05 February 2013

ಮಾನವ, ಚಂದ್ರನ ಮೇಲೆ

ಮಾನವ, ಚಂದ್ರನ ಮೇಲೆ
ಲೇಖಕ: ಜಿ.ಟಿ. ನಾರಾಯಣ ರಾವ್
(ಕಂತು ಒಂದು)

[ಕರ್ನಾಟಕ ಸಹಕಾರೀ ಪ್ರಕಾಶನ ಮಂದಿರ, ನಿಯಮಿತ, ಬೆಂಗಳೂರು ಮುದ್ರಣ: ೧೯೭೦ ೮+೧೦೩ ಪುಟಗಳು ಬೆಲೆ ರೂ ಮೂರು. ನನ್ನ ತಂದೆ - ಜಿಟಿನಾ ಅವರ ಎಲ್ಲ ಕೃತಿಗಳನ್ನು ಅಂತರ್ಜಾಲಕ್ಕೇರಿಸಿ ಉಚಿತವಾಗಿ ಸಾರ್ವಜನಿಕಕ್ಕೆ ಒದಗಿಸುವ ಯೋಜನೆಯಲ್ಲಿ ‘ಭವಿಷ್ಯವಿಜ್ಞಾನ,ದನಂತರದ ಕೃತಿ ಇದು. Micro soft wordನ ೨೦ರ ಗಾತ್ರದ ಅಕ್ಷರಗಳಲ್ಲಿ ವಾರಕ್ಕೆ ಸುಮಾರು ೧೫-೨೦ ಪುಟ, ಅಂದರೆ ಮೂಲ ಪುಸ್ತಕದ ಅಧ್ಯಾಯ ಒಂದರ ತಾರ್ಕಿಕ ಕೊನೆಯಲ್ಲಿ ಕೊನೆಗೊಳ್ಳುವಂತೆ ಹೊಂದಿಸಿಕೊಂಡು ಧಾರಾವಾಹಿಯಾಗಿಸುತ್ತಿದ್ದೇನೆ - ಅಶೋಕವರ್ಧನ]

ಅಧ್ಯಾಯ ಒಂದು
ಖಗೋಳಶಾಸ್ತ್ರ ಕಂಡ ಚಂದ
ಕಲ್ಪನೆಯಲ್ಲಿ
“ಶಿಶುರಾಮನಾಗಸದಿ ಮೆರೆದ ಪೂರ್ಣೇಂದುವಂ ನೋಡಿ, ಮೋಹಿಸಿ, ಪಡೆಯೆ ಹಲುಬಿ, ಹಂಬಲಿಸಿ, ಕಾಡಿದನು ಕೌಸಲ್ಯೆಯಂ.” (ರಾಮಾಯಣ ದರ್ಶನಂ)

ಇಪ್ಪತ್ತನೆಯ ಶತಮಾನದ ದಶರಥ “ಶಿವ ಶಿವಾ, ತಿರೆಗರಸನಾದರೇನೊಂದು ಕೂಸಿನ ಬಯಕೆ ಬಡತನವನೊಡರಿಸಿತಲಾ! ತನ್ನ ಸಿರಿಯಿನಿತು ಪುಸಿಯಾಯ್ತೇ?” ಎಂದು ದುಃಖಿಸಬೇಕಾಗಿಲ್ಲ. ಮಗುವಿನ ಸಮೇತ ಆಕಾಶನೌಕೆಯಲ್ಲಿ ಕುಳಿತು ಚಂದ್ರಮಂಡಲದೆಡೆಗೆ ಹಾರಿದರೆ ಮುಂದಿನ ಎರಡು ದಿವಸಗಳಲ್ಲಿ ಅವರು ಗುರಿ ತಲುಪಿರುತ್ತಾರೆ. ಆದರೆ ಶಿಶುರಾಮ ತಾನು ಬಯಸಿದ ಚಂದ್ರ ಅದು - ಎಂದು ಖಂಡಿತವಾಗಿಯೂ ಒಪ್ಪಲಾರ. ಏರು, ತಗ್ಗು, ಗುಂಡಿಗುಳುಪುಗಳಿರುವ ಈ ಮರುಭೂಮಿಯನ್ನಲ್ಲ ತಾನು ಬಯಸಿದ್ದು. ಎತ್ತರದಲ್ಲಿ ಇನ್ನೂ ಅಗಲವಾಗಿ ಪ್ರಕಾಶಮಾನವಾಗಿ ಕಾಣುವ (ಭೂಮಿಯ) ಬಿಂಬವನ್ನು ಎಂದು ಅತ್ತರೆ ದಶರಥನಿಗೆ (ಅಥವಾ ಕವಿಗೆ) ಹೊಸತೊಂದು ತಲೆನೋವು ಉಂಟಾಗದಿರದು. ಒಂದು ಮಿತಿಯಲ್ಲಿ ಕಲ್ಪನೆ ಚಂದ: ಅದರ ಬೆನ್ನೇರಿ ಹೋದ ವಾಸ್ತವಿಕತೆ ಕಾಣುವುದು ಬೇರೇನನ್ನೋ!

ಒಂದು ಹುಣ್ಣಮೆ ರಾತ್ರಿ. ಸೂರ್ಯ ಮುಳುಗುತ್ತಿದ್ದಂತೆ ಪೂರ್ಣಚಂದ್ರ ಪೂರ್ವಾಕಾಶದಲ್ಲಿ ಮೂಡುತ್ತಿದೆ; ಮೊಲ ಕುಳಿತಿರುವ ಬಿಂಬ, ತಂಪು ಕಿರಣ, ಸೌಮ್ಯ ಪ್ರಕಾಶ, “ಅಗಣಿತ ತಾರಾಗಣಗಳ ನಡುವೆ” ಪ್ರಮುಖ ಅಸ್ತಿತ್ವ; ನಿಶ್ಶಬ್ದ ಆದರೂ ಸ್ಪಷ್ಟ ಪಶ್ಚಿಮಾಭಿಮುಖ ಚಲನೆ - ಒಂದೊಂದೂ ನೆಲದ ಮೇಲೆ ನಿಂತ ಮನುಷ್ಯನಿಗೆ ಬಿಡಿಸಲಾಗದ ಒಗಟು, ವಿವರಿಸಲಾಗದ ಅಚ್ಚರಿ. ಇಂಥಲ್ಲಿ ಬಗೆಗಣ್ಣಿನ ಕೈವಾಡ ಹೆಚ್ಚು. ಚಂದ್ರ ಬೆಣ್ಣೆ ಮುದ್ದೆಯೇ? ಆಕಾಶಕ್ಕೆ ಯಾರೋ ಬಹುಮಾನಿಸಿದ ಬಂಗಾರದ ಮೆಡಲೇ? ಸ್ವರ್ಗದ ಹಾದಿಯಲ್ಲಿರುವ ‘ನಮಸ್ಕಾರ ಕಲ್ಲು’ ಚಂದ್ರನೇ? ತಾರೆಗಳು ಚಂದ್ರನ ಮಡದಿಯರೇ? ಅವರಲ್ಲಿ ಇಪ್ಪತ್ತೇಳು ಮಂದಿ ಮಾತ್ರ ಮನದನ್ನೆಯರೇ? ಗುರುಪತ್ನಿಯನ್ನು ಮೋಹಿಸಿದ ಚಂದ್ರ ಶಾಪಗ್ರಸ್ತನಾಗಿ ಕ್ಷೀಣಿಸಿ ಮರಣಹೊಂದಿ ಪುನರ್ಜನ್ಮ ಪಡೆಯುವನೇ? ವ್ಯೋಮ ವಿಸ್ತಾರದಲ್ಲಿ ಸಂಚರಿಸುತ್ತಿರುವಾಗ ದಾರಿ ತಪ್ಪಿ ರಾಹು ಕೇತು ಎಂಬ ರಾಕ್ಷಸರ ಬಾಯಿಗೆ ಬಲಿಯಾಗುತ್ತಾನೆಯೇ? ಮನುಷ್ಯ ಡೋಲು ಬಡಿದು, ಮಂತ್ರ ಪಠಿಸಿ, ರಕ್ಷೆ ನೀಡಿದ ಮೇಲೆ ರಾಕ್ಷಸರ ಬಾಯಿಯಿಂದ ಪಾರಾಗುವನೇ? ವಿರಹಿಗಳಿಗೆ ಅವನು ತಂಪಾದ ಬರೆ ಎಳೆಯುವುದು ನಿಜವೇ? ಸಮುದ್ರ ಅವನನ್ನು ಕಂಡು ಹಿಗ್ಗುವುದೇಕೆ? ನೈದಿಲೆಯೂ ಅವನೂ ಆಪ್ತ ಮಿತ್ರರೇ? ಒಂದು ವಿಷಯವಂತೂ ನಿಜ - ರಾತ್ರಿ ನಮಗೆ ಬೆಳಕು ನೀಡಲೆಂದು ದೇವರು ಆಕಾಶದಲ್ಲಿಟ್ಟಿರುವ ಲಾಂದ್ರ ಚಂದ್ರ.

ಕಲ್ಪನೆಯ ಬೆನ್ನೇರಿ ಹೋದ ವಾಸ್ತವಿಕತೆ

ಮೇಲು ನೋಟಕ್ಕೆ ಅಸಂಬದ್ಧವೆನಿಸುವ ಚಂದ್ರನ ಏರಿಳಿತಗಳಲ್ಲಿ ಒಂದು ಕ್ರಮವಿದೆ ಎಂದು ಮನುಷ್ಯ ತಿಳಿದ ದಿವಸ ಕಲ್ಪನಾಲೋಕದ ಮೋಡದ ಮೇಲಿನ ನಡೆಯಿಂದ ವಿಜ್ಞಾನ ಲೋಕದ ನೆಲಕ್ಕೆ ಕಾಲೂರಿದ.

ಹುಣ್ಣಮೆಯ ಮುಂದಿನ ರಾತ್ರಿ ತಡವಾಗಿ ಚಂದ್ರೋದಯವಾಯಿತು. ಮರುರಾತ್ರಿ ಮತ್ತೂ ತಡ. ಜೊತೆಯಲ್ಲೇ ಬಿಂಬಗಾತ್ರ ಕುಗ್ಗಿತು. ಮುಂದೊಂದು ರಾತ್ರಿ ಚಂದ್ರ ಇಲ್ಲ. ಇನ್ನೆರಡು ರಾತ್ರಿ ಕಳೆಯುವಾಗ ಬಾಲಚಂದ್ರ ಸೂರ್ಯನ ಹಿಂದೆ ಮುಳುಗುತ್ತಿರುವುದು ಕಾಣುತ್ತದೆ. ಇಲ್ಲಿಂದ ಮುಂದೆಯೂ ಚಂದ್ರೋದಯ ರಾತ್ರಿಯಿಂದ ರಾತ್ರಿಗೆ ತಡವಾಗಿಯೇ ಆದರೂ ಅದರ ಬಿಂಬ ಗಾತ್ರ ಮಾತ್ರ ವೃದ್ಧಿಸುತ್ತ ಹೋಗುವುದು. ಮತ್ತೊಂದು ರಾತ್ರಿ ಹುಣ್ಣಮೆಯ ಪುನಾರ್ವರ್ತನೆ. ಹೀಗೆ ಹುಣ್ಣಮೆಯಿಂದ ಮುಂದೆ ಕ್ಷಯಿಸುತ್ತ ಹೋದ ಚಂದ್ರಬಿಂಬ ಒಂದು ರಾತ್ರಿ ಕಣ್ಮರೆಯಾಗುವುದು, ಅಂದು ಅಮವಾಸ್ಯೆ. ಅಲ್ಲಿಂದ ಮುಂದೆ ವೃದ್ಧಿಸುತ್ತ ಸಾಗಿ ಹುಣ್ಣಮೆಯಂದು ಪೂರ್ಣವಾಗುವುದು. ಇಂಥ ಕ್ರಮಬದ್ಧ ನಿಯತಕಾಲಿಕ ಪರಿವರ್ತನೆಗಳಲ್ಲಿ ಅತ್ಯಪೂರ್ವವಾಗಿ ಒಂದು ವಿಶೇಷ ಪರಿಸ್ಥಿತಿ ತಲೆದೋರುವುದು ಉಂಟು. ಅದು ಹುಣ್ಣಮೆ ರಾತ್ರಿ ಮಾತ್ರ. ಅಂದು ಚಂದ್ರಬಿಂಬ ಪೂರ್ಣವಾಗಿಯೋ ಪಾರ್ಶ್ವವಾಗಿಯೋ ಸ್ವಲ್ಪ ಕಾಲ ಕಾಣದಾಗುವುದು, ಇದು ಒಂದು ನೆರಳು ಚಂದ್ರನನ್ನು ಹಿಡಿಯುವ ಸನ್ನಿವೇಶ; ಆದ್ದರಿಂದ ಚಂದ್ರಗ್ರಹಣ. ಒಂದು ಸ್ಥಳದಲ್ಲಿ ಕಾಣುವ ಗ್ರಹಣಗಳನ್ನು ದೀರ್ಘ ಕಾಲ ಅಭ್ಯಸಿಸಿದ ಮನುಷ್ಯ ಅವುಗಳಲ್ಲಿಯೂ ಒಂದು ನಿಯತಕಾಲಿಕತೆ (ನಿರ್ದಿಷ್ಟ ಅವಧಿಯಲ್ಲಿ ಅವಸ್ಥೆಗಳ ಪುನರಾವರ್ತನೆಗೆ ಈ ಹೆಸರಿದೆ) ಇದೆ ಎಂದು ತಿಳಿದ. ಕಾಣುವ ಚಂದ್ರ ಕಂಡಷ್ಟು ಸುಲಭನಲ್ಲ ಎಂಬ ಅರಿವು ಮೂಡಿದಾಗ ಮಾನವ ಚಂದ್ರನೆಡೆಗೆ ಮೊದಲ ಹೆಜ್ಜೆ ಇಟ್ಟ.

ಭೂಮಿ - ಅಂದರೆ ಮಾನವನ ನೆಲೆವನೆ - ನಿಶ್ಚಲ. ಇದು ಚಪ್ಪಟೆಯಾಗಿ ಅನಂತ ವಿಸ್ತಾರವಾಗಿದೆ. ಸೂರ್ಯ, ಚಂದ್ರ, ನಕ್ಷತ್ರ ಮೊದಲಾದ ಆಕಾಶಕಾಯಗಳೆಲ್ಲವೂ ಭೂಮಿಯ ಸುತ್ತಲೂ ಪ್ರದಕ್ಷಿಣೆ ಮಾಡುತ್ತಿವೆ. ಸೂರ್ಯನ ಪ್ರಖರತೆ, ಚಂದ್ರನ ಸೌಮ್ಯತೆ, ನಕ್ಷತ್ರಗಳ ಮಿನುಗು ಎಲ್ಲವೂ ಮಾನವನ ಸೌಕರ್ಯಕ್ಕಾಗಿ. “ನಾನಿಲ್ಲದಿದ್ದರೆ ಮೂರು ಲೋಕವೂ ಇಲ್ಲ” ಎಂದು ಮನುಷ್ಯ ದೃಢವಾಗಿ ನಂಬಿದ್ದ. ಕಂಡದ್ದಾದರೂ (ಇಂದು, ಮುಂದೂ ಸಹ) ಹೀಗೆಯೇ ಅಲ್ಲವೇ? ಕಾಲ ಉರುಳಿದಂತೆ ಸಮಸ್ಯೆ ಇಷ್ಟು ಸುಲಭವಾಗಿ ನಿವಾರಣೆ ಆಗಲಿಲ್ಲ. ಒಂದು ಸಮಸ್ಯೆ ಬಿಡಿಸುವಾಗ ಹೊಸವೆರಡು ಉತ್ಪನ್ನವಾಗುವುದು ಜ್ಞಾನದ ಹಸಿವಿನ ಲಕ್ಷಣ. ಚಂದ್ರ ಮತ್ತು ಗ್ರಹಗಳು ಸ್ಥಿರ ನಕ್ಷತ್ರಚಿತ್ರಗಳ ಹಿನ್ನೆಲೆಯಲ್ಲಿ ಚಲಿಸುತ್ತಿವೆಯೆಂದು ತಿಳಿಯಿತು. ಭೂಮಿಯ ಸುತ್ತ ಪ್ರತಿ ರಾತ್ರಿಯೂ ಅವು ಪ್ರದಕ್ಷಿಣೆ ಮಾಡುತ್ತಿರುವಂತೆ ಕಂಡರೂ ಪ್ರತ್ಯೇಕವಾದ ಇನ್ನೊಂದು ಚಲನೆಯೂ ಅವುಗಳಿಗೆ ಇದೆ; ಪ್ರತಿ ರಾತ್ರಿಯೂ ಕಾಣುವ ನಕ್ಷತ್ರಚಿತ್ರ ಒಂದೇ ಅಲ್ಲ ಎಂದು ಮನುಷ್ಯ ಕಂಡ. ವಿಶ್ವಕೇಂದ್ರ ಭೂಮಿ ಎಂಬ ಆಧಾರ ಭಾವನೆಯ ಶ್ರುತಿಯಲ್ಲಿ ಈ ಹೊಸ ಶೋಧ ಅಪಸ್ವರ ಮಿಡಿಯಿತು. ತನ್ನ ಸಾರ್ವಭೌಮತ್ವ ಬಿಟ್ಟುಕೊಡಲು ಮನುಷ್ಯ ಸಿದ್ದನಿರಲಿಲ್ಲ. ಆದ್ದರಿಂದ ಗ್ರಹಗಳ ಸೂರ್ಯ ಚಂದ್ರರ ಚಲನೆಗೆ ಬೇರೆ ಕಾರಣ ಹುಡುಕಿದ. ಪ್ರತಿ ಆಕಾಶಕಾಯದ ಕಕ್ಷೆ (ಎಸೆದ ಕಲ್ಲು ಸಾಗಿದ ದಾರಿ ಕಲ್ಲಿನ ಪಥ; ಭೂಮಿ ಸೂರ್ಯನ ಸುತ್ತಲೂ ಗಮಿಸುವ ದಾರಿ ಭೂಮಿಯ ಕಕ್ಶೆ) ಭೂಮಿ ಕೇಂದ್ರವಾಗಿರುವ ವೃತ್ತದ ಪರಿಧಿಯ ಮೇಲೆ ಕೇಂದ್ರವಿರುವ ಇನ್ನೊಂದು ವೃತ್ತ (ಇದರ ಹೆಸರು ಅಧಿವೃತ್ತ) ಎಂಬ ವಿವರಣೆ ನೀಡಿದ. ಇದೊಂದು ಇಂದಿಗೂ ವಿಸ್ಮಯ ತರಿಸುವಂಥ ಬೌದ್ಧಿಕ ಏರ್ಪಾಡು. ಆದರೆ ತಳದ ಆಧಾರ ಭಾವನೆಯೇ ಕುಸಿಯುವ ಕಾಲ ದೂರವಿರಲಿಲ್ಲ. ಮುಂದೊಂದು ದಿವಸ ಜ್ಞಾನಪ್ರವಾಹ ಇದನ್ನು ಕೊಚ್ಚಿಕೊಂಡೇ ಹೋಯಿತು. ಸೂರ್ಯ ಭೂಮಿಗಿಂತ ದೊಡ್ಡ ಮತ್ತು ಬಲಿಷ್ಠ ಕಾಯ; ನಕ್ಷತ್ರಗಳೆಲ್ಲವೂ ಸೂರ್ಯರೇ; ಬಲು ದೂರದಲ್ಲಿರುವುದರಿಂದ ಚುಕ್ಕೆಗಳಾಗಿ ಕಾಣುತ್ತಿವೆ; ಆಕಾಶ ಅಥವಾ ವಿಶ್ವ ಮೇರೆ ಇಲ್ಲದ ಮಹಾವ್ಯಾಪ್ತಿ - ಹೀಗಿರುವಾಗ ಭೂಮಿಯ ಸುತ್ತಲೂ ಸೂರ್ಯ ನಕ್ಷತ್ರಗಳು ಪರಿಭ್ರಮಿಸುವುದೆಂದರೇನು? (ಒಂದು ವಸ್ತು ಇನ್ನೊಂದು ವಸ್ತುವಿನ ಸುತ್ತಲೂ ಚಲಿಸಿದರೆ ಆ ಚಲನೆಯ ಹೆಸರು ಆವರ್ತನೆ). ಭೂಮಿಗೆ ಅನಂತವ್ಯಾಪ್ತಿಯೂ ಇಲ್ಲ, ಅದು ಚಪ್ಪಟೆಯೂ ಅಲ್ಲ. ಅದು ಸರಿಸುಮಾರು ಗೋಳಾಕಾರದ ಒಂದು ವಸ್ತು. ಅದು ತನ್ನ ಸುತ್ತಲೂ ಆವರ್ತಿಸುತ್ತ ಸೂರ್ಯನ ಸುತ್ತಲೂ ಪರಿಭ್ರಮಿಸುತ್ತಿದೆ. ಗ್ರಹಗಳೂ ಹಾಗೆಯೇ ಎಂದು ಸ್ಪಷ್ಟವಾಯಿತು. ವಿಶ್ವಕೇಂದ್ರ ಭೂಮಿ ಅಲ್ಲ ಎಂಬ ತಿಳಿವು ಹೊಳೆದಾಗ ಮಾನವ ಚಂದ್ರನೆಡೆಗೆ ಎರಡನೆಯ ಹೆಜ್ಜೆ ಇಟ್ಟ.

ಸೂರ್ಯನ ಮಕ್ಕಳು

ಹಳೆಯ ತಪ್ಪು ಕಲ್ಪನೆಗಳು, ಮೂಢನಂಬಿಕೆಗಳು ಜ್ಞಾನದ ಬೆಳಕು ಬಂದಂತೆ ಮಾಯವಾದುವು. ವಿಶ್ವದ ರಚನೆಗೆ ಅಲ್ಲಿರುವ ವ್ಯವಸ್ಥೆಗೆ ಹೊಸ ಅರ್ಥ ಬಂತು. ವಿಶ್ವಕೇಂದ್ರ ಭೂಮಿ ಅಲ್ಲ, ಇದೊಂದು ಸಾಧಾರಣ ಗ್ರಹ ಎಂಬ ತಿಳಿವಳಿಕೆ ಮನುಷ್ಯನನ್ನು ಹತಾಶಗೊಳಿಸುವ ಬದಲು ಹೊಸ ಸಾಹಸಕ್ಕೆ ಪಂಥಾಹ್ವಾನ ನೀಡಿತು. ಸೂರ್ಯ ಒಂದು ನಕ್ಷತ್ರ. ನಮಗೆ ಬೆಳಕು, ಉಷ್ಣ, ಚೈತನ್ಯ ನೀಡುವುದರಿಂದ ಅದು ನಮ್ಮ ನಕ್ಷತ್ರ. ನಮ್ಮ ಸಮೀಪದ ನಕ್ಷತ್ರ. ನಕ್ಷತ್ರಕ್ಕೆ ಸ್ವಯಂ ಪ್ರಭೆ ಇದೆ. ಅದೊಂದು ಉರಿಯುತ್ತಿರುವ ಪ್ಲಾಸ್ಮಾ ರಾಶಿ (ಅತ್ಯುಷ್ಣ ಮತ್ತು ಒತ್ತಡಗಳಿಂದ ಮೂಲ ವಸ್ತುಗಳು ಬೀಜರೂಪದಲ್ಲಿರುವ ಅವಸ್ಥೆ). ಸೂರ್ಯನ ಸುತ್ತಲೂ ಜಡ ವಸ್ತುಗಳಾದ ಪುಟ್ಟ ಕಾಯಗಳು ಪರಿಭ್ರಮಿಸುತ್ತಿವೆ. ಇವು ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್, ನೆಪ್ಚೂನ್; ಅಷ್ಟ ಗ್ರಹಗಳು.

Clyde Tombaug

[ಡಾ| ಎ.ಪಿ.ರಾಧಾಕೃಷ್ಣ ಟಿಪ್ಪಣಿ: ‘ಮತ್ತು ಪ್ಲುಟೋ; ನವಗ್ರಹಗಳು’ ಎಂದಿತ್ತು. ಇಂದು ಪ್ಲುಟೋವನ್ನು ಗ್ರಹಪಟ್ಟದಿಂದ ಇಳಿಸಲಾಗಿದೆ. ಇದು ಶುರುವಾದದ್ದು ಅಮೇರಿಕದ ಖಗೋಲವಿಜ್ಞಾನಿ ಮೈಕ್ ಬ್ರೌನ್ ಶೋಧದಿಂದ. ಯುರೇನಸ್ ಗ್ರಹದ ಚಲನೆಯ ವ್ಯತ್ಯಾಸಗಳಿಗೆ ನೆರೆಯಲ್ಲಿ ಇರುವ ಇನ್ನೊಂದು ಅಗೋಚರ ಕಾಯ ಕಾರಣವಿರಬಹುದೆಂದು ಊಹಿಸಿ ಅದರ ಹುಡುಕಾಟಕ್ಕೆ ತೊಡಗಿದ ಮಂದಿಗೆ ಮೊದಲಿಗೆ ಸಿಕ್ಕಿದ್ದು ನೆಪ್ಚೂನ್ ನಂತರ ದಕ್ಕಿದ್ದು ಪ್ಲುಟೋ (ಕ್ಲೈಡ್ ಟೊಂಬಗ್, ೧೯೩೦).  ಗುರು - ಮಂಗಳ ಗ್ರಹಗಳ ನಡುವೆ ಕ್ಷುದ್ರಗ್ರಹಗಳ ಹಿಂಡು ಇರುವಂತೆ ಭೂಮಿಯಿಂದ ಸುಮಾರು ೫೦ ಖಗೋಳಮಾನ (ಸೂರ್ಯ - ಭೂಮಿ ಅಂತರ = ೧ ಖಗೋಳಮಾನ) ದೂರದಲ್ಲಿ ಪ್ಲುಟೋನನ್ನು ಗಾತ್ರ ಮತ್ತು ದ್ರವ್ಯರಾಶಿಯಲ್ಲಿ ಮೀರಿಸುವ ಕಾಯಗಳ ಹಿಂಡೇ ನೆಲೆಸಿದೆ. ಇದಕ್ಕೆ ಕ್ಯೂಪಿಟರ್ ಬೆಲ್ಟ್ (ಪಟ್ಟಿ) ಎಂಬ ಹೆಸರಿದೆ. ಪ್ಲುಟೋ ಈ ಪಟ್ಟಿಯ ಸದಸ್ಯ ಎನ್ನುವುದು ತೊಂಬತ್ತರ ದಶಕದಲ್ಲಿ ಅರಿವಿಗೆ ಬಂತು. ಹಬಲ್ ಮತ್ತಿತರ ಬಾಹ್ಯಾಕಾಶದಲ್ಲಿ ನೆಲೆಸಿದ  ದೂರದರ್ಶಕಗಳು ಪ್ಲುಟೋನನ್ನು ಮೀರಿಸುವ ಕಾಯಗಳನ್ನೂ ಪತ್ತೆ ಮಾಡಿದವು. ಈಗಾಗಲೇ ಪ್ರಚಲಿತವಾಗಿರುವ ಗ್ರಹಗಳಂತೆ ಈ ಎಲ್ಲವೂ ಸೂರ್ಯನ ಸುತ್ತ ಪರಿಭ್ರಮಿಸುತ್ತಿವೆ. ಎಂದೇ ಅಂತಾರಾಷ್ಟ್ರೀಯ ಖಗೋಳ ಸಂಸ್ಥೆ ಪ್ಲುಟೋನನ್ನು ಕೂಡ ಕ್ಯುಪಿಟರ್ ಪಟ್ಟಿಯ ಸದಸ್ಯ ಕಾಯವೆಂದು ನಿರ್ಧರಿಸಿ, ಗ್ರಹ ಪಟ್ಟಿಯಿಂದ ಕಿತ್ತು ಹಾಕಿತು.]

ಸೂರ್ಯ, ಈ ಗ್ರಹ ಪರಿವಾರ, ಉಪಗ್ರಹಗಳು (ಗ್ರಹದ ಸುತ್ತಲೂ ಪರಿಭ್ರಮಿಸುವ ವಸ್ತು ಆ ಗ್ರಹದ ಉಪಗ್ರಹ; ಚಂದ್ರ ಭೂಮಿಯ ಉಪಗ್ರಹ) ಮುಂತಾದವುಗಳ ಒಟ್ಟು ಹೆಸರು ಸೌರವ್ಯೂಹ. ಚಂದ್ರನನ್ನು ಮೊದಲು ಒಂದು ಸ್ವತಂತ್ರ ಗ್ರಹವೆಂದೇ (ನಕ್ಷತ್ರದ ಸುತ್ತಲೂ ಪರಿಭ್ರಮಿಸುವ ಜಡವಸ್ತುವಿನ ಹೆಸರು ಆ ನಕ್ಷತ್ರದ ಗ್ರಹ) ಪರಿಗಣಿಸಲಾಗಿತ್ತು. ಆದರೆ ಚಂದ್ರನ ಚಲನೆ, ಅವಸ್ಥಾಂತರಗಳ ಸೂಕ್ಷ್ಮಾಭ್ಯಾಸದಿಂದ ಅದು ಭೂಮಿಯ ಸುತ್ತಲೂ ಪರಿಭ್ರಮಿಸುತ್ತಿರುವ ಕಾಯ ಎಂದು ಸ್ಪಷ್ಟವಾಯಿತು. ಭೂಮಿ ಸೂರ್ಯನ ಸುತ್ತಲೂ ಪರಿಭ್ರಮಿಸುತ್ತಿರುವಾಗ ಚಂದ್ರ ಭೂಮಿಯ ಸುತ್ತಲೂ ಪರಿಭ್ರಮಿಸುವುದು ಹೇಗೆ? ಒಂದು ಗಳಿಗೆಯಲ್ಲಿ ಒಂದಕ್ಕೊಂದು ಡಿಕ್ಕಿ ಆಗಬೇಡವೇ? ಎಂಬ ಪ್ರಶ್ನೆ ಮನುಷ್ಯನಿಗೆ ಮೂಡಿರಬೇಕು, ಇಂದೂ ಆ ಸಂಶಯ ಬರುವಂತೆ!

ಸೂರ್ಯ ಬಹುಶಃ ಒಂದು ದೊಡ್ಡ ಚಕ್ರಾಕಾರದ ತಟ್ಟೆಯ ಕೇಂದ್ರ. ಅದರಿಂದ ವಿವಿಧ ದೂರಗಳಲ್ಲಿ ಚಕ್ರದ ತಲದ ಮೇಲೆ ಗ್ರಹಗಳ ಸ್ಥಾನಗಳಿವೆ. ಇಡೀ ಚಕ್ರ ಆವರ್ತಿಸಿದಂತೆ ಗ್ರಹಗಳು ಸೂರ್ಯನ ಸುತ್ತಲೂ ಪರಿಭ್ರಮಿಸುವಂತೆ ತೋರುತ್ತವೆ ಎಂಬ ಕಾಲ್ಪನಿಕ ಚಿತ್ರ ಬಿಡಿಸಿದರು. ಆದರೆ ಈ ಚಿತ್ರ ಸೌರವ್ಯೂಹದ ನಿಜರೂಪಕ್ಕೆ ಸರಿ ಹೊಂದಲಿಲ್ಲ. ಗ್ರಹಗಳು ಚಕ್ರತಲದ ಮೇಲೆ ಸ್ಥಿರವಾಗಿದ್ದರೆ ಎರಡು ಪರಿಸ್ಥಿತಿಗಳು ತಲೆದೋರಬೇಕು: (೧) ಅವುಗಳ ಸಾಪೇಕ್ಷ ಸ್ಥಾನಗಳು ಎಂದೂ ಬದಲಾಗಬಾರದು. ಅಂದರೆ ಭೂಮಿಯಿಂದ ನೋಡಿದರೆ ಇತರ ಗ್ರಹಗಳು ರಚಿಸುವ ಆಕೃತಿ ಸದಾ ಒಂದೇ ಆಗಿರಬೇಕು. ವಾಸ್ತವಿಕವಾಗಿ ಹೀಗಿಲ್ಲ. (೨) ಸೂರ್ಯನ ಸಮೀಪ ಗ್ರಹಗಳ ಕಕ್ಷಾವೇಗ ದೂರಗ್ರಹಗಳದ್ದಕ್ಕಿಂತ ಕಡಿಮೆ ಇರಬೇಕು.

ಚಿತ್ರ ೧
(ಚಿತ್ರದಲ್ಲಿ E ಸಮೀಪಗ್ರಹ, P ದೂರಗ್ರಹ. ಇವೆರಡೂ ಒಂದು ಪರಿಭ್ರಮಣೆಯನ್ನು ಒಂದೇ ಕಾಲಾವಧಿಯಲ್ಲಿ ಮುಗಿಸುತ್ತವೆ. ಆದರೆ ಈ ಅವಧಿಯಲ್ಲಿ E ಗಮಿಸಿರುವ ಕಕ್ಷೆಯ ಉದ್ದ 2 π SE, P ಗಮಿಸಿರುವ ಕಕ್ಷೆಯ ಉದ್ದ 2 π S Pಗಿಂತ ಕಿರಿಯದು. ಆದ್ದರಿಂದ Eಯ ಕಕ್ಷಾವೇಗ  Pಯ ಕಕ್ಷಾ ವೇಗಕ್ಕಿಂತ ಕಡಿಮೆ). ವಸ್ತು ಸ್ಥಿತಿ ತದ್ವಿರುದ್ಧ - ಸಮೀಪಗ್ರಹಗಳ ಕಕ್ಷಾವೇಗ ಹೆಚ್ಚು, ದೂರಗ್ರಹಗಳದ್ದು ಕಡಿಮೆ.

ಕೆಪ್ಲರನ ಕೈಗನ್ನಡಿ

ಇಂಥ ಸಮಸ್ಯೆಗಳ ಕಗ್ಗಂಟನ್ನು ಬಿಡಿಸಿಕೊಂಡು ಬಂದ ದಾರಿಯ ಅನುಭವ ಸ್ವಾರಸ್ಯಕರವಾಗಿದೆ. ಗೊತ್ತಿರುವ ಅಂಶಗಳನ್ನು ಆಧರಿಸಿ ಒಂದು ಊಹೆಯನ್ನು ಮುಂದಿಡಲಾಗುವುದು. ಅದು ಪ್ರಾಯೋಗಿಕ ಸಾಫಲ್ಯ ಪಡೆದರೆ ಸಿದ್ಧಾಂತವೆನಿಸುತ್ತದೆ. ಮುನ್ನಡೆಯಲು ಕೈದೀವಿಗೆ ಆಗುವುದು. ಪಡೆಯದಿದ್ದರೆ ಇನ್ನೊಂದು ಊಹೆಗೆ ಎಡೆಮಾಡಿಕೊಡುತ್ತದೆ. ಊಹೆ ಸಿದ್ಧಾಂತವಾಗುವವರೆಗೂ ಪರಿಷ್ಕರಣ, ಪ್ರಯೋಗಗಳ ಸರತಿ, ವಾಸ್ತವಿಕತೆಗೆ ಬರೆದ ಭಾಷ್ಯ ಸಿದ್ಧಾಂತ. ಸೌರವ್ಯೂಹದ ಭಾಷ್ಯ ಈ ಕೆಳಗಿನ ಮೂರು ಸೂತ್ರಗಳನ್ನು ಅವಲಂಬಿಸಿದೆ.

(೧)  ಪ್ರತಿಯೊಂದು ಗ್ರಹದ ಕಕ್ಷೆಯೂ ಸೂರ್ಯ ಒಂದು ನಾಭಿಯಲ್ಲಿರುವ ದೀರ್ಘ ವೃತ್ತ.
(೨)  ಒಂದು ಗ್ರಹ ಸೂರ್ಯನನ್ನು ಕುರಿತು ಸಮಾನ ಕಾಲಾಂತರಗಳಲ್ಲಿ ಸಮಾನ ಕ್ಷೇತ್ರ ಫಲಗಳನ್ನು ರೇಖಿಸುವುದು.
(೩)  ಗ್ರಹದ ಅವಧಿಯ (ಒಂದು ಪರಿಭ್ರಮಣೆ ಮುಗಿಸಲು ಬೇಕಾಗುವ ಕಾಲ) ವರ್ಗ ಕಕ್ಷೆಯ ಅರ್ಧ ದೀರ್ಘಾಕ್ಷದ ಘನದ ಅನುಪಾತದಲ್ಲಿದೆ. [T2 X a3]

ವಿಶ್ವಕ್ಕಿಂತ ಅದನ್ನು ಕುರಿತ ಭಾಷ್ಯ ಭಯಂಕರವಾಗಿದೆ ಎಂಬ ಉದ್ಗಾರ ಸಹಜವಾಗಿ ಮೂಡುತ್ತದೆ. ಒಳಹೊಕ್ಕವರಿಗೆ ವಿಶ್ವದಲ್ಲಿರುವಂತೆ ಇದರಲ್ಲೂ ಇರುವ ಸೌಂದರ್ಯ ಅರಿವಾಗದಿರದು.

ಚಿತ್ರ ೨
ಒಂದು ಕಾಗದದ ಮೇಲೆ ಎರಡು ಗುಂಡು ಸೂಜಿಗಳನ್ನು S, S1 ಎಂಬಲ್ಲಿ ಚುಚ್ಚಿದೆ. ಅವುಗಳ ನಡುವಿನ ಅಂತರಕ್ಕಿಂತ ಹೆಚ್ಚು ಉದ್ದದ ದಾರವನ್ನು ತೆಗೆದುಕೊಂಡು ಅದರ ಒಂದೊಂದು ತುದಿಯನ್ನು ಒಂದೊಂದು ಸೂಜಿಗೆ ಕಟ್ಟಿದೆ. ಚೂಪು ಮೊನೆಯಿರುವ ಪೆನ್ಸಿಲ್ಲನ್ನು (P) ದಾರದ ನಡುವೆ ಸರಿಸಿ ದಾರ ಬಿಗಿಮಾಡಬೇಕು. ಈಗ ಅಖಂಡವಾದ ದಾರ SP, PS1 ಎಂಬ ಎರಡು ಭಿನ್ನ ಸರಳ ರೇಖೆಗಳಾಗಿ ರೂಪ ಪಡೆದಿದೆ. ಈ ರೂಪ ಕೆಡದಂತೆ (ಅಂದರೆ ದಾರ ಎಂದೂ ಸಡಿಲವಾಗದಂತೆ) P ಯನ್ನು ಜಾರಿಸಬೇಕು. Pಯ ಇಂಥ ಇನ್ನೆರಡು ಸ್ಥಾನಗಳು P1, P2 ಆಗಿದ್ದರೆ, SP + PS1 + SP1 + P1S1 = SP2 + P2S1 = ದಾರದ ಉದ್ದ ಎಂದು ನೋಡಬಹುದು. ಪೆನ್ಸಿಲ್ ಮೊನೆ P ಒಂದು ಮುಚ್ಚಿಕೊಂಡಿರುವ ಕೋಳಿಮೊಟ್ಟೆ ಆಕಾರದ ವಕ್ರ ರೇಖೆಯನ್ನು ಚಿತ್ರಿಸುತ್ತದೆ. ಇದೇ ದೀರ್ಘ ವೃತ್ತ; S, S1 ಇದರ ಎರಡು ನಾಭಿಗಳು; SS1 ನ ಮಧ್ಯಬಿಂದು C ದೀರ್ಘ ವೃತ್ತದ ಕೇಂದ್ರ. ಸರಳರೇಖೆ ದೀರ್ಘ ವೃತ್ತವನ್ನು A1 ಮತ್ತು A ಎಂಬ ಎರಡು ಬಿಂದುಗಳಲ್ಲಿ ಸಂಧಿಸುತ್ತದೆ. A1 A ಯನ್ನು ದೀರ್ಘವೃತ್ತದ ದೀರ್ಘಾಕ್ಷವೆಂದೂ CA=CA1 ಅನ್ನು ಅರ್ಧದೀರ್ಘಾಕ್ಷವೆಂದೂ ಕರೆಯುತ್ತೇವೆ.

ಚಿತ್ರ ೩
ಮೊದಲನೆಯ ಸೂತ್ರದ ಪ್ರಕಾರ ಸೂರ್ಯನ ಸ್ಥಾನ S ; ಗ್ರಹದ ಕಕ್ಷೆ P ರೇಖಿಸಿರುವ ದೀರ್ಘವೃತ್ತ. P ಎಂಬ ಗ್ರಹ ಒಂದು ನಿರ್ದಿಷ್ಟ ಅವಧಿಯಲ್ಲಿ P1ರಿಂದ P2 ಎಂಬಲ್ಲಿಗೆ ಬಂದಿದೆ ಎಂದು ಭಾವಿಸೋಣ (ಚಿತ್ರ ೩). ಆಗ ಅದು ಸೂರ್ಯನನ್ನು ಕುರಿತು ರೇಖಿಸಿರುವ ಕ್ಷೇತ್ರಫಲ SP1P2. ಮುಂದೆ ಒಂದು ದಿವಸ ಆ ಗ್ರಹ P3 ಎಂಬಲ್ಲಿಗೆ ಬರುತ್ತದೆ. ಹಿಂದಿನಷ್ಟೇ ನಿರ್ದಿಷ್ಟ ಅವಧಿಯಲ್ಲಿ ಅದು P3 ರಿಂದ P4 ಎಂಬಲ್ಲಿಗೆ ಬರಲಿ. ಈಗ ಗ್ರಹ ರೇಖಿಸಿರುವ ಕ್ಷೇತ್ರಫಲ SP3 P4. ಎರಡನೆಯ ಸೂತ್ರದ ಪ್ರಕಾರ ಇವೆರಡೂ ಸಮಾನ, ಅಂದರೆ ಕ್ಷೇ. SP1P2  = ಕ್ಷೇ. SP3P4. ಇದರಿಂದ ಒಂದು ವಿಷಯ ತಿಳಿಯುವುದು: P1 P2  (ಸೂರ್ಯ ಸಮೀಪದ) ರೇಖಾಖಂಡದ ಉದ್ದ P3 P4 (ಸೂರ್ಯದೂರದ) ರೇಖಾಖಂಡದ ಉದ್ದಕ್ಕಿಂತ ಹೆಚ್ಚು; ಆದರೆ ಇವೆರದೂ ರೇಖಿಸಲು ತೆಗೆದುಕೊಂಡ ಕಾಲಾಂತರ ಒಂದೇ; ಆದ್ದರಿಂದ ಗ್ರಹದ ಕಕ್ಷಾವೇಗ P1 P2 ಖಂಡದಲ್ಲಿ P3 P4 ಖಂಡಕ್ಕಿಂತ (ಅಂದರೆ ಸೂರ್ಯಸಮೀಪವಿರುವಾಗ ಸೂರ್ಯ ದೂರದಲ್ಲಿರುವುದಕ್ಕಿಂತ) ಹೆಚ್ಚು. ಗ್ರಹ Aಯಿಂದ ಹೊರಟು ಪುನಃ ಅಲ್ಲಿಗೆ ಬರುವ ಕಾಲಾಂತರ (ಇದೇ ಗ್ರಹದ ಅವಧಿ) T ಆಗಿದ್ದರೆ, ಮೂರನೆಯ ಸೂತ್ರದ ಪ್ರಕಾರ, T2=KCA3 ಇಲ್ಲಿ K ಒಂದು ಸ್ಥಿರಾಂಕ.

ಇವುಗಳನ್ನು ಮಂಡಿಸಿದ ವಿಜ್ಞಾನಿಯ ಹೆಸರಿನಿಂದ ಕೆಪ್ಲರನ ಸೂತ್ರಗಳೆಂದೇ ಇವು ಪ್ರಸಿದ್ಧವಾಗಿವೆ. ಸೌರವ್ಯೂಹದ ಗ್ರಹೋಪಗ್ರಹಗಳ ವರ್ತನೆಯನ್ನು ಈ ಸೂತ್ರಗಳು ಸಮರ್ಪಕವಾಗಿ ವಿವರಿಸುತ್ತವೆ. ಕೆಪ್ಲರನ ಸೂತ್ರಗಳ ಪ್ರಕಾರವೇ ಸೌರವ್ಯೂಹ ಏಕೆ ರಚಿತವಾಗಿರಬೇಕೆಂಬ ಪ್ರಶ್ನೆ ಕೆಪ್ಲರನ (೧೫೭೧-೧೬೩೦) ಅನಂತರ ಬಂದ ನ್ಯೂಟನ್‌ನಿಗೆ (೧೬೪೨-೧೭೨೭) ಮೂಡಿತು. ಆಕಾಶಕಾಯಗಳ ಗುರುತ್ವಾಕರ್ಷಣೆಯ ನಿಯಮವನ್ನು ಅವನು ಈಗಾಗಲೇ ಅನ್ವೇಷಿಸಿದ್ದ. ಇದರ ಪ್ರಕಾರ ಯಾವುದೇ ಎರಡು ಕಾಯಗಳ ನಡುವೆ ಪರಸ್ಪರ ಆಕರ್ಷಣ ಬಲವಿದೆ - ಅಂದರೆ ಒಂದನ್ನು ಇನ್ನೊಂದು ತನ್ನೆಡೆಗೆ ಸೆಳೆಯುತ್ತದೆ. ಇದು ಕಾಯಗಳ ದ್ರವ್ಯರಾಶಿಗಳ ಗುಣಲಬ್ದವನ್ನು ಕಾಯಗಳ ನ್‌ಡುವಿನ ದೂರದ ವರ್ಗದಿಂದ ಭಾಗಿಸಿ ದೊರೆಯುವ ಭಾಗಲಬ್ಧದ ಅನುಪಾತದಲ್ಲಿದೆ. A ಮತ್ತು B ಎರಡು  ಕಾಯಗಳಾಗಿರಲಿ. M, m ಅವುಗಳ ದ್ರವ್ಯರಾಶಿಗಳೂ R ಅವುಗಳ ನಡುವಿನ ದೂರವೂ ಆಗಿರಲಿ.

ಚಿತ್ರ ೪
ಆಗ  A,Bಯನ್ನು ತನ್ನೆಡೆಗೂ, B,Aಯನ್ನು ತನ್ನೆಡೆಗೂ ಸೆಳೆಯುವ ಗುರುತ್ವಾಕರ್ಷಣ ಬಲ GMm/R2  ಆಗಿದೆ. ಇಲ್ಲಿ G ವಿಶ್ವಗುರುತ್ವಾಕರ್ಷಣ ಸ್ಥಿರಾಂಕ. ಈ ನ್ಯೂಟನ್ ನಿಯಮವನ್ನು ಸೂರ್ಯ -ಭೂಮಿ - ಚಂದ್ರ ವ್ಯವಸ್ಥೆಗೆ ಅನ್ವಯಿಸಿ ನೋಡಿದಾಗ ಸೂರ್ಯನ ಸುತ್ತಲೂ ಭೂಮಿಯ ಕಕ್ಷೆ, ಭೂಮಿಯ ಸುತ್ತಲೂ ಚಂದ್ರನ ಕಕ್ಷೆ (ಬೇರಾವುದೇ ಗ್ರಹ - ಸೂರ್ಯ, ಗ್ರಹ ಅದರ ಉಪಗ್ರಹ ತೆಗೆದುಕೊಳ್ಳಬಹುದು) ಕೆಪ್ಲರ್ ಸೂತ್ರಗಳ ಪ್ರಕಾರವೇ ಇವೆ ಎಂದು ತಿಳಿಯಿತು. ಸೂರ್ಯ, ಭೂಮಿ ಎರಡೂ ಪರಸ್ಪರ ಆಕರ್ಷಿಸುವಾಗ ಭೂಮಿಯೇ ಏಕೆ ಸೂರ್ಯನ ಸುತ್ತಲೂ ಪರಿಭ್ರಮಿಸಬೇಕು? ಆಕಾಶದಲ್ಲಿ ಬಲಿಷ್ಠನೇ ಗೆಲ್ಲುತ್ತಾನೆ (ಬಲವುಳ್ಳದ್ದೇ ಸತ್ಯ, ಬಲವಿಲ್ಲದ್ದೇ ಮಿಥ್ಯ - ಶ್ರೀ ಲಾಂಗೂಲಂ). ತಾಯಿ ಪುಟ್ಟಮಗು ಅಪ್ಪಲೆತಿಪ್ಪಾಲೆ ಆಟ ಆಡುವುದನ್ನು ಗಮನಿಸಿ ನೋಡಿ. ಇಬ್ಬರೂ ಒಬ್ಬರನ್ನೊಬ್ಬರು ಎಳೆಯುತ್ತಾರೆ. ಆದರೆ ಮಗುವೇ ತಾಯಿಯ ಸುತ್ತಲೂ ಓಡಬೇಕಾಗುತ್ತದೆ. ಭೂಮಿ-ಚಂದ್ರರ ವ್ಯವಾಹಾರದಲ್ಲಿ ಚಂದ್ರ ಭೂಮಿಯ ಸುತ್ತಲೂ ಸೂರ್ಯ-ಭೂಮಿ ವ್ಯವಹಾರದಲ್ಲಿ ಭೂಮಿ ಸೂರ್ಯನ ಸುತ್ತಲೂ ಪರಿಭ್ರಮಿಸುತ್ತವೆ. ಹೀಗೆ ಗುರುತ್ವಾಕರ್ಷಣಬಲ ಆಕಾಶಕಾಯಗಳ ಕಕ್ಷೆಗಳನ್ನೂ ವೇಗಗಳನ್ನೂ ನಿರ್ಧರಿಸುತ್ತದೆ. ಈ ಬಲ ಆಯಾ ಕಾಯದ ದ್ರವ್ಯರಾಶಿಯನ್ನು ಅವಲಂಬಿಸಿದೆ.

ಚಂದ್ರ ಭೂಮಿಯನ್ನು ಪರಿಭ್ರಮಿಸುತ್ತಿರುವಾಗಲೇ ಭೂಮಿ ಚಂದ್ರನ ಸಮೇತ ಸೂರ್ಯನನ್ನು ಪರಿಭ್ರಮಿಸುತ್ತಿದೆ. ಭೂಮಿಯ ಗುರುತ್ವಾಕರ್ಷಣ ವಲಯದಲ್ಲಿರುವ ಚಂದ್ರನಿಗೆ ಈ ಎರಡನೆಯ (ಸೂರ್ಯನ ಸುತ್ತಲಿನ) ಚಲನೆ ಸಹಜವಾಗಿ ಲಭಿಸುವುದು, ವೇಗವಾಗಿ ಸಂಚರಿಸುವ ಒಂದು ರೈಲು ಬಂಡಿಯಲ್ಲಿ ಒಂದು ಕೊನೆಯ ಬೋಗಿಯಿಂದ ಇನ್ನೊಂದು ಕೊನೆಯ ಬೋಗಿಯವರೆಗೆ ನಾವು ಎಷ್ಟೇ ವೇಗದಿಂದ ಯಾವ ರೀತಿಯಲ್ಲಿಯೇ ಓಡಿದರೂ ಬಂಡಿಯ ಚಲನೆಯ ಫಲ ಸಹಜವಾಗಿ ನಮಗೆ ಲಭಿಸುವಂತೆ.

ಈ ಸೂರ್ಯ ಎಷ್ಟು ದೊಡ್ಡವನು? ನಮಗೂ ಅವನಿಗೂ ಇರುವ ದೂರವೆಷ್ಟು? “ಸೂರ್ಯ ಬಲಕ್ಕೆ, ಗ್ರಹಗಳು ಸೂರ್ಯನಿಂದ ಅವುಗಳ ದೂರಾನುಸಾರ ಒಂದೇ ಸರಳರೇಖೆಯ ಮೇಲೆ ನಿಲ್ಲಿ” ಎಂದು ಮಿಲಿಟೆರಿ ಆಜ್ಞೆ ನೀಡಿದರೆ ಎದುರಾಗುವ ಚಿತ್ರ ವಿಸ್ಮಯಕರವಾಗಿದೆ. ಗಾತ್ರ? ಒಂದು ಲಕ್ಷ ಭೂಮಿಗಳನ್ನು ಸುಲಭವಾಗಿ ಕಬಳಿಸಬಲ್ಲ ದೈತ್ಯ ಸೂರ್ಯ. ಆದರೆ ದೂರ? ಅಗಾಧವಾಗಿದೆ. ಸೂರ್ಯನಿಂದ ಗ್ರಹಗಳ ಸರಾಸರಿ ದೂರ (ದಶ ಲಕ್ಷ ಕಿಮೀಗಳಲ್ಲಿ) ಹೀಗಿವೆ: ಬುಧ ೫೭.೯ (ಖ.ಮಾ ೦.೩೮೭), ಶುಕ್ರ ೧೦೮.೨ (೦.೭೨೩), ಭೂಮಿ ೧೪೯.೬ (೧), ಮಂಗಳ ೨೨೭.೯ (೧.೫೨೪), ಗುರು ೭೭೮.೪ (೫.೨೦೩), ಶನಿ ೧೪೨೪ (೯.೫೨೨), ಯುರೇನಸ್ ೨೮೭೨ (೧೯.೨೦), ನೆಪ್ಚೂನ್ ೪೪೯೯ (೩೦.೦೭), ಪ್ಲೂಟೋ ೫೯೪೩ (೩೯.೭೨). ಆಕಾಶದ ಗಾತ್ರ, ದೂರಗಳನ್ನು ಮನುಷ್ಯನ ಅನುಭವದ ಮಾನದಂಡದಿಂದ ಅಳೆಯುವುದು ಸಾಧ್ಯವಿಲ್ಲ ಎಂದು ತಿಳಿದಾಗ ಮಾನವ ಇನ್ನೊಂದು ಪ್ರಗತಿಪರ ಹೆಜ್ಜೆಯನ್ನು ಚಂದ್ರನೆಡೆಗೆ ಊರಿದ.

[ಪುಸ್ತಕರೂಪದಲ್ಲಿ ಮೊದಲ ಪುಟಗಳಲ್ಲೇ ಬಂದಿರುವ ಈ ಎರಡು ಪೀಠಿಕೆಗಳನ್ನು ಸಾಪ್ತಾಹಿಕ ಕಂತಿನ ಸ್ವಾರಸ್ಯ ಕೆಡಿಸದಂತೆ ಮೊದಲೇ ಕೊಡದಿದ್ದರೂ (ಮುಂದೆ ವಿ-ಪುಸ್ತಕ ರೂಪದಲ್ಲಿ ಸರಿಪಡಿಸಿಕೊಡುತ್ತೇವೆ) ದಾಖಲೆಯ ದೃಷ್ಟಿಯಿಂದ ಈ ಕೊನೆಯಲ್ಲಿ ಕೊಡುತ್ತಿದ್ದೇನೆ - ಅಶೋಕವರ್ಧನ]

ನಿರಂಜನ
ಚಿತ್ರ ಕೃಪೆ ಕೆ. ಎಲ್. ಕಾಮತ್
ಪ್ರಕಾಶನದ ಪ್ರಧಾನ ಸಂಪಾದಕ ನಿರಂಜನರಿಂದ
ಕೃತಿಕರ್ತೃ ಪರಿಚಯ
(ಮಾರ್ಚ್ ೫ ೧೯೭೦)

ಅಪೂರ್ವ ಬರವಣಿಗೆಯೊಂದನ್ನು ಹೆಮ್ಮೆಯಿಂದ ಕನ್ನಡ ಓದುಗರ ಮುಂದಿಡುತ್ತಿದ್ದೇವೆ. ವಿಷಯ ಪ್ರತಿಯೊಬ್ಬರ ಮನೆಮಾತಾಗಿರುವ ಚಂದ್ರಲೋಕ ಯಾತ್ರೆ. ಲೇಖಕರು ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕ ಜಿ.ಟಿ ನಾರಾಯಣರಾಯರು.

ಇಂಥದೊಂದು ಬರಹ ಕನ್ನಡದಲ್ಲಿ ಸಾಧ್ಯವಾಗುತ್ತಿರುವುದು ಅಭಿಮಾನ ಪಡಬೇಕದ ಸಂಗತಿ. ಶ್ರೀಸಾಮಾನ್ಯರಿಗೆ ಕ್ಲಿಷ್ಟವೆಂದು ಕಾಣಬಹುದಾದ ಅಪೊಲೋ ಯಾನ ಜಿಟಿ ನಾರಾಯಣರಾಯರ ಕೈಯಲ್ಲಿ ರಮ್ಯ ಕಥನವಾಗಿದೆ. ಕಲೆ, ಸಾಹಿತ್ಯ ವಿಜ್ಞಾನಗಳೆಲ್ಲ ಈ ಲೇಖಕರಿಗೆ ಸ್ಫೂರ್ತಿ ಚೇತನವಾಗಿರುವುದರಿಂದಲೇ ‘ಮಾನವ, ಚಂದ್ರನ ಮೇಲೆಯಂಥ ಸೊಬಗಿನ ಸೃಷ್ಟಿ ಕನ್ನಡಿಗರಿಗೆ ದೊರೆಯುತ್ತಿದೆ.

ಕರ್ತೃ ನಾರಾಯಣರಾಯರಿಗೂ ಹೊದಿಕೆಯ ಚಿತ್ರವನ್ನು ಒದಗಿಸಿದ ಮದರಾಸಿನ USIS ಕಚೇರಿಯ ಅಧಿಕಾರಿಗಳಿಗೂ ಕರಡು ತಿದ್ದಲು  ನೆರವಾದ ‘ಜ್ಞಾನಗಂಗೋತ್ರಿ’ ಸಂಪಾದಕವರ್ಗದ ರಾಜಾ ಶೈಲೇಶಚಂದ್ರ ಗುಪ್ತರಿಗೂ ವಂದನೆಗಳು.

ಓದುಗರಲ್ಲಿ ಲೇಖಕನ ವಿಜ್ಞಾಪನೆಗಳು
ಜಿಟಿ ನಾರಾಯಣರಾವ್, ಮೈಸೂರು
(ಫೆಬ್ರವರಿ ೨೨, ೧೯೭೦)

ಜಿ.ಟಿ. ನಾರಾಯಣ ರಾವ್
ಶ್ರೀ ನಿರಂಜನ ಅವರು ಇಂಥ ಒಂದು ಬರವಣಿಗೆಯನ್ನು ನನ್ನಿಂದ ಅಪೇಕ್ಷಿಸಿದರು. ಇದು ನನಗೂ ಪ್ರಿಯವಾದ ಹವ್ಯಾಸ. ಇದರ ಫಲವಾಗಿ ನಾನು ಆಗಾಗ ‘ಕಸ್ತೂರಿ’, ‘ಕರ್ಮವೀರ ಪತ್ರಿಕೆಗಳಿಗೆ ಆಯಾ ಪತ್ರಿಕೆಗಳ ಸಂಪಾದಕರ ಇಚ್ಛೆ ಪ್ರಕಾರ ಹಲವಾರು ಲೇಖನಗಳನ್ನು ಬರೆದಿದ್ದೆ. ಹೀಗಾಗಿ ನನ್ನ ಕೆಲಸ ಸುಲಭವಾಯಿತು. ಈ ಸಂತೋಷದಾಯಕ ಕಾರ್ಯವನ್ನು ನನಗೆ ಒಪ್ಪಿಸಿದುದಕ್ಕೆ ಶ್ರೀ ನಿರಂಜನರಿಗೂ ‘ಕಸ್ತೂರಿ, ‘ಕರ್ಮವೀರ ಪತ್ರಿಕೆಗಳ ಸಂಪಾದಕರುಗಳಿಗೂ ನಾನು ಕೃತಜ್ಞನಾಗಿದ್ದೇನೆ. ಮುದ್ರಣ ಮತ್ತು ಪ್ರಕಾಶನ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವ ಶ್ರೀ ಪ.ಸು ಭಟ್ಟರಿಗೂ ಕರ್ನಾಟಕ ಸಹಕಾರಿ ಪ್ರಕಾಶನ ಮಂದಿರ, ನಿಯಮಿತ, ಬೆಂಗಳೂರು ಇದರ ಇತರ ಅಧಿಕಾರಿಗಳಿಗೂ ನನ್ನ ವಂದನೆಗಳು. ನವಚಂದ್ರನನ್ನು ಕುರಿತ ತಮ್ಮ ‘ಚಂದ್ರನಿಗೆ ಕವನವನ್ನು ಇಲ್ಲಿ ಉದ್ಧರಿಸಲು ಅನುಮತಿಯಿತ್ತ ಡಾ| ಜಿ.ಎಸ್ ಶಿವರುದ್ರಪ್ಪನವರಿಗೆ, ಚಿತ್ರಗಳನ್ನು ಸುಂದರವಾಗಿ ಬರೆದು ಕೊಟ್ಟಿರುವ ಶ್ರೀ ಸಿ.ವಿ ಇಟಿಗಟ್ಟಿಯವರಿಗೆ, ಅಪೊಲೊ ಯೋಜನೆಯ ವಿವರಗಳನ್ನು ಸಕಾಲದಲ್ಲಿ ಒದಗಿಸಿಕೊಟ್ಟು ಸಹಕರಿಸಿದ ಅಮೆರಿಕ ಸಾಂಸ್ಕೃತಿಕ ಕೇಂದ್ರದ ಶ್ರೀ ಡಿ. ಆರ್ ಶ್ರಿಕಂಠರಾಯರಿಗೆ ನಾನು ಆಭಾರಿಯಾಗಿದ್ದೇನೆ.
ನನ್ನ ವಕ್ರಗಮನದಲ್ಲಿ ತಾಳಗೆಡದೆ ನಡೆದು ಬಂದಿರುವ ನಿಮಗೆ ಇದೊ ವಂದನೆ! ಅಭಿವಂದನೆ!

[ಮುಂದಿನವಾರ ತಾಯಿ ಮತ್ತು ಮಗಳು]

2 comments:

  1. ಬೇಳೂರು ಸುದರ್ಶನ05 February, 2013 15:08

    ನಿಮ್ಮ ಮುಕ್ತ ಮಾಹಿತಿ ಪ್ರಯತ್ನಕ್ಕೆ ಮತ್ತೊಮ್ಮೆ ನಮನಗಳು. ಸ್ವತಃ ಪುಸ್ತಕ ಪ್ರಕಾಶಕರಾಗಿಯೂ ಅಂತರಜಾಲದ ಮುಕ್ತ ಮಾಹಿತಿಯ ತತ್ವವನ್ನು ಅರಿತವರಾಗಿ, ಕಾಲಮಾನದ ಅಗತ್ಯಗಳಿಗೆ ಸ್ಪಂದಿಸುವವರಾಗಿ ನಿಮ್ಮ ವರ್ತನೆಯು ಕನ್ನಡ ಲೇಖಕರಿಗೆ ಮಾದರಿ ಎಂದರೆ ತಪ್ಪಿಲ್ಲ. ಅಂತರಜಾಲದ ತತ್ವ `ಮಾಹಿತಿ ಮುಕ್ತ, ಸೇವೆಗೆ ಶುಲ್ಕ' ಎಂಬ ರೆವಿನ್ಯೂ ಮಾಡೆಲ್‌ಗಾದರೂ ಒಪ್ಪಿಕೊಂಡರೆ ಜಗತ್ತು ಎಷ್ಟೋ ಬದಲಾಗುತ್ತದೆ. ಈಗಲೂ ಕಾಗದವನ್ನು ಬ್ಲೀಚ್‌ ಮಾಡಿ ಅದರಲ್ಲೇ ಪುಸ್ತಕ ಮುದ್ರಿಸಿ ಮಾರಿ ಬದುಕಬೇಕು; ಪುಸ್ತಕ ಸಂಸ್ಕೃತಿ ಬೆಳೆಯಬೇಕು ಎಂದು ಹಟ ಹಿಡಿಯುವ ಬದಲು, ಪರ್ಯಾಯ ಮಾರ್ಗಗಳನ್ನೂ ಜೊತೆಜೊತೆಯಲ್ಲೇ ಬೆಂಬಲಿಸುವುದು (ಶೇ. ೧೦೦ ಪರ್ಯಾಯ ಎಂದು ನನಗೆ ಈಗ ಅನ್ನಿಸಿಲ್ಲ) ಈ ಹೊತ್ತಿನ ಅಗತ್ಯ. ಅದನ್ನು ನೀವು ತುಂಬಾ ಹದವರಿತು ಬಳಸುತ್ತಿದ್ದೀರಿ.
    ಈ ನಿಟ್ಟಿನಲ್ಲಿ ನವಕರ್ನಾಟಕದ ಶ್ರೀ ಆರ್‌ ಎಸ್ ರಾಜಾರಾಂ, ಪುಸ್ತಕ ಸಂಸ್ಕೃತಿಯನ್ನು ಈಗಲೇ ಕೈಬಿಡಲಾಗದು ಎಂಬ ಎಚ್ಚರಿಕೆಯೊಂದಿಗೇ `ಕಣಜ' ಜಾಲತಾಣಕ್ಕೆ ವಿಜ್ಞಾನ ತಂತ್ರಜ್ಞಾನ ಪದ ಸಂಚಯದ ಸಾಫ್ಟ್‌ ಪ್ರತಿಯನ್ನು ನೀಡಿರುವುದನ್ನು ನೆನಪಿಸಿಕೊಳ್ಳಲು ನನಗೆ ಸಂತೋಷವಾಗುತ್ತದೆ. ಒಂದು ಬಗೆಯಲ್ಲಿ ಹೈಬ್ರಿಡ್‌ (ಮಿಶ್ರ ಎನ್ನಿ) ಕಾಲದಲ್ಲಿದ್ದೇವೆ ನಾವು. ಅದನ್ನರಿತು ಮಾಹಿತಿಯನ್ನು ಹಂಚಿಕೊಳ್ಳುವುದು ಸೊಗಸು.

    ReplyDelete
  2. ನಿಜವಾಗಿಯೂ ಉಪಯುಕ್ತ ಮಾಹಿತಿಯನ್ನು ಒಳಗೊಂಡ ಲೇಖನ. ಧನ್ಯವಾದಗಳು .ಎಲ್ ಸಿ ಸುಮಿತ್ರಾ

    ReplyDelete