01 March 2013

ಮಂಗಳೂರು ವೈಲ್ಡ್ ಲೈಫ್ ಟ್ರಸ್ಟ್


(ಶರತ್ ಕಥನದಲ್ಲಿ ಎರಡನೇ ಮತ್ತು ಅಂತಿಮ ಭಾಗ)
- ಬಿ.ಕೆ. ಶರತ್
ಬ್ರ| ಓಡ್ರಿಕ್ ದೇವಾನಂದರಿಗೊಬ್ಬ ಬಾಡಿಗೆ ಕಾರಿನ ಗೆಳೆಯನಿದ್ದ, ಹೆಸರು ಜೋಸೆಫ್. ಅಲ್ಲದೇ ಹೋಗಿದ್ದರೆ, ಬರಿಯ ಬಾಡಿಗೆ ಮುಖ ನೋಡುವ ಯಾವ ಕಾರಿನವನೂ ಜುಜುಬಿ ಇಪ್ಪತ್ತು ಕಿಮೀಯ ಒಂದು ಓಟಕ್ಕೆ ಸ್ವಂತ ಕಾರನ್ನು ಹಾಳು ಮಾಡಿಕೊಂಡು, ಇಡೀ ದಿನ ಇಬ್ಬರು ಹುಡುಗರೊಡನೆ ಖಂಡಿತಾ ಒದ್ದಾಡುತ್ತಿರಲಿಲ್ಲ. ಮಳೆಗಾಲದ ದಿನ ಬೇರೆಓಡ್ರಿಕ್ ಹೆಚ್ಚಿನ ಭದ್ರತೆಗಾಗಿ ಪ್ರತಿ ಹಾವನ್ನು ಗೂಡುಗಳೊಳಗೇ ಪ್ರತ್ಯೇಕ ಚೀಲಗಳಲ್ಲಿ ತುಂಬಿಸಿಟ್ಟಿದ್ದರು. ಇನ್ನು ಗೂಡುಗಳೋ ವಿಚಿತ್ರ ಆಕಾರಗಳವೂ ಭಾರದವೂ ಇದ್ದವು. ಅವನ್ನು ಎತ್ತಿ, ನೂಕಿ ಕಾರಿಗೆ ತುಂಬಲು ಮಠದಲ್ಲಿ ಕೈಗಳು ಧಾರಾಳವೇ ಇತ್ತು. ಟಾಪಿನಲ್ಲಿ, ಡಿಕ್ಕಿಯಲ್ಲಿ, ಹಿಂದಿನ ಸೀಟು ತೆಗೆದ ಜಾಗದಲ್ಲಿ, ಮುಂದಿನ ಮುಕ್ಕಾಲಾಸನದ ಮೇಲೆ, ಕೊನೆಗೆ ಸಣ್ಣ ಒಂದೆರಡನ್ನು ಬಾನೆಟ್ ಮೇಲಕ್ಕೂ ಹೇರಿದ್ದಾಯ್ತು. ಈ ಭರದಲ್ಲಿ ಜೋಸೆಫ್ ಕಾರೊಳಗೆ ತಮ್ಮ ಮತ್ತು ನಮ್ಮಿಬ್ಬರ ಸ್ಥಾನ ಮರೆತೇ ಬಿಟ್ಟಿದ್ದರು. ಆದರೆ ಆ ದಿನಗಳಸರ್ವಿಸ್ ಕಾರುಗಳ ಚಾಲಾಕಿ ಎಲ್ಲವನ್ನು ಮೈಗೂಡಿಸಿಕೊಂಡ ಜೋಸೆಫ್ ಚಾರ್ಲಿಯನ್ನು ಎದುರು ಸೀಟಿನ ಕಾಲಿಡುವ ಜಾಗಕ್ಕೆ ನುಗ್ಗಿಸಿ, ಕುಕ್ಕುರುಗಾಲಿನಲ್ಲಿ ಕುಳಿತುಕೊಳ್ಳಲು ಸೂಚಿಸಿ, ಬಾಗಿಲು ಜಡಿದ. ಮತ್ತೆ ಸ್ವಂತದ ವ್ಯವಸ್ಥೆ. ಟೂಲ್ ಬಾಕ್ಸಿನಿಂದ ಮೂಲಬಣ್ಣ ಮತ್ತು ರಚನೆಯನ್ನು ಎಂದೋ ಕಳೆದುಕೊಂಡ ಟವೆಲ್ ತೆಗೆದ. ಅದನ್ನು ಗಂಟು ಹಾಕಿ ಅರ್ಧ ತೆರೆದ ಚಾಲಕನ ಬಾಗಿಲಿಗೂ ನಡುಗಂಬಕ್ಕೂ ಒಂದು ಸಡಿಲ ಬಳೆ ಕಟ್ಟಿದ. ಆ ಸಂದಿನಲ್ಲಿ ತೂರಿ, ಅರ್ಧ ಅಂಡು ಸೀಟಿನ ಅಂಚಿಗೆ ಮುಟ್ಟಿದಂತೆ ಇಟ್ಟು, ಉಳಿದಷ್ಟೂ ಭಾರವನ್ನು ಬಾಗಿಲ ಮೇಲೆ ಹಾಕಿ ಕಾರು ಹೊರಡಿಸಿಯೇ ಬಿಟ್ಟ.


ಕಾರಿನೊಳಗೆ ವ್ಯವಸ್ಥೆಯಾಗದ ನಾನು ಮೊದಲೇ ನಿರ್ಧರಿಸಿದ್ದಂತೆ ಹೆದ್ದಾರಿವರೆಗೆ ಬೆಂಗಾವಲು ವಹಿಸಿಕೊಂಡೆ. ಚರಳಿನಲ್ಲಿ ಕಾರು ಹಿಂದೆ ಜಾರಿದರೆಕಟ್ಟೆ ಮಾಸ್ಟರ್.’ ಗೊಸರಿನಲ್ಲಿ ಹೂಳಿದರೆಒರ ಕೈಸೇರಾಲೇ ಅಣ್ಣತಂಡಕ್ಕೆ ನಾಯಕ. ಅಸಾಮಾನ್ಯ ಭಾರ, ನಿಧಾನಿಸಿದರೆ ಚಕ್ರ ಜಾರುವ ಭಯವನ್ನೂ ಪರಿಗಣಿಸಿ ಹೆದ್ದಾರಿಗೇರುವ ಕೊನೆಯ ದಿಣ್ಣೆಯನ್ನಂತೂ ಜೋಸೆಫ್ ಬಹಳ ಚಾಕಚಕ್ಯತೆಯಲ್ಲೇ ಏರಿಸಿಬಿಟ್ಟ. ಆದರೆ ಸಣ್ಣ ಎಡವಟ್ಟು, ಕಾರು ದಡಕ್ಕೆಂದು ದಾರಿ ತಲಪಿದ ರಭಸಕ್ಕೆ ಹಿಂದಿನ ಒಂದು ಬಾಗಿಲು ಬಡಕ್ಕೆಂದು ಕಳಚಿಬಿದ್ದಿತ್ತು! ಜೋಸೆಫ್ ಮಾತ್ರ ಏನೂ ಆಗಿಲ್ಲವೆಂಬಂತೆ ಬಾಗಿಲನ್ನು ಸ್ವಸ್ಥಾನಕ್ಕೆ ಸೇರಿಸಿ ಹಗ್ಗದಲ್ಲಿ ಕಟ್ಟಿ, ‘ರೈಟ್, ಕುಡ್ಲಗ್ ಪೋಯ್ಎನ್ನುವಾಗ ಅದುವರೆಗೆ ಬೆರಗಿನಲ್ಲಿ ಬೆಪ್ಪಾಗಿ ಕುಳಿತಿದ್ದ ಆಕಾಶರಾಯರು ಕುಂಭದ್ರೋಣ ಮಳೆ ಸುರಿಸಿ ಸಂಭ್ರಮಿಸಿದರು. ಸಂಜೆಗತ್ತಲು ತನ್ನ ಪಾಲು ಕಡಿಮೆಯಾಗದಂತೆ ಜೊತೆಕೊಟ್ಟಿತು! ನಾನು ಇನ್ನೊಂದೇ ಸರ್ವೀಸ್ ಕಾರ್ ಹಿಡಿದೆ. ಮೊದಲಿಗೆ ಅದು ಗತ್ತಿನಲ್ಲೇ ಜೊಸೆಫ್ ಕಾರನ್ನು ಹಿಂದಿಕ್ಕಿ ಓಡಿದರೂ ಹೊಂಡ ಬಿದ್ದೇಳುತ್ತೇಳುತ್ತ ಎಲ್ಲೋ ನನ್ನ ಕಾರು ಕುರುಡಾಯ್ತು. ಕೊನೆಗೆ ವೈಪರ್ ಕೆಟ್ಟು, ಹೊಂಡ ಹಾರಿಸುವಲ್ಲಿ ಎಂಜಿನ್ ವಿಶ್ರಾಂತವಾಯಿತು. ನಾನು ಹೇಗೋ ಏನೋ ಹೆಣಗಿ ಶಾಲಾವಠಾರ ತಲಪುವಾಗ ಜೋಸೆಫ್ ಗಾಡಿ ಅಲ್ಲಿತ್ತು.

ಆದರೆ ಅದರ ಸಾಹಸ ಇನ್ನೂ ದೊಡ್ಡದು! ಜೋಸೆಫ್ ಗಾಡಿಗೆ ಮೊದಲಲ್ಲೆ ವೈಪರ್ರೂ ಹೆದ್ದೀಪವೂ ಇರಲಿಲ್ಲ. ಸಾಲದ್ದಕ್ಕೆ ಅರ್ಧ ಬಾಗಿಲು ತೆರೆದದ್ದಕ್ಕೆ ಮಳೆಯಲ್ಲಿ ಸಚೇಲ ಸ್ನಾನ. ಆದರೆ ಅಲ್ಲೂ ಒಂದು ಲಾಭವಿತ್ತು! ಬಾಗಿಲ ಸಂದಿನಿಂದ ದಾರಿಯ ಸ್ಪಷ್ಟ ಚಿತ್ರ ಪಡೆದ ಜೋಸೆಫ್ ಕಾರನ್ನು ನನಗೂ ಮೊದಲೇ ಅಲೋಶಿಯಸ್ಸ್ ತಲಪಿಸಿಬಿಟ್ಟಿದ್ದ. ಕಾರು ಕುಲುಕಾಡಿ, ಅರೆತೆರೆದ ಬಾಗಿಲು ಕಿಟಕಿಗಳಲ್ಲಿ ಒಳ ನುಗ್ಗಿದ ನೀರು ತುಳುಕಾಡಿ ಚಾರ್ಲಿಯೂ ಗೂಡುಗಳೊಳಗೆ ಹೆಚ್ಚಿನ ಭದ್ರತೆಗೆ ಚೀಲಗಳಲ್ಲಿ ತುಂಬಿದ್ದ ನಮ್ಮಸೊತ್ತೂಚಂಡಿಯಾಗಿದ್ದರೂ ಸುರಕ್ಷಿತವಾಗಿದ್ದವು. ಮೊದಲು ಚಾರ್ಲಿಯನ್ನು ಸೆರೆಬಿಡಿಸಿದೆವು. ಮತ್ತೆ ಎಲ್ಲಕ್ಕೂ ನಾವು ಜನ ಮೂರೇ. ಕೇವಲ ಕಾರು ಖಾಲಿ ಮಾಡಲು ಎರಡು ಗಂಟೆ ಹಿಡಿಯಿತು. ಇನ್ನಷ್ಟು ಎಚ್ಚರಿಕೆಯಿಂದ ರೆಡ್ ಬಿಲ್ಡಿಂಗಿನ ಮೊದಲ ಮಹಡಿಗೆ ಕುತ್ತ ಮರದ ಏಣಿಯಲ್ಲಿ ಏರಿಸಿದ ಕೆಲಸ ನೆನೆಸುವಾಗ ಇಂದೂ ಸೊಂಟ ನೋವು ಬರುತ್ತದೆ. ಅನುಭವ ಇಲ್ಲ, ಯೋಜನೆ ಇಲ್ಲ ಆದರೂ ಕನಸದ ನಿಧಿ ನಮ್ಮಲ್ಲಿತ್ತು ಎಂಬ ಸಂಭ್ರಮ ಯೋಚಿಸುವಾಗ ಇಂದೂ ಎದೆ ತುಂಬಿ ಬರುತ್ತದೆ.

ಇಲಿಗಳಿಗಾಟ, ‘ಬೆಕ್ಕಿಗೆ ಪ್ರಾಣಸಂಕಟ: ಬಹುತೇಕ ಹಾವುಗಳ ಏಕೈಕ ಆಹಾರ ಇಲಿ. ಆಗ ಎಷ್ಟೋ ಬಾರಿ ಅನಿಸಿತ್ತು - ನನಗೊಂದು ಮಾಯಾ ಕಿಂದರಿ ಬರಬಾರದೇ ನಾನು ಬೊಮ್ಮನಹಳ್ಳಿಗೆ ಹೊರಟ ಜೋಗಿಯಾಗಬಾರದೇ! ಓಡ್ರಿಕ್ ಅವರಿಗಾದರೋ ಊರಲ್ಲಿ ಅಭಿಮಾನೀ ಎಳೆಯರ ಬಳಗ ಇತ್ತು, ಕಾಲಕಾಲಕ್ಕೆ ಇಲಿ ಪೂರೈಕೆ ಚೆನ್ನಾಗಿಯೇ ಮಾಡಿದ್ದರು. ಈಗ (೨೦೧೨) ನಾನಿರುವ ಅಮೆರಿಕನ್ ಪ್ರಯೋಗಶಾಲೆಗಳಲ್ಲಂತೂ ಎಲ್ಲೋ ಎಂದೋ ಹಿಡಿದ ಇಲಿಗಳನ್ನು ಸಾಯಿಸಿ, ಫ್ರಿಜ್ಜುಗಳೊಳಗೆ ಕೊರಡುಗಟ್ಟಿಸಿ ಸಕಾಲಕ್ಕೆ ಹಾವುಗಳಿಗೆ ಕೊಟ್ಟುಪಳಗಿಸಿಬಿಟ್ಟಿದ್ದಾರೆ.’ ಆದರೆ ಅಂದಿನ ನಮ್ಮ ಹಾವುಗಳು ಆತ್ಮಸಮ್ಮಾನ ಉಳಿಸಿಕೊಂಡಿದ್ದವು. ಸದಾ ಜೀವಂತ ಇಲಿಗಳೇ ಬೇಕು. ಮತ್ತೆ ನಮ್ಮ ಸಮಯಾನುಕೂಲ ಕಾಯದೇ ಅವಕ್ಕೆ ಹಸಿವಾದಾಗಲೇ ತಿನ್ನುತ್ತಿದ್ದವು. ನಮಗೋ ಮನೆಯ ಮತ್ತು ವಿದ್ಯಾರ್ಥಿಜೀವನದ ಕಟ್ಟುಪಾಡು. ಹಾಗೆಂದು ಗೂಡುಗಳೊಳಗೆ ಇಲಿ ಬಿಟ್ಟು ಹೋಗುವಂತಿರಲಿಲ್ಲ. ಹಾವು ಉದಾಸೀನ ಮಾಡಿದರೆ ನಮ್ಮ ಬಡಪಾಯಿ ಗೂಡುಗಳ ಸಂದುಗಳಲ್ಲಿ ಇಲಿಗಳು ಕನ್ನ ಹೊಡೆದು ಪರಾರಿಯಾಗಲು ಪ್ರಯತ್ನಿಸುವುದು ಖಾತ್ರಿ. ಅಲ್ಲೂ ಬದುಕಿಕೊಳ್ಳಲಿ, “ಒಂದಿಲಿ ತಾನೇಎನ್ನುವಂತಿಲ್ಲ! ಇಲಿ ಕೊರೆದ ದಾರಿಜೈಲುಹಾರಲು ಹಾವುಗಳಿಗೆ ಸಾಕಾಗುತ್ತಿತ್ತು! ಇಲ್ಲಿ ರೆಡ್ ಬಿಲ್ಡಿಂಗ್ನ ತುಸು ಹೆಚ್ಚಿನ ಪರಿಚಯ ನೀವು ಮಾಡಿಕೊಳ್ಳುವುದು ಅವಶ್ಯ. ಇದರ ಮೊದಲ ಮಾಳಿಗೆಯ ನೆಲವೆಲ್ಲ ಮರದ್ದೇ ಇತ್ತು. ಹಲಗೆಗಳೇನೋ ಗಟ್ಟಿಯೇ ಇದ್ದವು ಆದರೆ ಅಲ್ಲಿ ಇಲ್ಲಿ ಬಿಟ್ಟ ಸೆರೆಗಳಲ್ಲಿ ಹಾವು ಇಲಿಗಳೇನು ಅಂದಾಜು ತಪ್ಪಿದರೆ ನಮ್ಮ ಕಾಲೂ ನುಸಿಯುವಷ್ಟು ದೊಡ್ಡದಿತ್ತು. ಇನ್ನೂ ಅಪಾಯವೆಂದರೆ ಅಲ್ಲಿ ಕೆಳಗೆ ಶಾಲೆ ಮಕ್ಕಳ ಬ್ಯಾಂಡ್ ಸಾಮಗ್ರಿಗಳ ದಾಸ್ತಾನಿರುತ್ತಿತ್ತು, ಆಗೀಗ ಮಕ್ಕಳ ತರಬೇತೂ ಅಲ್ಲೇ ನಡೆಯುತ್ತಿತ್ತು. ಅಲ್ಲದೆ ಶಾಲಾ ದಿನಗಳಲ್ಲಿ ಕಟ್ಟಡದ ಸುತ್ತೂ ಮಕ್ಕಳ ಆಟ, ಓಡಾಟ ಸಹಜವಾಗಿಯೇ ಇರುತ್ತಿದ್ದವು. ಅವುಗಳ ಎಡೆಯಲ್ಲಿ ಒಮ್ಮೆಗೇ ಗೂಡು ಕಳಚಿದ ಕಂದಡಿ ತಲೆಯ ಮೇಲುದುರಿದರೆ ಹೇಗಾದೀತು? ನಾಗರದಂಥ ವಿಷಕಾರಿಗಳು ಬಿಡಿ, ಒಂದು ಸಾದಾ ಕೇರೆ ನುಸಿದರೂ ಗೊಂದಲ ಎಷ್ಟಾದೀತು - ನೀವೇ ಊಹಿಸಿಕೊಳ್ಳಿ! ಹಾಗೆಲ್ಲಾದರೂ ಆಗಿದ್ದರೆ. . ರೆ, ಬಿಲ್ಡಿಂಗಿನ ರೆಡ್ಡು ಸಾರ್ವಜನಿಕ ನೆಲೆಯಲ್ಲಿ ಪ್ರಸರಿಸಿ, ಶಾಲೆಯನ್ನೇ ಅಪಾಯಕಾರಿ ಎನಿಸಿಬಿಡುತ್ತಿತ್ತು!

ಹಾವಿಗೆ ಇಲಿ ಹಾಕಿದರಾಯ್ತುಎನ್ನುವಷ್ಟು ಬಲಿಪಶುವನ್ನು ಒಡ್ಡುವುದು ಹಗುರದ ಕೆಲಸವಲ್ಲ. ಬಂಧನದಲ್ಲಿ ಹಾವುಗಳು ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ, ಇಲಿಗಳಲ್ಲ. ಪ್ರತಿಕ್ಷಣದಲ್ಲಿ ತಪ್ಪಿಸಿಕೊಳ್ಳುವ ಅವಕಾಶಕ್ಕೆ ಆಪದ್ರಕ್ಷಣೆಗೆ ತಿಣುಕುತ್ತಲೇ ಇರುತ್ತವೆ. ಹಿಡಿಯಲು ಹೊರಟ ನಮ್ಮ ಕೈ ಕಚ್ಚುವುದು ನಿರೀಕ್ಷಿತವೇ ಇತ್ತು. ಇಲಿಗೆ ವಿಷವಿಲ್ಲದಿರಬಹುದು, ಆದರೆ ಅನ್ಯ ನಂಜು (್ಯಾಬೀಸ್ ಕೂಡಾ) ನಮ್ಮನ್ನು ಬಾಧಿಸುವ ಅಪಾಯ ಮರೆಯುವಂತಿರಲಿಲ್ಲ. ಮುಂದೊಂದು ಕಾಲದಲ್ಲಿ ನಾನು ಹಿರಿಯ ಉರಗೋದ್ಯಾನವೊಂದರಲ್ಲಿ ಪಾಲಕರುಇಕ್ಕುಳ ಪ್ರಯೋಗನಡೆಸುವುದು ನೋಡಿ ಹೆದರಿ ಹೋಗಿದ್ದೆ. ಅವರಲ್ಲಿ ಇಲಿ ನಿಭಾವಣೆ ಎಲ್ಲ ಉದ್ದ ಕೈಯ ಇಕ್ಕುಳದಲ್ಲಿ. ಸಾಲದ್ದಕ್ಕೆ ಹಾವಿನ ಕಾರ್ಯಕ್ರಮ ಪಟ್ಟಿ ನೋಡಿಕೊಂಡು ಇಲಿಗಳನ್ನು ಇಕ್ಕುಳದಲ್ಲಿ ಅಮರಿಸಿ, ಹಾವಿನ ಗೂಡಿನೊಳಗೆ ಇಟ್ಟುಬಿಡುತ್ತಿದ್ದರು. “ಇಲಿಯ ದವಡೆ ಅಮರಿಸಿ ಮುರಿದದ್ದಕ್ಕೆ ಕೆಲವೊಮ್ಮೆ ಸ್ವಲ್ಪ ರಕ್ತ ಜಿನುಗಿದರೂ ಇಲಿ ಕೂಡಲೇ ಸಾಯುವುದಿಲ್ಲ, ತಪ್ಪಿಸಿಕೊಳ್ಳುವ ಪ್ರಯತ್ನವಂತೂ ಮಾಡುವುದೇ ಇಲ್ಲ. ಮತ್ತೆ ಕೆಲವೇ ಗಂಟೆಗಳಲ್ಲಿ ಹೇಗೂ ಹಾವು ಅದರ (ನ್ನು) ನೋವು ಮುಗಿಸುತ್ತದಲ್ಲಾ!” ಅವರ ಸಮಜಾಯಿಷಿ ನಮಗೆ ಹಿಡಿಸಲಿಲ್ಲ. ನಾವು ಕಾರ್ಖಾನೆಗಳಲ್ಲಿ ಬಳಸುವ ದಪ್ಪ ಕೈಗವುಸುಗಳನ್ನು ಬಳಸಿ ಕೆಲಸ ಸುಧಾರಿಸಿದೆವು.

ಮಿತ್ರರ ಮನೆಗಳಲ್ಲಿ, ದಾಕ್ಷಿಣ್ಯಪರರ ಅಂಗಡಿಗಳಲ್ಲೆಲ್ಲಾ ನಾನು ಇಲಿಗೂಡು ಇಟ್ಟು ಬರುತ್ತಿದ್ದೆ. ಯಶಸ್ಸಿನ ದರ ಹೀಗೇ ಎಂದು ಹೇಳುವಂತಿರಲಿಲ್ಲ. ಬೋನುಗಳು ಸಾಕಾಗದಾಗ ಅಲ್ಫಾನ್ಸೋ ನಮಗಾಗಿ ಹಲವನ್ನು ಕೊಂಡು ಕೊಟ್ಟರು. ಮೇಯರ್ ಬ್ಲೇಸಿಯವರು ಮುನಿಸಿಪಾಲಿಟಿಯಲ್ಲಿ ಹಾಳು ಬೀಳುತ್ತಿದ್ದ ಅಸಂಖ್ಯ ಬೋನುಗಳನ್ನು ನಮಗೆ ಉಚಿತವಾಗಿಯೇ ಕೊಡಿಸಿದ್ದರು. ಆದರೆ ಎಲ್ಲ ಚಾಕರಿಗಿದ್ದದ್ದು ನಾವಿಬ್ಬರೇ. ನಡೆದೋ ಸೈಕಲ್ಲಿನಲ್ಲಿ ಡಬ್ಬಲ್ ರೈಡ್ ಮಾಡಿಕೊಂಡೋ (ಅಂದಿನ ದಿನಗಳಲ್ಲಿ ಆಗ ಪೊಲಿಸರ ಕಣ್ಣುತಪ್ಪಿಸಬೇಕಾಗುತ್ತಿತ್ತು!) ಸಿಟಿ ಬಸ್ಸಿನಲ್ಲೋ ಜೆಪ್ಪುವಿನಿಂದ ಬಂದರದವರೆಗೆ ನಾವು ದಿನದಿನ, ಬೆಳಿಗ್ಗೆ ಸಂಜೆ ಇಲಿ ಸಂಗ್ರಹಿಸುವಲ್ಲಿಂದ ಮುಗಿಸುವಲ್ಲಿಯವರೆಗೆ ಓಡಾಡಬೇಕಾಗುತ್ತಿತ್ತು. (ರೆಡ್ ಬಿಲ್ಡಿಂಗ್ ಬಿಟ್ಟ ಮತ್ತಿನ ದಿನಗಳಲ್ಲಿ ಎರಡು ಕಿಮೀ ದೂರದ ಪಡೀಲಿನ ಶೆಡ್ಡಿನವರೆಗೂ ಹೋಗಬೇಕಾಗುತ್ತಿತ್ತು.)

ಉರಗಪ್ರದರ್ಶನ: ಸನ್ನಿ ತರಪ್ಪನ್ ಅದ್ಭುತ ಸಂಘಟಕ. ಅವರು ಉರಗಪ್ರದರ್ಶನದ ವಿವಿಧ ಸಿದ್ಧತೆಗಳನ್ನು ನಮ್ಮೊಡನೆ ಧಾರಾಳ ಹಂಚಿಕೊಳ್ಳುತ್ತ (ನಿಜಕ್ಕೂ ಹೇಳುತ್ತೇನೆ, ಎಷ್ಟೋ ನಮಗೆ ಯೋಚನೆಗೂ ನಿಲುಕುತ್ತಿರಲಿಲ್ಲ) ಭರದಿಂದ ನಡೆಸಿದ್ದರು. ಮರದ ಮಿಲ್ಲುಗಳ ಮಾಲಿಕರ ಸಂಪರ್ಕದಲ್ಲಿ ಹಾವುಗಳ ವಾಸಕ್ಕೂ ಪ್ರದರ್ಶನಕ್ಕೂ ಅನುಕೂಲವಾಗುವಂಥ ಹಲವು ಗೂಡುಗಳನ್ನು ಮಾಡಿಸುತ್ತಾ ಬಂದರು. ಇವು ಬರಬರುತ್ತ ನಮ್ಮ ರೆಡ್ ಬಿಲ್ಡಿಂಗಿನ ಜಾಗ ಸಾಲದೆ, ಕೆಲವು ಖಾಲೀ ಗೂಡುಗಳನ್ನು ಸನ್ನಿಯವರ ಮನೆಯ ಹಿತ್ತಲಿಗೂ ಸಾಗಿಸಬೇಕಾಯ್ತು. ಪ್ರದರ್ಶನಕ್ಕೆ ನಮ್ಮಲ್ಲಿದ್ದ ಹಾವುಗಳೂ ಮತ್ತೆ ನಿರ್ವಹಣೆಯಲ್ಲಿ ನಮ್ಮ ಪರಿಣತಿಯೂ ಸಾಕಾಗದು ಎಂಬ ಅರಿವು ಸನ್ನಿಯವರಿಗಿತ್ತು. ಇದಕ್ಕವರು ಮದ್ರಾಸಿನ ಗಿಂಡಿ ಉರಗೋದ್ಯಾನದ ರೂವಾರಿ ಮತ್ತು ಮುಖ್ಯಸ್ಥ ರೊಮುಲಸ್ ವಿಟೇಕರ್ ಅವರೊಂದಿಗೆ ಸ್ನೇಹಾಚಾರ ನಡೆಸಿ, ನಿರಂತರ ಒಳ್ಳೆಯ  ಸಂಪರ್ಕ ಇಟ್ಟುಕೊಂಡರು. ಪ್ರದರ್ಶನಕ್ಕೂ ಮುನ್ನ ಅವರ ಉದ್ಯಾನದಲ್ಲೇ ಒಮ್ಮೆ ಭೇಟಿ ವ್ಯವಸ್ಥೆಯನ್ನೂ ಮಾಡಿದ್ದರು. ಚಾರ್ಲಿಯೂ ಅವರೊಡನೆ ಅಲ್ಲಿಗೆ ಹೋಗಿ ಬಂದಿದ್ದ (ನನಗೆ ಮನೆಯ ನಿರ್ಬಂಧ!). ಪ್ರದರ್ಶನಕ್ಕೆ ಅಲ್ಲಿನ ಆದಿವಾಸಿ ಹಾವು ಪಂಡಿತರೇ ಆದ ಇರುಳರು ನಮ್ಮ ಸಹಾಯಕ್ಕಾಗಿ ಬರುವುದನ್ನೂ ಉದ್ಘಾಟನೆಯನ್ನು ಸ್ವತಃ ವಿಟೇಕರ್ರೇ ನಡೆಸುವುದನ್ನು ಖಾತ್ರಿ ಮಾಡಿದರು.

ಸನ್ನಿ ಎನ್ನೆಸ್ಸೆಸ್ಸಿನಲ್ಲೂ ಭಾರೀ ಕೆಲಸ ಮಾಡುತ್ತಿದ್ದರು. ಅಲ್ಲಿ ಸಂಜೆ ಹುಡುಗರ ಜೊತೆಗೆ ಊರವರನ್ನೂ ಸೇರಿಸಿ ಹಾವುಗಳ ಬಗ್ಗೆ ನಮ್ಮಿಬ್ಬರಿಂದ ಪ್ರದರ್ಶನ ಪಾಠ ಮಾಡಿಸುತ್ತಿದ್ದರು. ಇದು ಪರೋಕ್ಷವಾಗಿ ನಮಗೆ ಸಾರ್ವಜನಿಕ ಸಂಪರ್ಕದಲ್ಲಿ  ತರಬೇತಿಯನ್ನೂ ಉರಗ ಪ್ರದರ್ಶನಕ್ಕೆ ಪ್ರಚಾರವನ್ನೂ ಕೊಟ್ಟಂತಾಗಿತ್ತು. ಏತನ್ಮಧ್ಯೆ ನಮ್ಮ ಕಾಲೇಜಿನ ಶತಮಾನೋತ್ಸವವೂ ನಮ್ಮ ಪ್ರಥಮ ಉರಗ ಪ್ರದರ್ಶನದೊಂದಿಗೇ ಸೇರಿ ಬಂತು. ನನಗೆ ಸಾಂಸ್ಕೃತಿಕ ಚಟುವಟಿಕೆಗಳ ಚಪಲವೂ ಸುಮಾರಿದ್ದು ಉರಗಪ್ರದರ್ಶನದ ಕೆಲಸಗಳಿಗೆ ಸಣ್ಣಪುಟ್ಟ ಅನಾನುಕೂಲಗಳಾದರೂ ಒಟ್ಟಿನಲ್ಲಿ ಬಲುದೊಡ್ಡ ಲಾಭವೇ ಆಯ್ತು. ಪ್ರಚಾರ, ಪ್ರೇಕ್ಷಕ ಆಕರ್ಷಣೆಗೆ ನಮಗೆ ಪ್ರತ್ಯೇಕ ಶ್ರಮವೇ ಬೇಕಾಗಲಿಲ್ಲ. ಬಿದಿರು ತಟ್ಟಿಗಳ ಆವರಣ, ಸರದಿಯ ಸಾಲು, ಗೂಡುಗಳನ್ನು ಇಡಲು ಅಟ್ಟಳಿಗೆಗಳು, ಬಿಸಿಲ ಮರೆ, ನಡುವೆ ಕೆಲವು ಹಾವುಗಳನ್ನು ಮುಕ್ತವಾಗಿ ಬಿಡಲು ಬಾವಿಯಂಥ ರಚನೆ ಎಲ್ಲಾ ಆಯ್ತು. ಬಲ್ಲೆ, ಮುಳಿ, ಮುಳ್ಳನ್ನೆಲ್ಲ ಕಳೆದರೂ ಆಯ್ದ ಕಾಡು ಗಿಡ ಮರಗಳನ್ನು ಉಳಿಸಿಕೊಂಡ ವಠಾರ ಪ್ರದರ್ಶನಕ್ಕೆ ಒಂದು ಸಹಜತೆಯನ್ನೂ ತಂದಿತ್ತು. ಬೆಂಕಿ ಬಗೆ ಜಾಗ್ರತೆ, ವಿದ್ಯುತ್ ಸಂಪರ್ಕ, ತತ್ಕಾಲೀನ ದೂರವಾಣಿ ಸಂಪರ್ಕದವರೆಗೂ (ಆ ದಿನಗಳಲ್ಲಿ ಚರವಾಣಿಯ ಕಲ್ಪನೆ ಬಿಡಿ, ದೂರವಾಣಿಯೂ ಒಂದು ವೈಭವವೇ) ಪ್ರದರ್ಶನಾಂಗಣ ಸಜ್ಜುಗೊಂಡಿತ್ತು. ಎನ್ನೆಸ್ಸೆಸ್ ವಿದ್ಯಾರ್ಥಿಗಳು ಸನ್ನಿಯ ಅಭಿಮಾನಿಗಳಾದ ರಾಜ ಮುಂತಾದ ಸ್ವಯಂಸೇವಕರು ಗಡಿಯಾರದ ಸುತ್ತು ಕೆಲಸ ಮಾಡಿ ನನ್ನ ಅನಿಶ್ಚಿತತೆಯನ್ನೂ ಮತ್ತು ಚಾರ್ಲಿಯ ಅಪಾರ ಹೊಣೆಯನ್ನು ತುಂಬಾ ಹಗುರಗೊಳಿಸಿದ್ದರು.

ರೊಮುಲಸ್ ವಿಟೇಕರ್ ಮಂಗಳೂರಿನ ಪ್ರಥಮ ಉರಗಪ್ರದರ್ಶನವನ್ನು ಉದ್ಘಾಟಿಸಿದ್ದು, ಅವರ ಪ್ರಧಾನ ಸಹಾಯಕ (ಇರುಳ) ಚೊಕ್ಕಲಿಂಗಂ ಪ್ರದರ್ಶನದುದ್ದಕ್ಕೆ ನಿಂತು ಸಹಕರಿಸಿದ್ದು, ತಲಾ ಐದು ರೂಪಾಯಿಯ ಟಿಕೆಟ್ ಇದ್ದರೂ ಸರದಿಯ ಸಾಲು ಬಾವುಟ ಗುಡ್ಡೆಯ ಮೇಲಿನಿಂದ ತೊಡಗಿ ಹಂಪನಕಟ್ಟೆಯವರೆಗೆ ಬೆಳೆದದ್ದು ಎಲ್ಲಾ ಮಂಗಳೂರ ಇತಿಹಾಸದಲ್ಲಿ ಎಂದೂ ಅಳಿಸಲಾಗದ ಘಟನೆಗಳು! ಓಡ್ರಿಕ್ ಇದನ್ನು ನೋಡಿ ಆನಂದಿಸಲೆಂಬಂತೆ ಬಂದದ್ದಂತೂ ನಮಗಿಬ್ಬರಿಗೆ ಎಲ್ಲಿಲ್ಲದ ಆನಂದ ತಂದಿತ್ತು. ಈ ಎಲ್ಲದರಅಮಲುಇಳಿಯಬೇಕಾದರೆ ನಮಗೆ ಒಂದೆರಡು ವರ್ಷಗಳೇ ಬೇಕಾದವು. ಈ ಸಮಯಕ್ಕೆ ಎನ್ಎಸ್ಸೆಸ್ಸಿನಲ್ಲಿ ಸನ್ನಿಯ ಖಾಸಾ ಶಿಷ್ಯನಾಗಿದ್ದ ಸೂರ್ಯನೂ (ಅದುವರೆಗೆ ನಮಗಷ್ಟು ಪರಿಚಿತನಾಗಿರದ ಸಹಪಾಠಿ, ಇಂದಿನ ಡಾ| ಅಡ್ಡೂರು ಸೂರ್ಯನಾರಾಯಣ ರಾವ್) ಹಾವುಗಳನ್ನು ನಿಭಾಯಿಸುವಲ್ಲಿ ಸಾಕಷ್ಟು ಪಳಗಿದ್ದ ಮತ್ತು ನಮ್ಮ ಸಹಾಯಕ್ಕೆ ತುಂಬಾ ಒದಗುತ್ತಿದ್ದ. ನೆಹರೂ ಮೈದಾನ, ಕಂಕನಾಡಿ ಮೈದಾನಗಳಲ್ಲಿ ಪ್ರತ್ಯೇಕ ಪ್ರದರ್ಶನ ಮಾಡಿದ್ದಾಯ್ತು. ಮರುವರ್ಷ ಮೊದಲ ಜಾಗದಲ್ಲೇ (ಅಧಿಕೃತವಾಗಿ ಎರಡನೇ ಪ್ರದರ್ಶನ) ಇನ್ನೊಂದು ಮಾಡುವಾಗ ನನಗ್ಯಾಕೋ ವರ್ಷಾವಧಿ ಜಾತ್ರೆಯ ಭಾವ ಕಾಡಿತು. ಎಲ್ಲೋ ಸಿಕ್ಕ ಕಾಡುಪಾಪ, ಧರ್ಮಸ್ಥಳದ ಸಂಗ್ರಹದಲ್ಲಿದ್ದ ಚಿರತೆಗಳೂ ಉರಗ ಪ್ರದರ್ಶನಕ್ಕೆ ಹೆಚ್ಚಿನ ಆಕರ್ಷಣೆಗಳು! ಕೊನೆಗೆ ಶುದ್ಧ ಮತ್ಸ್ಯ ಸಂಗ್ರಹವನ್ನೂ (ಮೀನ್ಮನೆ) ಪ್ರದರ್ಶನಕ್ಕಿಟ್ಟು ನೋಡಿದ್ದಾಯ್ತು. ಉಡುಪಿ, ಧರ್ಮಸ್ಥಳದ ಜಾತ್ರೆಗಳಿಗೂ ನಮ್ಮ ಬಳಗಗುಡಾರಹಾಕುವಾಗ ನಾನು ಬಹುತೇಕ ಹಿಂದೆ ಸರಿದೆ. ನನಗೆ ಪ್ರದರ್ಶನ, ಸಾರ್ವಜನಿಕ ಶಿಕ್ಷಣಕ್ಕಿಂತ ಹೆಚ್ಚಿನ ಆಸಕ್ತಿಯಿದ್ದದ್ದು ಹಾವಿನ ಅಧ್ಯಯನ. ಚಾರ್ಲಿ ಮಾತ್ರ ಕೆಲವೊಮ್ಮೆ ಏಕಾಂಗಿಯಾಗಿಯೂ ಪಟ್ಟ ಶ್ರಮ ವಿವರಿಸಲು ನನ್ನಲ್ಲಿ ಶಬ್ದಗಳಿಲ್ಲ.

ಉರಗ ಪ್ರದರ್ಶನದ ಬೆನ್ನಿಗೇ ರೆಡ್ ಬಿಲ್ಡಿಂಗ್ ವಾಸ್ತವ್ಯಕ್ಕೆ ಕೊನೆ ಬಂತು. ಸನ್ನಿ ಯಾರನ್ನೋ ಹಿಡಿದು ಪಡೀಲಿನಲ್ಲಿ ಸಾಕಷ್ಟು ದೊಡ್ಡವೇ ಇದ್ದರೂ ಅಷ್ಟೇನೂ ಭದ್ರವಿಲ್ಲದ ಶೆಡ್ಡೊಂದನ್ನು ಬಾಡಿಗೆಗೆ ಮಾಡಿಸಿ ಕೊಟ್ಟರು, ಹಾವುಗಳನ್ನು ವರ್ಗಾಯಿಸಿದ್ದಾಯ್ತು. ಆದರೆ ಇದು ನಮ್ಮ ಓಡಾಟಕ್ಕೆ ಹೆಚ್ಚಿನ ಇನ್ನೊಂದೇ ದೂರವಾಗಿ ಕೊನೆಯವರೆಗೂ ಉಳಿಯಿತು. ಹಾವುಗಳ ನಿತ್ಯದ ನಿರ್ವಹಣೆ ನಮ್ಮಿಬ್ಬರದೇ. ಹೊಟ್ಟೆ ತುಂಬಿಸುವಲ್ಲಿ ಹೆಬ್ಬಾವಿಗೆ ವಾರಕ್ಕೊಂದಾದರೂ ಕೋಳಿಕೇರೆ ನಾಗರಕ್ಕೆ ಕಪ್ಪೆ ಇಲಿ ಆಗಾಗ, ಪುಟ್ಟ ಗಾತ್ರದವಕ್ಕೆ ಅರಣೆ ಹಲ್ಲಿ - ಎಲ್ಲ ಸಜೀವ ಪೂರೈಕೆಯಾಗಬೇಕು. ಪರಿಚಿತ ಜಿನಸಿನ ಅಂಗಡಿ ಮತ್ತು ಮನೆಗಳಲ್ಲಿ ಸಂಜೆ ಇಲಿಬೋನು ಇಟ್ಟು ಬರುತ್ತಿದ್ದೆವು. ಬೆಳಿಗ್ಗೆ ಹೋಗಿ ಬೇಟೆಯಾಗಿದ್ದರೆ ಸಂಗ್ರಹಿಸಿ, ಪಡೀಲಿಗೆ ಹೋಗಿ, ಉರಗಗಳ ಅಗತ್ಯ ಮತ್ತು ಯೋಗ್ಯತಾನುಸಾರ ಬೋನುಗಳ ಒಳಗೆ ಬಿಡಬೇಕಾಗುತ್ತಿತ್ತುಹಾವುಗಳ ಉಚ್ಚಿಷ್ಟ ಮತ್ತು ಉಳಿಕೆಗಳನ್ನು ತೆಗೆದು, ಗೂಡು ಶುದ್ಧಿ ಮಾಡುವುದೆಂದರೆ ಪ್ರತಿ ಬಾರಿಯೂ ಎಚ್ಚರದಿಂದ ಹಾವುಗಳನ್ನು ಅತ್ತಿತ್ತ ಮಾಡಲೇ ಬೇಕಾಗುತ್ತಿತ್ತು. ಇಲ್ಲವಾದರೆ ಅನಾರೋಗ್ಯಕರ ವಾತಾವರಣ, ಇನ್ನೂ ಅಪಾಯದ್ದು ಇರುವೆಗಳ ಆಕ್ರಮಣದ ಭಯ!

ಪ್ರದರ್ಶನದನಂತರ ನಮ್ಮನ್ನು ಬಹಳ ದೊಡ್ಡದಾಗಿ ಅಮರಿಕೊಂಡ ಜವಾಬ್ದಾರಿ ಹಾವು ಕಂಡ ಸಾರ್ವಜನಿಕರ ಭಯ ನಿವಾರಣೆ. ಓಡ್ರಿಕ್ ಕೊಟ್ಟ ಕೊಕ್ಕೆ, ಚೀಲ, ಪಾಠ ಹಾಗೂ ಉರಗ ಪ್ರದರ್ಶನದ ಸಮಯದಲ್ಲಿ ಇರುಳರನ್ನು ನೋಡಿ ಪಡೆದ ಅನುಭವಗಳು ಚೆನ್ನಾಗಿಯೇ ಇದ್ದುವು. ಆದರಲ್ಲಿ ಎಂಥಾ ವಿಷದ ಹಾವನ್ನುಆಡಿಸಿದರೂ ಒಂದು ಲೆಕ್ಕದಲ್ಲಿ ಅದು ಪ್ರಯೋಗಾಲಯದ ಸ್ಥಿತಿಯಂತೆ. ಯಾರದ್ದೋ ಮನೆಯ ಕಪಾಟಿನ ಅಡಿಯಲ್ಲಿ ಬಲವಾದ ನಾಗರ ಹಾವು, ಇನ್ಯಾವುದೋ ಬಚ್ಚಲ ತೂಬಿನ ಬಳಿಯ ಕಂದಡಿ, ಮತ್ತೆಲ್ಲೋ ವರದಿಯಲ್ಲಿ (ವಾಸ್ತವದಲ್ಲಿ ಬರಿಯ ಕೇರೇ ಇದ್ದದ್ದೂ ಉಂಟು!) ಭರ್ಜರಿ ಕಾಳಿಂಗವೇ ಇದೆ ಎನ್ನುವಾಗ ಪರಿಸರ ಹುಡುಗರಿಗೆ ದೊಡ್ಡ ಅಡ್ಡಿಯಾಗುತ್ತಿತ್ತು. ಜೊತೆಗೆ ಅದುವರೆಗೆ ಮನುಷ್ಯನ ಸಂಪರ್ಕಕ್ಕೆ ಬಾರದ ಆ ಉರಗಗಳ ಮನೋಸ್ಥಿತಿಯೂ ಸಂಗ್ರಹಾಲಯದ ಗೂಡುಗಳಲ್ಲಿದ್ದು ಬೇಸತ್ತ ಜೀವಿಗಳದ್ದಕ್ಕೆ ಬಹುತೇಕ ತಾಳೆಬೀಳುತ್ತಿರಲಿಲ್ಲ. ಕಾಲೇಜು, ಮನೆಯೆಂದಿಲ್ಲದೆ ಸನ್ನಿಗೆ ಕರೆಗಳು ಬರುತ್ತಿತ್ತು, ನಾವು ಓಡಬೇಕಾಗುತ್ತಿತ್ತು. ಭಯಭೀತರ ಕಣ್ಣಿನಲ್ಲಿ ಕೇರೇ ಹಾವೂ ನಾಗರವಾಗಿ ಕಾಣುತ್ತಿತ್ತು, ಮರಳು ಹಾವುಅಪೂಟ್ ಕಂದಡಿ’, ಹೆಬ್ಬಾವು ಸಾಕ್ಷಾತ್ ಪಿಲಿಕಂದೋಡಿ (ವಾಸ್ತವದಲ್ಲಿ ಈ ಹೆಸರಿಗೊಂದು ಪ್ರತ್ಯೇಕ ಹಾವೇ ಇಲ್ಲ)! ಇವೆಲ್ಲಕ್ಕೂ ಕಿರೀಟ ಪ್ರಾಯವಾಗಿ ನಮ್ಮ ಕಾಲೇಜುವಿದ್ಯಾಭ್ಯಾಸಕುಂಟುತ್ತಿತ್ತು, ಮನೆಯವರ ಅಸಹನೆ ಮೇರೆ ಮೀರುತ್ತಿತ್ತು. ಚಾರ್ಲೀ ಬೀಎಸ್ಸೀಗೆ ಓದು ಮುಗಿಸಿ ಔಷಧ ಕಂಪೆನಿಯಮರ್ಯಾದಸ್ಥಪ್ರತಿನಿಧಿಯಾಗಿ ಊರೂರು ಸುತ್ತಲು ಹೊರಟ. ನಾನು ಮಾತ್ರ ಹಾಗೂ ಹೀಗೂ ಎಂಎಸ್ಸಿಗೆ ನುಗ್ಗಿ, ಕೊಣಾಜೆಯ ದೂರಕ್ಕೆ ಜಾರಿಕೊಳ್ಳತೊಡಗಿದೆ. ಈ ಹಂತದಲ್ಲಿ ಸನ್ನಿಯವರಿಗೆ ಮಂಗಳೂರು ವೈಲ್ಡ್ ಲೈಪ್ ಟ್ರಸ್ಟ್ ಬರ್ಖಾಸ್ತು ಮಾಡುವುದು ಅನಿವಾರ್ಯವೆನ್ನಿಸಿತು.

ಮಂಗಳೂರಿನ ಇತಿಹಾಸದಲ್ಲಿ ಸುಮಾರು ಮೂರು ವರ್ಷಗಳಲ್ಲಿ ಅಪೂರ್ವ ದಾಖಲೆಯಾಗಿ ನಡೆದ ಪ್ರಥಮ ಉರಗೋದ್ಯಾನವನ್ನು ಅರಣ್ಯ ಇಲಾಖೆ ವಹಿಸಿಕೊಳ್ಳಲು ಮುಂದಾಯ್ತು. ಕದ್ರಿ ಗುಡ್ಡೆಯ ಮೇಲೆ ಇಲಾಖೆ ನೆಲ ತೆರವುಗೊಳಿಸಿತು. ಅಲ್ಲಿನ ಪ್ರದರ್ಶನಾಂಗಣದ ವಿನ್ಯಾಸ, ಪ್ರಾಥಮಿಕ ಚಟುವಟಿಕೆಗಳು ಮತ್ತು ಉದ್ಘಾಟನಾ ಅಗತ್ಯಗಳಲ್ಲೂ ಸನ್ನಿ ಮತ್ತು ಚಾರ್ಲೀ ತುಂಬಾ ಕೆಲಸ ಮಾಡಿದ್ದರು. ಆದರೆ ಸಹಜ ಅವಶ್ಯಕತೆ (ಓಡ್ರಿಕ್ ಮತತು ನಮ್ಮಿಬ್ಬರ) ಮತ್ತು ಕುತೂಹಲದ ಫಲವಾಗಿ ಹುಟ್ಟಿ, ಜ್ಞಾನ ವಿಸ್ತರಣೆ ಮತ್ತು ಅಧ್ಯಯನದ ಪ್ರಧಾನ ಅಂಗವಾಗಿ ವಿಕಸಿಸಬೇಕಾಗಿದ್ದ ಬಹು ಮಹತ್ತ್ವದ ವಸ್ತು - ಉರಗೋದ್ಯಾನ, ಮಂದೆಯ ರಜಾದಿನಗಳ ಬೆರಗಾಗಿ ಕದ್ರಿಯಲ್ಲಿ ಕೆಲಕಾಲ, ಸದ್ಯ ಪಿಲಿಕುಳದಲ್ಲಿ ಇಲಾಖೆಗೊಂದು ಖರ್ಚಿನ ಬಾಬಾಗಿ ವಿರಾಜಮಾನವಾಗಿದೆ. ನಾನು ಸ್ನಾತಕೋತ್ತರ ಪದವಿಯನಂತರ ಹಾವಿನ ವರ್ತನ ವಿಜ್ಞಾನದ ಮೇಲೆ ಸಂಶೋಧನೆ ನಡೆಸಿದೆ. ಕೆಲವು ವರ್ಷ ಪುತ್ತೂರು, ಹಾಸನಗಳಲ್ಲಿ ಅಧ್ಯಾಪನವನ್ನು ನಡೆಸಿ ಸದ್ಯ ಅಮೆರಿಕಾದಲ್ಲಿ ಹಾವುಗಳ ಸಂಶೋಧನಾ ನೆಲೆಯಲ್ಲೇ ಅಧ್ಯಾಪನ ನಡೆಸುತ್ತಿದ್ದೇನೆ. ಚಾರ್ಲಿಯ ಜೀವ ಪ್ರೀತಿಗೆ ಔಷಧ ವ್ಯಾಪಾರ ಅಲರ್ಜಿಯಾಗಿ ಕಳಚಿಕೊಂಡ. ಮತ್ಸ್ಯ ಸಂಗ್ರಹ, ಮೀನ್ಮನೆ ರಚನೆಗಳ ಸ್ವೋದ್ಯೋಗದೊಡನೆಹಾವು ಪೀಡಿತರ ಆಪದ್ಭಾಂಧವ್ಯ ಇಂದಿಗೂ ಮುಂದುವರಿಸಿದ್ದಾನೆ. ಜೀವರಾಶಿಯ ಮೇಲಿನ ಚಾರ್ಲಿಯ ಅಪಾರ ಪ್ರೀತಿ ವಿಸ್ತರಿಸಿದ್ದಕ್ಕೆ ಇಂದಿನ ದೊಡ್ಡ ಸಾಕ್ಷಿ - ಮಂಗಳೂರಿನ ಅನಿಮಲ್ ಕೇರ್ ಟ್ರಸ್ಟ್. ಅನಾಥವಾದ ಎಲ್ಲಾ ಬಗೆಯ ಪಶುಪಕ್ಷಿಗಳಿಗೆ ವೈವಿಧ್ಯಮಯ ಶುಶ್ರೂಷೆ, ಆಶ್ರಯ ಇಲ್ಲಿದೆ. ಇಂದು ಅನಿಮಲ್ ಕೇರ್ ಟ್ರಸ್ಟಿನಲ್ಲಿ ಹಣ, ಸಮಯ ತೊಡಗಿಸಿರುವ ಅನೇಕ ಮಂದಿ ಗಣ್ಯರು ನಿಸ್ಸಂದೇಹವಾಗಿ ಇದ್ದಾರೆ. ಆದರೆ ಏನು ಇದ್ದೂ ಇಲ್ಲದೆಯೂ ಪ್ರೀತಿ, ಕಾರ್ಯಶ್ರದ್ಧೆಯನ್ನೇ ಬಂಡವಾಳವಾಗಿಟ್ಟುಕೊಂಡ ಚಾರ್ಲ್ಸ್ ಪಾಲ್ ಅದರ ಜೀವಾಳ ಎಂದರೆ ತಪ್ಪು ತಿಳಿಯುವವರು ಯಾರೂ ಇಲ್ಲ.

1 comment:

  1. ಶರತ್ ಮತ್ತು ಚಾರ್ಲ್ಸ್ ಪಾಲ್ ಇವರ ಬಗ್ಗೆ ಬಹಳ ಕೇಳಿದ್ದೆ. ಹೆಚ್ಚಿನ ವಿವರ ಇಂದು ಸಿಕ್ಕಿತು. ಅಶೋಕವರ್ಧನರ ಉರಗ ಪ್ರೇಮದ ಬಗ್ಗೆಯೂ ತಿಳಿಯಿತು. ಆರ್ಟ್ಸ್ ಸಬ್ಜೆಕ್ಟ್ ತೆಗೆದು ಕೊಳ್ಳದೇ ಜೀವ ಶಾಸ್ತ್ರ ಕಲಿತಿದ್ದರೆ ನಮ್ಮ ಮೀಸೆ ಮಾಮ ಎಲ್ಲಿ ಇರುತ್ತಿದ್ದರೋ ಊಹಿಸಲಾರೆ. ಎಲ್ಲರಿಗೂ ಶುಭ ಹಾರೈಕೆಗಳು. - ಪೆಜತ್ತಾಯ ಎಸ್. ಎಮ್.

    ReplyDelete