24 September 2013

ಕಾಸ್ಮಿಕ್‌ರೇ ತಯಾರಿಸಿದ ಹಲ್ವಾ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ ವಿ-ಧಾರಾವಾಹಿಯ ಕಂತು ಇಪ್ಪತ್ಮೂರು
ಅಧ್ಯಾಯ ಐವತ್ತೊಂದು

ನಮ್ಮ ಸಂಶೋಧನಾಪಂಡಿತ ಕಾಸ್ಮಿಕ್‌ರೇ ಆ ಒಂದು ದಿವಸ ಕೇಳಿದ, ಸಕ್ಕರೆ ಕುಂಬಳಕಾಯಿ ಹಲ್ವ ಮತ್ತು ಬಂಡೆ ಚಪಾತಿ ತಿಂದಿದ್ದೀರಾ ಸಾರ್?
ಕಾಶೀ ಹಲ್ವ ತಿಂದಿದ್ದೇನೆ. ಅದೂ ಬೂದಿಗುಂಬಳಕಾಯಿಯಿಂದ ಮಾಡುವುದು. ಇನ್ನು ಬಂಡೆ ಚಪಾತಿ ತಿನ್ನುವುದೇ?
ಕಾದ ಬಂಡೆಯ ಮೇಲೆ ಚಪಾತಿ ಬೇಯಿಸಿ ತಿನ್ನಬಹುದು. ಅದನ್ನು ಕುದುರೆಮುಖದ ಮೇಲೆ ಹೋದಾಗ ಮಾಡಿ ತೋರಿಸುತ್ತೇನೆ. ನೀವು ನನಗೆ ಒಂದೆರಡು ಸಕ್ಕರೆ ಕುಂಬಳಕಾಯಿ ತರಿಸಿಕೊಟ್ಟರಾಗಬಹುದು.
ಬೆಳ್ತಂಗಡಿಗೆ ಹೋದ ಅನ್ಸಾರಿಗೆ ಸಕ್ಕರೆ ಕುಂಬಳಕಾಯಿ ಎಲ್ಲಿಯೂ ದೊರೆಯಲಿಲ್ಲ. ಪುನಃ ಹೋದಾಗ ಚೀನೀಕಾಯಿ ತೆಗೆದುಕೊಂಡು ಬಾ ಎಂದೆ. ಒಂದಲ್ಲ ನಾಲ್ಕು ತಂದ. ಒಂದೇ ವಸ್ತು, ಬೆಂಗಳೂರು ಭಾಷೆ ಈ ಊರ ಜನರಿಗೆ ತಿಳಿಯಲಿಲ್ಲ.


ಕಾಸ್ಮಿಕ್, ಶ್ರೀನಿವಾಸ, ವಾಸು ಹಲ್ವದ ಪಾಕಶಾಸ್ತ್ರಿಗಳು. ಅವರು ಬಲು ಶ್ರದ್ಧೆಯಿಂದ ಅದರ ತೊಟ್ಟು ಕತ್ತರಿಸಿ, ಅಲ್ಲಿ ತೂತ ಕೊರೆದು, ಒಳಗಿನ ಬೀಜ, ಸುಂಗು ಎಲ್ಲವನ್ನೂ ಹೊರ ತೆಗೆದರು. ಈಗ ಚೀನೀಕಾಯಿ ಬರೀ ಗುಳವಿರುವ ಬುರುಡೆಯಾಯಿತು. ಅದರೊಳಗೆ ಬೆಲ್ಲ, ತೆಂಗಿನಕಾಯಿ, ಕಸಕಸೆ, ಏಲಕ್ಕಿ ಪಾಕವನ್ನು ಓರಣವಾಗಿ ತುಂಬಿಸಿ ತೊಟ್ಟಿನ ಮುಚ್ಚಳ ಮುಚ್ಚಿದರು. ಶಿಬಿರಾಗ್ನಿಯ ಸ್ಥಳದಲ್ಲಿ ಎರಡಡಿ ಆಳದ ಹೊಂಡ ತೋಡಿ ವಿಧಿಪೂರ್ವಕವಾಗಿ ಹೂರಣಪೂರ್ಣ ಚೀನೀಕಾಯಿಯನ್ನು ಅದರೊಳಗೆ ಸ್ಥಾಪಿಸಿ ಮಂತ್ರ ಪೂರ್ವಕವಾಗಿ ಮಣ್ಣುಮುಚ್ಚಿ ಅಭಿಷೇಕ ಮಾಡಿ ಅದರ ಮೇಲೆ ಶಿಬಿರಾಗ್ನಿ ಹೊತ್ತಿಸಿದರು. ಅಗ್ನಿಯ ಸುತ್ತಲೂ ಕೋಲಾಟ, ಬಯಲಾಟ, ಹಾಡುಗಬ್ಬ, ಕತೆಗಳ ಹೊನಲು ಹರಿಯಿತು. ಬೆಂಕಿ ಎಷ್ಟು ಹೊತ್ತು ಉರಿಯಬೇಕೆಂದು ಯಾರಿಗೂ ಖಚಿತವಾಗಿ ತಿಳಿದಿರಲಿಲ್ಲ. ಈಗಾಗಲೇ ಮೇಲಿನ ಶಾಖದಿಂದ ಚೀನೀಕಾಯಿ ಕಪ್ಪಾಗಿ ಹೋಗಿರಬಹುದೆಂದು ಎಲ್ಲರಿಗೂ ತವಕ ಉಂಟಾಯಿತು.
ಹಸಿವಾಗುತ್ತಿದೆ, ಹಲ್ವ ಬೇಕು ಎಂದೊರಲಿದ ಸೋಮಯ್ಯ.
ಬೆಂಕಿ ಎಳೆದರು, ಕೆದಕಿದರು. ರಾಶಿ ರಾಶಿ ನೀರು ಸುರಿದರು. ಅಲ್ಲೆಲ್ಲ ಬೂದಿ ಹೊಗೆ, ಅಂಗಳವೆಲ್ಲ ಹೇಸಿಗೆ. ನೆಲ ತಣ್ಣಗೆ ಮೆತ್ತಗಾದ ಮೇಲೆ ಕೆಸರಿನ ಹೊಂಡದಿಂದ ಚೀನೀ ಕಾಯಿಯನ್ನು ನಿಧಿ ಉತ್ಖನಿಸುವ ಗಾಂಭೀರ್ಯದಿಂದ ಎತ್ತಿದರು. ಅದು ಕಪ್ಪಾಗಿ ಹೋಗಿರಲಿಲ್ಲ.
ಅಬ್ಬಾ! ಇದು ಫಸ್ಟ್ ಕ್ಲಾಸಾಗಿ ಬೆಂದಿದೆ ಎಂದು ಉದ್ಗರಿಸಿದ ಕಾಸ್ಮಿಕ್, ಶೀನಿ, ವಾಸು ಮತ್ತು ಅವನ ಬೆಂಬಲಿಗರು.

ತೊಟ್ಟಿನ ಮುಚ್ಚಳ ಕಳಚಿದ. ಒಳಗಡೆ ಬೆಟ್ಟನಿಟ್ಟ. ಹೂರಣ ಅಂಟಿ ಚುರುಚುರು ಎಂದಾಗ ಬೆಟ್ಟು ಸ್ವಾಭಾವಿಕವಾಗಿಯೇ ಬಾಯಿಗೆ ಧಾವಿಸಿತು. ಹಂದಿಯ ಮಾಂಸವನ್ನು ತಿನ್ನಲು ಆದಿಮಾನವ ಕಂಡು ಹಿಡಿದದ್ದು ಈ ಕ್ರಮದಲ್ಲಿಯೇ ಅಂತೆ. ಗುಡಿಸಲಿಗೆ ಅಕಸ್ಮಾತ್ತಾಗಿ ಬೆಂಕಿ ಬಿದ್ದಾಗ, ಒಳಗೆ ಕಟ್ಟಿ ಹಾಕಿದ್ದ ಹಂದಿಗಳು ಜೀವಂತ ಬೆಂದು ಹೋದುವು. ಆದಿಮಾನವ ಅವನ್ನು ಮುಟ್ಟಿದ, ಮಾಂಸ ಅಂಟಿ ಬೆಟ್ಟು ಸುಟ್ಟಿತು, ಬಾಯಿಗೆ ಧಾವಿಸಿತು. ಮುಂದೆಷ್ಟೋ ವರ್ಷ ಗುಡಿಸಲೊಳಗೆ ಹಂದಿಯನ್ನು ಕಟ್ಟಿಹಾಕಿ ಹೊರಾಗಿನಿಂದ ಬೆಂಕಿಯಿಕ್ಕಿ ಆ ಸುಟ್ಟ ಹಂದಿಯನ್ನು ತಿನ್ನುವ ಪಾಶವೀಕ್ರಮ (ಸುಡುವ ಕ್ರಮ ಮಾತ್ರ ಪಾಶವೀ, ಕೊಂದು ತಿನ್ನುವುದು ಖಂಡಿತವಾಗಿಯೂ ಅಲ್ಲ) ರೂಢಿಯಲ್ಲಿತ್ತಂತೆ! ಹಂದಿಯ ಕತೆಯಿಂದ ಹೂರಣದ ಕತೆಗೆ ಹೊರಳೋಣ.
ಆಹಾ! ಎಂದನು ಕಾಸ್ಮಿಕ್.
ಪಿಂಟೋ ದೊರೆ ಸ್ಪೂನಿನ (ಚಮಚ ಅಲ್ಲ) ಸಹಾಯದಿಂದ ಹಲ್ವದ ತುಣುಕು ತಿಂದು ಭಲೆ! ಎಂದು ಮರೆಯಾದ.
ಲಕ್ಷ್ಮಿ ಅದರೊಳಗಿದ್ದ ತೀರ್ಥ ಕುಡಿದು ಏನು ಅಮೃತೋಪಮ! ಎಂದು ಕತ್ತಲೆಯಲ್ಲಿ ಕರಗಿದ.
ಗೌಡ ಮಾತ್ರ ಕೇಳಿದ, ಹಲ್ವ ಕಹಿ ಅಲ್ವಾ?
ರೆಡ್ಡಿ ಅನುಮೋದಿಸಿದ, ತೀರ್ಥ ಬರೀ ಹೊಗೆ ಪದಾರ್ಥ ಎಂದು ಉಗಿದ.
ಅಣ್ಣಯ್ಯಪ್ಪ, ಲಕ್ಷ್ಮಿ ತೀರ್ಥವನ್ನು ಉಗಿದು ಬಾಯಿತೊಳೆಯುತ್ತಿದ್ದುದನ್ನು ನೋಡಿದೆ ಎಂದು ಗುಳ್ಳೆಯನ್ನು ಒಡೆದ.
ಬೆಲ್ಲ ಸವಿಯಾಗಿಲ್ಲ ಕಾಸ್ಮಿಕ್.
ಬೆಂಕಿಗೆ ಶಾಖ ಸಾಲದು ಶ್ರೀನಿವಾಸ.
ಆತುರ ಸದಾ ಹಾನಿಕರ ವಾಸು.
ಈ ಊರಿನವರಿಗೆ ಸಕ್ಕರೆ ಕುಂಬಳಕಾಯಿ ಬೆಳೆಸಲಿಕ್ಕೆ ಬರುವುದಿಲ್ಲ. ಶುದ್ಧ ಅನಾಗರಿಕರು! ಎಂದು ನಾನು ಮಾತು ಮುಗಿಸಿದೆ.
ಬಂಡೆ ಚಪಾತಿಯ ಮಾತು ಮುಂದೆಂದೂ ಮರುಕೊಳಿಸಲಿಲ್ಲ.

ನಾಂದೀ ಮಹೋತ್ಸವ - ಹಿಂದಿನ ರಾತ್ರಿ
ಅಧ್ಯಾಯ ಐವತ್ತೆರಡು

ಹದಿನಾಲ್ಕರ ಇರುಳು ಬಲು ಸಂಭ್ರಮದ ರಾತ್ರಿ, ಕಲಿಗಳು ಗಂಡುಗಲಿಗಳಾಗುವ ಅದೇ ಮೊದಲಿನ ನಾಂದಿ. ಸಾಹಸ ಪ್ರದರ್ಶನದ ಶುಭ ನಿರೀಕ್ಷಣೆಯ ಸುಂದರ ಸ್ವಪ್ನ ಕಾಣುತ್ತಿರುವ ಸಂಧಿ. ನಾಳೆ ಮದುವೆಯೆಂದರೆ ಇಂದು ಮದುವೆ ಮನೆ ಹೇಗಿದ್ದೀತೋ ಹಾಗೆ. ಮರು ಮುಂಜಾನೆ ೬ ಗಂಟೆಗೆ ನಾವು ಕುದುರೆಮುಖ ಶಿಖರಾರೋಹಣ ತೊಡಗಬೇಕು. ಆ ಸಾಹಸಕ್ಕೆ ಮೀಸಲಾದದ್ದು ಮೂರು ದಿವಸ - ಒಂದು ಆರೋಹಣ, ಒಂದೂವರೆ ದಿವಸ ಅಲ್ಲಿಯೇ ವಾಸ, ಮೂರನೆಯ ಅಪರಾಹ್ನ ಅವರೋಹಣ. ಆಹಾರ, ಪಾತ್ರೆ, ಬಟ್ಟೆ, ಶಿಕ್ಷಣ ಸಾಮಗ್ರಿ ಎಲ್ಲವೂ ತಲೆ ಹೊರೆಯಲ್ಲಿಯೇ ಮೇಲಕ್ಕೆ ಹೋಗಬೇಕು. ಭಾರ ಹೊತ್ತು ನಡೆಯುವುದೂ ಹುಡುಗರ ಶಿಕ್ಷಣದ ಒಂದು ಅಂಗ. ಹಿಮಾಲಯದಲ್ಲಿ ೪೦ ಪೌಂಡು ಭಾರ ಹೊರಿಸುತ್ತಾರೆಂದ ಪಿಂಟೋ. ಇದು ಹಿಮಾಲಯವಲ್ಲ. ಇಲ್ಲಿ ಹತ್ತುವವರು ಲಕ್ಷ್ಮಿ ಪಿಂಟೋಗಳಲ್ಲ. ಆದ್ದರಿಂದ ಚಿಕ್ಕ ಜನರಿಗೆ, ಚಿಕ್ಕ ಗುಡ್ಡೆಗೆ, ಚಿಕ್ಕ ಭಾರ. ಹೊತ್ತುಕೊಂಡು ಹೋಗಬೇಕಾದ ವಿಶಿಷ್ಟ ಸಾಮಗ್ರಿಗಳನ್ನೂ ಅಡುಗೆಯವರ ಸಲಹೆಯಂತೆ ಒಂದುಗೂಡಿಸಿದೆವು: ಅಕ್ಕಿ, ತರಕಾರಿ, ಚಾ, ಸಕ್ಕರೆ, ಎಣ್ಣೆ, ಹಾಲು ಡಬ್ಬಿ ಇತ್ಯಾದಿ. ಶಿಕ್ಷಣ ಸಾಮಗ್ರಿ, ರೈಫಲ್, ಔಷಧಿಗಳು, ಪಾತ್ರೆ, ಪದಾರ್ಥ - ಒಂದೇ, ಎರಡೇ? ಯಾವುದನ್ನೂ ಬಿಡುವಂತಿಲ್ಲ. ಇವಿಷ್ಟಲ್ಲದೇ ಹುಡುಗರ ಸ್ವಂತ ವಸ್ತುಗಳು - ಕಂಬಳಿ, ಡರಿ, ಊಟದ ತಟ್ಟೆ, ಜೆರ್ಸಿ, ಬಟ್ಟೆ ಇತ್ಯಾದಿ. ವೈಯಕ್ತಿಕ ವಸ್ತುಗಳನ್ನುಳಿದು ಬೇರೆ ಎಲ್ಲವನ್ನೂ ಜೋಡಿಸಿ ಆಯಿತು. ಅವುಗಳ ಪಟ್ಟಿಯೂ ಸಿದ್ಧವಾಯಿತು. ನೂರರಷ್ಟು ಬೇರೆ ಬೇರೆ ಹೆಸರುಗಳಿದ್ದುವು. ಅಕ್ಕಿಯಿಂದ ಹಪ್ಪಳದವರೆಗೆ, ಕೈ ಮಚ್ಚಿನಿಂದ ಸೀಮೆ ಸುಣ್ಣದವರೆಗೆ.

ಸಂಜೆ ಹುಡುಗರನ್ನು ಒಟ್ಟುಗೂಡಿಸಿ, ವಿಷಯ ವಿವರಿಸಿ, ಬರಲು ಸಾಧ್ಯವಾಗದವರು ತಳದಲ್ಲಿಯೇ ಉಳಿಯಬೇಕೆಂದು ಸ್ಪಷ್ಟಪಡಿಸಲಾಯ್ತು. ಕುದುರೆಮುಖ ಗಂಡುಗಳಿಗೆ ಮಾತ್ರ. ಯಾವುದೇ ಕಾರಣದಿಂದ ನಿಮ್ಮಲ್ಲೆ ಕೆಲವರಿಗೆ ಮೇಲೇರುವುದು ಸಾಧ್ಯವಿಲ್ಲವೆಂದೆನ್ನಿಸಿದರೆ ದಯವಿಟ್ಟು ಪ್ರಾಮಾಣಿಕವಾಗಿ ಹಾಗೆ ತಿಳಿಸಿ ಇಲ್ಲಿಯೇ ಉಳಿಯಿರಿ. ನಡಿಗೆ ದೀರ್ಘ, ಏರು ಕಡಿದು, ಭಾರ ಅತಿ - ಅಂಥಲ್ಲಿ ನಡುದಾರಿಯಲ್ಲಿ ನೀವು ನೀಳಮೊಗ ಮಾಡಿದರೆ, ಏರುಬ್ಬಸ ಬಿಟ್ಟರೆ ಮೊದಲು ನನಗೆ ಬರುವುದು ಕಡುಕೋಪ, ಕರುಣೆ ಅಲ್ಲ. ಧೈರ್ಯ, ಸ್ವಂತೇಚ್ಛೆ ಇರುವವರು ಮಾತ್ರ ಬರಬೇಕು.

ಮೂವತ್ತಾರು ಮಂದಿಯಲ್ಲಿ ಐದು ಜನ ತಾವಾಗಿಯೇ ಹಿಂದೆ ನಿಂತರು. ಸಾಮಗ್ರಿ - ಕ್ಯಾಡೆಟ್ ವಿತರಣ ಪಟ್ಟಿಯನ್ನು ಮೊದಲೇ ಬರೆದು ಸಿದ್ಧಪಡಿಸಿಕೊಂಡು ಅದರ ಪ್ರಕಾರ ಅವರಿಗೆ ಎಲ್ಲವನ್ನೂ ಹಂಚಿಕೊಳ್ಳಲಾಯಿತು. ಅವನ್ನು ಹುಡುಗರ ಬೆನ್ನ ಮೇಲಿನ ಹ್ಯಾವರ್ಸ್ಯಾಕಿನೊಳಗೆ ತುಂಬಿಸಿ ಪ್ಯಾಕ್ ಮಾಡಿಯೂ ಆಯಿತು. ಕೋಟ್ ತೊಡುವಷ್ಟು ಸುಲಭವಾಗಿ ಇದನ್ನು ಹಾಕಿಕೊಳ್ಳಬಹುದು, ಕಳಚಿಡಬಹುದು. ಮೂರು ‘ಶೆರ್ಪಾರನ್ನು - ಅಂದರೆ ಒಟ್ಟು ಏಳು - ನೇಮಿಸಿಕೊಂಡೆವು. ಅಕ್ಕಿ, ಹಿಟ್ಟು, ಸಕ್ಕರೆ ಮುಂತಾದ ಆಹಾರ ಪದಾರ್ಥ ಅವರ ತಲೆಯ ಮೇಲೆ. ಹುಡುಗರಿಗೆ ಡರಿ, ಬ್ಲಾಂಕೆಟನ್ನು ಕಟ್ಟುವ ವಿಧಾನವನ್ನೂ ತೋರಿಸಿಕೊಡಲಾಯಿತು. ಬೆಟ್ಟ ಏರುವಾಗ ಭಾರ ಬೆನ್ನ ಮೇಲೆ ಬೀಳಬೇಕು, ಜೋಲುತ್ತಿರಬಾರದು. ಬಗ್ಗಿ ನಡೆಯುವಾಗ ಇದರಿಂದ ಸುಲಭವಾಗುವುದು. ಜೋಲುತ್ತಿದ್ದರೆ ಅಥವಾ ಕೈಗಳಿಂದ ನೇಲುತ್ತಿದ್ದರೆ ಬಲು ಬೇಗ ಹೆಗಲಿಗೆ ಇಲ್ಲ ಕೈಗಳಿಗೆ ತ್ರಾಸವಾಗುವುದು. ಮುಖ್ಯ ಇಷ್ಟು: ಕೈಗಳು ಖಾಲಿಯಾಗಿರಬೇಕು. ಆಕಾಶಯಾನಕ್ಕೆ ಗಗನಯಾತ್ರಿಯನ್ನು ಉಡಾಯಿಸುವಾಗ ವಹಿಸುವಷ್ಟೇ ಜಾಗರೂಕತೆ ಇಲ್ಲಿ ವಹಿಸಬೇಕು. ನಡುದಾರಿಯಲ್ಲಿ ಯಾವ ತೊಂದರೆಯೂ ಎದುರಾಗ ಕೂಡದು.

ಡಾಕ್ಟರರು ಮೊದಲು ತಾನು ಬರಲಾರೆ, ಬರಲು ಸಾಧ್ಯವಾಗಲಾರದು ಎಂದವರು ೧೪ರ ರಾತ್ರಿ ನಮ್ಮೆಲ್ಲರ ಪ್ರೋತ್ಸಾಹ ಕಂಡು (ಸ್ವಾರ್ಥವೂ ಇತ್ತು) ಸಂತೋಷದಿಂದ ತಾವೂ ಬರುವುದಾಗಿ ಹೇಳಿದರು. ಅಡುಗೆಯವರನ್ನು ಮೊದಲೇ ಪುಸಲಾಯಿಸಿದ್ದೆವು. ನಮ್ಮ ಹೊಟ್ಟೆಯ, ಆರೋಗ್ಯದ ಹೊಣೆಯನ್ನು ಬೇರೆಯವರು ಹೊತ್ತರೆ ನಮಗೆ ಮಾಡಲಾಗದಿರುವ ಮಹಾಕಾರ್ಯ ಯಾವುದು? ಈ ಭೀಮ ಗೋತ್ರಜರು ಮೈಸೂರು ಪಾಕ, ಬಾದುಷಾ, ಚೌಚೌ ಮಾಡಿ ಮೂರು ದೊಡ್ಡ ಡಬ್ಬಿಗಳಲ್ಲಿ ತುಂಬಿಸಿದರು. ರಾತ್ರಿಯಿಡೀ ನಿದ್ರೆಗೆಟ್ಟು ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಆಹಾರ ಸಿದ್ಧಪಡಿಸಿದರು.

ಹೀಗೆ ೧೫ರಂದು ಮೇಲೆ ಹೋಗುವವರು ೩೧ ಹುಡುಗರು, ಶಿವಪ್ಪ, ನಾನು, ಡಾಕ್ಟರರು, ಅವರ ಆರ್ಡರ್ಲೀ, ಅಡುಗೆಯವರಿಬ್ಬರು, ಖಾನ್ವೀಲ್ಕರಾದಿಯಾಗಿ ಮೂವರು ಸೇನಾ ಸಿಬ್ಬಂದಿ ಜೊತೆಗೆ ಬಂದು ಸೇರಿದ ನನ್ನ ಭಾವ ಪುತ್ತೂರಿನ ಗೌರೀಶಂಕರ, ಸೇವಕರು ೭ ಜನ - ೪೮ ಜನರ ತಂಡ ಕುದುರೆಯೊತ್ತಿದೊಡನೆ ಕುದುರೆಮುಖದ ನೆತ್ತಿಗೆ ನೆಗೆಯಲು ಸಿದ್ಧಬಂದೂಕಿಗಳಾಗಿ ೧೪ರ ರಾತ್ರಿ ಮಲಗಿದೆವು.

ಆರೋಹಣ ಪರ್ವ
ಅಧ್ಯಾಯ ಐವತ್ಮೂರು

ಬುಧವಾರ, ೧೫ನೇ ಫೆಬ್ರುವರಿ, ಶುಭ ಪ್ರಾತಃ ಕಾಲದ ೫.೩೦ ಗಂಟೆ. ಹೂಗಳು ಪರಿಮಳ ಹಾಡಿದುವು. ನಮ್ಮ ೪೮ ಮಂದಿಯ ತಂಡ ವಿಶಿಷ್ಟ ಸಾಮಗ್ರಿಗಳನ್ನೊಳಗೊಂಡು, ಪ್ರತಿಯೊಬ್ಬನೂ ಕೈಯಲ್ಲಿ ದೊಡ್ಡ ಬಡಿಗೆ ಹಿಡಿದು, ಮೇಲೇರಲು ಸಿದ್ಧವಾಗಿ ನಿಂತಿತು. ಪುನಃ ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ದೊರೆಗಳಿಗೆ ವರದಿ ಸಲ್ಲಿಸಿದೆ. ಅವರು ಹೀಗೆಂದರು, ನನಗೆ ಅತ್ಯಂತ ಹೆಮ್ಮೆಯ ದಿನವಿಂದು. ನಮ್ಮ ಆರೆಂಟು ತಿಂಗಳುಗಳ ಕನಸು ನನಸಾಗುತ್ತಿರುವ, ದೀರ್ಘ ಶ್ರಮ ಫಲವೀಯುವ ಸುಮುಹೂರ್ತ ಈಗ ಬಂದಿದೆ. ನಿಮ್ಮ ಸಾಹಸ ಜಯಪ್ರದವಾಗಲಿ. ನಿಮಗೆ ಮಂಗಳವಾಗಲಿ. ಹೋಗಿ ಸುಖವಾಗಿ ಮರಳಿ ಬನ್ನಿ. ನಾನಿನ್ನು ನಿಮ್ಮನ್ನು ಸ್ವಾಗತಿಸುವುದು ಬೆಂಗಳೂರಿನಲ್ಲಿಯೇ.

೧೨ನೇ ಮೈಸೂರು ಹೊರಟಿತು.
ಜಯಜಯಕಾರ ಗಿರಿಗಹ್ವರಗಳಲ್ಲಿ ಅನುರಣಿತವಾಗುತ್ತಿದ್ದಂತೆ, ತುಪಾಕಿ, ಸಿಡಿಮದ್ದುಗಳ ಆಸ್ಫೋಟನೆ ದಿಕ್ಕುಗಳನ್ನು ಭೇದಿಸುತ್ತಿದ್ದಂತೆ ೧೨ನೇ ಮೈಸೂರು ಹೊರಟಿತು.
ತಂಗಾಳಿ ಮೃದುವಾಗಿ ತೀಡುತ್ತಿದ್ದಂತೆ, ಸ್ವಚ್ಛಾಕಾಶದಲ್ಲಿ ತೀಕ್ಷ್ಣ ನಕ್ಷತ್ರಗಳು ಮಂಗಳ ಹಾಡುತ್ತಿದ್ದಂತೆ, ಗಗನದೆಡೆಗೆ ೧೨ನೇ ಮೈಸೂರು ಹೊರಟಿತು.
ಮಧ್ಯಾಕಾಶದಲ್ಲಿ ವೃಶ್ಚಿಕ ರಾಶಿ ಪ್ರಶ್ನಾರೂಪದಲ್ಲಿ ನಿಂತಿತ್ತು. ಧನೂರಾಶಿಯ ಕಿರಿ ಚಮಚ ಮಕ್ಕಳಿಗೆ ಹಾಲೂಡಿಸುವ ಭಂಗಿಯಲ್ಲಿತ್ತು. ಕಾಡು ನಿಶ್ಶಬ್ದ. ಪೂರ್ವ ದಿಗಂತದಲ್ಲಿ ಕ್ಷಣ ಕ್ಷಣ ಷೋಡಶಿಯ ಮುಖವರ್ಣವಿನ್ಯಾಸ ನಲಿಯುತ್ತಿತ್ತು. ಈ ಸಮಯದಲ್ಲಿ ೧೨ನೇ ಮೈಸೂರು ಹೊರಟಿತು.

ದೊರೆಗಳು ಬಲುದೂರ ಬಂದು ನಮ್ಮನ್ನು ಬೀಳ್ಕೊಟ್ಟರು. ಸಾಗರೋಲ್ಲಂಘನ ಪ್ರಾರಂಭದ ಹನುಮಂತನ ಮನಸ್ಥಿತಿ ನಮ್ಮದಾಗಿತ್ತು. ಸ್ವಾಮಿ, ನಿಸಾರರು ತಳದ ಶಿಬಿರಾಧಿಪತಿಗಳಾಗಿ ನಿಂತರು. ನಿಸಾರರೆಂದರು,
ಅಲ್ಲಿ ನಾಡಿನೆತ್ತರದಲಿ
ನಕ್ಷತ್ರಗಳ ಚಿರವಿಲಾಪದಲ್ಲಿ ಸಾಹಸಗೈವ ನಿಮಗೆ
ಇದೊ ವಂದನೆ - ಅಭಿ
ವಂದನೆ.
ಹೋಗ್ಬಿಟ್ಟು ಬನ್ನಿ ಸಾರ್! ಈ ಕಡೆ ಚಿಂತೆ ಮಾಡಲೇಬೇಡಿ. ನಿಮಗೇನು ಸಹಾಯ ಬೇಕಾದರೂ ಹೇಳಿ ಕಳಿಸಿ ಎಂದು ಕರುಣಾರ್ದ್ರ ಹೃದಯದಿಂದ ಸ್ವಾಮಿಯವರೆಂದರು. ದೈಹಿಕ ಕಾರಣಗಳಿಂದ ಬರಲಾಗದ ಹುಡುಗರ ಮೋರೆ ನೋಡಿದಾಗ ಕಿಂದರಿ ಜೋಗಿಯ ಹಿಂದೆ ಹೋಗಲಾರದೇ ಉಳಿದುಹೋದ ಹುಡುಗನ ನೆನಪು ಬರುತ್ತಿತ್ತು. ಏನ್ಮಾಡೋದ್ಸಾಮೀ! ಲಾರಿ ಐತೆ. ಇಲ್ಲಿ ಡೂಟಿ ನೋಡ್ಬೇಕಲ್ಲಾ. ಇಲ್ಲವಾದ್ರೆ ನಾನೂ ಬಂದ್ಬಿಡೋವೆ. ಇದೆಲ್ಲ ಏನು ಮಹಾ ಎಂದು ಉದ್ಗಾರವೆತ್ತಿದ ಅನ್ಸಾರಿ. ಅವನು ಮಲಯಾ ಬರ್ಮ ಜಂಗಲುಗಳಲ್ಲಿ ತಿಂಗಳುಗಟ್ಟಳೆ ಅಲೆದು (ಎರಡನೇ ಮಹಾಯುದ್ಧದಲ್ಲಿ) ಇಂಡಿಯಾಕ್ಕೆ ಮರಳಿಬಂದ ದಿಟ್ಟ.

ದೊರೆಗಳ ತಂದೆಯವರ ಪರಿಸ್ಥಿತಿ ಸ್ವಲ್ಪ ಕೆಟ್ಟಿತ್ತಂತೆ. ಹಾಗಾಗಿ ಅವರು ಅದೇ ದಿನ ಬೆಂಗಳೂರಿಗೆ ಮರಳುವವರಿದ್ದರು. ಸಾಧ್ಯವಾದರೆ ಅಶ್ವತ್ಥರನ್ನು ಕಳಿಸುತ್ತೇನೆ, ವರ್ಗ ಬೇರೆ ಇದೆಯಲ್ಲ. ಇನ್ನುಳಿದುದನ್ನೆಲ್ಲ ನೀನೇ ಸುಧಾರಿಸಬೇಕು ಎಂದು ಮರಳಿದರು.

ನಮ್ಮ ಕುದುರೆಮುಖ ಗೂಡ್ಸ್ ಬಂಡಿಯ ಎಂಜಿನ್ ಶಿವಪ್ಪ. LV (last vehicle) ನಾನು, ಕಂಬಿ ಮೆಂಗಿಲ ಶೇಣವ. ಈ ಬಂಡಿ ಇರುವೆಗಳ ಸಾಲಿನಂತೆ ಆ ಕತ್ತಲೆಯಲ್ಲಿ ಕಾಡಿನ ತರಗೆಲೆಗಳ ಮೇಲೆ ಹರಿಯುತ್ತ ಸಾಗಿತ್ತು. ಅರುಣೋದಯ ಕಾಲದಲ್ಲಿ ಕಾಡು ಮಸಿಗಪ್ಪು, ಲಾಂದ್ರ ಟಾರ್ಚುಗಳ ಬೆಳಕು ಕತ್ತಲೆಯೊಡನೆ ಕಣ್ಣು ಮುಚ್ಚಾಲೆಯಾಟವಾಡುತ್ತ ಕತ್ತಲೆಯ ವೈಭವವನ್ನು ಇನ್ನೂ ಹೆಚ್ಚಗೆ ತಿಳಿಯಲು ಸಹಾಯ ಮಾಡುತ್ತಿದ್ದುವು:

ಕತ್ತಲೊಡನೆ ಪಂತವಿಲ್ಲವವಕೆ
ಅದರೊಡನಜ್ಜಿಯಾಟದ ಬಯಕೆ!            - ಪುತಿನ

ದೂರದಲ್ಲಿ ಕಾಡು ಮರಗಳ ಮರೆಯಲ್ಲಿ ಬೆಟ್ಟಗಳ ಅಂಚಿನಿಂದಾಚೆಗೆ ಬಣ್ಣಗಳ ಆಂದೋಳನವೇ ನಡೆದಿತ್ತು. ಆ ವರ್ಣಪಟಲದ ಸಂಚಾರ ತೀವ್ರವಾದಂತೆ ಕತ್ತಲೆಯಾಟ ತಗ್ಗತೊಡಗಿತು. ಬೆಳ್ಳನೆ ಬೆಳಗಾಯಿತು! ನಕ್ಷತ್ರಚಿತ್ರಗಳು ಯಕ್ಷಗಾನ ಬಯಲಾಟದಲ್ಲಿ ಬಣ್ಣದ ವೇಷಧಾರಿಗಳು ರಾತ್ರಿ ಮುಗಿಯುವಾಗ ಕಾಣುವಂತೆ ತೇಜೋಹೀನವಾಗಿ ಕಂಡುವು. ಸ್ವಲ್ಪ ಹೊತ್ತಿನಲ್ಲಿಯೇ ರಂಗಸ್ಥಳದಲ್ಲೇ ಅಂತರ್ಧಾನವಾದುವು. ಮೆಂಗಿಲ ಶೇಣವ, ಓ ಹೋ ಹೋ ಹೋಯ್ ಎಂದು ಕೇಕೆಯಿಡುತ್ತ ಹಿಂದಿನವರ ಮರುಕೂಗನ್ನು ಆಲಿಸುತ್ತ ಮುಂದೆ ಮುಂದೆ ದೊಣ್ಣೇ ಬೀಸಿ ಬೀಸಿ ನಡೆದ. ತಲೆಯ ಮೇಲೆ ಅವನಿಗೂ ಒಂದು ಹೊರೆಯಿತ್ತು. ಕಾಡಿನ ನರುಗಂಪು, ಮುಂಜಾವಿನ ಚೈತನ್ಯದ ಮಾದಕತೆ ಇವುಗಳಿಂದ ಒಂದು ಗಂಟೆಯ ನಿರಂತರ ನಡಿಗೆ ನಮಗೆ ತಿಳಿದದ್ದು ನೀರ ಬುಗ್ಗೆಯ ಸಮೀಪ ಹರಡಿ ಕುಳಿತಾಗಲೇ. ಮೆಂಗಿಲ ಶೇಣವನ ಅಳತೆಯ ಪ್ರಕಾರ ನಾವು ನಡೆದದ್ದು ಕೇವಲ ಒಂದೇ ಮೈಲು!

ಟೊಮೆಟೋ, ಬಿಸ್ಕತ್, ನೀರು ಸೇವಿಸಿ ಹೊಸ ಹುರುಪಿನಿಂದ ಮುಂದಿನ ಪ್ರಯಾಣ ತೊಡಗಿದೆವು. ಬೆಳ್ಳಂ ಬೆಳಗು ಸೂರೆಹೋಗಿತ್ತು. ಕುರುಚಲು ಗಿಡ, ಮುಳ್ಳು, ಪೊದೆ ಎಲ್ಲವನ್ನೂ ದಾಟಿ ಗೊಂಡಾರಣ್ಯದ ನಡುವೆ ದಾರಿ ಸಾಗಿತ್ತು. ಎಲ್ಲಿವರೆಗೋ ಜೀಪ್ ಹೋಗಲು ಮಾಡಿದ ಬಳಸು ದಾರಿ ಬೆಟ್ಟದ ಮೈಯನ್ನು ಆಧರಿಸಿ ಆವರಿಸಿ ಹರಿಯುತ್ತಿತ್ತು. ಆದರೆ ನಮ್ಮದು ನೇರ ಕಾಲ್ದಾರಿ. ಜೀಪ್ ದಾರಿಯ ಎರಡು ಫರ್ಲಾಂಗನ್ನು ನಾವು ನೂರು ಹೆಜ್ಜೆಗಳಲ್ಲಿ ನೇರವಾಗಿ ಹತ್ತಿ ಮುಗಿಸುತ್ತಿದ್ದೆವು. ಆದರೆ ಎಂಥ ಹೆಜ್ಜೆಗಳವು! ಸ್ವಲ್ಪ ಮುಂದಕ್ಕೆ ಬಗ್ಗಿ ಊರುಗೋಲನ್ನೂರಿ ಹೆಜ್ಜೆಗೂ ಉಸಿರಾಟಕ್ಕೂ ಲಯ ಹೊಂದಿಸಿ ನಿಧಾನವಾಗಿ ನಡೆಯಲು ಹೊರಟರೆ ಎಷ್ಟು ದೂರ ನಡೆದರೂ ಆಯಾಸವಾಗುವುದಿಲ್ಲ. ಉಸಿರು ಸೇದಿ ಮೇಲೆ ಮೇಲೆ ಬರುವುದಿಲ್ಲ. ಬೆಟ್ಟವೇರುವಾಗಲಂತೂ ಆರಂಭ ಶೂರತ್ವ ಸಲ್ಲದೇ ಸಲ್ಲದು. ಇಲ್ಲಿ ಬೇಕಾದದ್ದು ಮೀಂಚುಳ್ಳಿ ಚಿಮ್ಮಿಕೆಯಲ್ಲ, ಗಜಗಂಭೀರ ಗಮನ.

ದೈತ್ಯಾಕಾರದ ಮರಗಳೆಡೆಯಿಂದ ದೂರದ ಚಿಕ್ಕ ಚಿಕ್ಕ ದಿಬ್ಬಗಳ ಮೇಲೆ ಸೂರ್ಯ ಕುಣಿಯುತ್ತಿದ್ದುದನ್ನು ಕಂಡೆವು. ಎತ್ತರದ ಹಲವಾರು ಬೋಳು ಗುಡ್ಡೆಗಳು ‘ರಸಮೂರ್ಛೆಯಲ್ಲಿ ಮಲಗಿದ್ದುವು. ಸುತ್ತಲಿನ ಕಾಡು ನಡೆಯಲಿರುವ ದಾರಿ ಮತ್ತು ಏರಲಿರುವ ಎತ್ತರ ಬಹಳ ಉಂಟು ಎಂದು ಎಚ್ಚರಿಸುತ್ತಿತ್ತು. ನಮ್ಮ ಮೇಲೆಯೇ ಇದ್ದ ಶಿಖರ ನಮಗೆ ಕಾಣುತ್ತಿರಲಿಲ್ಲ. ಏಕೆಂದರೆ ನಾವು ಬೆಟ್ಟದ ಮೈ ಮೇಲಿನ ಕೊರಕಲು ಕಾಡು ಮೇಡುಗಳಲ್ಲಿ ನಮ್ಮ ತಲೆ ಕೆಡಿಸಿಕೊಂಡಿದ್ದೆವು. ಈ ಗೊಂದಲದ ಮಧ್ಯೆ ದಾರಿಯು ಇಲ್ಲ. ಆದರೆ ದಾರಿ ಮಾಡಿ ದಿಕ್ಕು ತಪ್ಪದಂತೆ ಕೊಂಡೊಯ್ಯುತ್ತಿದ್ದವ ಮೆಂಗಿಲ ಶೇಣವ. ಬೆಟ್ಟ ಏರುವಾಗ ದಿಕ್ಕು, ದಾರಿ ತಪ್ಪುವುದು ಬಲು ಸುಲಭ. ಅಸಂಖ್ಯ ಕಾಲು ದಾರಿಗಳು ಅಲ್ಲಿ ಸಂಧಿಸುತ್ತಿರುತ್ತವೆ. ಈ ತಂತೀ ಒಂದರಿಯಲ್ಲಿ ಅತ್ಯಲ್ಪ ವ್ಯತ್ಯಾಸವಾದರೂ ನಾವು ಎಲ್ಲಿಗೋ ಹೋಗಿರುತ್ತೇವೆ. ಎಷ್ಟೊ ಸಲ ಹೊರಟಲ್ಲಿಗೇ ಮರಳಿ ಬಂದು ಭೂಮಿ ಉರುಟು ಎನ್ನುವುದನ್ನು ಚೆನ್ನಾಗಿ ತಿಳಿದುಕೊಂಡಿರುತ್ತೇವೆ. ಇನ್ನೊಂದು ಗಂಟೆ ಚುರುಕಾಗಿ ನಡೆದೆವು. ಗಂಟೆ ೮ ದಾಟಿತ್ತು. ಪುನಃ ಐದು ಮಿನಿಟುಗಳ ವಿರಾಮ.

ಈಗೆಷ್ಟು ದೂರ, ಅಜ್ಜಾ?
ಎರಡರಿಂದ ಎರಡೂವರೆ ಮೈಲಿನ ಒಳಗೆ, ಹ್ಞಾಂ
ಅಷ್ಟೇ!?
ಮತ್ತೆಂಥಾದ್ದು! ನೀವು ಹೀಗೆ ನಡೆದರೆ ಸಾಯಂಕಾಲ ಹೇವಳಕ್ಕೆ.
ಹತ್ತು ಮೈಲು ಸುತ್ತಿ ಹತ್ತುವಾಗ ಹೇವಳ ಗ್ರಾಮ. ಅಲ್ಲಿ ನಾವು ಮಧ್ಯಾಹ್ನದ ಊಟ ತೀರಿಸಬೇಕೆಂದು ಯೋಜನೆ. ಆದ್ರೆ ಈ ಹುಡುಗರ ನಡಿಗೆ ಬಲು ನಿಧಾನವಾಯಿತಲ್ಲ. ಆಗ ವಿರಾಮ ಸಮಯವಾಗಿದ್ದರೂ ಹುಡುಗರು ಕೂರಲಿಲ್ಲ. ಆಡುಪಾಂಬೇ (ಪುನ್ನಾಗವರಾಳಿ) ರಾಗದಲ್ಲಿ -
ಕಾಡಿಗ್‌ಹೋಗುವೆವು, ವಿ-
ಶ್ವೇಶ್ವರನ ನೋಡೆ,
ಕಾಡು ಬಂತು ಕತ್ತಲೆ ಆಯಿತು
ಕಳ್ಳರು ಬಂದರು
ಅಯ್ಯೋ ಕಚಿಪಿಚಿಕಚಿಪಿಚಿ!
-ಎಂದು ಅಭಿನಯಪೂರ್ವಕವಾಗಿ ಹಾಡಿದರು, ಕುಣಿದರು. ಪಾಪ, ವಿಧವೆಯರಂತೆ. ಪುಣ್ಯಸಂಪಾದನೆಗಾಗಿ ಹೋಗುತ್ತಿದ್ದಾಗ ಹೀಗಾಗಬೇಕೆ? ಕಚಿಪಿಚಿ ಎಂದು ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಹರಡಿ ಹೋಗುವಾಗಲಂತೂ ನಮಗೆ ಬಲು ಸಂಕಟವಾಯಿತು. ಶೇಣವನೂ ಇವರ ಜತೆ ಕುಣಿದು ಅಭಿನಯಿಸಿದ.

ಮುಂದಿನ ನಡಿಗೆ ಇನ್ನಷ್ಟು ಚುರುಕಾಗಬೇಕೆಂದು ಆದೇಶ ಕಳಿಸಿದೆ. ಆ ಅಜ್ಜನ ಹುರುಪು ನಮಗೆ ಬರಬಾರದೇ ಎಂದು ಮೂದಲಿಸಿದೆ. ಬೆಟ್ಟ ಏರಲು ಅಭ್ಯಾಸವಿರಬೇಕು. ದಿನ ಬೆಳಗಾದರೆ ಸೈಕಲ್, ಸಿಟಿಬಸ್, ಪೇಟೆಯ ಧೂಳು, ಹೊಗೆ ಇವುಗಳ ಮಧ್ಯೆ ಬೆಳೆಯುವ ಮಕ್ಕಳು, ಮನೆಯಲ್ಲೂ ಇಕ್ಕಟ್ಟು, ಶಾಲೆ ಕಾಲೇಜುಗಳಲ್ಲಿಯೂ ಕಿಷ್ಕಿಂದೆ, ರೇಷನ್ ಇಂಥ ವಾತಾವರಣದಿಂದ ಒಮ್ಮೆಲೇ ಮುಕ್ತರಾಗಿ ಅರಣ್ಯ ಪರ್ವತಗಳ ಹುಚ್ಚುಹೊಳೆಗೆ ಬಿದ್ದರೆ ತತ್ತರಿಸಿ ಹೋಗುತ್ತಾರೆ. ಒಂದು ಸಲ ಮುಳುಗಿ ನೀರು ಕುಡಿದ ಹೊರತು ಸಾಹಸವೆಂದರೇನೆಂದೂ ತಿಳಿಯದ ದುರ್ಬಲಿಗಳಾಗಿರುತ್ತಾರೆ. ನಡಿಗೆ ಚುರುಕಾಯಿತು. ಏರು ಕಡಿದಾಯಿತು. ಹೊತ್ತ ಸಾಮಾನಿನ ಭಾರ ಹೆಚ್ಚಾಯಿತು.
ವೇಗ ಒಂದು ವಿಧದ ಶಕ್ತಿ ಪ್ರಕಾರವಷ್ಟೆ. ಶಕ್ತಿಗೆ ದ್ರವ್ಯರಾಶಿಯಿದೆಯಲ್ಲವೇ ಸಾರ್ ಐನ್ಸ್ಟೈನ್ ಪ್ರಕಾರ? ಆದ್ದರಿಂದ ನಮ್ಮ ನಡಿಗೆಯ ವೇಗ ಹೆಚ್ಚಾದಂತೆ ಸಾಮಾನಿನ ಭಾರ ಹೆಚ್ಚಾಗುವುದು ಈ ಕಾರಣದಿಂದಾಗಿರಬಹುದೇ? ಎಂದು ಕಾಸ್ಮಿಕ್ ಪ್ರಶ್ನಿಸಿದ.
ಖಂಡಿತವಾಗಿಯೂ ಅಲ್ಲ ಎರಡನೆಯ ಪ್ರಶ್ನೆಗೆ, ಮೊದಲನೆಯ ಪ್ರಶ್ನೆಗೆ ಅಷ್ಟೇ ಖಂಡಿತವಾಗಿ ಹೌದು.
ಅಂದರೆ, ಸಾರ್?
ಐನ್ಸ್ಟೈನರ ವೇಗ - ಶಕ್ತಿ - ರಾಶಿ ಅರಿವಾಗುವುದು ಬೆಳಕಿನ ವೇಗ ಅಥವಾ ಅದರ ಸಮೀಪದ ವೇಗದಲ್ಲಿ ಮಾತ್ರ. ನಮಗೀಗ ಭಾರ ಹೆಚ್ಚಾದಂತೆ ಅನ್ನಿಸುವುದು, ಒಂದು, ಹೊತ್ತ ಸಾಮಾನಿನ ಒತ್ತಡ ಹೆಚ್ಚಾಗುವುದರಿಂದ ಮತ್ತು ಎರಡು, ಮನಸ್ಸಿನೊಳಗೆ ನಾವೇನೋ ಮಹಾ ಸಾಧಿಸುತ್ತಿದ್ದೇವೆ ಎಂಬ ಭ್ರಮೆ ಮೂಡುವುದರಿಂದ.

ಐನ್‌ಸ್ಟೈನೋ ನಾನ್‌ಸ್ಟೈನೋ ಭಾರದಿಂದ ಹುಡುಗರು ತೊನೆದಾಡಿದರು. ಹ್ಯಾವರ್ ಸ್ಯಾಕ್ ಕುಸಿಯಿತು. ಪಕ್ಕಕ್ಕೆ ಕಟ್ಟಿದ್ದ ಬ್ಲಾಂಕೆಟ್ ಡರಿಗಳ ಗಂಟು ಸಡಿಲವಾಗಿ ಜಾರಿದುವು. ಶ್ರೀಧರನ್, ವಾಸು ಅಡ್ಡಗಾಲಿಡುತ್ತ ಹಿಂದೆ ಹಿಂದೆ ಉಳಿದರು. ಇವರ ಜೊತೆಗೆ ನಾಗರಾಜ, ಜಗನ್ನಾಥ, ಚಂದ್ರಶೇಖರ. ಗೂಡ್ಸ್ ಬಂಡಿ ತುಂಡಾಯಿತು. ಪ್ರತಿಯೊಬ್ಬನಿಗೂ ನಿರಖಾದ ಸ್ಥಾನವನ್ನು ಮೊದಲೇ ವಿಧಿಸಿದ್ದೆವು. ಹಾಗೆ ಮಾಡದಿದ್ದರೆ ಉದ್ದವಾದ ಅಂಕುಡೊಂಕಾದ ದಾರಿಯಲ್ಲಿ ಯಾರೋ ಒಬ್ಬ ಮಧ್ಯೆ ಜಾರಿದರೆ, ಬಿದ್ದರೆ ಇಲ್ಲ ಕಣ್ಣು ತಪ್ಪಿಸಲು ನೋಡಿದರೆ ಪತ್ತೆ ಹಚ್ಚುವುದು ಸಾಧ್ಯವಿಲ್ಲ. ಈ ತರುಣರು ಹೀಗೆ ಹಿಂದೆ ಹಿಂದೆ ನಿಂತು ಅಳುಮೋರೆಯಿಂದ ಇತರರ ಮುನ್ನಡೆಗೆ ಅಡ್ಡಿ ಮಾಡಿದಾಗ ನನಗೆ ಬಂದದ್ದು ಮರುಕ ಖಂಡಿತ ಅಲ್ಲ - ಸಿಟ್ಟು.
ಸ್ವಲ್ಪ ವಿಶ್ರಾಂತಿ ಪಡೆದು ಹಿಂದಿನಿಂದ ಬರುತ್ತೇನೆ ಎಂದನೊಬ್ಬ.
ನಿನ್ನೆ ಏನು ಹೇಳಿದ್ದು? ೧೨ನೇ ಮೈಸೂರಿಗೆ ವಿಶ್ರಾಂತಿ ಪದ ಗೊತ್ತಿಲ್ಲ. ನಿನಗೆ ಎರಡೇ ದಾರಿ - ಒಂದೋ ಈ ಕ್ಷಣ ಹಿಂದೆ ಹೋಗಿ ತಳದ ಶಿಬಿರದಲ್ಲಿ ವಿಶ್ರಾಂತಿ ಪಡೆ. ಇಲ್ಲ ಚುರುಕಾಗಿ ಲೈನಿನಲ್ಲಿ ನಡೆ. ಕೂಟಕ್ಕೆ ಸಾಮೂಹಿಕವಾಗಿ ದೊರೆಯದ ವಿಶ್ರಾಂತಿ ನಿನಗೆ ಪ್ರತ್ಯೇಕವಾಗಿ ಸಿಕ್ಕಲಾರದು. ನಿನ್ನ ಭಾರವನ್ನು ನೀನೇ ಹೊರತಕ್ಕದ್ದು. ನರಪೇತಲರು ಇಲ್ಲಿ ಬೇಡ.

ಆಯಾಸವೆನ್ನುವುದು ಮನಸ್ಸಿನ ಒಂದು ಸ್ಥಿತಿಯೇ ವಿನಾ ದೇಹದ್ದಲ್ಲ ಎಂದು ನಾನು ಪ್ರಾಯೋಗಿಕವಾಗಿ ಕಂಡುಕೊಂಡಿದ್ದೇನೆ. ಯುಕ್ತಾಹಾರ, ಯುಕ್ತವಿಹಾರ - ಶ್ರಮವೆಲ್ಲಿಂದ ಬರಬೇಕು! ಮನಸ್ಸು ದೇಹವಿಜ್ಞಾನಗಳನ್ನು ಅಭ್ಯಾಸ ಮಾಡಿದವರು ಒಂದು ವಿಚಾರವನ್ನು ಖಚಿತವಾಗಿ ಹೇಳಿದ್ದಾರೆ: ಒಬ್ಬ ಮನುಷ್ಯ ಸಾಮಾನ್ಯವಾಗಿ ಅವನ ಮನಸ್ಸಿನ ಮತ್ತು ದೇಹದ ಶಕ್ತಿಗಳ ಅರ್ಧದಷ್ಟನ್ನೂ ಸರಿಯಾಗಿ ಉಪಯೋಗಿಸುತ್ತಿಲ್ಲ. ಇವು ಅತ್ಯಂತ ಸೊಗಸಾದ ರಚನೆಗಳು ಎಂದು, ಗಾಣದೆತ್ತಿನ ದಾರಿಯಿಂದ ಸ್ವಲ್ಪ ಹೊರಗೆ ಅವನು ಚಲಿಸಿದರೆ ಅತ್ಯಾಯಾಸಗೊಂಡಂತೆ ಭಾವಿಸುತ್ತಾನೆ.

ಇಪ್ಪತ್ತರ ಹರೆಯದವರು ಸ್ವಯಂಸ್ಫೂರ್ತಿಯಿಂದ ಸಾಹಸ ಪ್ರದರ್ಶನಕ್ಕಾಗಿಯೇ ಸಾಕಷ್ಟು ಅಭ್ಯಾಸ ಮಾಡಿ ಬಂದ ಹುಡುಗರು ಅದೆಂಥ ಚೇತನದ ಚಿಲುಮೆಗಳಾಗಿರಬೇಡ? ಇಂಥವರಿಗೆ ವಿಶ್ರಾಂತಿಯೇ? ಈ ಹಿನ್ನೆಲೆಯಲ್ಲಿ ಆ ಎತ್ತರದಲ್ಲಿ ಕರುಣೆ ಅನುಕಂಪ ಪದಗಳಿಗೆ ಅರ್ಥ ಬೇರೆ. ಸ್ಫೂರ್ತಿ ಸಾಂಕ್ರಾಮಿಕವಲ್ಲ. ಆಯಾಸ ಹೌದು. ಆಯಾಸಗೊಂಡವರ ಪತ್ತೆ ಮತ್ತೆ ಆಗಲಿಲ್ಲ. ಅಲ್ಲಲ್ಲಿ ಏರುಬ್ಬಸ ಬಿಡುತ್ತ ಕುಳಿತದ್ದೂ ಕಾಣಲಿಲ್ಲ.

ಕಾಡಿನ ಸೆರಗು ದಾಟಿ, ಚಿಕ್ಕಪುಟ್ಟ ಗುಡ್ಡೆಗಳ ಕಲ್ಲು ರಾಶಿಗಳ ತಲೆ ತುಳಿದು ನಡಿಗೆ ಮುಂದುವರಿಯಿತು. ಅಲ್ಲೆಲ್ಲ ಆಳೆತ್ತರ ಬೆಳೆದಿದ್ದ ಹುಲ್ಲು ಕೇವಲ ಕೆಲವೇ ದಿನಗಳ ಹಿಂದೆ ಬೆಂಕಿಬಿದ್ದು ಸುಟ್ಟು ಮಸಿಯಾಗಿತ್ತು. ಆ ನಿರ್ಜನ ಪ್ರದೇಶದಲ್ಲಿ ಹುಲ್ಲು ಹುಟ್ಟುವುದೇಕೋ? ಸುಟ್ಟು ಹೋಗುವುದೇಕೋ? ದಾರಿಯಲ್ಲಿ
(ದಾರಿಯಿಲ್ಲ - ನಡೆದದ್ದೇ ದಾರಿ) ಎಲ್ಲಿಯೂ ಜನವಸತಿ ಇಲ್ಲ. ಯಾವ ತರಹದ ಬೇಸಾಯವೂ ಇಲ್ಲ. ನಾಗರಿಕತೆಯ ಜಾಡ್ಯವೇ ಅಲ್ಲಿಲ್ಲ. ಒಂದು ಕೊರಕಲಿಗಾಗಿ ಸಾಗುವಾಗ ‘ಈ ದಾರಿಗಾಗಿ ಬರುವವರು ವನೆಯಲ್ಲಿ ಹೆಂಡತಿ ಮಕ್ಕಳಿಗೆ ಹೇಳಿ ಬರುವುದು ಒಳ್ಳೆಯದು. ಕ್ರೂರ ಮೃಗಗಳಿವೆ - ಎಚ್ಚರಿಕೆ! ಎಂದು ಬಲವಾಗಿ ಕೆತ್ತಲ್ಪಟ್ಟಿತ್ತು. ಹೇಗೂ ನಾವು ದೊಡ್ಡ ಪಟಾಲಾಮ್. ಮೇಲಾಗಿ ರೈಫಲ್ ಇದೆಯಲ್ಲ. ಅಂತೂ ಆ ಬರೆಹದ ಹಿಂದೆ ಕತೆ ಅಡಗಿರಬಹುದು. ಮುಂದೆ ನಿಂತಾಗ ಶೇಣವನನ್ನು ಕೇಳಿದರಾಯಿತು ಎಂದುಕೊಂಡೆ.

೧೨ ಗಂಟೆ ದಾಟಿತು. ನಮ್ಮ ಪ್ರಯಾಣ ಕಾಲ ೬ ಗಂಟೆಯನ್ನು ಮೀರಿತ್ತು. ಬೋಳು ಗುಡ್ಡೆಯ ಮೇಲೆ ಎಲ್ಲಿಗೋ ಏನೋ ಗೊತ್ತಿಲ್ಲದೇ ನಡೆಯುತ್ತಿದ್ದೇವೆ. ಕಾಡುಗಳ ನೆರಳಿನಿಂದ ಪಾರಾಗಿ ಬಂದಿದ್ದೇವೆ. ಎದುರಿಗೆ ಗುಡ್ಡೆ ಗುಡ್ಡೆಗಳ ರಾಶಿ. ಹಿಂದೆ ಇಳಿದಿಳಿದು ಮಾಯವಾಗುವ ಕಾಡಿನ ಹಸುರು, ಕೊರಕಲಿನ ಮಾಯೆ.
ಅಜ್ಜಾ! ದೂರವಿನ್ನೆಷ್ಟು?
ಓ ಇಲ್ಲಿಯೇ - ಅದು ನೋಡಿ ಗದ್ದೆ ಅಲ್ಲವೋ? ಅದರ ಆಚೆ ಬದಿ ಹೇವಳ ಮನೆ.
ಹಾಗಾದರೆ ೧೦ ಮೈಲು ಬಂದಂತಾಯಿತೇ?
ಒಂದು ಅಡಿಯೂ ಕಮ್ಮಿ ಸುತರಾಂ ಇಲ್ಲ. ಮೆಂಗಿಲ ಶೇಣವನ ಖಂಡಿತ ವಾಣಿ.
ಅಲ್ಲ, ಹಿಂದೆ ನೀವು ಹೇಳಿದ ದೂರ ಎಲ್ಲ ತಪ್ಪೇ? ಒಳ್ಳೇ ಜೋಕುಗಾರರಪ್ಪ ನೀವು!

ಹೀಗೆ ಹುಡುಗರಿಗೆ ಹುರಿದುಂಬಿಸಿ, ನಡೆದ ದೂರವನ್ನು ಕಡಿಮೆಯೆಂದು ಹೇಳಿ ಬೆಳಗ್ಗಿನ ತಂಪಿನಲ್ಲಿ ದೂರ ದೂರ ಚುರುಕಾಗಿ ನಡೆಸಿ ದೂರ ತಿಳಿಯದಂತೆ ನಾಲ್ಕು ಸಾವಿರ ಅಡಿ ಎತ್ತರಕ್ಕೆ ತಲಪಿಸಿದ ಮೆಂಗಿಲ ಶೇಣವ. ಅಲ್ಲಿ ಕಾಫಿ ತೋಟ, ಏಲಕ್ಕಿ ಫಸಲು, ಬಾಳೆ ಮರ, ಕಿತ್ತಳೆ, ಸಾಲು ಗದ್ದೆ ಇದ್ದುವು. ಮಲೆನಾಡಿನ ಒಣ ದನಗಳ ಹಿಂಡು ಗಾಬರಿಯಿಂದ ಚಲ್ಲಾಪಿಲ್ಲಿಯಾಯಿತು. ‘ಕ್ರೂರ ಮೃಗಗಳಿವೆ ಕಂಡ ಬೆಂಗಳೂರು ಹುಡುಗರು ಹೆದರಿದರು. ನಾಡ ಕೋಣಗಳನ್ನು ಕಂಡು ಕಾಡುಕೋಣಗಳೆಂದು ನಡುಗಿದರು. ಕೆಲವರು ಸಂತೋಷಪಟ್ಟರು. ಬಾಣೆಯಿಂದ ನೀರಿಗೆ ಇಳಿದು ಗದ್ದೆಯೇರಿ ಮುಂದೆ ನಡೆದೆವು.

ತಲೆಯೆತ್ತಿ ನೋಡಿದರೆ ಆಕಾಶದೆತ್ತರದಲ್ಲಿ ಭೀಕರವಾದ ಕಲ್ಲು ಬಂಡೆಯೊಂದು ಬೆಟ್ಟದ ಸಾಲಿನಿಂದ ಹೊರಕ್ಕೆ ಚಾಚಿ ನಿಂತಿದೆ. ಅಂತ್ಯ ಅನಂತದೆಡೆಗೆ ಕೈಚಾಚಿ ನಿಂತಂತಿದೆ ಕುದುರೆಮುಖದ ಹೆಬ್ಬಂಡೆ. ಆಕಾಶದ ತೆಳು ನೀಲಿಯನ್ನು ಗಾಸಿಗೊಳಿಸಿದ ಕಗ್ಗಲೆಯಂತಿದೆ. ನೋಡ ನೋಡುತ್ತಿದ್ದಂತೆಯೇ ಅದು ಗಿರಗಿರನೆ ತಿರುಗಿ ನಮ್ಮ ಮೇಲೆ ಬೀಳುವುದೋ ಎಂಬ ಭಾವ ಮೂಡಿಸುತ್ತಿತ್ತು. ಇನ್ನೊಂದು ಗಳಿಗೆ ಅದರ ಪ್ರಬಲಾಕರ್ಷಣೆಯಿಂದ, ನಾವು ಹತ್ತಿ ರೇಕುಗಳಿಗಿಂತ ಹಗುರ ಕ್ಷುದ್ರರಾದವರು, ಅಲ್ಲಿಗೆ ನೇರ ಹಾರಿ ಸೇರಲಾರೆವೇ ಎನ್ನಿಸುತ್ತಿತ್ತು. ಎಷ್ಟು ಹತ್ತಿರ ಅಷ್ಟು ಎತ್ತರ! ತದ್ದೂರೇ ತದ್ವಂತಿಕೇ! ನರಪಿಪೀಲಿಕೆ ಹಿಮಾಲಯದ ಔನ್ನತ್ಯ ಅಳೆಯುವುದುಂಟೇ? ಎದುರಾಗಿ ನಿಂತಾಗ ನಮ್ಮ ಎಡಗಡೆಗೆ ಕುದುರೆಮುಖದ ಹೆಬ್ಬಂಡೆ ಚಾಚಿದೆ. ಅಲ್ಲಿಂದ ಹಿಂದೆ, ಅಂದರೆ ಬಲಗಡೆಗೆ ಆ ಪರ್ವತ ಸಾಲು ಕ್ರಮೇಣ ಇಳಿದಿಳಿದು ಹೋಗಿರುವುದು. ಬಂಡೆಯಿಂದ ಕೆಳಗೆ ಭೀಕರ ಪ್ರಪಾತ. ಅಲ್ಲಿಗಾಗಿ ಏರುವಂತಿಲ್ಲ. ಬಹುಶಃ ಕಂಬಳೀಹುಳು ಕ್ರಮದಿಂದ ಸಾಧ್ಯವಾದೀತು. ಹತ್ತಿರ ಹೋಗಿ ನೋಡಿ ಹೇಳಬೇಕಷ್ಟೆ. ಕುದುರೆಮುಖ ಶ್ರೇಣಿಯ ಹಿಂಬದಿಯ ಅಥವಾ ನಮಗೆ ಕಾಣದ ಆಚೆ ಬದಿಯ ಇಳಿಜಾರಿನ ತಪ್ಪಲಲ್ಲಿ ದಟ್ಟಡವಿ ಬೆಳೆದು ನಿಂತಿದೆ. ಆ ಸಹಸ್ರಾರು ಮರಗಳ ಎತ್ತರದ ಕೊಂಬೆ ರೆಂಬೆಗಳು ಒಂದಕ್ಕೊಂದು ಹೆಣೆದುಕೊಂಡಿದ್ದಂತೆ ಆ ಕಡೆಯಿಂದ ಚಾಚಿಕೊಂಡಿದ್ದುದು ಕಾಣುತ್ತಿತ್ತು. ಈ ಹಸುರಿನ ಗುಚ್ಛ ಶಿಖರದಿಂದ ಬಲಕ್ಕೆ ಶ್ರೇಣಿಯ ಗಡಿರೇಖೆಯ ಉದ್ದಕ್ಕೂ ತೊಡಿಸಿದ ಆಭರಣದಂತೆ ಇತ್ತು. ಬಂಡೆಯೇ ಕುದುರೆಯ ಮುಖ. ಅದರ ಹಿಂದಿನ ಪರ್ವತರೇಖೆ ಅದರ ಕುತ್ತಿಗೆಯ ಇಳಿಜಾರು. ಇದರ ಮೇಲೆ ಚಾಚಿದ್ದ ಹಸುರಿನ ಗುಚ್ಛಪರಂಪರೆ ಕುದುರೆ ಕತ್ತಿನ ಮೇಲಿನ ಅಯಾಲನ್ನು ನೆನಪಿಗೆ ತರುತ್ತಿತ್ತು. ಈ ಕುದುರೆಮುಖಕ್ಕೆ ಕಡಿವಾಣ ಹಾಕಲು ಸಾಧ್ಯವೇ? ಅದರ ಬೆನ್ನ ಮೇಲೇರಿ ಸವಾರಿ ಮಾಡಲು ಸಾಧ್ಯವೇ? ಯಾರು? ಪರ್ವತವನ್ನೇರುವುದು ಅದು ಅಲಿರುವುದರಿಂದ ಎಂಬ ಮಾತಿನ ಸಂಪೂರ್ಣಾರ್ಥ ನಮಗಲ್ಲಿ ಆಯಿತು.

ಕುದುರೆಮುಖ ನಮ್ಮನ್ನು ಬಾ ಬಾ ಎಂದು ಕರೆಯುತ್ತಿತ್ತು. ನಾವು ತನ್ಮಯತೆಯಿಂದ ತೇಲುತ್ತಿದ್ದೆವು ಅದರೆಡೆಗೆ. ಆಗಲೇ ‘ಕಾಲಿಟ್ಟನು ಗೊಸರಿಗೆ ಕೃಷ್ಣಪ್ಪ!’ “ಆಕಾಶದಲ್ಲಿ ದೃಷ್ಟಿಯಿರಲಿ, ಮೋಡಗಳ ಮೇಲೆ ಸಂಚರಿಸುತ್ತಿರು, ಆದರೆ ನೆಲವನ್ನು ಮರೆಯಬೇಡ ಎಂದು ಅವನಿಗೂ (ಇತರರಿಗೂ) ಬುದ್ಧಿವಾದ ಹೇಳಿದರು ಕವಿ ಶಿವಪ್ಪ. ಪಾಪ, ದೊಡ್ಡಜೀವ ಕೃಷ್ಣಪ್ಪ. ಅವನನ್ನು ಜವುಗು ನೆಲದಿಂದ ಹೊರಗೆಳೆದಾಗ ಅವನ ಶೂ ಅಲ್ಲಿಯೇ ಸಮಾಧಿಯಾಗಿತ್ತು!

ಅಲ್ಲಿ ಮಲ್ಲಿಗೆಯ ವನದಲ್ಲಿ, ಮಾಂದಳಿರ ನೆಲೆಯಲ್ಲಿ, ಕಿತ್ತಳೆಯ ಬುಡದಲ್ಲಿ, ಕುದುರೆಮುಖದ ತಳದಲ್ಲಿ ಇದ್ದ ಬಂಗ್ಲೆ (ಹಂಚು ಹೊದಿಸಿದ ಮನೆಯೇ ಬಂಗ್ಲೆ ಎಂಬುದನ್ನು ನೆನಪಿನಲ್ಲಿಡಬೇಕು) ಮಿಸ್ಟರ್ ಸೈಮನ್ ಲೋಬೋ ಪ್ರಭು ಉರುಫ್ ಸಿಂಹ ಪುರ್ಬುಗಳದು. ಕುದುರೆಮುಖದ ಹುಲಿ ಮೆಂಗಿಲ ಶೇಣವ. ಈ ಸಿಂಹ ಹೇಗಿರಬಹುದೋ ಎಂದು ಹುಡುಗರು ವಿಸ್ಮಯಾತುರಗಳಿಂದ ನೋಡುತ್ತಿದ್ದರು. ಬಂಗ್ಲೆಯ ಕ್ರಮ ಅನಿರೀಕ್ಷಿತ. ಅದೊಂದು ಹಳೆಯ ಮನೆ, ಹಂಚು ಹಾಕಿದ್ದೇನೋ ಹೌದು. ಅದರ ಮುಂಭಾಗದಲ್ಲಿ ಸೆಗಣಿ ಸಾರಿಸಿ ಚೊಕ್ಕಟವಾಗಿದ್ದ ವಿಶಾಲ ಅಂಗಳದಲ್ಲಿ ನಾವು ಹರಡಿ ಕುಳಿತೆವು. ಭಾರಗಳನ್ನು ಕಳಚಿದೆವು. ಬದಿಯ ಹುಲ್ಲುಮುಂಡಕ್ಕೆ ಒರಗಿ ಹಾಸಿಗೆ ಮಾಡಿಕೊಂಡವರು ಅನೇಕರು. ಸಿಗರೇಟು ಸೇದಲೇ ಬೇಕಾದವರು ಹುಲ್ಲುಮುಂಡದಾಚೆಗೆ ಮರೆಯಾದದ್ದು ಗೊತ್ತಾಯಿತು.

ಸ್ವಲ್ಪ ದೂರ ಹೋಗಿ. ಹುಲ್ಲಿಗೆ ಬೆಂಕಿ ಹಿಡಿದುಬಿಟ್ಟೀತು ಜಾಗ್ರತೆ ಎಂದು ಜಾಗರೂಕತೆಯ ನುಡಿ ಹೇಳುವುದೊಂದೇ ಉಳಿದಿದ್ದ ಹಾದಿ. ಹಲವಾರು ಪುಟ್ಟ ಮಕ್ಕಳು, ಎಲ್ಲರೂ ಲಂಗೋಟಿಧಾರಿಗಳು, ಮುದ್ದುಮುದ್ದಾಗಿ ಆರೋಗ್ಯಕರವಾಗಿ ಬೆಳೆದಂಥವರು ನಮ್ಮೆದುರಿನಲ್ಲಿ ನಿಂತು ಬೆರಗಾಗಿ ನೋಡುತ್ತಿದ್ದರು. ಅಷ್ಟರಲ್ಲಿ ಸಾಕ್ಷಾತ್  ಸಿಂಹ ಪುರ್ಬುಗಳು ಪ್ರತ್ಯಕ್ಷರಾದರು. ಹುಡುಗರ ನಿರೀಕ್ಷೆಯ ಹಿಮಾಲಯ ಗೋಪುರ ಶಾಂತ ಸಾಗರದ ತಳ ಸೇರಿತು! ೬೦ಕ್ಕೆ ಕಡಿಮೆ ಪ್ರಾಯವಲ್ಲದ ದೃಢಕಾಯದ ಬೇಸಾಯಗಾರ, ಕೋಮಣ(ಕೌಪೀನ)ಧಾರಿ. ತಲೆಯ ಮೇಲೆ ಮುಟ್ಟಾಳೆ.
ನಮಸ್ಕಾರ ಸ್ವಾಮಿ ಎಂದು ನಮ್ಮನ್ನು ಸ್ವಾಗತಿಸಿದ. ಅವನ ಕೈಯಲ್ಲಿ ಒಂದು ವರ್ಷ ಪ್ರಾಯದ ಕೈಗೂಸು ನಲಿಯುತ್ತಿತ್ತು. ಶೇಣವ ಹಿಂದಿನಿಂದ ಪುರ್ಬುವಿನ ವಂಶವೃಕ್ಷ ವಿವರಿಸಿದ - ಪುರ್ಬುವಿನ ಪ್ರಾಯ ೬೩. ಈಗ ಇರುವುದು ನಾಲ್ಕನೆಯ ಹೆಂಡತಿ, ಪ್ರಾಯ ೩೬. ಅವನಿಗೆ ಹುಟ್ಟಿದ ಮಕ್ಕಳ ಒಟ್ಟು ಸಂಖ್ಯೆ ೪೦. ಬದುಕಿ ಉಳಿದವರು ೨೮. ದೊಡ್ಡವರೆಲ್ಲರೂ ಕೆಲಸದ ಮೇಲೆ, ಮದುವೆಯಾಗಿ ಎಲ್ಲೆಲ್ಲಿಯೋ ಹೋಗಿದ್ದಾರೆ. ಮೆನೆಯಲ್ಲಿರುವವರು ಈಗಿನ ಹೆಂಡತಿ ಮತ್ತು ಆಕೆಯ ಎಂಟು ಮಕ್ಕಳು, ಎಂದು ಮುಂತಾಗಿ. ಏನು ಮಾಡುವುದು ಸ್ವಾಮೀ! ಈ ಮಲೆನಾಡಿನಲ್ಲಿ  ಹೆಣ್ಣುಗಳಿಗೂ ದನಗಳಿಗೂ ಬರಕತ್ತೇ ಇಲ್ಲ ಎಂದು ಇನ್ನೊಂದು ನುಡಿಮುತ್ತು ಉದುರಿಸಿದ ಶೇಣವ.

ಪುರ್ಬು ನನಗೆ ಹಳೆಯ ಪರಿಚಿತ. ನಾನು ಹತ್ತು ವರ್ಷಗಳ ಹಿಂದಿನ ಘಟನೆಯನ್ನು ಅವನ ನೆನಪಿಗೆ ತಂದೆ. ಆಗ ಅವನೂ ನಮ್ಮೊಡನೆ ಶಿಖರಕ್ಕೆ ಬಂದಿದ್ದ. ನಮ್ಮ ಜೊತೆ ಬಂದಿದ್ದ ಸೈನ್ಯದ ಅಧಿಕಾರಿ ಕ್ಯಾಪ್ಟನ್ ದೊರೈರಾಜರೂ ಶೇಣವನೂ ಪುರ್ಬುವೂ ಮುಂದೆ ಮುಂದೆ ನಡೆದಿದ್ದರು ಬೇಟೆಯ ಆಸೆಯಿಂದ. ಕುದುರೆಮುಖದ ಬೆನ್ನನ್ನು ತಲಪಿದಾಗ, ಆ ತಿರುಗಾಸನ್ನು ಫಕ್ಕನೆ ತಿರುಗಿ ಆಚೆ ಮಗ್ಗುಲಿನ ವೈಶಾಲ್ಯವನ್ನು ಕಂಡಾಗ ಅಲ್ಲಿಯ ಹುಲ್ಲಿನ ಹೊದಿಕೆಯ ವಿಸ್ತಾರದಲ್ಲಿ ಸ್ವಚ್ಛಂದವಾಗಿ ಮೇಯುತ್ತಿದ್ದ ಕಾಟಿಗಳ ಹಿಂಡನ್ನು ನೋಡಿದೆವು. ನಮ್ಮನ್ನು ಅವರು ಅಲ್ಲಿಯೇ ಕುಳಿತಿರಲು ಸಂಜ್ಞೆ ಮೂಲಕ ವಿಧಿಸಿ ಕಾಟಿ ಹಿಂಡಿಗೆ ಕಾಣದಂತೆ ಬಳಸು ದಾರಿಯಿಂದ ಕಾಡು ಸೇರಿದರು. ಹಿಂದೆ ಹೇಳಿದ ಅಯಾಲಿನ ಕಾಡದು. ಕಾಡಿನಿಂದ ಹೊರಗೆ ದಾಟಿ ಕಾಟಿಗಳ ಹಿಂಡು ಮೇಯುತ್ತಿದ್ದ ಇಳಿಜಾರಿನ ತುತ್ತ ತುದಿ ತಲಪಿದರು. ಆ ಗಡಿಗೆರೆಯನ್ನು ತೆವಳಿ ಹರಿದು ದಾಟಿ ಒಂದು ಅನುಕೂಲ ಪ್ರದೇಶಕ್ಕೆ ಬಂದರು. ನಮಗೆ ಕುಳಿತಲ್ಲಿಂದಲೇ ಅವರ ತೆವಳು ಸರಿತ ಮತ್ತು ಕಾಟಿಗಳ ಸ್ವಚ್ಛಂದ ವಿಹಾರ ಎರಡೂ ತೋರುತ್ತಿದ್ದುವು. ಶಿಸ್ತಿನ ಬಿಗಿಯಿಲ್ಲದಿದ್ದರೆ ಆ ಗಳಿಗೆಯಲ್ಲಿ ಏನಾದರೂ ಸದ್ದು ಮಾಡಿ ಕಿರುಚಿ ಕಾಟಿಗಳನ್ನು ಓಡಿಸಿ ಬಿಡುತ್ತಿದ್ದೆ. ಆದರೆ ಬಂದವರು ಮೇಲಧಿಕಾರಿ. ಮುಂದಿನ ವಿಷ ಗಳಿಗೆಯಲ್ಲಿ ರೈಫಲ್ ಹೊಟ್ಟಿತು. ಹಿಂಡು ದಿಕ್ಕಾಪಾಲಾಗಿ ಕಂಗಾಲಾಗಿ ಚದರಿ ಹೋಯಿತು. ಇಲ್ಲ, ಕುದುರೆಮುಖದ ಶಿಖರ ಕಳಚಿ ಬಿದ್ದಂತೆ ಒಂದು ಭಾರೀ ಕಾಟಿ ಉರುಳಿ ಬಿದ್ದು ವಿಲವಿಲನೆ ಒದ್ದಾಡಿ ರಕ್ತದ ಕಾರಂಜಿ ಹಾರಿಸಿ ನಿಶ್ಚೇಷ್ಟಿತವಾಯಿತು. ಮತ್ತೊಂದು ಗುಂಡಿನ ಸದ್ದೂ ಕೇಳಿಸಿತು. ಬಹುಶಃ ಭದ್ರತೆಗಾಗಿ ಸತ್ತ ಕಾಟಿಗೇ ಪುನಃ ಹೊಡೆದುದಾಗಿರಬೇಕು. ನಾನಲ್ಲಿಗೆ ಹೋಗಲೇ ಇಲ್ಲ - ಅಂಥ ದೃಶ್ಯ ನೋಡುವುದು ನನಗೆ ಸಾಧ್ಯವಿಲ್ಲ. ಹುಡುಗರು ಓಡಿದರು. ನಮ್ಮ ಇಪ್ಪತ್ತು ಹುಡುಗರಿಗೆ ಆ ಪರ್ವತ ದೇಹವನ್ನು ಒಂದು ಮಗ್ಗುಲಿನಿಂದ ಇನ್ನೊಂದು ಮಗ್ಗುಲಿಗೆ ಮಗುಚುವುದು ಅತಿ ಪ್ರಯಾಸಕರವಾಯಿತಂತೆ. ಅದನ್ನು ಸುಲಿದು ಚರ್ಮ ಮಾಂಸಗಳನ್ನು ಪುರ್ಬು, ಶೇಣವ ಇವರ ಸಂಬಂಧಿಕರು ಒಯ್ದರು. ಕೋಡನ್ನು ಕ್ಯಾಪ್ಟನ್ನರು ತೆಗೆದುಕೊಂಡರು. ಈ ದುರ್ಘಟನೆಯನ್ನು ಬರೆಯುವಾಗ ಇಂದಿಗೂ ನನ್ನ ಲೇಖನಿ ಕುಂಟುತ್ತದೆ; ಹೃದಯವಿಕಾರವಾಗುತ್ತದೆ. ಕಾನೂನು, ನ್ಯಾಯ, ನೀತಿ ಯಾವ ದೃಷ್ಟಿಯಿಂದ ನೋಡಿದರೂ ನಾವು ಮಾಡಿದ್ದು ಘೋರ ಪಾಪ. ಭೂಮಿಯ ಮೇಲೆ ವಾಸವಾಗಿರಲು ಮನುಷ್ಯನಿಗಿರುವಶ್ಟೇ ಹಕ್ಕು ಆ ಪ್ರಾಣಿಗೂ ಇದೆ. ಅದು ನಮ್ಮ ಮೇಲೆ (ಆತ್ಮರಕ್ಷಣೆಗಾಗಿ ಮಾತ್ರ) ಏರಿ ಬಂದಿದ್ದರೆ, ಬರ್ನಾರ್ಡ್ ಶಾ ಎಂದಿರುವಂತೆ, ಅದನ್ನು ಭೀಕರ ಕ್ರೌರ್ಯ ಎನ್ನುತ್ತಿದ್ದೆವು. ಆದರೆ ನಾವದನ್ನು ಹೊಡೆದದ್ದು ಬೇಟೆ, ಆಟ, ವಿನೋದ - ತೋಳ ಕುರಿಮರಿ ನ್ಯಾಯ.

ಪುರ್ಬು ಘಟನೆಯನ್ನು ಚೆನ್ನಾಗಿ ತಿಳಿದಿದ್ದ, ಅಲ್ಲದೇ ತಿಂದಿದ್ದನಷ್ಟೆ! ಸ್ವಾಮೀ! ಮತ್ತೆ ಯಾರೂ ಬರಲಿಲ್ಲ ಆ ರೀತಿ. ಈ ಸಲ ರೈಫಲ್ ಮಿನಿ ತಂದಿದ್ದೀರಾ? ಆಸೆಯ ಪ್ರಶ್ನೆ.
ತಂದಿದ್ದೇವೆ. ಆದರೆ ರಕ್ಷಣೆಗಾಗಿ ಮಾತ್ರ. ಬೇಟೆ ಖಂಡಿತ ಆಡುವುದಿಲ್ಲ.
ನನಗೂ ಬರಲು ಸಾಧ್ಯವಿಲ್ಲ ಸ್ವಾಮೀ. ಈಗ ಮುದುಕನಾದೆ. ಆಗಾದರೆ ಆರೋಗ್ಯ ಚೆನ್ನಾಗಿತ್ತು. ಕಳೆದ ವರ್ಷ ಮಳೆಗಾಲದಲ್ಲಿ ನಾನು ಬದುಕಿ ಉಳಿದದ್ದೇ ಹೆಚ್ಚು. ನೀವು ಬಂದಾಗ ದಾರಿಯಲ್ಲಿ ಒಂದು ಎಚ್ಚರಿಕೆಯ ಮಾತು ಬರೆದಿದ್ದ ಬಂಡೆಯನ್ನು ನೋಡಿದಿರಷ್ಟೆ. ಅಲ್ಲಿ ನಾನು ಒಬ್ಬನೇ ಬರುತ್ತಿದ್ದಾಗ ಒಂದು ಕಾಡುಕೋಣ ಫಕ್ಕನೆ ನನ್ನ ಮೇಲೆಯೇ ಏರಿ ಬರಬೇಕೇ? ನಾನು ಕೋವಿ ಹಿಡಿದಿರಲಿಲ್ಲ. ಅಲ್ಲದೇ ಅಷ್ಟು ಹತ್ತಿರದಿಂದ ಏನೂ ಮಾಡುವಂತಿರಲಿಲ್ಲ. ಏನೋ ನಿಮ್ಮನ್ನು ನೋಡಬೇಕೆಂದು ದೇವರು ಬರೆದಿದ್ದ. ಅಲ್ಲಿಯೇ ಕೂತು ಹೋದೆ. ಅದು ನನ್ನ ಮೇಳೆ ನುಗ್ಗಿ ಕೊಂಬಿನಿಂದೆತ್ತಿ ಹಳ್ಳಕ್ಕೆ ಎಸೆದುಬಿಟ್ಟಿತು. ಆದರೆ ನಾನು ಬೀಳುವಲ್ಲಿ ಹುಲ್ಲಿನ ರಾಶಿ, ಕೆಸರು, ಎಲೆ ಇದ್ದುದರಿಂದ ಮೂಳೆ ಮುರಿಯದೇ ಉಳಿದುಕೊಂಡೆ. ಬಹಳ ಕಷ್ಟ ಸ್ವಾಮೀ.
ಆದರೆ ನನ್ನ ಮನಸ್ಸು ಬೇರೆಯೇ ಮಿಡಿಯುತ್ತಿತ್ತು. ಹೌದು ಆ ನಿರಪರಾಧಿಯ ಎಷ್ಟೊಂದು ಬಂಧು ಬಳಗದವರನ್ನು ನೀನು ಅಮಾನುಷವಾಗಿ ಕೊಂದು ತಿನ್ನಲಿಲ್ಲ? ಅದು ನಿನ್ನ ಮೇಲೆ ಸೇಡು ತೀರಿಸಲೆಂದೇ ನುಗ್ಗಿರಬೇಕು. ಆದರೂ ನಿನ್ನಷ್ಟು ಕ್ರೂರಿ ಅದಲ್ಲ, ಜೀವಸಹಿತ ಬಿಟ್ಟಿತಲ್ಲ.

ನಾವು ಕೆಳಗಿನಿಂದಲೇ ತಂದಿದ್ದ ಚಿತ್ರಾನ್ನ, ಸಿಹಿ ತಿಂಡಿ,
ಷರಬತ್ತು, ಹಣ್ಣು ಎಲ್ಲವನ್ನೂ ಆ ಸುಂದರ ವಾತಾವರಣದಲ್ಲಿ ಕಬಳಿಸಿದೆವು. ಇದೇ ನಮ್ಮ ಮಧ್ಯಾಹ್ನದ ಊಟ. ಬಂಗ್ಲೆಯೊಳಗೆ ಹೋಗಿ ನಲ್ಲಿ ನೀರು ಹಿಡಿದು ತಂದ ತಿಮ್ಮಪ್ಪ ಹೇಳಿದ, ಸರ್ ಇಲ್ಲಿ ಪೈಪ್ ವಾಟರ್ ಸಪ್ಲೈ ಉಂಟು!
ಹೌದೌದು! ಮಂಗಳೂರಿನ ನೀರು ಸಪ್ಲೈ ಕಂಪೆನಿ ಇಲ್ಲಿವರೆಗೆ ಪೈಪು ಹಾಕಿದೆ ಮೆಂಗಿಲ ಶೇಣವನ ತಟಕ್ಕನೆ ಉತ್ತರ. ತಿಮ್ಮಪ್ಪ ನಂಬಿದ. ಮುಂದೆ ಬೆಟ್ಟ ಏರುವಾಗಲೇ ತಿಳಿದದ್ದು; ಬೆಟ್ಟದ ಝರಿಗೆ ಪುರ್ಬು ನಳಿಗೆ ಜೋಡಿಸಿದ್ದ ಅಷ್ಟೆ.

ಊಟ ಮುಗಿದ ಮೇಲೆ ಜೊಂಪು ಹಿಡಿವ ಮೊದಲೇ ಅಲ್ಲಿಂದ ಮುಂದಕ್ಕೆ ಹೊರಟೆವು. ಪಿಂಟೋ, ಜಯರಾಮ, ರಾಮಕೃಷ್ಣ ಮೊದಲಾದವರು ಅಲ್ಲಿಯೇ ಶಿಬಿರ ಸ್ಥಾಪಿಸಿ ಮರುದಿನ ಬೆಳಗ್ಗೆ ಲಗ್ಗೆ ಹತ್ತಿದರಾಗದೇ ಎಂದು ಸೂಚಿಸಿದರು. ಸೂಚನೆಯ ಹಿನ್ನೆಲೆಯಲ್ಲಿದ್ದ ಧ್ವನಿ ಅವರಿಗೆ ವಿಶ್ರಾಂತಿ ಬೇಕೆಂಬುದು. ನಾನೆಂದೆ, ನಮಗಿರುವ ಅವಧಿಯಲ್ಲಿ ಇಂದೇ ಅಲ್ಲಿಗೆ ಹೋಗಬೇಕು. ಹೋದಮೇಲೆ ನೀವು ಒಪ್ಪುತ್ತೀರಿ, ಈ ನಿರ್ಧಾರ ಸರಿಯಾದದ್ದು ಎಂದು.

ಎರಡು ಗಂಟೆಗೆ ಸಿಂಹ ಪುರ್ಬು ಮನೆಯಿಂದ ಗೂಟ ಕಿತ್ತೆವು. ಮುಂದಿನ ದಾರಿಯ ದೂರ ೫ ಮೈಲು, ಹತ್ತಬೇಕಾದ ಎತ್ತರ ಸುಮಾರು ೩೦೦೦ ಅಡಿ. ಕುದುರೆಮುಖ ಹತ್ತಿರ ಕಂಡರೂ ಎರಡು ಬೆಟ್ಟ ಏರಿ ಇಳಿದು ಅಲ್ಲಿಗೆ ಹೋಗಬೇಕು. ಕುದುರೆಮುಖದ ಔನ್ನತ್ಯದ ಮುಂದೆ ಅವು ಕಲ್ಲುರಾಶಿಗಳು. ಆದರೆ ನಮಗೆ ಅವೇ ದಿಗ್ಬಂಧನ. ಏರಿಕೆ ಅತಿ ದುರ್ಗಮವಾಯಿತು. ಸಾವನದುರ್ಗಕ್ಕೆ ಸಮಾನವಾದಂತೆ ಅನ್ನಿಸಿತು. ಆದರೆ ಇದು ನಡು ಹಗಲ ಕೆಂಡ ಬಂಡೆಯಲ್ಲ. ಜೊಂಡು, ಮರಳು, ಕಲ್ಲಿನ ಹರಳು ಕೂಡಿದ್ದ ರಾಶಿ. ಹೀಗಾಗಿ ಜಾರುವ ಬೀಳುವ ಭಯ ಇರಲಿಲ್ಲ. ಅದುವರೆಗೆ, ಏರುವೆಯಾ ನಮ್ಮೆತ್ತರಕ್ಕೆ? ನಾವೇ ಎತ್ತರ ಎಂದು ಮೆರೆಯುತ್ತಿದ್ದ ದಿಗ್ಭಿತ್ತಿಗಳು ಕ್ರಮೇಣ ಕಾಲ ಕೆಳಗೆ ಕುಸಿಯುತ್ತಿದ್ದುವು. ನಮ್ಮ ಶ್ರಮ ಸಾಹಸಗಳ ಮುಂದೆ ಅವು ಮಣಿಯುತ್ತಿದ್ದುವು. ಮೊದಲು ಅವುಗಳಿಗೆ ಹೆದರಿ ಮೇಲೆ ನೋಡುತ್ತಿದ್ದ ನಮಗೆ ಈಗ ಆತ್ಮ ವಿಶ್ವಾಸದಿಂದ, ನವಸಾಧನೆಯಿಂದ ಕೆಳಗೆ ನೋಡುವ ಧೈರ್ಯ ಬಂದಿತು. ದೂರದಿಂದ ಭೀಕರ; ಹತ್ತಿರದಿಂದ ಪ್ರಿಯಕರ. ಏರುತ್ತಿದ್ದಂತೆ ಬೆಟ್ಟದ ಮೈಯಲ್ಲಿಯೇ ಲೀನರಾದ ನಮಗೆ ಮೂಗಿಗಿಂತ ಮುಂದೆ ಕಾಣುವುದೇ ಇಲ್ಲ. ಹಿಂದೆ ಮಾತ್ರ ನೋಡಬಾರದು. ನಡೆ ಮುಂದೆ. ಶಿಖರದಿಂದ ಎತ್ತರವಾದ ಶಿಖರಕ್ಕೆ ಸಾಗಿದಾಗ ವಿಶ್ವಸಾಕ್ಷಾತ್ಕಾರ. ಇದು ಪರ್ವತದ ಸೂತ್ರ.

ಕುದುರೆಮುಖ ಆಕಾಶಕ್ಕೆ ಮಸಿ ಮೆತ್ತಿದ ಭಯಂಕರತೆ ಪಡೆಯಿತು. ನೇರವಾಗಿ ಅದನ್ನು ಲಗ್ಗೆ ಹತ್ತುವುದು ಸಾಧ್ಯ ಹಗ್ಗಗಳ ಸಹಾಯದಿಂದ. ಆದರೆ ನಮ್ಮ ಆಗಿನ ಪರಿಸ್ಥಿತಿಯಲ್ಲಿ ಅಲ್ಲ. ಅದಕ್ಕೆ ಬೇರೆಯೇ ಕಾಯಕ್ರಮ ರೂಪಿಸಿ ಪುರ್ಬು ಮನೆಯಲ್ಲಿ (ಪಿಂಟೋ ಸೂಚಿಸಿದಂತೆ) ತಂಗಬೇಕು. ಅಲ್ಲಿಂದ ಅರುಣೋದಯದಲ್ಲಿ ಹೊರಡಬೇಕು.

ನಮ್ಮ ಶಿಸ್ತಿನ ಪರಿಪಾಲನೆ ಆ ಹಿರಿತನದ ಸಾಮೀಪ್ಯದಲ್ಲಿ ಕಷ್ಟಕರವಾಯಿತು. ಯಾರೂ ಲೈನನ್ನು ಮುರಿದು ಹೋಗಬಾರದು. ಅಡ್ಡದಾರಿ ಹಿಡಿಯಬಾರದು ಎಂದು ಕಟ್ಟಾಜ್ಞೆ ವಿಧಿಸಿದ್ದರೂ ಕುದುರೆಮುಖ ಸಮೀಪವಾದಂತೆ ಹುಡುಗರ ಉತ್ಸಾಹ ಮೇರೆ ಮೀರಿತು. ವೈಯಕ್ತಿಕ ಹಿರಿಮೆ ಸಾಧಿಸುವ ಅಪೇಕ್ಷೆ ಹೆಚ್ಚಾಯಿತು. ನಾನು ಸ್ವಲ್ಪ ಸಡಿಲಗೊಳಿಸಿದೆ - ಸಾಹಸಪ್ರಿಯರು ಮುಂದೆ ಹೋದರೆ ಹೋಗಲಿ, ಆ ದಾರಿಯಲ್ಲಿ ಹೇಗೂ ಅಪಾಯವೇನೂ ಇಲ್ಲ ಎಂಬ ಧೈರ್ಯದಿಂದ. ತರುಣರಿಗೆ ಈಗ ಮುದುಕ ಮೆಂಗಿಲ ಶೇಣವ ಬಳಸು ದಾರಿಯಲ್ಲಿ ಹೋಗುತ್ತಿದ್ದಾನೆ ಎಂದೆನ್ನಿಸಿತು. ನಿಜ ಸ್ಥಿತಿಯೂ ಹಾಗೆಯೇ. ಕುದುರೆಮುಖದ ಶ್ರೇಣಿಗೆ ಬಂದ ಮೇಲೆ (ಅದು ಎಡಗಡೆಗೆ ಚಾಚಿದೆ) ಬಲಗಡೆಗಾಗಿ (ಅಂದರೆ ಬಂಡೆಯಿಂದ ದೂರ ದೂರ) ಏರುತ್ತ ಹೋಗಿ ಸ್ವಲ್ಪ ಬಳಸಾದರೂ ಕಠಿಣವಲ್ಲ. ಆದರೆ ನಮ್ಮ ಧೀರರಿಗೆ ಎಡಗಡೆಯ ಹತ್ತಿರದ ಎತ್ತರದ ಬಂಡೆ ಹೆಚ್ಚು ಆಕರ್ಷಣೀಯವಾಯಿತು. ಅಜ್ಜ ಬಳಲಿದ್ದಾನೆ. ಭಾರ ಹೊತ್ತಿದ್ದಾನೆ, ತ್ರಾಣವಿಲ್ಲ. ಹೋದರೆ ಹೋಗಲಿ ನಾವು ಸೀದಾ ಹೋಗುತ್ತೇವೆಂದು ಹೊರಟರು ಕೆಲವರು.

(ಮುಂದುವರಿಯಲಿದೆ)

3 comments:

  1. ಗೆಳೆಯ ಒಬ್ಬರು ಹೊಡೆದ ಗುಂಡು ತಗುಲಿದ ಕಾಡುಕೋಣ ಸಾಯುವ ದಾರುಣ ದೃಷ್ಯ ನೋಡಿದನಂತರ ನನ್ನ ಬೇಟೆಯ ಹುಚ್ಚು ಕಮರಿ ಹೋಯಿತು.
    ಆ ನಂತರ ನಾನು ನಿಸರ್ಗ ಪ್ರೇಮಿಯಾದೆ.
    ಕಳ್ಳ ಬೇಟೆಯನ್ನು ತಡೆಯಲು ಶಕ್ತಿಮೀರಿ ಪ್ರಯತ್ನ ಮಾಡಿದ್ದೇನೆ.
    ಹಾಗಾಗಿ, ಬಹಳ ಜನರ ನಿಷ್ಟೂರ ಕಟ್ಟಿಕೊಂಡಿದ್ದೇನೆ.
    ಪ್ರೀತಿಯಿಂದ
    ಪೆಜತ್ತಾಯ

    ReplyDelete
  2. G T NA
    barahagalannu matthe matthe oduvuduu vishishta anubhava . Shaili swarasya vishaya --elladarallu vishishta.

    ReplyDelete
  3. “ಹೌದು ಆ ನಿರಪರಾಧಿಯ ಎಷ್ಟೊಂದು ಬಂಧು ಬಳಗದವರನ್ನು ನೀನು ಅಮಾನುಷವಾಗಿ ಕೊಂದು ತಿನ್ನಲಿಲ್ಲ? ಅದು ನಿನ್ನ ಮೇಲೆ ಸೇಡು ತೀರಿಸಲೆಂದೇ ನುಗ್ಗಿರಬೇಕು. ಆದರೂ ನಿನ್ನಷ್ಟು ಕ್ರೂರಿ ಅದಲ್ಲ, ಜೀವಸಹಿತ ಬಿಟ್ಟಿತಲ್ಲ.” ಬದುಕಲು ನಾವು ತಿನ್ನಲೇ ಬೇಕಿರುವ ಜೈವಿಕ ಆಹಾರ ಜೀವಿಗಳ ಬಗ್ಗೆ ನಮಗಿರಬೇಕಾದ ಸಂವೇದನೆಯನ್ನು ಎಚ್ಚರಿಸುವ, ಸೂಕ್ಷ್ಮಗೊಳಿಸುವ ಪ್ರಚೋದನೆ ಇಲ್ಲಿದೆ.

    ReplyDelete