09 August 2013

ಮೈಸೂರು - ನೆನಪುಗಳ ಸರಮಾಲೆ

(ಮಹಾರಾಜ ನೆನಪು ಭಾಗ ಎರಡು)

ಮಹಾರಾಜಾ ಕಾಲೇಜಿನ ಒಳಾಂಗಣದಲ್ಲಿದ್ದೆವಲ್ಲಾ? ಇಲ್ಲಿ ಎರಡೂ ಮಗ್ಗುಲಿನಲ್ಲಿ ಒಳಚಾಚಿಕೊಂಡ ಕಟ್ಟಡ ಸಾಲಿನ ಕೊನೆಯಲ್ಲಿ ಎರಡು ಭಾರೀ ಕೊಠಡಿಗಳಿದ್ದಾವೆ. ಇವು ಜೂನಿಯರ್ ಮತ್ತು ಸೀನಿಯರ್ ಬೀಯೇ ಹಾಲೆಂದೇ ಪ್ರಸಿದ್ಧ. ಇವುಗಳ ಒಳಗೆ ಹಿಂದಕ್ಕೆ ಮಜಲುಗಳಲ್ಲಿ ಏರುತ್ತ ಹೋಗುವ ಆಸನ ವ್ಯವಸ್ಥೆಯಿದೆ. ಆ ಹಲಗೆ ನೆಲದ ಮೇಲೆ ನರಪೇತಲ ನಾರಾಯಣನಿಗೂ ನಡೆಯುವಾಗ ವಿಶೇಷ ಗತ್ತು ಬರುವುದಿದೆ! ಕಾಲೇಜಿನಲ್ಲಿ ಎನ್ಸಿಸಿ ಕವಾಯತು ಇದ್ದ ದಿನಗಳಲ್ಲಿ, ಮಾಮೂಲಿನಂತೆ ಬೂಟಿನ ಭಾರಕ್ಕೆ ಹೆಜ್ಜೆ ಎಳೆಯುವ ಕಡ್ಡೀಪೈಲ್ವಾನನೂ ಇಲ್ಲಿ ಮಾತ್ರ ಹಿಮ್ಮಡಿ ಗುದ್ದಿ, ಲಾಳದಡಿಯಲ್ಲಿ ಮರಳ ಕಣಗಳನ್ನು ಞರಕಿಸುವ ಚಂದ ನೋಡಬೇಕು! ಇಲ್ಲಿ ದೊಡ್ಡ ತರಗತಿಗಳು ಮಾತ್ರವಲ್ಲ ವಿಶೇಷ ಭಾಷಣಗಳೂ ನಡೆಯುವುದಿತ್ತು. ಮೊನ್ನೆಯಹೀಗೇ ನಡಿಗೆಯಲ್ಲಿ, ಅಂದರೆ ನಾಲ್ಕು ದಶಕಗಳ ಮೇಲೆ ಆ ಕೊಠಡಿಗಳ ಚಿತ್ರ ಸಂಗ್ರಹಿಸುವ ಬಯಕೆಯಲ್ಲಿ ಆ ತುದಿಗೆ ನಡೆದಿದ್ದೆ. ಆದರೆ ಎರಡೂ ಹಾಲ್ಗಳಲ್ಲಿ ಏನೋ ಪರೀಕ್ಷೆ ನಡೆಯುತ್ತಿದ್ದುದರಿಂದ ನನಗೆ ಅವಕಾಶ ಒದಗಲಿಲ್ಲ. ಅಲ್ಲಿಂದ ಮರಳುವಾಗ ಪಕ್ಕದ ಓಣಿಯಲ್ಲಿ ಮತ್ತೆರಡು ನೆನಪಿನೆಳೆಗಳು ನನ್ನನ್ನು ಜಗ್ಗಿದವು.


ಮೊದಲನೆಯದು ಇಂಡಾಲಜಿ ವಿಭಾಗ, ನನ್ನ ಲೆಕ್ಕಕ್ಕೆ ಅದು ಎನ್ಸಿಸಿ ಆಫೀಸು. ಮೇಜರ್ ಸಿಜಿ ಪುರುಷೋತ್ತಮ ಎನ್ನುವವರು ಬಹುಶಃ ಏಕೋಪಾಧ್ಯಾಯ ವಿಭಾಗವಾಗಿ ಅದನ್ನು ನಡೆಸುತ್ತಿದ್ದರು. ನನ್ನ ಕಾಲಕ್ಕೆ ಆ ಹಿರಿಯ ಅಧ್ಯಾಪಕ ಏನೋ ಅನಿವಾರ್ಯತೆಯಲ್ಲಿ ಆ ಅಂಶಕಾಲಿಕ ಆಫೀಸರ್ಗಿರಿಯನ್ನು ಉಳಿಸಿಕೊಂಡಂತಿತ್ತು. ಆದರೆ ನನ್ನದೋ ಕಾಲೇಜಿಗೆ ಹೋಗುವುದೇ ಎನ್ಸಿಸಿಗಾಗಿ ಎಂಬ ಮನೋಸ್ಥಿತಿ! ಅದನ್ನು ಕಿರಿದಾಗಿ ಹೇಳುವುದರೊಂದಿಗೆ ನನ್ನ ಒಂದಿಷ್ಟು ಎನ್ಸಿಸಿ ನೆನಪುಗಳು.

ತಂದೆ ಕೊಡಗಿನಲ್ಲಿದ್ದಾಗ ಕಾಲೇಜು ಹುಡುಗರಿಗೆ ಕೂಡಿಗೆಯಲ್ಲೋ ಕೊಟ್ಟಮುಡಿಯಲ್ಲೋ ವರ್ಷಾವಧಿ ಎನ್ಸಿಸಿ ಶಿಬಿರ ನಡೆಸಿದ್ದರು. ಆಗ ನನಗೆ ಐದೋ ಆರೋ ವರ್ಷ ಪ್ರಾಯ. ಆದರೂ ತಂದೆ ನನ್ನನ್ನು ಅಲ್ಲಿಗೆ ಕರೆದೊಯ್ದು, ತನ್ನ ಗುಡಾರದಲ್ಲುಳಿಸಿಕೊಂಡು (ಶಿಬಿರದ ಕೂಳಿಗೆ ಬಿಟ್ಟಿ ಗಿರಾಕಿಯಲ್ಲ. ‘ಪಾವತಿ ಕೊಟ್ಟು ಅತಿಥಿಎಂಬ ವ್ಯವಸ್ಥೆಯಲ್ಲಿ) ಶಿಬಿರವಲಯದಲ್ಲಿ ಸ್ವತಂತ್ರವಾಗಿ ಸುತ್ತಾಡಿಕೊಂಡಿರಲು ಬಿಟ್ಟಿದ್ದರು. ಏನೋ ಮಹಾಸಾಧನೆಗಾಗಿಯಲ್ಲ, ಸಾಮಾನ್ಯಜ್ಞಾನವರ್ಧನೆಗಾಗಿ ಇದ್ದಿರಬೇಕು. ಶಿಬಿರದ ರಾತ್ರಿಗಳಲ್ಲಿ ಮನರಂಜನೆಯ ಕಲಾಪವಿರುತ್ತಿತ್ತು. ಹಾಗೆ ಶಿಬಿರದ ಯಾವುದೋ ಮೂಲೆಯಲ್ಲಿ ಚಂಡೆ ಶಬ್ದ ಕೇಳಿ, ಯಕ್ಷಗಾನ ನೋಡುವ ಉತ್ಸಾಹದಲ್ಲಿ ತಂದೆಯ ಬಾಲವಾಗಿ ನಾನು ಓಡುತ್ತ ಗುಡಾರದ ಹಗ್ಗ ತೊಡರಿ ನಿರಪಾಯವಾಗಿ ಪಲ್ಟಿ ಹೊಡೆದದ್ದಷ್ಟು ನಿಚ್ಚಳ ನೆನಪು; ಉಳಿದದ್ದೆಲ್ಲ ಮಸಕು!

ಹೊಸಪೇಟೆಯಲ್ಲಿನ ಶಿಬಿರದಲ್ಲೂ ತಂದೆ ನನ್ನನ್ನು (ಆರೇಳನೇ ತರಗತಿಯ ಬಾಲಕ) ಉಳಿಸಿಕೊಂಡಿದ್ದರು. ಅಲ್ಲಿ ಕಾಲೇಜು ವಿದ್ಯಾರ್ಥಿಗಳೊಡನೆ ಸಮದಂಡಿಯಾಗಿ ನಾನೂ ಹಂಪಿಗೆ ನಡೆದು ಹೋಗಿದ್ದೆ (ರೂಟ್ ಮಾರ್ಚ್. ಅಂತರ ಏಳೆಂಟು ಮೈಲಿದ್ದಿರಬೇಕು.). ವಿರೂಪಾಕ್ಷ ದೇವಳದ ಪಕ್ಕದ ಕಲ್ಲ ಮಂಟಪದೊಳಗೇ ತಂಡ ರಾತ್ರಿ ತಂಗಿತ್ತು. ಅಲ್ಲಿ ವಿಜಯನಗರ ಕಾಲದ ಕಾಲುವೆ ಶುಭ್ರವಾಗಿ ಒದಗಿಸುತ್ತಿದ್ದ ನೀರಿನಲ್ಲೇ ನಮ್ಮ ಊಟ ಕಾಫಿಯಾದಿ ಶಿಬಿರಾವಶ್ಯಕತೆಗಳೆಲ್ಲಾ ನಡೆದದ್ದು, ಅದರ ಜೋಗುಳದಲ್ಲೇ ಎಲ್ಲ ನಿದ್ರೆ, ಕನಸು ಕಟ್ಟಿದ್ದು ಮರೆಯುವಂತೇ ಇಲ್ಲ. ಹೊಸಪೇಟೆ ಶಿಬಿರದಲ್ಲಿ ಇನ್ನೊಂದೇ ತಂಡದ ಚಾರಣಕ್ಕೂ ನಾನು ಜೊತೆಗೊಟ್ಟಿದ್ದೆ. ಜಂಬುನಾಥೇಶ್ವರ ಬೆಟ್ಟ ಹತ್ತಿ ಅದರ ಹಿಮ್ಮೈಗೆ ಇಳಿದು ತುಂಗಭದ್ರಾ ಅಣೆಕಟ್ಟಿನ ಹಿನ್ನೀರು ಮುಟ್ಟಿ ಮರಳಿದ್ದೂ ಅಷ್ಟೇ ರೋಚಕ ನೆನಪು.

ಅತಿಥಿಸರಣಿಯಲ್ಲಿ ಕೊನೆಯದು, ಬೆಂಗಳೂರಿನ ಮಾಗಡಿ ರಸ್ತೆಯ ಶಿಬಿರ. ಅದು ಸಮಾಜಸೇವಾ ಶಿಬಿರ ಎಂದೇ ಘೋಷಿಸಲ್ಪಟ್ಟಿತ್ತು. (ಮಾಮೂಲಿನಂತೆ ತರಬೇತು ಶಿಬಿರಗಳೇ ನಡೆಯುತ್ತವೆ. ಇಂಥಲ್ಲಿ ಪರಿಸರದ ಅಗತ್ಯಕ್ಕನುಗುಣವಾಗಿ ಶಿಬಿರಾರ್ಥಿಗಳು ಅರ್ಧ ದಿನ ಸಾಮಾಜಿಕ ಅಭಿವೃದ್ಧಿಗೆ ಬೇಕಾದ ದೈಹಿಕ ಶ್ರಮಗಳಲ್ಲಿ ತೊಡಗಿಕೊಳ್ಳುತ್ತಾರೆ) ಆಗ ನಾನು ಪ್ರೌಢಶಾಲಾ ವಿದ್ಯಾರ್ಥಿ. ತಂದೆ ನನಗೂ ಎನ್ಸಿಸಿ ಸಮವಸ್ತ್ರ ಕೊಡಿಸಿ, ಇತರ ವಿದ್ಯಾರ್ಥಿಗಳೊಡನೆ ಒಂದು ಗುಡಾರಕ್ಕೇ ಹಾಕಿದ್ದರು. ಬೆಳಗ್ಗೆ ಏಳುವಲ್ಲಿಂದ ರಾತ್ರಿ ಮಲಗುವವರೆಗೆ ನಾನು ಇತರ ಕ್ಯಾಡೆಟ್ಟುಗಳ ಜೊತೆ ಬಯಲಿನಲ್ಲಿ ಮಣ್ಣು ಅಗೆದು ಇಂಗು ಗುಂಡಿ, ತೆಗೆದ ಮಣ್ಣ ದಂಡೆ ಕಟ್ಟಿ ಹರಿನೀರಿಗೆ ತಡೆ ಮಾಡುವಲ್ಲಿ ಕೈ ಸೇರಿಸಿದ್ದೆ. ಸಣ್ಣ ಪುಟ್ಟ ಕವಾಯತುಗಳಲ್ಲೂ ಪಳಗಿದೆ. ಅಲ್ಲೇ ನಡುವೆ ಒಂದು ದಿನ ವಿಶೇಷ ಹುಡುಗರ ಪಡೆಯೊಡನೆ ಸಾವನ್ ದುರ್ಗ - ಬೃಹತ್ ಏಕಶಿಲಾ ಬೆಟ್ಟವನ್ನೂ ಏರಿಬಂದಿದ್ದೆ. (ವಿವರಗಳಿಗೆ ಓದಿ: ಜಿಟಿನಾ ಬರೆದ ಎನ್.ಸಿ.ಸಿ ದಿನಗಳು ಅಥವಾ ಇಲ್ಲೇ ಮಂಗಳವಾರಗಳಂದು ಧಾರಾವಾಹಿಯಾಗಿ ಬರುತ್ತಿರುವ ತಂದೆಯ ಆತ್ಮಕಥೆ - ಮುಗಿಯದ ಪಯಣ, ಇದರೊಳಗೆ ಕುದುರೆಮುಖದೆಡೆಗೆ ಅಧ್ಯಾಯಗಳು)

ಬೆಂಗಳೂರು ಗ್ಯಾಸ್ ಕಾಲೇಜಿನ ೧೨ನೇ ಮೈಸೂರು ಬಟಾಲಿಯನ್ ಒಂದು ಸಾಗರ. ಒಂದೇ ಕಾಲೇಜಿನಲ್ಲಿ ಎಂಟು ಕಂಪೆನಿಗಳು, ಅಷ್ಟೇ ಆಂಶಕಾಲಿಕ ಅಧಿಕಾರಿಗಳು, ವಿಶೇಷ ಪರ್ವತಾರೋಹಣ ತಂಡ ಎಲ್ಲ ಇತ್ತು. (ಪ್ಲಟೂನೊಂದರಲ್ಲಿ ಸುಮಾರು ೫೨ ಮಂದಿ. ಅಂಥ ಮೂರು ಪ್ಲಟೂನುಗಳ ಮೊತ್ತ, ಅಂದರೆ ಸುಮಾರು ೧೬೦ ಮಂದಿಗೆ ಒಂದು ಕಂಪೆನಿ. ಏಳೆಂಟು ಕಂಪೆನಿಗೆ ಒಂದು ಬಟಾಲಿಯನ್.) ಹೀಗೆ ಸುಮಾರು ಸಾವಿರಕ್ಕೂ ಮಿಕ್ಕ ಕ್ಯಾಡೆಟ್ ಸಾಗರದಲ್ಲಿ ಪದವಿಪೂರ್ವ ತರಗತಿಯ ನಾನು ಎಳೆಮೀನು. ನನ್ನ ಪರಮ ಲಕ್ಷ್ಯವಾದಹಿಮಾಲಯದಲ್ಲಿ ಪರ್ವತಾರೋಹಣ ತರಬೇತಿಗೆ ಆಯ್ಕೆಗೊಳ್ಳುವುದುಈಡೇರಲೇ ಇಲ್ಲ. ಬೇಸಗೆ ರಜೆಯಲ್ಲಿ ರಾಜಾಸ್ತಾನದಲ್ಲಿ ಮೂರು ವಾರಗಳ ಸೈನ್ಯ ಸಹಯೋಗದ ಶಿಬಿರದಲ್ಲಿ ಭಾಗಿಯಾಗಿ ಮರಳಿದ್ದೇ ಪರಮ ಭಾಗ್ಯ ಎಂದನ್ನಿಸಿತ್ತು. ಮಹಾರಾಜಾ ಕಾಲೇಜಿನಲ್ಲಿ ಎನ್ಸಿಸಿ ಒಂದು ಪುಟ್ಟ ಕೊಳ - ಇಪ್ಪತ್ತು ಮೂವತ್ತು ಮಂದಿಯ ಬಡಕಲು ಪ್ಲಟೂನ್ ಮಾತ್ರ. ಸಹಜವಾಗಿ ನನ್ನಲ್ಲಿನ ಹಿಮಾಲಯದ ಹಂಬಲಕ್ಕೆ ಸ್ಪರ್ಧಾಳುಗಳಿಲ್ಲ ಎಂಬುದರಿಂದ ಭಾರೀ ಉತ್ತೇಜಿತನಾಗಿಯೇ ಇದ್ದೆ. ಸಾಲದ್ದಕ್ಕೆ ತೇನ್ಸಿಂಗ್ ಶಿಷ್ಯ - ವಿ. ಗೋವಿಂದರಾಜರ ನೇತೃತ್ವದ ದಖ್ಖಣ ಪರ್ವತಾರೋಹಣ ಸಂಸ್ಥೆಯ ಕ್ರಿಯಾಶೀಲ ಸದಸ್ಯನಾಗಿದ್ದೆ.

ಮೈಸೂರು ವಿವಿನಿಲಯದ ಆಡಳಿತ ಕಛೇರಿ ಅರ್ಥಾತ್ ಕ್ರಾಫರ್ಡ್ ಹಾಲಿನೆದುರಿನ ಓವಲ್ ಗ್ರೌಂಡ್ಸ್ ನಮ್ಮ ಎನ್ಸಿಸಿಗೆ ಪರೇಡ್ ಗ್ರೌಂಡ್ಬಟಾಲಿಯನ್ನಿನಿಂದ ಮುಖ್ಯವಾಗಿ ಜೆಸಿಓ ಅಬ್ರಹಾಂ ಎನ್ನುವವರು ಬಂದು ಬಹಳ ಉತ್ಸಾಹದಿಂದ ತರಬೇತೇನೋ ಕೊಡುತ್ತಿದ್ದರು. ಆದರೆ ಪುರುಷೋತ್ತಮ್ ಎನ್ಸಿಸಿ ಕವಾಯತು ಮೈದಾನಕ್ಕೆ ಬಂದರೆ ಬಂದರು, ಬಿಟ್ಟರೆ ಬಿಟ್ಟರು. ಕಾಲೇಜಿನಲ್ಲಿ ಹುಡುಗರಿಗೆ  ಪ್ರೇರಕ ವಾತಾವರಣ ಕಲ್ಪಿಸಲೇ ಇಲ್ಲ. ಇಲಾಖೆಯ ಪರಿಪತ್ರಗಳು, ಸೌಲಭ್ಯಗಳು ವಿದ್ಯಾರ್ಥಿಗಳಿಗೆ ದಾಟಿದರೆ ದಾಟಿತು. ಆದರೆ ನಾನುಹಿಮಾಲಯದ ಕನಸಿಗೆ ಸುಲಭ ದಾರಿ ಎನ್ಸಿಸಿಎಂದೇ ಭಾವಿಸಿ ಶ್ರದ್ಧೆಯಿಂದ ದುಡಿದೆ. ಮೂರೂ ವರ್ಷ ಬಹುತೇಕ ಕಾಲೇಜ್ ಎನ್ಸಿಸಿ ತಂಡವನ್ನು ವಾರದ ತರಬೇತಿಗೆ ನಡೆಸುವುದು, ಹಾಜರಿ ಹಾಗೂ ಉಪಾಹಾರದ ಆವಶ್ಯಕತೆಗಳನ್ನು ಪೂರೈಸುವುದೇ ಮೊದಲಾದ ಚಿಲ್ಲರೆ ಕೆಲಸಗಳನ್ನು ದಕ್ಷತೆಯಿಂದ ನಡೆಸಿದೆ. ನಡೆದ ವಾರ್ಷಿಕ ಶಿಬಿರದಲ್ಲೂ (ಕಾಲೇಜು ತಂಡಕ್ಕೆ) ನನ್ನದೇ ನಾಯಕತ್ವ. ಆದರೆ ವಿಶೇಷಪಟ್ಟ ಸಂದರ್ಭಗಳಲ್ಲಿ (ಜನವರಿ ೨೬, ಆಗಸ್ಟ್ ೧೫ ಇತ್ಯಾದಿ) ಸಾರ್ವಜನಿಕರೆದುರು ಮೆರೆಯುವ ಅವಕಾಶದ ಕಾಲದಲ್ಲಿ ಮಾತ್ರ ಕಾಲೇಜಿನಲ್ಲೇ ಅಥವಾ ನಮ್ಮ ಬಟಾಲಿಯನ್ನಿನಲ್ಲೋ (ಇಲ್ಲಿನದು ಮೈಸೂರು ಮತ್ತು ಆಸುಪಾಸಿನ ಹಲವು ಕಾಲೇಜುಗಳ ಪ್ಲಟೂನುಗಳನ್ನು ಸೇರಿಸಿ ಸಂಯೋಜಿತವಾದ ವ್ಯವಸ್ಥೆ) ಇದ್ದ ಇನ್ಯಾರೋ ಕೆಲವು ಹಿರಿಯ ವಿದ್ಯಾರ್ಥಿ ಎನ್ಸಿಸಿ ನಾಯಕರು (ಜಯಣ್ಣ, ದಿಗ್ವಿಜಯರಾಮ್, ಶಿವಕುಮಾರ್, ನರೇಂದ್ರಸಿಂಹ ಎಂಬ ಹೆಸರುಗಳು ಅಸ್ಪಷ್ಟವಾಗಿ ನೆನಪಾಗುತ್ತವೆ; ಮುಖ ಅಲ್ಲ) ಹಾಜರಾಗಿ ಮೆರೆಯುತ್ತಿದ್ದರು. ಅವರೆಲ್ಲ ಪುರುಷೋತ್ತಮ್ ಹಾಗೂ ಬಟಾಲಿಯನ್ ಕಛೇರಿಯ ಸಂಪರ್ಕಗಳನ್ನು ಮಾತ್ರ ಜಾಣತನದಲ್ಲಿ ನಿರ್ವಹಿಸಿಕೊಂಡು, ಕೆಲವರು ಹಿಮಾಲಯದ ಶಿಬಿರ, ದಿಲ್ಲಿಯ ಗಣರಾಜ್ಯ ಶಿಬಿರವೇ ಮುಂತಾದವನ್ನು ವಶೀಕರಿಸಿಕೊಂಡು, ನನ್ನನ್ನು ವಂಚಿಸಿಬಿಟ್ಟರು. ಹಾಗೆ ಡಾರ್ಜಿಲಿಂಗಿನಿಂದ ಶಿಲಾರೋಹಣ ತರಬೇತಿಯ ಪ್ರಮಾಣಪತ್ರವನ್ನು, ಕೆಂಪು ಬ್ಲೇಝರನ್ನು (ಡಾರ್ಜಿಲಿಂಗ್ ಸಂಸ್ಥೆಯ ಲಾಂಚನ ಹೊತ್ತ ಕೋಟು) ಮೆರೆಸಿಕೊಂಡು ಬಂದವನೊಬ್ಬನನ್ನು ನಾನು ಚಾಮುಂಡಿ ಬೆಟ್ಟದ ನಮ್ಮ ಶಿಲಾರೋಹಣಕ್ಕೆ ಕರೆದಿದ್ದೆ.

ಪುಣ್ಯಾತ್ಮ ಖಾಸಗಿ ಮಾತಿನಲ್ಲಿ ಒಪ್ಪಿಕೊಂಡ, ಡಾರ್ಜಿಲಿಂಗಿನ ಶಿಬಿರಾವಧಿಯಲ್ಲಿ ಈತ ಬಹುತೇಕ ಅಸ್ವಾಸ್ಥ್ಯದ ನೆಪ ಮಾಡಿ (ಸಿಕ್ ರಿಪೋರ್ಟ್) ‘ಅಪಾಯಕಾರಿತರಬೇತಿನಿಂದ ಬಚಾವಾಗಿದ್ದನಂತೆ! (ನಮ್ಮ ಊರಿನ ಸಂಕಟಗಳಿಗೆ ವಿದೇಶಗಳಲ್ಲಿ ಅಧ್ಯಯನ ಮಾಡಲು ಹೋಗುವ ನಮ್ಮ ಬಹುತೇಕ ಜನಪ್ರತಿನಿಧಿಗಳು ಮಾಡುವುದು ಇದನ್ನೇ ಅಲ್ಲವೇ!) ಮೂರು ವರ್ಷಗಳ ಕೊನೆಯಲ್ಲಿ ನನಗೆ ದಕ್ಕಿದ್ದು ಮಾಮೂಲೀ ಎರಡು ವಾರ್ಷಿಕ ಶಿಬಿರ ಮತ್ತು ಮೈಸೂರು ದಸರಾ ಮೆರವಣಿಗೆಯಲ್ಲಿ ಕಾಲೆಳೆದದ್ದು. ತೀರಾ ನಿರಾಶೆ ಕಳೆಯಲು ಸಿಕ್ಕ ಒಂದೇ ವಿಶೇಷ ಶಿಬಿರ ಅಸ್ಸಾಮಿನ ಬಾರಾಪಾನಿಯಲ್ಲಿನಮುಂದುವರಿದ ನಾಯಕತ್ವ ಶಿಬಿರ.’ ಇದರ ಕುರಿತು ಹೆಚ್ಚಿನ ವಿವರಗಳಲ್ಲಿ ಮುಂದೆಂದಾದರೂ ಬರೆಯುತ್ತೇನೆ

ಹೆದರಬೇಡಿ, ನಾನುಇನ್ನೊಂದೇ ಎನ್ಸಿಸಿ ದಿನಗಳು ಪುಸ್ತಕ ಬೆಳೆಸುವುದಿಲ್ಲ. ಮಹಾರಾಜಾ ಕಾಲೇಜಿನ ಪಕ್ಕದ ಸಾಲಿನ ಇನ್ನೊಂದೇ ಕೋಣೆಯ ಮಹಿಮೆಯನ್ನೀಗ ಗಮನಿಸೋಣ. ಅದು ಈ ವಲಯಕ್ಕೆ ಮಾತ್ರವಲ್ಲ, ಭಾರತಕ್ಕೇ ಪ್ರಥಮ ಎನ್ನುವಂತೆ ಪತ್ರಿಕೋದ್ಯಮವನ್ನು ಅಧ್ಯಯನ ಶಿಸ್ತಿಗೊಳಪಡಿಸಿದ ಕೃಷ್ಣಮೂರ್ತಿ ನಾಡಿಗ್ ಅವರ ವಿಭಾಗ. ಇವರು ವಿದ್ಯಾರ್ಥಿಗಳ ಪ್ರಾಯೋಗಿಕ ಅಗತ್ಯಕ್ಕಾಗಿ ಒಂದು ಪತ್ರಿಕೆಯನ್ನು ಹೊರಡಿಸಿ, ಆಸಕ್ತರಿಗೆ ಉಚಿತವಾಗಿ ಹಂಚುತ್ತಿದ್ದರು. ನನ್ನದು ಕನ್ನಡ, ಇಂಗ್ಲಿಷ್ ಪ್ರಧಾನ ಮತ್ತು ಅರ್ಥಶಾಸ್ತ್ರ ಉಪಪ್ರಧಾನ ಐಚ್ಛಿಕಗಳು. ನಾನು ಪತ್ರಿಕೋದ್ಯಮ ವಿಭಾಗಕ್ಕೆ ಸೇರಿದವನೇ ಅಲ್ಲ. ಆದರೆ ನನ್ನ ಏನಾದರೂ ಬರೆಯುವ ಚಟಕ್ಕೆ ಇಂಬು ನಾಡಿಗರ ಪತ್ರಿಕೆಯಲ್ಲಿ ಸಿಗುತ್ತಿತ್ತು. ನಾನೇನೇ ಚುಟುಕು ಚೂರು ಬರೆದು ಕೊಟ್ಟರೂಪ್ರತಿಷ್ಠಿತ ಪತ್ರಿಕೆಗಳ ಹುಸಿ ಜಂಭವೇನೂ ಇಟ್ಟುಕೊಳ್ಳದೇ ಇವರು ಪ್ರಕಟಿಸುತ್ತಿದ್ದರು, ಮತ್ತಷ್ಟು ಬರೆಯಲು ಉತ್ತೇಜಿಸುತ್ತಿದ್ದರು.

ಬಹುಶಃ ನನ್ನ ಎರಡನೇ ಬೀಯೇ ಕಾಲಕ್ಕೆ ಪತ್ರಿಕೋದ್ಯಮ ವಿಭಾಗ ಪದೋನ್ನತಿ ಕಂಡು, ಮಾನಸಗಂಗೋತ್ರಿಗೆ ತನ್ನತಾಯಿಬೇರನ್ನೇ ವರ್ಗಾವಣೆಗೊಳಿಸಿಕೊಂಡಿತು. ಮತ್ತಲ್ಲಿ ಪತ್ರಿಕೋದ್ಯಮದಲ್ಲಿ ಪ್ರಥಮ ಬಾರಿಗೆ ಸ್ನಾತಕೋತ್ತರ ಪದವಿಯ ತರಗತಿಗಳೂ ನಡೆದವು. ಮಹಾರಾಜಾ ಹಾಗೂ ಮಾನಸಗಂಗೋತ್ರಿಯಲ್ಲಿ ನನ್ನಿಂದ ಒಂದು ವರ್ಷ ಮುಂದಿದ್ದ ಮತ್ತು ಬಹಳ ಕ್ರಿಯಾಶೀಲವಾಗಿದ್ದ ಈಶ್ವರ ದೈತೋಟ ಈ ವಿಭಾಗದ ಒಂದು ಅತ್ಯುತ್ತಮಉತ್ಪನ್ನ’! ನನ್ನ ಅಸ್ಪಷ್ಟ ನೆನಪಿನಲ್ಲಿ, ಮಹಾರಾಜದಲ್ಲೇ ಇಲಾಖೆಯನ್ನು ಮುಂದುವರಿಸಿದವರು ಸೈಯ್ಯದ್ ಇಕ್ಬಾಲ್ ಖಾದ್ರಿ ಮತ್ತು ಶ್ರೀಕರ ಭಂಡಾರ್ಕರ್ ಎನ್ನುವವರು. ಅವರ ಬಹುತೇಕ ವಿದ್ಯಾರ್ಥಿಗಳು ಕಾಲೇಜಿನ ವಲಯಗಳಲ್ಲಿ ನಡೆಯುವ ಯಾವುದೇ ವಿಶೇಷ ಕಾರ್ಯಕ್ರಮದಲ್ಲಿ ಪುಸ್ತಕ ಪೆನ್ನು ಹಿಡಿದು ಮುಂದಿನ ಆಸನಗಳಲ್ಲಿ ಕುಳಿತಿರುವುದು ಕಾಣುತ್ತಿದ್ದೆ. ಅನಂತರ ಅವರು ಕಲಾಪದ ಆಮಂತ್ರಣ ಪತ್ರಿಕೆಯ ವಿವರಗಳಿಗೆ, ಸಭೆಯಲ್ಲಿ ತಾವು (ಎಷ್ಟೋ ಬಾರಿ ತಪ್ಪುತಪ್ಪಾಗಿ ಗ್ರಹಿಸಿ) ಲಿಪೀಕರಿಸಿಕೊಂಡ ಭಾಷಣಕಾರರ ಮಾತುಗಳನ್ನು ಹೊಸೆದು, “ಹೇಳಿದರು, ಎಂದರು, ಮುಂದುವರಿಸುತ್ತ...” ಇತ್ಯಾದಿ ಪದಗಳನ್ನು  ಹಚ್ಚುತ್ತಿದ್ದುದೇ ಹೆಚ್ಚು. ನನ್ನಲ್ಲಿ ಬೆಟ್ಟಗುಡ್ಡಗಳ ವಿಭಿನ್ನ ಕಥನ, ಎನ್ಸಿಸಿ ಕಲಾಪ, ವಿಡಂಬನೆ, ಸಾಮಾಜಿಕ ಟೀಕೆ, (ಓದುಗರ ಗ್ರಹಚಾರಕ್ಕೆ ಅಬದ್ಧ) ಕವನಗಳೇ ಮೊದಲಾದ ಸ್ವತಂತ್ರ, ವಿಶ್ಲೇಷಣಾತ್ಮಕಐಟಂಗಳಿರುತ್ತಿತ್ತು. ಬಹುಶಃ ಈ ವೈವಿಧ್ಯ ಅಥವಾ ಶಾಸ್ತ್ರದ ಬಂಧಗಳಿಲ್ಲದೇ ಬರುತ್ತಿದ್ದ ಕಚ್ಚಾತನ ಪ್ರಾಯೋಗಿಕ ತರಗತಿಯ ಅಗತ್ಯಕ್ಕೆ ಒದಗುತ್ತವೆ ಎಂಬ ಸಂತೋಷಕ್ಕೋ ಆ ವಿಭಾಗದ ಎಲ್ಲ ಅಧ್ಯಾಪಕರೂ ನನ್ನ ಬರಹಗಳನ್ನು (ಮುಂದೆ ಇಂಗ್ಲಿಶ್ ಎಮ್ಮೆ ಮಾಡುವ ಕಾಲದಲ್ಲಿ ಅಲ್ಲೂ) ಸಾದರ ತೆಗೆದುಕೊಳ್ಳುತ್ತಿದ್ದರು, ಪ್ರಕಟಿಸುತ್ತಿದ್ದರು. ವಾಸ್ತವದಲ್ಲಿ ಇಂಗ್ಲಿಷ್ ಕನ್ನಡ ಪ್ರಧಾನ ಐಚ್ಛಿಕಗಳನ್ನು ಆಯುವ ಕಾಲಕ್ಕೆ ನಾನು ಪೂರಕವಾಗಿ ಒದಗುವ ಭಾಷಾ ಶಾಸ್ತ್ರ ಅಥವಾ ಪತ್ರಿಕೋದ್ಯಮ ತೆಗೆದುಕೊಳ್ಳಬೇಕೆಂದೇ ಪ್ರಯತ್ನಿಸಿದ್ದೆ. ಆದರೆ ಕಾಲೇಜಿನ ವೇಳಾಪಟ್ಟಿ ಮಾಡುವವರಿಗೆ ಇದು ಸರಿಬರಲಿಲ್ಲವಂತೆ! ಮಂಚದ ಅಳತೆಗೆ ಸರಿಯಾಗಿ ನಾನು ಕಾಲು ಕತ್ತರಿಸಿಕೊಂಡಂತೆ ನಾನು ಯಾವ ಕಲ್ಪನೆ ಅಥವಾ ಒಲವೂ ಇಲ್ಲದೇ ಉಪಪ್ರಧಾನ ವಿಷಯವಾಗಿ ಅರ್ಥಶಾಸ್ತ್ರದ ಮೊರೆಹೊಕ್ಕಿದ್ದೆ! ಹಾಗೆ ಅಧ್ಯಯನಾತ್ಮಕವಾಗಿ ಒದಗದ ವಿಷಯವನ್ನು ಪ್ರಾಯೋಗಿಕವಾಗಿ ದಕ್ಕಿಸಿಕೊಂಡಿದ್ದೆ ಎಂಬ ಹೆಮ್ಮೆಗೆ (ಭ್ರಮೆಯೂ ಇರಬಹುದು) ನನಗೆ ಅವಕಾಶಮಾಡಿಕೊಟ್ಟ ಪತ್ರಿಕೋದ್ಯಮ ವಿಭಾಗಕ್ಕೆ ನಾನು ಸದಾ ಋಣಿ.

ಪಕ್ಕದ ಸಾಲಿನ ಸಣ್ಣ ಕೋಣೆಗಳಲ್ಲಿ ಇನ್ನೊಂದು ನಮಗೆ ಪರ್ಯಾಯವಾಗಿ ಅರ್ಥಶಾಸ್ತ್ರಕ್ಕೂ ಕೆಲವು ಕನ್ನಡ ಐಚ್ಛಿಕ ಪಾಠಗಳಿಗೂ ಒದಗುತ್ತಿತ್ತು. ನಾನು ವ್ಯರ್ಥಶಾಸ್ತ್ರವೆಂದುಕೊಂಡೇ ಅನುಭವಿಸಿದ ಆ ತರಗತಿಗಳಲ್ಲಿ ನನಗೆ ಪಠ್ಯೇತರ ಮೋಜೊಂದು ಗಾಢವಾಗಿ ನೆನಪಿನಲ್ಲಿದೆ! ಕಾಲೇಜಿನಲ್ಲಿ ಹುಡುಗಿಯರು ತೀರಾ ಅಲ್ಪ ಸಂಖ್ಯಾತರು. (ಹುಡುಗಿಯರಿಗೇ ಮೀಸಲಾದ ಮಹಾರಾಣೀ ಕಾಲೇಜಿನಲ್ಲಿ ಇಲ್ಲದ ಐಚ್ಛಿಕಗಳನ್ನು ಬಯಸಿದ ಹುಡುಗಿಯರು ಮಾತ್ರ ಇಲ್ಲಿಗೆ ಬರುತ್ತಿದ್ದರು.) ಅವರರಕ್ಷಣೆಗಾಗಿ ಒಂದು ಕೋಣೆಯನ್ನೇ ಮೀಸಲಿಟ್ಟಿದ್ದರು. ಗಂಟಾನಾದದೊಡನೆ ವಿವಿಧ ತರಗತಿಗಳಿಗೆ ಮಹಿಳಾ ಕೋಣೆಯಿಂದ ಹೊರಟು ಧಾವಿಸುತ್ತಿದ್ದ ಹುಡುಗಿಯರು, ಮುಗಿದ ಕ್ಷಣದಲ್ಲಿ ಮತ್ತೆ ಸೇರುತ್ತಿದ್ದುದು ಅದನ್ನೇ. ಅರ್ಥಶಾಸ್ತ್ರದ ತರಗತಿಯಲ್ಲಿ ಎರಡೋ ಮೂರೋ ಹುಡುಗಿಯರಿದ್ದರು. ಪ್ರಾಯ ಸಹಜವಾದ ಆಕರ್ಷಣೆಯಲ್ಲಿ ನಮ್ಮ ಸಹಪಾಠಿ, ತುಸು ಕೀಟಲೆ ಸ್ವಭಾವದ ಭುಜಂಗ ಶರ್ಮ ಅವರನ್ನು ಪರೋಕ್ಷವಾಗಿ ಕೆಣಕುತ್ತಿದ್ದದ್ದು ನನ್ನಂಥ ಪುಕ್ಕಲರಿಗೆ ಅವ್ಯಕ್ತ ಆನಂದವನ್ನು ನೀಡುತ್ತಿತ್ತು! ಒಮ್ಮೆ ತರಗತಿ ಪ್ರಾರಂಭವಾಗುವ ಮುನ್ನ ಈ ಶರ್ಮ, ಒಂದು ಹುಡುಗಿಯ ಹೆಸರಿನ ಆದ್ಯಕ್ಷರಗಳನ್ನು ಸೇರಿಸಿ ದೊಡ್ಡದಾಗಿ BAKRI ಎಂದು ಬೋರ್ಡಿನ ಮೇಲೆ ಬರೆದಿದ್ದ. ಒಳ ಬಂದ ಅಧ್ಯಾಪಕಿ (ಬಹುಶಃ ಮಾಲಿ ಮುದ್ದಣ್ಣ) ನಗುನಗುತ್ತಲೇ ಅದನ್ನು ಬರೆದವರನ್ನೂ ಸಂಕೇತಾರ್ಥವನ್ನೂ ಪತ್ತೆ ಮಾಡಲು ಪ್ರಯತ್ನಿಸಿದರು. ಮತ್ತೆ ಹುಡುಗು ಸಂತೋಷಗಳನ್ನು ಹಾಳುಮಾಡಲಿಚ್ಛಿಸದೆ ಪಾಠ ನಡೆಸಿದರು. ಆದರೆ ಆ ಹುಡುಗಿ - ಬಿ.. ಕ್ಷಮಾರಾಣಿ, ನಾಚಿ ಕೆಂಪೇರಿದ್ದು ನೋಡಿ, ಎಲ್ಲಾ ಹುಡುಗರು ತೃಪ್ತಿಪಟ್ಟುಕೊಂಡದ್ದಂತೂ ಸುಳ್ಳಲ್ಲ!

ಇಷ್ಟು ಹೇಳಿದ ಮೇಲೆ ಅಲ್ಲೇ ನಡೆಯುತ್ತಿದ್ದ ಕನ್ನಡ ಐಚ್ಛಿಕ ತರಗತಿಯ ವಿಷಯ ಯಾಕೆ ಬಿಡಬೇಕು, ತುಸು ವಿಸ್ತರಿಸಿಬಿಡುತ್ತೇನೆ. ಕನ್ನಡ ಐಚ್ಛಿಕದಲ್ಲಿ ದೇವನೂರು ಮಹಾದೇವ ನನ್ನ ಸಹಪಾಠಿ. ಅವರಾಗಲೇ ತನ್ನ ಚೊಚ್ಚಲ ಕಥಾ ಸಂಕಲನ (ದ್ಯಾವನೂರು) ಪ್ರಕಟಿಸಿದ್ದರು. ಆದರೆ ನನ್ನ ಕಥಾ ಪರಿಕಲ್ಪನೆಒಂದೂರಿನಲ್ಲಿ ಒಬ್ಬ ಅಜ್ಜಿಯಿದ್ದಳು...’ ಮಟ್ಟದಿಂದ ವಿಶೇಷ ವಿಸ್ತರಿಸದ ಕಾರಣವೋ ಏನೋ ದ್ಯಾವನೂರು ನನಗೆ ಹಿಡಿಸಿರಲಿಲ್ಲ. ಕೆದರಿದ ಕೂದಲು, ಹರಕು ಗಡ್ಡ, ಮಾಸಲು ಬಟ್ಟೆಗಳ ಮಹಾದೇವ ಸಹಪಾಠಿಗಳೊಡನೆ ಹೆಚ್ಚು ಬೆರೆತವರಲ್ಲ. ದೇಹ ಸೌಷ್ಟವದಲ್ಲಿ ಅವರ ಅರ್ಧಕ್ಕೂ ಇಲ್ಲದ ಕ್ಷೀರಸಾಗರ ಎಂಬೊಬ್ಬನೊಡನೆ ಗೆಳೆತನ ಇದ್ದದ್ದು ನೋಡಿದ್ದೆ. ಅದೇ ತಾನೇ ಸ್ನಾತಕೋತ್ತರ ಪದವಿ ಪೂರೈಸಿ, ಅಧ್ಯಾಪನಕ್ಕಿಳಿದಿದ್ದ ಆಲನಹಳ್ಳಿ ಶ್ರೀಕೃಷ್ಣ ನಮಗೆ ಒಂದು ಪಾಠಕ್ಕೆ ಬರುತ್ತಿದ್ದರು. ತರಗತಿಯ ಹೊರಗೆ ದೇವನೂರು ಮತ್ತು ಆಲನಹಳ್ಳಿಯೂ ಪರಸ್ಪರ ಭುಜದ ಮೇಲೆ ಕೈಯಿಟ್ಟುಕೊಂಡು ಸಿಗರೇಟು ಹಂಚಿಕೊಳ್ತಾರೆ ಎಂದು ಕೇಳಿ ಬೆರಗುಪಟ್ಟಿದ್ದೆ. ಮಹದೇವ ವಿಕಸಿಸಿದ ಪರಿಸರ, ತಳೆದ ವೈಚಾರಿಕ ನಿಲುವುಗಳ ಯಾವುದೇ ಹೊಳಹು ನನಗೆ ಇರಲಿಲ್ಲ. ನಾನು ಮನೆ ಮತ್ತು ಕೌಟುಂಬಿಕ ಸಂಬಂಧಗಳಲ್ಲೆಲ್ಲೂ ಜಾತಿ ಅಂತಸ್ತುಗಳ ತರತಮ, ದುಃಖ ಸಂತೋಷಗಳಿಗೆ ಭಾವುಕತೆಯ ಪ್ರದರ್ಶನಗಳನ್ನು ಕಂಡವನೇ ಅಲ್ಲ. ಹಾಗಾಗಿಯೋ ಏನೋ ಆ ದಿನಗಳಲ್ಲಿ ಬಹುಶಃ ನಾನು ಮಹಾದೇವರನ್ನು ಮಾತಾಡಿಸಿದ್ದೇ ಇಲ್ಲ, ಅರ್ಥಮಾಡಿಕೊಳ್ಳುವ ಕಷ್ಟಕ್ಕೂ ಹೋದದ್ದಿಲ್ಲ. ಅತ್ತ ಸುಜನಾರ (ಕುವೆಂಪು, ಮಿತ್ರರು ಮುಂತಾದವರ ಕುರಿತ) ಭಕ್ತಿ ಮತ್ತು ಪ್ರೀತಿ, ಇತ್ತ ಮೈಸೂರರಸರ ಕುರಿತ ಜನರ ನಡಾವಳಿಗಳಿದ್ದಂತೆ ಮಹಾದೇವರ (ಮತ್ತು ಶ್ರಿಕೃಷ್ಣ ಆಲನಹಳ್ಳಿ) ಮನೋಭೂಮಿಕೆ ನನಗೆ ಗ್ರಾಹ್ಯವಾಗಲೇ ಇಲ್ಲ! ಈಚಿನ ದಿನಗಳಲ್ಲಿ ಬಿಡಿ, ವ್ಯಾವಹಾರಿಕವಾಗಿ (ಮಂಗಳೂರು ವಿವಿನಿಲಯ ಒಡಲಾಳವನ್ನು ಪಠ್ಯ ಮಾಡಿದಾಗ ನಾನೇ ಅದರ ಏಕೈಕ ವಿತರಕ) ನನ್ನ ದೇವನೂರರ ಪರಿಚಯ ಮತ್ತು ಸ್ನೇಹ ಗಾಢವಾಯ್ತು. ಮಹಾದೇವರಲ್ಲಿ ಅಂದು ಲೋಕಮುಖಕ್ಕೆ ಕಾಣುತ್ತಿದ್ದುದು ಸೆಡವು ಜಂಭಗಳಲ್ಲ, ಒಂದು ತೆರನ ವಿಷಾದವೇ ಇರಬೇಕು ಎಂದು ಈಗ ಅನಿಸುತ್ತದೆ!

ನನಗಿಂತ ಬಹಳ ಹಿರಿಯರಾದ ಎಸ್.ಎಲ್ ಭೈರಪ್ಪನವರ ಆತ್ಮಕತೆ ಭಿತ್ತಿ ನೆನಪಾಗುತ್ತದೆ. ಅಲ್ಲಿ ಅವರ ಪ್ರೌಢಶಾಲಾದಿನಗಳಲ್ಲಿ ಮನೆಪಾಠದ ಮಾಷ್ಟ್ರೊಬ್ಬರು ತನ್ನಗಿರಾಕಿಗಳಉತ್ತಮ (ಎಸ್ಸೆಸ್ಸೆಲ್ಸಿ) ಫಲಿತಾಂಶಕ್ಕಾಗಿ ಮಾಡುತ್ತಿದ್ದ ಅನಾಚಾರವನ್ನು ಬರೆದುಕೊಂಡಿದ್ದಾರೆ. ಹಳತೆಲ್ಲ ಹಸನು ಎಂಬ ನಮ್ಮ ಸಾಮಾನ್ಯ ನಂಬಿಕೆಯನ್ನು ಆ ಘಟನೆ ಹುಸಿ ಮಾಡಿಬಿಡುತ್ತದೆ. ಅದೇ ತೆರನಾಗಿ ನನ್ನ ನಲ್ವತ್ತು ವರ್ಷಗಳ ಹಿಂದಿನ ಕೆಲವು ಕಾಲೇಜು ನೆನಪುಗಳೂ ಅಂಥಾ ಭವ್ಯವಾಗೇನೂ ಇಲ್ಲ ಎನ್ನುವುದಕ್ಕೆ ಎರಡು ಅನಾಚಾರಗಳನ್ನು ಇಲ್ಲಿ ಸಖೇದ  ದಾಖಲಿಸುತ್ತಿದ್ದೇನೆ.

ಮೊದಲನೆಯದು, ವಿದ್ಯಾರ್ಥಿ ಸಂಘದ ಚುನಾವಣೆ. ಬಹುಶಃ ಯೋಗ್ಯತೆ, ಅಧ್ಯಯನಗಳು ಪುರಸ್ಕರಿಸಲ್ಪಡಬೇಕಾದ ವಿದ್ಯಾಲಯದ ವಿದ್ಯಾರ್ಥಿ ನಾಯಕತ್ವದಲ್ಲಿಅದೃಷ್ಟ ಪರೀಕ್ಷೆಗೆ ಅವಕಾಶ ಕಲ್ಪಿಸಿದ್ದು ಚುನಾವಣೆ. ಚುನಾವಣೆಯ ಪಡಿನೆಳಲು ಬನಾವಣೆ (ತಮಗೆ ಬೇಕಾದಂತೆ ತಿದ್ದಿಕೊಳ್ಳುವ ಕೆಲಸ). ಕರಪತ್ರ, ಪೋಸ್ಟರ್, ಮೈಕ್ ಕಟ್ಟಿದ ಕಾರಿನ ಗದ್ದಲಗಳೆಲ್ಲ ಆ ಕಾಲದ ಯಾವ ಸಾರ್ವಜನಿಕ ಚುನಾವಣೆಗಳಿಗೆ ಕಡಿಮೆಯಿಲ್ಲದಂತೆ ನಡೆಯುತ್ತಿತ್ತು. ಇಂದು ಸ್ಪಷ್ಟ ಕಾಣುವಂತಿರುವ ರಾಜಕೀಯ ಪಕ್ಷಗಳ ಹಸ್ತಕ್ಷೇಪ ನನ್ನ ಅರಿವಿಗೆ ಬರಲಿಲ್ಲ (ಇದ್ದಿರಬಹುದು). ಯಾವುದೇ ಸ್ಪಷ್ಟ ಆದಾಯ ಅಥವಾ ಅಧಿಕಾರದ ಬಲ ಕೊಡದ ಪದವಿಯಾದರೂ ಚುನಾವಣೆಗೆ ಹೂಡುತ್ತಿದ್ದ ಹಣ, ಒಡ್ಡುತ್ತಿದ್ದ ಆಮಿಷಗಳು ಈಗಲೂ ನನಗೆ ಆಶ್ಚರ್ಯ ಮೂಡಿಸುತ್ತವೆ. ಇವೆಲ್ಲವುಗಳ ಮೊತ್ತವಾಗಿ ಅದೊಂದು ವರ್ಷ, ಓರ್ವ ಪುಂಡ ವಿದ್ಯಾರ್ಥಿ (ನಾಯಕತ್ವ ಆಕಾಂಕ್ಷಿ ಎಂದು ಪ್ರತ್ಯೇಕ ಹೇಳಬೇಕೇ!) ಪ್ರಾಂಶುಪಾಲರ ಕೊಠಡಿಯೊಳಗೆ ಮತಗಣನೆಯ ವೇಳೆ ಚೂರಿ ತೋರಿಸಿ ಫಲಿತಾಂಶ ತನ್ನದಾಗುವಂತೆ ಮಾಡಿಕೊಂಡ ಘಟನೆ ನಲ್ವತ್ತು ವರ್ಷಗಳ ಹಿಂದಿನದಾದರೂ ಬಳ್ಳಾರಿ ಬೆಳಕಿನಲ್ಲಿ ಇಂದಿನಂತೆಯೇ ಇಲ್ಲವೇ?

ಎರಡನೇದು ಅದೇಬನಾವಣೆಕೊಟ್ಟ ನಮ್ಮ ತರಗತಿ ಮುಖಂಡನದು. ‘ಮದುವೆಯಲ್ಲಾದರೆ ವರನಾಗುತ್ತೇನೆ, ಮಸಣಕ್ಕಾದರೆ ಹೆಣವಾಗುತ್ತೇನೆಎನ್ನುವ ಇಂದಿನಜನಪ್ರೀಯ ಪ್ರತಿನಿಧಿಗೆ ಏನೂ ಕಡಿಮೆಯಾಗದ ವಿಕಲ್ಪವೇ ಈ ಬಾಲ ಪುಡಾರಿಯಲ್ಲಿತ್ತು. ವಿಶ್ವವಿದ್ಯಾನಿಲಯ ಅನುದಾನ ಆಯೋಗ ಬುಕ್ ಬ್ಯಾಂಕ್ ಹೆಸರಿನಲ್ಲಿ ಬಡವಿದ್ಯಾರ್ಥಿಗಳಿಗೆ ಇಡಿಯ ವರ್ಷದ ಪಠ್ಯಪುಸ್ತಕ ಮತ್ತು ಬರವಣಿಗೆ ಸಾಮಗ್ರಿಗಳ ಕಟ್ಟನ್ನು ಉಚಿತವಾಗಿ ಕೊಡುವ ಯೋಜನೆ ಘೋಷಿಸಿತು. ದಿನಕ್ಕೊಂದು ನಮೂನೆಯ ವಾಚು, ಅಂಗಿ ತೊಟ್ಟು ಬಂದು, ಚೇಲಾ ಬಳಗಕ್ಕೆ ಕ್ಯಾಂಟೀನ್ ಮೇಜುವಾನಿ ನಡೆಸುತ್ತಿದ್ದ ನಮ್ಮ ದಳವಾಯಿಗೆ ಅದರ ಮೇಲೆ ಮನಸ್ಸಾಯ್ತು. (ಹಾಗೆಂದು ಈತ ಓದು ಬರಹದಲ್ಲಿ ಆಸಕ್ತನೆಂದೇನೂ ಭಾವಿಸಬೇಡಿ.) ಈತ ಅರ್ಜಿಯನ್ನು, ಪೂರಕವಾದಬಡತನದ ಎಲ್ಲ ಪ್ರಮಾಣ ಪತ್ರಗಳ ಸಹಿತ ಗುಜರಾಯಿಸಿದ, ತಕರಾರಿಲ್ಲದೆ ಪಾಸಾಗುವಂತೆಯೂ ನೋಡಿಕೊಂಡ. ಆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಕಾಲೇಜಿನ ಶತಮಾನೋತ್ಸವ ಭವನದಲ್ಲಿತ್ತು. ಅಲ್ಲಿ ಸಾಂಕೇತಿಕವಾಗಿ ಮುಖ್ಯ ಅತಿಥಿಗಳ ಕೈಯಿಂದಲೇ ಪುಸ್ತಕದ ಕಟ್ಟನ್ನು ಪಡೆಯುವವರ ಪಟ್ಟಿಯಲ್ಲಿ ಮೊದಲ ಹೆಸರುನಮ್ಮವನದೇ.’ ಅಂದು ತರಗತಿ ಮುಗಿಸಿ, ಶತಮಾನೋತ್ಸವ ಭವನಕ್ಕೆ ಹೊರಡುವ ಮುನ್ನ ಈ ಶಿರೋಮಣಿ ನಿಜ ಬಡ ಸಹಪಾಠಿಯೊಬ್ಬನ ಬಳಿ ತತ್ಕಾಲೀನವಾಗಿ ತನ್ನ ಕತ್ತಿನ ಚೈನು, ಉಂಗುರ, ವಾಚುಗಳನ್ನು ಕೊಟ್ಟು ಆತನ ಹಳೆಯ ಮಾಸಲು ಅಂಗಿಯನ್ನು ತೊಟ್ಟು ನಡೆದದ್ದು ಇಂದೂ ಕಣ್ಣಿಗೆ ಕಟ್ಟಿದಂತಿದೆ! ಯಾರಿಗೆ ಗೊತ್ತು, ಇತಿಹಾಸ ಪುಸ್ತಕಗಳಲ್ಲಿ ಮಹಾತ್ಮ ಗಾಂಧಿಯ ಬಗಲಿಗೆ (ಅಥವಾ ಬದಲಿಗೆ?) ರಾ-ಹುಳ ಗಾಂಧಿಯ ಪುಣ್ಯಕಥೆ ಸೇರುವುದಾದರೆ ಮಾದೂ ಬಳಗದ ನಮ್ಮಯ ಕಾಲೇಜೂ...” ರಾಷ್ಠ್ರಗೀತೆಗೆ ಇವರ ಹೆಸರುಗಳನ್ನೂ ಸೇರಿಸುವ ದಿನ ಬರಬಹುದು.

ಹಿಂದಿನ ಕಂತಿನ ಕೊನೆಯಲ್ಲಿ ಹೇಳಿದಂತೇ ಮೈಸೂರು ಕಾಲೇಜು ದಿನಗಳ ನೆನಪಿನ ಸರಮಾಲೆಯನ್ನು ಪುನಃ ನಿಮ್ಮ ಪ್ರತಿಕ್ರಿಯೆ ನೋಡಿಕೊಂಡು ಮುಂದೆಂದಾದರೂ ಇನ್ನಷ್ಟು ಬಿಚ್ಚುತ್ತೇನೆ (ಅಥವಾ ಕೈ ಬಿಡುತ್ತೇನೆ).

13 comments:

  1. ಕೈಬಿಡುವ ಆವಶ್ಯಕತೆ ಇಲ್ಲ. ಪ್ರತಿಕ್ರಿಯಿಸದೆ ಓದುವವರು ಬಹುಮಂದಿ ಇರುತ್ತಾರೆ

    ReplyDelete
  2. ಅಂದಿನ ಮತ್ತು ಇಂದಿನ ಕಾಲೇಜು ವಾತಾವರಣದ ತುಲನೆಗೆ ತಮ್ಮ ಲೇಖನ ತುಂಬಾ ಉಪಯುಕ್ತ. ಕಾಲೇಜಿನೊಳಗೇ ಮರಿ ಪುಡಾರಿಗಳು ಮೊಳೆತು ಬೆಳೆಯುತ್ತಿದ್ದ ರೀತಿಯನ್ನು ಕಂಡು ಅಚ್ಚರಿಯಾಯಿತು. ಬಹಳ ಉಪಯುಕ್ತವಾಗಿ ಮತ್ತು ರಂಜಕವಾಗಿ ಬರುತ್ತಾ ಇದೆ ಈ ಸರಣಿ. ಕೈ ಬಿಡುವ ಆಲೋಚನೆ ಏಕೆ?
    - ಪೆಜತ್ತಾಯ ಎಸ್. ಎಮ್.

    ReplyDelete
  3. In order to preserve the materials for an intellectual biography of our milieu your memories along with that of your father's is important. Please continue.
    Narahari

    ReplyDelete
  4. ನೀವು ನಿರೂಪಿಸುತ್ತಿರುವ ಕಾಲಾವಧಿಯಲ್ಲಿ ಮಹಾರಾಜ ಕಾಲೇಜಿನ ಚುನಾವಣೆಗಳಲ್ಲಿ ಹೊಡೆದಾಡಿ ಚಾಕುಚೂರಿಗಳನ್ನು ಮಿಂಚಿಸಿ ಮೆರೆದ ಅನೇಕರು ಮುಂದೆ ಮಾನಸಗಂಗೋತ್ರಿಯಲ್ಲಿ ಪ್ರಾಧ್ಯಾಪಕರಾಗಿದ್ದು ನಿಜ, ವಿದ್ಯಾರ್ಥಿಗಳಿಗೆ ಯಾವ ಗತಿ ಕಾಣಿಸಿದರೋ ತಿಳಿಯದು..

    ReplyDelete
  5. Dear Ashok,
    Chennagi bartha ide.
    Idara jothege aagina socio-economic conditions thilisuvantha prasangagalu bandre innoo artha poornavagirabahudu. Idu nanna annisike.

    ReplyDelete
  6. ಅಶೋಕವರ್ಧನ ಜಿ.ಎನ್09 August, 2013 13:02

    ಪ್ರಿಯ ಶ್ರೀನಿವಾಸ್
    ಆ ವಿಚಾರದಲ್ಲಿ (ಕತ್ತೆ-) ಬಡವ ನಾನು. ‘ನಾನೂ ನನ್ನ ಕನಸೂ’ಗಳಿಂದ ಆಚೆಗೆ ನನ್ನ ಗಮನ ಹೋದದ್ದು ಭಾರೀ ಕಡಿಮೆ. ನೋಡಿ, ಶ್ರ‍ಿಕಂಠದತ್ತ, ದೇವನೂರು ಅಂತಹ ದೊಡ್ಡ ಸಾಮಾಜಿಕ ಅಂತರದ ವ್ಯಕ್ತಿಗಳಿದ್ದರು. ನಾನು ಆಶ್ಚರ್ಯಪಟ್ಟಿದ್ದೆನಾದರೂ ಇಬ್ಬರನ್ನು ಕನಿಷ್ಠ ಸಹಪಾಠಿಗಳು ಎನ್ನುವ ಮಟ್ಟದಲ್ಲೂ ಮಾತಾಡಿಸಿ ನೋಡಿದವನೇ ಅಲ್ಲ. ಆಗ ನನ್ನ ಸಹಪಾಠಿಯಾಗಿದ್ದ ದೇರಾಜೆ ಮೂರ್ತಿ (ಮ್ಯಾಜಿಕ್ ವಾಲಾ) ತುಂಬ ದೀರ್ಘವಾಗಿ ಬರಿತಾ ಇದ್ದಾರೆ. ಇನ್ನೆರಡು ವಾರ ಬಿಟ್ಟು ಇಲ್ಲೇ ಪ್ರಕಟಿಸುತ್ತೇನೆ. ಆ ಕಾಲದಲ್ಲೇ ಇದ್ದ, ನೀವು ಯಾಕೆ ಒಂದು ಕೈ ನೋಡಬಾರದು. ಕಾಲೇಜು ಫಿಲೊಮಿನಾವಾದರೇನು ಕಾಲ ಒಂದೇ ಅಲ್ವಾ?

    ಹಾಗೇ ನಮ್ಮಿಂದ ಒಂದು ತರಗತಿ ಹಿಂದಕ್ಕಿದ್ದು ಇಲ್ಲಿ ಪ್ರತಿಕ್ರಿಯಿಸುತ್ತಲೂ ಇರುವ ಟಿ.ಎಸ್ ಗೋಪಾಲ್ ಅವರೂ ಮನಸ್ಸು ಮಾಡುತ್ತಾರೆ, ಬರೆಯುತ್ತಾರೆ ಎಂದು ಆಶಿಸುತ್ತೇನೆ.

    ReplyDelete
  7. ನೆನಪುಗಳ ಬರಹ ಸುಂದರವಾಗಿ ಬರುತ್ತಿದೆ. ಗಾಡಿ ಸರಾಗವಾಗಿ, ನಿರಂತರವಾಗಿ ಬರುತ್ತಿರಲಿ. ಧನ್ಯವಾದಗಳು.

    ReplyDelete
  8. ಕೈ ಬಿಡಬೇದ್ರಿ. ಇನ್ನಷ್ಟು ನೆನಪುಗಳು ಬರಲಿ.

    ReplyDelete
  9. Please continue the series sir.

    Though I have not studied here, I am happy to be indirectly linked.

    I grew up listening to stories of my father's & father-in-law's golden memories of Maharaja College days.

    Happy to be friends with you. Pleasure reading your articles.

    Shankar Junior (Tejaswi)

    ReplyDelete
  10. ಲಗೇ ರಹೊ ಎಂದು ಎನ್.ಸಿ.ಸಿಯಲ್ಲಿ ಹೇಳುವುದಿಲ್ಲವೆ!

    ReplyDelete
  11. ಕೆ. ಚಂದ್ರಶೇಖರ ಕಲ್ಕೂರ11 August, 2013 11:48

    ಪ್ರಿಯ ಅಶೋಕರೆ, ವಂದೇಮಾತರಮ್.
    ಮುಂದುವರಿಸಿ. ಇದರಿಂದ ಪ್ರೇರೆಪಣೆ ಹೊಂದಿ. ನಿಮ್ಮ ಬರವಣಿಗೆಯಲ್ಲಿರುವ ಕುಂದು ಕೊರತೆಗಳನ್ನು ಸರಿಪಡಿಸಿ ತಮ್ಮ ತಮ್ಮ ಸವಿ ನೆವಪುಗಳನ್ನು ಇತರರು ಬರೆಯಬಹುದು. ಶ್ರೀನಿವಾಸರು ಎಂದಂತೆ ಆಗಿನ ಆರ್ಥಿಕ ಸಾಮಾಜಿಕ ರಾಜಕೀಯ ಧಾರ್ಮಿಕ ಜೀವನಗಳ ಕುರಿತು ಕೂಡಾ ಅಲ್ಲಲ್ಲಿ ಉಲ್ಲೇಖಿಸಿ. ಅದು ಮುಂದಿನ ಚರಿತ್ರಾಕಾರರಿಗೆ ಅಧ್ಯಯನಕ್ಕೆ (reference) ಅನುಕೂಲವಾಗುತ್ತದೆ.

    ReplyDelete
  12. ಮುಂದುವರಿಯಲಿ ಸರಣಿ
    ಮಾಲಾ

    ReplyDelete
  13. Thank u sir,
    though i am in mysore, i havn't seen Maharaja College as close as you. Thanhs again.

    ReplyDelete