22 June 2012

ಕಾರ್ಗಾಲದ ಪುಷ್ಪಗಿರಿಯಲ್ಲೊಂದು ರಾತ್ರಿ


(ಕುಮಾರಪರ್ವತದ ಆಸುಪಾಸಿನಲ್ಲಿ ಹೇಳಲುಳಿದ ಎರಡು ತುಣುಕುಗಳು ಭಾಗ ೨)

ಪುಷ್ಪಗಿರಿಯ ಮೇಲಿನ ನಾಗರಿಕ ಕೊಳೆಯನ್ನು ಮಳೆಗಾಲವೆಂಬ ಜಾಡಮಾಲಿ ತೊಳೆಯುವುದು ಸರಿ. ಆದರೆ ಅದಕ್ಕೆ ನಾವು ಒಂದು ದಿನದ ಸಾಕ್ಷಿಯಾಗುವುದಾದರೆ ಹೇಗಿರಬಹುದು ಎಂಬ ಯೋಚನೆಯೊಡನೆ ಯೋಜನೆಯನ್ನು ಬೆಸೆದೆವು. ಹಿಮಾಲಯದಲ್ಲಿ ವಾರಗಟ್ಟಳೆ ಚಾರಣ, ವಾಸಗಳಿಗೆ ಯುಕ್ತ ಸಲಕರಣೆಗಳು ದೊರೆಯುವುದು ನಾವೆಲ್ಲ ಕೇಳಿದ್ದೇವೆ. ಆದರೆ ಇಲ್ಲಿ, ಅದೂ ಸುಮಾರು ಎರಡು ದಶಕಗಳ ಹಿಂದೆ, ಅಂಥ ಆವಶ್ಯಕತೆ ಯಾರಿಗೂ ಬರಲಿಲ್ಲ, ಸಹಜವಾಗಿ ಪೂರೈಕೆಯೂ ಇರಲಿಲ್ಲ. ನನ್ನ ಬಳಿ ಹಳಗಾಲದ ಸಣ್ಣ (ಎರಡು ಮಂದಿಗಾಗುವ) ಗುಡಾರವೇನೋ ಇತ್ತು. ಅದು ಬಳಕೆಯಾದಲ್ಲೆಲ್ಲಾ ಅನ್ಯರ ಕಣ್ಣ ಕಿಸುರಾದದ್ದೇ ಹೆಚ್ಚು. ನಮ್ಮ ಉಪಯೋಗಕ್ಕೆ, ಅಂದರೆ ಸುಖವಾಸಕ್ಕೆ ಒದಗಿದ್ದು ಇಷ್ಟೇ ಅಂತ ಉಂಟು. ಆದರೂ ನಾನದನ್ನೇ ನೆಚ್ಚಿ ದೇವಕಿ, ಅಭಯರನ್ನು (ಆರೇಳು ವರ್ಷ ಪ್ರಾಯ) ಹೊರಡಿಸಿಬಿಟ್ಟೆ. ರೋಹಿತ್ ತನ್ನ ಸ್ಕೌಟ್ ಪರಿಣತಿ, ಸ್ವಂತ ಉದ್ದಿಮೆಯ ಅನುಭವದ ಬಲದಲ್ಲಿ ನನ್ನ ಗುಡಾರದ ನಕಲಿನ ಒಂದು ಗುಡಾರವನ್ನು ಹೊಲಿಸಿದ. ಅವನಿಗೆ ಸಹವಾಸಿ - ಸುಂದರರಾವ್. ಬಾಲಕೃಷ್ಣ ಉರುಫ್ ಬಾಲಣ್ಣ ಮಾತ್ರ ಅದೃಷ್ಟವಂತ. ಆತನ ಮಾವ ಕೊಟ್ಟ ಜರ್ಮನ್ ಗುಡಾರ ನಮ್ಮ ಯೋಜನೆಗೆ ಹೇಳಿ ಮಾಡಿಸಿದಂತಿತ್ತು. ಸಹಜವಾಗಿ ಸಹ-ಗುಡಾರಿಗ ಅರವಿಂದ ರಾವ್ ಕೂಡಾ ಲಾಭ ಪಡೆದರು. ಇನ್ನು ಹಾಸುವುದು, ಹೊದೆಯುವುದು, ಚಳಿಗೆ, ಮಳೆಗೆ, ಎಲ್ಲಾ ಸಾಮಾನುಗಳು ಚಂಡಿಯಾಗದಂತೆ ಎಂದು ಪಟ್ಟಿಯೇನೋ ಧಾರಾಳ ಬೆಳೆಸಬಹುದಿತ್ತು. ಆದರೆ ಅವನ್ನೆಲ್ಲಾ ನಾವೇ ಬೆನ್ನಹೊರೆಯಲ್ಲಿ ಹೊರಬೇಕಾದ್ದನ್ನೂ ಯೋಚಿಸಬೇಕಿತ್ತು. ಎಲ್ಲಕ್ಕೂ ಮುಖ್ಯವಾಗಿ ಮಾಮೂಲಿನಂತೆ ಕಾಡು ಸೌದೆ ಸಂಗ್ರಹಿಸಿ, ಕಲ್ಲುಹೂಡಿ ಕಿಚ್ಚೆಬ್ಬಿಸಿ ಅಡುಗೆ ಮಾಡುವುದು ಸಾಧ್ಯವಿರಲಿಲ್ಲ. ಹಾಗಾಗಿ ಪುಟ್ಟ ಗ್ಯಾಸ್ ಸ್ಟವ್ (ಐದು ಕೇಜಿ!) ಒಬ್ಬರಿಗೆ ಹೆಚ್ಚಿನ ಹೊರೆಯಾಗುವುದೂ ಅನಿವಾರ್ಯವಾಯ್ತು. ಆದಷ್ಟು ಸಿದ್ಧ ತಿನಿಸುಗಳನ್ನೇ ಜೋಡಿಸಿಕೊಂಡರೂ ನಮಗೆ ಬಿಸುಪೂಡಲಾದರೂ ಕೆಲವು ಅಡಿಗೆ ಸಾಮಾನುಗಳನ್ನೂ ದಿನಸಿಯನ್ನು ಹೊಂದಿಸಿಕೊಂಡೆವು.


ಮಡಿಕೇರಿ ಮೂಲಕ ಸೋಮವಾರ ಪೇಟೆಯವರೆಗೆ ಬಸ್ಸು. ಅಲ್ಲಿಂದ ಬಾಡಿಗೆ ಜೀಪಿನಲ್ಲಿ ಬೀದಳ್ಳಿ. ಪಿರಿಪಿರಿ ಮಳೆ, ಅದಕ್ಕೂ ಮಿಗಿಲಾಗಿ ಎಂದೂ ಭೂಮಿಯ ಮೇಲೆ ಕವುಚಿ ಬೀಳುವ ದಟ್ಟ ಕಾರ್ಮುಗಿಲು, ಶೀತಗಾಳಿ ನಮ್ಮನ್ನು ಬೆದರಿಸಿದವು. ಆದರೆ ನಾನು ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳ ತುಲನೆಯಲ್ಲಿ ಸದಾ ಹೇಳುವ ಮಾತೊಂದಿತ್ತು. ಹಿಮಾಲಯ ಸಣ್ಣ ತಪ್ಪಿಗೂ (ಅದು ನಮ್ಮದೇ ಆಗಬೇಕೆಂದೂ ಇಲ್ಲ) ಮರಣಾಂತಿಕ ಶಿಕ್ಷೆ ಕೊಡುತ್ತದೆ. ಆದರೆ ನಮ್ಮ ಘಟ್ಟ, ಸಣ್ಣ ಎಚ್ಚರಿಕೆ ವಹಿಸಿದರೆ ಸಾಕು, ಯಾವ ಋತುವಿನಲ್ಲೂ ಕಾಪಾಡುತ್ತದೆ! ನಾನಂತೂ ಅದನ್ನು ನಂಬಿದ್ದೆ. ಮಳೆಚಳಿಗೆ ತೊಟ್ಟ ಉಡುಪಿನ ಬಿಗಿತ ಮತ್ತು ಭಾರದ ಮೇಲೆ ಒಂದು ರಾತ್ರಿ, ಎರಡು ಹಗಲಿನ ಹಸಿವು, ವಾಸಗಳ ವ್ಯವಸ್ಥೆಯೆಲ್ಲ ಅಡ್ಡತಿಡ್ಡ ಕಟ್ಟುಗಳಲ್ಲಿ ಬೆನ್ನೇರಿ ಕುಳಿತಿದ್ದವು. ನಡಿಗೆ ಕುಮಾರಧಾರೆಯ ಮೇಲಿನ ಕಾಲುಸೇತುವೆಯ ಮೇಲೆ ಸಾಗುವಾಗ ಕೆಳಗಿನ ನೀರ ಅಬ್ಬರ ನಮ್ಮ ವಿಶ್ವಾಸವನ್ನು ಕದಲಿಸುವಂತಿತ್ತು. ಹೆಗಡೆಮನೆ ದೇವಳದವರೆಗೆ ಚುರುಕಾಗಿಯೇ ನಡೆದೆವು. ಅಲ್ಲಿ ಜಗುಲಿಯಲ್ಲಿ ಮಧ್ಯಾಹ್ನದ ಬುತ್ತಿಯೂಟ ಮುಗಿಸಿ, ವನ್ಯ ವಲಯ ಸೇರಿದೆವು. 

ಹಳ್ಳಿಗರು ಎಚ್ಚರಿಸಿದಂತೇ ಲಿಂಗದಹೊಳೆ ಸೊಕ್ಕಿನಲ್ಲಿತ್ತು. ಅದಕ್ಕೆ ಯಾರೋ ನೀರಾವರಿ ಯೋಜನೆಯಲ್ಲಿ ಅಡ್ಡಲಾಗಿ ಕಾಡುಕಲ್ಲು, ಮಣ್ಣು ಬಳಸಿ ಬಲವಾದ ಕಟ್ಟೆ ಮಾಡಿ, ನಡುವೆ ಮೂರು, ನಾಲ್ಕಡಿ ಎತ್ತರದ ಗೇಟು ಅಳವಡಿಸಿದ್ದಂತಿತ್ತು. ಕಟ್ಟೆ ಇನ್ನೂ ದೃಢವಾಗಿಯೇ ಕಾಣಿಸಿದರೂ ಗೇಟು, ಮತ್ತದರ ಒಂದು ಅಂಚು ತೇಲು ಮರ ಬಡಿದೋ ಏನೋ ಕೊಚ್ಚಿಹೋಗಿತ್ತು. ನಾವು ನೋಡುತ್ತಿದ್ದಂತೇ ಅದರ ಇನ್ನೊಂದು ಅಂಚಿನ ಬಲುದೊಡ್ಡ ಖಂಡವೊಂದು ಭಾರೀ ಸದ್ದಿನೊಡನೆ ಪ್ರವಾಹದಲ್ಲಿ ಬಿದ್ದು (ಕರಗಿಯೇ ಹೋಯ್ತು ಎನ್ನುವುದಕ್ಕಿಂತ,) ನಮ್ಮೆದೆ ನಡುಗಿಸಿತು. ಹಾಗೇ ಯಾವ ಕ್ಷಣದಲ್ಲೂ ಹದಿನೈದಿಪ್ಪತ್ತಡಿ ಎತ್ತರದ ಮೂಲಕಟ್ಟೆಯೇ ಕೊರೆದು, ಕೊಚ್ಚಿ ಹೋಗುವ ಅಪಾಯವಿತ್ತು. ಆ ಕ್ಷಣಕ್ಕೆ ಸುಮಾರು ಸೊಂಟಮಟ್ಟದ ಅದೂ ಭಾರೀ ಸೆಳವಿನ ಪ್ರವಾಹವನ್ನು ದಾಟು, ಇಲ್ಲವೇ ಎಲ್ಲ ರದ್ದು ಪಡಿಸಿ ಹಿಂದೆ ಹೋಗು ಎನ್ನುವ ಸವಾಲು. ನಮ್ಮಲ್ಲಿ ದ್ವಂದ್ವ ಇರಲಿಲ್ಲ. ನಮ್ಮಲ್ಲೊಬ್ಬನ ಹೊರೆಯೆಲ್ಲಾ ಇಳಿಸಿಟ್ಟು, ಸೊಂಟಕ್ಕೆ ರಕ್ಷಣಾ ಹಗ್ಗ ಕಟ್ಟಿ, ಕೈಗೊಂದು ಬಲವಾದ ಊರೆಗೋಲೂ ಕೊಟ್ಟು ಸುಮಾರು ಹತ್ತಡಿಯಗಲದ ಪ್ರವಾಹವನ್ನು ದಾಟಲಿಳಿಸಿದೆವು. ಅಲ್ಲಿ ಬರಿಯ ನೀರಲ್ಲ, ಕೆಲವೊಮ್ಮೆ ತೇಲಿಬರುವ ಸಣ್ಣದೊಡ್ಡ ಮರಗಳ ಬಗ್ಗೆಯೂ ಗಮನವಿರಬೇಕು. ಪ್ರವಾಹದತ್ತ ಮುಖ ಮಾಡಿ, ಅಡ್ಡಡ್ಡ ಹೆಜ್ಜೆಯಿಡುತ್ತಾ ಒಬ್ಬ ದಾಟಿದಲ್ಲಿಗೆ ನಾವು ದೊಡ್ಡ ಸವಾಲಿನ ಅರ್ಧ ಗೆದ್ದಂತಾಗಿತ್ತು. ಅನಂತರ ಚುರುಗಾಗಿ ಎರಡೂ ಬದಿಗಳಿಂದ ಬಿಗಿ ಹಿಡಿದ ಹಗ್ಗವಲ್ಲದೆ ಉಳಿದವರ ಕೈ ಸಹಾಯದಲ್ಲಿ, ಹೊರೆಗಳ ಸಮೇತ ಎಲ್ಲರೂ ದಾಟಿಕೊಂಡರು. ಕೊನೆಯವ ಮೊದಲಿಗನಂತೇ ಕೇವಲ ರಕ್ಷಣಾಹಗ್ಗ ಮತ್ತು ಊರೆಗೋಲಿನ ಬಲದಲ್ಲಿ ಎಲ್ಲರನ್ನು ಕೂಡಿಕೊಳ್ಳುವುದರೊಡನೆ ಎಲ್ಲ ದೊಡ್ಡ ಉಸಿರುಬಿಟ್ಟೆವು.

ಪ್ರವಾಹ ಸೊಂಟಮಟ್ಟದ್ದೇ ಇದ್ದರೂ ಅದಕ್ಕೆ ನಮ್ಮ ದೇಹದ ತಡೆಯುಂಟಾಗುತ್ತಿದ್ದುದರಿಂದ ಚಿಮ್ಮುತ್ತಿದ್ದ ನೀರು ನಮ್ಮನ್ನು (ಮಹಾಕವಿ ರನ್ನನಂ ನೆನೆದು) ಮಳೆಕೋಟಿನೊಳಗುಂ ತೊಯ್ದನ್ ಸ್ಥಿತಿಗೆ ತಂದಿತ್ತು. ಕ್ಷಣಕ್ಷಣಕ್ಕೆ ಕಟ್ಟೆಯ ಹಳಕುಗಳು ಕುಸಿಯುತ್ತಿದ್ದದ್ದು ನೋಡಿದರೆ, ನಾವು ಮರಳಿಹೋಗಲಾಗದ ಸ್ಥಿತಿಯಲ್ಲಿದ್ದೆವು! (ಮೊದಲೇ ನಾವು ಸುಬ್ರಹ್ಮಣ್ಯದತ್ತ ಇಳಿಯುವುದೆಂದು ನಿರ್ಧರಿಸಿದ್ದೆವು) ನಾವು ಗಂಟುಗದಡಿಗಳನ್ನು ಮರುಹೇರಿಕೊಂಡು ಮುಂದುವರಿದೆವು. ಜಾಡು ಪರಿಚಿತವೂ ಸ್ಪಷ್ಟವೂ ಇತ್ತು. ಭಾರೀ ಮರಗಳ ನೆರಳಿನಲ್ಲೇ ಸಾಗುತ್ತಿದ್ದುದರಿಂದ ತೊರೆತೋಡುಗಳ ಶ್ರುತಿಗೆ ಮಳೆ, ಗಾಳಿ, ಬಿಬ್ಬಿರಿ, ಕಪ್ಪೆಗಳ ಮೇಳಗಾನ ಚೆನ್ನಾಗಿಯೇ ಇದ್ದರೂ ನಮ್ಮ ದೃಷ್ಟಿ ಮತ್ತು ನಡಿಗೆ ಅಬಾಧಿತವಾಗಿತ್ತು. ಮುಂದಿನ ತೊರೆಗಳು ಸಣ್ಣಪುಟ್ಟವೇ ಇದ್ದು ಪ್ರಗತಿ ಕುಂಠಲಿಲ್ಲ. ಆದರೆ ಕುಂಟುವ ಇನ್ನೊಂದೇ ನೆಪ - ಜಿಗಣೆ; ನಮ್ಮೆಲ್ಲ ಪ್ರತಿರೋಧ ಕಾರ್ಯಕ್ರಮವನ್ನು ಸೋಲಿಸಿಬಿಟ್ಟಿ! ಹೊಗೆಸೊಪ್ಪು, ಸುಣ್ಣ, ಡೆಟ್ಟಾಲ್ ಸೋಕಿತ ಕಾಲ್ಚೀಲ ಎಲ್ಲವೂ ಲಿಂಗದಹೊಳೆಯಲ್ಲೂ ಮುಂದಿನ ಮಳೆಯಲ್ಲೂ ತೊಳೆತೊಳೆದು ಹೋಗಿತ್ತು. ಸಹಜವಾಗಿ ಪುರುಸೊತ್ತಾದಾಗೆಲ್ಲಾ ಕಾಲಿನತ್ತ ಗಮನ ಹರಿಸುತ್ತಿದ್ದೆವು. ಬೂಟಿನ ಕಂಠದ ಸುತ್ತು ಕಾಲ್ಚೀಲದಮೇಲೇ ಕಚ್ಚಿಕೊಂಡ ಜೊಂಪೆ, ಪ್ಯಾಂಟಿನ ಕೆಳ ಅಂಚಿನಿಂದ ನುಗ್ಗಿ ಅನುಕೂಲವಾದಲ್ಲೆಲ್ಲಾ ಅಂದರೆ ಮೊಣಕಾಲು, ಮೇಲಿನವರೆಗೂ ಕಚ್ಚಿ ಹಿಡಿದವು, ಭರ್ತಿಯಾಗಿ ಒಸರು ಉಳಿಸಿ ಉದುರಲಿದ್ದವು ಎಂದು ಧಾರಾಳ ಕೊಯ್ಲೋ ಕೊಯ್ಲು. (ಮತ್ತೆ ಅವು ನಮ್ಮ ಎಚ್ಚರಿಕೆಯನ್ನು ಮೀರಿ ಎಷ್ಟು ಕುಡಿದರೂ ನಮಗೆ ನಿಶ್ಶಕ್ತಿ ಬರುವಷ್ಟು ಹೆಚ್ಚಾಗದು ಎಂಬ ಧೈರ್ಯ) ಹಾಗೆಂದು ಅವನ್ನೇ ಬೇಟೆಯಾಡುತ್ತಾ ವಿಳಂಬಿಸುವಂತಿರಲಿಲ್ಲ. ಮಳೆಗಾಲದ ಮಂಕಿನ ಮೇಲೆ ಸಂಜೆಯ ಒತ್ತೂ ಬಿದ್ದರೆ ಶಿಖರದಲ್ಲಿ ಶಿಬಿರಸ್ಥಾನದ ಆಯ್ಕೆ ಮತ್ತು ಹೂಡಿಕೆ ಕಷ್ಟವಾದೀತೆಂಬ ಅರಿವಿನೊಡನೆ ನಡಿಗೆ ಚುರುಕಾಗಿಯೇ ಇತ್ತು.

ಬಿಸಿಲ ದಿನಗಳಲ್ಲಿ ಶಿಖರವಲಯದ ಬಂಡೆ ಬುಡ ತಲಪುವಾಗ ಸೂರ್ಯತಾಪದೊಡನೆ ನಮ್ಮೊಳಗಿನ ಧಗೆ, ದಾಹ ಮತ್ತು ಏರಿನ ತೀವ್ರತೆ ಸೇರಿ ಎಂಥವರೂ ಒಮ್ಮೆಗೆ ಕಂಗಾಲಾಗುತ್ತಿದ್ದರು. ಮಳೆಗಾಲದಲ್ಲಿ ಎಲ್ಲ “ತಣ್ಣಗೆ, ಸುಲೂಭ” ಎಂದೇ ಭಾವಿಸಿದ್ದವರಿಗೆ ಥಣ್ಣಗಿನ ಬೆವರು ಬಿಚ್ಚಿತ್ತು. ಬಂಡೆ ತಲಪಿದಾಗ ಮಳೆ ಬರುತ್ತಿರಲಿಲ್ಲ, ಭೂಮಿ ತಲೆಕೆಳಗಾಗಿ ಸಾಗರವೇ ಖಾಲಿಯಾಗುತ್ತಿದ್ದಂತಿತ್ತು; ನೀರಮೊತ್ತ ಅಪ್ಪಳಿಸುತ್ತಿತ್ತು. ಭೋರ್ಗುಡುವ ಗಾಳಿಯಂತೂ ನಮ್ಮೆಲ್ಲರನ್ನೂ ಉಚಿತ ಸವಾರಿಯಲ್ಲಿ ಶಿಖರಕ್ಕೆತ್ತಿ ಬಿಸಾಡುವ (Free air ticket ?) ಹುನ್ನಾರದಲ್ಲಿತ್ತು. ಸಣ್ಣವನೆಂದು ಹೊರೆಯ ತೂಕವೂ ಇಲ್ಲದ ಅಭಯನನ್ನಂತೂ ನಾವು ಗಟ್ಟಿಯಾಗಿ ಹಿಡಿದುಕೊಂಡೇ ಬಂಡೆಮೈ ಏರಿದೆವು. ಬಂಡೆಯ ಮೇಲಿನ ನೀರ ಹರಿವು ತೆಳುವಿದ್ದಾಗ ಮೂಡುವ ಪಾಚಿ, ತಗ್ಗಿನಲ್ಲಿ ಹೂಳುವ ಕೆಸರು ಇಲ್ಲದೆ ಏರುಹೆಜ್ಜೆಯೇನೋ ದೃಢವಾಗಿಯೇ ಇತ್ತು. ಬಂಡೆಯಗುಂಟ ಸಹಸ್ರ ಧಾರೆಯಲ್ಲಿಳಿಯುತ್ತಿದ್ದ ನೀರು ಕೆಳಗಿನಿಂದ ಅಲೆ ಅಲೆಯಲ್ಲಿ ಅಪ್ಪಳಿಸುತ್ತಿದ್ದ ಗಾಳಿಗೆ ಒಮ್ಮೊಮ್ಮೆ ಮೇಲಕ್ಕೆದ್ದು ಕಾರಂಜಿಯಂತಾಗುವ ಸೋಜಿಗ ನೋಡಿಯೇ ನಂಬಬೇಕು. ಹೆಚ್ಚು ಕಡಿಮೆ ತೆವಳಿದಂತೇ ಏರಿ ಪುಷ್ಪಬನವನ್ನು ಸೇರಿಕೊಂಡೆವು. ಆ ಕ್ಷಣದಲ್ಲಿ ಠೀವಿ ನೈನ್ ಬಂದು “ಲಿಂಗದಹೊಳೆ ಕಷ್ಟವೋ ಶಿಖರದ ಬಂಡೆ ಕಷ್ಟವೋ” ಎಂದೇನಾದರೂ ಕೇಳಿ ನಮ್ಮ ಬಾಯಿಗೆ ಮೈಕ್ ತುರುಕಿದ್ದರೆ ನಿಸ್ಸಂದೇಹವಾಗಿ ನಾವು ಶಬ್ದ ಸಿಕ್ಕದೇ ಒದ್ದಾಡುತ್ತಿದ್ದೆವು!

ನೀಗ್ರೋಗಳ ಸಾವಿರ ಸುಳಿಯ ಬಿಗಿ ತಲೆಗೂದಲಿನಂತೆ ಕುಮಾರನ ತಲೆಯ ಪುಷ್ಪವನವೇನೋ ದೃಢವಾಗಿತ್ತು. ಆದರೆ ಆ ಎತ್ತರಕ್ಕೂ ಋತುಮಾನಕ್ಕೂ ಸಹಜವಾದ ಗಾಳಿಯಾಟ ಮಾತ್ರ ನಮ್ಮ ರಾತ್ರಿಯ ತಾಣ ಬನದೊಳಾಗಿದ್ದರೂ ಬಯಲಲ್ಲಿದ್ದರೂ ಒಂದೇ ಎನ್ನುವಂತಿತ್ತು. ಆದಷ್ಟು ಮರಗಿಡಗಳಾವರಣ ಒದಗುವಂತಹ ಒಂದು ಮಟ್ಟಸ ಭೂಮಿಯನ್ನು ಆಯ್ದು, ಅವಸರವಸರವಾಗಿ ಶಿಬಿರ ಹೂಡುವುದರೊಳಗೆ ಪೂರ್ಣ ಕತ್ತಲಾವರಿಸಿತ್ತು. ಗುಡಾರಗಳ ಎಲ್ಲ ಮೂಲೆಗಳನ್ನು ಮಾಮೂಲಿನಂತೆ ಉದ್ದುದ್ದ ಆಣಿಬಡಿದು ನೆಲಕ್ಕೆ ಕೂರಿಸುವಂತಿರಲಿಲ್ಲ; ಒಂದೋ ಕೆಸರು, ಇಲ್ಲಾ ಕಲ್ಲಿನ ಹಾಸು. ಧಾರಾಳವಿದ್ದ ಕಾಡು ಕಲ್ಲುಗಳನ್ನಷ್ಟು ಮೂಲೆಗೂ ಅಂಚಿನುದ್ದಕ್ಕೂ ಹೇರಿ ಬಂದೋಬಸ್ತು ಮಾಡಿದ್ದೆವು. ಹಿಮಭೂಮಿಯಲ್ಲಿ ಮಾಟೆ ಮಾಡಿ, ಬೆಟ್ಟದ್ದೇ ಭಾಗವಾಗುವ ಅನುಕೂಲ ಇಲ್ಲೂ ಇದ್ದಿದ್ದರೆ! 

ಆ ಎತ್ತರದಲ್ಲಿ ಋತುಮಾನದುದ್ದಕ್ಕೂ ಮಳೆಗಾಳಿಗೆ ಬಿಡುವಿಲ್ಲ ಎಂದು ಭ್ರಮಿಸುವ ನಿರಂತರತೆ ಕಾಣುತ್ತಿತ್ತು. ನೀರಿನಲ್ಲಿ ನೆಂದು, ಹೊತ್ತ ಭಾರಕ್ಕೆ ಬಳಲಿ, ಅನಂತರದ ಶೈತ್ಯಕ್ಕೆ ಸೆಟೆಯುತ್ತಿದ್ದ ದೇಹಕ್ಕೆ ಬಿಸಿಯೂಡುವುದು ಮುಂದಿನ ಕಾರ್ಯಕ್ರಮ. ಸಲಕರಣೆ, ದಿನಸಿ ಏನೋ ನಮ್ಮಲ್ಲಿತ್ತು. ಆದರೆ ಆ ಗ್ಯಾಸ್ ಸ್ಟವ್‌ಗೆ ಗಾಳಿ ಬಡಿಯದಂತೆ ಮರೆ, ಚಾ, ಸಾಂಬಾರು ಮಳೆನೀರು ಸೇರಿಸಿಕೊಂಡು ಅಕ್ಷಯವಾಗದಂತೆ ತಡೆಯುವ ಮಾಡು ನಾವು ಹೊಂದಿಸಲೇ ಬೇಕಿತ್ತು. (ಪುಟ್ಟ ಗುಡಾರಗಳ ಒಳಗೆ, ವಾತಾಯನ ತೀರಾ ಕಡಿಮೆ ಇರುವಲ್ಲಿ, ಸ್ಟವ್ ಬಳಸುವುದು ಅಪಾಯಕಾರಿ.) ದೂರಂದಾಜಿನಲ್ಲಿ ಅರವಿಂದ ದೊಡ್ಡದೊಂದು ತಾಡಪತ್ರಿ ತಂದಿದ್ದರು. ನಮ್ಮಲ್ಲಿ ಒಂದಿಬ್ಬರು ಸರದಿಯಲ್ಲಿ ಅದನ್ನು ಎರಡು ಮರದ ಕಾಂಡ ಸೇರಿಸಿ ಬಿಗಿಯಾಗಿ ಹಿಡಿದು ಗಾಳಿಮರೆಮಾಡಿದೆವು. ಆದರೂ ಕಾಡುತ್ತಿದ್ದ ಗಾಳಿಯಲ್ಲಿ ಸುಮಾರು ಶಾಖ ಕಳೆದುಕೊಂಡರೂ ಮೊದಲು ಚಾ, ಅನಂತರ ರಾತ್ರಿಯೂಟಕ್ಕೆಂದು ಊರಿನಿಂದಲೇ ಒಯ್ದಿದ್ದ ಚಪಾತಿಗೊಂದು ಬಿಸಿ ಸಾಂಬಾರ್ ಅರವಿಂದ್ ಮಾಡಿ ಮುಗಿಸಬೇಕಾದರೆ ಸಾಕೋ ಸಾಕು. (ಮತ್ತಾಗ ಎಲ್ಲಾದರೂ ಠೀವಿ ನೈನ್ ಅರವಿಂದ್ ಬಾಯಿಗೆ ಮೈಕ್ ತುರುಕಿದ್ದರೆ, ಅದನ್ನೇ ಕಟಕಟನೆ ಕಡಿದು ನುಂಗಿಬಿಡುತ್ತಿದ್ದರು) 

ಶಿಬಿರಾಗ್ನಿಯ ಸುತ್ತು ಕುಳಿತು ದಿನದ ಕಲಾಪಗಳ ಕುರಿತು ಹರಟುವ ಸಂತೋಷ, ಸರದಿಯ ಮೇಲಿನ ಪಹರೆ ಎಂಬಿತ್ಯಾದಿ ಶಬ್ದಗಳೆಲ್ಲಾ ಅರ್ಥ ಕಳೆದುಕೊಂಡಿದ್ದವು. ಚಾ ಮಾಡಿದ ಕಷ್ಟ ಹಾಗಿರಲಿ, ಅದನ್ನು ಲೋಟಗಳಿಗೆ ಹಾಕಿಕೊಳ್ಳುವುದು, ಮತ್ತೆ ಕುಡಿಯಲೇಬೇಕೆಂಬ ಹಠಕ್ಕೆ ಹಿಡಿದು ಗುಡಾರ ಸೇರುವುದೂ ಅಂದು ಪ್ರತ್ಯೇಕ ಸಾಹಸಗಳೇ. ಅರವಿಂದರು ಕುದಿ ಸಾಂಬಾರಿನೊಡನೆ, ಚಕ್ಕಳಗಟ್ಟಿದ್ದ ಚಪಾತಿಗಳಿಗೆ  ಜ್ವಾಲಾಸೇವೆ ಮುಟ್ಟಿಸಿ ಹೆಚ್ಚಿನ ಖಾದ್ಯತೆಯನ್ನು ಒದಗಿಸಿದರು. ಅವರವರ ಮುಚ್ಚಿದ ಗುಡಾರದೊಳಗೆ ಅವನ್ನು ಸೇರಿಸಿಕೊಂಡು ಸವಿದೆವು. “ಅಲ್ಲಿಂದಲೇ ಕೈ ಹೊರಚಾಚಿದರೆ ಸಾಕು, ಪ್ರತ್ಯೇಕ ತೊಳೆಯಲು ಹೊರಡಬೇಕಿಲ್ಲ” ಎಂದೊಬ್ಬ ಬುದ್ಧಿವಂತರಲ್ಲಿ ನನ್ನದೊಂದು ಪ್ರಶ್ನೆ ಇತ್ತು. ಆದರೆ ಮರ್ಯಾದೆಗೆ ಹೆದರಿ ಗಂಟಲಲ್ಲೇ ಉಳಿದು ಹೋಯ್ತು - “ಮೂತ್ರ ವಿಸರ್ಜನೆಗೇನು ಮಾಡ್ತೀರಿ?” ಮಸಕು ಟಾರ್ಚ್ ಬೆಳಕಿನಲ್ಲಿ ಸಿಕ್ಕಷ್ಟು ಜಿಗಣೆಗಳನ್ನು ನಿವಾರಿಸಿ, ಉಡುಪು ತೊಡವುಗಳಲ್ಲಿ ಹೊಂದಾಣಿಕೆ ಮಾಡಿ, ಉಳಿದದ್ದೆಲ್ಲವನ್ನೂ (ಚಳಿಗಾಯ್ತೆಂದು) ಮೈಮೇಲೆ ಹೇರಿಕೊಂಡು ಮಲಗಿದೆವು. ಅದನ್ನು ಹೀಗೂ ಹೇಳಬಹುದು - ಗುಡಾರಗಳು ಗಿರಿಗಿಟ್ಲೆಯಾಡಿ ಗಾಳಿಗುದುರೆಯನ್ನೇರಿ ಶೃಂಗಶ್ರೇಣಿಗೆ ವಿಹಾರಕ್ಕೆ ಹೊರಡದಂತೆ ತಳ-ತೂಕವಾಗಿ ನಾವು ಬಿದ್ದುಕೊಂಡೆವು. 

ರಾತ್ರಿ ವಿಲಂಬಿತ ಗತಿಯಲ್ಲಿದ್ದರೆ, ಗಾಳಿಮಳೆ ಅತಿ ದ್ರುತದಲ್ಲಿದ್ದವು. ಎಷ್ಟೋ ಬಾರಿ ಗುಡಾರದ ಬಟ್ಟೆ ಉತ್ಪ್ರೇಕ್ಷಿಸುವ ಗದ್ದಲಕ್ಕಿಂತ ಹೊರಗಿನ ಚಳಿ, ಚಂಡಿ, ಬೀಸುಹೊಡೆತ, ಕತ್ತಲೆಯಾದರೂ ಆದೀತು ಎಂದನ್ನಿಸುತ್ತಿತ್ತು. ನಾನಂತೂ ಹಲವು ಬಾರಿ ಎದ್ದು ಹೋದದ್ದುಂಟು! ನಮ್ಮ ಗುಡಾರದಲ್ಲಿ ಒಳಗೂ ನೀರು ಧಾರಾಳವಿತ್ತು; ನಮ್ಮದು ಜಲಶಯ್ಯೆ. ಆಗೀಗ ಎಲ್ಲೋ ಕಾಲ ಬಳಿ, ಕೈಯಾಚೆ ಏನೋ ಮಿಸುಕಿದಂತನ್ನಿಸಿದರೆ ಟಾರ್ಚ್ ಬೆಳಗುವ ಅಗತ್ಯವಿರುತ್ತಿರಲಿಲ್ಲ. ನಮ್ಮ ಬಟ್ಟೆಯ ಯಾವುದೋ ಪದರದೊಳಗಿದ್ದ ಅತಿಥಿ (ಜಿಗಣೆ) ಸಂತೃಪ್ತನಾಗಿ ಕಳಚಿಕೊಂಡ ಎಂಬ ಅರಿವಿನಲ್ಲಿ, ಹಾಗೇ ಹೆಕ್ಕಿ ಹೊರಗೆಸೆದದ್ದಕ್ಕೆ ಲೆಕ್ಕವಿಲ್ಲ. ಅಪರಾತ್ರಿ ಮೂರುಗಂಟೆಯ ಸುಮಾರಿಗೆ ವರುಣ ಸೈನ್ಯ ಯುದ್ಧವಿರಾಮ ಘೋಷಿಸಿತು. ಸೆಟಗೊಂಡ ಕೈಕಾಲು ಬಿಡಿಸುವಂತೆ, ಪುಟ್ಟಾ ಗುಡಾರದೊಳಗೆ ಎರಡೂವರೆ ಜನ ಗಿಡಿದದ್ದಕ್ಕೆ ಜೋಮು ಹಿಡಿದ ಮೈಮುರಿಯುವಂತೆ ನಾನು ಮೆಲ್ಲಗೆ ಹೊರ ಕತ್ತು ಚಾಚಿ ತೆವಳಬೇಕು. “ಅರೆ, ಇದೇನು” ಕನ್ನಡಕವಿಲ್ಲದ, ನಿದ್ದೆಗೇಡೀ ಕಣ್ಣು ಇದೇನು ತೋರುತ್ತಿದೆ ಎಂಬ ಆಶ್ಚರ್ಯ! ಗಡಬಡಿಸಿ ಹೊರಬಂದೆ. ನಮ್ಮ ವಲಯವನ್ನು ಎಂದರೆ ಎಂಟು ಹತ್ತಡಿ ಅಂತರದಲ್ಲೇ ಸುತ್ತುಗಟ್ಟಿದಂತೆ ಪುಟ್ಟಪುಟ್ಟ ಮಂದ ಬೆಳಕಿನ ಮುದ್ದೆಗಳು. ಹೊಸ ನಮೂನೆಯ ವೈರಿಗಳ ಮುತ್ತಿಗೆಯೇ? ಮಧ್ಯಾಹ್ನ ಲಿಂಗದಹೊಳೆ ದಾಟಲು ಹೋದವರು ಉಳಿದಿರಬಹುದೇ ಎಂದು ಹುಡುಕಿ ಬಂದ ಹೆಗಡೆಮನೆ ಹಳ್ಳಿಗರೇ? ಔನ್ನತ್ಯವೋ ಆಯಾಸವೋ ತಂದ ಭ್ರಮೆಯೇ? ಗಟ್ಟಿ ನಿದ್ರೆಯೇನೂ ಬಂದಿರಲಿಲ್ಲವಾದರೂ ಕನಸೇ? ಒಂದು ತೆರನ ಅಸಹಾಯಕತೆಯಲ್ಲೇ ಕನ್ನಡಕ ಒರಸಿ ಇಟ್ಟುಕೊಂಡು, ಮಂಕು ಟಾರ್ಚಿನ ತಲೆಯೊಮ್ಮೆ ತಟ್ಟಿ, ಎರಡು ಸಂಶಯದ ಹೆಜ್ಜೆಯಿಟ್ಟೆ; ಗ್ಲೋ ವರ್ಮ್‌ಗಳು! ಹೌದು, ಮಿಣುಕು ಹುಳದಂತೆ ಸ್ವಪ್ರಕಾಶವುಳ್ಳ, ಆದರೆ ನಿರಂತರ ಬೆಳಕಿನ, ಹರಿದಾಡುವ ಹುಳಗಳು. 

ಹಿಂದೊಮ್ಮೆ, ಹುಣ್ಣಿಮೆಯ ರಾತ್ರಿ, ಚಿಕ್ಕಮಗಳೂರಿನ ಬಳಿಯ ಬೆಣ್ಣೆಕಲ್ಲಿನ ಪಾದದಲ್ಲಿ ನಮ್ಮದೊಂದು ತಂಡ ಕುಳಿತಿತ್ತು. ಆ ಮುಹೂರ್ತಕ್ಕೆ ಅಲ್ಲಿ ಸದಾ ಭರ್ಜರಿ ಭೂತದಾಟವಂತೆ. ಯಾವುದೋ ಪಾಳೇಗಾರನ ದಂಡು ವಿಜಯೋತ್ಸವ ಬರುತ್ತಿತ್ತಂತೆ. ಇದು ಸುಳ್ಳೆಂದು ಪ್ರಮಾಣೀಕರಿಸುವ ಉತ್ಸಾಹ ನಮ್ಮದು. ರಾತ್ರಿಯೂಟ ಕೊಟ್ಟ ಅಯ್ನೋರ ಮನೆಯವರು ನಾವು ‘ಹಾಳಾಗಿ ಹೋಗದಂತೆ’ ಸೋದಾಹರಣವಾಗಿ ಬಹಳ ಹೇಳಿಯೂ ನೋಡಿದ್ದರು. ಆಗ ಅನತಿದೂರದ ಕಾಫಿ ತೋಟವೇ ದೊಡ್ಡ ಜ್ವಾಲೆಯಾದಂತೆ, ಅದು ಸದ್ದುಸುದ್ದಿಲ್ಲದೆ ಒಮ್ಮೆಗೆ ಝಗ್ಗೆಂದು ಚಿಮ್ಮಿ, ಆಗಸ ನೆಕ್ಕಿತ್ತು. ಅಷ್ಟೇ ಮೌನದಲ್ಲಿ ನಂದಿದಾಗಲೂ ನಮಗೆ ಒಮ್ಮೆಗೆ ‘ಅಬ್ಬ’ ಎನ್ನುವ ಭಾವ. ಅಲ್ಲಿನದು ಎತ್ತರದ ಮರತುಂಬ ಹರಿದಾಡುವ ಮಿಣುಕು ಹುಳಗಳ ಸಮಶ್ರುತಿಯ ಆಟ. (ಇಂದಿನ ವಿಷಯುಗದಲ್ಲಿ ಜೇನುಹುಳಗಳಂತೆ ಮಿಣುಕುಹುಳಗಳೂ ಕಾಣೆಯಾಗಿವೆಯಂತೆ.) ಪುಷ್ಪಗಿರಿಯಲ್ಲಿ ಉಳಿದವರ ವಿಶ್ರಾಂತಿ ಹಾಳಾದರೂ ಸರಿ ಎಂದು ಆ ಜೀವವೈಭವವನ್ನು ಎಲ್ಲರಿಗೂ ಎಚ್ಚರಿಸಿ, ತೋರಿಸಿದ್ದೆ.

ಪ್ರಾತರ್ವಿಧಿಗಳು ಸುಳ್ಳು - ಅನುಕೂಲ ಶಾಸ್ತ್ರವೊಂದೇ ನಿಜ! ಅರವಿಂದರ ಕೃಪೆಯಲ್ಲಿ ಸಿಕ್ಕ ಬಿಸಿ ಚಾ ಧಮನಿಧಮನಿಗಳಿಗೆ ಹರಿಯಲು ಬಿಟ್ಟು, ಬ್ರೆಡ್ ಜ್ಯಾಮಿನ ಬೂಚು ಹಾಕಿಬಿಟ್ಟೆವು. ಹಿಂದಿನ ಪೌರಾಣಿಕ ಸಿನಿಮಾಗಳಂತೆ ನಾವು ಮೋಡದೊಳಗೇ ಇದ್ದೆವು. ಆದರೆ ಅದು ಬಿಡಿಸಿಟ್ಟ ಅರಳೆಯಂತೆ ಬಿಳಿ ಬಿಳಿ ಮುದ್ದೆಗಳಾಗಿ, ರಮ್ಯವಾಗಿ ಇರಲಿಲ್ಲ. ಆಕಾಶ, ಮರಗಿಡಗಳ ಸಂದು ಎಲ್ಲ ಕವಿದು ಕಪ್ಪಾಗಿತ್ತು. ಅಲ್ಲೂ ಕಳಚಿ ಬೀಳುತ್ತಿದ್ದ ದಪ್ಪ ಹನಿಗಳಾಟವನ್ನು (ಖಂಡಿತಾ ಮಳೆಯಲ್ಲ) ಆ ಹದದಲ್ಲಿ ನಮಗೂ ಆಟವೇ ಆಗಿತ್ತು; ನಾವು ಹೊಸದಾಗಿ ಚಂಡಿಯಾಗಲೇನೂ ಉಳಿದಿರಲಿಲ್ಲ. ಆದಷ್ಟು ನೀರು, ಜಿಗಣೆ ನಿವಾರಿಸಿ, ಎಲ್ಲ ಕಟ್ಟಿ, ಬೆನ್ನಿಗೇರಿಸಿದೆವು. ಶಿಖರವಲಯಕ್ಕೊಂದು ಔಪಚಾರಿಕ ಸುತ್ತು ಹಾಕಿದೆವು. ಪರಸ್ಪರ ಹತ್ತಡಿ ಅಂತರ ಮೀರಿದ್ದರೆ ನಾವು ಗುಂಪಾಗಿ ಉಳಿಯದಷ್ಟು ದಟ್ಟ ಮೋಡ, ಮಬ್ಬು ಒಂದೇ ದೃಶ್ಯ. ಹಳೆಪರಿಚಯದ ಭೂ ಲಕ್ಷಣಗಳು, ಕಡಿದು ಮಾಡಿದ್ದ ಜಾಡು ಇದ್ದದ್ದಕ್ಕೆ ಇಳಿದಾರಿ ಹಿಡಿಯುವುದು ಕಷ್ಟವಾಗಲಿಲ್ಲ. ಬಂಡೆ ಬುಡ ತಲಪಿದ ಮೇಲೆ ಪೂರ್ವ ನಿಶ್ಚಯದಂತೇ ಸುಬ್ರಹ್ಮಣ್ಯದತ್ತ ಪಾದ ಬೆಳೆಸಿದೆವು. ನನ್ನ ಮೊದಲ ಕುಮಾರಾದ್ರಿ ಚಾರಣದ ಕಾಲದಿಂದ ಈ ಜಾಡು ಸ್ವಲ್ಪ ‘ಅಭಿವೃದ್ಧಿ’ಯನ್ನೂ ತುಂಬಾ ಸವಕಳಿಯನ್ನೂ ಕಂಡಿದ್ದುದರಿಂದ ಎಲ್ಲೂ ಗೊಂದಲವಿರಲಿಲ್ಲ. ನಾವು ಕೆಳಕೆಳಗೆ ಹೋದಂತೆ ಹಗಲು ಏರೇರುತ್ತಿದ್ದಂತೆ ನಮ್ಮೊಡನೇ ಇದ್ದ ಮೋಡ, ಚಿರಿಪಿರಿ ಮಳೆ ಆಕಾಶದಂತರಕ್ಕೇರಿ ಹಾದಿ ಹೆಚ್ಚು ನಿಚ್ಚಳವಾಯ್ತು. ನಡಿಗೆ ಯಾಂತ್ರಿಕ ಮತ್ತು ದೀರ್ಘವೇ ಇದ್ದರೂ ಕಳೆದ ದಿನದ ರೋಚಕತೆಯನ್ನು ಹಂಚಿಕೊಳ್ಳುವುದರಲ್ಲಿ ದಾರಿಯೇ ಬೇಗ ಮುಗಿದಂತಿತ್ತು!

https://www.youtube.com/watch?v=wtAdrbPO7VIhttps://www.youtube.com/watch?v=wtAdrbPO7VI
ಪುಷ್ಪಗಿರಿ ಅಥವಾ ಕುಮಾರಪರ್ವತ ಶಿಖರವೂ ಸೇರಿದಂತೆ ಈ ಪರ್ವತ ವಲಯ ಈಚಿನ ವರ್ಷಗಳಲ್ಲಿ ಭಕ್ತಾಧೀನತೆಯಿಂದ, ಇನ್ನೂ ಸ್ಪಷ್ಟವಾಗಿ ಹೇಳುವುದಿದ್ದರೆ ಮೋಜುಗಾರರ ಸೆರೆಯಿಂದ ಪಾರುಗಾಣುವಂತೆ ಪುಷ್ಪಗಿರಿ ವನಧಾಮವಾಗಿದೆ. ಇಲಾಖೆ ಅತ್ತ ಲಿಂಗದಹೊಳೆಗೂ ಮುನ್ನವೇ ಠಾಣೆ ನಿರ್ಮಿಸಿ ಪ್ರವೇಶಧನವೇನೋ ವಸೂಲು ಮಾಡುವ ಪ್ರಕ್ರಿಯೆ ನಾನು ಅನುಭವಿಸಿದ್ದೇನೆ. ದಕ ವಲಯದಲ್ಲೂ ಹಾಗೊಂದು ವ್ಯವಸ್ಥೆಯಾಗಿದೆಯಂತೆ - ನಾನು ಸದ್ಯ ಹೋಗಿಲ್ಲ. ಅದು ಯಾತ್ರೀ ಸೌಲಭ್ಯ ಹೇರುವ ಹುಚ್ಚಾಟಕ್ಕಿಳಿಯದಿರಲಿ. ಎಲ್ಲಕ್ಕೂ ಮುಖ್ಯವಾಗಿ ಶಿಖರವಾಸದ ಅವಕಾಶವನ್ನು ಬಿಗಿಯಾಗಿ ನಿಯಂತ್ರಿಸುವ ದಿನಗಳು ಬೇಗನೇ ಬರಲೆ ಎಂದು ಹಾರೈಸುತ್ತೇನೆ.

(ವಿಸೂ: ಹಿಂದಿನ ಮತ್ತು ಈ ಕಂತುಗಳಿಗೆ ನೇರ ಸಂಬಂಧಿಸಿದ ಚಿತ್ರಗಳು ನನ್ನಲ್ಲೇನೂ ಉಳಿದಿಲ್ಲವಾದ್ದರಿಂದ ಭಾವ ಸಾಮೀಪ್ಯ ಒದಗಿಸುವ ಅನ್ಯ ಚಿತ್ರಗಳನ್ನು ನನ್ನ ಸಂಗ್ರಹದಿಂದ ಎತ್ತಿ ಬಳಸಿದ್ದೇನೆ)

7 comments:

  1. ಪುಷ್ಪಗಿರಿಯ ನೆನಪುಗಳು ನಿಮ್ಮೊಟ್ಟಿಗೆ ಕುಮಾರ ಪರ್ವತಕ್ಕೆ ಹೋಗಿದ್ದುದನ್ನು ನೆನಪಿಸಿತು. ಮಬ್ಬಿನಿಂದ ಮಬ್ಬಿಗೆ ಪ್ರತ್ಯಕ್ಷ ಭಾಗವಹಿಸಿದ ನೆನಪುಗಳು ಮರುಕಳಿಸಿದವು. ಜೊತೆ ಇರುವ ವಿವಿಧ ವಿಡಿಯೊಗಳ ಸಂಗ್ರಹ ತುಂಬ ಸಂತೋಷ ನೀಡಿದವು.

    ReplyDelete
    Replies
    1. ನಿಮ್ಮ ಪಾಲ್ದಾರಿಕೆಯ ಆರೋಹಣವೂ ಸೇರಿದಂತೆ ಇಲ್ಲಿ ಇದುವರೆಗೆ ಪ್ರಕಟವಾದ ಕುಮಾರ ಪರ್ವತ ಮತ್ತು ಅದರ ಆಸುಪಾಸಿನ ಅನುಭವಗಳನ್ನೆಲ್ಲ ಸಂಕಲಿಸಿ, ಪುಸ್ತಕಕ್ಕೆಂದು ವಿಶೇಷವಾಗಿ ಪರಿಷ್ಕರಿಸಿ, ರವಿಕುಮಾರರ ವಿಶೇಷ ಬೇಡಿಕೆಯ ಮೇರೆಗೇ ಅಭಿನವ ಪ್ರಕಾಶನಕ್ಕೆ ಕೊಟ್ಟಿದ್ದೇನೆ. ಹೆಚ್ಚಿನ ಅಪಾಯಕ್ಕೆ ಸಜ್ಜಾಗಿರಿ!
      ಅಶೋಕವರ್ಧನ

      Delete
  2. wonderful article from your memorylane...pushpagiri maLeagladalli eriddu sahasavE sari...

    ReplyDelete
  3. ಐದು ವರುಷಗಳ ಹಿಂದಿನ ಮಾತು. ಯಾವ ಪರ್ವತ ಹತ್ತ ಬೇಕಾದರೂ ಒಡೆದ ಬಾಟಲಿ ಮತ್ತು ನೀರಿನ ಪ್ಲಾಸ್ಟಿಕ್ ಬಾಟ್ಲಿಗಳು ದಾರಿ ತೋರುತ್ತಾ ಇದ್ದುವು.
    ಈಗ ಪರಿಸ್ಥಿತಿ ಹೇಗಿದೆ ??
    ಪ್ರೀತಿಯಿಂದ
    ಪೆಜತ್ತಾಯ

    ReplyDelete
    Replies
    1. ಕಸ ವೈವಿಧ್ಯ ಹೆಚ್ಚಿದೆ. ಗುಟ್ಖಾ, ಚಾಕಲೇಟುಗಳ ಚೀಟಿಗಳು, ನೂರೆಂಟು ಕುಕ್ಕೀಸ್‍ಗಳ ಸಾವಿರಾರು ರ್‍ಯಾಪರ್ರುಗಳು ಬರಿಯ ಶಿಖರದ ದಾರಿ ಮಾತ್ರವಲ್ಲ ನಾಗರಿಕತೆಯ ಅವನತಿಯ ದಾರಿಯನ್ನೂ ತೋರುತ್ತಲೇ ಇವೆ. ಅದಕ್ಕೇ ಹೇಸಿ, ರೋಸಿ, ತಲೆ ಥಣ್ಣಗೆ ಮಾಡಿಕೊಳ್ಳಲೇ ನಾವು ಮಳೆಗಾಲದ ಚಾರಣ ನಡೆಸಿದ್ದು ಎಂದರೂ ತಪ್ಪಾಗಲಾರದು
      ಅಶೋಕವರ್ಧನ

      Delete
  4. Hoon Hoon Howdu, Chennagithu.Sikapatte jartha ithu ! :-) mathe toofaani gali bere !
    Rohith Rao

    ReplyDelete
  5. ಈ ಚಾರಣ ತುಂಬಾ ರೋಚಕವಾಗಿದೆ.ಹೊರಗೆ ಮಳೆ ಸುರಿಯುತ್ತಿರುವಾಗ ಒಳಗೆ ಬೆಚ್ಚಗೆ ಕಂಬಳಿ ಹೊದ್ದು ಕುಳಿತು ಓದಿದೆ.ನಿಮ್ಮ ವರ್ಣನೆಯಂತೂ ನಾವೇ ಅಲ್ಲಿಗೆ ಹೋಗಿ ಅನುಭವಿಸಿದಂತೆ ಇದೆ.
    ನಮ್ಮ ಕುದುರೆ ಮುಖ ಚಾರಣದಲ್ಲಿ ಒಂದು ದಿನ ಒಂಟಿ ಮರದ ಬಳಿ ಎರಡು ಗುಡಾರ ಹಾಕಿ ಒಂದರಲ್ಲಿ ಹೆಂಗಸರು ಮಕ್ಕಳು ಇದ್ದರೆ ,ಮತ್ತೊಂದರಲ್ಲಿ ಗಂಡಸರು ಮಲಗಿದ್ದರು.ಆ ಗುಡಾರದಲ್ಲಿದ್ದವರಿಗೆ ಅರ್ಧ ರಾತ್ರಿಯಲ್ಲಿ ಕಾಡೆಮ್ಮೆ ಬಂದು ನಿಂತಂತೆ ಕಂಡು ನಮ್ಮನ್ನು ಎಚ್ಚರಿಸುವಾಗ, ನಮ್ಮ ಗುಡಾರದಲ್ಲಿ ಒಬ್ಬರಿಗೆ ವಾಂತಿ ಶುರುವಾಗಿ ಅದರ ವಾಸನೆ ಸಹಿಸಲಾರದೆ ನಾವು ಗುಡಾರದಿಂದ ಹೊರಬಂದಿದ್ದೆವು.ಆಗಲೂ ಅಷ್ಟೇ, ನಾಲ್ಕು ಜನ ಇರಬಹುದಾದ ಗುಡಾರದಲ್ಲಿ ಮಕ್ಕಳೂ ಸೇರಿ ಎಂಟು ಜನ ಇರುಕಿಕೊಂಡು ನಾನಾರೀತಿಯ ನಾಥ.ಸ್ನಾನ ಇಲ್ಲ, ಜೊತೆಗೆ ಬೆಳಗಿನಿಂದ ಬಿಸಿಲಲ್ಲಿ ನಡೆದಿದ್ದು.ಇದೆಲ್ಲಾ ಅನುಭವಿಸಿದವರಿಗೇ ಗೊತ್ತು.ಅಷ್ಟಕ್ಕೂ ಅಲ್ಲಿ ಕಾಡೆಮ್ಮೆ ಬಂದಿರಲಿಲ್ಲ,ಒಂಟಿಮರದ ನೆರಳು ಹಾಗೆ ಕಂಡಿದ್ದು.
    ಆ ಗ್ಲೋ ವರ್ಮ್ ನ ಚಮತ್ಕಾರವನ್ನು ನಾನು ನಾಗರಹೊಳೆಯಲ್ಲಿ ನೋಡಿದ್ದೆ.ಎರಡು ದೊಡ್ಡ ದೊಡ್ಡ ಮರಗಳಿಗೆ ಸೀರೀಯಲ್ ಲೈಟ್ ಹಾಕಿ ಆರಿ ಹತ್ತಿ ಮಾಡುತ್ತಿದ್ದ ಆ ದೃಶ್ಯ ಮರೆಯಲಾಗದು.
    ಪೌರಾಣಿಕ ಸಿನಿಮಾಗಳ ಪಾತ್ರ ಧಾರಿಗಳಂತೆ ಮೋಡದ ಮರೆಯಲ್ಲಿ ನೀವು ವಿಹರಿಸುವ ದೃಶ್ಯ ಕಲ್ಪಿಸಿಕೊಂಡು ನಗು ಬಂತು.ಟೀವಿ ನೈನ್ ಅವರ ಮೈಕ್ ನೇ ಕಟಕಟ ಕಡಿಯುವ ಪ್ರಸಂಗ ����.
    ನನ್ನ ತಂದೆಯವರು ಕೆಲಸಕ್ಕಿದ್ದ ಕಚೇರಿಯಲ್ಲಿ ಉತ್ತರ ಕರ್ನಾಟಕದಿಂದ ಆಡಿಟ್ ಗೆ ಬರುತ್ತಿದ್ದ ಕೆಲವರು ಕಟಕ್ ಜೋಳದ ರೊಟ್ಟಿ ಯನ್ನು ಬಟ್ಟೆಯಲ್ಲಿ ಸುತ್ತಿ ತಂದಿರುತ್ತಿದ್ದರು.ತಿಂಗಳಾದರೂ ಹಾಳಾಗದ ಆ ರೊಟ್ಟಿಗೆ ನೀರು ಚಿಮುಕಿಸಿ ಮೆತ್ತಗೆ ಮಾಡಿ ಚಟ್ನಿಪುಡಿ ಯೊಂದಿಗೆ ತಿನ್ನುತ್ತಿದ್ದರು.ಕಷ್ಟಾಪಟ್ಟು ಸಾಂಬಾರ್ ಮಾಡುವ ಬದಲು ಚಪಾತಿಯನ್ನು ಮಳೆ ನೀರಿಗೆ ಹಿಡಿದು ಹಾಗೇ ತಿನ್ನಬಹುದಿತ್ತು.ಹೇಗೂ ಅದು ಅರ್ಧ ಒದ್ದೆ ಯಾಗಿತ್ತಲ್ಲಾ?
    ಬರೀ ಜಿಗಣೆಗಳು ಮಾತ್ರ ಹರಿದಾಡಿದವೋ,ಬೇರೆ ಸರೀಸೃಪಗಳು ತೇಲಿ ಬರಲಿಲ್ಲವಾ?
    ದೇವಕಿಯವರು ಮತ್ತೊಮ್ಮೆ ಗಟ್ಟಿಗಿತ್ತಿ ಯಾಗಿ ಹೊರಹೊಮ್ಮಿದ್ದಾರೆ

    ReplyDelete