜ್ಞಾನ ಯೂರೋಪಿಯನ್
ವಿಜ್ಞಾನದೊಡನೆ ಭುಜಕೊಟ್ಟು ನೆಟ್ಟಗೆ ನಿಲ್ಲಬೇಕಾದರೆ ಭಾರತೀಯತ್ವವೊಂದೇ ಸಾಲದು; ಅತ್ಯಾಧುನಿಕ ಪ್ರಯೋಗ ಮಂದಿರ ಕೂಡ ಬೇಕೇಬೇಕು ಎಂದು ಅವರಿಗೆ ಮನವರಿಕೆಯಾಯಿತು. ಇದನ್ನು ಕಾರ್ಯಗತಗೊಳಿಸಲು ಹಣ ಬೇಕು, ದುಡಿಯುವ ಜನ ಬೇಕು.
ಸಮರ್ಥ ವ್ಯಕ್ತಿಗಳ ಆಯ್ಕೆ, ಹಣದ ಸದ್ವಿನಿಯೋಗ ಹಾಗೂ ದತ್ತಿ
ದಾನಗಳ ಸಂಗ್ರಹ - ಹೀಗೆ ಮೂರು ಮುಖವಾಗಿ ರಾಮನ್ನರ ಪ್ರತಿಭೆ ಹರಿದು ಪ್ರಪಂಚದ
ವಿಜ್ಞಾನಪಟದಲ್ಲಿ ಕೊಲ್ಕಟಕ್ಕೆ ಒಂದು ಸ್ಥಾನ ದೊರೆಯುವಂತೆ ಮಾಡಿತು. ಆದರೆ
ಅಂತಿಮವಾಗಿ, ಪ್ರಯೋಗ ಮಂದಿರವಲ್ಲ - ಅದೊಂದು ಸಾಧನ ಮಾತ್ರ
- ಅದರಿಂದ ಪ್ರಕಟವಾಗುವ ಫಲಿತಾಂಶವಷ್ಟೆ ಯೋಗ್ಯತೆಯ ಸೂಚ್ಯಂಕ? ಈ ದಿಶೆಯಲ್ಲಿ ರಾಮನ್ ಮತ್ತು ಅವರ ಅನುಯಾಯಿಗಳು ಬರೆದು ಪ್ರಕಟಿಸಿದ ಅಸಂಖ್ಯ ಸಂಶೋಧನ ಪ್ರಬಂಧಗಳು
ಅಂತಾರಾಷ್ಟ್ರೀಯ ಖ್ಯಾತಿಯನ್ನು ಈ ಆಶ್ರಮಕ್ಕೆ ತಂದುವು. ಆದರೆ ಇದರ ಆಚಾರ್ಯಪುರುಷ
ರಾಮನ್ ಇನ್ನೂ ‘ನೇಟಿವ್’ ವಿಜ್ಞಾನಿಯೇ!
ಯೂರೋಪಿನ ಗಂಗೆಯಲ್ಲಿ ಮಿಂದು ಪುನೀತರಾಗಿ ಮರಳಿಬಂದ ಆಧುನಿಕ ವಿಜ್ಞಾನಿ ಅಲ್ಲ.
(ಮುಂದುವರಿಯಲಿದೆ)
Yaavude vishayavirali, wolleya niroopane matthu utkrushta kannada shabdagala prayoga GTNa avara maatina haagoo barevanigeya gunagalu. Odi aanandisiddene; mundina kantugalannoo oduva santoshada kutoohalavide!
ReplyDeleteಪ್ರಿಯ ಅಶೋಕರೆ, ವಂದೇಮಾತರಮ್.
ReplyDeleteತೆಲುಗಿನಲ್ಲಿ ಒಂದು ಗಾದೆ: తీసి తన్నుతె గారె బుట్టిలొ పడ్డాడు. (ಒದೆದರೆ ವಡ ಬುಟ್ಟಿಯಲ್ಲಿ ಬಿದ್ದ. Blessings in disguise.)
ರಾಮನ್ನರು ಸರಕಾರಿ ಹುದ್ದೆಯಲ್ಲ್ಲಿ ಮುಂದುವರಿದಿದ್ದರೆ, ಒಬ್ಬ ಅತ್ಯುನ್ನತ ಅಧಿಕಾರಿಯಾಗಿ ಪದವಿಯಿಂದ ನಿವೃತ್ತರಾಗುತ್ತಿದ್ದರು. ಭಾರತ ರತ್ನ ಆಗುತ್ತಿರಲಿಲ್ಲ. ನೊಬೆಲ್ ಪುರಸ್ಕಾರವಂತೂ ಖಂಡಿತ ಸಿಗುತ್ತಿರಲಿಲ್ಲ.
ಒಂದು ಕೋರಿಕೆ. ಚಾಯಾಚಿತ್ರಗಳನ್ನು ಜೋಡಿಸುವಾಗ ವಿಷಯಕ್ಕೆ ಸಂಬಂದಪಟ್ಟವುಗಳನ್ನ್ನು ಆಯಾ ಪುಟಗಳಲ್ಲಿ ಹೊಂದಾಣಿಸಿದರೆ ಇನ್ನೂ ಚೆನ್ನಾಗಿರುತ್ತದೆ.
Jai Hind!
K C Kalkura, B.A, B.L.,
ಪ್ರಿಯರೇ
Delete೧. ನನ್ನ ಚಿತ್ರ ಸಂಗ್ರಹ ತುಂಬ ದುರ್ಬಲವಾಗಿದೆ. ಹಾಗಾಗಿ ಬರೆಹಕ್ಕೆ ಸಂಬಂಧಿಸಿದ ಚಿತ್ರಗಳಿದ್ದರೆ ಹೆಚ್ಚಾಗಿ ಆಯಾ ಕಂತಿನೊಡನೆಯೇ ಹಾಕುತ್ತಿದ್ದೇನೆ. ಬರೆಹ ಚಿತ್ರವತ್ತಾಗುವಂತೆ ಕೊರತೆಯನ್ನು ಅಸಾಂದರ್ಭಿಕವಾದರೂ ಇರುವ ಜಿಟಿನಾ ಚಿತ್ರಗಳ ಸಂಗ್ರಹದಿಂದ ಹೆಕ್ಕಿ ಹಾಕುತ್ತಿದ್ದೇನೆ. ಅವುಗಳಲ್ಲಿ ಎಷ್ಟೋ ಚಿತ್ರಗಳಲ್ಲಿನ ಗಣ್ಯ ವ್ಯಕ್ತಿಗಳ ಮತ್ತು ಸನ್ನಿವೇಶಗಳ ಪರಿಚಯ ನನಗಿಲ್ಲ :-(
೨. ನನ್ನ ಜಾಲತಾಣ ನಿರ್ವಾಹಕ - ಮಗ, ಅಭಯಸಿಂಹ. ಚಿತ್ರ, ಸೇತು, ವಿಡಿಯೋಗಳನ್ನೆಲ್ಲ ಪುಟಗಟ್ಟಿ, ಜಾಲಕ್ಕೇರಿಸುವ ಆತನ ಸಮಯಮಿತಿಗೆ ಚಿತ್ರಗಳಿಗೆ ‘ಇತಿಹಾಸ’ ಸೇರಿಸಿ ಕಷ್ಟ ಕೊಡಲು ನನಗೂ ದಾಕ್ಷಿಣ್ಯವಾಗುತ್ತದೆ :-(