14 June 2013

ಕಥನಾಂತೇ ಗೋವಿಂದಾನೆ ಗೋವಿಂದಾ...


(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ಆರು)

ತಿರುಪತಿಗೆ ನಾನು, ದೇವಕಿಯಾದರೋ ಮುಕ್ತ ಮನಸ್ಸಿನ ಕುತೂಹಲ ಒಂದನ್ನೇ ಇಟ್ಟುಕೊಂಡು ಹೋದವರು. ಹಾಗಾಗಿ ಮತ್ತೆ ದೇವದರ್ಶನದ ಪ್ರಯತ್ನಕ್ಕಿಳಿಯದೆ, ಕೇವಲ ಕ್ಷೇತ್ರದರ್ಶನ ಮುಂದುವರೆಸಿದೆವು. ಅಳಪಿರಿ ಮೆಟ್ಟಿಲ ಸಾಲಿನ ಒತ್ತಿನಲ್ಲೇ ಊರು ನುಗ್ಗಿದ ದಾರಿ ನಗರದ ಪ್ರಮುಖ ದಾರಿಯೂ ಹೌದು, ಏಕೈಕ ಇದ್ದಾರಿಯೂ ಹೌದು. ಅದೂ ಸೇರಿದಂತೆ ಊರೆಲ್ಲ ಸದಾ ಗುಡಿಸಿ, ತೊಳೆದಿಟ್ಟಂತೆಯೇ ಇತ್ತು. (ಉದ್ಯಾನವನ ಒಂದರಲ್ಲಿ ಸಂಜೆ, ಅಗತ್ಯಮೀರಿದ ಉದುರೆಲೆಗಳನ್ನು ಗೋಣಿಗಳಲ್ಲಿ ತುಂಬಿ, ಟ್ರ್ಯಾಕ್ಟರಿಗೆ ಹೇರಿ ಕಾಂಪೊಸ್ಟ್ ಕೇಂದ್ರಕ್ಕೆ ರವಾನಿಸುತ್ತಿದ್ದುದನ್ನೂ ಕಂಡೆ. ಒಟ್ಟು ಗಾಡಿಗೆ ಸುರುವಿ ಊರೆಲ್ಲಾ ‘ಪ್ರಸಾರ’ ಮಾಡಲಿಲ್ಲ, ಅಲ್ಲಲ್ಲೇ ಗುಪ್ಪೆ ಮಾಡಿ ಕಿಚ್ಚಿಟ್ಟು ಹೊಗೆ ಕರಿಕು ಬೂದಿ ಪ್ರಸಾದಗಳನ್ನು ಉಳಿಸಲೂ ಇಲ್ಲ.) ಗರುಡಾದ್ರಿ ನಗರ ಕಾಲೊನಿ ಸಾಮಾನ್ಯ ಯಾತ್ರಿಗಳಿಗಿದ್ದಂತೆ ಊರೆಲ್ಲಾ ಹಲವು ನಮೂನೆಯ ವಸತಿ ಸೌಕರ್ಯಗಳನ್ನು ಸಜ್ಜುಗೊಳಿಸಿದ್ದು ಕಂಡೆವು. ನಾವು ಬೆಳಿಗ್ಗೆ ಉಪಾಹಾರ ಸ್ವೀಕರಿಸಿದ ಹೋಟೆಲಿನಂತೆ ಹಲವು ಬರಿಯ ತಿನಿಸು ಪಾನೀಯಗಳ ಕೇಂದ್ರಗಳೂ ತಾರಾಮೌಲ್ಯಗಳ ಸನಿವಾಸ ಹೊಟೆಲುಗಳೂ ಇಲ್ಲಿವೆ. ನಮ್ಮ ಪ್ರವಾಸೀ ದೃಷ್ಟಿಕೋನದಲ್ಲಿ ಮಿತವ್ಯಯ ಪ್ರಧಾನ ಶ್ರುತಿ. ಮತ್ತೆ ಆಹಾರ, ವಸತಿಗಳಲ್ಲಿ ಆರೋಗ್ಯ ಹಾಗೂ ಕನಿಷ್ಠ ಸವಲತ್ತುಗಳನ್ನಷ್ಟೇ ಅರಸುತ್ತೇವೆ. ಪದ್ಮಾವತಿ, ವರಾಹಸ್ವಾಮಿ ಎಂಬಿತ್ಯಾದಿ ದೇವಳದ ವ್ಯಾಪ್ತಿಯ ಅತಿಥಿಗೃಹಗಳಾಗಲೀ ಮಿನರ್ವಾ ಮೊದಲಾದ ಖಾಸಗಿ ಹೋಟೆಲುಗಳಾಗಲೀ ನಮಗೆ ನಾಮಫಲಕಗಳಿಂದಾಚಿನ ಕುತೂಹಲ ಹುಟ್ಟಿಸಲಿಲ್ಲ. ಊರಿನ ಇನ್ನು ಕೆಲವು ದೇವಮಂದಿರಗಳು, ನಾವು ಹಿಂದಿನ ರಾತ್ರಿ ಮೂರು ಗಂಟೆಗಳನ್ನೇ ಕಳೆದ ‘ಸರದಿ-ಭವನ’ವಲ್ಲದೇ ಊರೆಲ್ಲಾ ವಿವಿಧ ರೂಪಗಳಲ್ಲಿ ಹಬ್ಬಿದ್ದ ಸರದಿ-ಗುಹೆ (ಸರ್ಕಸ್ಸಿನಲ್ಲಿ ಒಳಗಿನಿಂದ ಹುಲಿ ಸಿಂಹಗಳನ್ನು ರಂಗಕ್ಕೆ ಅಟ್ಟಲು ಮಾಡಿದ ಹಾಗೆ ಇಲ್ಲೂ ಬಲವಾದ ಉಕ್ಕಿನ ಸರಳು, ಬಲೆಗಳನ್ನೇ ಉಪಯೋಗಿಸಿ ಮಾಡಿದ್ದಾರೆ. ಯಾವ್ಯಾವುದೋ ಪುಟ್ಟಪಥಗಳಂಚಿನಲ್ಲಿ


ಸುಳಿದು, ಅಡ್ಡರಸ್ತೆಗಳನ್ನು ಮೇಲುಸೇತುವೆಗಳಲ್ಲಿ ಹಾಯುವ ಇದರುದ್ದಕ್ಕೂ ಯಾತ್ರಿಗಳು ಗಿಜಿಗುಡುತ್ತಿದ್ದರು!) ನೋಡುತ್ತ ದೇವಸ್ಥಾನದ ಸಮೀಪ ಹೋದೆವು. ಸ್ವರ್ಣಕಳಶ ಹೊತ್ತ ಮಂಟಪದೊಡನೆ ಮೆರೆಯುತ್ತಿದ್ದ ಪುಷ್ಕರಣಿಯಂತೂ ಕುಡಿನೀರ ಕೊಳದ ಭ್ರಮೆ ಮೂಡಿಸುವಷ್ಟು ವ್ಯವಸ್ಥಿತಗೊಂಡಿತ್ತು.ಹಾಗೆಂದು ಜನಬಳಕೆಯನ್ನೇನೂ (ಭಾವನೆಗಳು) ನಿಷೇಧಿಸಿರಲಿಲ್ಲ ಎನ್ನುವುದು ಇನ್ನಷ್ಟು ಆಶ್ಚರ್ಯದ ಸಂಗತಿಯೇ ಸರಿ. ದೇಶಾದ್ಯಂತ ನೂರು ಸಾವಿರ ‘ತೀರ್ಥ’ಗಳನ್ನು ನೋಡಿ ಅಪಾರ ಬಳಲಿದ ನಮ್ಮ ಕಣ್ಣಿಗಂತೂ ಇದು ಅದ್ವಿತೀಯವಾಗಿಯೇ ಕಾಣಿಸಿತು.



ತಿರುಮಲದ ನಗರ ಪ್ರದೇಶದಿಂದ ಹೊರಗೆ ಗಿರಿಪ್ರದೇಶದಲ್ಲಿ ಇನ್ನೂ ಕೆಲವು ಪ್ರೇಕ್ಷಣೀಯ (ಪುಣ್ಯ) ಸ್ಥಳಗಳಿವೆ ಎಂದು ನಮಗೆ ತಿಳಿದಿತ್ತು. ಆ ಕುರಿತು ನಕ್ಷೆ, ಮಾಹಿತಿ ಸ್ಪಷ್ಟ ಪಡಿಸಿಕೊಳ್ಳಲು ನಾವು ಟಿಟಿಡಿಯ ಕೆಲವು ಮಾಹಿತಿಗಟ್ಟೆಗಳಲ್ಲೂ ಸಿಬ್ಬಂದಿಯಲ್ಲೂ ವಿಚಾರಿಸಿ ಸೋತಿದ್ದೆವು. ಕನಿಷ್ಠ ಅಲ್ಲಿದ್ದ ಒಂದು ಸಾಕಷ್ಟು ದೊಡ್ಡ ಪುಸ್ತಕ ಮಳಿಗೆಯಲ್ಲಾದರೂ ಸಿಕ್ಕೀತೆಂದು ನುಗ್ಗಿದೆವು. ಅಲ್ಲೂ ಇರಲಿಲ್ಲ ಎನ್ನುವುದೊಂದು ಬಹುಶಃ ಟಿಟಿಡಿ ಗಮನಿಸದ ಕೊರತೆ. ಪುಸ್ತಕ ಮಳಿಗೆಯಲ್ಲಿದ್ದ ಓರ್ವ ಅನುಭವೀ ಯಾತ್ರಿಕ ತನಗೆ ತಿಳಿದ ಕೆಲವು ಮಾಹಿತಿ ಕೊಟ್ಟು ಹೆಚ್ಚಿನ ಸಹಾಯಕ್ಕೆ ಬಸ್ ನಿಲ್ದಾಣದ ಸಮೀಪದ ಟ್ಯಾಕ್ಸಿ ಸ್ಟ್ಯಾಂಡ್ ನಂಬಬಹುದೆಂದು ಕೊಟ್ಟ ಸಲಹೆ ಉಪಯುಕ್ತವಾಯಿತು.     

ರೂಪಾಯಿ ಎಂಟ್ನೂರರಿಂದ ತೊಡಗಿದ ಟ್ಯಾಕ್ಸೀವಾಲನೊಬ್ಬ ಆರ್ನೂರೈವತ್ತಕ್ಕಿಳಿದು ನಮ್ಮನ್ನೊಯ್ದ. ತಿರುಮಲದ ಹಿಂದಿನ ದಾರಿಯಲ್ಲೆಲ್ಲೋ ಹೊರಟು ಅರ್ಧ ದಿನದ ಹೊರಸಂಚಾರ ನಡೆಯಿತು. ಚಾಲಕ ಹೇಳಿದಂತೆ ಅಲ್ಲಿನ ಬಹುತೇಕ ಮರಗಳೆಲ್ಲಾ ಚಂದನ. ಹಾಗಾಗಿ ಬಿಗಿ ಪಹರೆ, ಬೆಂಕಿ ಆಕಸ್ಮಿಕಗಳನ್ನು ನಿವಾರಿಸುವಂತೆ ಪ್ರಾಕೃತಿಕ ಕಸ, ಪೊದರುಗಳ ನಿವಾರಣೆ ಚೊಕ್ಕವಿತ್ತು. ದಾರಿ ಶಿಖರವಲಯಕ್ಕೆ ಸಹಜವೆನ್ನುವಂತೆ ನಿರಂತರ ಬಳಕುತ್ತ, ಏಳುಬೀಳು ಕಾಣಿಸುತ್ತಾ ಹೋದರೂ ನುಣ್ಣನೆ ಡಾಮರು, ಶಿಸ್ತುಬದ್ಧವಾದ ಸೂಚನಾಫಲಕಗಳು ಎಲ್ಲಾ ಇದ್ದು ನಮ್ಮ ವನ್ಯದ ಕಲ್ಪನೆಯನ್ನೇ ಒಂದು ಲೆಕ್ಕದಲ್ಲಿ ಮರೆಯಿಸಿಬಿಟ್ಟಿತು. ‘ಕಾಡು ಇಷ್ಟು ಚೊಕ್ಕವಾದರೆ ಹೇಗೆ ಸ್ವಾಮೀ’ ಎಂದು ಒಮ್ಮೆ ಅನಿಸಬಹುದು. ಆದರೆ ನಮಗೆದುರಾಗುತ್ತಿದ್ದ ನಿರಂತರ ವಾಹನ ಪ್ರವಾಹ ನೋಡಿದರೆ ಇನ್ನು ಬೇರೆ ಹೇಗಿದ್ದರೂ ಸಂಭವಿಸಬಹುದಾದ ಅಪಘಾತಗಳು, ಅಗ್ನಿಕಾಂಡಗಳು, ಏನಲ್ಲದಿದ್ದರೂ ಗಂಧ ಚೌರ್ಯ ಮತ್ತು ಕಳ್ಳಬೇಟೆಗಳನ್ನು ಎಣಿಸಿ ಸಮಾಧಾನವೂ ಮೂಡುತ್ತದೆ. ಈ ಕಾಡಿಗಿಂತ ಎಷ್ಟೆಷ್ಟೋ ಪಾಲು ಹೆಚ್ಚು ಸಮೃದ್ಧವಾದ ‘ನಮ್ಮ’ ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ಭಗವತಿ ಘಾಟಿಯನ್ನು (ಬೇಕಾದರೆ ಪ. ಘಟ್ಟದ ಎಲ್ಲಾ ಘಾಟಿ ಎನ್ನಿ) ನೆನೆಸಿ ಅತೀವ ಕಳವಳವೂ ಕವಿಯುತ್ತದೆ.

ಶ್ರೀವಾರಿಪಾದಂ ನಮ್ಮ ಮೊದಲ ನಿಲುಗಡೆ. ಅಲಿಪಿರಿ ಮೆಟ್ಟಿಲಲ್ಲಿ ಏರಿಬರುವಾಗ ಅಯ್ಯಪ್ಪವನ ವಿವರಿಸಿದ್ದೆನಲ್ಲಾ ಅದರದೇ ತುಸು ವಿಸ್ತೃತ ರೂಪ. ದಟ್ಟ ಕಾಡಿನ ನಡುವೆ ಒಂದು ದೊಡ್ಡ ಬಂಡೆ, ನೆತ್ತಿಯಲ್ಲೊಂದು ಮಂಟಪ. ವ್ಯತ್ಯಾಸ ಇಷ್ಟೇ - ಮಂಟಪದೊಳಗೆ ಶ್ರೀನಿವಾಸನ ಪದಯುಗಳದ ಮುದ್ರಿಕೆಯಿದೆ, ಆರಾಧನೆಯೂ ಇದೆ. ನಿರೀಕ್ಷೆಯಂತೆ ವನ್ಯಪರಿಸರ ತಡೆಯಲಾರದಷ್ಟು ಜನ, ವಾಹನ ಸಮ್ಮರ್ದ. ಮಂಟಪದೆತ್ತರಕ್ಕೇರಿ ಇಳಿಯಲಿದ್ದ ಒಂದೇ ಸಪುರ ಮೆಟ್ಟಿಲ ಸಾಲಿನಲ್ಲಿ ದೇವಕಿ ಮುಂದುವರಿದಳು. ನಾನು ಹೊರವಲಯದಲ್ಲೇ ಬಂಡೆಗೊಂದು ಸಣ್ಣ ಅಪ್ರದಕ್ಷಿಣೆ ಹಾಕಿದೆ. ತಂತಿಕಿತ್ತ ಬೇಲಿ ಸರಿಸಿ, ತೆಳು ಪೊದರು ಬೀಳಲು ನುಗ್ಗಿ, ಪುಡಿ ಮಣ್ಣು ಕಲ್ಲು ತರಗೆಲೆ ರಾಶಿಗಳಲ್ಲಿ ಎಚ್ಚರದ ಜಾಡು ಮೂಡಿಸಿಕೊಂಡು ಮುಂದುವರಿದೆ. ನನ್ನೊಳಗಿನ ಶಿಲಾರೋಹಿಗೆ ಅಲ್ಲಿ ಆಕರ್ಷಕ ಗುಹೆ, ಇನ್ಯಾವುದೋ ಭಾರೀ ಬಂಡೆಗಳೆಡೆಯಲ್ಲಿ ಏರಲು ಹೊಸದೇ ಸವಾಲಿಕ್ಕುವ ಚಿಮಣಿಗೆ ಕೊಲಂಬಸ್ಸನಾಗುವ ಆಸೆ. ಆದರೆ ‘ಪಾಪಿ ಹೋದಲ್ಲಿ...” ಗಾದೆ ಮಾತಿನ ಸ್ಥಿತಿ ನನ್ನದಾಯ್ತು. ಮೊದಲು ತೀರಾ ಅನಿರೀಕ್ಷಿತವಾಗಿ ಅಲ್ಲಿನೊಂದು ಬಂಡೆ ಮರೆಯಲ್ಲಿ ಚಟದಾಸನೊಬ್ಬ ಮುದುರಿ ಕುಳಿತು ತೋಳಿಗೆ ಸೂಜಿ ಚುಚ್ಚಿಕೊಳ್ಳುತ್ತಿದ್ದುದನ್ನು ಕಂಡೆ. ನಾನು ಮುಜುಗರ ತಪ್ಪಿಸಲು ಕಂಡೂ ಕಾಣದವನಂತೆ ಮುಂದುವರಿದೆ. (ಆತ ನನ್ನನ್ನು ಇನ್ನೊಬ್ಬ ಚಟದಾಸನೆಂದು ಕನಿಕರಿಸಿದನೋ ಏನೋ!) ಇನ್ನೂ ವಿಷಾದದ ಸಂಗತಿ, ಟಿಟಿಡಿಯವರ ವ್ಯವಸ್ಥೆಯನ್ನು ಮೀರಿ ಭಕ್ತಾದಿಗಳು ಎಸೆದ ವೈವಿಧ್ಯಮಯ ಮತ್ತು ಎಷ್ಟೋ ಬಲು ಅಪಾಯಕಾರಿಯೂ ಆದ ಕಸದ ರಾಶಿ. ಅವೆಲ್ಲ ಶ್ರೀವಾರಿ ಪದಂನ ಮೆಟ್ಟಿಲ ಸಾಲಿನಲ್ಲೇರುವವರ ಕಣ್ಣಳವಿ ಮೀರಿದವು. ಆದರೆ ಅವರವೇ ನಿಸ್ಸಂದೇಹ ಕೊಡುಗೆಗಳು. ಶುಚಿತ್ವವನ್ನು ದೇವತ್ವಕ್ಕೆ ಸಮೀಕರಿಸುವ ಜವಾಬ್ದಾರಿಯನ್ನು ಏಕಾಂಗಿಯಾಗಿ ಹೊತ್ತ ಟಿಟಿಡಿ ಬಗ್ಗೆ ನನ್ನ ಸಹಾನುಭೂತಿ ಹೆಚ್ಚಿತು.

ಪ್ರಾಕೃತಿಕ ಸವಕಳಿಯ ಕತೆ ಕೇಳುವಾಗ ಹಿಂದೆ ಹಲವು ಬಾರಿ ತಿರುಮಲದ ಶಿಲಾಸೇತುವೆ ಬಗ್ಗೆ ಕೇಳಿದ್ದೆ. ಆ ಬೆಳಿಗ್ಗೆ ಮಾಹಿತಿ ಸಂಗ್ರಹಿಸುವಾಗಲೂ ಅದನ್ನೇ ನಾನು ಮುಖ್ಯವಾಗಿ ಹೆಸರಿಸಿ ಕೇಳುತ್ತಿದ್ದೆ, ಯಾರಿಗೂ ಅರ್ಥವಾದಂತಿರಲಿಲ್ಲ. ಆದರೆ ಕಾರಿನ ಸಲಹೆ ಕೊಟ್ಟಾತ ಮಾತ್ರ ಕೂಡಲೇ ಅರ್ಥೈಸಿಕೊಂಡು “ಯೂ ಮೀನ್ ಶಿಲಾದೋರಣಂ, ಇಟ್ಸ್ ನಾಟ್ ಸೇದು” ಎಂದು ವಿವರಿಸಿದ್ದ. ಕಾರು ನಿಂತ ಎರಡನೇ ತಾಣ ಶಿಲಾತೋರಣಂ, ಅದಕ್ಕೂ ಮುಖ್ಯವಾಗಿ ಚಕ್ರತೀರ್ಥಂ. ಇಲ್ಲಿ ಸಾಮಾನ್ಯ ವಾಹನಗಳಿಗೆ ಸಾಕಷ್ಟು ದೊಡ್ಡ ತಂಗುದಾಣವೂ ಸಜ್ಜುಗೊಂಡಿತ್ತು, ಜನವೂ ಹೆಚ್ಚಿದ್ದರು. ಸುಂದರ, ವಿಸ್ತಾರ ಉದ್ಯಾನವನ ಮಾಡಿ, ನಡುವೆ ಅದರ ಇನ್ನೊಂದು ಅಂಚಿನವರೆಗೂ ಸಾಕಷ್ಟು ಅಗಲದ ಪುಟ್ಟಪಥ ಮಾಡಿದ್ದರು. ಅದರಲ್ಲಿ ಸಾಗಿ, ಮುಂದೆ ಮೆಟ್ಟಿಲ ಸಾಲಿನಲ್ಲಿ ಇಳಿದು ಕೊಳ್ಳದ ಚಕ್ರತೀರ್ಥಂ ಸಂದರ್ಶನ ಹೆಚ್ಚಿನವರ ಪರಮ ಲಕ್ಷ್ಯ. ನೂರಿನ್ನೂರು ಮೆಟ್ಟಲಿನ ಕೊನೆಯಲ್ಲಿರುವ, ಗುಡ್ಡೆಯ ಪುಟ್ಟ ಕಲ್ಲ ಕೊರಕಲಿನ ಸಣ್ಣ ತೊರೆಯೇ ಚಕ್ರತೀರ್ಥ. (ಹಂಪಿಯಲ್ಲಿ ತುಂಗಭದ್ರಾ ನದಿಯ ಚಕ್ರತೀರ್ಥ ಕಂಡವರಿಗೆ ಇದು ಏನೂ ಅಲ್ಲ.) ಪ್ರಾಕೃತಿಕ ವೈಶಿಷ್ಟ್ಯಗಳನ್ನು ಹಾಗೇ ಉಳಿಸಿಕೊಳ್ಳುವ ಎಚ್ಚರದಲ್ಲಿ ಜಾಣ ಪುರಾಣಿಕರು ಕತೆ ಕಟ್ಟುತ್ತಾರೆ.

ವಾಸ್ತವದಲ್ಲಿ ತಿರುಮಲದ ಜಲಪೂರಣಕ್ಕೆ ಇದೂ ಇಂಥದ್ದೇ ಇನ್ನೂ ಕೆಲವು ಪ್ರಾಕೃತಿಕ ತೊರೆಗಳ ಪಾತ್ರ ತುಂಬ ದೊಡ್ಡದು. ನಮ್ಮ ದಾರಿಯೇ ಒಂದೆಡೆ ಸಾಕಷ್ಟು ದೊಡ್ಡ ಅಣೆಕಟ್ಟೆಯ ಮೇಲೇ ಹಾಯುವುದನ್ನೂ ನಾವು ಗಮನಿಸಿದ್ದೆವು. ಅದು ಗೋಗರ್ಭ ತೀರ್ಥವಂತೆ. ಮುಂದೆ ಚಕ್ರತೀರ್ಥದಂತೇ ಇನ್ನೊಂದೆಡೆ ಇನ್ನೂ ದೊಡ್ಡ ಕಣಿವೆಗೇ ಇಳಿದು ಒಂದು ಜಲಪಾತವನ್ನೇ ಕಂಡೆವು; ಪಾಪನಾಶಿನಿ. ಹಿಂದಿನ ಬಳಕೆಯವುಗಳಿಗೆ ಸಹಜವಾಗಿ ಸೇರಿದ್ದ ‘ತೀರ್ಥ’ ಸ್ವರೂಪವನ್ನು ಇಂದಿನ ಆಡಳಿತ ಕಳಚಿಲ್ಲ. ಆ ಎಲ್ಲ ಕಡೆಯೂ ಜನರ ದೈವೀ ಭಾವನೆಗಳಿಗೆ ನಿಯಂತ್ರಿತ ಅವಕಾಶ ಕೊಡುತ್ತಾ, ಕಟ್ಟೆ ಕಟ್ಟಿ ನಗರಕ್ಕೆ ಜಲಪೂರೈಕೆಯನ್ನು ನಡೆಸಿದ್ದಾರೆ. ಇಂದು ಹೆಚ್ಚಿದ ನೀರ ಅಗತ್ಯಕ್ಕನುಗುಣವಾಗಿ ಇನ್ನಷ್ಟು ಜಲಮೂಲಗಳಲ್ಲಿ ಕಿರು ಅಣೆಕಟ್ಟೆಗಳನ್ನೂ ಮಾಡಿದ್ದಾರಂತೆ.

ನಮ್ಮ ಟ್ಯಾಕ್ಸೀ ಚಾಲಕ ತುಂಬ ಸಂತೋಷದಿಂದ ತಿಂಗಳ ಹಿಂದೆ ಬಂದ ಅಕಾಲಿಕ ಮಳೆಯನ್ನು ಸ್ಮರಿಸಿಕೊಂಡ. ಈ ಅನಿರೀಕ್ಷಿತ ಮಳೆ ತಿರುಮಲದ ಎಲ್ಲಾ ಅಣೆಕಟ್ಟುಗಳನ್ನು ಭರ್ತಿ ಮಾಡಿದೆ. ಕಳೆದ ಎರಡು ಮೂರು ವರ್ಷ ಸಾಕಷ್ಟು ಮಳೆಯೇ ಆಗಲಿಲ್ಲ. ಕ್ಷೇತ್ರ ನೀರಿಗಾಗಿ ಪರದಾಡಿತ್ತು. ಆದರೆ ಈ ಬಾರಿ ಬಂದ ಮಳೆಯಿಂದ ಇನ್ನು ಮೂರು ವರ್ಷ ಮಳೆ ಬಾರದಿದ್ದರೂ ಕೊರತೆಯಾಗದು! ಅವನ ಮಾತುಗಳು ಉತ್ಪ್ರೇಕ್ಷೆಯೇ ಇರಬಹುದು. ಆದರೆ ಅದು ಆಡಳಿತದ ಪ್ರಾಮಾಣಿಕ ಪ್ರಯತ್ನಕ್ಕೆ ಸಂದ ಪ್ರಶಂಸೆ ಎಂದೇ ನಾವು ಭಾವಿಸಿದೆವು.

ಹಾಂ ಚಕ್ರತೀರ್ಥ, ಜನ ಕಷ್ಟಪಟ್ಟು ಐವತ್ತರವತ್ತು ಮೆಟ್ಟಿಲುಗಳಲ್ಲಿ ಕೊಳ್ಳಕ್ಕಿಳಿದು ತೀರ್ಥ ಸಂಪ್ರೋಕ್ಷಿಸಿಕೊಂಡು ಮರಳುತ್ತಲೇ ಇದ್ದರು. ಆದರೆ ಕೆಲವರಾದರೂ ಹೋಗುವಾಗ ಎಡ ಪಕ್ಕದ ತಂತಿ ಬೇಲಿ ಮತ್ತು ಸರಳಿನ ಗೇಟು ಮಾಡಿ ಬೀಗವಿಕ್ಕಿದ ವಿಶೇಷ ಆವರಣವನ್ನು ಗಮನಿಸುವುದಿತ್ತು. ಅಲ್ಲೇ ಗೇಟಿನಿಂದ ಮೂವತ್ತಡಿ ಆಚೆಗೆ ಬೋರ್ಡುಗಳೂ ಸಾರುವ ಶಿಲಾತೋರಣ ನಿಂತಿತ್ತು. ಅಲ್ಲೊಂದಷ್ಟು ಉದ್ದಕ್ಕೆ ಪ್ರಾಕೃತಿಕ ಬಂಡೆಸಾಲು ಚಾಚಿ ಬಿದ್ದಿತ್ತು. ಯುಗಯುಗಾಂತರಗಳಲ್ಲಿ ಮಳೆ, ಗಾಳಿ, ಬಿಸಿಲ ಚಾಣಕ್ಕೆ ಸಿಕ್ಕ ಅವುಗಳಲ್ಲಿ ಮೂಡಿದ ಸೀಳುಗಳೇನು, ಬಿರಿದು ತಳೆದ ಅಮೂರ್ತ ಆಕಾರಗಳೇನು, ಮಾಸಿ ತೊಳಗಿ ಬೆಳಗಿದ ವರ್ಣಛಾಯೆಗಳೇನು, ಮೇಲೇ ಮೂಡಿದ ಜೀವ ಕ್ರಾಂತಿಯ ಕುಸುರಿಯದೆಷ್ಟು! ಇವೆಲ್ಲ ಸಾಲದೆನ್ನುವಂತೆ ನಡುವೆ ಒಂದಷ್ಟು ಚಕ್ಕೆ ಎದ್ದು, ಹುಡಿ ಉದುರಿ, ಹೋಳೇ ಕಳಚಿ ನಿಂತ ಶೂನ್ಯ ನಮ್ಮ ಗಮನ ಸೆಳೆಯುತ್ತದೆ. ಇತ್ತಣ ಹುಲ್ಲ ಹಾಸಿಗೆಗೆ ರೋಮಾಂಚನವಿತ್ತು, ಅಸ್ಪಷ್ಟ ಸೋಪಾನಗಳ ತೆರೆಮರೆಯಾಟಕ್ಕೆ ಪ್ರಜ್ಞೆಯೂ ಸಾಕ್ಷಿಯೂ ತಾನೇ ಆಗಿ, ಗೋಡೆಯುದ್ದಗಲದ ಮೈ ನೀವಿ, ಅತ್ತ ನುಸಿಯ ಬಯಸುವ ಮಾರುತನಿಗಿಲ್ಲಿ ಬಂಡೆಸಾಲು ತೆರೆದ ದ್ವಾರ, ಉಳಿಸಿದ ತೋರಣ; ಶಿಲಾತೋರಣ. ಹಿನ್ನೆಲೆಯ ಅಖಂಡ ನೀಲಿಮೆಗೆ ಮೆತ್ತಿದ ಹಸುರು ಹರ್ಷದ ಕುಲುಕು ಕಾಣಿಸುವಾಗ, ಹೊಸದೇ ಪ್ರಾಕೃತಿಕ ಚೋದ್ಯ ನೋಡಿದ ನಮಗೂ ಧನ್ಯತೆ.   

ವೇಣುಗೋಪಾಲ ದೇವಸ್ಥಾನಂನಲ್ಲೂ ಕಾರಿನವನು ಒಂದು ಅಧಿಕೃತ ನಿಲುಗಡೆ ಕೊಟ್ಟ. ಸುಲಭದ ಐವತ್ತು ನೂರು ಏರು ಮೆಟ್ಟಿಲ ಕೊನೆಯಲ್ಲೊಂದು ದೇವಸ್ಥಾನ. ಉದ್ದಕ್ಕು ಎರಡೂ ಬದಿಯಲ್ಲಿ ಸಾಕಷ್ಟು ನಿತ್ಯ ಜಾತ್ರೆ. ತಿರುಮಲ ಪೇಟೆಯ ಶಿಸ್ತು ಕಳಚಿಕೊಂಡಂತೆ ತತ್ಕಾಲೀನ ರಚನೆಗಳೂ ಮಾಲುಗಳೂ ಹರಡಿದ್ದುವು. ಆಶ್ಚರ್ಯಕರವಾಗಿ ದೇವಾಲಯ ವಠಾರ ನುಗ್ಗುವ ಮೊದಲೇ ಆಡಳಿತ (ಬಹುಶಃ ಇದು ಟಿಟಿಡಿಯಿಂದ ಪ್ರತ್ಯೇಕವಿರಬೇಕು) ತಲಾ ಎರಡು ರೂಪಾಯಿಯ ತಲೆದಂಡವನ್ನೂ ವಸೂಲುಮಾಡುತ್ತದೆ. ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು (ಸದೃಢ ನವನಿರ್ಮಾಣವೇ ಇದ್ದಂತಿತ್ತು!) ಭಕ್ತಾದಿಗಳ ಸಂಬಂಧ (ಆದಾಯ?) ಕಡಿದುಕೊಳ್ಳಲು ಇಚ್ಛಿಸದೇ ನಡೆಸಿದಂತಿತ್ತು. ನೂರಿನ್ನೂರೇ ಜನರ ಸರದಿ ಸಾಲು ಚುರುಕಾಗಿಯೇ ನಡೆದಿದ್ದರೂ ನಾವು ಒಳನುಗ್ಗುವ ಉತ್ಸಾಹ ಬಿಟ್ಟು ಕಾರಿಗೆ ಮರಳಿದೆವು.

ಕಾರು ಕ್ರಮದಂತೆ ಪಾತಾಳಗಂಗಾವನ್ನೂ (ತೀರ್ಥ) ತೋರಿಸಿ, ನಮ್ಮನ್ನು ಹಿಂದೆ ತಂದು ತಿರುಮಲ ಸೇರಿಸುವಾಗ ಊಟದ ಸಮಯವಾಗಿತ್ತು. ನಾವು ಬಂದಂದಿನಿಂದ ಅಲ್ಲಲ್ಲಿ ಕಾಣುತ್ತಿದ್ದ ‘ಅನ್ನದಾನಂ ಸೂಚನಾ ಫಲಕಗಳೆಲ್ಲದರ ಲಕ್ಷ್ಯವನ್ನು ಈಗ ಭೇಧಿಸಲು ಕಾಲ ಸನ್ನಿಹಿತವಾಗಿತ್ತು. ಭರ್ಜರಿ ಅನ್ನದಾನಂ ಭವನದೆದುರೇ ಕಾರಿಳಿದೆವು. ತರತಮ ಭಾವಗಳೇನೇ ಇರಲಿ, ನಮ್ಮ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಮಾತ್ರವೇನು ಸಾರ್ವಜನಿಕ ಸಮಾರಂಭಗಳಲ್ಲೂ ಇಂದು ಅನ್ನದಾನ ಒಂದು ಅವಿಭಾಜ್ಯ ಅಂಗವೋ ಎಂಬಂತೆ ಸೇರಿಹೋಗಿದೆ. ಆದರೆ ಹಿಂದೆ ತಿರುಗಿ ನೋಡುವುದಾದರೆ ಮುಖ್ಯವಾಗಿ ಧರ್ಮಸ್ಥಳ ಸೇರಿದಂತೆ ಕೆಲವು ದೇವಸ್ಥಾನಗಳ ಅನ್ನದಾನದ ಇತಿಹಾಸ ಪ್ರಾಚೀನವೂ ಪ್ರಸಿದ್ಧವೂ ಆಗಿದೆ. ಆ ಬೆಳಕಿನಲ್ಲೆಲ್ಲಾ ನೋಡಿದರೆ ತಿರುಮಲದ ಅನ್ನದಾನ ೧೯೮೪ರಷ್ಟು ಈಚೆಗಷ್ಟೇ ತೊಡಗಿದ ಸಂಗತಿ. ನನ್ನ ಅಸ್ಪಷ್ಟ ನೆನಪನ್ನೇ ಆಧರಿಸಿದರೆ ಈಚೆಗೆ ಎಲ್ಲೋ ಓದಿದ್ದೆ - ತಿರುಮಲದ ಅನ್ನದಾನಕ್ಕೆ ನಮ್ಮ ಧರ್ಮಸ್ಥಳದ್ದೇ ಪ್ರೇರಣೆ ಮತ್ತು ಆದರ್ಶವಂತೆ! ಅದೇನಿದ್ದರೂ ಇಂದು ತಿರುಮಲದ ಸರದಿಸಾಲಿನ ಭವನದಂತೇ ಅಲ್ಲಿನ ಅನ್ನದಾನ ಭವನವೂ ಒಳಗಿನ ನಿರ್ವಹಣೆಯೂ ಬೃಹತ್ತಾಗಿ ಶೋಭಿಸುತ್ತಿದೆ. ಹಿಂದಿನ ರಾತ್ರಿ ಸಿಕ್ಕ ಉಪ್ಪಿಟ್ಟು ಮತ್ತು ಊಟದ ವೈವಿಧ್ಯ ಇನ್ನೂ ಉತ್ತಮಿಕೆಯನ್ನು ಕಾಣಬೇಕು (ಗಮನಿಸಿ - ನಾನು ಇರುವುದರಲ್ಲೇ ಉತ್ತಮಿಕೆಯನ್ನು ಮಾತ್ರ ಸೂಚಿಸುತ್ತಿದ್ದೇನೆ, ವೈಭವವನ್ನು ಕೇಳುತ್ತಿಲ್ಲ). ಆದರೆ ಶುಚಿ, ಆರೋಗ್ಯಪೂರ್ಣ ಮತ್ತು ಅನಿರ್ಬಂಧಿತ ಗಾತ್ರದಲ್ಲಿ ಇದು ಹಸಿವೆ ನೀಗುತ್ತಿರುವ ಪರಿ ಕಂಡರೆ ಮೆಚ್ಚುಗೆ, ಬೆರಗು ಮಾತ್ರ ಉಳಿಯುತ್ತದೆ. ಮೊದಲೇ ಸೂಚಿಸಿದಂತೆ ಅಡುಗೆಮನೆಯಲ್ಲಿ ಸೌರಶಕ್ತಿಯ ಬಳಕೆ (ಒತ್ತಿನ ಬೃಹತ್ ಕಟ್ಟಡ ಒಂದರ ಮಾಳಿಗೆಯಲ್ಲಿ ಸೌರಶಕ್ತಿ ಗ್ರಾಹಕಗಳ ಸರಣಿಯನ್ನೇ ನೋಡಿದ್ದೆವು. ಅಲ್ಲಿ ನೀರು ಕಾಯಿಸಿ ಬರುವ ಉಗಿಶಕ್ತಿಯಲ್ಲೇ ಮುಖ್ಯ ಪಾಕವೈವಿಧ್ಯ ನಡೆಯುತ್ತದಂತೆ.), ಮೇಜಿಗೆ ಪ್ರತಿ ಪಂಕ್ತಿಯ ಎಂಜಲಿನೊಡನೆ ಕಸವಾಗುವ ವ್ಯರ್ಥ ಹೊದಿಕೆಯಿಲ್ಲ, ಕುಡಿನೀರ ಲೋಟಗಳೆಲ್ಲ ದೃಢ ಸ್ಟೀಲಿನವು, ಬಳಸಿ ಬಿಸಾಡುವ ಎಲೆ ಮುತ್ತುಗದ್ದು ಇತ್ಯಾದಿ ಅಭಿಮಾನ ಮೂಡಿಸುವ ಆದರ್ಶಗಳು.

ಸುಂದರ ವಸ್ತುಸಂಗ್ರಹಾಲಯದ ಭವನ ಕಂಡು ಒಳಗೊಂದು ಸುತ್ತು ಹಾಕಿದೆವು. ಆಶ್ಚರ್ಯಕರವಾಗಿ ಆದರೆ ನನ್ನ ಅಭಿಪ್ರಾಯದಲ್ಲಿ ಅರ್ಥಪೂರ್ಣವಾಗಿ ಒಳಗೆ ಚಿತ್ರಗ್ರಹಣಕ್ಕೆ ಉಚಿತ ಮನ್ನಣೆಯನ್ನು ಕೊಟ್ಟಿದ್ದರು. ಜನ ತಮ್ಮ ಕ್ಯಾಮರಾಗಳಲ್ಲಿ ಸಂಗ್ರಹಿಸಿಕೊಳ್ಳುವ ಚಿತ್ರಗಳು ಯಾವುದೇ ಸಂಗ್ರಹಾಲಯ ಅಥವಾ ಕಲಾಪ್ರಕಾರಗಳ ಉದ್ದೇಶದ ಮುಂದುವರಿಕೆ ಮಾತ್ರ ಎನ್ನುವ ಎಚ್ಚರ ಇಂದು ಕರ್ತೃಗಳಲ್ಲಿ ಕಳೆದುಹೋಗಿದೆ. ತೀರಾ ಅತ್ಯುತ್ತಮ ಪ್ರತಿಕೃತಿಯಲ್ಲೂ ಸ್ಮರಣೆ ಮೂಲದ್ದೇ ಇರುತ್ತದೆಂದಾದಮೇಲೆ ಚಿತ್ರ ನಿಷೇಧ ಹಾಕುವುದು ಸರಿಯಲ್ಲ. ಟಿಟಿಡಿಗೆ ದಕ್ಕಿದ ಹಲವು ವಿಗ್ರಹಗಳು, ಕೆಲವು ಜೀರ್ಣೋದ್ಧಾರದ ಸಂದರ್ಭಗಳಲ್ಲಿ ತಿರಸ್ಕೃತಗೊಂಡ ಮುಕ್ಕಾದ ಮೂಲ ಬಿಂಬಗಳೂ ಅಲ್ಲಿ ಸೇರಿದಂತಿತ್ತು. ನೌಕರರು ಧಾರಾಳವಿದ್ದರು, ವೀಕ್ಷಕರು ತೀರಾ ವಿರಳ. ನಾವಂತೂ ವಿರಾಮದಲ್ಲಿ ನೋಡಿದೆವು. ಅರೇಬಿಯಾದ ಕತೆಗಳಲ್ಲಿ ದೀಪ ರಕ್ಕಸ ಮಾಯಾಶಕ್ತಿಯಿಂದ ಕ್ಷಣಾರ್ಧದಲ್ಲಿ ನಿಲ್ಲಿಸಿದ ವೈಭವೋಪೇತ ಅರಮನೆಯೊಂದರ ವರ್ಣನೆ ಬರುತ್ತದೆ. ಅದರಲ್ಲಿ ನಡುವೆ ಒಂದು ಬೋಳು ಕಿಟಕಿಯನ್ನು ರಕ್ಕಸ ಉಳಿಸಿದ್ದನಂತೆ. ಅದು ಅರಮನೆ ಸೇರಲಿದ್ದ ‘ಮಾನುಷ ಶಕ್ತಿ’ಗೆ ತುಂಬಲು ಬಿಟ್ಟ ಸವಾಲಂತೆ. ಉತ್ತರಿಸಲು ಹೊರಟು, ಉಳಿದ ಕಿಟಕಿಗಳಿಗೆ ಸಾಟಿಯಾಗಿ ಅದನ್ನು ಅಲಂಕರಿಸಲು ಇಳಿದಾಗ ಆ ದೇಶದ ರಾಜನ ಭಂಡಾರವೇ ಬರಿದಾದ ಕತೆ ನೆನೆಪಿಸಿಕೊಳ್ಳಿ. ಈ ವಸ್ತುಸಂಗ್ರಹಾಲಯದ ನಡುವೆ ಹಾಗೇ ಒಂದು ತುಣುಕು ಗೋಡೆಯನ್ನು ನನಗಂದಾಜಿಸಲಾಗದ ಕಾರಣಕ್ಕೆ ಖಾಲೀ ಉಳಿಸಿದ್ದಾರೆ. ಅಲ್ಲಿ ತುಂಬಿದ ಗೋಡೆಗೀಚು ಸಾಹಿತ್ಯ ಮಾತ್ರ ಯಾವ ಮಾಯಾರಕ್ಕಸನನ್ನೂ ನಿಸ್ಸಂದೇಹವಾಗಿ ಸೋಲಿಸಬಲ್ಲುದು!

ತಿರುಮಲಕ್ಕೇರಿಳಿಯಲು ಇರುವ ಇನ್ನೊಂದು ಮೆಟ್ಟಿಲ ಜಾಡು - ಶ್ರೀವಾರಿಮೆಟ್ಟು. ಅದನ್ನು ಮರುದಿನದ ನಮ್ಮ ಅವರೋಹಣಕ್ಕೆ ಬಳಸುವ ಉದ್ದೇಶ ನಮಗಿದ್ದುದರಿಂದ ಸಂಜೆಯೇ ನೋಡಿಟ್ಟುಕೊಳ್ಳುವುದಕ್ಕಾಗಿ ಅಲ್ಲಿಲ್ಲಿ ವಿಚಾರಿಸಿ ಪಾದ ಬೆಳೆಸಿದೆವು. ಹಳಗಾಲದ ದೊಡ್ಡ ಕೆರೆ, ಒಂದು ವಿಸ್ತಾರ ಉದ್ಯಾನವನ, ತೋಟಗಾರಿಕಾ ಇಲಾಖೆಯ ಕಛೇರಿಗಳು ತಿರುಮಲದ ಇನ್ನೊಂದೇ ಪ್ರಪಾತದಂಚನ್ನು ಕಾಣಿಸುವಲ್ಲಿ ಮತ್ತೊಂದೇ ಶೋಭಾಯಮಾನ ಗೋಪುರ ದ್ವಾರದೊಡನೆ ಶ್ರೀವಾರಿಮೆಟ್ಟು ಇಳಿಯತೊಡಗಿತ್ತು. ನಮ್ಮ ಸಂತೋಷಕ್ಕೆ ಅಲಿಪಿರಿ ಮೆಟ್ಟಲಿನ ಮುಕ್ತಾಯದಲ್ಲಿದ್ದಂತೆ ಇಲ್ಲೂ ಒಂದು ಯಾತ್ರಿಗಳ ಸಾಮಾನು ಸಾಗಣಾ ಕೇಂದ್ರ ಕೆಲಸ ನಡೆಸಿತ್ತು. ಉದ್ಯಾನ ತುಸು ಸುತ್ತು ಹಾಕುವಾಗ ಇಳಿಮೆಟ್ಟಲಿನ ತುಸು ಈಚೆಗೆ ಇಡಿಯ ನಗರದ ಕೊಳಚೆ ನೀರಿನ ಮರುಬಳಕೆ ಕೇಂದ್ರ ಕಾಣಿಸಿತು. ದೂರದಿಂದಲೇ ಕಾಣುವಂತೆ ಎರಡು ಸಿಮೆಂಟ್ ಕೊಳಗಳಲ್ಲಿ ಮಂದ ಹಸಿರು ನೀರು ಧುಮುಧುಮಿಸುತ್ತಿತ್ತು.

ಅದನ್ನು ಗಾಳಿಯಾಡಿಸಿ, ಮಥಿಸಿ ತೆಗೆದ ಕೆಸರನ್ನು ಸೂಕ್ತ ಸಂಸ್ಕರಣದೊಡನೆ ಕೆಲವು ಕಳಗಳಲ್ಲಿ ಒಣಗಲು ಹರಡಿದ್ದೂ ಕಾಣಿಸುತ್ತಿತ್ತು. ಇಲ್ಲಿನ ಕೆಸರು ಒಳ್ಳೆಯ ಗೊಬ್ಬರವಾಗಿ ನಗರಾಲಂಕರಣದ ಉದ್ಯಾನಗಳಲ್ಲಿ ಉಪಯೋಗಿಸುತ್ತಾರಂತೆ. ಹಾಗೇ ಇಲ್ಲಿನ ನೀರೂ ಬೇರೆಯೇ ಕೊಳವೆಗಳಲ್ಲಿ ಸಾಗಿ ಬೆಟ್ಟದ ಮೇಲೆ ಮಾತ್ರವಲ್ಲ ಕೆಳಗೂ ಕೃಷಿಪ್ರದೇಶಗಳನ್ನು ತಂಪುಗೊಳಿಸುತ್ತವಂತೆ. ಮರುದಿನ ಶ್ರೀವಾರಿ ಮೆಟ್ಟು ಇಳಿಯುವಾಗ ನಮ್ಮ ಒಂದು ಮಗ್ಗುಲಲ್ಲಿ ಈ ಕೊಳಚೆ ನೀರಿನ ಕೊಳವೆಗಳು ಹಾದು ಹೋಗುವುದೂ ಬೆಟ್ಟದ ತಳದಲ್ಲಿ ಮತ್ತೊಂದೇ ಸ್ತರದ ಜಲಸಂಸ್ಕರಣ ನಡೆಸುವ ಕೇಂದ್ರ ಕಾರ್ಯಾಚರಣೆ ನಡೆಸಿರುವುದನ್ನೂ ಕಂಡಿದ್ದೇವೆ. ಎಲ್ಲೂ ರಚನೆಗಳು ಹಾಳುಸುರಿಯುತ್ತಿರಲಿಲ್ಲ ಎನ್ನುವ ಮಾನದಲ್ಲಿ ಮತ್ತು ಅದುವರೆಗೆ ತಿರುಮಲದ ಇತರ ವಿಭಾಗಗಳಲ್ಲಿ ಆಡಳಿತದ ದಕ್ಷತೆ ಕಂಡ ವಿಶ್ವಾಸದಲ್ಲಿ ಹೇಳಬಲ್ಲೆ ಕೊಳಚೆ ಸಂಸ್ಕರಣವೂ ತುಂಬ ಅರ್ಥಪೂರ್ಣವಾಗಿಯೇ ನಡೆಯುತ್ತಿರಬೇಕು.

ಸಂಜೆ ರಂಗು ಏರುತ್ತಿದ್ದಂತೆ ನಾವಿಬ್ಬರು ವಾಸಸ್ಥಾನಕ್ಕೆ ಹೊರಟೆವು. ಅತ್ತ ಲಘು ಕಾಫಿ ಕುಡಿಯುವ ಹೊತ್ತಲ್ಲ, ಇತ್ತ ಘನ ಊಟ ಸೇರಿಸಲು ಆಗುವುದಿಲ್ಲ ಅಂದುಕೊಳ್ಳುತ್ತಿರುವಾಗ ಬಸ್ ನಿಲ್ದಾಣದ ಬಳಿಯ ಇನ್ನೊಂದೇ ಹೋಟೆಲ್ ಆಕರ್ಷಿಸಿತು. ಒಳಗೆ ಜನವೇ ಇರಲಿಲ್ಲ, ಇದ್ದೆರಡು ‘ಮಾಣಿ’ಗಳಲ್ಲಿ ಉತ್ಸಾಹವೂ ಕಾಣಲಿಲ್ಲ. ಸ್ವಲ್ಪ ಪ್ರಾಯದಲ್ಲಿ ಹಿರಿಯ ಮಾಣಿ ಬುದ್ಧಿವಂತನಂತೆ ನಮ್ಮ ತಿನಿಸು ವಿಚಾರಿಸುವ ಮೊದಲು ನಮ್ಮ ಊರು ಭಾಷೆ ವಿಚಾರಿಸಿಕೊಂಡ. ತನಗೆ ಕನ್ನಡವೇನು ಎಲ್ಲಾ ಭಾಷೆ ಗೊತ್ತು, ಎಲ್ಲಾ ಊರು ತಿಳಿದಿದ್ದೇನೆ ಎಂಬ ಗರ್ವ ಹಿನ್ನೆಲೆಯಲ್ಲಿ ಕಾಣುತ್ತಿತ್ತು. ನಾವು ಆತನ ಮಾತಿನುತ್ಸಾಹಕ್ಕೆ ಯಾವುದೇ ಕುಮ್ಮಕ್ಕು ಕೊಡದೆ ನೀರುಳ್ಳಿ ದೋಸೆ ಹೇಳಿದೆವು. ಕಿರಿಯ ಮಾಣಿ ಸರಕ್ಕನೆ ಹೊರಗೆ ಹೋಗಿ, ಮಾರ್ಗದಂಚಿನಲ್ಲಿ ಕುಳಿತ ಚರುಮುರಿಯವನ ಡಬರಿಯಿಂದ ಒಂದು ಸಣ್ಣ ಮುಷ್ಟಿ ಕೊಚ್ಚಿದ ನೀರುಳ್ಳಿ ಹಿಡಿದುಕೊಂಡು ಒಳಗೆ ಹೋದ. ಅಷ್ಟರಲ್ಲಿ ಮೂರು ಮಂದಿ ಗಟ್ಟಿಯಾಗಿ ಕನ್ನಡದಲ್ಲಿ ಮಾತಾಡಿಕೊಳ್ಳುತ್ತಾ ಬಂದು ನಮ್ಮ ಹಿಂದಿನ ಮೇಜು ಹಿಡಿದರು. ಗೊತ್ತಿದ್ದವರಿಗೆ ಸ್ಪಷ್ಟವೇ ಇದ್ದರೂ ಹಿರಿಯ ಮಾಣಿ ಅವರಲ್ಲೂ ವಿಚಾರಿಸಿದ, ಅವರ ಬದಾಮಿಯನ್ನೂ ಕಂಡವನಂತೇ ಕೊಚ್ಚಿಕೊಂಡ. ನಮ್ಮ ದೋಸೆಗೂ ಮುನ್ನ ಅವರು ಕೇಳಿದ್ದ ಸಿದ್ಧ ಇಡ್ಲಿಯನ್ನು ಕೊಟ್ಟ. ಅನಂತರ ನಮಗೆ ಬರಬೇಕಿದ್ದ ತಿನಿಸಿನ ಬದಲು ಹಸಿಬಿಸಿ ಹುಳಿಹಿಟ್ಟಿನ ಮೇಲೆ ಬಾಡಿದ ನಾಲ್ಕು ನೀರುಳ್ಳಿ ಹೋಳು ಎರಚಿದಂತಿದ್ದದ್ದು ಬಂತು. ಮೂಗರಳಿಸುವ, ರಸನೆ ಜಿನುಗಿಸುವ, ತಿನಿಸಿನ ಅಂಗವಾಗಿ ಬೆರೆತು, ಚುಟ್ಟಿಯ ಎಣ್ಣೆ ಮತ್ತು ಕಾವಲಿಯ ಬಿಸಿಯಲ್ಲಿ ಕೆಂಪಾಗಿ ಸೊಗಯಿಸುತ್ತದೆಂಬ ಕಲ್ಪನೆ ಸತ್ತಿತ್ತು. ಕೂಟಕವಾಗಿ ಕಾಯಿಯುಕ್ತ ಚಟ್ನಿಯಿರಲಿಲ್ಲ. ಯಾವುದೋ (ಮಧ್ಯಾಹ್ನದ) ತಣಕಲು ಸಾಂಬಾರ್ ನೋಡಿದಾಗ ಮತ್ತಷ್ಟು ನಿರಾಶೆಯಾಯಿತು. ಪ್ರವಾಸದ ಹದ ನಮಗೆ ಸಿದ್ಧಿಸಿದ್ದುದರಿಂದ, ಹೊಟ್ಟೇಪಾಡೆಂದುಕೊಂಡು ನಿಧಾನಕ್ಕೆ ಹರಿದು ತಿನ್ನತೊಡಗಿದೆವು.

 “ತಟ್ಟೆಯಲ್ಲಿ ಕೈ ತೊಳಿಬಾರ್ದು” ಇದ್ದಕ್ಕಿದ್ದಂತೆ ಹಿರೇ ಮಾಣಿ ಬದಾಮಿಯವರನ್ನು ಗದರಿದ. ಆ ಒರಟು ಮಂದಿಯಾದರೋ “ಹಂಗಂತ ಬೋರ್ಡ್ ಹಾಕೀರೇನು” ಲಘುವಾಗಿಯೇ ತಮ್ಮ ವಾದ ಎತ್ತಿದರು. ಹಿರೇ ಮಾಣಿ ಇಂಗ್ಲಿಷ್, ತೆಲುಗುಗಳಲ್ಲಿದ್ದ ಬೋರ್ಡ್ ಕೈಮಾಡಿ ತೋರಿಸಿದ ಮೇಲಾದರೂ ಈ ಮೂರ್ಖರು ಸುಮ್ಮನಿರಬಹುದಿತ್ತು. ಎಲ್ಲೋ ಮೂಲೆಯಲ್ಲಿ ಹಾಕಿದರೆ ಯಾರಿಗೆ ಕಾಣುತ್ತದೆ. ಮತ್ತೆ ಕನ್ನಡದಲ್ಲೂ ಹಾಕಬೇಡವೇ ಎಂದೆಲ್ಲಾ ಅಪಸ್ವರ ತೆಗೆದರು. ಹಿರೇಮಾಣಿ ತೀರಾ ಕೆಟ್ಟದಾಗಿ ‘ಕನ್ನಡದವರೇ ಹೀಗೆ’ ಎಂದ. ಕೈ ಬಾಯಿ ತೊಳೆದು ತಟ್ಟೆಗೇ ಉಗೀತಾರೆ, ಕುರ್ಚಿಮೇಲೆ ಕಾಲು ಏರಿಸುತ್ತಾರೆ ಎಂದೆಲ್ಲಾ ಜಬರಿಸಿ ಅವರನ್ನು ಕಳಚಿಕೊಂಡ. ಮಿನಿಟು ಕಳೆದ ಮೇಲೆ, ಕೆಟ್ಟ ದೋಸೆಗೆ (ಔತ್ತರೇಯರು ಹೇಳುವಂತೆ, ದೋಷ?) ದುಬಾರಿ ಬೆಲೆ ತೆತ್ತು, ಊರು ನಮ್ಮದಲ್ಲ ಮತ್ತೂ ಮುಖ್ಯವಾಗಿ, ಬದಾಮಿಯ ಒರಟರ ತಪ್ಪು ಸಮರ್ಥಿಸುವಂತದ್ದೂ ಅಲ್ಲ ಎನ್ನುವುದಕ್ಕೆ ಹೊರಬಿದ್ದೆವು. ‘ನಾವೂ ಕನ್ನಡಿಗರೆ’ ಎಂಬ ಅಪರಾಧೀ ಪ್ರಜ್ಞೆಯ ಬೇತಾಳ ಬೆನ್ನಿಗೆ ಕಟ್ಟಿಕೊಂಡು, ತ್ರಿವಿಕ್ರಮನಂತೆ ಮೌನವಾಗಿ ಮನೆಯತ್ತ ನಡೆದೆವು.

ಸೂರ್ಯೋದಯವನ್ನು ಶ್ರೀವಾರಿ ಮೆಟ್ಟಿಲಿಳಿಯುತ್ತ ಕಾಣುವ ಆಸೆ ನಮ್ಮದು. ಸುಬ್ಬುಲಕ್ಷ್ಮಿಯವರ ಖ್ಯಾತ ಶ್ರೀವೆಂಕಟೇಶ ಸುಪ್ರಭಾತ  ಮೊಳಗುತ್ತಿತ್ತು. ಸುಮಾರು ಐದು ಗಂಟೆಗೇ ಮನೆಯನ್ನೇನೋ ಬಿಟ್ಟೆವು.  ಆದರೆ ಓಣಿಯ ಕಾವಲುಗಾರನಿಗೆ ಚಾವಿ ಕೊಟ್ಟು, ಜೀಎನ್ಸಿ ಕಛೇರಿಯಲ್ಲಿ ಹೆಚ್ಚುವರಿ ಸೇವಾಶುಲ್ಕ (ರಸೀದಿ ಸಹಿತ) ರೂ ಐವತ್ತು ಕೊಟ್ಟು, ಠೇವಣಿ ಮೂನ್ನೂರು ಪಡೆದು (ಈ ಕಳ್ಳ ಗುಮಾಸ್ತನೂ ಕೆಳಧ್ವನಿಯಲ್ಲಿ ಎರಡೆರಡು ಬಾರಿ “ಗಿವ್ಮಿ ಸಂಥಿಂಗ್” ಜಪಿಸಿದ! ‘ಕಾನೂನೂ’ ಮತ್ತೆ ‘ಆದ್ರೂನೂನೂ’ ಅಂತ್ಯದಲ್ಲಿ ಹೋಲುತ್ವೆ, ಅಂದ್ನಂತೊಬ್ಬ ಬುದ್ವಂತ), ಧರ್ಮರಥದ ಜೀಎನ್ಸೀ ನಿಲ್ದಾಣಕ್ಕೆ ಬಂದೆವು. ಸ್ವಲ್ಪ ತಡವಾಗಿಯೇ ಒಂದು ಬಸ್ಸೇನೋ ಬಂತು. ಆದರೆ “ಇಲ್ಲ, ಗ್ಯಾರೇಜ್” ಎಂದರು. ಮತ್ತೆ ಐದು ಮಿನಿಟು ಕಳೆದು ಇನ್ನೊಂದು ಬಂದದ್ದೂ ಹಾಗೇ! ನಮ್ಮ ತಹತಹ ಕಂಡು ಊರಿನವರು ಯಾರೋ ಸಲಹೆ ಕೊಟ್ಟರು. ‘ಬೆಳಗ್ಗಿನ ಹೊತ್ತು ಚಾಲಕ, ನಿರ್ವಾಹಕರ ಪಾಳಿ ಬದಲಾವಣೆ, ಡೀಸೆಲ್ ತುಂಬುವುದು ಇತ್ಯಾದಿ ನಿತ್ಯ ಹೀಗೆ. ನೀವು ಎರಡು ಸ್ಟಾಪ್ ಮುಂದೆ ಹೋಗಿ ಅಲ್ಲಿ ಹೊಸ ಪಾಳಿಯ ಬಸ್ಸುಗಳು ಹೊರಡುತ್ತಿರುತ್ತವೆ.’ ಸರಿ, ಅಲ್ಲಿಗೇ ಧಾವಿಸಿ, ಬಸ್ಸೇರಿ ಶ್ರೀವಾರಿ ಮೆಟ್ಟು ನಿಲುಗಡೆಯಲ್ಲಿಳಿದೆವು. ಸಾಮಾನು ಸಾಗಣೆ ಅಡ್ಡೆಗೆ ನುಗ್ಗಿ ಬೀಗವಿಕ್ಕಿದ ಚೀಲ ಒಡ್ಡಿದೆವು. ಅಲ್ಲಿನ ನೌಕರನ ಮುಖದಲ್ಲಿ ಆಶ್ಚರ್ಯ. ಮತ್ತೆ ನೋಡಿದರೆ ಶ್ರೀವಾರಿಮೆಟ್ಟು ಏರಿ ಬರುವವರಿಗೆ ಅಲ್ಲಿ ವಿತರಣೆ ಮಾತ್ರ, ಸ್ವೀಕಾರವೇನಿದ್ದರೂ ಅದೇ ತನಿಖಾಠಾಣೆ ಬಳಿಯೇ! ಹಿಂದಿನ ಸಂಜೆ ಕೇವಲ ಬೋರ್ಡು ನೋಡಿ ಹೋಗುವ ಮೊದಲು ಒಂದು ಮಾತು ಕೇಳಿಬಿಡಬೇಕಿತ್ತು ಎಂದು ಪಶ್ಚಾತ್ತಾಪಪಡುತ್ತಾ ಮತ್ತೆ ಧರ್ಮರಥ ಹಿಡಿದೆವು. ಗಂಟು ಕೊಟ್ಟು ರಸೀದಿ ಮಾಡಿಸಿದೆವು. ತಿರುಮಲಾಧೀಷನಿಗೆ ಸುಪ್ರಭಾತ ಮುಗಿದು ನೈವೇದ್ಯದ ಹೊತ್ತಾಗುವಷ್ಟು ಸೂರ್ಯ ಮೇಲೆದ್ದ ಮೇಲೆ ನಾವು ಯಾಕೆ ಉಪವಾಸವೆಂದು ಹಿಂದಿನ ಬೆಳಗ್ಗೆ ಹೋದ ಹೋಟೆಲಿಗೇ ಹೋದೆವು. ನೀರುಳ್ಳಿ ದೋಷದ ಹೋಟೆಲಿನ ನೆನಪಲ್ಲಿ ಇವರ ಸೇವೆಯೆಷ್ಟು ಉತ್ತಮ, ರುಚಿಯೆಷ್ಟು ಉತ್ತಮ, ಬಿಲ್ಲೆಷ್ಟು ಹಗುರ ಎಂದು ಪ್ರಾಮಾಣಿಕವಾಗಿ ಮೆಚ್ಚಿ ಎದ್ದೆವು. ಮತ್ತೆ ಧರ್ಮರಥ ಹಿಡಿದು ಅವರೋಹಣಕ್ಕೆ ತೊಡಗುವಾಗ ಗಂಟೆ ಎಂಟಾಗಿತ್ತು!

ಶ್ರೀವಾರಿಮೆಟ್ಟುವಿನಲ್ಲಿ ನಮ್ಮದು ಇಳಿಯೆಣಿಕೆ. ಮೆಟ್ಟಲೇರಿ ಬರುವವರ ಭಾವಕೋಶ ತುಂಬಿ ಉಕ್ಕುವ ಆ ಜಾಗದಲ್ಲಿ ಕುಂಕುಮ ಅರಶಿನ ಮೆತ್ತಲು, ಹಣತೆ, ದೀಪ, ಬತ್ತಿ ರಾಶಿ ಬಿದ್ದು ಉರಿಯುತ್ತದೆ. ಅಲ್ಲಿ ಬೆಂಕಿ, ಜಿಡ್ಡು ಹರಡದಂತೆ ಒಂದು ಕಲ್ಲ ಬೋಗುಣಿಯನ್ನೇ ಮೀಸಲಿಟ್ಟಿದ್ದಾರೆ. ಒತ್ತಿಗೇ ತೆಂಗಿನಕಾಯಿ ಈಡು ಮಾಡಲೊಂದು ಪ್ರತ್ಯೇಕ ಕಲ್ಲು. ಈ ಗೊಂದಲದಲ್ಲಿ ನೆಲದ ಮೇಲೆ ಮೆಟ್ಟಿಲೆಣಿಕೆಯ ಅಂತಿಮ ನಮೂದಾಗಿ ಕೆತ್ತಿದ್ದ ಸಂಖ್ಯೆ ಕಂಡೂ ಕಾಣದಾಗಿತ್ತು. ಅದೃಷ್ಟವಶಾತ್ ದೇವಸಾನ್ನಿಧ್ಯಕ್ಕೇನೂ ಪಾಲುದಾರನಾಗದೇ ಪಕ್ಕದಲ್ಲಿ ಸ್ವಚ್ಛವಾಗಿ ನಿಂತಿತ್ತೊಂದು ಕಿಲೋ ಕಲ್ಲು - ನಮೂದು ‘೬ ಕಿಮೀ.’ ಅಲ್ಲಿ ನಮ್ಮದೇನಿದ್ದರೂ ಶೂನ್ಯ ಸಾಧನೆಯೇ ಲಕ್ಷ್ಯ. ನಾವಾರಿಸಿಕೊಂಡ ದಿನವೋ ಹೊತ್ತೋ ಅಥವಾ ಈ ಮೆಟ್ಟಲೇ ಹಾಗೋ ಅಂತು ಜನ ಸಾಕಷ್ಟಿದ್ದರು, ಆದರೆ ಎಲ್ಲ ಏರಿಬರುವವರೇ. ಇಲ್ಲಿ ಮೆಟ್ಟಿಲುಗಳು ಕಡಿದು, ತೀವ್ರ ಕಡಿದು ಎಂಬೆರಡೇ ವಿಧ. ಮತ್ತಿವಕ್ಕೆ ಎಲ್ಲೂ ಮಾರ್ಗ ಸಂಪರ್ಕವೂ ಇಲ್ಲ. ಉಳಿದ ವ್ಯವಸ್ಥೆಗಳಲ್ಲಿ ಅಲಿಪಿರಿ ಮೆಟ್ಟಿಲಸಾಲಿಗಿದು ಸಮಸಮ. ಇಲ್ಲಿ ಸಾರ್ವಜನಿಕ ಬಳಕೆಯ ನಲ್ಲಿಸಾಲಿನ ತುಸು ದೂರಕ್ಕೆ ಪರಿಷ್ಕರಿಸಿದ ಕೊಳಚೆ ನೀರಿನ ಕೊಳವೆಸಾಲೂ ಬೆಟ್ಟ ಇಳಿದಿತ್ತು. ಆಕಸ್ಮಿಕಗಳಲ್ಲಿ ಅದರಲ್ಲೇನಾದರೂ ಸೋರಿಕೆ ಉಂಟಾದರೆ ಸಾರ್ವಜನಿಕರು ತಪ್ಪಾಗಿ ಭಾವಿಸಿ, ಉಪಯೋಗಕ್ಕೆಳಸಿ ಬಾಧಿತರಾಗದಂತೆ ಅಲ್ಲಲ್ಲಿ ಸ್ಪಷ್ಟೀಕರಣದ ಫಲಕಗಳನ್ನು ಹಾಕಿದ್ದು ಆಡಳಿತದ ಕಾಳಜಿಗೆ ಸಾಕ್ಷಿ. (ನಮ್ಮಲ್ಲಿ ಜೀವವನ್ನೇ ತೆಗೆಯುವ ರಸ್ತೆ ದಿಬ್ಬಕ್ಕೆ ತುಸು ಬಿಳಿ ಹಳದಿ ಪಟ್ಟೆ ಬರೆಯುವವರಿಲ್ಲ!) ನಾವು ಹೆಚ್ಚು ಕಡಿಮೆ ಅವಿರತ ಆದರೆ ಎಲ್ಲೂ ಅವಸರಿಸದ ಎಚ್ಚರದಲ್ಲಿಳಿದಿಳಿದಿಳಿದು ಒಂಬತ್ತು ಗಂಟೆಗೆ ಬುಡ ತಲಪಿದೆವು.

ಶ್ರೀವಾರಿಮೆಟ್ಟುವಿನ ಆ ಆರಂಭಿಕ ತಾಣದಲ್ಲಿ ಕೊಳಚೆನೀರಿನ ಸಂಸ್ಕರಣ ಕೇಂದ್ರ ಬಿಟ್ಟರೆ ಇನ್ಯಾವ ನಾಗರಿಕ ರಚನೆ, ವ್ಯವಸ್ಥೆ ಇಲ್ಲ. ಹಾಗಾಗಿ ಈ ತಪ್ಪಲಿನ ಯಾತ್ರಿ ಸೌಲಭ್ಯವಾಗಿಯೂ ಟಿಟಿಡಿ ಮೂರು ಶ್ರೀವಾರಿ ಧರ್ಮರಥಗಳನ್ನು ನಡೆಸುತ್ತಿದೆ. ಸುಮಾರು ಮುಕ್ಕಾಲು ಗಂಟೆಯ ಅಂತರದಲ್ಲಿ ಅವು ಜನರನ್ನು ಹನ್ನೆರಡು ಕಿಮೀ ದೂರದ ಅಲಿಪಿರಿ ಗೇಟಿಗೋ ಮತ್ತೆ ನಾಲ್ಕೈದು ಕಿಮೀ ಅಂತರದ ರೈಲ್ವೇ ನಿಲ್ದಾಣಕ್ಕೋ ಮುಟ್ಟಿಸುತ್ತವೆ. ಹಾಗೇ ಮರಳುವ ದಾರಿಯಲ್ಲೂ ಸೇವಾಸೌಲಭ್ಯ ಕೊಡುತ್ತವೆ. ಆ ವಲಯಕ್ಕೆ ಸಮೀಪದ ಸಾರ್ವಜನಿಕ ಬಸ್ ಸೇವೆಯಿರುವ ಸ್ಥಳ ಶ್ರೀನಿವಾಸ ಮಂಗಪುರಂ; ಶ್ರೀವಾರಿ ಮೆಟ್ಟುವಿನ ಮುಕ್ತಾಯದಿಂದ ಸುಮಾರು ಎರಡು ಕಿಮೀ ಅಂತರದ್ದು. ಹಾಗೆ ಅಲ್ಲಿಳಿದು, ಈ ಮುಖದಿಂದ ತಿರುಮಲ ಏರುವ ಯಾತ್ರಿಗಳೂ ಅಸಂಖ್ಯರಿದ್ದಾರೆ. ಅವರ ಅನುಕೂಲಕ್ಕಾಗಿ ಟಿಟಿಡಿ ಶ್ರೀನಿವಾಸ ಮಂಗಪುರಂನಲ್ಲೂ ಉಚಿತ ಸಾಮಾನು ಸಾಗಣಾ ವ್ಯವಸ್ಥೆಯ ಸಂಗ್ರಹ ಕೇಂದ್ರವನ್ನು ನಡೆಸಿದ್ದಾರೆ. ಅಂಥವರಲ್ಲಿ ಹಲವರು ಧರ್ಮರಥದ ವ್ಯವಸ್ಥೆ ಗೊತ್ತಿಲ್ಲದೆಯೋ ತಪ್ಪಿಸಿಕೊಂಡೋ ಪ್ರತ್ಯೇಕ ವಾಹನ ಸೌಕರ್ಯ ಮಾಡಿಕೊಂಡು ಬರುತ್ತಲೇ ಇದ್ದರು. ನಾವು ಸುಮಾರು ಹದಿನೈದು ಮಿನಿಟು ಕಾದು ಧರ್ಮರಥವೇರಿ ಅಲಿಪಿರಿ ಸೇರಿದೆವು. ನಮ್ಮ ಸೊತ್ತು ಸಂಗ್ರಹಿಸಿಕೊಂಡು ತಿರುಮಲದ ತಿರುಗಾಟದ ಧನ್ಯತೆಯನ್ನು ಚಪ್ಪರಿಸಿಕೊಂಡು ಬೆಂಗಳೂರ ಬಸ್ಸೇರಿದೆವು.

- ಕ್ಷೇತ್ರ ದರ್ಶನ ಮಾಲಿಕೆ ಮುಗಿಯಿತು -

ಹೌದು, ನಾವೇನೋ ಮಗನ ಮನೆಗೆಂದು ಬಸ್ಸೇರಿದೆವು. ಆದರೆ ಇಷ್ಟುದ್ದಕ್ಕೆ ನಮ್ಮೊಡನೆ ಬಂದ ನೀವು ಜಾಲಕ್ಕೇರಿ ಪ್ರತಿಕ್ರಿಯೆ ತೋರಿಸದೇ ಹೋಗಲಿಕ್ಕುಂಟೇ?!

6 comments:

  1. following you is good experience, Revives interest in reading
    u r ananthamurthy

    ReplyDelete
  2. Laxminarayana Bhat P14 June, 2013 19:10

    aha. ha! neeruLLi dOse!!!

    ReplyDelete
  3. Prompt narration sans unnecessary ornamentation is the real attraction of this series. Keep it up.

    ReplyDelete
  4. ಅತಿ ಭಕ್ತಿಯ ವಿಶೇಷಣ, ಉತ್ಪ್ರೇಕ್ಷೆಗಳಿಲ್ಲದ ಉತ್ತಮ ಬರಹ. ನಿರೂಪಣೆಯೂ ಚೆನ್ನಾಗಿದೆ. “ಕನ್ನಡಿಗರೇ ಹೀಗೆ” ಎನ್ನುವುದು ನಮ್ಮ ಅನುಭವಕ್ಕೂ ಬಂದಿರುವ ಕೆಲ ಪ್ರಕರಣಗಳಿವೆ. ಲೇಖನವನ್ನು ಟಿಟಿಡಿಯವರು ಓದಿದರೆ ಖಂಡಿತವಾಗಿಯೂ ಖುಷಿಪಟ್ಟಾರು..!
    ಗಿರೀಶ್, ಬಜಪೆ

    ReplyDelete
  5. ಕ್ಷೇತ್ರ ದರ್ಶನದ ನಿಮಿತ್ತದಲ್ಲಾದರೂ ದೇವ ದರ್ಶನವಾಯಿತೆ? ಸುಂದರವಾದ ಚಿತ್ರ ನೀಡಿರುವಿರಿ. ಧನ್ಯವಾದಗಳು.

    ReplyDelete