26 March 2013

ಗಾಂಧೀ ದರ್ಶನ


ಜಿಟಿನಾರಾಯಣ ರಾಯರ ‘ಮುಗಿಯದ ಪಯಣ ವಿ-ಧಾರಾವಾಹಿಯ ಕಂತು - ನಾಲ್ಕು
ಅಧ್ಯಾಯ ಆರು

ನಾನಿನ್ನೂ ಮಾಧ್ಯಮಿಕ ಶಾಲಾವಿದ್ಯಾರ್ಥಿಯಾಗಿದ್ದಾಗ, ೧೯೪೦ಕ್ಕಿಂತ ಹಿಂದೆ, ಮಹಾತ್ಮ ಗಾಂಧಿ ಮಡಿಕೇರಿಗೆ ಆಗಮಿಸಲಿದ್ದಾರೆಂಬ ಸುದ್ದಿ ಜನಜನಿತವಾಯಿತು. ಕೊಡಗಿನ ಎರಡು ವಾರಪತ್ರಿಕೆಗಳಾದ ‘ಕೊಡಗು’ ಮತ್ತು ‘ಜನ್ಮಭೂಮಿ’ಗಳಲ್ಲಿ ವಿವರಗಳು ಪ್ರಕಟವಾಗುತ್ತಿದ್ದುವು. ನನಗೆಷ್ಟು ಅರ್ಥವಾಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ಮಹಾವ್ಯಕ್ತಿಯೊಬ್ಬ,  ಶ್ರೀಕೃಷ್ಣನಂಥ ಅವತಾರಪುರುಷನೊಬ್ಬ ಮೂರ್ತರೂಪದಲ್ಲಿ ಬರಲಿದ್ದಾನೆಂಬ ಸಂಗತಿ ಆಬಾಲವೃದ್ಧರೆಲ್ಲರಲ್ಲಿಯೂ ಉತ್ಸಾಹದ ಹೊನಲನ್ನು ಹರಿಸಿತ್ತು.

ಅವರು ಬಂದೇ ಬಂದರು. ಆ ಮುಂಜಾನೆ ರಾಜಾಸೀಟಿನ ಮೈದಾನದಲ್ಲಿ ಸೇರಿದ್ದ ಭೂರಿ ಜನಸಂಖ್ಯೆ ನನ್ನಂಥ ಎಳೆಯರಿಗೆ ಕಾವೇರೀ ಜಾತ್ರೆಯ ನೆನಪು ತರುವಂತಿತ್ತು. ಆದರೆ ಎಲ್ಲಿಯೂ ಗಲಭೆ ಗೊಂದಲವಿಲ್ಲ, ಎಲ್ಲವೂ ಅಚ್ಚುಕಟ್ಟು, ಒಂದು ಬಗೆಯ ದಿವ್ಯ ಮೌನ ಸರ್ವವ್ಯಾಪಿಯಾಗಿತ್ತು. ವಿಪುಲ ಸಂಖ್ಯೆಯಲ್ಲಿದ್ದ ಖಾದೀ ಸಮವಸ್ತ್ರಧಾರೀ ಮಹಿಳಾ ಮತ್ತು ಪುರುಷ ಸ್ವಯಂಸೇವಕರು ಸರ್ವತ್ರ ಶಿಸ್ತು ಕಾಯುವಲ್ಲಿ ಮಗ್ನರಾಗಿದ್ದರು. ಹಿಂದೀ ಭಜನೆಗಳನ್ನು ಧ್ವನಿವರ್ಧಕಗಳ ಮೂಲಕ ಪ್ರಸರಿಸುತ್ತಿದ್ದರು. ನಾವು ಮಕ್ಕಳೆಲ್ಲ ವೇದಿಕೆಗೆ ಒತ್ತಾಗಿ ಹುಲ್ಲುಹಾಸಿನಲ್ಲಿ ಕುಳಿತಿದ್ದೆವು.

ನಿರೀಕ್ಷೆ, ಉಲ್ಲಾಸ, ಉತ್ಸಾಹ, ಆನಂದ ಎಲ್ಲವೂ ದಂಡೆಮೀರಿ ಹರಿಯುತ್ತಿದ್ದಂತೆ “ಭೋಲೋ ಭಾರತ್‌ಮಾತಾಕೀ ಜೈ, ಮಹಾತ್ಮಾಗಾಂಧೀಕೀ ಜೈ” ಎಂಬ ಘೋಷಣೆಗಳು ದಿಗ್ದಿಗಂತಗಳಲ್ಲಿ ಅನುರಣಿಸಿದುವು. ಈ ಎಲ್ಲ ರಾಗ ಭಾವಗಳು ಮೈವಡೆದಂತೆ ಅಂಚಿನ ರಸ್ತೆಯಲ್ಲೊಂದು ಕಾರು, ಅದರ ಚಾಲಕ ಅಪ್ಪನ ಸಹಪಾಠಿ ಜಿ.ಎಂ.ಮಂಜನಾಥಯ್ಯ, ಅದರೊಳಗಿಂದ ಇಳಿದವರು ಗಾಂಧೀಜಿ! ತೀರ ಸರಳ ಉಡುಪು, ಆದರೆ ಕಂಗಳಲ್ಲಿ ಅಪೂರ್ವ ಕಾಂತಿ, ಮೊಗದಲ್ಲಿ ವಿಶಿಷ್ಟ ಪ್ರಸನ್ನತೆ, ನಡಿಗೆಯಲ್ಲಿ ವಿಶೇಷ ಲವಲವಿಕೆ -- ಇವರೇ ಗಾಂಧೀಜಿ, ಭಾರತ ಮಾತೆಯ ಕಣ್ಮಣಿ, ದೇಶದ ಆಶೋತ್ತರಗಳ ಗಣಿ ಮತ್ತು ಭವಿಷ್ಯವನ್ನು ರೂಪಿಸುತ್ತಿದ್ದ ಧನಿ! ಈ ಸಾಲುಗಳನ್ನು ಬರೆಯುತ್ತಿರುವಾಗ ಕೂಡ ನನ್ನಲ್ಲಿ ಅದೇ ಮಿಂಚಿನ ಹೊಳೆ ಹರಿಯುತ್ತಿದೆ ಎಂದರೆ ಆಗಿನ ಮೋಡಿ ಹೇಗಿದ್ದಿರಬಹುದು!
[ಅಂದ ಹಾಗೆ ಅಂದು ಇಡೀ ಕೊಡಗಿನಲ್ಲಿ ಕಾರ್ ಇದ್ದವರು ಎರಡೋ ಮೂರೋ ಮಂದಿ ಕಾಪಿ಼ ಪ್ಲಾಂಟರುಗಳು ಮಾತ್ರ. ಕೊಡಗಿನ ಕೊಡುಗೈ ಕರ್ಣ ಎಂದೇ ಪ್ರಖ್ಯಾತರಾಗಿದ್ದ ಮಂಜನಾಥಯ್ಯ ಇವರಲ್ಲೊಬ್ಬರು. ಇವರೇ ಮಹಾತ್ಮ ಗಾಂಧಿಯವರ ಕೊಡಗು ಯಾತ್ರೆ ವೇಳೆ ಅವರಿಗೆ ಸ್ವತಃ ಸಾರಥ್ಯ ಒದಗಿಸಿದ ಹಿರಿಯರು.]
ಮುಂದೆ ನಡೆದ ಭಜನೆ, ಭಾಷಣ, ಜನರು ಸಾಲಾಗಿ ವೇದಿಕೆವರೆಗೆ ನಡೆದು ಗಾಂಧೀಜಿಯವರಿಗೆ ಅರ್ಪಿಸುತ್ತಿದ್ದ ಕಾಣಿಕೆ ಮುಂತಾದವು ಮಕ್ಕಳಲ್ಲಿಯೂ ಹೊಸಹುರುಪು ಬಿತ್ತಿದುವು. ಆ ಚಟುವಟಿಕೆಗಳು ಬುದ್ಧಿಗೆ ಅರ್ಥವಾಗಿರದಿದ್ದರೂ ಹೃದಯಕ್ಕೆ ತಟ್ಟಿದ್ದುವೆಂಬುದು ಸ್ಪಷ್ಟ. ನಾನೂ ಏನಾದರೂ ಕೊಡಬೇಕು ಎಂಬ ಉತ್ಕಟೇಚ್ಛೆ ನನ್ನಲ್ಲಿ ಕೂಡ ಉದ್ಭವಿಸಿತು. ನನ್ನಲ್ಲೇನಿತ್ತು? ಕಿವಿಗಳಲ್ಲಿದ್ದ ಚಿನ್ನದ ವಂಟಿಗಳನ್ನು ಬಿಚ್ಚಲು ಪ್ರಯತ್ನಿಸಿ ಸೋತೆ, ನೋವಾಯಿತು ಮಾತ್ರ. ನನ್ನ ಚಡ್ಡಿಯ ಗುಪ್ತಜೇಬಿನಲ್ಲಿ ಅಡಗಿದ್ದ ಸ್ವಂತ ಸಂಪಾದನೆ ಬೆಳ್ಳಿಯ ಎಂಟಾಣೆ ನಾಣ್ಯ ಆಗ ಚುರುಚುರು ಎಂದಿತು! ಬ್ರಾಹ್ಮಣ ಭೋಜನಗಳಲ್ಲಿ ಸಿಕ್ಕುತ್ತಿದ್ದ ಮೂರು ಕಾಸಿನ ನಾಣ್ಯಗಳ ಮೊತ್ತವದು, ಮರುದಿನ ಬ್ಯಾಂಕಿಗೆ ಕಟ್ಟಬೇಕಾಗಿದ್ದ ಹಣ. ಅದನ್ನು ಹೊರತೆಗೆದೆ, ಸಾಲು ಸೇರಿದೆ, ಗಾಂಧೀಜಿ ಸಮೀಪ ಹೋದೆ, ಅವರ ಪಾದ ಮುಟ್ಟಿ ಆ ನಾಣ್ಯವನ್ನು ಅವರಿಗೆ ಅರ್ಪಿಸಿದೆ, ಅವರು ನನ್ನ ತಲೆ ನೇವರಿಸಿ ಏನೋ ಹೇಳಿದರು, ಕೃತಾರ್ಥನಾಗಿ ಮರಳಿದೆ! ಪುರಂದರದಾಸರ ಸಾಲು ‘ನಾರಾಯಣನೆಂಬೊ ನಾಮವ ಬಿತ್ತಿದ ನಾರದ ಧರೆಯೊಳಗೆ’ ನನ್ನ ಮನದಲ್ಲಿ ಅನುರಣಿಸುತ್ತಿತ್ತು.

ಸಾಹಿತ್ಯವೆನ್ನೊಡಲು
ಅಧ್ಯಾಯ ಏಳು

೧೯೩೨ರ ಕನ್ನಡ ಸಾಹಿತ್ಯ ಸಮ್ಮೇಳನದ ವಾರ್ಷಿಕ ಅಧಿವೇಶನವನ್ನು ನಮ್ಮ ಶಾಲೆಯ ವಿಶಾಲ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಆಗ ೬ ವರ್ಷದ ಹುಡುಗನಾಗಿದ್ದ ನಾನು ಆ ಜನಜಾತ್ರೆ, ಬಗೆಬಗೆಯ ಪ್ರದರ್ಶನಗಳು, ವಿವಿಧ ವಿನೋದಾವಳಿಗಳು ಮುಂತಾದವುಗಳಲ್ಲಿ ಮಗ್ನನಾಗಿದ್ದುದರ ನೆನಪುಂಟು. ಡಿ.ವಿ.ಗುಂಡಪ್ಪನವರು ಸಮ್ಮೇಳನಾಧ್ಯಕ್ಷರೆಂದು ತಿಳಿದೆ. ಭಾಷಣಗಳಾವುವೂ ನನಗೆ ಅರ್ಥವಾಗಲಿಲ್ಲ, ಅವನ್ನು ಆಲಿಸುವ ವ್ಯವಧಾನವೂ ಇರಲಿಲ್ಲ. ಆದರೆ ಆ ಸಮ್ಮೇಳನದಲ್ಲಿ ಕಿಶೋರಚಂದ್ರವಾಣಿ ಎಂಬ ಕಾವ್ಯನಾಮದ ಯುವ ತೇಜಸ್ವೀ ಕವಿ ಕೆ.ವಿ.ಪುಟ್ಟಪ್ಪನವರು (ತರುವಾಯದ ದಿನಗಳಲ್ಲಿ ಕುವೆಂಪು ಎಂದೇ ಪ್ರಸಿದ್ಧರು) ಮೊಳಗಿದ ಕಾವ್ಯಪಾಂಚಜನ್ಯ, ಕೆ.ವಿ.ಅಯ್ಯರ್ ಪ್ರದರ್ಶಿಸಿದ ಯೋಗಾಸನಗಳು ಮತ್ತು ಬಿ.ಎಂ.ಶ್ರೀಕಂಠಯ್ಯನವರು ಬಿತ್ತಿದ ಕನ್ನಡ ಮಂತ್ರ ನನ್ನ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರಿ ನನಗೆ ಹೊಸ ದೃಷ್ಟಿಯನ್ನೇ ಕೊಟ್ಟುವು. ‘ಕನ್ನಡಕುವರ’ ಎಂಬ ಕಾವ್ಯನಾಮ ಧರಿಸಿ ಕವನ, ಕತೆ, ಪ್ರಬಂಧ ಮುಂತಾದವನ್ನು ಗೀಚುವುದು ಅಥವಾ ಹೊಸೆಯುವುದು, ಜೊತೆಗೆ ನನ್ನಷ್ಟಕ್ಕೆ ಪುಸ್ತಕ ನೋಡಿ ಯೋಗಾಸನ ಹಾಕುವುದು ನನ್ನ ಪ್ರಿಯ ಹವ್ಯಾಸಗಳಾದುವು. ಇಲ್ಲೆಲ್ಲ ಚಿಕ್ಕಪ್ಪ ನನಗೆ ಒಲವಿನ ಮಾರ್ಗದರ್ಶಿ, ಚಿಕ್ಕಮ್ಮ ಪ್ರಥಮ ಶ್ರೋತೃ. ನನ್ನ ಹುಚ್ಚಾಟಗಳೆಲ್ಲವೂ ಅವರಿಗೆ ಪ್ರಿಯವಾಗುತ್ತಿದ್ದುವೆನ್ನುವುದನ್ನು ಗಮನಿಸುವಾಗ ಅವರ ಹೃದಯವಂತಿಕೆಗೆ ಶಿರಬಾಗುತ್ತೇನೆ.

ಆ ಸಮ್ಮೇಳನದ ಸಂದರ್ಭದಲ್ಲಿ  ಡಿವಿಜಿಯವರು ಬರೆದ ಕಂದಪದ್ಯವಿದು:
ಗಿರಿಗಳ ಕಂದರಗಳ ನಿ-
ರ್ಝರಗಳ ವಿಪಿನಗಳ ವಕ್ರಪಥಗಳದರ ಸುಂ-
ದರ ಶಮಕರ ರೂಪಂಗಳ-
ನರಿವೊಡೆ ನೀಂನಡೆದು ನೋಡು ಕೊಡಗಿನ ಬೆಡಗಂ
ಇದನ್ನು ಕೇಳಿದ ಶಿವರಾಮ ಕಾರಂತರು ಒಡನೆ ಸಿಡಿಸಿದ ಚಟಾಕಿ: “ಒಡೆದು ನೋಡು ನೀಂ ಕೊಡಗಿನ ಕಡುಬಂ.” ಎರಡೂ ನಿಜ. ಬಾಳೆ ಎಲೆಯ ಸುರುಳಿ ಕೊಳವೆಗೆ ಹದಹುಳಿ ಬಂದ ಹಿಟ್ಟನ್ನು ಹೊಯ್ದು ಹಬೆಯಲ್ಲಿ ಬೇಯಿಸಿ ಬಡಿಸುತ್ತಿದ್ದ ಕೊಟ್ಟೆಕಡುಬಿನ ಒಂದೊಂದು ತುಣುಕೂ ಸಾಕ್ಷಾತ್ ಭೀಮನ ಗದೆಯೇ. ಇನ್ನು ಇದಕ್ಕೆ ಆಗ ತಾನೇ ಕಡೆದ ಮೊಸರಿನಿಂದ ಕಲೆಹಾಕಿದ ಘಮಘಮಿಸುವ ಮೃದು ಬೆಣ್ಣೆಯ ಮುದ್ದೆಯನ್ನು ಹಾಕಿ ಸುತ್ತಲೂ ಕೊಡಗಿನ ಜೇನಿನ ಸಮೃದ್ಧ ಅಭಿಷೇಕ ಮಾಡಿ “ಅನ್ನಬ್ರಹ್ಮದ ದೇಗುಲದೊಳಗಡೆ ಹಗಲೂ ಇರುಳೂ ಚಿಟಿಪಿಟಿಗುಟ್ಟುವ ಬೆಂಕಿ”ಗೆ ಅರ್ಪಿಸಿ ಪೂರ್ಣಾಹುತಿಗೈದಾಗ ಲಭಿಸುವ ತೃಪ್ತಿ ವರ್ಣನಾತೀತ. ಸ್ವರ್ಗದೊಳುಂಟೇ ಆ ಸುಖ?

ಸಮ್ಮೇಳನದ ಅಂಗ ಅಥವಾ ಫಲಶ್ರುತಿಯಾಗಿ ಮಡಿಕೇರಿಯಲ್ಲಿ ಕೊಡಗು ಕರ್ನಾಟಕ ಸಂಘ ಅಸ್ತಿತ್ವಕ್ಕೆ ಬಂದಿತ್ತು. ನನ್ನ ತಂದೆಯ ಸಹಪಾಠಿ ಮತ್ತು ಗಮಕಿ ಮೈ.ಶೇ.ಅನಂತಪದ್ಮನಾಭರಾಯರು ಇದರ ಗೌರವ ಕಾರ್ಯದರ್ಶಿಯಾಗಿ ತಮ್ಮ (ಬಾಡಿಗೆ) ಮನೆಯ ಉಪ್ಪರಿಗೆಯಲ್ಲಿ ಸಂಘದ ಗ್ರಂಥಾಲಯವನ್ನು ತೆರೆದಿದ್ದರು. ಈ ತೆರನಾಗಿ ಆಧುನಿಕ ಕನ್ನಡ ವಾಙ್ಮಯದ ವಸಂತ ಋತು ಅಂದು ನಮ್ಮೂರಿನಲ್ಲಿಯೂ ತನ್ನ ಸುಗಂಧ ಪಸರಿಸತೊಡಗಿತು.

ಅರ್ಥವಾಯಿತೋ ಇಲ್ಲವೋ ಅಂತೂ ದಿನಕ್ಕೊಂದು ಪುಸ್ತಕವನ್ನು ಈ ಗ್ರಂಥಾಲಯದಿಂದ ಎರವಲು ತಂದು ಓದಿ ಟಿಪ್ಪಣಿ ಬರೆದು ಮರುದಿನ ಹೊಸ ಪುಸ್ತಕಕ್ಕೆ ಬೇಡಿಕೆ ಸಲ್ಲಿಸುತ್ತಿದ್ದೆ. ಇವೆಲ್ಲ ಬದಲಾವಣೆಗಳು ನನ್ನಲ್ಲಿ ನುಸುಳುತ್ತಿದ್ದಾಗ ನಾನು ಪ್ರಾಥಮಿಕದಿಂದ ಮಾಧ್ಯಮಿಕ ತರಗತಿಗಳಿಗೆ ಬಡ್ತಿ ಪಡೆದಿದ್ದೆ, ತರಗತಿಯಲ್ಲಿ ರ‍್ಯಾಂಕ್ ವಿದ್ಯಾರ್ಥಿ ಎನಿಸಿಕೊಂಡಿದ್ದೆ. ಹುಡುಗಾಟ ಮಾಸಿ ಒಂದು ಬಗೆಯ ಗಾಂಭೀರ್ಯವೋ ಗತ್ತೋ ನನ್ನನ್ನು ಆವರಿಸಿತ್ತು. ಕನ್ನಡಕುವರನ ಪದ್ಯಗಳು ಸ್ಥಳೀಯ ‘ಕೊಡಗು’ ಮತ್ತು ‘ಜನ್ಮಭೂಮಿ’ ಎಂಬ ವಾರಪತ್ರಿಕೆಗಳಲ್ಲಿಯೂ ‘ವೈಚಾರಿಕ’ ಲೇಖನಗಳು ‘ಕೊಡಗು ಸಹಕಾರ ಬಂಧು’ ಮಾಸಪತ್ರಿಕೆಯಲ್ಲಿಯೂ ಬೆಳಕು ಕಾಣುತ್ತಿದ್ದುವು! ನಾನೊಬ್ಬ ಬಾಲಕವಿ (ಬಾಲರಹಿತ ಕಪಿ) ಆಗಿದ್ದೆ.

ಪದ್ಯಗಳೆಲ್ಲವೂ ಪುಟ್ಟಪ್ಪನವರ ಅನುಕರಣೆಗಳು, ವೈಚಾರಿಕ ಲೇಖನಗಳು ಬಹುತೇಕ ಬಿ.ಎಂ.ಶ್ರೀಕಂಠಯ್ಯ, ಡಿ.ವಿ.ಗುಂಡಪ್ಪ ಮತ್ತು ಎ.ಆರ್.ಕೃಷ್ಣಶಾಸ್ತ್ರಿಯವರ ಕೃತಿಗಳಿಂದಲೂ ಹುಬ್ಬಳ್ಳಿಯ ‘ಸಂಯುಕ್ತ ಕರ್ನಾಟಕ’ ದೈನಿಕದ ಲೇಖನಗಳಿಂದಲೂ ಪ್ರಭಾವಿತವಾದವು. ಹಾವೇರಿಯ ಶ್ರೀ ಶೇಷಾಚಲ ಗ್ರಂಥಮಾಲೆಯ ಪತ್ತೇದಾರಿ, ಐತಿಹಾಸಿಕ ಮತ್ತು ಪೌರಾಣಿಕ ಕಾದಂಬರಿಗಳು, ಕೊಡಗಿನ ಮಾಸಪತ್ರಿಕೆ ‘ಲೋಕರಹಸ್ಯದ’ ಅದ್ಭುತ ಲೇಖನಗಳು, ಧಾರವಾಡದ ಮನೋಹರ ಗ್ರಂಥಮಾಲೆ, ಮಿಂಚಿನಬಳ್ಳಿ ಮುಂತಾದ ಸಂಸ್ಥೆಗಳು ಪ್ರಕಟಿಸುತ್ತಿದ್ದ ಉದ್ಗ್ರಂಥಗಳು ಮುಂತಾದವು ನನ್ನ ಸಾಹಿತ್ಯ ತೃಷೆ ಹಿಂಗಿಸಲು ಪುಕ್ಕಟೆ ಲಭಿಸುತ್ತಿದ್ದ ಅಮೃತ ಕುಂಭಗಳು. 

ಅಪ್ಪ ಮತ್ತು ಚಿಕ್ಕಪ್ಪ ಸಹಕಾರ ಇಲಾಖೆಯಲ್ಲಿ ನೌಕರರಾಗಿದ್ದರಷ್ಟೆ. ಅವರು ಸಹಕಾರ ಸಂಘಗಳ ಸ್ಥಾಪನೆ, ಲೆಕ್ಕಪರಿಶೋಧನೆ, ಮಹಾಸಭೆ ಮುಂತಾದ ಕ್ಷೇತ್ರಕಾರ್ಯಗಳಲ್ಲಿ ಸದಾ ನಿರತರಾಗಿರುತ್ತಿದ್ದರು. ಅಲ್ಲದೇ ಕೊಡಗಿನ ಬೇರೆ ಬೇರೆ ಮೂಲೆಗಳಲ್ಲಿ (ಉದಾಹರಣೆಗೆ ಸೋಮವಾರಪೇಟೆ, ಕಾರುಗುಂದ, ಪೊನ್ನಂಪೇಟೆ ಇತ್ಯಾದಿ) ಬಿಡಾರ ಹೂಡಿ ತಮ್ಮ ಕೆಲಸ ಮಾಡಬೇಕಾಗುತ್ತಿತ್ತು. ವಾರಗಟ್ಟಲೆ ತಂದೆ ಮೂರ್ನಾಡು, ನಾಪೋಕ್ಲು, ಸಂಪಾಜೆ ಮುಂತಾದ ಹಳ್ಳಿಗಳಲ್ಲಿ ಮೊಕ್ಕಾಂ ಹೂಡಿ ಲೆಕ್ಕ ಪರಿಶೋಧನೆ ಮಾಡುವುದಿತ್ತು. ಅಂಥ ಸಂದರ್ಭಗಳಲ್ಲಿ ಅವರು ಸ್ವಯಂಪಾಕಸಂತೃಪ್ತರಾಗಿರುತ್ತಿದ್ದರು. ತೊಂದರೆ ಉಂಟಾಗುತ್ತಿದ್ದುದು ಶಾಲೆಗೆ ರಜೆ ದೊರೆತಾಗ ನಾನೂ ಅವರ ಜೊತೆ ಸೇರಿ ಕಡ್ಡಾಯವಾಗಿ ಈ ಸ್ವಯಂಪಾತಕದ ಶಿಕ್ಷೆ ಅನುಭವಿಸಲೇಬೇಕಾಗಿ ಬಂದಾಗ! ಅಯಾಚಿತವಾಗಿ ನಾನೂ ಲೆಕ್ಕಪರಿಶೋಧನೆಯಲ್ಲಿ ಪರಿಣತಿ ಗಳಿಸಿದೆ. ಪ್ರಾಥಮಿಕ ಗಣಿತದ ಸಂಕಲನ, ವ್ಯವಕಲನಾದಿ ಮೂಲ ಪರಿಕರ್ಮಗಳೆಲ್ಲದರಲ್ಲಿಯೂ ಲೀಲಾಜಾಲವಾಗಿ ಅಪ್ಪನನ್ನು ಸೋಲಿಸುತ್ತಿದ್ದೆ. ಫಲಿತಾಂಶ? ಹೆಚ್ಚಿನ ಭಾರ ಹೊರುವ ಹೊಣೆ. ನನಗಾದರೂ ಇದು ಖುಷಿ ಕೊಡುತ್ತಿತ್ತು. ಸಭೆಗಳಲ್ಲಿಯ ಅಟಾಟೋಪಗಳು, ಕನ್ನಡದ ಕೊಲೆ, ಸಹಕಾರ ತತ್ವದ ಹನನ ಎಲ್ಲವೂ ನನ್ನ ಹಾಸ್ಯ ಪ್ರಜ್ಞೆಗೆ ಸಮೃದ್ಧ ಗ್ರಾಸ ಒದಗಿಸುತ್ತಿದ್ದುವು.

ಕೊಡಗಿನ ಹಿರಿಮೆಯನ್ನು ಪಂಜೆಯವರು ಕಂಡು, ಕೇಳಿ, ಸವಿದು ಬರೆದ ‘ಹುತ್ತರಿ ಹಾಡು’ ನಮಗೆಲ್ಲರಿಗೂ ಅತ್ಯಂತ ಆಪ್ಯಾಯಮಾನವಾಗಿತ್ತು. ಕೊಡಗು ಹೇಗಿತ್ತು?
ಬೊಮ್ಮಗಿರಿಯಿಂ ಪುಷ್ಪಗಿರಿ ಪರ್ಯಂತ ಬೆಳೆದೀ ದೇಶವು
ಧರ್ಮ ದಾನದ ಕಟ್ಟುಕಟ್ಟಳೆ ರೀತಿ ನೀತಿಯ ಕೋಶವು
ಇದನ್ನು ಪೂರ್ಣ - ಆಕುಟ್ಟಕೊಡ್ಲೀಪೇಟೆ (ಆಸೇತುಹಿಮಾಚಲವೆಂಬಂತೆ) - ನೋಡುವ, ಅಲ್ಲಿಯ ಬೇರೆ ಬೇರೆ ಬೆಟ್ಟಗಳನ್ನು ಏರುವ, ಹಲವಾರು ಹೊಳೆ ತೊರೆಗಳಲ್ಲಿ ಜಳಕವಾಡುವ ಸುಯೋಗ ತಂದೆ ಚಿಕ್ಕಪ್ಪಂದಿರ ಜೊತೆ ನನಗೆ ಒದಗಿತು. ಫಲವಾಗಿ ಸಹಕಾರ ಕುರಿತ ಪ್ರಬಂಧಗಳನ್ನು ಬರೆದೆ, ಕತೆಗಳನ್ನು ಹೊಸೆದೆ, ಪದ್ಯಗಳನ್ನು ಗೀಚಿದೆ.

ಮೈಶೇಯವರಿಗೆ ನನ್ನ ಬಗ್ಗೆ ಅತಿಶಯ ಅಭಿಮಾನ ಮತ್ತು ಪ್ರೀತಿ. ಒಮ್ಮೆ ಅವರು ನನ್ನನ್ನು ವಿರಾಜಪೇಟೆಗೆ ಕರೆದೊಯ್ದು ಅಲ್ಲಿಯ ವಿದ್ಯಾರ್ಥಿ ಕವನಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದರು. ನನಗೆ ಪ್ರಥಮ ಬಹುಮಾನವೇ ಬಂತು ನಿಜ. ಆದರೆ ಮೈಶೇಯವರಿಂದ ಮೆಚ್ಚುನುಡಿ ಬರಲಿಲ್ಲ, “ನೋಡಯ್ಯ ಸುಮ್ಮನೆ ಹಳೆಗನ್ನಡದಲ್ಲಿ ವಾಕ್ಯಗಳನ್ನು ನೇಯ್ದರೆ ಆ ಗುಂಪು ಪದ್ಯವಾಗದು. ಮೊದಲು ಛಂದಸ್ಸು ಕಲಿ, ಈ ದೃಷ್ಟಿಯಿಂದ ಕನ್ನಡದ ಪ್ರಾಚೀನ ಕಾವ್ಯ ಮತ್ತು ಆಧುನಿಕ ಕವನಗಳನ್ನು ಅಭ್ಯಸಿಸು. ಜೊತೆಯಲ್ಲೇ ಪ್ರಕೃತಿಲೀನನಾಗಿ ಭಾವೋತ್ಸಾಹಗಳನ್ನೂ ಸಾಮಾಜಿಕ ಆಗುಹೋಗುಗಳನ್ನು ಚಿಕಿತ್ಸಕವಾಗಿ ಗಮನಿಸುತ್ತ ರುಚಿಶುದ್ಧಿಯನ್ನೂ ಗಳಿಸು. ಆಗ ತಂತಾನೇ ನಿನ್ನ ಶೈಲಿ, ಪದ್ಯದಲ್ಲಾಗಲೀ ಗದ್ಯದಲ್ಲಾಗಲೀ, ವರ್ಧಿಸುತ್ತದೆ” ಎಂದು ಬೋಧಿಸಿ ನಾಗವರ್ಮನ ‘ಛಂದೋಂಬುಧಿ’ ಪುಸ್ತಕವನ್ನು ಓದಲು ಕೊಟ್ಟರು, ಮತ್ತು ಪ್ರಸ್ತಾರ ಹಾಕುವ ವಿಧಿಯನ್ನು ತೋರಿಸಿಯೂ ಕೊಟ್ಟರು. ಲಯದ ವರಿಸೆ ಮೋಡಿಗಳು ಹೇಗೂ ನನ್ನಲ್ಲೇ ನಿಹಿತವಾಗಿದ್ದುದರಿಂದ ಛಂದಶ್ಶಾಸ್ತ್ರಾಧ್ಯಯನ ಕಠಿಣವೆನಿಸಲಿಲ್ಲ.

ಕೆಲವು ಪ್ರಕಟಿತ ಉದಾಹರಣೆಗಳು:   
      ತತಂ ಎಂತಹ ಕಷ್ಟಮಿರ್ದರು ಪರಮ
      ರುಷವನೀವ ತತ್ವವದು
      ಕಾಮಧೇನು ಕಾಮಿಸಿದನೀವಂತೆ ಸಹಕಾ
      ತತ್ವವೀವುದು ಕಾಮಿಸಿದನು ಜನರ್ಗೆ!

ಇದೊಂದು ಪ್ರಥಮಾಕ್ಷರ ಚಮತ್ಕಾರ (ಸಹಕಾರ ಕುರಿತು). ಆದರೆ ಛಂದಸ್ಸು ಮಾತ್ರ ಗೋಟಾಳೆ!
ನಾಡಹಬ್ಬ ‘ಹುತ್ತರಿ’ ಕುರಿತು ಬರೆದ ಛಂದಸ್ಸಹಿತ ಕವನ:

      ಮಳೆರಾಣಿ ಸಾಗಿದಳು ತಾಯಮನೆ ಕಡೆ ಭರದಿ
      ಸುಳಿಗಾಳಿ, ಚಳಿಗಾಲಿ ಬೀಸಿದುವು, ಸಲೆ, ಮುದದಿ
      ಚಲಿಸಿದುವು ಪಕ್ಷಿಗಳು, ಚಂಡಾಂಶು ಹರ್ಷದಲಿ
      ಕೆಲತೆರದಿ ಧರಣಿಯಲಿ ತೋಷದಲಿ
      ಕಳೆಗೊಂಡ ಪೈರುಗಳು ಹೊಂಬಣ್ಣ ತಾಳಿದುವು
      ಕೆಳೆಯಾಯ್ತು ಸೂರ್ಯನಿಗೆ ಪವನನಿಗೆ

ಇನ್ನೊಂದು ನಾಡಹಬ್ಬ ‘ಕೈಲ್‌ಪೋದು’ ಅಥವಾ ‘ಕೈದುಪೊಳದು’ ಕುರಿತ ಕೆಲವು ಸಾಲುಗಳು:

      ಬನ್ನಿ ಗೆಳೆಯರೆ ಬನ್ನಿ ಚಿಣ್ಣರೆ ಕೈದುಪೊಳದಿನ ಹಬ್ಬಕೆ
      ಮುನ್ನ ಹಿರಿಯರು ಮಾಡಿ ನೆಲೆಸಿಹ ಕೊಡಗು ದೇಶದ ಕಬ್ಬಕೆ
      ಬೇಗ ಬನ್ನಿರಿ ಗೆಳೆಯರೆ
      ಸಾಗಿ ಬನ್ನಿರಿ ಬಾಲರೆ!

‘ಗಾಂಧೀ ಜನನ’ದ ಬಗ್ಗೆ (ಕಂದ ಪದ್ಯ):

      ಗಾಂಧಿಯ ಜನನದ ಕಥೆಯಂ
      ಮಂದಿಗೆ ತಿಳಿಸಲಗಜೆಸುತನಂ ನೆನೆವೆಂ ನಾಂ
      ಬಾಂಧವರು ಬಾಲ ರಚಿಸಿದು-
      ದೆಂದಿಂದು ತೊರೆಯುತ ತಪ್ಪ ತಿಳಿದೋದುವುದೈ

ಪ್ರೌಢಶಾಲೆ ಬಿಡುವ ವೇಳೆಗೆ (೧೯೪೨) ನಾನು ಕವಿಯಲ್ಲವೆಂಬ ಪ್ರಥಮ ಭ್ರಮನಿರಸನ ನನಗಾಯ್ತು. ಅಲ್ಲಿಗೆ ಕನ್ನಡ ಕವನ ಪ್ರಪಂಚ ಅಷ್ಟರ ಮಟ್ಟಿಗೆ ಪದಮಾಲಿನ್ಯರಹಿತವಾಯಿತು!

ಗುರುವಿನ ಗುಲಾಮನಾಗುವ ತನಕ
ಅಧ್ಯಾಯ ಎಂಟು

ಮಾಧ್ಯಮಿಕ ಶಾಲೆಯ ಕೊನೆ ವರ್ಷ, ೧೯೩೮-೩೯, ಇಡೀ ಕೊಡಗಿಗೆ ಸಾಮಾನ್ಯವಾಗಿದ್ದ ಪಬ್ಲಿಕ್ ಪರೀಕ್ಷೆ ಬರೆದೆ. ಆ ಬೇಸಗೆ ರಜೆಯಲ್ಲಿ ಅಪ್ಪ ಕೊಡಗು ಜಿಲ್ಲಾ ಶಿಕ್ಷಣಾಧಿಕಾರಿ ಸಿ.ಎಂ.ರಾಮರಾಯರನ್ನು ಯಾವುದೋ ಸಂದರ್ಭದಲ್ಲಿ ಭೇಟಿಯಾದರಂತೆ. ಅವರು ಅಪ್ಪನ ಗುರುಗಳಾಗಿದ್ದವರು, ನಮ್ಮ ನೆಂಟರು ಕೂಡ. ಸದಾ ಮೌನಿ ಮತ್ತು ಕಟ್ಟುನಿಟ್ಟಿನ ಈ ಹಿರಿಯ ಅಧಿಕಾರಿ ಅಂದು ತೀರ ಅನಿರೀಕ್ಷಿತವಾಗಿ ಹಸನ್ಮುಖಿಗಳಾಗಿ ನುಡಿದರಂತೆ, “ತಿಮ್ಮಪ್ಪಯ್ಯ! ನಿನ್ನ ಮಗ ಲೋವರ್ ಸೆಕಂಡರಿಯಲ್ಲಿ ಇಡೀ ಜಿಲ್ಲೆಗೇ ಪ್ರಥಮ ಸ್ಥಾನ ಗಳಿಸಿದ್ದಾನೆ, ಕಣೋ! ಚೆನ್ನಾಗಿ ಓದಿ ಮುಂದೆ ಬರಲಿ.”

ಹೀಗೆ ತುಸು ಜಂಬಸಹಿತ ನಾನು ಪ್ರೌಢಶಾಲೆಯ ಮೆಟ್ಟಲು ಹತ್ತಿದೆ (೧೯೩೯). ಅಲ್ಲಿ ನನ್ನ ಭವಿಷ್ಯವನ್ನು ಕಂಡರಿಸಿದ ಗುರುಗಳ ಪೈಕಿ ಹೆಸರಿಸಲೇಬೇಕಾದವರು ಜಿ.ಎಸ್.ಕೇಶವಾಚಾರ್ಯ, ಎ.ಪಿ.ಶ್ರೀನಿವಾಸರಾವ್, ಆರ್.ಹರಿಶೆಣೈ, ಪಿ.ಸಿ.ಉತ್ತಯ್ಯ ಮತ್ತು ಜೆ.ಗಣೇಶರಾವ್. ನನಗೆ ಜಿಎಸ್‌ಕೆ ಕನ್ನಡವನ್ನೂ ಎಪಿಎಸ್ ವಿಜ್ಞಾನವನ್ನೂ ಆರ್‌ಎಚ್‌ಎಸ್ ಗಣಿತವನ್ನೂ ಪಿಸಿಯು ಇಂಗ್ಲಿಷನ್ನೂ ಜೆಜಿಆರ್ ಜೀವನದೃಷ್ಟಿಯನ್ನೂ ತಮ್ಮ ನಡೆನುಡಿಬಗೆಗಳಿಂದ ಬೋಧಿಸಿದ ಮಹಾಪುರುಷರು. ಅವರುಗಳಿಗಿದ್ದ ವೃತ್ತಿನಿಷ್ಠೆ, ಜ್ಞಾನತೃಷೆ, ಬೋಧನಕೌಶಲ, ವಿದ್ಯಾರ್ಥಿಪ್ರೇಮ ಮತ್ತು ನಿಃಸ್ವಾರ್ಥಭಾವ ಅನನ್ಯ. ಇಂದಿಗೂ ನನ್ನ ಹಂಬಲ ಎಂದಾದರೂ ನಾನು ಆ ಮಹಾತ್ಮರುಗಳ ಎತ್ತರ ಬಿತ್ತರ ಸಾಧಿಸಲು ಸಾದ್ಯವಾದೀತೇ?

ಒಮ್ಮೆ ಜಿಎಸ್‌ಕೆಯವರೊಡನೆ ವಿನಾಕಾರಣ ‘ಕಾಳೆಗ’ಕ್ಕಿಳಿದೆ! ಕನ್ನಡದಲ್ಲಿ ಸ್ಟ್ರಾಂಗ್ ಮತ್ತು ಒಬ್ಬ ಕವಿ ಎಂದು ಬೀಗುತ್ತಿದ್ದ ನಾನು ಪ್ರಬಂಧ ಬರೆಯುವಾಗ ಆದಷ್ಟು ಕ್ಲಿಷ್ಟ ಪದಗಳನ್ನೂ ಕಠಿಣಸಮಾಸಗಳನ್ನೂ ಬಳಸಿದೆ, ವಿಚಿತ್ರ ಅಕ್ಷರಸಂಯೋಜನೆಗಳನ್ನು ಪ್ರಯೋಗಿಸಿದೆ: ಕಾನ್ತಾರಾನ್ತರದಲ್ಲಿ ಪ್ರಕಾಶಶೂನ್ಯ, ಸುಙ್ಕ, ಸುಪ್ತಸಾಮರ‍್ಥ್ಯ, ದುರ‍್ಯೋಧನ ಇತ್ಯಾದಿ. ಇಡೀ ಪ್ರಬಂಧವನ್ನು ತಿದ್ದಿ ಮರುಬರೆದು ಜಿಎಸ್‌ಕೆ ಹಿತೋಕ್ತಿ ಹೇಳಿದರು, “ಪದಗಳ ಅಬ್ಬರದಲ್ಲಿ ವಿಷಯ ಮಸಳಿದೆ. ಸರಳವಾಗಿ ಬರೆಯಬೇಕು. ಇನ್ನು ಅನ್ತರ, ಸುಙ್ಕ ಮುಂತಾದ ವಿಚಿತ್ರ ವಿಕೃತ ರೂಪಗಳು ಬೇಡ, ಇವನ್ನು ಅಂತರ, ಸುಂಕ ಎಂದೇ ಬರೆಯಬೇಕು. ತಿದ್ದಿದ ಈ ಪ್ರಬಂಧವನ್ನು ಮರುಬರೆದು ನಾಳೆ ತೋರಿಸು.”

ಹದಿಹರೆಯದ ಏರು, ಮೀಸೆ ಬರುವಾಗ ದೇಶ ಕಾಣದೆಂಬ ಬೀಗು ಮತ್ತು ಸಹಪಾಠಿಗಳ ಎದುರು ಆದ ಮುಖಭಂಗ ಮುಪ್ಪುರಿಗೊಂಡು ನಾನು ಗುರುಗಳ ಎದುರು ಮಲೆತೆ, “ನಾನೇನೂ ತಪ್ಪು ಮಾಡಿಲ್ಲವಾದ್ದರಿಂದ ಈ ಇಂಪೊಸಿಷನ್ (ಮರುಬರವಣಿಗೆ) ಮಾಡಲಾರೆ” ಎಂದೇ ಬಿಟ್ಟೆ. “ಹಾಗಾದರೆ ನನ್ನ ತರಗತಿಗೆ ನೀನು ಪ್ರವೇಶಿಸತಕ್ಕದ್ದಲ್ಲ, ಹೊರಟು ಹೋಗು” ಎನ್ನಬೇಕೇ ಆ ಮೂವತ್ತರ ಜವ್ವನಿಗರು! ಕ್ಲಾಸಿನಿಂದ ಹೊರ ಹೋದೆ, ಒಂದು ವಾರ ಚಡಪಡಿಸಿದೆ, ಶಾಲೆಯಲ್ಲಿ ಇದೊಂದು ದೊಡ್ಡ ಗುಲ್ಲಾಯಿತು. ಆ ಮುಂಜಾನೆ ಖುದ್ದು ಜಿಎಸ್‌ಕೆ ನಮ್ಮ ಮನೆಗೇ ಬಂದರು, ನನ್ನ ಕೈಯಿಂದಲೇ ಕಾಪಿ಼ ಪಡೆದು ಕುಡಿಯುತ್ತ, “ಏಕೆ ಈ ಮೊಂಡುತನ? ನೀನು ನನ್ನ ಹೆಮ್ಮೆಯ ವಿದ್ಯಾರ್ಥಿಯಲ್ಲವೇ? ಇಂದಿನಿಂದ ತರಗತಿಗೆ ಬಾ, ಜ್ಞಾನಶಿಖರವೇರಲು ಮೊದಲ ಆವಶ್ಯಕತೆ ವಿನಯ” ಎಂಬ ಬುದ್ಧಿವಾದ ಹೇಳಿದರು. ನನ್ನ ಹೃದಯ ತುಂಬಿ ಕಣ್ಣುಗಳಲ್ಲಿ ನೀರು ಮೊಗೆಯಿತು. ಅನೇಕ ವರ್ಷಗಳ ತರುವಾಯ ಈ ಪರಶುರಾಮ-ಭೀಷ್ಮ ವಾಗ್ಯುದ್ಧ ನೆನೆದು ನಾವಿಬ್ಬರೂ ಪೊಗದಸ್ತಾಗಿ ನಕ್ಕದ್ದುಂಟು.

ಎಪಿಎಸ್ ಪ್ರಯೋಗಸಹಿತ ಕಲಿಸಿದ ವಿಜ್ಞಾನ, ಆರ್‌ಎಚ್‌ಎಸ್ ಗಣಿತ ಸಮಸ್ಯೆಗಳಿಗೆ ಕೊಟ್ಟ ಒಳನೋಟ, ಪಿಸಿಯು ಅಭಿನಯಪೂರ್ವಕ ಬೋಧಿಸಿದ ಶೇಕ್‌ಸ್ಪಿಯರ್ ನಾಟಕ, ಜೆಜಿಆರ್‌ಅವರ ಪಾಠಪ್ರವಚನ, ಆಟೋಟ ಮತ್ತು ಉಡುಪುತೊಡಪುಗಳಲ್ಲಿ ತೀರ ಸಹಜವಾಗಿ ಎದ್ದು ಮಿನುಗುತ್ತಿದ್ದ ಸುಟಿತನ ಅನ್ಯಾದೃಶವಾಗಿದ್ದುವು -- ನಮಗೆಲ್ಲ role model ಆಗಿದ್ದುವು.

ನಮ್ಮ ಡ್ರಿಲ್ ಮಾಸ್ಟರ್ ಬಿದ್ದಯ್ಯನವರದು ಬೇರೆಯೇ ವ್ಯಕ್ತಿತ್ವ, ಬಿಡಾರ ಮತ್ತು ಶಿಸ್ತು. ಅವರು ಒಂದನೆಯ ಮಹಾಯುದ್ಧದಲ್ಲಿ ಕಾದಾಡಿದ ವೀರರಂತೆ, ಅಪ್ಪನಿಗೂ ಮೇಷ್ಟ್ರಾಗಿದ್ದವರು, ಬ್ರಹ್ಮಚಾರಿ, ಪ್ರಾಥಮಿಕ ಶಾಲೆಯ ಮೂಲೆ ಕೊಠಡಿಗಳೆರಡರಲ್ಲಿ ಅವರ ವಾಸ, ಹತ್ತಿರವೇ ಇದ್ದ ಬೋರ್ಡಿಂಗ್ ಹೌಸ್‌ನಲ್ಲಿ ಆಹಾರ, ದೊಡ್ಡ ಆಳು, ಕಡುಕಠಿಣ ಮುಖಭಾವ, ಜೊತೆಗೊಂದು ಅಲ್ಸೇಷನ್ ನಾಯಿ. ನಡಿಗೆ ಅಪ್ಪಟ ಮಿಲಿಟರಿ. ಮಾತಿನಲ್ಲಿ ಪ್ರತಿ ನಾಲ್ಕನೆಯ ಪದ ಬ್ಲಡಿ ಅಥವಾ ಬಾಸ್ಟರ್ಡ್. ಕನ್ನಡ ಅಥವಾ ಕೊಡವ ಭಾಷೆ ಆಡಿದ್ದೇ ಇಲ್ಲ. ಧರೆಗಿಳಿದ ಈ ಯಮಧರ್ಮರಾಯ ಹೈಸ್ಕೂಲಿನಲ್ಲಿ ನಮಗೆ ಹಾಕಿ, ಫ಼ುಟ್‌ಬಾಲ್ ಮತ್ತು ಕ್ರಿಕೆಟ್, ಜೊತೆಗೆ ಡ್ರಿಲ್ ಕಲಿಸಲು ಬರುತ್ತಿದ್ದರು. ಆಟವಾಡಲು ಹೋದವರಿಗೆ ಡ್ರಿಲ್‌ನಿಂದ ವಿನಾಯತಿ. ಅಳ್ಳೇಶಿ ಮತ್ತು ಸದಾ ಶೀತಪೀಡಿತನಾಗಿದ್ದ ನಾನು ಆಟದಿಂದ ಬಲು ದೂರ. ಹೀಗಾಗಿ ಡ್ರಿಲ್ ಕಡ್ಡಾಯವಾಗಿತ್ತು, ವಾರಕ್ಕೆ ಮೂರು ಸಲ ಸಾಯಂಕಾಲದ ಕೊನೆಯ ತರಗತಿ.

ನಮ್ಮನ್ನೆಲ್ಲ ಎತ್ತರವಾರು ಮೂರು ಸಾಲುಗಳಲ್ಲಿ ನಿಲ್ಲಿಸಿ ಲೆಫ಼್ಟ್, ರೈಟ್, ಲೆಫ಼್ಟ್, ರೈಟ್ ಮುಂತಾಗಿ ಕವಾಯತಿ, ಮತ್ತೆ ಅದೇ ಕ್ರಮದಲ್ಲಿ ಓಟ, ಅಲ್ಲದೇ ಹೈ ಜಂಪ್, ಲಾಂಗ್ ಜಂಪ್, ಕ್ರಾಲಿಂಗ್ ಮುಂತಾದ ಕಠಿಣ ಶಿಕ್ಷೆಗಳಿಗೆ ಗುರಿಪಡಿಸುತ್ತಿದ್ದರು. ಚೂರು ತಪ್ಪಿದರೂ ಬ್ಲಡಿ ಸನ್ನಪ್ಪೆ ಸಿನ್ನರ್ (bloody son of a sinner) ಮುಂತಾದ ಸಹಸ್ರನಾಮಾರ್ಚನೆ ಸಾಮಾನ್ಯವಾಗಿತ್ತು. ನನ್ನ ಸ್ಥಾನ ‘ಕಾಕ ಸಂಘಾತದೊಳ್ ಸಿಲುಕಿರ್ದ ಕೋಗಿಲೆಯ ಮರಿಯಂತೆ’ (ಲಕ್ಷ್ಮೀಶ) ಇತ್ತು. ಇಂಥ ಒಂದು ಸಂಜೆ ಈ ಚಿತ್ರಗುಪ್ತ ನಮ್ಮನ್ನೆಲ್ಲ ಬೇರೆಯೇ ಒಂದು ಪರೀಕ್ಷೆಗೆ ಒಳಪಡಿಸಿ ಮತ್ತೆ ಬೈದರು: ಕೇಶವಿನ್ಯಾಸದ ಮೇಲೆ ಅವರ ಗೃಧ್ರದೃಷ್ಟಿ. “ಈ ಸಿನೆಮಾ ಫ಼್ಯಾಷನ್ ಎಲ್ಲ ಬೇಡ. ನಾಳೆ ಸಂಜೆ ಒಳಗೆ ನೀವೆಲ್ಲ ತಲೆಕೂದಲನ್ನು ಅರ್ಧ ಇಂಚಿಗಿಂತ ಹೆಚ್ಚಿಲ್ಲದಂತೆ ಬೋಳಿಸಿ ಬರತಕ್ಕದ್ದು. ಇಲ್ಲವಾದರೆ ನಾನೇ ನಿಮಗೆ ಹಜಾಮತ್ತು ಮಾಡುತ್ತೇನೆ, ಜೋಕೆ” ಎಂದು ಅಪ್ಪಟ ಇಂಗ್ಲಿಷಿನಲ್ಲಿ ಗುಡುಗಿದರು.

ನಾನಂತೂ ಭಯಭೀತನಾದೆ. ಮರುಮುಂಜಾನೆ ಮನೆಯಲ್ಲಿ ಯಾರಿಗೂ ಹೇಳದೆ ಕುಲನಾಪಿತ ನಂಜಪ್ಪನ ಕತ್ತರಿ ಮತ್ತು ಮಿಶನುಗಳಿಗೆ ಶಿರ ಕೊಟ್ಟೆ, ಮಂಡೆಬೋಳನಾದೆ! “ಏನಿದು ಅಸಹ್ಯ? ಕ್ಷೌರಕ್ಕೆ ಕಾಲಾಕಾಲ ಬೇಡವೇ? ಇವತ್ತು ಮಂಗಳವಾರ. ಏನು ನಿನ್ನವಸ್ಥೆ?” ಎಂದು ತಂದೆ ಗುಡುಗಿದಾಗ ಬಿದ್ದಯ್ಯ ಮೇಷ್ಟ್ರ ಸುಗ್ರೀವಾಜ್ಞೆ ಬಗ್ಗೆ ಹೇಳಿದೆ. ಇವರು ಅಪ್ಪನಿಗೂ ಮೇಷ್ಟ್ರು ಆಗಿದ್ದರಂತೆ. ಸರಿ ಅಪ್ಪ ನೇರ ಅವರಲ್ಲಿಗೆ ಹೋಗಿ ತನ್ನ ಸುಪುತ್ರನಿಗೇಕೆ ಈ ಶಿಕ್ಷೆ, ಅದೂ ಈ ಅಮಂಗಳ ಮುಹೂರ್ತದಲ್ಲೆಂದು ಕೇಳಿಯೇಬಿಟ್ಟರು. “ಲೋ ತಿಮ್ಮಪ್ಪಯ್ಯಾ! ಅದು ನಿನ್ನ ಕುಟ್ಟಿಗಲ್ಲವೋ ನಾಹೇಳಿದ್ದು, ಆ ಶೆಟ್ರ, ಸಾಬರ ಕುಟ್ಟಿಗಳಿಗೆ ಮತ್ತು ನಮ್ಮ ಕಿಣ್ಣಗಳಿಗೆ ಕಣೋ!” ಎಂದರಂತೆ. 

ಅಂದಹಾಗೆ ಕೊಡವರ ಖಾಸಗಿ ನುಡಿಗಳಲ್ಲಿ ಅವರ ಮಕ್ಕಳೆಲ್ಲರೂ ಕಿಣ್ಣರು, ಉಳಿದವರೆಲ್ಲರೂ ಕುಟ್ಟಿಗಳು. ಹೀಗೆ ನಾನೊಬ್ಬ ಪಟ್ಟ ಕುಟ್ಟಿ (ಭಟ್ಟರ ಹೈದ). ಬಿದ್ದಯ್ಯ ಮೇಷ್ಟ್ರ ಕಲಾಯಿ ಡ್ರಿಲ್ ಎಂದೇ ಈ ಘಟನೆ ಮುಂದೊಂದು ದಿನ ನನ್ನ ವೃತ್ತಿಜೀವನದಲ್ಲಿ ಪುನರವತರಿಸಿತು! (ನೋಡಿ: ‘ಎನ್‌ಸಿಸಿ ದಿನಗಳು’ ಪುಸ್ತಕದಲ್ಲಿ ‘ಕೊಟ್ಟಮುಡಿಯಲ್ಲಿ ಕೊಟ್ಟ ಮುಡಿ’ ಅಧ್ಯಾಯ)

ಬದುಕಿನಲ್ಲಿ ಪ್ರತಿಯೊಂದು ಘಟನೆಗೂ, ಆ ಕ್ಷಣದಲ್ಲಿ ಅದು ಎಷ್ಟೇ ಅಸಹನೀಯವಾಗಿದ್ದರೂ, ಸ್ಥಾನವಿದ್ದೇ ಇದೆ. ಬಿದ್ದಯ್ಯ ಮೇಷ್ಟ್ರ ಕಲಾಯಿ ಡ್ರಿಲ್ ಅನುಭವಾನಂತರ ನಾನವರನ್ನು ಮನಸ್ವೀ ಹಳಿಯತೊಡಗಿದೆ? ಇಲ್ಲ. ಮುಂದೆ ೧೯೫೨ರಲ್ಲಿ ನಾನು ಸೇನಾಶಿಕ್ಷಣ ಪಡೆದು ಎನ್‌ಸಿಸಿ ಅಧಿಕಾರಿಯಾಗಿ ಮರಳಿದಾಗ ಮೊದಲು ಬಿದ್ದಯ್ಯ ಮೇಷ್ಟ್ರಲ್ಲಿಗೆ ಹೋದೆ, ಆ ಹಣ್ಣು ಹಣ್ಣು ಮುದುಕರ ಆಶೀರ್ವಾದ ಪಡೆದು ಹೇಳಿದೆ, “ಸರ್! ಅಂದು ನೀವು ನನ್ನಲ್ಲಿ ಕವಾಯತಿ ಬೀಜ ಬಿತ್ತಿದಿರಿ. ಇಂದು ನಿಮಗೆ ನಾನು ಅದರ ಫಲವನ್ನು ಕೃತಜ್ಞತಾಪೂರ್ವಕವಾಗಿ ಅರ್ಪಿಸುತ್ತಿದ್ದೇನೆ.” ಹೌದು, Madras Regimental Centre, Wellington, Ootyಯಲ್ಲಿಯ ಸೇನಾಶಿಕ್ಷಣ ಭಾಂಡದಲ್ಲಿ ನಾನು ಉನ್ನತಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದೆ! (ವಿವರಗಳಿಗೆ ನೋಡಿ ‘ಎನ್‌ಸಿಸಿ ದಿನಗಳು’ ಪುಸ್ತಕ.)

ಪ್ರೌಢಶಾಲೆಯ ಮೂರು ವರ್ಷಗಳಲ್ಲಿಯೂ ನನಗೆ ಗಣಿತ, ವಿಜ್ಞಾನ, ಕನ್ನಡ ಮತ್ತು ಒಟ್ಟು ಅಂಕಗಳಲ್ಲಿ ಒಂದನೆಯ ಸ್ಥಾನ ಲಭಿಸುತ್ತಿತ್ತು. ಹೀಗಾಗಿ ಅನೇಕ ಸಹಪಾಠಿಗಳು ನನ್ನಲ್ಲಿ ಲೆಕ್ಕ ಹೇಳಿಸಿಕೊಳ್ಳಲು ಮತ್ತು ಪ್ರಬಂಧ ತಿದ್ದಿಸಿಕೊಳ್ಳಲು ಬರುತ್ತಿದ್ದರು. ‘ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆ’ ಎಂಬುದು ಮನೆಯ ಪಾಠ. ಅವರೆಲ್ಲರ ಜೊತೆ ನಾನು ದುಡಿದೆ, ನನ್ನ ಮನಸ್ಸು ಅಧಿಕ ನಿಶಿತವಾಯಿತು, ಸ್ನೇಹ ವರ್ಧಿಸಿತು. ನಿಜ, ‘ಕೊಟ್ಟದ್ದು ತನಗೆ ಬೈಚಿಟ್ಟದ್ದು ಪರರಿಗೆ.’
(ಮುಂದುವರಿಯಲಿದೆ)

1 comment:

  1. ನಾನು ಕೊಟ್ಟಮುಡಿ ಪೊರಂಬಿನಲ್ಲಿ ಕಂಡ ಎನ್. ಸಿ. ಸಿ. ಆಫೀಸರ್ ಅಂದರೆ ಆಗ ಅವರು ಲೆಫ್ಟಿನಂಟ್ ಜಿ. ಟಿ. ನಾರಾಯಣ ರಾಯರು ಶಿಸ್ತಿನ ಮೂಟೆ ಆಗಿದ್ದರೂ ಸ್ನೇಹಪರರು.
    ತನ್ನನ್ನು ತಾನೇ ಗೇಲಿಮಾಡಿ ಜೋಕ್ ಹೇಳುವ ಅಭ್ಯಾಸ ಅವರಿಗೆ ಇತ್ತು.
    ಈ ಅಭ್ಯಾಸ ಅವರಿಗೆ ಬಾಲ್ಯದಲ್ಲೂ ಇತ್ತು - ಅಂತ ಈಗ ಗೊತ್ತಾಯಿತು. ತಾನಾಗಿ ಕವಿತೆ ಕಾವ್ಯ ರಚನೆಯನ್ನು ನಿಲ್ಲಿಸಿದ ಸಂದರ್ಭವನ್ನು ಇದೇ ಲೇಖನದಲ್ಲಿ ಹೀಗೆ ನೆನಪಿಸಿಕೊಂಡಿದ್ದಾರೆ "ಅಲ್ಲಿಗೆ ಕನ್ನಡ ಕವನ ಪ್ರಪಂಚ ಅಷ್ಟರ ಮಟ್ಟಿಗೆ ಪದಮಾಲಿನ್ಯರಹಿತವಾಯಿತು!" ಎಂಥಹಾ ಹಾಸ್ಯಪ್ರಜ್ಞೆ! ಅದೆಂಥಹಾ ಸತ್ಯಸಂಧತೆ! ನಾನು ಇಂದು ಬೆಳಗ್ಗೆ ಈ ಲೇಖನ ಭಾಗವನ್ನು ಓದುತ್ತಾ "ಐದು ದಶಕಗಳಷ್ಟು ಹಿಂದೆ" ಅವರನ್ನು ಕಂಡ ಅವರ ನೆನಪಿನಲ್ಲೇ ಮುಳುಗಿದ್ದೇನೆ. - ಪೆಜತ್ತಾಯ ಎಸ್. ಎಮ್.

    ReplyDelete