27 July 2012

ದೊಂದಿಯಲ್ಲಿ ಬೆಂದ ಯಕ್ಷಗಾನ


ಇತಿಹಾಸವನ್ನು ತಿಳಿಯದವನು ಪುನರಪಿ ಅನುಭವಿಸುತ್ತಾನೆ ಎಂಬರ್ಥದ ಮಾತು ಆ ಮೂರೂ ಗಂಟೆ ಮತ್ತೆ ಮತ್ತೆ ನನ್ನ ತಲೆಗೆ ಬರುತ್ತಲೇ ಇತ್ತು. ಸಂದರ್ಭ - ಪಣಂಬೂರಿನಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ನಿಡ್ಲೆ ಇವರ ದೊಂದಿ ಬೆಳಕಿನ ಬಯಲಾಟ. ಮೊದಲ ಪ್ರಸಂಗ - ದುಶ್ಶಾಸನ ವಧೆ. ಅಚ್ಚ ಬಿಳಿ ಬಣ್ಣದ ಕಾಂಕ್ರಿಟ್ ಮೇಲ್ಮುಚ್ಚಿಗೆಯ ರಂಗಮಂಚ, ತಡ-ಸೂರ್ಯಾಸ್ತದ ದಿನಗಳಾದ್ದರಿಂದ ಅದರ ಒತ್ತಿನಿಂದ ತೋರುತ್ತಲೇ ಇದ್ದ ಶುಭ್ರ ಆಕಾಶ ಮತ್ತು ಹಿನ್ನೆಲೆಯ ನೀಲಪರದೆಯನ್ನು ಮೀರಿ ದೃಷ್ಟಿಯನ್ನು ಆಕರ್ಷಿಸುತ್ತಿದ್ದ ಚೌಕಿಯ ವಿದ್ಯುತ್ ದೀಪದ ಪ್ರಖರ ಬೆಳಕುಗಳು ಪ್ರಾಥಮಿಕವಾಗಿ ಸುಯೋಗ್ಯ ಕತ್ತಲನ್ನೇ ಕಟ್ಟದಾಗ ಆಟ ಸುರುವಾಯ್ತು.ರಂಗದ ಒಂದೊಂದು ಬದಿಗೆ ಎರಡು ಸ್ತರಗಳಲ್ಲಿ ಹದಿನಾಲ್ಕು ದೊಂದಿ, ರಂಗದ ಎದುರು ಐದು ದೊಂದಿ ಕಟ್ಟಿದ್ದರು. ಅದೂ ಕಡಿಮೆ ಎಂದನ್ನಿಸಿ, ಆಟ ನಡೆಯುತ್ತಿದ್ದಂತೆ ಎದುರು ಮತ್ತೆ ಐದು ಜ್ವಾಲಾಮುಖಿ (ಒಟ್ಟು ಮೂವತ್ತೆಂಟು) ಕಟ್ಟಿ ಆಟ ನಡೆಸಿದರು. ಇದರ ಮೇಲೆ ರಂಗದ ಕುಂದಗಳ ಜೊತೆಗೆ ಮೂರು ಮೈಕಿನ ಕಂಬಗಳು, ರಂಗದ ಹೊರಗಿನ ಇಕ್ಕೆಲಗಳ ಬೆಳಕಿನ ಆವರಣದಲ್ಲಿ ರಂಗಕ್ರಿಯೆಗೆ ಏನೇನೂ ಸಂಬಂಧಿಸದ ಚಟುವಟಿಕೆಗಳು. ಪ್ರೇಕ್ಷಕನ ದೃಷ್ಟಿಯ ಏಕಾಗ್ರತೆಗೆ ಒದಗಿದ ಅಡ್ಡಿಗಳು. ದೀವಟಿಗೆಗಳಿಗೆ ಎಣ್ಣೆ ಹಾಕಿ, ಚೆಂಡು ಒತ್ತಿಡುವವರ ಓಡಾಟ ಸಾಲದೆಂದು ಸ್ಮರಣೀಯ ಸನ್ನಿವೇಶವನ್ನು ವಿಡಿಯೋದಿಂದ ಹಿಡಿದು ದುರ್ಬಲ ಚರವಾಣಿಯಲ್ಲೂ ದಾಖಲಿಸುವ ಅಸಂಖ್ಯ ಉತ್ಸಾಹಿಗಳೂ ಸೇರಿ ಒಟ್ಟಾರೆ ಏನಾಗುತ್ತಿದೆಯೆಂದು ಗ್ರಹಿಸುವುದರೊಳಗೆ ಮೂರು ಗಂಟೆಗಳೇ ಸಂದು ಹೋಗಿತ್ತು. ದೀವಟಿಗೆಗಳ ಚಕ್ರವ್ಯೂಹದ ಒಳಗೆ ಚಡಪಡಿಸುತ್ತಿದ್ದ ಪ್ರಸಂಗವೆಂಬ ಅಭಿಮನ್ಯುವನ್ನು ತಂತ್ರವರಿಯದ ಪಾಂಡವ ಚತುಷ್ಟಯದಂತೆ ಪ್ರೇಕ್ಷಕ ವೃಂದ ಅಸಹಾಯಕವಾಗಿ ನೋಡುವುದಷ್ಟೇ ಸಾಧ್ಯವಾಗಿತ್ತು. ಇನ್ನೊಂದು ಕಥಾಮುಖಕ್ಕಿಳಿವ ಮುನ್ನ ಪ್ರೇಕ್ಷಕರಿಗೆ ಅಭಾರಿ ಹೇಳಲು ಮೇಳದ ಯಜಮಾನ, ಹಿರಿಯ ಕಲಾವಿದ - ನಿಡ್ಳೆ ಗೋವಿಂದ ಭಟ್ಟರು ಮೈಕ್ ಹಿಡಿದಿದ್ದರು.

“ನಾನು ದೊಂದಿ ಆಟದ ಬಗ್ಗೆ ಕೇಳಿದ್ದೇನೆ. ಆದರೆ ನೋಡಿಲ್ಲ. (ಅನಾವಶ್ಯಕ ಉಲ್ಲೇಖ) ಅಶೋಕರು ಆಡಿಸಿದ್ದು ಕೇಳಿಬಲ್ಲೆ. ವಿದ್ವಾಂಸರು, ಹಿರಿಯರು, ಅನುಭವಿಗಳು, ವಿಮರ್ಶಕರು ದಯವಿಟ್ಟು ಪ್ರದರ್ಶನವನ್ನು ನೋಡಿ ನಮ್ಮ ದೋಷಗಳನ್ನು ತಿಳಿಸಬೇಕು. ಅವಶ್ಯ ತಿದ್ದಿಕೊಳ್ಳುತ್ತೇವೆ.” ಇದನ್ನು ವೃತ್ತಿಪರ ಮೇಳದ ಯಜಮಾನನಿಂದ ನಾನಂತೂ ನಿರೀಕ್ಷಿಸಿರಲಿಲ್ಲ. ಕನಿಷ್ಠ ಹದಿನೈದು ದಿನಗಳ ಮೊದಲೇ ನಿಗದಿಕೊಂಡ ಪ್ರದರ್ಶನದಲ್ಲಿ ಮೂರು ಶಕ್ತಿಗಳ ಸಂಯೋಜನೆ ಇತ್ತು. ಎಂದಿನಂತಲ್ಲದ, ವೈಶಿಷ್ಟ್ಯಪೂರ್ಣವಾದ ದೊಂದಿ ಆಟವೇ ಆಡಿಸಬೇಕೆಂಬ ನಂದನೇಶ್ವರ ದೇವಾಲಯದ ಉತ್ಸಾಹಿಗಳ (ವೀಳ್ಯ ಕೊಟ್ಟವರು ಅಥವಾ ಆತಿಥೇಯರು) ಸಂಕಲ್ಪ ಮತ್ತು ಸಂಘಟನಾ ಕೌಶಲ್ಯ ಪ್ರಾಥಮಿಕ ಸ್ರೋತಸ್ಸು. ಕಾಲಿಕವಾದ ಮಳೆಗಾಳಿಗೆ (ಪುಣ್ಯವೋ ಪಾಪವೋ ಅಂತೂ ಪ್ರದರ್ಶನದುದ್ದಕ್ಕೆ ಬರಲಿಲ್ಲ) ಮರೆ ಕಟ್ಟುವಲ್ಲಿಂದ ತೊಡಗಿ, ಪ್ರೇಕ್ಷಕರ ಸೊಳ್ಳೆ ಸಂಕಟಕ್ಕೆ ಔಷಧ ಸಿಂಪರಣೆ, ನಾಲಿಗೆ ಚಾಪಲ್ಯಕ್ಕೆ ವಡೆ ಚಾದವರೆಗೂ ಕಾಳಜಿ, ವ್ಯವಸ್ಥೆ ಸಮರ್ಥವಾಗಿತ್ತು; ಹಾರ್ದಿಕ ಅಭಿನಂದನೆಗಳು. ಹಿಂದೆ ನೈಜ ದೊಂದಿ ಆಟಗಳನ್ನು ನೋಡಿದ, ಈಚಿನ ದಿನಗಳ ಹಲವು ಪ್ರಯೋಗಗಳಲ್ಲಿ ಸಕ್ರಿಯವಾಗಿ ಭಾಗಿಯೂ ಆದ ಬಲಿಪ ನಾರಾಯಣ ಭಾಗವತರ  ನಿರ್ದೇಶನ ಮತ್ತು ಭಾಗವತಿಕೆ ಎರಡನೇ ಶಕ್ತಿ. (ನಾನು ಸಂಘಟನೆಯಲ್ಲಿ ಪಾಲ್ಗೊಂಡ ಎರಡೂ ದೀವಟಿಗೆ ಆಟಗಳ ಯಶಸ್ಸಿನಲ್ಲಿ ಬಲಿಪರ ಪಾಲು ಬಹಳ ದೊಡ್ಡದು.) ಪ್ರಸ್ತುತ ಮಳೆಗಾಲದ ತಿರುಗಾಟದಲ್ಲಿರುವ ನಿಡ್ಳೆ ಮೇಳಕ್ಕೆ ಈ ಪ್ರದರ್ಶನ ಮತ್ತು ಪ್ರಸಂಗಕ್ಕೆ ಬಲಿಪರು ಅತಿಥಿ ಕಲಾವಿದರು. ಆದರೂ ಅವರ ಅನುಭವವನ್ನು ಮುಂದಾಗಿ ಪಡೆದುಕೊಳ್ಳುವ, ಅಗತ್ಯ ಬಿದ್ದರೆ ಕೂಡಿಕೊಂಡು ಅಭ್ಯಾಸ ನಡೆಸುವ ಯೋಚನೆ ಸಂಘಟಕರೂ ಮೇಳದವರೂ ಮಾಡಿದಂತೆ ಕಾಣಲಿಲ್ಲ. ಆತಿಥೇಯರು ಬೆಳಕು, ಧ್ವನಿಗಳ ಗಟ್ಟಿ ವ್ಯವಸ್ಥೆ ಮಾಡಿದ್ದರು. ಬಲಿಪರು ಚೆನ್ನಾಗಿಯೇ ಪದ ಹಾಡಿದರು. ಕಲಾವಿದರು ತಿಳಿದದ್ದನ್ನು ಪ್ರಾಮಾಣಿಕವಾಗಿಯೇ ಒಪ್ಪಿಸಿದರು.  ಆದರೂ ಸದುದ್ದೇಶದಿಂದಲೇ ಒಟ್ಟಾದ ಈ ಮೂರೂ ಶಕ್ತಿಗಳು ಪ್ರದರ್ಶನ ಕಣದಲ್ಲೇ ಪರಿಣಾಮಗಳನ್ನು ಚಿಂತಿಸತೊಡಗಿದ್ದರಿಂದ ಪ್ರೇಕ್ಷಣೆಯ ದೃಷ್ಟಿಯಲ್ಲಿ ಪ್ರದರ್ಶನ ಸೋತಿತು! ಕಾರಣಗಳು ಏನೇ ಇರಲಿ, ಅಂತಿಮವಾಗಿ ಯಾವುದೇ ಪ್ರದರ್ಶನದ ಖ್ಯಾತಿ ಅಪಖ್ಯಾತಿಗಳು ಮೇಳದ ಹೆಸರಿನೊಡನೆ ಉಳಿಯುತ್ತದೆ ಎನ್ನುವುದನ್ನು ಕನಿಷ್ಠ ನಿಡ್ಳೆಯವರು ಮರೆಯಬಾರದಿತ್ತು.

ರಾಘವ ನಂಬಿಯಾರ್ ಯಕ್ಷಗಾನದ ಸರ್ವತೋಮುಖ ಪರಿಣತ ಪ್ರಯೋಗಪಟು. ಪ್ರಸಂಗ ರಚನೆಯಿಂದ ಹಿಡಿದು ಭಾಗವತಿಕೆ, ಚಂಡೆ, ಮದ್ದಳೆಗಳವರೆಗೆ ಹಿಮ್ಮೇಳದ ಚಟುವಟಿಕೆ ಸ್ವತಃ ಮಾಡಿದವರು. ಬಣ್ಣ, ವೇಷ, ಮಾತು, ನರ್ತನವೇ ಮೊದಲಾದ ಮುಮ್ಮೇಳದ ಕಲಾಪಗಳಲ್ಲೂ ಕೆಲಸ ಮಾಡಿದವರು. ಇವುಗಳೊಡನೆ ಅಧ್ಯಯನ, ಸಂದರ್ಶನ ಎಲ್ಲಕ್ಕೂ ಮಿಗಿಲಾಗಿ ವಿಚಾರ ಮಂಥನಕ್ಕೆ ಮುಕ್ತಮನವಿಟ್ಟು ಮೊದಲು ಅಭ್ಯಾಸದ ಕಮ್ಮಟಗಳನ್ನು ನಡೆಸಿ, ಪ್ರದರ್ಶನಗಳನ್ನು ಕೊಟ್ಟವರು. ಅಲ್ಲೆಲ್ಲಾ ಸಿಳ್ಳೆ ಚಪ್ಪಾಳೆಗಳ ಮೋಹಕ್ಕೆ ಬೀಳದೆ, ಕೊರತೆಗಳನ್ನೇ ಹೆಕ್ಕಿಕೊಂಡು ಸಾಣೆ ಹಿಡಿಯುತ್ತ ಮತ್ತೆ ಪ್ರದರ್ಶನಗಳನ್ನು ನಡೆಸಿದವರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಅಂಗಳದಲ್ಲಿ ಕೊಟ್ಟ ಪ್ರದರ್ಶನ ನೋಡಿ ನಾನು ಮೋಹಿತನಾಗಿ, ನನ್ನ ವಠಾರಕ್ಕೆ ವೀಳ್ಯವನ್ನೇ ಕೊಟ್ಟೆ. ‘ಅಭಯಾರಣ್ಯ’ದಲ್ಲಿ ನಡೆದ ಪ್ರದರ್ಶನ ಅವಿಸ್ಮರಣೀಯ. (ಇಲ್ಲೇ ಹಿಂದಿನ ‘ದೀವಟಿಗೆ’ ಸರಣಿ ನೋಡಿ) ನಂಬಿಯಾರರ ಆವರೆಗಿನ ಯಕ್ಷ-ಪ್ರಯೋಗ ಫಲಗಳು ವ್ಯರ್ಥವಾಗದಂತೆ ಅವರೇ ಬರೆದ ‘ದೀವಟಿಗೆ’ ಹೆಸರಿನ ಪುಸ್ತಕವನ್ನೂ ಪ್ರಕಟಿಸಿದ್ದಾಯ್ತು. (ಅನಂತರವೂ ಎಲ್ಲೂರು, ಕಾಂತಾವರಗಳಲ್ಲಿ ನಂಬಿಯಾರ್ ಕೊಟ್ಟ ಪ್ರದರ್ಶನಗಳ ಯಶಸ್ಸಿಗೆ ನಾನು ಸಾಕ್ಷಿ.) ಕೆಲಕಾಲಾನಂತರ ಅವರ ಅಧ್ಯಯನದ (ಸಂಶೋಧನಾ ಮಹಾಪ್ರಬಂಧ) ಮೇರು ಕೃತಿಯಾಗಿ ರೂಪುಗೊಂಡ ಹೆಬ್ಬೊತ್ತಗೆ - ‘ಹಿಮ್ಮೇಳ’ (ನಂಬಿಯಾರರ ಅಭಿಮಾನಿಗಳು ದೊಡ್ಡ ಹಣ ಒಟ್ಟು ಮಾಡಿ ಪ್ರಕಟಿಸಿದ) ಪುಸ್ತಕವಂತೂ ದೊಂದಿ ಆಟದಿಂದ ಹಿಡಿದು ಸಮಗ್ರ ಯಕ್ಷಗಾನ ಪುನಾರಚನೆಗೆ ಆಚಾರ್ಯಕೃತಿಯೇ ಸರಿ. ಯಕ್ಷಗಾನ ವಿಷಯಕವಾಗಿಯೇ ಎಷ್ಟೋ ಹಿಂದೆ ಸಂಶೋಧನಾ ಮಹಾಪ್ರಬಂಧವೂ ಸೇರಿ ಹಲವು ಪುಸ್ತಕಗಳನ್ನು (ಅಸಂಖ್ಯ ಲೇಖನಗಳನ್ನೂ) ಲೇಖಿಸಿ, ಪ್ರಕಟಿಸಿ, ಬಳಲಿದ ಪ್ರಭಾಕರ ಜೋಶಿಯವರು ಆಗಾಗ ಒಟ್ಟಾರೆ ಯಕ್ಷಗಾನ ಶಾಸ್ತ್ರ ಸಾಹಿತ್ಯ, ವಿಮರ್ಶಾ ಗ್ರಂಥಗಳ ಕುರಿತು ವಿಷಾದದೊಡನೆ ಹೇಳುವ ಮಾತು ನೆನಪಾಗುತ್ತದೆ. ಜನ ಸಾಮಾನ್ಯರಿಗೆ (ಯಕ್ಷ ಪ್ರೇಕ್ಷಕರೇ ಆದರೂ) ಯಕ್ಷಗಾನ ಓದಲಿಕ್ಕೆ ಬೇಡ. ವೃತ್ತಿರಂಗದವರಿಗೆ “ನಮ್ಮದನ್ನು ಇದು ಎಂಥ ಹೇಳುದು” ಭಾವ! ‘ದೀವಟಿಗೆ’ ಪುಸ್ತಕದ ಪ್ರತಿಗಳು ನನ್ನಲ್ಲಿ ಇನ್ನೂ ದೊಡ್ಡ ಸಂಖ್ಯೆಯಲ್ಲಿ ಉಳಿದೇ ಇವೆ. ‘ಹಿಮ್ಮೇಳ’ ಸರಕಾರೀ ಸಗಟು ಖರೀದಿಯಲ್ಲಿ ಖಾಲಿಯಾದ್ದಕ್ಕೆ ನಂಬಿಯಾರರ ಮನೆಯ ಜಿರಳೆ, ಒರಲೆ, ಬೆಳ್ಳಿಮೀನುಗಳು ವಿಷಾದಿಸುತ್ತಿವೆ!
ಮದ್ಲೆಗಾರ ಹಿರಿಯಡಕ ಗೋಪಾಲರಾಯರು ಪ್ರಾಯ (ಶತಕದ ಸಮೀಪವಿದ್ದಾರೆ) ಮತ್ತು ಅನುಭವ ಎರಡರಲ್ಲೂ ತುಂಬ ದೊಡ್ಡವರು. ಅವರು ನಂಬಿಯಾರರಿಗೆ ಒದಗಿದ ಬಲುದೊಡ್ಡ ಸಂಪನ್ಮೂಲ ವ್ಯಕ್ತಿ. ನಂಬಿಯಾರ್ ಕೆದಕಿದಷ್ಟಕ್ಕೇ ಮುದುರಿ ಕೂರದ ಗೋಪಾಲರಾಯರು, ಈಚೆಗೆ ಬಡಗು ತಿಟ್ಟಿನಲ್ಲಿ ಸಾಕಷ್ಟು ದೀವಟಿಗೆ ಪ್ರಯೋಗಗಳನ್ನು ಮಾಡಿಸಿದ್ದಾರೆ. ಉಡುಪಿ ಯಕ್ಷಗಾನ ಕೇಂದ್ರದ ಅಪ್ರತಿಮ ಗುರು ಬನ್ನಂಜೆ ಸಂಜೀವ ಸುವರ್ಣ ದೀವಟಿಗೆ ಪ್ರದರ್ಶನಗಳ ಮಾಹಿತಿ ಸಂಗ್ರಹದಲ್ಲಿ, ವೈಚಾರಿಕ ನಿಕಷಕ್ಕೊಡ್ಡಿದ ಪ್ರಯೋಗಗಳ ಸರಣಿಯಲ್ಲಿ ಕಡಿಮೆ ತೊಡಗಿಕೊಂಡವರೇನೂ ಅಲ್ಲ. ಅನ್ಯ ಕಲಾ ಶಿಸ್ತುಗಳಿಂದ ಬಂದ ಪುರುಷೋತ್ತಮ ಅಡ್ವೆ, ವೃತ್ತಿಪರ ಪತ್ರಕರ್ತನಾದರೂ ಗಂಭೀರ ಯಕ್ಷ ಹವ್ಯಾಸಿ ಪೃಥ್ವೀರಾಜ ಕವತ್ತಾರ್ ಮೊದಲಾದವರೂ ತಮ್ಮ ಕುಲುಮೆಗಳಲ್ಲಿ ಸಾಕಷ್ಟು ಹದಬರಿಸಿ ದೀವಟಿಗೆ ಪ್ರಯೋಗಗಳನ್ನು ನಡೆಸಿದ್ದಾರೆ. 

ದೀವಟಿಗೆ ಆಟಗಳ ಈ ಕಾಲಘಟ್ಟದ ದಾಖಲೀಕರಣದ ಆವಶ್ಯಕತೆ ಗೆಳೆಯ ಮನೋಹರ ಉಪಾಧ್ಯರಿಗೆ ತೋರಿತು. ಫಲವಾಗಿ ಉಪಾಧ್ಯರೊಡನೆ ನಾನು, ಮಗ ಅಭಯಸಿಂಹನೂ ಸೇರಿಕೊಂಡು ಪಕ್ಕಾ ಪ್ರಯೋಗಶಾಲೆಯ ವಾತಾವರಣದಲ್ಲಿ ದೀವಟಿಗೆ ಆಟದ ಎರಡು ಪ್ರದರ್ಶನಗಳನ್ನು ದಾಖಲಿಸಿದೆವು. ಅದರ ಶುದ್ಧರೂಪದ ಡೀವೀಡೀಗಳನ್ನು ತಯಾರಿಸಿ, ಸಾರ್ವಜನಿಕಕ್ಕೂ ಮುಕ್ತಗೊಳಿಸಿದ್ದೇವೆ. (ವಿವರಗಳಿಗೆ ಮತ್ತೆ ‘ದೀವಟಿಗೆ’ ಸರಣಿ ನೋಡಿ) ತೆಂಕು ತಿಟ್ಟಿನ ‘ಕುಂಭಕರ್ಣ ಕಾಳಗ’ಕ್ಕೆ ಪೃಥ್ವೀರಾಜ ಕವತ್ತಾರ್ ಸಂಯೋಜನೆಯಲ್ಲಿ ಬಲಿಪರದೇ ನಿರ್ದೇಶನ. ವೃತ್ತಿಪರ ಹಿರಿಯ ಕಲಾವಿದರನ್ನು ಒಟ್ಟು ಮಾಡಿ, ಒಂದು ಅವಧಿಯ ಅಭ್ಯಾಸ ಪಾಠವನ್ನೂ ನಡೆಸಿ ಕ್ಯಾಮರಾದೆದುರು ರಂಗಕ್ಕೆ ತಂದದ್ದು ಅಪೂರ್ವ, ಸಂಗ್ರಾಹ್ಯ. (ಇದರ ಡೀವೀಡಿ ಪ್ರತಿಗಳು ಉಡುಪಿಯ ಯಕ್ಷಗಾನ ಕಲಾರಂಗದಲ್ಲಿ ಮಾರಾಟಕ್ಕಿವೆ) ಇತ್ತ ಬಡಗು ತಿಟ್ಟಿನಲ್ಲಿ ಉಡುಪಿ ಯಕ್ಷಗಾನ ಕೇಂದ್ರದ ಕಲಾವಿದರು ಗುರು ಸಂಜೀವರ ಗರಡಿಯಲ್ಲಿ ವಾರಗಟ್ಟಳೆ ಪಳಗಿ, ‘ಅರಗಿನ ಮನೆ’ ಕೊಟ್ಟದ್ದಂತೂ ನಭೂತೋ ಎನ್ನುವಷ್ಟು ಸುಂದರವಾಗಿ, ಔಚಿತ್ಯಪೂರ್ಣವಾಗಿ ಮೂಡಿಬಂದಿದೆ. (ಇದರ ಡೀವೀಡಿ ಪ್ರತಿಗಳು ಯಕ್ಷಗಾನ ಕೇಂದ್ರದಲ್ಲೇ ಮಾರಾಟಕ್ಕಿವೆ)ಅವು ಯಾವುದರ ಅರಿವೂ ಇಲ್ಲದಂತೆ, ಅಂಥವನ್ನು ಶಾಸನವಾಗಿ ಅಲ್ಲದಿದ್ದರೂ ಮೆಟ್ಟುಗಲ್ಲಾಗಿಯಾದರೂ ಬಳಸದೆ ನಡೆದ ಪಣಂಬೂರು ಪ್ರಯೋಗ ನಂಬಿಯಾರ್ ನಂಬಿದ ‘ಪುನಾರಚನೆಯ ಮಹಾಯಾನ’ಕ್ಕಂತೂ ಬಹಳ ದೊಡ್ಡ ಹಿನ್ನಡೆ.

ಐತಿಹಾಸಿಕವಾಗಿ ಹಿನ್ನೋಟ ಹರಿಸಿದರೆ ದೀವಟಿಗೆ ಆಟ ಒಂದು ರಂಗ ವೈಭವವಾಗಿ ರೂಪುಗೊಂಡದ್ದೇ ಅಲ್ಲ. ಕಾಲನಿಯತಿಯಂತೆ ಕಲೆ ವಿಕಾಸಗೊಂಡು ನೂರಿನ್ನೂರು ವರ್ಷಗಳ ಹಿಂದೆ ತಳೆದ ಒಂದು ರೂಪ ಅಷ್ಟೆ. ಅದು ನೂರು-ಐನೂರರ ಪ್ರೇಕ್ಷಕ ಸಂತೆಗೆ ಇದ್ದದ್ದಲ್ಲ.ಬಯಲಿನ ಅಗಾಧ ಕತ್ತಲಿನೊಳಗೆ ಲೆಕ್ಕ ಹಾಕಿದಂತೆ ನಾಲ್ಕೋ ಆರೋ ಜ್ವಾಲಾಕುಡಿಗಳು ಕಟೆಯುವ ಬೆಳಕಿನ ಆವರಣದೊಳಗೆ ನಡೆಯುವ ಕಲಾಪ. ಕಲಾವಿದರು ತೊಡುವ ಬಣ್ಣ ವೇಷಗಳು, ಅಭಿವ್ಯಕ್ತಿಸುವ ಭಾವಾಭಿನಯಗಳೆಲ್ಲಾ ಲಭ್ಯ ಬೆಳಕನ್ನು ಪ್ರೇಕ್ಷಕರಿಗೆ ಪ್ರತಿಫಲಿಸುವಲ್ಲಿ ಸಾರ್ಥಕ್ಯ ಪಡೆಯುತ್ತಿದ್ದವು. (ಗಮನಿಸಿ, ಬೆಳಕು ಪ್ರೇಕ್ಷಕನಿಗಲ್ಲ) ತೊನೆಯುವ ಬೆಳಕುಗಳ ನಡುವೆ, ವರ್ಣ ಛಾಯೆಗಳ ಬೇಧದಲ್ಲಿ, ಒಬ್ಬರಿಗೊಬ್ಬರು ನೆರಳಾಗದಂತೆ ನಡೆಗಳೂ ರೂಪುಗೊಂಡದ್ದಿರಬೇಕು. ಗಾನಗೋಷ್ಠಿಗೆ ಸೀಮಿತಗೊಳ್ಳದ ಹಿಮ್ಮೇಳ. ಹಿಮ್ಮೇಳ ಮುಮ್ಮೇಳಕ್ಕೆ ಸಹಜ ಕಂಠತ್ರಾಣವೊಂದೇ ಅಂದಿನ ಕಥಾ ಸಂವಹನ ಸಾಧನ. ಆಸಕ್ತರು ಸುತ್ತ ಮುತ್ತಿ, ಕಣ್ಣು ಚೂಪು ಮಾಡಿ, ಕಿವಿ ನಿಮಿರಿಸಿ, ಮನಸ್ಸು ತುಂಬಿಕೊಳ್ಳಬೇಕು. ಕಂಡೂ ಕಾಣದ, ಕೇಳಿಯೂ ಕೇಳಿಸದ ಪರಿಸರದಲ್ಲಿ, ಆಡಿಸುವವರು ಆಡುವವರು ಎಂಬ ಬೇಧವಿಲ್ಲದ ಸ್ಥಿತಿ ಏರ್ಪಟ್ಟು ಯಕ್ಷಗಾನ ಅಂದು ಒಂದು ಅನುಭವವೇ ಆಗುತ್ತಿದ್ದಿರಬೇಕು! ಮುಂದುವರಿದ ಕಾಲದಲ್ಲಿ ಗುಡಾರದ ಪ್ರದರ್ಶನಗಳು ಪೆಟ್ರೋಮ್ಯಾಕ್ಸ್, ಝಗಮಗಿಸುವ ವಿದ್ಯುತ್ ದೀಪಾಲಂಕೃತ ರಂಗಮಂಚ, ಅರ್ಧ ವೃತ್ತಾಕಾರದ ರಂಗಮಂಚಗಳೆಲ್ಲಾ ಮೂರೂ ದಿಕ್ಕನ್ನು ಪ್ರೇಕ್ಷಕ ಮುಕ್ತ ಮಾಡುತ್ತಿದ್ದವು. ಅಷ್ಟೂ ಉಜ್ವಲ ದೀಪಗಳನ್ನು ಪ್ರೇಕ್ಷಕರ ದೃಷ್ಟಿಯಿಂದ ಮರೆಮಾಡಲು ಪ್ರಯತ್ನವನ್ನೂ ನಡೆಸಿದ್ದರು. ಶಂಭು ಹೆಗಡೆಯವರಂತೂ ಹಿನ್ನೆಲೆಯ ಪರದೆಯ ಮೇಲೆ ಮಂಡಳಿಯ ಹೆಸರೇ ಮುಂತಾದ ಕಥಾಪರಿಸರ ಭಂಗ ಮಾಡುವ ಬರಹ, ಮಿರುಗುಗಳನ್ನೂ ನಿರಾಕರಿಸಿದ್ದು ಸುಲಭದಲ್ಲಿ ಮರೆಯುವಂತದ್ದಲ್ಲ.
ಪಣಂಬೂರು ದೇವಳದ ವಠಾರದಲ್ಲಿ ಒಂದೇ ದಿಕ್ಕಿಗೆ ಪ್ರೇಕ್ಷಕರು ಬಲು ಆಳದವರೆಗೂ ಕುಳಿತಿದ್ದರು. ವೇದಿಕೆಯ ಎಡಬಲ ಪಕ್ಕಗಳು ಅನಾವಶ್ಯಕ ಓಡಾಟಗಳಿಗಷ್ಟೇ ಒದಗಿ, ವ್ಯರ್ಥವಾಗಿದ್ದವು. ಒಂದೇ ಮುಖವನ್ನಾದರೂ ಹೆಚ್ಚು ಧನಾತ್ಮಕವಾಗಿ ಮೆರೆಸುವಂತೆ ಪ್ರೇಕ್ಷಕರಿಗೂ ಕಲಾವಿದರಿಗೂ ನಡುವೆ, ಅಂದರೆ ರಂಗದ ಎದುರಿನ ದೀವಟಿಗೆಗಳನ್ನು ತೆಗೆಸಬೇಕಿತ್ತು. (ನಂಬಿಯಾರ್ ಮತ್ತು ನಮ್ಮ ದಾಖಲೀಕರಣಗಳಲ್ಲೂ ನಾವು ಒಂದು ಪುಟ್ಟ ಕಾಲುದೀಪವನ್ನು ಮಾತ್ರ ಎದುರು ಬಳಸಿದ್ದೆವು.) ಬದಲು ಧಗಧಗಿಸುತ್ತಲೇ ಇದ್ದ ಐದು ಸಾಲದೆಂಬಂತೆ ಮತ್ತೆ ಐದು ಹೊತ್ತಿಸಿದಾಗ ಉಂಟಾದ ಬೆಳಕಿನ ತೀವ್ರತೆಯನ್ನು ದಾಟಿ ಪಾತ್ರಗಳ ಚಲನೆಯನ್ನು ಹುಡುಕುವಲ್ಲಿ ನಾನಂತೂ ನಿಜಕ್ಕೂ ಸೋತುಹೋದೆ. ನನ್ನ ಪಕ್ಕದಲ್ಲಿ ಕುಳಿತಿದ್ದ ಹಿರಿಯರೊಬ್ಬರು ವ್ಯವಸ್ಥೆಯ ದೋಷ ಗುರುತಿಸಲಾಗದೇ ಉದ್ದಕ್ಕೂ ಒಂದೆರಡಾದರೂ ಬಲ್ಬ್ ಹಾಕಬೇಕಿತ್ತು ಎಂದು ಗೊಣಗುತ್ತಲೇ ಇದ್ದರು, ಪಾಪ. ದುಸ್ಸಾಸನ ರಂಗ ಚಪ್ಪರದ ಪ್ರತಿಫಲನ, ಮೇಳದ ದೊಡ್ಡ ಬ್ಯಾನರ್, ದೊಂದಿ ಬೆಳಕಿಗೆ ಹೊಂದಿ ಕೆಲಸ ಮಾಡುವುದಿರಲಿ ನಿಲ್ಲಲೂ ತಿಳಿಯದ ಕಲಾವಿದರ ನಡೆಗಳು ಮೊದಲೇ ಹೇಳಿದ ಇತರ ಕೊರತೆಗಳೊಡನೆ ಸೇರಿತು. (ಯುದ್ಧ ರಂಗದ ಒಂದು ಬೀಭತ್ಸ ಸನ್ನಿವೇಶದಲ್ಲಿ ಐದಾರು ಮಂದಿ ಸುತ್ತ ಪ್ಲ್ಯಾಸ್ಟಿಕ್ ಕುರ್ಚಿ ಹಾಕಿ ಕೂರುವುದು ನಮ್ಮ ರಂಗ ಪರಂಪರೆಗೇ ದೊಡ್ಡ ಮಸಿಬೊಟ್ಟು)ಇವನ್ನೆಲ್ಲ ಕಳೆದು ಪ್ರತಿಫಲಿಸಬೇಕಿದ್ದ ಆಹಾರ್ಯವೂ ಇಲ್ಲಿ ಶುಭ್ರ ಬೆಳಕಿಗೆ ಹೊಂದುವಂತದ್ದೇ ಆದ್ದರಿಂದ ಉದ್ದಕ್ಕೂ ದೃಶ್ಯ ಮಸಕು, ಕಪ್ಪು! 


ಆತ್ಮ ಪ್ರತ್ಯಯವೆಂದು ಯಾರೂ ತಪ್ಪು ತಿಳಿಯಬಾರದು. ನಾವು ದಾಖಲೀಕರಣಕ್ಕೆ ನಾಲ್ಕೇ ದೀವಟಿಗೆ, ಎದುರೊಂದು ಪುಟ್ಟ ಕಾಲ್ದೀಪವನ್ನು ಬಳಸಿದ್ದೆವು! ಎಣ್ಣೆ ಹಾಕುವವರ ಓಡಾಟಗಳನ್ನು ತಪ್ಪಿಸಲು ನೆಲದಡಿಯಲ್ಲಿ ಹುಗಿದ ಕೊಳವೆಗಳಲ್ಲಿ ಇಂಧನ ಪೂರೈಸಲಾಗುವಂತೆ ಗ್ಯಾಸ್ ದೀವಟಿಗೆಗಳನ್ನೇ ರೂಪಿಸಿದ್ದೆವು. ಹಾಗೆಂದ ಮಾತ್ರಕ್ಕೆ ನೀಲ ಜ್ವಾಲೆಯೊಡನೆ ತೀವ್ರ ತಾಪ ಹೊರಟಿರಬಹುದೆಂದು ಭಾವಿಸಬೇಡಿ. ಗ್ಯಾಸ್ ಸೂಸುವ ಕಣ್ಣು ಮತ್ತು ಗಾಳಿಯ ಮಿಶ್ರಣದ ಹದ ನಿರ್ಧರಿಸಿ ಜ್ವಾಲೆಯನ್ನು ಪ್ರದರ್ಶನಕ್ಕೆ ತಕ್ಕ ಕಿತ್ತಳೆ/ಕೆಂಪು ವರ್ಣಕ್ಕೇ ಸುಲಭದಲ್ಲಿ ನಿಯಂತ್ರಿಸುವ ವ್ಯವಸ್ಥೆಯೂ ಅದರಲ್ಲಿತ್ತು. ನಮ್ಮ ದಾಖಲೀಕರಣದನಂತರ ಅವು ಸಾರ್ವಜನಿಕಕ್ಕೆ ಒದಗುವಂತೆ ಉಡುಪಿಯ ಯಕ್ಷಗಾನ ಕೇಂದ್ರಕ್ಕೆ ದಾನ ಮಾಡಿದ್ದೇವೆ. ಮತ್ತು ಅವುಗಳ ಎರವಲು ಸೇವೆಯ ಇನ್ನೆರಡು ದೊಂದಿ ಬೆಳಕಿನ ಆಟಗಳು ಯಶಸ್ವಿಯಾದ ವರದಿಗಳೂ ನಮಗೆ ಅಯಾಚಿತವಾಗಿ ಬಂದಿವೆ. ಪಣಂಬೂರಿನವರು ಯಕ್ಷಗಾನ ಕೇಂದ್ರದಲ್ಲಿ ಕೇಳಿದ್ದರೆ ಯಾರೂ ಇಲ್ಲವೆನ್ನುತ್ತಿರಲಿಲ್ಲ. 

ನಂಬಿಯಾರರ ಪ್ರದರ್ಶನದಲ್ಲೂ ದಾಖಲೀಕರಣದಲ್ಲೂ ನಾಲ್ಕು ಹಸಿ ಬಿದಿರ ಕಂಬಗಳು, ಸಪುರ ಮಾವಿನೆಲೆ ತೋರಣಗಳಷ್ಟೇ ರಂಗಮಂಚ. (ಹಿನ್ನೆಲೆಯ ಪರದೆಯೇ ಆಗುವ ಹಿಮ್ಮೇಳದ ಕಲಾಪಗಳ ಬಗ್ಗೆ, ಬಣ್ಣ ಮತ್ತು ಉಡುಪು ತೊಡುಪುಗಳಲ್ಲಿನ ಪರಿಷ್ಕಾರಗಳ ಬಗ್ಗೆ ನಂಬಿಯಾರ್ ಮಾಡಿದ ಕೆಲಸ, ಪಟ್ಟ ಶ್ರಮ ನಾನಿಲ್ಲಿ ವಿಸ್ತರಿಸುತ್ತಿಲ್ಲ) ಹಿಮ್ಮೇಳ ಕಳೆದರೆ ಸಹಜ ಕಾಡಿನ ಕತ್ತಲೆಯೇ ಹಿಂದಿನ ಪರದೆ! ಕಾಲ ಮಹಿಮೆಯನ್ನು ತಿರಸ್ಕರಿಸಲಾಗದೆ, ಬಳಸಲೇಬೇಕಾದ ಧ್ವನಿವರ್ಧಕಗಳನ್ನು ಬಿದಿರು ಹಾಗೂ ತೋರಣದ ಮರೆಯಲ್ಲಿಟ್ಟಿದ್ದೆವು.  ಹಿಮ್ಮೇಳಕ್ಕೆ ಕಾಲರ್ ಮೈಕ್. ಚೌಕಿಯಲ್ಲಿ ಮಂದ ಬೆಳಕಿನ ಬಲ್ಬ್‌ಗಳನ್ನಷ್ಟೇ ಬಳಸಿದ್ದು ಬಣ್ಣಗಾರಿಕೆಗೂ ಸ್ಪಷ್ಟ ಮಿತಿ ಒದಗಿಸಿತ್ತು. (ವಾಸ್ತವದಲ್ಲಿ ಅಲ್ಲೂ ದೀವಟಿಗೆಯನ್ನೇ ಬಳಸುವುದು ಅಪೇಕ್ಷಣೀಯ. ಆದರೆ ತತ್ಕಾಲೀನ ಚೌಕಿಯ ಕಿಷ್ಕಿಂಧೆಯಲ್ಲಿ ಬೆಂಕಿ ಅನಾಹುತ ಆಗಬಾರದೆಂದು ಸಣ್ಣ ರಾಜಿ ಮಾಡಿದ್ದೆವು) ನಂಬಿಯಾರರ ಪ್ರದರ್ಶನದಲ್ಲಿ ಪ್ರೇಕ್ಷಕರು ಮೂರೂ ದಿಕ್ಕುಗಳಲ್ಲಿ ನೆಲದ ಮೇಲೇ ಕುಳಿತು ‘ಜವಾಬ್ದಾರಿ’ಯನ್ನು ಮೆರೆದಿದ್ದರು, ಸಂತೋಷಪಟ್ಟಿದ್ದರು. ಆಟಕ್ಕೆ ಸಂಬಂಧಪಡದ ಬೃಹತ್ ಪೃಷ್ಟರ ಅನಿವಾರ್ಯ ಓಡಾಟವನ್ನು ಪ್ರೇಕ್ಷಾಂಗಣದ ಹಿನ್ನೆಲೆಗೇ ಸೀಮಿತಗೊಳಿಸಿದ್ದೆವು. (ಸಣ್ಣ ಉದಾಹರಣೆ: ಅಂದಿನ ಮಂ.ವಿ.ವಿ ನಿಲಯದ ಕುಲಪತಿ ಗೋಪಾಲ್ ತಡವಾಗಿ ಬಂದಿದ್ದರಂತೆ. ಎಲ್ಲರೂ ಕುಳಿತಂತೆ ಟಾರ್ಪಾಲ್ ಮೇಲೆ ಸುಮಾರು ಹೊತ್ತು ಕುಳಿತು, ಪ್ರದರ್ಶನ ನೋಡಿ ಹಾಗೇ ವಾಪಾಸಾಗಿದ್ದರು. ವೀಳ್ಯ ಕೊಟ್ಟ ‘ಯಜಮಾನ’ನೇ ಆಗಿದ್ದ ನನ್ನನ್ನು, ‘ಮೇಳದ ಯಜಮಾನ’ರಾಗಿದ್ದ ನಂಬಿಯಾರರನ್ನೂ ಕಂಡುಕೊಳ್ಳುವ ‘ಶಿಷ್ಟಾಚಾರ’ದ ತೊಂದರೆ ಕೊಡಲಿಲ್ಲ!) ಛಾಯಾಚಿತ್ರ ಗ್ರಾಹಕರಿಗೆ ಮಿಂಚುದೀಪ ಬಳಸದಂತೆ, ಪ್ರೇಕ್ಷಕರ ನಡುವೆ ಓಡಾಡದಂತೆ ಕಡ್ಡಾಯವಾಗಿ ನೋಡಿಕೊಂಡೆವು. ವೀಡಿಯೋ ದಾಖಲೀಕರಣವನ್ನು ನಾವು ಸಾರ್ವಜನಿಕ ಪ್ರದರ್ಶನ ಮಾಡಿರಲಿಲ್ಲ. ಆದರೂ ಬಂದಿದ್ದ ಹಲವು ವಿದ್ವಾಂಸರೂ ಕುತೂಹಲಿಗಳೂ (ನಾವು ಬೇಡಬೇಡವೆಂದರೂ ನೂರರ ಮೇಲಿದ್ದರು!) ಕ್ಯಾಮರಾ ವಲಯವನ್ನು ಮೀರುವ ಅಂತರದಲ್ಲಿ, ಎರಡು ದಿಕ್ಕುಗಳಲ್ಲಿ ನೆಲವೋ ಡೊಂಕು ಕುರ್ಚಿಯೋ ಸಿಕ್ಕಂತೆ ಕುಳಿತು ಸ್ಪಷ್ಟವಾಗಿ ಆನಂದಿಸಿದರು.
ಎಷ್ಟೂ ಯಶಸ್ವೀ ದುಶ್ಶಾಸನವಧೆಗಳನ್ನು ಮಾಡಿರಬಹುದಾದ ನಿಡ್ಳೆ ತಂಡದ ಈ ಪ್ರದರ್ಶನ ಮಾತ್ರ ಪ್ರೇಕ್ಷಕನ ಕಣ್ಣಿನಲ್ಲಿ ಶೋಭಿಸಲೇ ಇಲ್ಲ. ಮೇಲೆ ನಾನು ಸೂಚ್ಯವಾಗಿ ಹೇಳಿದವನ್ನೂ ಮೀರಿ ನೂರೆಂಟು ವಿವರಗಳನ್ನು ಲೆಕ್ಕಾಚಾರ ಹಾಕಿ, ಸಚಿತ್ರ ಬರೆದು, ಪ್ರಯೋಗದಿಂದ ಒರೆದು, ಪ್ರದರ್ಶನದಿಂದ ಮೆರೆಸಿದ ಪೂರ್ವಸೂರಿಗಳನ್ನು ಓದಿಲ್ಲ, ನೋಡಿಲ್ಲ, ತಿಳಿದಿಲ್ಲ ಎಂದು ಎಷ್ಟು ಕ್ಷಮಾಪೂರ್ವಕವಾಗಿ ಹೇಳಿದರೂ ಉಡಾಫೆ ಎನ್ನದೆ ವಿಧಿಯಿಲ್ಲ. ಪ್ರಸ್ತುತ ಪ್ರದರ್ಶನ ಅಥವಾ ಕಲಾವಿದರ ಕೂಟಕ್ಕೆ ಮೀರಿದ ಒಂದು ನನ್ನ ಅನಿಸಿಕೆಯನ್ನು ಇಲ್ಲಿ ಹೇಳದಿರಲಾರೆ. ಯಕ್ಷಗಾನ ಜಾನಪದ. ಇಲ್ಲಿ ರಾಗಗಳಿಲ್ಲ ಮಟ್ಟುಗಳು, ತಾಳಗಳಲ್ಲ ನಡೆಗಳು, ಕಂಠಸ್ಥ ಮಾತಲ್ಲ ಆಶು ಸಾಹಿತ್ಯ, ವ್ಯಾಕರಣ ಸಲ್ಲ ಪ್ರದರ್ಶನ ಖುಲ್ಲಾ (ಹೇಗಾದರೂ ಸರಿ ಆಟ ರೈಸಬೇಕು) ಎಂಬಿತ್ಯಾದಿ ವಾದಗಳು ಕೇವಲ ಸ್ವಚ್ಛಂದತೆಗೆ ಪರವಾನಗಿಯಾಗುವಲ್ಲೇ ಪರ್ಯಾವಸಾನಗೊಂಡಿವೆ. ಧಾರಾಳ ಲಭ್ಯವಿರುವ ಜಾಗತಿಕ ರಂಗ ಸಂಚಲನೆಯ ಮುನ್ನೆಲೆಯಲ್ಲಿ ನಿರಂತರ ಅಧ್ಯಯನ, ಪ್ರಯೋಗ, ಪರಿಶ್ರಮಗಳಿಲ್ಲದೇ ಯಕ್ಷಗಾನ ಉಳಿಯದು. ಅಕಾಡೆಮಿ, ವಿಶ್ವವಿದ್ಯಾನಿಲಯಗಳೆಂದು ಸಾಂಸ್ಥಿಕ ಬೆಳವಣಿಗೆಗಳಲ್ಲಿ, ಅನುದಾನ, ಸವಲತ್ತು, ಪ್ರಶಸ್ತಿ, ಸಮ್ಮಾನ, ಪ್ರಾಯೋಜನೆಗಳ ಸುರಿಮಳೆಯಲ್ಲಿ ಬೃಹತ್ ಆರ್ಥಿಕ ಸಂಚಲನೆ ಸಾಧ್ಯವಾಗಬಹುದು, ಯಕ್ಷಗಾನ ಅಲ್ಲ.

7 comments:

  1. ಈ ದೊಂದಿ ಯಕ್ಷಗಾನ ನೋಡುವ ಅವಕಾಶ ತಪ್ಪಿಹೋಯಿತಲ್ಲಾ ಎಂದು ಯೋಚಿಸುತಿದ್ದಾಗ ಮೂವತ್ತೆಂಟು ದೊಂದಿಗಳ ಆ ಯಕ್ಷಗಾನದ ಫೋಟೋಗಳನ್ನು ನೋಡಿದ್ದೆ. ಅಷ್ಟೆಲ್ಲಾ ದೊಂದಿಗಳನ್ನು ಹಾಕಿದರೂ ಹ್ಯಾಲೋಜನ್ ಬಲ್ಬಿನ ಪ್ರಖರಕ್ಕೆ ಬರಲು ಸಾಧ್ಯವಿಲ್ಲ. ನಮ್ಮ ಕಣ್ಣು ಮಂದ ಬೆಳಕಿಗೆ ಸ್ವಲ್ಪ ಸಮಯದಲ್ಲಿ ಹೊಂದಿಕೊಳ್ಳುತ್ತದೆ. ಆ ಮಂದ ಬೆಳಕಿನ ಯಕ್ಷಗಾನದ ಸೌಂದರ್ಯವೇ ಬೇರೆ ಎಂದು ನೋಡಿ ಆಸ್ವಾದಿಸಿದವರಿಗೆ ಮಾತ್ರ ಗೊತ್ತು. ‘ಅಭಯಾರಣ್ಯ’ದಲ್ಲಿ ನಡೆದ ಪ್ರದರ್ಶನದ ಫೋಟೋಗಳಿಗೆ ಇಲ್ಲಿ ನೋಡಿ.

    ReplyDelete
  2. ಶಿವರಾಮ ಕಾರಂತ ನಿರ್ದೇಶಿತ 2 ಪ್ರಯೋಗಗಳು ಮತ್ತು ಮಡಿಕೇರಿಯಲ್ಲಿ ಇದ್ದಾಗ 3 ಗಂಟೆ ಅವಧಿಯ ಒಂದು ಆಟ ಬಿಟ್ಟರೆ ನಾನು ಪೂರ್ಣಪ್ರಮಾಣದ ಯಕ್ಷಗಾನ ಪ್ರಸಂಗಗಳನ್ನು ನೋಡಿಲ್ಲವಾದ್ದರಿಂದ ಈ ಕುರಿತು ಏನನ್ನೂ ಹೇಳಲಾರೆ. ದೀವಟಿಗೆ ಪ್ರಯೋಗಗಳು ಎಂತಿರಬಹುದೆಂಬುದನ್ನು ಕಲ್ಪಿಸಿಕೊಳ್ಳಲು ಈ ಲೇಖನ ನೆರವು ನೀಡಿತು (ಕೃಷ್ಣಮೋಹನರು ಒದಗಿಸಿರುವ ಫೋಟೋಗಳೂ).

    ReplyDelete
  3. ದೀವಟಿಗೆ ಬೆಳಕಿನಲ್ಲಿ ಯಕ್ಷಗಾನ ಪ್ರಯೋಗ ಮಾಡಿ ಆ ಬೆಳಕಿನಲ್ಲಿ ಪ್ರೇಕ್ಷಕರಿಗೆ ಯಕ್ಷಗಾನದ ನಿಜವಾದ ಸ್ವರೂಪ ಮತ್ತು ಸಂತೋಷ ನೀಡಿದ ನಿಮ್ಮ ಹಾಗೂ, ಪ್ರತ್ಯಕ್ಷ ಅಪ್ರತ್ಯಕ್ಷವಾಗಿ ನಿಮ್ಮ ಪ್ರಯತ್ನಕ್ಕೆ ಸಹಕರಿಸಿದ ಎಲ್ಲರಿಗೂ ವಂದನೆಗಳು. ನಿಮ್ಮ ಲೇಖನ ಓದಿದಾಗ ಬಾಲ್ಯದಲ್ಲಿ ಹೊನ್ನಾವರ - ಭಟ್ಕಳ ಸೀಮೆಯಲ್ಲಿ ಬಡಗು ತಿಟ್ಟಿನ ಯಕ್ಶಗಾನ ಮಂಡಳಿಯವರು ದೀವಟಿಗೆ ಬೆಳಕಿನಲ್ಲಿ ರಾತ್ರಿಯಿಂದ ಬೆಳಿಗ್ಗೆಯವರೆಗೂ ನೀಡುತ್ತಿದ್ದ ಪ್ರಸಂಗ ನೋಡಿದ ನೆನಪಾಯಿತು. ಬಾಲ್ಯದ ದಿನಗಳ ನೆನೆಪನ್ನು ಮರುಕಳಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರಯೋಗ ಇದೇ ರೀತಿ ಯಶಸ್ವಿಯಾಗಿ ಮುಂದುವರಿಯಲಿ ಎಂದು ಹಾರೈಸುವೆ.

    ReplyDelete
  4. Dear Ashokanna,
    Thanks for a detailed insight into the dondi belakina aata.
    I was keen to watch a live show. Good I missed it!
    Very apt heading....
    It is unfortunate, that we do not bother to do our home work before presenting pre-meditated shows.

    Regards.
    saravu krishna bhat

    ReplyDelete
  5. Priyare, Nivu aadisida dondiyatada DVD kharidisi noodidde. Ondu yashasvi prayogada bahutheka ella mahithi labhya irudannu balasade idaddu udafe khaditha…..Prasanna Kumar K

    ReplyDelete
  6. ಲೇಖನ ತುಂಬಾ ಚೆನ್ನಾಗಿದೆ ಅಶೋಕ್…..ಆದರೆ…ನಾನು,ನೀವು….ನಮ್ಮಂತಹ ಬೆರಳೆಣಿಕೆಯ ಜನ ಮಾತ್ರ..ಇಂತಾದ್ದನ್ನು ಹಂಚಿಕೊಂಡು….ವಿಷಾದ-ಖುಷಿ ಪಡಬೇಕಷ್ಟೆ…..ಯಾರಿಗೂ ಬೇಡ………….ಒಟ್ಟಾರೆ ರೈಸಬೇಕು….ಕಲೆಗೂ ಸಂತೆಗೂ ವೆತ್ಯಾಸ ಗೊತ್ತಿಲ್ಲದವರಿಗೆ…..ಹೇಗೆ ಹೇಳೋದು….!! ಬೇರೆ ಎಲ್ಲಾ ಇರಲಿ… ” ಕಲೆಯ ಬಗ್ಗೆ…. ಒಂದು ಗೌರವ,ಕಳಕಳಿಯೊ….. ಶಿಸ್ತು, ಸೌಂದರ್ಯಪ್ರಜ್ಞೆಗಳ ಬಗ್ಗೆ ಒಂದಷ್ಟು ಗಮನವೂ….ಕೆರೆಮನೆಯವರನ್ನು ನೋಡಿ ಕಲಿಬಾರ್ದಾ ಇವರಿಗೆ….” ಎಂದು ನನ್ನ ಅಪ್ಪಯ್ಯ ಹೇಳಿದ್ದಕ್ಕೇ…”ದೇರಾಜೆಯವರು ಬಡಗಿನ ಪಕ್ಷ ….”ಎನ್ನುವ ಆಪಾದನೆ ಇತ್ತು…(ಗುಟ್ಟಿನಲ್ಲಿ)……
    ಮೂರ್ತಿ ದೇರಾಜೆ
    (ಅವಧಿಯಲ್ಲಿ)

    ReplyDelete
  7. Dear Ashok , Thanks for opening a channel towards me. I have gone through the Panamburu Dondi Ata (also the criticism and visuals). Chitragalu nimma matuglannu samrthisive. Ondu vastunishtha manassu yakshaganada belavanige mele kanniriside endu samadhanavayitu. Divatige emba prasthana nanna halavanda alla , ondu vastavika Ranga Abhiyana endu samadhanavayitu.

    ReplyDelete