18 January 2013

ಬರ್ಕತ್ತಿಲ್ಲದ ಹುಡುಕಾಟದಲ್ಲಿ ಅಬ್ಬಿಗಳು


ದುರ್ಗಮ ಕಾಡುಕೊಳ್ಳದಲ್ಲಿ ಎದ್ದುಬಿದ್ದು ಬಂದ ಶ್ರಮಕ್ಕೆ ಮೈಯನ್ನು ಗಾಳಿಗೊಡ್ಡಿಕೊಳ್ಳುತ್ತಾ ಉಶ್ ಎಂದು ಬಂಡೆಯಂಚಿನಿಂದ ಕೂಡ್ಲು ಝರಿ ಹಾರಿಕೊಳ್ಳುತ್ತಲೇ ಇತ್ತು. ಗಾಳಿಯ ಲಹರಿಯಲ್ಲಿ ಬಳುಕಿ, ಅತ್ತಿತ್ತ ತೆಳು ಪರದೆಯನ್ನೇ ಬಿಡಿಸಿ, ಅಲ್ಲಿಲ್ಲಿ ನೀರಹುಡಿಯಲ್ಲಿ ಕಾಮನಬಿಲ್ಲು ಮೂಡಿಸಿ, ದರೆಯ ಗೋಡೆಗಂಟಿದ ಅಷ್ಟೂ ತನ್ನ ಖಾಸಾ ಹಸಿರಿನ ವೈವಿಧ್ಯದ ಮೈದಡವಿ, ಸೀತಾಳೆಹೂಗಳಲ್ಲಿ ಮುತ್ತಿನ ಹನಿಯಿಟ್ಟು, ಮಡುವಿನ ಮೇಲೆ ಸೂರ್ಯ ಕೋಲೂರಿದಲ್ಲೆಲ್ಲಾ ಬೆಳಕಿನ ಬೀಜಗಳನ್ನು ಬಿತ್ತುತ್ತಿತ್ತು. ಕೆಲವೊಮ್ಮೆ ಗಾಳಿಯ ಆತುರಕ್ಕೆ ಪ್ರಪಾತದಂಚಿನಲ್ಲೇ ಕ್ಷಣಕಾಲ ನೀರೆ ಹಿಂಜರಿದು, ಹೆಚ್ಚಿನ ರಭಸದಲ್ಲಿ ಧುಮುಕುತ್ತಿದ್ದಳು! ಅನುಮಾನ ಧಾವಂತಗಳ ಈ ಅಲೆ ಮಾತ್ರ ಮಡುವನ್ನು ಕಲ್ಲೋಲಗೊಳಿಸುತ್ತ ಅಬ್ಬರಿಸುತ್ತಿತ್ತು. ಸುಮಾರು ಮೂವತ್ತಡಿ ವ್ಯಾಸದ ಕನ್ನಡಿಕೊಳ, ಸುತ್ತ ಮತ್ತಷ್ಟು (ಸುಮಾರು ನೂರಡಿ ವ್ಯಾಸ) ಅಂತರದಲ್ಲಿ ಪ್ರಕೃತಿಯೇ ಕಟ್ಟಿಕೊಟ್ಟ ಮನೋಹರ ಆವರಣ ಯಾರನ್ನೂ ನೀರಾಟಕ್ಕಿಳಿಯಲು ಆಹ್ವಾನಿಸುತ್ತಿತ್ತು. ನಮಗೋ ಕಲ್ಲೆದ್ದು ಕೊರಕಲುಬಿದ್ದ ದಾರಿ ಎಂಬ ಅವಶೇಷದಲ್ಲಿ ಸುಮಾರು ಎಂಟೊಂಬತ್ತು ಕಿಮೀ ಬೈಕಿನಲ್ಲಿ ಉರುಡಾಡಿದ ಶ್ರಮ ಒಂದು ಕಡೆ. ಅಲ್ಲಿ ಮೆತ್ತಿಕೊಂಡ ದೂಳು, ಹೊಗೆಯನ್ನು ಕೂಡ್ಲು ತೋಟದಲ್ಲಿ ಬೈಕ್ ಬಿಟ್ಟು, ಜಲಪಾತದೆಡೆಗಿನ ಓಟದಲ್ಲಿಳಿದ ಬೆವರಿನಲ್ಲಿ ಕಲಸಿದ್ದೆವು. (ಮಡಿಕೇರಿ ಬಾಲ್ಯದಲ್ಲಿ ಕೊಹಿನೂರು ಟೂರಿಂಗ್ ಟಾಕೀಸಿನಲ್ಲಿ ಸಿನಿಮಾಕ್ಕೆಂದು ನಡೆದು ಹೊರಟವರಿಗೆ ಮುಖ್ಯ ರಸ್ತೆ ಬಿಡುವ ಮೊದಲೇ “ನಮೋ ವೆಂಕಟೇಷಾ...” ಕೇಳಿದ ಅನುಭವವಾಗಿ, ಸಿನಿಮಾ ಮುಗಿದೇ ಹೋಯ್ತೋ ಎಂಬ ಕಾತುರ ಏರಿ, ಹಿರಿಯರೆಲ್ಲಾ ಎಷ್ಟು ನಿಧಾನಿಗಳೆಂದು ಕೋಪ ತಲೆಗಡರಿದ್ದೆಲ್ಲಾ ನೆನಪಾಗದೆ ಇಲ್ಲ!) ಅಬ್ಬಿಯ ಆವರಣದೊಳಗೆ ನುಗ್ಗುತ್ತ ಎಡಕ್ಕೆ ಸಾಕಷ್ಟು ವಿಸ್ತಾರಕ್ಕೆ ಉರುಟುರುಟು ಕಲ್ಲು, ಅಚ್ಚ ಬಿಳಿ ಮರಳಿನ ದಂಡೆ. ಮಡುವಿನ ಹೊರಹರಿವು ಬಲಪಾತ್ರೆಯಲ್ಲಿ ಕಲಕಲಿಸುತ್ತಿತ್ತು. ಮಳೆಗಾಲಕ್ಕೆ ಸೊಕ್ಕಿದ್ದನ್ನು ಉಳಿಗಾಲಗಳಲ್ಲಿ ನಾಚಿಕೊಂಡಂತೆ ಹತ್ತೆಂಟು ಜಾಡುಗಳಲ್ಲಿ ತೆಳುವಾಗಿ ಹರಿದಿತ್ತು.


ಮೀನಸಖಿಯರೊಡನೆ ಪ್ರತಿ ಬಂಡೆಯ ಸುತ್ತುವರಿದು ಸಂತೈಸುತ್ತ, ನಡುಗಿ ನೀರಾಗಿದ್ದ ಹುಲ್ಲುಹಸಿರಿನ ಪಾದ ಕಚಗುಳಿಯಿಟ್ಟು ನವಿರೇಳಿಸುತ್ತಲಿತ್ತು. ಎಲ್ಲೆಲ್ಲಿನದೋ ಕಲ್ಲು ಗಿಡಕ್ಕೆ ಸಂಬಂಧ ಬೆಳೆಸಿ ಜೋಕಾಲಿ ಕಟ್ಟಿ ಕುಳಿತ ಹುಲಿ ಜೇಡಗಳು, ಆ ಈ ಮೂಲೆಗಳ ಪುಟ್ಟ ಮಡುಗಳಲ್ಲಿ ನಿರಂತರ ಗೀಟೆಳೆದು ಅಳಿದರೂ ಬಳಲದ ಕಲಾಕಾರರೆಂದೆಲ್ಲ ಪಟ್ಟಿ ಮಾಡಿದರೆ ಮುಗಿಯುವಂತದ್ದಲ್ಲ. ನೊಜೆ ಹುಲ್ಲು, ತೆರ್ಮೆಯೇ (ಫರ್ನ್) ಮೊದಲಾದ ಸಸ್ಯ ವೈವಿಧ್ಯವಂತೂ ಹೂಪರಿಮಳಗಳ ಜಾಲದಲ್ಲಿ ಚಿಟ್ಟೆ ಹಕ್ಕಿಗಳ ಬಿನ್ನಾಣದಲ್ಲಿ ನಮ್ಮನ್ನು ಕೆಡಹಿ, ಕಾರ್ಗಾಲದ ಅನುಭವ - ಮುಖ್ಯವಾಗಿ ಭಯವನ್ನೇ ಹುಸಿ ಅನಿಸಿಬಿಡುತ್ತದೆ, ಕೂಡ್ಲು ಅಬ್ಬಿ.

ಅಬ್ಬಿಯ ಪ್ರಧಾನ ಧಾರೆ ಬೀಳುವಲ್ಲಿ ನೀರು ಸಾಕಷ್ಟು ಆಳವೇನೋ ಇದೆ, ಆದರೆ ಯಾವುದೇ ಅಪಾಯಕಾರಿ ಸುಳಿ, ಸೆಳವುಗಳಿಲ್ಲ. ನೇರ ಜಲಧಾರೆಯನ್ನುಳಿದ ಹರಹಿನಲ್ಲಿ ಈಜು ಬರುವವರಾದರೆ ಉಳಿದಾಳಗಳಲ್ಲಿ ಯಾರೂ ಇಲ್ಲಿ ಮೋಜು ಅನುಭವಿಸಬಹುದು. ಒಮ್ಮೆ ಮಳೆಗಾಲ ಕಳೆದ ಹೊಸದರಲ್ಲಿ ಮಾತ್ರ ಮಡುವಿನಲ್ಲಿ ಮೇಲಿನಿಂದ ಕೊಚ್ಚಿ ಬಂದು ತಳಕ್ಕೆ ಸಿಕ್ಕಿ ಬಿದ್ದಿದ್ದ ಭಾರೀ ಬೀಳಲೋ ಪೊದರೋ ನಮ್ಮ ಕಾಲು ಸವರಿ ಹೆದರಿಸಿದ್ದಿತ್ತು. ಉಳಿದಂತೆ ಕೂಡ್ಲು ತೀರ್ಥ ನಮ್ಮ ಎಲ್ಲಾ ತಂಡಗಳಿಗೂ ಪ್ರತಿಬಾರಿಯೂ ಹೊಸಹೊಸದೇ ಸಂತೋಷವನ್ನು ಕೊಟ್ಟಿದೆ.

ಪ್ರಾಕೃತಿಕ ಸತ್ಯಗಳನ್ನು ಮನುಷ್ಯನ ಮಿತಿಗೆ ಅಳವಡಿಸಿ ಕೊಡುವ ಸ್ಥಳಪುರಾಣಿಕರು ಇಲ್ಲಿಗೂ ಕಟ್ಟಿಕೊಟ್ಟ ‘ಸಂಪ್ರದಾಯ’ ಚೆನ್ನಾಗಿಯೇ ಇದೆ. ನೇರ ಎತ್ತರದಿಂದ ಧುಮುಕುವ ಹೆಚ್ಚಿನೆಲ್ಲಾ ಜಲಪಾತಗಳಂತೇ ಇಲ್ಲೂ ನೀರಿನ ಮುಖ್ಯ ಬೀಳಿಗೂ ಬುಡದಲ್ಲಿ ಅದರ ಬಂಡೆ ಮೈಗೂ ಸಾಕಷ್ಟು ಅಂತರವಿದೆ. ಸಹಜವಾಗಿ ಆ ಅಂಚಿನಲ್ಲಿ ನೆಲ ಕಡಿಮೆ ಸವಕಳಿಗೆ ಸಿಗುವುದರಿಂದ ಧೈರ್ಯಸ್ಥರು ಅಲ್ಲಿ ಸುಲಭವಾಗಿ ನಡೆದು - ಅಂದರೆ ಜಲಧಾರೆಯ ಮರೆಯಲ್ಲೇ ಹಾಯ್ದು, ಇನ್ನೊಂದು ದಂಡೆಗೆ ಹೋಗಬಹುದು. ಹೆಚ್ಚಿನ ಭಕ್ತಿ ಭಾವದವರು ಇಲ್ಲಿ ನಡೆಯುವಾಗ ‘ಗೋವಿಂದಾ’ ಹಾಕುವುದಿದೆ. ಮತ್ತು ನಾನು ಮೊದಲೇ ಹೇಳಿದಂತೆ ನೀರಧಾರೆ ತಡವರಿಸಿ ಬೀಳುವುದನ್ನು ‘ಭಕ್ತನನ್ನು ತೀರ್ಥ ಕಾಪಾಡುವ’ ಕ್ರಮವಾಗಿ ಗ್ರಹಿಸುವುದರಲ್ಲಿ ತಪ್ಪೇನಿಲ್ಲ. (ಗೋವಿಂದಾ ಹೇಳಿದರೆ ತೀರ್ಥ ದಾರಿ ಬಿಟ್ಟುಕೊಡುತ್ತದೆ - ಎನ್ನುತ್ತದೆ ಜನಪದ. ಬಾಗಿಲು ತೆರೆಯೇ ಸೂಸಮ್ಮಾ ಎಂದ ಹಾಗೆ ದಾರಿ ಕೊಡೇ ಸೀತಮ್ಮಾ?) ತಮಾಷೆ ಎಂದರೆ ಕೊಡಚಾದ್ರಿಯ ತಪ್ಪಲಿನ ಬೆಳಕಲ್ ತೀರ್ಧದಲ್ಲಿ ಸನ್ನಿವೇಶ ಇಂಥದ್ದೇ ಆದರೂ ಪರಿಣಾಮ ಉಲ್ಟಾ ಆಗುವುದನ್ನು ಅಲ್ಲಿನ ಪುರಾಣಿಕರು ಹೇಳುತ್ತಾರೆ. ಅಲ್ಲಿ ಒಟ್ಟಾರೆ ನೀರ ಮೊತ್ತವೇ ಕಡಿಮೆ, ಸಾಲದ್ದಕ್ಕೆ ನೀರು ಬೀಳುವ ದರೆ ಮುಕ್ತವಾಗಿ ಪಶ್ಚಿಮದಿಂದ ಬರುವ ಕಡಲಗಾಳಿಗೆ ತೆರೆದುಕೊಂಡಿದೆ. ತಳದಲ್ಲೆಲ್ಲಾ ಭಾರೀ ಬಂಡೆ ಗುಂಡುಗಳ ಒಟ್ಟಣೆ ಮಾತ್ರವಿದ್ದು, ಪವಿತ್ರಸ್ನಾನಕ್ಕೆ ಬರುವವರಿಗೆ ಪ್ರಾಕೃತಿಕ ಮಡುವಿನ ಸೌಕರ್ಯವೂ ಒದಗುವುದಿಲ್ಲ. ಜಲಧಾರೆ ಚದುರಿದ ಸಪುರ ಧಾರೆಗಳಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಎರಚಾಡುತ್ತಿರುತ್ತದೆ. ಭಕ್ತ ಬಂಡೆ, ಕೊರಕಲೆಂದು ಬಸವಳಿಯುವ ಬದಲು, ಒಂದೆಡೆ ಅದರ ನೆರಳಲ್ಲಿ ನಿಂತು ‘ಗೋವಿಂದಾ’ ಹಾಕಿದರೆ ಸಾಕಂತೆ - ‘ತೀರ್ಥ’ದ ಪ್ರೋಕ್ಷಣೆ  ಖಾತ್ರಿ!

ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ ಎಂದು ನಂಬಿದವರು ಮಾಮೂಲಾಗಿ ಹೇಳುವ ಮಾತು - ಋಷಿ ಮತ್ತು ನದೀ ಮೂಲ ನೋಡಕೂಡದು. ನಾನಾದರೋ ನಂಬಿಕೆಗಳನ್ನು (ವೇದ ಗಾದೆಗಳನ್ನೂ) ಪ್ರಶ್ನಿಸುವುದು ಸಾಹಸದ ಪ್ರಾಥಮಿಕ ಅಗತ್ಯ ಎಂದೇ ನಂಬಿದವನು. ಋಷಿ ಮೂಲ ತಿಳಿಸಲು ಅಥವಾ ಅನ್ವೇಷಿಸುವಲ್ಲಿ ನನ್ನ ಹಿರಿಯ ಗೆಳೆಯ ಪ್ರೊ| ನರೇಂದ್ರ ನಾಯಕರುಹೆಚ್ಚು ಕಡಿಮೆ ನಾಲ್ಕು ದಶಕಗಳಿಂದ ಅವಿರತ ದುಡಿಯುತ್ತಲೇ ಇದ್ದಾರೆ. ಅವರ ಅಗಣಿತ ಸಾಹಸಗಳು ಸಾಮಾಜಿಕ ಸ್ವಾಸ್ಥ್ಯವನ್ನು ಉನ್ನತ ಸ್ತರಕ್ಕೆ ಒಯ್ಯುವಲ್ಲಿ ಮಾಡಿದ ಪ್ರಭಾವವನ್ನು ನಾನು ಸದಾ ಗೌರವಿಸುವವನೇ ಆದರೂ ಅದು ನೇರ ನನ್ನ ಆಸಕ್ತಿಯ ವಿಷಯವಲ್ಲ! ನಾನು ನದೀ ಮೂಲವನ್ನು ಮಾತ್ರ ಹುಡುಕುವಲ್ಲಿ ಕೆಲವು ಕೆಲಸ ಮಾಡಿದ್ದಿದೆ. ಆದರೆ ನೆನಪಿರಲಿ, ನನ್ನ ಲಕ್ಷ್ಯ ಯಾವುದೋ ಕಂದಾಚಾರದ ಖಂಡನೆಯಲ್ಲ, ಅಲ್ಲಿನ ವಿಶಿಷ್ಟ ಪ್ರಾಕೃತಿಕ ಸೌಂದರ್ಯವನ್ನು ಸ್ವಾಂಗೀಕರಿಸಿಕೊಳ್ಳುವ ಸಾಹಸ ಮಾತ್ರ. ಹಾಗೇ ಒಮ್ಮೆ ನಮ್ಮದೊಂದು ಸಣ್ಣ ಸಾಹಸ ಯಾನ ಕೂಡ್ಲು ತೀರ್ಥದ ಪಾತ್ರೆಯ ಬಲದಂಡೆಯಲ್ಲೇ ಏರುನಡಿಗೆಗಿಳಿದು ಹರಟೆಕಾನದ (ನಕ್ಷೆ ನೋಡಿ) ಮೂಲಕ ಮೂಲಶೋಧಕ್ಕೆ ಪ್ರಯತ್ನಿಸಿದ್ದಿತ್ತು. ಆದರೆ ಸುಮಾರು ಅರ್ಧ ಗಂಟೆಯ ಅವಧಿಯಲ್ಲೇ ಕೊಳ್ಳ ಬಲಕ್ಕೆ ತೀವ್ರ ತಿರುವು ತೆಗೆದುಕೊಳ್ಳುವುದರೊಡನೆ ಕೊರಕಲು ಸಪುರವೂ ಬಂಡೆಮೈ ಸುಲಭ ಸಾಧ್ಯವಲ್ಲವೆಂದೂ ಕಾಣಿಸಿತ್ತು. ಅಂದಿನ ನಮ್ಮ ಸಿದ್ಧತೆ ಮತ್ತು ತಂಡದ ಅನುಭವವನ್ನು ನೆಚ್ಚಿ ನಾನು ಮುಂದುವರಿಯಲಾರದೆ ಕೈಬಿಟ್ಟಿದ್ದೆ.


ಸರ್ವೇಕ್ಷಣ ಇಲಾಖೆಯ ನಕ್ಷೆಯನ್ನೇ ನೆಚ್ಚಿ, ಇನ್ನೊಮ್ಮೆ ಸ್ವಲ್ಪ ಬೇರೇ ದಿಕ್ಕಿನಲ್ಲಿ ನಮ್ಮ ಮೂಲಶೋಧದ ಪ್ರಯತ್ನವೂ ನಡೆದದ್ದಿತ್ತು. ಸ್ಥಳಪುರಾಣಿಕರು ನರಸಿಂಹ ಪರ್ವತಕ್ಕೆ ಹಲವು ನದಿಗಳ (ಪಂಚ ನದಿ?) ಉಗಮ ಸ್ಥಾನದ ಗೌರವ ಕೊಡುತ್ತಾರೆ. ನಕ್ಷೆ ಇದಕ್ಕೇನೂ ಸಾಕ್ಷಿ ಒದಗಿಸುವುದಿಲ್ಲ. ಆದರೆ ಆ ನೆಪದಲ್ಲಿ ಕೂಡ್ಲು ಅಬ್ಬಿಯ ಎಡದಂಡೆಯ ದರೆಯನ್ನು ಏರಿ, ನೇರ ನರಸಿಂಹಪರ್ವತವನ್ನು ಸೇರುವ ಯೋಜನೆ ಹಾಕಿದೆ. ರಕ್ಷಣೆಗೆ ಹಗ್ಗ, ಒಂದು ರಾತ್ರಿ ಶಿಬಿರವಾಸಾದಿಗಳಿಗೆ ಸಜ್ಜಾಗಿಯೂ ತಂಡವೇನೋ ಹೊರಡಿಸಿದೆ. ನಿಮಗೆ ತಿಳಿದಿರಬಹುದು, ನನ್ನ ಆರೋಹಣ ಪರ್ವತಾರೋಹಿಗಳು ಸಾಹಸಿಗಳು ತಂಡ ಒಂದು ಔಪಚಾರಿಕ ಹೆಸರು ಮಾತ್ರ. ಇದರ ಕಲಾಪಗಳಲ್ಲಿ ಯಾರೂ ಯಾವತ್ತೂ ನನ್ನೊಡನೆ ಬರಬಹುದು ಮತ್ತು ಅವರು ಕೇವಲ ಆಯಾ ಕಲಾಪದ ನೇರ ಖರ್ಚುಗಳಿಗಷ್ಟೇ ಪಾಲುದಾರರು. (ಪ್ಲಿಕೇಶನ್ನು, ಡ್ಮಿಶನ್, ನುಯಲ್ ಮೆಂಬರ್ ಶಿಪ್ಪೆಂಬ -ತ್ರಿ ನಿಧಿ ಬೆಳೆಸುವುದನ್ನು ನಾನು ಸ್ಪಷ್ಟವಾಗಿ ನಿರಾಕರಿಸಿದವನು - ಮನೆಯನೆಂದೂ ಕಟ್ಟದಿರು!) ಇದು ಪಾರದರ್ಶಕ ಮತ್ತು ಬಹು ವಿಸ್ತೃತ ವಲಯಗಳಿಂದಲೂ ಭಾಗಿಗಳನ್ನು ತರುತ್ತಿತ್ತು. ಆದರೆ ಇದರ ಒಂದೇ ಗಂಭೀರ ಕೊರತೆ - ಕಠಿಣ ಸವಾಲುಗಳ ಮುಖದಲ್ಲಿ ತಂಡ ಶಿಸ್ತು ಬದ್ಧವಾಗಿ ಒಂದೇ ಎಂದು ಪ್ರಮಾಣೀಕರಿಸುವಲ್ಲಿ ಕೆಲವೊಮ್ಮೆ ಸೋಲುತ್ತಿತ್ತು. ಪ್ರಸ್ತುತ ತಂಡದಲ್ಲೂ ಮುಖ್ಯವಾಗಿ ಹೆಸರಿಸುವುದೇ ಆದರೆ ಇಬ್ಬರು - ಮಂವಿವಿನಿಲಯದ ಗಣಿತಾಧ್ಯಾಪಕ ಸಂಪತ್ಕುಮಾರ್ ಮತ್ತು ಖ್ಯಾತ ಫೊಟೋಗ್ರಾಫರ್ ಎಂ. ಮಹೇಶ್ ಭಟ್ಟ್ ತಂಡದ ಪ್ರಗತಿಗೆ ಭಾರೀ ಹೊರೆಗಳಾದರು.

ನಾವು ಬಹು ಕಿರಿದಂತರದಲ್ಲಿ ಸುಮಾರು ಎರಡು ಸಾವಿರ ಅಡಿ ಎತ್ತರವನ್ನು ಮೊದಲಿಗೆ ಏರಲೇಬೇಕಿತ್ತು. ಅಂದರೆ ಪಶ್ಚಿಮ ಘಟ್ಟ ಸರಣಿಯ ಆ ವಲಯದ ಸವಾಲನ್ನು ಮುಗಿಸಿದಂತಾಗುತ್ತಿತ್ತು. ಅಲ್ಲಿನ ನೆಲದ ಔನ್ನತ್ಯವನ್ನು ನಕ್ಷೆ ಹೇಳುವಂತೆ ಸಮುದ್ರ ಮಟ್ಟದಿಂದ ೨೩೮೭ ಅಡಿಯಾದರೂ ಮತ್ತೆ ೩೭೮೪ ಅಡಿ ಎತ್ತರದ ನರಸಿಂಹ ಪರ್ವತ ವಿರಾಮದ ನಡಿಗೆ ಮಾತ್ರ. ಅಬ್ಬಿಯ ಎಡದಂಡೆ ಬಂಡೆಯ ಮೇಲೆ ಮಹಾಬಂಡೆ ಒಟ್ಟಿದಂತೆ ತೋರಿದರೂ ಎಲ್ಲೂ ಅಖಂಡತೆ ಕಾಡಲಿಲ್ಲ, ಮುಂಚಾಚಿಕೆಯೂ ಇರಲಿಲ್ಲ. ಎಡೆ ಎಡೆಗಳ ಆಳೆತ್ತರದ ಹುಲ್ಲು ಬಗಿದು, ಗಿಡಗಳನ್ನು ಆಧರಿಸಿಕೊಂಡು ಏರಬೇಕಿತ್ತು. ಗಟ್ಟಿ ಹೆಜ್ಜೆ ಸಿಕ್ಕದಿರುವುದು, ಆಗೀಗ ಆಧರಿಸಿದ ಪುಟ್ಟ ಕಲ್ಲು ಕಿತ್ತು ಕಾಲುತಲೆ ಕೆಳಮೇಲಾಗುವುದು, ಹುಲ್ಲ ಮೆದೆಯಲ್ಲಿ ಹುಗಿದ ಹೆಜ್ಜೆ ಹುಸಿಯಾಗಿ ಮುಗ್ಗರಿಸಿ ಬೀಳುವಲ್ಲೆಲ್ಲ ಶಿಲಾರೋಹಣದ ಮೂಲ ಪಾಠ (ಮೂರು ಹಿಡಿಕೆಗಳನ್ನು ಗಟ್ಟಿ ಮಾಡಿಕೊಂಡು ನಾಲ್ಕನೆಯದಕ್ಕೆ ಅರಸಬೇಕು) ಗಟ್ಟಿಯಿದ್ದವರಿಗೆ ಇನ್ನೂ ಮುಖ್ಯವಾಗಿ ಎತ್ತರದ ಭಯ ಇಲ್ಲದವರಿಗೆ ದೊಡ್ಡ ಸವಾಲೇನೂ ಅಲ್ಲ. ಆಕಸ್ಮಿಕಗಳೇನೂ ಆಗದಂತೆ ಮೊದಲೇ ನಾವು ಪರಸ್ಪರ ರಕ್ಷಣಾ ಹಗ್ಗಗಳ ಬಂಧನವನ್ನೂ ಮಾಡಿಕೊಂಡಿದ್ದೆವು. ಆದರೂ ಬಹಳ ಆಸಕ್ತಿಯಿಂದಲೇ ಬಂದು ಉತ್ಸಾಹದಲ್ಲೇ ತೊಡಗಿದ್ದ ಈ ಇಬ್ಬರು ಮಿತ್ರರಿಗೆ ಮಾತ್ರ ಅವರ ‘ಮಾನಸಿಕ ತಡೆ’ಯನ್ನು ಮೀರುವುದಾಗಲೇ ಇಲ್ಲ. ಲಕ್ಷ್ಯ ಸಾಧನೆಗಾಗಿ ಮಧ್ಯಾಹ್ನದ ಬುತ್ತಿಯೂಟವನ್ನು ಸುಮಾರು ಎರಡು ಗಂಟೆ ಮುಂದೂಡಿದರೂ ನಿರೀಕ್ಷಿತ ಪ್ರಗತಿ ಅಸಾಧ್ಯವೇ ಆಯಿತು. ಹಾಗಾಗಿ ಅಪರಾಹ್ನದಲ್ಲಿ ಹತ್ತಿದ್ದಕ್ಕಿಂತಲೂ ಕಷ್ಟಪಟ್ಟು ಇಳಿದೆವು. ಅಬ್ಬಿಯ ಬುಡದಲ್ಲಿ ಶಿಬಿರಹೂಡಿ, ಸಂಜೆಯ ಉಳಿದ ಸಮಯದಲ್ಲಿ ಜಲಕ್ರೀಡೆ, ಹಗ್ಗಗಳ ಬಳಕೆಯಲ್ಲಿ ಹೊಳೆ ಅಡ್ಡ ಹಾಯುವ ಅಭ್ಯಾಸ ಮಾಡಿ ಸೋಲನ್ನು ಮರೆಸಿದೆವು. ಅಬ್ಬಿಯ ಏಕನಾದಕ್ಕೆ ಅಲ್ಲಿನ ವಾಸದ ಸಂಭ್ರಮವನ್ನು ಅಕ್ಷರಗಳ ಮಿತಿಗೊಳಪಡಿಸಲಾರೆ, ಅನುಕೂಲವಾದರೆ ಇನ್ನೆಷ್ಟು ಬಾರಿಯೂ ಅನುಭವಿಸಬಲ್ಲೆ!

ಕೂಡ್ಲು ತೀರ್ಥದ ಮೂಲ ಅರಸುವಲ್ಲಿ ನಮ್ಮ ದೃಷ್ಟಿಯಲ್ಲಿ ಲಕ್ಷ್ಯ ಪ್ರಧಾನವಲ್ಲ, ಸಾಧನೆ ಮಾತ್ರ. ಆದರೆ ಆಗುಂಬೆಯಲ್ಲಿ ಕೇವಲ ದೂರನೋಟಕ್ಕೆ ಸಿಕ್ಕ, ತಿಂಗಳೆ ಕಣಿವೆಯ ಪ್ರಧಾನ ಆಕರ್ಷಣೆಯೇ ಎಂದನ್ನಿಸಿದ ಬರ್ಕಣ ಅಬ್ಬಿ ಲೆಕ್ಕ ಬೇರೇ. ಅದರ ತಳದ ಸಮೀಪದರ್ಶನ ಮಾಡಿದವರು ನಮ್ಮ ತಿಳಿವಿಗೆ ಸಿಗಲಿಲ್ಲ. ಹಾಗಾಗಿ ಮಾರ್ಗಕ್ರಮಣದ ಅರ್ಥಾತ್ ಸಾಧನೆಯ ಸಂತೋಷ ಹೇಗೇ ಇರಲಿ, ಲಕ್ಷ್ಯಛೇದನವಂತೂ (ಜಲಪಾತದ ತಳ ಸಂದರ್ಶನ) ಖಂಡಿತವಾಗಿಯೂ ಆಕರ್ಷಕ ಎಂಬ ವಿಶ್ವಾಸದಲ್ಲೇ ಸರ್ವೇಕ್ಷಣಾ ಇಲಾಖೆಯ ನಕ್ಷೆಗೆ ಮೊರೆಹೋದೆ. ಹೆಬ್ರಿ ಸೋಮೇಶ್ವರ ಮುಖ್ಯ ದಾರಿಯಲ್ಲಿ ತಿಂಗಳೆ ಕವಲು ಕಳೆದ ಮೇಲೆ ಸಾಕಷ್ಟು ಪೂರ್ವಕ್ಕೆ ಹೋಗುವ ಇನ್ನೊಂದೇ ಮಣ್ಣು ದಾರಿಯ ಉಲ್ಲೇಖವಿದೆ. ಅದರ ಎಳೆ ಹಿಡಿದ ಮೊದಲ ಪ್ರಯೋಗದೊಂದಿಗೆ ಬೇರೆ ಬೇರೆ ಆದಿತ್ಯವಾರಗಳಲ್ಲಿ ಅನುಕೂಲ ಇದ್ದ ಮಿತ್ರರನ್ನು ಬೈಕ್ ತಂಡಗಳಲ್ಲಿ ಹೊರಡಿಸಿಕೊಂಡು ಒಟ್ಟು ಮೂರೋ ನಾಲ್ಕೋ ಪ್ರಯತ್ನಗಳನ್ನೇ ಮಾಡಿದ್ದೆ. ಪ್ರತಿಂiಂದನ್ನೂ ನಾವು ಸ್ವತಂತ್ರವಾಗಿ ಸಂತೋಷಿಸಿದ್ದೂ ಇದೆ. ಕಾಲಕ್ರೀಡೆಯಲ್ಲಿ ಹಲವು ವಿವರಗಳು ಮಸುಕಿದ್ದರೂ ಸವಾರಿ ಲೆಕ್ಕದಲ್ಲಿ ನಮ್ಮಲ್ಲಿ ‘ಹುಚ್ಚುಕುದುರೆ’ ಎಂದೇ ಬಿರುದು ಗಳಿಸಿದ್ದ ಕಿಶೋರ್ ಕುಮಾರ್ ‘ಸಾಹಸ’ ಒಂದನ್ನು ಇಲ್ಲಿ ತುಸು ವಿಸ್ತರಿಸುತ್ತೇನೆ.

ವೃತ್ತಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ನೌಕರ ಆಜಾನುಬಾಹು ಕಿಶೋರ್, ಸರಳ ಸ್ನೇಹಶೀಲ ವ್ಯಕ್ತಿ, ಸಮರ್ಥ ಕೆಲಸಗಾರ, ಉಪಕಾರಿ. ಉಳಿದಂತೆ ಮದುವೆ, ವಿಶೇಷವಾಗಿ ಮನೆಯ ಜವಾಬ್ದಾರಿಗಳೇನೂ ಹಚ್ಚಿಕೊಳ್ಳದೆ (ಪಾಸ್ಡ್ ಹಾಫ್ ಸೆಂಚುರಿ, ಸ್ಟಿಲ್ ನಾಟೌಟ್!), ಮಿತ್ರವಲಯಗಳಲ್ಲೇ ಮೋಜುಮಾಡಿ ದಿನಗಳೆಯುವ ಖಯಾಲಿ; ಅವರದೇ ಭಾಷೆಯಲ್ಲಿ - ಬಿಂದಾಸ್! ನನ್ನೊಡನೆ ಪರ್ವತಾರೋಹಣವೂ ಸೈ, ಅರವಿಂದರೊಡನೆ ಲಯನ್‌ಗೂ ಜೈ. ಇತ್ತ ಮೋಟಾರ್ ಸೈಕಲ್ ಹಿಡಿದು ರ‍್ಯಾಲೀಗೂ ಸೈ ಅತ್ತ ಪ್ಯಾಕೇಜ್ ಟೂರಿನಲ್ಲಿ ವೈಷ್ಣೋದೇವಿ ಎಂದು ಕರೆದರೆ ನೋಡಿಯೇ ಬಿಡುತ್ತಾರೆ ಒಂದು ಕೈ. ನನ್ನ ಬರ್ಕಣ-ತಳಶೋಧದ ಒಂದು ಯಾತ್ರೆಯಲ್ಲಿ ಕಿಶೋರ್ ಒಂಟಿಸವಾರ. ನಮ್ಮ ಗುಂಪಿನ ಶಿಸ್ತು ಸಂಹಿತೆಯ ಕಡಿವಾಣ ಕಿಶೋರ್‌ಗೆ ಬಹಳ ಕಿರ್ಕಿರಿ ಅನಿಸುತ್ತಿತ್ತು. ಆದರೂ ಮಂಗಳೂರು ಬಿಟ್ಟವರು ಪಡುಬಿದ್ರಿ, ಕಾರ್ಕಳ ಬೈಪಾಸ್, ಪ್ರಕಾಶ್ ಹೋಟೆಲ್‌ಗಳಲ್ಲೆಲ್ಲ ನಾವು ‘ಒಟ್ಟಾಗು’ತ್ತಿದ್ದಂತೆ ಹೆಬ್ರಿಕ್ರಾಸಿನವರೆಗೂ ಕಿಶೋರ್ ‘ಕಳೆದು’ ಹೋಗಿರಲಿಲ್ಲ. ಮುಂದೆ ನಾನು “ಆಗುಂಬೆ (‘ಘಾಟಿಯ ತಪ್ಪಲ. . .’ ಎನ್ನುವುದು ಇವರ ಗಮನಕ್ಕೆ ಬರಲಿಲ್ಲವೆಂದು ಮತ್ತೆ ತಿಳಿಯಿತು.) ಬಳಿಯಲ್ಲೆಲ್ಲೋ ಬಲಕ್ಕೆ ಕವಲು. . .” ಎಂದಷ್ಟೇ ಕಿವಿಯ ಮೇಲೆ ಬೀಳುತ್ತಿದ್ದಂತೆ ತಲೆಯಾಡಿಸುತ್ತಾ ಅವರ ‘ಗುಂಡುಸೂಜಿ’ಯನ್ನು (ಇಂಡ್ ಸುಜುಕಿ ಬೈಕಿಗೆ ಅವರಿಟ್ಟ ಪೆಟ್ ನೇಮ್!) ರಟ್ಟಿಸಿದ್ದರು! ಆ ದಿನ ನಮ್ಮದು ಎಂಟು ದ್ವಿಚಕ್ರಗಳ ದಂಡು. ಮುಂದಿನ ನಾಲ್ಕೈದು ಕಿಮೀಯೊಳಗೆ ನಾವೆಲ್ಲ ಪರಸ್ಪರ ಹಿಂದುಮುಂದಾಡುತ್ತ, ಬಲ ಕವಲು ದಾರಿಗಳನ್ನು ಪರಿಶೀಲಿಸುತ್ತಾ ತಣ್ಣೀರಬೈಲ್ ಕವಲು ಆಗಬಹುದೆಂದು ನಿಂತೆವು. ಕಿಶೋರ್ ನಾಪತ್ತೆ. ಯಮ್ಮೆಲಿದ್ದ (ಯಮಹಾಕ್ಕೂ ಒಂದು ಪೆಟ್ ನೇಮ್ ಬೇಡ್ವೇ?!) ಆತನ ಆಪ್ತ ಗೆಳೆಯ ವಿಜಯ್ “ಅಂವ ಹುಚ್ಚುನಾಯಿ ಬೆನ್ನುಬಿತ್ತೋ ಎನ್ನುವಂತೆ ಮುಂದೆ ಹೋದ” ಎಂದು ‘ಕೊನೆಗೆ ನೋಡಿದವನ ಸಾಕ್ಷಿ’ ಕೊಟ್ಟದ್ದಕ್ಕೆ ನಾವು ಕಾದು ನಿಂತೆವು. ದೇವರು ಎಂಬುವವನಿದ್ದರೆ, ಅವನು ಕಿಶೋರ್‌ಗೆ ಒಳ್ಳೇ ಬುದ್ಧಿ ಕೊಟ್ರೆ, ಕಿಶೋರ್ ನಾವ್ಯಾಕೆ ಬರಲಿಲ್ಲಾಂತ ವಾಪಾಸು ಹುಡುಕಿ ಬಂದ್ರೆ - ಕಾದು ನಿಂತೆವು! ಸುಮಾರು ಅರ್ಧ ಗಂಟೆಯಲ್ಲಿ ನಮ್ಮ ಹಾರೈಕೆಗಳು ಶಾಪಗಳಾಗುತ್ತಿದ್ದಂತೆ ಹತಾಶ ಕಿಶೋರ್ ನಿಧಾನಕ್ಕೇ ಬಂದರು. ನಮ್ಮ ವಿಚಾರಣಾ ಬಾಣಗಳು ಹೊರಡುವ ಮೊದಲೇ ಅವರು “ಶಕ್ಕ್, ಈ ದೇಶ ಉದ್ಧಾರ ಆಗುದಿಲ್ಲ ಮಾರಾಯ್ರೇ.” “ಯಾಕೆ, ಏನಾಯ್ತು?” “ಅಲ್ಲ ಮತ್ತೆ ಇಷ್ಟು ಮುಖ್ಯ ದಾರಿಯ ಬದಿಗಳನ್ನು ಇಷ್ಟು ಹಾಳು ಇಟ್ಕೊಳ್ಳುದಾ?” “ಎಲ್ಲಿ, ಸ್ವಲ್ಪ ಹುಲ್ಲು, ಕಸ ಇದೆ, ಅಷ್ಟೇ ತಾನೇ?” “ಏ ಅದಲ್ಲಾ. ಮೇಲಿನ ಹೇರ್ ಪಿನ್ ಕರ್ವ್ ಹತ್ರ ನೋಡಿ, ದೊಡ್ಡ ಗುಂಡು ಕಲ್ಲು!” “ಓ ನೀವು ಅಲ್ಲಿವರೆಗೂ ಹೋಗಿದ್ರಾ, ನಾವಿಲ್ಲೀ...” “ಮತ್ತೆಂತಾ, ಅಶೋಕ್ರು ಹೇಳಿದ್ದಲ್ವಾ ಆಗುಂಬೆ ಹತ್ರ ಬಲಕ್ಕೇ...” “ಅದಿರ್ಲೀ. ಈ ಗುಂಡು ಕಲ್ಲು ಎಲ್ಲಿ ಬಂತು ನಿಮ್ಮ ಗಮನಕ್ಕೆ...?” “ಅಂದ್ ಮಾರ್ರೇ, ನಾನು ಆ ಯೂ ಟರ್ನ್ ತೆಗೀವಾಗ ಸಡನ್ ಮೇಲಿನಿಂದ ಕಾರಿನವ ಬರುದಾ. ಒಂದು ಹಾರ್ನಿಲ್ಲ, ಅಪ್ ವೇ ವೆಹಿಕಲ್ ಬಗ್ಗೆ ಕೇರ್ ಇಲ್ಲಾ...” “ಅಯ್ಯೋ ಮತ್ತೇ. ...” “ನಾನು ರಪಕ್ಕಂತ ಲೆಫ್ಟ್ ಹಾಕಿದೆ. ಅಲ್ಲಿ ಗ್ರಾಚಾರಕ್ಕೆ ಈ ಕಲ್ಲು - ಢಗಾರ್!” “ಛೆ, ಆದರೂ ಬಚಾವಾದ್ರಲ್ಲ. ಕಾರಿನವನು..?” “ಕಳುವೆ, ತಿರ್ಗಿಸಾ ನೋಡ್ಲಿಲ್ಲ, ಹೋಗಿಬಿಟ್ಟ. ಮತ್ತೆ ನೋಡ್ವಾಗ ಲಕ್ಕೀಲಿ ಫ್ರಂಟ್ ವೀಲ್ ಕ್ರಾಸ್ ಆದ್ದಕ್ಕೆ ಮಡ್‌ಗಾರ್ಡ್ ಮಾತ್ರ ಜಜ್ಜಿ ಹೋಗಿತ್ತು. ಮತ್ತೆ ಸ್ಟ್ಯಾಂಡ್ ಹಾಕಿ, ಇನ್ನೊಂದು ಕಲ್ಲು ಹಿಡಿದು ಗಾರ್ಡಿಗೆ ಎರಡು ಜಜ್ಜಿ ಸರಿ ಮಾಡಿದೆ. ಬೇರೆಂತಸಾ ಡ್ಯಾಮೇಜ್ ಇಲ್ಲ. ಆಮೇಲೆ ಇಷ್ಟಾದ್ರೂ ನೀವ್ಯಾರೂ ಬರ್ಲಿಲ್ಲಾಂತ ವಾಪಾಸು...” ಭುಜದ ಮೇಲೆ ಕೈ ಹಾಕಿ ವಿಜಯ ಕೇಳಿದ “ಏ ಮರ್ಲಾ. ಅದಿರ್ಲೀ ಯೂ ಟರ್ನಲ್ಲಿ ನೀನೆಷ್ಟು ಸ್ಪೀಡಲ್ಲಿದ್ಯಾ?” (ವಿಜಯ್‌ಗೆ ಗೊತ್ತಿತ್ತು ಕಿಶೋರ್ ಸ್ಪೀಡೋ ಮೀಟರ್‌ನ ಕೆಳ ಅಂಕಿಯೇ ೬೦ ಕಿಮೀ!!)

ಮೈಲುದ್ದದ ಅಸಾಧ್ಯ ಭೌಗೋಳಿಕ ರಚನೆಗಳನ್ನು ಕೇವಲ ಒಂದಿಂಚಿನ ಅಳತೆಗೆ (ಒಂದಿಂಚು = ಒಂದು ಮೈಲು), ಅದೂ ಚಪ್ಪಟೆ ಕಾಗದದ ಮೇಲಕ್ಕೆ (ಮೂರರಿಂದ ಎರಡೇ ಆಯಾಮ) ಇಳಿಸಿದ ನಮ್ಮ ನಕ್ಷೆಯ ಶಕ್ತಿಯಷ್ಟೇ ಮಿತಿಯ ಬಗ್ಗೆ ನಮಗರಿವಿತ್ತು. ಭವ್ಯ ಭಾರತ ಇನ್ನೂ ಅನಂತ, ಅಪಾರಗಳ ಲೆಕ್ಕದಲ್ಲೇ ಇದ್ದಾಗ ಅದನ್ನು ಅಕ್ಷಾಂಶ ರೇಖಾಂಶಗಳೊಳಗೆ ಖಚಿತವಾಗಿ ಹಿಡಿದಿಟ್ಟ ಸಾಧನೆ ಬ್ರಿಟಿಷ್ ಚಕ್ರಾಧಿಪತ್ಯದ್ದು. ಮುಂದೆ ಅವರಿಂದ ಕಳಚಿಕೊಳ್ಳುವ ಭರದಲ್ಲಿ ಸ್ವತಂತ್ರ ಭಾರತ ಅವರ ಎಷ್ಟೋ ಒಳ್ಳೇ ಗುಣಗಳಿಂದಲೂ ದೂರಾದ್ದಕ್ಕೆ ಒಂದು ಸಾಕ್ಷಿ ಈ ಸರ್ವೇಕ್ಷಣಾ ಭೂಪಟಗಳು. ನಾನಿವನ್ನು ಕೊಂಡದ್ದು (ವಿವರಗಳಿಗೆಇಲ್ಲಿ ಚಿಟಿಕೆ ಹೊಡೆಯಿರಿ) ಮತ್ತು ಬಳಸುತ್ತಿದ್ದದ್ದು ೧೯೭೦ರ ದಶಕದನಂತರವೇ ಇದ್ದರೂ ಅದರ (ಮರು) ಮುದ್ರಣದ ಇಸವಿ ೧೯೪೬, ಅಂದರೆ ನಮೂದುಗಳು ೨೪ ವರ್ಷಗಳಷ್ಟು ಹಿಂದಿನದು. ಅಬ್ಬಾ ಎನ್ನಬೇಡಿ, ಇನ್ನಷ್ಟು ವಿವರಕ್ಕಿಳಿದರೆ ವಾಸ್ತವದ ಸರ್ವೇಕ್ಷಣೆ ನಡೆದದ್ದು ೧೯೧೦-೧೧ ಅಂದರೆ ನಿಜದಲ್ಲಿ ನೆಲ ನೋಡಿ, ಗೀಟು ಹಾಕಿದ್ದು ಸುಮಾರು ೬೦ ವರ್ಷಗಳಷ್ಟು ಹಿಂದೆ! ಹಾಗೆಂದು ಋತುಮಾನ, ಜನಜೀವನ ನಿಲ್ಲುವುದಿದೆಯೇ? ಕಾಡು ಸಾಗಿಸಲು ಮಾಡಿದ ದಾರಿಗಳಾಗಿದ್ದರೆ ಮುಚ್ಚಿಯೇ ಹೋಗಿರಬಹುದು. ಸಾಮಾಜಿಕ ಸ್ಥಿತ್ಯಂತರದಲ್ಲಿ ತುಸು ಆಚೀಚೆ ಹೊಸದೇ ದಾರಿ ರಚನೆಗೊಂಡು, ಒಳ್ಳೇ ಬಳಕೆಯಲ್ಲೂ ಇದ್ದು ನಮ್ಮನ್ನು ದಿಕ್ಚ್ಯುತಿಗೊಳಿಸಲೂ ಬಹುದು. ಹೌದು, ಹಾಗೇ ಆಯ್ತು - ಒಮ್ಮೆ ಒಳ್ಳೇ ಮಾರ್ಗದ ಅನುಸರಣೆಯ ನಮ್ಮ ಕುಶಿ ಕೊನೆಗಂಡದ್ದು ಯಾವುದೋ ಕೃಷಿಕರ ಮನೆ ಅಂಗಳದಲ್ಲಿ! [ನೆನಪಿರಲಿ, ಆಗಿನ್ನೂ ಹಿತಾಚಿ, ಜೇಸಿಬೀಗಳು ಸಾರ್ವಜನಿಕಕ್ಕೆ ಇಳಿದಿರಲಿಲ್ಲ. ಈಗಾದರೋ ಬ್ಲೀಡರ್ಸ್ ಆಂಡ್ ಡಂಪರ್ಸ್ (builders & developers) ಸಮೃದ್ಧಿಯಲ್ಲಿ ಘಟ್ಟದ ಮೇಲಿನ ಊರೂ ಸಮುದ್ರ ಮಟ್ಟಕ್ಕಿಳಿಯಬಹುದು, ಕೆರೆಯಾಳವೂ ಗಗನಚುಂಬಿಯಾಗಬಹುದು!]

ನಾವು ಪ್ರತಿ ಪ್ರಯತ್ನದಲ್ಲೂ ಹಲವು ಕವಲುಗಳನ್ನು ಶೋಧಿಸಿದ್ದಿತ್ತು. ಪ್ರತಿಯೊಂದರ ಕೊನೆಯಲ್ಲೂ ಒರಟು ಸವಾರಿಗಳ ವಿಭಿನ್ನ ಮಾದರಿಗಳನ್ನು ಅನುಭವಿಸಿದ್ದೂ ಇತ್ತು. ಅಲ್ಲಿಂದಾಚೆಗೆ ಸ್ಥಳೀಯರ ಸಲಹೆ, ಸಹಕಾರಗಳನ್ನೂ ಧಾರಾಳ ಬಳಸಿ, ಯಾವ್ಯಾವುದೋ ತೊರೆಗಳ ಎದುರು ನಡೆ ಮಾಡಿದ್ದೂ ಆಯ್ತು. ಎಲ್ಲವೂ ಸ್ವಲ್ಪ ಹೆಚ್ಚು ಕಮ್ಮಿ ಮೂರ್ನಾಲ್ಕು ಕಿಮೀ ಪ್ರಯಾಸದ ನಡಿಗೆಯಲ್ಲಿ ನಮಗೆ ಅಂದಂದಿನ ಪ್ರಯತ್ನದಲ್ಲಿ ಹತ್ತಿ ಮುಂದುವರಿಯಲು ಅಸಾಧ್ಯವಾದ ದರೆಯನ್ನು ತೋರಿಸಿದ್ದವು. ಸಹಜವಾಗಿ ಅಲ್ಲಿ ಐವತ್ತು-ನೂರಡಿಯ ಜಲಪಾತಗಳೂ ಸಿಕ್ಕಿವೆ; ಬರ್ಕಣ ಮಾತ್ರ ಸಿಗಲಿಲ್ಲ. ಆದರೆ ಪ್ರತಿ ಜಲಪಾತದಡಿಯಲ್ಲೂ ನಾವು ಅನುಭವಿಸಿದ ಸಂತೋಷವನ್ನು ವಿವರಿಸಿ ಇಂದು, ನಲ್ಲಿಯ ಬಾಯಿಗೆ ಬಾಯಿಕೊಟ್ಟು ‘ನೀರು ಸೇದುವ’ ನಾಗರಿಕರಿಗೆ, “ಇನ್ನೂ ಯಾಕ ಬರಲಿಲ್ಲಾಂವಾ ನೀರಲಾರ್ಯಾಂವಾಂ, ದಿನಕ್ಕ್ಮೂರು ಟ್ರಿಪ್ ಖಾತ್ರಿ ಎಂದ್ ಹೋದಾಂವಾ” ಹಾಡುವ ರಬ್ಬರ್ ತೋಟದ ‘ಅನ್ನದಾತ’ನಿಗೂ ಹೊಟ್ಟೆಕಿಚ್ಚು ಹೆಚ್ಚಿಸಲಾರೆ.

- ಮುಂದಿನ ಕಂತು ಮುಂದಿನ ಕಂತು ಮುಂದಿನ ಕಂತು -

ಇಲ್ಲ ಹಾಸ್ಯಕ್ಕೆ ಇದು ಸಮಯವಲ್ಲ. ಮುಂದಿನ ಕಂತಿನಲ್ಲಿ ಗಂಭೀರವಾಗಿ ಬರ್ಕಣದ ತಳ ಅನಾವರಣ ಖಂಡಿತ. ಅದಕ್ಕೆ ನೀವು ರಣವೀಳ್ಯ ಮಾತ್ರ ಇದನ್ನೋದಿದ ಆಧಾರದಲ್ಲಿ ಇಲ್ಲೇ ಕೊಡಬೇಕಲ್ಲಾ.

4 comments:

  1. ಅಶೋಕವರ್ಧನರೇ! ಪಾತಾಳದ ಕಣಿಯಲ್ಲಿ ನೀವು ನೀಡಿದ ರಣವೀಳ್ಯ ದಕ್ಕಿತಯ್ಯಾ ದಕ್ಕಿತ್ತೋ!! - ಪೆಜತ್ತಾಯ ಎಸ್. ಎಮ್.

    ReplyDelete
  2. narendra nayak bage vivara thilisuthira? avaru pavadda bage thilusikoduthare anthe kelidhe, adhu nijava?

    ReplyDelete
  3. ಜಿ.ಎನ್.ಅಶೋಕವರ್ಧನ21 January, 2013 16:48

    ಪ್ರಿಯ
    ಸತ್ಯಜಿತ್ ನಿಮ್ಮ ಸಮಸ್ಯೆಯ ಸಣ್ಣ ಪರಿಹಾರಕ್ಕೆ ಇಲ್ಲೇ ನನ್ನ ಹಿಂದಿನ ಬರಹಕ್ಕೆ ಚಿಟಿಕೆ ಹೊಡೆಯಿರಿ: http://www.athreebook.com/2011/07/blog-post.html#more
    ಇನ್ನೂ ಹೆಚ್ಚಿನ ವಿವರಗಳಿಗೆ ಅವಶ್ಯ ಹಳೆಯ Mangalore Today ಯ ಪುಟಗಳನ್ನು ಮಗುಚಿ, ಎಷ್ಟೂ ಸಾಕ್ಶಿಗಳಿವೆ. ನರೇಂದ್ರ ನಾಯಕರ ಕೆಲವು ಪುಸ್ತಕಗಳೂ ನವಕರ್ನಾಟಕದ ಮಳಿಗೆಗಳಲ್ಲಿ ಲಭ್ಯವಿವೆ.

    ReplyDelete
  4. ನನಗೆ ಕೂಡ್ಲು ತೀರ್ಥ ಇಷ್ಟವಾಗಿದ್ದು ಅದೇ ಕಾರಣಕ್ಕೆ.ಅದೊಂಥರಾ ಸ್ವಾಭಾವಿಕ ಈಜುಕೊಳ.ಈಜು ಬಾರದವರೂ ಸ್ವಲ್ಪ ಎಚ್ಚರಿಕೆ ವಹಿಸಿ ಜಲಪಾತದ ಹಿಂದೆ ಹೋಗಿ ನಿಂತು ನೀರು ಬೀಳುವುದನ್ನು ಆಸ್ವಾದಿಸಬಹುದು.ಈ ರೀತಿಯ ಸ್ವಾಭಾವಿಕ ವ್ಯವಸ್ಥೆ ನಾನು ಕಂಡಿದ್ದು ಇದೊಂದರಲ್ಲೇ.ಆ ಬರ್ಕಣವನ್ನು ಹತ್ತಿರದಿಂದ ಕಾಣಲಾಗಿಲ್ಲ.ಘಾಟಿಯಲ್ಲಿ ವಾಹನದಲ್ಲಿ ಬರುವಾಗ ಮಳೆಗಾಲದಲ್ಲಿ ಮಾತ್ರ ನೋಡಿರುವುದು.

    ReplyDelete