ಸಂತ ಅಲೋಶಿಯಸ್ ಕಾಲೇಜು (ಮಂಗಳೂರು) ನನ್ನ ನಾಲ್ಕು ತಲೆಮಾರಿಗೂ ನಿಕಟ ಒಡನಾಟದ ಹಿರಿಯ ಸಂಸ್ಥೆ. ಶಿವರಾಮ ಕಾರಂತರ ಸಹಪಾಠಿಯಾಗಿದ್ದ ನನ್ನಜ್ಜ (ಪಿತಾಮಹ) - ಜಿಎನ್ ತಿಮ್ಮಪ್ಪಯ್ಯ, ನನ್ನಪ್ಪ - ಜಿಟಿ ನಾರಾಯಣ ರಾವ್ ಮತ್ತು ನನ್ಮಗ - ಜಿ. ಎ. ಅಭಯಸಿಂಹ ಇಲ್ಲಿನ ವಿದ್ಯಾರ್ಥಿಗಳು. ಅಪ್ಪ ಮುಂದುವರಿದು ಇಲ್ಲಿನ ಅಧ್ಯಾಪನ ಬಳಗದಲ್ಲೂ ಸಂಬಂಧ ಗಾಢವಾಗಿಸಿ ಬಂದವರು. ಅತ್ರಿ ಬುಕ್ ಸೆಂಟರ್ ಪ್ರಾರಂಬಿಸಿದ ಮೊದಲ ಸುಮಾರು ಮೂರು ವರ್ಷ ನನಗೆ ಊಟ, ವಸತಿ ಕೊಟ್ಟದ್ದು (ಬಿವಿ ಕೆದಿಲಾಯರ ಸುಪರ್ದಿನ) ಅಲೋಶಿಯಸ್ ಹಾಸ್ಟೆಲ್. (ಪುಸ್ತಕ ವಹಿವಾಟಂತೂ ಧಾರಾಳ ಇತ್ತು.) ಅಜ್ಜ, ಅಪ್ಪನ ಕಾಲಕ್ಕೆ ಇದು ಪ್ರಧಾನವಾಗಿ ವಿದ್ಯಾ ಸಂಸ್ಥೆಯಾಗಿತ್ತು. ಆದರೆ ಬದಲಾದ ಕಾಲದ ಅಗತ್ಯಗಳನ್ನು ನೋಡಿ ಹೇಳುವುದಾದರೆ, ಅಭಯನಿಗೆ ಇದು ಜೀವನಮುಖವನ್ನೂ ಸ್ಪಷ್ಟಗೊಳಿಸಿದ ವಿದ್ಯಾಲಯ. ಮತ್ತೂ ಮುಂದುವರಿದು ಹೇಳುವುದೇ ಆದರೆ, ಕೇವಲ ಆಕಸ್ಮಿಕದ ಸಂಯೋಜನೆಯೇ ಆದರೂ ಅಭಯನಿಗೆ ಜೀವನ ಸಂಗಾತಿಯನ್ನು, ಅಂದರೆ ನಮಗೆ ಸೊಸೆ ರಶ್ಮಿಯನ್ನೂ ಮತ್ತು ಆಕೆಗೂ ಜೀವನಮುಖವನ್ನು (ನಟನೆಯಲ್ಲಿ) ತೋರಿದ ಸಂಸ್ಥೆಯೂ ಅಲೋಶಿಯಸ್ ಎಂದು ಧಾರಾಳ ಹೇಳಬಹುದು. ಈ ಕೊನೆಯ ತಲೆಮಾರಿನ ಬಗ್ಗೆ ಸ್ವಲ್ಪ ವಿವರಣೆ ಕೊಡುವುದು ಇಲ್ಲಿ ಪ್ರಸ್ತುತ.
ಸಂತ ಅಲೋಶಿಯಸ್ ಕಾಲೇಜಿನ ನಾಟಕ ಸಂಘ ನಾದಾ ನಿವೃತ್ತಿಯನಂತರವೂ ತನ್ನ ಸತ್ಪರಂಪರೆಯನ್ನು ಮುಂದುವರಿಸಿರುವುದು ಇಂದು (೨೮-೯-೧೨) ಶ್ರುತವಾಯ್ತು. ಕೆಲವು ದಿನಗಳ ಹಿಂದೆ ಮಿಂಚಂಚೆಯಲ್ಲಿ ಕಾಲೇಜಿನ ತರುಣ ಇಂಗ್ಲಿಷ್ ಅಧ್ಯಾಪಕ ಗಿರೀಶ್ ಅಲೋಶಿಯಸ್ಸಿನ ನಾಟಕ ಸಂಘದ ಅಧ್ಯಕ್ಷನ ನೆಲೆಯಲ್ಲಿ ನಾಟಕದ ಕರೆಯೋಲೆ ಕಳಿಸಿದಾಗ ನಾನು ಉದಾಸೀನನಾಗಿದ್ದೆ. ವಿದ್ಯಾ ಸಂಸ್ಥೆಗಳು ‘ಇತರ ಚಟುವಟಿಕೆಗಳ’ ಲೆಕ್ಕ ಭರ್ತಿಗಾಗಿ ಒಂದಷ್ಟು ತಚಪಚ ಮಾಡುವುದು ಇದ್ದದ್ದೇ. ಅವು ಆಯಾ ಕಾಲದ ಸಹಪಾಠಿಗಳು, ಮಕ್ಕಳ ಪೋಷಕರು, ಅನಿವಾರ್ಯವಾಗಿ ಅಧ್ಯಾಪಕ ವೃಂದ ‘ಬೇರೇ ಕನ್ನಡಕ’ ಇಟ್ಟು ನೋಡುವ ಕಲಾಪಗಳು. ಆದರೆ ಗೆಳೆಯ ಮಹಾಲಿಂಗರು “ಇಲ್ಲಿ ಗಿರೀಶ್ ಹೊಸ ಒರತೆ ಕಂಡಿದ್ದಾರೆ! ಹೊರಗಿನ ನಿರ್ದೇಶಕನನ್ನು ತರಿಸಿ, ಹದಿನೈದು ದಿನ ರಂಗ ಕಮ್ಮಟ ನಡೆಸಿದ್ದರಿಂದ ನಾಟಕಗಳು ತಯಾರಾಗಿವೆ” ಎಂದಾಗ ಅರಳಿದ ನನ್ನ ಕುತೂಹಲ ಇಂದು ಫಲಿತವಾಯ್ತು.
ಅತ್ರಿ ಬುಕ್ ಸೆಂಟರಿಗೆ (ನಾನು ತಮಾಷೆಗೆ ಹೇಳುತ್ತಿದ್ದಂತೆ) ಅಸಂಖ್ಯ ರಂಗಕ್ರಿಮಿಗಳು ಎಲ್ಲೆಲ್ಲಿಂದೆಲ್ಲಾ ದಾಳಿ ನಡೆಸುತ್ತಿದ್ದರು. (ನಾನು ಕ್ರಿಮಿನಾಶಕ ಬಳಸುವುದಿಲ್ಲ; ಜೀವವೈವಿಧ್ಯಪ್ರೇಮಿ!! ಕೆ.ವಿ. ಸುಬ್ಬಣ್ಣ, ಅಕ್ಷರ ಕೂಡಾ ಅವರ ನೀನಾಸಂ ಗ್ರಂಥಾಲಯದ ವೈವಿಧ್ಯಕ್ಕೆ ಇಲ್ಲಿ ಬಂದು ಧಾರಾಳ ಪುಸ್ತಕ ಆರಿಸಿದ್ದಿತ್ತು.) ಇವರ ನಡುವೆ ಈಚಿನ ವರ್ಷಗಳಲ್ಲಿ ಸಣ್ಣ ಹುಡುಗನಂತೇ (ಈಗಲೂ) ಇರುವ ‘ಇವನೊಬ್ಬ’ ತುಸು ಹೆಚ್ಚು ಆತ್ಮೀಯವಾಗಿ ಮಾತಾಡುತ್ತಿದ್ದ. ಮುಖ್ಯವಾಗಿ ರಂಗ ಕಲೆಗಳು ಅದರಲ್ಲೂ ನಾಟಕಗಳು, ಅಲ್ಲಿಲ್ಲಿನ ಪ್ರಯೋಗ ಪ್ರದರ್ಶನಗಳೇ ವಿಷಯ. ನನಗೆ ಸುಮಾರು ಸಮಯದ ಮೇಲೆ ತಿಳಿಯಿತು, ಈ ಇದ್ದೂ ಇಲ್ಲದ ನಾಟಕದ ಚಟದಾಸ ವಿದ್ದು ಉಚ್ಚಿಲ್; ಪೂರ್ಣಾವಧಿ ರಂಗಕರ್ಮವನ್ನೇ ಜೀವನಕ್ರಮವಾಗಿ (ಗಡಿಯಾರ ನೋಡುವ ಹೊಟ್ಟೆಪಾಡಿಗಲ್ಲ) ನೆಚ್ಚಿದ ತರುಣ. ಇವರು ರಂಗಾಯಣದ ಡಿಪ್ಲೊಮಾಧಾರಿ. ನನ್ನ ಸೀಮಿತ ಗ್ರಹಣ ಶಕ್ತಿಗೆ ಈ ಕುಳ್ಳನ ನಿಜ ಎತ್ತರ, ಪುಟ್ಟ ರೂಪದ ದೃಢ ಆಳಂಗವನ್ನು ತಿಳಿಯುವ ಅವಕಾಶ ಇಲ್ಲಿವರೆಗೆ ಒದಗಿರಲಿಲ್ಲ. ಆದರೆ ಪ್ರಸ್ತುತ ಅಲೋಶಿಯಸ್ ಪ್ರದರ್ಶನ ಕಂಡಮೇಲೆ ಇಂಗ್ಲಿಷಿನ ಹೃಸ್ವರೂಪ Vid.ನ ವಿಸ್ತೃತ ರೂಪವೇ ಇವರಿಗೆ ಅನ್ವರ್ಥವೆಂದು ನನಗನ್ನಿಸುತ್ತದೆ, ಉಚ್ಚಿಲ್ ನಿಜಕ್ಕೂ ವಿದ್ವಾನ್!
ರಂಗಕಲಾಪ ಅಂದು ಮೊದಲ ಔಪಚಾರಿಕ ಸಭಾ ಕಾರ್ಯಕ್ರಮದೊಡನೇ ತೊಡಗಿತು ಎನ್ನಬೇಕು. ಪ್ರಾರಂಭದ ಸಮಯ ಪರಿಪಾಲನೆ ಮತ್ತು ದೀಪೋಜ್ವಲನದ ಒಂದು ಕ್ಷಣ ಬಿಟ್ಟದ್ದೇ ಆದರೆ ಯಾರೂ ಯಾವ ಮಾತೂ ಉಪಚಾರವೂ ಕೃತಕವಾಗಲಿಲ್ಲ. ನಿರ್ವಹಣೆಗೆ ಬಂದ ಹುಡುಗ (ಅನಂತರದ ಪ್ರದರ್ಶನದಲ್ಲೂ ಮುಖ್ಯ ನಟ) ತಾವು ಪ್ರದರ್ಶನೋದ್ದೇಶದಲ್ಲಿ ರಂಗಕ್ರಿಯೆಗಿಳಿದವರಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ. ಹದಿನೈದು ದಿನಗಳ ಮಿತಿಯಲ್ಲಿ, ಅದೂ ಮುಖ್ಯವಾದ ಕಾಲೇಜ್ ಕಲಾಪಗಳ ಬಿಡುವಿನಲ್ಲಿ ನಾಟಕ ವಿಶ್ವದ ತೀರಾ ಪ್ರಾಥಮಿಕ ಅಂಶಗಳನ್ನು ಗ್ರಹಿಸುತ್ತ ಬಂದದ್ದು, ಅನಿವಾರ್ಯವಾಗಿ ಒಲಿದು ಬಂದ ಎರಡು ಪ್ರಯೋಗಗಳನ್ನು ಸವಿನಯ ಸಾರ್ವಜನಿಕಗೊಳಿಸುವುದಕ್ಕೆ ನಿಂತಿದ್ದೇವೆ ಎಂದದ್ದು ಅರ್ಥಪೂರ್ಣವಾಗಿತ್ತು. ಗಿರೀಶ್ ಸಂದರ್ಭಕ್ಕೆ ಅಗತ್ಯವಿರುವಷ್ಟೇ ಚುಟುಕು ಮಾತುಗಳಲ್ಲಿ ಉದ್ಘಾಟಕ ಸದಾನಂದ ಸುವರ್ಣರನ್ನು ಪರಿಚಯಿಸಿದರು. ಸುವರ್ಣರ ಸಿನಿಮಾ ನಿರ್ದೇಶನ, ನಿರ್ಮಾಣ, ಸಾಹಿತ್ಯಪ್ರೇಮ, ಸಾಕ್ಷ್ಯ ಚಿತ್ರದ ರೂಪಣೆ, ಟೀವೀ ಧಾರಾವಾಹಿಯ ರಚನೆ, ರಂಗ ಚಟುವಟಿಕೆಗಳ ವಿವರಗಳನ್ನು ಹತ್ತು ಮಾತುಗಳಲ್ಲಿ ಅಡಕಗೊಳಿಸಿದ್ದು ಗೌರವಕ್ಕೆ ಕುಂದಿಲ್ಲದಂತೆ ಔಚಿತ್ಯಪೂರ್ಣವಾಗಿತ್ತು.
ಸುವರ್ಣರು ಮುಂಬೈಯ ವೈವಿಧ್ಯಮಯ ಭಾಷಾ ಹಾಗೂ ಸಾಂಸ್ಕೃತಿಕ ಪರಿಸರದೊಡನೆ ರಂಗಚಳುವಳಿಯಲ್ಲಿ ತಾವು ಬೆಳೆದು ಬಂದ ಪರಿಯನ್ನು ಬಿಡಿಸಿಟ್ಟರು. ಅಂದು ಮುಂಬೈ ಭಾರತೀಯ ವಿದ್ಯಾಭವನ ತಿಂಗಳ ಪರ್ಯಂತ ನಡೆಸುತ್ತಿದ್ದ ಅಂತರ ಕಾಲೇಜು ನಾಟಕ ಸ್ಪರ್ಧೆಗಳು ಹೇಗೆ ಆ ಮಹಾನಗರವನ್ನೂ ಒಂದು ಕಟ್ಟಿನಲ್ಲಿ ಹಿಡಿದಿತ್ತು. ಆದರೆ ಹಣ, ಖ್ಯಾತಿಗಳ ಮೋಹ ಆ ಚಳವಳಿಯನ್ನು ಭ್ರಷ್ಟಗೊಳಿಸಿ ನಿಲ್ಲಿಸಿತು, ಎಂಬುದನ್ನು ವಿಷಾದಪೂರ್ವಕ ನೆನೆಸಿಕೊಂಡರು. ಅಲೋಶಿಯಸ್ಸಿನ ಉತ್ಸಾಹ ಕನಿಷ್ಠ ಮಂಗಳೂರಿನ ಕಾಲೇಜುಗಳ ವ್ಯಾಪ್ತಿಗಾದರೂ ಹರಡುವಂತಾಗಲಿ ಎಂದು ಆಶಿಸಿದರು. ಎಲ್ಲಕ್ಕೂ ಮುಖ್ಯವಾಗಿ ಸಭೆಯ ಮಹಾನಿರೀಕ್ಷೆ - ಎರಡು ನಾಟಕಗಳ ಪ್ರದರ್ಶನಕ್ಕೆ ತಾನು ಹೊರೆಯಾಗಬಾರದೆಂಬ ಎಚ್ಚರ ಮತ್ತು ಅದನ್ನು ಸ್ವಂತಕ್ಕೆ ಅನುಭವಿಸುವ ಉಮೇದು ವ್ಯಕ್ತಪಡಿಸಿಯೇ ಮಾತು ಮುಗಿಸಿದರು. ಅಲಂಕಾರಕ್ಕಷ್ಟೇ ವೇದಿಕೆ ಆಕ್ರಮಣ ಮಾಡಿ, ಪ್ರದರ್ಶನಕ್ಕಾಗುವಾಗ ಓಡುವವರಂತಲ್ಲದೆ ಪೂರ್ಣ ಪ್ರದರ್ಶನಕ್ಕೆ ಕುಳಿತು, ಕೊನೆಯಲ್ಲಿ ತರುಣರ ಬೆನ್ನೂ ಚಪ್ಪರಿಸಿದರು.
ಕಮ್ಮಟದ ರೂವಾರಿ ಮತ್ತು ಪ್ರದರ್ಶನಗಳ ನಿರ್ದೇಶಕ ವಿದ್ದು ವಿನಯಿ ಮತ್ತು ಮಾತುಭಾರಿಯೂ ಅಲ್ಲ. ಅವಕಾಶ ಒದಗಿಸಿದ್ದಕ್ಕೆ ಕೃತಜ್ಞತೆಯ ನುಡಿಯಷ್ಟೇ ಕೊಟ್ಟರು. ಸಭಾಧ್ಯಕ್ಷ, ಕಾಲೇಜಿನ ಪ್ರಾಂಶುಪಾಲ - ಫಾ| ಸೀಬರ್ಟ್ ಡಿಸಿಲ್ವಾ, ಆಡಿದ್ದು ನಾಲ್ಕೇ ಮಾತಾದರೂ ಸ್ಥಾನ ಗೌರವಕ್ಕೆ ತಕ್ಕುದಾಗಿತ್ತು. ಮಕ್ಕಳ ಚಟುವಟಿಕೆಗೆ ಅಮಿತ ಪ್ರೋತ್ಸಾಹಿಸುವ ಹಿರಿಯನ ನೆಲೆಯಲ್ಲಿ “ಇಂದಿನ ಪ್ರದರ್ಶನ ಉತ್ತಮ ರೀತಿಯಲ್ಲಿ ಮೂಡಿಬಂದದ್ದೇ ಆದರೆ (ಚಾಕೋಲೇಟ್ ಕೊಡ್ತೇನೆ ಎಂದಷ್ಟೇ ಸಹಜವಾಗಿ) ಇನ್ನೂ ದೊಡ್ಡ ವೇದಿಕೆಯಾಗಿ ಪುರಭವನದಲ್ಲಿ, ಸಾರ್ವಜನಿಕ ಪ್ರದರ್ಶನ ಏರ್ಪಡಿಸುತ್ತೇನೆ” ಎಂದು ಘೋಷಿಸಿದ್ದು ಔದಾರ್ಯವೇ ಸರಿ. ಅವರ ಕನ್ನಡ ಮಾತಿನ ಮಿತಿಯಲ್ಲಿ, ನಡುವೆ ಸೂಕ್ತ ಶಬ್ದವೊಂದು ಹೊಳೆಯದಾಗ ಇಡಿಯ ಸಭೆ ಸಹಜವಾಗಿ ಒಕ್ಕೊರಲಿನಲ್ಲಿ ತುಂಬಿಕೊಟ್ಟಿತು! ಹೀಗೆ ಒಂದು ಸಭಾಕಲಾಪವೂ ಅರ್ಥಪೂರ್ಣವಾಗಿ ನಡೆಯಬಹುದೆನ್ನುವುದಕ್ಕೆ ನಿದರ್ಶನವಾಗಿ (ಪ್ರದರ್ಶಕ ಮತ್ತು ವೀಕ್ಷಕನ ನಡುವಣ ಕೊಡು, ಕೊಳೆ), ಸಭಾ ಕಲಾಪ ಸಂಪನ್ನಗೊಂಡಿತ್ತು. (ಇಲ್ಲಿ ರಂಗಾಯಣದ ಖ್ಯಾತ ನಟ, ನಿರ್ದೇಶಕ ಹುಲಗಪ್ಪ ಕಟ್ಟೀಮನಿಯವರ ಮಾತು ನೆನೆಸಿಕೊಳ್ಳಲೇಬೇಕು. ನನ್ನ ತಂದೆ ರಂಗಾಯಣದ ಬಹುದೊಡ್ಡ ಗುಣಪಕ್ಷಪಾತೀ ಪ್ರೇಕ್ಷಕ. “ಯಾವುದೇ ನಾಟಕದ, ಎಂಥದೇ ಭಾವಾವೇಶದ ಸನ್ನಿವೇಶದಲ್ಲೂ ಪ್ರೇಕ್ಷಾಂಗಣದ ಅನಾಮಧೇಯ ಕತ್ತಲಿನಿಂದ ಹೊರಡುತ್ತಿದ್ದ ಜಿಟಿಎನ್‌ಸರಿನ ಒಂದು ನುಡಿ, ಒಂದು ಉದ್ಗಾರ ನಮ್ಮಲ್ಲಿ ಮೂಡಿಸುತ್ತಿದ್ದ ಧನ್ಯತೆ ಅಪಾರ” ಎಂದಿದ್ದರು!)
ಬಿ.ಎಂ ಬಶೀರರ ಐದು ಹನಿಗತೆಗಳ ರಂಗ ಪ್ರಸ್ತುತಿ ಅಂಗೈಯಲ್ಲಿ ಆಕಾಶ. ಈ ಐದು ಬೆರಳುಗಳನ್ನು ಅಂಗೈಗೆ ಜೋಡಿಸಿ, ನಮ್ಮ ಕಲ್ಪನಾಲಹರಿಗೆ ಆಕಾಶದ ವ್ಯಾಪ್ತಿಯನ್ನು ಸಮರ್ಥವಾಗಿ ಕೊಟ್ಟವಳು ಓರ್ವ ನಿರೂಪಕಿ. ಮನುಷ್ಯನ ಮೂಲ ಪಶುಭಾವಗಳನ್ನು ಸಾಮಾಜಿಕ ಬಂಧಕ್ಕೆ ಅಳವಡಿಸುವಲ್ಲಿ ಯುಗಯುಗಗಳಿಂದ ಎಷ್ಟೂ ‘ಒಪ್ಪಂದಗಳು’ ಬಂದಿವೆ, ತಿದ್ದುಪಡಿಗಳು ಸೇರಿವೆ, ಉದುರಿಬಿದ್ದೂ ಹೋಗಿವೆ. ಈ ಒಪ್ಪಂದಗಳ ಆಶಯವನ್ನು ಗ್ರಹಿಸದೆ ಇಂದು ಜಾತಿ, ಭಾಷೆ, ವೃತ್ತಿ, ಪ್ರಾದೇಶಿಕತೆ ಎಂದು ಹೆಸರಿಸಬಹುದಾದ ಎಲ್ಲಾ ಗುಣಗಳನ್ನು ಕೊಚ್ಚೆ ಹೊಂಡಗಳನ್ನಾಗಿ ಮಾಡಿದ್ದಕ್ಕೆ ಸೂಚ್ಯವಾಗಿ ಝಾಡಿಸಿ ಒದ್ದಂತಿದೆ ಮೊದಲ ಕತೆ - ‘ಅವಮಾನ’. ಸ್ವಾತಂತ್ರ್ಯೋತ್ಸವ ಅಥವಾ ಗಣರಾಜ್ಯೋತ್ಸವ ಬರುತ್ತಿದ್ದಂತೆ ರಾಷ್ಠ್ರಧ್ವಜದ ಜೊತೆಗೂಡಿ ಬರುವ ಕತೆಗಳು ಘಟನೆಗಳು ಯಾವುದೇ ವಿಚಾರವಂತನನ್ನು ಸಾಮಾನ್ಯವಾಗಿ ಚಿಂತೆಗೀಡುಮಾಡುತ್ತಲೇ ಇರುತ್ತವೆ. ಅವೇಳೆಯಲ್ಲೋ ವಿರೂಪವಾಗಿಯೋ ಹಾರಿಸಿದ್ದಕ್ಕೊಂದು ಬೊಬ್ಬೆ, ಹಲ್ಲೆ ಒಂದು ರೂಪ. ಗೌರವಪೂರ್ಣವಾಗಿಯೇ ಬಳಸಿದರೂ (ಹೆಚ್ಚಾಗಿ ಕ್ರೀಡೆಗಳಲ್ಲಿ ಪ್ರೀತಿಯ ಆಧಿಕ್ಯದಲ್ಲಿ ಧ್ವಜವನ್ನು ಅನ್ಯರೀತಿಗಳಲ್ಲಿ ಬಳಸಿದ್ದಕ್ಕೆ) ಔಚಿತ್ಯ ಪ್ರಶ್ನಿಸಿ ವ್ಯಾಜ್ಯ ಕೋಟಲೆಗಳಿಗೆ ಸಿಲುಕಿಸಿ ಬಂಧನ, ದಂಡಗಳಿಗೀಡುಮಾಡುವ ಇನ್ನೊಂದು ರೂಪ. ಇವುಗಳೆದುರು ಕಟು ವಾಸ್ತವವನ್ನಿಡುವುದಷ್ಟೇ ಕತೆಗಾರ ಮಾಡಿದ ಕೆಲಸ. ಭಿಕಾರಿ (ಲಂಗೋಟಿಯಂತೆ) ಸುತ್ತಿಕೊಂಡ ಧ್ವಜವನ್ನು ಕಳಚಿದರೆ ರಾಷ್ಠ್ರಗೌರವಕ್ಕೆ ಸಮ್ಮಾನವೇ ದುಮ್ಮಾನವೇ ಎನ್ನುವುದನ್ನು ಎರಡೇ ಮಿನಿಟಿನ ರಂಗಕ್ರಿಯೆಯಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಿದರು; ಲಂಗೋಟಿಯೇ ಸತ್ಯ!
ಎರಡನೆಯ ರಂಗ ತುಣುಕಿನ ಹೆಸರೂ ಹುಚ್ಚು. ಸಾಮಾನ್ಯರ ವಲಯದಲ್ಲಿ ಇತರರು ತೀವ್ರವಾಗಿ ಹಚ್ಚಿಕೊಂಡದ್ದೆಲ್ಲಾ ಹುಚ್ಚೇ! ನಮ್ಮ ಗ್ರಹಿಕೆಯ ಮಿತಿಯಲ್ಲಿ, ಉಪಯುಕ್ತತೆಯ ನೆಲೆಯಲ್ಲಿ ಸಮಾಜ ಅದನ್ನು ದೊಡ್ಡದಾಗಿ ಹೆಸರಿಸುವುದೂ ಉಂಟು, ಅವಹೇಳನ ಮಾಡುವುದೂ ಉಂಟು ಎನ್ನುವುದನ್ನೇ ಇದು ಧ್ವನಿಪೂರ್ಣವಾಗಿ ಮುಟ್ಟಿಸಿತು. ಸಮಾಜದ ಆಧ್ಯಾತ್ಮಿಕ ಗುರು ಒಬ್ಬ. ಆದರೆ ಆತ ಅದೇ ಸಮಾಜ ಹುಚ್ಚನೆಂದು ತೀರ್ಮಾನಿಸಿದವನನ್ನು ತನ್ನ ಆದರ್ಶವನ್ನಾಗಿ ಸ್ವೀಕರಿಸಿದ ಭರತವಾಕ್ಯ, ಪ್ರೇಕ್ಷಕರಲ್ಲಿ ಅರ್ಥಪರಂಪರೆಯ ಅಲೆಗಳನ್ನೇ ಎಬ್ಬಿಸಿತು. ಗೆಲಿಲಿಯೋನ ಬೆತ್ತಲೆಯೋಟ, ರಾಮಕೃಷ್ಣ ಪರಮಹಂಸರ ಸಮಾಧಿಸ್ಥ ‘ನೃತ್ಯಭಂಗಿ’ ಮುಂತಾದವು ಆಯಾ ಕಾಲಗಳಲ್ಲಿ ನಗೆಪಾಟಲಿಗೀಡಾದ್ದೇ ಹೆಚ್ಚು ಎಂದು ನೆನಪಿಸುವಂತಿತ್ತು ಈ ‘ಹುಚ್ಚು.’
ದಿನದ ಎರಡನೇ ನಾಟಕವನ್ನೇ (ಒಂದು ಬೊಗಸೆ ನೀರು) ಸೂತ್ರ ರೂಪದಲ್ಲಿ ಮುನ್ನುಡಿದಂತಿತ್ತು ಮೂರನೇ ತುಣುಕು - ಕಿವಿ. ಅಂತಿಮ ಶ್ವಾಸ ಎಳೆಯಲಿದ್ದವನ ಉದ್ಗಾರವನ್ನು ಹಿಂದುಳಿಯುವವರು ಸ್ವಾರ್ಥಗಳ ನೆಲೆಯಲ್ಲಿ ಅರ್ಥೈಸುವ ಪರಿ ಕುತೂಹಲಕರವಾಗಿತ್ತು. ಮಗ, ಮಗಳು ಮಾತ್ರವೇನು ‘ವಿರಕ್ತ’ನಿಗೂ ಮೀರಿದ ಸತ್ಯ ಇದೆ! ಮತ್ತದೂ ಅಂದರೆ ಕೂಲಿಯಾಳು ಹೇಳುವ ವಾಸ್ತವವೂ ಪರಮ ಸತ್ಯವಾಗಬೇಕಿಲ್ಲ ಎನ್ನುವ ಧ್ವನಿ ಈ ರಂಗಪ್ರಸ್ತುತಿಯನ್ನು ಹೊಳೆಯಿಸಿತು. ಹೋಗುವ ಜೀವ, ಹನಿಸುವ ನೀರನ್ನೇ ಕಾದಿರಬೇಕೆಂದಿಲ್ಲವಲ್ಲಾ. ಕಿವಿಗೆ ಬಿದ್ದದ್ದೆಲ್ಲ ಅಂತಿಮವಲ್ಲ!
ಕೊನೆಯೆರಡು ತುಣುಕುಗಳು - ಬಳಕೆ ಮತ್ತು ಉದ್ಧಾರ, ಸಾಮಾಜಿಕ ನಡವಳಿಕೆಯನ್ನು ಗೇಲಿ ಮಾಡುವಲ್ಲೇನೂ ಕೊರತೆ ಮಾಡುವುದಿಲ್ಲ. ಆದರೆ ಸರಣಿಯ ಮುಂದುವರಿಕೆಯಾಗಿ ಬರುವುದರಿಂದ ನಮ್ಮ ಹೆಚ್ಚಿದ ನಿರೀಕ್ಷೆಯೆದುರು ವ್ಯಂಗ್ಯ ನಗೆಹನಿಗಳಾಗುತ್ತವೆ. ‘ಹೆಣ್ಣು ಭ್ರೂಣ’ ಎನ್ನುವಲ್ಲಿ ಭಾವನಾ ಆಯಾಮವನ್ನು ಇದು ಮುಟ್ಟಿದರೂ ತೀರಾ ಅವಸರದ ಮಾತಾಗಿ, ‘ಇತ್ಯಾದಿ’ ಎನ್ನುವ ಮಟ್ಟದಲ್ಲಿ, ಬೊಬ್ಬೆಗಳ ನಡುವಣ ಒಂದು ಎಳೆಯಾಗಿ ಮಾತ್ರ ಕಾಣುತ್ತದೆ. ‘ಎಲ್ಲ ಬಿಟ್ಟವ ಪುಡಾರಿಯಾದ’ ಎಂಬರ್ಥದ ಅನಂತ ವಿಸ್ತರಣೆಯಲ್ಲಿ ಇದೂ ಒಂದಾಗಿ ಕಾಣುತ್ತದೆ. ಹಾಗೆಂದ ಮಾತ್ರಕ್ಕೆ ಇದು ಕತೆಗಾರನ ಅಥವಾ ನಾಟಕದವರ ಬಗ್ಗೆ ಟಿಪ್ಪಣಿ ಎಂದು ಯಾರೂ ಭಾವಿಸಬಾರದು. ಆಕಾಶದಲ್ಲಿ ಎಲ್ಲವೂ ಹೊಳೆಯುವ ನಕ್ಷತ್ರಗಳೇ ಆದರೆ ಭೂಮಿಗೆಲ್ಲಿ ಸ್ಥಾನ, ಎನ್ನುವಂತೆ ಅಂಗೈಯಲ್ಲಿ ಆಕಾಶ ಸಂಪನ್ನವಾಯ್ತು.
ಎರಡನೇ ನಾಟಕ - ಒಂದು ಬೊಗಸೆ ನೀರು, ರಾಜಪ್ಪ ದಳವಾಯಿಯವರ ರಚನೆ. ‘ಅಲೆಕ್ಸಾಂಡರ್ ದ ಗ್ರೇಟ್’ ಎಂದು ಮಹತ್ತ್ವಾಕಾಂಕ್ಷೆಯೇ ಹೆಸರಾಂತ ಸ್ಥಿತಿಯವನ, ಒಂದು ಮಟ್ಟಿಗೆ ನಿಜ ದೈಹಿಕ ಸಾಮರ್ಥ್ಯವಂತನ ಸೋಲನ್ನು ಬಿಂಬಿಸುವ ಕಥಾನಕ. ವಿಶ್ವ ವಿಜಯಿಯಾದರೂ ಕೊನೆಯಲ್ಲಿ ಒಂದು ಬೊಗಸೆ ನೀರಿಗೆ ಗತಿಯಿಲ್ಲದವನಾಗಿ ಸಾಯುವ ಸ್ಥಿತಿಯನ್ನು ವಿಭಿನ್ನ ಸ್ತರಗಳಲ್ಲಿ ಈ ನಾಟಕ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದೆ. ರಾಜ್ಯಗಳು ಗೋರಿಗಳ ಮೇಲೆ ಕಟ್ಟಲ್ಪಡುತ್ತವೆ ಎನ್ನುವ ಮಾತಿಗೆ ಸ್ಪಷ್ಟ ವ್ಯಾಖ್ಯಾನ ಇಲ್ಲಿದೆ. ಅಭಿಪ್ರಾಯಗಳೂ ಸತ್ತಂತಿದ್ದ ಗುಲಾಮ ಸಾವನ್ನು ಮಾತ್ರ ಸ್ವಂತಕ್ಕೆ ಗ್ರಹಿಸುವ ವಿಷಾದ ಯಜಮಾನನಲ್ಲಿ ಕಾಣುತ್ತೇವೆ. ಮರಣಾಸನ್ನನಾದಾಗಲೂ ಚಕ್ರವರ್ತಿಯ ತೊಡೆಯಾಸರೆ ಬಯಸುವಷ್ಟು ನಿಷ್ಠಾವಂತ ಸೈನಿಕನ ಮರಣೋದ್ಗಾರ ಮಾತ್ರ “ಅಮ್ಮಾ” ಎಂದು ಭಿನ್ನವಾದಾಗ ಕಂಪನದ ಅಲೆಗಳು ಸಾರ್ವಭೌಮನಲ್ಲೂ ಪ್ರಕಟವಾಗುತ್ತವೆ. ಅರಸನ ಕೊನೆಯ ಗಳಿಗೆಯಲ್ಲೂ ತನ್ನ ಜೀವವನ್ನು ಪಣವಾಗಿಟ್ಟು ಒಂದು ಬೊಗಸೆ ನೀರೊದಗಿಸಲು ಆಪ್ತ ಸೇನಾನಿ ಹೆಣಗಿದರೂ, ನುಡಿಸೇವೆಯಲ್ಲಿ ಮಡುಗಟ್ಟಿದ ವಿರೋಧಗಳು ಪ್ರಕಟವಾದಲ್ಲಿಗೆ ವಿಶ್ವ ವಿಜೇತನ ಅಂತ್ಯವಾಗುವುದು ನಾಟಕಕ್ಕೂ ಚೊಕ್ಕ ತಾರ್ಕಿಕ ಕೊನೆಯನ್ನು ಕಟ್ಟಿಕೊಟ್ಟಿದೆ. ವಿಚಾರವಂತ ಗುರು, ಅನಿವಾರ್ಯತೆಯಲ್ಲೂ ಪ್ರಿಯಳಾಗಲು ಬಳಲುವ ಪತ್ನಿ ಎಂಬಿತ್ಯಾದಿ ನಿರಂತರ ಒಡನಾಟದ ಮನಸ್ಥಿತಿಗಳನ್ನೇ ಅರ್ಥಮಾಡಿಕೊಳ್ಳಲಾಗದವ, ಎಷ್ಟರಮಟ್ಟಿಗೆ ವಿಶ್ವವ್ಯಾಪಿಸಬಲ್ಲ ಎಂಬ ಕಠೋರ ಸತ್ಯ ನಾಟಕ ವೀಕ್ಷಕರ ಮನದಲ್ಲಿ ಪ್ರಜ್ವಲಿಸುವಂತೆ ಮಾಡುವಲ್ಲಿ ಪ್ರಯೋಗ ಯಶಸ್ವಿಯಾಯ್ತು. ನಾಟಕ ರಂಗದ (ನೆಲ, ಜನ ಇತ್ಯಾದಿ) ಸೀಮಿತ ಅವಕಾಶದಲ್ಲೂ ಮಹಾಸೇನೆಯ ಸಭೆ, ಯುದ್ಧಗಳ ಅಲೆ, ಮರುಭೂಮಿಯ ವಿಸ್ತಾರ ಒಂದೊಂದನ್ನೂ ಮಿತ ಪರಿಕರಗಳ ಸಹಾಯದಲ್ಲಿ, ಬೆಳಕು ಧ್ವನಿಗಳ ಉಚಿತ ಬಳಕೆಯಲ್ಲಿ ಮೂಡಿಸಿದ್ದು ನಿರ್ದೇಶಕನ ಪರಿಣತಿಯನ್ನು ಸಾರುತ್ತವೆ.
ಕಾಲ ಇಲ್ಲಿ ಕೇವಲ ಸಮಯಸೂಚಕವಾಗಿ, ಅಂದರೆ ಗಡಿಯಾರದ ಮುಳ್ಳಾಗಿ ನಿಲ್ಲುವುದಿಲ್ಲ. ನಮ್ಮ ಮನೋಭಿತ್ತಿಯಲ್ಲಿ ಇದು ಕನಸಿನ ಅಮೂರ್ತತೆಯಿಂದ ಎದ್ದು, ವಾಸ್ತವದ ಕಠೋರತೆಯಲ್ಲಿ ಮುಗಿಯುತ್ತದೆ. ನಡುವೆ ಬರುವ ಘಟನಾವಳಿಗಳಲ್ಲಿ ಕ್ಷಣಗಣನೆಯ ಸ್ಪಷ್ಟ ನುಡಿತಗಳಿವೆ. ಸೋಲಿನ ಘಂಟಾಘೋಷವಿದೆ. ಹೀಗೆ ಸಾರ್ವಭೌಮನ ನಿರೀಕ್ಷೆಗಳು ಬೊಗಸೆ ನೀರಿಗೆ ಮುಗಿಯುವ ದುರಂತವನ್ನು ನಾಟಕ ಸಮರ್ಥ ನಡೆಗಳಲ್ಲಿ ಕಟ್ಟಿಕೊಟ್ಟದ್ದಕ್ಕೆ ಇಡಿಯ ತಂಡವನ್ನು ಅಭಿನಂದಿಸುತ್ತೇನೆ. ಇದು ಇನ್ನಷ್ಟು ಪಳಗಿ ಪುರಭವನದ ವೇದಿಕೆಯಲ್ಲಿ ಸಾರ್ವಜನಿಕ ಪುರಸ್ಕಾರಕ್ಕೆ ಪಾತ್ರವಾಗಲಿ. ಸದಾನಂದ ಸುವರ್ಣರ ಆಶಯಕ್ಕೆ (ಕನಿಷ್ಠ ನಗರಮಿತಿಯ ಕಾಲೇಜುಗಳ ನಾಟಕ ಸ್ಪರ್ಧೆ) ದುಡಿಯಲು, ಕರ್ನಾಟಕ ರಂಗ ಚಳವಳಿಯ ನಾಡಿ ಹಿಡಿದು ಮುಂದಕ್ಕೊಯ್ಯಲು, ಇರುವ ಬೆರಳೆಣಿಕೆಯ ಸ್ವತಂತ್ರ ಮತ್ತು ಸಮರ್ಥ ನಿರ್ದೇಶಕರ ಸಾಲಿನ ಹೊಸ ಸೇರ್ಪಡೆ, ವಿದ್ದು ಉಚ್ಚಿಲರಿಗೆ ಅನಂತ ಶುಭಾಶಯಗಳು.
ಭಲೇ, ಸಂತ ಅಲೋಶಿಯಸ್ ಕಾಲೇಜು ..ವಿದ್ಯಾರ್ಥಿಗಳ ಅದ್ಭುತ ಚೈತನ್ಯಕ್ಕೆ ಸರಿ ದಾರಿ ತೋರುವ ವಿದ್ಯಾಲಯ ನಿಜ ವಿಶ್ವವಿದ್ಯಾಲಯ - ಇದರ ಪ್ರತೀವಾಗಿ ಮೂಡಿ ಬಂದಿದೆ ನಾಟಕ ಪ್ರಯೋಗ. ಇಂಥ ಕ್ರಿಯೆಗಳು ಕಾಲೇಜಿನಲ್ಲಿ ನಡೆದಾಗ ಸಹಜವಾಗಿಯೇ ಅಲ್ಲಿ ಗೊಂದಲ ಗಲಾಟೆ ಸಂಸ್ಕೃತಿ ಮರೆಯಾಗುತ್ತದೆ. ನಡೆದು ತೋರಿಸಿದ ಅಲೋಶಿಯಸ್ ಹಾದಿ ಉಳಿದ ವಿದ್ಯಾಲಯಗಳಿಗೆ - ನಮ್ಮನ್ನೂ ಸೇರಿಸಿದ ಹಾಗೆ - ಮಾದರಿಯಾಗಲಿ.
ReplyDeleteನಾನು ಓದಿದ್ದು ಮಡಿಕೇರಿಯ ಸರ್ಕಾರೀ ಕಾಲೇಜಿನಲ್ಲಿ. ಅಲ್ಲಿಯೂ ಬಲು ಕ್ರಿಯಾಶೀಲವಾಗಿದ್ದ ಕನ್ನಡ ಸಂಘ,ನಾಟಕ ಸಂಘಗಳಿದ್ದವು. ವರ್ಷಕ್ಕೆ ಎರಡು ನಾಟಕ ಖಾತರಿ. ಆ ದಿನಗಳನ್ನು ಮೆಲುಕು ಹಾಕುವಂತೆ ಮಾಡಿತು.
ReplyDeleteettharadallooo agaladalloo theevravaagi beledubittiruva namma kaalejinalli ittheejeganthoo dus pus ingleeshinadde kaarubaaru haagoo ee digital...antharjaalagala bharaateyalli kannada naatakavemba koosina usiru kattibidabahudo emba aathankadallidda nanage kannadada samartha dhwaniyaagi ee eradu naatakagalu moodi bandiveyendu thilidu haalu kudidashtu khushiyayithu (dr kakkilayara kshameyirali..)...samadhaanavoo aayithu.
ReplyDeleteee prayogagalannu noduva kaatharadalliddene...
illi innondu vishaya nenapige banthu. namma kaalegina shathamaanothsavada sanihada eradu varshagalalli kaalejinalli ingleesh prabhaavaviddaagaloo nammadondu gaampara gumpu nada, naa sharmara poorna prothsahanadondige naataka, kiruprahasana, kaavya, prakatanegalondige kannadada thutthoorigalenne oodikondiddudu ideega apyaayamaanavaada nenapu.... namma kela tharalegalige neevoo saakshiyagiddudu nenapirabahudallave aakroshavarjanare ??!!
ReplyDeleteಬ್ರಹ್ಮ :-) ಶರತ್, ಗಿರಿಧರ ಮತ್ತು ಹರೀಶ ತ್ರಿವಳಿಗಳು ಸೇರಿ ಮಾಡಿದ `ಸಾಂಸ್ಕೃತಿಕ ದಾಂಧಲೆ' ವಿವರಿಸಲು ನಾನು ಬಡವ. ಹರೀಶ್ ಕೊರೆದರೆ, ಇಲ್ಲಿ ಪ್ರಕಟಿಸಲು ನಾನು ಸಿದ್ಧ.
Deleteಆಕ್ರೋಶವರ್ಜನ
ಮಾನ್ಯರೆ,
ReplyDeleteಕನ್ನಡ ಲೇಖನವನ್ನು ಓದಿಪ್ರತಿಕ್ರಿಯಿಸುವವರೂ ಕನ್ನಡ ಲಿಪಿಯಲ್ಲಿಯೇ ಬರೆಯುವುದು ಅಪೇಕ಼್ಷಣಿಯ.
ಕನ್ನಡವನ್ನು ಇಂಗ್ಲಿಷ್ ಲಿಪಿಯಲ್ಲಿ ಬರೆಯುವಾಗ ಆಗಿರುವ ಗೊಂದಲಗಳಿಂದ ಲೇಖನವನ್ನು ಓದಲು ಕಷ್ಟವಾಗುತ್ತದೆ.
ಲಿಪ್ಯಂತರ ತಂತ್ರಾಂಶಗಳೂ ಲಭ್ಯವಿರುವುದರಿಂದ ಅವನ್ನಾದರೂ ಬಳಸಿ.
ಸಂಪಾದಕರಾದರೂ ಲಿಪ್ಯಂತರಿಸಿ ಪ್ರಕಟಿಸುವ ಬಗ್ಗೆ ಪ್ರಯತ್ನಿಸಲಿ ಎಮದು ಬಿನ್ನವಿಸುವೆ.
ವಟ್ಟೀಲಿದ್ದಿದ್ದು ಕಯ್ಗ್ ಬರದೇ ಕಸ್ಟಾಂತಿರ್ವಾಗ ಇನ್ನೇನೋ ಪಳಗ್ಸಖೋಗಿ ಕಳ್ದ್ ಗಿಳ್ದ್ ಓದಾರು. ಎಂಗಾದ್ರೂ ಬರ್ಕಳ್ಲೀ ಒಡ್ಯಾ. ವಿಸ್ಯ ವಿಸ್ಯಾ ಮುಕ್ಯ. ಅದ್ರಾಗ್ಗೇನೂ ಎಡ್ವಟ್ ಮಾಡ್ಕಳ್ದಿದ್ರೆ ಸಾಕು, ಏನಂತೀರಾ?
Deleteಬೋರಣ್ಣ
ಮುಖಪುಟದಲ್ಲಿ [ಅಂದರೆ facebook] ಲಕ್ಷ ಹಿಂಬಾಲಕರು ಇರುವ ಗಾಂಚಾಲಿ ಬಿಡಿ ಕನ್ನಡ ಮಾತಾಡಿ ಪುಟದ ನಿರ್ವಾಹಕರು ಉಪಯೋಗಿಸೋದು ಇಂಗ್ಲಿಸು ಅಕ್ಷರ ಕನ್ನಡ ಬಾಷೆ. ಬಾರಿ ಪ್ರಚಾರ ಅಬ್ಬರ ನೋಡಿ ಅದನ್ನು ಬಿಡಿಸಿ ನೋಡುವಾಗ ಕಂಗ್ಳಿಸು ವಾತಾವರಣ. ಸುಮ್ಮನೆ ಹೊರಬಂದೆ. ಅಂಗೆನೆ ಇಲ್ಲೂ ಕನ್ನಡ ಬರೆಯಲು ಬರೋದಿಲ್ಲ ಎಂತಾದರೆ ಇಂಗ್ಳಿಸು ಅಕ್ಷರ ಬಾಷೆ ಆದರೆ ಚೆನ್ನಾಗಿರುತ್ತದೆ. - ಬಸವ
Deleteಬಸವಣ್ಣನವರೇ ನಿಮ್ಮ ಪ್ರತಿಕ್ರಿಯೆ ಓದಿ ಬಹಳ ಖುಷಿಯಾಯಿತು. ನೀವಂದಂತೆ ಕನ್ನಡ ಮಾತನಾಡಿ , ಬಳಸಿ ಎನ್ನುವವರೇ ಕನ್ನಡವನ್ನು ಉಪಯೋಗಿಸುತ್ತಿಲ್ಲಾ..ಮೈಯಲ್ಲೂ ಕನ್ನಡ , ಮನದಲ್ಲೂ ಕನ್ನಡ ಎನ್ನುವವರ ಬಾಯಲ್ಲಿ ಮಾತ್ರ "ಆಂಗ್ಲಡ"..ಯಾವ ಭಾಷೆಯಲ್ಲಿ ಬರೆಯುತ್ತೀರೋ / ಮಾತನಾಡುತ್ತೀರೋ ಅದೇ ಲಿಪಿಯನ್ನು ಉಪಯೋಗಿಸಲು ಯಾಕೆ ಅಳುಕು..?
DeleteUTSAAHI KRIYAASHEELA RANGAKARMI vIDU UCHILRANNU , AVARA RANGAKRITHIYANNU PARICHAYISIDDU THUMBA SANTHOSHA; tHANK YOU, aSHOKA vARDHAN.
ReplyDelete