17 September 2013

ಜಮಾಲಾಬಾದಿನ ಮಾನಸ ಸರೋವರ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ ವಿ-ಧಾರಾವಾಹಿಯ ಕಂತು ಇಪ್ಪತ್ತೆರಡು
ಅಧ್ಯಾಯ ನಲ್ವತ್ತೆಂಟು

ಕುದುರೆಮುಖ ಪರ್ವತ ಶ್ರೇಣಿಯ ಬುಡದಲ್ಲಿ ನಾವೂರು ಬಂಗ್ಲೆ. ಇದರ ಎತ್ತರ ಸಮುದ್ರ ಮಟ್ಟದಿಂದ ೪೮೦ ಅಡಿ. ಬಂಗ್ಲೆಯು ಶ್ರೇಣಿಗೆ ಮುಖ ಮಾಡಿದೆ. ಜಗಲಿಯ ಮೇಲೆ ನಿಂತು ಶ್ರೇಣಿಯನ್ನು ನೋಡುವಾಗ ಎಡಗಡೆಗೆ, ಅಂದರೆ ಬೆಳ್ತಂಗಡಿ ಕಡೆಗೆ ಜಮಾಲಾಬಾದ್ ಇದೆ. ಬೆಳ್ತಂಗಡಿಯಿಂದ ಜಮಾಲಾಬಾದಿಗೆ, ನಾವೂರು ಬಂಗ್ಲೆಯನ್ನು ಬಿಟ್ಟು, ನೇರ ಹೋಗುವುದು ಸಾಧ್ಯ. ಕುದುರೆಮುಖ ಶಿಖರದ ಎತ್ತರ ೬೨೫೭ ಅಡಿ, ಜಮಾಲಾಬಾದಿನ ಎತ್ತರ ೧೭೮೮ ಅಡಿ. ಬೆಳ್ತಂಗಡಿಯ ಎತ್ತರ ೪೫೦ ಅಡಿ. ಜಮಾಲಾಬಾದ್ ಒಂಟಿ ಹೆಬ್ಬಂಡೆ ನೀಳವಾಗಿ ಸೆಟೆದು ನಿಂತಂತೆ ಇರುವುದರಿಂದ ಬೆಳ್ತಂಗಡಿಯ ವಲಯದಲ್ಲಿ ಎಲ್ಲಿಯೇ ನಿಂತರೂ ಮೊದಲು ನಮ್ಮ ಗಮನ ಸೆಳೆಯುವುದು ಈ ‘ಪೀಸಾ ನಗರದ ಮಾಲುವ ಗೋಪುರ, ‘ಪ್ಯಾರಿಸ್ ನಗರದ ಐಫೆಲ್ ಟವರ್. ಇದರ ಹಿನ್ನೆಲೆಯ ಬಾನಪಟದಲ್ಲಿ ಕುದುರೆಮುಖ ಶ್ರೇಣಿ ಮತ್ತೆ ಗೋಚರಿಸುವುದು. ಆದರೆ ಕಣ್ಣ ಸಮೀಪದ ನುಸಿ ದೂರದ ಆನೆಗಿಂತ ನಮಗೆ ದೊಡ್ಡದಲ್ಲವೇ? ಬೆಳ್ತಂಗಡಿ ಕಡೆಯಿಂದ ನೋಡುವಾಗ ಜಮಾಲಾಬಾದಿನ ಬಲಭಾಗ ಬೋಳುಬಂಡೆ. ಅತಿ ನೆಟ್ಟಗೆ, ಗೂಳಿಯ ಬೆನ್ನ ಮೇಲಿನ ಡುಬ್ಬದಂತೆ ನಿಂತಿದೆ. ಅದರಿಂದ ಕ್ರಮೇಣ ಎಡಗಡೆಗೆ ಕಾಡು ಮರಗಳಿಂದ ಕೂಡಿದ ಇಳಿಜಾರು ಇದೆ. ಒಟ್ಟಾಗಿ ನೋಡುವಾಗ ಕುದುರೆಮುಖದೆಡೆಗೆ ಮುಖ ಮಾಡಿ ನಿಂತಿರುವ ಆನೆಯಂತೆ ಜಮಾಲಾಬಾದ್ ಕಾಣುವುದು. ಸಾವನದುರ್ಗಕ್ಕಿಂತ ಜಮಾಲಾಬಾದ್ ಸ್ವಲ್ಪ ಕಡಿಮೆ ಎತ್ತರ.


ನಾವೂರು ಬಂಗ್ಲೆಯಿಂದ ಜಮಾಲಾಬಾದಿನ ಬುಡದವರೆಗೆ ಕಾಲು ದಾರಿಯಲ್ಲಿ ಕಾಡುಗದ್ದೆಗಳ ಮೂಲಕ ೬ ಮೈಲು ನಡೆಯಬೇಕು. ನಮ್ಮ ಪಟಾಲಮ್ ೧೩ ಜನ ಸಮವಸ್ತ್ರಧಾರಿಗಳಾದ ಹುಡುಗರು, ಖಾನ್ವೀಲ್ಕರ್ ಮುಂದೆ, ಹಿಂದೆ ನಾನು. ಮಾರ್ಗದರ್ಶನ ಶೆರ್ಪಾ ನಮಗಿಂತೆಲ್ಲ ಮುಂದೆ, ಹೀಗೆ ನಡೆಯಿತು. ಸಾಲಾಗಿ ನಾವು ಆ ಶುಭ ಪ್ರಾತಃ ಕಾಲ ನಡೆಯುತ್ತಿದ್ದಾಗ, ಆ ಚೇತನದ ತುಂಬು ಹೊಳೆಯಲ್ಲಿ ತೇಲುತ್ತಿದ್ದಾಗ, ದಾರಿಯೇ ನಮ್ಮ ಕಾಲಡಿಯಲ್ಲಿ ಜಾರಿ ಹೋಗುತ್ತಿದ್ದಂತೆ ಭಾಸವಾಗುತ್ತಿತ್ತು. ತೆಂಗಿನ ಮರಗಳು ಗೌರವ ರಕ್ಷೆ ನೀಡಿದುವು. ಬಾಳೇ ಗಿಡಗಳು ಉದ್ದವಾದ ಎಲೆಗಳನ್ನು ಮೇಲೆ, ಕೆಳಗೆ ತೊನೆದಾಡಿಸಿ ಬೀಸಣಿಗೆ ಬೀಸಿದುವು. ಕಾಡು ಗುಲಾಬಿ, ಗೋರಟೆ, ಕಣಗಿಲೆ ಹೂಗಳ ಮಿಶ್ರ ಚಿತ್ರ, ಅನಾನಸಿನ ಸಾಲುಗಳ ವರ್ಣವೈವಿಧ್ಯ ಕಣ್ಣಿಗೆ ಹಬ್ಬ. (ನನ್ನ ಕಣ್ಣಿನಿಂದ ತಪ್ಪಿಸಿದವರಿಗೆ ಬಾಯಿಗೂ ಸಹ!) ದನಕರುಗಳು ಹೆದರಿ ಓಡಿದುವು. ನಾಯಿಗಳು ಬೊಗಳಿ ಬಾಲ ಮಡಚಿ ನಾಗಾಲೋಟಕಿತ್ತುವು. ಬೇಸಾಯಗಾರರು ಕುತೂಹಲದಿಂದ ಮನೆಗಳಿಂದ ಹೊರಗೆ ಬಂದು ನಿಂತು ನಮ್ಮನ್ನು ದಿಟ್ಟಿಸಿದರು.

ಜಮಾಲಾಬಾದುಕು ನಾಣ ಏತು ದೂರ ಉಂಡಿಯೇ ಎಂದು ಮುರುಕು ತುಳುವಿನಲ್ಲಿ ತಾತಯ್ಯನೊಬ್ಬನನ್ನು ಪ್ರಶ್ನಿಸಿದಾಗ, ಗಡಾಯಿಕಲ್ಲೋ ಸ್ವಾಮೀ? ಅದು ಓ ಇಲ್ಲಿಯೇ ಎಂದು ಅವನು ಶುದ್ಧ ಕನ್ನಡದಲ್ಲಿಯೇ ಉತ್ತರವಿತ್ತ.
ಆದರೆ ನಮ್ಮ ಪ್ರಶ್ನೆಗೆ ಉತ್ತರ ದೊರೆಯಲಿಲ್ಲ. ನಮ್ಮ ಎದುರು ಅದು ‘ದಿಟ ಪ್ರಶ್ನೆ, ದಿಟ್ಟ ಪ್ರಶ್ನೆಯಾಗಿ ನಿಂತಿದೆ. ದೂರ ಎಷ್ಟು? ಒಂದು ಮೈಲೇ ಎರಡು ಮೈಲೇ ಎಂದು ತಿಳಿಯಲು ಪ್ರಶ್ನಿಸಿದರು, ಓ ಇಲ್ಲಿಯೇ ಉತ್ತರ. ಹಳ್ಳಿಗರ ಓ ಇಲ್ಲಿಯೇ ಅಳತೆಗೋಲಿನ ಉದ್ದ ೨ ಫರ್ಲಾಂಗಿನಿಂದ ೨ ಮೈಲಿಯವರೆಗೆ ಎಷ್ಟೂ ಆಗಬಹುದು.

ಆ ಮನೆಗಳ ಸ್ವಚ್ಛತೆ, ಅಂಗಳ ನೆಲಗಳ ಚೊಕ್ಕಟತನ, ಅಂಗಳದ ಕರೆಯಲ್ಲಿ ಓರಣವಾಗಿ ಮೆದೆಯೊಟ್ಟಿದ್ದ ಹುಲ್ಲುಮುಂಡ, ಅದರ ಬದಿಗಿದ್ದ ತೊಂಡೆ, ಬಸಳೇ ಚಪ್ಪರ, ಸಣ್ಣ ಹೂದೋಟ - ಇವೆಲ್ಲ ತುಂಬ ಆಕರ್ಷಣೀಯವಾಗಿದ್ದುವು. ಬಡತನವೋ ಸಿರಿವಂತಿಕೆಯೋ ನಾಗರಿಕತೆಯೋ ಅಲ್ಲವೋ ಬದುಕನ್ನು ಅಚ್ಚುಕಟ್ಟಾಗಿ ರೂಪಿಸಿಕೊಂಡಿದ್ದವರಿವರು ಎಂಬುದು ತಿಳಿಯಿತು. ಬೆಂಗಳೂರಿನ ನಮ್ಮ ಹುಡುಗರಿಗೆ ಇದು ಹೊಸ ಅನುಭವ.

ಜಮಾಲಾಬಾದ್ ಅಥವಾ ಸ್ಥಳೀಯರ ಭಾಷೆಯಲ್ಲಿ ಗಡಾಯಿಕಲ್ಲು ಇತಿಹಾಸಪ್ರಸಿದ್ಧವಾದ ಒಂದು ಗಿರಿದುರ್ಗ. ಇಂಪಿರಿಯಲ್ ಗಜೆಟಿಯರಿನಲ್ಲಿ ಇದರ ಬಗ್ಗೆ ಉಲ್ಲೇಖವಿದೆ (೧೯೦೮): ೧೭೮೮ ಅಡಿ ಎತ್ತರಕ್ಕೆ ನೇರವಾಗಿ ನಿಂತಿರುವ ಕಡಿದಾದ ಬಂಡೆಯಿದು. ಕುದುರೆಮುಖ ಸಾಲಿನಿಂದ ಪ್ರತ್ಯೇಕವಾಗಿ ನಿಂತಿದೆ. ೧೭೮೪ರಲ್ಲಿ ಮಂಗಳೂರಿನಿಂದ ಮರಳುತ್ತಿದ್ದ ಟಿಪ್ಪು ಸುಲ್ತಾನನು ಈ ಬಂಡೆಯ ಸ್ಥಾನ, ದುರ್ಗಮತೆಗಳನ್ನು ಅನುಲಕ್ಷಿಸಿ ಇದರ ಮೇಲೊಂದು ಕೋಟೆ ನಿರ್ಮಿಸಿ ಭದ್ರಪಡಿಸಿದ. ಅವನ ಪ್ರೀತಿಯ ತಾಯಿ ಜಮಾಲಾಬಾಯಿಯ ನೆನಪಿಗಾಗಿ ಇದನ್ನು ಜಮಾಲಾಬಾದ್ ಎಂದು ಹೆಸರಿಸಿದ. ಇದರ ತಳದಲ್ಲಿರುವ ಪಟ್ಟಣವನ್ನು ತನ್ನ ಪ್ರತಿನಿಧಿ ಅಧಿಕಾರಿಯ ನಿವೇಶನವಾಗಿ ಮಾಡಿದ. ಇದರ ಹೆಸರು ನರಸಿಂಹ ಅಂಗಡಿ. ಅದು ಈಗ ಉಳಿದಿಲ್ಲ. ೧೭೯೯ರಲ್ಲಿ ಬ್ರಿಟಿಷರು ಈ ಗಿರಿದುರ್ಗವನ್ನು ಸ್ವಾಧೀನಪಡಿಸಿಕೊಂಡರು. ಆದರೆ ಮುಂದೆ ಸ್ವಲ್ಪ ಅವಧಿಯಲ್ಲಿ ಅದು ಅವರ ಕೈಯಿಂದ ತಪ್ಪಿಹೋಗಿ ವಿರೋಧಿ ಗುಂಪಿನವರ ಕೈವಶವಾಯಿತು. ಮುಂದಿನ ಮೂರು ತಿಂಗಳ ದೀರ್ಘ ಕಾಲ ಈ ಕೋಟೆಯ ಸುತ್ತಲೂ ಮುತ್ತಿಗೆ ಹಾಕಿ ಪ್ರತಿಬಂಧಿಸಿದುದರ ಪರಿಣಾಮವಾಗಿ ಮೇಲಿನವರು ಶರಣಾಗತರಾಗ ಬೇಕಾಯಿತು. ಇದು ನಡೆದುದು ೧೮೮೦ರಲ್ಲಿ.

ಇನ್ನೊಂದು ಪುಸ್ತಕದಲ್ಲಿ (ಸೌತ್ ಕೆನರಾ ಡಿಸ್ಟ್ರಿಕ್ಟ್ ಮ್ಯಾನುಯಲ್) ಇನ್ನಷ್ಟು ವಿವರವಿದೆ: ಕದಂಬರ ಸಂತತಿ ನಿರ್ನಾಮಹೊಂದಿದ ಅನಂತರ ಬಂದ ತೌಳವ ಪ್ರಭುತ್ವದಲ್ಲಿ ನರಸಿಂಹನೆಂಬ ಬ್ರಾಹ್ಮಣನು ಪ್ರಭುತ್ವದ ಸ್ಥಳೀಯ ಪ್ರತಿನಿಧಿ (ಗವರ್ನರ್) ಆಗಿದ್ದ. ಅವನ ಅರಮನೆ ಕಲ್ಲಿನ ಬುಡದಲ್ಲಿತ್ತು. ಅದರ ಅವಶೇಷ ಈಗ ಏನೂ ಇಲ್ಲ. ಈ ಪ್ರದೇಶ ನರಸಿಂಹನ ಹೆಸರಿನಿಂದಲೇ ಪ್ರಸಿದ್ಧವಾಯಿತು. ಅತ್ಯುನ್ನತ ಮತ್ತು ಕಡಿದಾದ ಕಲ್ಲಿನ ಮೇಲೆ ಇರುವ ದುರ್ಗ. ಅಪಾಯದ ಒಂದು ಕಿರುದಾರಿಯ ವಿನಾ ಬೇರೆಲ್ಲ ಕಡೆಗಳಿಂದಲೂ ಅಗಮ್ಯ. ಈ ದಾರಿಯ ದುರ್ಗದ ಮೇಲೆ ಕುಳಿತವರ ದೃಷ್ಟಿಯ ಅಡಿಯಲ್ಲಿಯೇ ಇದೆ. ಆದ್ದರಿಂದ ದುರ್ಗವನ್ನು ಕಿರುದಾರಿ ಮೂಲಕ ಏರುವುದು ಅಥವಾ ಇಳಿಯುವುದು ಅತ್ಯಪಾಯದ ಮಾರ್ಗ. ಮೇಲೆ ಕುಳಿತ ಸೈನ್ಯದ ಒಂದು ಪುಟ್ಟ ತುಕ್ಕಡಿಯೂ ಕೆಳಗಿನ ಪಟಾಲಮ್ಮನ್ನೇ ನಡುಗಿಸಬಹುದು.

ಜಮಾಲಾಬಾದ್ ಗಡಾಯಿ ಹಳ್ಳಿಯಲ್ಲಿರುವುದರಿಂದ ಅಲ್ಲಿಯವರ ಭಾಷೆಯಲ್ಲಿ ಇದರ ಹೆಸರು ಗಡಾಯಿಕಲ್ಲು. ಬಯಲು ಮುಗಿದು ಕ್ರಮೇಣ ಏರು ಪ್ರಾರಂಭವಾಗುವಾಗ ಇಂದು ಮಹಾ ಪ್ರವೇಶದ್ವಾರ ನಮ್ಮನ್ನು ಸ್ವಾಗತಿಸುವುದು. ಕಲ್ಲು ಚಪ್ಪಡಿಗಳಿಂದ ನಿರ್ಮಿತವಾದ ಈ ಬಾಗಿಲು ಈಗ ಹಾಳುಗರೆಯುತ್ತಿದೆ. ನಮ್ಮ ತಂಡದ ಇತಿಹಾಸ ದಫ್ತರ ಕೀಟಗಳಾದ ಜಯರಾಜ, ಅಣ್ಣಯ್ಯಪ್ಪ ಜಮಾಲಾಬಾದಿನ ಗತವೈಭವವನ್ನು ಕುರಿತು ಭವ್ಯ ಗ್ರಂಥ ಬರೆಯುವ ದಿವ್ಯ ಯೋಜನೆಗೆ ವಿಷಯ ಸಂಗ್ರಹ ಮಾಡಬೇಕೆಂದು ನಿರ್ಧರಿಸಿದ್ದಾರೆ. ಇನ್ನು ರಸಾಯನ ವಿಜ್ಞಾನ ಭಯಂಕರ ಅನಂತರಾಜು ಮತ್ತು ರಾಮಶಿವಣ್ಣ ಜಮಾಲಾಬಾದ್ ಇಡೀ ಕಬ್ಬಿಣದ ಅದುರಿನಿಂದ ತುಂಬಿರಬಹುದೇ ಎಂದು ಸಂದೇಹಿಸುತ್ತಿದ್ದಾರೆ. ಅವರ ವರದಿ ಕುದುರೆಮುಖ ತಪ್ಪಲಿನ ಕಬ್ಬಿಣದ ಅದುರಿನ ವಿಚಾರದಲ್ಲಿ ಜಪಾನೀ ತಜ್ಞರು ಮಂಡಿಸಿರುವ ವರದಿಗಿಂತ ಅಧಿಕ ವಿಸ್ತೃತವೂ ಬೃಹತ್ತೂ ಆಗುವ ಲಕ್ಷಣವಿದೆ. ಭೂಗರ್ಭ ವಿಜ್ಞಾನಸಮುದ್ರ ತಿಮಿಂಗಿಲ ಜಗನ್ನಾಥ ಶಾಸ್ತ್ರಿ ಮತ್ತು ರಂಗನಾಥ ಜಮಾಲಾಬಾದ್ ಅಗ್ನಿ ಪರ್ವತವಾಗಿದ್ದಿರಬಹುದೇ, ಎಂದು ಇದು ಭೂಗರ್ಭದಿಂದ ಹೊರಕ್ಕೆ ಚಾಚಿತು, ಆದ್ದರಿಂದ ಭೂಮಿಯ ವಯಸ್ಸೇನು ಎನ್ನುವ ಘನ ಸಮಸ್ಯೆಯ ಪರಿಹಾರಕ್ಕಾಗಿ ನಾನಾ ಬಗೆಯ ಕಲ್ಲು, ಮುಳ್ಳು ಸಂಗ್ರಹಿಸಿ ಅವುಗಳ ಮಧ್ಯೆ ಸಿಕ್ಕಿ ಹಾಕಿಕೊಂಡು ಹೊರಗೆ ಬರುವ ಹಾದಿ ಹುಡುಕುತ್ತಿದ್ದಾರೆ. ಚಂದ್ರಮಂಡಲಕ್ಕೆ ಜಿಗಿಯಲು ಜಮಾಲಾಬಾದಿನ ಶಿಖರ ಅಮೆರಿಕಾದ ಕೇಪ್ ಕೆನ್ನೆಡಿಗಿಂತಲೂ ಉತ್ತಮವಲ್ಲವೇ ಎಂಬ ವಿಚಾರ ಪ್ರಭಾಕರ ರೆಡ್ಡಿಯನ್ನು ಪೀಡಿಸುತ್ತಿದೆ. ಉಳಿದ ಪಾಮರರಿಗೆ ಕಂಡದ್ದು ಇಷ್ಟು - ದುರ್ಗದ ಅವಶೇಷವಾಗಿ ಅಲ್ಲಲ್ಲಿ ಮೆಟ್ಟಲುಗಳು, ಕಡಿದಾದ ಏರು, ಶಿಖರದಿಂದ ಸ್ವಲ್ಪ ಕೆಳಗೆ ಒಂದು ಪ್ರವೇಶದ್ವಾರ ಮತ್ತು ವಾಸಯೋಗ್ಯವಾದ ಕಲ್ಲಿನ ಮನೆ ಇವೆ. ಅದರ ಗೋಡೆಗಳು ಮಾಮೂಲಿನಂತೆ ಅದುವರೆಗೆ ಬಂದಿದ್ದ ಅಸಂಖ್ಯಾತ ಪ್ರವಾಸಿಗಳ ಕೆತ್ತನೆ ಕೆಲಸಗಳಿಂದ, ಚಿತ್ರದ ಕುಸುರುಗಳಿಂದ ಶೋಭಿಸುತ್ತಿದ್ದುವು. ಕೂಲಂಕಷವಾಗಿ ಪರಿಶೀಲಿಸಿದಾಗ ೧೯೫೯ರಿಂದ ಹಿಂದೆ ಯಾವ ಪ್ರವಾಸಿಗನೂ ಅಲ್ಲಿಗೆ ಬಂದಿದ್ದುದು ಉಲ್ಲೇಖಿತವಾದದ್ದು ಕಾಣಲಿಲ್ಲ. ಹಾಗಾದರೆ ೧೯೫೦ರಿಂದೀಚೆಗೆ ಮಾತ್ರ ಜನ ಬಂದಿರಬಹುದೇ? ಎಂದು ಸಂಶೋಧಕ ಮನಃಪ್ರವೃತ್ತಿಯ ಶ್ರೀಧರ ಪ್ರಶ್ನಿಸಿದ. ಅದರರ್ಥ ಹಳೆಯ ದಫ್ತರಗಳ ಮೇಲೆ ಹೊಸ ದಫ್ತರ ಕುಳಿತಿದೆ. ವಾಸಾಂಸಿ ಜೀರ್ಣಾನಿ...

ಬೆಟ್ಟದ ತುಂಬ ಬೆಳೆದಿದ್ದ ಹುಲ್ಲಿಗೆ ಬೆಂಕಿ ಬಿದ್ದಿದ್ದುದರಿಂದ ಬಂಡೆ ಬೋಳಾಗಿತ್ತು. ಒಂದು ಪಾರ್ಶ್ವ ಮಾತ್ರ ಕುರುಚಲು ಕಾಡು ತುಂಬಿತ್ತು. ಮೆಟ್ಟಲು ದಾರಿಗಿಂತ ಅಂಕುಡೊಂಕು ದಾರಿಯೇ ಹಿತವಾಯಿತು. ಬೆಟ್ಟ ಏರುವಾಗ ಮೆಟ್ಟಲುಗಳ ನಿಯಂತ್ರಿತವಾದ ನಡಿಗೆ ಕಾಲುಗಳಿಗೆ ಬೇಗ ನೋವುಂಟುಮಾಡುವುದು. ಬದುಕು ಕೂಡ ಹಾಗೆಯೇ - ಎಲ್ಲವೂ ಡ್ರಿಲ್ಲಾದರೆ ಜೀವನ ನೀರಸ ಮತ್ತು ಭಾರವಾಗುವುದು ಎಂದು (ಮರುದಿನ ಹೋಗಿಬಂದ) ನಿಸಾರರು ಹೇಳಿದರು. ಮೇಲೆ ಮೇಲೆ ಏರಿದಂತೆ ನಮ್ಮ ದಿಗಂತ ಇನ್ನಷ್ಟು ವಿಸ್ತಾರವಾಯಿತು. ಗದ್ದೆ, ಬಯಲು, ತೋಟ, ಕೆರೆ, ಹೊಳೆ, ಮನೆ, ಗುಡ್ಡ ಎಲ್ಲವೂ ಪರದೆಯ ಮೇಲೆ ಬಿಡಿಸಿದ ಚಿತ್ತಾರಗಳಾದುವು. ನಾವೂ ಬಂಗ್ಲೆ ಇನ್ನೊಂದು ಪುಟ್ಟ ಡುಬ್ಬದ ಆಚೆ ಬದಿಗೆ ಅಡಗಿಹೋಯಿತು. ೧೧ ಗಂಟೆಯ ಸುಮಾರಿಗೆ ನಾವು ಕೊಡಿ ತಲಪಿದೆವು. ಅಲ್ಲೇನಿದೆ? ಸುಟ್ಟ ನೊಜೆ ಹುಲ್ಲಿನ ಗಟ್ಟಿ ಬುಡಗಳು. ಕುಳಿತರೆ ಚುಚ್ಚುವುವು. ತಡೆಯಲಾಗದಷ್ಟು ಸೆಕೆ. ಆದರೂ ನಾವು ಸಾಧಿಸಿದ ಪ್ರಥಮ ವಿಜಯವೆಂದು ಸಂತೋಷ ಉಕ್ಕುತ್ತಿತ್ತು. ಹೊಗೆ ಬಾಂಬು ಸುಟ್ಟೆವು. ಮದ್ದುಗುಂಡು ಹೊಟ್ಟಿಸಿದೆವು. ೧೨ನೇ ಮೈಸೂರಿಗೆ ಜಯಕಾರ ಕೂಗಿದೆವು. ವಾಟರ್ ಬಾಟಲಿನಲ್ಲಿ ತಂದಿದ್ದ ನೀರು ಖರ್ಚಾಗಿ ಹೋಯಿತು. ದಾಹ ವಿಪರೀತ, ಮುಂದೆಲ್ಲಿಗೆ ಹೋಗುವುದು?

ಓ ಇಲ್ಲಿಯೇ ನೀರು ಸಿಕ್ಕುತ್ತದೆ ಎಂದ ನಮ್ಮ ಶೆರ್ಪಾ. ಓ ಇಲ್ಲಿಯೇ ಬೆಟ್ಟದ ಬುಡವೇ ಆಗಿರಬಹುದೆಂದು ನನಗೆ ಸಂದೇಹ. ಆದರೆ ಅವನು  ತೋರಿಸಿದ್ದು ಶಿಖರದಿಂದ ಹಿಂದೆ ಸ್ವಲ್ಪ ತಗ್ಗಿನಲ್ಲಿ; ನಾವು ಬಂದ ಜಾಡಿನಲ್ಲಿ ಅಲ್ಲ. ಶಿಖರವನ್ನು ಆನೆಯ ನೆತ್ತಿಯೆಂದರೆ ನಾವು ಹತ್ತಿ ಬಂದ ಹಾದಿ ಮುಂಗಾಲು ಕಿವಿಗಳ ಎಡೆಗಾಗಿ. ಬೆನ್ನಿನ ಮೇಲೆ ಸ್ವಲ್ಪ ದೂರ ನಡೆದರೆ ನೀರ್ದಾಣವಿದೆಯೆಂದು ಅರ್ಥವಾಯಿತು. ಆ ಕಡೆ (ಕೆಳಗಿನಿಂದ ಕಾಣುತ್ತಿರಲಿಲ್ಲ) ತುಂಬ ಮರಗಿಡಗಳು ಸೊಂಪಾಗಿ ಬೆಳೆದಿದ್ದುದರಿಂದ ಆಸೆ ಚಿಗುರಿತು.

ಮುಂದೆ ಎರಡು ಫರ್ಲಾಂಗ್ ನಡೆದು ಒಂದು ಇರುಕಿನೊಳಗೆ ಇಳಿದೆವು. ಅಲ್ಲಿಯೇ ಮಾಯಾಲೋಕ ಫಕ್ಕನೆ ಮಿಂಚಿತು. ತಿಳಿಗೊಳ. ಸುತ್ತಲೂ ಹೆಬ್ಬಂಡೆಗಳ ಕಡಿದಾದ ಗೋಡೆ ಸೃಷ್ಟಿನಿರ್ಮಿತ. ಹೆಬ್ಬಂಡೆಗಳನ್ನು ತಾಗಿ ಮರಗಾಡು. ಒಂದು ದಂಡೆಯ ಮರಗಳ ಕೊಂಬೆಗಳು ಎದುರು ದಂಡೆಯ ಮರಗಳ ಕೊಂಬೆಗಳೊಡನೆ ಸೇರಿ ಹೆಣೆದು ಅಲ್ಲೊಂದು ಹಸುರು ಹಂದರ ಹಾಸಿದಂತಾಗಿತ್ತು. ಅದರಡಿಯಲ್ಲಿ ತಂಪು, ನೀರವ, ನೀರಿನಾಸರೆ. ಹುಡುಗರ ಉತ್ಸಾಹಕ್ಕೆ ಮಿತಿಯಿಲ್ಲ. ಇಂಥ ಸಂದರ್ಭದಲ್ಲಿಯೇ ಒತ್ತಬೇಕು ಶಿಸ್ತಿನ ಬಿರಿಯನ್ನು - ಬಲವಾಗಿಯೇ. ಮೊದಲೇ ಮಂಗಗಳು: ಮತ್ತೆ ದಣಿವು, ದಾಹ. ಮೇಲೆ ಅನಾಯಾಸವಾಗಿ ಎದುರಾದ ಅಚ್ಛೋದ ಸರೋವರ. ಯಕ್ಷಪ್ರಶ್ನಾ ಪ್ರಸಂಗದ ಪೂರ್ವಾರ್ಧದ ಪುನರಾವರ್ತನೆ ಆಗಬೇಡವೆಂದಿದ್ದರೆ ಲಗಾಮನ್ನು ಬಲವಾಗಿಯೇ ಜಗ್ಗಬೇಕು.

ನೀರಿಗೆ ಯಾರೂ ಇಳಿಯತಕ್ಕದ್ದಲ್ಲ. ಬಕೆಟಿನಲ್ಲಿ ನೀರು ತಂದು ದಂಡೆಯಿಂದ ದೂರನಿಂತು ಕೈ ಮುಖ ತೊಳೆಯತಕ್ಕದ್ದು ಮತ್ತು ಸೋಸಿ ನೀರು ಕುಡಿಯಬಹುದು ಇದು ನನ್ನ ಆಜ್ಞೆ.
ಕ್ರೂರ ನಕ್ರಾಕುಲದೊಳಿಡಿದಿರ್ದ ಪೆರ್ಮಡು ಗಭೀರ ನಿರ್ಮಲ ಜಲದೊಳೆಸೆವಂತೆ ಆ ಕೊಳವಿತ್ತು. ನಮ್ಮ ‘ಅಚ್ಚ ಸಂಸ್ಕೃತಿಯ ಸಲ್ಲಕ್ಷಣವೆಂದರೆ ನೀರು ಕಂಡೊಡನೆ ಹಿಂದೆ ಮುಂದೆ ನೋಡದೆ ಅದಕ್ಕೆ ದುಮುಕಬೇಕು. ಬೇರೆಯವರ ಕಷ್ಟ ಸುಖದ ಪರಿವೆಯಿಲ್ಲದೇ ನಮ್ಮ ವಿಶಿಷ್ಟ ಪ್ರವೃತ್ತಿಗಳನ್ನೂ ಅಲ್ಲಿಯೇ ನಿರ್ವಹಿಸಬೇಕು. Vandalism is our national trait. ನಾನು ಕಠಿಣವಾಗಿ ಹೀಯಾಳಿಸುತ್ತಿದ್ದೇನೆ ಎಂದು ನಿಮಗೆ ಕಂಡರೆ ದಯವಿಟ್ಟು ನಮ್ಮ ಪುಣ್ಯ ಕ್ಷೇತ್ರಗಳಿಗೆ ಹೋಗಿ ನೋಡಿ. ಅಲ್ಲಿಯ ಕೆರೆ, ಕೊಳ, ಹೊಳೆಗಳನ್ನು ಸಂದರ್ಶಿಸಿ ಬನ್ನಿ. ಅಲ್ಲಿಯ ಪ್ರವಾಸೀ ಮಂದಿರಗಳಲ್ಲಿ ಉಳಿದಿದ್ದು ಅನುಭವಿಸಿ. ಭಗವದ್ಭಕ್ತಿಯೂ ಸಾಮಾಜಿಕ ಶುಚಿತ್ವ ಪ್ರಜ್ಞೆಯೂ ಪರಸ್ಪರ ಸಂಬಂಧವಿಲ್ಲದವು ಎಂದು ನಮ್ಮ ಜನ ತಿಳಿದಿರುವಂತೆ ತೋರುವುದು.

ಆ ಸಮಯದಲ್ಲಿ ಒಂದು ಹಳೆಯ ಕತೆ ನೆನಪಿಗೆ ಬಂದಿತು. ಗಂಭೀರವಾಗಿ ಹೇಳಿದೆ, ನಾನು ಇಲ್ಲಿಯ ಸ್ಥಳಪುರಾಣವನ್ನೂ ಮಹಿಮೆಯನ್ನೂ ಅಭ್ಯಸಿಸಿ ಬಂದಿದ್ದೇನೆ. ಆ ಪ್ರಕಾರ ಈ ಕೊಳವನ್ನು ಮಹರ್ಷಿ ಋಷ್ಯಶೃಂಗರು ನಿರ್ಮಿಸಿದ್ದಂತೆ. ಇದರ ವೈಶಿಷ್ಟ್ಯವೇನೆಂದರೆ ಬಲದಂಡೆಯ ನೀರು ಬಲು ಸವಿ. ಅದನ್ನು ಮಾತ್ರ ಕುಡಿಯಿರಿ. ಎಡದಂಡೆಯ ನೀರು ಚಪ್ಪೆ, ರುಚಿಯಿಲ್ಲ.
ಬಲದಂಡೆಯ ನೀರನ್ನು ತಂದಾಯಿತು. ಬಾಯಿಯಿಂದ (ಮೋಟಾರ್ ಎಂಜಿನ್ನಿನ ರೇಡಿಯೇಟರಿನಿಂದ) ನೀರು ತುಳುಕುವವರೆಗೆ ಅದನ್ನು ಕುಡಿದರು ಹುಡುಗರು. ಏದುತ್ತ ಸೇಂಕುತ್ತ, ಹೌದು ಸರ್ ಬಹಳ ಸವಿ ಎಂದು ಬಾಯಿ ಚಪ್ಪರಿಸಿದರು. ಬುತ್ತಿಯುಂಡಾಯಿತು. ಆ ಚಪಾತಿ ಬಟಾಟೆ ಪಲ್ಯ, ಆ ಮೂಸುಂಬಿ, ಆ ಸನ್ನಿವೇಶ, ಆ ಸವಿನೀರು ಅದರ ರುಚಿ ಅಲ್ಲಿಗೇ ಮೀಸಲು. ದೇಹ, ಮನಸ್ಸು ತಣಿದನಂತರ, ಈಗ ಎಡದಂಡೆಯ ನೀರನ್ನು ಬೇಕಾದರೆ ಕುಡಿದು ಪರೀಕ್ಷಿಸಿ ಎಂದೆ.
ಕುಡಿದವರು, ಬರೀ ಚಪ್ಪೆ, ಏನೂ ರುಚಿಯಿಲ್ಲ.
ಅವರಿಗಚ್ಚರಿ. ಒಂದೇ ಕೊಳ, ಎರಡು ಬಗೆಯ ರುಚಿಗಳ ನೀರು? ನನ್ನನ್ನು ಪ್ರಶ್ನಾರ್ಥಕವಾಗಿ ದಿಟ್ಟಿಸಿದರು. ನಾನೆಂದೆ ಹಸಿವು ಸವಿ, ತೇಗು ಅಲ್ಲ.

೧೨ ಗಂಟೆ ದಾಟಿತ್ತು. ಇನ್ನು ಹಾರಾಟ ನಡೆಯಬೇಕಷ್ಟೆ. ನಮ್ಮ ತಂಡದ ಒಬ್ಬ ಪ್ರಮುಖ ಸದಸ್ಯ ವೆಂಕಟೇಶ. ಇವನು ಹಳೆಯ ಸ್ಕೌಟ್ ಹುಲಿ. ಅತ್ಯಂತ ತೀಕ್ಷ್ಣಮತಿ. ರೇಡಾರ್, ಟೆಲಿವಿಷನ್ ಉಪಕರಣಗಳನ್ನು ಸ್ವತಃ ತಯಾರಿಸಿರುವ ನಿಪುಣ. ಓದಿನಲ್ಲಿ ಹೇಗೋ ಹಾಗೆ ಎನ್‌ಸಿಸಿ ಚಟುವಟಿಕೆಗಳಲ್ಲಿಯೂ ಗಟ್ಟಿಗ. ಇವನ ಚುರುಕು ನಡೆ, ಮಿಂಚಿನಂಥ ಬುದ್ಧಿ, ಸತತ ಕ್ರಿಯಾಶೀಲತೆ ಇವನ್ನು ಕಂಡ ಸ್ನೇಹಿತರು ವೆಂಕಟೇಶನನ್ನು ಕಾಸ್ಮಿಕ್ ರೇ ಎಂದು ಅರ್ಥಪೂರ್ಣವಾಗಿ ಕರೆಯುತ್ತಿದ್ದರು. ಕಾಸ್ಮಿಕ್ ಎಂದೇ ಅವನನ್ನು ಕರೆಯುವುದು ರೂಢಿಯಾಗಿ ಹೋಯಿತು. ನಿಜವಾದ ಹೆಸರೇ ಮರೆತುಹೋಗುವಷ್ಟು ಪ್ರಬಲವಾಯಿತು ಈ ಅನ್ವರ್ಥನಾಮ.

ಇಲ್ಲೊಂದು ಹೊಸ ಪ್ರಯೋಗ ಮಾಡೋಣ ಸಾರ್ ಎಂದ ಕಾಸ್ಮಿಕ್. ಮಾಡೋಣ ಎಂದರೆ ತಾನು ಮಾಡುತ್ತೇನೆ, ಅನುಮತಿಯಿದೆಯೇ ಎಂದು ಅರ್ಥ.
ಏನು ನಿನ್ನ ಯೋಜನೆ ವಿವರಿಸು ಎಂದೆ.
ರಿವರ್ ಕ್ರಾಸಿಂಗ್, ಸಾರ್.
ರಿವರ್ ಎಲ್ಲಿದೆಯಯ್ಯ?
ನೀವೇನು ಸಾರ್? ಬೋರ್ಡಿನ ಮೇಲೆ ವಿಶ್ವದಗೋಳವನ್ನು ಗೀಚಿ let us imagine ಎಂದು ಖಗೋಳ ವಿಜ್ಞಾನವನ್ನೇ ಹೇಳಿಕೊಡುತ್ತೀರಿ. ಹಾಗಿರುವಾಗ!
ಆಗಲಿ ಅಷ್ಟು ಕಠಿಣವಲ್ಲ ಇಲ್ಲಿಯ ಕಲ್ಪನೆ. ಲೇಕ್ ಕ್ರಾಸಿಂಗ್ ಎಂದು ಬದಲಾಯಿಸಿರಿ ನಿಮ್ಮ ಯೋಜನೆಯ ಹೆಸರು.
ಸರಿ ಸಾರ್. ಸರೋವರೋಲ್ಲಂಘನ ಅವನು ಸಂಸ್ಕೃತ ಪಂಡಿತನೂ ಹೌದು.
ಬಹಳ ಸುಲಭ. ಈ ದಂಡೆಯ ಮೇಲೆಯೇ ನಡೆದರೆ ಆ ಕಡೆಗೆ ತಲಪಿರುತ್ತೇವೆ. ಇದೇನು ಮಹಾ!
ನೀವೇನು ತಮಾಷೆ ಮಾಡುತ್ತೀರಿ, ಸಾರ್. ಹಗ್ಗ ಕಟ್ಟಿ ಈ ೪೦ ಅಡಿ ಉದ್ದದ ಕೊಳವನ್ನು ಹಗ್ಗದಡಿಯಲ್ಲಿ ಜಾರಿ ದಾಟೋಣ.
ಆಗಲಿ ಮುಂದುವರಿಸಿ, ಆದರೆ ನಾನು ಹಸುರು ಕಂದೀಲು ತೋರಿಸದೇ ನೀವು ದಾಟಲು ತೊಡಗತಕ್ಕದ್ದಲ್ಲ.

ನಾವು ಕುಳಿತಿದ್ದ ದಂಡೆಯಲ್ಲಿ ಕೊಳದಿಂದ ೨೦-೨೫ ಅಡಿ ಎತ್ತರದಲ್ಲಿ ಭದ್ರ ಮರವೊಂದರ ಕಾಂಡಕ್ಕೆ ಎರಡು ನೈಲಾನು ಹಗ್ಗಗಳನ್ನು ಬಿಗಿದು ಕಟ್ಟಿದರು. ಅವನ್ನು ದಂಡೆಯ ಮೇಲಕ್ಕಾಗಿ ಬಿಚ್ಚುತ್ತ ಕೊಂಡೊಯ್ದು ಎದುರು ದಂಡೆಯಲ್ಲಿ ೧೦ ಅಡಿ ಎತ್ತರದಲ್ಲಿ ಇನ್ನೊಂದು ಕಾಂಡಕ್ಕೆ ಬಿಗಿಯಾಗಿ ಕಟ್ಟಿದರು. ಈಗ ಇಳಿಜಾರಾದ ಹಗ್ಗದ ಸೇತುವೆಯೊಂದು ಕೊಳದ ಅಡ್ಡ ನಿರ್ಮಾಣವಾದ ಹಾಗಾಯಿತು. ಹಗ್ಗ ಭದ್ರವಾಗಿದೆಯೆಂದು ಸ್ಥಿರವಾದ ಬಳಿಗೆ ಮೊದಲು ಮೋಹನನ್ನು ಕೊಳ ದಾಟಲು ಬಿಡಲಾಯಿತು - ಕಾಸ್ಮಿಕ್ ನಿರ್ದೇಶಕ; ಲಕ್ಷ್ಮಿ ಮೊದಲಾದವರು ಸಹಾಯಕರು. ಪಿಂಟೋ, ಜಯರಾಮ ನನ್ನೊಡನೆ ದಂಡೆಯಲ್ಲಿ ಕುಳಿತು ನೋಡತೊಡಗಿದರು.

ಮೋಹನನ ಸೊಂಟಕ್ಕೆ ಒಂದು ಹಗ್ಗ ಸುತ್ತಿ ಅದನ್ನೂ ಹಗ್ಗದ ಸೇತುವೆಯನ್ನೂ ಕೆರಾಬಿನಾರಿನಿಂದ ಪೋಣಿಸಲಾಯಿತು. ಕೈಗಳಿಗೆ ಗವಸು. ಸೇತುವೆಯನ್ನು ಭದ್ರವಾಗಿ ಹಿಡಿದುಕೊಂಡು ತಲೆ ಮುಂದೆ ಕಾಲು ಹಿಂದಾಗಿ ನಿಂತು ಕಟ್ಟಿದ ಮರಕ್ಕೆ ಬಲವಾಗಿ ಒದ್ದು ಅವನು ಜಾರಲು ತೊಡಗಿದ. ಸೇತುವೆ ಇಳಿಜಾರಾಗಿದ್ದುದರಿಂದ ಇದು ಸಾಧ್ಯವಾಯಿತು. ಕೆರಾಬಿನರ್ ಮತ್ತು ಕೈಗಳು ಅವನನ್ನು ಭದ್ರವಾಗಿ ಸೇತುವೆಗೆ ಬಂಧಿಸಿವೆ. ಕಾಲುಗಳನ್ನು ನೆಟ್ಟಗೆ ಚಾಚಿದ. ಹೀಗೆ ಅಂಗಾತ ಮಲಗಿದ ಮೋಹನ ಜಾರಿಹೋಗುತ್ತಿದ್ದಂತೆಯೇ ಸೇತುವೆಯ ಹಗ್ಗದ ಬಿಗಿತ ಸಾಲದೇ ಅದು ಭಾರದಿಂದ ಜಗ್ಗಿತು. ಜಗ್ಗಿದ್ದು ಸ್ವಲ್ಪ ಹೆಚ್ಚೇ ಆಗಿ ಮೋಹನನಿಗೆ ನೀರಿನಲ್ಲಿ ಒಂದು ಮುಳುಗಾಟವಾಯಿತು. ಅವನ ಸಮವಸ್ತ್ರವೆಲ್ಲ ಒದ್ದೆ. ಎದುರು ದಂಡೆ ತಲಪಿಯೇ ಬಿಟ್ಟ. ಬಟ್ಟೆಯನ್ನು ಕಳಚಿ ಒಣಗಲು ಹರಗಿದ. ಮುಂದೆ ಸ್ನಾನ ಮಾಡದೇ ವಿಧಿಯಿರಲಿಲ್ಲ.
ಸ್ನಾನ ಮಾಡಲಾ ಸಾರ್?
ನೀರಿನ ಆಳವೆಷ್ಟುಂಟೋ? ಗೊಸರಿರಬಹುದು. ಅದಿರಲಿ ನಿನಗೆ ಈಸಲು ಬರುವುದೋ?
ನನಗೆ ಬರುತ್ತದೆ ಏಳೆಂಟು ಜನ ಕೂಗಿ ಹೇಳಿದರು.
ಶ್ರೀಧರನ್ ಇದ್ದವರಲ್ಲಿ ಧಾಂಡಿಗ. ಅವನು ಮೊದಲು ಈಸಬೇಕು, ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಅದನ್ನು ದಂಡೆಯಲ್ಲಿ ನಿಂತವರು ಬಿಲೇ ಮಾಡಬೇಕು. ಶ್ರೀಧರನ್ ಕೊಳದ ಬೇರೆ ಬೇರೆ ಭಾಗಗಳಲ್ಲಿ ನಿಂತು ನೀರಿನ ಆಳ ತಿಳಿಸಬೇಕು. ಇದು ಮುಂದಿನ ಯೋಜನೆ. ‘ಹುಡುಗರ ತಂಡದೊಡನೆ ಹೋದಾಗ ನೀರು ನಿಮ್ಮ ಪ್ರಥಮ ವೈರಿ ಎಂದು ನಮ್ಮ ಶಿಸ್ತು ಸಂಹಿತೆಯಲ್ಲಿ ಹೇಳಿದೆ. ಆದರೂ ಇಲ್ಲಿಯ ಸನ್ನಿವೇಶ ಅಷ್ಟೊಂದು ಮೋಹಕವಾಗಿತ್ತು. ೪೦ ಅಡಿ ಉದ್ದ ಸುಮಾರು ೩೦ ಅಡಿ ಅಗಲದ ಆ ಕೊಳದಲ್ಲಿ ನೀರಿನ ಆಳ ಎಲ್ಲಿಯೂ ೮ ಅಡಿಗಿಂತ ಜಾಸ್ತಿ ಇರಲಿಲ್ಲ. ಆದರೆ ತಳದಲ್ಲಿ ಕೊಳೆತ ಎಲೆಗಳ ಕಸಕಡ್ಡಿಗಳ ಬಲವಾದ ಸುಸ್ತರವೇ ನೆಲಸಿತ್ತು. ನಮ್ಮ ಹುಡುಗರು ಈಸಲು ತೊಡಗಿದೊಡನೆಯೇ ಶತಶತಮಾನಗಳ ಇತಿಹಾಸದ ಮಡ್ಡಿಯನ್ನು ಕಲಕಿದಂತಾಯಿದು: ಶತಮಾನಂಗಳ ಸಂಗ್ರಹ ಸಂಸ್ಕೃತಿ!

ಮುಂದೆ ಹಗ್ಗದಲ್ಲಿ ಜಾರಿದ ಹುಡುಗರು ಅಂಡರ್ವೇರ್ನಲ್ಲಿದ್ದರು. ಅವರೆಲ್ಲರೂ ಸೇತುವೆ ಮಧ್ಯದ ನೀರಿನ ಸೇಚನೆಯನ್ನು ಹೊಸ ಆಟವೆಂದು ಆಡಿದರು. ನಾವೆಲ್ಲರೂ ಮನದಣಿಯೆ ಈ ಆಟ ಆಡಿದೆವು. ಥಿಯೊರೆಟಿಶಿಯನ್ ಪಿಂಟೊ ಯಾಕ್ರಪ್ಪಾ, ದೇಹ ಬಿಸಿಯಾಗಿರುವಾಗ ಇದು ಸರಿಯಲ್ಲ ಎಂದು ಮುಂತಾಗಿ ಹೇಳುತ್ತಿದ್ದ. ನಾನು ಅವನನ್ನು ಬಲವಾಗಿಯೇ ಕೆಣಕಿದೆ, ಪಿಂಟೋ! ನೀನು ಆ ಆಟವಾಡಿದರೆ ನಾನೂ ಆಡುತ್ತೇನೆ. ನಿನಗೆ ಧೈರ್ಯವಿಲ್ಲ!
ಎದ್ದರೆ ಆಳಲ್ಲ ಪಿಂಟೋ. ಜಾಂಬವಂತನ ಕೆಲಸ ನಾನು ಮಾಡಿದೊಡನೆ (ನನ್ನ ರೂಪ ಹಾಗಿಲ್ಲ!) ಪಿಂಟೋ ಹನುಮಂತನಾದ. ಸಾಗರೋಲ್ಲಂಘನ ಮಾಡಿಯೇ ಬಿಟ್ಟ. ನಾನೂ ಅವನ ಹಿಂದೆ ಧಾವಿಸಿದೆ. ಆದರೆ ಏನು ಮಾಡಿದರೂ ಎಷ್ಟು ಕೆಣಕಿದರೂ ಈಸದಿದ್ದವರು ಇಬ್ಬರು - ವಾಸು, ಕಾರಣ ಈಸುಬಾರದು; ಆದರೆ ಅವನು ಹಗ್ಗದಲ್ಲಿ ಜಾರಿ ನೀರಿನಲ್ಲಿ ಮುಳುಗಿ ಮಿಂದು ಮೇಲೆದ್ದ. ಇನ್ನೊಬ್ಬ ಜಯರಾಮ, ಕಾರಣ ಶೀತ ಎಂದು ಮುಂತಾಗಿ ಆಗ ಬುರುಡೆ ಹೊಡೆದ. ಹಿಂದಿನಿಂದ ತಿಳಿಯಿತು: ಆತ ಅಂಡರ್‌ವೇರೇ ಧರಿಸಿರಲಿಲ್ಲವಂತೆ!

ಮುಂದೆ ರ‍್ಯಾಪ್ಲಿಂಗ್ ನಡೆಯಬೇಕಲ್ಲ. ಶಿಲಾರೋಹಣ ಹೇಗೂ ಆಗಿದೆ. ರ‍್ಯಾಪ್ಲಿಂಗ್ ಮಾಡಲು ಅನುಕೂಲವಾದ ಒಂದು ಕಡಿದಾದ ಬಂಡೆ ಸಮೀಪದಲ್ಲಿಯೇ ದೊರೆಯಿತು. ಕೊಳದಿಂದ ಹೊರಟ ವಾನರಸೇನೆ ಅದರ ಬುಡದಲ್ಲಿ ಬೀಡುಬಿಟ್ಟಿತು. ಅದರ ಎತ್ತರ ೩೦ ಅಡಿ. ಅಲ್ಲಿ ಮನಸ್ವೀಯಾಗಿ ನಾನಾ ವಿಧದ ರ‍್ಯಾಪ್ಲಿಂಗ್ ಆಟ ಆಡಿ ಹಿಂದಕ್ಕೆ ಹೊರಡುವಾಗ ೫ ಗಂಟೆ ದಾಟಿ ಹೋಗಿತ್ತು. ಹಸಿವು ಬಾಯಾರಿಕೆ ತೀವ್ರವಾದುವು. ದೂರ ನಡೆದಷ್ಟೂ ಮುಗಿಯುವುದಿಲ್ಲ ಎಂದು ಭಾಸವಾಯಿತು. ಭಾರವಾದ ದೇಹಗಳನ್ನು, ಸೆಟೆದು ನಿಂತ ಕಾಲುಗಳಿಂದ ಎಳೆದುಕೊಂಡು ಹೋಗಿ ಬಂಗ್ಲೆ ತಲಪುವಾಗ ೮ ಗಂಟೆ ರಾತ್ರಿ ಮೀರಿತ್ತು. ದೊರೆಗಳು ಉದ್ವಿಗ್ನರಾಗಿದ್ದರು. ನಾವು ಸುರಕ್ಷಿತವಾಗಿ ಹೆಮ್ಮೆಯಿಂದ ಮರಳಿ ಬಂದುದು ಅವರಿಗೆ ಸಂತೋಷವೀಯಿತಾದರೂ ಅವರ ಭಾವನೆಯನ್ನು ನಮಗೆ ತಿಳಿಸಿಯೇ ಬಿಟ್ಟರು.
ನೀವು ಸಂತೋಷಪಡಿ, ಸಾಹಸಪ್ರದರ್ಶನ ಮಾಡಿ. ಅದಕ್ಕಾಗಿಯೇ ನಾವಿಲ್ಲಿಗೆ ಬಂದದ್ದು. ಆದರೆ ಕತ್ತಲೆಗೆ ಮೊದಲು ಹಿಂದೆ ಬರಲೇಬೇಕು. ಇಲ್ಲವಾದರೆ ಇಲ್ಲಿ ನಾನು ಏನೆಂದು ತಿಳಿಯಬೇಕು? ಪ್ರತಿಯೊಂದು ಮಗುವಿನ ಜೀವನವೂ ನನ್ನ ಪವಿತ್ರ ಹೊಣೆಯಲ್ಲವೇ?

[ಸುಮಾರು ಎರಡು ದಶಕಗಳನಂತರದ ನನ್ನ ಜಮಾಲಾಬಾದಿನ ವೈವಿಧ್ಯಮಯ  ಅನುಭವಗಳ ಓದಿಗಾಗಿ ಇಲ್ಲಿ ಚಿಟಿಕೆ ಹೊಡೆಯಿರಿ - ಅಶೋಕವರ್ಧನ]

ನಿಮ್ಮ ಊಟ ಇಲ್ಲಿದೆ
ಅಧ್ಯಾಯ ನಲ್ವತ್ತೊಂಬತ್ತು

ನಾವೆಲ್ಲರೂ ಬಿಸಿ ಬಿಸಿ ಟೀ ಕುಡಿಯುತ್ತಿದ್ದಂತೆಯೇ ದೊರೆಗಳೆಂದರು, ನೀರಿನ ಸಮಸ್ಯೆಯನ್ನು ಪರಿಹರಿಸಿಬಿಟ್ಟೆ.
ನನಗೆ ಆಶ್ಚರ್ಯವೂ ಸಂತೋಷವೂ ಆದುವು. ಅವರೇ ಮುಂದುವರಿಸಿದರು, ನೀವೆಲ್ಲರೂ ಹೋದ ಬಳಿಕ ಉಳಿದವರು ಟೆಂಟ್ ಕೆಲಸ, ಶುಚಿತ್ವ ಕಾರ್ಯ, ನೀರು ತರುವುದು ಮುಂತಾದವನ್ನು ಮಾಡುತ್ತಿದ್ದರು. ನಿಸಾರರೂ ಸ್ವಾಮಿಯವರೂ ಆ ಹೊಣೆವಹಿಸಿಕೊಂಡರು. ನನಗೆ ಮತ್ತೇನು ಕೆಲಸ? ಹುಡುಗರು ನೀರನ್ನು ಸಂಗ್ರಹಿಸಿಡಲು ಪಾತ್ರೆಗಳೇ ಇಲ್ಲವಲ್ಲ. ಬೆಳ್ತಂಗಡಿಗೆ ಹೋಗಿ ಎರವಲಾಗಿ ತರೋಣ, ಲಿಂಗೋಜಿಯನ್ನು ವಿಚಾರಿಸಿದಂತೆಯೂ ಆಯಿತು, ಬೆಂಗಳೂರಿಗೆ ಟ್ರಂಕ್ ಫೋನ್ ಮಾತಾಡಿದಂತೆಯೂ ಆಯಿತು ಎಂದು ಹೊರಟುಬಿಟ್ಟೆ.
ಬೆಂಗಳೂರಿನಲ್ಲಿ ತಂದೆಯವರ ಪರಿಸ್ಥಿತಿ ಹಾಗೆಯೇ ಇದೆ ಎಂದು ತಿಳಿದು ಇದ್ದುದರಲ್ಲಿ ಸಮಾಧಾನ ಆಯಿತು. ಲಾರಿಗೆ ಹೊಸ ಬಿಡಿ ಭಾಗ ತರಲೇಬೇಕು. ಅದಕ್ಕಾಗಿ ಮಂಗಳೂರಿಗೆ ಯಾರನ್ನಾದರೂ ಕಳಿಸಬೇಕು. ನಾಳೆಯ ದಿನ ಹರೂನನ್ನು ಕಳಿಸುವುದು ಎಂದು ನಿಶ್ಚೈಸಿದ್ದೇನೆ.
ಇವೆರಡು ಕೆಲಸ ಮುಗಿದನಂತರ ದೊಡ್ಡ ಹಂಡೆ ಅಥವಾ ಗುಡಾಣಗಳು ಎಲ್ಲಿ ಎರವಲಾಗಿ ದೊರೆಯಬಹುದು ಎಂದು ತಿಳಿಯಲು ಬೆಳ್ತಂಗಡಿ ಇಡೀ ಅಲೆದಾಡಿದೆ. ಒಂದು ಮಸೀದಿಯಲ್ಲಿ ಅವು ದೊರೆಯುತ್ತವೆಂದು ತಿಳಿಯಿತು. ಅಲ್ಲಿಗೆ ಹೋದೆ. ಅಧಿಕಾರಿಗಳನ್ನು ಕಂಡೆ. ನಮ್ಮ ಕತೆಯನ್ನು ಹೇಳಿದೆ. ಬಗೆ ಬಗೆಯಲ್ಲಿ ಕೇಳಿಕೊಂಡೆ. ಆದರೆ ‘ಎಂಟು ಹತ್ತು ದಿವಸಗಳವರೆಗೆ ನಿಮಗೆ ಕೊಡಲು ಸಾಧ್ಯವೇ ಇಲ್ಲ ಎಂಬುದೊಂದೇ ಅವರ ಉತ್ತರ. ‘ಅಷ್ಟು ದೂರದಿಂದ, ಬೆಂಗಳೂರಿನಿಂದ ನಿಮ್ಮೂರಿಗೆ ಮಕ್ಕಳು ಬಂದಿದ್ದಾರಪ್ಪಾ. ಇಷ್ಟು ಉಪಕಾರ ನೀವು ಮಾಡಬಾರದೇ? ಅವರ ಮನಃಪರಿವರ್ತನೆಯಾಗಲೇ ಇಲ್ಲ. ಅಲ್ಲಿಂದ ಬೇಸರಗೊಂಡು ಹೊರಟೆ. ಇನ್ನೊಂದು ಕಡೆ ವಿಚಾರಿಸುವಾಗ, ಅಲ್ಲಿಯೇ ಸಮೀಪದಲ್ಲಿ ಅಂದರೆ ಜಮಾಲಾಬಾದಿನ ಬುಡದಲ್ಲಿ ಒಬ್ಬ ಶ್ರೀಮಂತರ ಮನೆಯಿದೆ. ಅವರಲ್ಲಿ ದೊರೆತರೂ ದೊರೆಯಬಹುದು ಎಂದು ತಿಳಿಯಿತು. ನನಗೆ ಧೈರ್ಯವಿರಲಿಲ್ಲ. ಆದರೂ ಪ್ರಯತ್ನ ಮಾಡಿಯೇ ಬಿಡೋಣವೆಂದು ಹೊರಟೆ. ಆ ಹಳ್ಳಿ ಧೂಳಿನ ದಾರಿ. ಸೆಕೆಯೋ ಸೆಕೆ. ಹುಡುಗರಿಬ್ಬರೂ ಲಾರಿಯಲ್ಲಿದ್ದಾರೆ. ಮನೆಯಿಂದ ದೂರದಲ್ಲಿ ಲಾರಿ ನಿಲ್ಲಿಸಿ ಅವರಲ್ಲಿಗೆ ನಡೆದುಕೊಂಡು ಹೋದೆ. ವಿಶಾಲವಾದ ದೊಡ್ಡ ಅರಮನೆ. ಯಜಮಾನರ ಹೆಸರು ನಡುಗುತ್ತು ಚಂದ್ರಯ್ಯ ಆಜ್ರಿ ಎಂದು ಮತ್ತೆ ತಿಳಿಯಿತು. ಅಲ್ಲಿ ಹಳ್ಳಿಯ ಹಳೆ ಕಾಲದ ಸಮೃದ್ಧ ವಾತಾವರಣ. ನನ್ನ ವೇಷ, ಭೂಷಣ, ನಾನು ಹೋದ ಮಧ್ಯಾಹ್ನದ ಬಿಸಿಲಿನ ಹೊತ್ತು ಯಾವುದೂ ಅಲ್ಲಿಗೆ ಒಪ್ಪುವಂತಿರಲಿಲ್ಲ. ಹೋದೆ. ಮೆಟ್ಟಲಿನಲ್ಲಿ ನಿಲ್ಲುವಾಗಲೇ ಒಳಗಿನಿಂದ ಬಂದ ಯುವಕರೊಬ್ಬರು ನಮಸ್ಕಾರ, ಬನ್ನಿ ಕುಳಿತುಕೊಳ್ಳಿ ಎಂದು ಹಳೆಯ ಪರಿಚಯವಿದ್ದವರಂತೆ ಸ್ವಾಗತಿಸಿದರು. ನನಗೆ ವೇಳೆ ಇಲ್ಲ. ನಾನು ಬಂದದ್ದು. . . ಎಂದು ಹೇಳುತ್ತಿದ್ದಂತೆಯೇ ‘ಅದೆಲ್ಲವನ್ನೂ ಆಮೇಲೆ ವಿಚಾರಿಸೋಣ. ನೀವು ಮೇಲೆ ಬನ್ನಿ. ಕುಳಿತುಕೊಳ್ಳಿ ಎಂದು ಒತ್ತಾಯ ಮಾಡಿದರು. ಇದೇನಪ್ಪಾ ಕಾಲ ಮೀರುತ್ತಿದೆ. ಇಲ್ಲಿಯೂ ನಕಾರವಾದರೆ ಎಂದುಕೊಂಡೆ. ಮುಂದಿನ ಗಳಿಗೆಯಲ್ಲಿ ಒಳಗಿನಿಂದ ಇನ್ನೊಬ್ಬರು ತಂಬಿಗೆ, ನೀರು ಟವೆಲ್ ತಂದರು. ಹಿಂದೆಯೇ ಷರಬತ್ತು ತಂದರು. ‘ನೀವು ಲಾರಿಯಲ್ಲಿ ಬಂದದ್ದು ಕಂಡೆ. ಅದರಲ್ಲಿರುವ ಎಲ್ಲರನ್ನೂ ಬರಹೇಳಿ ಎಂದು ಅಲ್ಲಿಗೆ ಜನ ಕಳಿಸಿದರು. ನನಗೆ ಬಹಳ ಸಂಕೋಚವಾಯಿತು. ಷರಬತ್ತು ಕುಡಿಯುತ್ತ - ಆ ಸೆಕೆ ಆ ಬಳಲಿಕೆಗೆ ಅದು ಅದ್ಭುತವಾಗಿತ್ತು. ನಾನು ಅಲ್ಲಿಗೆ ಬಂದಿದ್ದುದರ ಕಾರಣ ಹೇಳಿದೆ. ನನಗೆ ಎರಡು ಹಂಡೆ ಬೇಕೆಂದೂ ಕೇಳಿಕೊಂಡೆ. ಅವರು ಅದಕ್ಕೆ ಉತ್ತರ ಕೊಡಲಿಲ್ಲ. ನಮ್ಮ ಬಳಗದವರಿಗೂ ಉಪಚಾರ ನಡೆಯಿತು. ನನಗೆ ಹೊತ್ತಾಗುವುದೆಂದು ಆತುರ. ಇವರು ಪಾತ್ರೆಯ ವಿಚಾರ ಮಾತಾಡುವುದೇ ಇಲ್ಲವಲ್ಲ ಎಂದು ಕಾತರ. ಸ್ವಾಮೀ ಪಾತ್ರೆ ತಮ್ಮಲ್ಲಿ ದೊರೆಯಬಹುದೇ? ಎಂದು ಪುನಃ ಪ್ರಶ್ನಿಸಿದರೆ ‘ಅದು ಆಮೇಲೆ ನೋಡೋಣ. ಈಗ ನೀವು ಊಟ ಮಾಡಬೇಕಲ್ಲ ಎಂದರು. ‘ಇಲ್ಲ ಕ್ಷಮಿಸಬೇಕು. ನಮಗೆ ಊಟ ಕ್ಯಾಂಪಿನಲ್ಲಿ ತಯಾರಾಗಿದೆ. ಅಲ್ಲಿ ಕಾಯುತ್ತಿದ್ದಾರೆ. ನಾವು ಹೋಗಬೇಕು. ಪಾತ್ರೆ ದಯವಿಟ್ಟು... ‘ಅದು ಹೇಗೆ? ನಿಮ್ಮ ಊಟ ಇಲ್ಲಿ ಎಂದು ಮೊದಲೇ ಗೊತ್ತಾಗಿದೆಯಲ್ಲ! ಈಗ ಇಲ್ಲಿಯೇ ಊಟ ಮಾಡಬೇಕು ಎಂದರು.

ನಮ್ಮ ದುಸ್ತು ನೋಡಿ ಬೆಂಚು ಕುರ್ಚಿ ತಯಾರು ಮಾಡಿದರು. ಎಲೆ ಹಾಕಿದರು. ಅಣ್ಣ ತಮ್ಮಂದಿರು ಸೇರಿ ಬಡಿಸಲು ತೊಡಗಿಯೇ ಬಿಟ್ಟರು. ಪಂಚಭಕ್ಷ್ಯ ಪರಮಾನ್ನ ಭೋಜನವೆಂದರೆ ಅದು. ಅವರ ಹಿರಿಯ ಸಂಬಂಧಿಕರೊಬ್ಬರಿಗೆ ಆ ಮಧ್ಯಾಹ್ನ ಔತಣ ಏರ್ಪಡಿಸಿ ಮನೆಯವರೆಲ್ಲರೂ ಊಟಕ್ಕೆ ಕುಳಿತಿದ್ದರಂತೆ. ನಾವು ಊಟ ಮಾಡುತ್ತಿದ್ದಂತೆಯೇ ಅವರೆಲ್ಲರೂ ಬಂದರು. ಅವರ ಪ್ರೀತಿ ವಿಶ್ವಾಸ, ಉಪಚಾರಗಳಿಗೆ ಮಿತಿಯೇ ಇಲ್ಲ. ಊಟವಾದ ಮೇಲೆ ನನ್ನನ್ನು ಅವರ ಮನೆಯ ಉಗ್ರಾಣಕ್ಕೆ ಕರೆದುಕೊಂದು ಹೋಗಿ ನಿಮಗೆ ಬೇಕಾದ ಪಾತ್ರ ಆರಿಸಿಕೊಳ್ಳಿ. ಬೇಕಾದಷ್ಟು ದಿವಸ ಇಟ್ಟುಕೊಂಡು ಆಮೇಲೆ ತಂದುಕೊಡಿ ಎಂದರು. ಹೀಗೆ ನಮಗೆ ಈ ಹಂಡೆಗಳು ದೊರೆತುವು.

ನಾನು ಪಾತ್ರೆ ತೆಗೆದುಕೊಂಡು ಮರಳುತ್ತಿದ್ದಂತೆಯೇ ಯೋಚನೆ ಮಾಡಲು ತೊಡಗಿದೆ - ಒಂದು ಕಾಲದಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳು ಬಂದಿಳಿದುಕೊಳ್ಳುತ್ತಿದ್ದ ಈ ಬಂಗ್ಲೆಯಲ್ಲಿ ಅವರು ನೀರಿಗೇನಾದರೂ ಏರ್ಪಾಡು ಮಾಡಿರಲಾರರೇ? ಬೆಟ್ಟದ ಬುಡ, ತೋಡಿದಲ್ಲಿ ನೀರು ದೊರೆಯಬೇಕು - ಬಾವಿ ಅಗೆಸಿರಲೇಬೇಕು ಎಂದು ನನ್ನ ತರ್ಕ. ಡಾಕ್ಟರರೊಡನೆ ಈ ವಿಚಾರ ಮಾತಾಡಿದೆ. ಅವರು ಇಡೀ ಕಾಂಪೌಂಡನ್ನು ಸುತ್ತಿ ನೋಡಿದರು. ನನ್ನ ಊಹೆ ಸರಿಯಾಗಿತ್ತು. ಈ ಔಟ್ ಹೌಸಿನ ಹಿಂದೆ ೧೦೦ ಗಜ ದೂರದಲ್ಲಿದ್ದ ಹಾಳುಬಾವಿಯನ್ನು ಅವರು ಹುಡುಕಿದರು. ಬಗ್ಗಿ ನೋಡಿದೆವು, ಕಲ್ಲು ಕಟ್ಟಿದ್ದಾರೆ, ಅಡಿಯಲ್ಲಿ ನೀರು ಹೊಳೆಯುತ್ತಿದೆ. ಕಂಬ ಕಟ್ಟಿಸಿ, ಹಗ್ಗ ರಾಟೆ ಹಾಕಿ, ನೀರು ಸೇದಿದೆವು. ಸಮೃದ್ಧಿಯಾಗಿದೆ, ಶುದ್ಧವಾಗಿದೆ. ಡಾಕ್ಟರರೂ ಸರ್ಟಿಫಿಕೇಟ್ ಕೊಟ್ಟರು. ನೀರನ್ನು ಶುದ್ಧಪಡಿಸಲು ಬಾವಿಗೇ ಬ್ಲೀಚಿಂಗ್ ಪೌಡರ್ ದ್ರವವನ್ನು ಸುರಿದರು. ಈಗ ಕುಡಿಯಲು, ಸ್ನಾನ ಮಾಡಲು ಬೇಕಾದಷ್ಟು ನೀರು ಸಮೀಪದಲ್ಲಿಯೇ ಇದೆ.

ಒಂಟಿ - ವಾಂತಿಗುಡ್ಡೆಯ ಮೇಲೆ
ಅಧ್ಯಾಯ ಐವತ್ತು

ಶಿವಪ್ಪನವರ ತಂಡ ಮೆಂಗಿಲ ಶೇಣವನೊಡಗೂಡಿ ಕುದುರೆಮುಖದ ಸರಹದ್ದಿಗೆ ಹೋಗಿ ಮರಳಿತ್ತು. ಅವರು ಹೋದ ಬೆಟ್ಟದ ಹೆಸರು ಒಂಟಿಗುಡ್ಡೆ. ಇದನ್ನು ಓಂತಿಗುಡ್ಡೆ ವಾಂತಿಗುಡ್ಡೆಯೆಂದೂ ಕರೆಯುತ್ತಾರೆ. ಇದು ಆ ಭಾಗದಲ್ಲಿ ಒಂಟಿಯಾಗಿ ನಿಂತಿರುವುದರಿಂದ ಒಂಟಿಗುಡ್ಡೆ. ಓತಿಕೇತ ಓಡಲು ನಿಂತಿರುವ ಭಂಗಿಯಲ್ಲಿರುವುದರಿಂದ ಓಂತಿ ಗುಡ್ಡೆ. ಇನ್ನು ಕನ್ನಡದ ಒಂಟಿ, ವೊಂಟಿಯಾಗಿ ಇಂಗ್ಲಿಶಿನಲ್ಲಿ vonti ಆಗಿ ಕನ್ನಡಕ್ಕೆ ಮರಳುವಾಗ ವಾಂತಿ ಆದುದಾಗಿರಲೂಬಹುದು. ಭೂದೇವಿಯ ವಾಂತಿ ಈ ಸಾಲಲ್ಲವೇ? ಎಂದನೊಬ್ಬ ಜೀಯಾಲಜಿ ಪಂಡಿತ.

ಮುಂದಿನ ಎರಡು ದಿವಸ (೧೩, ೧೪) ತಂಡಗಳನ್ನು ಬದಲಾವಣೆಗೊಳಿಸುವುದರ ಮೂಲಕ ಎಲ್ಲರಿಗೂ ಎಲ್ಲ ಶಿಕ್ಷಣಗಳೂ ಲಭಿಸಿದುವು. ನಿಸಾರ್, ಸ್ವಾಮಿ, ಶಿವಪ್ಪ ಒಂದೊಂದು ದಿವಸ ಒಂದೊಂದು ತಂಡದೊಡನೆ ಹೋಗಿ ಮರಳಿದರು. ಒಂಟಿಗುಡ್ಡೆಯಿಂದ ಕುದುರೆಮುಖ, ಅದರೆದುರಿನ ಜಮಾಲಾಬಾದ್ ಎರಡನ್ನೂ ನೋಡಿದ ಕೆಂಡಗಣ್ಣಸ್ವಾಮಿ ದೂರದ ಊರಿನಲ್ಲಿರುವ ತನ್ನ ಪ್ರೇಯಸಿಯ ಸುಂದರ ವದನವನ್ನು ಸ್ಮರಿಸುತ್ತ ಹೀಗೆಂದು ಬರೆದರು:

ಜಮಾಲಾಬಾದೇ ನಂಗೊಂದ್ ಶಾಲೆ
ಆನೆ ತರ ಕಣೆ ಅದರ್ ತಲೆ!
ಕುದ್ರೇಮುಖದ್ಮೇಲ್ನಿಂತು ನೋಡಿದ್ರೆ - ಬಾಲೆ!
ಜಮಾಲಾಬಾದ್ - ಮಡ್ವೆ ನಿನ್ಮುಖದ್ಮೇಲೆ!

ಮುಕುಂದನ ಖಾಯಿಲೆ ಜಾಸ್ತಿಯಾಯಿತು. ಯಾವ ಆಹಾರವೂ ದಕ್ಕಲಿಲ್ಲ. ವಾಂತಿ, ವಾಂತಿ, ಹೊಟ್ಟೆನೋವು. ಅವನನ್ನು ಮಂಗಳೂರಿನ ದೊಡ್ಡ ಆಸ್ಪತ್ರೆಗೆ ಕಳಿಸುವುದು ಅಗತ್ಯವೆಂದು ಡಾಕ್ಟರರೆಂದರು. ಆದರೆ ಹುಡುಗ ಹೋಗಲೊಪ್ಪಲಿಲ್ಲ. ಹೇಗಾದರೂ ಮುಂದಿನ ಒಂದೆರಡು ದಿವಸಗಳಲ್ಲಿ ಹುಷಾರಾಗುವುದಾಗಿ ಆಸೆಯಿಟ್ಟುಕೊಂಡಿದ್ದ. ನಮ್ಮ ಬಳಗದ ಅತ್ಯುತ್ಸಾಹೀ ಹುಡುಗ ಇವನು. ಮೂರ್ತಿ ಕಿರಿದಾದರೂ ಹಿರಿ ಸಾಮರ್ಥ್ಯವಂತ. ಡಾಕ್ಟರರ ಊಹೆ ಅವನಿಗೆ ಅಪ್ಪೆಂಡಿಸೈಟಿಸ್ ಇರಬಹುದೆಂದು. ಅವನನ್ನು ಸೋಮವಾರ ಹರೂನನೊಂದಿಗೆ ಮಂಗಳೂರಿಗೆ ಕಳಿಸಿದೆವು. ಅಲ್ಲಿ ಅದು ಅಪ್ಪೆಂಡಿಸೈಟಿಸ್ ಹೌದೆಂದು ದೃಢವಾಯಿತು. ಶಸ್ತ್ರಚಿಕಿತ್ಸೆ ಒಡನೆ ನಡೆಸಬೇಕೆಂದು ಅವನ ವಾರೀಸುದಾದರರಿಗೆ (ಬೆಂಗಳೂರಿಗೆ) ತಿಳಿಸಲಾಯಿತು. ಅವರು ಕೂಡಲೇ ಕಾರಿನಲ್ಲಿ ಮಂಗಳೂರಿಗೆ ಧಾವಿಸಿ ಬಂದು ಮುಕುಂದನನ್ನು ಬೆಂಗಳೂರಿಗೆ ಕರೆದುಕೊಂಡು ಹೋದರು. ಆಶ್ಚರ್ಯವೆಂದರೆ ಆಗ ಅವನ ಖಾಯಿಲೆ ಕಡಿಮೆಯಾಗಿತ್ತು. ಮುಂದೆ ಶಸ್ತ್ರ ಚಿತ್ಸೆಯಿಲ್ಲದೇ ಅವನು ಹುಷಾರಾಗಿಯೂ ಬಿಟ್ಟ. ಪಾಪ, ಶಿಬಿರ ಮಾತ್ರ ತಪ್ಪಿಹೋಯಿತು. ಬೆಂಗಳೂರಿನಿಂದ ವಿಶೇಷ ಸುದ್ದಿ - ದೊರೆಗಳಿಗೆ, ನಿಸಾರರಿಗೆ - ಬರದಿದ್ದುದರಿಂದ ನಮ್ಮ ಕ್ಯಾಂಪು ಬಲು ಬಿರುಸಿನಿಂದ ಸಂತೋಷದಿಂದ ಮುಂದುವರಿಯಿತು.

(ಮುಂದುವರಿಯಲಿದೆ)

2 comments:

  1. ಅಂತೂ ನನಗೂ ಒಮ್ಮೆ ಗಡಾಯಿಕಲ್ಲು ಹತ್ತಿದ ಹಾಗೆ ಆಯ್ತು. ೬-೭ ವರ್ಷ ವಯಸ್ಸಿನಲ್ಲಿ ಬಸ್ಸಿನಲ್ಲಿ ಪ್ರವಾಸ ಹೋದಾಗ ...ನನ್ನನ್ನು ಚಿಕ್ಕವನೆಂದೂ,ಮೇಲೆ ಏರಲಿಕ್ಕಾಗದ ಹಿರಿಯರನ್ನು ನೋಡಿಕೊಳ್ಳುವುದಕ್ಕೆಂದೂ ...ಎಲ್ಲರೂ ನನ್ನನ್ನು ಬಿಟ್ಟೇ ಹೋದರು .... ಆ ಸಿಟ್ಟಿನಲ್ಲೋ ಏನೋ ..... ಊರು ಬಿಟ್ಟು ಗಡಾಯಿಕಲ್ಲು ಇದ್ದ ಊರಿನ ಸಮೀಪವೇ ಕೆಲವು ವರ್ಷ ಇದ್ದರೂ ...ಅದರ ಹತ್ತಿರ ಕೂಡಾ ಸುಳಿಯಲಿಲ್ಲ .... ಈಗ ನೋಡಿ ....ಗಡಾಯಿಕಲ್ಲು ಹತ್ತಿ ಬಂದೆ....

    ReplyDelete
  2. ತುಂಬಾ ಖುಶಿಯಾಯಿತು. ಬಲೂ ಹಿಂದೆ ನಾನು ಮತ್ತು ನನ್ನ ಭಾವ ಕೆ ವಿ ಶರ್ಮ ಇಬ್ಬರು ಒಂದು ಬೋಟಲ್ ನೀರು ಹಿಡಿದುಕೊಂಡು ಬಾಯಾರುತ್ತ ಕೊನೆಗೆ ನೀವು ನೋಡಿದ ಕೆರೆಯಿಂದಲೇ ಕೆಂಪುಗಟ್ಟಿದ ನೀರನ್ನೇ ಕುಡಿದು ಜೀರ್ಣಿಸಿಕೊಂಡ ಸಂದರ್ಭವನ್ನು ನೆನೆಸಿಕೊಂಡಾಗ ಇಂದು ಎಸ್ಟು ಎಳಸು ಆಗಿದ್ದೇವೆ ಎನಿಸಿಕೊಂಡಾಗ ನಗುವೇ ಬರುತ್ತದೆ.ಒ0ದು ದಿನ ಪೂರ್ತಿ ಒಂದು ಬೋಟಲ್ ನೀರು! ಅನುಭವಗಳು ನೂರಾರು. ನೆನಪುಗಳು ಸಾವಿರಾರು.

    ReplyDelete