10 September 2013

ಮೆಂಗಿಲ ಶೇಣವ

ಜಿಟಿನಾರಾಯಣ ರಾಯರಮುಗಿಯದ ಪಯಣ ವಿ-ಧಾರಾವಾಹಿಯ ಕಂತು ಇಪ್ಪತ್ತೊಂದು
ಅಧ್ಯಾಯ ನಲ್ವತ್ತಾರು

ಶಿಬಿರಾಗ್ನಿಯ ಭೀಕರ ಕೆನ್ನಾಲಗೆಯ ಕುಣಿತ. ಕಿಡಿಗಳು ಲಟಪಟನೆ ಚಟಾಯಿಸಿ ಅಂತರಿಕ್ಷಕ್ಕೆ ನೆಗೆದು ಅಲ್ಲಿ ಸಿಕ್ಕಿಹಾಕಿಕೊಂಡು ನಕ್ಷತ್ರಗಳಾಗುವ ಸೊಗಸು, ಹುಡುಗರ ಹಾರಾಟ, ಸಂತೋಷದ ಕೇಕೆಗಳು. ಅಲ್ಲಿ ಹುಡುಗರೊಡನೆ ಹುಡುಗನಾಗಿ ಬೆರೆತು ಕುಣಿದು ನಲಿಯುತ್ತಿರುವ ಈ ಅಜ್ಜನಾರು? ಕಾಲಿಗೆ ತುಳುನಾಡಿನ ಮೆಟ್ಟು. ಮೊಳಕಾಲಿನಿಂದ ಮೇಲೆ ಎತ್ತಿ ಕಟ್ಟಿರುವ ಬೈರಾಸು. ಮೈಮೇಲೊಂದು ಜುಬ್ಬ. ತಲೆಗೆ ಕೆಂಪು ಎಲೆವಸ್ತ್ರದ ಮುಂಡಾಸು. ಕೈಗೆ ಆಧಾರವಾಗಿ ಊರುಗೋಲು. ಬಚ್ಚಬಾಯಿಯನ್ನು ಮುಚ್ಚುವ, ಮುಖದ ಮೇಲೆದ್ದು ಕಾಣುವ ಬಿಳಿಯ ಹುಲಿ ಮೀಸೆ. ಕಣ್ಣುಗಳಿಂದ ಆತ್ಮವಿಶ್ವಾಸ, ಪ್ರೀತಿ ಮಿಂಚುವ ಕಾಂತಿ.

ಅಜ್ಜಾ ಅಜ್ಜಾ, ಕತೆ ಹೇಳು ಅಜ್ಜಾ ಎಂದನು ಮೀಸೆ ಅಣ್ಣಯ್ಯಪ್ಪ.
ಕುಣಿಯೋಣು ಬಾರಾ ಎಂದನು ಪಿಂಟೋ.
ಶ್ರೀಧರ ಹಾಡಿದ, ಬಾಬಾ ದನಿ ಸೇರಿಸಿದ. ಉಳಿದವರು ಆಲಾಪನೆ ಮಾಡಿದರು. ತಟ್ಟೆಗಳು ತಮಟೆಗಳಾದುವುಅಂಗೈಗಳು ತಾಳ ಬಡಿದುವು. ೬೭ ವರ್ಷದ ಅಜ್ಜ, ಪಿಂಟೋ, ಲಕ್ಷ್ಮಿಮೋಹನ ಮೊದಲಾದವರು ಬೆಂಕಿಯ ಸುತ್ತಲೂ ಕುಣಿದದ್ದೇ ಕುಣಿದದ್ದು, ಹಾಡಿದ್ದೇ ಹಾಡಿದ್ದು.
ಬೆಟ್ಟ ಈ ರಾತ್ರಿಯೇ ಏರಬಹುದೋ ಅಜ್ಜಾ? ಓ ಖಂಡಿತಾ! ನಮಗೆ ದಾರಿ ತಪ್ಪಿದರೆ? ದಾರಿ ತಪ್ಪುವುದು ಎಂಥಾದ್ದು? ನಿಮಗೆ ಈ ಪ್ರಾಯದಲ್ಲಿ ಕೂಡುವುದೋ? ಅದು ನೋಡುವಾ!
ಅಜ್ಜನ ಹೆಸರು ಮೆಂಗಿಲ ಶೇಣವ. ಕುದುರೆಮುಖದ ಕೂಸು. ನನಗೆ ಅವನ ಪರಿಚಯ ಹತ್ತು ವರ್ಷಗಳ ಹಿಂದಿನದು. ಅಂದೂ ಅವನೇ ನಮಗೆಗೈಡ್ ಮಾರ್ಗದರ್ಶಕ. ಡಿಸೆಂಬರಿನಲ್ಲಿ ದೊರೆಗಳೂ ನಾನೂ ನಾವೂರಿಗೆ ಬಂದಿದ್ದಾಗ ಮೆಂಗಿಲ ಶೇಣವನ ಮನೆಗೆ ಹೋಗಿದ್ದೆವು. ಬಂಗ್ಲೆಯಿಂದ ಮುಕ್ಕಾಲು ಮೈಲು ಕಾಲುದಾರಿಯಲ್ಲಿ ಹೋಗಿ ಒಂದು ಉಬ್ಬುಲು ದಾಟಿ ಇನ್ನೊಂದು ತೋಡನ್ನು ಪಾಲದ ಮೂಲಕ ಹಾಯ್ದು ಹೋದರೆ ಅವನ ಗುಡಿಸಲು:

ಬಳಿಯೊಳೆ ಕೆರೆ, ತೊರೆ, ಮರಬಳ್ಳಿಯ ಹೊರೆ,
ಜೀವದ ತುರುಗಳ ಮೇವುಗಳು
ಅಂಗಳದಲಿ ಹುಲ್ಲೊಟ್ಟಿಲ ತೊಟ್ಟಿಲ
ಏರಿ ಮೆರೆವ ಕರುಮಂದೆಗಳು         - ಕಡೆಂಗೋಡ್ಲು

ನಾವು ಸಮವಸ್ತ್ರಧಾರಿಗಳಾಗಿ ಅಕಸ್ಮಾತ್ತಾಗಿ ಅಲ್ಲಿಗೆ ಹೋಗಿದ್ದುದರಿಂದ ಚಿಕ್ಕಪುಟ್ಟ ಕೋಮಣಧಾರೀ ಮಕ್ಕಳು ಹೆದರಿ ಓಡಿ ಅಡಗಿದರು. ಹಿರಿಯ ಮಗಳು ಹುಲ್ಲುಮೆದೆ ಒಟ್ಟುತ್ತಿದ್ದವಳು ಅವಾಕ್ಕಾಗಿ ಬೆರಗಾಗಿ ನಿಂತಳು.
ಮೆಂಗಿಲ್ ಸೋಜಾ ಇಲ್ಲವಾ? ನಾನು ಮಾತಾಡಿದೆ.
ಅಂತೂ ಕನ್ನಡ ಭಾಷೆ ಕೇಳಿ ಅವಳ ಗಾಬರಿ ಕಡಿಮೆಯಾಗಿರಬೇಕು.
ಎಂದು ಕಿವಿಯೆಡೆ ಕೈ ಹಿಡಿದಳು.
ಪುನಃ ಗಟ್ಟಿಯಾಗಿ ಕೂಗಿ ಹೇಳಿದೆ.
ನಾನಿಲ್ಲಿ ಇದ್ದೇನೆ ಎಂದು ಮುದುಕ ಹೊರಗೆ ಚಿಮ್ಮಿದ. ದೊಡ್ಡ ಲಂಗೋಟಿಯೊಂದೇ ಅವನ ಮೈಮೇಲಿದ್ದ ವಸ್ತ್ರ. ತಲೆಯ ಮೇಲೆ ಮುಟ್ಟಾಳೆ. ಕೈಯಲ್ಲಿ ಖಾಲಿ ಮಾಡಿದ ಗೊಬ್ಬರದ ಕುಕ್ಕೆ. ಸುತ್ತಲೂ ಗೊಬ್ಬರದ, ಹಸಿಹುಲ್ಲು ಕೊಳೆತ ವಾಸನೆ. ಚಿಂದಿಯನುಟ್ಟೇ ಹಾಳೆಯ ತೊಟ್ಟೇ ಇದೆ ಸಿಂಗರವೆಂದೆಸೆಯುವರು.
ಏನು ಮೆಂಗಿಲ ಸೋಜಾ! ನನ್ನನ್ನು ಗೊತ್ತಾಯಿತಾ?
ಮೆಂಗಿಲ ಸೋಜಾ ಅಲ್ಲ, ಮೆಂಗಿಲ ಶೇಣವ ಎಂದು ತಿದ್ದಿದ. ನನ್ನ ಹತ್ತಿರ ಬಂದು, ಕಣ್ಣರಳಿಸಿ ನೋಡಿ ಮೇಲೆ ಕೆಳಗೆ ಪುನಃ ನೋಡಿ, ಹ್ಞಾ ನೋಡಿದ್ದೇನೆ. ಆದರೆ ಈ ಕಣ್ಣು ಈಗ ಮೊದಲಿನಷ್ಟು ಶುದ್ಧ ಇಲ್ಲ ಸ್ವಾಮಿ.
ಅಂತೂ ಎಲ್ಲಿ ಯಾವಾಗ ನೋಡಿದ್ದು?
ಎಲ್ಲಿ? ಮತ್ತೆಲ್ಲಿ ನೋಡಿದ್ದರೆ ಇಲ್ಲಿಯೇ. ನಮಗೆ ಸ್ವಾಮಿ ಪ್ರತಿ ವರ್ಷವೂ ಜನ ಬಂದು ಬಂದು ಹೋಗುತ್ತಾರೆ. ಎಲ್ಲರಿಗೂ ಗೈಡು ನಾನೇ. ಹಾಗಾಗಿ ಹೆಸರು ಮಿನಿ ನೆನಪು ಉಳಿಯೋದಿಲ್ಲ.
ಕುದುರೆಮುಖದ ಅಧ್ಯಕ್ಷನಿವ. ಅಧ್ಯಕ್ಷರನ್ನು ನಮಗೆ ಗೊತ್ತಿರುವುದು. ಆದರೆ ಅವರಿಗೆ ನಮ್ಮೆಲ್ಲರನ್ನೂ ಗೊತ್ತಿರಬೇಕೆಂದಿಲ್ಲವಷ್ಟೆ.
ನೀವೆಲ್ಲ ಕ್ಷೇಮವೇ? ಹೆಂಡತಿ ಮಕ್ಕಳು?
ಕ್ಷೇಮ ಎಂಥಾದ್ದು? ನೋಡಿ ಸ್ವಾಮಿ, ಅವಳು ಹೋಗಿ ಎಂಟು ವರ್ಷ ಆಯಿತು. ಎಂಟು ಮಕ್ಕಳೂ ನಾನೂ ಇದ್ದೇವೆ.
ಅಯ್ಯೋ ಪಾಪ.
ಪಾಪ ಎಂದರೆ ಮಾಡುವುದೇನು ಸ್ವಾಮಿ? ನನಗೆ ನಿಮಗೆ ಪ್ರೋಗ್ರಾಮು ಉಂಟು. ಕಾಲರಾಯನಿಗುಂಟೋ! ಕರೆದಾಗ ಹೋಗಲೇಬೇಕಷ್ಟೆ.
ಏನಾಗಿತ್ತು?
ಹೇಳುವಂಥಾದ್ದು ಏನೂ ಇಲ್ಲ. ಈ ಹುಡುಗ ಹುಟ್ಟಿದಾಗ ನೋಡಿ ಜ್ವರ ಬಂತು. ಎಂಥ ಸುಡುಗಾಡು ಜ್ವರವೋ ಅದು ಬಿಟ್ಟಿತು. ಆದರೆ ಮತ್ತೆ ಅವಳು ಅವಳಾಗಿ ಉಳಿಯಲಿಲ್ಲ. ಯಾರೂ ಅವಳಿಗೆ ಗುರ್ತೇ ಆಗಲಿಲ್ಲ. ಮಗುವಿಗೆ ಮೊಲೆ ಹಾಲು ಊಡಲಿಲ್ಲ. ಅವಳೂ ಆಹಾರ ತೆಗೆದುಕೊಳ್ಳಲಿಲ್ಲ. ಹಳ್ಳಿ ಔಷಧಿ, ಮದ್ದು ಮಂತ್ರ ಹರಕೆ ಆಯಿತು. ನಮ್ಮ ಪಾದ್ರಿಗಳು ಸಹ ಔಷಧಿ ಕೊಟ್ಟರು. ಆದರೆ ತೆಗೆದುಕೊಳ್ಳಬೇಕಲ್ಲ. ಬೆಳ್ತಂಗಡಿಯಿಂದ ಡಾಕ್ಟ್ರನ್ನು ಕರೆದು ತಂದು ಸೂಜಿ ಮದ್ದೂ ಕೊಟ್ಟಾಯಿತು. ಆದರೇನು ಮಾಡೋದು ಸ್ವಾಮಿ, ಉಪ್ವಾಸನೇ ಬಿದ್ದು ಹೋಗಿಬಿಟ್ಟಳು.
ಆಗ ಮಗೂಗೆ?
ಮಗೂಗೆ ಎರಡು ತಿಂಗಳಾಗಿರಲಿಲ್ಲ. ಮತ್ತೆ ನೋಡಿ ಹೀಗೇ ಬೆಳೆಸಿಕೊಂಡು ಬಂದೆವು.
ಹುಡುಗ ಸುಟಿಯಾಗಿ ಮುದ್ದಾಗಿ ಇದ್ದ. ತಾಯಿಯನ್ನು ಕಾಣದ ಶಿಶು ಪಾಪ.
ಮಕ್ಕಳಿಗೆ ಮದುವೆ ಏನಾದರೂ?
ದೊಡ್ಡವನು ಅಪ್ಲು, ಇಲ್ಲೇ ಇದ್ದಾನೆ. ಇನ್ನೂ ಹುಡುಗ. ಅವನಕ್ಕ ಮಂಗ್ಳೂರಿನಲ್ಲಿ ನಮ್ಮ ಜನದ ಮನೆಯಲ್ಲಿ ಕೆಲಸಕ್ಕಿದ್ದಾಳೆ. ಮದುವೆಯಿಲ್ಲ. ಇವಳು ಅವನ ತಂಗಿ. ಕಿವಿ ಸೋರಿ ಸೋರಿ ಕೇಳಿಸೋದೇ ಇಲ್ಲ. ಮದುವೆ ಬೇಡಾಂತಲೇ ಇದ್ದಾಳೆ. ಉಳಿದವರು ಚಿಕ್ಕವರು ನೋಡಿ.
ಪಾಪ ಎಂಥ ಕಷ್ಟವಾಯಿತು.
ಏನು ಮಾಡೋದು, ಆಯುಷ್ಯ ಇದ್ದಷ್ಟು ದಿವಸ ನಾನು ದುಡಿಯಬೇಕಷ್ಟೆ?

ಅಜ್ಜನನ್ನು ಕರೆದುಕೊಂಡು ಬಂಗ್ಲೆಗೆ ಬಂದೆ. ಬರುತ್ತ, ಅದಿರಲಿ, ನಿಮ್ಮ ಮನೆಗೆ ಬಂದವನಿಗೆ ಕಾಫಿ, ತಿಂಡಿ, ಸೀಯಾಳ ಕೊಡಬೇಡವೇ? ಎಂದು ಕೆಣಕಿದೆ.
ಖಂಡಿತಾ! ಆದರೆ ನೀವು ದೊಡ್ಡವರು ತೆಕ್ಕೊಳ್ಳುತ್ತೀರೋ ಇಲ್ಲವೋ! ಮತ್ತೆ ನಮ್ಮದೆಂಥಾ ಕಾಫಿ.
ನೀವು ಕೊಟ್ಟು ನೋಡಿ.
ಹಾಗಾದರೆ ಊಟ ನಮ್ಮಲ್ಲಿ. ಬಡವರ ಗಂಜಿ.
ದೊರೆಗಳೂ ನಾನೂ ಮೆಂಗಿಲನೊಡನೆ ಕುದುರೆಮುಖದ ಮ್ಯಾಪ್ ಹಿಡಿದು ಮಾತಾಡಿದೆವು. ಸುಮಾರು ೧೦೦-೧೫೦ ಚದರ ಮೈಲು ವ್ಯಾಪಿಸಿದ್ದ ಆ ಪ್ರದೇಶದ ಪ್ರತಿ ಬೆಟ್ಟ, ಕೊರಕಲು, ದಿಬ್ಬ, ಹಳ್ಳಿ ಇವುಗಳ ಹೆಸರು, ವಿವರ, ಎತ್ತರ, ದೂರ ಎಲ್ಲ ಅವನಿಗೆ ಬಾಯಿ ಪಾಠ. ಕುದುರೆಮುಖದ ಶಿಶುವಲ್ಲವೇ!
ನಾವು ಜನವರಿಯಲ್ಲಿ ಬರುತ್ತೇವೆ. ಹತ್ತು ದಿವಸ ಇರುತ್ತೇವೆ. ನಿಮ್ಮ ಸಹಾಯಬೇಕು. ಮೇಲೆ ಬಂದು ದಾರಿ ತೋರಿಸಬೇಕು.
ಆಗಬಹುದು. ಮೊದಲೇ ಬರುವ, ಟೈಮು ತಿಳಿಸಿಬಿಡಿ.
ಅದೇ ಪ್ರಕಾರ ನಾವು ದಿವಸ, ಟೈಮು ತಿಳಿಸಿದ್ದೆವು. ಆದರೂ ನಮ್ಮ ಮೊದಲಿನ ಲಾರಿ ಬಂದಾಗ ಮೆಂಗಿಲ ಶೇಣವ ಅಲ್ಲಿರಲಿಲ್ಲ. ಈಗ ಬಂದು ಸೇರಿದ್ದಾನೆ. ಬಹುಶಃ ನಾವು ಹೇಳಿ ಕಳಿಸಿದ ಮೇಲೆ ಬಂದಿರಬೇಕು. ನಮ್ಮನ್ನುಡೋಂಗಿ ಮಂದಿ ಎಂದು ತಿಳಿದಿದ್ದನೋ ಏನೋ!
ಅವನನ್ನು ಕರೆದು, ಅಲ್ಲ ಶೇಣವ, ನಾವು ಬರುತ್ತೇವೆ ಎಂದು ಮೊದಲೇ ಬರೆದಿದ್ದರೂ ನೀವು ಯಾಕೆ ನಾವಿಲ್ಲಿಗೆ ಬಂದಾಗ ಇರಲಿಲ್ಲ? ಎಂದು ತಪ್ಪು ಹುಡುಕಲು ಕೆಣಕಿದೆ.
ಹೌದೋ ಸ್ವಾಮಿ! ನೀವು ಕೊಟ್ಟ ಟೈಮು ನಾಲ್ಕು ಗಂಟೆ. ನಾನು ಬಂದು ೩ರಿಂದ ೫ರವರೆಗೂ ಕಾದೆ. ನೀವು ಬರಲಿಲ್ಲ. ತಡವಾಗಿ ಬಂದರೆ ಮತ್ತೆ ಹೇಗೂ ಗೊತ್ತಾಗುವುದಲ್ಲ ಎಂದು ಮನೆಗೆ ಹೋದೆ.
೧೨ನೇ ಮೈಸೂರು ಟೈಮು ಎಂದು ಜಂಬ ಮಾಡುತ್ತಿದ್ದ ನನಗೆ ಅಜ್ಜನಿಂದ ಪಾಠ ಕಲಿಯುವಂತಾಯಿತು.

ಮೆಂಗಿಲ ಶೇಣವ ದೊರೆಗಳ ಕಾಲದಿಂದಲೂ ಕುದುರೆಮುಖದಶೆರ್ಪಾ ಆಗಿದ್ದಾತ. ಅವನ ಜೀವನಾನುಭವ, ಕುದುರೆಮುಖ ಶ್ರೇಣಿಯ ಪ್ರತಿ ಏರು, ತಗ್ಗು, ಬಂಡೆ, ಕಾಡು ಇವುಗಳ ಬಗೆಗಿನ ಜ್ಞಾನದಷ್ಟೇ ವಿಶಾಲವೂ ಆಳವೂ ಆಗಿತ್ತು. ಒಂದೊಂದು ಮಾತೂ ಈ ಅನುಭವದ ಕಡಲಿನಿಂದ ಹೊರಬರುತಿದ್ದ ಮುತ್ತು. ಇವನೇ ನಮ್ಮ ಮುಖ್ಯ ಶೆರ್ಪಾ. ಇವನ ಅನುಯಾಯಿಗಳಾಗಿ ಇನ್ನೂ ಮೂವರನ್ನು ನೇಮಿಸಿದೆವು.

ಫಾರೆಸ್ಟ್ ಗಾರ್ಡ್ ಪೂಜಾರಿಯೂ ಹಾಜರಾಗಿದ್ದ. ಅವನು ಸದಾ ನಮ್ಮ ಸೇವೆಗೆ ಸೊಂಟಗಟ್ಟಿ ಮಿಲಿಟರಿ ಸಲಾಮು ಕೊಡುತ್ತ ನಿಂತಿದ್ದ. ಆ ಖಾಕಿ ಸಮವಸ್ತ್ರ ಧರಿಸಿದ ಅವನು ಹಳ್ಳಿಗರಿಗೆ ಘನ ಸರಕಾರದ ಪ್ರತಿನಿಧಿ. ಅವನ ದರ್ಪ ಪ್ರಭಾವ ಅಷ್ಟು. ನಮ್ಮೆದುರು ಅವನ ವಿನಯ ಮರ್ಯಾದೆಯೂ ಅಷ್ಟೇ.
ಸೌದೆ ಬೇಕಲ್ಲ, ಪೂಜಾರಿ.
ಆಯ್ತು ಸರ್.
ನಮಗೆ ಎರಡು ಜನ ಬೇಕಲ್ಲ ಪೂಜಾರಿ.
ಆಯ್ತು ಸರ್.
ನೀನು ಇಲ್ಲಿಯೇ ಇದ್ದು ಸಹಾಯ ಮಾಡುತ್ತಿರಬೇಕು. ಊಟ ನಮ್ಮೊಡನೆ.
ಆಯ್ತು ಸರ್.
ನೀರಿನವಸ್ಥೆ ಏನು ಪೂಜಾರಿ!
ಆಯ್ತು ಸರ್. ತೋಡಿನಿಂದ ತರುವುದು ಸರ್.
ಪೂಜಾರಿಯ ಭಾಷೆಯಲ್ಲಿ ಆಯ್ತು ಎನ್ನುವುದು ಸಮ್ಮತಿಸೂಚಕ ಹೂಂನ ಪರ್ಯಾಯ ಪದ. ತಾಂಬೂಲ ರಕ್ತ ರಾಗರಂಜಿತ ಬಾಯಿಯ ಪೂಜಾರಿಯನ್ನು ಫಾರೆಸ್ಟ್ ಡಿಪಾರ್ಟ್ಮೆಂಟ್ ನಮ್ಮ ಸಹಾಯಕ್ಕಾಗಿ ಸದಾ ಅಲ್ಲಿಯೇ ಉಳಿಯಬೇಕೆಂದು ವಿಧಿಸಿತ್ತು.

ರಾತ್ರಿ ೧೦ ಗಂಟೆಗೆ ನಾವೂರಿನ ಪ್ರಥಮ ಊಟ: ಸಾರು, ಹಪ್ಪಳ, ಪಲ್ಯ, ಮುದ್ದೇಹುಳಿ, ಉಪ್ಪಿನಕಾಯಿ. ಅದರ ರುಚಿ ಶೇಣವನ ನುಡಿಮುತ್ತಿನಲ್ಲಿ ಗೇರುಹಣ್ಣಿನ ಗಂಗಸರಕ್ಕಿಂತಲೂ ಮಿಗಿಲು. ಶಿಬಿರಾಗ್ನಿಯ ಸುತ್ತಲೂ ಎಲ್ಲರೂ ಕುಳಿತು ತೃಪ್ತಿಯಿಂದ ಊಟ ಮಾಡುತ್ತಿದ್ದ ಆ ದೃಶ್ಯ ಕೃತಕೃತ್ಯತೆಯ ಕುರುಹು. ಆ ಊಟವನ್ನು ನಾವು ಸಂಪಾದಿಸಿದ್ದೆವು. ಅದರ ರುಚಿಯೂ ಅಷ್ಟೇ ಹೆಚ್ಚು.

ಡೇರೆಗಳನ್ನು ಆ ರಾತ್ರಿ ಎರಡು ಕಾರಣಗಳಿಗಾಗಿ ಹೊಡೆಸಲಿಲ್ಲ. ಒಂದು, ನಾವು ಎಲ್ಲರೂ ಒಟ್ಟು ಸೇರುವಾಗ ರಾತ್ರಿ ತೀರ ಮೀರಿತ್ತು. ಮತ್ತೆ ಡೇರೆ ನಿಲ್ಲಿಸಿ, ನೆಲ ಸಮತಟ್ಟು ಮಾಡಿ, ಡೇರೆಗಳ ಸುತ್ತಲೂ ಹಾವು-ಕಂದಕ ತೋಡಲು (ಡೇರೆಗಳಿರುವ ಪ್ರದೇಶದ ಸುತ್ತಲೂ ಆಯತಾಕಾರವಾಗಿ ಇರಬೇಕು. ಹೊರಗಿನಿಂದ ಹರಿದುಕೊಂಡು ಬರುವ ಹಾವು ಇದರೊಳಗೆ ಬೀಳುವುದು. ಕಡಿದಾದ ಬದಿಯಿಂದ ಏರುವುದು ಅದಕ್ಕೆ ಸಾಧ್ಯವಿಲ್ಲದಿರುವುದರಿಂದ ಡೇರೆಯಲ್ಲಿರುವವರು ಸುರಕ್ಷಿತರಾಗಿರುತ್ತಾರೆ) ಅವಕಾಶವಿರಲಿಲ್ಲ. ಇದಕ್ಕಿಂತ ಮುಖ್ಯವಾದ ಕಾರಣ ಎರಡನೆಯದು. ಬಂಗ್ಲೆಯ ಜಗಲಿ ಕೋಣೆಗಳು ಬಲು ವಿಶಾಲವಾಗಿದ್ದುವು. ಬಂಗ್ಲೆಯೂ ರಿಪೇರಿಗೊಳಿಸಲ್ಪಟ್ಟು ಸಾಕಷ್ಟು ಭದ್ರವಾಗಿತ್ತು. ರಾತ್ರಿ ಮಲಗುವಾಗ ೧೨ ಗಂಟೆ. ಹುಡುಗರೆಲ್ಲರೂ ದಣಿದಿದ್ದರು. ಆದರೂ ಶಿಸ್ತು ಮೀರಲು ಸಾಧ್ಯವಿಲ್ಲವಲ್ಲ. ಮರುದಿವಸದ ಉಪಾಹಾರಕ್ಕೆ ಬೇಕಾಗುವ ನೀರು ಸಂಗ್ರಹಿಸಲೇ ಬೇಕಾಯಿತು. ಮೇಲಾಗಿ ಕಾರ್ಯಕ್ರಮ ಪ್ರಕಟಿಸಲೂ ಬೇಕಾಗಿತ್ತು.

ನಾಳೆ ೧೨ನೆಯ ತಾರೀಕು ಕ್ರಮ ಪ್ರಕಾರ ಶಿಕ್ಷಣದ ಆರಂಭ. .೩೦ ಗಂಟೆಗೆ ಹಾಸಿಗೆ ಚಾ. ೬ ಗಂಟೆಗೆ ಉಪಾಹಾರ. ನಿಮ್ಮಲ್ಲೆ ನಾಲ್ವರು ಕ್ಯಾಡೆಟ್ ಶಿಕ್ಷಕರ ಹೊರತಾಗಿ ಉಳಿದ ೩೩ ಮಂದಿಯನ್ನು ೧೧ ಮಂದಿಯ ಮೂರು ಸಮಭಾಗಗಳಾಗಿ ಮಾಡಲಾಗಿದೆ ಎಂದು ಆಯಾ ಭಾಗಗಳ ಹುಡುಗರ ಹೆಸರುಗಳನ್ನು ಓದಿ ಹೇಳಿದೆ. ಒಂದನೆಯ ಪಂಗಡ ನಾಳೆ ಶಿಬಿರದಲ್ಲಿಯೇ ಇದ್ದು ಇಲ್ಲಿಯ ವಿಶಿಷ್ಟ ಕಾರ್ಯ ನಡೆಸಬೇಕು. ಎರಡನೆಯದು ಶಿವಪ್ಪನವರ ಮುಂದಾಳುತನದಲ್ಲಿ ಕುದುರೆಮುಖದ ಸರಹದ್ದಿನವರೆಗೆ ಹೋಗಿ ಅಲೆದು ಸಂಜೆಗೆ ಹಿಂತಿರುಗಬೇಕು. ಮೂರನೆಯದು ಜಮಾಲಾಬಾದಿಗೆ ಹೋಗಿ ಬರಬೇಕು. ನಮ್ಮ ನಾಲ್ವರು ವಿದ್ಯಾರ್ಥಿ ಶಿಕ್ಷಕರೂ ನಾನೂ ಜಮಾಲಾಬಾದಿಗೆ ಹೋಗಿ ಬರುತ್ತೇವೆ. ನಿಸಾರ್ ಮತ್ತು ಸ್ವಾಮಿಯವರು ಶಿಬಿರದ ಕರ್ತವ್ಯ ನಿರ್ವಹಿಸುತ್ತಾರೆ. .೩೦ ಗಂಟೆಗೆ ಪ್ರತಿಯೊಂದು ಪಂಗಡವೂ ಅದರದರ ಕರ್ತವ್ಯದಲ್ಲಿ ಲೀನವಾಗಿ ಹೋಗಬೇಕು. ಸಮಯ ೧೨ನೇ ಮೈಸೂರಿನ ಸಮಯ ಎಂಬುದು ನೆನಪಿರಲಿ, ಸಂಶಯ ಉಂಟೇ?
ಡ್ರೆಸ್ ಸಾರ್?
ಸದಾ ಸಮವಸ್ತ್ರ, ಸಮವಸ್ತ್ರ. ಸ್ವರ್ಗಕ್ಕೂ ಹಸುರು ಕಂದೀಲು.
ಆದರೆ ಈಗಲೇ ತಡವಾಯಿತಲ್ಲ, ಸರ್.
ನಾನು ಹೇಳಿದ್ದು ನಾಳಿನ ಕಾರ್ಯಕ್ರಮ. ಅದರ ವಿಚಾರ ಪ್ರಶ್ನೆ ಉಂಟೋ ಎಂದು ಕೇಳಿದ್ದು. ಅಸಂಬದ್ಧ ಪ್ರಲಾಪದ ಅಪಸ್ವರ ಬೇಡ.
ಒಂದನೇ ರಾತ್ರಿ. ದೀರ್ಘ ಪ್ರಯಾಣಾನಂತರ ಚಾರ್ಪಾಯಿಶಾಯಿಯಾಗುವ ನಟ್ಟಿರುಳು. ಬೆಳಗ್ಗೆ ಸ್ವಲ್ಪ ತಡವಾಗಿ ಏಳಬಹುದೋ ಏನೋ ಎಂದು ನಿರೀಕ್ಷಿಸಿದವರಿಗೆ ೫.೩೦ ಗಂಟೆಯ ಹಾಸಿಗೆ ಚಾ ಸುದ್ದಿ ಬಲು ಕಹಿಯಾಗಿರಬೇಕು.

ನಾವು ಊಟ ಮಾಡುವ ಮೊದಲು ಒಂದು ಸಣ್ಣ ಘಟನೆ ನಡೆಯಿತು. ನಾನು ಡಾಕ್ಟರರನ್ನು ಕುರಿತು, ಕ್ಯಾಂಪ್ ಜೀವನ. ನೀವು ಬಂದದ್ದು ನಮಗೆ ಹತ್ತಾನೆ ಬಲ ಬಂದ ಹಾಗೆ. ನಿಮಗೆ ಕಷ್ಟ ಆದರೂ ನಮಗೆ ಧೈರ್ಯವಾಯಿತು. ಸ್ವಲ್ಪ ದಯವಿಟ್ಟು ಹೊಂದಿಕೊಳ್ಳಿ ಎಂದೆ.
ನಾನು ಈ ಮೊದಲೇ ಎನ್ಸಿಸಿ ಕ್ಯಾಂಪ್ ಒಂದಕ್ಕೆ ಹೋಗಿದ್ದೇನೆ. ನೀವೆಲ್ಲ ಇರುವಾಗ ನನಗೇನೂ ತೊಂದರೆಯಿಲ್ಲ.
ಸಂತೋಷವಾಯಿತು. ಈಗ ಊಟಕ್ಕೆ ತಯಾರಾಗಿದೆಯಲ್ಲ. ನೀವು ಪ್ಲೇಟ್ ಏನಾದರೂ ತಂದಿದ್ದೀರಾ?
ನಮ್ಮ ಮಾತನ್ನು ಕೇಳುತ್ತಿದ್ದವನು ಅವರ ಆರ್ಡರ್ಲಿ. ಅವನು ಉತ್ತರ ಕೊಟ್ಟ, ಡಾಕ್ಟ್ರು ಪ್ಲೇಟು ಗೀಟು ತರುವ ಕ್ರಮವಿಲ್ಲ.
ಏನು, ಏನಂದಿರಿ?
ಅವರು ಹೇಗೆ ಪ್ಲೇಟು ತರುವುದು? ಆರ್ಡರ್ಲಿ ಅಂದ.
ಮತ್ತೆ ಹೇಗೆ ಊಟ ಮಾಡುತ್ತಾರೆ? ನನಗೆ ಕುತೂಹಲವಾಯಿತು.
ಅವರು ಡಾಕ್ಟ್ರು. ಅವರು ಯಾಕೆ ತರಬೇಕು? ಅದು ನೀವು ಒದಗಿಸಿಕೊಡಬೇಕು.
ಅವನ ಮಾತಿನ ಠೀವಿ ಅದುವರೆಗಿನ ಹುಳಿ ವರ್ತನೆ ನನ್ನನ್ನು ರೇಗಿಸಿತು.
ನಿನ್ನ ಹತ್ತಿರ ಮಾತಾಡಿದೆನಾ? ಅಧಿಕ ಪ್ರಸಂಗ ಬೇಡ. ನಿನ್ನ ಡಾಕ್ಟರರೇನು ಸ್ವರ್ಗದಿಂದ ಬಂದವರಾ?
ಡಾಕ್ಟರರ ಕಡೆಗೆ ತಿರುಗಿ ಹೇಳಿದೆ, ಕ್ಷಮಿಸಿ. ಇದು ನಿಮಗೆ ಅನ್ವಯವಾಗುವುದಿಲ್ಲ. ಈ ಸಣ್ಣ ಮನುಷ್ಯನ ಮಾತು ನೋಡಿ.
ಡಾಕ್ಟರರು ಸೀದಾ ಅವನಿಗೆ ಬಿರುನುಡಿದರು, ನಿನ್ನನ್ನು ಸರಕಾರ ಇಲ್ಲಿಗೆ ಆರ್ಡರ್ ಕೊಟ್ಟು ಕೆಲಸ ಮಾಡಲು ಕಳಿಸಿದೆ, ಮದುವೆ ಮನೆಗೆಂದಲ್ಲ. ನೀನು ಸರಿಯಾಗಿರದಿದ್ದರೆ ನಾನೇ ನಿನ್ನನ್ನು ಹಿಂದೆ ಕಳಿಸಿಬಿಡುತ್ತೇನೆ.
ಆ ಗಳಿಗೆಯಿಂದ ಅವನಂಥ ವಿಧೇಯನನ್ನು, ಮನಃಪೂರ್ವಕವಾಗಿ ದುಡಿಯುವವನನ್ನು ನಾನು ನೋಡಲಿಲ್ಲ.

ಡಾಕ್ಟರರೂ ಅವರ ಆರ್ಡರ್ಲಿಯೂ ಬಂಗ್ಲೆಯ ಬಲಬದಿಯ ಕೋಣೆಯಲ್ಲಿ ಮಲಗಿದರು. ಅದೇ ಆಸ್ಪಾತ್ರೆಯೂ ಆಯಿತು. ಎಡಬದಿಯ ಕೋಣೆ ದೊರೆಗಳಿಗೆ, ಮುಂದಿನ ಮತ್ತು ಹಿಂದಿನ ವಿಶಾಲ ಜಗಲಿಗಳಲ್ಲಿ ಹುಡುಗರು ಮಲಗಿದರು. ಹೀಗೆ ನಾಲ್ಕು ಕಡೆಗಳಲ್ಲಿ ಸಂರಕ್ಷಣೆ ಪಡೆದ ನಡುವಣ ಹಾಲ್ಮಂತ್ರಿ ಸಂಪುಟವಾದ ನಾವು ನಾಲ್ವರಿಗೆ: ಶಿವಪ್ಪ, ನಿಸಾರ್, ಸ್ವಾಮಿ ಮತ್ತು ನಾನು. ಹಾಗಿದ್ದರೂಪರೀಕ್ಷಿದ್ರಾಜನೂ ನಿಂಬೇ ಹಣ್ಣೂ ಕತೆ ಸ್ವಾಮಿಯವರ ನೆನಪಿಗೆ ಬಂದಿತು. ದಕ್ಷಿಣ ಕನ್ನಡದಲ್ಲಿ ತುಂಬ ಹಾವು, ಸರ್ಪಗಳಿವೆ ಎಂದು ಅವರು ಕೇಳಿದ್ದರು. ಅದರಲ್ಲಿಯೂ ನಾವು ಈಗ ಕಾಡಿನ ಮಧ್ಯೆ ಬೇರೆ ಇದ್ದೇವೆ. ಹೀಗಾಗಿ ಸ್ವಾಮಿ ಮುರುಕು ಬಾಗಿಲುಗಳ ಹರಕು ಬಿರುಕುಗಳಿಗೆಲ್ಲ ಚಿಂದಿ ಚೂರುಗಳನ್ನು ತುಂಬಿಸಿ ಭದ್ರ ಮಾಡಿದರು. ಕಿಟಿಕಿ ಪಡಿಗಳನ್ನು ಮುಚ್ಚಿದರು. ಮೊದಲೇ ಸೆಕೆ. ಇದರಿಂದ ಗಾಳಿ ಸಂಚಾರ ಬಂದ್ ಆಯಿತು.
ಏನು ಸ್ವಾಮಿ ಇದು?
ಹೋಗ್ಲಿ ಬಿಡಿ ಸಾರ್, ಜೀವ ಮುಖ್ಯ ಅಲ್ಲವಾ?
ಹೀಗೆ ಮಾತಾಡುತ್ತಿದ್ದಂತೆಯೇ ಲಯಬದ್ಧ ಗೊರಕೆಯ ತಾನವನ್ನು ಶಿವಪ್ಪ ನುಡಿಸಿದರು. ಸ್ವಾಮಿ ಮರುದನಿಗೈದರು. ಬೆಂಗಳೂರಿನಿಂದ ಯಾವ ಮುಹೂರ್ತದಲ್ಲಾದರೂ ಬರಬಹುದಾದ ತಾರಿನ ಸುದ್ದಿ ಕಲ್ಪಾಂತರಗಳ ಸಂಕ್ಷಿಪ್ತಾಕೃತಿಯ ಆಗಮನದ ಶುಭ ಸಮಾಚಾರ - ಇದನ್ನು ನೆನೆಯುತ್ತ ನಿಸಾರರು ಸಿಗರೇಟ್ ಸುರುಳಿ ಉಗುಳಿದರು. ನಿದ್ರೆ ಬಂತೋ ಬರಲಿಲ್ಲವೋ, ಬಾಬಾ ಪ್ರಸಾದನ ಬಿಗಿಲು ನಮ್ಮನ್ನು ಬೈರಿಗೆಯಂತೆ ಕೊರೆದೆಬ್ಬಿಸಿತು

ನಮ್ಮ ವಿದ್ಯಾರ್ಥಿ ಶಿಕ್ಷಕರು
ಅಧ್ಯಾಯ ನಲ್ವತ್ತೇಳು

ನಮ್ಮ ವಿದ್ಯಾರ್ಥಿ ಶಿಕ್ಷಕರು ಲಕ್ಷ್ಮೀನಾರಾಯಣ, ಪಿಂಟೋ, ಮೋಹನ ಮತ್ತು ಜಯರಾಮ. ಇವರು ಹಿಮಾಲಯದ ಪರ್ವತಾರೋಹಣ ಸಂಸ್ಥೆಯಲ್ಲಿ ತರಬೇತಿ ಹೊಂದಿ ಬಂದ ಕ್ಯಾಡೆಟ್ಟುಗಳು. ಮೊದಲಿನ ಮೂವರೂ ಎ ದರ್ಜೆ ಪಡೆದವರು. ಇವರಲ್ಲಿ ಸರ್ವಸಮರ್ಥ - all rounder, ಲಕ್ಷ್ಮಿ. ಇವನು ಮುಖ್ಯ ಶಿಕ್ಷಕ. ಗಾಂಧಾರಿ ಮೆಣಸಿನಂತೆ (ಕುಬ್ಜ ಗಾತ್ರ, ಗರಿಷ್ಠ ಖಾರ ಇರುವ ಮೆಣಸಿನಕಾಯಿ) ಸ್ವರೂಪ ಚಟುವಟಿಕೆಯೂ ಹಾಗೆಯೇ. ಕಡಿದಾದ ಕಲ್ಲು ಬಂಡೆ, ಆಳವಾದ ಪ್ರಪಾತ ಎಲ್ಲವೂ ಇವನಿಗೆ ಬಯಲಿನ ಮೇಲೆ ನಡೆದಷ್ಟೇ ಸುಲಭ. ವೈಜ್ಞಾನಿಕವಾಗಿ ವಿಚಾರಗಳನ್ನು ವಿವರಿಸಿ ಹೇಳಿಕೊಟ್ಟು, ಸ್ವತಃ ಮಾಡಿತೋರಿಸಿ ಇತರರಿಂದ ಮಾಡಿಸುವುದರಲ್ಲಿ ಅತಿ ನಿಸ್ಸೀಮ. ಕ್ಲಾಸಿನಲ್ಲಿ ಇವನು ನನ್ನ ಶಿಷ್ಯನಾಗಿದ್ದರೂ ಶಿಲಾರೋಹಣದಲ್ಲಿ ನಾವೆಲ್ಲರೂ ಇವನ ಶಿಷ್ಯರೇ. ಇವನಿಗೆ ಸರಿಯಾದ ಅನುಯಾಯಿ ಮೋಹನ. ಸದಾ ಕಾರ್ಯತತ್ಪರ, ಸುಟಿ, ಚಟುವಟಿಕೆ, ಜೊತೆಗೆ ನಗುಮೊಗ. ಇವನು ಸೊಗಸಾದ ಹಾಡುಗಾರನೂ ಹೌದು. ಹುಡುಗರಿಗೆ ಇವನ ಮೇಲೆ ಅಮಿತ ವಾತ್ಸಲ್ಯ. ಲಕ್ಷ್ಮಿಯೊಡನೆ ಭಯ. ಬಂಡೆಯ ಮೇಲೆ ಲಕ್ಷ್ಮಿ, ಕೆಳಗೆ ಮೋಹನ ಹೀಗೆ ಇವರ ಜೊತೆ ನಡೆಯುತ್ತಿತ್ತು. ವಿ.ಜೆ. ಪಿಂಟೋ ಇಂಗ್ಲಿಷ್ ಭಾಷೆಯ ವರ್ಸೆಟೈಲ್ ಜೀನಿಯಸ್, ಕಮ್ಯೂನಿಸ್ಟ್ ಭಾಷೆಯ ಥಿಯೊರೆಟಿಶಿಯನ್. ಯಾವ ಸಾಹಸವನ್ನಾದರೂ ಚೆನ್ನಾಗಿಯೇ ಪ್ರದರ್ಶಿಸಬಲ್ಲವನಾದರೂ, ಅದರ ವಿವರ ತಿಳಿಸಿ ಹೇಳುವುದರಲ್ಲಿ, ಹಾಗೆ ಹೇಳುವಾಗ ಅದರ ಅಪಾಯಾಂಶವನ್ನು ಸ್ವಲ್ಪ ವಿವರಿಸಿ ತಿಳಿಸುವುದರಲ್ಲಿ ಇವನಿಗೆ ಅಧಿಕಾಸಕ್ತಿ.
ನಿಮಗೆ ಈ ಕಲ್ಲಿನಿಂದ ಹಾರಲೇಬೇಕೇನಪ್ಪಾ? ಆದರೆ ನೋಡಿ ಕಾಲು ಜಾರೋದು, ನೀವು ಹೆದರೋದು, ಏಕೆ ಬೇಡದ ಉಸಾಬರಿ? ನಿಮಗೆ ಧೈರ್ಯ ಇಲ್ಲದಿದ್ರೆ ಮೇಲೇ ಸುಮ್ಮನೆ ಇದ್ದುಬಿಡಿ. ಅದರಲ್ಲಿ ಅಪಮಾನವೇನೂ ಇಲ್ಲ. ನೋಡಿ ನಾನು ಹಿಮಾಲಯದಲ್ಲಿ ಇದ್ದಾಗ ಹೀಗೇ ಒಂದು ಪ್ರಸಂಗ. . . ಇದು ಪಿಂಟೋ ಮಾತಿನ ಸರಣಿ.
ಏಯ್ ಇಲ್ನೋಡೋ! ನೀನು ಹಾರು ಸುಮ್ಮನೆ. ಏನೂ ಆಗೋದಿಲ್ಲ. ನಾನಿದ್ದೇನೆ. ನೂಕಿಬಿಡ್ತೀನಿ ನೋಡು. ನೀನೆಲ್ಲೋ ಶುದ್ಧ ಹೆಣ್ಣು ಕಾಣಮ್ಮ. ಇದು ಲಕ್ಷ್ಮಿಯ ಮಾತಿನ ಝರಿ, ಪ್ರಭುಸಮ್ಮಿತಿ.
ನೋಡು ಕಾಲು ಮೆತ್ತಗಿಡು. ಹೀಗೆ, ಹೀಗೆ. ಈಗ ಎಲ್ಲ ಸರಿಯಾಯಿತು. ಭಯವಾಗುವುದಿಲ್ಲ. ಚೆನ್ನಾಗಿ ಮಾಡಿದೆ, ಹಾಗೆ ಬಾ, ನಾಬಂದೆ, ಬಂದೆ ಇದು ಮೋಹನನ ಹಿತವಾಣಿ, ಕಾಂತಾಸಮ್ಮಿತಿ.
ವಂಡರ್ಫುಲ್, ವೆರಿಗುಡ್, ಷಾಭಾಸ್, ಏಯ್ ಹಾರಿಬಿಡು - ಹಾಗೆ, ಹಾಗೆ ದೂರದಿಂದ ನಿಂತು ಉಚಿತವೋ ಅನುಚಿತವೋ ಸದಾ ಅತಿಶಯೋಕ್ತಿಯ ಉದ್ಗಾರದ ಮಳೆಗರೆಯುವ ಹುಡುಗ ಜಯರಾಮ. ಇವನಿನ್ನೂ ಎಳೆಗೂಸು. ಹಿಮಾಲಯದಿಂದ ಮರಳಿದ ತರುಣದಲ್ಲಿ ತೀರ ಬಿಸಿ ಬಿಸಿಯಾಗಿದ್ದ. ಬಿಲೇ ಗಿಲೇ ಯಾವುದೂ ಬೇಡ, ಎಲ್ಲಿ ಬೇಕಾದಲ್ಲಿ ಹಾರುತ್ತೇನೆ ಎಂದು ಹೊರಟ. ಆ ಒಂದು ಆದಿತ್ಯವಾರ ನಾವು ಶೇಷಾದ್ರಿಪುರದ ಶಿವಾನಂದ ಸ್ಟೋರ್ಸ್ ಎದುರಿನ ಬಂಡೆಗಳಲ್ಲಿ ಏರುವುದನ್ನೂ ಜಿಗಿಯುವುದನ್ನೂ ಅಭ್ಯಸಿಸುತ್ತಿದ್ದೆವು. ಹುಡುಗರನ್ನು ನಾಲ್ಕು ತಂಡ ಮಾಡಿ ಒಂದನ್ನು ಜಯರಾಮನ ವಶ ಬಿಟ್ಟು ನಾನು ಉಳಿದವರ ಮೇಲುಸ್ತುವಾರಿಕೆ ನೋಡಲು ಆ ಕಡೆ ಸರಿದಿದ್ದೆ. ಮುಂದಿನ ಗಳಿಗೆಯಲ್ಲಿ, ಜಯರಾಮ ಬಿದ್ದ, ಭಯಂಕರ ಅಪಾಯವಾಗಿದೆ ಎಂದು ಹುಡುಗರ ಬೊಬ್ಬೆ ಕೇಳಿಸಿತು. ನನಗೆ ಹೆದರಿಕೆಯಾಯಿತು. ಹೋಗಿ ನೋಡಿದೆ. ಹತ್ತಡಿ ಎತ್ತರದ ಬಂಡೆ. ಬಿಲೇ ಇಲ್ಲದೇ stomach rappling ಮಾಡಿ ತೋರಿಸಲು ಹೊರಟಿದ್ದಾನೆ. ಇದು ನಮ್ಮ ಆಜ್ಞೆಗೆ ವಿರೋಧ - ಬಿಲೇ ಇಲ್ಲದೆ ಯಾರೂ ಯಾವ ಸಾಹಸವನ್ನೂ ಮಾಡಿ ತೋರಿಸತಕ್ಕದ್ದಲ್ಲ. ವಿದ್ಯಾರ್ಥಿ ಶಿಕ್ಷಕನೇ ಇದನ್ನು ಉಲ್ಲಂಘಿಸಿದ್ದ. ಇಳಿಯುವಾಗ ಕೈ ಜಾರಿತು. ಬಿದ್ದ, ಮುಖ ಕೆಳಗಾಗಿ ಬಿದ್ದ. ಒಂದು ಕಣ್ಣಿನ ಪಕ್ಕಕ್ಕೆ ಗಾಯವಾಗಿ ಆ ಕಣ್ಣು ಮುಚ್ಚಿಹೋಗಿತ್ತು. ಅವನಿಗೆ ಜ್ಞಾನವಿರಲಿಲ್ಲ. ಎದೆ ಮುಂತಾದ ಕೋಮಲ ಭಾಗಗಳಿಗೆ ಪುಣ್ಯವಶಾತ್ ಪೆಟ್ಟಾಗಿರಲಿಲ್ಲ. ನೋಡಿದವರೆಂದರು ಐದಡಿ ಇಳಿದ ಮೇಲೆ ಹೀಗಾಯಿತೆಂದು. ಸದ್ಯ ಇದ್ದುದರಲ್ಲಿ ಇದೊಂದು ಧೈರ್ಯ. ನೀರು ಚಿಮುಕಿಸಿದೆವು. ಜ್ಞಾನ ಬಂದಿತು. ದೊಡ್ಡ ರಸ್ತೆ ಸಮೀಪದಲ್ಲೇ ಇದ್ದುದರಿಂದ ಅವನನ್ನು ಅಲ್ಲಿವರೆಗೆ ನಡೆಸಿಕೊಂಡು ಹೋಗಿ ಆಟೋರಿಕ್ಷಾದಲ್ಲಿ ಕೂರಿಸಿ ನಾನೇ ಸರ್ಕಾರೀ ಆಸ್ಪತ್ರೆಗೆ ಸಾಗಿಸಿದೆ. ಬೆಂಗಳೂರು ನಗರ - ಅಷ್ಟರೊಳಗೇ ಅಲ್ಲಿ ಭಾರೀ ಜನಸಂದಣಿ ಸೇರಿತ್ತು. ಇನ್ನು ಅವರ ಮಾತು ಕತೆ, ಅಂತೆ, ಕಂತೆ ಸಾಹಿತ್ಯದಲ್ಲಿ ರಂಗುರಂಗಾಗಿ ಕಂಡೀತು; ಸಂಬಂಧಿಸದವರಿಗೆ ವಿನೋದವಾಗಿಯೂ ತೋರೀತು. ಆದರೆ ಆ ದುರ್ಭರ ಪ್ರಸಂಗದಲ್ಲಿ ಸ್ವತಃ ಭಾಗಿಗಳಾದ ನಮಗೆ, ಇರುವ ವೇದನೆಯ ಜೊತೆಗೆ, ಇದೊಂದು ನಿವಾರಣೀಯ ಕಿರಿಕಿರಿಯೂ ಆಗಿತ್ತು. ಮುಂದಿನ ಒಂದು ಗಂಟೆ ಆಸ್ಪತ್ರೆಯಲ್ಲಿ. ಸುದೈವದಿಂದ ಅವನಿಗೆ ಹೇಳುವಂಥ ಅಪಾಯವೇನೂ ಆಗಿರಲಿಲ್ಲ. ಅಲ್ಲಿಯ ವಿಶಿಷ್ಟ ಪ್ರಥಮ ಚಿಕಿತ್ಸೆ ಮುಗಿದ ಅನಂತರ ಅವನನ್ನು ನನ್ನ ಜೊತೆಯಲ್ಲೇ ಕಳಿಸಿಕೊಟ್ಟರು. ಆ ಬಂಡೆಯನ್ನು ಜಯರಾಮ ಬಂಡೆ ಎಂದು ಈಗ ನಾವು ಕರೆಯುತ್ತೇವೆ. ಎಲ್ಲ ಸುಖಾಂತವಾದುದರಿಂದ ಈ ಜಯರಾಮ ಬಂಡೆ ವಿನೋದದ - ಬಂಡೆಗೆ ಮಂಡೆ ಹೆಟ್ಟಬೇಡ - ಪ್ರತೀಕವಾಗಿದೆ. ಈ ಅನುಭವದ ಅನಂತರ ಜಯರಾಮ ಪಿಂಟೋಗಿಂತಲೂ ಹತ್ತುಪಟ್ಟು ಥಿಯೊರೆಟಿಶಿಯನ್ ಆದ. ತಮಾಷೆ ಹಾಗಿರಲಿ. ನಮ್ಮ ನಾಲ್ವರು ಶಿಕ್ಷಕರು ಸಹಕರಿಸಿ ದುಡಿದು ಹಗಲು ಇರುಳು ಎಂಬುದನ್ನು ಪರಿಗಣಿಸದೆ ಸದಾ ನನ್ನ ಬೆಂಬಲಕ್ಕಿದ್ದು ಕುದುರೆಮುಖ ಸಾಹಸವನ್ನು ಯಶಸ್ವಿಗೊಳಿಸಿದರು. ಅವರ ಉತ್ಸಾಹದ ಚಿಲುಮೆ ನಮಗೆಲ್ಲರಿಗೂ ನವಸ್ಫೂರ್ತಿ ನೀಡುವ ಚೈತನ್ಯವಾಗಿತ್ತು.

೧೨ನೇ ತಾರೀಕಿನಂದು ನಾವು ಎದ್ದಾಗ ೫ ಗಂಟೆ, ಸೆಕೆಯಳಿದು ಹಿತಕರವಾದ ಹವೆ, ನಿದ್ರೆಗೆ ಸೊಗಸಾಗಿ ಜೋಗುಳ ಹಾಡುವ ತಂಗಾಳಿ ಪಸರಿಸಿತ್ತು. ಆದರೆ ಕರ್ತವ್ಯವಿದೆಯಲ್ಲ. ಜಾಂಬ್ರೆ ಆಗಲೇ ಬಂದು ಟೀ ರೆಡೀ ಸಾಬ್ ಎಂದು ಸೆಲ್ಯೂಟ್ ಮಾಡಿದ್ದ. ಅಡುಗೆಯವರು ಉಪಾಹಾರ ತಯಾರಿಸುತ್ತಿದ್ದರು. ಮಧ್ಯಾಹ್ನದ ಬುತ್ತಿಯನ್ನು (ಚಪಾತಿ, ಪಲ್ಯ) ತಿಮ್ಮಪ್ಪ, ಗುರು, ಶಾಸ್ತ್ರಿ, ಅಣ್ಣಯ್ಯಪ್ಪ ಕಟ್ಟುತ್ತ ಕುಳಿತಿದ್ದರು. ನೀರು ತರಲು ತೋಡಿನೆಡೆಗೆ ಒಂದು ತಂಡ ಹೊರಟಿತು. ಮೆಂಗಿಲ ಶೇಣವನ ಗುಂಪು, ಪೂಜಾರಿ ಎಲ್ಲರೂ ಆಗಲೇ ಸಿದ್ಧರಾಗಿದ್ದರು. ನಿಸಾರರೂ ನಾನೂ ಬಯಲಿನೆಡೆಗೆ ಹೋದೆವು. ಆಕಾಶ ವಿಶಾಲ, ನಿರಭ್ರ, ನಕ್ಷತ್ರಗಳ ದೇದೀಪ್ಯಮಾನ ಚಿತ್ರ ಅತಿ ಮೋಹಕವಾಗಿತ್ತು.
ಗುರುಗಳೇ ಈ ನಕ್ಷತ್ರಗಳನ್ನು ಕುರಿತು ನೀವು ಸ್ವಲ್ಪ ನನಗೆ ಹೇಳಬೇಕು ಎಂದರು ನಿಸಾರರು.
ಕವಿಗಳಿಗೆ ಈ ಶುಷ್ಕ ವಾಸ್ತವಿಕತೆಯಿಂದ ಪ್ರಯೋಜನವೇನು? ನಾನು ಕೆಣಕಿದೆ.
ಛೇ ಛೇ! ಹಾಗೆಂದರೇನು? ವಾಸ್ತವಿಕತೆಯಿಂದ ಪ್ರಭಾವಿತನಾದ ಕವಿ ಮತ್ತೆ ಕಲ್ಪನಾಲೋಕದಲ್ಲಿ ಅದಕ್ಕೆ ಬೇರೆ ರೂಪವಿತ್ತು ಪುನಃ ವರ್ಣಿಸುತ್ತಾನೆ.
ಆಗಲಿ ಹೇಳುತ್ತೇನೆ. ನೀವು ನನಗೆ ಕವಿತೆ ಬರೆಯುವ ಡ್ರಿಲ್ಲನ್ನು ಹೇಳಿಕೊಡಬೇಕು.
ನನ್ನ ಈ ಕೆಣಕು ನುಡಿ ಅವರಿಗೆ ಚುಚ್ಚಿತು. ಕವಿತೆ ಬರೆಯುವುದೂ ಒಂದು ಡ್ರಿಲ್ಲು, ಇನ್ನೊಬ್ಬನ ಆಜ್ಞೆಯನ್ನು ಹಿಂದೆ ಮುಂದೆ ಯೋಚಿಸದೇ ನಿರ್ವಹಿಸುವ ಒಂದು ಯಾಂತ್ರಿಕ ಥ್ರಿಲ್ಲು ಎಂದು ಸೂಚಿಸಿದ್ದು ಅವರದೇ ಒಂದು ಪದ್ಯದ ಭಾವವನ್ನು ತಿರುಗಾ ಮುರುಗಾ ಮಾಡಿ -
ಅಧಿಕಾರಿ ಬಂದೊಡನೆ ನನಗರಿಯದಂತೆಯೇ ಸಾರುವುದು
ಬಲಗೈ ಸಲಾಮ; ಪರತಂತ್ರ ನಾನಿನ್ನೂ,
ಹೊಟ್ಟೆಪಾಡ ಗುಲಾಮ

ಆ ಕಡೆಯಿಂದ ಶಿವಪ್ಪನವರ ಸಿಗರೇಟ್ ಕೇಳಿಸಿತು. ಸ್ವಾಮಿಯವರು ಟಾರ್ಚ್ ಲೈಟನ್ನು ಅಂಗುಲ ಅಂಗುಲಕ್ಕೆ ಬೀರುತ್ತ ಅಲ್ಲಿ ಯಾವ ತರದ ಉರಗವೂ ಇಲ್ಲವೆಂದು ಸ್ಪಷ್ಟ ಮಾಡಿಕೊಂಡನಂತರ ಮುಂದುವರಿದು ಬರುತ್ತಿದ್ದರು.
ಎಲೈ ವನಸ್ಥಳಂಗಳಿರ! ಎಲೈ ಕಾಡುಮೃಗಂಗಳಿರ! ಎಲೈ ಉರಗಂಗಳಿರ ಲಾಲಿಸಿರಿ! ಮಹಾಸ್ವಾಮಿ ಕೆಂಡಗಣ್ಣಸ್ವಾಮಿಯವರಿಲ್ಲಿರ್ಪನ್ನವರೆಗೀಕ್ಷೇತ್ರಂ ನಿಮಗೌಟಾಫ್ ಬೌಂಡ್ಸ್ - ಲಕ್ಷ್ಮಣನ ಗೀಟನ್ನಿಲ್ಲಿ ಎಳೆದಿರ್ಪೆಂ. ನೀಮೇನಾದರೂಮಿತ್ತ ಆಗಮಿಸುತ್ತಿರ್ಪೊಡೆಉರಗಂ ನಾಂ ಬರುತಿರ್ಪೆಂ ಎಂದು ಕೂಗಿ ಬಂದಪುದು. . . ಎಂದು ಮಂತ್ರಘೋಷವನ್ನು ಶಿವಪ್ಪ ಬಜಾಯಿಸಿದರು.
ಏನೋ ಶಿವಪ್ಪ! ನೀನು ಮಹಾಶೂರ. ನಿನ್ನೆ ರಾತ್ರಿ ಆ ಮಾವಿನ ಮರದವರೆಗೆ ಹೋಗಿಬರಬೇಕಾದರೆ ಹಿಂದೊಬ್ಬ ಮುಂದೊಬ್ಬ ನಿನಗೆ. ನೀನೇನು ನನ್ನನ್ನು ಚೇಷ್ಟೆ ಮಾಡುವುದು? ಸ್ವಾಮಿ ಮಾರ್ನುಡಿದರು. ಫಲಿತಾಂಶವಿಷ್ಟೇ: ಇಬ್ಬರ ಹೂರಣವೂ ಹೊರಬಿತ್ತು.

ಶಿಬಿರ ಅಷ್ಟರಲ್ಲಿಯೇ ಜೀವ ಸ್ಪಂದನದಿಂದ ಲಕಲಕಿಸುತ್ತಿತ್ತು. ಉಪಾಹಾರ ಮುಗಿಯಿತು. ಪ್ಯಾಕೆಟ್ ಲಂಚ್ ಕಟ್ಟಿಕೊಂಡು ಹೊರಡಬೇಕಾದವರು ಅದರ ಸಮೇತ ಹಾಜರಾದರು. ಮೂರು ಪಂಗಡಗಳಾಗಿ ಹುಡುಗರು ೬.೨೦ಕ್ಕೆ ನಿಂತರು. ಜನ, ಸಾಮಗ್ರಿ, ಆರೋಗ್ಯ ಎಲ್ಲವೂ ಕೂಲಂಕಷವಾಗಿ ಪರಿಶೀಲನೆಗೊಳಪಡಲು ಈ ೧೦ ಮಿನಿಟು ಅವಶ್ಯ. ತಡವಾಗಿ ಬರುವಾತನಿಗೆ ಈ ಅವಕಾಶ ಚುಚ್ಚಿ ಹೇಳುತ್ತದೆ ನೀನು ತಡ, ನೀನು ಸೋಮಾರಿ ಎಂದು.
ಜಮಾಲಾಬಾದಿಗೆ ಹೋಗಬೇಕಾದವರು ೧೧ ಮತ್ತು ೪ ಶಿಕ್ಷಕರು, ಹೀಗೆ ೧೫. ಕುದುರೆಮುಖದ ಸರಹದ್ದಿಗೆ ೧೧, ಶಿಬಿರದಲ್ಲಿ ೧೧. ಜಮಾಲಾಬಾದಿನ ತಂಡದಲ್ಲಿ ಮೂರು ಮಂದಿ ಕಡಿಮೆಯಿದ್ದರು. ಯಾರವರು?
ಮುಕುಂದನಿಗೆ ವಾಂತಿ, ತಲೆನೋವು ಎಂದು ಡಾಕ್ಟರರ ವಶದಲ್ಲಿದ್ದ. ಇನ್ನಿಬ್ಬರು? ಹಾಸಿಗೆ ಚಾ ಹೊತ್ತಿನಲ್ಲಿ ನೋಡಿದ್ದೆನೆಂದನೊಬ್ಬ. ಬೊಬ್ಬೆ ಹೊಡೆದು ಹೆಸರು ಹಿಡಿದು ಕೂಗಿದನಿನ್ನೊಬ್ಬ. ಆದರೆ ಆ ಹೆಸರಿನವನು ಅಲ್ಲಿಯೇ ಇದ್ದುದರಿಂದ “oversmart ಆಗದಿರು ಎಲೆ ನನ್ನ ಕಂದಾ! ಎಂದು ಹೇಳಿಸಿಕೊಂಡ. ನನ್ನ ಹತ್ತಿರ ಹೇಗೂ ಹಾಜರು ಪಟ್ತಿ ಇದೆಯಲ್ಲ. ಅವರ ಹೆಸರು ತಿಳಿಯಿತು.
.೨೫ಕ್ಕೆ ದೊರೆಗಳಿಗೆ ವರದಿಯೊಪ್ಪಿಸಿ ಆಯಿತು.
ಆ ಇಬ್ಬರು ಹುಡುಗರು ಏನಾದರು?
ಸರ್, ಅವರನ್ನು ಹಾಸಿಗೆ ಚಾ ಹೊತ್ತಿನಲ್ಲಿ ಕಂಡವರು ಬಹಳ ಮಂದಿ ಇದ್ದಾರೆ. ಕಾಡಿಗೆಲ್ಲೋ ಹೋಗಿರಬೇಕು ವಿಚಾರಿಸುತ್ತೇನೆ.
ವಿಚಾರಿಸಿ ಅವರಿಗೆ ಶಿಕ್ಷೆ ನೀಡಬೇಕು. ಉಳಿದವರು ಮುನ್ನಡೆಯಲಿ.
.೩೦ಕ್ಕೆ ಸರಿಯಾಗಿ ೧೨ನೇ ಮೈಸೂರು ಮೂರು ಭಾಗಗಳಾಗಿ ಕವಲೊಡೆದು ಹೊರಟಿತು. ನನ್ನ ಶಾಖೆಯಲ್ಲಿ (ಜಮಾಲಾಬಾದ್) ಇಬ್ಬರು ಕಡಿಮೆ. ನಾವು ಬಂಗ್ಲೆಯ ಅಂಗಳ ದಾಟುವಾಗ ಆ ಬುದ್ಧಿವಂತರಿಬ್ಬರೂ ಓಡಿ ಓಡಿ ಮೇಲುಸಿರು ಬಿಡುತ್ತ ಬಂದರು. ನಮ್ಮ ತಂಡವನ್ನು ಸೇರಲು ಅನುಮತಿ ಕೋರಿದರು. ತಾವು ಬಹಿರ್ದೇಶಕ್ಕೆ ಹೋಗಿದ್ದುದಾಗಿ ತಿಳಿಸಿದರು.
ಮಿತ್ರರೇ! ೧೨ನೇ ಮೈಸೂರಿನ ಅರ್ಥಕೋಶದಲ್ಲಿ ಎರಡು ಪದಗಳಿಗೆ ಸ್ಥಾನವಿಲ್ಲ - ಒಂದು ತಡವಾಗುವಿಕೆ; ಇನ್ನೊಂದು ಆಯಾಸ. ಇದಕ್ಕೆ ಅಪವಾದವಾದ ನೀವು ಈ ಮೂರು ದಿವಸವೂ ಶಿಬಿರ ಕೈದಿಗಳಾಗಿ ದುಡಿಯಬೇಕು.
ಕೇವಲ ಒಂದು ಮಿನಿಟ್ ತಡ, ಸರ್.
ಮಹಾಸ್ವಾಮಿ! ತಡದಲ್ಲಿ ಎರಡು ಮಿನಿಟಿನ ತಡ, ಎರಡು ಗಂಟೆಯ ತಡ ಎಂದು ತರತಮವಿಲ್ಲ. ಪ್ರಪಾತದಂಚಿನಲ್ಲಿ ಅರ್ಧ ಇಂಚು, ಕಾಲು ಇಂಚು ಎಂದಿಲ್ಲ. ಒಂದೋ ನೀವು ಈ ಕಡೆ ಸುರಕ್ಷಿತವಾಗಿದ್ದೀರಿ, ಇಲ್ಲ, ಆ ಕಡೆ ಹೊಂಡದಲ್ಲಿ ಬಿದ್ದಿದ್ದೀರಿ; ತ್ರಿಶಂಕುತ್ವವಿಲ್ಲ. ಹಾಗೆಯೇ ಕಾಲದ ವಿಚಾರವೂ. ಕೇವಲ ಸೆಕೆಂಡುಗಳ ತಡವಾಗುವಿಕೆಯಿಂದ ಯುದ್ಧಗಳೇ ಕಳೆದುಹೋಗಿವೆ.

ಅವರನ್ನು ಸೇರಿಸಿಕೊಳ್ಳಲಿಲ್ಲ. ಹುಡುಗರಲ್ಲಿ ಅನೇಕರಿಗೆ, ಇದನ್ನೋದುವ ಹಲವರಿಗೆ, ಇಂಥ ನಿಷ್ಠುರತೆ ಅಗತ್ಯವೇ, ಹುಡುಗರೊಡನೆ ಸ್ವಲ್ಪ ಸಹನೆ, ತಾಳ್ಮೆಯಿಂದ ವರ್ತಿಸಬೇಡವೇ ಎಂದು ತೋರಿದರೆ ತಪ್ಪಿಲ್ಲ. ಜಾತ್ರೆಗೆ ಹೋಗುವಾಗ, ಮದುವೆ ಮುಂಜಿ ಮುಂತಾದ ಕೌಟುಂಬಿಕ ಸಂತೋಷ ಸಮಾರಂಭಗಳಲ್ಲಿ ಭಾಗಿಯಾಗುವಾಗ ತಡವಾಗಿ ಬರುವುದೂ ಚಂದ, ಅವ್ಯವಸ್ಥೆಯಿಂದ ನಡೆದುಕೊಳ್ಳುವುದೂ ಚಂದ, ಏನು ಮಾಡಿದರೂ ಮಾಡದಿದ್ದರೂ ಚಂದ. ಅಲ್ಲಿ ಪ್ರೀತಿ ವಿಶ್ವಾಸಗಳು ಪ್ರಧಾನವಾಗಿರುವ ಪ್ರಪಂಚ. ನಾವು ವ್ಯಕ್ತಿಗಳ ಭವಿಷ್ಯ, ಜೀವಗಳೊಡನೆ ಆಟವಾಡುವುದಿಲ್ಲ. ಇಲ್ಲಿ ಹಾಗಲ್ಲ, ಇದೊಂದು ಉಚ್ಚ ಮಿಲಿಟರಿ ಶಿಕ್ಷಣ ಶಿಬಿರ. ಆರಿಸಿ ಬಂದ, ಹೊಣೆ ಸಂಪೂರ್ಣ ಅರಿತು ಯಾರೊಡನೆ ಕಾರ್ಯವೆಸಗುತ್ತೇವೆ ಎಂದು ತಿಳಿದ ಕ್ಯಾಡೆಟ್ಟುಗಳ ತಂಡ. ಇಲ್ಲಿ ಶಿಸ್ತು, ಕ್ರಮಬದ್ಧತೆ, ನಿಯಮಪಾಲನೆ ಪ್ರಧಾನ; ಪ್ರೀತಿ ವಿಶ್ವಾಸ ಎರಡನೇ ಸ್ಥಾನ. ಇಂಥಲ್ಲಿ ತಪ್ಪಿಗೆ ಆ ಕ್ಷಣ ಶಿಕ್ಷೆ ಆಗದಿದ್ದರೆ, ಒಂದನೆಯದಾಗಿ, ವ್ಯವಸ್ಥೆಯ ಹಿಡಿತ ಸಡಿಲವಾಗುವುದು. ಎರಡನೆಯದಾಗಿ, ಸಂಬಂಧಿಸಿದ ಹುಡುಗರಿಗೂ (ಇತರರಿಗೂ) ತಪ್ಪು ಮಾಡಿದರೂ ದಕ್ಕುತ್ತದೆ ಎಂದು ಪರೋಕ್ಷವಾಗಿ ವಿಷದ ಬೀಜ ಬಿತ್ತಿದಂತಾಗುವುದು. ಇನ್ನೂ ಒಂದು ವಿಚಾರವಿದೆ - ಎಲ್ಲವೂ ಟಾಪ್ ಗಿಯರಿನಲ್ಲಿ ನಡೆಯಬೇಕಾದ ಇಂಥ ಪ್ರಸಂಗಗಳಲ್ಲಿ ಪ್ರತಿ ನಟ್ಟೂ ಬೋಲ್ಟೂ ಜಾಯಿಂಟೂ ಅದರದರ ಕಾಯವನ್ನು ಆಗಿಂದಾಗಲೇ ನಿರ್ವಹಿಸದಿದ್ದರೆ ಇಡೀ ಎಂಜಿನ್ ಕೆಟ್ಟು ನಿಂತು ಹೋಗುವುದು. ಇಬ್ಬರು ಹುಡುಗರು ತಡವಾಗಿ ಬಂದುದರಿಂದ ನಮ್ಮ ಎಷ್ಟು ಕಾಲ, ಸಹನೆ ಅಪವ್ಯಯವಾದುವು!

ಕಾಲನಿಷ್ಠೆ, ಕ್ರಮಬದ್ಧ ಕಾರ್ಯ ನಿರ್ವಹಣೆ - ಇವೆರಡು ಜೀವನದ ವಿಶಿಷ್ಟ ರಂಗಗಳಲ್ಲಿಯೂ ಸರ್ವರಿಗೂ ಬಂದರೆ ದಾರಿದ್ರ್ಯ, ದುರ್ಭಿಕ್ಷೆ ಎಲ್ಲಿ ಉಳಿದಾವು?

(ಮುಂದುವರಿಯುವುದು)

4 comments:

  1. ಸೈಮನ್ ಲೋಬೋ ಅವರ ಮನೆ ಮತ್ತು ತೋಟ ಈಗ ಕುದುರೆಮುಖ ನ್ಯಾಶನಲ್ ಪಾರ್ಕಿಗೆ ಸೇರಿಬಿಟ್ಟಿದೆಯೆ? ಪ್ರೆಸಿಡೆಂಟ್ ಮೆಂಗಿಲ ಶೇಣವರನ್ನು ಕಾಣುವ ಬಾಗ್ಯ ನನಗೆ ಒದಗಿ ಬರಲಿಲ್ಲ. ಯಾವುದೋ ಗಂಧರ್ವ ಲೋಕದಲ್ಲಿ ಸುತ್ತಿದ ನೆನಪು. ಪ್ರೀತಿಯಿಂದ - ಪೆಜತ್ತಾಯ ಎಸ್. ಎಮ್.

    ReplyDelete
    Replies
    1. ಲೋಬೋ ಪಾಲುದಾರರು ಮೊದಲೇ ಮಾರಿಕೊಂಡು ಹೊರ ನಡೆದಿದ್ದರು. ಹೊಸಧಣಿಗಳ ಬಹುಮುಖೀ ಯೋಜನೆಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ನಿಯಮಗಳಿಗೆ ಸರಿಬರದೆ ನನೆಗುದಿಗೆ ಬಿದ್ದಿವೆ. ಅಲ್ಲಿನ ರಚನೆಗಳು, ಇಲಾಖೆಯ ಅನುಮತಿಯ ಮೇರೆಗೆ ಶಿಖರ ಸಂದರ್ಶಿಸಿ (ಉಳಿಯಲು ಅವಕಾಶವಿಲ್ಲ) ಮರಳುವ ಚಾರಣಿಗರಿಗೆ ತತ್ಕಾಲೀನ ವಸತಿ ಒದಗಿಸುತ್ತವೆ.
      ಅಶೋಕವರ್ಧನ

      Delete
  2. ಸರ್
    ಒಂದು ದಿನ "ಥಟ್ ಅಂತ" ಶುರುವಾದ ನಿಮ್ಮ ಎಲ್ಲಾ ಪೋಸ್ಟ್ ಗಳನ್ನೂ "ಚಿಟಿಕೆ ಹೊಡೆದು" ಓದುತ್ತಿರುವೆ. ಧನ್ಯವಾದಗಳು. "ಸಕ್ಕರೆ" ಸಿನಿಮಾ ಶೂಟಿಂಗ್ ಕುರಿತ ಬರಹ ವಿಶೇಷವಾಗಿ ಚೆನ್ನಾಗಿತ್ತು!
    ವೆಂಕಟಲಕ್ಷ್ಮಿ

    ReplyDelete
  3. ’ಪುರುಸೊತ್ತಿಲ್ಲ’ ಎಂದು ಹೇಳಿಯೇ ಗಂಟೆಗಳನ್ನು ಕೊಲ್ಲುವವರಿಗೆ ಜಿಟಿನಾರವರ ಮಾತು ಚಾಟಿಯೇಟಿನಂತಿದೆ.
    -ಕುಶಲ ಶೆಟ್ಟಿ, ಅಳಿಕೆ

    ReplyDelete