(ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು - ಐದು)
ಅಧ್ಯಾಯ ಒಂಬತ್ತು
ಜಿಎಸ್ಕೆ ಮೇಷ್ಟ್ರು ಬಹುಶ್ರುತರು: ಬಿಎಸ್ಸಿ ಪದವೀಧರರಾಗಿದ್ದುದರಿಂದ ಇಂಗ್ಲಿಷ್, ಕನ್ನಡ, ಸಂಸ್ಕೃತ ಭಾಷೆಗಳ ಜೊತೆಗೆ ವಿಜ್ಞಾನ ವಿಭಾಗಗಳನ್ನೂ ಸಮರ್ಥವಾಗಿ
ಬೋಧಿಸಬಲ್ಲವರಾಗಿದ್ದರು. ಪ್ರಧಾನವಾಗಿ ಅವರು ನಮಗೆ ಪ್ರೌಢಶಾಲೆಯಲ್ಲಿ ಕನ್ನಡವನ್ನು
ವೈಜ್ಞಾನಿಕವಾಗಿ ಕಲಿಸಿದರು: ಕ್ಲಿಷ್ಟ ವಿಷಯಗಳಿಗೆ ವಿವರಣೆ ಕೊಡುವುದರ ಜೊತೆಗೆ
ಬೇರೆ ಬೇರೆ ಶಿಸ್ತುಗಳಲ್ಲಿ ಅವುಗಳ ಅನ್ವಯ ಕುರಿತು ತೌಲನಿಕ ವ್ಯಾಖ್ಯಾನವನ್ನೂ ಮಾಡುತ್ತಿದ್ದರು.
ವಿಜ್ಞಾನದ ಪರಿಕಲ್ಪನೆಗಳು ಬಂದಾಗಲಂತೂ ಅವರ ಉತ್ಸಾಹದ ಹೊನಲು ದಂಡೆ ಮೀರಿ ಹರಿಯುತ್ತಿತ್ತು.
ಶ್ರೀರಾಮನ ಕಪಿಸೈನ್ಯ ನಕ್ಷತ್ರಸಂಖ್ಯೆಯನ್ನೂ ಮೀರಿತ್ತು ಎಂಬ ಹೋಲಿಕೆ ಒಂದು ಪಾಠದಲ್ಲಿತ್ತು. ಜಿಎಸ್ಕೆಯವರು ಈ ಉಪಮಾನವನ್ನು ವಿವರಿಸುವ ಸಲುವಾಗಿ
ಅಕ್ಬರ್-ಬೀರಬಲ್ ಪ್ರಕರಣದಿಂದ ಆಯ್ದ ಒಂದು ಉದಾಹರಣೆಯನ್ನು ಉಲ್ಲೇಖಿಸಿದರು.
ತುಂಬಿದ ಆಸ್ಥಾನದಲ್ಲಿ ಚಕ್ರವರ್ತಿ ಅಕ್ಬರ್ ಎತ್ತಿದ ಪ್ರಶ್ನೆ, “ಆಕಾಶದಲ್ಲಿರುವ ನಕ್ಷತ್ರಗಳ ಸಂಖ್ಯೆ ಎಷ್ಟು?”
ಆಸ್ಥಾನಪಂಡಿತರೆಲ್ಲರೂ ಮೌನ. ಕೊನೆಗೆ ಆತ ಬೀರಬಲನನ್ನೇ
ಕುರಿತು ಈ ಪ್ರಶ್ನೆ ಕೇಳಿದ. ಈತನ ಉತ್ತರ, “ಪ್ರಭೂ!
ಇಂದು ರಾತ್ರಿ ಪೂರ್ತಿ ಎಣಿಸಿ ನಾಳೆ ಮುಂಜಾನೆ ಸನ್ನಿಧಾನಕ್ಕೆ ಬಂದು ಉತ್ತರ ಒಪ್ಪಿಸುತ್ತೇನೆ.”
ಆ ರಾತ್ರಿ ಆತ ಎಂದಿಗಿಂತಲೂ ಮೊದಲೇ ಮಲಗಿದ. ಮರುದಿನ ಬಲುತೂಕದ
ಭರ್ತಿಗೋಣಿಚೀಲವನ್ನು ಎತ್ತಿನ ಗಾಡಿಗೆ ಹೇರಿ ಇದರ ಸಮೇತ ಆಸ್ಥಾನಕ್ಕೆ ತೆರಳಿದ. ಅಲ್ಲಿ ನಾಲ್ಕು ಮಂದಿ ಪಟುಭಟರು ಈ ಹೊರಲಾರದ ಭಾರವನ್ನು ಕೆಳಗಿಳಿಸಿ ಕಷ್ಟಪಟ್ಟು ಎತ್ತಿಕೊಂಡು
ಹೋಗಿ ಅರಸನ ಮುಂದಿಟ್ಟರು. ಎಲ್ಲರಿಗೂ ಕುತೂಹಲ, ಒಗಟು. ಬೀರಬಲ್ ಗಂಭೀರವಾಗಿ ನುಡಿದ, “ರಾಜಾ! ನಕ್ಷತ್ರಸಂಖ್ಯೆಯನ್ನು ಈ ಗೋಣಿಚೀಲದಲ್ಲಿ ಹಿಡಿದಿಟ್ಟಿದ್ದೇನೆ.
ನೀನೇ ಬಂದು ಇದರ ಹೊಲಿಗೆ ಬಿಚ್ಚಿ ಆ ಮೊತ್ತವನ್ನು ನೋಡಬಹುದು.”
ಅಕ್ಬರ್ ಹಾಗೆಯೇ ಮಾಡಿದ. ಕಂಡದ್ದೇನು? ಮರಳ ಕಣಗಳ ನಿಬಿಡ
ಮೊತ್ತ! ಹೇಗೆ ಈ ಕಣಗಳ ಎಣಿಕೆ ಅಸಾಧ್ಯವೋ ಹಾಗೆ ನಕ್ಷತ್ರಗಳ ಗಣನೆ ಕೂಡ ಎಂಬುದು
ಧ್ವನಿ. ಎಂದಿನಂತೆ ಬೀರಬಲನ ಜಾಣ್ಮೆಗೆ ಎಲ್ಲರೂ ತಲೆದೂಗಿದರು.
ಈ ಪಾಠವನ್ನು ತನ್ಮಯನಾಗಿ ಆಲಿಸಿದೆ. ಹದಿಹರೆಯದ
ನನ್ನ ತಲೆಯಲ್ಲಿ ಇದೊಂದು ಹೊಸ ಸವಾಲನ್ನು ಬಿತ್ತಿತು: ನಾನೇಕೆ ವಾಸ್ತವ ಗಣನೆಯನ್ನೇ
ಮಾಡಿ ಈ ಒಡಪಿಗೆ ಉತ್ತರವನ್ನು ಶೋಧಿಸಬಾರದು? ಆ ಇರುಳು ರಾಜಾಸೀಟಿನ ಗುಡ್ಡೆಯ
ಕೊಡಿಯಲ್ಲಿ ಬೇರೆಬೇರೆ ದಿಶೆಗಳಿಗೆ ಮುಖಮಾಡಿ ಕುಳಿತವರು ನಾವು ಎಂಟುಮಂದಿ ಸಹಪಾಠಿಗಳು --
ಒಬ್ಬೊಬ್ಬ ಒಂದೊಂದು ವಲಯದಲ್ಲಿ ಕಾಣುತ್ತಿದ್ದ ತಾರೆಗಳನ್ನು ಆಗಾಗಲೇ ಎಣಿಸಿ ಬರೆದಿಡುವುದು
ನಮ್ಮ ಹಂಚಿಕೆ. ಮರುಮುಂಜಾನೆಯ ಹೊಂಬಣ್ಣ ಮಿನುಗುವ ತನಕವೂ ನಿಷ್ಠೆಯಿಂದ ಮಾಡಿದ
ಈ ಪ್ರಯೋಗ ನಮಗರುಹಿದ ವಾಸ್ತವತೆ ಬೇರೆಯೇ: ಇದು ಅಸಾಧ್ಯ ಸಾಹಸ,
ಕಪ್ಪೆಗಳನ್ನು ತಕ್ಕಡಿಯಲ್ಲಿ ತೂಗುವ ವಿಫಲ ಪ್ರಯತ್ನ! ಈಗ
ಕಂಡ ಅರಿಲು ಇನ್ನೊಂದು ಕ್ಷಣ ಕಾಣದು, ಏನೂ ಇಲ್ಲ ಎನ್ನುವಲ್ಲಿ ನಾನಿಲ್ಲಿದ್ದೇನೆ
ಎಂದು ಅಣಕಿಸುವ ರೀತಿ ನಕ್ಷತ್ರ ಜೊಂಪೆಯೇ ಪ್ರತ್ಯಕ್ಷ. ಈ ಮಾಯಾಮೃಗಾನ್ವೇಷಣೆ
ಸಾಕ್ಷಾತ್ ಶ್ರೀರಾಮನಿಗೂ ಪರಿಹರಿಸಲಾಗದ ಸವಾಲು.
ಇನ್ನು ಎಪಿಎಸ್ಅವರು ಮೂರ್ತಿವೆತ್ತ ವಿಜ್ಞಾನವೆಂಬ ಹೆಸರು ಪಡೆದಿದ್ದರು.
ಶಾಲೆಯಲ್ಲಿಯ ಇವರ ಪ್ರಯೋಗಮಂದಿರ astronomy(a)ಯಿಂದ zoology(z)ವರೆಗಿನ ವಿಜ್ಞಾನ ವಸ್ತುಸಂಗ್ರಹಾಲಯವೇ ಆಗಿತ್ತು.
ಇವರು ಆಯಾ ತರಗತಿಗೆ ಸಂಬಂಧಿಸಿದ ಪ್ರಯೋಗ ಮಾದರಿಗಳನ್ನು ತಂದು ನಮ್ಮ ಮುಂದೆ ಹಿಡಿದು
ತೋರಿಸಿ ವಿವರಿಸುವ ಪರಿ ಅನನ್ಯವಾಗಿತ್ತು. ಅಂದು ಇವರನ್ನು ಕುರಿತು ಪ್ರಚಲಿತವಿದ್ದ
ಒಂದು ಐತಿಹ್ಯ ಇವರೆಂಥ ಪ್ರಯೋಗಪರಿಣತಮತಿ ಎನ್ನುವುದಕ್ಕೆ ನಿದರ್ಶನ.
ಜೀವಂತ ವ್ಯಕ್ತಿಯ ಸರಾಸರಿ ಸಾಂದ್ರತೆ ನೀರಿನದಕ್ಕಿಂತ ಕಡಿಮೆಯಾದ್ದರಿಂದ ತಾನು ನಿಶ್ಚಲ ಸರೋವರದ
ಮೇಲೆ ಅಲ್ಲಾಡದೆ ಮಲಗಿದರೆ ಮರದ ಕೊರಡಿನಂತೆ ತೇಲಬೇಕು ಎಂಬುದಾಗಿ ತರ್ಕಿಸಿದ ನಮ್ಮ ಗುರುಗಳು, ವೃತ್ತಿ ಸೇರಿದ ತರುಣದಲ್ಲಿ, ಶ್ರೀ ಓಂಕಾರೇಶ್ವರ
ದೇವಾಲಯದ ವಿಶಾಲ ಕೆರೆ ನೀರಹಾಸಿನ ಮಲಗಲು ಪ್ರಯತ್ನಿಸಿದರಂತೆ, ಈಸು ಕಲಿತಿರದ
ಇವರು ಮರುಗಳಿಗೆ ನೀರಿನಲ್ಲಿ ಮುಳುಗಿ ನೀರ್ಗುಡಿದು ಕಂಗಾಲಾದರಂತೆ, ಇವರ
ಬೊಬ್ಬೆ ಕೇಳಿದ ದೇವಾಲಯದ ಸಿಬ್ಬಂದಿ ಧಾವಿಸಿ ಬಂದು ಇವರನ್ನು ಎತ್ತಿ ಹಾಕಿ ಬೆನ್ನಿಗೆರಡು ಗುದ್ದಿ
ಕುಡಿದಿದ್ದ ನೀರನ್ನು ಕಕ್ಕಿಸಿದರಂತೆ!
ಮುಂದೊಮ್ಮೆ ಈಸು ಕಲಿತ ನಾನು ಇದೇ ಪ್ರಯೋಗಮಾಡಿ ಕಾರಣ ಕಂಡುಕೊಂಡೆ: ಜೀವಂತ ವ್ಯಕ್ತಿ ನೀರಿನ ಮೇಲೆ ಮಲಗಿದಾಗ, ಅದೂ ಈಸು
ಕಲಿತಿರದಾತ, ತುಸುವಾದರೂ ಕೆಳಮುಖ ಒತ್ತಡ ಬೀರುತ್ತಾನೆ, ಇದು ಆತನನ್ನು ಮುಳುಗಿಸಲು ಸಾಕು. ನಾನು ಮುಳುಗಲಿಲ್ಲವೆಂಬುದು
ಕಂಡಂತೆಯೇ ಇದೆ.
“ಅವಿಭಾಜ್ಯ
ಸಂಖ್ಯೆಗಳ (prime numbers) ವಿತರಣೆಯಲ್ಲಿ ಯಾವುದೇ
ಕ್ರಮವನ್ನಾಗಲೀ ಅವನ್ನು ಕೊಡಬಲ್ಲ ಸೂತ್ರವನ್ನಾಗಲೀ ಇಲ್ಲಿಯ ತನಕ ಗುರುತಿಸಲಾಗಿಲ್ಲ” ಎಂದರು ಗಣಿತಗುರು ಆರ್ಎಚ್ಎಸ್. ಈ ವಿಷಯ ನಮ್ಮ ಪಠ್ಯಭಾಗವಾಗಿರಲಿಲ್ಲ. ನಾಗೇಶ ಎಂಬ ನಮ್ಮ ಸಹಪಾಠಿ ಯಾವುದೋ ಗಣಿತ ಚಮತ್ಕಾರದ ಪುಸ್ತಕ ಓದಿ ಹೇಗೆ ಮೊದಲ ಹಲವು ಅವಿಭಾಜ್ಯ
ಸಂಖ್ಯೆಗಳಾದ ೨, ೩, ೫, ೭, ೧೧, ೧೩, ೧೭, ೧೯ ಮುಂತಾದವನ್ನು ‘ಉದುರಿಸಬಲ್ಲ’
ಸ್ಯಮಂತಕಮಣಿ n೨+n+೪೧ ಎಂಬ ‘ಸಂಶೋಧನೆ’ಯನ್ನು ತರಗತಿಯಲ್ಲಿ ಪ್ರಕಟಿಸಿ ಬೀಗಿದ.
nಗೆ ೦, ೧, ೨, ೩ ಮುಂತಾಗಿ ಬೆಲೆಗಳನ್ನು
ಆದೇಶಿಸಿದಾಗ ಈ ಫಲನ ‘ಉದುರಿಸುವ’ ಸಂಖ್ಯೆಗಳು
ಅನುಕ್ರಮವಾಗಿ ೪೧, ೪೩, ೪೭, ೫೩ ಇತ್ಯಾದಿ. ಇವೆಲ್ಲವೂ ಅವಿಭಾಜ್ಯಗಳೇ. ನಾವೆಲ್ಲ ದಂಗಾಗಿ ಮಿಕಮಿಕ ಕಣ್ಣುಬಿಟ್ಟೆವು.
ಇತರರ ದೃಷ್ಟಿಯಲ್ಲಿ ಲೆಕ್ಕ ಕುರಿತಂತೆ ಗಟ್ಟಿಕುಳವೆಂದು ಪರಿಗಣಿತನಾಗಿದ್ದ ನಾನು ಕೂಡ ಮೂಕನಾಗಿದ್ದೆ. ಶೆಣೈಮಾಷ್ಟ್ರು ನಾಗೇಶನ ಮುಂದಾಳುತನವನ್ನು ಮೊದಲು ಹೊಗಳಿ ಬಳಿಕ nಗೆ ೪೦ನ್ನು ಆದೇಶಿಸಿ ಸರಳೀಕರಿಸಲು ಆತನಿಗೇ ಹೇಳಿದರು. ಅವನಿಗೆ ದೊರೆತ
ಬೆಲೆ ೧೬೦೧. “ಇದರ ವರ್ಗಮೂಲ ಪತ್ತೆ ಮಾಡು” ಎಂದರು.
ಆಶ್ಚರ್ಯ, ಅದು ೪೧. “ಅಂದಮೇಲೆ
ನೀನು ಪತ್ತೆ ಹಚ್ಚಿದ ಫಲನ ಸಾರ್ವತ್ರಿಕವಾದದ್ದಲ್ಲ, ಅಲ್ಲವೇ?”
ಎಂದಾಗ ಇಡೀ ತರಗತಿ ಅವಾಕ್ಕಾಯಿತು, ಗುರುಗಳ ಜಾಣ್ಮೆಗೆ
ಬೆರಗೂ ಆಯಿತು. ಈ ಘಟನೆ ನನ್ನ ಅಸ್ಮಿತೆಗೊಂದು ಸವಾಲಾಯಿತು: ಅಂಥ ಸಾರ್ವತ್ರಿಕ ಸೂತ್ರವನ್ನು ಎಂದಾದರೂ ನಾನು ಪತ್ತೆ ಮಾಡಲೇಬೇಕು.
ಪ್ರತಿಯೊಬ್ಬ ಗುರುವಿನ ಹಿರಿಮೆಯನ್ನೂ ಇಲ್ಲಿ ದಾಖಲಿಸುತ್ತ ಹೋಗದೇ ಒಂದು ಸಂಗತಿ ಮಾತ್ರ ನಿರೂಪಿಸಲು
ಇಚ್ಛಿಸುತ್ತೇನೆ: ಆ ಮಹಾಶಯರ ಜ್ಞಾನನಿಷ್ಠೆ, ಬೋಧನೋತ್ಸಾಹ ಮತ್ತು ಶಿಷ್ಯವಾತ್ಸಲ್ಯ ಅಪಾರ. ಸಂಬಳ ತೀರ ಕಡಿಮೆ.
ಸಂಸಾರಸಮಸ್ಯೆ ಬಲು ಜಟಿಲ, ಸಾಮಾಜಿಕ ಮನ್ನಣೆ ಅಷ್ಟಕ್ಕಷ್ಟೆ
(ಜನ ಇವರನ್ನು ‘ಮಾಷ್ಟಾ’ ಎಂದು
ಏಕವಚನದಲ್ಲಿ ನಿಕೃಷ್ಟವಾಗಿ ಕರೆಯುತ್ತಿದ್ದುದೇ ವಾಡಿಕೆ, ‘ಯಾವ ವೃತ್ತಿಗೂ
ನಾಲಾಯಕ್ಕಾದವ ಮಾಷ್ಟನಾದ’ ಎಂಬುದು ಸಾಮಾನ್ಯ ಜನ ಹೇಳಿಕೆ). ಇಂತಿದ್ದರೂ ನಮ್ಮ ಪ್ರೀತಿಯ ಗುರುಗಳಿತ್ತ ಜೀವನದರ್ಶನ ಮತ್ತು ಅವರು ಬಾಳಿಬೆಳಗಿದ ಜೀವನಶೈಲಿ
ಅನುಪಮ. ಆ ಮಹನೀಯರುಗಳ ಅಕೃತ್ರಿಮ ನಿಷ್ಕಾಮ ಕರ್ಮವನ್ನು ಇಂದು ಸ್ಮರಿಸುವಾಗ
ನನ್ನ ಮನದಲ್ಲಿ ಜಿಎಸ್‌ಎಸ್ ‘ಶ್ರೀ ಕುವೆಂಪು ಅವರಿಗೆ
--’ ಸಲ್ಲಿಸಿರುವ ಕವನನಮನದ ಕೆಲವು ಪಙ್ತಿಗಳು ನೆನಪಿಗೆ ಬರುತ್ತವೆ:
ಎಷ್ಟೊಂದು ಕೀಲಿ ಕೈಗಳನು ದಾನ ಮಾಡಿದ್ದೀರಿ
ವಾತ್ಸಲ್ಯದಿಂದ; ನಾನರಿಯದನೇಕ
ಬಾಗಿಲುಗಳನು ತೆರೆದಿದ್ದೀರಿ ನನ್ನೊಳಗೆ;
ಕಟ್ಟಿ ಹರಸಿದ್ದೀರಿ ಕನ್ನಡದ ಕಂಕಣವನ್ನು ಕೈಗೆ.
೧೦. ಬ್ರಾಹ್ಮಣರ ಓಣಿ ಅಂದು
ಮಡಿಕೇರಿಯಲ್ಲಿ ನಾವಿದ್ದ ನೆಲೆಯ ಹೆಸರು ಬ್ರಾಹ್ಮಣರ ಓಣಿ ಅಥವಾ ಕೇರಿ, ರಾಜಭಾಷೆ ಇಂಗ್ಲಿಷಿನಲ್ಲಿ Brahmin
Valley. ಇಲ್ಲಿಯ ಹೆಚ್ಚಿನ ಮನೆಗಳು ಬ್ರಾಹ್ಮಣರವು ನಿಜ, ಆದರೆ ಕೊಡವರ ಬಂಗ್ಲೆಗಳು (bungalows), ಇತರ ಕೋಮುಗಳವರ ಬಿಡಾರಗಳು, ತೀರ ಬಡವರ ಕುಟೀರಗಳೆಲ್ಲವೂ ಈ ವರ್ಣಮಯ ನೇಯ್ಗೆಯ ಅವಿಭಾಜ್ಯ
ಅಂಗಗಳಾಗಿದ್ದುವು. ಮನೆಯೊಳಗಿನ ಜಾತಿ, ಆಚಾರ,
ಕ್ರಮ ಮುಂತಾದವು ಸಾರ್ವಜನಿಕ ಜೀವನದಲ್ಲಿ ಎಂದೂ ಯಾರ ತಲೆಯನ್ನೂ ಕೊರೆಯಲಿಲ್ಲ.
ಕಾರಣ, ಅಂದು ಎಲ್ಲರಿಗೂ ಸಾಮಾನ್ಯವಾಗಿದ್ದುದು ಉದರಂಭರಣೆ,
ಸ್ವಾಭಿಮಾನ, ಸಂಸ್ಕೃತಿಪ್ರೇಮ ಮತ್ತು ಪರಿಸರ ಪ್ರಜ್ಞೆ.
ವಾಸ್ತವವಾಗಿ ಇವು ಉಸಿರಾಟದಂತೆ ಬದುಕಿನ ಅಂಗಗಳೇ ಆಗಿದ್ದುವು.
ನಮ್ಮ ಮನೆ ಮುಂದಿನ ಹಾದಿಯ ಒಂದು ಕೊನೆಯಲ್ಲಿ ಅಶ್ವತ್ಥಕಟ್ಟೆ ರಾರಾಜಿಸುತ್ತಿತ್ತು. ಅಲ್ಲಿಂದ ಮುಂದಕ್ಕೆ ಮೊಟ್ಟೆ ಏರಿದರೆ ಬಾಣೆಮೊಟ್ಟೆ (ದೇಚೂರು). ಎದುರು ದಿಶೆಗೆ ಸಾಗಿದರೆ ಗಾರೇತೋಟ. ಇದೊಂದು ವಿಶಾಲ ಕ್ರೀಡಾಂಗಣ. ಇದರ ಸುತ್ತ ಕಲ್ಲು, ಇಟ್ಟಿಗೆ, ಗಾರೆಯಿಂದ ಕಟ್ಟಿದ್ದ ಭದ್ರ ಕಕ್ಕಟ್ಟು (compound wall) ಇದನ್ನೊಂದು ದ್ವೀಪವನ್ನಾಗಿಸಿತ್ತು. ಇದರೊಳಗೆ ಒಂದು ಬದಿಯಲ್ಲಿ ಆಂಜನೇಯನ ಗುಡಿ. ರಾಜರಕಾಲದ
ಈ ಪುಟ್ಟ ಆದರೆ ಗಟ್ಟಿ ಗುಡಿಗೊಂದು ಭವ್ಯ ಗೋಪುರವಿತ್ತು. ಇದು ಆ ಇಡೀ ಆವರಣಕ್ಕೆ
ವಿಶಿಷ್ಟ ಪಾವಿತ್ರ್ಯವನ್ನೂ ಗಾಂಭೀರ್ಯವನ್ನೂ ಆವಾಹಿಸಿತ್ತು. ಗುಡಿಯ ಒತ್ತಿಗೆ
ಸುವ್ಯವಸ್ಥಿತ ಸ್ಥಿತಿಯಲ್ಲಿದ್ದ ಟೆನ್ನಿಸ್ ಕೋರ್ಟ್ ಗಾರೇತೋಟದ ಪೌರಸ್ತ್ಯ ಧಾರ್ಮಿಕತೆಗೆ ಪಾಶ್ಚಾತ್ಯ
ಆಧುನಿಕತೆಯ ಸೊಗಡಿನ ಮಧುರ ಲೇಪವನ್ನು ಪೂಸಿತ್ತು. ಕಕ್ಕಟ್ಟಿನೊಳಗೆ ಅಂಚಿನ
ನೇರ ಪೂರ್ತಿ ದಾಸವಾಳ, ಸೀಬೆ ಮತ್ತು ಕಾಡುಮರಗಳ ಸಾಲೇ ಸಾಲು. ಅದನ್ನೊಂದು ಋಷ್ಯಾಶ್ರಮವೆನ್ನೋಣವೇ?
ಗಾರೇತೋಟದ ಹೊರಕ್ಕೆ ಸಾತ್ಕಮಾನ್ ಕಟ್ಟಡ, ಇದರ ಎದುರು
ವಿಶಾಲ ಸರೋವರ, ಇದರಲ್ಲಿ ತೇಲುತ್ತಿದ್ದ ಜೋಡಿದೋಣಿ, ನಡುವಿನ ಮಂಟಪ, ಇಲ್ಲಿಂದ ಮುಂದಕ್ಕೆ ಮೆಟ್ಟಲುಗಳನ್ನೇರಿದರೆ ಓಂಕಾರೇಶ್ವರ
ದೇವಾಲಯ, ಇದರ ಹಿನ್ನೆಲೆಯಲ್ಲಿ ಅರಮನೆ ಬೆಟ್ಟ - ಇಲ್ಲೆಲ್ಲ ವಿಹಾರ ರಾಘವಾಂಕನ ಅಮರಾವತಿವರ್ಣನೆಗೆ ಬರೆದ ಭೌತಭಾಷ್ಯವೆಂದು ನನಗನ್ನಿಸುತ್ತಿತ್ತು:
ಪರುಷವಂಗಣದ ಕಲು ಸುರಭಿ ಕರೆಹಂ ಕಲ್ಪ
ತರು ಬನಂ ಸ್ವರ್ಗ ನಿಜ ದೇಶಮಮರಾವತಿಯೆ
ಪುರದುರ್ಗವಮರರಾಳ್ ಮೇರು ಕೇಳೀ ಶೈಲ...
ಈ ದೇವಸ್ಥಾನದ ಸುತ್ತ ಹಲವಾರು ಜಾನಪದ-ಪೌರಾಣಿಕ-ಚಾರಿತ್ರಿಕ ಘಟನೆಗಳ ಜಾಲ ನೇಯ್ದುಕೊಂಡಿತ್ತು. ಇಂಥ ಒಂದು ಎಳೆಯನ್ನು
ಆಧರಿಸಿ ಅದಕ್ಕೆ ಕಲ್ಪನೆಯ ಮೆರುಗನ್ನು ಕೊಟ್ಟು ನಾನೊಂದು ಕಥೆ ಬರೆದಿದ್ದೆ ‘ಪಂಜರದ ಅರಗಿಳಿ.’ (ನೋಡಿ ‘ಕೊಡಗಿನ ಸುಮಗಳು’)
ಈ ಜನಜನಿತ ನಂಬಿಕೆಯ ಪ್ರಕಾರ ದೇವಸ್ಥಾನದ ಹೊರಪೌಳಿಯಲ್ಲಿಯ ತೋಟದಲ್ಲಿರುವ ಸಂಪಿಗೆ
ಮರಗಳು ಬ್ರಹ್ಮರಾಕ್ಷಸನ ಆವಾಸ. ನಟ್ಟಿರುಳಿನಲ್ಲಿ ಆತ ಅಲ್ಲಿಂದ ಹೊರಟು,
ಓಂಕಾರೇಶ್ವರನಿಗೆ ಪ್ರದಕ್ಷಿಣೆಹಾಕಿ ಮುಂದೆ ಅಶ್ವತ್ಥಕಟ್ಟೆಗೆ ನಡೆದು ಅಲ್ಲಿಯೂ ಪ್ರದಕ್ಷಿಣೆ
ಮಾಡಿ ಮುಂದೆ ಗುಡ್ಡೆ ಏರಿ ದೂರ ಸಾಗಿ ಇನ್ನೊಂದು ಓಣಿಯಲ್ಲಿಯ ಬ್ರಾಹ್ಮಣರ ಶ್ಮಶಾನದಲ್ಲಿ ವಿರಮಿಸುತ್ತಾನೆ,
ನಸುಕು ಹರಿಯುವಾಗ ಅಲ್ಲಿಂದ ಛಂಗನೆ ನೆಗೆದು ಸಂಪಿಗೆ ಬನದಲ್ಲಿ ಲೀನನಾಗುತ್ತಾನೆ.
ಅಶ್ವತ್ಥವೃಕ್ಷದ ಮಹಿಮೆಯನ್ನು ಬಣ್ಣಿಸುವ ಶ್ಲೋಕವನ್ನು ನಮಗೆಲ್ಲ ಬಾಯಿಪಾಠ ಮಾಡಿಸುತ್ತಿದ್ದರು:
“ಮೂಲತೋ ಬ್ರಹ್ಮರೂಪಾಯಾ ಮಧ್ಯತೋ ವಿಷ್ಣು ರೂಪಿಣೇ ಅಗ್ರತಃ ಶಿವರೂಪಾಯಾ ವೃಕ್ಷರಾಜಾಯತೇ
ನಮಃ.”
ಈ ಕಲ್ಪನೆಯಲ್ಲಿ ನಿಹಿತವಾಗಿರುವ ವೈಜ್ಞಾನಿಕದೃಷ್ಟಿ ಕೂಡ ನನ್ನರಿವಿಗೆ ಮುಂದೊಂದು ದಿನ ಬಂದಾಗ
ನಮ್ಮ ಹಿರಿಯರ ವೈಚಾರಿಕತೆಗೆ ನಮೋ ಎಂದದ್ದುಂಟು: ಜ್ಞಾನಂ ವಿಜ್ಞಾನಸಹಿತಂ!
ಸೃಷ್ಟಿ, ಸ್ಥಿತಿ, ಲಯಗಳನ್ನು
ಧಾರ್ಮಿಕ-ವೈಜ್ಞಾನಿಕ ಧಾರೆಯಿಂದ ಕೋದಿರುವ ಈ ಚಿಂತನೆ ಅತ್ಯಂತ ಸರಳ ಮತ್ತು
ಸುಂದರ. ಇದು ಹಾಗಿರಲಿ. ಎಳೆಯ ಹುಡುಗನಾಗಿ ನಾನಂತೂ
ಅಶ್ವತ್ಥವೃಕ್ಷಕ್ಕೆ ಪ್ರತಿ ಮುಂಜಾನೆ ಮಂತ್ರಸಹಿತ ಪ್ರದಕ್ಷಿಣೆಹಾಕುತ್ತಿದ್ದೆ, ಬಳಿಕ ಓದಲು ಕೂರುತ್ತಿದ್ದೆ. ಇಲ್ಲೊಂದು ಘಟನೆ ನಿರೂಪಿಸಬೇಕು.
ಕೊಡವರ ಹುಡುಗ ಮಾದಪ್ಪ ನನ್ನ ಸಹಪಾಠಿ, ಪರಮ ಮಿತ್ರ,
ನಮ್ಮೆ ಕೇರಿಯ ಅಂಚಿನಲ್ಲೇ ಅವನ ಮನೆ. ಪಾಠಪ್ರವಚನಗಳಲ್ಲಿ,
ಅಲ್ಲಿಯೂ ಗಣಿತದಲ್ಲಿ ವಿಶೇಷವಾಗಿ, ಮುಂದಿದ್ದ ನನ್ನ ಬಳಿ
ಅವನು ಆಗಾಗ ಲೆಕ್ಕ ಮತ್ತು ಕನ್ನಡ ಹೇಳಿಸಿಕೊಳ್ಳಲು ಬರುತ್ತಿದ್ದ. ನಾನೂ
ಅವನಲ್ಲಿಗೆ ಹೋಗುತ್ತಿದ್ದೆ.
ಮಾದಪ್ಪನ ಮುಗ್ಧ ಪ್ರಶ್ನೆ, “ಜೀಟಿ! ನಿನಗೆ ಓದದೆಯೆ ಬರುವ
ಈ ಕಬ್ಬಿಣದ ಕಡಲೆಗಳು ನಾನೆಷ್ಟು ಕಷ್ಟಪಟ್ಟರೂ ನೀನೆಷ್ಟು ಚೆನ್ನಾಗಿ ಹೇಳಿಕೊಟ್ಟರೂ ಅರ್ಥವಾಗುತ್ತಿಲ್ಲವೇಕೆ?”
ನನ್ನದೂ ಅಷ್ಟೇ ಮುಗ್ಧ ತರ್ಕ, “ನೋಡು ಮಾದಪ್ಪ!
ನಾನು ಪ್ರತಿ ಮುಂಜಾನೆ ಅಶ್ವತ್ಥವೃಕ್ಷಕ್ಕೆ ಪ್ರದಕ್ಷಿಣೆ ಹಾಕುತ್ತೇನೆ.
ಅದು ಕಾರಣವಾಗಿರಬಹುದು.”
ಮುಂದಿನ ಎರಡು ವಾರ ಮಾದಪ್ಪ ನನ್ನ ದುಪ್ಪಟ್ಟು ಸುತ್ತುಗಳನ್ನು ಹಾಕಿದ. ಆದರೆ ಕ್ಲಾಸ್ ಪರೀಕ್ಷೆಯಲ್ಲಿ ದೊರೆತ ಅಂಕ ಪಾತಾಳಕ್ಕೆ ಕುಸಿದಿತ್ತು.
ಅಶ್ವತ್ಥನಾರಾಯಣನ ಈ ಅವಕೃಪೆಗೆ ಕಾರಣವೇನೆಂಬುದು ನಮಗೆ ಹೊಳೆಯಲಿಲ್ಲ. ಮುತ್ತಜ್ಜನ ಮುಂದೆ ನಾವಿಬ್ಬರೂ ನಮ್ಮ ಸಮಸ್ಯೆಯನ್ನು ನಿವೇದಿಸಿದೆವು. ಕೂಲಂಕಷವಾಗಿ ವಿವರಗಳನ್ನು ಆಲಿಸಿದ ಅವರು ನೀಡಿದ ತೀರ್ಪು ನಮ್ಮಿಬ್ಬರ ಎದುರು ಹೊಸ ನೋಟ ಮತ್ತು
ಹೊಸ ಹುರುಪು ಬಿತ್ತರಿಸಿದುವು, “ಮಾದಪ್ಪ! ನೀನು
ಕೇವಲ ಪ್ರದಕ್ಷಿಣೆಗಳಲ್ಲೇ ಕಾಲಹರಣಮಾಡಿದೆ, ನಾರಾಯಣ ಅದರ ಜೊತೆಗೆ ಅಧ್ಯನವನ್ನೂ
ಅಷ್ಟೇ ನಿಷ್ಠೆಯಿಂದ ಮಾಡಿದ. ಆದ್ದರಿಂದ ನೀವಿಬ್ಬರೂ ಅರಿತು ಸದಾ ಅನುಷ್ಠಾನಿಸಬೇಕಾದ
ಜೀವನ ಸೂತ್ರವಿದು: ಭಗವಂತನಿಷ್ಠೆ ಮತ್ತು ಕರ್ತವ್ಯತತ್ಪರತೆ ಸಮವಾಗಿ ಎರಕಗೊಂಡಾಗ
ಮಾತ್ರ ವ್ಯಕ್ತಿಗೆ ಯಶಸ್ಸು ಸಿದ್ಧಿಸುತ್ತದೆ.”
ಇಂದು ತಿಳಿದಿದೆ: ಆಧ್ಯಾತ್ಮಿಕನಿಷ್ಠೆ ಗುರಿ ತೋರಿಸುತ್ತದೆ,
ಕಾರ್ಯಶ್ರದ್ಧೆ ಹಾದಿ ರೂಪಿಸುತ್ತದೆ. ನಿಷ್ಠೆಯಿರದ ಶ್ರದ್ಧೆ
ಜೀವನನೌಕೆಯ ವೃಥಾ ಅಂಡಲೆತ, ಶ್ರದ್ಧೆಯಿರದ ನಿಷ್ಠೆ ಕೇವಲ ಬೂಟಾಟಿಕೆ.
೧೧. ಕಡಲಿಗೆ ಬಿದ್ದ ತೆಪ್ಪ
ಅಂದು ಕೊಡಗು ಚೀಫ಼್ ಕಮಿಶನರ್ ಆಡಳಿತೆಯಲ್ಲಿದ್ದ ಪ್ರತ್ಯೇಕ ರಾಜ್ಯ. ಇಲ್ಲಿಯ ಎಲ್ಲ ಶಾಲೆಗಳೂ ಮದ್ರಾಸು ಸರ್ಕಾರದ ಎಸ್ಎಸ್ಎಲ್ಸಿ ಬೋರ್ಡಿನ ಸುಪರ್ದೆಗೆ ಒಳಪಟ್ಟಿದ್ದುವು.
ಇಡೀ ಕೊಡಗಿನಲ್ಲಿದ್ದುದು ಕೇವಲ ಮೂರು ಪ್ರೌಢ ಶಾಲೆಗಳು: ಮಡಿಕೇರಿಯಲ್ಲಿ ನಮ್ಮ ಶಾಲೆ ಮತ್ತು ಹುಡುಗಿಯರ ಕಾನ್ವೆಂಟ್, ವಿರಾಜಪೇಟೆಯಲ್ಲಿಯ
ಸರ್ಕಾರಿ ಶಾಲೆ.
೧೯೪೨ರ ಎಸ್ಎಸ್ಎಲ್ಸಿ ಪಬ್ಲಿಕ್ ಪರೀಕ್ಷೆ ಬರೆದೆ. ಅಲ್ಲಿಯ ತನಕ ಪ್ರತಿ ತರಗತಿಯಲ್ಲಿಯೂ
ನನ್ನ ಸ್ಥಾನ ಸದಾ ಒಂದನೆಯದು. ಕನ್ನಡದಲ್ಲಿ ಕಥೆ ಮತ್ತು ಪದ್ಯಗಳನ್ನು
‘ಕನ್ನಡಕುವರ’ನೆಂಬ ಗುಪ್ತನಾಮದಲ್ಲಿ ಬರೆದು ‘ಪ್ರಸಿದ್ಧ’ನಾಗಿದ್ದೆ. ಹದಿನಾರರ ಏರುಜವ್ವನ.
ಸಹಜವಾಗಿ ಭವಿಷ್ಯ ಕುರಿತಂತೆ ಹೊಂಗನಸುಗಳನ್ನು ಕಾಣುತ್ತಿದ್ದೆ. ನಿರೀಕ್ಷೆಯಂತೆ ಅಂತಿಮ ಪರೀಕ್ಷೆಯಲ್ಲಿ ನಾನು ಇಡೀ ಜಿಲ್ಲೆಗೆ ಒಂದನೆಯ ಸ್ಥಾನ ಪಡೆದು ಉತ್ತೀರ್ಣನಾದೆ.
ಕಾಲೇಜ್ ವಿದ್ಯಾಭ್ಯಾಸವೆಲ್ಲಿ? ಮಂಗಳೂರಿಗೆ ಹೋಗೋಣವೇ?
ಅದು ಮದ್ರಾಸಿನ ಶಿಕ್ಷಣ ವ್ಯವಸ್ಥೆಗೆ ಸಂಯೋಜಿತವಾಗಿದ್ದ ವಲಯ. ಅಲ್ಲಿ ನನಗೆ ಸುಲಭವಾಗಿ ಪ್ರವೇಶ ದೊರೆಯುತ್ತಿತ್ತು. ಆದರೆ ನನ್ನ
ಆಕರ್ಷಣೆ ಕೈಯಲ್ಲಿದ್ದ ಆ ಹಕ್ಕಿಯಲ್ಲ, ಬದಲು, ಪೊದೆಯೊಳಗಿರಬಹುದಾಗಿದ್ದ ಕಾಲ್ಪನಿಕ ಪಕ್ಷಿ! ಅದು ನೆರೆರಾಜ್ಯ
ಮೈಸೂರು, ಗಂಧ ಸುಗಂಧದ ಕುವೆಂಪು ಮೆರೆಯುವ, ಬಣ್ಣದ
ಬೆಡಗಿನ ನಾಲ್ಮಡಿ ಕೃಷ್ಣನ ಮೈಸೂರು! ಅಪ್ಪ ನನ್ನನ್ನು ಮೈಸೂರಿಗೆ ಕರೆದೊಯ್ದರು.
ಧರೆಗಿಳಿದ ಆ ಅಮರಾವತಿಗೆ ಅದು ನನ್ನ ಮೊದಲ ಭೇಟಿ:
ಅಲ್ಲಿನಾ ಜನರನಿಮಿಷರು ಮೇ-
ಣಲ್ಲಿನಾ ಗಿರಿಬನಗಳೆಲ್ಲವು
ಮಲ್ಲಿಗೆಯ ಪರಿಮಳವ ಸೂಸುವ ಕಲ್ಪವೃಕ್ಷಗಳೇ!
ಅಲ್ಲಿರದ ವೈಭವವ ನೀ ಬೇ-
ರೆಲ್ಲಿ ಕಾಣುವೆ! ಜ್ಞಾನಶಿಖರ-
ಕ್ಕಲ್ಲಿಹುದು ಸೋಪಾನ ಪಙ್ತಿಯು ನಿನ್ನ ನೆಲೆಯಲ್ಲಿ!
ಹೀಗೆ ಅಂದು ನನ್ನೊಳಗೆ ಲಾಸ್ಯವಾಡುತ್ತ ‘ಭೃಂಗದ ಬೆನ್ನೇರಿ
ಬಂತು ಕಲ್ಪನಾ ವಿಲಾಸ!’ ಆದರೆ ಎದುರಾದ ವಾಸ್ತವತೆ ಕಠೋರವಾಗಿತ್ತು.
ಯುವರಾಜ ಕಾಲೇಜಿನ ಪ್ರಾಂಶುಪಾಲರ ದೃಷ್ಟಿಯಲ್ಲಿ I was a foreigner and my marks were just ordinary. “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂಬ ಜನಪ್ರಿಯ
ಗೀತೆ ಇನ್ನೂ ವಾಸ್ತವವಾಗಿರದ ಸನ್ನಿವೇಶ, ಭಾರತದೊಳಗೇ ನನಗೆ ವಿದೇಶೀ ಪಟ್ಟ,
ಎಲ್ಲಕ್ಕೂ ಮಿಗಿಲಾಗಿ ನನ್ನ ಅಂಕಗಳು ಕೇವಲ ಸಾಮಾನ್ಯ! ಕೊಳವಲ್ಲವೀ
ಕಡಲು, ದಾಟಲು ಸಾಲದಿಲ್ಲಿ ಕೇವಲ ತೆಪ್ಪ, ಹಡಗೇ
ಬೇಕೆಂಬ ಜ್ಞಾನೋದಯವಾಯಿತು ನನಗಾಗ.
ನಮಗಿದ್ದ ಆಯ್ಕೆ ಒಲ್ಲದ ಮಂಗಳೂರೊಂದೇ. ಆ ಮೊದಲು ಅಪ್ಪ
ಕಾಲೇಜ್ ಮೆಟ್ಟಲೇರಿದ್ದ ನಗರವದು, ಅವರ ಗುರುಗಳಾಗಿದ್ದ ಮುಳಿಯ ತಿಮ್ಮಪ್ಪಯ್ಯನವರ
ನೆಲೆಯದು, ಮರಿಕೆ-ಪುತ್ತೂರುಗಳ ವಿಸ್ತರಣೆಯದು
ಮತ್ತು ನಮ್ಮ ಅಸಂಖ್ಯ ನೆಂಟರಿಷ್ಟರ ಜೇನುಗೂಡದು. ಹೋದೆವು, ಸಂತ ಅಲೋಶಿಯಸ್ ಕಾಲೇಜಿನಲ್ಲಿ ಜೂನಿಯರ್ ಇಂಟರ್ಮೀಡಿಯೆಟ್ ತರಗತಿಗೆ ದಾಖಲಾದೆ. ವಾಸ ಮತ್ತು ಊಟ? ಯಾವುದೇ ಕೋಮಿನ (ವಿಶಿಷ್ಟವಾಗಿ
ಹೇಳುವುದಾದರೆ ಬ್ರಾಹ್ಮಣರ) ವಿದ್ಯಾರ್ಥಿನಿಲಯಕ್ಕೆ ತಮ್ಮ ಮಗನನ್ನು ಸೇರಿಸತಕ್ಕದ್ದಲ್ಲ
ಎಂಬುದು ನನ್ನ ತಂದೆಯವರ ಸ್ಪಷ್ಟ ನಿರ್ಧಾರ. ಅವರು ತಮ್ಮ ಕಾಲೇಜ್ ದಿನಗಳಂದು
ಇಂಥ ಒಂದು ನಿಲಯದಲ್ಲಿದ್ದು ಕೋಮುಸಂಬಂಧವಾಗಿ ಸಾಕಷ್ಟು ಬವಣೆ ಅನುಭವಿಸಿ ಅದನ್ನು ತೊರೆದು ಪ್ರತ್ಯೇಕ
ಬಿಡಾರವನ್ನೇ ಹೂಡಿದ್ದರಂತೆ. “ಸಾರ್ವಜನಿಕ ರಂಗ ಕುರಿತಂತೆ ನೀನು ಮುಕ್ತ
ಹವೆಯಲ್ಲಿ ವೈಯಕ್ತಿಕ ಇಷ್ಟಾನಿಷ್ಟಗಳೆಂಬ ರಾಗವಶನಾಗದೇ ಪರಿಶುದ್ಧ ಜ್ಞಾನಾನ್ವೇಷಕನಾಗಿಯೇ ಮುಂದುವರಿಯಬೇಕು,”
ಇದು ಅವರು ನುಡಿದ ಮಾತು ಮತ್ತು ನಡೆದ ಹಾದಿ. ತತ್ಪೂರ್ವ
ನಮ್ಮ ಮನೆಯ ವಾತಾವರಣವೂ ಈ ಸೆಕ್ಯುಲರ್ ದೃಷ್ಟಿಗೆ ಅನುಗುಣವಾಗಿಯೇ ಇದ್ದುದರಿಂದ ನನ್ನ ಅಪೇಕ್ಷೆಯೂ
ಇದಕ್ಕೆ ಅನುಗುಣವಾಗಿಯೇ ಇತ್ತು. ನನ್ನನ್ನು ಅವರು ಕಾಲೇಜಿನ ಸಾರ್ವಜನಿಕ
ಹಾಸ್ಟೆಲಿಗೆ ಸೇರಿಸಿದರು.
ನಾನು ಆಯ್ದದ್ದು ಅಂದು royal combination ಎಂದೇ ಪ್ರಸಿದ್ಧವಾಗಿದ್ದ physics-chemistry-mathematics (PCM) ಸಂಯೋಜನೆ. ಇಂದಿನ ಪರಿಸ್ಥಿತಿಯಾದರೂ ತೀರ ವಿಭಿನ್ನವಲ್ಲ. ಜ್ಞಾನತೃಷೆ ಇದರ ಕಾರಣವಲ್ಲ, ಬುದ್ಧಿಶ್ರೀಮಂತರ ಸಹಜ ನೆಲೆ PCM, ಭವ್ಯವೃತ್ತಿಗೆ ಆದ್ದರಿಂದ ಸಂಪತ್ತಿಗೆ ಕೀಲಿಕೈ ಅದೊಂದೇ
ಸಂಯೋಜನೆ ಎಂದು ಮಕ್ಕಳಿಗಿಂತ ಹೆಚ್ಚಾಗಿ ತಂದೆತಾಯಿಯರನ್ನು ವಶೀಕರಿಸಿಕೊಂಡಿರುವ ಪಿಡುಗು.
ಹಾಸ್ಟೆಲಿನಲ್ಲಿ ವಾಸಕ್ಕೆ ಒಂಟಿ ಕೊಠಡಿ ಮಾತ್ರ. ಊಟಕ್ಕೆ ಪಕ್ಕದಲ್ಲೇ
ಇದ್ದ ಆನಂದ ಭವನ ಹೊಟೇಲೊಂದೇ ಗತಿ. ಯಾವುದೂ ರುಚಿಯಿಲ್ಲ, ಆಕರ್ಷಣೀಯವಾಗಿಯೂ ಇಲ್ಲ. ಕುಸಲಕ್ಕಿ ಊಟ ಸೇರದು. ತಿಂಡಿಗಳೆಲ್ಲ ಬಲು ದುಬಾರಿ. ಮಡಿಕೇರಿಯ ತಣ್ಪು ಪ್ರಶಾಂತತೆ ಇಲ್ಲಿಲ್ಲ.
ಸೊಳ್ಳೆಗಳ ಸಾಮ್ರಾಜ್ಯ. ಸೆಖೆಯೋ ಸೆಖೆ. ಯಾರೂ ಗುರುತಿಲ್ಲ, ನೆಂಟರಿಷ್ಟರ ಮನೆಗೆ ಹೋಗತಕ್ಕದ್ದಲ್ಲವೆಂದು
ಅಪ್ಪನ ಆದೇಶ. ಈ ಗೊಂದಲದ ನಡುವೆ ಬೆಳಗಾಯಿತು. ಬೆಳ್ಳನೆ ಬೆಳಗಾಗಲಿಲ್ಲ, ಕಾರ್ಗಾಲದ ಬಿರುಮಳೆ ಜಡಿಯುತ್ತ ಅದು
ಬಂತು - ‘ತೆಂಕಣ ಗಾಳಿಯು ಕೊಂಕಣ ಸೀಮೆಗೆ ಬಂತೈ’ ಎಂಬಂತೆ.
ಹಾಸ್ಟೆಲ್ ಬೆನ್ನಿಗಿದ್ದ ಗುಡ್ಡವೇರಿ ಕಾಲೇಜ್ ಸಂಕೀರ್ಣ ತಲಪಿದೆ. ಇಂಗ್ಲಿಷ್ ತರಗತಿ ವೇಳೆ ವಿವಿಧ ಸಂಯೋಜನೆಗಳವರು ಒಂದೇ ಕೊಠಡಿಯಲ್ಲಿ ಸೇರುತ್ತಿದ್ದೆವು.
ಸುಮಾರು ೩೦೦ ಮಂದಿ. ಧ್ವನಿವರ್ಧಕದ ನೆರವಿಲ್ಲದೇ ನಮ್ಮ
ಉಪನ್ಯಾಸಕರು ಪಾಠಮಾಡುತ್ತಿದ್ದ ಪರಿ ಅನನ್ಯವಾಗಿತ್ತು. ವಿದ್ಯಾರ್ಥಿಗಳಲ್ಲಿಯ
ಶಿಸ್ತು ಉನ್ನತ ಮಟ್ಟದಲ್ಲಿದ್ದ ದಿನಗಳವು. ಮೊದಲ ವಾರದಲ್ಲಿಯೇ ನನಗೆ ಒಂದು
ಅಂಶ ಮನದಟ್ಟಾಯಿತು: ಆ ಮುನ್ನೂರರಲ್ಲಿ ಎಸ್ಎಸ್ಎಲ್ಸಿ ಅಂಕಗಳ ಪ್ರಕಾರ ನನ್ನ ನೆಲೆ ನೂರಕ್ಕಿಂತ ಎಷ್ಟೋ ಆಚೆಗೆ!
“Coorg first! You are Mangalore last!” ಎಂಬಂಥ ಪರಿಸ್ಥಿತಿ.
ಕನ್ನಡ ತರಗತಿಯಲ್ಲಿ ನಾನು ನೀರಿಗಿಳಿದ ಮೀನು. ಕನ್ನಡದ ಉದ್ದಾಮ
ಪಂಡಿತ ಮುಳಿಯ ತಿಮ್ಮಪ್ಪಯ್ಯನವರು ಪ್ರಾಚೀನ ಕಾವ್ಯಗಳನ್ನು - ಪಂಪ,
ರನ್ನ, ಬಾಣಭಟ್ಟ, ಲಕ್ಷ್ಮೀಶ
ಮೊದಲಾದವರ ಕೃತಿಗಳಿಂದ ಆಯ್ದ ಭಾಗಗಳು - ರಾಗವಾಗಿ ಓದುತ್ತಿದ್ದಾಗಲೇ ಅರ್ಥ
ಸ್ಫುಟವಾಗುತ್ತಿತ್ತು. ಅವರು ನೀಡುತ್ತಿದ್ದ ವಿವರಣೆಗಳು ನನ್ನಲ್ಲಿ ಸಂಶೋಧನೆಯ
ಬೀಜಗಳನ್ನು ಬಿತ್ತುತ್ತಿದ್ದುವು. ಆದರೆ ಹೆಚ್ಚಿನ ವಿದ್ಯಾರ್ಥಿಗಳ ದೃಷ್ಟಿಯಲ್ಲಿ
ಅವರು popular teacher ಅಲ್ಲ! ಏಕೆಂದರೆ ಪರೀಕ್ಷೆಯಲ್ಲಿ ಸುಲಭವಾಗಿ ಅಂಕ ಗಿಟ್ಟಿಸುವ ತಂತ್ರವನ್ನವರು ಹೇಳಿಕೊಡುತ್ತಿರಲಿಲ್ಲ.
ಭೌತ ಮತ್ತು ಗಣಿತವಿಜ್ಞಾನಗಳಿಗೆ ಬರುತ್ತಿದ್ದ ಉಪನ್ಯಾಸಕರು ಸರ್ವಶ್ರೇಷ್ಠರಾಗಿದ್ದರು:
ಎಸ್.ನಾರಾಯಣಹೊಳ್ಳ (ಭೌತವಿಜ್ಞಾನ),
ಕೆ.ಎ.ಕೃಷ್ಣಮೂರ್ತಿ ಮತ್ತು ಬಿ.ಭುಜಂಗರಾವ್ (ಗಣಿತ). ತಿಮ್ಮಪ್ಪಯ್ಯನವರಂತೆ
ಇವರು ಕೂಡ ಶ್ರೇಷ್ಠ ವಿದ್ವಾಂಸರು, ಜೊತೆಗೆ ಉತ್ಕೃಷ್ಟ ಬೋಧಕರು ಕೂಡ.
ಹೀಗೆ ನನಗಿಲ್ಲಿ ಕೇಶವಾಚಾರ್ಯ ಮತ್ತು ಶ್ರೀನಿವಾಸರಾವ್ ಎಂಬ ಮಡಿಕೇರಿ-ಗುರುದ್ವಯ ಪರಂಪರೆಯ ವಿಸ್ತರಣೆ ದೊರೆಯಿತು.
ರಸಾಯನ ವಿಜ್ಞಾನದ ತರಗತಿಗಳು ಮಾತ್ರ ಭಯಂಕರ. ಅವರೊಬ್ಬ ಪಾದ್ರಿ, ಆದ್ದರಿಂದ
ಆಡಳಿತ ವ್ಯವಸ್ಥಾಪನೆಯ ದೃಷ್ಟಿಯಲ್ಲಿ ಯಾವುದೇ ವಿಷಯದ ಬಗ್ಗೆ ಪಾಠಮಾಡಬಲ್ಲ ಪರವಾನಿಗೆ ಪಡೆದಿದ್ದ ಆಚಾರ್ಯ!
Mithra's Chemistry ಎಂಬ ತೂಕದ ಹೆಬ್ಬೊತ್ತಿಗೆ ಅವರ ಬೈಬಲ್. ಬಂದರು ತರಗತಿಗೆ,
ಮೊದಲ ಸುಮಾರು ೨೦ ಪುಟಗಳನ್ನು ಓದಿ ಹೇಳಿದರು: ಒಂದು ಗೆರೆಯೂ
ಅರ್ಥವಾಗಲಿಲ್ಲ. ರಾಸಾಯನಿಕ ಧಾತುಗಳ ಮತ್ತು ಸಂಯುಕ್ತಗಳ ಪ್ರತೀಕಗಳನ್ನೂ
ವೇಲೆನ್ಸಿಗಳನ್ನೂ ಮುದ್ರಿಸಿದ್ದ ಕೋಷ್ಟಕವನ್ನು ನಮಗಿತ್ತರು, ಮುಂದಿನ ತರಗತಿಗೆ
ಬರುವ ವೇಳೆಗೆ ಅಷ್ಟನ್ನೂ ಉರುಹೊಡೆದು ಬರಬೇಕೆಂದು ಅಪ್ಪಣೆ ಮಾಡಿದರು.
ಮುಂದಿನ ಪಾಠ. ಇಪ್ಪತ್ತು ರಾಸಾಯನಿಕ ಸಂಯುಕ್ತಗಳನ್ನು ಯಾಂತ್ರಿಕವಾಗಿ
ಉಸುರಿದರು, ನಾವು ಅವುಗಳ ಸೂತ್ರಗಳನ್ನು ಒಡನೆ ನೆನಪಿನಿಂದ ಬರೆದು ಆಗಲೇ
ನಮ್ಮ ಉತ್ತರಪತ್ರಗಳನ್ನು ಅವರಿಗೆ ಒಪ್ಪಿಸಬೇಕಾಗಿತ್ತು. ಒಂದು ಉದಾಹರಣೆ:
Hydrochloric acid ಪದದ ಎದುರು HCl ಎಂದು ಬರೆಯಬೇಕಾಗಿತ್ತು. ಈ ಹಿಕಮತ್ತಿನ
ತಲೆಬುಡ ತಿಳಿದಿರದಿದ್ದ ನಾನು ಅದೇ ಪದವನ್ನು ಇಂಗ್ಲಿಷಿನಲ್ಲಿ ಬರೆದೆ. ಉಳಿದ
೧೯ ಪದಗಳಿಗೂ ಇದೇ ಗತಿ! ಆ ಉತ್ತರಪತ್ರಿಕೆಗಳನ್ನು ಅವರು ಹಿಂತಿರುಗಿಸಿದಾಗ
ನನಗೆ ದೊರೆತಿದ್ದ ಅಂಕ - ೨೦! ಈ ಮಾನಕದಲ್ಲಿ ೦
ಅಂಕ ದೊರೆತಾತನದು ಒಂದನೆಯ ಸ್ಥಾನ. ನಮ್ಮ ೧೨೦ ‘ಕುರಿ’ಗಳ ಸಾಲಿನಲ್ಲಿ ಒಂದನೆಯ ಸ್ಥಾನ ಗಳಿಸಿದವ ಒಬ್ಬ ಮಾತ್ರ:
ಅವನ ಹೆಸರನ್ನು ಪಾದ್ರಿಗುರುಗಳು ಘೋಷಿಸಿದರು: ಯು.ದೇವಿದಾಸ ಆಚಾರ್ಯ. ಮುಂದಿನ ಸಾಲಿನಲ್ಲಿ ಕುಳಿತಿದ್ದ ಈ ಕುಳ್ಳ
ಆ ಕ್ಷಣ ನಮ್ಮ ತರಗತಿಯಲ್ಲೊಬ್ಬ ಪವಾಡಪುರುಷ ಎನಿಸಿಕೊಂಡ. ಕಂಠಪಾಠಪಾರಂಗತ
ಅವನೆಂಬುದು ಕ್ರಮೇಣ ಅರಿವಿಗೆ ಬಂತು. ಸ್ಮರಣಸಾಮರ್ಥ್ಯವೆಂದೂ ನನ್ನ ಆಸ್ತಿಯಾಗಿರಲಿಲ್ಲ.
ಹಾಗಾದರೆ ಭವಿಷ್ಯ?
ಮೊದಲನೆಯ ಪರೀಕ್ಷೆಯಲ್ಲಿ ನನಗೆ (ರಸಾಯನವಿಜ್ಞಾನದಲ್ಲಿ)
೧೫೦ಕ್ಕೆ ಕೇವಲ ೧೯ ಅಂಕಗಳು ಬಂದುವು, ಎರಡನೆಯದರಲ್ಲಿ ಈ
ಅಂಕ ೭ಕ್ಕೆ ಕುಸಿದಿತ್ತು! ಇದೇ ಧಾಟಿಯಲ್ಲಿ ಮುಂದುವರಿದರೆ ಎರಡನೆಯ ವರ್ಷದ
ಅಂತಿಮ ಪರೀಕ್ಷೆಯಲ್ಲಿ ಅದೊಂದು ನಿಗೂಢ ಋಣಸಂಖ್ಯೆಯಾಗುವುದು ಖರೆ ಎಂಬುದು ಸ್ಪಷ್ಟವಾಯಿತು.
ಅಲ್ಲಿಗೆ ನಾನು ಗೋತಹೊಡೆಯುವುದು ಖಾತ್ರಿ, ಆಗ ನನ್ನ ವಿದ್ಯಾಭ್ಯಾಸ
ಕೈದು, ಮುಂದೇನು? ನಾನು ಹುಟ್ಟಾ ದಡ್ಡನಲ್ಲವೆಂಬುದು
ಗಣಿತ ಮತ್ತು ಭೌತವಿಜ್ಞಾನ ವಿಷಯಗಳಲ್ಲಿ ಪಡೆಯುತ್ತಿದ್ದ ಶೇಕಡಾ ೯೦ಕ್ಕೂ ಮಿಕ್ಕಿದ ಅಂಕಗಳು ಎತ್ತಿ
ಕಾಣಿಸುತ್ತಿದ್ದುವು. ಹಾಗಾದರೇನು ಮಾಡಬೇಕು? ಖಾಸಗಿಪಾಠ
ತರಗತಿ ಸೇರಲು ದುಡ್ಡಿಲ್ಲ. ಕೊಠಡಿಯಲ್ಲೇ ಹಗಲಿರುಳು ಉರುಹೊಡೆದು ಉತ್ತರ
ಕಕ್ಕುವುದೊಂದೇ ಶರಣು. ಹಾಗೆಯೇ ಮಾಡಿದೆ: ಶರತಲ್ಪವಾಸಸುಖವದು.
ಆದರೆ ಉತ್ತರಾಯಣ ಬಂದಾಗ ಈ ಭೀಷ್ಮ ಸ್ವರ್ಗ ಸೇರಿದ! ೧೯೪೪ರ
ಅಂತಿಮಪರೀಕ್ಷೆಯಲ್ಲಿ ಪಡೆದ ಅಂಕಗಳಿವು: ಗಣಿತ ೯೫%, ಭೌತವಿಜ್ಞಾನ ೮೭%, ರಸಾಯನವಿಜ್ಞಾನ ೬೧%. ಹೀಗೆ ಓದದೆಯೆ ಮೊದಲೆರಡು ವಿಷಯಗಳಲ್ಲಿ ಚೆನ್ನಾಗಿಯೇ ಗೆದ್ದರೆ ಓದಿಯೂ ಮೂರನೆಯದರಲ್ಲಿ ಗಳಿಸಿದ್ದು
ಅಷ್ಟು ಕಡಿಮೆ. ಇನ್ನು ಇಂಗ್ಲಿಷ್ ಮತ್ತು ಕನ್ನಡಗಳಲ್ಲಿ ಶೇಕಡಾ ೬೦ಕ್ಕಿಂತಲೂ
ಹೆಚ್ಚು ಅಂಕಗಳು ಬಂದಿದ್ದುವು. ಹೇಗೂ ಇರಲಿ, ಇಂಟರ್ಮೀಡಿಯೆಟ್
ವೈತರಣಿಯನ್ನು ಯಶಸ್ವಿಯಾಗಿ ಉತ್ತರಿಸಿದ್ದಾಯಿತು, ಅದೂ ಪ್ರಥಮ ದರ್ಜೆಯಲ್ಲಿ.
ಈ ಹಿರಿಮೆ ಪಡೆದ ಕೊಡಗಿನ ವಿದ್ಯಾರ್ಥಿಗಳು ಕೇವಲ ಮೂರು. ಇವರ ಪೈಕಿ ನನ್ನದು ಎರಡನೆಯ ಸ್ಥಾನ.
(ಮುಂದುವರಿಯಲಿದೆ)
Ee " Mugiyada Payana"da kanthugalu namma paalige jnaanalokakke payana. Pusthaka ideyaadaru illi kanthugalalli odu khushi koduthide.
ReplyDeleteThank you.