02 April 2013

ತವರೂರ ದಾರಿಯಲಿ


ಮಾನವ, ಚಂದ್ರನ ಮೇಲೆ
ಲೇಖಕ: ಜಿ.ಟಿ. ನಾರಾಯಣ ರಾವ್
(ಕಂತು ಐದು)

ಎಲ್ಲ ವ್ಯವಸ್ಥೆಗಳು ಸಮರ್ಪಕವಾಗಿವೆ. ಹೊರಡಿನೆಲ.
ಸರಿನೌಕೆ.
ಇನ್ನುಳಿದದ್ದು ಅವರು ಭೂಮಿಗೆ ಮರಳಿದ ಕತೆ. ಈ ಪ್ರಯಾಣದಲ್ಲಿ ಹೊಸತು ಅಥವಾ ನಿರೀಕ್ಷೆ ವಿಶೇಷವಾಗಿರದಿದ್ದರೂ ಎದುರಿಸಬೇಕಾದ ಅಪಾಯವೇನೂ ಕಡಿಮೆ ಇರಲಿಲ್ಲ. ಯಾತ್ರಿಕರು ಸಜೀವರಾಗಿ ನೆಲದ ಮೇಲೆ ಕಾಲಿಡುವವರೆಗೂ ಚಂದ್ರಯಾನ ಯಶಸ್ವಿಯಾಯಿತೆಂದು ಹೆಮ್ಮೆಪಡುವಂತಿಲ್ಲ. ಇಲ್ಲವಾದರೆ ಶಸ್ತ್ರ ಚಿಕಿತ್ಸೆ ಯಶಸ್ವಿ, ರೋಗಿ ಉಳಿಯಲಿಲ್ಲಎಂಬಂತಾದೀತು. ಮರುಪ್ರಯಾಣದ ವಿವರವಿಷ್ಟು. ತಾರೀಕು ೨೫, ೧ ಗಂ. ೧೦ ಮಿ. ಆರಂಭ. ೨೫, ೧೫ ಗಂ. ೫೧ ಮಿ. ಭೂಮಿಯಿಂದ ೬,೬೦,೦೦೦ ಕಿಮೀ ದೂರ. ೨೬, ೧೫ ಗಂ. ೫೧ ಮಿ. ಭೂಮಿಯಿಂದ ೩,೩೦,೦೦೦ ಕಿಮೀ ದೂರ. ಮುಂದೆ ಬಾಹ್ಯ ವಾತಾವರಣ ಪ್ರವೇಶ (೨೫೦ ರಿಂದ ೩೦೦ ಕಿಮೀ), ಆಗಿನ ವೇಗ ಗಂಟೆಗೆ ೮೧,೨೭೬ ಕಿಮೀ. ಕ್ಷಣ ಕ್ಷಣ ಈ ವೇಗ ಭೂಮಿಯ ಗುರುತ್ವಾಕರ್ಷಣದಿಂದ ಏರುತ್ತಿದೆ. ಈ ಮರುಪ್ರವೇಶ ಒಂದು ಅಗ್ನಿ ಪ್ರವೇಶವೇ. ವಾಯುಮಂಡಲಕ್ಕೆ ನೌಕೆ ಪ್ರವೇಶಿಸುವ ಬಿಂದುವಿನಲ್ಲಿ ಒಂದು ಸ್ಪರ್ಶಕ ಎಳೆಯಬೇಕು. ಅದೇ ರೀತಿ ನೌಕೆಯ ಪಥವಾದ ವಕ್ರರೇಖೆಗೂ ಒಂದು ಸ್ಪರ್ಶಕ ಎಳೆಯಬೇಕು. ಇವೆರಡು ಸ್ಪರ್ಶಕಗಳ ನಡುವಿನ (ಲಘು) ಕೋನದ ಹೆಸರು ಮರುಪ್ರವೇಶ ಕೋನ. ಇದರ ಬೆಲೆ ೫.೪ ಡಿಗ್ರಿಗಳಿಗಿಂತ ಕಡಿಮೆ ಇದ್ದರೆ ವಾಯುಮಂಡಲದ ಹೊರಮೈ ಮೇಲೆ ನೌಕೆ ಕುಪ್ಪಳಿಸಿ ಬಾಹ್ಯಾಕಾಶಕ್ಕೆ ಉಚ್ಚಾಟನೆಗೊಳ್ಳುವುದು. .೪ ಡಿಗ್ರಿಗಳಿಗಿಂತ ಹೆಚ್ಚಿದ್ದರೆ ಅಂಥ ಪ್ರವೇಶ ಬಲು ತೀವ್ರ ಎನ್ನಿಸುತ್ತದೆ. ವಾಯು ಕಣಗಳಿಗೂ ನೌಕೆಗೂ ನಡುವೆ ಏರ್ಪಡುವ ಮಹಾ ಘರ್ಷಣೆಯಿಂದ ಜನಿಸುವ ಉಷ್ಣವನ್ನು ನೌಕೆ ಸಹಿಸಲಾರದು; ಉರಿದು ನಾಶವಾಗಿ ಹೋಗುವುದು. ಉಲ್ಕೆಗಳಿಗೆ ಒದಗುವ ದುರ್ಗತಿ ಇದೇ. ಬೂದಿ ಸಮಾಧಿ. ಅಪೊಲೊ ೮ ಸಾಧಿಸಿದ ಮರುಪ್ರವೇಶ ಕೋನ ೬.೪೩ ಡಿಗ್ರಿ. ಆ ಎತ್ತರ, ಆ ವೇಗದಲ್ಲಿ ಸಾಧಿಸಿದ ಈ ತಾಂತ್ರಿಕ ಯಶಸ್ಸು ಅದ್ಭುತ, ಅತ್ಯದ್ಭುತ. ಮುಂದೆ ಕಾದು ಕೆಂಪಗಾಗಿದ್ದ ಕೆಂಡದುಂಡೆ ಪಿಕಿಂಗ್, ಟೋಕಿಯೋ ನಗರಗಳ ಮೇಲೆ ಧಾವಿಸಿತು. ಆಗಲೇ ತೆರೆದುಕೊಂಡ ಪ್ಯಾರಾಚೂಟ್ಗಳು ಅದರ ವೇಗವನ್ನು ನಿಯಂತ್ರಿಸಿದುವು. ಪೆಸಿಫಿಕ್ ಸಾಗರದ ನಿಶ್ಚಿತ ವಲಯದಲ್ಲಿ ನೌಕೆ ನೀರಿಗೆ ಬಡಿದಪ್ಪಳಿಸಿತು - ಡಿಸೆಂಬರ್ ೨೭, ೧೦ ಗಂ. ೫೧ ಮಿ. ಯಾತ್ರಿಕರು ಸುರಕ್ಷಿತರಾಗಿ ಮರಳಿದರೆಂದು ತಿಳಿದಾಗ ಜನ ಅದುಮಿಟ್ಟ ಕಾತರತೆಯನ್ನು ನಿಶ್ವಸಿಸಿದರು.

ಅಧ್ಯಾಯ ನಾಲ್ಕು
ರಂಗ ಪ್ರವೇಶ ಮಾಡುವ ಮೊದಲು
ಕೆನೆಡಿ ಭೂಶಿರಕ್ಕೆ ಬನ್ನಿ

ಮಾನವನಿಂದ ಚಂದ್ರನ ಪ್ರಥಮಾನ್ವೇಷಣೆ. ಈ ಪರಮಸಾಹಸದಲ್ಲಿ ನಮ್ಮೊಡನೆ ಭಾಗಿಗಳಾಗಲು ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ. ಈ ಮಹಾ ಯಾನದಲ್ಲಿ ಕೇವಲ ಮೂರು ವ್ಯಕ್ತಿಗಳು ಪಯಣಿಸುತ್ತಿರುವರಾದರೂ ಅವರಲ್ಲಿ ಇಬ್ಬರು ಮಾತ್ರ ಚಂದ್ರನ ಮೇಲೆ ಕಾಲೂರುವರಾದರೂ  ಇಡೀ ಪ್ರಪಂಚವೇ ಅವರ ಜೊತೆಯಲ್ಲಿರುವುದು” - ಅಮೆರಿಕ ದೇಶದ ಅಧ್ಯಕ್ಷ ರಿಚರ್ಡ್ ನಿಕ್ಸನ್ರ ಆಹ್ವಾನ.

ಪ್ರಪಂಚದ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು ಕೆನೆಡಿ ಭೂಶಿರದ ಉಡಾವಣಾ ಪೀಠದಲ್ಲಿ ಸೇರಿದ್ದಾರೆ. ಅಲ್ಲಿಗೆ ಬರಲಾಗದವರು ಟೆಲಿವಿಷನ್, ರೇಡಿಯೋಗಳನ್ನು ಶ್ರುತಿ ಮಾಡಿ ಕಣ್ಣು ಕಿವಿಗಳನ್ನು ಅವುಗಳಿಗೆ ಅಂಟಿಸಿ ಕೊನೆಯೆಣಿಕೆಯಲ್ಲಿ ತಾವೂ ಭಾಗಿಗಳಾಗಿರುವರು. ಪ್ರಪಂಚದ ಎಲ್ಲ ಜನತೆ ಈ ಪರ್ವಕಾಲದಲ್ಲಿ ಒಂದೇ ಉದ್ದೇಶದಿಂದ ಪ್ರಭಾವಿತರಾಗಿ ಅವರು ಹೋಗಿ ಸುರಕ್ಷಿತವಾಗಿ ಮರಳಲಿಎಂಬ ಪ್ರಾರ್ಥನಾಭಾವ ತಾಳಿದ್ದಾರೆ. ಭಾವನೆ, ಪ್ರಾರ್ಥನೆ ಮುಂತದುವು ಮನುಷ್ಯನ ಮನಸ್ಸಿಗೆ ಆವಶ್ಯಕವಾದ ಟಾನಿಕ್ಗಳು. ಆದರೆ ಆಕಾಶವಿಜ್ಞಾನ ನಿರೀಕ್ಷಿಸುವುದು ನಿಷ್ಕೃಷ್ಟ ಮತ್ತು ಮೂರ್ತ ಪ್ರಯೋಗಗಳನ್ನು, ಪ್ರಯತ್ನಗಳನ್ನು. ಅಪೊಲೊ ೮ ರ ಯಶಸ್ವಿ ಪ್ರಯೋಗಾನಂತರ ಮನುಷ್ಯ ರಂಗ ಪ್ರವೇಶ ಮಾಡಲು ಚಂದ್ರತಲ ಸ್ಪರ್ಶಿಸಲು ಸಮಯ ಸನ್ನಿಹಿತವಾಗಿತ್ತು. “...ಈ ದಶಕ ಗತಿಸುವ ಮೊದಲೇ ಗುರಿಸಾಧಿಸಿಯೇ ಬಿಡುತ್ತೇವೆಂಬ ಪಣವನ್ನು ಈ ರಾಷ್ಟ್ರ ತೊಡಬೇಕು - ಮಾನವ, ಚಂದ್ರನ ಮೇಲೆ ಮತ್ತು ಅವನ ಸುರಕ್ಷಿತ ಭೂಮಿ ಪ್ರಯಾಣಎಂದು ವಿಧಿಸಿದ್ದ ದಿವಂಗತ ಅಧ್ಯಕ್ಷ ಜೆ.ಎಫ್. ಕೆನೆಡಿಯವರ ಮಾತು (೧೯೬೧) ಕೃತಿಯಾಗುವ ಮುಹೂರ್ತ ಸಮೀಪಿಸಿತ್ತು. ಮಾನವ ಜನಾಂಗದ ಕನಸಿನ ಪ್ರತೀಕ, ಮೂರ್ತ ಸ್ವರೂಪ ಚಂದ್ರಲೋಕದ ಸ್ಪೆಷಲ್ ಬಂಡಿ ಅಲ್ಲಿ ನಿಂತಿತ್ತು.

ಅಪೊಲೊ ೧೧/ ಸ್ಯಾಟರ್ನ್ ೫

ಗ್ರೀಕ್ ಪುರಾಣದ ಅಪ್ರತಿಮ ವೀರ ಸೂರ್ಯತೇಜ ಮೂರ್ತ ಸ್ವರೂಪ ಅಪೊಲೊ. ಶಕ್ತಿ ಸಾಮರ್ಥ್ಯಗಳಿಗೆ ಹೆಸರಾಂತವ ಸ್ಯಾಟರ್ನ್. ಚಂದ್ರಯಾನದ ಪ್ರಾರಂಭದ ಘಟ್ಟದ ನೂಕು ಇಂಜಿನ್ ಸ್ಯಾಟರ್ನ್ ೫. ಯಾನಿಗಳು ಕುಳಿತಿರುವ ಆಕಾಶ ನೌಕೆ ಅಪೊಲೊ ೧೧, ‘ಮಾನವ, ಚಂದ್ರನ ಮೇಲೆಕಾರ್ಯಕ್ರಮದ ಅಪೊಲೊ ಹೆಸರಿನ ಯೋಜನೆಯಲ್ಲಿ ಹನ್ನೊಂದನೆಯ ಪ್ರಯತ್ನ.

ಸ್ಯಾಟರ್ನ್ ವಾಹನ ವ್ಯವಸ್ಥೆ ಮೂರು ಮಜಲಿನ ರಾಕೆಟ್ಗಳ ಜೋಡಣೆಒಂದರ ಮೇಲೊಂದು ನೆಲಕ್ಕೆ ಲಂಬವಾಗಿ ನಿಂತಿದೆ. ಇದರ ಎತ್ತರ ೭೫ ಮೀಟರ್, ಭಾರ ೨,೯೫೪.೬೪ ಟನ್ (೧ ಟನ್=೧೦೦೦ ಕಿಗ್ರಾಂ). ೪೫.೩೬ ಟನ್ ಭಾರದ ಅಪೊಲೊವನ್ನು ಚಂದ್ರನೆಡೆಗೆ ಉಡಾಯಿಸಲು ಬೇಕಾಗುವ ನೂಕುಬಲ ಅಸಾಮಾನ್ಯ ಪ್ರಮಾಣದ್ದು. ಇದನ್ನು ಸಾಧಿಸಲು ಬೇರೆ ಬೇರೆ ವಿಧದ ಒಂದಕ್ಕೊಂದು ಪೂರಕವಾಗಿ ಕ್ರಿಯೆ ನಡೆಸಿ ಬಲೋತ್ಪಾದನೆ ಮಾಡಬಲ್ಲ ಯಂತ್ರಗಳನ್ನು ಸ್ಯಾಟರ್ನ್ನಲ್ಲಿ ಅಳವಡಿಸಲಾಗಿದೆ. ಇವು ಜೆ೨ ಮತ್ತು ಎಫ್೧ ಹೆಸರಿನ ದಹನ ಇಂಜಿನ್ಗಳು. ಸ್ವಾಭಾವಿಕವಾಗಿಯೇ ಇಂಥ ರಚನೆ ಗಾತ್ರದಲ್ಲಿ ದೊಡ್ಡದು, ಭಾರದಲ್ಲಿ ಅಧಿಕ. ಸ್ಯಾಟರ್ನ್ನ ಒಂದನೆಯ ಮಜಲಿನಲ್ಲಿ ಐದು ಎಫ್೧ ಇಂಜಿನ್ಗಳೂ ಎರಡನೆಯ ಮಜಲಿನಲ್ಲಿ ಐದು ಜೆ೨ ಇಂಜಿನ್ಗಳೂ ಮೂರನೆಯ ಮಜಲಿನಲ್ಲಿ ಒಂದು ಜೆ೨ ಇಂಜಿನ್ನೂ ಇವೆ. ಇವು ದಹಿಸುವ ಇಂಧನ ದ್ರವ ಹೈಡ್ರೋಜನ್, ಕೆರೊಸಿನ್ ಮತ್ತು ದ್ರವ ಆಕ್ಸಿಜನ್ನುಗಳ ಮಿಶ್ರಣ. ಇವು ಅತ್ಯಪಾಯಕಾರೀ ಸ್ಫೋಟಕ ವಸ್ತುಗಳು. ದ್ರವ ಹೈಡ್ರೋಜನ್ನನ್ನು -೨೫೩ಸಿ ನಲ್ಲಿಯೂ ದ್ರವ ಆಕ್ಸಿಜನ್ನನ್ನು -೧೭೩ಸಿ ನಲ್ಲಿಯೂ ಕಾಪಾಡಿಕೊಳ್ಳಬೇಕು. ಸಮಾನ ಗಾತ್ರಗಳನ್ನು ಪರಿಶೀಲಿಸಿದರೆ ದ್ರವ ಹೈಡ್ರೋಜನ್ ಕೆರೊಸಿನ್ ಭಾರದ ೧/೮ರಷ್ಟು ಮಾತ್ರ; ಆದರೆ ಉತ್ಪಾದಿಸುವ ಬಲ ೧.೭೫ ರಷ್ಟು. ಎಫ್೧ ದಹನ ಇಂಜಿನ್ ಉತ್ಪಾದಿಸುವ ನೂಕುಬಲ ೬೮೦ ಟನ್. ಅದು ಸ್ವಾಹಾಕರಿಸುವ ಇಂಧನ ಸೆಕೆಂಡಿಗೆ ೨.೭ ಟನ್. ಅದರ ಉಷ್ಣತೆಯ ಪರಮಾವಧಿ ೩೩೧೫ಸಿ. ಇನ್ನು ಎಫ್೧ರೊಡನೆ ಹೋಲಿಸುವಾಗ ಜೆ೨ ಸ್ವಲ್ಪ ಚಿಕ್ಕದು.

ಕೋಟ್ಯಂತರ ಮಾನವ ಗಂಟೆಗಳು ಖಗೋಳ ಮಾನಗಳಲ್ಲಿ ಅಳತೆ ಮಾಡಬೇಕಾದ ವೆಚ್ಚದಲ್ಲಿ ರಚಿಸಿರುವ ಮಹಾ ವಾಹನ ವ್ಯವಸ್ಥೆ ಉರಿಯುವುದು ಕೇವಲ ೧೭ ಮಿನಿಟು ಮಾತ್ರ. ಅಷ್ಟರಲ್ಲಿ ಅದು ಅಪೊಲೊವನ್ನು ದಾರಿಗೆ ತಳ್ಳಿ ನಾಶವಾಗಿ ಹೋಗುವುದು. ಏರಿದ ಮೇಲೆ ಏಣಿಯ ಆವಶ್ಯಕತೆ ಏನು?

ಸ್ಯಾಟರ್ನಿನ ೭೫ ಮೀ. ಎತ್ತರದ ಶಿಖರಾಗ್ರದಲ್ಲಿ ೨೫ ಮೀ. ಎತ್ತರದ ಮತ್ತು ೪೫.೩೬ ಟನ್ ಭಾರದ ಅಪೊಲೊ ಆಕಾಶನೌಕೆಯನ್ನು ಜೋಡಿಸಲಾಗಿದೆ. ಜೋಡಣೆಗೊಂಡ ಭಾಗದ ಸಿಲಿಂಡರು (ಉರುಳೆ) ಆಕಾರದ ಸುಭದ್ರ ಕವಚದೊಳಗೆ ಉಪಕರಣ ಸಂಪುಟವಿದೆ. ಸಿಲಿಂಡರಿನ ಎತ್ತರ ೧ ಮೀ., ವ್ಯಾಸ ೬.೬ ಮೀ. ಸಂಪುಟ ನೌಕೆಯ ನರಕೇಂದ್ರ; ಯಾನಿಗಳಿಗೆ ಪ್ರಯಾಣದ ವಿಶಿಷ್ಟ ಮಾಹಿತಿಗಳನ್ನೂ ಪೂರೈಸುವ ಅತ್ಯಮೌಲ್ಯ ಭಾಗ; ಪ್ರಯಾಣ ಕಾಲದಲ್ಲಿ ಸಮತೋಲ ಕಾಪಾಡಿಕೊಳ್ಳುವ ನಿಯಂತ್ರಣ ವ್ಯವಸ್ಥೆ. ಉಪಕರಣ ಸಂಪುಟದ ಮೇಲೆ ಕ್ರಮವಾಗಿ ಕವಚ ರಕ್ಷಿತ ಚಂದ್ರಕೋಶ, ಸರ್ವಿಸ್ ಕೋಶ, ಕಮಾಂಡ್ ಕೋಶ ಮತ್ತು ಉಡಾವಣೆ ವಿಮೋಚನಾ ಗೋಪುರಗಳಿವೆ.

ಚಂದ್ರಕೋಶದ ಇಂಗ್ಲಿಶ್ ಹೆಸರು ಲ್ಯೂನಾರ್ ಎಕ್ಸ್ಕರ್ಷನ್ ಮಾಡ್ಯೂಲ್, ಸಂಕ್ಷೇಪವಾಗಿ ಎಲ್..ಎಂ ಅಥವಾ ಎಲ್ಲೆಮ್ಮ್. ವ್ಯವಸ್ಥೆ ಭೂಮಿಯ ವಾಯುಮಂಡಲವನ್ನು ದಾಟಿದ ಮೇಲೆ ಎಲ್ಲೆಮ್ ರಂಗಪ್ರವೇಶ ಮಾಡುವುದು. ಇದರ ಮುಖ್ಯ ಪಾತ್ರ ಚಂದ್ರನ ಮೇಲೆ ಇಳಿದಾಗ ಮತ್ತು ಅಲ್ಲಿಂದ ಮೇಲೆ ಜಿಗಿದಾಗ, ಪ್ರತ್ಯಕ್ಷ ಪ್ರಯೋಗದಿಂದ ಪರಿಷ್ಕೃತಗೊಳ್ಳದ ಅಂಗ ಎಲ್ಲೆಮ್ ಮಾತ್ರ - ಚಂದ್ರನ ಮೇಲೆ ಮನುಷ್ಯ ಇಳಿದು ಹಿಂದೆ ಬರುವವರೆಗೆ ಈ ಪ್ರಯೋಗ ಸಾಧ್ಯವಾಗದಷ್ಟೆ. ಭೂಮಿಯಿಂದ ಉಡಾವಣೆ ಆಗುವಾಗ, ನೌಕೆ ವಾಯುಮಂಡಲವನ್ನು ಬಲು ವೇಗದಿಂದ ಸೀಳಿ ಎತ್ತರಕ್ಕೆ ಧಾವಿಸುವಾಗ ಎಲ್ಲೆಮ್ಗೆ ಘಾಸಿಯಾಗಬಾರದೆಂದು ಇದಕ್ಕೆ ಕವಚದ ರಕ್ಷಣೆ. ಎಲ್ಲೆಮ್ನಲ್ಲಿ ಎರಡು ಘಟ್ಟಗಳಿವೆ. ನಾಲ್ಕು ಕಾಲುಗಳಿರುವ ಭಾಗ ಚಂದ್ರತಲ ಸ್ಪರ್ಶ ಮಾಡಲು ರಚಿತವಾಗಿದೆ. ಆದ್ದರಿಂದ ಇದರ ಹೆಸರು ಇಳಿಘಟ್ಟ. ಯಾನಿಗಳಿಗೆ ಇಳಿಯಲು ಅನುಕೂಲವಾಗುವಂತೆ ಇದರ ಒಂದು ಕಾಲಿಗೆ ಏಣಿ ಜೋಡಿಸಿದೆ. ಥ್ರಾಟಲ್ನಿಂದ (ಕವಾಟ) ನಿಯಂತ್ರಿಸಬಹುದಾದ ಒಂದು ರಾಕೆಟ್ ಯಂತ್ರ, ಚಂದ್ರ ಸ್ಪರ್ಶವಾದೊಡನೆ ಅಲ್ಲಿನ ಸಮಸ್ತ ವಿವರಗಳನ್ನೂ - ದೃಢತೆ, ಕಂಪನ, ರಚನೆ - ಸ್ವಯಂಚಾಲಿತವಾಗಿ ಅಳೆದು ಯಾನಿಗಳಿಗೆ ವರದಿ ಮಾಡುವ ಉಪಕರಣ, ಕೆಮರಾ ಎಲ್ಲವೂ ಇಳಿ ಘಟ್ಟದಲ್ಲಿವೆ. ಎಲ್ಲೆಮ್ನ ಮೇಲು ಭಾಗ ಏರುಘಟ್ಟ. ಇದು ಇಬ್ಬರು ಯಾನಿಗಳ ನೆಲೆ, ಮಾತೃನೌಕೆಯಿಂದ (ಇದು ಚಂದ್ರನನ್ನು ಪರಿಭ್ರಮಿಸುತ್ತಿರುವುದು) ಎಲ್ಲೆಮ್ ಬೇರ್ಪಟ್ಟು ಚಂದ್ರ ತಲಕ್ಕೆ ಇಳಿಯುವಾಗ ಮುಂದೆ ಚಂದ್ರನಿಂದ ಮೇಲಕ್ಕೆ ಏರುವಾಗ ಅವರನ್ನು ಸಾಗಿಸುವ ವಾಹನ. ಇದರೊಳಗೆ ಅವರಿಗೆ ೪.೫ ಘ. ಮೀ ವಾಸಸ್ಥಳವಿದೆ.  ನಿಯಂತ್ರಣ, ಸಂಪರ್ಕ ಪರಿಸರ ಮಾಪನ ವ್ಯವಸ್ಥೆಗಳು ಏರುಘಟ್ಟದಲ್ಲಿವೆ. ಇದರಲ್ಲಿರುವ ಏರು ಇಂಜಿನ್ ೧.೬ ಟನ್ ನೂಕುಬಲವನ್ನು ಉತ್ಪಾದಿಸಬಲ್ಲದು. ಏರು ಘಟ್ಟದ ಮೇಲು ಭಾಗದಲ್ಲಿ ಸರ್ವಿಸ್ ಕೋಶವನ್ನು ಪೋಣಿಸುವ ಕೊಣಿಕೆಯೂ ಆ ಕೋಶಕ್ಕೆ ಯಾನಿಗಳು ಎಲ್ಲೆಮ್ನಿಂದ ನುಸುಳಲು ಸಾಕಾಗುವಂಥ ಒಂದು ಸುರಂಗದ್ವಾರವೂ ಇದೆ.


ಏಣಿಯಿರುವ ಕಾಲಿನ ಕಡೆ ಒಂದು ಬಾಗಿಲಿದೆ. ಎಲ್ಲೆಮ್ ಚಂದ್ರನ ಮೇಲೆ ಇಳಿದ ಮೇಲೆ ಈ ಬಾಗಿಲನ್ನು ತೆರೆದು ಯಾನಿಗಳು ಹೊರಬರಬಹುದು. “ಅಲ್ಲಿ ನೆರೆದಿರುವ ಪರಮ ಭಕ್ತಾದಿಗಳಿಗೆ ದರುಶನವ ನೀಡಬಹುದು.” ಏರುಘಟ್ಟ ಯಾನಿಗಳ ಸಮೇತ ಚಂದ್ರನಿಂದ ಮೇಲಕ್ಕೆ ಜಿಗಿವಾಗ ಇಳಿಘಟ್ಟವೇ ಅದರ ಉಡಾವಣಾ ಪೀಠ - ಅಲ್ಲಿ ಬೇರೆ ಒಂದು ವೇದಿಕೆಯನ್ನಾಗಲೀ ನಿಲ್ದಾಣವನ್ನಾಗಲೀ ರಚಿಸುವ ಮೊದಲು ಆ ನೆಲ ಹೇಗಿದೆ ಎಂದು ಸರಿಯಾಗಿ ತಿಳಿಯುವ ಮೊದಲು ಇದೊಂದೇ ಅಪಾಯರಹಿತ ಏರ್ಪಾಡು. ಇಳಿಘಟ್ಟ ಚಂದ್ರನ ಮೇಲೆಯೇ ಸ್ಮಾರಕವಾಗಿ ಉಳಿಯುತ್ತದೆ. ಎಲ್ಲೆಮ್ನ ಎತ್ತರ ೭ ಮೀ, ಭಾರ ೧೫.೧೧ ಟನ್.

[ವೀಡಿಯೋದಲ್ಲಿ ಅಂತರರಾಷ್ಟ್ರೀಯ ಅಂತರಿಕ್ಷ ನಿಲ್ದಾಣವನ್ನು  ಸ್ವತಃ ಸುನೀತಾ ವಿಲಿಯಂಸ್ ಪರಿಚಯಿಸುತ್ತಿರುವುದನ್ನು  ನೋಡಬಹುದು.]


ಸರ್ವಿಸ್ ಕೋಶದ ಸಂಕ್ಷೇಪನಾಮ ಎಸ್ಸೆಮ್ (ಸರ್ವಿಸ್ ಮಾಡ್ಯೂಲ್) ಬುದ್ಧಿವಂತ (=ಫನ್ನಲ್, ಚೂಲಿ) ಆಕಾರದ ತಳದ ಮೇಲಿರುವ ಸಿಲಿಂಡರ್. ಅಪೊಲೊ ಉಪಕರಣಗಳಿಗೆ ಎಸ್ಸೆಮ್ ವಿದ್ಯುಚ್ಛಕ್ತಿಯನ್ನು ತಯಾರಿಸಿ ಪೂರೈಸುವುದು. ಇದರಲ್ಲಿರುವ ರಾಕೆಟ್ಗಳು ೯.೧ ಟನ್ಗಿಂತಲೂ ಹೆಚ್ಚು ನೂಕುಬಲ ಉತ್ಪಾದಿಸಬಲ್ಲವು. ಚಂದ್ರಯಾನ ಕಾಲದಲ್ಲಿ ಆವಶ್ಯಕತೆ ಉಂಟಾದಾಗ ಪಥ ಪರಿಷ್ಕರಣ ಮಾದಲು ಯುಕ್ತ ಕಾಲದಲ್ಲಿ ನೌಕೆಯನ್ನು ಚಂದ್ರನ ಕಕ್ಷೆಗೆ ನೂಕಲು ಮುಂದೆ ಅಲ್ಲಿಂದ ಭೂಮಿಯೆಡೆಗೆ ತಿರುಗಿಸಿ ತಳ್ಳಲು ಬೇಕಾಗುವ ಯಾಂತ್ರಿಕ ವ್ಯವಸ್ಥೆ ಇದರಲ್ಲಿದೆ. ಎಸ್ಸೆಮ್ನ ಹೊರಮೈಯಲ್ಲಿ ೧೬ ಕಿರಿ ರಾಕೆಟ್ಗಳಿವೆ. ಸರ್ವಿಸ್ ಕೋಶದ ಎತ್ತರ ಸುಮಾರು ೬.೫ ಮೀ. .೫ ಸೆ.ಮೀ ದಪ್ಪದ ಅಲ್ಯುಮಿನಿಯಂ ಲೋಹದ ಜೇನು ಎರಿಯಂಥ ಹಾಳೆಯಿಂದ ಇದನ್ನು ರಚಿಸಲಾಗಿದೆ.

ಈಗ ನಾವು ಕಮಾಂಡ್ ಕೋಶ (ಕಮಾಂಡ್ ಮಾಡ್ಯೂಲ್ - ಸಿಎಮ್) ಪ್ರವೇಶಿಸುತ್ತೇವೆಮೂವರು ಆಕಾಶ ಯಾನಿಗಳನ್ನು ದೀರ್ಘ ಕಾಲ ದೀರ್ಘ ದೂರ ಅತಿ ವೇಗದಿಂದ ಅತಿ ಸಂಮರ್ದದ ನಡುವೆ ಅರಿಯದ ನಾಡಿಗೆ ಕೊಂಡೊಯ್ದು ಹೊಸ ಪರಿಸರದ ಪರಿಚಯ ಮಾದಿಸಿ ಧರೆಗೆ ಸುರಕ್ಷಿತವಾಗಿ ಮರಳಿಸಬೇಕಾದ ಮನೆ ಇದು. ಇದರ ರಚನೆ ಒಂದು ಪವಾಡ - ಪರಸ್ಪರ ವಿರುದ್ಧ ಬಲಗಳ ಸ್ವರ ಮೇಳ. ಇದು ಹಗುರವಾಗಿರಬೇಕು, ದೃಢವಾಗಿರಬೇಕು, ಹೊರಮೈ ಕೆಂಡದಂತೆ ಕಾದಾಗ ಒಳಗೆ ಹಿತ ವಾತಾವರಣವಿರಬೇಕು; ನೆಲ ಬಿರಿದಂಥ ಆಸ್ಫೋಟನೆ ಆದಾಗ ಗಂಟೆಗೆ ೪೦,೦೦೦ ಕಿಮೀ ಮೀರುವ ವೇಗದಿಂದ ನೌಕೆ ಧಾವಿಸಿದಾಗ ಈ ಸೂಕ್ಷ್ಮ ರಚನೆ ಒಡೆದು ಹೋಗಬಾರದು, ಯಾವ ತರಹದ ಊನವೂ ಇದಕ್ಕೆ ಬರಬಾರದು. ಸಿಎಮ್ನ ಆಕಾರ ಶಂಕು ಮುಂಡ. ಮುಂಡದ ಚೂಪು ಭಾಗ ಮೇಲೆ, ಹೆಸರು ಸುರಂಗ. ಇದನ್ನು ಮುಚ್ಚಿ ಮೇಲಕ್ಕೆ ಚಾಚಿರುವ ಚೂಪಾದ ಚೌಕಟ್ಟಿದೆ. ಭೂಮಿಯಿಂದ ಜಿಗಿಯುವಾಗ ಗಾಳಿಯ ತಿಕ್ಕಾಟ ಆದಷ್ಟು ಕಡಿಮೆ ಇರುವಂತೆ ಅದನ್ನು ಸೀಳಿಕೊಂಡು ನೌಕೆ ಸಾಗಬೇಕು. ಆದ್ದರಿಂದ ಚೂಪುಭಾಗ ಮುಂದೆ (ಅಂದರೆ ಮೇಲಕ್ಕೆ) ಇದೆ. ಆದರೆ ಮರುಪ್ರಯಾಣ ಮಾಡುವಾಗ (ಗಂಟೆಗೆ ೮೩,೧೬೦ ಕಿಮೀ ವೇಗದಲ್ಲಿ ಭೂಮಿಯ ವಾಯುಮಂಡಲವನ್ನು ಪ್ರವೇಶಿಸುತ್ತದೆ; ಗುರುತ್ವಾಕರ್ಷಣೆ ಪ್ರತಿ ಸೆಕೆಂಡೂ ಈ ವೇಗವನ್ನು ಏರಿಸುತ್ತದೆ) ವೇಗವನ್ನು ತಗ್ಗಿಸುವುದೇ ಸಮಸ್ಯೆ. ಈಗ ಚೂಪು ಭಾಗ ಮುಂದೆ (ಚಲನೆಯ ದಿಕ್ಕನ್ನು ಮುಂದೆ ಎಂದು ಇದರ ವಿರುದ್ಧ ದಿಕ್ಕನ್ನು ಹಿಂದೆ ಎಂದು ಭಾವಿಸುತ್ತೇವೆ) ನುಗ್ಗಬಾರದು, ಬದಲು ಚಪ್ಪಟೆ ಭಾಗ ನುಗ್ಗಬೇಕು. ಈ ಏರ್ಪಾಡಿನಿಂದ ಸಿ.ಎಂನ ಪರಮಾವಧಿ ಮೈ ವಾಯು ಮಂಡಲ ಪ್ರವೇಶ ಮಾಡುವುದು. ತಿಕ್ಕಾಟದಿಂದ ವೇಗ ಕಡಿಮೆಯಾಗುವುದರ ಜೊತೆಗೆ (ಹೆಚ್ಚು ಭಾಗ ಗಾಳಿಗೆ ಒಡ್ಡಿರುವುದರಿಂದ) ವಿಸರಣೆಯಿಂದ ಆದಷ್ಟು ಹೆಚ್ಚು ಉಷ್ಣ ನಷ್ಟವಾಗುವುದು. ಹೀಗಾಗಿ ಸಿಎಮ್ನ ಉಷ್ಣ ಮಿತಿಮೀರಿ ಏರುವುದಿಲ್ಲ. ಯುಕ್ತ ವೇಳೆಯಲ್ಲಿ ಚೌಕಟ್ಟಿನ ಎಡೆಯಿಂದ (ಅಂದರೆ ಚೂಪುಭಾಗ, ಹಿಂದೆ ಇದೆ) ಪ್ಯಾರಾಚೂಟ್ಗಳು ಬಿಡಿಸಿಕೊಂಡು ಸಿಎಮ್ನ ವೇಗ ಅಪಾಯದ ಮಿತಿ ದಾಟದಂತೆ ತಡೆಯುತ್ತವೆ. ಇದೇನಾದರೂ ಕಾರ್ಯಪ್ರದವಾಗದಿದ್ದರೆ ಸಿಎಮ್ನ ಅವಸ್ಥೆ ಮುಗಿದಂತೆಯೇ. ಆ ಮಹಾವೇಗದಲ್ಲಿ ನೆಲಕ್ಕೊ ಜಲರಾಶಿಗೊ ಬಡಿದ ವಾಹನದ ಚೂರ್ಣಾವಶೇಷವೂ ದೊರೆಯಲಾರದು. ಸಿಎಮ್ನ ಸಮಗ್ರ ರಚನೆ ಒಂದು ಥರ್ಮಾಸ್ಫ್ಲಾಸ್ಕ್ನಂತೆ. ಹೊರ ಕವಚ ಒಳ ಕವಚಗಳ ನಡುವೆ ನಿರ್ವಾತ ಪ್ರದೇಶ. ಹೊರ ಕವಚಕ್ಕೆ ೧೦೧0ಸಿ ಯಿಂದ ೩೧೫0ಸಿವರೆಗೆ ಉಷ್ಣತೆಯನ್ನು ಸಹಿಸುವ ತ್ರಾಣವಿದೆ. ಇದಕ್ಕಿಂತ ಹೆಚ್ಚಿನ ಏರಿಳಿತ ವಾಯುಮಂಡಲದಿಂದಾಚೆ ಎಲ್ಲೂ ಇಲ್ಲಆದರೆ ಮರುಪ್ರಯಾಣದಲ್ಲಿ ಹೊರ ಕವಚದ ಉಷ್ಣತೆ ೨೭೬೦0ಸಿವರೆಗೆ ಏರುತ್ತದೆ. ಉಲ್ಕೆಗಳು ಉರಿದು ನಾಶವಾಗುವ ಚಿತ್ರವನ್ನು ಸ್ಮರಿಸಬಹುದು. ಇಂಥ ಮಹೋಷ್ಣತೆಯಿಂದ ಹೊರಕವಚವನ್ನು ಕಾಪಾಡಲು ಅದರ ಮೈಗೆ ರಾಸಾಯನಿಕಗಳನ್ನು ಲೇಪಿಸಲಾಗಿದೆ. ವಾಯುಮಂಡಲ ಪ್ರವೇಶ ಮತ್ತು ಅದರ ಚಲನೆಯ ಕಾಲದಲ್ಲಿ ಇವು ಕಾದು ಉರಿದು ಹೊಗೆಯಾಗಿ ಹೋಗುತ್ತವೆ. ಹೀಗೆ ಅತ್ಯುಷ್ಣತೆಯನ್ನು ಹೀರಿಕೊಂಡ ಈ ಲೇಪ ಸಿಎಂಗೆ ರಕ್ಷಣೆ ನೀಡುವುದು. ಭೂಮಿಯಿಂದ ಉಡಾವಣೆ ಆಗುವಾಗಲೇ ವಾಯುಮಂಡಲದೊಡನೆ ಉಂಟಾಗುವ ತಿಕ್ಕಾಟದಿಂದ ಜನಿಸುವ ಉಷ್ಣದಿಂದ ಈ ಲೇಪ ಕಾದು ಹೊಗೆಯಾಗಿ ನಾಶವಾಗುವುದಿಲ್ಲವೇ? ಮರುಪ್ರವೇಶದವರೆಗೆ ಅದು ಉಳಿದಿರುವುದೇ? ಎಂಬ ಸಂದೇಹ ಸಹಜವಾಗಿ ಬರುತ್ತದೆ. ಅವುಗಳಿಗೂ ಪರಿಹಾರ ಯೋಜಿಸಿದ್ದಾರೆ. ಉಡಾವಣೆಯ ಕಾಲದಲ್ಲಿ ಉಂಟಾಗುವ ಪರಮಾವಧಿ ಉಷ್ಣತೆ ೬೪೯0 ಸಿ. ರಾಸಾಯನಿಕ ಲೇಪಿತ ಸಿಎಂಗೆ ಕಾರ್ಕ್ ತೊಪ್ಪಿ ತೊಡಿಸುತ್ತಾರೆ. ಉಡಾವಣೆ ಮತ್ತು ಮುಂದಿನ ಚಲನೆಯಲ್ಲಿ  ತೊಪ್ಪಿ ಉಷ್ಣವನ್ನು ಹೀರಿಕೊಂಡು ಕಾದು ಮಸಿಯಾಗಿ ಸಿಎಂ ಮತ್ತು ರಾಸಾಯನಿಕ ಲೇಪವನ್ನು ರಕ್ಷಿಸುತ್ತದೆ. ವಾಯುಮಂಡಲ ದಾಟಿದ ಮೇಲೆ ತೊಪ್ಪಿಯನ್ನು ಕಳಚಿ ಎಸೆದರಾಯಿತು. ಸಿಎಂನಲ್ಲಿ ಮೂರು ವಿಭಾಗಗಳಿವೆ. ಮೇಲೆ ಸುರಂಗ (ಮುಂದೆ ಇಲ್ಲಿ ಜೋಡಣೆಗೊಳ್ಳುವ ಎಲ್ಲೆಮ್ನ ಸುರಂಗದ್ವಾರದ ಮೂಲಕ ಎಲ್ಲೆಮ್ಗೆ ಪ್ರವೇಶಿಸುವ ಏರ್ಪಾಡು). ಎರಡನೆಯದು ನಡುವಿನ ಯಾನಿ ವಿಭಾಗ. ಇಲ್ಲಿ ಮೂವರು ಯಾನಿಗಳಿರಲು ೫.೯ ಘ.ಮೀ ವಾಸಯೋಗ್ಯ ಪ್ರದೇಶವಿದೆ. ಪ್ರಯಾಣದ ಬಹುಸಮಯ (ಚಂದ್ರ ಕಕ್ಷೆಯಿಂದ ಚಂದ್ರನಲ್ಲಿಗೆ ಇಬ್ಬರು ಹೋಗಿ ಮರಳುವವರೆಗಿನ ಅವಧಿಯನ್ನು ಬಿಟ್ಟು) ಯಾನಿಗಳು ಇಲ್ಲಿಯೇ ಇರುತ್ತಾರೆ. ಅವರ ವಿಶ್ವ ಇದು. ಆಹಾರ, ವಿಶ್ರಾಂತಿ, ದೈನಂದಿನ ಚಟುವಟಿಕೆ ಇಲ್ಲಿಯೇ ಅವರಿಗೆ. ಯಾನದ ವಿವರ ಒದಗಿಸುವ, ಭೂಮಿಯಿಂದ ಬರುವ ಆಜ್ಞೆಗಳನ್ನು ತಿಳಿಸುವ, ಅವರ ಸಮಸ್ಯೆಗಳನ್ನು ಭೂಮಿಗೆ ವರದಿ ಮಾಡುವ ಸ್ವಯಂಚಾಲಿತ ಸಂಪರ್ಕ ವ್ಯವಸ್ಥೆ ಇಲ್ಲಿದೆಇಷ್ಟು ಮಾತ್ರವಲ್ಲ, ಅವರ ದೇಹಸ್ಥಿತಿ, ವರ್ತನೆ, ಮಾತು, ನೋಟ ಎಲ್ಲವನ್ನೂ ಆಗಿಂದಾಗಲೇ ಚಿತ್ರಿಸಿ ಭೂಮಿಗೆ ಟೆಲಿವಿಷನ್ ಪ್ರಸಾರ ಮಾಡುವ ಯಂತ್ರೋಪಕರಣಗಳೂ ಇಲ್ಲಿಯೇ ಇವೆ. ಇಂಥ ಏರ್ಪಾಡಿನ ಮೂಲಕ ನಿಯಂತ್ರಣಾಗಾರದ ವಿಜ್ಞಾನಿಗಳಿಗೆ ಸಂಪೂರ್ಣ ಯಾನದ ವಿಶಿಷ್ಟ ವಿವರ ಆಗಾಗಲೇ ಲಭಿಸುತ್ತದೆ. ಇತರ ಕುತೂಹಲಿ ವೀಕ್ಷಕರಿಗೆ ಟೆಲಿವಿಷನ್ ಚಿತ್ರ (ಸಂಜಯ ಉವಾಚ!) ಕಾಣುತ್ತದೆ. ಯಾನದಲ್ಲಿ ಅನಿರೀಕ್ಷಿತವಾಗಿ ಒದಗಬಹುದಾದ ಸಮಸ್ಯೆಗಳಿಗೆ ತತ್ಕ್ಷಣ ಪರಿಹಾರವನ್ನು ನಿಯಂತ್ರಣಾಗಾರವೇ ಒದಗಿಸಬೇಕು. ಮೂರನೆಯ ವಿಭಾಗ ತಳದ ಚಪ್ಪಟೆ ರಚನೆ. ಇದರೊಳಗೆ ಹಲವಾರು ಪೂರಕ ಉಪಕರಣಗಳಿವೆ; ಮತ್ತು ಮರು ಪ್ರಯಾಣದಲ್ಲಿ ಸಿಎಂ ಜಲರಾಶಿಗೆ ಬಡಿದಪ್ಪಳಿಸುವಾಗ ಆ ಆಘಾತ ಯಾನಿಗಳಿಗೆ ತಟ್ಟದಂತೆ ರಕ್ಷಿಸಲು ಮೆತ್ತೆಗಳೂ ಇವೆ.

ಸಿಎಂಗೆ ತೊಡಿಸಿರುವ ತೊಪ್ಪಿ ಇದೆಯಷ್ಟೆ. ಅದು ತಳವಾಗಿರುವ ಗೋಪುರ ಭಾಗ ಮೇಲಕ್ಕೆ ಚಾಚಿದೆ. ಇದು ಅಪೊಲೊದ ತುತ್ತ ತುದಿಯ ಭಾಗ. ಇದರ ಹೆಸರು ಉಡಾವಣೆ ವಿಮೋಚನಾ ವ್ಯವಸ್ಥೆ. ಉಡಾವಣೆ ಆದೊಡನೆ ಅಥವಾ ಭೂಮಿಯ ಸುತ್ತಲೂ ಕಕ್ಷೆಯಲ್ಲಿ  ನೌಕೆ ಪರಿಭ್ರಮಿಸುತ್ತಿರುವಾಗ ಏನಾದರೂ ಅಪಾಯಕರ ದೋಷ ಕಂಡುಬಂದರೆ ಆಗ ಈ ವ್ಯವಸ್ಥೆಯನ್ನು ಕಾರ್ಯವೆಸಗಲು ವಿಧಿಸಲಾಗುವುದು. ಆ ಕೂಡಲೇ ಯಾನಿಗಳ ಸಮೇತ ವ್ಯವಸ್ಥೆ ನೌಕೆಯ ಇತರ ಭಾಗದಿಂದ ಬೇರ್ಪಟ್ಟು ಪೂರ್ವನಿರ್ಧರಿತ ಪ್ರದೇಶದಲ್ಲಿ ನೆಲದ ಮೇಲೆ ಇಳಿಯುತ್ತದೆ.

ಅಪೊಲೊ ೧೧/ ಸ್ಯಾಟರ್ನ್ ೫ರ ಸಮಗ್ರ ರಚನೆಯನ್ನು ದಿಗ್ದರ್ಶಿಸುವ ಪ್ರಮುಖ ಮೂಲ ಸೂತ್ರಗಳು ಕ್ರಮವಾಗಿ ಹೀಗಿವೆ: ಯಾನಿಗಳ ರಕ್ಷಣೆ, ವಿರುದ್ಧ ಬಲಗಳ ಸಂಗತ ಹೊಂದಾಣಿಕೆ, ಗುರಿ ಸಾಧನೆ.

ಯಾನದ ರೂಪರೇಖೆ

ಮಾನವ, ಚಂದ್ರನ ಮೇಲೆ (ಮತ್ತು ಹಿಂದಕ್ಕೆ) - ಈ ಯೋಜನೆಯ ಪ್ರಮುಖ ರೂಪರೇಖೆ ಹೀಗಿದೆ. ಭೂಮಿಯಿಂದ ಉಡಾವಣೆ, ಕಕ್ಷಾ ನಿಲ್ದಾಣದಲ್ಲಿ ಭೂಮಿಯ ಸುತ್ತಲೂ ಪರಿಭ್ರಮಣೆ, ಚಂದ್ರನೆಡೆಗೆ ಪಥ, ಆವಶ್ಯಕತೆ ಒದಗಿದರೆ ಪಥ ಪರಿಷ್ಕರಣ, ಕಕ್ಷಾನಿಲ್ದಾಣದಲ್ಲಿ  ಚಂದ್ರನ ಸುತ್ತಲೂ ಪರಿಭ್ರಮಣೆ, ಮಾತೃನೌಕೆ - ಎಲ್ಲೆಮ್ಗಳ ಬೇರ್ಪಡುವಿಕೆ, ಮಾತೃನೌಕೆ ಚಂದ್ರಕಕ್ಷೆಯಲ್ಲಿ ಪರಿಭ್ರಮಿಸುತ್ತಿರುವಂತೆ ಎಲ್ಲೆಮ್ ಚಂದ್ರ ತಲಕ್ಕೆ ಇಳಿಯುವಿಕೆ, ಚಂದ್ರ ತಲಸ್ಪರ್ಶ, ಮಾನವ ಚಂದ್ರನ ಮೇಲೆ, ಎಲ್ಲೆಮ್ನ ಏರುಘಟ್ಟ ಮಾತೃನೌಕೆಯೆಡೆಗೆ ಜಿಗಿಯುವಿಕೆ ಮತ್ತು ಅದರೊಡನೆ ಸೇರ್ಪಡೆ, ಭೂಮಿಯೆಡೆಗೆ ಪಥ ಮತ್ತು ನಿಶ್ಚಿತ ಪ್ರದೇಶದಲ್ಲಿ ಜಲರಾಶಿಯಲ್ಲಿ ಇಳಿಯುವಿಕೆ.

(ಮುಂದುವರಿಯಲಿದೆ)
[ಇವೆಲ್ಲಕ್ಕೂ ಮುನ್ನ ಹೋಗುವವರು ಯಾರು ಎಂಬಲ್ಲಿಂದಲೇ ಮುಂದಿನ ಕಂತು ತೊಡಗುತ್ತದೆ. ಓದಲು ಕಾದಿರುವಂತೆ, ಇದುವರೆಗಿನಯಾನಸುಖವನ್ನು (ಕಷ್ಟವನ್ನೂ) ಕೆಳಗೆ ಟಿಪ್ಪಣಿಸುವಿರಲ್ಲಾ?]

2 comments:

  1. Good article....a smaall correction... the temperature of liquid oxygen and liquid hydrogen should be in minus (- 173 and - 253 degree celcius)

    Girish, Bajpe

    ReplyDelete
    Replies
    1. ಅಶೋಕವರ್ಧನ10 April, 2013 11:50

      ಪ್ರಿಯ ಗಿರೀಶ್
      ಕೃತಜ್ಞತೆಗಳು.(ಅಲ್ಲೇ ತಿದ್ದಿಸಿದ್ದೇನೆ.) ನೀವಿದನ್ನು ತೋರಿಸದಿದ್ದರೆ ಇಲ್ಲೂ ಮುಂದೆ ಪುಸ್ತಕ ರೂಪದಲ್ಲಿ ಕೊಡುವಾಗಲೂ ನನ್ನ ಕಣ್ತಪ್ಪು ಹೊಸಬರಿಗೆ ತಪ್ಪು ಮಾಹಿತಿಯನ್ನೇ ಕೊಡುತ್ತಿತ್ತು.
      ಅಶೋಕವರ್ಧನ

      Delete