19 October 2012

ಅರಂತೋಡಿನಿಂದ ಕರಿಕೆಗೆ

(ಚಕ್ರವರ್ತಿಗಳು - ನಾಲ್ಕನೆಯ ಸುತ್ತು)

ಹೊಸ ದಾರಿಯೊಂದರ ಅನಾವರಣಕ್ಕೆಂದೇ ಅದೊಂದು ಆದಿತ್ಯವಾರ (೨೪-೨-೧೯೮೫) ನಮ್ಮದೊಂದು ತಂಡ ಹೊರಟಿತ್ತು. ಮಂಗಳೂರಿನಿಂದ ಯೆಜ್ದಿಯಲ್ಲಿ ನಾನು ಮತ್ತು (ಮಂಗಳೂರು ವಿವಿನಿಲಯದ ಗಣಿತ ಪ್ರೊ|) ಸಂಪತ್ಕುಮಾರ್, ರಾಜದೂತದಲ್ಲಿ ಚಾರ್ಲ್ಸ್, ಬಜಾಜ್ ಸ್ಕೂಟರ್‌ನಲ್ಲಿ ರಾಮಮೋಹನ ಮತ್ತು ಇಲ್ಯಾಸ್. ಮಾಣಿಯಲ್ಲಿ ಯೆಜ್ದಿಯೊಡನೆ (ಆಗ ಇನ್ನೂ ವಿಶ್ವಯಾನದ ಯೋಚನೆಯೂ ಮಾಡಿರದ) ಗೋವಿಂದ ಸೇರಿಕೊಂಡ. ಪುತ್ತೂರಿನಿಂದ ಸ್ವಲ್ಪ ಮುಂದಿರುವ ಆರ್ಯಾಪಿನಲ್ಲಿ ನನ್ನ ಸೋದರ ಮಾವ - ಎ.ಪಿ.ರಾಮನಾಥ ರಾವ್ ಅವರ ಮನೆಯಲ್ಲಿ ಎಲ್ಲ ಪೊಗದಸ್ತು ತಿಂಡಿ ಹೊಡೆದದ್ದಾಯ್ತು. ನಮ್ಮ ತಂಡದಲ್ಲಿ  ಮತ್ತೆರಡು ಸಹವಾರೀ ಅವಕಾಶಗಳು ಖಾಲೀ ಇದ್ದುದರಿಂದ ರಾಮನಾಥನನ್ನು ಚಾರ್ಲ್ಸ್ ಬೆನ್ನಿಗೂ ಇನ್ನೋರ್ವ ಮಾವ ಗೋವಿಂದನ ಮಗ (ಇಂದಿನ ಮರ್ಯಾದೆ ಸಹಿತ ಹೇಳುವುದಾದರೆ ಡಾ| ಎ.ಪಿ.) ರಾಧಾಕೃಷ್ಣನನ್ನು ಗೋವಿಂದನ ಬೆನ್ನಿಗೂ ಅಂಟಿಸಿಯಾಗುವಾಗ ತಂಡಕ್ಕೆ ಎಂಟು ಗಂಡಸರ ಬಲ ಬಂತು.


ಮಡಿಕೇರಿ ದಾರಿಯಲ್ಲಿನ ಸುಳ್ಯ ನಮಗೆ ಕೊನೆಯ ದೊಡ್ಡ ಊರು. ನಮ್ಮ ಗುರುತರ ಕಾರ್ಯಕ್ರಮಕ್ಕಾಗಿ ಅಲ್ಲಿ ವಾಹನಗಳ ಪೆಟ್ರೋಲ್, ಚಕ್ರದ ಗಾಳಿ, ಇಂಜಿನ್ ಎಣ್ಣೆ ತಪಾಸಣೆ ನಡೆಸಿಯೇ ಮುಂದುವರಿದೆವು. ಅರಂತೋಡಿನಲ್ಲಿ ಬಲದ ಮಣ್ಣ ಮಾರ್ಗಕ್ಕೆ ಕೈಮಾಡಿ ನಿಂತ ಸರಕಾರೀ ಕಂಬ ನಮ್ಮ ಮಾರ್ಗದರ್ಶಿ. ಅದರ ಪ್ರಕಾರ ಭಾಗಮಂಡಲ ಕೇವಲ ಮೂವತ್ತೈದು ಕಿಮೀ. ವಾಸ್ತವದಲ್ಲಿ ಅಂದು (ಇಂದೂ) ಎಲ್ಲಾ  ವಾಹನಗಳೂ ಯಾತ್ರಿಕರೂ ಕನಿಷ್ಠ ಎಪ್ಪತ್ತು ಕಿಮೀ ಬಳಸು ದಾರಿಯನ್ನೇ ಅನುಸರಿಸುತ್ತಾರೆ. ಆ ಕುರಿತು ಮೊದಲೇ ಬಹು ವಿಚಾರಣೆಯನಂತರ ತಿಳಿದದ್ದಿಷ್ಟು. ಹಳೆಗಾಲದಲ್ಲಿ ಸುಬ್ರಹ್ಮಣ್ಯ ಷಷ್ಠಿಗೆ ಮಡಿಕೇರಿ ವಲಯದ ಭಕ್ತರು ಅನಿವಾರ್ಯವಾಗಿ ನಡೆದು ಹೋಗುತ್ತಿದ್ದ ಗಾಳಿಬೀಡಿನ ಅನೂರ್ಜಿತ ಕೂಪು ದಾರಿಯಂತೇ ಇಲ್ಲೂ ಸುಳ್ಯ ವಲಯದ ಭಕ್ತರು ಈ ದಾರಿಯನ್ನು ಕಾವೇರಿ ಸಂಕ್ರಮಣಕ್ಕೆ ಬಳಸುತ್ತಿದ್ದರಂತೆ. ಅಂದು ನಮ್ಮ ಗುರಿಯಾದರೂ ಆ ಜಾಡನ್ನು ಬೈಕ್ ಸವಾರಿಯಲ್ಲಿ ನಮ್ಮ ಅನುಭವಕ್ಕೆ ತಂದುಕೊಳ್ಳುವುದೇ ಆಗಿತ್ತು.

[ಅನೂರ್ಜಿತ ದಾರಿಗಳಿಗೂ ಪ್ರಾದೇಶಿಕವಾಗಿ ಅನುಪಯುಕ್ತ ದೂರಗಳಿಗೂ ಕೈಕಂಬ ಹಾಕುವುದು ನನಗಂತೂ ತೀರಾ ಅಸಮರ್ಥನೀಯವಾಗಿ ಕಾಣುತ್ತದೆ. ದೂರದೂರಿನಿಂದ ಬರುವ ಯಾತ್ರಿಗಳು ಇಂಥವನ್ನು ನಂಬಿ ಅನುಸರಿಸಿದರೆ ಒದಗುವ ಸಂಕಟಗಳಿಗೆ ಯಾರು ಜವಾಬ್ದಾರರು? ಹಿಂದೊಮ್ಮೆ ಹೇಳಿದ್ದ ಉದಾಹರಣೆಯನ್ನೇ ಚುಟುಕಿನಲ್ಲಿ ಹೇಳ್ತೇನೆ. ಮೈಸೂರು - ಮಂಗಳೂರು ದಾರಿಯ ಕೊನೆಗೂ ಮೂವತ್ತು ಕಿಮೀ ಮೊದಲು ಮೇಲ್ಕಾರು ಎಂಬ ಕೇವಲ ಕವಲು ದಾರಿಯ ಹಳ್ಳಿಯಲ್ಲಿ, ಮಂಗಳೂರು ವಿವಿನಿಲಯ ದೊಡ್ಡ ಸ್ವಾಗತ ಕಮಾನು ಹಾಕಿದೆ. ಆ ದಾರಿಯೂ ವಿವಿನಿಲಯಕ್ಕೆ ಹೋಗುವುದು ನಿಜವೇ ಆದರೂ ದೂರ (ಸುಮಾರು ೧೫ ಕಿಮೀ) ಮತ್ತು ವಾಹನ ಸೌಕರ್ಯಗಳು ದುಸ್ತರವಾದ ಜಾಗವದು. ವಿವಿ ನಿಲಯಕ್ಕೆ ಮುಖ್ಯ ಸಂಪರ್ಕ ಮಾರ್ಗ ಮತ್ತು ಸಾರಿಗೆ ಸೌಕರ್ಯ ಇರುವುದು ಮಂಗಳೂರಿನಿಂದ. ಇದರ ಅರಿವಿಲ್ಲದೇ ವಿವಿನಿಲಯಕ್ಕೆಂದೇ ರಾತ್ರಿ ಬಸ್ಸಿನಲ್ಲಿ ಬಂದೊಬ್ಬ ಹಿರಿಯರು ಬೋರ್ಡು ನೋಡಿ ಮೇಲ್ಕಾರಿನಲ್ಲಿ ಇಳಿದ ಫಜೀತಿ ವೈರಿಗೂ ಬೇಡವಂತೆ.  ಮಾರ್ಗ ಸೂಚಿಗಳ ಬಗ್ಗೆ ಇನ್ನೂ ಎರಡು ಜಿಜ್ಞಾಸೆ: ೧. ಮಂಗಳೂರು ಮೂಡಬಿದ್ರೆ ದಾರಿ ಬದಿಯ ಅಳತೆಗಲ್ಲುಗಳು ೭೦೦ ಚಿಲ್ಲರೆ ಕಿಮೀ ದೂರದ ಶೋಲಾಪುರ ಅಂತರವನ್ನು ಹೇಳತೊಡಗುತ್ತವೆ. ಅಂದರೆ ಈ ದಾರಿಯಲ್ಲಿ ಹೆಚ್ಚಾಗಿ ಓಡಾಡುವವರು ಮೂಡಬಿದ್ರೆ, ಕಾರ್ಕಳ, ಶೃಂಗೇರಿ, ಕುದುರೆಮುಖ ಇತ್ಯಾದಿಗಳಿಗಿಂತ ಶೋಲಾಪುರದ ಅಂತರ ತಿಳಿಯಲು ಕಾತರರಾಗಿರುತ್ತಾರಾ? (ಇಂಥ ಉದಾಹರಣೆಗಳು ಎಷ್ಟೂ ಇವೆ.) ಇರಲಿ ಎನ್ನುವಂತಿಲ್ಲ. ಇಲ್ಲಿ ನಮಗೆ ದಾರಿಯ ಪ್ರಾದೇಶಿಕ ಅಗತ್ಯವಾದ ಮೂಡಬಿದ್ರೆ, ಕಾರ್ಕಳ, ಶೃಂಗೇರಿ ಇತ್ಯಾದಿ ದೊಡ್ಡ ಊರಿನ ಉಲ್ಲೇಖಕ್ಕೆ ಜಾಗವೇ ಇರುವುದಿಲ್ಲ! ೨. ಮಾರ್ಗಬದಿಯ ಸೂಚೀ ಫಲಕಗಳು ಪ್ರಯಾಣಿಕರ ಆವಶ್ಯಕತೆಯನ್ನು ಮಾತ್ರ ಒಳಗೊಳ್ಳುವುದು ಸರಿ. ಬದಲು ಸಾರ್ವಜನಿಕ ಮಾರ್ಗದಿಂದ ಹೊರಗೆ, ಖಾಸಗಿ ನೆಲದಲ್ಲಿ ನಿಂತ ಶುದ್ಧ ಜಾಹೀರಾತಿನಂತೇ ಆಗಬಾರದು. ಉದಾಹರಣೆಗೆ: ಹೊಟೆಲ್, ಪೆಟ್ರೊಲ್ ಬಂಕ್, ವೈದ್ಯಕೀಯ ಚಿಕಿತ್ಸೆ ಇತ್ಯಾದಿ ಸಂಕೇತಗಳು ಮುನ್ಸೂಚನೆಯಾಗಿ ಕಾಣಿಸುವುದು ಸರಿ. ಆದರೆ ‘ಬಡವಾ ಚಟ್ ಊಟಕ್ಕೆ (= budget meals) - ಅಶೋಕ ಖಾನಾವಳಿ - ೧೦ಕಿಮೀ’, ‘ತಿಗಣೆ ಸೊಳ್ಳೆಗಳಿಗೆ ಹೆಸರಾಂತ - ಅಭಯ ವಿರಾಮದ ಮನೆ - ೫ ಕಿಮೀ’ಯಂಥವಕ್ಕೆ ಪ್ರತಿ ಕಿಮೀ ಅಂತರದಲ್ಲಿ ಇಳಿಯೆಣಿಕೆಯ ಮಾರ್ಗಸೂಚೀ ಕೊಡುತ್ತಿರುವುದು ಸರಿಯೇ?]

ದಾರಿ ಗಟ್ಟಿ, ಮಟ್ಟವೇನೋ ಇತ್ತು. ಆದರೆ ನಮ್ಮ ಓಟಕ್ಕೇ ಎದ್ದ ದೂಳಿನಲೆ ಪರಸ್ಪರರನ್ನು ಕಂಗೆಡಿಸುತ್ತಿತ್ತು. ಒಂದೇ ಕಿಮೀ ಅಂತರದಲ್ಲಿ ವಿಸ್ತಾರ ಪಾತ್ರೆಯ ಪಯಸ್ವಿನಿ ಹೊಳೆ ಅಡ್ಡ ಬಂತು. ಇಲ್ಲಿ ಯಾವುದೋ ಮಂತ್ರಿ ಮಹೋದಯ ಸೇತುವೆಗಾಗಿ ಹಾಕಿದ ಅಡಿಗಲ್ಲಿನ ಕುರುಹಿತ್ತು. ಆ ಪಾಪಿ ಕಲ್ಲು ಮಾತ್ರ ಪುಣ್ಯಾತ್ಮನ ಹಸ್ತಸ್ಪರ್ಶದಿಂದ ಕೊನರಿ, ಸಂಕವಾಗದುಳಿದಿತ್ತು! [ಅಥವಾ ಇಂಥಾ ಅಸಂಖ್ಯ ‘ಅಡಿಗಲ್ಲು’ಗಳ ಸಂಗ್ರಹ, ಸೇತುವೆಯ ಪೂರ್ಣ ಅಗತ್ಯಕ್ಕೆ ಒದಗುವಷ್ಟು ಬೆಳೆಯುವುದನ್ನು ಕಾದುಳಿಯಿತೋ ಏನೋ. ಅಂತೂ ಮುಂದೊಂದು ದಿನ ಇಲ್ಲಿ ನಿಜ ಸಂಕ ಬಂದ ಕಾಲಕ್ಕೆ ನಾನು ಇನ್ನೊಮ್ಮೆ ಹೋಗಿ ಹೊಸತೇ ಸಮಸ್ಯೆ ಕಂಡಿದ್ದೆ. ಮಳೆಗಾಲವೂ ಸೇರಿದಂತೆ ತಿಂಗಳಾನುಗಟ್ಟಳೆ ಸಂಪರ್ಕ ಮಾರ್ಗವನ್ನು ಕ್ರಮವಾಗಿ ಗಟ್ಟಿ ಮಾಡದೆ, ನಡೆಯುವವರಿಗಾದ ಗೊಸರಿನಭಿಷೇಕ, ಹೂಳಿನಲ್ಲಿ ಸಿಕ್ಕು ಬಾರು ಕಡಿದು ಬಿಸುಡಿದ ಚಪ್ಪಲಿಗಳು, ಅಸಹಾಯಕವಾಗಿ ಉರುಳಿಬಿದ್ದ ದ್ವಿಚಕ್ರವಾಲಾಗಳದ್ದೆಲ್ಲ ಲೆಕ್ಕ ಇಟ್ಟವರಿಲ್ಲ. ಹೆಚ್ಚೇಕೆ ಅಲ್ಲೇ ಮುಂದೆ ತೋಡಿಕಾನದ ದೇವಳದವರೆಗೆ ಇದ್ದ ಬಸ್ಸಿನ ಸೇವೆಯೂ ತಡವರಿಸಿದ್ದು, ಸಿಕ್ಕಿ ನರಳಿದ್ದು, ಉರುಳಿಬಿದ್ದದ್ದೂ ಸಣ್ಣ ಕತೆಯೇನಲ್ಲ]

ಸಂಕವಿಲ್ಲದ ಪಯಸ್ವಿನಿಯಲ್ಲಿ ನೀರು ಕಡಿಮೆಯಿದ್ದ ಕಾಲ. ವಾಹನ ದಾಟುವ ಜಾಗದಲ್ಲಿ, ಸಾಮಾನ್ಯವಾಗಿ ಮಾಡುವಂತೆ, ಮೊಳಕೆಯೆದ್ದ ಕಲ್ಲುಗಳನ್ನು ಪುಡಿಗುಟ್ಟಿದ್ದರು. ಹರಿವಿನ ಕೆಳ ಅಂಚಿನಲ್ಲಿ ಕಾಡುಕಲ್ಲುಗಳದ್ದೇ ಪುಟ್ಟ ಕಟ್ಟ ಕಟ್ಟಿ, ಮೇಲಿನ ಹೊಳೆಪಾತ್ರೆಯ ಕೊರಕಲುಗಳಲ್ಲಿ ಮರಳು ನಿಗಿಯುವಂತೆ ಮಾಡಿ ಇದ್ದದ್ದರಲ್ಲಿ ಸುಲಭಗೊಳಿಸಿದ್ದರು. ಮೋಟೋಕ್ರಾಸ್, ರ‍್ಯಾಲೀಗಳ ಚೂರುಪಾರು ಅನುಭವ ಇದ್ದ ಕೆಲವು ಮಿತ್ರರಿಗೆ ಇಂಥಲ್ಲೆಲ್ಲಾ ಸಹವಾರನನ್ನು ಇಳಿಸದೇ ಅತ್ತಿತ್ತ ಕಾಲುಕೊಟ್ಟು ತಡವರಿಸದೇ ನೀರು ಸೀಳಿ ಸಾಗುವ ಹುಚ್ಚು. ಹೆಸರು ಹೇಳುವಂತೆ - Piousವಿನಿ, ಅಷ್ಟೇನೂ ಸೌಮ್ಯಳಲ್ಲ ಎನ್ನುವುದು ಮರೆತೇಹೋಗುವ ಸನ್ನಿವೇಶ. ನಾವಂತು ದೊಡ್ಡ ಪಾತ್ರೆ ನೋಡಿ ಎಚ್ಚರದಲ್ಲೇ ದಾಟಿದೆವು. [ಆದರೆ ಮೊನ್ನೆ ಕೊಡಗಿನಲ್ಲಿ ಇಂಥದ್ದೇ ಸನ್ನಿವೇಶದಲ್ಲಿ ಹುಟ್ಟಿ ಮೂರೇ ದಶಕದ ತರುಣನೊಬ್ಬ ಸೇತುವೆಯ ಮೇಲಕ್ಕೆ ಉಕ್ಕಿ ಹರಿದಿದ್ದ ಪ್ರವಾಹಕ್ಕೆ ಜಬರದಸ್ತಿನಿಂದ ಬೈಕ್ ನುಗ್ಗಿಸಿದ. ಹುಲು ಬೈಕಿನ ವೇಗ, ಸವಾರನ ಅಪಾರ ಶೌರ್ಯವನ್ನು ಐದೇ ಮೀಟರಿನಲ್ಲಿ ಹೊಡೆದು ಹಾಕಿದ ಪ್ರವಾಹ, ಮತ್ತೆ ಹುಡುಕಿದವರಿಗೆ ಸಿಕ್ಕಿದ್ದು ಹೆಣ ಮಾತ್ರ.]

ಮುಂದಿನ ದಾರಿ ತೀರಾ ಹಾಳಾಗಿತ್ತು. ಹಾಗಾಗಿ ಮತ್ತೆ ಸಿಕ್ಕ ಮೂರು ನಾಲ್ಕು ತೊರೆಗಳಿಗೆ ಅಡಿಗಲ್ಲಿನ ಶಾಸ್ತ್ರವಿರಲಿ, ಯಾವುದೇ ಪುಡಾರಿಯ ದರ್ಶನವೂ ಆದಂತಿರಲಿಲ್ಲ. ಮಳೆಗಾಲ ಮತ್ತು ಮುಂದುವರಿದ ಒಂದೆರಡು ಮಾಸಗಳವರೆಗೂ ಆ ವಲಯದ ಸಾಮಾನ್ಯರು ಜನಪದೀಯವಾಗಿ ರಚಿಸಿಕೊಂಡ ಪಾಲ, ಸಂಕಗಳನ್ನು ನೆಚ್ಚುವುದು ಅನಿವಾರ್ಯವಿತ್ತು. ಹೀಗೇ ಸುಮಾರು ಐದು ಕಿಮೀ ಸಾಗಿ ತೋಡಿಕಾನ ಎಂಬ ಕುಗ್ರಾಮದಲ್ಲಿ, ಮಲ್ಲಿಕಾರ್ಜುನ ದೇವಳದ ಸಾನ್ನಿಧ್ಯದಲ್ಲಿ ನಾಗರಿಕ ವಲಯವೇ ಮುಗಿದುಹೋದಂತಿತ್ತು. [ಅನಂತರದ ದಿನಗಳಲ್ಲಿ ಜಾಗೃತಗೊಂಡ ಭಕ್ತಿ-ಉದ್ದಿಮೆಯಲ್ಲಿ ದೇವಾಲಯ ಭಾರೀ ಜೀರ್ಣೋದ್ಧಾರ ಕಂಡಿತು. ಸಹಜವಾಗಿ ದಾರಿಯೂ ಜನಸಂಚಾರವೂ ವ್ಯವಹಾರವೂ ಆ ವಲಯದಲ್ಲಿ ಏರುಮುಖವಾಗಿಯೇ ನಡೆದಿದೆ.]

ರಾಮಮೋಹನ್ (ರಾಂಪಣ್ಣ) ಉರುಫ್ ಆನೆಮಾಮ ತೂಕ ನೂರು ಕಿಲೋದ ಮೇಲೆ ಧಾರಾಳ! ಗಣಪ ಇಲಿ ಮೇಲೆ ಕುಳಿತ ಹಾಗೇ ಇವರ ಸವಾರಿ ಬಜಾಜ್ ಸ್ಕೂಟರ್ (ಇವರ ಸವಾರಿ ಕಂಡ ತುಳುವೆರ್ ಹೀಗೂ ಕೇಳಿದ್ದುಂಟು - ಬಜ್ಜಿ ಆವೇ ಸ್ಕೂಟರ್?). ಸಾಲದ್ದಕ್ಕೆ ಇವರ ಸಹವಾರ, ವೃತ್ತಿ ಸಹಾಯಕ ಇಲ್ಯಾಸ್ - ಆಳು ಘನಕಾಯನೇನೂ ಅಲ್ಲ ಆದರೆ ಸ್ಕೂಟರಿಗೆ ಹೆಚ್ಚಿನ ಭಾರವಂತೂ ಹೌದೇ. ರಾಂಪರ ಚಲಾವಣೆಯ ವೇಗ, ರಸ್ತೆ ನಿರ್ವಹಣೆಯ ಚಾಲಾಕು ಅಸಾಮಾನ್ಯ. ಇವರ ತೂಕದಿಂದ ಸ್ಕೂಟರ್ ಎಂಥಾ ದಾರಿಯಲ್ಲೂ ಯಾವ ವೇಗದಲ್ಲೂ ನೆಲಕಚ್ಚಿಯೇ ಓಡುತ್ತಿತ್ತು. ಆ ಹುಚ್ಚಿನಲ್ಲೇ ಯಾವುದೋ ಸಣ್ಣ ತೋಡು ದಾಟುವಲ್ಲಿ ನಮ್ಮದೇ ಬೈಕೊಂದಕ್ಕೆ ಸೈಡ್ ಹೊಡೆಯುವ ಐಲಿನಲ್ಲಿ ಸ್ಕೂಟರ್ ಜಾರಿ, ಸಣ್ಣ ತಗ್ಗಿನಲ್ಲಿ ಗೊಸಕ್ಕೆಂದಿತು. ನಮ್ಮ ನಿಮ್ಮ ಗಾಡಿಗಳಾದರೆ ಪಲ್ಟಿಹೊಡೆಯುವ ಸನ್ನಿವೇಶದಲ್ಲಿ, ರಾಂಪಣ್ಣ ಸ್ಕೂಟರ್ ತಟಸ್ಥವಾದರೂ ಪೋಕ್ರಿ ನಗೆ ಬೀರಿಕೊಂಡು ಎರಡೂ ಪಕ್ಕಕ್ಕೆ ಕಾಲುಕೊಟ್ಟು ನಿಂತಿದ್ದರು! ಕೂಡಲೇ ನಮ್ಮಲ್ಲೇ ಅವರು ಇವರು ಓಡಿ ಬಂದು “ಏ ಬೊಡ್ಡಾ ಜಪ್ಯಾ”ಂತ ರಾಂಪನನ್ನು ಇಳಿಸಿ, ಕೈಕೊಟ್ಟು, ಸ್ಕೂಟರ್ ಇಂಜಿನ್ನಿಗೆ ನೀರು ನುಗ್ಗದಂತೆ ಅವಸರದಲ್ಲೇ ತಟಸ್ತ ಮಾಡಿದ್ದಾಯ್ತು. ಕಣ್ಣಂದಾಜಿನಲ್ಲಿ ಏನೂ ತೊಂದರೆಯಿಲ್ಲಾಂತನ್ನಿಸಿ ಎರಡು ಒದ್ದರೆ, ಇಂಜಿನ್ನೇನೋ ಚಾಲೂವಾಯ್ತು. ಆದರೆ ಗೇರ್ ಕೊಟ್ಟರೆ ಗಾಡಿ ಅಲ್ಲಾಡಲಿಲ್ಲ. ತೋಡಿನ ಮಧ್ಯೆ ಎತ್ತುವ, ಸ್ಕೂಟರಿನ ಚಕ್ರ, ತಳ ನೋಡುವ ಕೆಲಸಕ್ಕೆಲ್ಲಾ ರಾಂಪರ ಸುತ್ತಳತೆ ತೊಂದರೆ ಕೊಡುತ್ತಿತ್ತು. ಆದರೂ ಇಲ್ಯಾಸ್ ಸಹಾಯದಲ್ಲಿ ಹಣುಕಿ, ತಿಣುಕಿ ರೋಗ ನಿದಾನ ಮಾಡಿದರು. ಕಲ್ಲಿನ ಆಘಾತಕ್ಕೆ ಸೈಲೆನ್ಸರ್ ಓರೆಯಾಗಿ ಚಕ್ರವನ್ನು ಒತ್ತಿಹಿಡಿದಿತ್ತು. ಆ ನಳಿಗೆಯನ್ನು ಹಾಗೂ ಹೀಗೂ ಕಳಚಿ, (ನಮ್ಮಲ್ಲಿ ಸೂಕ್ತ ಹತ್ಯಾರು ಇಲ್ಲದ್ದಕ್ಕೆ) ಕಾಡುಕಲ್ಲಿನಲ್ಲಿ ಜಜ್ಜಿ, ಸರಿಮಾಡಿ ಜೋಡಿಸಿ ಮುಂದುವರಿದೆವು.

[ತೋಡಿಕಾನ - ಭಾಗಮಂಡಲ ದಾರಿಯ ಕುರಿತು ಹೋಗುವ (೧೯೮೫)  ಸುಮಾರು ಆರು ತಿಂಗಳ ಮೊದಲೇ ಅವರಿವರಲ್ಲಿ ದಾರಿ ವಿವರಗಳನ್ನು ವಿಚಾರಿಸುತ್ತಲೇ ಇದ್ದೆ. ಆಗ ತೋಡಿಕಾನದ ಮತ್ಸ್ಯತೀರ್ಥ ಮತ್ತು ಸ್ವಲ್ಪ ಮುಂದುವರಿದರೆ ದಾರಿ ಬದಿಯ ದೇವರಗುಂಡಿ ಜಲಪಾತದ ಬಗ್ಗೆ ಕೇಳಿದ್ದೆ. ಆದರೆ ದಾರಿ ಶೋಧಿಸುವ ಉದ್ದೇಶಕ್ಕೆ ಹೊರಟಂದು ಅನ್ಯ ಆಸಕ್ತಿಗಳನ್ನು ಹತ್ತಿಕ್ಕಿ ಮುಂದುವರಿದಿದ್ದೆವು. ಮುಂದೊಂದು ಬೇಸಗೆಯಲ್ಲಿ ಬೇರೊಂದು ಯೋಜನೆಯಲ್ಲಿ ಅತ್ತ ಹಾದುಹೋಗುವಾಗ ಮತ್ಸ್ಯ ತೀರ್ಥ ನೋಡಿದ್ದಿತ್ತು. ಶಿಶಿಲದಲ್ಲೂ ದೇವಾಲಯದ ಪಕ್ಕದಲ್ಲಿ ಹೀಗೇ ಮತ್ಸ್ಯ ತೀರ್ಥ ನೋಡಿದ್ದೇನೆ. ಆ ಹೊಳೆಯಷ್ಟು ಘನವಾದ್ದೇನೂ ಇಲ್ಲಿನದ್ದಲ್ಲ; ತೋಡು, ಅಷ್ಟೆ. ಮತ್ತೆ ನಾವಲ್ಲಿದ್ದ ಬೇಸಗೆಯ ಸಮೀಪದ ದಿನಗಳಲ್ಲಿ ದುಷ್ಕರ್ಮಿಗಳು ತೋಡಿಗೆ ಮದ್ದು ಹಾಕಿ, ಮನೆಯಲ್ಲಿ ಮಸಾಲೆ ಅರೆದು ಮುಗಿಸಿದ್ದರು! ಹಾಗೇ ದೇವರಗುಂಡಿಯನ್ನು ಬೇರೊಂದು ಮಳೆಗಾಲದಲ್ಲೇ ಭೇಟಿಕೊಟ್ಟು ನೋಡಿದ್ದೆವು. ಬಡ ಮನೆಯೊಂದರ ತೋಟ, ಮನೆ ಹಿತ್ತಿಲಿನಲ್ಲೇ ಇದ್ದ ಅದು ಒಂದು ಸಣ್ಣ ಝರಿಯ ಪಾತ್ರೆ. ಪತ್ರಿಕೆಗಳಲ್ಲಿ ‘ಐಟಮ್ಮು’ ಮಾಡುವವರ ಉತ್ಸಾಹದಲ್ಲಿ ಅಗತ್ಯ ಮೀರಿ ಪ್ರಚಾರ ಪಡೆದ ಒಂದು ಜಲಧಾರೆ. ಸರಕಾರೀ ಇಲಾಖೆಗಳ ಅಭಿವೃದ್ಧಿ ಯೋಜನೆಗಳ ಹಾವಳಿಯಲ್ಲಿ ಅಲ್ಲೂ ಪಶ್ಟ್ ಕಿಲಾಸ್ ಳೇಡೀಶ್ ಅಂಡ್ ಜಂತಲ್ಮನ್ ಛೇಂಜ್ರೂಂ (ಜಾರಿಬಿದ್ದರೆ ಬುರುಡೆಯೇ ಹುಡಿಯಾಗುವಂತಹ ಕನ್ನಡಿಯಂತಹ ನೆಲಸಹಿತ), ಕಮ್ಮೋಡು, ಕಪ್ಪೆಟೇರಿಯಾ, ಜೋಕಾಲಿ, ಜಾರ್ಬಂಡೆ, ವೀಕ್ಷಣಾ ಕಟ್ಟೆ, ಅಂಗಡಿ ಮುಂಗಟ್ಟು ಕೊನೇಗೆ ಘೋಸ್ಟ್ ಹೌಸ್ ಎಲ್ಲಾ ಬರುವ ವೇಳೆಗೆ ಮೇಲಿನ ಜಲಾನಯನ ಪ್ರದೇಶವೆಲ್ಲಾ ಬೋಳು ಬೆಂಗಾಡಾದರೆ ಆಶ್ಚರ್ಯವಿಲ್ಲ. ಮುಂದಿನ ವಿವರಗಳಿಗೆ ಅವಶ್ಯ ಓಡಿ: ಸಾಯಿನಾಥರ ಪುಸ್ತಕ - ಬರ ಅಂದರೆ ಎಲ್ಲರಿಗೂ ಇಷ್ಟ, ಅನುವಾದ: ಜಿ.ಎನ್ ಮೋಹನ್)] 

ಅಂಕುಡೊಂಕಿನ ತೀವ್ರ ಏರುದಾರಿ. ವಾಹನ ಬಳಕೆ ತೀರಾ ಕಡಿಮೆಯಿದ್ದ ದಾರಿಯಾದ್ದರಿಂದ ಅಂಚುಗಳಿಂದ ಯುಪಟೋರಿಯಂ ಪೊದರುಗಳು ದಾರಿಯನ್ನು ಇಂಚಿಂಚೇ ಆಕ್ರಮಿಸುತ್ತ ಬಂದಿತ್ತು. ನಾಲ್ಚಕ್ರದ ಬಲವಿರುವ ವಾಹನಗಳು ಓಡಾಡಿದ್ದಕ್ಕೋ ಏನೋ ಅವೂ ಮತ್ತು ಸ್ವಲ್ಪ ಆಚಿನ ಎಲ್ಲಾ ಹಸಿರು ದೂಳಿನ ಹೊದಿಕೆ ಹೊದ್ದು ಮ್ಲಾನವದನವಾಗಿದ್ದವು. ಒಂದೆಡೆ ಕಾಡುಕಟುಕರ ಭರ್ತಿ ಲಾರಿ ಎದುರಾಯ್ತು. ನಾವೆಲ್ಲ ದರೆ ಬದಿಯ ಪೊದರುಗಳಿಗೇ ನುಗ್ಗಿ ದಾರಿ ಮಾಡಿ ಕೊಟ್ಟೆವು. ದಾಟುವಾಗ ನಮ್ಮನ್ನು ವಿಸ್ಮಯದಲ್ಲೇ ನೋಡಿದ ಲಾರಿ ಚಾಲಕ “ಮುಂದಿನ ದಾರಿ ತೀರಾ ಹಾಳು ಮತ್ತು ಕಡಿದಾಗಿದೆ, ನಿಮಗಲ್ಲ” ಎಂದು ಎಚ್ಚರಿಸಲು ಮರೆಯಲಿಲ್ಲ. ಅನುಭವದ ಅಳತೆಗೆ ಏಕಮಾನ ಇಲ್ಲ. ಹಾಗಾಗಿ ಲಾರಿಯವನ ನಮ್ಮ ಕುರಿತ ತಿಳುವಳಿಕೆ ಸರಿಯಲ್ಲ ಎಂದೇ ನಾವು ಮುಂದುವರಿದೆವು. ಅದಕ್ಕೂ ಹೆಚ್ಚಿಗೆ ಲಾರಿ ಬಂದದ್ದಕ್ಕೆ ಎದ್ದ ದಟ್ಟ ದೂಳಿನ ಅಲೆಯಲ್ಲಿ ನಾವು ಬಾಯಿಬಿಡಲಾರದಾಗಿದ್ದೆವು. ಆದರೆ ನಾಳೆ ಇನ್ನೊಂದೇ ನಗರಾನುಭವದ ತಂಡ ಈ ದಾರಿಯ ಕುರಿತು ನಮ್ಮಲ್ಲೇನಾದರೂ ವಿಚಾರಿಸಿದರೆ ನಮ್ಮ ಸಲಹೆಯೂ ಚಾಲಕನದ್ದಕ್ಕಿಂಥ ಭಿನ್ನವಿರಲಾರದು!

ಒಂದೆಡೆ ದಾರಿ ಸಣ್ಣ ತೋಡಿಗಿಳಿದು, ಬಲು ಧಿಮಾಕಿನಲ್ಲಿ ನಿಂತ ಗುಡ್ಡವನ್ನು ನೇರ ಏರಿತ್ತು. ನಿತ್ಯ ಭಾರೀ ಹೇರಿನ ಲಾರಿಯೇ ಅದನ್ನು ಸವೆಸುತ್ತಿತ್ತು. ಸಹಜವಾಗಿ ಎರಡು ಆಳವಾದ ಚರಂಡಿ, ನಡುವೆ ಹುಲ್ಲು, ಕುರುಚಲು ಬೆಳೆದ ದಿಣ್ಣೆ ಸಾಲು. ಗೋವಿಂದನ ಬೈಕಿಗೆ ಇಳಿದಾರಿಗಳಲ್ಲಿ ಇಂಜಿನ್ನಿಗೆ ಪೆಟ್ರೋಲ್ ಅತಿಸ್ರಾವವಾಗಿ ಬಂದ್ ಬೀಳುವ ರೋಗ ಇತ್ತು. ಆತ ಅದನ್ನು ರಿಪೇರಿ ಮಾಡಿಸುವ ಬದಲು ತಾನೇ ಪೆಟ್ರೋಲ್ ಟ್ಯಾಪನ್ನು ನಿಯಂತ್ರಿಸುತ್ತ ಸುಧಾರಿಸಿಕೊಂಡಿದ್ದ. ಪ್ರಸ್ತುತ ಸನ್ನಿವೇಶದಲ್ಲಿ ಪೆಟ್ರೊಲ್ ಬಂದ್ ಮಾಡಿ ನಿಧಾನಕ್ಕೇ ತೋಡಿಗಿಳಿದ. ಆಚೆ ದಂಡೆಯಲ್ಲಿ ಪೆಟ್ರೊಲ್ ಬಿಟ್ಟುಕೊಳ್ಳಲು ಮರೆತು, ಪ್ರಥಮ ಗಿಯರಿಸಿ, ಪೂರ್ಣ ಆಕ್ಸಿಲರೇಟರ್ ಕೊಟ್ಟ. ಹತ್ತಿಪ್ಪತ್ತು ಮೀಟರ್ ಸಾಗಿ ಗೋವಿಂದನ ಬೈಕ್ ಬಂದಾಯ್ತು. ನಮ್ಮೊಳಗಿನ ಸಾಮಾನ್ಯ ತಿಳುವಳಿಕೆ ಬೇಡಾ ಎಂದರೂ ಚಾರ್ಲ್ಸ್ ಅಲ್ಲಿ ಗೋವಿಂದನ ಕಟ್ಟಾ ಅನುಯಾಯಿ. ಆದರೆ ಕಠಿಣ ಏರಿನ ನಡುವೆ ಗೋವಿಂದನೇ ಕಟ್ಟೆಯಾಗುವುದು ಚಾರ್ಲ್ಸ್ ನಿರೀಕ್ಷಿಸಿರಲಿಲ್ಲ. ಆತ ಕೂಡಲೇ ಕೈಯಲ್ಲಿ ಎದುರು ಬಿರಿ ಕಾಯಿಸಿ ಬಲ ನೆಲಕ್ಕೆ ಕಾಲು ಚಾಚಿದ. ದಿಣ್ಣೆ ಸಾಲು ಕಳೆದು ಆಚಿನ ಚರಂಡಿಯಂತಹ ನೆಲ ಎಟುಕಲಿಲ್ಲ. ಹಿಂತುಯ್ತ, ಇಬ್ಬರ ಭಾರ ಸೇರಿದಾಗ ಬರಿಯ ಎದುರು ಬಿರಿ ಸಾಕಾಗದೇ ಒಟ್ಟು ಬೈಕ್ ಅಡ್ಡಾದಿಡ್ಡಿ ಹಿಂದೆ ಜಾರಿ ಐದಾರು ಮೀಟರ್ ಕಳೆದು ಅಡ್ಡ ಬಿತ್ತು. ಚಾರ್ಲ್ಸ್‌ನ ಸಹಯಾನಿ (ಸಹದುಃಖಿ) - ರಾಮನಾಥರಾವ್‌ಗೆ ಹೆದರಿಕೆ, ಸಹಜವಾಗಿ ಎಚ್ಚರಿಕೆ ಸ್ವಲ್ಪ ಹೆಚ್ಚು. ಚಾರ್ಲ್ಸ್ ಜಾರುತ್ತಿದ್ದಂತೆ ಇವರು ಸ್ವತಂತ್ರವಾಗಿ ಮೊದಲೇ ಇಳಿಯ ಹೋಗಿ ಎರಡುರುಳು ಹೆಚ್ಚೇ ತೆಗೆದಾಗಿತ್ತು! ಎಂಜಿನ್ ಗದ್ದಲ, ದೂಳು, ಹೊಗೆ ತಣಿಯುವಾಗ ಅವರಿವರು ಕೈಸೇರಿಸಿ ಎಲ್ಲರೂ ಎದ್ದಿದ್ದರು. ಲೆಕ್ಕ ತೆಗೆಯುವಾಗ ಅದೃಷ್ಟವಶಾತ್ ಇಬ್ಬರಿಗೂ ತರಚಲು ಗಾಯ ಮಾತ್ರ. ಆದರೂ ಚಾರ್ಲ್ಸ್‌ಗೆ ತುಸು ಕಡಿಮೆ! ಅತಿ ಅನುಸರಣೆ ಎಲ್ಲ ರಂಗಗಳಂತೆ ಮಾರ್ಗಕ್ರಮಣದಲ್ಲೂ ತಪ್ಪು. ತೀವ್ರ ಏರು ಅಥವಾ ಇಳುಕಲುಗಳಲ್ಲಿ ಬೀಳಲು ಇಬ್ಬರಿಗಿಂತ ಒಬ್ಬರು ಲೇಸು. ಎಂಬಿತ್ಯಾದಿ ಹೊಸ ತತ್ವಗಳನ್ನು ಮನವರಿಕೆ ಮಾಡಿಕೊಂಡ ಮೇಲೆ ಚಕ್ರಗಳು ಮತ್ತೆ ಉರುಳಿದವು, ಕಾಲದ ಜತೆ.

ಚಡಾವು ತೀವ್ರವಾಗಿ ಬೈಕ್ ಎಳೆಯದಾಗ ಹಿಂದಿನವರನ್ನ ಇಳಿಸಿದೆವು. ಮತ್ತೂ ಎಳೆಯದಾಗ ಇಳಿದವರಿಂದ ನೂಕಿಸಿಕೊಂಡೆವು. ಮತ್ತೂ ಅಸಾಧ್ಯವೆಂದಾಗ ವಾಹನಕ್ಕೆ ಪುಟ್ಟ ವಿಶ್ರಾಂತಿ ಕೊಡುತ್ತಿದ್ದೆವು. ನಮ್ಮ ಹಳೆಗಾಲದ ಯೆಜ್ದಿ ಬೈಕಂತೂ ಏರಿದ ಬಿಸಿಗೆ ಕೀಲಿಕೈ ತೆಗೆದರೂ ಪೂರ್ತಿ ಬಂದಾಗುವ ಮೊದಲು ನಾಲ್ಕೆಂಟು ಗುಟುರು ಹಾಕುತ್ತಿತ್ತು. ಪುನಶ್ಚೇತನಗೊಳಿಸಿ, ಅನಿವಾರ್ಯವಾದ ಕೆಲವೆಡೆ ಅನಾರೋಗ್ಯಕ್ರಮವಾದ ಕ್ಲಚ್ ಹಿಡಿಹಿಡಿದು ಬಿಟ್ಟು, ಉದ್ದ ಕಾಲಿಳಿಬಿಟ್ಟು ನೆಲ ಒದ್ದು ಮಾರ್ಗ ಕ್ರಮಿಸಿದೆವು. ಇಕ್ಕೆಲಗಳಲ್ಲಿ ಅಗಾಧ ಮರಗಳು ಒತ್ತೊತ್ತಾಗಿದ್ದು ದಟ್ಟ ನೆರಳು ದಾರಿಗೂ ಮುತ್ತಿಗೆ ಹಾಕಿತ್ತು. ಹೀಗಾಗಿ ಸಹವಾರಿಗಳಿಗೆ  ಸವಾರಿಯೋಗ ಕಡಿಮೆಯಾದರೂ ಸುಂದರ ನಡಿಗೆ ಲಾಭವೇ ಆಗಿತ್ತು. ಅಲ್ಲಿನ ವಿರಾಮಗಳಲ್ಲಿ, ಕಾಡಿನ ಬಗ್ಗೆ ನಾಗರಿಕ ಮೌಲ್ಯಗಳನ್ನು ವಿಡಂಬಿಸುತ್ತ ನಾವು ನಾವೇ ಮೂರಾಳು ಬಳಸಿಗೂ ಸಿಗದ ಮಹಾಮರಗಳನ್ನು ಹುಸಿ ಹರಾಜಿನಲ್ಲಿ ಪರಸ್ಪರ ಮೂರು ಕಾಸಿಗೆ ಮಾರಿಕೊಂಡೆವು! ಆದರೆ ಕಡಿದು ಸಾಗಿಸುವ ವಾಸ್ತವ ಖರ್ಚನ್ನು ಹೀಗೆ ಅಪಮೌಲ್ಯಗೊಳಿಸಲಾಗದೆ ವಿಷಯವನ್ನೇ ಕೈಚೆಲ್ಲಿ ಬೈಕ್ ನೂಕುವುದನ್ನು ಮುಂದುವರಿಸಿದೆವು! [ಆ ಕಾಲದಲ್ಲಿ ಸರಕಾರ ಕಾಡಿನಲ್ಲಿ ಮರಗಳ ಹರಾಜು ನಡೆಸುತ್ತಿದ್ದ ಕಥೆಗಳನ್ನು ನಾನು ಧಾರಾಳ ಕೇಳಿದ್ದೆ. ಮರದ ವ್ಯಾಪಾರಿಗಳ ದುಷ್ಟಕೂಟ ಮತ್ತು ಇಲಾಖೆಯೊಳಗಿನ ಭ್ರಷ್ಠರು ಕೈ ಮಿಲಾಯಿಸಿ ನೂರು ಬಾಳುವುದನ್ನು ಮೂರಕ್ಕೆ ದಾಟಿಸುತ್ತಿದ್ದರು! ಅಂಥವುಗಳ ಪರಿಷ್ಕೃತ ಆವೃತ್ತಿಯನ್ನೇ ನಾವಿಂದು ಬಳ್ಳಾರಿ ಗಣಿಯಲ್ಲೋ ಕೇಂದ್ರದ ಕಲ್ಲಿದ್ದಿಲು ಹಗರಣದಲ್ಲೋ ಹೆಚ್ಚೇಕೆ ಎಲ್ಲಾ ಸರಕಾರೀ ಕಲಾಪಗಳಲ್ಲೂ ಎಂದು ಹೇಳಿಬಿಡುವಷ್ಟು ವ್ಯಾಪಕವಾಗಿ ಕೇಳುತ್ತಿದ್ದೇವೆ. ಬೋಲೋ ಭಾರತ್ ಗೋತಾ ಕೀ ಜೈ!!] 

ಎತ್ತರಕ್ಕೆ ಹೋಗುತ್ತಿದ್ದಂತೆ ನಮ್ಮ ನಿರೀಕ್ಷೆ ಮೀರಿ ದಾರಿ ಒಳ್ಳೆಯದಾಗಿತ್ತು. ಕೆಳವಲಯದಲ್ಲಿ ರಸ್ತೆ ಕೊರಕಲು ಬೀಳುವಲ್ಲಿ ಮಳೆಗಾಲದಲ್ಲಿ ಹರಿನೀರ ಮೊತ್ತ ಹೆಚ್ಚುವುದು ಕಾರಣವಿರಬಹುದು. ಆ ನಿರ್ಜನ ಮೂಲೆಯಲ್ಲಿ ಒಂದು ಅಮುಖ್ಯ ಬಲಗವಲು ಕಾಣಿಸಿತು. ಹೆದ್ದಾರಿ ಪಕ್ಕದಲ್ಲಿ ಕೈಮರ ಇಟ್ಟ ಉತ್ಸಾಹಿಗಳು ಆ ಎತ್ತರಕ್ಕೆ ಬಂದೇ ಇರಲಿಲ್ಲ. ನಾವು ಹೆಚ್ಚು ಬಳಕೆಯ ಜಾಡನ್ನೇ ಅನುಸರಿಸಿದೆವು. ಆದರೆ ಸ್ವಲ್ಪದರಲ್ಲೇ ಅದು ಕಾಡುಕಟುಕರ ಶಿಬಿರದಲ್ಲಿ ಮುಕ್ತಾಯ ಕಂಡಿತು. ಮತ್ತೆ ಅಲ್ಲಿನ ಕೂಲಿಯಾಳುಗಳಿಂದ ಪುನರ್ನಿರ್ದೇಶಿತರಾಗಿ ವಾಪಾಸು ಹೋಗಿ, ಅಮುಖ್ಯ ಕವಲು ದಾರಿಗಿಳಿದೆವು. ಈ ಅನಾವಶ್ಯಕ ಓಡಾಟದಿಂದ ತೀರಾ ಹುಡಿಮಣ್ಣು ದಾರಿಯಲ್ಲಿ, ತೀವ್ರ ಇಳುಕಲಿನಲ್ಲಿ ಬೈಕ್ ಸವಾರಿ ಮಾಡುವ ಅಪೂರ್ವ ಅನುಭವ ದಕ್ಕಿತು. ಪುಣ್ಯಕ್ಕೆ ಯಾರೂ ಬಿದ್ದು ಪ್ರಶಸ್ತಿಪತ್ರ ಗಳಿಸಲಿಲ್ಲ. 

ಸರಿದಾರಿಯಲ್ಲಿ ದಟ್ಟವಾಗಿ ಹುಲ್ಲು ಹಬ್ಬಿತ್ತು. ಅಂದಾಜಿನಲ್ಲೇ ನೂರು ಮಾರು ದಾಟುತ್ತಿದ್ದಂತೆ ಅತ್ತ ದರೆ, ಇತ್ತ ದರಿ, ದಾರಿಗಡ್ಡ ದೊಡ್ಡ ಮರ. ಮಳೆಗಾಲದಲ್ಲೆಂದೋ ಕುಸಿದು ಒರಗಿದಂತಿತ್ತು. ನಾವು ಅಲ್ಲಿಲ್ಲಿ ಹುಡುಕಿ ಸಂಪಾದಿಸಿದ ಕಾಡುಗೋಲುಗಳ ಸನ್ನೆ ನೂಕಿಗೆ ಅದು ಜಗ್ಗಲಿಲ್ಲ. ಕಡಿದು ಕಳೆಯೋಣವೆಂದರೆ ಮೊದಲೇ ಹೇಳಿದ್ದೇನೆ, ನಮ್ಮಲ್ಲಿ ಯಾವ ಹತ್ಯಾರೂ ಇರಲಿಲ್ಲ. ಆಗ ಹೊಳೆದ ತಂತ್ರ ಓವರ್ ಬ್ರಿಜ್. ಬಿದ್ದ ಬೊಡ್ಡೆಯ ಎರಡೂ ಬದಿಗೆ ಕಾಡುಕಲ್ಲು, ಕೋಲು ಓರೆಯಲ್ಲಿ ಒಟ್ಟಿ ಒರಟು ದಾರಿ ಮಾಡಿದೆವು. ಒಂದೊಂದು ವಾಹನಕ್ಕೂ ಮೂರು ನಾಲ್ಕು ಜನ ಕೈಸೇರಿಸಿ ಎಲ್ಲವನ್ನೂ ನೂಕಿ ಪಾರುಗಾಣಿಸಿದೆವು. ಮುಂದೆ ಸ್ವಲ್ಪೇ ದೂರದಲ್ಲಿ ಶ್ರೇಣಿಯ ಶಿಖರ ಪ್ರದೇಶವೇ ಬಂತು. ಅಲ್ಲಿ ಮತ್ತೊಂದು ಕವಲು ದಾರಿ. ಇಲ್ಲಿ ಹೆಚ್ಚು ಬುದ್ಧಿವಂತರಾಗಿ ಹೆಚ್ಚು ವಿಶ್ವಾಸದ ದಾರಿಯಲ್ಲಿ ಮೊದಲು ಒಂದೇ ಬೈಕನ್ನು ಕಳಿಸಿ ಖಾತ್ರಿ ಮಾಡಿಕೊಂಡೆವು. ಅದು ತಪ್ಪಾಗಲಿಲ್ಲ. ಆಗಿದ್ದರೆ ಉಳಿದವರ ಶ್ರಮ, ಇನ್ನೂ ಮುಖ್ಯವಾಗಿ ಪೆಟ್ರೋಲ್ ಉಳಿಯುತ್ತಿತ್ತು. 

ನಿರ್ಜನ ಕಾಡು ಕಳೆದು ತೋಟ ಬಂತು. ಕೊಡಗಿನ ತೆಕ್ಕೆಯಲ್ಲಿದ್ದ ಪಟ್ಟಿಮಲೆ ವಲಯದಲ್ಲಿ ಅದೊಂದು ಕಾಫಿ ತೋಟ. ಅಲ್ಲಿ ತೋಟದವರು ಯಾವುದೋ ಕಾಲದಲ್ಲಿ ದಾರಿಯುದ್ದಕ್ಕೆ ಕಾಡು ಕಲ್ಲು ಗುಂಡುಗಳನ್ನೇ ಬಿಗಿಯಾಗಿ ಜೋಡಿಸಿದ್ದರು. ಆದರೆ ಈಚಿನ ದಿನಗಳಲ್ಲಿ ವಾಹನ ಬಳಕೆಯಿಲ್ಲದೆ ಕುರುಚಲು, ತರಗೆಲೆ ಸೇರಿ ನಮ್ಮ ಸವಾರಿಗೆ ಹೊಸದೇ ಸಮಸ್ಯೆ, - ಜಾರುದಾರಿ! ಅದೂ ಶುದ್ಧವಿರಲಿಲ್ಲ. ಕೆಲವು ಕಡೆಗಳಲ್ಲಿ ಮಳೆಗಾಲದ ಸವಕಳಿಯಿಂದ ಕಲ್ಲೆದ್ದು ತರಗೆಲೆ ಮರೆಯಲ್ಲಿದ್ದ ಹೊಂಡ ನಮ್ಮನ್ನು ಕುಕ್ಕಿದ್ದಿತ್ತು. ಹಾಗೇ ಒಂದಿದ ಕಲ್ಲು ದಿಣ್ಣೆಯಾಗಿ ಕಡ್ಡಿಕಸದ ಮುಸುಕಿನಲ್ಲೇ ಘಟ್ಟಿಸಿದ್ದೂ ಆಯ್ತು. ಹ್ಯಾಂಡಲ್ ಎಷ್ಟೇ ಬಿಗಿ ಹಿಡಿದರೂ ವೇಗ ಎಷ್ಟು ಕಡಿಮೆ ಮಾಡಿದರೂ ಜಾರಿ, ಹಾರಿ ಗುದ್ದಿ ನಮ್ಮನ್ನು ಹಣ್ಣು ಮಾಡಿತು. ಕೆಲವೆಡೆಗಳಲ್ಲಂತೂ ಹತ್ತಿಪ್ಪತ್ತು ಮೀಟರಿನಷ್ಟು ನಮ್ಮ ನಿಯಂತ್ರಣಕ್ಕೇ ಸಿಗದಂತೆ ಬೈಕೋಡಿ ನಮ್ಮ ಮೇಲೆ ಸೇಡು ತೀರಿಸಿಕೊಳ್ತಿತ್ತು! ಏರು ದಾರಿಯಲ್ಲಿ ಐದೈದು ಮಿನಿಟಿಗೆ ಇಂಜಿನ್ ತಣಿಸಲು ವಿಶ್ರಾಂತಿ ಕೊಡುತ್ತಿದ್ದರೆ ಇಲ್ಲಿ ಪರಿಸ್ಥಿತಿ ಉಲ್ಟಾ! ಬಿರಿ ಒತ್ತಿ ಬಳಲಿದ ಬೆರಳುಗಳು ಅದುರುತ್ತಿದ್ದವು. ಆಘಾತ ಸಹಿಸಲಾಗದೇ ಭುಜ ಬಿದ್ದೇ ಹೋಯ್ತೆನ್ನುವಾಗ ಐದಲ್ಲ, ಹತ್ತೇ ಮಿನಿಟು ನಿಲ್ಲಲೇ ಬೇಕಾಗುತ್ತಿತ್ತು. ಮತ್ತೆ ಕೆಲವೊಮ್ಮೆ ಅನಿಯಂತ್ರಿತವಾಗಿ ಹಗುರಕ್ಕೇ ಅಡ್ಡಬಿದ್ದಲ್ಲಿಂದ ಎದ್ದು ಹೊರಡುವಲ್ಲೇ ನಿಧಾನಿಸಿ, ಬೇರೆಯವರಿಗೆ ಗೊತ್ತಾಗದಂತೆ (ಬೆಕ್ಕು ಕಣ್ಮುಚ್ಚಿ ಹಾಲು ಕುಡಿದಂತೆ) ಸುಧಾರಿಸಿಕೊಳ್ಳುತ್ತಿದ್ದೆವು. ಏರು ದಾರಿಯ ಹನ್ನೆರಡು ಕಿಮೀಯಲ್ಲಿ ಮೂಡದ ಭಯ, ಹರಿಯದ ಬೆವರು ಇಲ್ಲಿ ಎರಡೇ ಕಿಮೀ ಪೂರೈಸುವಲ್ಲಿ ಬಂದಿತ್ತು! ಅದೃಷ್ಟವಶಾತ್ ಅಷ್ಟರಲ್ಲೇ ಡಾಮರು ದಾರಿ ಸಿಕ್ಕಿತು. ಹಾಗಲ್ಲದೆ ಇಳಿದಾರಿ ಇನ್ನೊಂದೆರಡು ಕಿಮೀ ಲಂಬಿಸಿದ್ದರೂ ನಾವು ಅಷ್ಟೇ ನಿರ್ವಿಘ್ನವಾಗಿ ಸೇರುತ್ತಿದ್ದೆವೆಂದು ನನಗಂತೂ ನಂಬಿಕೆ ಇಂದೂ ಬರುವುದಿಲ್ಲ.

ಅದು ಕೇರಳದ ಕಾಂಞಾಂಗಾಡ್‌ನಿಂದ ಭಾಗಮಂಡಲಕ್ಕೆ ಹೋಗುವ ಡಾಮರು ದಾರಿ. ಅಲ್ಲೇ (ಕರಿಕೆ ಸ್ಥಳನಾಮ) ಹಾರು ಹೊಡೆದ ಗಡಿ ಗೇಟೂ ಇತ್ತು. ಆ ಕಾಲದ ವಾಹನ ಸಂಚಾರಸೂಚಿಯಾಗಿ ವಸತಿ, ಜನ ಮಾತ್ರ ಇರಲಿಲ್ಲ. ಮುಂದಿನ ದಾರಿ ಆಟಕ್ಕುಂಟು, ಲೆಕ್ಕಕ್ಕಿಲ್ಲ. ಹದಿಮೂರು ಕಿಮೀಯಲ್ಲಿ ಭಾಗಮಂಡಲ. ಅಲ್ಲಿದ್ದ ಕೊಳಕು ಹೋಟೆಲಿನಲ್ಲಿ ಮಧ್ಯಾಹ್ನದೂಟದ ಶಾಸ್ತ್ರ. ಮತ್ತೆ ಎಂಟು ಕಿಮೀ ಮುಂದುವರಿಸಿ ತಲಕಾವೇರಿಯಲ್ಲಿ ‘ತೀರ್ಥ’ದ ನಾಲ್ಕು ಹನಿ ತಲೆಗೆ ಹಾಕಿ, ಒತ್ತಿನ ಬ್ರಹ್ಮಗಿರಿ ನೆತ್ತಿ ಸುತ್ತಿಯಾಗುವಾಗ ನಮ್ಮ ಬಳಲಿದ್ದ ಮನಸ್ಸು ಪುನಶ್ಚೇತನಗೊಂಡಿತ್ತು. ಇಮ್ಮಡಿ ಹುರುಪಿನಿಂದ ಸಾರ್ವಜನಿಕ ಮತ್ತು ಸಾರ್ವಕಾಲಿಕ ದಾರಿಯಲ್ಲಿ ಬೈಕೋಡಿಸಿ, ಕಾಟಗೇರಿ (ಮಡಿಕೇರಿಗೂ ಐದಾರು ಕಿಮೀ ಮೊದಲೇ ಸಿಗುವ ಕವಲಳ್ಳಿ) - ಸಂಪಾಜೆಯ ಬಳಸು ದಾರಿಯಲ್ಲಾಗಿ ಮಂಗಳೂರು ಸೇರಿಕೊಂಡೆವು.

*** *** ***

ಆಧುನಿಕ ಕನ್ನಡದಲ್ಲಿ ಹೇಳುವ ‘ರಫ್ ರೈಡ್’ನ್ನು ವಾಹನ ಏರಿ ಹಳ್ಳಿಮೂಲೆಯ ಭೇಟಿ ಅನಿವಾರ್ಯವಾದವರು ಅನಿಷ್ಟವಾಗಿಯೇ ಅನುಭವಿಸುವುದುಂಟು. ಆದರೆ ನಗರದಲ್ಲೇ ಹೆಚ್ಚು ನವೆಯುವ ನಮಗೆ ಅದೊಂದು ಕ್ರೀಡೆ. (ನಾವು ಪರ್ವತಾರೋಹಣ ಎನ್ನುವಾಗ ಈಗಲೂ ಕೆಲವು ಹಳ್ಳಿಯ ಹಿರಿಯರು ಅವರ ಹಿತ್ತಲಿನ ಗುಡ್ಡ ತೋರಿಸಿ ಅಣಕಿಸುವುದು ಉಂಟು.) ಮಾರ್ಗದ ಕಾಠಿಣ್ಯವನ್ನು ಹುಡುಕಿ, ತುಡುಕುವ ಹವ್ಯಾಸ. ಚಕ್ರವರ್ತಿಗಳು ಪುಸ್ತಕದಲ್ಲಿ ಮೂರುದಾರಿಗಳ ಅಧ್ಯಾಯ ಸಂಕಲಿಸುವಾಗ ವರಂಗ - ತೀರ್ಥಳ್ಳಿ ಮೊದಲ ಹಂತದ್ದಾಗಿ ಕಾಣಿಸಿತು. ಅದು ಪಕ್ಕಾ ಸಾರ್ವಜನಿಕ ದಾರಿ, ಸುಲಲಿತ. ಅನಂತರದ್ದು ಇಲ್ಲಿ ಹೇಳಿಕೊಂಡದ್ದು, ತೋಡಿಕಾನ - ಪಟ್ಟಿಮಲೆ. ಆಯ್ದ ವಾಹನಗಳಷ್ಟೇ ಸಂಚರಿಸುವ, ಸಾಕಷ್ಟು ಬೆವರು ಹರಿಸಿದರಷ್ಟೇ ಉತ್ತರಿಸಬಹುದಾದ ಸವಾಲು. ಸರಣಿಯಲ್ಲಿ ಕೊನೆಯದು, ಇನ್ನೂ ಕಠಿಣವಾದ ಸವಾಲು, ಯಾರೂ ಬಳಸದ ದಾರಿ, ಅಸಾಧ್ಯವನ್ನೇ ಸಾಧ್ಯಮಾಡಿ ತೋರುವ ಉತ್ಸಾಹದಲ್ಲಿ ಹುಡುಕಿದವರಿಗೆ ಕಾಣಿಸಿದ್ದೇ... [ಅಹ್ಹಾ! ಮುಂದಿನ ಕಂತಿನಲ್ಲಿ ಕಾಣಿಸುತ್ತೇನೆ]
ನಮ್ಮ ಏಳುಬೀಳುಗಳೇನೇ ಇರಲಿ, ಕಥನದುದ್ದಕ್ಕೆ ಇಳಿದಾರಿಯಲ್ಲೇ ಬಂದ ನಿಮ್ಮ ಅಭಿಪ್ರಾಯಗಳು ಇಲ್ಲೇ ಇರುವ ಪ್ರತಿಕ್ರಿಯಾ ತಗ್ಗಿಗೆ ಬೀಳುವುದು ಅವಶ್ಯ.

7 comments:

  1. ಪಂಡಿತಾರಾಧ್ಯ19 October, 2012 19:39

    ‘ಬಡವಾ ಚಟ್ ಊಟಕ್ಕೆ = budget meals - ಅಶೋಕ ಖಾನಾವಳಿ- 10 ಕಿಮೀ’,‘ತಿಗಣೆ ಸೊಳ್ಳೆಗಳಿಗೆ ಹೆಸರಾಂತ - ಅಭಯ ವಿರಾಮದ ಮನೆ 5 ಕಿಮೀ’ ,
    Piousವಿನಿ,ರಾಂಪಣ್ಣ,ಬಜ್ಜಿ ಆವೇ ಸ್ಕೂಟರ್?,
    ಬೋಲೋ ಭಾರತ್ ಗೋತಾ ಕೀ ಜೈ! ಟಾನಿಕ್ ನಂತೆ ಒದಗಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.
    ಪಂಡಿತ

    ReplyDelete
  2. ಆ ಕಾಲಘಟ್ಟಕ್ಕೆ ಮತ್ತೊಮ್ಮೆ ಕರಿದು ಕೊಂಡು ಹೋದದದ್ದಖ್ಖೆ ಧನ್ಯವಾದಗಳು. ಈಗ ಅದು ಹೇಗುಂಟೋ ಏನೋ!
    ನಾರಾಯಣ ಯಾಜಿ

    ReplyDelete
  3. "ತೀವ್ರ ಏರು ಅಥವಾ ಇಳುಕಲುಗಳಲ್ಲಿ ಬೀಳಲು ಇಬ್ಬರಿಗಿಂತ ಒಬ್ಬರು ಲೇಸು." - ಇದು "ಶೆರಿ" ಮಾತು. ಇನ್ನೊಬ್ಬನ ಕುತ್ತಿಗೆ ಮುರಿಯಲು ನಮಗೆ ಅಧಿಕಾರ ಇಲ್ಲ. ನನ್ನ ಕೈಕಾಲಿನ, ಬೈಕಿನ ಮತ್ತು ಜೀಪಿನ ಎಲ್ಲಾ ಸಾಹಸಯಾತ್ರೆಗಳು ಏಕಾಂಗಿಯಾಗಿಯೇ! ನಾನೊಬ್ಬ "ಅಕೇಲಾ" ಆಗಿದ್ದ ಗತ ಕಾಲದ ನೆನಪು ಬಂತು. ಪ್ರೀತಿಯಿಂದ - ಪೆಜತ್ತಾಯ ಎಸ್. ಎಮ್.

    ReplyDelete
  4. ನಾನೂ ಒಮ್ಮೆ ಅರಂತೋಡಲ್ಲಿ ಬಸ್ಸಿಳಿದು ತೋಡಿಕಾನ ಮಾರ್ಗವಾಗಿ ಕರಿಕೆ ತಲುಪಿ, ಭಾಗಮಂಡಲ ತಲುಪಿದ್ದೆ, ನಡೆದುಕೊಂಡೇ. ಹಿಂದೆ ಬರುವಾಗ, ಬಸ್ಸಿಡಿದು ಮಡಿಕೇರಿಕಾಗಿ ಹಿಂದೆ ಬಂದೆ. ನಿಮ್ಮ ವಿವರಣೆ ಅದ್ಭುತ. ನಿಮ್ಮಿಂದ ತರಬೇತಿ ಪಡೆದು ನಡೆಯಬೇಕಿತ್ತು ಅಂತ ಈಗ ಅನ್ನಿಸುತ್ತಿದೆ. ತುಂಬ ತಡವಾಯಿತು.

    ReplyDelete
  5. ಈ ಯಾನದಲ್ಲಿ ನಾನು ಸೇರಿಕೊಂಡ ನೆನಪು ಇದ್ದದ್ದರಿಂದ ಪುಟ ತೆರೆದೆ, ಮರ್ಯಾದೆ ಕೊಟ್ಟದ್ದನ್ನು ಗಮನಿಸಿ ಮುಂದುವರಿದು, ಜಾರು ದಾರಿಯಲ್ಲಿ ಬೈಕ್ ಬಿದ್ದದ್ದು, ಎದ್ದದ್ದು ಎಲ್ಲ ಓದಿ ಮುದಗೊಂಡೆ.

    ReplyDelete
  6. 2009ರಲ್ಲಿ ಯೂತ್ ಹಾಸ್ಟೆಲ್ ಗಂಗೋತ್ರಿಯ ಕಡೆಯಿಂದ ಈ ದಾರಿಯಲ್ಲಿ ಚಾರಣ ಮಾಡಿದ್ದೆವು.ಮತ್ಸ್ಯ ತೀರ್ಥ ನೋಡಿಕೊಂಡು ದೇವರ ಗುಂಡಿ ಜಲಪಾತವನ್ನೂ ವೀಕ್ಷಿಸಿ ಮನನ ನೀವು ಹೇಳಿದ ದರಿಯಲ್ಲೇ ಚಾರಣ ಮಾಡಿದ್ದೆವು. ಆಗ ಕೂಡಾ ನೀವು ಹೇಳಿದ ಪರಿಸ್ಥಿಯೇ ಇತ್ತು. ಬೈಕ್ ಸವಾರರೊಬ್ಬರ ಸಾಹಸ ನೋಡಿ ನಮಗೇ ಅಬ್ಬಾ ಅನಿಸಿತ್ತು.ಸಾಕಷ್ಟು ಇಂಬಳಗಳಿಂದಲೂ ಕಚ್ಚಿಸಿ ಕೊಂಡು ರಕ್ತದಾನ ಮಾಡಿದ್ದೆವು.ನಿಮ್ಮ ಲೇಖನ ಓದಿ ಅದೆಲ್ಲಾ ನೆನಪಾಯಿತು.- ಜಯಲಕ್ಷ್ಮಿ ರಾವ್

    ReplyDelete