17 May 2013

ಮುಕ್ತ ವಿ-ಪುಸ್ತಕಲೋಕಕ್ಕೆ ಸ್ವಾಗತ


ಮುದ್ರಿತ ಪುಸ್ತಕೋದ್ಯಮ ಇಂದು ಗೋರಿ ಶೃಂಗಾರ. ಪುಸ್ತ್ಕಾ ಪ್ರಕಟಿಸ್ಬೇಕು ಎಂಬ ಹಳಗಾಲದ ಹಳಹಳಿಕೆಯನ್ನು ವಿಚಾರಪೂರ್ಣ ಸಾಹಿತಿಗಳಿಂದು ಕಳಚಿಕೊಳ್ಳಬೇಕು. ಇಂದು ಪುಸ್ತಕ ಪ್ರಕಾಶನ ಅಪ್ಪಟ ವಾಣಿಜ್ಯ ಕಲಾಪ. ಪ್ರಕಾಶನ ಸಂಸ್ಥೆಗಳಿಗೆ ಎರಡೇ ಲಕ್ಷ್ಯ. ಒಂದು ಅಪ್ಪಟ ಪಠ್ಯ ಇವು ನೇರ ಫಲಪ್ರಾಪ್ತಿಗಾಗಿ ಅನಿವಾರ್ಯ ಓದಿನ ಸಂಗಾತಿಗಳು. ಇದರಲ್ಲಿ ನೇರ ಪಠ್ಯ ಪುಸ್ತಕಗಳೂ ವಿವಿಧ ಪರೀಕ್ಷೆಯ ಗೈಡುಗಳೂ ಸೇರಿವೆ. ಮತ್ತೆ ಇದನ್ನು ಹೆಚ್ಚಾಗಿ ಸ್ವಪ್ರಭಾವ ಮತ್ತು ವಾಣಿಜ್ಯ ಆಯಾಮ ತಿಳಿದಿರುವ ಲೇಖಕರೇ ಪ್ರಕಟಿಸುತ್ತಾರೆ.

ಇನ್ನೊಂದು ಸರಕಾರ ಸೇರಿದಂತೆದಾನ, ಅನುದಾನಗಳ ಹಣವಿನಿಯೋಗಕ್ಕೆ ಸತ್ಪಾತ್ರರಾಗುವವರ ಕರಾಮತ್ತು. ಇದೇ ಇಂದು ಪುಸ್ತಕೋದ್ಯಮ ಎಂಬ ಮಹಾಭ್ರಮೆಯಾಗಿ ಭೂಮಗಾತ್ರಕ್ಕೆ ಬೆಳೆದು ನಿಂತು, ಸಾರ್ವಜನಿಕ ಹಣವಿನಿಯೋಗಕ್ಕೆ ಭಾರೀ ಸೋರುಗಂಡಿಯಾಗಿ ಪರಿಣಮಿಸಿದೆ. ಓದುಗನ ಲೆಕ್ಕಕ್ಕೆ ನಿಮಿತ್ತ ಮಾತ್ರವಾಗಬೇಕಾದ ಬಾಹ್ಯರೂಪ (ಕಾಗದ, ಗಾತ್ರ, ಚಿತ್ರ, ವರ್ಣ, ಮುದ್ರಣ ಇತ್ಯಾದಿ) ಮತ್ತು ಘೋಷಿತ ಸತ್ಯಗಳು ಇಲ್ಲಿವೈದಿಕ ಪಾವಿತ್ರ್ಯವನ್ನೇ ಗಳಿಸಿಬಿಟ್ಟಿವೆ! ಇದನ್ನೇ ಆಡುಮಾತಿನಲ್ಲಿ ಪುಸ್ತ್ಕದ ಕಂಟೆಂಟ್ಸ್ ಎಂಥ ಬೇಕಾದ್ರೂ ಸಾಯಲಿ ಮಾರಾಯ್ರೇಪುಸ್ತ್ಕನೀತಿ (ಸರಕಾರೀ ಖರೀದಿಗೆ ಇರುವ ನಿಯಮಗಳ ಪಟ್ಟಿ) ಮಾತ್ರ ಕರೆಕ್ಟ್ ಇದ್ರಾಯ್ತು. ಇದರ ಕುರಿತು ಸ್ವಲ್ಪ ವಿವರಣೆ ಇಲ್ಲಿ ಕೊಡುವುದು ಅನಿವಾರ್ಯ. (ಹೆಚ್ಚಿನ ಓದಿಗೆ ನನ್ನ ಜಾಲತಾಣದಪುಸ್ತಕೋದ್ಯಮ ಲೇಖನಗಳನ್ನು ನೋಡಬಹುದು)


ಪುಸ್ತಕ ನೀತಿ ಗ್ರಾಹಕ ಸಂಸ್ಥೆಗಳ ಸಂವಿಧಾನಕ್ಕೆ ತಕ್ಕಂತೆ ಪಾಠಾಂತರಗಳಲ್ಲಿ ಬಹಳ ಜಾಣತನವನ್ನು ಮೆರೆಯುತ್ತವೆ. ಕೆಲವು ಯೋಜನೆಗಳಿಗೆಪ್ರಥಮ ಮುದ್ರಣ, ಕೆಲವಕ್ಕೆಮುದ್ರಿತ ವರ್ಷ, ಕೆಲವಕ್ಕೆ ವಿಷಯ, ಅಕ್ಷರ ಮತ್ತು ಪುಸ್ತಕದ ಗಾತ್ರ, ಚಿತ್ರಗಳ ಸಂಖ್ಯೆ, ಕಾಗದದ ಗುಣಮಟ್ಟ, ಮುದ್ರಿತ ಬೆಲೆ (ಮತ್ತೆ ಖರೀದಿ ಇಲಾಖೆ ವಿಧಿಸುವ ದರ ಅಥವಾ ವಟ್ಟಾದರ ಬೇರೇ ಇರುತ್ತದೆ ಎನ್ನುವುದೂ ವೃತ್ತಿಪರರಿಗೆ ಗೊತ್ತೇ ಇದೆ), ಪ್ರಕಾಶಕನ ಇಲಾಖಾ ನೋಂದಣಿ, ಆದಾಯಕರ ರಸೀದಿ ಇತ್ಯಾದಿ ಇತ್ಯಾದಿ. (ಇಂಥವೇ ಹುಚ್ಚಾಟಗಳಲ್ಲಿ ಡಿವಿಜಿಯವರು ಜ್ಞಾನಪೀಠಕ್ಕೆ ಏರಲೇ ಇಲ್ಲ!) ಉದಾಹರಣೆಗೆ ನನ್ನದೇ ಪ್ರಕಟಣೆ - ನನ್ನ ತಂದೆಯದೇ ಪುಸ್ತಕಮಾನವ, ಚಂದ್ರನ ಮೇಲೆ ೧೯೬೯ರ ಕರ್ನಾಟಕ ಸಹಕಾರಿ ಪ್ರಕಾಶನ ಮಂದಿರದ ಪ್ರಕಟಣೆಯನ್ನು ಊಹಿಸಿಕೊಳ್ಳಿ. ಕನ್ನಡ ಪುಸ್ತಕ ಪ್ರಾಧಿಕಾರ ವರ್ಷಾಧಾರಿತ ಸಗಟು ಖರೀದಿಗೆ ಪುಸ್ತಕಗಳನ್ನು ಆಹ್ವಾನಿಸುವಾಗ ಇದನ್ನು ನಾನು೨೦೧೩ರ ಮುದ್ರಣ ಎಂದಷ್ಟೇ ಕಾಣಿಸಬಹುದು. (೧೯೬೯ನ್ನು ಅಗೆದು ತೆಗೆಯುವವರು, ಮರುಮುದ್ರಣವೇ ಎಂದು ಸ್ಪಷ್ಟೀಕರಣ ಕೇಳಲು ನಿಯಮವಿಲ್ಲ!) ಬಾಯ್ದೆರೆ ಸಮಜಾಯಿಷಿಗೆ ಬೇಕಾದರೆಅತ್ರಿ ಪ್ರಕಾಶನದಲ್ಲಿ ಪ್ರಥಮ ಮುದ್ರಣವೆಂದೋ ಪ್ರಸ್ತುತಮುದ್ರಣ ವರ್ಷ ೨೦೧೩ಎಂದೋ ಜಾರಿಕೊಳ್ಳಬಹುದು. ಪುಸ್ತಕದ ಹೆಸರನ್ನೇ ಬದಲಿಸುವುದು - ಪ್ರಥಮ ಚಂದ್ರಯಾನ, ‘ಚಂದ್ರನ ಮೇಲೆ ತ್ರಿವಿಕ್ರಮ ಎಂದೇನಾದರೂ ಮಾಡಿದರಾಯ್ತು. ನಾಲ್ಕು ಏನಾದರೂ ಗೀಚಿಸಂಪಾದಕೀಯ ಟಿಪ್ಪಣಿ ಎಂದು ಸೇರಿಸ್, ಲೇಖಕನ ಹೆಸರಿನ ಜಾಗದಲ್ಲಿ ಸಂಪಾದಕ - ಅಶೋಕವರ್ಧನ, ಮೆರೆದರಾಯ್ತು. ಮತ್ತೂ ಪಾಪಪ್ರಜ್ಞೆ ಕಾಡುವುದಿದ್ದರೆ, ಮುನ್ನುಡಿಯಲ್ಲೋ ಮೊದಲ ಅಧ್ಯಾಯ ತೊಡಗುವಲ್ಲೋ ಮೂಲ ಲೇಖಕ ಜಿಟಿನಾರಾಯಣರಾವ್ ಎಂದು ಸ್ಮರಿಸಿಬಿಟ್ಟರೆ ಗೋಮಾಂಸ ತಿಂದ ಪಾಪಕ್ಕೆ ಪಂಚಗವ್ಯ ಕುಡಿದ ಹಾಗಿರುತ್ತದೆ. ಪ್ರಾಮಾಣಿಕವಾಗಿ ಮುದ್ರಣ ಇತಿಹಾಸವನ್ನು ಕೊಡುವವರುಅಪ್ರಾಯೋಗಿಕರು. ಆಯ್ಕಾ ಸಮಿತಿ, ‘ಐದು ವರ್ಷಗಳ ಹಿಂದೆಯೇ ಗತಿಸಿದ ಜಿಟಿನಾ ೨೦೧೩ರಲ್ಲಿ ಹೇಗೆ ಪುಸ್ತಕ ಬರೆದರು ಎಂದೋ ಅವರಲಿವ್ವಿಂಗ್ ಸರ್ಪಿಟಿಕೆಟ್ ಕೊಡೀ ಎಂದೋ ಕೇಳುವುದು ಸಂವಿಧಾನದಲ್ಲೇ ಇಲ್ಲ! ಇನ್ನಷ್ಟು ಚಿಕಿತ್ಸಕವಾಗಿ ಮುದ್ರಿತ ಪುಟಗಳನ್ನು ಓದಲು ಹೋಗಿ, ಜಿಟಿನಾ ೨೦೧೩ರಲ್ಲಿ ಯಾಕೆ ಮೈಲು, ಪೌಂಡುಗಳ ಮಾನ ಬಳಸುತ್ತಾರೆ ಅಥವಾ ಒಂಬತ್ತನೇ ಗ್ರಹ ಪ್ಲುಟೋ ಅನ್ನುತ್ತಾರೆಎಂದು ಪ್ರಶ್ನಿಸುವುದು ಲೇಖಕನ ಹಿರಿತನಕ್ಕೆ ಮಾಡುವ ಅವಮಾನವಾಗಿಯೇ ಕಾಣಬಹುದು; ಗೋರಿ ಶೃಂಗಾರದಲ್ಲಿ ನಾವು ನಿಸ್ಸೀಮರು! ಇವೆಲ್ಲ ಕೋಟ್ಯಂತರ ರೂಪಾಯಿಗಳನ್ನು ನುಂಗಿದವರೂ ಚುನಾವಣಾ ಆಯೋಗಕ್ಕೆ ಕೇವಲ ಒಂದೆರಡು ಲಕ್ಷಗಳ ಆಸ್ತಿ ಘೋಷಿಸಿಕೊಂಡ ಹಾಗೆ, ಹದಿನೆಂಟು ಕಾರುಗಳ ಮೆರವಣಿಗೆಯಲ್ಲಿ ಬಂದೂನನಗೆ ವಾಹನವಿಲ್ಲ ಎಂದು ದಾಖಲಿಸಿದ ಹಾಗೆ, ಪರಿಣಾಮ ಗೊತ್ತಿದ್ದೂಅಶ್ವತ್ಥಾಮನೆಂಬ ಆನೆ ಸತ್ತಿತು ಎಂದೊರಲಿದ ಧರ್ಮದ ಹಾಗೆ!

ಅರವತ್ತಕ್ಕೂ ಮಿಕ್ಕು ಪುಸ್ತಕಗಳನ್ನು ಸುಮಾರು ಇಪ್ಪತ್ತು ವರ್ಷಗಳ ಅವಧಿಯಲ್ಲಿ ಪ್ರಕಟಿಸಿದೆ. ನೇರ ದಾರಿಗಳಲ್ಲಿ ಮಾತ್ರ ವಿತರಣೆಗೆ ಪ್ರಯತ್ನಿಸಿದೆ. ನಷ್ಟವಾಯ್ತೆಂದು ಅನ್ನಿಸಲಿಲ್ಲ. ಆದರೆ ಮುಂದುವರಿಯುವುದರಲ್ಲಿ ಅರ್ಥವಿಲ್ಲ (ಎರಡು ಅರ್ಥದಲ್ಲಿ) ಎಂದು ಸ್ಪಷ್ಟವಾದ್ದಕ್ಕೆ ಎರಡು ವರ್ಷಗಳ ಹಿಂದೆ ಅತ್ರಿ ಪ್ರಕಾಶನ ಮುಚ್ಚಿದೆ. ಆ ಸಮಯದಲ್ಲಿ ವಿತರಕರಿಗೆ ಹೆಚ್ಚಿನ ಪ್ರೇರಣೆ ಒದಗಲೂ ಅಂಗಡಿ ಮುಚ್ಚುವ ಕಾಲದಲ್ಲಿ ಸಾರ್ವಜನಿಕರಿಗೂ ೫೦% ರಿಯಾಯಿತಿ ದರ ಘೋಷಿಸಿಕೊಂಡೆ; ಇನ್ನೂ ನನ್ನ ದಾಸ್ತಾನು ಕರಗಿಲ್ಲ. ಅಂಗಡಿ ಮುಚ್ಚಿ ಒಂದು ವರ್ಷವೇ ಕಳೆಯಿತು. ಅತ್ರಿ ಮುಚ್ಚಿದ್ದಕ್ಕೆ ಔಪಚಾರಿಕವಿರಹವೇದನೆಗಳುಧಾರಾಳ, ಲಭ್ಯ ಪುಸ್ತಕಗಳಿಗೆ ಬೇಡಿಕೆಗಳು ಚಿಲ್ಲರೆಯವು, ಮುದ್ರಣವಿಲ್ಲದ ಪುಸ್ತಕಗಳಿಗೆ ಕೊರಗು ತೀರಾ ಕ್ವಚಿತ್ತು! ತಂದೆಗೆ ಮತ್ತೆ ನನಗೆ ಪ್ರಕಾಶನ ಸದಾನಮ್ಮ ಸಾಮಾಜಿಕ ಜವಾಬ್ದಾರಿಯ ಸಂಕೇತ ಆಗಿತ್ತು; ಕೀರ್ತಿ ಪತಾಕೆ, ಅನ್ಯ ಆದಾಯಮೂಲ ಅಲ್ಲ. ಪ್ರಕಾಶನದಲ್ಲೇ ಸ್ವಾವಲಂಬನೆಯನ್ನು ಪರಿಗಣಿಸಿದ್ದೆವೇ ವಿನಾ (ಬಿಡಿ ಮಾರಾಟದ ಅಂಗಡಿಯ ಆದಾಯಕ್ಕೆ) ಹೆಚ್ಚುವರಿ ಆದಾಯವನ್ನು ಅಲ್ಲ. ಹಾಗಾಗಿ ಪ್ರಕಾಶನವನ್ನು ಮುಚ್ಚಿದ್ದಕ್ಕೆ ನನಗೆಅಂಗಹೀನತೆಗಿಂತ ಹೆಚ್ಚಾಗಿ ಬೇಜವಾಬ್ದಾರಿಯ ವಿಷಾದ ಉಳಿದುಕೊಂಡಿತ್ತು.

ಪುಸ್ತಕ ಸಂಸ್ಕೃತಿಯ ಮೋಹ ನನಗೆ ಉಳಿದದ್ದಕ್ಕೆ ಅಂಗಡಿಯನ್ನೇನೋ ನವಕರ್ನಾಟಕಕ್ಕೆ ಮಾರಿದ್ದಾಗಿತ್ತು. ಹಾಗೇ ಪ್ರಕಟಣೆಗಳನ್ನು ಯಾವುದೇ ಆರ್ಥಿಕ ನಿರೀಕ್ಷೆಯಿಲ್ಲದೆ, ‘ಸದಾ ಸಾರ್ವಜನಿಕ ಮಟ್ಟದಲ್ಲಿ ಊರ್ಜಿತದಲ್ಲಿಡುವ ಒಂದೇ ನಿಬಂಧನೆಯೊಡನೆ ಕೊಡಲು ಸಿದ್ಧನಿದ್ದೆ. ನವಕರ್ನಾಟಕ ಪ್ರಕಾಶನದ ಮೇಲೆ ಮಾತ್ರ ನನಗೆ ವಿಶ್ವಾಸವಿತ್ತು. ಆದರೆ ಅವರಿಗೆ ಸ್ವಂತ ಯೋಜನೆಗಳ ಭಾರವೇ ಸಾಕಷ್ಟಿತ್ತು. ಉಳಿದಂತೆ ಇದುವರೆಗೆ ನನ್ನ ಪರೀಕ್ಷೆಯಲ್ಲಿ ತೇರ್ಗಡೆಯಾದ ಇನ್ನೊಬ್ಬ ಪ್ರಕಾಶಕ ಸಿಕ್ಕಿಲ್ಲ. ತಂದೆಯ ಆಯ್ದ ವಿಜ್ಞಾನ ಬರೆಹಗಳ ಸಂಕಲನ ಒಂದೊಂದನ್ನು  ಪ್ರಕಟಿಸಲು ಮೊದಲು ಕನ್ನಡ ವಿವಿನಿಲಯ, ಹಂಪಿ ಮತ್ತೆ ಕರ್ನಾಟಕ ಮುಕ್ತ ವಿವಿನಿಲಯ, ಮೈಸೂರು ಮುಂಬಂದವು. ಎರಡಕ್ಕೂ ಮೂಲ ಪ್ರೇರಣೆ ಬಂದದ್ದು ಆಯಾ ಕಾಲದಲ್ಲಿ ಅಲ್ಲಿ ಕುಲಪತಿಯಾಗಿದ್ದ ಡಾ| ವಿವೇಕ ರೈ ಅವರ ಗುಣಪಕ್ಷಪಾತದಿಂದ. ಆದರೆ ಎಲ್ಲಾ ಸರಕಾರೀ ಯೋಜನೆಗಳಂತೇ ಎರಡೂ ವಿವಿನಿಲಯಗಳು ವಿತರಣೆ ಮುಖದಲ್ಲಿ ದಿವ್ಯ ನಿರ್ಲಕ್ಷ್ಯವನ್ನು ತಾಳಿದವು. ಸರಕಾರ ಜ್ಞಾನ ಪ್ರಸರಣೆಯ ಉದ್ದೇಶಕ್ಕಾಗಿ, ‘ತೊಡಗಿಸಿದ ಹಣವನ್ನು ಮರುತೆಗೆಯುವಲ್ಲಿ ಅವಸರಿಸಬೇಕಿಲ್ಲ ಎನ್ನುವ ಉದಾತ್ತ ನಿಲುವನ್ನು ತಾಳಿರುವುದು ಸರಿಯೇ ಇದೆ. ಆದರೆ ಬಹುತೇಕ ಸಾರ್ವಜನಿಕ ಇಲಾಖೆಗಳಂತೇ ಇಲ್ಲೂ ಯೋಚನೆಗೂ ಕ್ರಿಯೆಗೂ ಸಾಂಗತ್ಯವಿಲ್ಲ. ಎಲ್ಲ ತರ್ಕ ಮೀರಿ ಹಂಪಿಯ ಪ್ರಸಾರಾಂಗ ಹುಣ್ಣಮೆಗೊಮ್ಮೆ ಅಮಾವಾಸ್ಯೆಗೊಮ್ಮೆ ಹುಚ್ಚುಚ್ಚು ರಿಯಾಯಿತಿ ಘೋಷಿಸಿ ಗುದಾಮು ಖಾಲೀ ಮಾಡುವಲ್ಲಿ ತಂದೆಯ ಪುಸ್ತಕವನ್ನೂ ಮುಗಿಸಿರಬಹುದು. ಅಥವಾ ಮೈಸೂರಿನಮುಕ್ಕುತ್ತ ವಿವಿನಿಲಯದ ದಾರಿ ಹಿಡಿದಿರಲೂಬಹುದು. ಇವರು ತಮ್ಮ ಅಲೌಕಿಕ ಕಾನೂನುಗಳ ನೆಪ ಮಾಡಿ ಮಗ-ಮಾರಾಟಗಾರನಾದ ನನಗೇ ಕ್ರಯಕ್ಕೆ ಒಂದು ಪ್ರತಿ ಕೊಡಲಿಲ್ಲ. ಪ್ರಸಾರಾಂಗಗಳ ಗುದಾಮು ಸಂಪತ್ತು ವೃದ್ಧಿರಸ್ತು ಎನ್ನುವುದಷ್ಟೇ ಉಳಿಯಿತು. ಅನುದಾನ ವಿನಿಯೋಗದ ಲೆಕ್ಕ ತೆಗೆಯುವ ಬೃಹಸ್ಪತಿಗಳು ಅದೇ ಪ್ರಕಟಣೆಗಳ ವಿನಿಯೋಗ ನ್ಯಾಯ ನೋಡಿ, ಸಂಬಂಧಿಸಿದವರನ್ನು ಪ್ರಶ್ನಿಸಿದ್ದು ನಾನು ಕೇಳಿಲ್ಲ. (ಸಾವಿರ ಪ್ರತಿ ಮುದ್ರಿಸಿ ವರ್ಷ ನಾಲ್ಕಾದರೂ ಒಂಬೈನೂರು ಪ್ರತಿ ಯಾಕೆ ಉಳಿದಿದೆ? ಹೂಡಿಕೆಯ ನಿವ್ವಳ ಮೊತ್ತದ ಬಡ್ಡಿಯನ್ನಾದರೂ ನಿಮ್ಮ ಸಂಬಳದಲ್ಲಿ ಯಾಕೆ ಮುಟ್ಟುಗೋಲು ಹಾಕಬಾರದು?)

ಕನ್ನಡದ ಹಳೆಯ, ಜನಪ್ರಿಯ ಕಾದಂಬರಿ ಪ್ರಕಾಶಕರೊಬ್ಬರು ಬಗೆ ತರದಲ್ಲಿ ನನ್ನ ಪ್ರಕಟಣೆಯ ಪುಸ್ತಕಗಳನ್ನು ಕೇಳಿದರು. ಆದರೆ ಅವರು ಕಾಲಧರ್ಮಕ್ಕೆ ತಕ್ಕಂತೆ, ಮನೆಮನೆಗೆ ಕಾದಂಬರಿಗಳನ್ನು ಮುಟ್ಟಿಸುವ ತಮ್ಮ ಶೈಲಿಯನ್ನು ಬದಲಿಸಿಕೊಂಡು ಸಗಟು ಖರೀದಿಯ ಅಗ್ರಪಂಕ್ತಿಗಳಲ್ಲಿ ರಾರಾಜಿಸುತ್ತಿರುವುದು ನನಗೆ ತಿಳಿದಿತ್ತು. ೧೯೭೦-೮೦ರ ದಶಕಗಳ ಅವರದೇ ಪ್ರಕಟಣೆಯ ಮಾಸಲು ಮುದ್ರಣಗಳು ಇದ್ದಂತೆ, ಒಮ್ಮೆಗೆ ತಿಂಗಳಿಗೆ ಐವತ್ತು ನೂರು ವೈವಿಧ್ಯಮಯ ಹೊಸ ಕೃತಿಗಳ ರಕ್ಕಸ ಅಲೆಗಳನ್ನೇ ಎಬ್ಬಿಸತೊಡಗಿದರು. ಬರಿಯಜನಪ್ರೀಯ ಕಾದಂಬರಿಗಳನ್ನು ಮಾತ್ರ ಮಾಡುತ್ತಿದ್ದವರು ಏನಾದ್ರೂ ಸ್ಕ್ರಿಪ್ಟ್ ಕೊಡೀ ಸಾಆಆಆರ್ ಎಂದು ರಾಗವನ್ನು ಹೊಂದಿಸಿಕೊಂಡದ್ದು ಕೇಳಿದಾಗಲೆಲ್ಲ ನನಗೆ ಮೈಯಲ್ಲಿ ಮುಳ್ಳೇಳುತ್ತಿತ್ತು. ನನ್ನ ಪ್ರಕಟಣೆಗಳನ್ನು ಅನ್ಯರಿಗೆ ಕೊಡುವ ಯೋಚನೆ ಮರೆತಿದ್ದೆ

ಖ್ಯಾತ ಸಾಹಿತಿ ಎಸ್. ದಿವಾಕರ್ ಅವರ ಪ್ರಾಮಾಣಿಕ ಪುಸ್ತಕಸೇವಾ ಕೈಂಕರ್ಯದ ಸೂಚನೆಗೊಲಿದು ವಸಂತ ಪ್ರಕಾಶನದ ಮುರಳಿಯವರು, ನನ್ನ ತಂದೆಯಶ್ರುತಗಾನವನ್ನು (ಪ್ರತಿಗಳು ಲಭ್ಯ. ಬೇಕಾದವರು ರೂ ತೊಂಬತ್ತು ಸ್ವವಿಳಾಸದೊಡನೆ ಮನಿಯಾರ್ಡರ್ ಮಾಡಿ) ಮರುಮುದ್ರಣ ಮಾಡಿದರು. ಬಿಡಿ ವ್ಯಾಪಾರಿಯಾಗಿ ನನ್ನ ವ್ಯವಹಾರದಿಂದ ಆತ್ಮೀಯತೆ ಬೆಳೆಸಿಕೊಂಡ ರವಿಕುಮಾರ್ ತನ್ನ ಅಭಿನವ ಪ್ರಕಾಶನದ ಮೂಲಕ ನನ್ನದೇ ಪುಸ್ತಕ - ‘ದ್ವೀಪ ಸಮೂಹದ ಕತೆಯನ್ನೂ ಪ್ರಕಟಿಸಿದರು. ಇಬ್ಬರೂ ನನಗೆ ಉದ್ಯಮ ನ್ಯಾಯದಂತೆ, ಪ್ರೀತಿಯಿಂದಲೂ (ನಾನು ಇಷ್ಟು ಅಷ್ಟು ಎಂದು ಕೇಳಿಲ್ಲ) ಗೌರವಧನ ಮತ್ತು ಪ್ರತಿಗಳನ್ನು ಕೊಟ್ಟಿದ್ದಾರೆ

ಬರಹ ಪಬ್ಲಿಷಿಂಗ್ ಹೌಸ್ನ ಭೈರೇ ಗೌಡರು ನನ್ನದೇ ಇನ್ನೊಂದು ಪುಸ್ತಕಶಿಲಾರೋಹಿಯ ಕಡತ (ಪ್ರತಿಗಳು ಲಭ್ಯ. ಬೇಕಾದವರು ರೂ. ಒಂದು ನೂರು ಸ್ವವಿಳಾಸದೊಡನೆ ಮನಿಯಾರ್ಡರ್ ಮಾಡಬಹುದು)  ಪ್ರಕಟಿಸಿದರು. ಇವರು ಮಾತ್ರ ಅಸ್ಪಷ್ಟವಾಗಿ ಗೌರವ ಪ್ರತಿಗಳನ್ನು ಮಾತ್ರ ಕೊಟ್ಟು ಕೈತೊಳೆದುಕೊಂಡಿದ್ದಾರೆ. ಅವೆಲ್ಲಕ್ಕೂ ಮುಖ್ಯವಾಗಿ ನನಗೆ ಕಂಡದ್ದು, ಈ ಮೂವರೂ ಪುಸ್ತಕ ಪ್ರಕಾಶನದಲ್ಲಿ ತೋರುತ್ತಿರುವ ನಿರ್ಭಾವ.

ಕಳೆದ ಎಂಟು ಹತ್ತು ವರ್ಷಗಳಲ್ಲಿ ಮುದ್ರಣಲೋಕ ಬೆಳೆದಿರುವ ಭರಾಟೆಯಲ್ಲಿ ಮೇಲೆ ಹೇಳಿದ ಮೂರು, ತೀರಾ ಸಾದಾ ಪುಸ್ತಕಗಳು ಹೊರಬರಲು ಬೆರಳೆಣಿಕೆಯ ದಿನಗಳು ಸಾಕು. (ನನ್ನವೆರಡರ ಶುದ್ಧಪ್ರತಿಯನ್ನು ನಾನು ಸೀಡಿಯಲ್ಲೇ ಕೊಟ್ಟಿದ್ದೆ. ಶ್ರುತಗಾನ ಮಾತ್ರ ಹೊಸದಾಗಿ ಬೆರಳಚ್ಚು ಕಾಣಬೇಕಾಯ್ತು.) ಆದರೆ ಪ್ರಕಾಶನಕ್ಕೆ ಎತ್ತಿಕೊಂಡಲ್ಲಿಂದ ನನಗೆ ಪ್ರತಿ ಮುಟ್ಟಿಸುವವರೆಗೆ ಇವರೆಲ್ಲ ಕನಿಷ್ಠ ಆರು ತಿಂಗಳಿನಿಂದ ಒಂದೂ ಕಾಲು ವರ್ಷದವರೆಗೂ ನಿಧಾನಿಸಿದ್ದಾರೆ; ಯಾಕೋ ಗೊತ್ತಿಲ್ಲ? ಪುಸ್ತಕ ಬಿಡುಗಡೆಯ ನಾಟಕವಲ್ಲದಿದ್ದರೂ ಕನಿಷ್ಠ ಪತ್ರಿಕೆಗಳ ಸಾದರ ಸ್ವೀಕಾರದಲ್ಲಿ, ವಿಮರ್ಶೆಯಲ್ಲಿ, ಊರೂರಿನ ಮಳಿಗೆಗಳಲ್ಲಿ ನನ್ನೀ ಪ್ರಕಟಣೆಗಳು ಬರಲೇ ಇಲ್ಲ. ಮತ್ತೆ ಓದುಗರನ್ನು ಮುಟ್ಟುವ ಅಥವಾ ಅವರಿಗಾದರೂ ತಿಳಿಯುವ ಕ್ರಮ ಹೇಗೋ, ಗೊತ್ತಿಲ್ಲ? ಕೊನೆಯದಾಗಿ ಪ್ರತಿಗಳನ್ನು ಮಾರಾಟ ಮಳಿಗೆಗಳಿಗೆ ಮುಟ್ಟಿಸುವಲ್ಲೂ ಇವರಲ್ಲಿ ಯಾವ ತರಾತುರಿ ಕಾಣಲಿಲ್ಲ. ಇದಕ್ಕೆ ತೋರಗಾಣ್ಕೆಗೆ ಸಿಕ್ಕುವ ಕಾರಣ - ಇಂದು ಬಿಡಿ ಪುಸ್ತಕ ಮಾರಾಟಗಾರ ಎನ್ನುವ ಸ್ಥಾನವೇ ಕಳೆದುಹೋಗಿದೆ. ಇಂದು ಸಾರ್ವಜನಿಕಕ್ಕೆ ತೆರೆದುಕೊಂಡಿರುವ ಹೆಚ್ಚಿನ ಪುಸ್ತಕ ಮಳಿಗೆಗಳು ತಮ್ಮದೇ ಗಾತ್ರ ಮೀರಿದ ಪ್ರಕಾಶನದ ಪ್ರತಿನಿಧಿಗಳು. ಹಾಗಾಗಿ ಇತರ ಪ್ರಕಟಣೆಗಳ ಪ್ರಚಾರ, ಖ್ಯಾತಿ ನೋಡಿಕೊಂಡು ಮೊದಲ ಅಲೆಯಲ್ಲಿ ಕಾಲು ತೊಳೆದುಕೊಳ್ಳುತ್ತಾರೆ. ಅವುಗಳ ವಿಷಯ ನೋಡಿ, ತಲೆಯ ಮೇಲಿಟ್ಟುಕೊಳ್ಳಲು ಉತ್ಸಾಹ ತಳೆಯುವುದಿಲ್ಲ. ಹೀಗಿದ್ದರೂ ಬಿಡಿ ಮಾರಾಟ ಮಳಿಗೆಯ ವ್ಯವಸ್ಥೆಯೇ ಇಲ್ಲದ ಅಸಂಖ್ಯಾತ ಭಾರೀ ಪ್ರಕಾಶಕರಿದ್ದಾರೆ, ವರ್ಧಿಸುತ್ತಲೂ ಇದ್ದಾರೆ! ಇತ್ತ ಕನ್ನಡ ಓದುಗರ ಸಂಖ್ಯೆ ದಿನೇ ದಿನೇ ಬೀಳುತ್ತಲೂ ಇದೆ. ಅಂದರೆ ಪುಸ್ತಕ ಯಾರಿಗೆ? ಹೋಗುತ್ತದೆ ಎಲ್ಲಿಗೆ? ಇಂಥ ಪ್ರಶ್ನೆ ಸಾವಿರಕ್ಕೆ ಒಂದೇ ಶಬ್ದದ ಉತ್ತರ - ಸರ್ಕಾರೀ ಪುಸ್ತಕೋದ್ಯಮ. ನಾನು ಸ್ನೇಹಾಚಾರಕ್ಕಾಗಿ ಮಾತ್ರ ಅನ್ಯ ಪ್ರಕಾಶಕರಿಗೆ ಪುಸ್ತಕಗಳನ್ನು ಪ್ರಕಟಿಸಲು ಕೊಟ್ಟಿದ್ದೆ. ನಿಜದಲ್ಲಿ ನನ್ನ ಲೆಕ್ಕಕ್ಕೆ ಪುಸ್ತಕಗಳ ಭವಿಷ್ಯ ಮುಚ್ಚಿತ್ತು.

ನಿರಾಶೆಯ ಕಾವಳದಲ್ಲಿ ನನಗೆ ಕಾಣಿಸಿದ ಮಿಂಚು, ಕರ್ನಾಟಕ ಸರಕಾರವೇ ಪ್ರಾಯೋಜಿಸಿದ ವಿದ್ಯುನ್ಮಾನ ಜ್ಞಾನ ಕೋಶ. ಇದರಲ್ಲಿ ವ್ಯಸ್ತರಾಗಿದ್ದ ಕೆಲವು ಮಿತ್ರರಿಂದ ನನಗೆ ಲೇಖನಗಳಿಗೂ ಮಿಗಿಲಾಗಿ ನನ್ನೆಲ್ಲ ಹಳೆಯ ಪ್ರಕಟಣೆಗಳನ್ನೂ ಕೋರಿ ಮನವಿ ಬಂತು. ಇಲ್ಲಿ ಅವರುಸೂಕ್ತ ಕಂಡಂತೆ ಪುಸ್ತಕ ಸಂಪಾದನೆಯ ಕತ್ತರಿ ಹಾಗೂ ಟಿಪ್ಪಣಿ ಹಾಕುವುದಕ್ಕೆ ನನಗೆ ಒಲವಿರಲಿಲ್ಲ. ಇನ್ನೂ ಮುಖ್ಯವಾಗಿ ಒಂದು ಸಾರ್ವಜನಿಕ ಸಂಸ್ಥೆಯಲ್ಲಿ ವ್ಯಕ್ತಿಗಳು ಕಾಲಕಾಲಕ್ಕೆ ಬದಲಾಗಬಹುದು. ಹಾಗೇ ನನಗೆ ಕೃತಿಕೋರಿ ಮನವಿ ಮಾಡಿದ ವ್ಯಕ್ತಿಯೊಡನೇ ಸಂಪಾದಕನ ಧೋರಣೆಗಳು ಬದಲಾದರೆ? ಅಂದರೆ ಮುಂದೆ ಅವರು ನಮ್ಮ ಧೋರಣೆಯನ್ನು ಮೀರಬಹುದು ಮತ್ತು ಕೃತಿಸ್ವಾಮ್ಯಕ್ಕೆ ನಾನು ಎರವಾಗಲೂಬಹುದು. (ಇದರ ವಿರುದ್ಧ ಧ್ವನಿ ತೆಗೆಯುವುದೇ ಆದರೆ ಸಾಂಸ್ಥಿಕವಾಗಿ ಕಾನೂನು ಸಮರ ಅವರಿಗೆ ಸುಲಭ, ನನ್ನಿಂದ ಅಸಾಧ್ಯ!) ಆದರೆ ಆ ಕಾಲಕ್ಕೆ ನನಗೆ ಸ್ವಂತ ಜಾಲತಾಣದ ನಿರ್ಮಾಣ ಮತ್ತು ಪ್ರಸರಣಗಳನ್ನು ಯಾರ ಹಂಗಿಲ್ಲದೇ ನಡೆಸುವ ಸಾಧ್ಯತೆಯನ್ನು ಮಗ - ಅಭಯಸಿಂಹ ತೋರಿ ಕೊಟ್ಟ. ಸಹಜವಾಗಿ ನಾನೇ ಎಲ್ಲವನ್ನೂ ಅಂತರ್ಜಾಲಕ್ಕೇರಿಸಿ ಸಾರ್ವಜನಿಕಕ್ಕೆ ಮುಕ್ತಗೊಳಿಸುವ ಘೋಷಣೆಯನ್ನಷ್ಟೇ ಅವರಿಗೆ ಬರೆದು ನಿರುಮ್ಮಳನಾದೆ.

ನನ್ನ ಜಾಲತಾಣದಲ್ಲಿ ವಾರವಾರದ ಲೇಖನಗಳು ಪೇರುತ್ತ ಬಂತು. ಗಣಕ/ ಅಂತರ್ಜಾಲದಲ್ಲಿ ನೂರೆಂಟು ಸೌಕರ್ಯಗಳು. ಬೇಕಾದ್ದನ್ನು ಹುಡುಕುವ, ಅನಿಯತ ಕಾಲದಲ್ಲಿ ಪ್ರಕಟವಾದರೂ ವಿಭಾಗೀಯ ಕ್ರಮದಲ್ಲಿ ಒಟ್ಟು ನೋಡುವ, ಅಂದರೆ ಪರೋಕ್ಷವಾಗಿ ಪುಸ್ತಕವನ್ನೇ ಕಾಣುವ ಸ್ಥಿತಿ ಬಂದಿತ್ತು. ಚಿತ್ರ, ನಕ್ಷೆ, ವಿಡಿಯೋ, ಅನ್ಯ ಉಲ್ಲೇಖ, ಧ್ವನಿ ಮುಂತಾದವುಗಳೆಲ್ಲ ಒಂದೊಂದು ಚಿಟಿಕೆಯ ಅಂತರದಲ್ಲಿ ಯಾರಿಗೂ ಅಮಿತವಾಗಿ ದಕ್ಕುತ್ತಿತ್ತು. ಇದು ನನ್ನ ಪುಸ್ತಕಗಳನ್ನು ಜಾಲಕ್ಕೇರಿಸುವ ಮಾತಿಗೆ ಹೊಸಚಾಲನೆಯನ್ನೇ ಕೊಟ್ಟಿತು. ಮೊದಲು ಅಲಭ್ಯವಿದ್ದ ಭವಿಷ್ಯ ವಿಜ್ಞಾನವನ್ನು ಕಂತುಗಳಲ್ಲಿ ಕೊಟ್ಟೆ. ಜಾಲತಾಣದಲ್ಲೇ ಅದಕ್ಕೊಂದು ವಿಶಿಷ್ಟ ಸ್ಥಾನವನ್ನೂ ಅಭಯ ಕೊಟ್ಟ. ಆಗಸ್ಟ್ ತಿಂಗಳಲ್ಲಿ (೨೦೧೨) ನೀಲ್ ಆರ್ಮ್ಸ್ಟ್ರಾಂಗ್ ತೀರಿಹೋದ ವಾರ್ತೆ ಬಂತು. ಆತನ ತಂಡದ ಸಾಧನೆಯ ಕುರಿತಂತೆ ನನ್ನ್ನ ತಂದೆ ಅಂದೇ (೧೯೬೯) ಪುಸ್ತಕ ರೂಪದಲ್ಲಿ ಬರೆದು ಪ್ರಕಟಿಸಿದ್ದು - ಮಾನವ, ಚಂದ್ರನ ಮೇಲೆ, ನೆನಪಿಗೆ ಬಂತು. ಆದರೆ ಅದರ ಪ್ರತಿ ನನ್ನಲ್ಲಿರಲಿಲ್ಲ. ಅದೃಷ್ಟವಶಾತ್ ಆ ಕಾಲದಲ್ಲೇ ತಂದೆ ಚಿಕ್ಕಪ್ಪ ವಿಕೆ ಭಟ್ಟರಿಗೆ ಕೊಟ್ಟಿದ್ದ ಗೌರವ ಪ್ರತಿ ಸಿಕ್ಕಿತು. ಮಾವನ ಮಗ ಎ.ಪಿ. ರಾಧಾಕೃಷ್ಣ ಕೆಲವು ಸಕಾಲಿಕ ತಿದ್ದುಪಡಿಗಳನ್ನು ಮಾಡಿಕೊಟ್ಟ. ನಾನು ಲಿಪಿಕಾರನಾಗಿ - ಮಾನವ, ಚಂದ್ರನ ಮೇಲೆ ವಿ-ಧಾರವಾಹಿ --೧೩ರಿಂದ ತೊಡಗಿಸಿದೆ. ಅದೀಗ ೪--೨೦೧೩ರಂದು ಒಂಬತ್ತನೇ ಕಂತಿನಲ್ಲಿ ಪೂರ್ಣಗೊಳ್ಳಲಿದೆ. ಓದುಗರಿಗೆ ರುಚಿ ವೈವಿಧ್ಯಕ್ಕಾಗಿ ೧೨--೨೦೧೩ರಂದು ಪರ್ಯಾಯವಾಗಿ ತಂದೆಯ ಮುಗಿಯದ ಪಯಣವನ್ನೂ ವಿ-ಧಾರಾವಾಹಿ ಮಾಡುತ್ತಿರುವುದು ನೀವು ಕಂಡಂತೇ ಇದೆ. ಇದು ನಾನೂರು ಪುಟಕ್ಕೂ ಮಿಕ್ಕ ದೊಡ್ಡ ಪುಸ್ತಕವಾದ್ದರಿಂದ ಇನ್ನೂ ಕೆಲವು ತಿಂಗಳುಗಳಿಗೆ ಹರಿಯುವುದು ಅನಿವಾರ್ಯ. ಅನಂತರ ಇಲ್ಲೇ ಸಮಗ್ರ ಓದಿಗೆ ಪುಸ್ತಕ ರೂಪದಲ್ಲೂ ಲಭ್ಯವಿರುತ್ತದೆ.

ಏತನ್ಮಧ್ಯೆ ಗೆಳೆಯ ಕೃಷ್ಣ ಶಾಸ್ತ್ರಿಯ ಕ್ಯಾರಟ್ಸ್ ಬಗ್ಗೆ ಇಲ್ಲೇ ಬರೆದುಕೊಳ್ಳುವ ತುಡಿತ ನನಗೆ ಬಂತು. ಅದಕ್ಕೆ ಹಿನ್ನೆಲೆಯಾಗಿ ಶಾಸ್ತ್ರಿಗಳ ಮೊದಲ ಪರಿಚಯವನ್ನು ನೆನೆಸಿಕೊಂಡಾಗ ನನ್ನ ತಂದೆಯ ಇನ್ನೊಂದೇ ಪುಸ್ತಕ - ಆಕಾಶದ ಅದ್ಭುತಗಳು, ನೆನಪಾಯ್ತು. ಇದರ ಪುಟಪುಟಗಳ ವಿನ್ಯಾಸ, ವರ್ಣ ಮತ್ತು ಚಿತ್ರ ಕಲಾವಿದ ಚಂದ್ರನಾಥ ಆಚಾರ್ಯರ ಕುಸುರಿ ಇನ್ನೊಂದೇ ಅದ್ಭುತ. ಅದನ್ನು ನಕಲು ಮಾಡುವುದು ಅಸಾಧ್ಯವೆಂದು ಕಂಡಾಗ ಅಭಯ, ಪುಟಪುಟಗಳ ಛಾಯಾಪ್ರತಿಯನ್ನೇ ಸಂಕಲಿಸಿ ಪುಸ್ತಕ ಮರುರೂಪಿಸುವಲ್ಲಿ ಸಿದ್ಧ ತಂತ್ರಾಂಶ ಸೌಲಭ್ಯಗಳನ್ನು ಹೊಸದಾಗಿ ಕಂಡುಕೊಂಡ. ಈಗ ಅದನ್ನೇ ನಮ್ಮೆಲ್ಲ ವಿ-ಪುಸ್ತಕಗಳಿಗೂ ಅಳವಡಿಸಿದ್ದಾನೆ. ಗಣಕದಲ್ಲಿನ ಓದು ಅಥವಾ ಇಷ್ಟಪಟ್ಟವರ ವಿವಿಧ ವಿದ್ಯುನ್ಮಾನ ಸಲಕರಣೆಗಳಿಗೆ ಇಳಿಸಿಕೊಳ್ಳುವ ಕೆಲಸ ಈಗ ಇನ್ನಷ್ಟು ಸುಲಭವೂ ಸುಂದರವೂ ಆಗಿದೆ.
    
ಆಕಾಶದ ಅದ್ಭುತಗಳಿಗೊಂದು ಸಂಪಾದಕೀಯ ನುಡಿ

ಸುಮಾರು ನಾಲ್ಕು ದಶಕಗಳ ಹಿಂದೆಯೇ ಐಬಿಯೆಚ್ ಪ್ರಕಾಶನ ವಿದೇಶೀ ಮೂಲದ, ಸುಂದರ ವರ್ಣಚಿತ್ರಗಳ, ಉತ್ತಮ ಗುಣಮಟ್ಟದ ಮಕ್ಕಳ ಪುಸ್ತಕ ಮಾಲಿಕೆಗಳನ್ನು ಕನ್ನಡಕ್ಕಿಳಿಸತೊಡಗಿದ್ದರು. ಮೊದಲುಮೂಲವಿಜ್ಞಾನ ಪಾಠಮಾಲೆಯ ಪೂರ್ಣ ಕಟ್ಟು (ಬಹುಶಃ ೧೬ ಪುಸ್ತಿಕೆಗಳ ಕಟ್ಟು) ಪ್ರಕಟವಾಯಿತು. ಹಾಗೇ ಇಂಗ್ಲಿಷ್ ಮೂಲದಲ್ಲಿ ಬಹುಶಃ ನೂರಕ್ಕೂ ಮಿಕ್ಕು ಕಂತುಗಳಲ್ಲಿ ಬಂದಿದ್ದ ಇನ್ನೊಂದು ಮಾಲಿಕೆಯನ್ನುವಿಜ್ಞಾನಪ್ರಪಂಚಎಂಬ ಹೆಸರಿನಲ್ಲಿ ತೊಡಗಿ ಐದಾರು ಭಾಗಗಳನ್ನೂ ತಂದದ್ದಾಯಿತು. ಇವುಗಳ ಇಂಗ್ಲಿಷ್ ಮೂಲವನ್ನೂ ದೇಶೀಯ ಮುದ್ರಣದಲ್ಲಿ ತಂದು ಸುಲಭ ಬೆಲೆಯಲ್ಲೇ ಕೊಡತೊಡಗಿದ್ದರು. ಪ್ರಧಾನ ಸಂಪಾದಕನ ಜವಾಬ್ದಾರಿ ಮತ್ತು ಬಹುತೇಕ ಅನುವಾದಗಳನ್ನೂ ನನ್ನ ತಂದೆ ಮಾಡುತ್ತಿದ್ದರು.

ಅಂದು (೧೯೭೦ರ ದಶಕ) ಕನ್ನಡದ  ಶಾಲೆಗಳಿಗೆ ಇಂದಿನ ಅನಾಥ ಸ್ಥಿತಿಯಿರಲಿಲ್ಲ. ಆ ಪುಸ್ತಕಗಳ ನೈಜ ಜನಪ್ರಿಯತೆಯ ಬೆಳಕಿನಲ್ಲಿ ಪ್ರಕಾಶಕರ ಉತ್ಸಾಹ ಹೆಚ್ಚಿ, ಸ್ವತಂತ್ರವಾಗಿಯೂ ಕನ್ನಡದಲ್ಲಿವಿಜ್ಞಾನ ನೋಡುಕಲಿಎಂಬ ಹೆಸರಿನಲ್ಲಿ ಇನ್ನಷ್ಟು ಮಕ್ಕಳ ಪುಸ್ತಕಗಳನ್ನು ತರಲು ಮುಂದಾದರು. ಇದಕ್ಕೂ ತಂದೆಯದೇ ಸಾರಥ್ಯ - ಸಂಪಾದಕತ್ವ. ರಥದಲ್ಲಿ ಅಡ್ಯನಡ್ಕ ಕೃಷ್ಣ ಭಟ್ಟ, ಕೆ.ಎಸ್ ನಿಸಾರ್ ಅಹಮದ್ ಮುಂತಾದವರು ಮೆರೆದದ್ದೂ ಆಯಿತು. ಆಕಾಶದ ಅದ್ಭುತಗಳು, ಮನುಷ್ಯನ ಕತೆ, ಶಿಲೆಗಳು ಖನಿಜಗಳು, ಹಕ್ಕಿಗಳು ಇತ್ಯಾದಿ ಪುಸ್ತಕಗಳು ಆ ಕಾಲಕ್ಕೆ ಅಪ್ಪಟ ದೇಶೀ ಚಿತ್ರ, ಕನ್ನಡ ಭಾಷೆಯಲ್ಲಿ (ಜನಪ್ರಿಯತೆ ಗಮನಿಸಿ, ಇಂಗ್ಲಿಷ್ ಅನುವಾದವೂ ತೊಡಗಿತ್ತು.) ಕೈತೊಳೆದು ಮುಟ್ಟುವಷ್ಟು ಚಂದಕ್ಕೇ ಬರತೊಡಗಿದವು. ಆದರೆ ಈ ಕನ್ನಡ ಸಾಹಸಗಳನ್ನು ವಾಣಿಜ್ಯ ನೆಲೆಯಲ್ಲೂ ಯಶಸ್ವಿಗೊಳಿಸುವ ಪ್ರಕಾಶಕರ ಉತ್ಸಾಹದಲ್ಲಿ ಎಡವಟ್ಟಾಗಿ ಎಲ್ಲ ನಿಂತೇ ಹೋಯಿತು.

ಆ ಸ್ವತಂತ್ರ ಮಾಲಿಕೆ - ‘ವಿಜ್ಞಾನ ನೋಡು ಕಲಿಯಲ್ಲಿ, ಪ್ರಥಮ ಪುಸ್ತಕ ತಂದೆಯೇ ಬರೆದದ್ದು  - ಆಕಾಶದ ಅದ್ಭುತಗಳು. ಚಂದ್ರನಾಥಾಚಾರ್ಯರ ಸುಂದರ ವರ್ಣಚಿತ್ರಗಳ ಸಮೇತ ಕೇವಲ ಐದು ರೂಪಾಯಿಗೆ ಪ್ರಕಟವಾಗಿತ್ತು. ಅದರ ತದ್ವತ್ತು ಛಾಯಾಪ್ರತಿಯನ್ನು ನಮ್ಮ ವಿ-ಪುಸ್ತಕಮಾಲಿಕೆಯಲ್ಲಿ ಈಗ ಸಾರ್ವಜನಿಕಕ್ಕೆ ಉಚಿತವಾಗಿ ಮುಕ್ತಗೊಳಿಸುತ್ತಿದ್ದೇನೆ. (ಆಕಾಶದ ಅದ್ಭುತಗಳಿಗೆ ಇಲ್ಲಿ ಚಿಟಿಕೆ ಹೊಡೆಯಿರಿಈ ಮಾಲಿಕೆಯಲ್ಲಿ ಮೊದಲೇ ಹೇಳಿದಂತೆ ಭವಿಷ್ಯ ವಿಜ್ಞಾನ ಈಗಾಗಲೇ ಲಭ್ಯವಿದೆ. ಸದ್ಯದಲ್ಲೇಕ್ಷೇತ್ರ ದರ್ಶನ’, ‘ಮಾನವ ಚಂದ್ರನ ಮೇಲೆಬರಲಿವೆ. ಮುಗಿಯದ ಪಯಣ, ಚಕ್ರವರ್ತಿಗಳು ಆದಿಯಾಗಿ ಸರಣಿ ಬೆಳೆಯಲಿದೆ. ಈ ಕೃತಿಗಳು ಸದಾ ಚಲನಶೀಲ ಮಾಧ್ಯಮದಲ್ಲಿರುವುದರಿಂದ ಮುದ್ರಣ ದೋಷಾದಿ ನನ್ನ ತಪ್ಪುಗಳನ್ನೂ ಐತಿಹಾಸಿಕ ಅನಿವಾರ್ಯತೆಗಳನ್ನು ಮೀರಿದ ಸಾರ್ವಜನಿಕ ಹಿತಾರ್ಥ ವೈಚಾರಿಕ ನಿಲುವುಗಳ ಕುರಿತು ಚರ್ಚೆಗಳನ್ನೂ ನಾನು ಸದಾ ಸ್ವಾಗತಿಸುತ್ತೇನೆ.
 
ಅನುಬಂಧ
ಹಿಂದೂ ಪತ್ರಿಕೆಯ ಗೆಳೆಯ ರವಿಪ್ರಸಾದ ಕಮಿಲ ನನ್ನೀ ವಿ-ಪುಸ್ತಕ ಯೋಜನೆಯನ್ನು ಈಚೆಗೆ ತಿಳಿದು ಉತ್ಸಾಹದಲ್ಲಿ ಲೇಖನ ಮಾಡಿದರು.

8 comments:

  1. ವಿದ್ಯುನ್ಮಾನ ಪ್ರಕಾಶನ ಬಲು ಒಳೇದಣ್ಣ. ಒಬ್ರ ಹಂಗಿಲ್ಲದೆ ಓದಿಗೆ ಒದಗುವುದಣ್ಣ!?

    ReplyDelete
  2. ಬೇಳೂರು ಸುದರ್ಶನ17 May, 2013 08:36

    ನಾನೂ ಈ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಿದ್ದೇನೆ. ಒಮ್ಮೆ ಪ್ರಕಾಶಕನಾಗಿ ಪುಸ್ತಕ (ಲಂಚ) ಪ್ರಪಂಚದ ಪರಿಚಯವಾದ ಮೇಲೆ ಇದು ನನ್ನಿಂದ ಆಗದ ಕೆಲಸ ಎಂದು ಕೈಬಿಟ್ಟಿದ್ದು ನಿಮಗೂ ಗೊತ್ತು.
    ವಿದ್ಯುನ್ಮಾನ ತಾಣಗಳಲ್ಲೇ ನಮ್ಮ ಪುಸ್ತಕಗಳನ್ನು ಪ್ರಕಟಿಸುವುದರ ಜೊತೆಗೆ ಪ್ರಿಂಟ್‌ ಆನ್‌ ಡಿಮ್ಯಾಂಡ್ ಅಥವಾ ಬೇಕಾದವರಿಗೆ ಮಾತ್ರವೇ ಪುಸ್ತಕ ಮುದ್ರಿಸುವ ಅಭಿಯಾನ ನಡೆಯಬೇಕೇನೋ ಅನ್ನಿಸಿದೆ. ಇದೂ ಬಹುಶಃ ಪೂರ್ತಿಯಾಗಿ ಆನ್‌ಲೈನ್‌ಗೆ ರೂಪಾಂತರವಾಗುವ ಮುಂಚಿನ ಹಂತ ಇರಬಹುದು.
    ನೀವು ಪುಸ್ತಕ ಪ್ರಕಾಶಕರಾಗಿ ಈಗ ಈ ನಿಲುವು ಪ್ರಕಟಿಸುತ್ತಿರುವುದು ನಿಮ್ಮ ಮುಕ್ತ ಚಿಂತನೆ ಮತ್ತು ಬದಲಾವಣೆಗಳನ್ನು ಒಪ್ಪಿಕೊಳ್ಳುವ ಮನಸ್ಸನ್ನು ತೋರಿಸುತ್ತದೆ. ನಿಮ್ಮಂಥ ಮನಸ್ಥಿತಿ ಎಲ್ಲರಲ್ಲೂ ತಕ್ಷಣವೇ ಬರಲಾರದು.
    ಏನೇ ಆಗಲಿ, ಆನ್‌ಲೈನ್‌ ಓದುಗರಿಗೆ ನಿಮ್ಮಿಂದ ಮಾಹಿತಿ ಲಾಭ ಆಗಿದೆ!! ಅದರ ಲೆಕ್ಕ ಬರೆಯುವವರಾರು?

    ReplyDelete
  3. ವಿ ಪುಸ್ತಕವನ್ನು ಪ್ರಕಟಿಸುವ ಕುರಿತು ತಾಂತ್ರಿಕ ಮಾಹಿತಿ (ಸ್ವಯಂ ಕಲಿಕಾ ಸಾಮಗ್ರಿ ರೂಪದಲ್ಲಿ) ಎಲ್ಲಿ ಸಿಕ್ಕುತ್ತದೆ?

    ReplyDelete
  4. ಶ್ರೀ ಗೋವಿಂದ ರಾವ್, ನಿಮಗೆ ಈ ಕೊಂಡಿ ಸ್ವಲ್ಪ ಕೆಲಸಕ್ಕೆ ಬರಬಹುದು.
    http://pothi.com/pothi/e-book-publishing-pothi-com

    ಆಡೋಬ್ ‌ಪೇಜ್‌ಮೇಕರ್ ಇತ್ಯಾದಿ ಬಳಸುತ್ತಿದ್ದು, ಫ್ಲಿಪ್ ಕಾರ್ಟ್ ಮೂಲಕ ನಿಮ್ಮ ವಿ-ಪುಸ್ತಕ ಪ್ರಕಟಿಸಲು ಅನುವಾದರೆ, ಪ್ಲಿಪ್‌ಕಾರ್ಟ್ ಅದಕ್ಕೂ ಸಹಾಯ ಮಾಡುತ್ತದೆ.


    ಗೂಗಲ್ ಬುಕ್ಸ್ ಕೂಡ ನಿಮಗೆ ವಿ-ಪುಸ್ತಕ ಪ್ರಕಟಣೆಗೆ ಅನುವು ಮಾಡುತ್ತದೆ. ಅದಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ - https://support.google.com/books/partner/answer/1346914?ref_topic=1346912&rd=1

    ಗೂಗಲ್ ಬುಕ್ಸ್ ಎಲ್ಲ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರನ್ನು ಸುಲಭವಾಗಿ ಪುಸ್ತಕಗಳನ್ನು ಕೊಳ್ಳುವಂತೆ ಮಾಡವ ಸಾಮರ್ಥ್ಯ ಹೊಂದಿದೆ.

    ನಿಮ್ಮ
    ಓಂಶಿವಪ್ರಕಾಶ್

    ReplyDelete
  5. ಓಂಶಿವಪ್ರಕಾಶ್17 May, 2013 12:00

    ನಿಮ್ಮ ಪುಸ್ತಕ ಮತ್ತು ಪ್ರಕಟಣೆಯ ಪ್ರೀತಿಯ ಬಗ್ಗೆ ಇತ್ತೀಚೆಗೆ ವಸುದೇಂದ್ರರನ್ನು ಭೇಟಿ ಮಾಡಿದಾಗ ಅವರು ಹೇಳುತ್ತಿದ್ದರು. ನಿಮ್ಮ ಪುಸ್ತಕ ಪ್ರಕಟಣೆಯ ಮಾತುಗಳನ್ನು ಓದಲು ಈ ಲೇಖನ ಸಹಾಯಕ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  6. William Robert Da Silva18 May, 2013 12:24

    Actual publication being material you lose the matter on sale and acquire 'currency notes' or cheques or credit cards for exchange. Virtual publication does not incur loss because it is immaterial. Every file lets itself be downloaded and is still there, until corrupted or removed. So it is a source of immense 'wealth creation.' The world journals indulge in this, others too. The 'creative commons' making it freely available.

    The logic of publication has changed. There is another side to it, that is the virtual text could be read as a audio virtual communication. So, you return to the primitive times of face to face communication (with the other face eliminated or substitued.).

    Still I do not see it coming in torrents in India, less so in Mangalore.

    ReplyDelete
  7. SM Shivaprakash18 May, 2013 16:05

    Dear Ashoka Vardhan,
    Like there is a period for sports in schools and colleges, there should be a specified time for reading of general useful books too in educational institutions.A police officer friend of mine tells me that he has set aside 10-11 pm as his reading hour at night everyday before retiring for bed! How nice I felt. Trying to do so but not quite successful yet.....

    ReplyDelete
  8. ಪ್ರಿಯರೇ, ವಂದೇಮಾತರಮ್.
    ಆಂಧ್ರ ಪ್ರದೇಶದ ಗ್ರಂಥಾಲಯ ಚಳುವಳಿಯಲ್ಲಿ ಒಬ್ಬ ಕಾರ್ಯಕರ್ತನಾಗಿ 1992 ರಿಂದ ಈ ಪುಸ್ತಕಗಳ ಆವಶ್ಯಕತೆಯ ಬಗ್ಗೆ ಹೇಳುತ್ತಲೇ/ಸುತ್ತಿ ಹೊಡೆಯುತ್ತಲೇ ಇದ್ದೇನೆ. ಪುಸ್ತಕಗಳು ಬಿಡುಗಡೆಗೆ ಸೀಮಿತವಾಗಿವೆ. ಒಬ್ಬ ಬರಹಗಾರ ಇನ್ನೊಬ್ಬನ ಬರಹ ಓದುವ್ವುದಿಲ್ಲ. ಅವನ ಹೆಸರು ಹೇಳಲೂ ಅಳಕುತ್ತಾನೆ. ಇದು ಒಂದು ಭಾಷೆ, ಒಂದು ರಾಜ್ಯ, ಒಂದು ವೃತ್ತಿ, ಒಂದು ಕುಲ, ಒಂದು ಕೋಮು, ಇತ್ಯಾದಿಗಳಿಗೆ ಸೀಮಿತವಲ್ಲ. "ಅತಿ ಸರ್ವತ್ರ ವರ್ಜಯೇತ್."
    ನನ್ನಕ್ಕ, ಆರನೆ ತರಗತಿ ಓದಿದವಳು, ಈಗ 88 ವಯಸ್ಸಿನಲ್ಲಿ ನೆನಪಿನ ಕಣಜ ನಮ್ಮಮ್ಮನಿಗೆ "ಜೈಮಿನಿ ಭಾರತ" ಓದಿ ಹೇಳುವಾಗ ನನಗೆ ಓದಿನಲ್ಲಿ ಆಸಕ್ತಿ ಹುಟ್ಟಿತು. ಅದನ್ನೂ ಇಂದಿಗೂ ನಡೆಸಿ ಕೊಂಡು ಬಂದಿದ್ದೇನೆ.
    ಅಂದ ಹಾಗೆ ಇತ್ತೀಚೆಗೆ ಅನಂತ ಮೂರ್ತಿಯವರ "ಸುರಿಗೆ" ನನ್ನ ಬಾವ ಮೈದುನ ಪಟ್ಟಾಭಿ ರಾಮ ಸೋಮಯಾಜಿ ಸೌಜನ್ಯ ಪೂರ್ವಕವಾಗಿ ಕಳುಹಿಸಿದ್ದ. ಓದಿದೆ. ಅದರಲ್ಲಿ ಅವರು ರಾಜ್ಯ ಸಭೆ ಚುನಾವಣೆಗೆ ನಿಂತಾಗ ಪತ್ರಿಕಾ ಪ್ರಕಟಣೆಯೊಂದರಲ್ಲಿ ಜಿ.ಟಿ.ನಾರಾಯಣ ರಾಯರು ಸೇರಿದ್ದನ್ನು ವ್ಯಂಗವಾಗಿ ಉದಾಹರಿಸಿದ್ದಾರೆ. ಇರಲಿ.

    ReplyDelete