21 June 2013

ಕೊಡಚಾದ್ರಿಯ ಸುತ್ತ ಮುತ್ತ

(ಚಕ್ರವರ್ತಿಗಳು ಸುತ್ತು ಹನ್ನೊಂದು) ಕೊ ಎಂದರೆ ಕೈಕೊಟ್ಟ ಬಸ್ಸು - ಒಂದು
[ಬೆಟ್ಟ ಹತ್ತಬೇಕು ಏಕೆ? ಅದು ಅಲ್ಲಿ ಇರುವುದರಿಂದ! ನೀನೇರಬಲ್ಲೆಯಾ ನಾನೇರುವೆತ್ತರಕೆಂಬ ಸವಾಲು ಎಸೆದಿರುವುದರಿಂದ! ಪೃಥ್ವಿಯ ಮಾನದಂಡವಾಗಿ ಸೆಟೆದು ನಿಂತಿರುವುದರಿಂದ! ನಮ್ಮ ಕೆಚ್ಚು ಧೃತಿಗಳಿಗೆ ನಿಕಷವಾಗಿ ಒದಗುವುದರಿಂದ!”- ಸಂಪಾದಕೀಯ ಟಿಪ್ಪಣಿ: ಜಿಟಿನಾ/೧೯೯೦]

ಪಶ್ಚಿಮ ಘಟ್ಟಗಳ ಸಾಲಿನ ಮೂರು ಪ್ರಮುಖ ಶಿಖರಗಳನ್ನು ‘ಕ’ತ್ರಿ ಅಥವಾ ‘ಕ’ತ್ರಯ ಎಂದೇ ಗುರುತಿಸಬಹುದು; ಕುದುರೆಮುಖ (೧೮೯೨ ಮೀ), ಕುಮಾರ ಪರ್ವತ (೧೭೧೨ ಮೀ) ಮತ್ತು ಕೊಡಚಾದ್ರಿ (೧೩೪೩ ಮೀ). ಮೊದಲ ಎರಡು ಅಂದೂ (೧೯೭೫) ಶುದ್ಧ ವನ್ಯದ ಸ್ಥಿತಿಯಲ್ಲೇ ಇದ್ದುವು (ಅದೃಷ್ಟವಶಾತ್ ಇಂದು ಅವೆರಡು ಸ್ಪಷ್ಟ ‘ವನ್ಯ’ ಸ್ಥಾನಮಾನವನ್ನು ಗಳಿಸಿವೆ). ಆದರೆ ಕೊಡಚಾದ್ರಿ ಶಿಖರವಲಯ ಅಂದು ಔದ್ಯಮಿಕ (ಗಣಿಗಾರಿಕೆ), ದೈವೀ ಹಾಗೂ ಗಿರಿಧಾಮ ಅಥವಾ ಪ್ರವಾಸೋದ್ಯಮದ ಅಸ್ಪಷ್ಟ ಎಳೆತಗಳ ಗೊಂದಲದಲ್ಲಿತ್ತು. ಕಬ್ಬಿಣದ ಅದಿರು ಪರೀಕ್ಷಕರು ನೆತ್ತಿಯವರೆಗೂ ದಾರಿ ಕಡಿದು, ಮೇಲೊಂದು ಸಾಮಾನ್ಯ ತಂಗುದಾಣ ಕಟ್ಟಿದ್ದರು. ಶಿಖರವಲಯದಲ್ಲಿ ಕೆಲವು ಲೆಕ್ಕಾಚಾರದ ಹೊಂಡ, ಹಾಗೆ ಸಂಗ್ರಹಿಸಿದ ಕಲ್ಲಿನ ದಿಬ್ಬಗಳನ್ನು ಮಾಡಿಟ್ಟು ಕೈಚೆಲ್ಲಿದಂತಿತ್ತು. ಕೊಲ್ಲೂರ ಮೂಕಾಂಬಿಕೆಯ ಭಕ್ತರು, ಅದರಲ್ಲೂ ಮುಖ್ಯವಾಗಿ ಕೈಕಾಲು ಗಟ್ಟಿಯಿರುವ ಮಂದಿ, ಕಾಡು ಬೆಟ್ಟಗಳ ಸವಕಲು ಜಾಡಿನಲ್ಲಿ ಕನಿಷ್ಠ ನಾಲ್ಕೈದು ಗಂಟೆ ಏರಿ ಬರುತ್ತಿದ್ದರು. ಕೊಡಚಾದ್ರಿಯ ಶಿಖರವಲಯದಲ್ಲೇ ಇರುವ ‘ಅಮ್ಮ’ನದೆಂದು ಭಾವಿಸುವ ಭರ್ಚಿ, ಸರ್ವಜ್ಞಪೀಠದ ನಿರೀಶ್ವರ ಮಂಟಪ ಮತ್ತು ಚಿತ್ರಮೂಲದ ನಿಗೂಢ ಗುಹೆ ಇವರ ಲಕ್ಷ್ಯ. ಇವೆಲ್ಲ ಏನಿದ್ದರೂ ಎರಡು ನಾಲ್ಕು ಜನರ ಗುಂಪು. ಆದರೆ ಬೆಟ್ಟ ಹತ್ತುವ ಸಂತೋಷ, ನೆತ್ತಿಯಿಂದ ಸೂರ್ಯಾಸ್ತ ವೀಕ್ಷಣೆಯ ರೋಮಾಂಚನ, ಜೋಗಿಮನೆ ಅಥವಾ ಭಟ್ಟರ ಮನೆಯ ಸೀಮಿತ ಊಟವಾಸಾನುಕೂಲಗಳು ಕೊಡುವ ಶಿಬಿರವಾಸದ ಅನುಭವಕ್ಕೆ ಮುಕುರುತ್ತಿದ್ದಲ್ಲಿ ಎಂಟು ಹತ್ತರ ಗೆಳೆಯರ ಕೂಟದಿಂದ ಇಪ್ಪತ್ತು ಮೂವತ್ತರ ಸಂಘ, ಶಾಲೆಗಳ ಗ್ಯಾಂಗೂ ಇರುತ್ತಿತ್ತು! (ಇಂದು ಕೊಡಚಾದ್ರಿಯ ತಪ್ಪಲು ಮೂಕಾಂಬಿಕ ವನಧಾಮ. ಆದರೆ ಶಿಖರವಲಯ ದೈವೀ ಮತ್ತು ಪ್ರವಾಸೀ ತುಯ್ತಗಳಲ್ಲಿ ಸಮನ್ವಯ ಸಾಧಿಸಿ, ಪ್ರಾಕೃತಿಕವಾಗಿ ಹಿಂದೆ ಬರಲಾಗದ ಹಾದಿ ಹಿಡಿದಿದೆ.)


ಅತ್ರಿ ಬುಕ್ ಸೆಂಟರ್ ತೆರೆದ (೧೯೭೫)  ಹೊಸತರಲ್ಲಿ ನನ್ನ ಬೆಟ್ಟ ಕಾಡು ನುಗ್ಗುವ ಉತ್ಸಾಹಕ್ಕೆ ಲಗಾಮಿರಲಿಲ್ಲ. ಯುವ ಅಧ್ಯಾಪಕ ಮಿತ್ರರು, ಪರೋಕ್ಷವಾಗಿ ಕಾಲೇಜು ವಿದ್ಯಾರ್ಥಿಗಳು, ಗಿರಾಕಿ ಮಿತ್ರರು, ಸಂಬಂಧಿಗಳು ಎಂದು ಸಿಕ್ಕವರನ್ನೆಲ್ಲ ಜೊತೆಗೊಡಲು ಒತ್ತಾಯಿಸುತ್ತಿದ್ದೆ. ತಂಡ ಬಂದರೂ ಸರಿ, ಒಬ್ಬ ಸಿಕ್ಕರೂ ಸಾಕು ಎನ್ನುವ ತಹತಹ. ಆಗಲೇ ಯಾರೋ ತಮಾಷೆಗೆ ಕೇಳಿದ್ದಿದೆ, “ಏನು ಕಾಡು, ಬೆಟ್ಟ ಓಡಿಹೋಗ್ತದಾ?” (ಇಂದು ತೀವ್ರ ವಿಷಾದದಲ್ಲಿ ಆದರೆ ಖಚಿತವಾಗಿ ಉತ್ತರಿಸಬಲ್ಲೆ “ಹೌದು!”) ನನಗೆ ಪ್ರಾಯ ಸಹಜವಾಗಿ ಪ್ರಚಾರ, ಜನಪ್ರಿಯತೆಗಳೆಡೆಗೆ ಒಂದು ವಾರೆಗಣ್ಣಿದ್ದುದಕ್ಕೆ ಸಂಘ ಕಟ್ಟಲು ಹೊರಟೆ. ‘ಏಳ್ಕಳಾಕ್ ಒಂದ್ಯೆಸ್ರ್ ಬ್ಯಾಡ್ವೇ’ ಅನಿಸಿತು; ಆರೋಹಣ ಪರ್ವತಾರೋಹಿಗಳು ಸಾಹಸಿಗಳು - Aarohana Mountaineers Adventurers ಕಿರಿದರೊಳ್ AMA ಹೆಸರು ಬಂತು. (ಸದಸ್ಯತ್ವ, ಹಣಸಂಗ್ರಹ, ಸಲಕರಣೆ ಸಂಗ್ರಹ ಎಂದೆಲ್ಲ ಯೋಜನೆಗಳು ವಿಸ್ತರಿಸಿದ್ದು, ಭ್ರಮೆ ಹರಿದದ್ದು ಹಿಂದೆಲ್ಲೋ ಹೇಳಿದ್ದೇನೆ, ಬಿಡಿ.) ಈ ಮಿತ್ರಕೂಟದಲ್ಲಿ ಕೊಡಚಾದ್ರಿ ಏರೋಣದ ಪ್ರಸ್ತಾವ ತಂದೆ.

ಕೊಡಚಾದ್ರಿ ಬಗ್ಗೆ ಪ್ರಚಾರ ಸಾಹಿತ್ಯ ಎಷ್ಟಿದ್ದರೇನು ನಮಗೆ ಬೇಕಾದ ಕನಿಷ್ಠ ಮಾರ್ಗದರ್ಶನ ಸಿಗಲಿಲ್ಲ. ಅದು ಅಂತರ್ಜಾಲ, ಚರವಾಣಿ ಇಲ್ಲದ ಕಾಲ. ದೂರವಾಣಿ ಅಂದರೆ ಟ್ರಂಕ್ ಬುಕ್ಕಿಂಗ್; ತಾಳ್ಮೆ ಪರೀಕ್ಷಿಸುವ ಸಾಧನ. ಇನ್ನು ನನಗೆ ದಕ್ಕಿದ ಮಾಹಿತಿದಾರರೋ ಅಂತೆಕಂತೆ ಪುರಾಣ ಪಂಡಿತರು. “ಏ ಅದು ಅಂಥಾ ಏನು ಎತ್ತರವಿಲ್ಲ. ಬೆಳಿಗ್ಗೆ ಮಂಗಳೂರು ಬಿಟ್ಟರೆ ಕೊಲ್ಲೂರಿಗೆ ಹೋಗಿ, ಅರ್ಧ ದಿನದಲ್ಲಿ ಶಿಖರ ಮುಟ್ಟಿ, ರಾತ್ರಿಗೆ ಮಂಗಳೂರಿಗೆ ಮರಳಬಹುದು.” ತೀರಾ ಕ್ಷುಲ್ಲಕ ಪ್ರಯತ್ನವೆಂದು ತಳ್ಳಿ ಹಾಕಿದರು. ತಮ್ಮ ಗತಸಾಹಸಗಳನ್ನು ವಿಸ್ತರಿಸಿದರು. ಅವುಗಳ ಮುನ್ನೆಲೆಯಲ್ಲಿ ಇವರು ಕೊಟ್ಟ ಕೊಡಚಾದ್ರಿಯ ಚಿತ್ರ ಬರಿಯ ಕಲ್ಪನಾವಿಲಾಸ ಎಂದು ನನಗರಿವಾಯಿತು. ಅವರ ಉತ್ಕಟ ಪರಿಸರಪ್ರೇಮ, ನಿಜ ಕಾರ್ಯೋನ್ಮುಖತೆಯ ವೈಫಲ್ಯಕ್ಕೆ ಮುಸುಕು. ಅವರ ಕಲ್ಪನೆಯನ್ನು ಒಕ್ಕಿ, ಮುಸುಕನ್ನು ಕಿತ್ತು ಕೆದಕಿದಾಗ - ಕನಿಷ್ಠ ವಾಹನ ಸೌಕರ್ಯ, ಅನುಸರಿಸಬೇಕಾದ ಮಾರ್ಗ, ಚಾರಣದ ಅವಧಿಯಂತ ಪ್ರಾಥಮಿಕ ಸಂಗತಿಗಳೂ ಸಿಗಲಿಲ್ಲ. ‘ನಿಜಾ ಹೇಳಬೇಕೆಂದರೆ’ ಅವರು ಅದನ್ನು ಹತ್ತಿದವರೇ ಅಲ್ಲ. ಮಾಡಿರದ ಸಾಹಸದ ಬಗ್ಗೆ, ಕೇಳಿರದ ಜನಮಂದೆಯ ಎದುರು, ನಾಲ್ಕು ಗೋಡೆಯ ನಡುವೆ ಮಾತಿನರಮನೆ ಕಟ್ಟುವುದು ನಿಜದ ಪರ್ವತಾರೋಹಣಕ್ಕಿಂತ ಅಧಿಕ ಆಮೋದಕರ ಈ ಉತ್ತರಕುಮಾರರಿಗೆ.

ನಿಷೇಧಪುರುಷರ ಮರ್ಜಿ ಕಾಯದೇ ಅದೊಂದು ಆದಿತ್ಯವಾರ ನಾನೂ ಗೆಳೆಯ ಸಮೀರನೂ ದಿನದ ಮೊದಲ ಕುಂದಾಪುರ ಬಸ್ ಹಿಡಿದೆವು. ಕುಂದಾಪುರದ ಹೋಟೆಲಿನಲ್ಲಿ ಕಾಫಿತಿಂಡಿ ಮಾಡುವಾಗ, ವಿಚಾರಿಸಿ ವಂಡ್ಸೆ ಮಾರ್ಗವಾಗಿ ಕೊಲ್ಲೂರ ಬಸ್ಸು ಹಿಡಿದೆವು. ಆ ಕಾಲದಲ್ಲಿ ಉಡುಪಿಯಿಂದಾಚೆಗೆ ಹೆದ್ದಾರಿಯೇ ಲಾಚಾರು (ಅಕ್ಷರಶಃ ಏಕಪಥ. ಅವಸರದ ಎರಡು ಭರ್ತಿ ಲಾರಿಗಳು ಎದುರಾದರೆ ಒಂದು ಒಳಗಾಲೆತ್ತುವುದು, ಅಡ್ಡಮಗುಚುವುದು ಖಾತ್ರಿ), ಕಂಗಾಲು. ತಲ್ಲೂರಿನಲ್ಲಿ ಅದನ್ನೂ ಬಿಟ್ಟ ಮೇಲೆ ಜಲ್ಲಿಕಿತ್ತ ದೂಳಿನದೇ ದಾರಿ. ಹೀಗೆ ನಿರಂತರ ಗಡಬಡಿಸಿದ್ದಕ್ಕೆ ನಾವೇನು, ಬಸ್ಸೂ ರೋಸಿಹೋಗಿ ಮಧ್ಯದಲ್ಲೆಲ್ಲೋ ಧರಣಿ ಮುಷ್ಕರ ಹೂಡಿತು. ಗಂಟೆ ಸುಮಾರು ಹನ್ನೊಂದು. ಆ ವೇಳೆಗೆ ಅವರಿವರಲ್ಲಿ ಮಾತಾಡಿ ನಮ್ಮ ಕೊಡಚಾದ್ರಿ ಮಾಹಿತಿಕೋಶ ಸಮೃದ್ಧವಾಗಿತ್ತು. ಸಹಜವಾಗಿ ಇನ್ನು ರಿಪೇರಿಯೋ ಬದಲಿ ಬಸ್ಸೋ ಕಾದು ಮುಂದುವರಿದರೂ ನಮ್ಮ ಯೋಜನೆ ಗೆಲ್ಲುವುದು ಕಷ್ಟ. ಅಂದೇ ಕೊಡಚಾದ್ರಿ ಹತ್ತುವುದಿರಲಿ, ಕೊಲ್ಲೂರಿನಿಂದ ವಾಪಾಸು ಮಂಗಳೂರಿಗೂ ಬಸ್ಸು ಸಿಗದು ಎಂಬುದು ಸ್ಪಷ್ಟವಾಯಿತು (ನಮ್ಮ ಹಾಳಾದ ಬಸ್ಸೇ ಹಿಂದೆ ಹೋಗುವವರ ದಿನದ ಕಡೇ ಬಸ್ಸಂತೆ). ಹಾಗಾಗಿ ಅಲ್ಲೇ ಸಿಕ್ಕ ಬೇರೊಂದು ಬಸ್ಸು ಹಿಡಿದು ಕುಂದಾಪುರಕ್ಕೇ ಮರಳಿದೆವು. ಅಲ್ಲಿ ನಮ್ಮ ಅದೃಷ್ಟಕ್ಕೆ ಮಯ್ಯ ರೆಡ್ಡಿಯರ ಭೇಟಿಯಾದದ್ದು, ಮೊದಲ ಬಾರಿಗೆ ಮರವಂತೆ ಕಂಡದ್ದು ಎಲ್ಲಾ ಇಲ್ಲೇ ನೀವು ಹಿಂದೆ ಓದಿದ್ದೇ ಇದೆ. ಮರವಂತೆ ಕಂಡದ್ದು ನಮ್ಮ ಕೊಡಚಾದ್ರಿ ಸೋಲಿನೊಳಗೊಂದು ಸಣ್ಣ ಸಮಾಧಾನ.

[ಪಾರಂಪಳ್ಳಿ ನರಸಿಂಹ ಮಯ್ಯ - ಕಾಲಾನುಕ್ರಮದಲ್ಲಿ ಯೋಗ್ಯತೆಯಿಂದ ಗಳಿಸಿದ ಪೂರ್ವಪದದೊಡನೆ, ಕಿರಿರೂಪದಲ್ಲಿ ಡಾ| ಪಾ.ನ ಮಯ್ಯ, ಮತ್ತವರೇ ತಮಾಷೆಗೆ ತಮ್ಮನ್ನು ಗೇಲಿಮಾಡಿಕೊಳ್ಳುತ್ತಿದ್ದಂತೆ ಪಾನಮಯ, ರೋಶನಿ ನಿಲಯದಲ್ಲಿ ಪೂರ್ಣಾವಧಿ ಕನ್ನಡ ಅಧ್ಯಾಪನ ಜೊತೆಗೆ ಕನ್ನಡ ಸಂಘವನ್ನು ಉತ್ಕಟ ಪ್ರೀತಿಯಿಂದ ಕಟ್ಟಿ, ದೃಢವಾಗಿ ನಿಲ್ಲಿಸಿದ ಧೀಮಂತ. ಕರ್ನಾಟಕ ಥಿಯಲಾಜಿಕಲ್ ಕಾಲೇಜಿನಲ್ಲಿ ಬಹುಕಾಲ ಆಂಶಕಾಲಿಕ ಕನ್ನಡ ಅಧ್ಯಾಪನ ನಡೆಸುವುದರೊಡನೆ, ‘ಕನ್ನಡ ಕಲಿಸಿ’ ಎಂದು ಬೇಡಿಕೆ ಬಂದಲ್ಲೆಲ್ಲ ಗಡಿಯಾರದ ಸುತ್ತು ದೀಕ್ಷೆ ನೀಡುತ್ತಲೇ ಹೋದ ಸಾಹಸಿ. ಕೆಲವು ಪುಸ್ತಕಗಳು, ಹಲವು ಲೇಖನಗಳು, ಪತ್ರಿಕಾ ಸಂಪಾದನೆಯೂ ಇವರ ಸಾಧನಾ ಪಥದ ಖಚಿತ ದಾಖಲೆಗಳು. ಸಾರ್ವಜನಿಕ ಸೇವಾನಿಯಮಾನುಸಾರ ರೋಶನಿ ನಿಲಯದ ವೃತ್ತಿ ಕಳಚಿದರೂ ಶಾರದಾ ವಿದ್ಯಾಲಯದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲತ್ವ ವಹಿಸಿಕೊಂಡು ಎಂದಿನ ತೀವ್ರತೆಯಲ್ಲೇ ಜೀವನ ನಡೆಸುತ್ತಿದ್ದವರು ಕೆಲವೇ ತಿಂಗಳ ಹಿಂದೆ, ತೀರಾ ಅನಿರೀಕ್ಷಿತವಾಗಿ ನಮ್ಮನ್ನಗಲಿದರು ಎಂದು ಇಲ್ಲಿ ದಾಖಲಿಸಲು ವಿಷಾದಿಸುತ್ತೇನೆ.]

ಕೊರಗುಳಿಸಿದ ಯಶಸ್ಸು - ತುಣುಕು ಎರಡು

ನಮ್ಮ ಕೊಡಚಾದ್ರಿ ಪ್ರಥಮ ಪ್ರಯತ್ನ ಸೋಲಿನ ಕತೆಯಲ್ಲ, ಗೆಲುವಿಗೆ ಸೋಪಾನ. ಪಲ್ಟಿಕಲ್ (= ಪೊಲಿಟಿಕಲ್‌ಗೆ ಇರುವ ಕನ್ನಡ ಧ್ವನಿಶಕ್ತಿ ಗಮನಿಸಿ!) ಭಾಷೆಯಲ್ಲಿ ಹೇಳುವುದಾದರೆ ‘ಅನುಕಂಪದ ಅಲೆ’ಯಲ್ಲಿ ಮುಂದಿನ ಪ್ರಯತ್ನಕ್ಕೆ ನಮಗೆ ಕೆಲವು ಸ್ಪಷ್ಟ ಭಾಗಿಗಳು ಒದಗಿದರು. ಮರವಂತೆ ತೋರಿಸಿದ ಪಾನ ಮಯ್ಯ ವೃತ್ತಿ ಅಗತ್ಯಕ್ಕೆ ಮಂಗಳೂರಿಗರಾದರೂ ಬಾಲ್ಯ ಮತ್ತು ಹೊಕ್ಕುಳ ಸಂಬಂಧದಲ್ಲಿ ಕೋಟಾದಿಂದ ಕಳಚಿಕೊಂಡವರಲ್ಲ. ಅವರಿಗೆ ಬಾಲ್ಯದಿಂದಲೂ ಪೂರ್ವದಿಟ್ಟಿಗೆ ಅಡ್ಡಿಯಾದ ಗೋಡೆ - ಕೊಡಚಾದ್ರಿ. ಅದನ್ನು ಹತ್ತಿ ಆಚೆಗೆ ನೋಡುವ ಆಸೆಗೆ ಸಂಗ, ಪ್ರಸಂಗ ಅದುವರೆಗೆ ಒದಗಿರಲಿಲ್ಲ. ನನ್ನ ಮೈಸೂರಿನ ಕಾಲೇಜು ದಿನಗಳಲ್ಲಿ ದಖ್ಖಣ ಪರ್ವತಾರೋಹಣ ಸಂಸ್ಥೆಯ ‘ಸಹಪಾಠಿ’ಯಾಗಿ ಆಪ್ತ ಮಿತ್ರನಾಗಿ ಒದಗಿದವ ಗಿರೀಶ ಪುತ್ರಾಯ. (ತಾತಾರ್ಶಿಖರಾರೋಹಣ ನೋಡಿ.) ಆತ ಬ್ಯಾಂಕ್ ನೌಕರನಾಗಿ ಕೋಟಾದಲ್ಲಿದ್ದರು. ಸಹಜವಾಗಿ ಕೊಡಚಾದ್ರಿಯ ಮೇಲೆ ಕಣ್ಣು ಕೀಲಿಸಿಯೇ ಇಟ್ಟಿದ್ದರಂತೆ. ಆಕಸ್ಮಿಕವಾಗಿ ಆತ ನನ್ನನ್ನು ಅಂಗಡಿಯಲ್ಲಿ ಸ್ನೇಹಾಚಾರಕ್ಕೆ ಭೇಟಿಯಾಗಲು ಬಂದಿದ್ದರು. ಅವರಿಗೆ ನಮ್ಮ ಕೊಡಚಾದ್ರಿ ಸೋಲು ಬರಿಯ ಸುದ್ದಿಯಲ್ಲ, ನಮ್ಮ ಮರುಪ್ರಯತ್ನದ ತಂಡಕ್ಕೆ ಸೇರಲು ವೀಳ್ಯವೇ ಆಯಿತು. (ಆ ದಿನಗಳಲ್ಲಿ ನಾನು ಅಲೋಶಿಯಸ್ ಕಾಲೇಜಿನ ಹಾಸ್ಟೆಲ್ಲಿನಲ್ಲಿ ವಾಸಕ್ಕಿದ್ದೆ - ತಂದೆಯ ನಿಡುಗಾಲದ ಮಿತ್ರ ಬಿವಿ ಕೆದಿಲಾಯರ ಕೃಪೆ. ವಿದ್ಯಾರ್ಥಿಗಳದೇ ಹಾಸ್ಟೆಲ್ಲಾದರೂ ನನ್ನಂತೆ ಸುಮಾರು ಇಪ್ಪತ್ತು ಮಂದಿ ವೃತ್ತಿ ನಿರತರೂ ಇದ್ದರು) ನನ್ನ ಹಾಸ್ಟೆಲ್ ಸಂಗಾತಿಗಳಾದ ನರಸಿಂಹ ಸ್ವಾಮಿ (ಇಂಗ್ಲಿಶ್ ಅಧ್ಯಾಪಕ, ಸಂತ ಏನ್ಸಳ ಶಿಕ್ಷಣ ಮಹಾವಿದ್ಯಾಲಯ) ಮತ್ತು ಚಂದ್ರಶೇಖರ್ (ಗ್ರಂಥಪಾಲ) ಬಯಲುಸೀಮೆಯವರು. ಆದರೆ ನನ್ನ ಮೈತ್ರಿಯ ಅಂಟಿಗೆ ಸಿಕ್ಕಿ, ಕೊಡಚಾದ್ರಿ ಹತ್ತುವವರ ಪಟ್ಟಿ ಬೆಳೆಸಿದರು. ಮಂಗಳೂರಿನಲ್ಲಿ ನೆಲೆ ನಿಂತ ಮೇಲಿನ ನನ್ನ ಪ್ರಥಮ ಸಾಹಸದಿಂದಲೂ (ಜಮಾಲಬಾದ್) ನನ್ನನ್ನು ಬಿಡದ ಪಂಡಿತಾರಾಧ್ಯ ಕಳೆದ ಬಾರಿ ಮೈಸೂರಿಗೆ ಹೋಗುವ ಅನಿವಾರ್ಯತೆಯಲ್ಲಿ ತಪ್ಪಿಸಿಕೊಂಡದ್ದಕ್ಕೆ ಪರಿಮಾರ್ಜನೆ ಮಾಡುವಂತೆ ತಂಡ ಸೇರಿದರು. ಸಮೀರ ಮಾತ್ರ ತಪ್ಪಿಹೋದ. ಆತನಿಗೆ ಮರಳಿ ಯತ್ನದ ಬಗ್ಗೆ ಯಾವ ಹೇವರಿಕೆ ಇರಲಿಲ್ಲ, ಬಿಡುವಾಗಲಿಲ್ಲ ಅಷ್ಟೆ.

ಶನಿವಾರ ರಾತ್ರಿ ಹತ್ತು ಗಂಟೆಯ ಶಿವಮೊಗ್ಗ ಬಸ್ಸು ಹಿಡಿದು ಕುಂದಾಪುರ ಮೊದಲ ಹಂತ. ಆ ದಿನಗಳಲ್ಲಿ ಈ ಒಳದಾರಿಗಳ (ಬೆಂಗಳೂರು, ಮೈಸೂರಿನಂಥ ಹೆದ್ದಾರಿ ಬಿಟ್ಟು ಉಳಿದೆಲ್ಲವೂ ಖಾಸಗಿ ಬಸ್ಸುಗಳೇ) ರಾತ್ರಿ ಬಸ್ಸುಗಳಲ್ಲಿ ವಿಶೇಷ ಸೌಕರ್ಯಗಳನ್ನು ಆಶಿಸುವುದಿರಲಿ, ಸೀಟಿಗೊಂದೇ ಜನ, ದೊಡ್ಡೂರಿನ ನೇರ ಯಾನಿಗಳಿಗೆ ಮಾತ್ರ ಎಂದೆಲ್ಲ ಯೋಚಿಸುವುದೂ ಅಪರಾಧವಾಗುತ್ತಿತ್ತು. ‘ಬಂದವರೆಲ್ಲಾ ಬರಲಿ, Goಎಂಬವನ (ಕಂಡಕ್ಟರ್) ದಯ ಒಂದಿರಲಿ’ ಇದು ಎಲ್ಲರಿಗೂ ಪ್ರಿಯ ಪಲ್ಲವಿ! ಬಸ್ಸು ಹೊರಡುವ ಗಂಟೆಗೆ ಮೊದಲೇ ಅದಕ್ಕೆ ಅದೆಷ್ಟು ವಂದಿಮಾಗಧರು (“ಆ ಶಿಮೊಗಾ ಶಿಮೊಗಾಆಅ, ಉಡ್ಪಿ, ಕುಂದಾಪ್ರ, ನಗ್ರ, ಶಿಮೊಗಾಆಆ...”)! ನಿಗದಿತ ಅವಧಿಗೆ ಪೇಟೆ ಬಿಡಲಾಗದ ನೋವು ಇವಕ್ಕೆ ನಿತ್ಯಕರ್ಮ. ಸಾಲದ್ದಕ್ಕೆ ಕೂಳೂರು ಸುರತ್ಕಲ್ಲಿನವರೆಗೂ ಅದೆಷ್ಟು ಭಜಕರು, ಅದೆಷ್ಟು ಕಟ್ಟೆಪೂಜೆಗಳು. ಹೀಗೆ ಯದ್ವಾ ತದ್ವಾ ಹೆಚ್ಚಿಕೊಂಡ ಬಸ್ಸು ಉಡುಪಿಯಲ್ಲಿ ಪಂಚೇರ್ ಆದದ್ದು ವಿಶೇಷವಲ್ಲ. ಬದಲಿ ಚಕ್ರ ಅಳವಡಿಸುವವರೆಗೆ, ‘ಇಂದು ಇಲ್ಲಿರುವುದೇ ಭಾಗ್ಯ’ ಎಂಬಂತೆ ವಿವಿಧ ಭಂಗಿಗಳಲ್ಲಿ ಕೂತು, ಬೆವರೊರೆಸುತ್ತ, ಗಾಳಿ ಹಾಕಿಕೊಳ್ಳುತ್ತ ಇದ್ದವರ ಚಂದ ನೋಡಬೇಕು. ನಿಂತವರ ತಿಮುಕು ಅನಿವಾರ್ಯವಾಗಿ ಟಯರ್ ಬದಲಾಯಿಸುವವರ ಸುತ್ತು ಮುತ್ತಿ ಕೆಲಸ ಮಾಡುವವರ ಕೈಗೆ ಕಾಲಿಗೆ ಸಿಕ್ಕಿಕೊಂಡು, ಗಾಳಿ ಬೆಳಕಿಗೆ ಅಡ್ಡಿ ಮಾಡಿಕೊಂದು ಸಹಕರಿಸುತ್ತಿದ್ದರು. ರಾತ್ರಿ ಉಳಿಸಿದೆವು, ಸಮಯ ಕಳೆದರೆ ಸಾಕು, ನಿದ್ದೆ ಹೆಕ್ಕಿದರಾಯ್ತು ಎಂದೆಲ್ಲ ಭಾಗಾಕಾರ ನಡೆಸುತ್ತ ಈ ಬಸ್ಸು ಹಿಡಿದವರು ಈಗ ಮರುಬೆಳಿಗ್ಗೆ ಇದೆಷ್ಟು ತಡವಾಗಿ ತಲಪೀತು ಎಂದು ಯೋಚಿಸುವಾಗ ನಗೆ ಬರುತ್ತಿತ್ತು. ನಮ್ಮ ಮಯ್ಯಮಾಷ್ಟರಿಗೆ ಅದ್ಯಾವುದೂ ಲೆಕ್ಕಕ್ಕಿಲ್ಲ. ತನ್ನ ಪ್ರಥಮ ಸಾಹಸಯಾತ್ರೆ ಎಂಬ ಉರುಬಿನಲ್ಲಿ, ಸಹೃದಯೀ ಕೇಳುಗನಾಗಿ ಪಂಡಿತಾರಾಧ್ಯರು (ಇವರೂ ಕನ್ನಡ ಪಂಡಿತರೇ ಎಂದು ಪ್ರತ್ಯೇಕ ಹೇಳಬೇಕಿಲ್ಲ ತಾನೇ) ಸಿಕ್ಕ ಸಂತೋಷದಲ್ಲಿ ಪಲುಕಿದ ವೀರಗೀತೆಗಳು, ಕುಟ್ಟಿದ ರೋಮ್ಯಾಂಟಿಕ್ ಹಿಟ್ಟುಗಳು, ಎಸೆದ ಚಟಾಕಿ ಚಾಟೂಕ್ತಿಗಳು ಅಸಂಖ್ಯ ಅವಿರತ. ಇವು ವಿಪರೀತಕ್ಕೇರಿ ಇನ್ನೇನು ಇತರ ಪ್ರಯಾಣಿಕರು ನಮಗೆ ಒತ್ತಾಯದ ವಿದಾಯ ವಿಧಿಸುತ್ತಾರೆನ್ನುವಷ್ಟರಲ್ಲಿ ಅದೃಷ್ಟಕ್ಕೆ ಕುಂದಾಪುರ ಬಂತು, ನಾವು ಇಳಿದೆವು.

ಗಿರೀಶ ಮುಂದಾಗಿ ಕುಂದಾಪುರ ತಲಪಿ ಹೊಟೆಲ್ ಒಂದರಲ್ಲಿ ಅಳೆದೂ ಸುರಿದೂ ಒಂಟಿ ಕೋಣೆ, ಹೆಚ್ಚುವರಿ ಹಾಸಿಗೆ ವ್ಯವಸ್ಥೆ ಮಾಡಿಸಿದ್ದರು. ಆದರೆ ಆರು ಜನರಿಗೆ ಅದೂ ಬೆವರು ಬಸಿಯುವ ಬೇಸಗೆಯ ರಾತ್ರಿಯಲ್ಲಿ ನಿದ್ರೆ ತೆಗೆಯಲು ಕಿಷ್ಕಿಂಧೆ, ಅಸಾಧ್ಯ. ಅದಕ್ಕೆ ನನ್ನಲ್ಲಿ ಉಪಾಯವಿತ್ತು. ಆ ದಿನಗಳಲ್ಲಿ ನನ್ನ ಇನ್ನೊಂದು ತೀವ್ರ ಖಯಾಲಿ - ಯಕ್ಷಗಾನ. ಅಂದು ಬೆಳಿಗ್ಗೆ ವಿಶೇಷವಾಗಿ ಉದಯವಾಣಿ ನೋಡಿ ಲೆಕ್ಕ ಹಾಕಿಟ್ಟಿದ್ದೆ - ಕುಂದಾಪ್ರದಲ್ಲಿ ಧರ್ಮಸ್ಥಳ ಮೇಳದಾಟ, ಪ್ರಸಂಗ ಮಹಾರಥಿ ಕರ್ಣ. ನಾಲ್ವರನ್ನು ಕೋಣೆ ಸುಧಾರಿಸಿಕೊಳ್ಳಲು ಬಿಟ್ಟು ನಾನು ಗಿರೀಶನ ಜೊತೆಯಲ್ಲಿ ಗಾಂಧೀ ಮೈದಾನಕ್ಕೆ ನಡೆದೆ. ಬಯಲಿನಲ್ಲಿ ತಣ್ಣನೆ ಮಿಣಮಿಣಕುವ ತಾರೆ-ಚಪ್ಪರ ಹಾಕಿದ್ದರು. ಕಡಲ ತೆರೆಗೈಗಳಿಗೆ ಪಂಖ ಕೊಟ್ಟು ಗಾಳಿ ತೀಡಿಸಿದ್ದರು. ನಾವು ನೆಪಕ್ಕೆ ಟಿಕೆಟ್ ಖರೀದಿಸಿ ಆರಾಮಕುರ್ಚಿಯ ಮೇಲೆ ಮೈಚೆಲ್ಲಿದೆವು. ಬಗೆಗಣ್ಣಿನ ವನರಂಗದಲ್ಲಿ ಕುಲೀನ ಮನೆತನದ ಸುಂದರಿ (ಪಾತಾಳ ವೆಂಕಟ್ರಮಣ ಭಟ್) ವಿಹಾರ ನಡೆಸಿದ್ದಳು. ಅನುರೂಪ ಸುಂದರ (ಕುಂಬಳೆ ಸುಂದರ ರಾವ್) ಪ್ರಣಯಾಲಾಪಕ್ಕಿಳಿದಿದ್ದ. ತರುಣಿಯ ನಾಚಿಕೆಯಲ್ಲಿ ಅನುಮೋದನೆಯ ಮಿಂಚಿತ್ತು. ಆದರೆ ಸಂಪ್ರದಾಯದ ಮುಸುಕು ಕಳೆಯಲು ಅವಳಪ್ಪನಪ್ಪಣೆ ಕಾದಿದ್ದಳು. ಕನ್ಯಾದಾನವನ್ನು ಹಗುರಗೊಳಿಸಲಿಚ್ಛಿಸದ ಕನ್ಯಾಪಿತೃ (ವಿಟ್ಲ ಗೋಪಾಲಕೃಷ್ಣ ಜೋಷಿ) ಉತ್ತರೀಯವನ್ನು ಸೊಂಟಕ್ಕೆ ಬಿಗಿದು “ಊಹೂಂ, ಸೂತಪುತ್ರನಿಗೆ ಕೊಡೇ” ಎಂದಾಗ ಸವಾಲೆದ್ದಿತ್ತು. ಭಾಗವತರ ಕೊರಳು ಒರಲಿತು, ಮದ್ದಳೆ ಹರಿಯಿತು, ಚಂಡೆ ಒಡೆಯಿತು, ಸೂರ್ಯಕುಮಾರ ಕೆರಳಿದ್ದ; ನಡೆದಿರಬೇಕು ಒಂದು ಯುದ್ಧ. ರೆಪ್ಪೆಗೆ ರೆಪ್ಪೆ ಬಡಿದು, ನಮ್ಮ ಗೋಣು ಅಡ್ಡಕೆ ಬಿದ್ದು, ಗೆದ್ದಿತು ಒಳ್ಳೆಯ ನಿದ್ದೆ!

ಚಂಡೆ ಮದ್ದಳೆಗಳ ಮೇಳ ತಾರದಲ್ಲಿತ್ತು. ಮೈದಾನದಲ್ಲಿ ಅರುಣರಾಗ ಹರಡುವ ಕಾಲ. ರಂಗದ ಮೇಲೆ ಮಹಾರಥಿ (ಕುಂಬಳೆ) ಜೀವನ ಸಂಧ್ಯೆಯಲ್ಲಿದ್ದ. ಇತ್ತ ಒಡೆಯನ ಹಿತರಕ್ಷಣೆ ಅತ್ತ ಮಾತೆಗಿತ್ತ ಮಾತು. ಇತ್ತ ತೊಡರಿದ ರಥ ಅತ್ತ ಮರಳಿ ತೊಡಲಾಗದ ಅಸ್ತ್ರ. ಮಹಾರಥಿಯ ಸಂಕಟದ ಪಾಕಕ್ಕೆ ಸಾರಥಿಯ (ಸೂರಿಕುಮೇರು ಗೋವಿಂದ ಭಟ್) ನಿಂದನೆಯ ವಗ್ಗರಣೆ. ವಾಘೆ ಬಿಸುಟು, ರಥಮೂಕಿಯಿಂದ ಧುಮುಕಿ ಸಾರಥಿ ಹೊರ ನಡೆದಿದ್ದ. ಕಣ್ಣುಜ್ಜಿ, ವಾಚು ನೋಡಿ ನಾವು ಆರಾಮಕುರ್ಚಿ ಬಿಟ್ಟು ಹೊರನಡೆದೆವು. ಹೊಟೆಲಿನಲ್ಲಿದ್ದ ಮಿತ್ರರನ್ನು ಹೊರಡಿಸಿ ಕೊಲ್ಲೂರಿನ ಮೊದಲ ಬಸ್ಸೇನೋ ಹಿಡಿದೆವು. ಆದರೆ ನಮ್ಮ ಶ್ರಮ, ಅವಸರಗಳ ಪರಿವೆಯೇನೂ ಆ ಬಸ್ಸಿಗಿರಲಿಲ್ಲ. ತುಸು ಬಳಸಿನ ಆದರೆ ಉತ್ತಮ ಬೈಂದೂರು ದಾರಿಯಲ್ಲೇ ಹೋದರೂ ಸುಮಾರು ನಲ್ವತ್ತು ಕಿಮೀ ಕಳೆಯಲು ಮೂರು ಗಂಟೆ ವ್ಯರ್ಥ ಮಾಡಿತ್ತು.

ಕೊಲ್ಲೂರಿನಿಂದ ‘ನಗರ’ಕ್ಕೆ (ಸ್ಥಳನಾಮ) ಹೋಗುವ ದಾರಿ ಕೊಡಚಾದ್ರಿಯ ತಪ್ಪಲಿನ ಕಾಡನ್ನು ಶೋಧಿಸುವುದರೊಡನೆ ಘಟ್ಟವನ್ನೂ ಉತ್ತರಿಸುತ್ತದೆ. ಅದರಲ್ಲಿ ಸುಮಾರು ಹನ್ನೆರಡು ಕಿಮೀ ಅಂತರದ ಸಣ್ಣ ಪೇಟೆ - ನಾಗೋಡಿ. ಅದಕ್ಕೂ ತುಸು ಮೊದಲು ಬಲಕ್ಕೆ ಸಿಗುವ ಕೂಪುದಾರಿಯೇ (ನಾಟಾ ಸಾಗಿಸುವ ತತ್ಕಾಲೀನ ಕಚ್ಚಾ ಮಾರ್ಗ) ಮುಂದುವರಿದಂತೆ ಕೊಡಚಾದ್ರಿ ಶಿಖರಕ್ಕೇರುವ ಕಾಲುದಾರಿಯಾಗುತ್ತದೆ  ಎಂದು ತಿಳಿದಿದ್ದೆವು. ಆದರೆ ನಮ್ಮ ಗ್ರಹಚಾರಕ್ಕೆ ಮುಂದಿನ ಒಂದೂವರೆಗೆ ಗಂಟೆ ಆ ದಿಕ್ಕಿನಲ್ಲಿ, ಅಂದರೆ ನಗರಕ್ಕೆ ಹೋಗುವ ಯಾವ ಬಸ್ಸೂ ಇರಲಿಲ್ಲ. ಆ ದಿನಗಳಲ್ಲಿ ದೂರ ನಡಿಗೆಗಳು ನನಗೆಂದೂ ಸವಾಲಾಗಿ ಕಂಡದ್ದಿಲ್ಲ. ಆದರೆ ಹನ್ನೆರಡು ಕಿಮೀ ನಡಿಗೆಗೂ ಹೊಂದಿಸುವಷ್ಟು ಸಮಯ ನಮ್ಮಲ್ಲಿದ್ದಂತಿರಲಿಲ್ಲ. ಹಾಗಾಗಿ ಅವಸರವಸರವಾಗಿ ಊರಿನಲ್ಲಿದ್ದ ಒಂದೇ ಕೊಳಕು ಹೋಟೆಲ್‌ನಲ್ಲಿ ಸಿಕ್ಕಿದ್ದನ್ನೇ ಹೊಟ್ಟೆಗೆ ಹಾಕಿ, ಮತ್ತೊಂದಷ್ಟನ್ನು ಮಧ್ಯಾಹ್ನಕ್ಕೂ ಬುತ್ತಿ ಕಟ್ಟಿಸಿಕೊಂಡೆವು. ಇಷ್ಟಾಗುವಾಗಲೇ ಗಂಟೆ ಹತ್ತಾಗಿತ್ತು. ಮತ್ತೆ  ಮನಸ್ಸಿಲ್ಲದೆಯೂ ನಾಗೋಡಿಗೆ ಬಾಡಿಗೆ ಕಾರು ಮಾಡಿ ಮುಂದುವರಿದೆವು.

ಚಾರಣಾರಂಭಕ್ಕೇನೋ ಕಾರಿನ ಚಾಲಕನೇ ನಿರ್ದೇಶಕ. ಕಾಡೊಯ್ಯುವ ಲಾರಿಗಾಗಿ ಬೆಟ್ಟದ ಬಗಲಲ್ಲಿ ಕಡಿದ ಮಣ್ಣುದಾರಿ ತೊಡಗುವಲ್ಲಿಯೇ ನಮ್ಮನ್ನಿಳಿಸಿದ. ದಾರಿ ಸ್ಪಷ್ಟವಾಗಿ ಉಪಯೋಗ ದೂರವಾದ್ದು ಕಾಣುತ್ತಿತ್ತು. ದಪ್ಪ ತರಗೆಲೆ ಹಾಸನ್ನು ಆಗ ತಾನೇ ಹುರಿದಿಟ್ಟ ಹಪ್ಪಳ ರಾಶಿಯ ಮೇಲೆ ನಡೆಯುವಂತೆ ಚರಪರ ಮಾಡುತ್ತ ಸುಮಾರು ಅರ್ಧ ಗಂಟೆ ತೀವ್ರ ಏರು ನಡಿಗೆ. ಅಲ್ಲಿಲ್ಲಿ ಸಣ್ಣ ಸವಕಲು ಜಾಡುಗಳು ಎಡಬಲಗಳಲ್ಲಿ ಕವಲಾದರೂ ನಮ್ಮದು ‘ಹೆದ್ದಾರಿ’ಯೇ ಸರಿ ಎಂದು ನಿಶ್ಶಂಕೆಯಿಂದಲೇ ಹೆಜ್ಜೆಗೆ ಹೆಜ್ಜೆ ಕೂಡಿಸಿದ್ದೆವು. ಆದರೆ   ಒಮ್ಮೆಗೆ ದಾರಿಯೇ ಮನಸ್ಸು ಬದಲಿಸಿದಂತೆ ಇಳಿಯಲು ತೊಡಗುವಾಗ ತಡವರಿಸಿದೆವು. ಜಾಡು ತಪ್ಪಿಸಿಕೊಂಡು ಮತ್ತೆ ಊರು ಸೇರಿದರೇ ಎಂಬ ಸಂಶಯ ಕಾಡಿತು. ಬಗೆಹರಿಸಲು ಶಿಖರದರ್ಶನಕ್ಕಾಗಿ ಅಲ್ಲಿ ಇಲ್ಲಿ ಕಾಡಿನ ಮುಚ್ಚಿಗೆ ಹರಿದಲ್ಲಿ ಹಣಿಕಿದರೂ ಯಶಸ್ವಿಗಳಾಗಲಿಲ್ಲ. ಬಂದದ್ದೆಲ್ಲಾ ಬರಲಿ ಎಂದು ಬೀಸುಗಾಲಿಕ್ಕಿದೆವು. ಸ್ವಲ್ಪೇ ಸಮಯದಲ್ಲಿ ದಾರಿ ಮಟ್ಟಸಗೊಂಡು, ಹುಲ್ಲುಗಾವಲಾಯ್ತು. ಮತ್ತಾಚೆಗೆ ಸ್ಪಷ್ಟ ದಾರಿ ಮುಗಿದು ಕಾಲುದಾರಿಯಷ್ಟೇ ಕಡುಹಸುರಿನ ಬೆಟ್ಟ ಏರತೊಡಗಿದಾಗ ನಮ್ಮ ಆತಂಕಗಳೆಲ್ಲ ದೂರಾದುವು.

ಮಯ್ಯರು ಬೇಂದ್ರೆಯನ್ನುದ್ಧರಿಸಿದರು. ಜೋಕುಮಾರಸ್ವಾಮಿಯ ಚರಣಗಳನ್ನು ಸ್ಮರಿಸಿದರು. ಕುವೆಂಪುವನ್ನೇ ಆವಾಹಿಸಿಕೊಂಡರು. ಗಂಭೀರ ಸಾಹಿತ್ಯ ವಿಮರ್ಶೆಗೇ ತೊಡಗಿದರು. ಚಂದ್ರಶೇಖರ್‌ಗೆ ‘ಹಿಮಾಲಯ’ದ ಎದುರು ಇದೇನು ರಸಭಂಗ ಎಂಬ ಸಿಡುಕು. “ಮೇಷ್ಟ್ರೇ ಸಾಹಿತ್ಯ ಕೂತು ಓದೂಕ್ಕೆ. ಇದು ಬೆಟ್ಟ, ಹತ್ತಿ ನೋಡೂಕ್ಕೆ, ಸುಮ್ನೆ ನಡೀರಿ” ಅನ್ನುತ್ತಾ ಸರಬರ ನಡೀತಿದ್ದರು. ನರಸಿಂಹಸ್ವಾಮಿ ಸ್ಕೌಟಿನ ಹುಲಿ, ಆಳು ಕಟ್ಟುಮಸ್ತು. ಆದರೆ ಬೆಟ್ಟ ಏರುವ ತನ್ನ ತಾಕತ್ತಿನ ಬಗ್ಗೆ ಆಂಜನೇಯ ಅಜ್ಞಾನ. ಆರಾಧ್ಯ ಗುರುವಾರದವರೆಗೂ ತೀವ್ರ ಜ್ವರದಲ್ಲಿ ಬಳಲಿ ಎದ್ದ ಜೀವ. ಹಾಗಾಗಿ “ಬೆಟ್ಟದ ತಳ ಶಿಬಿರಾಧಿಪತಿ ಪಟ್ಟ ನನ್ನದೇ” ಎಂದುಕೊಳ್ಳುತ್ತಲೇ ಬಂದಿದ್ದರು. ಒಂದೊಂದು ಹೆಜ್ಜೆಯನ್ನೂ to be or not to be... ಎಂದು ತೂಗುತ್ತಲೇ ನಡೆದಿದ್ದರು. ಗಿರೀಶ ಮೈಸೂರಿನಲ್ಲಿನ ನನ್ನ ಮೇಲಿನ ಹಿರಿತನವನ್ನು (ಪ್ರೀತಿಯಿಂದ) ಇಲ್ಲೂ ಕಾಪಾಡಿಕೊಂಡು, ಎಲ್ಲರನ್ನೂ ಶಿಸ್ತುಬದ್ಧಗೊಳಿಸುವ ವ್ಯರ್ಥ ಪ್ರಯತ್ನ ಮಾಡುತ್ತಲೇ ಇದ್ದರು. ಎಡಗಾಲಿಗೆ ಎಡಗೈ ಬಲಗಾಲಿಗೆ ಬಲಗೈ ಮುಂದಕ್ಕೆಸೆಯುತ್ತ, “ಎಡಕ್ನೋಡು” ಅಂದ್ರೆ ಬಲಕ್ಕೆ ಕತ್ತು ಹೊರಳಿಸುವ ಬಚ್ಚಾಗಳಂತಲ್ಲದೆ, ತಾನಂತು ದಿಲ್ಲಿಯ ಗಣರಾಜ್ಯ ಕವಾಯತಿನ ಯೋಧನಂತೆ ನಡೆದಿದ್ದರು! ಕಾಲ್ದಾರಿ ಏರುವ ಮೈಯಲ್ಲಿ ಅತಿ ಬಳಕೆಯಿಂದ ಮತ್ತು ಮಳೆಗಾಲದ ನೀರಕೊರೆತದಿಂದ ತುಂಬ ಸವೆದಿತ್ತು. ಕೆಲವೆಡೆ ಕೊರಕಲು ಕಠಿಣವೂ ಇತ್ತು. ಇದು ಹೀಗೇ ಕೊರೆದು ಸವೆದು ಮುಂದೊಂದು ದಿನ ಬೆಟ್ಟ ಬಯಲೇ ಆಗುವ ದಿನಗಳೂ ಬರಬಹುದೇ ಎಂದು ನನ್ನ ಯೋಚನಾಸರಣಿ ಹರಿದಿತ್ತು.

ಉರಿಬಿಸಿಲ ಹೊಡೆತದಲ್ಲಿ ಒಯ್ದ ನೀರೆಲ್ಲ ಕುಡಿದು ಮುಗಿದಿತ್ತು. ಆಕಸ್ಮಿಕವೇನಾದರೂ ಒದಗಿದ್ದರೆ ನೋಡಲೂ ಹನಿ ನೀರುಳಿಯದ ಸ್ಥಿತಿಯಲ್ಲಿ ಶಿಖರ ವಲಯದ ಎರಡು ಮನೆಗಳ ಹಂತವನ್ನು ತಲಪಿದೆವು. ನಾವು ಕೇಳಿದ್ದಂತೆ ಮೊದಲನೇದು ಜೋಗಿಯದು, ಮತ್ತಿನದು ಭಟ್ಟರದು. ಹಳಗಾಲದ ಅಡಗೂಲಜ್ಜಿ ಮನೆಯಂತೆ ಇಲ್ಲಿನ ಮನೆಗಳು ಸೀಮಿತ ವ್ಯವಸ್ಥೆಯಲ್ಲಿ ಆತಿಥ್ಯಕ್ಕೆ ಹೆಸರಾದವು. ನಮ್ಮ ಬಾಡಿದ ಮುಖ ನೋಡಿ ಭಟ್ಟರು ಮಜ್ಜಿಗೆ ಕೊಟ್ಟರು. ಅಲ್ಲಿ ನೀರಿನ ಪರ್ಯಾಯ ಪದವಾಗಿ ಮಜ್ಜಿಗೆಯನ್ನು ಬಳಸುತ್ತಾರೆಂದು ನಾವು ಕಿವಿಯಲ್ಲಿ ಹೇಳಿಕೊಂಡರೂ ಒಂದು ಬಿಂದಿಗೆ ಮಜ್ಜಿಗೆ ಖಾಲಿ ಮಾಡಿದೆವು! ಒಯ್ದ ಬುತ್ತಿ ಚೀಲದಲ್ಲಿದ್ದರೂ ಮಜ್ಜಿಗೆ ಹಂಗಿನಲ್ಲಿ ಊಟಕ್ಕೆ ಬರುತ್ತೇವೆಂದು ಭಟ್ಟರಿಗೇ ತಿಳಿಸಿ ನಿಜ ಶಿಖರಕ್ಕೆ ನಡೆದೆವು.

ಹಲವು ಸಾಮಂತರ ನಡುವೆ ಸಭೆಗೊಟ್ಟ ಚಕ್ರವರ್ತಿಗಳಂತೆ ಕುದುರೆಮುಖ, ಕುಮಾರಪರ್ವತಗಳಿದ್ದರೆ ಈ ಕೊಡಚಾದ್ರಿ ಭಿನ್ನ. ಭಟ್ಟರ ಮನೆಯಿಂದ ಸುಲಭದ ಏರು. ತುಸು ದಕ್ಷಿಣಕ್ಕೊಂದು ದಿಬ್ಬ ಏರಿದರೆ ಬಲಕ್ಕೆ ಹೊರಳುವ ಅಥವಾ ಪಶ್ಚಿಮಮುಖಿಯಾಗಿ ಹಗುರಕ್ಕೆ ಏರುವ ಏಣಿನ ಕೊನೆಯೇ ಶಿಖರ. ಜಾಡಿನುದ್ದಕ್ಕೆ ಎಡಕ್ಕೆ ಆಳದ, ಬೋಳು ಕಮರಿ. ಶಿಖರದಿಂದ ಬಟ್ಟಬಯಲು ಸುತ್ತಣ ಕೊಳ್ಳ, ಕಾಡಿನ ಸೋಂಕೂ ಕಾಣದ ಬೋಳು ಶಿಖರ. ಪಡುಗಡಲ ಗಾಳಿಗಿದು ನಿತ್ಯ ವಿಹಾರತಾಣ. ಸೂರ್ಯ ಸಮುದ್ರ ಸ್ನಾನಕ್ಕಿಳಿಯುವುದನ್ನು ಇಲ್ಲಿಂದ ವೀಕ್ಷಿಸುವುದೇ ಒಂದು ರಸಕಾವ್ಯ ಪಠಣ. ಉತ್ತರ-ಪೂರ್ವಕ್ಕೆ ಹೊರಳಿ ನೋಡಿದರೆ ಸುದೂರದಲ್ಲಿ ಇನ್ನೊಂದೇ ಸಾಗರದಂತೆ ಹರಡಿದ ನೀಲಿಮೆ; ದಟ್ಟ ಕಾಡಿನ ನಡುವೆ ನಿಚ್ಚಳವಾಗಿ ತೋರಿ ಹಾವಾಡುತ್ತಿದ್ದ ಶರಾವತಿ, ಲಿಂಗನಮಕ್ಕಿ ಕಟ್ಟೆಗೆ ಸಿಕ್ಕಿ ಸೊಕ್ಕಿದ ಜಲಾಶಯ. ಕಡುಹಸುರ ಕಾಡಿನಂಚು ಈ ನೀಲಿಮೆಯ ನೂರೆಂಟು ಬಳುಕುಗಳಿಗೆ ತಕ್ಕ ವೈಯ್ಯಾರ ತೋರುವಂತಿತ್ತು.

ಹಿಂದಿನ ಹೆಚ್ಚಿನೆಲ್ಲಾ ಆರಾಧನಾ ತಾಣಗಳು ಪ್ರಕೃತಿಯಲ್ಲಿ ದೇವತ್ವವನ್ನು ಸಂಕೇತಿಸುತ್ತವೆ. ಕೊಡಚಾದ್ರಿಯ ಸ್ಥಳಪುರಾಣಿಕರು ಹೇಳುವಂತೆ ಅಂಥವು ಇಲ್ಲೂ ಕೆಲವಿವೆ. ಶಿಖರ ವಲಯದಲ್ಲಿ ಹಂಚಿಹೋಗಿರುವ ತ್ರಿಶೂಲ, ಗುಡಿ, ಗುಹೆ, ಅವೆಲ್ಲಕ್ಕೂ ಕಳಶಪ್ರಾಯವಾಗಿ ನಿಜನೆತ್ತಿಯಲ್ಲಿರುವ ಕಲ್ಲ ಮಂಟಪ ಇದಕ್ಕೆ ಸಾಕ್ಷಿ. ದಕ್ಷಿಣಕ್ಕೆ ಬೋಳು, ಆಳ ಕಮರಿ. ಶಂಕರಾಚಾರ್ಯರು ಇಲ್ಲಿ ಖಾಲಿ ಮಂಟಪ ಕಟ್ಟಿಸಿ ಸರ್ವಜ್ಞ ಪೀಠವೆಂದು ಹೆಸರಿಸಿದರಂತೆ. ಇಂದು ಕಪಟ ಸನ್ಯಾಸಿಯೊಬ್ಬ ಒಳಗೇನೋ ಬಿಂಬ ಮೂಡಿಸಿ ಸಂಕೇತ ಕೆಡಿಸಿದ್ದಾನೆ. ಮಂಟಪದ ಹಿಂದೊಂದು ಕಬ್ಬಿಣದ ಏಣಿ ಆನಿಸಿಕೊಂಡುಂಟು. ಅದು ಯಾರಿಟ್ಟರೋ ಯಾಕಿಟ್ಟರೋ ತಿಳಿದಿಲ್ಲ. ಆದರೆ ಸನ್ಯಾಸಿಗೆ ಸಿಕ್ಕ ಕತ್ತಿಯಂತೆ ದುರ್ಬಳಕೆಗೆ ಮಾತ್ರ ಸಾಧನವಾದದ್ದು ಕಂಡುಬರುತ್ತದೆ. ಸಾಹಸದ ಹೆಸರಿನಲ್ಲಿ, ಭಕ್ತಿಯ ಸೋಗಿನಲ್ಲಿ ಬಂದ ಸರ್ವ-ಅಜ್ಞರು ಮಂಟಪದ ಎತ್ತರದ ಜಾಗಗಳಲ್ಲೂ ತಮ್ಮ ಅಕ್ಷರ ಜ್ಞಾನವನ್ನೂ ಕಲಾ ಪ್ರೌಢಿಮೆಯನ್ನೂ ಸ್ಥಾಯೀಗೊಳಿಸಿದ್ದಾರೆ. ‘ಕಂಗಳಿನ್ಯಾತಕೋ’ ಹಾಡು ಇಂಥಲ್ಲೆಲ್ಲಾ ನನಗೆ ಶೋಕರಸವನ್ನು ಉದ್ದೀಪಿಸುತ್ತದೆ!

ಸರ್ವಜ್ಞಪೀಠದ ಹಿಂದೆ (ಪಶ್ಚಿಮ) ಸುಮಾರು ಇಪ್ಪತ್ತೈದು ಮೂವತ್ತಡಿಯ ತಗ್ಗಿಗಿಳಿಯಲೊಂದು ಸವಕಲು ಜಾಡಿತ್ತು. ಆಚೆ ತುಸು ದೂರದವರೆಗೆ ಹೆಚ್ಚು ಕಡಿಮೆ ಮಟ್ಟಸವಾದ ಸುವಿಸ್ತಾರ ಚಿನ್ನದ ಹುಲ್ಲಿನ ಹರಹು. ಅದರ ನಡುವೆ ಬಳಕುವ ಸವಕಲು ಜಾಡು ಸಹಜವಾಗಿ ನಮ್ಮನ್ನು ಆಕರ್ಷಿಸಿತು. ಅದರಲ್ಲಿನ ನಡಿಗೆಯೇನೋ ವಿಹಾರ. ಆದರೆ ಪಶ್ಚಿಮಕ್ಕೆ ನೂರಿನ್ನೂರು ಹೆಜ್ಜೆ ಸಾಗಿದಾಗ ಒಮ್ಮೆಲೆ ಜಾಡು ಕೊಳ್ಳ ಹಾರಿಕೊಂಡಂಥ ದೃಶ್ಯ ಯಾರದೂ ಎದೆ ಬಡಿತ ಒಮ್ಮೆ ನಿಲ್ಲಿಸೀತು! ಅಲ್ಲಿ ಶಿಖರವಲಯ ಮುಗಿಸಿ ಪೂರ್ತಿ ಕರಾವಳಿ ಮಟ್ಟಕ್ಕೇ ಬೀಳುವ ಪ್ರಪಾತ ತೆರೆದಿತ್ತು. ಭಯ ಹುಟ್ಟಿಸುವ ಕಲ್ಲು ಕೊರಕಲ ಮುಖಕ್ಕೆ ಹಸುರು ಮಕ್ಮಲ್ಲಿನ ಹೊದಿಕೆ. ಗಂಟು ಗಂಟಾದ ಕುಳ್ಳ ಮರಗಳು ಬಲಿತ ಬೇರಕಾಲುಗಳನ್ನು ಕಿಸಿದು ದರೆ ಕಚ್ಚಿ ಆಳಕ್ಕೆ ಹಬ್ಬಿದ್ದುವು. ಆದರೂ ಎಡೆಯಲ್ಲಿ ಕೆಲವು, ಮರ ಬೇರುಗಳ ಆಧಾರ ಕಾಣಿಸುತ್ತ ಸವಕಲು ಜಾಡು ಇಳಿದು ಕಣ್ಮರೆಯಾಗಿತ್ತು. ಬಿದ್ದರೆ ಪಾತಾಳ ಎಂಬ ಅರಿವುಳಿದರೂ ಕುರುಚಲು ಕಾಡಿನ ಒಳ ಸೇರಿಕೊಂಡರೆ ನೇರ ಆಳ ದೃಷ್ಟಿಯಿಂದ ಅರೆಬರೆ ಮರೆಯಾಗುತ್ತಿತ್ತು. ಕನಿಷ್ಠ ಸವಕಲು ಜಾಡಿನ ತಾರ್ಕಿಕ ಕೊನೆ ನೋಡುವ ನಮ್ಮ ಕುತೂಹಲ ಕುಸಿಯಲಿಲ್ಲ. ನಾವು ಮೂವರು ಮರಗಳ ಕಾಂಡ, ಬೇರುಗಳನ್ನು ಆಧಾರಕ್ಕೆ ಬಳಸಿಕೊಂಡು ಬಾವಿಗಿಳಿಯುವವರಂತೆ ಮುಂದುವರಿದೆವು. ಆದರೆ ಮಯ್ಯ, ಚಂದ್ರು, ಸ್ವಾಮಿಗಳಲ್ಲಿ ಆಳದ ಭಯ ಕುತೂಹಲದ ತಲೆಮೆಟ್ಟಿತು; ಹಿಂದುಳಿದರು.

ನಂದಿಬೆಟ್ಟದ ‘ಟಿಪ್ಪೂಡ್ರಾಪ್’ಗೆ, ಕಾರಿಂಜೇಶ್ವರದ ‘ಸತ್ಯಪರೀಕ್ಷೆ’ಯ ಹಾರುಕೊಳ್ಳಕ್ಕೆ ದಾರಿ ಹುಡುಕಿದ ಮೂರ್ಖತೆ ಇದಲ್ಲ. ಕಾರಣ, ಆ ಜಾಡು ಸ್ಪಷ್ಟವಾಗಿ ಪೂರ್ವ ಬಳಕೆಯದೇ ಆಗಿತ್ತು. ಜಾಡು ಎಡಕ್ಕೆ ಸರಿಯುತ್ತ ಸುಮಾರು ಅರವತ್ತು ಮೀಟರ್ ಇಳಿಸಿತು. ಅಲ್ಲಿ ಹಸುರಿಗೂ ಅವಕಾಶ ಕೊಡದ ಸ್ಪಷ್ಟ ಬಂಡೆಮೈ ನಮ್ಮ ಮೇಲೆ ಮುಂಚಾಚಿಕೊಂಡಿತ್ತು. ಅದು ಹೆಚ್ಚು ಕಡಿಮೆ ನಿಜ ಶಿಖರದ ನೇರ ತಳವೇ ಆಗಿರಬಹುದಾದ ಒಂದು ಸಪುರ ಜಗಲಿಯಂಥ ಕಲ್ಲರೆ. ಅದೇ ಚಿತ್ರಮೂಲದ ಗುಹೆ. ಅಲ್ಲಿ ಮೂವರು ಗಡ್ಡಧಾರೀ ಮಲೆಯಾಳಿಗಳು, ಧ್ಯಾನದ ನೆಪದಲ್ಲಿ ತಂಗಿದ್ದವರು ಸಿಕ್ಕರು. ಹಾಗೆ ದಿನಗಟ್ಟಳೆ, ವಾರಗಟ್ಟಳೆ ಅಲ್ಲಿ ‘ತಪಸ್ಸು’ ಮಾಡುವವರಿದ್ದಾರಂತೆ. ಅಲ್ಲಿ ಒಂದಂಚಿನಲ್ಲಿ, ಮೇಲೆ ಬಂಡೆಯ ಸಂದಿನಿಂದೆಲ್ಲೋ ಹನಿಕುವ ನೀರಿಗೆ ಅಲ್ಯೂಮಿನಿಯಂ ತಪಲೆ ಇಟ್ಟು ಸಂಗ್ರಹಿಸುವ ವ್ಯವಸ್ಥೆ ಮಾಡಿಕೊಂಡಿದ್ದರು. ತೀರಾ ಅಗತ್ಯಕ್ಕೆ ಒತ್ತಿನಲ್ಲೇ ಮೂರು ಕಲ್ಲು ಜೋಡಿಸಿ, ಪುರುಳೆ ಕಡ್ಡಿ ಒಟ್ಟಿ ಗಂಜಿ ಕಾಯಿಸಿದ್ದೂ ಕಾಣುತ್ತಿತ್ತು. ಸರಿಯಾಗಿ ಕಾಲು ಚಾಚಲಾಗದ, ತಲೆ ಎತ್ತಿ ನಿಲ್ಲಲಾಗದ ಕಿಷ್ಕಿಂಧೆ; ಹೆಸರು ಮಾತ್ರ ಚಿತ್ರಮೂಲ! ತ್ರೇತೆಯ ರಾಮ ಮೆಟ್ಟಿದ ನೆಲ (ಇಂದು ಪುರಾಣಗಳ ಸತ್ಯಾಸತ್ಯತೆಯನ್ನು ಅನಾವಶ್ಯಕ ಕಾಲಾಂತರಗೊಳಿಸಿ, ವರ್ತಮಾನದ ಗತಿಯನ್ನು ಹಿಮ್ಮುಖಗೊಳಿಸುತ್ತಿರುವುದು ತಿಳಿದೇ ಇದೆ. ಆ ‘ಸಲಕರಣೆ’ಗಳಲ್ಲಿ ರಾಮ ಹುಟ್ಟಿದ ನೆಲ ವರ್ತಮಾನದ ನೂರಾರು ರುದ್ರಭೂಮಿಗಳ ಸೃಷ್ಟಿಗೆ ಕಾರಣವಾಗುತ್ತಿರುವ ಸತ್ಯ ನಮ್ಮ ಎದುರಿದೆ. ಇಂದು ಮೂರೂವರೆ ದಶಕಗಳ ಮೇಲೆ ನನ್ನ ನೆನಪಿನ ಚಿತ್ರಗಳನ್ನು ಮರುರೂಪಿಸುವಾಗ ‘ಚಿತ್ರಮೂಲ’ ಕಾವ್ಯವಸ್ತುವಾಗಿ ತಟ್ಟುವುದಿಲ್ಲ, ಭಾವುಕತೆಗೆ ತಂಪೆರೆಯುವುದಿಲ್ಲ; ಭಯ ಹುಟ್ಟಿಸುತ್ತದೆ). ಅಲ್ಲಿಂದ ಸವಕಲು ಜಾಡು ಚದುರಿದಂತೆ, ಅಸ್ಪಷ್ಟವಾಗಿ ಮತ್ತೂ ಕೆಳಗಿಳಿಯುವುದು ಕಾಣುತ್ತಿತ್ತು. ಬಹುಶಃ ಗುಹಾವಾಸಿಗಳು ಸೌದೆಸಂಗ್ರಹದ ಮತ್ತು ನಿಸರ್ಗದ ಕರೆಗೆ ನಡೆಸಿದ ಓಡಾಟದ ಫಲವಿರಬಹುದು. ಆದರೂ ಸಮಯಾಭಾವ ಒಂದಲ್ಲದಿದ್ದರೆ ಆ ಜಾಡುಗಳ ಕೊನೆ ನೋಡುವ, ಅಂತೆಕಂತೆ ಪುರಾಣದ ಚಿತ್ರಮೂಲ ಕೊಳ್ಳದ ಪೂರ್ಣ ಆಳ ಶೋಧಿಸುವ ಉತ್ಸಾಹ ನನಗಂತೂ ಇತ್ತು! ನಾವಲ್ಲಿಂದಲೇ ವಾಪಾಸಾದೆವು. ಹಿಂದುಳಿದ ಮಿತ್ರರಿಗೆ ನಾವು ಪುನರ್ಜನ್ಮ ಪಡೆದು ಬಂದಷ್ಟೇ ಆನಂದವಾಯ್ತು!

ಭಟ್ಟರ ಮನೆ ತಲಪುವಾಗ ಗಂಟೆ ಮೂರು. ಅಲ್ಲಿಯ ಬಿಸಿ ಅನ್ನ, ಸಾಂಬಾರು, ಚಟ್ನಿ, ಮಜ್ಜಿಗೆ ನೀರು ನಮ್ಮನ್ನು ಪೂರ್ಣ ತಣಿಸಿದುವು. (ನಮ್ಮ ಚೀಲದ ಮೂಲೆ ಸೇರಿದ್ದ ತಣಕಲು ಬುತ್ತಿ ಯಾರ ನೆನಪಿಗೂ ಬರಲಿಲ್ಲ.) ಹಾಗೆಂದು ಆರಾಮ ಮಾಡುವ ಸಮಯ ಅದಲ್ಲ. ದಿನದ ಕೊನೆಯ ನಗರ - ಕೊಲ್ಲೂರು ಬಸ್ಸು ನಾಗೋಡಿ ತಲಪುವ ಮೊದಲು ನಾವಲ್ಲಿರಲು ಅವಸರಿಸಿದೆವು. ಆ ಧಾವಂತ ಆರಾಧ್ಯರಾದಿ ಕೆಲವರಿಗೆ ಅಸಾಧ್ಯವಿತ್ತು. ಆದರೆ ಚುರುಕಿನ ಮಯ್ಯಾದಿಗಳು ಮುಂದೋಡಿ ಬಸ್ಸು ಮುಟ್ಟಿದ್ದು ತಂಡದ ಅದೃಷ್ಟ. ಅದಕ್ಕೂ ಮಿಗಿಲಾಗಿ ಬಸ್ಸು ಹದಿನೈದು ಮಿನಿಟು ಕಾದು ನಮ್ಮೆಲ್ಲರನ್ನೂ ಹತ್ತಿಸಿ ಕೊಂಡೊಯ್ದದ್ದು ಬಸ್ಸಿನಲ್ಲಿದ್ದವರೆಲ್ಲರ ಸೌಜನ್ಯವೇ ಸರಿ. ಕೊನೆಯ ಹಂತದ ಕೊಲ್ಲೂರು - ಬೈಂದೂರು - ಮಂಗಳೂರು ಯಾನವಂತೂ ಸಂದ ಇಪ್ಪತ್ತು ಗಂಟೆಗಳ ವೈವಿಧ್ಯಮಯ ಚಟುವಟಿಕೆಯ ಮುನ್ನೆಲೆಯಲ್ಲಿ ನಿರಾತಂಕ, ಸುಖಕರ, ನಿಷ್ಕಂಟಕ.

(ಮುಂದುವರಿಯಲಿದೆ)

[ಅನಂತರದ ದಿನಗಳಲ್ಲಿ ಒಮ್ಮೆ ಪುನರುಜ್ಜೀವನಗೊಂಡಿದ್ದ ಗಣಿಗಾರಿಕೆ ‘ಭಕ್ತಿ ರಾಜಕಾರಣದಲ್ಲಿ ಸೋಲೊಪ್ಪಿದ್ದು ಕಾಣುತ್ತೇವೆ; ಇಂದು ಕರ್ನಾಟಕಕ್ಕೆ ಬಾಜಪ ಹೋಗಿ ಕಾಂಗ್ರೆಸ್ ಬಂದಂತೆ. ಇಂದಂತೂ ಕೊಲ್ಲೂರಿನಲ್ಲಿ ಅಸಂಖ್ಯ ಜೀಪು, ಕಾರುಗಳು ಯಾರನ್ನೂ ಮೇಲೊಯ್ಯಲು ಪೈಪೋಟಿ ನಡೆಸುತ್ತಿದ್ದಾವೆ! ಶಿಖರವಲಯದ ಕತೆ ಹೇಳಿ ಪೂರೈಸದಷ್ಟು ಇದೆ. ಇವೆಕ್ಕೆಲ್ಲ ವಿವಿಧ ಕಾಲಘಟ್ಟಗಳಲ್ಲಿ, ಹಲವು ತಂಡಗಳೊಡನೆ, ಅನಿವಾರ್ಯವಾಗಿ ವಿವಿಧ ವಾಹನಗಳಲ್ಲೂ ನಾನು, ಕೇವಲ ಪ್ರಾಕೃತಿಕ ಅನ್ವೇಷಕನಾಗಿಯೇ ಸಾಕ್ಷಿಯಾಗುತ್ತಲೇ ಬಂದಿದ್ದೇನೆ. ಅದರಲ್ಲೂ ಜಡಿ ಮಳೆಗಾಲದಲ್ಲಿ ಆಗುಂಬೆಯಿಂದ ತೊಡಗಿ ಕೊಡಚಾದ್ರಿಯಲ್ಲಿ ಮುಗಿದ ಬೈಕ್ ಓಟ ಮರೆಯಲು ಸಾಧ್ಯವೇ ಇಲ್ಲ. ಮುಂದಿನ ಅಂದರೆ, ಮೂರನೆಯ ತುಣುಕಿನ ಹಾರೈಕೆಯೊಡನೆ ಇಂದಿನದಕ್ಕೆ ಪುಷ್ಟಿ ಕೊಡುವಿರಾಗಿ ನಂಬಿದ್ದೇನೆ]

3 comments:

  1. In absence of modern communication system, experience was thrill and adventures. We lost everything including Kodachadri. Narayan Yaji

    ReplyDelete
  2. ಬೇಸಗೆಯ ರಾತ್ರಿಯಲ್ಲಿ ಕುಂದಾಪುರ ಹೋಟೆಲ್ ರೂಮಿನಲ್ಲಿ ಬೆವರು ಸುರಿಸುತ್ತ ನಿದ್ರೆ ಇಲ್ಲದೆ ರಾತ್ರಿ ಕಳೆಯುವ ಬದಲು ಕುಂದಾಪುರ ಗಾಂಧೀ ಮೈದಾನದಲ್ಲಿ ಇದ್ದ ಧರ್ಮಸ್ಥಳ ಮೇಳದಾಟವನ್ನು ಗಿರೀಶರೊಡನೆ ನೋಡಲು ಹೋದ ನಿಮ್ಮ ನಿರ್ಣಯ ಯೊಗ್ಯ ಮತ್ತು ಸೂಕ್ಕ್ತವಾಗಿತ್ತು. ನಿಮ್ಮ ಸುಂದರ ಅನುಭವಗಳನ್ನು ಇದೇ ರೀತಿ ಓದುಗರೊಡನೆ ಹಂಚುತ್ತಲಿರಿ. ಧನ್ಯವಾದಗಳು.

    ReplyDelete