27 August 2013

ಬರಸಿಡಿಲು ಬಡಿಯಿತು


 

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ ವಿ-ಧಾರಾವಾಹಿಯ ಕಂತು ಹತ್ತೊಂಬತ್ತು ಅಧ್ಯಾಯ ನಲ್ವತ್ತು

ಹೀಗೆ ನಮ್ಮ ವಿಶಿಷ್ಟ ಪ್ರಯತ್ನಗಳೂ ನಾಟಕವೊಂದರಲ್ಲಿ ಸನ್ನಿವೇಶಗಳು ಮೊದಲೇ ನಿಯಮಿಸಿದಂತೆ ಅನಾವರಣಗೊಳ್ಳುವ ರೀತಿಯಲ್ಲಿ, ಕುದುರೆಮುಖದೆಡೆಗೆ ಸಂಗಮಿಸಿ ಹರಿಯುತ್ತಿದ್ದುವು. ಈ ಘಟನಾಪರಂಪರೆಗಳನ್ನು ಅವುಗಳಿಂದ ಪ್ರತ್ಯೇಕವಾಗಿ ನಿಂತು ಸಿಂಹಾವಲೋಕಿಸುವಾಗ ನನಗೇ ಆಶ್ಚರ್ಯವಾಗುತ್ತಿತ್ತು. ಯಾವ ಶಕ್ತಿ ಒಂದು ಕಡೆ ನಮಗೆ ಪ್ರೇರಣೆ, ಚೇತನ ನೀಡಿ ಇವನ್ನು ನಮ್ಮಿಂದ ನಿರ್ವಹಿಸುವಂತೆ ಮಾಡುತ್ತಿದ್ದಿತೋ ಅದೇ ಶಕ್ತಿ ಇನ್ನೊಂದು ಕಡೆ ಒಂದು ದೊಡ್ಡ ದುರಂತ, ದುಃಖಮಯ ಘಟನೆಗೂ ಅದೇ ವೇಳೆ ಪೀಠಿಕೆ ಹಾಕುತ್ತಿದ್ದಿತು.

ನಮ್ಮ ಶಿಕ್ಷಣ ಮುಗಿದ ದಿವಸ ದೊರೆಗಳು, ಸ್ವಲ್ಪ ಅರ್ಜೆಂಟಾಗಿ ನಾನು ಬೆಂಗಳೂರಿಗೆ ಹೋಗಬೇಕಾಗಿದೆ. ನನ್ನ ಮಗನ ಬಟ್ಟೆಗೆ ಬೆಂಕಿ ತಗಲಿ ಅವನನ್ನು ಆಸ್ಪತ್ರೆಗೆ ದಾಖಲಿಸಿದ್ದಾರಂತೆ... ಎಂದು ಗಡಿಬಿಡಿಯಿಂದ ಹೋದರು. ಬೆಂಗಳೂರಿಗೆ ಮರಳಿದ ಮೇಲೆ ನಾವು ವಿಚಾರಿಸಿದಾಗ ಆತನ ಮೈಗೆ ಮೇಲಿಂದ ಮೇಲೆ ಸ್ವಲ್ಪ ಮಾತ್ರ ಬೆಂಕಿಯ ಉರಿ ಹತ್ತಿತ್ತು, ಅಪಾಯವೇನೂ ಇಲ್ಲ ಎಂದು ಅವರೇ ವೈದ್ಯರ ಅಭಿಪ್ರಾಯವನ್ನು ತಿಳಿಸಿದರು. ಮಗ ಸ್ವತಃ ಎಂಬಿಬಿಎಸ್ ಪರೀಕ್ಷೆಯನ್ನು ಆ ಹಿಂದೆ ಪಾಸು ಮಾಡಿದ್ದ ತರುಣ. ಜನವರಿ ಎರಡನೇ ವಾರದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮರಂಭದಲ್ಲಿ ಡಿಗ್ರಿ ಪಡೆಯಬೇಕಿತ್ತು. ಆಸ್ಪತ್ರೆ ಅವನ ಮನೆಯಂತೆಯೇ ಇದ್ದುದರಿಂದ ಅಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯುತ್ತಿತ್ತು. ಬೇಗನೆ ಅವನು ಗುಣ ಹೊಂದುತ್ತಾನೆ ಎಂದು ನಾವೆಲ್ಲರೂ ತಿಳಿದಿದ್ದೆವು. ಆದರೆ ಪರಿಸ್ಥಿತಿ ತದ್ವಿಪರೀತವಾಗಿತ್ತು. ಸುಟ್ಟ ಗಾಯ ಹೊರಗಿನಿಂದ ತೀವ್ರವಾಗಿರಲಿಲ್ಲ, ನಿಜ. ಅದರ ಶಾಖ ಮಾತ್ರ ಒಳಗಿನ ಕೋಮಲ ಭಾಗಗಳಿಗೆ ಜಖಂ ಮಾಡಿರಬೇಕು. ದಿನೇ ದಿನೇ ಪರಿಸ್ಥಿತಿ ಉಲ್ಬಣಿಸುತ್ತ ಹೋಯಿತು. ಹಗಲೂ ಇರುಳೂ ದೊರೆಗಳು ಮಗನ ಜತೆಯಲ್ಲಿಯೇ ಇರಬೇಕಾದ ಸನ್ನಿವೇಶ. ಯುದ್ಧರಂಗದಲ್ಲಿ ಗುಂಡುಗಳ ಮಳೆಯ ನಡುವೆ, ಜನ ಮಿಡತೆಗಳಂತೆ ಬೀಳುತ್ತಿದ್ದಾಗ ನಾನು ಬದುಕಿ ಬಂದದ್ದು ಈ ಪರಿಸ್ಥಿತಿ ನೋಡಲೆಂದೇ? ಎಂದು ಉದ್ಗರಿಸಿದಾಗ, ಜಪಾನೀ ಕೈದಿಯಾಗಿ ಹಲವು ವರ್ಷವಿದ್ದ ನಾನು, ಅವರ ಚಿತ್ರಹಿಂಸೆಗೊಳಗಾಗಿಯೂ ಖಾಯಿಲೆ ಕಸಾಲೆಗೆ ಸಿಕ್ಕಿಯೂ ಉಳಿದು ಬಂದುದು ಈ ದುಃಖ ಅನುಭವಿಸಲೆಂದೇ? ಎಂದು ರೋದಿಸಿದಾಗ ಉತ್ತರ ಕೊಡಬಹುದಾದ ಶಕ್ತಿ (?) ಉತ್ತರವೀಯಲಿಲ್ಲ. ಉತ್ತರ ಕೊಡಲಾಗದ ನಾವು ದಿಗಂತವನ್ನು ನೋಡಿ ಬಿಸುಸುಯ್ದೆವು. ಅವರಾಗಿಯೇ ಒಂದು ದಿನ ಹೇಳಿದರು, ಈ ಪರಿಸ್ಥಿತಿಯಲ್ಲಿ ನಾನು ಕುದುರೆಮುಖ ಶಿಬಿರಕ್ಕೆ ಬರುವಂತಿಲ್ಲ. ಅದರ ಕೊನೆಯ ಹಂತದ ಏರ್ಪಾಡನ್ನೂ ಮಾಡುವಂತಿಲ್ಲ. ನೀನೀ ವಿಶಿಷ್ಟ ಹೊಣೆಗಾರಿಕೆಯನ್ನೂ ಹೊತ್ತು ಮುಂದುವರಿಸಿಕೊಂಡು ಹೋಗಬೇಕು.


ನಾನೆಂದೆ, ಈ ಶಿಬಿರವನ್ನು ನಡೆಸುವ ನಡೆಸದಿರುವ ಪ್ರಶ್ನೆ ನನಗೆ ಬರುವುದೇ ಇಲ್ಲ. ನಾವು ಒಂದು ಕೂಟವಾಗಿ ಸ್ವಸಂತೋಷದಿಂದ ಆಯ್ದುಕೊಂಡ ಸಾಹಸವಿದು. ಇದರಲ್ಲಿ ಮುಖ್ಯ ಸೂತ್ರಧಾರರಾದ ನೀವೇ ಬಂದು ನಮ್ಮೊಡನೆ ಇದ್ದು ನಮ್ಮ ಚಟುವಟಿಕೆಗಳಿಗೆ ಆಧಾರ, ಸ್ಥಿರತೆ ನೀಡದಿದ್ದರೆ ಅಂಥ ಶಿಬಿರ ಬರೀ ಯಾಂತ್ರಿಕ ಎನಿಸುತ್ತದೆ. ಯಾಂತ್ರಿಕತೆ, ಉತ್ಸಾಹಹೀನತೆ ಇಂಥ ಸ್ವಯಂಸ್ಫೂರ್ತ ಶಿಬಿರಗಳಲ್ಲಿ ಎಲ್ಲಿಯೂ ತಲೆದೋರಬಾರದು. ಮತ್ತೆ ನೀವಿಲ್ಲಿ ಈ ವಿಷಾದಮಯ ವಾತಾವರಣದಲ್ಲಿರುವಾಗ ನಾವು ಅಲ್ಲಿ ಹೇಗೆ ಸಂತೋಷದಿಂದಿರುವುದು? ಅಲ್ಲದೇ ನಿಮಗೆ, ನಿಮ್ಮ ಮಗನ ಚಿಂತೆಯೊಡನೆ ಕುದುರೆಮುಖಕ್ಕೆ ಹೋದ ೩೭ ಮಕ್ಕಳ ಚಿಂತೆಯೂ ಸೇರುವುದು. ದೂರವಿದ್ದಾಗ ಚಿಂತೆ ಹೆಚ್ಚಷ್ಟೆ. ಆದ್ದರಿಂದ ಈ ಶಿಬಿರವನ್ನು ಮುಂದೂಡೋಣ. ನಿಮ್ಮ ಕುಮಾರ ಅಪಾಯದಿಂದ ಪಾರಾದ ಮೇಲೆ ಸಂತೋಷದಿಂದ ನಡೆಸೋಣ.

ನಮ್ಮನ್ನು ಹಿಂದೆ ಸಾವನದುರ್ಗಕ್ಕೆ ಕಳಿಸಿದ ಇವರು, ಖುದ್ದು ನಾನೇ ಹುಡುಗರ ಜತೆಯಲ್ಲಿ ಹೋಗಿದ್ದರೂ ನಾವು ಮರಳುವತನಕ ಆಹಾರ, ವಿಶ್ರಾಂತಿ ಸರಿಯಾಗಿ ಪಡೆಯದೇ ಅಸಹಾಯಕರಾಗಿ ಉದ್ವಿಗ್ನತೆಯಿಂದ ಚಡಪಡಿಸುತ್ತಿದ್ದರಂತೆ. ಆ ಕಡೆಯಿಂದ ಬರುವ ಪ್ರತಿ ಬಸ್ಸನ್ನೂ ತಡೆದು ನಮ್ಮ ವಿಚಾರ ಪ್ರಶ್ನಿಸುತ್ತಿದ್ದರಂತೆ. ನಾವು ಮರಳುವಾಗ ರಾತ್ರಿ ೧೧ ಗಂಟೆಯಾಗಿತ್ತು. ರಾತ್ರಿ ಏರಿದಂತೆ ಅವರ ಉದ್ವಿಗ್ನತೆ ಏರಿತಂತೆ. ನಾವು ಹಿಂತಿರುಗಿದ ಮೇಲೆಯೇ ಅವರು ಶಾಂತರಾದರು. ಕ್ಯಾಂಪಿನ ಪ್ರತಿ ಮಗುವೂ ತನ್ನ ಮಗುವೆಂದೇ ತನ್ನ ರಕ್ಷಣೆಯಲ್ಲಿ ಇರುವ ಪವಿತ್ರ ನಿಧಿಯೆಂದೇ ಅವರ ವಿಶ್ವಾಸಪೂರ್ವಕ ನಂಬಿಕೆ. ಅದೇ ರೀತಿಯ ವರ್ತನೆ. ಇಂಥವರು ನಮ್ಮನ್ನು ೨೦೦ ಮೈಲು ದೂರದ ಕುದುರೆಮುಖದ ಅಜ್ಞಾತ ಔನ್ನತ್ಯದ ಅಪಾಯದೆಡೆಗೆ ಕಳಿಸಿ ಇಲ್ಲಿ ಸುಮ್ಮನೆ ಕುಳಿತಾರೇ?

ಅವರು ಒಪ್ಪಲಿಲ್ಲ, ನಾವು ನಿಶ್ಚೈಸಿದ ತಾರೀಕಿಗೆ ಹೊರಡಲೇಬೇಕು. ಮಗನ ಅಂದಿನ ಪರಿಸ್ಥಿತಿ ನೋಡಿ ನಿಮ್ಮ ಜೊತೆಯಲ್ಲಿ ಅಲ್ಲಿಯವರೆಗೆ ಬಂದು ಒಂದೆರಡು ದಿನವಿದ್ದು ಹಿಂತಿರುಗುತ್ತೇನೆ. ಇಲ್ಲ, ಶಿಬಿರ ನಡೆಯುತ್ತಿರುವಾಗ ನಡುವೆ ಬಂದು ಸೇರಿಕೊಳ್ಳುತ್ತೇನೆ. ಬೆಟಾಲಿಯನ್ ಕೈಗೊಂಡ ನಿರ್ಧಾರ ನನ್ನೊಬ್ಬನ ಹಿತಾಸಕ್ತಿಗಳನ್ನು ಅನುಸರಿಸಿ ಬದಲಾಗಬಾರದು.

ಅವರ ಮಗನ ಪರಿಸ್ಥಿತಿ ಅತಿ ಚಿಂತಾಜನಕವಾಗಿತ್ತು. ನನಗಾಗಲೀ ನಮ್ಮ ಹುಡುಗರಿಗಾಗಲೀ ಯಾರಿಗೂ ಉತ್ಸಾಹವಿರಲಿಲ್ಲ.
ಬೆಟಾಲಿಯನ್ ಕಮಾಂಡರನ್ನು ಬಿಟ್ಟು ಬೆಟಾಲಿಯನ್ ಇಲ್ಲ. ಈ ಸಂದರ್ಭದಲ್ಲಿ ನಾನು ಗುರುತರ ಹೊಣೆ ಹೊರಲಾರೆ. ಆದ್ದರಿಂದ ಶಿಬಿರವನ್ನು ಮುಂದೂಡುವುದೊಂದೇ ಮಾರ್ಗ ಎಂದು ನಾನು ಹಠ ಹಿಡಿದೆ. ಅವರು ಏನೂ ಅನ್ನಲಿಲ್ಲ. ಹುಡುಗರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಸಂಗತಿ ವಿವರಿಸಿದೆ. ಅವರಿಗೆಲ್ಲ ಹತಾಶೆ ಆಯಿತು, ನಿಜ. ಆದರೆ ನನ್ನ ನಿರ್ಧಾರವನ್ನು ಅವರು ಪೂರ್ತಿಯಾಗಿ ಅನುಮೋದಿಸಿದರು.

ಕುಮಾರ ಉಳಿಯಲಿಲ್ಲ. ಶಿಬಿರ ಮುಂಡೂಡುವ ನಿರ್ಧಾರ ಕೈಗೊಂಡೊಡನೆ (ಜನವರಿ ೧೦) ನಾವು ಡಾರ್ಜಿಲಿಂಗಿಗೆ ತಂತಿ ಕಳಿಸಿದೆವು. ಶೆರ್ಪಾ ಶಿಕ್ಷಕ ಬರುವುದು ಬೇಡವೆಂದು. ಆದರೆ ಅಷ್ಟರಲ್ಲಿಯೇ ಅಲ್ಲಿಂದ ಒಬ್ಬನಲ್ಲ, ಉತ್ಸಾಹೀ ತರುಣರಿಬ್ಬರು ಹೊರಟು ಬಿಟ್ಟಿದ್ದರು. ಆ ದುರ್ದಿನದ ಬೆಳಗ್ಗೆ(ಜನವರಿ ೧೫) ಅವರೂ ಬಂದಿಳಿಯಬೇಕೇ. ದೈವದ ಕ್ರೂರ ಪ್ರಹಾರವೆಂದರೆ ಇದೇ. ಅವರ ಖರ್ಚು ವೆಚ್ಚವಿತ್ತು ದುಃಖದಿಂದ ಹಿಂದೆ ಕಳಿಸಿದೆವು. ಬೇರಾವ ಮಾರ್ಗವೂ ಇರಲಿಲ್ಲ. 

ತೊರೆ ಹರಿಯಿತು
ಅಧ್ಯಾಯ ನಲ್ವತ್ತೊಂದು

ಜನವರಿ ಕೊನೆಯ ವಾರದಲ್ಲಿ ದೊರೆಗಳು ಆಫೀಸಿಗೆ ಬಂದರು. ಈಗ ಅವರಲ್ಲಿ ಮೊದಲಿನ ಗೆಲುವಿಲ್ಲ. ದೃಷ್ಟಿ ಅಂತರ್ಮುಖಿಯಾಗಿದೆ. ಕರ್ತವ್ಯ ನಿರ್ವಹಣೆಯೊಂದೇ ಜೀವನದ ಪರಮಪದವಿ ಪಡೆಯುವ ದಾರಿ ಎಂದು ತಿಳಿದು ಅನುಷ್ಠಾನಕ್ಕೆ ತಂದವರಿವರು. ಕಚೇರಿಯ ಫೈಲುಗಳನ್ನೂ ಹಳೆಯ ಕಾಗದ ಪತ್ರಗಳನ್ನೂ ಓದುತ್ತಿದ್ದರು. ಫೋನಿಗೆ ಉತ್ತರ ಕೊಡುತ್ತಿದ್ದರು. ನಾನು ಸುಮ್ಮನೆ ಅವರೆದುರು ಕುಳಿತಿದ್ದೆ. ಏನನ್ನು ಹೇಗೆ ಮಾತಾಡಲಿ? ಅವರೇ ತೊಡಗಿದರು, ಹಾಗಾದರೆ ಇನ್ನು ಮುಂದಿನ ದಾರಿ ಏನೆಂದು ಯೋಚನೆ ಮಾಡಿದ್ದೀಯೆ?
ಈಗಿನ ಸನ್ನಿವೇಶದಲ್ಲಿ...
ಸನ್ನಿವೇಶ ಮುಗಿಯಿತಲ್ಲ, ಯೂನಿವರ್ಸಿಟಿಗೆ, ಹುಡುಗರಿಗೆ ಕೊಟ್ಟ ಮಾತು ನಾವು ಉಳಿದವರು ಪೂರೈಸಲೇಬೇಕಷ್ಟೆ.
ಆದರೆ ನೀವೀಗ ನಿಮ್ಮ ಮನೆ ಮಠ ಬಿಟ್ಟು ಅಷ್ಟು ದೂರ ಬರುವುದು ಸಾಧ್ಯವೇ, ಸರಿಯೇ? ಆರೋಗ್ಯ ಸರಿಯಾಗಿ ಉಳಿದೀತೇ?
ಸ್ವಲ್ಪ ಹೊರಗೆ ಹೋಗಿ ಬರುವುದೇ ಹಿತಕರ. ಹುಡುಗರ ಸಹವಾಸ ಈಗ ಮನಸ್ಸಿಗೆ ಅಗತ್ಯವಾದ ಠಾನಿಕ್. ಕ್ಯಾಲೆಂಡರ್ ನೋಡಿ, ತಿರುವಿ ಫೆಬ್ರುವರಿ ೧೧ರಿಂದ ೨೦ರ ತನಕ ಶಿಬಿರ ನಡೆಸುವುದೆಂದು ನಿಶ್ಚೈಸಿದೆವು. ಮತ್ತೆ ಪುನಃ ಬೇರೆ ಬೇರೆ ಇಲಾಖೆಗಳಿಗೆ ಪತ್ರ ಬರೆದೆವು. ಶೆರ್ಪಾಗಳಿಗೆ ಮಾತ್ರ ಬರೆಯಲಿಲ್ಲ.

ಕಾಗದದ ಕುದುರೆಮುಖ
ಅಧ್ಯಾಯ ನಲ್ವತ್ತೆರಡು

ಮುಂದಿದ್ದ ಅವಧಿ ೧೨ ದಿವಸ ಮಾತ್ರ. ಆಗಬೇಕಾಗಿದ್ದ ಕೆಲಸ ಅಗಾಧವಾಗಿತ್ತು. ಆಹಾರ ಸಾಮಗ್ರಿಗಳ ಶೇಖರಣೆ; ಡೇರೆ ಮತ್ತು ಶಿಕ್ಷಣ ಸಾಮಗ್ರಿಗಳ ಕ್ರಮಬದ್ಧ ಜೋಡಣೆ; ಎರಡು ಮಿಲಿಟರಿ ಲಾರಿಗಳನ್ನು ಓಡಿಸಲು ಮಿಲಿಟರಿ ಅಧಿಕಾರಿಗಳಿಂದ ಅನುಮತಿ; ಅಡುಗೆಯವರ ಏರ್ಪಾಡು; ಹುಡುಗರಿಗೆ ಪೋಷಾಕು, ಸರಂಜಾಮು ಕೊಟ್ಟು ಅವರನ್ನು ಸಿದ್ಧಪಡಿಸುವುದು. ಇವುಗಳಲ್ಲಿ ಯಾವುದೇ ಒಂದು ಸರಿಯಾಗಿ ಆಗದಿದ್ದರೂ ಶಿಬಿರ ನಡೆಯುವಂತಿಲ್ಲ.

ನಮ್ಮ ಬೆಟಾಲಿಯನ್ನಿನ ಬೆನ್ನೆಲುಬು, ಎಲ್ಲಿಯೂ ಎಂದೂ ಪ್ರತ್ಯೇಕವಾಗಿ ಪ್ರಕಾಶಕ್ಕೆ ಬರದೇ, ಆದರೆ ಎಲ್ಲೆಲ್ಲಿಯೂ ತಮ್ಮ ದಕ್ಷತೆಯ ಕುರುಹನ್ನು ಬೀರುವ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಕ್ಯಾಪ್ಟನ್ ಎಚ್.ಎನ್. ಅಶ್ವತ್ಥನಾರಾಯಣ. ಒಂದು ಸಾವಿರದಷ್ಟು ದೊಡ್ಡ ಕ್ಯಾಂಪೂ ಅಶ್ವತ್ಥರಿಗೆ ಲೀಲಾಜಾಲ. ಆಹಾರ ಮತ್ತು ಇತರ ಏರ್ಪಾಡುಗಳು ಸಂಪೂರ್ಣವಾಗಿ ಅವರವೇ. ೧೨ನೇ ಮೈಸೂರಿನ ಕ್ಯಾಂಪ್ ಎಂದರೆ ಅಶ್ವತ್ಥರ ಕ್ಯಾಂಪು. ಅದಕ್ಕೆ ಬರಲು ಬೇರೆ ಬೆಟಾಲಿಯನ್ನಿನ ಹುಡುಗರಿಗೂ ತವಕ. ಅಷ್ಟು ಪುಷ್ಕಳ ಮತ್ತು ಸಮೃದ್ಧ ಆಹಾರವನ್ನಿವರು ಒದಗಿಸುವರು. ನಿಜವಾದ ಕ್ಯಾಂಪು ನಡೆಸಿ ಮುಗಿಯುವಾಗಲೇ ಅದರ ಲೆಕ್ಕಪತ್ರಗಳ ಪರಿಶೋಧನೆಯೂ (audit) ಆಗಬೇಕು. ಯುದ್ಧರಂಗದ ವೀರಾಧಿವೀರರು ಈ ಪರಿಶೋಧನೆಯ ಕಾಗದದ ಯುದ್ಧದಲ್ಲಿ ಬಸವಳಿದು, ಕ್ಯಾಂಪು ಆಡಿಟ್ಟಿಗಾಗಿಯೋ ಆಡಿಟ್ ಕ್ಯಾಂಪಿಗಾಗಿಯೋ? ಎಂದು ಕೇಳುವ ಪರಿಸ್ಥಿತಿ ಹೆಚ್ಚು. ಅಶ್ವತ್ಥರಿಗೆ ಇಲ್ಲಿಯೂ ತೊಂದರೆ ಇಲ್ಲ. ಇವರ ಕೆಲಸ ಕಾರ್ಯ ಅಷ್ಟೊಂದು ಕ್ರಮಬದ್ಧವಾದುದರಿಂದ ಎಡಗಾಲಾದ ಮೇಲೆ ಬಲಗಾಲು ಮುಂದಕ್ಕೆ ತಂತಾನೇ ಹೋಗುವಂತೆ ನಿಜ ಕ್ಯಾಂಪೂ ಪೇಪರ್ ಕ್ಯಾಂಪೂ ಎರಡೂ ಇವರಿಗೆ ಸಮಾನ ಸುಲಭವೇ.

ಅಶ್ವತ್ಥರಿಗೆ ಬೆಟಾಲಿಯನ್ ಕೆಲಸ ಉಸಿರು ಕಟ್ಟಿಸುವಷ್ಟು ಇದ್ದುದರಿಂದ ಕುದುರೆಮುಖದ ವಿಚಾರದಲ್ಲಿ ತೊಂದರೆ ಇದುವರೆಗೆ ಕೊಟ್ಟಿರಲಿಲ್ಲ. ಈಗ ಆಹಾರದ ವ್ಯವಸ್ಥೆ ಮಾಡಲು ಇವರೇ ಸರಿಯೆಂದು ಇದನ್ನೂ ಅಡುಗೆಯವರನ್ನು ದೊರಕಿಸಿಕೊಡುವ ಹೊಣೆಯನ್ನೂ ಇವರಿಗೆ ವಹಿಸಲಾಯಿತು. ಮಾಡೋಣ ಎಂಬ ಹಸನ್ಮುಖ ವಾಣಿ ಮಾತ್ರ ಇವರಿಂದ ಬಂದ ಉತ್ತರ. ಲಾರಿಯ ಏರ್ಪಾಡನ್ನು ಒಂದೂರಿಂದ ಇನ್ನೊಂದೂರಿಗೆ ಹೊರಡಿಸುವ ಮುನ್ನ ಲಾರಿ ಭಾರದ ಪತ್ರ ವ್ಯವಹಾರ ನಡೆಸಿರಬೇಕು. ಉಳಿದಿದ್ದ ೧೦-೧೨ ದಿವಸಗಳಲ್ಲಿ ಪತ್ರಗಳೊಡನೆ ದೊರೆಗಳೇ ನಡೆಯದಿದ್ದರೆ ಅನುಮತಿ ಸಕಾಲದಲ್ಲಿ ದೊರೆಯಲಾರದು. ಒಂದು ವಾರವಿರುವಾಗಲೇ ಎರಡು ಲಾರಿಗಳ ಚಾಲನೆಗೂ ಅನುಮತಿ ದೊರೆಯಿತು. ಒಂದು ಲಾರಿ ನಮ್ಮ ಬೆಟಾಲಿಯನ್ನಿನದೇ; ಇನ್ನೊಂದು ಬೇರೆ ಒಂದು ಬೆಟಾಲಿಯನ್ನಿನದು. ಉಳಿದ ಸಮಸ್ಯೆಗಳ ಪರಿಹಾರ ನನ್ನ ಮಟ್ಟದಲ್ಲಿ ಪಡೆಯಲು ಸಾಧ್ಯವಿತ್ತು. ಹೀಗೆ ನಾವು ಮೂರು ದಾರಿಗಳ ಮೂಲಕ ಕುದುರೆಮುಖದ ಶಿಖರದೆಡೆಗೇರುವ ಪ್ರಯತ್ನದಲ್ಲಿ ನಿತ್ಯ ನಿರತರಾಗಿದ್ದೆವು.

ಈ ಮಧ್ಯೆ ದೈವ (?) ಎರಡನೇ ಪರೀಕ್ಷೆಯನ್ನು ದೊರೆಗಳ ಮುಂದೆ ಒಡ್ಡಿತು. ಅವರ ತೊಂಬತ್ತರ ಸಮೀಪದ ಆರಡಿ ಮೂರಿಂಚು ಎತ್ತರದ ಭೀಮಸದೃಶ ತಂದೆ, ಮೊಮ್ಮಗನ ಅಕಾಲ ನಿಧನದಿಂದ ಬಲುಗಾಸಿಗೊಂಡ ಹಿರಿಯ ಚೇತನ, ಒಂದು ದಿವಸ ಕುರ್ಚಿಯಲ್ಲಿ ಕುಳಿತಿದ್ದಂತೆಯೇ ತಲೆತಿರುಗಿ ಕೆಳಗೆ ಬಿದ್ದರು. ಆಗ ಅವರ ಕಾಲಿನ ಮೂಳೆ ಮುರಿಯಿತು. ಮನಸ್ಸು, ದೇಹಗಳ ನೋವು, ಪ್ರಾಯ ೯೦. ಇನ್ನು ಮೂಳೆ ಕೂಡುವುದು ಉಂಟೇ? ಆದರೂ ಪ್ರಯತ್ನ ಮಾಡಲೇಬೇಕು. ನೋವಾದರೂ ಉಪಶಮನವಾದೀತು. ಪುನಃ ಆಸ್ಪತ್ರೆಯ ಯಾತ್ರೆ ದೊರೆಗಳಿಗೆ ಪ್ರಾಪ್ತಿಯಾಯಿತು. ಪ್ರಾಣಾಪಾಯವಿದ್ದಂತೆ ತೋರಲಿಲ್ಲ. ಆದರೆ ೯೦ರ ಪಕ್ವ ಪರಿಸ್ಥಿತಿಯಲ್ಲಿ ಏನೂ ಆಗಬಹುದು.

ಈ ಸಲ ಏನೇ ಆದರೂ ಕ್ಯಾಂಪು ನಡೆದೇ ತೀರಬೇಕು ಎಂದು ಅವರಾಗಿಯೇ ನನಗೆ ಹೇಳಿದರು. ಮನೆಯಲ್ಲಿ ವೃದ್ಧೆ ತಾಯಿ, ಆಸ್ಪತ್ರೆಯಲ್ಲಿ ಜಖಂಗೊಂಡ ತಂದೆ, ಮಧ್ಯೆ ಎಡೆತಡೆಯಿರದ ಹೊಣೆಗಾರಿಕೆಗಳ ಪರಂಪರೆ. ಅವರ ಧೀರೋದಾತ್ತ ವ್ಯಕ್ತಿತ್ವ ಇವುಗಳಿಗೆಲ್ಲ ಸಮತೂಕವಾಗಿ ಎದ್ದು ನಿಂತು ಕರ್ತವ್ಯ ನಿರ್ವಹಿಸಿತು.

ನಮ್ಮ ಲಾರಿಯೇನೋ ಸರಿಯಾಗಿತ್ತು. ಬೇರೆ ಬೆಟಾಲಿಯನ್ನಿನ ಲಾರಿ ಮಿಲಿಟರಿ ವರ್ಕ್‌ಷಾಪಿಗೆ ಆ ಮೊದಲೇ ರಿಪೇರಿಗಾಗಿ ಹೋಗಿತ್ತು. ಎರಡು ಮೂರು ದಿವಸಗಳಲ್ಲಿ ಎಲ್ಲ ಸರಿಯಾಗುವುದೆಂದು ಕಾರ್ಯಾಗಾರದವರು ಆಶ್ವಾಸನೆಯಿತ್ತಿದ್ದರು. ಆದರೂ ದೊರೆಗಳು ಪ್ರತಿದಿನ ತಂದೆಯವರೊಡನೆ ಕಳೆದಷ್ಟೇ ಹೊತ್ತು ಮಿಲಿಟರಿ ಕಾರ್ಯಾಗಾರದಲ್ಲಿಯೂ ಕಳೆಯುತ್ತಿದ್ದರು. ರಿಪೇರಿಯ ಪ್ರಗತಿ ಏನೂ ಸಾಲದು, ಲಾರಿಯಲ್ಲಿರುವ ನ್ಯೂನತೆಗಳು ಹಲವಾರು ಎಂದೇ ಪ್ರತಿ ದಿನದ ವರದಿ. ನಾವು ೧೧ರ ಬೆಳಗ್ಗೆ ಹೊರಟು ಇಡೀ ದಿವಸ ಲಾರಿ ಪ್ರಯಾಣದಲ್ಲಿ ವ್ಯರ್ಥ ಮಾಡುವುದಕ್ಕಿಂತ ೧೦ರ ಸಾಯಂಕಾಲವೇ ಹೊರಟು ಹೋಗುವುದು. ಮಧ್ಯರಾತ್ರಿಯ ತನಕವೂ ಚಾಲನೆ ಮಾಡಿ ಬೇಲೂರು ಸೇರಿ ಅಲ್ಲಿ ತಂಗುವುದು ಎಂದು ನಿರ್ಧರಿಸಿದೆವು. ರಾತ್ರಿ ಪ್ರಯಾಣ ಲಾರಿ ಎಂಜಿನ್ನುಗಳಿಗೂ ಒಳ್ಳೆಯದು, ದಾರಿಯಲ್ಲಿ ಬೇಲೂರನ್ನೂ ನೋಡಿದ ಹಾಗೆ ಆಯಿತು. ಇದು ನಮ್ಮ ಯೋಜನೆ.

ದಿನ ಉರುಳಿದಂತೆ ಒಂದು ಕಡೆ ದೊರೆಗಳ ತಂದೆಯವರ ಆರೋಗ್ಯ ಗಾಬರಿ ಹುಟ್ಟಿಸುವಂಥ ಸ್ಥಿತಿಗೆ ಮುಟ್ಟಿತು. ಇನ್ನೊಂದು ಕಡೆ ವರ್ಕ್‌ಷಾಪಿನಲ್ಲಿದ್ದ ಲಾರಿ ಇನ್ನೂ ಓಡುವ ಸ್ಥಿತಿಗೆ ಬಂದಿರಲಿಲ್ಲ - ದ್ವಿವಿಧ ಪರೀಕ್ಷೆ.

೧೦ನೆಯ ತಾರೀಕು ಬಂದೇಬಿಟ್ಟಿತು. ಸಾಯಂಕಾಲ ಬೀಳ್ಕೊಡುವ ಮೀಟಿಂಗಿನ ಸಿದ್ಧತೆ ಮುಗಿದಿದೆ. ಆಹಾರ, ಸಾಮಾನು, ಸರಂಜಾಮು ಎಲ್ಲವೂ ಕ್ರಮಬದ್ಧವಾಗಿ ಲಾರಿಗೆ ಹಾರಲು ತಯಾರಾಗಿವೆ. ಒಂದು ಲಾರಿಯನ್ನು ಲೋಡ್ ಮಾಡಿಯಾಯಿತು. ಹುಡುಗರೆಲ್ಲರೂ ಉತ್ಸಾಹದಿಂದ ಬಂದು ಕಾಲೇಜಿನಲ್ಲಿ ಜಮಾಯಿಸುತ್ತಿದ್ದಾರೆ. ನವಹರ್ಷ ಅನುಭವಿಸುವ ಕುತೂಹಲ ಅವರ ಮುಖಗಳ ಮೇಲೆ ನಲಿದಾಡುತ್ತಿದೆ. ಬೆಟಾಲಿಯನ್ ಆಫೀಸಿಗೆ ಫೋನ್ ಮಾಡಿದಾಗ ದೊರೆಗಳಿರಲಿಲ್ಲ. ಅಶ್ವತ್ಥರೆಂದರು, ಲಾರಿಯಿನ್ನೂ ಹೊರಗೆ ಬರುವ ಲಕ್ಷಣವಿಲ್ಲ. ಅವರ ತಂದೆಯವರ ಸ್ಥಿತಿ ಭಯಂಕರವಾಗಿದೆ. ಜೊತೆಗೆ ದೊರೆಗಳನ್ನು ಬಳ್ಳಾರಿಗೆ ವರ್ಗಾಯಿಸುವ ಆರ್ಡರೂ ಬಂದಿದೆ. ನಿಮ್ಮ ಕ್ಯಾಂಪಿನ ಕೊನೆಯ ದಿವಸ ಅವರು ಹೊಸಬರಿಗೆ ಹೊಣೆ ವಹಿಸಿಕೊಡಬೇಕು. ಆದ್ದರಿಂದ ಅವರು ಹೇಗೆ ಬರುತ್ತಾರೋ ನಾ ಕಾಣೆ. ಈ ಆಡಳಿತೆಯ ಬದಲಾವಣೆಯ ಸಂದರ್ಭದಲ್ಲಿ ನಾನೂ ಹೊರಡುವಂತಿಲ್ಲ.
ಹರ್ಷಸೌಧಕ್ಕೆ ಕಳಶ ಇಡುವಂಥ ಸುದ್ದಿ! ಒಂದೇ ಎರಡೇ? ಅವುಗಳ ಪರಂಪರೆಯೇ.

ಸಭೆ ೪ ಗಂಟೆ ಸಾಯಂಕಾಲಕ್ಕೆ ಸೇರಬೇಕು. ಅಪರಾಹ್ಣ ೨ ಗಂಟೆ ತನಕವೂ ಹೊಸ ಸುದ್ದಿ ಏನೂ ಬರಲಿಲ್ಲ. ಏನೇ ಆಗಲಿ ಒಂದು ಲಾರಿಯಲ್ಲಿ ಸಾಮಾನೆಲ್ಲ ಹೇರಿ ಆಗುವಷ್ಟು ಹುಡುಗರನ್ನು ಕರೆದುಕೊಂಡು ಹೊರಟೇ ಬಿಡುವುದು. ಉಳಿದವರು ಮರುದಿವಸ ಬೆಳಗ್ಗೆ ಬಸ್‌ನಲ್ಲಿ ಹೊರಟು ಬೆಳ್ತಂಗಡಿಗೆ ಸಂಜೆ ತಲಪಬೇಕು. ಬೇರಾವ ಮಾರ್ಗವೂ ಇಲ್ಲ ಎಂದು ನಿಶ್ಚೈಸಿದ್ದೆ. ಇಷ್ಟಾಗುವಾಗ ಕಾಲೇಜಿನ ಹಿಂದುಗಡೆ ಗೇಟಿನಿಂದ ದೊರೆಗಳು ಹರ್ಷವದನರಾಗಿ ಮೇಲೆ ಬರುವುದನ್ನು ಕಂಡೆ.

ಪರೀಕ್ಷೆಯಲ್ಲಿ ಗೆದ್ದಂತಾಯಿತು ಎಂದರು. ಮುಂದುವರಿಯುತ್ತ, ಮೊದಲು ವರ್ಕ್‌ಷಾಪ್ ನೋಡಿದೆ. ಲಾರಿ ಇನ್ನೊಂದು ವಾರದ ಮೇಲಾದರೂ ಹೊರಡುವುದೋ ಇಲ್ಲವೋ ಸಂದೇಹ. ಅಲ್ಲಿಂದ ಸೀದಾ ಗ್ರೂಪ್ ಕಮಾಂಡರರ ಹತ್ತಿರ ಹೋದೆ. ಪರಿಸ್ಥಿತಿ ವಿವರಿಸಿದೆ. ಅವರ ಹತೋಟಿಯಲ್ಲಿರುವ ಬೇರಾವುದಾದರೂ ಬೆಟಾಲಿಯನ್ ಲಾರಿ ಕೊಡಿಸಲು ವಿನಂತಿಸಿದೆ. ಅವರ ಅನುಮತಿಯಿಂದ ನನ್ನ ಹಳೆಯ ಮಿತ್ರ, ಸಹೋದ್ಯೋಗಿ ಈಗ ಒಂದನೇ ಮೈಸೂರಿನ ಓಸಿ ಮೇಜರ್ ಎಂ.ಎಸ್. ಖಾನ್‌ರಿಗೆ ಫೋನ್ ಮಾಡಿದೆ: ‘ಖಾನ್! ನಾನು ತೊಂದರೆಯಲ್ಲಿದ್ದೇನೆ. ೧೨ ದಿವಸಗಳವರೆಗೆ ಈಗಿಂದೀಗಲೇ ಕುದುರೆಮುಖಕ್ಕೆ ಹೋಗಿ ಬರಲು ನಿಮ್ಮ ಲಾರಿ ಬೇಕು ಎಂದೆ. ‘ಕಳಿಸಿಕೊಡುತ್ತೇನೆ ಒಂದೇ ಉತ್ತರ ಅವರದು. ನಾನವರ ಆಫೀಸಿಗೆ ಹೋಗುವಷ್ಟರಲ್ಲಿಯೇ ಅವರು ಡ್ರೈವರ್ ಲಾರಿ ಎಲ್ಲವನ್ನೂ ಸಿದ್ಧಪಡಿಸಿ ಹೊರಡಿಸಿ ಬಿಟ್ಟಿದ್ದರು. ಲಾರಿ ಡ್ರೈವರ್ ರಜೆಯಲ್ಲಿದ್ದುದರಿಂದ ಕಾರ್ ಡ್ರೈವರ್ ಲಿಂಗೋಜಿಯನ್ನು ಈ ಲಾರಿಯಲ್ಲಿ ಕಳಿಸಿದ್ದಾರೆ. ಈ ಲಿಂಗೋಜಿಯೂ ನನ್ನ ಹಳೆಯ ಅನುಯಾಯಿ.

ಕಾಲೇಜಿನ ಹಿಂದೆ ಅನ್ಸಾರಿ (ನಮ್ಮ ಡ್ರೈವರ್) ಲಾರಿಯೂ ಲಿಂಗೋಜಿ ಲಾರಿಯೂ ಭರದಿಂದ ಹೇರಲ್ಪಟ್ಟವು. ಸಭೆ ಪ್ರಾರಂಭವಾಗುವ ಮೊದಲು ದೊರೆಗಳು ಇನ್ನೊಂದು ಮಾತು ಹೇಳಿದರು, ನಾನು ನಿಮ್ಮೊಡನೆ ಬರುತ್ತೇನೆ. ಅಲ್ಲಿ ಒಂದೆರಡು ದಿನವಿದ್ದು ಹಿಂತಿರುಗುತ್ತೇನೆ. ಈ ದಿವಸ ಬೆಳಗ್ಗೆ ನನ್ನ ತಂದೆಯವರನ್ನೇ ಕೇಳಿಬಿಟ್ಟೆ: ‘ಎರಡೂ ಕರ್ತವ್ಯಗಳೇ, ಎರಡೂ ಅತಿಮುಖ್ಯವಾದವೇ, ಯಾವುದನ್ನು ನಿರ್ವಹಿಸಲಿ, ಯಾವುದನ್ನು ನಿರ್ವಹಿಸದಿರಲಿ ಎಂದು. ಅವರು ಸ್ಪಷ್ಟವಾಗಿ ಹೇಳಿದರು, ‘ನೀನು ಹೋಗು, ಕ್ಯಾಂಪನ್ನು ಪೂರ್ಣವಾಗಿ ಸರಿಯಾಗಿ ನಡೆಸು. ನೀನು ಹಿಂತಿರುಗಿ ಬರುವವರೆಗೂ ನನಗೇನೂ ಆಗುವುದಿಲ್ಲ ಎಂದು. ಈಗ ನಾನು ಲಘುವಾಗಿದ್ದೇನೆ.
ಒಳ್ಳೆಯ ಕೆಲಸಕ್ಕೆ ನೂರೆಂಟು ವಿಘ್ನಗಳು. ಅವನ್ನು ಯಶಸ್ವಿಯಾಗಿ ಎದುರಿಸಿದರೆ ನೂರೊಂಬತ್ತನೆಯದು ಜಯ.

ಮೀಟಿಂಗಿನಲ್ಲಿ ಪ್ರಿನ್ಸಿಪಾಲ್ ಆರ್. ಆರ್, ಉಮರ್ಜಿಯವರು ಮತ್ತು ಸಹೋದ್ಯೋಗಿಗಳು ಸಾಹಸಪ್ರಿಯರಿಗೆ ಶುಭ ಕೋರಿದರು. ಕಾಲೇಜಿಗೆ, ಬೆಟಾಲಿಯನ್ನಿಗೆ, ಯೂನಿವರ್ಸಿಟಿಗೆ ಜಯ ಜಯಕಾರ ಘೋಷಿಸಿ ಅದು ಅಂತ್ಯವಾಯಿತು.

ಕುದುರೆಮುಖದ ರಾವುತರು
ಅಧ್ಯಾಯ ನಲ್ವತ್ಮೂರು

೩೭ ಕ್ಯಾಡೆಟ್ಟುಗಳು, ಇಬ್ಬರು ಅಡುಗೆಯವರು, ಇಬ್ಬರು ಡ್ರೈವರ್, ಒಬ್ಬ ಸೇವಕ, ಸುಬೇದಾರ್ ಖಾನ್ವೀಲ್ಕರ್ ಸೇರಿದಂತೆ ನಾಲ್ಕು ಮಂದಿ ಮಿಲಿಟರಿ ಶಿಕ್ಷಕರು, ನಾಲ್ವರು ಎನ್‌ಸಿಸಿ ಆಫೀಸರುಗಳು (ನಿಸಾರ್ ಅಹಮದ್, ಕೆಂಡಗಣ್ಣ ಸ್ವಾಮಿ, ಶಿವಪ್ಪ ಮತ್ತು ನಾನು) ಮತ್ತು ಮುಖ್ಯ ನಾಯಕರು ಮೇಜರ್ ನಾರಾಯಣ ಸಿಂಗ್ (ದೊರೆಗಳು) - ಹೀಗೆ ೫೧ ಜನರ ತಂಡ ಸ್ವಯಂ ಪೂರ್ಣವಾಗಿ ಎರಡು ಲಾರಿಗಳಲ್ಲಿ ವಿಂಗಡಿಸಲ್ಪಟ್ಟು ಕುದುರೆಮುಖದೆಡೆಗೆ ಹೊರಟಿತು. ಅಶ್ವತ್ಥರು ಎಲ್ಲವನ್ನೂ ಅತ್ಯುತ್ತಮವಾಗಿ ಒದಗಿಸಿಕೊಟ್ಟ ಕರ್ತವ್ಯಧೀರರು. ಸಾಧ್ಯವಾದರೆ ಒಂದು ದಿನದ ಮಟ್ಟಿಗಾದರೂ ನಡುವೆ ಬರುತ್ತೇನೆ ಎಂದು ನಮ್ಮನ್ನು ಬೀಳ್ಕೊಟ್ಟರು. ಶಿಲ್ಪಿ ದೇವಾಲಯ ನಿರ್ಮಿಸುತ್ತಾನೆ. ಆದರೆ ಪ್ರವೇಶೋತ್ಸವ ಮಾಡುವವರು ಬೇರೆ. ದುಡಿಮೆ ಯಶಸ್ವಿಯಾಗಿ ಪೂರೈಸಿದುದೇ ಆತನ ಪ್ರತಿಫಲ, ಸಂತೃಪ್ತಿ.

ನಮ್ಮ ತಂಡದ ಪ್ರಮುಖ ಸದಸ್ಯರನ್ನು ಕುರಿತು ನಾಲ್ಕು ಮಾತು ಹೇಳುವುದು ಅಗತ್ಯ.
ನಿಸಾರ್ ಅಹಮದ್ ಅವರನ್ನು ಕನ್ನಡ ಜನ ಶ್ರೇಷ್ಠ ಆಧುನಿಕ ಕವಿ, ‘ಕುರಿಗಳು ಸಾರ್, ನಾವು ಕುರಿಗಳು ಪದ್ಯದ ಕರ್ತೃ ಎಂದು ತಿಳಿದಿರುವರೇ ವಿನಾ ಅವರೊಬ್ಬರು ಕಾಲೇಜ್ ಲೆಕ್ಚರರ್, ಎನ್‌ಸಿಸಿ ಆಫೀಸರ್ ಎಂದು ತಿಳಿದಿಲ್ಲ. ಅವರು ನನ್ನನ್ನು ಗುರುಗಳೇ ಎಂದು ಸಂಬೋಧಿಸುವುದೂ ನಾನವರನ್ನು ಕವಿಗಳೇ ಎಂದು ಹರಸುವುದೂ ಸ್ವಾಭಾವಿಕವಾಗಿ ಹೋಗಿವೆ. ಭಾವಜೀವಿ, ತುಂಬ ಮಮತೆಯ ಹೃದಯ. ಫಕ್ಕನೆ ಸಿಟ್ಟಿಗೆದ್ದು ಏನನ್ನಾದರೂ ಹೇಳುವರು. ಮರುಗಳಿಗೆಯಲ್ಲಿ ಮೊದಲಿಗಿಂತಲೂ ಆತ್ಮೀಯವಾಗಿ  ಮಾತಾಡುವರು. ಕೆಲಸದಲ್ಲಿ ನಿಷ್ಣಾತರು. ಹುಡುಗರಿಗೆ ಅಚ್ಚುಮೆಚ್ಚಿನ ಗುರುಗಳು. ಯಾವುದಾದರೊಂದು ತಿರಸ್ಕಾರದ ವಿಚಾರ ಉದ್ಗರಿಸುವಾಗ ಕತ್ತೆ ಸ್ವರೂಪ ಎನ್ನುವ ಉಪ್ಪಿನಕಾಯಿಯನ್ನು ಇವರು ಚಪ್ಪರಿಸುವುದನ್ನು ಕೇಳುವುದು ಬಲು ಮೋಜಿನದಾಗಿರುತ್ತದೆ. ಇವರು ಮದುವೆಯಾಗಿ ಒಂದು ವರ್ಷವಾಗುತ್ತ ಬಂದಿದೆ. ಹೆಂಡತಿಯನ್ನು ತವರ್ಮನೆಗೆ ಕಳಿಸಿದ್ದಾರೆ. ಶುಭ ಸಮಾಚಾರ ಯಾವ ಗಳಿಗೆಯಲ್ಲಿಯೂ ಬರಬಹುದು. ನಮ್ಮ ಲಾರಿ ಹೊರಡುವ ತನಕವೂ ಅವರು ಬರುವ, ಬರದಿರುವ ವಿಚಾರದಲ್ಲಿ ಅರೆಮನಸ್ಕರಾಗಿದ್ದರು. ಕವಿ ಹೃದಯ ಹೋಗು ಅನ್ನುತ್ತಿದೆ. ಸಂಸಾರೀ ಭಾವ ಇಲ್ಲೇ ಇರು ಅನ್ನುತ್ತಿದೆ. ಹೇಗೂ ಟ್ರಂಕ್ ಫೋನ್ ಸೌಕರ್ಯವಿದೆ. ಯಾವಾಗ ಬೇಕಾದರೂ ಹಿಂತಿರುಗಿ ಹೋಗಬಹುದು ಎನ್ನುವ ಆಶ್ವಾಸನೆ ಮೇರೆಗೆ ನಮ್ಮೊಡನೆ ಬಂದರು.

ಶಿವಪ್ಪ - ಬರೀ ಶಿವಪ್ಪ ಅಲ್ಲ, ನಮ್ಮ ಶಿವಪ್ಪ. ಇವರ ‘ಏಕಾಂತ (ಕವನ ಸಂಕಲನ) ಫಕ್ಕನೆ ಇವರನ್ನು ಕನ್ನಡ ನಾಡಿನ ದೊಡ್ಡ ತರುಣ ಕವಿಗಳ ಸಾಲಿನಲ್ಲಿ ಕೂರಿಸಿದೆ. ಸಾತ್ತ್ವಿಕ ಸ್ವಭಾವ. ಯಾವುದರಲ್ಲೂ ದುಡುಕಿಲ್ಲ. ಎಲ್ಲವನ್ನೂ ಶ್ರದ್ಧೆಯಿಂದ ಅನುಭವಿಸಿ ಎಂದಾದರೊಮ್ಮೆ ಅಭಿಪ್ರಾಯ ನೀಡುವ ಅಥವ ಕವನ ಬರೆಯುವ ಕವಿಯಿವರು. ಇವರ ಕರ್ತವ್ಯ ದಕ್ಷತೆಯೂ ಹಾಗೆ - ಅವರ ಕವನದ ‘ಲಯಬದ್ಧ ತೂಗಾಟದಂತೆ. ಅಲ್ಲಿ ಗಲಾಟೆ ಗೊಂದಲವಿಲ್ಲ. ತುಂಬ ಆತ್ಮೀಯ ಮಿತ್ರ. ಎಷ್ಟೋ ಸಲ ಅಂದುಕೊಂಡಿದ್ದೇನೆ; ಇವರ ವಿನಯ ಸೌಜನ್ಯ ಎಂಥ ಉನ್ನತ ಶ್ರೇಣಿಯವು ಎಂದು. ನಿಸಾರರ ಪರಮಮಿತ್ರ. ಅವರಿಂದ ತುಂಬ ಪ್ರಭಾವಿತರಾಗಿದ್ದರೂ ಕವನದಲ್ಲಿ ಸ್ವಂತ ಮಾರ್ಗವನ್ನು ತುಳಿದಿರುವ ಓಜಸ್ವಿ. ನಿಸಾರ್ ಮತ್ತು ಶಿವಪ್ಪ ಯಮಳ ನಕ್ಷತ್ರಗಳಂತೆ. ಶಿವಪ್ಪ ಸದಾ ಶಿವಂ.

ಕೆಂಡಗಣ್ಣಸ್ವಾಮಿ - ‘ಪೆಸರ್ ಕೇಳಿ ಬಲ್ಲೆಯೇನ್? ಹೆಸರು ಕೇಳಿ ಹೆದರಬೇಡಿ ಅದರ ಹೊಸತನದಿಂದಾಗಲೀ ಅರ್ಥದಿಂದಾಗಲೀ. ‘ಕರುಣೆಗೊಂದು ಕೋಡವನ್ ಎದೆಯೊಲುಮೆಗೆ ಬೀಡವನ್. ನಾನು ಪ್ರಥಮವಾಗಿ ಈ ಮಿತ್ರರನ್ನು ನೋಡಿದಾಗ ಇವರ ಹೆಸರು, ದಡೂತಿ ಗಾತ್ರ, ಎಣಿಕೆಯ ಮಾತು ಇವುಗಳಿಂದ ಆಕರ್ಷಿತನಾದೆ. (ಸ್ವಲ್ಪ ಭಯವೂ ಸೇರಿತ್ತೋ ಏನೋ!) ನಮ್ಮ ಒಡನಾಟ ಎನ್‌ಸಿಸಿಯಲ್ಲಿಯೂ ಹೊರಗೂ ಹೆಚ್ಚಿದಂತೆ ತುಂಬ ಹಿರಿಯ ಆದರ್ಶವಿಟ್ಟುಕೊಂಡಿರುವ ಸಜ್ಜನ ಇವರು ಎಂಬುದನ್ನು ಅರಿತುಕೊಂಡೆ. ಇವರ ಚುಟುಕುಗಳು, ತಿಳಿ ವ್ಯಂಗ್ಯದ ನುಡಿಗಳು ರಸಿಕತೆಯ ನಿದರ್ಶನಗಳು. ಇವರೂ ನಿಸಾರರಂತೆ ಒಂದು ವರ್ಷದ ಹಿಂದೆ ಮದುವೆಯಾದ ನವವರ. ಬೆಂಗಳೂರಿನಲ್ಲಿ ಇನ್ನೂ ಮನೆ ಮಾಡದೇ (ಆದ್ದರಿಂದ ನಮಗೆ ಮದುವೆಯ ಬಾಬತು ಸಿಹಿ ಹಂಚದೇ) ಭೀಷ್ಮ ಪರ್ವದಲ್ಲಿಯೇ ಇದ್ದರು.

ಮಹಾರಾಷ್ಟ್ರ ರೆಜಿಮೆಂಟಿನ ಸುಬೆದಾರ್ ಖಾನ್ವೀಲ್ಕರ್ ಮತ್ತು ಅವರ ಬೆಂಬಲಿಗರಾದ ಮೂವರು ಎನ್ಸಿಓಗಳು ಪ್ರತಿಯೊಬ್ಬರೂ ದಕ್ಷತೆ, ವಿಶ್ವಾಸಾರ್ಹತೆಯ ಪ್ರತೀಕಗಳು. ಯಾವ ಕೆಲಸವನ್ನು ಎಷ್ಟು ಹೊತ್ತಿಗೂ ಮಾಡಲು ಕಂಕಣ ಬದ್ಧರಾಗಿ ನಿಂತವರು. ಎಲ್ಲ ಸಾಮಾನು ಸರಂಜಾಮುಗಳೂ ಇವರ ಹೊಣೆಗಾರಿಕೆಯಲ್ಲಿದ್ದುವು. ನಾಳೆ ಬೆಳಗ್ಗೆ ಟೀ ಮತ್ತು ಉಪ್ಪಿಟ್ಟು ಎಂದರೆ ಸಾಕು. ಅದರ ವಿವರಗಳನ್ನು ಅವರೇ ಪರಿಶೀಲಿಸಿ ಆ ಹೊತ್ತಿಗೆ ಅವನ್ನು ಒದಗಿಸಿಕೊಡುವರು. ಮರುಸವಾಲು, ವಾದ ಎಂಬುದು ಇವರಿಗೆ ಗೊತ್ತಿಲ್ಲ. ಅಂಥ ಉನ್ನತ ಮಟ್ಟದ ಶಿಸ್ತು.

(ಮುಂದುವರಿಯಲಿದೆ)

3 comments:

  1. Vishvanath Nayak30 August, 2013 19:43

    shri,GTNarayan Rao, my memories went back to 1994-95 when he participated in Rotary science exhibition held at Puttur. Truely an amazing personality.

    ReplyDelete
  2. ಪ್ರಿಯ ಅಶೋಕರೇ, ಈ ನಾರಾಯಣ ಸಿಂಘರು ಈಗ ಇದ್ದಾರೆಯೆ? ಎಲ್ಲಿದ್ದಾರೆ? ಅವರ ಹೊಸಪೇಟೆ - ಮುನಿರಾಬಾದ್ ಸೇತುವೆ ಬಗ್ಗೆ ಹೆಚ್ಚಿನ ಮಾಹಿತಿ ಏನಾದರೂ ಸಿಗ ಬಹುದೇ? ಇದು ನನ್ನ "ಮುಗಿಯದ ತುಂಗಭದ್ರ ಅಧ್ಯಯನ" ಕ್ಕೆ ಉಪಕಾರಿ.

    Jai Hind!
    K C Kalkura, B.A, B.L.,

    ReplyDelete
    Replies
    1. ನಾರಾಯಣ ಸಿಂಗ್ ಬಹಳ ಹಿಂದೆಯೇ (ಕನಿಷ್ಠ ಇಪ್ಪತ್ತು ವರ್ಷಗಳ) ತೀರಿಹೋಗಿದ್ದಾರೆ. ಅವರ ಉತ್ತರಾಧಿಕಾರಿಗಳು ಬೆಂಗಳೂರಿನಲ್ಲಿದ್ದರು, ನನಗೆ ಯಾವ ರೀತಿಯಲ್ಲೂ ಪತ್ತೆಯ ಸುಳುಹುಗಳುಹೊಳೆಯುವುದಿಲ್ಲ :-( ಜಾಲದ ಓದುಗರಲ್ಲಿ ತಿಳಿದವರಿದ್ದರೆ ಪ್ರತಿಕ್ರಿಯಿಸಿಯಾರು

      Delete