09 October 2012

ಇಡಗುಂಜಿ ಮೇಳ ಮೂರನೇ ತಲೆಮಾರಿನಲ್ಲಿ!


ವಿವಿಧ ವಿನೋದಾವಳಿ
ಯಕ್ಷಗಾನದ ಹಿರಿಯ ಕಲಾವಿದ ಸಂಪಾಜೆ ಶೀನಪ್ಪ ರೈಯವರನ್ನು ವೇದಿಕೆಯಲ್ಲಿ ಎದುರು ಕೂರಿಸಿದ್ದರು. ಹನ್ನೊಂದು ಅತಿ ಯೋಗ್ಯತಾವಂತರು ಹಿಂದೆ ಕುಳಿತಿದ್ದಂತೆ ಭಾಸ್ಕರ ರೈ ಕುಕ್ಕುವಳ್ಳಿಯವರು ಹೊಗಳಿಕೆ ನಡೆಸಿದ್ದರು. ಅನಂತರ ನಿರ್ವಾಹಕ ತೋನ್ಸೆ ಪುಷ್ಕಳಕುಮಾರ್ ನಿರ್ದೇಶನದ ಮೇರೆಗೆ ಬಲ ಹೆಚ್ಚಿಸಿಕೊಂಡ ವೇದಿಕೆಯ ಗಣ್ಯರು ಶೀನಪ್ಪರೈಗಳ ಮೇಲೆ ಮುಗಿಬಿದ್ದು ಸಮ್ಮಾನಿಸತೊಡಗಿದರು! ಮೈಕಿನವನು ಉಚಿತ ಮಂಗಳಧ್ವನಿಯನ್ನೂ ಅತ್ತ ಯಕ್ಷಗಾನದ ಹಿಮ್ಮೇಳ ಕಲಾವಿದರು ಚಂಡೆಮದ್ದಳೆಗಳ ಗದ್ದಲವನ್ನೂ ಕಡಿಮೆ ಕೊಡಲಿಲ್ಲ. ರವಿ ಅಲೆವೂರಾಯ ಅಭಿನಂದನ ಪತ್ರ ಹಿಡಿದು ಧ್ವನಿವರ್ಧಕದ ಎದುರು ನಿಂತು, ಶ್ರೀಯಿಂದ ತೊಡಗಿ ಕೊನೆಯ ಪೂರ್ಣ ವಿರಾಮದವರೆಗೆ ಎಲ್ಲವನ್ನೂ ವಾಚಿಸಿದರು. ಶೀನಪ್ಪ ರೈಗಳು ಬೇರೆ ಬೇರೆ ಸನ್ನಿವೇಶಗಳಲ್ಲಿ ರುದ್ರ ಭೀಮನೋ, ದುರುಳ ದುಶ್ಶಾಸನನೋ ಆಗಿ, ರಂಗ ಹಾರಿ ಓಡಿದ ಸಾಕಷ್ಟು ಅನುಭವ ಇರುವವರು. ಇಂದು ಅವರು ಓಡಿಹೋಗದಂತೆ ವೇದಿಕೆಯ ಅಷ್ಟೂ ಕೆಳ ಅಂಚಿನಲ್ಲಿ ವಿವಿಧ ನಮೂನೆಯ ಮಿಂಚುನೋಟ, ಸರಣಿ ಜಡಿತಗಳ ಕ್ಯಾಮರಾ ದಂಡು ಹಾಜರಿತ್ತು. ಹಾಗೂ ಉಳಿದ ಸಂದುಗಳನ್ನು ಪ್ರೇಕ್ಷಾಂಗಣದ ಹುಡುಕು ನೋಟಗಳು ಗಿಡಿದು, ರೈಗಳ ಪಡಿಪಾಟಲನ್ನು ನೋಡಿ ಸಂಭ್ರಮಿಸಿದ್ದವು!

ಮುಂದಿನ ವೇಷ, ಆಮಂತ್ರಣದಲ್ಲಿಲ್ಲದ ಅತಿಥಿ (ನಿಜಕ್ಕೂ ತಿಥಿಯಿಲ್ಲದೆ ಬಂದವರು - ಕೃಷಿ ಮಾರುಕಟ್ಟೆ, ಹಜ್ ಮತ್ತು ವಕ್ಫ್ ಸಚಿವ! ಕರೆಯದೇ ಬಂದ ಭಾಗ್ಯ?) ಬೆಳ್ಳುಬ್ಬಿಯವರಿಂದ ಆಶೀರ್ವಚನ. ಮತ್ತದಕ್ಕೂ ಎಷ್ಟೊಂದು ‘ಪ್ರೀತಿಯ’ ಅಡ್ಡಿಗಳು. ಮೊದಲು ಯಾರೋ ಕೆಲಸವಿಲ್ಲದ ಕಲಾವಿದ ಸಭೆಯಲ್ಲಿ ಕೂತು ವೇದಿಕೆಯ ಮೇಲಿನ ಗಣ್ಯರ ಸ್ಕೆಚ್ (ಭೂಗತಲೋಕದ ಅರ್ಥವಲ್ಲ, ರೇಖಾಚಿತ್ರ) ಹಾಕುತ್ತಿದ್ದವನ ಅಪರಾಧ ಸಮರ್ಪಣ; ದಿಢೀರ್ ಸಚಿವರಿಗೆ ಅರ್ಪಿಸುವ ಪ್ರಸಂಗ. ಯಡ್ಡಿ, ಸದ್ದು, ಈಚುಗಳ ಪೇಚಿನಲ್ಲಿದ್ದ ಬೆಳ್ಳುಬ್ಬಿಯವರ ಮನದ ಸ್ಕೆಚ್ ಬೇರೇ ಇದ್ದಿರಬಹುದಾದರೂ ಇಲ್ಲಿನದನ್ನು ಮೆಚ್ಚಿಕೊಂಡಂತೆ ತೋರಿಸಿದರು. (ಉತ್ತರ ಭಾರತದಲ್ಲೊಬ್ಬ ಕಲಾವಿದ ಸಚಿವರ ಚಿತ್ರ ಬರೆದು ಕಂಬಿ ಎಣಿಸಿದ ಕತೆಗಿದೆಷ್ಟು ಭಿನ್ನ!) ಸಾಮಾನ್ಯವಾಗಿ ಸಚಿವರ ಆಪ್ತ ಸಹಾಯಕರು ಅಮಾಯಕರು ಮೇಲೆ ಬಿದ್ದು ಸಚಿವರಿಗೆ ಕೊಡುವ ಮನವಿಗಳ ತೇಜಸ್ಸು ಅಡಗಿಸುವಲ್ಲಿ ನಿಪುಣರು. ತಾನು ಹಾಗಲ್ಲ ಎಂಬಂತೆ, ಬೆಳ್ಳುಬ್ಬಿ ಸಾಹೇಬರ ಖಾಸಾ ಅಧಿಕಾರಿ ಆ ಕಲಾವಿದನ ವಿಳಾಸ ತೆಗೆದುಕೊಳ್ಳುತ್ತಿದ್ದದ್ದು ಇನ್ನಷ್ಟು ತಮಾಷೆಯಾಗಿ ಕಾಣುತ್ತಿತ್ತು.

ಅನಂತರ ಏಳೆಂಟರ ಹರಯದ ಪುಟ್ಟ ಹುಡುಗಿಯೊಬ್ಬಳನ್ನು ಚೌಕಿಯಿಂದ ಎಳೆದು ತಂದು ಸಚಿವರೆದುರು ಹಾಜರುಪಡಿಸಿದರು. ಆಕೆ ಆ ಎಳೆವಯಸ್ಸಿನಲ್ಲೂ ಬಣ್ಣದ ಮನೆಯೊಳಗೆ ಕಲಾವಿದರಿಗೆ ಸಹಾಯ ಮಾಡುತ್ತಾಳೆ ಎಂಬ ಅಪರಾಧವನ್ನು ಘೋಷಿಸಲಾಯ್ತು. ಸಾಲದ್ದಕ್ಕೆ ಅವಳು ಶೀನಪ್ಪರೈಗಳಿಗಾದ ಗತಿಯನ್ನೇ ಸಚಿವರ ಕೈಯಿಂದ ಬಯಸಿದ್ದಳು; ಮಾಡಿದ್ದಾಯ್ತು. ಅಷ್ಟುದ್ದಕ್ಕೂ ನಡೆದದ್ದು ಯಕ್ಷಗಾನವೆಂದೇ ಭ್ರಮಿಸಿರಬಹುದಾದ ಸಚಿವರು, ತಮ್ಮ ಮಾತಿನಲ್ಲಿ “ಹೀಗೆ ಯಕ್ಷಗಾನವನ್ನು ನೋಡುವ ಸೌಭಾಗ್ಯ” ತನಗೊದಗಿಸಿದ ಭಾಗ್ಯದೇವತೆಯನ್ನು ಮನಸಾರೆ ನೆನೆದರು. ಮತ್ತೆ ತಮ್ಮ ‘ಬಿಡುವಿರದ’ ನಾಟಕದ ಒಂದು ದೃಶ್ಯದಂತೆ ಹೊರಡುವ ತರಾತುರಿ ತೋರಿದರು. ಆದರೆ ಅವರ ಬಹುಮುಖ (ಮೂರ್ಖ?) ಪ್ರತಿಭೆಯನ್ನು ಮತ್ತಷ್ಟು ಪ್ರದರ್ಶಿಸುವಂತೆ ಒತ್ತಾಯ (ಯಾರದ್ದೋ?) ಬಂದಿರಬೇಕು! ಬೆಳ್ಳುಬ್ಬಿಯವರು ಒಂದು ಅಕ್ಕನ ವಚನವನ್ನು ರಾಗಸಹಿತ ಒಗದು, ನಡೆದರು. ನಮ್ಮ ಪುಣ್ಯಕ್ಕೆ, ‘ಸಚಿವರಿಗೆ ಕುಣಿಯಾಕ್ ಸೈತ ಬರ್ತತೀಂತ ಒತ್ತಾಯ ಬೀಳಲಿಲ್ಲ! ಇಂದೂ ಬೀದಿ ಮೆರವಣಿಗೆಯಲ್ಲಿ ಕುಣಿಯಲು ನಾಚದ ಬೆಳಮಗಿಯವರು ಕರ್ನಾಟಕದ ಸಚಿವ ಸಂಪುಟದಲ್ಲೇ ಇದ್ದಾರೆ. ಮತ್ತೆ ಡೊಳ್ಳು ಕಟ್ಟಿ ಕುಣಿದವರು, ಕಾಚ ಬಿಗಿದು ಆಖಾಡದಲ್ಲಿ ಉರುಡಿದವರು, ಈಜುಕೊಳಕ್ಕೆ ಉದ್ಘಾಟನಾ ಡೈವ್ ಹೊಡೆದವರು, ಬುಲ್ ಡೋಜರ್ ಚಲಾಯಿಸಿದವರು, ಹೊಸಾ ಬಸ್ಸನ್ನು ದಾರಿಗಿಳಿಸುವ ಉತ್ಸಹ ತೋರಿದವರನ್ನೆಲ್ಲಾ ಕರ್-ನಾಟಕ ಕಾಣದ್ದೇನೂ ಅಲ್ಲ.  

ಮಾರುಕಟ್ಟೆ ಸಚಿವರ ಪ್ರಭಾವಕ್ಕೊಳಗಾದಂತೆ ಮುಂದಿನ ಮಾತುಗಾರರು ಯಕ್ಷಗಾನದ ಮಾರುಕಟ್ಟೆ ಧಾರಣೆ ಬಗ್ಗೆ ‘ಉದಾರ’ವಾಗಿ ಚಿಂತನೆ ನಡೆಸಿದ್ದು ಯಾವ ಪುರುಷಾರ್ಥಕ್ಕೋ ನನಗಂತೂ ತಿಳಿಯಲಿಲ್ಲ. ಕೊಂಕಣಿ ಅಕಾಡೆಮಿ ಅಧ್ಯಕ್ಷ ಚಿನ್ನಾ ಕಾಸರಗೋಡು, ವೇದಿಕೆಯಲ್ಲೇ ಇದ್ದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಎಂ.ಎಲ್ ಸಾಮಗರನ್ನು ನಾಟಕೀಯವಾಗಿ ಉದ್ಧರಿಸಿ, ಕೇವಲ ನಲ್ವತ್ತು ಲಕ್ಷದ ಅನುದಾನದಲ್ಲಿ ಯಕ್ಷಗಾನೋದ್ಧರಣ ಪ್ರಸಂಗ ರೈಸುವುದಿಲ್ಲವೆಂದು ಘೋಷಿಸಿದರು. ಹಿಂಬಾಲಿಸಿದ ಯಕ್ಷ-ಅಕಾಡೆಮಿ ಸದಸ್ಯ ಉಜಿರೆ ಅಶೋಕ ಭಟ್ಟರು, ಆರು ವರ್ಷ ಒಂದು ವೃತ್ತಿಪರ ಮೇಳದ ಸಂಚಾಲಕನಾಗಿಯೂ ಅನುಭವ ಗಳಿಸಿದವರು. ಇವರು ದುಡ್ಡೆಷ್ಟು ಸುರಿದರೂ ತರುಣ ಕಲಾವಿದರು ಬರುತ್ತಿಲ್ಲ ಎಂಬ ಕೊರಗಿನೊಡನೇ ಅಕಾಡೆಮಿಗೆ ಎರಡು ಕೋಟಿಯ ಅರ್ಥಕ್ಕೆ ವಾದ ಮಂಡಿಸಿದರು. ಸಭೆಗೆ ನಾನು ಹಾಜರಾಗುವ ಮೊದಲೇ ಮಾತು ಮುಗಿಸಿದ್ದ, ವಿಧಾನಪರಿಷತ್ ಸದಸ್ಯ ಕರಣೀಕರು ಅನಿವಾರ್ಯವಾಗಿ ಕುಳಿತಲ್ಲಿಂದಲೇ ಮೌನ ಮುರಿದರು. ತಮ್ಮ ಕಾರುಭಾರು ಐದು ಕೋಟಿಯನ್ನೇ ಉದ್ದೇಶಿಸಿ ನಡೆದಿದೆ ಎಂದು ನಿವೇದಿಸಿಕೊಂಡರು. ಪ್ರಭಾಕರ ಜೋಶಿಯವರು ಯಕ್ಷಗಾನ ಸರಕಾರೀ ವಿಷಯವೇ ಅಲ್ಲ ಎಂಬುದನ್ನು ನಿಸ್ಸಂದಿಗ್ಧವಾಗಿ ಹೇಳಿದರು. ಆದರೆ ಖಾಸಗಿ ಪುದುವಟ್ಟಿನ ರೂಪದಲ್ಲಾದರೂ ಒಂದು ನೂರು ಕೋಟಿಗೆ ಯಕ್ಷ-ದಾರಣೆಯನ್ನು ಏರಿಸಿಟ್ಟರು! ನಡುವೆ ಸಾಮಗರೂ ಕುಂಬಳೆ ಸುಂದರ ರಾಯರೂ ಮಹಾಬಲ ಭಂಡಾರಿಯವರೂ ಗಳಿಗೆ ಬಟ್ಟಲ ಸೋರಿಕೆಗೆ ತಮ್ಮ ಸಹಕಾರ ನೀಡಿದರು. ಮತ್ತು ಅದುವರೆಗಿನ ಆಧಾರ ಶ್ರುತಿ ತಪ್ಪದಂತೆ ತಮ್ಮ ನುಡಿವಣಿಗಳನ್ನು ಸೇರಿಸಲು ಹಿಂದುಳಿಯಲಿಲ್ಲ. ಇದೆಲ್ಲ ಏನು? ಎಲ್ಲೀ ಅಂದರೇ...

ಪ್ರಾಯೋಜನೆ - ಪ್ರಯೋಜನ

ಕೆರೆಮನೆ ಮೇಳವೆಂದೇ ಪ್ರಸಿದ್ಧವಾದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಈಚೆಗೆ ಮಂಗಳೂರು ಪುರಭವನದಲ್ಲಿ ಮೂರು (ದಿನ) ಯಕ್ಷಗಾನ ಪ್ರದರ್ಶನಗಳನ್ನು (ಶ್ರೀಮಯ ಯಕ್ಷ ತ್ರಿವೇಣಿ) ಇಟ್ಟುಕೊಂಡಿತ್ತು. ಈ ಪ್ರಾಯೋಜಿತ ‘ಸಾಂಸ್ಕೃತಿಕ ಕಲಾಪ’ ದಿನಕ್ಕೊಂದು ಯಕ್ಷ-ಪ್ರತಿಭೆಯ ಸಮ್ಮಾನದೊಡನೆ ಸಾರ್ವಜನಿಕರಿಗೆ ಮುಕ್ತವಾಗಿತ್ತು. ವೇದಿಕೆಯ ಎದುರು ಪ್ರದರ್ಶಿಸಿದ್ದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದಕ್ಕೆ ಪ್ರಮುಖ ಪ್ರಾಯೋಜಕರು. ಈಚಿನ ಕೆಲವು ವರ್ಷಗಳಲ್ಲಿ ‘ಪ್ರತಿಭಾ ಸಮ್ಮಾನ’ ಮತ್ತು ಸಾರ್ವಜನಿಕರ ‘ಉಚಿತ ಪ್ರವೇಶ’ಕ್ಕೆ ಪ್ರೇರಣೆ ಕೊಡುವ ‘ಪ್ರಾಯೋಜಿತ’ ಕಾರ್ಯಕ್ರಮಗಳು ಹೆಚ್ಚಿಕೊಂಡಿವೆ. ಇದರ ಫಲಾನುಭವಿಗಳು ಪ್ರಾಯೋಜಕರನ್ನು ರಾಜಾಶ್ರಯಕ್ಕೆ ಹೋಲಿಸುವುದು, ಮತ್ತವರ ಕುರಿತು ಪ್ರಬಂಧ, ಅಭಿನಂದನ ಗ್ರಂಥಗಳು ಬರುವುದನ್ನೂ ಗಮನಿಸಬಹುದು. ನಿಜದಲ್ಲಿ ಇಂದು ಆಗಬೇಕಾದ್ದು ಈ ಪ್ರಾಯೋಜನೆಯ ಅಗತ್ಯ ಮತ್ತು ಪರಿಣಾಮಗಳ ಮೆಚ್ಚುಗೆಯಲ್ಲ; ಒಟ್ಟು ವ್ಯವಸ್ಥೆಯ ಪ್ರಾಮಾಣಿಕತೆಯ ತನಿಖೆ. ಹಲವು ಸಾರ್ವಜನಿಕ ಸಂಸ್ಥೆಗಳು (ಮುಖ್ಯವಾಗಿ ಬ್ಯಾಂಕುಗಳು), ಸರಕಾರ ತನ್ನ ಹಲವು ಇಲಾಖೆಗಳ ಮೂಲಕವೂ (ಮುಖ್ಯವಾಗಿ ಸಂಸ್ಕೃತಿ ಇಲಾಖೆ) ಇದರಲ್ಲಿ ತೊಡಗಿಸುತ್ತಿರುವ ಭಾರೀ ಮೊತ್ತಕ್ಕೆ ಬಿಗಿಯಾದ ಮಾರ್ಗದರ್ಶೀ ಸೂತ್ರಗಳೇ ಇದ್ದಂತಿಲ್ಲ. ಅದರ ಚರ್ಚೆ ನನ್ನಂಥ ಸಾಮಾನ್ಯರ ಮಿತಿಗೆ ಮೀರಿದ್ದು. ಆದರೂ ಅದು ಬೇರೆ ಬೇರೆ ರೂಪಗಳಲ್ಲಿ ಮೂರೂ ದಿನದ ಸಭಾ ಕಲಾಪದಲ್ಲಿ ಧ್ವನಿಸಿದ್ದು ಸಮಯ ಹಾಳು. ವೇದಿಕೆಯ ಮೇಲೆ ಕನಿಷ್ಠ ಮೂವತ್ತು ಮಂದಿ ಮೂರು ದಿನಗಳಲ್ಲಿ, ವಿವಿಧ ದಾಕ್ಷಿಣ್ಯಗಳಿಗೋ ಚಾಪಲ್ಯಕ್ಕೋ ಕಟ್ಟು ಬಿದ್ದು ಸಮಯದ ಮೇಲೆ ಮಾತಿನ ಹಲ್ಲೆ ನಡೆಸಿದ್ದರು. ಇದರಲ್ಲಿ ಬಹುತೇಕ ಮಂದಿಯ ವಿಷಯ ತಜ್ಞತೆ, ಯಕ್ಷಗಾನದ ಕುರಿತ ಕಾಳಜಿ ಮತ್ತು ಅವನ್ನು ಸಾರ್ವಜನಿಕಕ್ಕೆ ಮುಟ್ಟಿಸುವ ವಾಕ್ಚಾತುರ್ಯ ಪ್ರಶ್ನಾತೀತ. ಆದರೆ ಅವು ವೇದಿಕೆಯ ಭಾಷಣವಾಗಿ ಪ್ರಯೋಜನವಿಲ್ಲ. ತುಂಬಾ ಸಣ್ಣ ವಲಯಕ್ಕೆ ಮುಟ್ಟುತ್ತಿರುವ ಇಂಥ ಜಾಲತಾಣಗಳೂ ಪತ್ರಿಕಾ ಅಂಕಣಗಳೂ ದಾರಿ ಅಲ್ಲ. ಆಡಳಿತಾತ್ಮಕ ವ್ಯವಸ್ಥೆಯನ್ನು ಮುಟ್ಟುವಲ್ಲಿ ಇವು ಹೆಚ್ಚೆಂದರೆ ದುರ್ಬಲ ಸಾಕ್ಷಿಗಳಾಗಬಹುದು. ಉಚಿತ ಯಕ್ಷ-ಪ್ರದರ್ಶನದ ನೆಪದಲ್ಲಿ ಸಾರ್ವಜನಿಕರನ್ನು ನೆರಹಿದ ವ್ಯವಸ್ಥಾಪಕರು ಸ್ವಸ್ಥ ಯಕ್ಷಗಾನ ವೀಕ್ಷಣೆಗೆ ಆದ್ಯತೆ ಕೊಡಬೇಕಿತ್ತು.

ವಿಚಾರ ಮಂಥನದ ಪ್ರಾಮಾಣಿಕ ಕಾಳಜಿ ಇದ್ದುದೇ ಆದರೆ ಪ್ರದರ್ಶನದ ಕೊನೆಯಲ್ಲೋ ಇನ್ನೊಂದೇ ದಿನವೋ ಪರಿಣತರ ಕೂಟ ನಡೆಸಬಹುದಿತ್ತು. ಮತ್ತದಕ್ಕೂ ಆಸಕ್ತರಿಗೆ ಮುಕ್ತ ಅವಕಾಶ ಇಡಬಹುದಿತ್ತು. ಅಲ್ಲಿ ಮೂಡಿದ ತೀರ್ಮಾನಗಳನ್ನು ಲಿಖಿತವಾಗಿ, ಸ್ಪಷ್ಟ ಸಾಕ್ಷಿ ಆಧಾರ ಸಹಿತ ಸೂಕ್ತ ಇಲಾಖೆಗಳತ್ತ ಹರಿಸಬೇಕು, ಬೆಂಬತ್ತಬೇಕು. ಪರಿಣಾಮದಲ್ಲಿ ಅವರೆಲ್ಲ ನಂಬಿದ ಆದರ್ಶಗಳು (ಒರೆಗೆ ಹಚ್ಚಲ್ಪಟ್ಟು) ಸಾಧಿತವಾಗಿ, ಸಾಂಸ್ಕೃತಿಕ ಕರ್ನಾಟಕ ಬೆಳಗುವುದು ನಿಶ್ಚಿತ. 

ವೇದಿಕೆ ತಪ್ಪಿ ಬೆಳೆಯುವ ಇಂಥಾ ಸಭೆಗಳಲ್ಲಿ ಪ್ರೇಕ್ಷಕ ಎದುರಿಸುವ ಅಪಾಯಗಳ ಅರಿವು ನನಗೆ ಚೆನ್ನಾಗಿಯೇ ಇದ್ದುದರಿಂದ ಮೂರೂ ಸಂಜೆ ನಾನು ತಡಮಾಡಿಯೇ ಹೋಗುತ್ತಿದ್ದೆ. (ಮೂರು ದಿನ ಕ್ರಮವಾಗಿ ೨.೧೫, ೧.೪೫ ಮತ್ತು ೧.೪೦ ಗಂಟೆಗಳ ವಿಳಂಬದಲ್ಲಿ ಯಕ್ಷಗಾನ ಶುರುವಾಗಿದೆ.) ಮೊದಲ ದಿನದ ಸಭೆ ನನ್ನ ಅಂದಾಜನ್ನು ವಿಪರೀತ ಮೀರಿದ್ದಕ್ಕೆ, ಮೇಲೆ ಹೇಳಿದ ವಿನೋದವನ್ನು ನಾನು ಸುಮಾರು ಒಂದೂಕಾಲು ಗಂಟೆಯಷ್ಟು ಅನುಭವಿಸಬೇಕಾಯ್ತು. “ಅಷ್ಟು ಒಗ್ಗದಿಕೆಯ ಪರಿಸರಕ್ಕೆ ಮೂರೂ ದಿನ ಯಾಕೆ ಹೋದಿ” ಎಂದು ಯಾರೂ ಕೇಳಬಹುದು. ಇಡಗುಂಜಿ ಮೇಳ ನನ್ನ ಮೇಲೆ ಹಿಂದೆ ಮಾಡಿದ ಪ್ರಭಾವ ಅಷ್ಟು ಗಾಢವಾದುದು. ಸಣ್ಣ ಉದಾಹರಣೆಗೆ ಇಲ್ಲಿ ಚಿಟಿಕೆ ಹೊಡೆದು ಈ ಹಿಂದೆ ನಾನೇ ಬರೆದ ಲೇಖನವನ್ನು ಅವಶ್ಯ ಓದಬೇಕು. ಯಕ್ಷ-ಇತಿಹಾಸದಲ್ಲಿ ಪ್ರಸ್ತುತ ಮೇಳ ಎರಡು ತಲೆಮಾರುಗಳ ಉದ್ದಕ್ಕೆ ಗುಣಾತ್ಮಕವಾಗಿ ದಾಖಲಿಸಿರುವ ಸಾಧನೆಗಳ ಒತ್ತಡ ಒಂದಲ್ಲದಿದ್ದರೆ ಹೋಗುತ್ತಲೂ ಇರಲಿಲ್ಲ, ತೀವ್ರ ವಿಷಾದದಲ್ಲಿ ಇಷ್ಟನ್ನು ಬರೆಯುತ್ತಲೂ ಇರಲಿಲ್ಲ. ನಿರೀಕ್ಷೆಯ ಎತ್ತರಗಳು ಹೆಚ್ಚಾದಷ್ಟೂ ಬಿದ್ದಾಗಿನ ಆಘಾತ ತೀವ್ರ.

ಆದದ್ದಾಯ್ತು, ಯಕ್ಷಗಾನ ಹೇಗಿತ್ತು ಎಂದು ಕೇಳ್ತೀರೋ... 
ಯಕ್ಷ-GONE ತ್ರಿವಳಿ

ಮೇಳ ಅಳವಡಿಸಿಕೊಂಡ ಹೊಸ ತಲೆಮಾರಿನ ಸಮರ್ಥ ಹಿಮ್ಮೇಳ, ಬಹುತೇಕ ತರುಣ ಮತ್ತು ಉತ್ಸಾಹೀ ಮುಮ್ಮೇಳ ನಿಜಕ್ಕೂ ಒಂದು ಆಸ್ತಿ. ಸ್ಪಷ್ಟ ಮತ್ತು ಚೊಕ್ಕ ನಿರ್ದೇಶನದ ಕುರುಹುಗಳು, ಮೂರೂ ದಿನಕ್ಕೆ ವಿಭಿನ್ನವಾದ ಚುಟುಕು ಪೂರ್ವರಂಗ ಕಲಾಪಗಳೂ ಮುದ ನೀಡಿದವು. ಇವುಗಳ ಮುನ್ನೆಲೆಯಲ್ಲಿ, ಪದ್ಯಗಳ ಆಯ್ಕೆ, ದೃಶ್ಯ ಮತ್ತು ವೇಷಗಳ ರೂಪಣೆಯಲ್ಲಿ (ಅಜಿತ್ ಕುಮಾರ್ ಹೆಗಡೆ ಶಾನಾಡಿಯವರು ಪಂಚವಟಿಯಲ್ಲಿ ಕಾಣಿಸುವ ಮೂರು ಋಷಿಗಳ  ಶಿರೋಧಾರ್ಯದ ಬಗ್ಗೆ ನನ್ನಲ್ಲಿ ಅತೃಪ್ತಿ ವ್ಯಕ್ತಪಡಿಸಿದರು) ಧಾರಾಳ ಚರ್ಚಾಸ್ಪದ ಸಂಗತಿಗಳು ಇರಬಹುದು. ಸೃಜನಾತ್ಮಕ ಕಲೆಗಳಲ್ಲಿ ಇದು ಇರಬೇಕಾದದ್ದೂ ಹೌದು. ಶಂಭು ಹೆಗಡೆಯವರ ಕಾಲದಲ್ಲಿ ಪ್ರದರ್ಶನಗಳು ಮೇಳದ ಮಾಲಿಕನ ಏಕವ್ಯಕ್ತಿ ಕೇಂದ್ರಿತವಾಗಿದೆ ಎಂಬ ಸಣ್ಣ ಅಪಸ್ವರ ಸಾರ್ವಜನಿಕರಿಂದ ಕೇಳುತ್ತಿತ್ತು. ಅದನ್ನು ಹೊಡೆದು ಹಾಕುವಂತೆ ಕೆರೆಮನೆ ಮೇಳದ ಬದಲಾವಣೆಗಳು ಚೇತೋಹಾರಿಯಾಗಿದ್ದವು. ವೃತ್ತಿ ಮೇಳಕ್ಕೆ ‘ಕಾಲಮಿತಿ’, ಯಕ್ಷಗಾನಕ್ಕೆ ನಿರ್ದೇಶನ ಎಂಬಂಥ ಹಲವು ಮೌಲ್ಯಗಳನ್ನು ಗಟ್ಟಿಯಾಗಿ ಪ್ರತಿಪಾದಿಸಿ, ಆಚರಣೆಯಲ್ಲೂ ತಂದ ಶಂಭು ಹೆಗಡೆಯವರ ಸ್ಮೃತಿಗೆ ಇವೆಲ್ಲ ಸಂದ ಗೌರವವೇ ಸರಿ. ಸಭಾಕಲಾಪದ ವೇಳೆ ಹಿನ್ನೆಲೆಯಲ್ಲಿ ಮಂದಿರದೆತ್ತರದ ಕಟೌಟ್ ಸಹಿತ ಸಭಾ ವಿವರಗಳೆಲ್ಲಾ ನಮೂದಿಸಿದ್ದ ಪೋಸ್ಟರ್ ಶೋಭಿಸುತ್ತಿತ್ತು. ಆದರೆ ಪ್ರದರ್ಶನಕ್ಕಾಗುವಾಗ ಅದನ್ನು ನೆನಪಿನಲ್ಲಿ ತೆಗೆಯುತ್ತಿದ್ದದ್ದು ಸಂದ ಹಿರಿಯರ ಆಶಯಕ್ಕೆ ತಕ್ಕುದಾಗಿತ್ತು. (ಶಂಭು ಹೆಗಡೆಯವರು ಪ್ರದರ್ಶನ ರಂಗದಲ್ಲಿ ಕನಿಷ್ಠ ಮೇಳದ ಹೆಸರನ್ನೂ ಕಾಣಿಸುತ್ತಿರಲಿಲ್ಲ ಎನ್ನುವುದು ತುಂಬ ಮಹತ್ತ್ವದ ನೆನಪು. ಇಂದು ಉಳಿದಂತೆ  ನಡೆಯುವ ಬಹುತೇಕ ಪ್ರಾಯೋಜಿತ ಉಚಿತ ಪ್ರದರ್ಶನಗಳಲ್ಲಿ ಹಿನ್ನೆಲೆಗೆ ಫ್ಲೆಕ್ಸಿನ  ಪೋಸ್ಟರ್ ಸಾಲದೆಂಬಂತೆ ಅಲ್ಲಿ ಉಳಿದ ಜಾಗಗಳಲ್ಲೂ ಪ್ರತಿ ಸೈಡ್ ವಿಂಗಿನ ಕಾಣುವ ಭಾಗಗಳಲ್ಲೂ ಜಿಗಿಜಿಗಿ ಬೇಗಡೆಯ ಹತ್ತೆಂಟು ಯಕ್ಷ ಪ್ರತಿಕೃತಿಗಳು ರಂಗವನ್ನು ಅಲಂಕರಿಸುವುದು ಮಾಮೂಲಾಗಿಹೋಗಿದೆ.) 

ಮೊದಲ ದಿನದ ಪ್ರಸಂಗ ಮಾರುತಿ ಪ್ರತಾಪ. ನೇರ ಬಲರಾಮನ ಜಾಗೃತ ಸ್ವಪ್ರಜ್ಞೆಯೊಡನೆ ಕಥಾಮುಖಕ್ಕೆ ಇಳಿದದ್ದು, ಸ್ವಲ್ಪ ತಡೆದು ಅತ್ತ ಸತ್ಯಭಾಮೆಯ ಅಹಮಿಕೆಯನ್ನು ಮೆರೆಯಿಸಿದ್ದೂ ಚೆನ್ನಾಗಿಯೇ ಬಂತು. ನಿಜವಾದ ಕಾರುಭಾರಿ ಬಲರಾಮ, ದ್ವಾರಾವತಿಯ ನಿಜಸಿರಿಯ ಒಡತಿ ಸತ್ಯಭಾಮಾ ಎನ್ನುವುದನ್ನು ಎರಡೂ ವೇಷಧಾರಿಗಳು ಮಾತಿನಲ್ಲಿ, ಹಾವಭಾವಗಳಲ್ಲಿ, ಕುಣಿತ ಅಭಿನಯಗಳಲ್ಲಿ ಸ್ಪಷ್ಟವಾಗಿ ಸಮರ್ಥಿಸಿದರು. ಆದರೆ ನಿಜ ಕಥಾನಾಯಕನ ಅರ್ಥಾತ್ ಕೃಷ್ಣನ ಕಲಾಪ ಮಾತ್ರ ಎರಡಕ್ಕೂ ಸಮಜೋಡಿಯಾಗಲೇ ಇಲ್ಲ. ಪ್ರತಿಯೊಂದೂ ಮಾನವ ಸಂಬಂಧವನ್ನು (ಅಣ್ಣ, ಹೆಂಡತಿ) ಗೌರವಿಸುತ್ತಾ ತನ್ನ ಧರ್ಮಸಂಸ್ಥಾಪನೆಯ ಅವತಾರ ಸಾರ್ಥಕ್ಯವನ್ನು ಸಾಧಿಸಬೇಕಾದ ಕೃಷ್ಣನ ವೇಷವೇನೋ ಬಂತು, ಪಾತ್ರ ಅರಳಲೇ ಇಲ್ಲ. ತಂತ್ರಗಾರಿಕೆಯ ಅಭಿನಯ ಮತ್ತು ಸ್ವಗತದ ನೆಪದಲ್ಲಿ ಪ್ರೇಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅರ್ಥಪೂರ್ಣ ವಾಗ್ವಿಲಾಸಕ್ಕೆ ಹಿಮ್ಮೇಳದ ಕುಮ್ಮಕ್ಕು ಧಾರಾಳ ಇತ್ತು. ವೇಷಧಾರಿಯ ಸ್ಪಂದನ ಮಾತ್ರ ಶೂನ್ಯವಾಗಿತ್ತು. ನನಗೆ ಅಂದಿನ ಸಭಾ ಕಲಾಪದ ಹೊರೆಯಲ್ಲಿ ಬಳಲಿದ ಮನಸ್ಸಿನೊಡನೆ ಪ್ರಸಂಗದ ಕೊನೆಯವರೆಗೆ ಕುಳಿತುಕೊಳ್ಳಲು ಮನಸ್ಸಾಗದೇ ಎದ್ದು ಬಂದೆ.

ಎರಡನೇ ಪ್ರಸಂಗ ಪಂಚವಟಿ. ರಾಮ ಲಕ್ಷ್ಮಣರ ತೆರೆಮರೆಯ ಕುಣಿತವೇ ಕಥಾಮುಖಕ್ಕೆ ಜಾರುವ ಪರಿ ಅರ್ಥಪೂರ್ಣವಾಗಿತ್ತು. ಆದರೆ ಅಲ್ಲಿನ ವೇಷ ಪ್ರಸಂಗದಲ್ಲಿ ರಾಮನಾಗುವುದಕ್ಕೆ ಅವಶ್ಯವಾದ, ಅದಕ್ಕೂ ಮಿಗಿಲಾಗಿ ಅನಾವರಣಗೊಳ್ಳಲಿರುವ ಕಥನಕ್ಕೊಂದು ಸಮರ್ಥ ಹಿನ್ನೆಲೆ ಕೊಡುವ ಮಾತುಗಳು ಬರಲೇ ಇಲ್ಲ. ಯಕ್ಷಗಾನದಲ್ಲಿ  (ಅಥವಾ ಯಾವುದೇ ಸೃಜನಶೀಲ ಕೃತಿಯ) ಬಲು ಸಣ್ಣ ಅಂಶ ಆಶ್ಚರ್ಯ (ಗೊತ್ತಿಲ್ಲದ್ದನ್ನು ಕಾಣಿಸುವ ಶಕ್ತಿ. Element of surprise). ಅದರ ಮುಖ್ಯ ಜನಾಕರ್ಷಣೆಯ ಅಂಶ, ಗೊತ್ತಿರುವ ಕತೆಯದೇ ಹೊಸ ಕಥನ, ಗೊತ್ತಿರುವುದನ್ನೇ ಅಭಿವ್ಯಕ್ತಿಸುವ ಹೊಸ ಶೈಲಿಗಳ ಕುರಿತ ಅಪಾರ ಕುತೂಹಲ. (ಭಾರತದ ಭೀಮ ಏನು ಮಾಡುತ್ತಾನೆ ಎಂದು ಸಾಮಾನ್ಯವಾಗಿ ಹೆಚ್ಚಿನ ಯಕ್ಷ-ಪ್ರೇಕ್ಷಕರಿಗೆ ತಿಳಿದದ್ದೇ. ಆದರೆ ಶೇಣಿಯ ಜರಾಸಂಧನೆದುರು ಜೋಶಿಯ ಭೀಮ ಏನು ಮಾಡುತ್ತಾನೇಂತ ಕುತೂಹಲ.) ನದೀತಟಾಕದ ಸುಂದರ ಪರಿಸರ ಕಣ್ಣೆದುರು ತೆರೆದು ಬಿದ್ದಿದೆ. ಕಳಚಿ ಬಂದ ಕೌಟುಂಬಿಕ ಮೋಹಗಳೂ ಬೇಡಾ ಎಂದರೂ ಪರಸ್ಪರ ಹಂಚಿಕೊಳ್ಳಲು ಉಳಿದಿದೆ. ಭವಿಷ್ಯದ ನಿರೀಕ್ಷೆಗಳು, ವರ್ತಮಾನದ ಅಗತ್ಯಗಳು ಮರೆಯುವಂತದ್ದಲ್ಲ. ಇವೆಲ್ಲವನ್ನು ಕುಣಿತ, ಅಭಿನಯ ಮತ್ತು ಸುಂದರ ಮಾತುಗಳಲ್ಲಿ ತುಂಬಿಕೊಡಬೇಕಾದ ರಾಮಪಾತ್ರ, ರಂಗಕ್ಕೆ ಒಗ್ಗದ ವಾಸ್ತವತೆಯನ್ನಷ್ಟೇ ಮೆರೆಸಿತು. ಆಡದೇ ಮಾಡುವವನು ರೂಢಿಯೊಳಗುತ್ತಮನು, ಲೌಕಿಕಕ್ಕಾದೀತು; ಯಕ್ಷಗಾನಕ್ಕಲ್ಲ.

ಋಷಿಗಳು ಬಂದು ತರತರದ ಸಂಕಟಗಳನ್ನು ತೋಡಿಕೊಳ್ಳುತ್ತಾರೆ. ರಾಮ ಅವರ ಇರವನ್ನು ಸಮರ್ಥಿಸಬೇಕು, ನೋವಿಗೆ ಸಂತಪಿಸಬೇಕು, ಬಹುವಿಧದ ಅಭಯವಂತೂ ನೀಡಲೇ ಬೇಕು. ಶೂರ್ಪನಖಿ ಘೋರ ರಕ್ಕಸಿಯಾಗಿ ಗುಡುಗುಡಿಸಿದ್ದಕ್ಕೆ, ಮಾಯಾರೂಪದಲ್ಲಿ ಮೋಹಕವಾಗಿ ಸುಳಿದಾಡಿದಕ್ಕೆ ಸ್ಥಿತಪ್ರಜ್ಞ ರಾಮನಲ್ಲೂ ಭಾವಸಂಚಾರಗಳ ವಿವಿಧ ತರಂಗಗಳು ಏಳಲೇಬೇಕು. ಸೀತೆಗೊಂದು ಭರವಸೆ, ಕುಲಟೆಗೊಂದು ಪಾಠ, ಲೋಕಕ್ಕೊಂದು ಆದರ್ಶ, ಪ್ರದರ್ಶನಕ್ಕೊಂದು ನಾಟಕೀಯತೆಗೆಲ್ಲಾ ಅವಕಾಶಗಳು ಪ್ರಸ್ತುತ ಪ್ರದರ್ಶನದಲ್ಲಿ ರಾಮನೆಂಬ ಗೋಡೆಗೆ ಬಡಿದು ಉದುರಿದ್ದು ಬಲು ದೊಡ್ಡ ಸೋಲು. ಎಲ್ಲರಿಗೂ ತಿಳಿದಂತೆ ಶೂರ್ಪನಖಿಯ ಮಾನಭಂಗ ಮಾಡುವವ (ಕಿವಿಮೂಗು ಕತ್ತರಿಸುವವ) ಲಕ್ಷ್ಮಣನಾದರೂ ಸೈದ್ಧಾಂತಿಕವಾಗಿ ಖ್ಯಾತಿ ಸಲ್ಲುವುದು ರಾಮನಿಗೆ. ಆದರೆ ಈ ಪ್ರದರ್ಶನದಲ್ಲಿ ಅದನ್ನು ರಾಮನ ಸಾಧನೆಗಳ ಪಟ್ಟಿಗೆ ಸೇರಿಸಲು ಯಾವುದೇ ಬಲವತ್ತರವಾದ ಸಾಕ್ಷಿಗಳು ಸಿಗಲಿಲ್ಲ.
ಕೊನೆಯ ದಿನ ಗದಾಯುದ್ಧ. ಕೃಷ್ಣನ ತಂತ್ರಗಾರಿಕೆ, ರಾಮನ ಏಕ ಪಕ್ಷೀಯ ಶೌರ್ಯಗಳೆಲ್ಲ ಮೀರಿದ, ಅಪ್ಪಟ ವೀರರಸದ ಪ್ರಸಂಗ. ಯಾವುದೇ ಕಲೆಯನ್ನು ಒರೆಗೆ ಹಚ್ಚುವಲ್ಲಿ ಹೋಲಿಕೆ ತಪ್ಪೆನ್ನುವ ಮಾತಿದೆ. ಆದರೆ ಇದು ಸಾಮಾನ್ಯ ಯಕ್ಷ-ಪ್ರೇಕ್ಷಕನ ತಲೆಯೊಳಗೂ ಅಸಂಖ್ಯ ಪೂರ್ವ ಪಕ್ಷವನ್ನು ತುಂಬಿದ ಭೀಮ ದುರ್ಯೋಧನರ ಕಾಳಗ. ಈ ಪ್ರಸಂಗದಲ್ಲಿ ದುರ್ಯೋಧನ ಸೋತರೂ (ಸತ್ತರೂ) ಪ್ರಸಂಗವನ್ನು ಗೆಲ್ಲಿಸುವಲ್ಲಿ ಹೆಚ್ಚಾಗಿ ಖ್ಯಾತನಾಮರೆನ್ನಿಸಿಕೊಂಡ ಕಲಾವಿದರೇ ದುರ್ಯೋಧನರಾಗುತ್ತಾರೆ. ಯಕ್ಷಗಾನಕ್ಕೆ (ಸಾಮಾನ್ಯವಾಗಿ ಎಲ್ಲ ಸಾಂಪ್ರದಾಯಿಕ ರಂಗಕಲೆಗಳಂತೇ) ಯಾವುದೇ ರಸಭಾವಗಳನ್ನು ತುಂಬಿ ಕೊಡುವಲ್ಲಿ ಅದರದೇ ಮಿತಿಗಳಿವೆ. ಸೆಟ್, ಲೈಟಿಂಗು, ಸೌಂಡು, ವಿವಿಧ ತಂತ್ರಗಳು, ಮೇಕಪ್ಪು ಹೀಗೆ ಪಟ್ಟಿ ಮಾಡಿದಷ್ಟು ಮುಗಿಯದ ಸಾಧ್ಯತೆಗಳು ಆಧುನಿಕ ರಂಗಕಲೆಗಳಿಗೆ ಒಲಿಯುವುದಿರಬಹುದು. ಅವ್ಯಾವವನ್ನೂ ಬಳಸಿಕೊಳ್ಳಲಾಗದ ಯಕ್ಷಗಾನಕ್ಕೆ, ಕೊರತೆಗಳೇ ಶಕ್ತಿಯಾಗುವಲ್ಲಿ ಬಹುದೊಡ್ಡ ಅಸ್ತ್ರ ವಾಚಿಕ ಶಕ್ತಿ. ಕೇವಲ ವಾಚಿಕವನ್ನು ಹಿಡಿದು, ಅಂದರೆ ಧ್ವನಿಯ ಏರಿಳಿತ ಮತ್ತು ಸಾಹಿತ್ಯದ ಅಪಾರ ಸಾಧ್ಯತೆಗಳನ್ನಷ್ಟೇ ದುಡಿಸಿಕೊಂಡು, ಅದ್ವಿತೀಯ ಕಲೆ ಎನ್ನಿಸಿಕೊಂಡ ತಾಳಮದ್ದಳೆ, ಯಕ್ಷಗಾನ ಸೋದರ. ಅದು ಮುಟ್ಟಿರುವ ಎತ್ತರ ಗೌರೀಶಂಕರ ಎಂದು ನಾನು ಪ್ರತ್ಯೇಕ ಹೇಳಬೇಕಿಲ್ಲ. ಪ್ರಸ್ತುತ ಪುರಭವನ ಪ್ರದರ್ಶನದಲ್ಲಿ ಮಾತುಸೋತ ದುರ್ಯೋಧನನಿಂದ ಗದಾಯುದ್ಧ ಪ್ರಸಂಗ ಇನ್ನಿಲ್ಲದಂತೆ ನೆಲಕಚ್ಚಿತು. ಸಮರ್ಥ ಸಹಕಲಾವಿದರು ಇರುವುದಕ್ಕೆ ಸಾಕ್ಷಿಯಾಗಿ ಪಾಂಡವರ (ಚಂದದ ಒಡ್ಡೋಲಗವೂ ಸೇರಿದಂತೆ) ಕಲಾಪಗಳೆಲ್ಲ ಕಳೆಗಟ್ಟಿದವು. ಪಾತ್ರ ವೈವಿಧ್ಯಕ್ಕೆ ಒಬ್ಬ ಸಂಜಯ, ಒಬ್ಬ ದೂತ ತುಸುವೇ ಸುಳಿದ ಪ್ರದರ್ಶನವಿದು. 

(ಸಾಂಪ್ರದಾಯಿಕವಾಗಿ ಹೇಳುವುದಿದ್ದರೆ ಅಶ್ವತ್ಥಾಮಾದಿ ಬಳಗ, ಬಲರಾಮ, ಏಕಮಾತ್ರ ಸ್ತ್ರೀ ವೇಷ ಎನ್ನುವ ಮರ್ಯಾದೆಗೆ ದ್ರೌಪದಿಯ ಪಾತ್ರಗಳ್ಯಾವವೂ ಅಲ್ಲಿರಲಿಲ್ಲ, ಒಪ್ಪಿಕೊಳ್ಳೋಣ) ಉಳಿದಂತೆ ಆರರೆದುರು (ಕೃಷ್ಣ ಸೇರಿದಂತೆ ಪಾಂಡವರು) ಒಂದೇ ಆದ, ಆ ಕೊರತೆ ನೀಗಲು ದೈತ್ಯನಾಗಿ ಕಾಣಲೇ ಬೇಕಾದ ದುರ್ಯೋಧನ ಕನಿಷ್ಠ ದೈಹಿಕ ಕೆಲಸವನ್ನಾದರೂ ಮಾಡಬಹುದು ಎನ್ನುವ ನನ್ನ ನಿರೀಕ್ಷೆ ಪೂರ್ತಿ ಹುಸಿಯಾಯ್ತು. ಅನ್ಯ ಪ್ರದರ್ಶನಗಳಲ್ಲಿ ಪ್ರೇಕ್ಷಕರಿಗೆ ವಾಕರಿಗೆ ಬರುವಷ್ಟು ಅತಿ ಅಭಿನಯಕ್ಕೀಡಾಗುವ ಸನ್ನಿವೇಶಗಳೂ (ಉದಾ: ‘ಊಟದಲ್ಲಿ ನಿಪುಣ’ ಅಥವಾ ‘ಭೀಮ ಬಿದ್ದಾ’) ಇಲ್ಲಿ ಕೇವಲ ಹಿಮ್ಮೇಳದ ವ್ಯರ್ಥಾಲಾಪದಂತೆ ತೋರಿದ್ದು ನಿಜಕ್ಕೂ ಶೋಚನೀಯ. ಸುಂದರ ರೂಪ, ದೃಢ ಆಳಂಗ ಎಲ್ಲಕ್ಕೂ ಮಿಗಿಲಾಗಿ (ಮೊದಲೇ ಹೇಳಿದಂತೆ) ಎರಡು ತಲೆಮಾರುಗಳ ಎತ್ತರದಲ್ಲಿ ನಿಂತು, ಇನ್ನೂ ಮೇಲೆಲ್ಲೋ ಕಾಣಬೇಕಿದ್ದ ಶಿವಾನಂದ ಹೆಗಡೆಯವರ ದುರ್ಯೋಧನ ಪಾತಾಳದಾಳದಲ್ಲಿ ಬಿದ್ದಿದ್ದ. 

ನಾವು (ಮನೋಹರ ಉಪಾಧ್ಯ ಮತ್ತು ನಾನು) ಹಿಂದೆ ಇದೇ ಮೇಳದ ಲಂಕಾದಹನ ಪ್ರದರ್ಶನ ಇಟ್ಟುಕೊಂಡಂದು ಶಂಭು ಹೆಗಡೆಯವರು ಹೇಳಿದ ಮಾತು “ಅಭಿಮಾನ ಬೇಕು, ವ್ಯಕ್ತಿಯ ಮೇಲಲ್ಲ, ಕಲೆಯ ಮೇಲೆ” ಎನ್ನುವುದು ಕಿವಿಯಲ್ಲಿ ಮೊರೆದು ಕೇಳುತ್ತಿತು. ಪ್ರಸಂಗಕ್ಕೆ (ಹೊಸದೇ ಎನ್ನುವಂತಿತ್ತು) ಸುಂದರ ಮಂಗಳಪದ ಮುಗಿಯುತ್ತಿದ್ದಂತೆ, ಪ್ರತಿ ದಿನದಂತೆ ಸಂಚಾಲಕ ಸಾರ್ವಜನಿಕರಲ್ಲಿ ವಿಜ್ಞಾಪನೆಗೆ ಬರುವವರಿದ್ದರು. ನನಗೆ ಪ್ರದರ್ಶನ ಹೇಳದಿರುವುದನ್ನು ಒಣ ವಿವರಣೆಯಲ್ಲಿ ಕೇಳಲು ಮನಸ್ಸು ಬಾರದೆ, ಎದ್ದು ಮನೆ ಸೇರಿದೆ.

14 comments:

  1. ಆಹಾ! ಯಕ್ಷಗಾನ! ಹಾ ಪ್ರಿಯಾ!
    ಪ್ರಶಾಂತ ಹೃದಯಾ ಹಾನಿಹೊಂದಿದೆಯಾ!
    ಅಸಂಗತ ನಾಟಕಗಳು ಪಾಶ್ಚಾತ್ಯ ಆಮದು ಎಂದು ತರಗತಿಗಳಲ್ಲಿ
    ಬೋಧಿಸುವವರು ಇಂಥ ಕಾರ್ಯಕ್ರಮಗಳನ್ನು ಆವಶ್ಯ ನೋಡಬೇಕು.
    ಮಂಗಳಗಂಗೋತ್ರಿಯ ಜಾನಪದ ತರಗತಿಯಲ್ಲಿ ಯಕ್ಷಗಾನದ
    ಸ್ವರೂಪ ರಚನೆ ಹೇಳುವಾಗ ಆಕ್ಷನ್-ಗಾನ ದಿಂದ ಯಕ್ಷಗಾನ ಬಂದಿತೆಂದು
    ತಮಾಷೆಯಾಗಿ ಹೇಳುತ್ತಿದ್ದೆ. ಅದು ನಗುವ ವಿಷಯವಾಗಿ ಉಳಿಯದೆ
    ಗಾನ (ಹಿಂದಿಯಲ್ಲ)ಇಂಗ್ಲಿಷ್ ನ ಗಾನ್ ಆಗಿದೆ!
    ಮತ್ತೆ ಶಿವರಾಮ ಕಾರಂತರ ಮಾತಿಲ್ಲದ ಬಾಲೆ ಮಾದರಿಯ ಪ್ರಯೋಗಗಳ
    ಅನ್ವೇಷಣೆಗೆ ಆಹ್ವಾನ, ವೀಳೆಯ ನೀಡಿದಂತಿದೆ.
    ಯಾರು ಮುಂದಾಗುವರೋ ನೋಡಬೇಕು.
    ಅ-ಸಂಗತಿಗಳ, ದಾಖಲೀಕರಣ(ಬಹುಮಾಧ್ಯಮಕ್ಕೆ ಧನ್ಯವಾದಗಳು.

    ReplyDelete
  2. nirdesakanigobba nirdesajkana agatyavide

    ReplyDelete
  3. ಲಕ್ಷ್ಮೀನಾರಾಯಣ ಭಟ್ ಪಿ.09 October, 2012 11:28

    ಪ್ರೀತಿಯ ಅಶೋಕವರ್ಧನರಿಗೆ ನಮಸ್ಕಾರಗಳು.

    ನಿಮ್ಮ ಪ್ರತಿಕ್ರಿಯೆಗೆ ನನ್ನ ಸಂಪೂರ್ಣ ಒಪ್ಪಿಗೆ! ಯಾಕೋ ಏನೋ ಇತ್ತೀಚಿನ ಅನೇಕ ಪ್ರದರ್ಶನಗಳು ಹೀಗೆ ಸಪ್ಪೆಯಾಗುತ್ತಿವೆ.

    ReplyDelete
  4. ಆಟಕ್ಕುಂಟು ಲೆಖ್ಕಕ್ಕಿಲ್ಲ. ಆದರೂ ಒಂದಷ್ಟು ಸರಕಾರೀ (ಪ್ರಜೆಗಳ) ದುಡ್ಡು (ಸ)ವಿನಿಯೋಗ ಆಯಿತೆಂದು ಭ್ರಮಿಸೋಣ.ಯಾಕೆಂದರೆ ಯಕ್ಷಗಾನ ಎಂದರೆ ಒಂದು ಭ್ರಮಾಲೋಕ. ಏನಾದರೂ ಭ್ರಮೆ ಆವರಿಸಿಕೊಂಡು ಇದ್ದರೇನೇ ಅರ್ಥಪೂರ್ಣ. ಮಾಡಿದವರಿಗೆ ಮಾಡಿದ ಭ್ರಮೆ ನೋಡಿದವರಿಗೆ ನೋಡಿದ ಭ್ರಮೆ.

    ReplyDelete
  5. Vedikeya melina asangathagala spashta chithrana mathu yaksha pradarshanadalli ranjisida bhaagagala ishta varnane, eradannu mechikonde. Photo haagu vedio darshana laabhakku kritajne.
    -- Shyamala.

    ReplyDelete
  6. ಮೂರು ದಿನಗಳ ಯಕ್ಷಗಾನ ಒಡ್ಡೋಲಗ odd-olaga ಹೇಗೂ ಇರಲಿ, ಅದರ ಸ್ಥಿತಿಗತಿಯನ್ನು ವರ್ಣಿಸಿದ ವೈಖರಿಯನ್ನು ಮಾತ್ರ ಮೆಚ್ಚಲೇಬೇಕು. ರಂಗದ ಮೇಲೆ ಮಾತಿನ ಮಂಟಪ ಕಟ್ಟಬೇಕಾದವರ ವೈಫಲ್ಯ ಹೆಚ್ಚಿದಷ್ಟೂ ಅಶೋಕವರ್ಧನರ ಬರವಣಿಗೆ ಕೌಶಲ ಪ್ರಖರವಾಗಿದೆ.
    ನಾಗೇಶ ಹೆಗಡೆ

    ReplyDelete
  7. ಮೂರ್ತಿ ದೇರಾಜೆ09 October, 2012 20:48

    ಒಳ್ಳೆಯ ಲೇಖನ ಅಶೋಕ್.....ಹೀಗೆ ಒಬ್ಬರಾದರೂ.....ದಾಕ್ಷಿಣ್ಯ ಇಲ್ಲದೇ ಬರೆಯುವವರು ಬೇಕು.....ಇಲ್ಲವಾದರೆ..."ಕಲೆ" ಅಂದರೆ ಇಷ್ಟೇ ಎಂದು ಕಾಣುವ ಅಪಾಯ ಇದೆ ಅಲ್ಲವೇ....ಶತಾವಧಾನಿ ಗಣೇಶ್ ಒಮ್ಮೆ ಯಕ್ಷಗಾನ ಸಮ್ಮೇಳನ ಒಂದರಲ್ಲಿ ....." ಈ ಬ್ಯಾನರ್ ಸಂಸ್ಕೃತಿ ಬಿಡುವ ತನಕ ಯಕ್ಷಗಾನದ ಏಳಿಗೆಯನ್ನು ನಿರೀಕ್ಷೆ ಮಾಡುವಂತಿಲ್ಲ..." ಎಂದಿದ್ದರು......"ನಟನಾಗಲೀ ಸಹೃದಯನಾಗಲೀ ತಲ್ಲೀನ ಆಗಬಾರದು....ಆಗಲು ಬಿಡಬಾರದು...." ಎನ್ನುವ ಬ್ರೆಕ್ಟ್ ನ ಮಾತು ಕೆಲವರಿಗೆ ಅರ್ಥ ಆದದ್ದು ಪ್ರಾಯಷಃ ಹೀಗೆ.....

    -ಮೂರ್ತಿ ದೇರಾಜೆ

    ReplyDelete
  8. Athriyavare nimma baraha chennagide.shambhuhegadeyavaru tamma aata mugiyuvavaregu shivanandanige awakasha mathu tarabeti kodada karanau shivanandana mele parinama beeridantide.melada kalavida veshadhariyagi nirdeshakanagabaradu emba nanna abhipraya kelavarige hidisallilla.nirdeshakanadare ondo pradarshana ekavyaktipradarshanavaguttade.illa prsanga gelluttade.sahakalavidaru uttamapradarshana needuttare.nirdeshaka kalavida parajayagolluttane. thekkunja

    ReplyDelete
  9. ಎಸ್.ಎಂ ಪೆಜತ್ತಾಯ11 October, 2012 10:28

    ದೂರದ ಬೆಂಗಳೂರಲ್ಲಿ ಕುಳಿತು ಮುಖಸ್ತುತಿಯ ಪೀಠಿಕೆಯ ಮೇಲೆ ಕುಳಿತ ಯಕ್ಷಗಾನದ ಬಗ್ಗೆ ನಾನು ಏನೂ ಹೇಳಲಾರೆ.
    ನನ್ನ ಬಾಲ್ಯದಲ್ಲಿ ಬೆಳಗಿನ ಜಾವದ ಬೆಳ್ಳಿ ಮೂಡಿದ ಮೇಲೆ, ಪ್ರಯೋಜಕರು ಅಥವಾ ಮುಖ್ಯ ಅಥಿತಿಗಳನ್ನು ಕರೆದು ಐದು ನಿಮಿಷದ ವಂದನಾರ್ಪಣೆ ಇತ್ತು!
    ಅತಿಥಿಗಳು / ಪ್ರಯೋಜಕರು ಅಂದಿನ ಯಕ್ಷಗಾನವನ್ನು ಕಡ್ಡಾಯ ನೋಡಲೇ ಬೇಕಿತ್ತು.
    ಈಗ ಆ ಕ್ರಮ ಎಲ್ಲಿಗೆ ಹೋಗಿದೆ? ಯಾರಾದರೂ ದಯವಿಟ್ಟು ತಿಳಿಸುವಿರಾ?
    ಪೆಜತ್ತಾಯ

    ReplyDelete
  10. Your observations are absolutely correct.

    ReplyDelete
  11. ಅತ್ರಿಯವರೆ,
    ಕೈ ಮುಗಿದೆ ನಿಮಗೆ..
    ಇಡಗುಂಜಿ ಮೆಳದ ಕಾರ್ಯಕ್ರಮದ ಕುರಿತು ವಿಮರ್ಶೆ(ಹೊಟ್ಟೇ ಅಲವರಿಕೆ)ಹೊರಬಂದಿರುವುದನ್ನು ಓದಿದೆ.
    ನಿಮ್ಮ ಬರವಣಿಗೆಯ ಪರಿಯೆ ನಿಮ್ಮ ಮನಸ್ಥಿತಿಯನ್ನು ತೋರಿಸಿ ಕೊಟ್ಟಿದೆ.ಯಕ್ಶಗಾನದ ಪ್ರದರ್ಶನದ ವಿಮರ್ಶೆಯ ಕುರಿತು- ಅದು ನಿಮ್ಮ ಇಶ್ಟ. ಕೆರೆಮನೆಯವರು ಗುಣಗ್ರಾಹಿಗಳು ಅಹಂಭಾವದ ಮಾತಲ್ಲ. ನೀವು ಸಮಾರಂಭಕ್ಕೆ ಬಂದಿರುವ ಅತಿಥಿಗಣ್ಯರ ಕುರಿತು- ಸನ್ಮಾನ ಕಾರ್ಯಕ್ರಮದ ಕುರಿತು ಹೆಚಾಗಿಯೆ ಕಾರಿದ್ದೀರಿ.
    ನೀವು ಪುರಭವನದ ಕಾರ್ಯಕ್ರಮಗಳಿಗೆ ನಿಮ್ಮ ಹುರಿಮೀಸೆ ಹೊತ್ತು ಮುಂದಿನ ಸಾಲಿನಲ್ಲಿ ವಿರಾಜಮಾನರಾದುದನ್ನು ಗಮನಿಸಿದ್ದೆನೆ. ಅಲ್ಲಿ ನಡೆಯುವ ಅತಿಥಿ ಗಣ್ಯ್ರರ ಭಾಶಣಗಳ ಕುರಿತು ತಾವು ಬರೆಯುವುದಿಲ್ಲ. ತಮ್ಮ ಬ್ಲೋಗ್ ಗೆ ವೈರಸ್ ಬಂದಿದೆಯೆ? ನಮ್ಮ ಅತಿಥಿ ಗಣ್ಯರನ್ನು (ಮೂರ್ಖ) ಎನ್ನುವಶ್ಟರ ಮಟ್ಟಿಗೆ ಒರಟುತನ ಮೆರೆದಿದ್ದೀರಿ. ದಯವಿಟ್ಟು ಸಭಾಕಾರ್ಯಕ್ರಮಕ್ಕೆ ಬನ್ನಿ ಎಂದು ಆಮಂತ್ರಣ ನೀಡಿದವ ನಾನಲ್ಲ.

    ಕಾರ್ಯಕ್ರಮದ ಸಂಘಟಕ- ನರಸಿಂಹ ಹೆಗಡೆ.

    ReplyDelete
    Replies
    1. ಸ್ವಾಮೀ ಸಾರ್ವಜನಿಕ ಕಾರ್ಯಕ್ರಮ ವ್ಯವಸ್ಥೆ ಮಾಡಿ `ನಿಮ್ಮನ್ನು ಕರೆಯಲಿಲ್ಲ' ಎನ್ನುವುದು ಸರಿಯೇ? ಸಂದರ್ಭ ಕಳಚಿ ನನ್ನ ಟೀಕಾಶಬ್ದಗಳಿಗೆ ಅರ್ಥ ಕಲ್ಪಿಸುವ ಜಾಣತನ ಸರಿಯೇ? ಆಟದ ಬಗ್ಗೆ ನನ್ನ ಅಭಿಪ್ರಾಯ ಬರೆದಿದ್ದೇನೆ. ಇಡಗುಂಜಿ ಮೇಳದ ಬಗೆಗಿರುವ ನನ್ನ ಗೌರವ, ಪ್ರೀತಿಗಳನ್ನು ಹಿಂದಿನ ಉಲ್ಲೇಖಗಳಲ್ಲೂ ಇದರಲ್ಲೂ ಧಾರಾಳ ಕಾಣುವ ಕಣ್ಣುಗಳಿವೆ, ದಯವಿಟ್ಟು ನೀವು ಮನಸ್ಸು ತೆರೆದು ನೋಡಿ.

      Delete
  12. mangalorinalli nadeyuva yakshagana galigella neevu hoguttiri aadare idagnji melada yakshaganada sanmana karyakramada nimma vimarshe tenkutittina kalavidra manassige novu taruvantide. sri shinapparai yavaranna kattihakidaru embityadi shabdagalu saduve?

    ReplyDelete
  13. thenku thittinavara artagarike badaginavarige arthavagadanthe,baravanigeyoo artavagade.kasta.

    ReplyDelete