ಯೋಜನಾವಧಿಯಲ್ಲಿ ನೆನಪಿನ ಬೆರಗಿಗೆ (ನನ್ನದೇ) ಪುಸ್ತಕದಂಗಡಿಯಲ್ಲಿ ನಿಜದ ದಾರಿ ಹುಡುಕುತ್ತ ಸುಮಾರು ಭೂಪಟ, ಪ್ರವಾಸ ಕಥನದ ಪುಸ್ತಕಗಳನ್ನು ಮಗುಚಿ ಹಾಕಿದ್ದೆ. ಇಪ್ಪತ್ನಾಲ್ಕು ವರ್ಷದ ಮೇಲೂ ದೂದ್‌ಸಾಗರ್ ಬಳಿ ರೈಲ್ವೇ ಹಳಿ ಮಾತ್ರ ಕಾಣುತ್ತಿತ್ತು. ಅಸ್ಪಷ್ಟ ದಾರಿ ಸೂಚಕ ಗೀಟುಗಳು ದಕ್ಷಿಣದಲ್ಲಿ ಕಾಲೆಮ್‌ವರೆಗೂ ಉತ್ತರದಲ್ಲಿ ಕೊಲೆನ್‌ವರೆಗೂ ಹರಿದಿತ್ತು. ನಮಗೆ ಮತ್ತೆ ಬೈಕ್ ಬಿಟ್ಟು ರೈಲೇರಲು ಮನಸ್ಸಿರಲಿಲ್ಲ. ಮುಂದೇನು ಎಂಬ ನನ್ನ ಯೋಚನೆಗೆ ಭಂಗ ಬರುವಂತೆ ಒಂದು ಗಿರಾಕಿ, ಕೃಷಿ ಪುಸ್ತಕ ಕೇಳಿ ಬಂದರು. One straw revolution ಕೊಟ್ಟೆ. ಆತ ನಸುನಕ್ಕು “ಇದು ನಮ್ಮ ಗೋವಾದ್ದೇ ಪ್ರಕಟಣೆ” ಎನ್ನಬೇಕೇ. ನಾನು ಗಿರಾಕಿ ಮರೆತು, ಅವರಲ್ಲಿ ಗೋವಾ ಮಾಹಿತಿದಾರ ಎಂ.ವಿ ಹೆಗಡೆಯವರನ್ನು ಕಂಡುಕೊಂಡೆ! ಕೊಲೆನ್ನಿನಲ್ಲೇ ಕೃಷಿ ನಡೆಸಿದ್ದ ಹೆಗಡೆಯವರು ದಾರಿ ವಿವರ ಮತ್ತು ಸ್ವತಃ ಸಹಾಯ ಮಾಡಬಲ್ಲೊಬ್ಬ ಮಿತ್ರನಿಗೆ ಪತ್ರವನ್ನೂ ಕೊಟ್ಟರು. ಹಾಗೆ ರೂಪಿಸಿದ್ದ ಯೋಜನೆ ಮರುದಿನಕ್ಕಿತ್ತು. ಮೊದಲ ದಿನ ರೈಲು ಯಾನದ ಅನಿಶ್ಚಿತತೆಗೇ ಮೀಸಲು. ಅರ್ಧ ದಿನವೇ ಉಳಿದಿದ್ದುದರಿಂದ ಮೊದಲು ಆರಾಮವಾಗಿ ನಮ್ಮ ಮತ್ತು ಬೈಕ್‌ಗಳ ಹೊಟ್ಟೆಗೆ ಆಹಾರ ಹಾಕಿದೆವು.
ತೀರ್ಥಕ್ಷೇತ್ರಗಳ ಗೋವಾದಲ್ಲೂ ನಮಗೆ ಆಸಕ್ತಿಯಿರಲಿಲ್ಲ. ಮಹಾಲಸಾ ಮಂದಿರ, ಲೇಡಿ ಆಫ್ ಮಿರಾಕಲ್ಸ್ ಇಗರ್ಜಿ ಮೊದಲಾದವು ನಾವು ಮತ್ತೆ ನೋಡುವ ಕುತೂಹಲವೇನೂ ಉಳಿಸಿಕೊಂಡಿರಲಿಲ್ಲ. ಮಂಗಳೂರಿನದೇ ಕಡಲು ಗೋವಾದಲ್ಲೂ ಇತ್ತು. ಆಳ, ಸೆಳೆತಗಳ ವಿಚಾರದಲ್ಲಿ ಗೋವಾ ಹೆಚ್ಚು ಜನಸ್ನೇಹೀಯಾಗಿದ್ದರೂ ನಮಗೆ ಬೇಕಿರಲಿಲ್ಲ. ಅದರಲ್ಲೂ ಮಳೆಗಾಲದ ಕೆಸರು ಕಲಕಿದ ನೀರಿನಲ್ಲಿ ಹೊರಳಿ ‘ಎಂಜಾಯ್’ ಮಾಡುವ ಭ್ರಮೆ ಖಂಡಿತಾ ಇರಲಿಲ್ಲ. ಹಾಗಾಗಿ ಕೊಲ್ವಾ, ಕಲ್ಲಾಂಗೂಟೇ ಮೊದಲಾದವುಗಳ ದಾರಿಯೂ ನಮ್ಮ ವಿಚಾರಣೆಯ ಪಟ್ಟಿಯಲ್ಲಿ ಸ್ಥಳಪಡೆಯಲಿಲ್ಲ. ಸಣ್ಣ ವಿಹಾರ, ಸರಳ ವಾಸಾನುಕೂಲವಷ್ಟೇ ಗುರಿಯಾಗಿಟ್ಟುಕೊಂಡು ಪೋಂಡಾ ದಾರಿ ಹಿಡಿಯಿತು ನಮ್ಮ ತ್ರಿವಳಿ ಹೀರೋ(ಹೊಂಡಾ)ಗಳ ಗುಂಪು. ದಾರಿಯುದ್ದಕ್ಕೂ (ಮರೀಬೇಡಿ ೧೯೯೭ರ) ಮಂಗಳೂರೂ ನಾಚುವ ಹೊಂಡಗಳು. ಅವುಗಳ ಅಂಚಿನಲ್ಲಿ ತುಳುಕುವಂತೆ ಕೆನ್ನೀರ ಪೂರೈಕೆ ಸ್ಥಳೀಯ ಆಡಳಿತಗಳು ಚೆನ್ನಾಗಿಯೇ ಮಾಡಿದ್ದವು. ರಂಗು ಕಡಿಮೆಯಾಗದಂತೆ ಅಲ್ಲಲ್ಲಿ ಕೆಮ್ಮಣ್ಣು ಎರಚಿ, ಬಸ್ಸ್ ಲಾರಿಯಾದಿ ಚಕ್ರಗಳಲ್ಲಿ ಗೊಟಾಯಿಸಿಟ್ಟದ್ದು, ಅದು ಪರಿಸರವನ್ನೆಲ್ಲಾ ವರ್ಣಮಯ ಮಾಡಿದ್ದಿರಬೇಕು (ಪ್ರವಾಸೋದ್ಯಮದ ಅಂಗ ಇರಬಹುದೇ?) ಅಂದುಕೊಂಡೆವು. ಅಥವಾ ಅಪ್ಪಟ ಸುಣ್ಣ ಕಾಚಿನ ತಾಂಬೂಲ ಜಗಿದುಗಿದದ್ದಿರಬಹುದೇ ಎಂದು ಹೇಸಿದೆವು. ಸಿಡಿದ ಭೂಮಿಯ ಒಡಲಲ್ಲೂ ಕೆಂಪು ರಕ್ತವೇ ಎಂದು ಭಯಪಟ್ಟೆವು. ದಾರಿ ಬದಿಯ ಗೋವಾದಲ್ಲಿ ಹಳತನ ಮತ್ತು ಬಡತನದ ರೇಖೆಗಳು ಇನ್ನೂ ಢಾಳು. ಒಣ ಡೌಲಿನ ರೇಖೆಗಳು ತೆಳು. ಹೊಂಡವಿಲ್ಲದ ದಾರಿಚೂರುಗಳಲ್ಲಿ ಹೊಸ ಡಾಮರಿನ ಕುರುಹು ಸಿಕ್ಕಂತೆ ಅಲ್ಲೊಂದು ಇಲ್ಲೊಂದು ವಿಚಿತ್ರ ವಿನ್ಯಾಸಗಳ ಭಾರೀ ರಚನೆಗಳು ಅಪೂರ್ಣವಾಗಿ ಕಾಣುತ್ತಿದ್ದವು. [ಎರಡು ವರ್ಷಗಳ ಹಿಂದೆ, ಅಭಯನ ‘ಗುಬ್ಬಚ್ಚಿಗಳು’ ಲೆಕ್ಕದಲ್ಲಿ ಚಿತ್ರೋತ್ಸವಕ್ಕೆ ಹೋದಾಗ ಕಂಡ ಗೋವಾ ಮಾಯಾನಗರಿ!] ಅವುಗಳ ತೆಕ್ಕೆಯಿಂದಲೇ ಖಾಲಿ ಕೊಡ, ಕೊಡೆ ಹಿಡಿದು ಹೊರಟವರನ್ನು ಕಾಣುವಾಗ ಮಳೆಗಾಲವೆನ್ನುವ ವ್ಯಂಗ್ಯ ಕಾಡಿತು. ಪ್ರಾಥಮಿಕ ಆವಶ್ಯಕತೆಗಳ ಕೊಡ ಖಾಲಿಯಿಟ್ಟು ಜಗತ್ತಿಗೆ ವರ್ಣಮಯ ಕೊಡೆಯರಳಿಸುವ ಅಲ್ಲಿನ ಪ್ರವಾಸೋದ್ಯಮ ಮತ್ತಂತದ್ದು ನಮ್ಮ ತಣ್ಣೀರು ಭಾವಿಗೋ ಉಳ್ಳಾಲಕ್ಕೋ ಬೇಕೇ? ಮಳೆಗಾಲ ಪ್ರವಾಸಿಗರನ್ನು ಕಡಿಮೆ ಮಾಡಿರಬೇಕು, ಸಾರ್ವಜನಿಕ ರಜೆ ಊರವರನ್ನೂ ಒಳಗಿಟ್ಟಿರಬೇಕು - ವಾಹನ ಸಂಚಾರ ವಿಶೇಷವಿಲ್ಲದೆ ನಾವು ಆರಾಮವಾಗಿಯೇ ಪೋಂಡ ತಲಪಿದೆವು. ಶಾಂತಾದುರ್ಗ ಮತ್ತು ರಾಮನಾಥ ಅಲ್ಲಿನ ಸುಪ್ರಸಿದ್ಧ ದೇವಾಲಯಗಳು.
ಮೊದಲೇ ಹೇಳಿದಂತೆ ನಮ್ಮ ಗುರಿ ದೇವರಲ್ಲದಿರಬಹುದು (‘ದೇವಸೃಷ್ಟಿ’ ಮಾತ್ರ!). ಆದರೆ ಸಾಂಕೇತಿಕ ದೇವರ ಸುತ್ತ ಇರುವ ಕಲೆ, ಸಾಹಿತ್ಯ, ಸಾಮಾಜಿಕ ಬಂಧಗಳೆಲ್ಲವನ್ನೂ ಪ್ರೀತಿಯಿಂದಲೇ ಕಾಣುವವರು. ಇಲ್ಲಿ ರಾಮನಾಥ ದೇವಳ ಮುಖ್ಯವಾಗಿ ಕೊಂಕಣಿ ವಿಶ್ವಾಸಿಗಳಿಗೆ ಪವಿತ್ರವಾದದ್ದು ಮತ್ತು ಸಹಜವಾಗಿ ಭಕ್ತಾದಿಗಳಿಗೆ ಸಾಕಷ್ಟು ನಾಗರಿಕ ಸೌಲಭ್ಯಗಳನ್ನು ಒದಗಿಸುತ್ತದೆ. ನಾವು ಗೆಳೆಯ ನರೇಂದ್ರ ನಾಯಕರ (ಈತ ವೃತ್ತಿಯಲ್ಲಿ ಸಾಗಣೆದಾರ, ಖ್ಯಾತ ‘ಪವಾಡಪುರುಷ’ ಅಲ್ಲ!) ಸಹಯೋಗವಿದ್ದುದರಿಂದ ರಾತ್ರಿ ವಾಸಕ್ಕೆ ಅದನ್ನೇ ಆಯ್ದುಕೊಂಡಿದ್ದೆವು. ಅದು ಧಾರ್ಮಿಕ ವಿಶೇಷದ ದಿನಗಳಲ್ಲವಾದ್ದರಿಂದ ಅಲ್ಲಿನ ಅತಿಥಿಗೃಹ ಖಾಲಿಯೇ ಇತ್ತು ಮತ್ತು ವಠಾರ ಶಾಂತವಾಗಿತ್ತು. ಹೊರೆ ಇಳಿಸಿ, ಸಮಯ ಕಳೆಯಲು ಪಣಜಿ ದಾರಿ ಹಿಡಿದೆವು.
ದಾರಿ ವಿಸ್ತಾರವೂ ಹೊಸದಾಗಿ ಡಾಮರು ಕಂಡದ್ದೂ ಆಗಿತ್ತು. ಆದರೆ ಪೇಟೆ ವಲಯಗಳನ್ನು ಪ್ರವೇಶಿಸಿದಲ್ಲೆಲ್ಲ ಅನಿವಾರ್ಯವೆಂಬಂತೆ ಸಪುರವಾಗುತ್ತಿತ್ತು. ಹಳೇ ಮನೆ, ಪಾಗಾರ ಅರ್ಥವಾಗುವಂತವು. ಆದರೆ ಹೊಸ ಕಟ್ಟಡಗಳೂ ದಾರಿಯ ಅಂಚಲ್ಲೇ ಅಡಿಪಾಯ ಹಾಕಿದಂತಿರುವುದನ್ನು ನೋಡಿದಾಗ ಅನಿಸಿತು, ಇಲ್ಲೂ ಸರಕಾರದ ಏಕೈಕ ಯಶಸ್ವೀ ಯೋಜನೆ ‘ಅಕ್ರಮ ಸಕ್ರಮ!’ ಇಲ್ಲೆಲ್ಲ ಪುಟ್ಟಪಥ ಬಿಡಿ, ಮಳೆನೀರ ಚರಂಡಿಗೂ ಪ್ರತ್ಯೇಕ ಅವಕಾಶವಿಲ್ಲ. ದಾರಿಯೆಲ್ಲಾ ಅಡ್ಡಾತಿಡ್ಡ ಹರಿಯುವ ಕೊಳಕು ನೀರು, ಅಷ್ಟೇ ಅಶಿಸ್ತಿನಿಂದ ತಿರುಗಾಡುವ ಜನ; ಕೊಳೆ-ಜಲಕ್ರೀಡೆ ಸಾರೋದ್ಧಾರ! ತೀರ್ಥಕ್ಷೇತ್ರದ ಅಮಲಿನಲ್ಲಿ ಎಲ್ಲಾ ನಮೂನೆಯ ಕೊಳಚೆ ಸೇರಿದ ಗಂಗಾನದಿ ಕಾಶಿಯಲ್ಲಿ ತೀರ್ಥವಾಗಿ, ಭಕ್ತಿ-ಪ್ರವಾಸದ ಕೇಂದ್ರವೇ ಆಗುಳಿದಿದೆ. ಹಾಗೇ ಗೋವಾದಲ್ಲಿ ರಸ್ತೆಯ ಕೊಳಚೆ ಎರಚಾಟ ಹೋಳಿಯಾಗಿ ಕಾಣಿಸುವ, ಪ್ರವಾಸೋದ್ಯಮದ ಸವಲತ್ತೇ ಆಗಿ ಕಾಣುವುದಿರಬಹುದೇ? ನಮ್ಮೆಲ್ಲರ ‘ಪ್ರತಿನಿಧಿ’ಗಳಾಗಿ ಪ್ರಜಾಸತ್ತೆಯ ಪವಿತ್ರ ‘ದೇವಾಲಯ’ಗಳಲ್ಲೇ ಕುಳಿತ ಗಣ್ಯರು ನಡೆಸುವ ಕೆಸರೆರಚಾಟವನ್ನು ಮನರಂಜನೆಯಾಗಿ ಸ್ವೀಕರಿಸಿರುವ ನಮಗೆ (ಯಥಾರಾಜ ತಥಾ ಪ್ರಜಾ) ವಾಸ್ತವದಲ್ಲೂ ಅಭಿವೃದ್ಧಿಯ ಕೆಸರು ಅಪ್ಯಾಯಮಾನವಾಗುತ್ತಿರಬೇಕು. ಮಹಾ ಪೇಟೆಗಳಲ್ಲಿ ಬದಲಿ ಮಾರ್ಗದ ಅನುಕೂಲಗಳಿದ್ದಲ್ಲೆಲ್ಲ ‘ಏಕಮುಖ’ ಸಂಚಾರದ ಬೋರ್ಡುಗಳನ್ನು ಕಂಡಿದ್ದೇವೆ. ಅಂಥಲ್ಲಿ ನಮಗೆಲ್ಲೂ ಕಾನೂನು ಭಂಜಕ ಎದುರು ಸವಾರರು ಸಿಗದಿದ್ದುದು ನಮ್ಮ ಅದೃಷ್ಟವೋ ಪರಿಸ್ಥಿತಿ ತಂದ ಅನಿವಾರ್ಯತೆಯೋ ಎಂಬ ಬೆರಗಷ್ಟೇ ಉಳಿಯಿತು. ಇಲ್ಲವಾದರೂ ಉಡುಪಿ - ಮಂಗಳೂರ ನಡುವಣ ಎಕ್ಸ್‌ಪ್ರೆಸ್ ಬಸ್ಸುಗಳ ಭರಾಟೆಯ ನಡುವೆ ಬದುಕುಳಿದ ನಮಗೆ ಗೋವಾದ ದಡ್ಡ ಬಸ್ಸುಗಳು, ವಿಹಾರೀ ವಾಹನಗಳು ಆತಂಕವನ್ನೇನೂ ಉಂಟುಮಾಡಲಿಲ್ಲ. ಕೊನೆಯ ಹಂತದಲ್ಲಿ ಜುವಾರಿ ನದಿಯ ದಕ್ಷಿಣ ದಂಡೆಯ ಉದ್ದಕ್ಕೆ ಸುಮಾರು ಆರು ಕಿಮೀ ಅಕ್ಷರಶಃ ಲಗಾಮು ಕಳಚಿದ ವಿಹಾರವೇ ಆಗಿತ್ತು. ಹೆಚ್ಚು ಕಡಿಮೆ ನೀರ ಸಮಮಟ್ಟದ ಓಟ, ಮುಂಬೈ ಮಾರ್ಗದ ಭಾರೀ ಮೇಲು ಸೇತುವೆಯ ಮಾಟ, ಆಚೆಗೆ ಕಡಲಿನ ಬೇಟ, ಸುಂದರ ನೋಟಗಳ ಕೂಟ.
ಕೇರಳದ ಹಳ್ಳಿಮೂಲೆಗಳಲ್ಲೂ ಗುದ್ದು ಚೆಂಡು (ವಾಲೀ ಬಾಲ್!), ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ದಾಂಡು ಚೆಂಡಾದರೆ ಗೋವಾದಲ್ಲಿ ಓಣಿ, ಮೈದಾನಗಳಲ್ಲೂ ಕಾಲ್ಚೆಂಡೊಂದೇ ಆಟ. (ಕಾಲ್ಚೆಂಡಿನ ರಾಷ್ಟ್ರಪ್ರಶಸ್ತಿ ತಂಡ - ಸಲ್ಗಾಂವ್ಕರ್, ಗೋವೆಯದ್ದು. ಭಾರತದ ಅತ್ಯಂತ ಪುಟ್ಟ ರಾಜ್ಯವಾದ ಗೋವಾ ಹೆಸರಾಂತ ಕಾಲ್ಚೆಂಡು ತಂಡಗಳ ಸಂಖ್ಯೆಯಲ್ಲಿ ಪಶ್ಚಿಮ ಬಂಗಾಳಕ್ಕೆ ಮಾತ್ರ ಎರಡನೆಯದು!) ಕಳಚಿದ ಮೆಟ್ಟೋ ಶಾಲಾ ಪುಸ್ತಕಗಳ ಕಟ್ಟೋ ಗೋಲಿನ ಕಟ್ಟೆಯಾಗಿಟ್ಟು ಹತ್ತೆಂಟು ಮಂದಿ ಒಂದು ಚೆಂಡನ್ನು ಕಾಲಿನಲ್ಲಿ ಒದ್ದಾಡಿಸುವುದು ಬಲು ಮೋಜಿನ ದೃಶ್ಯ. ಪಣಜಿಯಲ್ಲಿ ಜುವಾರಿ ನದಿಯ ಸಾಗರಸಂಗಮದ ಪರಿಸರವೇ ಮಿರಮಿರ್ ಕಿನಾರೆ. ಅಲ್ಲೂ ನಾಕು ಮುರುಕು ಕಡ್ಡಿ ಮರಳಿನ ಹಾಸಿನಲ್ಲಿ ಕುತ್ತಿ, ಚೆಂಡಿನ ಮೇಲಿನ ಹುರುಡು ಹತ್ತೆಂಟು ಗುಂಪುಗಳಲ್ಲಿ ನಡೆದಿತ್ತು. ಪುಣ್ಯಕ್ಕೆ ಇಲ್ಲಿ ಗಡಿ ಗಲಾಟೆ, ಶಿಸ್ತು ಸಂಹಿತೆಗಳ ಬಿಗಿತವೇನೂ ಇಲ್ಲವಾದ್ದರಿಂದ ಪ್ರೇಕ್ಷಕರೂ ಕಿನಾರೆಯ ದೃಶ್ಯ ಬಯಸಿ ಬರುವ ವೀಕ್ಷಕರೂ ಕಡಲ ಮೋಜಿನ ಕನಿಷ್ಠ ಉಡುಪಿನವರೂ ಕಡಲೆ ಕಾಟದವರೂ ಬುಗ್ಗೆ ಹಾರಿಸುವವರೂ ಒಂಟೆ ಸವಾರಿಯವರೂ ಇನ್ನೂ ಏನೇನೇನೋ ಹಾಸುಹೊಕ್ಕಾಗಿ ಬೆರೆತುಹೋಗಿತ್ತು. ಢಿಕ್ಕಿ, ಒತ್ತಗಳನ್ನು ತಪ್ಪಿಸಿಕೊಂಡು ಮುಂದುವರಿದರೆ ಸುವಿಸ್ತಾರ ಹೆಚ್ಚು ಕಡಿಮೆ ಮಟ್ಟಸ ಮರಳ ಹಾಸು, ಅದರಿಂದ ತುಸುವೇ ತಗ್ಗಿದಂತೆ ಕಡಲು. ಅಲ್ಲೂ ಬಲು ದೂರದವರೆಗೆ ತಳ ಮಟ್ಟಸವಾಗಿದ್ದು, ಮೊಳಕಾಲಾಳದ ನೀರು (ಇಲ್ಲಿ ಗಾದೆ ನಂಬಿ ಮುಂದುವರಿದವರೆಲ್ಲಾ ಪಾಪಿಗಳೇ!), ಮಳೆಗಾಲದ ಯಾವ ಉದ್ವೇಗವೂ ಇಲ್ಲದ ತೆರೆಗಳು ಯಾರನ್ನೂ ಮರುಳು ಮಾಡುವುದು ಸುಳ್ಳಲ್ಲ. ಆದರೆ ನೀರಬಣ್ಣಕ್ಕೆ ಬರಿದೇ ಮಳೆಗಾಲವನ್ನು ದೋಷಿಯಾಗಿಸುವುದೋ ಚೋಟುದ್ದ ಮನುಷ್ಯನದೇ ಅಭಿವೃದ್ಧಿ ಕಾರ್ಯಗಳ ಸೂಚ್ಯಂಕ ಎನ್ನುವುದೋ ಎಂಬ ಗೊಂದಲ ಬಿಟ್ಟದ್ದಲ್ಲ. ನಾವು ನೀರಿಗಿಳಿಯಲಿಲ್ಲ. ಸೂರ್ಯ ಕಂತುವುದರಲ್ಲಿದ್ದಿರಬೇಕು. ಮೋಡದಿಂದ ಬೆಳಕು ಇಳಿಮುಖವಾಗಿದ್ದರೂ ನಮ್ಮ ದೃಷ್ಟಿಯ ಹರಹಿನಲ್ಲಿ ಹತ್ತಿಪ್ಪತ್ತು ವಿಭಿನ್ನ ಗುಂಪುಗಳು ನೀರಾಟ ಮುಂದುವರಿಸಿಯೇ ಇದ್ದವು. ಅವುಗಳಲ್ಲೂ ಮೊದಲ ನೋಟಕ್ಕೆ ನಮ್ಮ ಗಮನ ಸೆಳೆದದ್ದು ನಾಲ್ಕು ಕುಡುಕರ ತಂಡ; ಜನಪ್ರಿಯ ಗೋವಾ ಪ್ರವಾಸದ ನಿಜ ಪ್ರತಿನಿಧಿಗಳು! ಎಲ್ಲ ಗುಂಡಿನ ಗಮ್ಮತ್ತಿನಲ್ಲೇ ಇದ್ದರೂ ಒಬ್ಬ ವಿಪರೀತದಲ್ಲಿದ್ದ. ಆತನ ಕಿವಿ, ಮೂಗು, ಬಾಯಿಗೆ ಎಷ್ಟೂ ಮರಳು, ಉಪ್ಪು ನೀರು ಸೇರಿರಬಹುದು. ಆತ ಬಿದ್ದ, ಉರುಳಿದ ಆಘಾತಗಳಲ್ಲಿ ಕೈಕಾಲು ಮುರಿದುಕೊಳ್ಳದಂತಿದ್ದದ್ದು ನಿಜಕ್ಕೂ ಆಶ್ಚರ್ಯಕರ. ಆದರೆ ಮರುದಿನ(ಕ್ಕೆ ಆತ ಉಳಿದರೆ,) ಆತನ ಅಸಲು ಬುದ್ಧಿ ಜಾಗೃತವಾದಾಗ, ಹಿಂದಿನ ದಿನ ಪಡೆದ ಮೂಕಪೆಟ್ಟುಗಳ ನೋವು ಸಹಿಸಲು ಮತ್ತೆ ಹೊಸ ಬಾಟಲುಗಳನ್ನು ಖಾಲಿ ಮಾಡುವುದಂತೂ ಖಂಡಿತ. ಆ ನಾಲ್ವರ ಭಾಷೆ (ಮರಾಠಿ?) ತಿಳಿಯದ ದುರದೃಷ್ಟದಿಂದ ನಮ್ಮ ಅವಾಚ್ಯ ಪದಕೋಶ ತುಂಬಾ ಬಡವಾಯ್ತು! ಅನಿಷ್ಟ ಚತುಷ್ಟಯ ಅನಿಯಂತ್ರಿತ ಮೇಲಾಟದಲ್ಲಿ ಪರಸ್ಪರ ಬನಿಯನ್ನು ಹರಿದುಕೊಂಡು, ಇನ್ನೇನು ಏಕವಸ್ತ್ರದ ಸೌಭಾಗ್ಯವನ್ನೂ ಕಳಚಿಕೊಳ್ಳುತ್ತದೆ ಎನ್ನುವಾಗ ಮಳೆ ಬಂತು. ಮೂಗು ಮುಳುಗಿಸಿ ನೀರು ಕುಡಿದೇ ಹೆಣ ಬೀಳುವುದನ್ನೋ ಕೈಕಾಲು ಮುರಿದವರನ್ನು ಹೊರಲು ಧಾವಿಸುವ ಚಟ್ಟವನ್ನೋ (ಸ್ಟ್ರೆಚ್ಚರ್ರು) ಕನಿಷ್ಠ ವಿಕೃತ ದಿಗಂಬರತ್ವವನ್ನೋ ಸಾರ್ವಜನಿಕ ವೀಕ್ಷಣೆಯಿಂದ ತಪ್ಪಿಸಿತು ಮಳೆ. ವಾಸ್ತವದಲ್ಲಿ ದಿನಮಣಿಯನ್ನೇ ಮರೆಮಾಡಿದ್ದ ಮೋಡಗಳದು ಆ ಹಗಲಿಗೆ ಕೊನೆಯ ಮಾತಾಯ್ತು. ನಾವೇನೋ ಮಳೆಕೋಟುಗಳಿಂದ ಸಜ್ಜಿತರು, ನಿಧಾನ ಹೆಜ್ಜೆ ಹಾಕಿದೆವು. ತಮಾಷೆ ಎಂದರೆ ಅಷ್ಟು ಹೊತ್ತೂ ನೀರಿನಲ್ಲೇ ಹೊರಳುತ್ತಿದ್ದ ಮಂದೆ ತಾರದ ಕೊಡೆ, ಬರಬಹುದಾದ ಶೀತಜ್ವರಕ್ಕೆ ಭಯಪಟ್ಟಂತೆ ತಲೆಯ ಮೇಲೆ ಕೈ ಹೊತ್ತು ದಂಡೆಗೆ ದೌಡಾಯಿಸಿದ್ದು! ಹಗ್ಗ ಜಗಿಯುವವನಿಗೆ ಶ್ಯಾವಿಗೆ ಅಜೀರ್ಣವಂತೆ!!
ಬರಿಯ ನೋಟದಿಂದ ಅಂಟಿದ ಅಮಲನ್ನು ಖಾ‘ಮತ್ತ’ದಲ್ಲಿ ಒಳ್ಳೆಯ ಕಾಫಿ ಹಾಕಿ ಇಳಿಸಿ ಪೋಂಡಾಕ್ಕೆ ಮರಳಿದೆವು. ಪೇಟೆಯಲ್ಲಿ ಊಟ ಮುಗಿಸಿ ಅತಿಥಿಗೃಹ ಸೇರಿಕೊಂಡೆವು. ಮಂದಿರದಲ್ಲಿ ರಾಮನಾಥನಿಗೆ ಯಾರದೋ ವಿಶೇಷ ಹರಕೆಯ ಪೂಜೆ ನಡೆದಿತ್ತು. ದೊಡ್ಡ ಖಾಲಿ ಭವನವನ್ನು ತುಂಬಿ ಉಕ್ಕುತ್ತ, ಪರಿಸರದ ಮೌನ ಭಿತ್ತಿಯಲ್ಲಿ ವಿಲಂಬಿತ ಗತಿಯ ರಾಗಾಲಾಪಗಳ ಚಿತ್ರ ಮೂಡಿಸುತ್ತಿದ್ದ ಶಹನಾಯ್, ಟಾಸೆಯ ಮೇಳ ನಮ್ಮನ್ನು ಕೋಣೆಯಲ್ಲೇ ಕೂರಲು ಬಿಡಲಿಲ್ಲ. ಅದು ಮುಗಿಯುತ್ತಿದ್ದಂತೆ ವಠಾರದ ಇನ್ನೊಂದು ಪುಟ್ಟ ಗುಡಿಯಲ್ಲಿ ಯಾರೋ ಆವೇಶದ ಭಜನೆಗಿಳಿದರು. ಎಲ್ಲೋ ತಾರದ ಗಡಿಯಲ್ಲಿ ಗಂಟಲು ಹರಿದುಕೊಳ್ಳುತ್ತಾ ಭೀಕರವಾಗಿ ಕೈ ತಟ್ಟುತ್ತಾ ಹಾರ್ಮೋನಿಯಂ ಹರಿಯುತ್ತಾ ತಬಲಾ ಒಡೆಯುತ್ತಾ ಭಕ್ತಿ, ಬೆವರು ಸಿಡಿಸತೊಡಗಿದರು. ನಾವು ಹರಿಕೆದಾರರು ಕೊಡಿಸಿದ ತಿನ್ನುವ ಪ್ರಸಾದಗಳಷ್ಟನ್ನೂ ಭುಕ್ತಿಪ್ರೀತಿಯಿಂದ ಸ್ವೀಕರಿಸಿ, ಕಿವಿಯಲ್ಲಿ ಷಹನಾಯ್ ಗುಂಜನವನ್ನಷ್ಟೇ ಉಳಿಸಿಕೊಂಡು ಕೋಣೆ ಸೇರಿದೆವು. ಅಪರೂಪದಲ್ಲಿ ಸೊಳ್ಳೆಯ ಹಾಡು, ಒಂದೆರಡು ಬಾರಿ ಪಹರೆಯವನ ಗಂಟಾನಾದ ಬಿಟ್ಟರೆ ರಾತ್ರಿ ಸುಂದರವಾಗಿತ್ತು.
ಮಂದಿರದ ಮಂಗಳವಾದ್ಯದ ಮೊಳಗು, ಸುಬ್ಬುಲಕ್ಷ್ಮಿಯ ಸುಪ್ರಭಾತದ ಸುನಾದ ನಮ್ಮನ್ನೆಬ್ಬಿಸಿದವು. ಬಿಸಿನೀರ ಸ್ನಾನ, ಕ್ಯಾಂಟೀನಿನ ಇಡಲಿಗಳ ಗುದ್ದು, ನಮ್ಮನ್ನು ಏಳು ಗಂಟೆಗೇ ಹುರುಪು ತುಂಬಿ ದಾರಿಗಿಳಿಸಿತು. ರಾಷ್ಟ್ರೀಯ ಹೆದ್ದಾರಿಯದ್ದೇ ಒಂದು ಕವಲು ಪಣಜಿ - ಬೆಳಗಾವಿ ದಾರಿ. ಚೆನ್ನಾದ ಡಾಮರು, ನೇರ ಮತ್ತು ವಿಶೇಷ ಏರಿಲ್ಲದೇ ಅದು ನೇರ ಪಶ್ಚಿಮ ಘಟ್ಟವನ್ನೇ ಗುರಿ ಮಾಡಿ ಓಡಿತ್ತು. ಆದರೆ ಅಗಲ ಮಾತ್ರ ಒಂದು ಓಣಿಯಷ್ಟೇ. ಅದೂ ಮಳೆಮಿಂದು ಏರು ಸೂರ್ಯನ ಪ್ರತಿಫಲನದಲ್ಲಿ ಬಲು ದೀರ್ಘ ಜಾರುಗುಪ್ಪೆಯಂತೇ ಕಾಣುತ್ತಿತ್ತು. ಅಲ್ಲಿ ಪೂರ್ಣ ದಾರಿಯ ಸ್ವಾಮ್ಯ ತಮ್ಮದೇ ಎನ್ನುವಂತೆ ಧಾವಿಸುತ್ತಿದ್ದ ಲಾರಿಗಳು ನಮ್ಮೆದೆ ನಡುಗಿಸಿಬಿಟ್ಟವು. ಎಚ್ಚರ ನಮ್ಮಲ್ಲೇ ಉಳಿಸಿಕೊಂಡು ನಿಧಾನದಲ್ಲೇ ಘಟ್ಟದ ನೇರ ಬುಡದ ಊರು ಮೊಲೆನ್, ಅಲ್ಲಿ ದಕ್ಷಿಣಕ್ಕೆ ಕವಲೊಡೆದು ಡಾಮರು ದಾರಿಯ ಕೊನೆಯ ಊರು ಕೊಲೆಂವರೆಗೂ ಸಾಗಿದೆವು. ದೂದ್ ಸಾಗರಿಗೆ ಮುಂದೇನಿದ್ದರೂ ರೈಲೇ ಗತಿ ಎನ್ನುವ ಊರು.
ಕೊಲೆಂ ಘಟ್ಟ ಇಳಿಯುವ ರೈಲಿಗೆ ಮೊದಲ ನಿಲ್ದಾಣ. ಆದರೆ ಆ ವಲಯದಲ್ಲಿ ಕೆಲವು ವರ್ಷಗಳಿಂದ ನಡೆಯುತ್ತಿದ್ದ ಮೀಟರ್‌ನಿಂದ ಬ್ರಾಡ್ ಗೇಜಿಗೆ ಹಳಿಪರಿವರ್ತನೆಯ ಕೆಲಸ ಇನ್ನೂ ಪೂರ್ಣಗೊಂಡಿರಲಿಲ್ಲ. ಪರೀಕ್ಷಾ ಮಟ್ಟದಲ್ಲಿ ಎಷ್ಟು ಹೊತ್ತಿಗಾದರೂ ಗಾಡಿಗಳ ಓಡಾಟವಿದ್ದರೂ ಅನುಮತಿ ಮತ್ತು ಭರವಸೆ ಯಾರೂ ಕೊಡುತ್ತಿರಲಿಲ್ಲ. ನಮ್ಮೆದುರೇ ಒಂದು ಗೂಡ್ಸ್ ಗಾಡಿ ಘಟ್ಟ ಇಳಿದು ಬಂದದ್ದು ಒಂದು ಗಳಿಗೆ ಸುಧಾರಿಸಿಕೊಳ್ಳುವಂತಿತ್ತು. ಅನಂತರ “ಹೂಂ ದಾರಿ ಅಡ್ಡಿಯಿಲ್ಲ ಹೂಂಽಽಽ” ಎಂಬಂತೆ ಅರಬ್ಬಾಯಿ ಕೊಟ್ಟು ಮಡ್ಗಾಂವ್‌ನತ್ತ ಮುಂದುವರಿಯಿತು. ಇಲ್ಲೇ ಮೊದಲಲ್ಲಿ ಹೇಳಿದ ಹೆಗಡೆಯವರ ಮಿತ್ರರ ಸಹಾಯ ಒದಗಬೇಕಿತ್ತು. ಸಂಪರ್ಕವೇನೋ ಮಾಡಿದೆವು. ಆದರೆ “ಬೇಸಗೆಯಲ್ಲಾದರೆ ಕಾಡಿನೊಳಗಿನ ಜೀಪ್ ದಾರಿ ಸಾಧ್ಯ. ಈಗ ಏನಿದ್ದರೂ ರೈಲೇ ಗತಿ” ಎಂದು ಮುಗಿಸಿಬಿಟ್ಟರು. ಉಳಿದದ್ದು ಹಳಿಯುದ್ದಕ್ಕೆ ನಡಿಗೆ. ಇದು ನಮಗೆ ಹೊಸತೇನೂ ಅಲ್ಲ. ಶಿರಾಡಿ ಘಾಟಿಯಲ್ಲಿ ರೈಲು ಮಾರ್ಗ ನಿರ್ಮಾಣ ಹಂತದಲ್ಲೊಮ್ಮೆ ಅನಂತರ ಕನಿಷ್ಠ ಎರಡು ಬಾರಿ ನಡೆದವರೇ ನಾವು. (ನೋಡಿ: ನನ್ನದೇ ‘ಚಕ್ರವರ್ತಿಗಳು’ ಪುಸ್ತಕದಲ್ಲಿ ನಡೆದು ನೋಡೈ ಶಿರಾಡಿ ಬೆಡಗಂ) ಆದರೆ ಇಲ್ಲಿ ಸ್ಥಳ, ಸಮಯ ಮತ್ತು ತಯಾರಿಗಳನ್ನು ನಾವು ಚಾರಣಕ್ಕೆ ಅಷ್ಟೇನೂ ಹೊಂದಿಸಿಕೊಂಡು ಬಂದಿಲ್ಲವೆಂದು ಐದು ಮಿನಿಟು ನಮ್ಮನ್ನು ದ್ವಂದ್ವ ಕಾಡಿತು. ಬರಿಗೈಯಲ್ಲಿ ಹೋಗಲು ಬಂದವರಲ್ಲವೆಂದು ಮೈ ಕೊಡವಿ, ಅಲ್ಲಿನ ಏಕೈಕ ಗೂಡಂಗಡಿಯಲ್ಲಿ ಸಿಕ್ಕಿದ್ದನ್ನು ಬುತ್ತಿಯೆಂದು ಹಿಡಿದುಕೊಂಡೆವು. ಬೈಕ್ ಮತ್ತು ಅನಾವಶ್ಯಕ ಹೊರೆಯೆಲ್ಲವನ್ನೂ ರೈಲ್ವೇ ನಿಲ್ದಾಣದವರ ಮೇಲೆ ನಂಬಿಕೆಯಲ್ಲಿ ಬಿಟ್ಟು “ದೂದ್ ಸಾಗರ್ ಚಲೋ” ಎಂದು ಹೊರಟೇ ಬಿಟ್ಟೆವು. ಆಗಿನ್ನೂ ಒಂಬತ್ತು ಗಂಟೆ. ದೂರದ ಅಂದಾಜು ಹೇಳಿದವರೆಲ್ಲ ಆರು - ಏಳು ಕಿಮೀ ಮೀರಲಿಲ್ಲ. ಅಂದರೆ ಹನ್ನೊಂದಕ್ಕೆ ಜಲಪಾತ ಎರಡಕ್ಕೆ ವಾಪಾಸ್, ನಮ್ಮ ಅಂದಾಜು.
ನಿಲ್ದಾಣ ಬಿಟ್ಟದ್ದೇ ಕಾಡು ಆವರಿಸಿಕೊಂಡಿತು. ಪಿರಿಪಿರಿ ಮಳೆಯಂತೂ ಅಂದು ಚಾರಣದುದ್ದಕ್ಕೂ ನಮಗೆ ಬಿಟ್ಟೂಬಿಡದ ಸಂಗಾತಿ. ಗುಡ್ಡಗಳ ಬಗಲಲ್ಲಿ, ಕಿರುಕಣಿವೆಗಳ ಸರಣಿಯಲ್ಲಿ (ಹಳಿ-) ದಾರಿ ನೇರ ಪೂರ್ವಕ್ಕೆ ಸಾಗಿತ್ತು. ಮೊದಲ ಒಂದೆರಡು ಕಿಮೀ ಜಲ್ಲಿ ಹಾಸಿನಿಂದಲೂ ಹೊರಗೆ ಸ್ವಚ್ಚ ಸವಕಲು ಜಾಡಿದ್ದುದರಿಂದ ಪ್ರಗತಿ ಚುರುಕಾಗಿತ್ತು. ಮುಂದೆ ಚರಂಡಿ, ಕೊರಕಲು, ಕಲ್ಲಗುಪ್ಪೆಗಳು ಹೆಚ್ಚಿ ಕಂಬಿಗಳ ನಡುವಣ ನಡಿಗೆಯೇ ನೆಚ್ಚಬೇಕಾಯ್ತು. ಖೈದಿಗಳಿಗೆ ಕಾಲ್ಕೋಳ ಹಾಕಿದಂತೆ, ಜಲ್ಲಿರಾಶಿಯಲ್ಲಿ ಹುಗಿದು ಕುಳಿತ ಸ್ಲೀಪರಿನಿಂದ ಸ್ಲೀಪರಿಗೆ (ಸುಮಾರು ಒಂದರಿಂದ ಒಂದೂವರೆ ಅಡಿ); ಬಲು ಯಾಂತ್ರಿಕ ನಡಿಗೆ. ಸುಮಾರು ಹದಿನೈದು ಮೀಟರಿಗೊಮ್ಮೆ ಬರುವ ಜೋಡಿ ಸ್ಲೀಪರ್‌ಗೆ (ಎರಡು ಕಂಬಿಗಳು ಜೋಡುವ ಜಾಗ, ಓಡುವ ರೈಲು ‘ತಾಳ’ ಹಾಕುವ ಜಾಗ) ಅರ್ಧ ಹೆಜ್ಜೆ. ಚಪ್ಪಲಿಪಾದರು ಹೆಜ್ಜೆ ಕಿತ್ತು ಮುಂದುವರಿಸುವಲ್ಲಿ ಚಪಲಚಿತ್ತರಾಗಿ ಕಾಲೆಳೆಯುವಂತಿಲ್ಲ, ಜಲ್ಲಿಗುಪ್ಪೆ ಬೆರಳು ಜಖಂ ಮಾಡೀತು. “ಸಣ್ಣ ಅಂತರ” ಎಂದು ಹಗುರ ಹೆಜ್ಜೆ ಇಟ್ಟರೂ ಕಷ್ಟ. ಮಳೆ ಮತ್ತು ರೈಲಿನಿಂದ ಸೋರಿದ ಎಣ್ಣೆಯ ಪ್ರಭಾವದಲ್ಲಿ ಹೆಜ್ಜೆ ಜಾರಿ, ಘಟ್ಟಿ ಕೂರಬೇಕಾದೀತು. ಬೂಟುಗಾಲಿಗರು ದಾಪುಗಾಲಿಕ್ಕಿರಬಹುದು ಎಂದೂ ಭಾವಿಸುವುದು ಬೇಡ. ಸ್ಲೀಪರುಗಳ ನಡುವಣ ಜಲ್ಲಿ ರಾಶಿಗೆ ಶಿಸ್ತಿನ ಸಮಸ್ಥಿತಿ ಇಲ್ಲ. ಅಂದರೆ ಒಮ್ಮೆ ಸ್ಲೀಪರಿನಿಂದ ಎರಡಿಂಚು ಮೇಲೆದ್ದಿರಬಹುದು, ಇನ್ನೊಮ್ಮೆ ಮೂರು ಇಂಚು ಹೊಂಡದಲ್ಲೂ ಇರಬಹುದು. ಮತ್ತೆ ಎಡವಿಯೋ ಕಾಲ್ತೊಡರಿಯೋ ಪಲ್ಟಿ ಹೊಡೆದರೆ ಹಲ್ಲು ನೊಂದೀತು. ಬೂಟುಗಳೊಳಗೆ ನೀರು ಸೇರಿಕೊಂಡು ಪ್ರತಿ ಹೆಜ್ಜೆಯಿಂದ ಹೆಜ್ಜೆಗೆ ಚುಯಿಂ ಚೊಯಿಂ ಎನ್ನಿಸುವವರ ಬೆರಳುಗಳೆಲ್ಲ ಬಿಳಿಚಿ, ಚಿರಿಟಿ, ಉಗುರು ಸುಲಿದ ಹಾಗಿನ ನೋವು ಬೋನಸ್; ಚಪ್ಪಲಿಗರಿಗಿಲ್ಲ! (ಶಿಸ್ತಿನ ಪರ್ವತಾರೋಹಿಯಾದರೂ ಕಳೆದ ಸುಮಾರು ಐದಾರು ವರ್ಷಗಳಿಂದ ನಾನು ಬೂಟು ಬಳಸಿಯೇ ಇಲ್ಲ.) ಮಳೆ ನಾವಾರಿಸಿಕೊಂಡ ಸಂಗಾತಿ. (ಇಲ್ಲವಾದರೆ ಜಲಪಾತದ ಪೂರ್ಣ ವೈಭವಕ್ಕೆ ಐಬುಬಾರದೇ?) ಮಳೆಕೋಟಿನ ತೋರಿಕೆಯ ರಕ್ಷಣೆ ಎಲ್ಲರಿಗೂ ಇತ್ತು. ಹಾಗೇ ಕಾಲರಿನ ಅಂಚುಗಳಿಂದ, ಗುಂಡಿಪಟ್ಟಿಯ ಸಂದಿನಿಂದ ನುಸುಳುವ ನೀರಿಗೆ ದೇಹಶ್ರಮದೊಡನೆ ಒಳಗೇ ಜಿನುಗುವ ಬೆವರು ಸಂಗಮಿಸಿ, ಒಳಗೊಳಗೆ ಎಲ್ಲರೂ ತೊಯ್ದು ತೊಪ್ಪಡಿ.
ಪರಿಸರ ಕಾಡಿನದೇ ಆದರೂ ರೈಲು ಮಾರ್ಗದ ಅಗತ್ಯಗಳು ಮೋಟಾರಿನದ್ದಕ್ಕಿಂತ ಹೆಚ್ಚು ಬಿಗಿಯಾದ್ದರಿಂದ ನಮಗೆ ‘ಇನ್ನೆಷ್ಟು ದೂರವಪ್ಪಾ’ ಎಂದು ಯೋಚಿಸುವಷ್ಟರಲ್ಲಿ ಮೊದಲ ಗುಹೆ ಬಂತು. ಕೊಂಕಣ ರೈಲಿಗೆ ವ್ಯತಿರಿಕ್ತವಾಗಿ ಇಲ್ಲಿ ಸುರಂಗಗಳು ತೀರಾ ಅನಿವಾರ್ಯತೆಗೆ ಮೂಡಿದ, ಹಳಗಾಲದ, ಯಂತ್ರಕ್ಕಿಂತ ಹೆಚ್ಚು ಬೆವರಿನ ರಚನೆಗಳು. ಮೀಟರ್ ಗೇಜಿನ ಅಗತ್ಯಕ್ಕೆ ಮಾಡಿದ್ದರೂ ಇಂದಿನ ಬ್ರಾಡ್ ಗೇಜ್ ಅಗತ್ಯಗಳಿಗೂ ಸಹಜವಾಗಿ ಒದಗಿಬಂದ ಮುಂದಾಲೋಚನೆಯ ಮಹತ್ಕಾರ್ಯಗಳು. ಗುಹಾದ್ವಾರಗಳಲ್ಲಿ ಕೆಲವೆಡೆ ಸಣ್ಣದಾಗಿ ನೀರ ಧಾರೆಯಾಗಿ ತೊಡಗಿ ಹನಿಪರದೆಯನ್ನೇ ಎಳೆಯುತ್ತಿರುತ್ತದೆ. ಸುತ್ತ ಮುತ್ತಿದ ದಟ್ಟ ಹಸಿರಿನಲ್ಲೂ ಎಲ್ಲೋ ಒಂದೊ ಎಳೇ ಕೊಂಬೆಯೋ ಬಳ್ಳಿಗೈಯೋ ಹೂವನ್ನೋ ಮುಂಚಾಚಿದಾಗ ಅಪ್ಪಟ ಗಡಸು ರಚನೆಗೂ ಒಂದು ಮಾರ್ದವತೆ, ಪ್ರಾಕೃತಿಕ ಅಂಗವೇ ಇರಬೇಕೋ ಎನ್ನುವ ಸ್ಪರ್ಶ ಕೊಟ್ಟಂತಿರುತ್ತಿತ್ತು. ಒಳಗೆ ಜಾಡು ನೇರವಿರಲಿ, ಓರೆಯಿರಲಿ ದೀರ್ಘವಾಗದ ಹಾಗೆ, ಅಂದರೆ ಪ್ರಾಕೃತಿಕವಾಗಿಯೇ ಒಳಗಿನ ವಾತಾಯನ ತಿಳಿಯಾಗುಳಿಯುವಂಥ ಪ್ರಯತ್ನ ಅಲ್ಲಿ ನಡೆಸಿದ್ದರು. ಎಲ್ಲೋ ಒಂದು ಕಡೆ, ಗುಹೆ ಉದ್ದವಾಗುವುದು ಅನಿವಾರ್ಯವಾದಾಗ, ಒಂದು ಆಯಕಟ್ಟಿನ ಜಾಗದಲ್ಲಿ ಸುಮಾರು ಇಪ್ಪತ್ತು ಮೀಟರ್ ಉದ್ದಕ್ಕೆ ಗುಹಾಚಪ್ಪರವನ್ನು ವ್ಯವಸ್ಥಿತವಾಗಿ ಸೀಳಿ ಗವಾಕ್ಷಿ ರಚಿಸಿಕೊಟ್ಟಿದ್ದರು. ಮತ್ತು ಇದು ಆ ಕಾಲದಲ್ಲಿ ಬಹಳ ದೊಡ್ಡ ಸಾಧನೆಯೂ ಇದ್ದಿರಬಹುದು. ಆ ಗುಹೆಯ ಮೊದಲ ಅರ್ಧದಲ್ಲಿ ಸಾಗುವಾಗ ನಮ್ಮ ಅರಿವಿಗೆ ಬಾರದ (ಗವಾಕ್ಷಿ) ಬೆಳಕಿನಲ್ಲಿ ಕಂಬಿಗಳು ಕತ್ತಲಿನ ಆಳಕ್ಕೆ ನುಗ್ಗಿದ ಎರಡು ಬೆಳ್ಳಿ ರೇಖೆಯಂತೇ ಕಾಣುತ್ತಿತ್ತು. ಇದೇನು ಚೋದ್ಯವೆಂದು ಮುಂದುವರಿಯುತ್ತಿದ್ದಂತೆ ಗವಾಕ್ಷಿಯ ಮೂಲಕ ಬೆಳಕಿನೊಡನೆ ಪುಟ್ಟ ಜಲಧಾರೆ ಹುಡಿಯಾಗಿ ಬೆರೆತು ಮಾಯಾಲೋಕವನ್ನೇ ಸೃಷ್ಟಿಸಿತ್ತು. ಬೆಳ್ಳಿರೇಖೆ ಇಲ್ಲಿ ಎರಡೂ ದಿಕ್ಕಿಗೆ ಹರಿದು ಕತ್ತಲಲ್ಲಿ ಕರಗಿಹೋಗುವ ಚಂದ ನನಗಂತೂ ಅಕ್ಷರಿಸಲಾಗದ ಕಾವ್ಯ.
ಕೊಲೆಮ್ ಬಿಟ್ಟು ಸುಮಾರು ಎರಡು ಕಿಮೀ ಅಂತರದಲ್ಲಿ, ಕಾಡಿನೆಡೆಯ ಸಣ್ಣ ಬಯಲಿನಲ್ಲಿ ಎರಡು ಜೋಪಡಿ ಕಂಡೆವು. ಏನೋ ಹಳಿಬದಲಾವಣೆಯ ಕಾಲದ ಕೂಲಿವಸತಿ ಇರಬೇಕೆಂದು ಮುಂದುವರಿದಲ್ಲಿ ಈತ ಸಿಕ್ಕಿದ. ಇಲ್ಲೇ ತಪ್ಪಲಿನ ವಿಶಿಷ್ಟ ಹೊರೆಗಳನ್ನು ಅಲ್ಲೇ ಘಟ್ಟದ ಮೇಲಿನ ಹಳ್ಳಿಗಳಿಗೆ ಮುಟ್ಟಿಸಿ ಅಲ್ಲಿನವನ್ನು ಇಲ್ಲಿಗೆ ಮುಟ್ಟಿಸುವ ಗಟ್ಟಿಗ. ಅತ್ತ ಮೊಲೆನ್ ವರೆಗೆ ಹೊತ್ತು, ಬಸ್ಸಿನ ಬಳಸಂಬಟ್ಟೆ ಅನುಭವಿಸಿ, ಮತ್ತೆ ಇನ್ನೆಷ್ಟೋ ಹೊರಲು ಬೇಕಾಗಬಹುದಾದ ಸಮಯ, ಖರ್ಚು ಮತ್ತು ಸವಕಳಿಗಳೆಲ್ಲ ತಪ್ಪಿಸುವುದೇ ಇವನ ವೃತ್ತಿ. ಮಳೆ ಬಿಸಿಲುಗಳ ಬೇಧವಿಲ್ಲ, ಗಿರಾಕಿ ವಲಯದ ಬೇಡಿಕೆ-ಪೂರೈಕೆಗಳ ಮಿತಿಯೇ ಹೊರೆಯ ಮಿತಿಯಂತೆ. ನಾವು ಹಿಂದೆ ಬಿಟ್ಟ ಜೋಪಡಿಗಳಿಂದ ಸ್ವಲ್ಪ ದೂರ ರೈಲ್ವೇ ಹಳಿಯನ್ನು ಅನುಸರಿಸಿ ಮತ್ತೆ ನೇರ ಘಟ್ಟ ಏರುವ ಕಾಲ್ದಾರಿ ಈತನಿಗೆ ಸರಾಗ. ಕೊಡಗಿನ ಗಾಳಿಬೀಡು - ದಕ ವಲಯದ ಕಡಮಕಲ್ಲಿನ ನಡುವೆ ಅಂದ ಕಾಲತ್ತಿಲೆ ಓಡಾಡುತ್ತಿದ್ದ ಅಂಚೆಯಣ್ಣನ ಕಥೆ ಕೇಳಿದ್ದು ನೆನಪಿಗೆ ಬಂತು. ಬೆಳ್ತಂಗಡಿಯಿಂದ ಕುದುರೆಮುಖ ಶಿಖರ ಅಥವಾ ಅಲ್ಲೇ ಸನಿಹದ ಹೇವಳಕ್ಕೆ ಹೊತ್ತುಗೊತ್ತಿಲ್ಲದೆ, ಋತುಮಾನಗಳ ಬೇಧವಿಡದೆ ಹೊರೆ ಹೊತ್ತ ನನ್ನ ಮೊದಲ ಕೆಲವು ಚಾರಣಗಳ ಮಾರ್ಗದರ್ಶಿ ಸೋಜಾ ಸ್ಮರಣೆ ವಿವರ ವಿವರವಾಗಿ ಕಾಡಿತು.
ಒಂದು ಮಳೆಗಾಲದ ರಾತ್ರಿಯಂತೆ, ನಮ್ಮ ಸೋಜಾ ಹೇವಳದ ಸಿಂಹಪುರ್ಬು ಭಾವನಲ್ಲಿದ್ದನಂತೆ. . . ಅವರೊಬ್ಬ ಮಗನಿಗೆ ಕೆಂಡಾಮಂಡಲ ಜ್ವರ, ಕಂಡರಿಯದ ಸೀಕು. ಇಬ್ಬರೂ ಸ್ವಂತ ತಯಾರಿಯ ‘ಟಾನಿಕ್’ ಏರಿಸಿ, ಕಂಬಳಿಕುಪ್ಪೆಯಲ್ಲಿ ಸರದಿಯ ಮೇಲೆ ಮಗನನ್ನು ಹೊತ್ತು ನಡೆದು, ಅಪರಾತ್ರಿಯಲ್ಲಿ ಬೆಳ್ತಂಗಡಿಯ ವೈದ್ಯರ ನಿದ್ದೆಗೆಡಿಸಿದರಂತೆ. ತಪಾಸಣೆ, ಅಗತ್ಯದ ಇಲಾಜು ಆದ ಮೇಲೆ ಉಳಕೊಳ್ಳಲು ಅವರೇನು ಸಂಬಂಧವೇ! (ಆಸ್ಪತ್ರೆ ವಿಚಾರವೇ ಗೊತ್ತಿಲ್ಲದ ಕಾಲ) ಮುಂದಾಲೋಚನೆಯಲ್ಲಿ ತಂದಿದ್ದ ಮತ್ತೊಂದು ‘ಬಾಟಲ್’ ಇಬ್ಬರೂ ಖಾಲಿ ಮಾಡಿ, ಕಾಯಿಲಸ್ತನನ್ನು ಅಷ್ಟೇ ಜತನದಿಂದ ಹೊತ್ತು ಬೆಳಗಿನ ಗಂಜಿಯೂಟಕ್ಕೆ ಬೆಚ್ಚಗೆ ಹೇವಳದಲ್ಲಿದ್ದರಂತೆ. ಒಂದು ದಿಕ್ಕಿನ ಅಂತರ ಸುಮಾರು ಇಪ್ಪತ್ತೈದು ಮೈಲು. ಸಮುದ್ರ ಮಟ್ಟದಿಂದ ಸುಮಾರು ನಾಲ್ಕು ಸಾವಿರ ಅಡಿ ಎತ್ತರದ ಹೇವಳದಿಂದ ಕೇವಲ ಮುನ್ನೂರೇ ಅಡಿ ಎತ್ತರದ ಬೆಳ್ತಂಗಡಿಯವರೆಗೂ ಇಳಿದು ಹತ್ತುವ ತುರ್ತು. ದಟ್ಟ ಕಾಡು, ಗಾಢಾಂಧಕಾರ, ಬಲು ಎಚ್ಚರದಲ್ಲಿ ಸಾಗಿಸಲೇಬೇಕಾದ ‘ಹೊರೆ’, ಮಳೆಗಾಲದ ಎಲ್ಲಾ ‘ಸಹಕಾರಿ’ಗಳನ್ನೂ ಪಟ್ಟಿ ಮಾಡಿದರೆ ತೆಗೆದ ಬಾಯಿಗೆ ಯಾರೂ ಹೇಳಿಯಾರು ಬಜಿಲೊಟ್ಟೆ (ಹಸಿಸುಳ್ಳು)! ಮೂರ್ಖತನ, ಮಹಾಸಾಹಸ, ಕುಡಿತದ ಅಮಲು ಇತ್ಯಾದಿ ನೂರೂ ಹೇಳಬಹುದು. ಆದರೆ ಸೋಜನ ನಿರೂಪಣೆಯಲ್ಲಿ ಅದುವೇ ಜೀವನ. (ಸಿಂಹಪುರ್ಬು ಮತ್ತು ಈ ಸೋಜಾನ ಇನ್ನೊಬ್ಬ ಭಾವ - ಮೆಂಗಿಲ ಶೇಣವ, ‘ಕುದುರೆಮುಖದ ಗಾಯಿಡ್’ರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸಕ್ತರು ಅವಶ್ಯ ಎನ್.ಸಿ.ಸಿ ದಿನಗಳು ಓದಲೇಬೇಕು.) ಅಕ್ಷರ ಲೋಕದಲ್ಲಿ ‘ಸಾಹಸಗಳ ಕಡತ’ ಪೇರಿಸುವ ನಮಗೆ ಊಹಿಸಲೂ ಆಗದ ಎತ್ತರಗಳು.
ಹನಿ ಮಳೆ ನಿಂತಿತ್ತು. ದೂರದಲ್ಲಿ ಯಾರೋ ಜಲ್ಲಿಹಾಸಿಕ ಕೆಳ ಅಂಚಿನಲ್ಲಿ ಕುಳಿತು ಏನೋ ಮಸಲತ್ತು ನಡೆಸಿದಂತಿತ್ತು. ಹುಚ್ಚನೋ ವಿಧ್ವಂಸಕನೋ ಎಂದನ್ನಿಸಿದರೂ ನಿರಾಳವಾಗಿಯೇ ಸಮೀಪಿಸಿದೆವು. ಪಾಪ, ಊಟ ಮಾಡುತ್ತಿದ್ದ ಲೈನ್ ಮ್ಯಾನ್. ದಿನದ ನಿರ್ದಿಷ್ಟ ಕಾಲಗಳಲ್ಲಿ ನಿರ್ದಿಷ್ಟ ಅಂತರವನ್ನು ಇವನಂಥವರು ನಡೆದರಷ್ಟೇ ರೈಲಿನ ಯಾನ ಸುಗಮ. (ಲೈನ್ ಮ್ಯಾನ್) ನಲಿದು ಹಾಡಿದರೆ, (ರೈಲು) ಒಲಿದು ಬಂದೀತು! ಹಗಲು - ರಾತ್ರಿ, ಬಿಸಿಲು - ಮಳೆ ಈತನಿಗೊಂದೇ. ಗಡಿಯಾರದ ಮುಳ್ಳಿನಂತೆ ಈತ ನಡೆಯಲೇಬೇಕು, ಖಚಿತವಾಗಿಯೂ ಇರಲೇಬೇಕು. ಹಾಗೆಂದು ಊಟ, ತಿಂಡಿ ಬಿಡಲುಂಟೇ? ಬುತ್ತಿ ತಂದರೂ ಮಳೆ, ಜಿಗಣೆ, ರೈಲು ಬಾರದ ಹೊತ್ತು ಎಲ್ಲಾ ಹೊಂದಿಸಿ. . . ನೆನಪಿಸಿಕೊಳ್ಳಿ, ರೈಲು ಲಕ್ಷಪದಿ!
ಉಗಿ ಇಂಜಿನ್ನುಗಳ ಕಾಲದಲ್ಲಾದರೋ ಕಲ್ಲಿದ್ದಲು ತುಂಬುವುದು, ನೀರು, ಉಗಿಯ ಒತ್ತಡಗಳ ಮಟ್ಟ ಕಾಯುವುದೆಲ್ಲ ಸೇರಿ ಆ ಕಿಷ್ಕಿಂಧೆಯಲ್ಲೂ ಮೂರು ಚಾಲಕರ ತಂಡ ಸದಾ ಕಾರ್ಯಶೀಲವೇ ಆಗಿರಬೇಕಾಗುತ್ತಿತ್ತು. ಆದರೀಗಲೋ (ಡೀಸೆಲ್ ಚಾಲಿತವೂ ಇರಬಹುದು) ವಿದ್ಯುತ್ ಇಂಜಿನ್ನುಗಳು ಬಂದು ಚಾಲನಾ ವಿಭಾಗಕ್ಕೆ ಕೇವಲ ವೇಗೋತ್ಕರ್ಷ, ಹಾರನ್ ಬಜಾಯಿಸುವುದು ಮತ್ತು ಬಿರಿಹಾಕುವುದಷ್ಟೇ ಕೆಲಸ ಎಂದು ಸರಳೀಕರಿಸುವುದು ತಪ್ಪು. ಯಂತ್ರ ಸಂಕೀರ್ಣತೆ ಬಂದಷ್ಟೂ ದೈಹಿಕ ಶ್ರಮ ಕಡಿಮೆಯಾಗುವುದು ಇರಬಹುದು. ಆದರೆ ಬೌದ್ಧಿಕ ತೊಡಗಿಕೊಳ್ಳುವಿಕೆ, ಅದಕ್ಕೆ ಹೊರ ಮಾಹಿತಿಗಳ ಪೂರೈಕೆ ಮತ್ತು ನಿರ್ವಹಣೆಯ ಜವಾಬ್ದಾರಿಯ ಹೊರೆ ದೊಡ್ಡದು. ಹಾಗಾಗಿ ರೈಲು ಮಾರ್ಗಗಳ ಅಂಚಿನಲ್ಲಿ ಮುಖ್ಯವಾಗಿ ಚಾಲಕರ, ಮತ್ತೆ ಹಳಿ ಕಾಯುವವರ, ಕೊನೆಯದಾಗಿ ಪ್ರಜ್ಞಾವಂತ ಪ್ರಯಾಣಿಕರ ತಿಳುವಳಿಕೆಗಾಗಿ ಹಲವು ಸ್ಥಿರ ಮತ್ತು ಕೆಲವು ಚರ ಬೋರ್ಡುಗಳು, ಸಂಕೇತಗಳೂ ಇರುತ್ತವೆ. ಅವುಗಳಲ್ಲಿ ಒಂದು ಕಿಮೀ ಮೊದಲೇ ನಿಲ್ದಾಣ ಸೂಚನೆ ಕೊಡುವ ಸ್ಥಿರ ಸಂಕೇತ (ಸುಮಾರು ನಾಲ್ಕಡಿ ಎತ್ತರದ ಸಪುರ ತಗಡಿನ ಮೇಲೆ ಹಳದಿ, ಕಪ್ಪಿನ ಓರೆ ಪಟ್ಟೆ ಇರುವ ಬೋರ್ಡು) ಕಾಣಿಸಿದಾಗ ನಮ್ಮ ನಡಿಗೆಗೆ ಹೊಸ ಹುರುಪು ಬಂತು. ಆದರೆ ಸಿಕ್ಕಿದ್ದು ಸಿನೋಲಿಯಂ - ಕೇವಲ ರೈಲ್ವೇ ಕಾಮಗಾರಿಗಾಗಿಯೇ ರೂಪುಗೊಂಡ ತತ್ಕಾಲೀನ ನಿಲ್ದಾಣ. ಕೆಲಸವೂ ಏನೋ ನಡೆದಿತ್ತು. ಕೂಲಿಯಾಳುಗಳು ನಮ್ಮ ವೇಗವನ್ನು ಮೆಚ್ಚಿದರು, ಜಲಪಾತ ಇನ್ನೇನು ಬಂತು ಎಂದು ಧೈರ್ಯ ಕೊಟ್ಟರು.
ಮಳೆ, ಮೋಡ ಬಿಟ್ಟುಬಿಟ್ಟು ಬರುತ್ತಲೇ ಇತ್ತು. ಮುಂದುವರಿದಂತೆ ನಮ್ಮಿಂದ ಎಡಕ್ಕೆ ವಿಸ್ತಾರ, ಕಾಡು ತುಂಬಿದ ಕಣಿವೆಯೊಂದು ತೆರೆದುಕೊಳ್ಳುವುದನ್ನು ಗಮನಿಸಿದ್ದೆವು. ಅಲ್ಲಲ್ಲಿ ಬಲ ಅಥವಾ ಬೆಟ್ಟದ ಬದಿಯಿಂದ ಪುಟ್ಟ ಪುಟ್ಟ ಝರಿ, ತೊರೆಗಳು ಕಾಲದ ಸೊಕ್ಕಿನಲ್ಲಿ ಭಾರೀ ಸದ್ದು ಮಾಡುತ್ತ ಬಂದು ಮುಚ್ಚು ಸೇತುವೆಗಳಲ್ಲಿ ನುಸಿದು ಹೋಗುವುದೂ ಹೆಚ್ಚಿತ್ತು. [ನೀರಿಗೆ ಸಿಮೆಂಟ್ ಕೊಳವೆಗಳನ್ನು ಕೊಟ್ಟು ಕಗ್ಗಲ್ಲಿನ ರಕ್ಷಣೆ ಕೊಟ್ಟಂತವು; ‘ಕಲ್ವರ್ಟ್’ ಎನ್ನಬಹುದು. ರೈಲ್ವೇಯಲ್ಲಿ ತೊರೆ ದೊಡ್ಡದಿದ್ದರೆ ಸೇತುವೆಗಳು ಕೇವಲ ಕಂಬಿ ಹಾಯುವ ಅನುಕೂಲಕ್ಕೇ ಸಜ್ಜಾಗುತ್ತವೆ. ಹಳಿ ತನಿಖೆ ಮಾಡುವವರ ಅನುಕೂಲಕ್ಕಾಗಿ ನಡುವೆ ಕಬ್ಬಿಣದ ಹಾಳೆ ಹಾಸುವುದು, ಅಗಲ ತುಂಬಾ ಹೆಚ್ಚಿದ್ದರೆ ನಿಯತ ಅಂತರದಲ್ಲಿ ಆಕಸ್ಮಿಕವಾಗಿ ಹಳಿಯ ಮೇಲೆ ಬರುವ ಜನಗಳಿಗಾಗಿ ರಕ್ಷಣಾ ಬಾಲ್ಕನಿ ರಚಿಸಿಡುವುದೂ ಇದೆ. ಒಟ್ಟಾರೆ ಇವನ್ನು ತೆರೆದ ಸೇತುವೆಗಳೆಂದೇ ನಾನು ಗುರುತಿಸಿಕೊಂಡಿದ್ದೇನೆ. ವಿವರಗಳಿಗೆ ಮೊದಲೇ ಹೇಳಿದ ‘ನಡೆದು ನೋಡೈ ಶಿರಾಡಿ ಬೆಡಗಂ’ ನೋಡಿ. ಲಗತ್ತಿಸಿದ ಎರಡೂ ಚಲಚಿತ್ರ ತುಣುಕುಗಳು - ಈಚಿನ ಶಿರಾಡಿ ಘಾಟಿಯವು.] ಮತ್ತಾ ನೀರ ಮೊತ್ತ ಕೆಳ ಕಣಿವೆಯ ಕಾಡಮುಸುಕಿನಲ್ಲೇ ಆದರೆ ಅನತಿ ದೂರದಲ್ಲೇ ಮಹಾ ಸಂಗಮ ನಡೆಸಿರುವುದೂ ಇಮ್ಮಡಿಸಿದ ಧ್ವನಿಯಲ್ಲಿ ನಾವು ಗ್ರಹಿಸುತ್ತಲೇ ಇದ್ದೆವು. ಕಣಿವೆಗೆ ಕಾಡಿನ ಮರೆ, ಬೆಟ್ಟಕ್ಕೆ ಮೋಡದ ತೆರೆ. ತೆರೆ, ತೆರೆತೆರೆ ಎಂದುಕೊಳ್ಳುತ್ತ ನಾವು ಕಾಲೆಳೆಯುತ್ತಿದ್ದಂತೆ ಮಳೆ ನಿಂತು, ಕಾಡು ವಿರಳವಾಗಿ, ಮೋಡಗಳು ತೆಳುವಾಗುತ್ತಾ ಮೇಲೇಳುತ್ತಿದ್ದವು. ಮೋಡ ಪೂರ್ತಿ ಹೋಯ್ತು, ಇಲ್ಲ ಅಲ್ಲಿ ಬಿದ್ದಿದೆ, ಎನ್ನುವಂತೆ ಹಸಿರುಗಪ್ಪಿನ ಬೆಟ್ಟದ ಮೈಯಲ್ಲಿ ಮಾಸಲು ಬಿಳಿ ತೇಪೆಗಳು ಸ್ಪಷ್ಟವಾಗುತ್ತಿದ್ದಂತೆ ನನ್ನ ಮನೋಭಿತ್ತಿಯಲ್ಲೇ ಹುದುಗಿದ್ದ ಚಿತ್ರ ಮೇಲೆ ಚಿಮ್ಮಿತು - ದೂದ್ ಸಾಗರ್!
ಪರ್ವತಶ್ರೇಣಿಯ ಒಂದು ತೀವ್ರ ತಿರುವಿನಾಚೆ ಆಕಾಶದಲ್ಲೊಂದು ಬಿಳಿಸೀರೆಗಳ ಗಂಟು ಸಿಕ್ಕಿಕೊಂಡು ವಿವಿಧ ದಿಕ್ಕುಗಳಲ್ಲಿ ಪಾತಾಳದವರೆಗೆ ಬಿಚ್ಚಿಕೊಂಡಂತೆ, ಆಗೀಗ ಒಂದೊಂದು ಮೈ ಹರಡಿ ಬಳುಕಿದಂತೆ ಮೆರೆದಿತ್ತು ಜಲಪಾತ. ನಮ್ಮ ದೂರಕ್ಕದು ಮೌನಿ ಮತ್ತು ವಿವರಗಳಲ್ಲಿ ದಕ್ಕದ ಮೋಹಿನಿ. ಇಂಥ ಭ್ರಮೆ ವಾಸ್ತವಗಳ ಮಿಶ್ರಣದಲ್ಲೂ ಅದು ನೂರಾರು ಅಡಿಗಳುದ್ದಕ್ಕೆ ಹರಡಿ ಇಳಿಯುವುದು, ರೈಲ್ವೇ ಸಂಕವೊಂದರ ಬಳಿ ಒಂದಾಗಿ ಅಡ್ಡ ಹಾಯುವುದು, ಮತ್ತೆ ಬಿಡಿಸಿಕೊಂಡು ಆಳದ ಹಸಿರುಗೈಗಳ ತೆಕ್ಕೆಗೆ ಒಳಗಾಗುವುದನ್ನು ನೋಡಿ ಮುಗಿಸಿದವರಿಲ್ಲ. ನಮ್ಮ ಕಾಲಮಿತಿ ಚುಚ್ಚಿ ಎಬ್ಬಿಸಿದ್ದೇ ಅದರ ಸಾಮೀಪ್ಯಕ್ಕೆ ಉಳಿದ ಸುಮಾರು ಒಂದು ಕಿಮೀ ದೂರ ಮುಗಿಸಲು ಧಾವಿಸಿದೆವು. ಒಂದೂವರೆ ಅಡಿಯ ಹೆಜ್ಜೆಗಳ ಅಂತರವನ್ನು ಒಂದರಿಂದ ಎರಡೂವರೆಗೂ ಮಿನಿಟಿನ ಲೆಕ್ಕದ ಅರವತ್ತು ಹೆಜ್ಜೆಯನ್ನೂ ನೂರಕ್ಕೂ ಏರಿಸಿ, ಗುಹೆಯೊಂದನ್ನು ಕಳೆದು ನಿಂತದ್ದೇ ಇಲ್ಲಿ. . . (ಲೇಖನದ ಮೊದಲಲ್ಲಿ)
ಕ್ಷೀರಸಾಗರ ಮಥನದಲ್ಲಿ ದಕ್ಕಿದ ಹನಿಯೆಲ್ಲ ಅಮೃತ. ಬೆರಗು ಮೈವೆತ್ತಂತ ವನವಿಸ್ತಾರದಲ್ಲಿ ನಲಿವ ಕಿರುಗರಿಕೆಯಾಗಿ ನಿಂತೆವು. ಸ್ವಾತಂತ್ರ್ಯದ ಬಂಗಾರಕ್ಕೆ ತಿಳಿವಿನೊಪ್ಪ ಕೊಟ್ಟ ಧನ್ಯತೆ ನಮ್ಮದು. ಇದರ ಭವ್ಯತೆಯನ್ನು ಮನಗಂಡು ರೈಲ್ವೇ ಸಾರ್ವಜನಿಕರ ನಿರಪಾಯ ವೀಕ್ಷಣೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಪೂರ್ತಿ ಮುಚ್ಚು ಸೇತುವೆ ಕಟ್ಟಿ, ಎರಡೂ ಬದಿಗೆ ಬಲವಾದ ರಕ್ಷಣಾಗೋಡೆ ಕೊಟ್ಟಿದ್ದಾರೆ. ಮೇಲೊಂದು ತಟ್ಟು ಮಾಡಿ ಮುಕ್ತ ತಂಗುದಾಣ, ಈಚಿನ ತಟ್ಟಿನಲ್ಲಿ ಹುಲ್ಲ ಹಾಸು, ಅಂಗಡಿ ಕಟ್ಟೆ ರಚಿಸಿದ್ದಾರೆ. ಮಳೆದೂರ ದಿನಗಳಲ್ಲಿ ಜಲಪಾತ್ರೆಗೆ ಇಳಿಯುವವರ ಅನುಕೂಲಕ್ಕೆ ಮೆಟ್ಟಿಲ ಸಾಲು, ಜಲಪಾತ್ರೆಯಲ್ಲೇ ನಿರಪಾಯ ಜಾಗ ಆಯ್ದು ಜಗುಲಿ ಸಹಿತ ನಾಲ್ಕು ಕೋಣೆಯ ಪುಟ್ಟ ಮನೆಯನ್ನೂ ಸಜ್ಜುಗೊಳಿಸಿದ್ದಾರೆ. ಏನುಂಟು, ಹಾಗುಂಟಾಂತ ಉದ್ಗರಿಸಿ ಇಂದೇ ಹೊರಟೀರಿ ಜಾಗ್ರತೆ! ಏನಿಲ್ಲಾಂತ ಸ್ವಲ್ಪ ಕೇಳಿ. . .
ರೈಲೂ ಇಲ್ಲದ ಆ ದಿನಗಳಲ್ಲಿ, ಆ ಕಗ್ಗಾಡ ಮೂಲೆಯಲ್ಲಿ, ಆ ಋತುವಿನಲ್ಲಿ, ಅಲ್ಲಿ ದೇವರೂ ಇರುವುದಿಲ್ಲ! (ಮತ್ತೆ ನಮ್ಮೊಳಗೊಬ್ಬ ಪುಣ್ಯವಂತ ಪ್ರಾರ್ಥಿಸಿದರೂ ಹಿಂದೆ ಹೋಗುವ ದಾರಿಯಲ್ಲಿ ನಮ್ಮನ್ನೊಯ್ಯಲು ಒಂದು ರೈಲೂ ಬರಲಿಲ್ಲ ಯಾಕೆ?!) ನನ್ನ ಮಾತನ್ನು ಒರೆಗೆ ಹಚ್ಚುವಂತೆ ಅಲ್ಲಿ ಇಪ್ಪತ್ತೆರಡು ಮಂದಿಯ ಒಂದು ರಕ್ಕಸ ತಂಡವಿತ್ತು. ಪರ್ಯಾಯ ಪದವೆಂದು ಅವರನ್ನು ಅಸುರ ಎನ್ನಬೇಡಿ, ಎಲ್ಲರೂ ಸುರಾದೇವಿಯ ಸಂತಾನದ ಸೆರೆಯಲ್ಲಿದ್ದವರೇ ಆಗಿದ್ದರು. ಅವರು ಬೆಳಗಾವಿಯ ಅಪ್ಪಟ ಮರಾಠೀ ಪಡ್ಡೆಗಳು. ಯಾವ ಯೋಜನೆ ಇಲ್ಲದೆ ಹಿಂದಿನ ದಿನ ಕ್ಯಾಸೆಲ್ ರಾಕಿಗೆ ಬಂದು ಮುಂದಿಲ್ಲವೆಂದು ಸಿಕ್ಕಿಬಿದ್ದಿದ್ದರಂತೆ. ಇವರ ಅದೃಷ್ಟಕ್ಕೆ ದಾರಿಯ ಪರೀಕ್ಷಾರ್ಥ ಇಂಜಿನ್ ಓಡಿಸುತ್ತ ಬಂದ ಚಾಲಕನೊಬ್ಬ (ಸ್ವಂತಕ್ಕೆ ಕಾಫಿ ಖರ್ಚಿಗೆ ಮಾಡಿಕೊಂಡು) ಇವರನ್ನು ಅದರಲ್ಲೇರಿಸಿ ತಂದು, ಇಲ್ಲುದುರಿಸಿ ಹೋಗಿದ್ದ. ತಂಡದಲ್ಲಿ ಸ್ವಯವಿದ್ದ ಕೆಲವರು ನಮ್ಮನ್ನು ದೂರದಿಂದಲೇ ಗುರುತಿಸಿ, ಉಳಿದವರನ್ನು ಎಚ್ಚರಿಸಿದ್ದಿರಬೇಕು. ಹಿಂಗ್ಲಿಷ್‌ನಲ್ಲಿ ನಮ್ಮ ಪರಿಚಯವಾದಮೇಲೆ ಕನಿಷ್ಠ ಉಡುಪುಗಳಲ್ಲಿದ್ದ ಒಂದೊಂದೇ ಅಪರಾವತಾರ ತಂಗುದಾಣದಿಂದ, ಪುಟ್ಟ ಮನೆಯಿಂದ ಹೊರಬಿದ್ದವು. (ಬಾಟಲಿಯಿಂದ ಹೊರಬಿದ್ದ ದೆವ್ವಗಳ ಹಾಗೇ) ನಮ್ಮ ಇರವನ್ನು ನಗಣ್ಯ ಮಾಡಿ, ತಾವು ಅರ್ಧಕ್ಕೇ ಬಿಟ್ಟಿದ್ದ ಮಹಾಕಾರ್ಯಗಳಲ್ಲಿ ಮರುತೊಡಗಿಕೊಂಡವು. ತೊಟ್ಟಿದ್ದ ಏಕೈಕ ದೊಗಳೆ ಚಡ್ಡಿಯೊಳಗೇ ಅಸಹ್ಯವಾಗಿ ತೋರುವಂತೆ ಅರ್ಧ ಕುಡಿದ ಬಾಟಲೊಂದನ್ನು ತೂರಿಸಿಕೊಂಡು ಬಂದವನಂತೂ ಆಗ ತಾನೇ ಪಾತಾಳ ಬಿಟ್ಟಂತಿದ್ದ!
ತಂಗುದಾಣ ಮತ್ತು ಮನೆ ನಮಗಲ್ಲ ಎಂದು ನಮ್ಮಷ್ಟಕ್ಕೆ ಎಚ್ಚರಿಸಿಕೊಂಡು ಚುರುಕಾಗಿ ವೀಕ್ಷಣೆ ಮುಗಿಸಿದೆವು. ಪ್ರಕೃತಿ ಶಕ್ತಿಗಳ ಕುರಿತು ಧ್ಯಾನ, ಪರಿಸರ ಗಾನದೊಡನೆ ಲೀನ, ನಗರ ಜಂಝಡ ವಿತಾನ ಮತ್ತು ವನ್ಯ ಸೌಂದರ್ಯ ಪಾನ, ಜಲಧಾರೆಯಡಿಯಲ್ಲಿ ಸ್ನಾನ ಎಲ್ಲ ಸುಳ್ಳು, ಸುಳ್ಳು ಎಂದುಕೊಳ್ಳುತ್ತಾ ಸೇತುವೆ ಕಟ್ಟೆಯ ಮೇಲೇ ಬುತ್ತಿ ಬಿಚ್ಚಿದೆವು. ಎರಡು ಉರಿಮೆಣಸಿನ ಬೋಂಡ, ಆಯುಷ್ಯದ ಅಂಚನ್ನು ಮುಟ್ಟಿದ್ದ ನಾಲ್ಕು ಬಿಸ್ಕೆಟ್, ಎರಡೆರಡು ಹಣ್ಣಾಗಲಿದ್ದ ಬಾಳೆ ಮತ್ತು ಇದ್ದುದರಲ್ಲಿ ಸಮಾಧಾನ ಕೊಟ್ಟ ಎರಡೆರಡು ಚಮಚ ಅನಾನಸು ಮೊರಬ್ಬ. ಪಾನಕ್ಕೆ ಮಾತ್ರ ಹೊಟ್ಟೆ ತುಂಬ ದೂದ್ ಸಾಗರ್! ನಮ್ಮಿಂದಾಚೆ ಹತ್ತು ಮಂದಿ ರೈಲ್ವೇ ಹಳಿಗಳನ್ನೂ ಸೇರಿಸಿಕೊಂಡು ವೃತ್ತಾಕಾರವಾಗಿ ಕುಳಿತು ‘ಪಾನಕ ಪೂಜೆ’ ಸುರು ಮಾಡಿದ್ದರು (ಅಥವಾ ನಾವು ಬರುವ ಮುನ್ನವೇ ನಡೆದಿದ್ದನ್ನು ಮುಂದುವರಿಸಿದರು). ಅದರಿಂದಾಚೆ ಗುಹಾ ಬಾಗಿಲಿನಲ್ಲೇ ಇನ್ನೊಂದು ಗುಂಪು ಸಿರಿಂಜು ಸೂಜಿ ಹಿಡಿದು ಪ್ರಯೋಗ ಸುರು ಮಾಡಿತ್ತು! ನಾವಲ್ಲಿದ್ದ ಮುಕ್ಕಾಲೇ ಗಂಟೆಯಲ್ಲಿ ಅವರಲ್ಲೊಬ್ಬ ಅರೆಗಣ್ಣು ಬಿಟ್ಟಿದ್ದಂತೆಯೇ ಪ್ರಜ್ಞಾಶೂನ್ಯನಾಗಿ ಬಿದ್ದಿದ್ದ. ನರಕಾಸುರನೊಬ್ಬ ಆಧಾರಕ್ಕೊಬ್ಬನನ್ನು ಇಟ್ಟುಕೊಂಡು ಮುಂಡೊಂದನ್ನು ತೊರೆ ನೀರಲ್ಲಿ ಮುಳುಗಿಸಿ ತಂದು ಬಿದ್ದಿದ್ದವನಿಗೆ ಶೈತ್ಯೋಪಚಾರ ಮಾಡಲು ಹೆಣಗುತ್ತಿದ್ದ. (ಶುಶ್ರೂಷಕರ ಕಾಲುಗಳು ಸ್ವಾಯತ್ತತೆ ಘೋಷಿಸಿ, ತಲೆ ಉದ್ದೇಶಪಟ್ಟಲ್ಲಿಗೆ ಒಯ್ಯಲು ಕಷ್ಟಕೊಡುತ್ತಿದ್ದವು!) ಅಲ್ಲೇ ಪಕ್ಕದಲ್ಲಿ ಇನ್ನಿಬ್ಬರು ತಾವರೆ ಎಲೆಯಂತೆ ಯಾವುದನ್ನೂ ಅಂಟಿಸಿಕೊಳ್ಳದೇ ಸ್ವಾಂತ ಸುಖಾಯಾಂತ ಸೂಜಿಮದ್ದು ಪ್ರಯೋಗದಲ್ಲಿದ್ದರು. ಇಂಥವರ ಸಹವಾಸದಲ್ಲಿ ರಾತ್ರಿ ಕಳೆಯುವ ದೌರ್ಭಾಗ್ಯ ನಮಗೆ ಬಂದುಬಿಟ್ಟರೆ ಎಂದು ಹೆದರಿ, ನಾವು ಎರಡೆರಡು ಸ್ಲೀಪರ್ ಹಾರಿ ಕೊಲೆನಿನತ್ತ ಹೆಜ್ಜೆ ಹಾಕಿದೆವು.
ಮರಳು ದಾರಿಯಲ್ಲಿ ಮಳೆ ಮೋಡದ ಆಟ ಕಡಿಮೆಯಾಗಿತ್ತು. ಹೋಗುವಾಗ ಮೊದಲ ದೃಶ್ಯ ಒದಗಿಸಿದ ತಾಣದಿಂದ ದೂದ್ ಸಾಗರ್ ಅದ್ಭುತವಾಗಿ ಕಾಣುತ್ತಿತ್ತು. ಸಹಸ್ರಮಾನಗಳ ಆ ನಿರಂತರ ಪ್ರಕೃತಿಯಾಟವನ್ನು ನಾವೆಷ್ಟು ನಿಂತು ನೋಡಿದರೂ ಅದು ಹಳಸುವುದಿಲ್ಲ, ಆದರೆ ಅದರ ಕ್ಷಣದ ಸಹಸ್ರಪಾಲಿಗೂ ಸಲ್ಲದ ನಾವು ಸೋತುಹೋದೇವು; ದಾಪುಗಾಲಿಕ್ಕಿದೆವು. ಹಿಂದೆ ಸಿನೋಲಿಯಮ್ಮಿನ ಕೂಲಿಗಳು ಅಲ್ಲೇ ಚಾ ದುಕಾನಿರುವುದನ್ನು ಹೇಳಿದ್ದು ನೆನಪಾಯ್ತು. ಹೋದೆವು, ಒಳ್ಳೇ ಚಾ ಏನೋ ಕೊಟ್ಟ. ಆದರೆ ಅಲ್ಲಿ ಅದಕ್ಕೂ ಮಿಕ್ಕದ್ದೆಲ್ಲಾ ತರಹೇವಾರಿ ಬಾಟಲುಗಳಲ್ಲಿ, ಪೊಟ್ಟಣಗಳಲ್ಲಿ ತುಂಬಿ ಕುಳಿತಿದ್ದದ್ದು ನೋಡಿ ಪಶ್ಚಾತ್ತಾಪವಾಯ್ತು. ಅಕಾಲದಲ್ಲೂ ಅಂಥವನ ಚಿಕ್ಕಾಸು ಹುಟ್ಟುವಳಿಗೆ ನಾವು ಪಾಲುದಾರರಾಗಬಾರದಿತ್ತು!
ರೈಲ್ವೇ ಅಧಿಕಾರಿ ವರ್ಗದ ಸಣ್ಣಮಟ್ಟದ ಹಳಿ ತಪಾಸಣೆಗೆ ನೂಕುವ ಅಥವಾ ಪುಟ್ಟ ಯಂತ್ರಚಾಲಿತ ಟ್ರಾಲಿ ಬಳಸುವುದು ನಿಮಗೆ ಗೊತ್ತಿದೆ ಎಂದು ಭಾವಿಸುತ್ತೇನೆ. ನಮ್ಮ ಹಿಂದಿರುಗುವ ದಾರಿಯಲ್ಲಿ ಅಂಥದ್ದೊಂದು ಎರಡೆರಡು ಬಾರಿ ಮೇಲೆ ಕೆಳಗೆ ದಾಟಿದ್ದು ನೋಡಿದೆವು. ಮತ್ತೊಮ್ಮೆ ಕಂಡಾಗ ಬಿಗುಮಾನ ಬಿಟ್ಟು ಕೇಳಿಯೇ ಬಿಟ್ಟೆವು. ಬಹುಶಃ ಕೂಲಿಗಳನ್ನು ಮೇಲೆ ಕೆಳಗೆ ಮಾಡುತ್ತಿದ್ದ ಅದರಲ್ಲಿ ನಮಗೆಲ್ಲರಿಗೆ ಜಾಗವಿರಲಿಲ್ಲ. ವಾಸ್ತವದಲ್ಲಿ ನಮ್ಮಲ್ಲಿ ಒಂದಿಬ್ಬರಿಗೆ ನೆನೆದ ಬೆರಳಿನ ತುದಿಗಳಿಗೆ ಶೂ ಉಜ್ಜಿ ಗುಳ್ಳೆಗಳೆದ್ದದ್ದು ಮಾತ್ರ ಅಲ್ಲ, ನಿಯತ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಸ್ನಾಯು ಸೆಳೆತವೂ ಕಾಡುತ್ತಿತ್ತು. ಅವರನ್ನಷ್ಟೇ ಉಳಿದ ಅಲ್ಪ ದೂರಕ್ಕೆ ಟ್ರಾಲಿ ಒಯ್ದು ಕೊಟ್ಟಿತು. ಉಳಿದವರು ಹೆಚ್ಚಿನ ಬೀಸುಗಾಲು ಹಾಕಿದರೂ ಕೊಲೆಮ್ ತಲಪುವಾಗ ಸಂಜೆ ನಾಲ್ಕು ಗಂಟೆಯಾಗಿತ್ತು. ಅಂದರೆ ನಮ್ಮ ಅಂದಾಜನ್ನು ಸುಮಾರು ಎರಡು ಗಂಟೆಯಿಂದ ಮೀರಿದ್ದೆವು. (ನಮ್ಮ ದೂರದ ಅಂದಾಜೇ ತಪ್ಪಿತ್ತು.) ಉಪಚಾರಗಳ ಯಾವುದೇ ನಿರೀಕ್ಷೆಯಿರದ ಊರನ್ನು ಕೂಡಲೇ ಬಿಟ್ಟು ಮತ್ತೆ ಮೊಲೆನ್ನಿನಲ್ಲಿ ಹೆದ್ದಾರಿ ಸೇರಿಕೊಂಡೆವು.
ಅಮಲು, ಪ್ರಾಕೃತಿಕ ಸಂಭ್ರಮಗಳ ಮಿಶ್ರಣದ ಗೋವಾ ಈ ಓದಿನಲ್ಲೂ ನಿಮ್ಮನುಭವದಲ್ಲೂ ಅ-ಮಲಿನವೇ? ಅಮಲಿನದ್ದೇ? ಕೆಳಗಿದೆ ನಿಮ್ಮ ಸವಿವರ ಮತಕ್ಕೆ - ಪೆಟ್ಟಿಗೆ
ಗೋವಾಕ್ಕೆ ನಾನು ಹೋಗಿಲ್ಲ.ಅಲ್ಲಿ ಏನೇನು ನೋಡಬಹುದಾದದ್ದು ಇವೆ ಎಂಬುದನ್ನು ಅನೇಕ ಲೇಖನಗಳಿಂದ ಮತ್ತು ಭೇಟಿ ನೀಡಿದವರ ಮುಖೇನ ತಿಳಿದ ನಂತರ ಹೋಗಬೇಕೆಂಬ ಆಸೆಯೂ ಇಲ್ಲ.
ReplyDeleteಹಾಲಿನ ಸಾಗರವನ್ನೇ ಸವಿದವರು ನಮಗೂ ಅದನ್ನು ಹನಿಸಿದ್ದಕ್ಕೆ ಧನ್ಯವಾದಗಳು.
ReplyDeleteಅಮಲಿನ ಗೋವಾ ನಿಮ್ಮ ತುತ್ತಿರಲಿ ಗುಟುಕೂ ಅಲ್ಲ.
ನಿಮ್ಮ ಹನಿ ಹನಿಯೂ ಸಾಗರದ ಅನುಭವವನ್ನು ಸಮರ್ಥವಾಗಿ ಪರಿಚಯಿಸಿತು.
ಪ್ರೀತಿಯ ಅಶೋಕವರ್ಧನರಿಗೆ ನಮಸ್ಕಾರಗಳು. ಕೆಲವು ವರ್ಷಗಳ ಹಿಂದೆ ದೂದಸಾಗರಕ್ಕೆ ರೈಲಿನಲ್ಲಿ ಹೋದ ನೆನಪಿಗೆ ಜಾರಿದೆ. ಖುಷಿ ಆಯಿತು. ಮೊನ್ನೆ ಕೈರಂಗಳ ಯಕ್ಷಗಾನದಲ್ಲಿ ನಿಮ್ಮನ್ನು ನೋಡಿದೆ. ಮಾತನಾಡಿಸಲು ಆಗಲಿಲ್ಲ. ಕ್ಷಮಿಸಿ. ಆಟದ ಆಬ್ಬರಕ್ಕೆ ಊಟೋಪಚಾರಗಳ ಗಮ್ಮತ್ತು ಒಳ್ಳೆ ಸಾಥ್!!
ReplyDeleteಪಣಜಿಯ ಯೂತ್ ಹಾಸ್ಟೇಲಿರುವುದು ಮಾಂಡೋವಿ ತೀರ [ಜುವಾರಿ ? ] ಹಾಗೂ ಮಿರಾಮರ್ ಪಕ್ಕ. ಎಂಬತ್ತು ಎಂಬತ್ತ ಐದರ ಮದ್ಯೆ ಮೂರು ಸಲ ಹೋಗಿದ್ದೆ. ನನ್ನ ನೆನಪಿನಲ್ಲಿ ಮಿರಾಮರ್ ಅಪಾಯದ ಸಮುದ್ರ ತೀರ. ಅಲ್ಲಿ ಸಮುದ್ರ ಸೇರುವ ನದಿಯ ಪ್ರಬಾವ ಇದ್ದರೂ ಇರಬಹುದು. ಹಾಗೆಂದು ಸಾರುವ ಬೋರ್ಡುಗಳೂ ಅಲ್ಲಿದ್ದವು. ಕೊನೆ ಬೇಟಿ ಸೈಕಲಿನಲ್ಲಿ ದೆಹಲಿಯತ್ತ ಹೊರಟಾಗ. ಆ ಸಲ ಈ ಬರಹದಲ್ಲಿ ಉಲ್ಲೇಖಿಸಿದ ಒನ್ ಸ್ಟ್ರಾ ರೆವೊಲುಶನ್ ನನಗೆ ಕಳುಹಿಸಿದ ಪತ್ರಕರ್ತ ಕ್ಲೌಡ್ ಅಲ್ವಾರಿಸ್ ಅವರನ್ನೂ ಬೇಟಿಯಾಗಿದ್ದೆ. ಆ ಪುಸ್ತಕ ಪ್ರಕಟನೆ ಹೊಶಂಗಾಬಾದಿನ friends rural centre ಅನ್ನುವ ಸಂಸ್ಥೆಯಾದರೂ ಕ್ಲೌಡ್ ಅವರ ಪುಸ್ತಕ ವ್ಯವಹಾರ ಅದರ ಪ್ರಚಾರದಲ್ಲಿ ಗಣನೀಯ ಪಾತ್ರ ವಹಿಸಿದೆ.
ReplyDeleteಎಂಬತ್ತರಲ್ಲಿ ಯೂತ್ ಹಾಸ್ಟೇಲ್ ಸಂಘಟಿಸಿದ ಆರೇಳು ದಿನದ ಗುಡ್ಡ ನಡಿಗೆಯಲ್ಲಿ ಪಾಲ್ಗೊಂಡಿದ್ದೆ. ಗುಡ್ಡಗಳ ಹತ್ತಿಳಿದು ಬಂದ ನಾವು ಒಂದು ದಿನ ಮದ್ಯಾಹ್ನ ದೂದ್ ಸಾಗರ್ ಜಲಪಾತದ ಬುಡದಲ್ಲಿದ್ದೆವು. ಅಲ್ಲಿಂದ ಹತ್ತಿ ಬಂದ ನಮ್ಮ ಆ ರಾತ್ರಿ ವಸತಿ ಜಲಪಾತದ ಪಕ್ಕದಲ್ಲಿದ್ದ ಪಾಳು ಬಿದ್ದ ಹಳೆ ರೈಲು ನಿಲ್ದಾಣದಲ್ಲಾಗಿತ್ತು. ಮರುದಿನ ನಾವು ಕೊಲೆಮ್ ವರಗೆ ನಡೆದು ರೈಲು ಹತ್ತಿದ್ದೆವು. ಆಗ ಅಂದರೆ ಮೂವತ್ತೆರಡು ವರ್ಷ ಹಿಂದೆ ಕೆಳಗಿರುವ ಹಳ್ಳಿಗೆ ಸಾರ್ವಜನಿಕ ವಾಹನ ಸೌಕರ್ಯ ಇದ್ದಂತಿರಲಿಲ್ಲ. ಈಗ ರಸ್ತೆ ಇರಬಹುದು ಮತ್ತು ಅನುಭವ ಹೆಚ್ಚು ಚೆನ್ನಾಗಿರಬಹುದು ಅನಿಸುತ್ತದೆ. ನಾನು ಹೋದಾಗಲೂ ಗೋವಾ ಕುಡುಕರ ರಾಜ್ಯವೇ ಆಗಿತ್ತು. ಆದರೂ ಅಶೋಕರ ತಂಡಕ್ಕಾದ ಕೆಟ್ಟ ಅನುಭವಗಳು ನನಗಾಗಿರಲಿಲ್ಲ.
ಗೋವಾ ಎಂದ ಮೇಲೆ ಕೇಳಬೇಕೆ? ಸುರ ಪಾನದ ಚಟದವರಿಗೆ ಗೋವಾ ಹೋಗುವ ಸಂದರ್ಬ ಬಂದರೆ ಸ್ವರ್ಗಕ್ಕೆ ಮೂರೆ ಗೇಣು ಎಂದೆಣಿಸುವವರು. ಸುಂದರವಾದ ದೂದ್ ಸಾಗರ್ ನಿಮ್ಮ ಲೇಖನದ ಮೂಲಕ ಪರಿಚಯಿಸಿದ್ದಕ್ಕೆ ಧನ್ಯವಾದಗಳು.
ReplyDelete