(ಚಕ್ರವರ್ತಿಗಳು - ಹತ್ತನೇ ಸುತ್ತು)
[ಚಾಲಕ-ವಾಹನ-ಮಾರ್ಗ ಅಥವಾ ವ್ಯಕ್ತಿ-ಯಂತ್ರ-ಪರಿಸರ ಸಮನ್ವಯದ
ಪರಾಕಾಷ್ಠೆಗೊಂದು ನಿದರ್ಶನ ಮೋಟಾರ್ ರ‍್ಯಾಲಿ: ಅರಾಜ ಮಾರ್ಗದಲ್ಲಿ ಅಶಿಸ್ತಿನ ಗೊಂದಲದಲ್ಲಿ ಅಸ್ಥಿರ
ಮನಸ್ಕನಾಗದೇ ಲಕ್ಷ್ಯಚ್ಯುತನಾಗದೇ ನಿಶ್ಚಿತ ಮುಹೂರ್ತದಲ್ಲಿ ಗುರಿ ತಲಪಬಲ್ಲ ಅದಟಿನ ಪ್ರತ್ಯಕ್ಷ ರೂಪ,
ಅರ್ಜುನ ಶರಪ್ರಯೋಗದ ಆಧುನಿಕ ಅವತಾರ. - ಪುಸ್ತಕದಲ್ಲಿ
ಜಿಟಿನಾ ಸಂಪಾದಕೀಯ ಟಿಪ್ಪಣಿ.]
ಅರವಿಂದ ಹೆಲ್ಮೆಟ್ಟಿನ ವೈಸರ್ ಕೊನೆಗೊಮ್ಮೆ ಒರಸಿ, ತಲೆಗೆ
ಹಾಕಿ ಬೆಲ್ಟ್ ಬಿಗಿದರು. ಮೊಟಾರ್ ಸೈಕಲ್ಲನ್ನು ಒದ್ದು ಹೊರಡಿಸಿದರು. ಪಕ್ಕದಲ್ಲೇ ಹೆಲ್ಮೆಟ್ ಕಟ್ಟಿಯೇ
ನಿಂತಿದ್ದ ಪ್ರತಾಪ್ ತಿದ್ದಿದಷ್ಟೂ ‘ಸ್ಟ್ಯಾಂಡರ್ಡ್ ಟೈಮ್’ಗೆ ಐವತ್ತು ಸೆಕೆಂಡ್ ಹಿಂದೆಯೇ ಉಳಿಯುತ್ತಿದ್ದ ವಾಚನ್ನು
ಕಸಿವಿಸಿಯೊಡನೆ ಕೊನೆಗೊಮ್ಮೆ ಕೈಗೆ ಬಿಗಿದು, ಮೇಜಿನ ಕಡೆಗೆ ನಡೆದರು. ‘ರೋಡ್ ಬುಕ್’ ಪಡೆದು, ಅದರಲ್ಲೂ ಮೇಜಿನ ಮೇಲಿನ ಪಟ್ಟಿಯಲ್ಲೂ ವೇಳೆ ೮.೫೧
ದಾಖಲಿಸಿ ಬಂದು ಅರವಿಂದನ ಹಿಂದೆ ಕುಳಿತರು. ಇನ್ನು ಅವರ ಅಸ್ತಿತ್ವ - ಹಿಂದಿನವ ಮಾರ್ಗದರ್ಶಿ, ಎದುರಿನವ
ಸವಾರ, ಒಟ್ಟು ಸ್ಪರ್ಧಾಳು ಸಂಖ್ಯೆ ೬೪.
ಮೇಜಿನೆದುರು ನಿಂತು, ಬೈಕಿಗೆ ನಿಶಾನಿ ಅಡ್ಡ ಹಿಡಿದ ಕಾಲಗಣಿಸುವಾತ,
ಎರಡು ಮಿನಿಟಿನಿಂದ ತೊಡಗಿ ಕೆಳಗಣನೆಯಲ್ಲಿ (ಅಥವಾ ಇಳಿಯೆಣಿಕೆಯಲ್ಲಿ) ಸೆಕೆಂಡುಗಳಿಗಿಳಿದು ಘೋಷಿಸಿದ
“ಹತ್ತು, ಒಂಬ... ರಡು, ಒಂದು,
ಹೋಗಿ.” ನಿಶಾನಿ ಮೇಲೆದ್ದಿತು, ದಟ್ಟ ಹೊಗೆ,
ಟಯರು ಕರಟಿದ ವಾಸನೆಯುಳಿಸಿ ಚಿಮ್ಮಿತು ಯೆಜ್ದಿ ರೋಡ್ ಕಿಂಗ್. ‘ಓಡೋ ಮೀಟರ್’ ೦.೦೦ ಕಿಮೀಯಿಂದ ತೊಡಗಿ, ಸವೆದ ದಾರಿಯ ಉದ್ದ ಗಣಿಸತೊಡಗಿತು.
ಕಿಮೀ ೦.೪೫ರಿಂದ ಪ್ರತಾಪ್ ಕೈಯಲ್ಲಿದ್ದ ‘ಟುಲಿಪ್’ ಉಲಿಯತೊಡಗಿತು “ಎಡದ ಜೋಡಿ ರಸ್ತೆ, ಬಲದ ಒಂಟಿರಸ್ತೆ ಅವಗಣಿಸಿ ನೇರ ನುಗ್ಗು...” ‘ಟೈಮ್ ಚಾರ್ಟ್’ ಮೊದಲ ೮.೮೫ ಕಿಮೀ ಅಂತರವನ್ನು ೧೫ ಮಿನಿಟಿನಲ್ಲಿ ಕ್ರಮಿಸುವಂತೆ
ಸೂಚಿಸಿತು. ಮಾರ್ಗದರ್ಶಿಮೊದಲ ನೋಟಕ್ಕೆ ಅಂದಾಜಿಸಿ, ಮಿನಿಟಿಗೆ ಸರಾಸರಿ ೦.೫೯ ಕಿಮೀ ದೂರಕ್ರಮಣ ಅಂದರೆ ಬೈಕಿನ ವೇಗನಿರ್ದೇಶನ
ಮುಳ್ಳು ೩೬ರಿಂದ ಮೇಲಿರುವ ಓಟದ ಅಪೇಕ್ಷೆ ಮಾತ್ರ ಕೊಟ್ಟ; ಇದು ಸಾಗಣಾ ವಿಭಾಗ.
ಟುಲಿಪ್ ಸರಣಿಯಲ್ಲಿ ಹೇಳುತ್ತಲೇ ಇತ್ತು “೦.೫೫ - ನೇರ ನುಗ್ಗು, ೦.೭೦ - ನೇರ ನುಗ್ಗು, ೧.೧೫ - ಎಡದ ಕವಲು ಅವಗಣಿಸಿ ಬಲದ್ದು ಹಿಡಿ, ೧.೨೫ ಬಲದ್ದು ಬಿಟ್ಟು
ಎಡದ್ದರಲ್ಲಿ ಮುಂದುವರಿ, ೧.೭೦ - ಜಾಗ್ರತೆ, ನಾಲ್ಕು ರಸ್ತೆ ಕೂಡುವ ಜಾಗ, ಎಡಕವಲು ಹಿಡಿ...” ಬಲಕವಲಿನಿಂದ ನುಗ್ಗಿ ಬಂದ ಸಿಟಿ ಬಸ್ ನಿಧಾನಿಸದೆ ನೇರ
ಸಾಗಿತು. ಸವಾರ, ಎಡ ಅಂಚಿನಲ್ಲೇ ಸಾಗೋಣವೆಂದುಕೊಂಡಾಗ ಬಸ್ ಫಕ್ಕನೆ ರಸ್ತೆಯಂಚಿಗೇ ಸರಿದು ಜನ ಇಳಿಸಲು
ನಿಂತಿತು. ಸ್ಪರ್ಧಿ ೬೪ ಬಸ್ಸನ್ನು ಬಳಸಿ ಮುಂದುವರಿಯುವಾಗ, ಬಸ್ಸಿಳಿದ ಅಮ್ಸರತ್ತಾಯೆ ದಾರಿಗೇ ಹಾರಿದ.
ಅವನನ್ನು ಚಕ್ರದಡಿಗಿಡದೇ ಸಾಗಿದಾಗ... ಮತ್ತೆ ಟುಲಿಪ್ಪುಲಿ “೧.೯೦ ಬಲ ಕವಲು ಮತ್ತೆ ಎಡಕವಲು ಅವಗಣಿಸು.” ಇಲ್ಲೋ ಒಂದೆಡೆ ರಿಕ್ಷಾ ತಂಗುದಾಣ, ಇನ್ನೊಂದೆಡೆ ಹೊರ ಊರಿನ
ಬಸ್ಸು ಕಾಯುವವರ ಸಂತೆ, ತೊಂಡಿದನ, ಪುಂಡು ನಾಯಿ. ಬರಿಯ ಹಾರ್ನ್, ಬ್ರೇಕ್ ಸಾಲದ್ದಕ್ಕೆ ಕ್ಲಚ್ಚಿನಲ್ಲಿ
ಸ್ವಲ್ಪ ಇಂಜಿನ್ ಏರಿಸಿ ಭಯ ಮೂಡಿಸಿ ದಾರಿ ಬಿಡಿಸಿಕೊಳ್ಳುವುದರೊಳಗೆ ಮಗುದೊಮ್ಮೆ ಟುಲಿಪ್ಪುವಾಚ “೨.೧೦ ಬಲಕವಲು ಹಿಡಿ.”
ಮಾಮೂಲೀ ಬೈಕಿನ ತಲೆಯ ಸ್ಪೀಡೋ ಮೀಟರ್‌ಗೆ ಎದುರು ಚಕ್ರದಿಂದ
ಬರುವ ಮಾಹಿತಿ ಬೇರನ್ನು ರ‍್ಯಾಲೀ ಬೈಕಿನಲ್ಲಿ ಎರಡು ಸವಾರರ ನಡುವೆ ತರುತ್ತಾರೆ. ಅಲ್ಲಿ ಬೈಕಿನ ಪಕ್ಕೆಯಿಂದ
ವಿಶೇಷವಾಗಿ ಎದ್ದು ನಿಂತ ಹಿಡಿಕೆಗೆ ರ‍್ಯಾಲೀಗನುಕೂಲವಾದ ಓಡೋ ಮೀಟರಿಗೆ ಕೊಟ್ಟಿರುತ್ತಾರೆ. (ಇಂದು
ಈ ಮೀಟರಿನ ಸೌಕರ್ಯ ಆಧುನಿಕ ವಾಹನಗಳಲ್ಲಿ ಸಹಜವಾಗಿಯೇ ಬರುತ್ತಿರುವುದನ್ನು ಕಾಣಬಹುದು) ಅದರ ಮೇಲೊಂದು
ಕಣ್ಣಿಟ್ಟುಕೊಂಡು, ಕುತ್ತಿಗೆಗೆ ನೇತು ಬಿದ್ದ ಕ್ಲಿಪ್ ಬೋರ್ಡಿಗೆ ಸಿಕ್ಕಿಸಿದ ಟುಲಿಪ್ ವಕ್ತಾರಿಕೆ
ನಡೆಸುವವ ಸಹವಾರ ಅಥವಾ ಮಾರ್ಗದರ್ಶಿ. ಟುಲಿಪ್ಪಿನ ಭಾಗವಾಗಿಯೇ ಬರುವ ಟೈಂಚಾರ್ಟ್ ಮತ್ತು ಸ್ವಂತ ಲೆಕ್ಕಾಚಾರಗಳ
ಸಮತೋಲನಕ್ಕೆ ಮಾರ್ಗದರ್ಶಿ ತಾವು ಸಾಗುತ್ತಿದ್ದ ಸಾರ್ವಜನಿಕ ದಾರಿ, ಆಚೆ ಈಚೆ ಓಡಾಡುವ ಬಸ್, ಜನ, ಹೊಂಡಾಗುಂಡಿ
ಎಲ್ಲ ಮರೆತು ತಲ್ಲೀನನಾದ. ಕಳೆದ ದೂರ ೨.೭ ಕಿಮೀ, ವೇಳೆ ೬ ಮಿನಿಟ್. ಅಂದರೆ ಉಳಿದ ದೂರ ೬.೧೫ ಕಿಮೀ,
ವೇಳೆ ೯ ಮಿನಿಟ್. ಸಹಜವಾಗಿ ಸಾಗಣಾ ವಿಭಾಗದ್ದೇ ಕೊರತೆ ತುಂಬಲು “ವೇಗ ನಿರ್ದೇಶನ ಮುಳ್ಳು ೪೧ರ ಮೇಲೇ” ಸವಾರನ ಕಿವಿ ತುಂಬುತ್ತದೆ ಆದೇಶ.
ರ‍್ಯಾಲಿಯಲ್ಲಿ ಟುಲಿಪ್ - ಮಾರ್ಗದರ್ಶಿ, ಅದರ ಕೊನೆಯ ಪುಟದ
ಟೈಂ ಚಾರ್ಟ್ - ವೇಗಸೂಚಿ. ಪ್ರತಿ ವಾಹನದ ಮಾರ್ಗದರ್ಶಿಗೂ ಇವು ಹೊರಡುವ ಕ್ಷಣದಲ್ಲಷ್ಟೇ ಒದಗಿಸುತ್ತಾರೆ;
ಪರೀಕ್ಷಾ ಭವನದಲ್ಲಿ ಮೊದಲ ಗಂಟೆಗೆ ಸಿಗುವ ಪ್ರಶ್ನ ಪತ್ರಿಕೆಯ ಹಾಗೇ. ಹತ್ತು ಹದಿನೈದು ಪುಟಗಳ ಟುಲಿಪ್ಪಿನಲ್ಲಿ
ಉದ್ದಕ್ಕೆ ಎರಡು ಕಾಲಮುಗಳಲ್ಲಿ ಅಂಕಿಯಲ್ಲಿ ಅಂತರವನ್ನೂ ಚಿತ್ರ ಭಾಷೆಯಲ್ಲಿ ದಿಕ್ಕನ್ನೂ ಕ್ರಮವಾಗಿ
ತುಂಬಿರುತ್ತಾರೆ. ಇದರಲ್ಲಿ ಎಡವಿದವರು ‘ಗತಿಹೀನರು’; ಕ್ಷಮೆಯಿಲ್ಲ. ಶಿಸ್ತಿಲ್ಲದ ಮಾರ್ಗಕ್ರಮಣ ಅಥವಾ ಅಪಾರ್ಥಮಾಡಿಕೊಂಡ
ದಿಕ್ಸೂಚನೆ ಒಮ್ಮೆ ನಡೆಸಿದರೂ ಮೊತ್ತದಲ್ಲಿ ಟುಲಿಪ್ಪಿಗೂ ಸ್ಪರ್ಧಿಗೂ ತಾಳಮೇಳ ತಪ್ಪಿ ಸ್ಪರ್ಧೆ ಕುರುಡುಗಲ್ಲಿ
ಸೇರುವುದು ಖಾತ್ರಿ. (ಉದಾ: ನೇರ ದಾರಿಯಲ್ಲಿ ಅನಾವಶ್ಯಕ ಹಾವಿನಂತೆ ಅಂಕುಡೊಂಕಿನ ಓಟ ಕೊಟ್ಟರೆ ಕಿರಿದಂತರದಲ್ಲಿ
ಮೀಟರ್ ಹೆಚ್ಚಿನ ಸೂಚನೆ ಕೊಡುತ್ತದೆ. ದೀರ್ಘ ವೃತ್ತವೊಂದನ್ನು ಬಳಸದೇ ಒಳದಾರಿ ಹುಡುಕಿದರೆ ಕಿರಿದಂತರದ
ದಿಕ್ಸೂಚನೆ ಮೀರಿ ತಪ್ಪು ದಾರಿ ಹಿಡಿಯುವುದು ನಿಶ್ಚಯ) ರ‍್ಯಾಲೀ ಆಯೋಜಕರು ಎಲ್ಲೂ ಎಷ್ಟೂ ವ್ಯವಸ್ಥೆ
ಮಾಡಬಹುದಾದ ತನಿಖಾಠಾಣೆಗಳು ಟಿಸಿ (ಟೈಮ್ ಕಂಟ್ರೋಲ್) ಮತ್ತು ಪಿಸಿ (ಪ್ಯಾಸೇಜ್ ಕಂಟ್ರೋಲ್) ಪ್ರತಿ
ಹಂತದಲ್ಲಿ ಸ್ಪರ್ಧಿಗಳ ಓಡೋ ಹಾಗೂ ಸಮಯವನ್ನು ದಾಖಲಿಸಿಕೊಳ್ಳುತ್ತಿರುತ್ತವೆ. ಫಲಿತಾಂಶ ನಿರ್ಧರಿಸುವಲ್ಲಿ
ಆದರ್ಶ ಅಂತರ ಅಥವಾ ಸಮಯಕ್ಕೆ ಕೊರತೆ ಬಂದರೂ ಮೀರಿದರೂ ಪೂರ್ವ ನಿರ್ಧರಿತ ದಂಡಾಂಕ ತುಂಬುತ್ತಾರೆ. ಹಾಗಾಗಿ
ರ‍್ಯಾಲೀಗಳಲ್ಲಿ ಕಡಿಮೆ ದಂಡಾಂಕ ಸಂಗ್ರಹಿಸಿದವನೇ ವಿಜಯಿಯಾಗುತ್ತಾನೆ.
ನಮ್ಮ ಜೋಡಿ - ‘ಸಂ ೬೪,’ ಎಡಬಲದ ಗಲ್ಲಿ ದಾರಿಗಳನ್ನು ಬಿಟ್ಟು ಮುಖ್ಯ ದಾರಿಯಲ್ಲೇ
ಸಮಾಧಾನದಲ್ಲಿ ಓಡುತ್ತಿತ್ತು. ಮಾರ್ಗದರ್ಶಿಯ ಲೆಕ್ಕಾಚಾರದ ಬೆನ್ನು ಹಿಡಿದು ಬಂದ ಆದೇಶ, ಆಲಾಪದಲ್ಲಿ
ಭಾವಯಾನಗೈಯ್ಯುತ್ತಿದ್ದ ಸವಾರನಿಗೆ ಲಯ ಹಿಡಿದು, ಪಲ್ಲವಿಸಲು ಕೊಟ್ಟ ಸೂಚನೆಯಾಗಿತ್ತು. ಸವಾರ ತ್ರಾಟಲ್
ತುಸು ಏರಿಸುತ್ತಲೇ ಊರಹೊರಗೇ ಬಂದ.
ಟೈಂ ಚಾರ್ಟ್ ನಿಗದಿತ ಅಂತರಗಳನ್ನು ಸ್ಪರ್ಧಿಗಳು ಕ್ರಮಿಸಬೇಕಾದ
ಆದರ್ಶ ಸಮಯ ಮಿತಿಯನ್ನು ಸೂಚಿಸುತ್ತದೆ. ಉದಾಹರಣೆಗೆ ಒಂದು ಟೈಂ ಚಾರ್ಟ್ ಮೊದಲ ಹತ್ತು ಕಿಮೀಗೆ ಹದಿನೈದು
ಮಿನಿಟು ಮತ್ತಿನ ಏಳು ಕಿಮೀಗೆ ಏಳೇ ಮಿನಿಟು ಎನ್ನಬಹುದು. ಈ ಸೂಚನೆಗಳನ್ನು ಅರ್ಥ ಮಾಡಿಕೊಳ್ಳುವ ಸಹವಾರರು
ನಿಧಾನದ್ದನ್ನು ಸಾಗಣೆ ವಲಯ ಎಂದೂ ವೇಗದ್ದನ್ನು ಸ್ಪರ್ಧಾವಲಯವೆಂದೂ ವಿಭಾಗಿಸಿಕೊಳ್ಳುತ್ತಾರೆ. ಟುಲಿಪ್
ಓದಿನ ವಿರಾಮದಲ್ಲಿ ಸಹವಾರ ನಿಖರ ಲೆಕ್ಕಾಚಾರ ನಡೆಸಲೇ ಬೇಕು ಮತ್ತು ಇದನ್ನು ಓಟದ ಉದ್ದಕ್ಕೂ ನಿರಂತರ
ಪರಿಷ್ಕರಿಸಿಕೊಳ್ಳುತ್ತಲೇ ಇರಬೇಕು.
ಟುಲಿಪ್ ಮುನ್ನೋಟದಲ್ಲಿ ಟೈಂ ಚಾರ್ಟಿನ ಅರೆವಾಸಿ ಕಚ್ಚಾದಾರಿಯಲ್ಲಿರುವುದು
ಕಂಡು, ಸರಾಸರಿಯಲ್ಲಿ ಸರಿದೂಗಿಸಲು ಸವಾರನಿಗೆ ಅಗತ್ಯಕ್ಕೂ ತುಸು ಮೀರಿದ ವೇಗಕ್ಕೆ ಕುಮ್ಮಕ್ಕು ಕೊಟ್ಟ.
ನಿರೀಕ್ಷಿತ ಕವಲು ಬಂದಾಗ ೬೦-೭೦ರ ವೇಗದಲ್ಲಿದ್ದ ಸವಾರಿ ೬೪ ಜಾಗರೂಕತೆಯಿಂದ ಮಣ್ಣದಾರಿಗೆ ಹೊರಳಿ ಮುಂದುವರಿಯಿತು.
ಟುಲಿಪ್ಪುಲಿ “೮.೭೫ ಸಪುರ
ಸೇತುವೆ.” ಮಾರ್ಗದರ್ಶಿಯ ಆಜ್ಞೆ “ನಿಲ್ಲು.” ಹತ್ತು ಮೀಟರ್ ಮುಂದೆ ಅನಿರೀಕ್ಷಿತ (ಆದರೆ ಎಲ್ಲೂ ಇರಬಹುದಾದ)
ಟಿಸಿ (ಟೈಮ್ ಕಂಟ್ರೋಲ್, ಸಮಯ ಪರೀಕ್ಷಕ); ಮಾರ್ಗದ ಅಂಚಿನಲ್ಲಿ ಪುಟ್ಟ ಮೇಜಿಟ್ಟುಕೊಂಡು ಇಬ್ಬರು ಸ್ಪರ್ಧೆಯ
ಲಾಂಚನ ಮೆರೆಸಿ ಕುಳಿತಿದ್ದರು. ದಾರಿಯಲ್ಲೊಂದು ಸುಣ್ಣದ ಅಡ್ಡ ಗೆರೆ ಸ್ಪಷ್ಟ ನೆಲೆ ನಿರ್ದೇಶನಕ್ಕೆ
ಸೂಚನೆ. ಲೆಕ್ಕಾಚಾರದಂತೆ ಸ್ಪರ್ಧಿ ೬೪ಕ್ಕೆ ಪ್ರವೇಶ ವೇಳೆ ೯.೦೬, ಅಂದರೆ ಇನ್ನೂ ಮೂರು ಮಿನಿಟಿತ್ತು.
ಅದನ್ನು ಕಾದು, ಸವಾರಿ ನಿಖರ ವೇಳೆಗೇ ಸುಣ್ಣದ ಗೆರೆ ಮುಟ್ಟಿಸಿದ ಮತ್ತು ಟಿಸಿ ಕಡತದಲ್ಲೂ ದಾಖಲಿಸಿದ.
ಮರುಗಳಿಗೆಯಲ್ಲಿ ಬೈಕಿಗೆ ಹಾರಿ ಕುಳಿತು, ಜೂಗರಿಸಿದ ಎತ್ತಿಗೆ ಕೊಟ್ಟ ಚಬಕೇಟಿನಂತೆ “ನಡೀ” ಅರಚಿದ.
ಟೈಮ್ ಚಾರ್ಟ್ ಮುಂದಿನ ೨೩.೯ ಕಿಮೀಗೆ ೨೨ ಮಿನಿಟೆಂದಿತು.
ಟುಲಿಪ್ ಉದ್ದಕ್ಕೆ ಸುಮ್ಮನೆ ಕಣ್ಣಾಡಿಸಿದರೂ ಇಪ್ಪತ್ತಕ್ಕೂ ಮಿಕ್ಕು ತೀವ್ರ ತಿರುವುಗಳು, ಹತ್ತಕ್ಕೂ
ಮಿಕ್ಕು ಎಚ್ಚರಿಕೆ ಚಿಹ್ನೆಗಳು ಮತ್ತು ಬಹುಪಾಲು ಮಣ್ಣುದಾರಿಯ ಸೂಚನೆಯೂ ಕಾಣುತ್ತಿದ್ದುವು. ತುರುಸಿನ
ಸ್ಪರ್ಧಾವಲಯ ಎಂಬುದು ಸ್ಪಷ್ಟ. ಮಾರ್ಗದರ್ಶಿ ಟುಲಿಪ್ಪನ್ನು ಎಚ್ಚರಿಕೆಯಿಂದ ಅನುಸರಿಸುವುದಕ್ಕೇ ಗಮನವಿಟ್ಟು,
ಚಾಲಕನಿಗೆ ಗರಿಷ್ಠ ವೇಗಸಾಧನೆಗೆ ಹುರಿದುಂಬಿಸತೊಡಗಿದ. ಆಗಿಂದಾಗ್ಗೆ ಸಮಯ ದೂರಗಳ ಗಣನೆಯಲ್ಲಿ ತಮ್ಮ
ಸಾಧನೆಯನ್ನು ವಿಮರ್ಶಿಸಿ ಕೊಳ್ಳುವುದು ಕೇವಲ ಔಪಚಾರಿಕ ಕೆಲಸವಷ್ಟೇ ಆಗಿತ್ತು.
ಕಬ್ಬಿಣದ ಪಟ್ಟೆ ಹಾಕಿದ ಗಾಡಿದಾರಿಗಳ ಕಾಲದ ಮಾತಿದು. ಅಸಮ
ದಾರಿಗೆ ತೆಳು ಡಾಮರಿನ ಲೇಪ ಕಾಣಿಸಿದ್ದರು ಅಥವಾ ಗುಂಡಿಗಳ ಸರಣಿಯನ್ನೇ ಮಾಡಿಟ್ಟಿದ್ದರು! ರಣಾಂಗಣದಲ್ಲಿ
ವೈರಿಗಳ ನಡೆ ಉಧ್ವಸ್ಥಗೊಳಿಸಲು ನೆಲ ಬಾಂಬುಗಳನ್ನು ಹುಗಿಯುತ್ತಾರಂತೆ. ಅವು ಯಾವುದೇ ತಾರ್ಕಿಕ ತೀರ್ಮಾನಗಳಿಗೂ
ನಿಲುಕದ ಜಾಲವಂತೆ. ಅದನ್ನು ನಾಚಿಸುವಷ್ಟು ಅತಾರ್ಕಿಕತೆ ಇಲ್ಲಿನ ಹೊಂಡ, ಮೊಳಕೆಯೊಡೆದ ಕಲ್ಲುಗಳ ‘ವ್ಯವಸ್ಥೆ’ಯಲ್ಲಿತ್ತು. ಒಂದು ತಪ್ಪಿದರೆ
ಇನ್ನೊಂದರಲ್ಲಿ ಆಘಾತ ನಿಶ್ಚಿತ. ತೀವ್ರ ತಿರುಗಾಸುಗಳಲ್ಲಿ ಎದ್ದ ಸಡಿಲ ಕಲ್ಲುಗಳು, ತೆಳು ಮರಳಿನ ಹೊದಿಕೆ
ಅಥವಾ ಹೂಳುವ ಹುಡಿಮಣ್ಣು ಬಹಳ ಆತಂಕಕಾರಿಗಳು. ಹೀಗೆಂದು ಚಾಲಕ ನಿಧಾನಿಸುವಂತಿಲ್ಲ; ಇದು ಸ್ಪರ್ಧಾವಲಯ.
ಮಾರ್ಗದರ್ಶಿಯ ‘ನಡೀ’ ಆದೇಶದ
ಹಿಂದಿನ ಹೊಡೀ ಧ್ವನಿ ಸವಾರನಿಗೆ ಅರ್ಥವಾಗದ್ದೇನೂ ಅಲ್ಲ. ನಡುದಾರಿಯ ಉಸಾಬರಿ ಬಿಟ್ಟು ಪಕ್ಕದ ಮಣ್ಣಿನಲ್ಲೇ
ಹೋಗೋಣವೆಂದರೆ ಅದರಲ್ಲಲ್ಲಿ ಅಡ್ಡ ಚರಂಡಿಗಳು, ದಾರಿಯಂಚಿಗೆ ಒಂದಿದ ಕಲ್ಲುಗುಂಡುಗಳು. ಇದೇನು ಗದ್ದಲ
ಎಂದು ಇಣುಕಿ ನೋಡುವವರಂತೆ ಒಮ್ಮೆಲೆ ಚಾಚಿಕೊಳ್ಳುವ ಪೊದರ ಮುಳ್ಳ ಕೈಗಳು. ಗಾಬರಿಗೆಟ್ಟ ಕಡಸು ಬಾಲ
ಎತ್ತಿ ಹಿಡಿದು ರಂಗಕ್ಕೆ ಧುಮುಕಿ ದಾರಿಗುಂಟ ಓಡುವಾಗಂತೂ ಸಾವರಿಸಿಕೊಳ್ಳುವಲ್ಲಿ ಸಹವಾರನ ಶಿರಸ್ತ್ರಾಣ
ಸವಾರನದೊಂದಿಗೆ ಘಟ್ಟಿಸಿತ್ತು.
ನೆರಳಿನಲ್ಲಿ ಜೂಗರಿಸಿದ್ದ ಹಂಡ ನಾಯಿ ಬಕ್ಕೆಂದು ಸವಾರರ
ಕಾಲನ್ನೇ ಬಾಯಿಗಿಡುವಂತೆ ಬೆದರಿಸಿ, ಹತ್ತುಮಾರು ಬೆನ್ನಟ್ಟಿದಾಗ ಇವರು ತಡವರಿಸಲಿಲ್ಲ. ತೀವ್ರ ತಿರುವಿನಲ್ಲೇ
ಎದುರಾದ ಹಳ್ಳಿ ಬಸ್ಸೋ ತುಂಬು ಗರ್ಭಿಣಿ. ಅದು ಹಾಗೂ ಹೀಗೂ ಹೊಂದಿಸಿಕೊಂಡು ದಾರಿ ಕೊಟ್ಟಾಗ ಸ್ಪರ್ಧಿ
೬೪ರ ಎಷ್ಟೋ ಅಮೂಲ್ಯ ಕ್ಷಣಗಳು ವ್ಯರ್ಥವಾಗಿದ್ದವು.
ಕಣ್ಣು ಹೆಚ್ಚು ಹರಿತಗೊಳಿಸಿ ಕಿವಿ ಮತ್ತಷ್ಟು ಚುರುಕುಗೊಳಿಸಿ
ಬೈಕಿನ್ನೇನು ಮಿಂಚಿನ ಸೆಳಕಾಗುವುದರಲ್ಲಿದ್ದಾಗ ಮಾರ್ಗದರ್ಶಿಯ ತುರ್ತು ಆಪ್ತವಾಕ್ಕು “ಮಣ್ಣು ದಾರೀಈಈಈ.” ನಡುವೆ ಉದ್ದಕ್ಕೂ ಮಣ್ಣದಿಬ್ಬ ಅತ್ತಿತ್ತ ದೂಳು ಅಥವಾ ಕಲ್ಲು
ಹರಳಿನ ಚರಂಡಿಯೇ ದಾರಿ. ಕಲ್ಲು ಸಿಕ್ಕಾಗ ಹಿಡಿಕೆ ನಿರ್ವಹಣೆಯಲ್ಲಿ ಗುದ್ದು ಜಾಸ್ತಿಯಾದರೂ ಬಿಗಿಯಾಗಲೇ
ಬೇಕು. ದೂಳರಾಶಿಯಲ್ಲಿ ಗಾಡಿ ತುಸು ತೂರಾಡಿದರೂ ವಿಶೇಷ ಬಿಗಿ ಮಾಡದೇ ವೇಗ ಇಳಿಸದೇ ನಿಭಾಯಿಸಬೇಕು.
ತೀವ್ರ ತಿರುಗಾಸುಗಳಲ್ಲಿ ಅಗತ್ಯ ಬಂದರೆ ಗಿಯರಿಳಿಸಿ, ಗಾಡಿ ವಾಲಿಸಿ ನೆಲ ಕಚ್ಚಿದಂತೆ ಸಾಗಬೇಕು. ಫಕ್ಕನೆ
ಬಿರಿ ಒತ್ತಿ ಜಾರಲು ಅವಕಾಶ ಮಾಡಬಾರದು. ಹಾಗೆ ಅಂದಾಜು ತಪ್ಪಿದಲ್ಲೂ ಸವಾರ ನೆಲ ಒದ್ದು ಸುಧಾರಿಸುವಾಗ
ಸಹವಾರ ಆತನಿಗಂಟಿದ ನಿಶ್ಚಲ ಹೊರೆಯಷ್ಟೇ! ಅದೂ ಮೀರಿದಲ್ಲಿ ಅವರು ಒಂದುರುಳು ಬೀಳಲೂ ಬಹುದೇನೋ.
ಆದರೆ ಕೇವಲ ವೀಕ್ಷಣೆಗೆಂದೇ ಅವರನ್ನು ಹಿಂಬಾಲಿಸಿ ಹೊರಟಿದ್ದ
ನನಗೆ ಅವರೆಬ್ಬಿಸಿದ ದೂಳು ತಿಂದೂ ಮುಂದುವರಿಯುವುದು ಅಸಾಧ್ಯವಾದ್ದರಿಂದ ನಿಧಾನಿಸುವುದು ಅನಿವಾರ್ಯವಾಯ್ತು.
ಕ್ಷಣಾರ್ಧದಲ್ಲಿ ಸ್ಪರ್ಧಿ ೬೪ ತಾನೇ ಎಬ್ಬಿಸಿದ ದೂಳ ದಪ್ಪನ್ನ ತೆರೆ ಎಳೆದು ಕಣ್ಮರೆಯಾಗುತ್ತಿದ್ದಂತೆ
ಇನ್ನೊಂದೇ ಸಾಹಸಕ್ರೀಡೆ - ಮೋಟಾರ್ ರ‍್ಯಾಲಿಯ ಉತ್ಕರ್ಷವನ್ನೂ ಸಾರುತ್ತ ಹೋಯಿತು.
ಮೋಟಾರ್ ರ‍್ಯಾಲಿಯೆಂಬ ವಾಹನಗಳ ಸಾಹಸಕ್ರೀಡೆಗೆ ಹಲವು ಮುಖಗಳಿವೆ.
ಆದರೆ ಸಾರ್ವಜನಿಕ ದಾರಿಗಳಲ್ಲೇ ಸಮಯ ಹಾಗೂ ವೇಗದ ನಿಯಂತ್ರಣ ಸಾಧಿಸುವ (ಈವರೆಗೆ ನಾನು ನಿರೂಪಿಸಿದ)
ರ‍್ಯಾಲಿಗೇ ಮಾನ್ಯತೆ ಹೆಚ್ಚು. ದ್ವಿಚಕ್ರ, ಚತುಷ್ಚಕ್ರ ಮತ್ತೆ ಒಳಗೆ ವಿವಿಧ ಇಂಜಿನ್ ಸಾಮರ್ಥ್ಯ, ಲಿಂಗ, ವಯೋಮಾನಗಳನ್ನೆಲ್ಲಾ
ಲೆಕ್ಕ ಹಿಡಿದು ರ‍್ಯಾಲಿಗಳಲ್ಲಿ ವೈವಿಧ್ಯ ಅನೇಕ ಬಗೆಯವು. ಇಲ್ಲಿ ನೇರ ವಾಹನಗಳ ನಡುವೆ ಸ್ಪರ್ಧೆ ಕಾಣುವುದಿಲ್ಲ.
ಮಿನಿಟುಗಳ ಅಂತರದ ಸರದಿಯಲ್ಲೇ ವಾಹನಗಳನ್ನು ಓಟಕ್ಕಿಳಿಸಿರುತ್ತಾರೆ. ಸವಾರರ ತಾಕತ್ತಿನ ಮೇಲೆ ಕೆಲವೊಮ್ಮೆ
ಎರಡೋ ಮೂರೋ ಸ್ಪರ್ಧಿಗಳು ಒಟ್ಟೊಟ್ಟಿಗೇ ಓಡಿದಂತೆ ಒಬ್ಬರಿಗೊಬ್ಬರು ‘ರೇಸ್ ಕೊಟ್ಟಂತೆ’ ಕಾಣಬಹುದು, ಅದು ನಿಜವಲ್ಲ. ದ್ವಿಚಕ್ರಿ ರ‍್ಯಾಲಿಗಳಲ್ಲಿ
ಎರಡಕ್ಕಿಂತ ಅಧಿಕ ಸವಾರರು ಅಸಾಧ್ಯ. ಚತುಷ್ಚಕ್ರಗಳಲ್ಲಿ ನಾಲ್ವರವರೆಗೂ ಇರಬಹುದು. ಆದರೆ ಒಟ್ಟಿನಲ್ಲಿ
ಒಂದು ಸ್ಪರ್ಧಿಯೆಂದರೆ ಚಾಲಕ ಮತ್ತು ಮಾರ್ಗದರ್ಶಿಯೆಂಬ ಎರಡು ಅಭ್ಯರ್ಥಿತನ ಅನಿವಾರ್ಯ.
ಟುಲಿಪ್ - ಮೊದಲೇ ಸೂಚಿಸಿದಂತೆ ಮಾರ್ಗಸೂಚನಾ ಪಟ್ಟಿಯನ್ನು
ವಾರಗಟ್ಟಳೆ ಮೊದಲೇ ಗೋಪ್ಯವಾಗಿ ಮತ್ತು ನಿಖರವಾಗಿ ತಯಾರಿಸಿಟ್ಟರೂ ಸಂಘಟಕರು, ಪ್ರತಿ ಮಾಡಿ ಸ್ಪರ್ಧಿಗಳಿಗೆ
ಕೊಡುವುದು ಕಡೇ ಮಿನಿಟಿಗೆ. ಓಡೋ ಮೀಟರ್ ವಾಹನದ ಭಾಗವಾಗಿ ಸ್ಪರ್ಧಿಗಳೇ ಸಜ್ಜುಗೊಳಿಸಿಕೊಂಡರೂ ಅದರ
ದಾಖಲಾತಿಯ ವಿವರಗಳನ್ನು ಪ್ರತಿ ಹಂತದಲ್ಲೂ ರ‍್ಯಾಲೀ ಸಂಯೋಜಕರು ಸಂಗ್ರಹಿಸಿಕೊಳ್ಳುತ್ತಾರೆ. ಮೊದಲೇ
ಹೇಳಿದಂತೆ ಟುಲಿಪ್ ಮತ್ತು ಓಡೋಮೀಟರ್ ಸಹಕಾರದಲ್ಲಿ ಸ್ಪರ್ಧೆಯಲ್ಲಿ ಚಾಲಕನಿಗೆ ದಿಕ್ಕು ಸೂಚಿಸುವವನೇ
ಮಾರ್ಗದರ್ಶಿ. ಉರಿಬಿಸಿಲೋ ಗಾಢಾಂಧಕಾರವೋ ದೂಳಿನ ಮಬ್ಬೋ ಮಳೆಮಂಜಿನ ಮುಸುಕೋ ಗುಂಡಿಯ ಗುದ್ದೋ ಓಟದ
ರಭಸವೋ ಇವನನ್ನು ವಿಚಲಿತಗೊಳಿಸಬಾರದು, ಈತನ ಕ್ರಿಯೆಗೆ ವ್ಯತ್ಯಯ ತರಬಾರದು. ಮುಂದಿನ ಹತ್ತಿಪ್ಪತ್ತು
ಮೀಟರಿನಲ್ಲಿ ದಾರಿಯಂಚಿನಲ್ಲಿ ಯಾವ ಸೂಚನಾ ಫಲಕವಿಲ್ಲದೆಯೂ ಹಿಮ್ಮುರಿ ತಿರುವಿರಬಹುದು, ಬಣ್ಣದ ಪಟ್ಟಿಯಿಲ್ಲದ
ವೇಗತಡೆಗಳು ಮೊಳೆತಿರಬಹುದು, ಸೇತುವೆಯಿಲ್ಲದ ತೋಡು ತೆಳುನೀರ ಹರಿಸಿರಬಹುದು, ದಾರಿ ಟಿಸಿಲೊಡೆಯಬಹುದು.
ಎಲ್ಲದರ ಬಗ್ಗೆ ಸವಾರನಿಗೆ ಸಕಾಲದಲ್ಲಿ ನಿರಂತರ ಮುನ್ನುಡಿಯುವ ಆಪ್ತ ಜೋಯಿಸ ಮಾರ್ಗದರ್ಶಿ. ನಿಯಮಿತ
ಅಂತರಗಳಲ್ಲಿ ನಿಶ್ಚಿತ ವೇಗಸಾಧನೆಗಾಗಿ ಆದರ್ಶ ವೇಗ ಹಾರೈಸುವ ಚಾತಕಪಕ್ಷಿಯೂ ಇವನೇ. ಸವಾರಿ ಅಸಾಧ್ಯವಾದಲ್ಲಿ
ಇಳಿದು ನೂಕುವ, ವಾಹನ ಕೈಕೊಟ್ಟರೆ ರಿಪೇರಿಗೆ ಸಹಕರಿಸುವ ಸಖ, ಟಿಸಿ ಪಿಸಿಗಳ ದಾಖಲೆಯಲ್ಲಿ ಮುಂದೆ ನಿಲ್ಲುವ
ಪ್ರತಿನಿಧಿಯೂ ಆಗುವ ಸಹವಾರ, ಮಾರ್ಗದರ್ಶಿ ಅಷ್ಟಾವಧಾನಿಯೇ ಸರಿ.
ಚಾಲಕ - ವಾಹನವನ್ನು ಮಾರ್ಗದರ್ಶಿ ಹೋಗೆಂದ ಕಡೆಗೋಡಿಸುವ
ಚಾಲಾಕೀ. ಕಚ್ಚಾ ಅಥವಾ ರಸ್ತೆಯೇ ಅಲ್ಲದ ದಿಕ್ಕಿರಬಹುದು, ಅಡ್ಡಗಟ್ಟಿದ ನೀರಹರಿವು, ಸೆಳೆತ ಅಂದಾಜಿಗೆ
ನಿಲುಕದ್ದಿರಬಹುದು, ತಿರುಪೇರೋ ಪಾತಾಳಕ್ಕೆ ಜಾರೋ ದಮ್ಮು ಕಟ್ಟಿಸಬಹುದು, ಸಹಸ್ಪರ್ಧಿಗಳು ಅನವಶ್ಯಕ
ಪೈಪೋಟಿ ನಡೆಸಬಹುದು, ದೂಳು ತಿನ್ನಿಸಬಹುದು - ಚಾಲಕ ಸ್ಥಿತಪ್ರಜ್ಞ. ಬೀಡಾಡಿ ಜಾನುವಾರು, ಅಶಿಸ್ತಿನ ಪಾದಚಾರಿಗಳು,
ಅವ್ಯವಸ್ಥಿತ ವಾಹನ ಸಂಚಾರ, ಮಾರ್ಗಕ್ಕೆ ಬೊಬ್ಬಿರಿವ ಮೈಕಾಸುರರು, ಕತ್ತಲಲ್ಲಿ ಕೋರೈಸುವ ನೂರು ದೀಪ
ಮತ್ತು ಕುರುಡುಕೂಪಗಳೊಡನೆ ಹೋರಾಡುವ ಅಸಮ ಸಾಹಸಿ ಈತ. ಮಾರ್ಗದರ್ಶಿಯ ನಿರ್ದೇಶನ ಪಾಲನೆ ಜೊತೆಗೆ ವಾಹನಕ್ಕೆ
ದಕ್ಕೆಯಾಗದ ನಿಭಾವಣೆ, ಆಕಸ್ಮಿಕಗಳೊದಗಿದಲ್ಲೂ ಯಶಸ್ವೀ ಸಂಭಾಳನೆ, ಕೆಡದ ಸೈರಣೆಗಳಿಂದ ಒಟ್ಟಾರೆ ತಂಡವನ್ನು ಸ್ಪರ್ಧೆಯಲ್ಲಿ
ಉಳಿಸುವ ಚಾಲಕ ಸವ್ಯಸಾಚಿ. (ಅದೊಮ್ಮೆ ನಂಜಪ್ಪನವರ ಬೈಕಿನ ಹಿಂಗಾಲೀ ಪಂಚೇರಾಗಿತ್ತಂತೆ. ಮಾರ್ಗದರ್ಶಿ
ಅನಿತಾರನ್ನು ಪೆಟ್ರೋಲ್ ಟ್ಯಾಂಕಿನ ಮೇಲೇ ಕೂರಿಸಿಕೊಂಡಂತೆ ಜೋಡಿ ಅಳುಕದೇ ಮುಂದೊತ್ತಿ ಸುಮಾರು ಐದು
ಕಿಮೀ ಅಂತರವನ್ನು ಆದರ್ಶ ಸಮಯದಲ್ಲಿ ಸಾಧಿಸಿದ್ದರಂತೆ!) ರ‍್ಯಾಲಿಯಲ್ಲಿ ಮಾರ್ಗದರ್ಶಿ ಬುದ್ಧಿಯಾದರೆ
ಚಾಲಕ ಶಕ್ತಿ. (ಕೇವಲ ಚಾಲನೆಯ ಪರಿಣತಿ ಸ್ಪರ್ಧೆಗೊಡ್ಡಲು ಮೋಟೋಕ್ರಾಸ್ ಎಂಬ ಇನ್ನೊಂದೇ ವಾಹನ ಕ್ರೀಡೆ
ಇದೆ. ಇಲ್ಲಿ ಅನುಕೂಲಕ್ಕೆ ಕೆಲವು ಅದರ ಚಿತ್ರಗಳನ್ನೂ ಬಳಸಿದ್ದೇನೆ.)
ರ‍್ಯಾಲೀ ಆಯೋಜನೆಯ ಆರ್ಥಿಕ ಆಯಾಮ ತುಂಬಾ ದೊಡ್ಡದು. ಅದಕ್ಕೂ
ಮಿಗಿಲಾದದ್ದು ಸಂಘಟನೆಯ ವತಿಯಿಂದ ಸಮರ್ಥ ನಿರ್ವಹಣೆ. ರ‍್ಯಾಲೀ ರೇಸ್ ಅಲ್ಲ; ಬಹುತೇಕ ಸ್ಪರ್ಧಾ ಕ್ರೀಡೆಗಳಂತೆ
ಫಲಾಫಲಗಳು ಸಾಮಾನ್ಯರ ನೇರ ವೀಕ್ಷಣೆಗೆ ನಿಲುಕುವುದೇ ಇಲ್ಲ. ಟುಲಿಪ್ ತಯಾರಿ, ಟಿಸಿ, ಪಿಸಿಗಳಿಂದ ತೊಡಗಿ
ರ‍್ಯಾಲಿ ಉದ್ದಕ್ಕೂ ತನಿಖೆಗೂ (ರಕ್ಷಣೆಗೂ) ಅಂತಿi ಫಲಿತಾಂಶ ಘೋಷಣೆಗೂ ಇರಬೇಕಾದ ನಿಷ್ಪಾಕ್ಷಿಕ ಸಾಮರ್ಥ್ಯ,
ತಾಳ್ಮೆ ಎಷ್ಟೋ ಬಾರಿ ಸ್ಪರ್ಧಾ ಭಾಗಿಗಳಿಗೆ ಇಲ್ಲವಾಗಿ ಭಾರೀ ಮನಸ್ತಾಪಗಳು ನಡೆಯುವುದೂ ಇತ್ತು. ಈ
ಲೇಖನ ಬರೆಯುವ ಕಾಲದಲ್ಲಿ, ಅಂದರೆ ೧೯೮೮ರ ಹಿಂದು ಮುಂದಿನಲ್ಲಿ ಕಾಫಿ ೫೦೦, ಕರಾವಳಿ ೫೦೦, ಮಾನ್ಸೂನ್
ರ‍್ಯಾಲೀ, ನೈಟ್ ರ‍್ಯಾಲೀ, ಕರ್ನಾಟಕ ೧೦೦೦ ಮುಂತಾದವು ರಾಜ್ಯಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದವು.
ಅದಕ್ಕೂ ಹೆಚ್ಚಿಗೆ ನನ್ನ ಸಾಹಸಾಪೇಕ್ಷೆಗೆ ಆಜ್ಯವೆರೆವಂತೆ ಹಿಮಾಲಯನ್ ರ‍್ಯಾಲಿ, ರಾಜಾಸ್ತಾನದ ಡೆಸರ್ಟ್
ರ‍್ಯಾಲೀಗಳ ಸುದ್ದಿ ಸ್ವಾರಸ್ಯಗಳು ಮಾಧ್ಯಮಗಳಲ್ಲಿ ಬಹಳ ಮಿಂಚುತ್ತಿದ್ದವು. ಮಾರ್ಗ ಸೂಚನೆಗಳೆಲ್ಲಾ
ಮುಂದಾಗಿ ಕೊಟ್ಟು (ಡಿಸ್ಕ್ಲೋಸ್ಡ್ ಅಥವಾ ಸ್ಟೇಜ್ ರ‍್ಯಾಲೀ) ಕೇವಲ ವೇಗ ಮಿತಿಯಲ್ಲಿ ಸ್ಪರ್ಧೆ, ಟ್ರೆಷರ್
ಹಂಟ್ ಎಂದೆಲ್ಲಾ ಹಲವು ಮುಖಗಳನ್ನೂ ನಾನು ಕೇಳುತ್ತಿದ್ದೆ. ಒಟ್ಟಾರೆ ಮನುಷ್ಯ-ಯಂತ್ರಗಳ ಉತ್ಕಟ ಸಮನ್ವಯಕ್ಕೆ
ಮಿತಿಯಿಲ್ಲ ಮತ್ತು ಒರೆಗಲ್ಲೂ ಇದು ಎನ್ನುತ್ತಿತ್ತು ರ‍್ಯಾಲೀಗಳು. ಭವಿಷ್ಯದ ವಾಹನಗಳ ರೂಪಣೆಗೆ ನಿಸ್ಸಂದೇಹವಾಗಿ
ಪ್ರಯೋಗ ರಂಗವೇ ರ‍್ಯಾಲೀ.
ವೈಯಕ್ತಿಕವಾಗಿ ನಾನು ಸ್ಪರ್ಧಾ ಕ್ರೀಡೆಗಳಲ್ಲಿ ಭಾಗವಹಿಸುತ್ತಿರಲಿಲ್ಲ.
ಆದರೆ ನನ್ನ ಮಿತ್ರ ಬಳಗದಲ್ಲಿ ಹಲವರು, ಇನ್ನೂ ಒಂದು ತರದ ಪಡ್ಡೆತನ, ವೃತ್ತಿರಂಗಕ್ಕಿಳಿದಿದ್ದರೂ
‘ಹುಡುಗಾಟ’ ಬಿಟ್ಟುಕೊಡದೇ
ಇವುಗಳಲ್ಲಿ ತೀವ್ರವಾಗಿ ತೊಡಗಿಕೊಳ್ಳುತ್ತಿದ್ದರು. ಅರವಿಂದ ರಾವ್, ಪ್ರತಾಪ್, ರೋಹಿತ್ ರಾವ್ - ಮತ್ತವರ
ಅಣ್ಣ ಸುಮಿತ್ ರಾವ್, ಅರವಿಂದ ಶೆಣೈ - ಅವರಣ್ಣ ಮೋಹನ್ ಶೆಣೈ, ಸಂತೋಷ್ ರೈ, ಮೋಹನ್ ಆಚಾರ್ಯ, ಕಿಶೋರ್
ಕುಮಾರ್, ಸುನಿಲ್ ರಾವ್ ಮುಂತಾದ ರ‍್ಯಾಲಿವೀರರ ಪಟ್ಟಿ ನನ್ನ ನೆನಪಿನಲ್ಲಿ ಬೆಳೆಯುತ್ತಲೇ ಹೋಗುತ್ತದೆ.
ನನಗೇನೂ ಪರಿಚಿತರಲ್ಲದ ಕೊಡಗಿನ ಅನಿತಾ ನಂಜಪ್ಪ ದಂಪತಿಯಂತೂ ಈ ಉದ್ದಗಲದಲ್ಲಿ ಹಲವು ಅಸಾಮಾನ್ಯ ಸಾಧನೆಗಳನ್ನು
ಅದರಲ್ಲೂ ಮುಖ್ಯವಾಗಿ ದ್ವಿಚಕ್ರ ರ‍್ಯಾಲಿಗಳಲ್ಲೇ ತೋರಿ ನಮ್ಮೆಲ್ಲರಲ್ಲಿ ಏಕಕಾಲಕ್ಕೆ ಅಪೂರ್ವ ಸಂತೋಷವನ್ನು
(ಸ್ವಲ್ಪ ಮಟ್ಟಿಗೆ ಕರುಬನ್ನೂ?) ಹುಟ್ಟಿಸಿದ್ದು ಹೇಳದಿರಲಾರೆ! [ಮುಂದಿನ ದಿನಗಳಲ್ಲಿ ಅವರು ನನ್ನ
ಅಂಗಡಿಯ ಗಿರಾಕಿಗಳಾಗಿ ಒಳ್ಳೆಯ ಪರಿಚಿತರೂ ಆಗಿದ್ದರು. ಈಗ ಎಲ್ಲಿ, ಏನು ಮಾಡಿಕೊಂಡಿದ್ದಾರೋ ತಿಳಿದಿಲ್ಲ.]
ಯಾವುದೇ ರ‍್ಯಾಲೀ ನಡೆಯಲಿ, ನಾನು ಮಿತಿಯಲ್ಲಿ ಅವರ ಸಾಧನೆಗಳಿಗೆ ಒಳ್ಳೆಯ ವೀಕ್ಷಕನಾಗುತ್ತಿದ್ದೆ.
ಭಾಗಿಗಳ ಅನುಭವ ಕಥನಗಳಿಗೆ ಕುತೂಹಲದ ಕಿವಿಯಾಗುತ್ತಿದ್ದೆ, ಚರ್ಚೆಗಳಲ್ಲಿ ಪಾಲೂಗೊಳ್ಳುತ್ತಿದ್ದೆ.
ಆದರೆ ಬರಬರುತ್ತ ಆ ಮಿತ್ರ ಬಳಗವೆಲ್ಲ ಉದ್ಯೋಗ, ಸಂಸಾರ ಜಾಲಗಳಲ್ಲಿ ಕಳೆದುಹೋದರು. ಈಚಿನ ದಿನಗಳಲ್ಲಿ
ಇವುಗಳು ನಡೆಯುತ್ತಿವೆಯೇ, ಇಲ್ಲವೇ, ಇದ್ದರೂ ಪರಿಷ್ಕರಣಗೊಂಡಿವೆಯೇ ಇತ್ಯಾದಿ ಮಾಹಿತಿ ನನ್ನಲ್ಲಿಲ್ಲ.
ಮುದ್ರಣ ಮಾಧ್ಯಮಗಳ ಜಾಹೀರಾತು ಬೇಟೆಯಲ್ಲಿ ಅಕಸ್ಮಾತ್ ರ‍್ಯಾಲೀ ಅಥವಾ ಅದರ ಸೋದರ ಸಂಬಂಧಿಯಾದ ಟ್ರೆಷರ್
ಹಂಟ್ ಕಾಣಿಸಿಕೊಂಡರೂ ಅವು ಪ್ರಾದೇಶಿಕವಾಗಿರುತ್ತವೆ ಮತ್ತು ಅಲ್ಲಿ ನಿಜ ಕ್ರೀಡೆಯ ಉಲ್ಲಾಸ ಕಾಣುತ್ತಿಲ್ಲ!
ಯಂತ್ರ ಸಾರ್ವಭೌಮತೆಯಲ್ಲಿ ಮನುಷ್ಯ ಅಡಗಿ ಇಂದು ಸಾಮರಸ್ಯದ ನಿಜ ರ‍್ಯಾಲಿಗಳೇ ಇಲ್ಲವಾದ್ದಕ್ಕೋ ಏನೋ
ಥ್ರಿಲ್ಲನ್ನು ವಿಡಿಯೋ ಗೇಮುಗಳಲ್ಲಿ ಕಾಣುವಂತಾಗಿರುವುದು ದುರಂತ. ಐದಾರು ವರ್ಷ ಪ್ರಾಯದ ಪುಟ್ಟ ಮಕ್ಕಳು
ಏನಿಲ್ಲದಿದ್ದರೂ ಹಿರಿಯರ ಚರವಾಣಿ ಸೆಟ್ ಹಿಡಿದು ಎಲ್ಲೋ ಸುಖಾಸನದ ಮೇಲೆ ಅಸಡ್ಡಾಳವಾಗಿ ಬಿದ್ದುಕೊಂಡು
“ವ್ರೂಊಊಊಊಊಂ” ಎನ್ನುವಾಗ ಸ್ಪರ್ಧೆ ಸಂ. ೬೪ನ್ನು ಹಿಂಬಾಲಿಸುತ್ತಿದ್ದವನಿಗೆ
ಮುಖಕ್ಕೆ ಗಾಡಿ ದೂಳು ಎರಗಿದ್ದಕ್ಕಿಂತಲೂ ಹೆಚ್ಚಿನ ಆಘಾತವಾಗುತ್ತದೆ.
ತಮ್ಮ ಲೇಖನ ನನ್ನ ಮೊಗಕ್ಕೆ ಗಾಡಿಗಳ ಧೂಳು ಎರಚಿತು. ನಾನು ಇದುವರೆಗೆ ಭಾಗವಹಿಸದ ರ್ಯಾಲಿಗಳ ಉಲ್ಲಾಸ ತಮ್ಮ ಲೇಖನದಲ್ಲಿ ಕಂಡೆ. ಮಂಗಳೂರಲ್ಲಿ ಇದ್ದೂ ತಾವು ಯಾಕೆ ಈ ಸ್ಪರ್ಧೆಗಳಲ್ಲಿ ಭಾಗವಹಿಸಲಿಲ್ಲ. ಯಾಕೆ? - ಎಂಬುದೇ ನನ್ನ ಮುಂದೆ ಇರುವ ಯಕ್ಷ ಪ್ರಶ್ನೆ! ... ಪ್ರೀತಿಯಿಂದ - ಪೆಜತ್ತಾಯ ಎಸ್. ಎಮ್.
ReplyDeleteಪ್ರಿಯ ಪೆಜತ್ತಾಯರೇ ಸ್ಪರ್ಧೆಯಿಲ್ಲದ, ಪ್ರದರ್ಶನವಾಗದ, ವೃತ್ತಿ ಅಲ್ಲದ ಸಾಹಸಗಳಲ್ಲಷ್ಟೇ ಸಣ್ಣದಾಗಿ ತೊಡಗಿಸಿಕೊಂಡವನು ನಾನು. ರ್‍ಯಾಲಿಯಾದರೋ ಸ್ಪರ್ಧೆಯ ಅತಿ ತುರುಸಿನ ಕ್ರೀಡೆ. ಹೆಚ್ಚಿನ ಓದಿಗೆ ಬೇಕಾದರೆ ಈ ಸೇತು ಬಳಸಿ http://www.athreebook.com/2009/07/blog-post_11.html#more
ReplyDeleteರ್ಯಾಲೀ ಮೋಟಾರ್ ಸೈಕಲ್ ಲೇಖನ ನೋಡಿ ಆಶ್ಚರ್ಯವಾಯ್ತು..... ಸಾಹಿತ್ಯದಿಂದ ವಾಹನ ಸವಾರಿಗೆ ಹೋಡ ಲೇಖನ ವಿಶಿಷ್ಟ ಅನುಭವ ಆಯ್ತು ಓದಿ.
ReplyDeleteDear Ashok,
ReplyDeleteVery nice article to introduce motorsports to people. Most people think that motorsports is a rash and dangerous sport. ( walking on the streets in mlore and travelling in those crazy express bus is more dangerous.
Today most younsters are unaware of the yesteryear rallies. They were quite tough, required endurance and more skill. Todays treasure hunt is just a fun game solving questions. But it requires no motoring skills. Although I love treasure hunts, it has never surpassed the thrill of a good rally.
I remember one of the rally which I had participated with Prasanna as my navigator. That was a stage rally which needed a lot of speed and concentration along with accurate navigational skills ( which Prasanna had). It had night stages and we rode like hell in a Yamaha RX -100 ( my brothers bike) We did well. It covered approximately 300 to 400 ms in a 24 hour period with two stages. But our joy knew no bounds when we were declared 2nd Runner up ( 3rd place ) while competing against a lot of veterans.
Now I miss these type of rallies. It is too expensive now and you should have sponsors. And mostly it is a full time profession.
Thanks for bringing back those memories.