01 June 2012

ಹುಲಿ, ಹುಲಿ

(ಕುಮಾರಪರ್ವತದ ಆಸುಪಾಸು - ೧೨)
ನಾಗರಹೊಳೆ ವನ್ಯ ಜಾನುವಾರು ಗಣತಿ ಮುಗಿಸಿ ಬರುವ ಕಾಲಕ್ಕೆ ಟೈಗರ್ ಕ್ರೈಸಿಸ್ ಎಂಬ ವಿಡಿಯೋ ಕ್ಯಾಸೆಟ್ ಉಲ್ಲಾಸ ಕೊಟ್ಟದ್ದು ಹೇಳಿದ್ದೆನಷ್ಟೆ. ಆ ಸಮಯದಲ್ಲಿ ಜಾಗತಿಕ ಮಟ್ಟದಲ್ಲಿ ಹುಲಿಗಳ ಅಸ್ತಿತ್ವಕ್ಕೇ ಸಂಚಕಾರ ತರುವ ವಿವಿಧ ಮುಖದ ಕಲಾಪಗಳು ತೀವ್ರಗೊಂಡಿದ್ದವು. ಬೇಟೆಯ ಮೋಜಿಗಾಗಿ, ಸಾಕುಪ್ರಾಣಿಗಳ ರಕ್ಷಣೆಗಾಗಿ, ಅಕ್ರಮ ಕೃಶಿ ಮತ್ತು ಜಾನುವಾರು ಸಾಕಣೆಯಿಂದ ನೈಜ ಹುಲಿ ಆವಾಸಗಳ ಆಕ್ರಮಣದಿಂದಾಗಿ ಹುಲಿ ಸಂಖ್ಯೆ ಗಣನೀಯವಾಗಿ ಇಳಿಯುತ್ತಲೇ ಇತ್ತು. ಆ ಕಾಲದಲ್ಲಿ ಒಮ್ಮೆಲೇ ಅವನ್ನೆಲ್ಲ ಮೀರಿ ಹುಲಿಯ ಕಳ್ಳಬೇಟೆ ಹೆಚ್ಚಿತ್ತು. ಕಾರಣ ವನ್ಯ ಹುಲಿಗಳ ಅಂಗಾಂಶಗಳಿಗೆ ವಿದೇಶೀ ಕಳ್ಳಪೇಟೆಯಲ್ಲಿ ವಿಪರೀತಕ್ಕೇರಿದ ಬೇಡಿಕೆ!


ಚೀನಾವಲಯದ ಜನಪದ ವೈದ್ಯಕೀಯ ಅಭ್ಯಾಸಗಳಲ್ಲಿ ಹುಲಿಯ ಅಂಗಾಂಶಗಳಿಗೆ  ಅಪಾರ ಬೇಡಿಕೆ ಇತ್ತು.  ನಮ್ಮಲ್ಲೇ ಹುಲಿಯ ಚರ್ಮ, ಉಗುರು, ಹಲ್ಲುಗಳಿಗೆ ತೀರಾ ಸಣ್ಣ ಮಟ್ಟಿಗೆ ಬೇಡಿಕೆ ಇರುವುದು ತಿಳಿದೇ ಇದೆ. ಆದರೆ ವಿದೇಶಗಳ ನಾಟೀ ವೈದ್ಯದಲ್ಲಿ ಹುಲಿಯ ದೇಹದ ಎಲ್ಲಾ ಭಾಗಗಳು, ವಿಶೇಷವಾಗಿ ಲೈಂಗಿಕ ಶಮನಗಳಿಗಾಗಿ ಭಾರೀ ಬೇಡಿಕೆಯಲ್ಲಿದ್ದವು. ಅವಕ್ಕೆ ಪೂರಕವಾಗಿ ಮಲೇಶ್ಯಾ, ಥಾಯ್ ಲ್ಯಾಂಡ್‌ಗಳಂಥ ದೇಶಗಳಲ್ಲಿ ಅಧಿಕೃತ ಹುಲಿ ಸಾಕಣಾ ಕೇಂದ್ರಗಳೇ ನಡೆದಿದ್ದವು. (ಪಂಜರವೊಂದರ ಒಳಗೆ ಜೀವಂತ ಹುಲಿಯ ಬಾಯಿ ಕಟ್ಟಿ, ನಾಲ್ಕೂ ಕಾಲುಗಳನ್ನು ಪ್ರತ್ಯೇಕವಾಗಿ ದೂರಕ್ಕೆ ಎಳೆದು ಕಟ್ಟಿ, ಗಿರಾಕಿಗಳು ಅಂಗಾಂಶಗಳನ್ನು ಸ್ಪಷ್ಟ ನೋಡಿ, ಮುಟ್ಟಿ ಬೆಲೆ ಕಟ್ಟಿದ ಕೂಡಲೇ ಕೊಯ್ದು ಕೊಡುವ ವ್ಯವಸ್ಥೆಯ ಚಿತ್ರವೊಂದನ್ನು ಯಾವುದೋ ಪತ್ರಿಕೆಯಲ್ಲಿ ನೋಡಿದ್ದೆ!) ಅದರ ಮೇಲೂ ವನ್ಯ ತಳಿಗೆ ಬೇಡಿಕೆ. ಪೌಲ್ಟ್ರಿ ಕೋಳಿಗಿಂತ ನಾಟಿಕೋಳಿ ಬೇಕು ಎಂಬಂತೆ ಸಾಕು ಹುಲಿಗಿಂತ ಕಾಡುಹುಲಿ ಮದ್ದಿಗೆ ಹೆಚ್ಚು ಪರಿಣಾಮಕಾರಿ ಎಂಬ ಹೆಚ್ಚಿನ ಮೌಢ್ಯ. ಇದು ಭಾರತದ ಹುಲಿಧಾಮಗಳಿಗೆ ಭಾರೀ ಒತ್ತಡ ತಂದಿತ್ತು. ನಮ್ಮ ಕಾನೂನಿನ ತೊಡಕುಗಳು, ವನಧಾಮಗಳ ಅವ್ಯವಸ್ಥೆಗಳು ಮತ್ತು ಎಲ್ಲಕ್ಕೂ ಮುಖ್ಯವಾಗಿ ಇಲಾಖೆಗಳ ಅದಕ್ಷತೆ ಕಳ್ಳಬೇಟೆಯ ಮತ್ತು ಕಳ್ಳಪೇಟೆಯ ದಂಧೆಗಳನ್ನು  ಹತ್ತಿಕ್ಕುವಲ್ಲಿ ಭಾರೀ ತಿಣುಕಾಟ ನಡೆಸಿತ್ತು.

ಸಾಮಾಜಿಕವಾಗಿ ನೋಡಿದರೆ, ನಮ್ಮ ಪುರಾಣ, ಸಾಹಿತ್ಯಗಳಲ್ಲಿ ತೀರಾ ಗಂಭೀರವರ್ಗ ಮಾತ್ರ ‘ಹುಲಿಯಿದ್ದರೆ ವನ ಉಳಿಯುತ್ತದೆ, ಹಾಗೇ ವನದಿಂದ ಹುಲಿ ಉಳಿಯುತ್ತದೆ’ ಎಂಬ ದಿವ್ಯ ಸತ್ಯವನ್ನು ಸಾರುತ್ತದೆ. ಆದರೆ ಉಳಿದಂತೆ ನಾಗರಿಕರು ಅಜ್ಞಾನದಿಂದ, ಹಳ್ಳಿಗರು ಸ್ವಾರ್ಥದಿಂದ ಮಾಂಸಾಹಾರಿ ವನ್ಯ ಮೃಗಗಳೆಲ್ಲವನ್ನೂ ದುಷ್ಟಮೃಗಗಳೆಂದೇ ಹೆಸರಿಸುವುದು ರೂಢಿಯಾಗಿದೆ. ಅವು ಕೇವಲ ಹೊಟ್ಟೆಪಾಡಿಗಾಗಿ ಮಾತ್ರ ಕೊಲ್ಲುತ್ತವೆ. ಅನಿವಾರ್ಯವಾದರೆ ಮಾತ್ರ ಊರಿಗೆ ಬರುತ್ತವೆ ಎಂಬೆಲ್ಲಾ ಸತ್ಯಗಳು ಕೆಲವು ಸಾಮಾನ್ಯರ  ಅಂತಃಬೋಧೆಯಲ್ಲಿದ್ದರೂ ಬಹಿರಂಗವಾಗಿ ಒಪ್ಪಿಕೊಳ್ಳುವಲ್ಲಿ ಹಿಂದುಳಿಯುವವರೇ ಹೆಚ್ಚು. ಐದಾರು ದಿನ ಆಹಾರವಿಲ್ಲದೇ ಬಳಲಿದರೂ ಕಾಟಿಯಂಥ ಅಪಾಯಕಾರೀ ಮಹಾಕಾಯನನ್ನು ಹೊಂಚುವಲ್ಲಿ ಹುಲಿಗೆ ಮುಂದಿನ ಒಂದು ವಾರಕ್ಕಾದರೂ ಹಸಿವು ನೀಗುವ ಹೊಳಹಿರುತ್ತದೆ, ಎಂದ ಉಲ್ಲಾಸ್ ಮಾತು ಯಾರ ಅಂತಃಕರಣವನ್ನು ಕಲಕದಿರದು! ಹುಲಿ ನಾಮಾವಶೇಷವಾದರೆ ಕನಿಷ್ಠ ಅಳುವವರೂ ಇಲ್ಲದ ಸಮಾಜದ ನೈಚ್ಯಾನುಸಂಧಾನವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸುವ ಪ್ರಯತ್ನ ಕೃಶಿ ಮತ್ತು ನಾನು ಜಂಟಿಯಾಗಿ ಹಮ್ಮಿಕೊಂಡೆವು.

ವಿದ್ಯಾಸಂಸ್ಥೆಗಳು, ಸಂಘಗಳು ಮತ್ತು ಮುಖ್ಯವಾಗಿ ಪರಿಚಿತ ವ್ಯಕ್ತಿಗಳ ಮೂಲಕ ನಮ್ಮ ಸಂದೇಶ ಸಾರಿದೆವು. “ಆದಿತ್ಯವಾರಗಳಂದು ನಾವು ನಮ್ಮದೇ ವೆಚ್ಚದಲ್ಲಿ ಬಂದು, ಸುಂದರ ವಿಡಿಯೋ ಚಿತ್ರ ತೋರಿಸಿ, ಹುಲಿಯ ರಕ್ಷಣೆ ಬಗ್ಗೆ ಸಂವಾದ ನಡೆಸಿಕೊಡುತ್ತೇವೆ. ನೀವು ಜನ ಸೇರಿಸಿ. ಪ್ರದರ್ಶನಕ್ಕೆ ಬೇಕಾದ ಕತ್ತಲಕೋಣೆ ಮತ್ತು ವಿಡಿಯೋ ಪ್ಲೇಯರ್ ವ್ಯವಸ್ಥೆ ಮಾಡಿ, ಸಾಕು. ನಮ್ಮ ಸೇವೆ ಉಚಿತ. ಅಧ್ಯಕ್ಷತೆ, ಅತಿಥಿ, ಹಾರ, ಸ್ಮರಣಿಕೆ ಇತ್ಯಾದಿ ಯಾವುದೇ ಔಪಚಾರಿಕ ಬಂಧ ಅರ್ಥಾತ್ ವೃಥಾ ಕಾಲಕ್ಷೇಪ, ವೆಚ್ಚ ನಿವಾರಿಸಿ.” ಮಂಗಳೂರು, ಉಡುಪಿ, ಪುತ್ತೂರುಗಳಲ್ಲಿ ಸಾರ್ವಜನಿಕ ಮಟ್ಟದಲ್ಲಿ ದೊಡ್ದವರ ಮಟ್ಟದಲ್ಲೂ ನಮ್ಮ ‘ಹುಲಿ, ಹುಲಿ’ ಕಲಾಪ ಚೆನ್ನಾಗಿಯೇ ನಡೆಯಿತು. ಆದರೆ ನಮ್ಮ ಹೆಚ್ಚಿನ ಒತ್ತು ಇದ್ದದ್ದು ವನ್ಯಕ್ಕೆ ತಾಗಿದಂತಿರುವ ಗ್ರಾಮೀಣ ಪ್ರದೇಶಗಳ ಮೇಲೆ. ಇದರಲ್ಲಿ ನಾವು ಉತ್ತರಕ್ಕೆ ಶಂಕರನಾರಾಯಣದಿಂದ ತೊಡಗಿ ಇತ್ತ ಸುಳ್ಯ, ಸುಬ್ರಹ್ಮಣ್ಯದವರೆಗೂ ಒಟ್ಟಾರೆ ಸುಮಾರು ಮೂವತ್ತಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಿದೆವು.

ನಾವಿಬ್ಬರು ಮೊದಲು ಬೇಡಿಕೆಗಳನ್ನು ಒಟ್ಟು ಮಾಡಿ, ವಲಯವಾರು ವಿಂಗಡಿಸಿಕೊಂಡು ದಿನ ನಿಶ್ಚೈಸುತ್ತಿದ್ದೆವು. ಮತ್ತೆ ಆಯಾ ಆದಿತ್ಯವಾರ ಒಂದೊಂದು ವಲಯಕ್ಕೆ ದಾಳಿ. ಬೆಳಿಗ್ಗೆ ಬೈಕೇರಿ ವಿಡಿಯೋ ಹಿಡಿದುಕೊಂಡು ಹೊರಟರೆ ಸರಣಿಯಲ್ಲಿ ಒಮ್ಮೆ ಐದರವರೆಗೂ ಕಾರ್ಯಕ್ರಮ ನಡೆಸಿದ್ದುಂಟು. ಸುಮಾರು ಕಾಲ/ರ್ಧ ಗಂಟೆಯ ಪೀಠಿಕೆ, ಚಿತ್ರ ಪ್ರದರ್ಶನ ಮತ್ತೆ ಒಂದು ಗಂಟೆಯ ಸಂವಾದ. ಮೂವತ್ತರಿಂದ ಮುನ್ನೂರರವರೆಗೂ ಜನ ಸೇರಿದ್ದುಂಟು. ರಾಮಕುಂಜದಲ್ಲಂತೂ ಇಡಿಯ ಶಾಲೆಗೆ ಒಂದೇ ದಿನ ಮೂರು ‘ದೆಖಾವೆ’ ನಡೆಸಿಬಿಟ್ಟೆವು! ಸ್ಥಳದಿಂದ ಸ್ಥಳಕ್ಕಿದ್ದ ವ್ಯತ್ಯಾಸ, ಗುಂಪುಗಳಲ್ಲಿದ್ದ ವೈವಿಧ್ಯ ನೋಡಿಕೊಳ್ಳುತ್ತಾ ಸಾಮಾನ್ಯವಾಗಿ ಪೀಠಿಕೆ ‘ಪುರಾಣ’ ನಾನು ನಡೆಸುತ್ತಿದ್ದೆ. ವಿಡಿಯೋ ಪ್ರದರ್ಶನವಾದ ಮೇಲೆ ಅಪಾರ ಓದಿನ ಬಲದ ಕೃಶಿ, ಖಚಿತ ವೈಜ್ಞಾನಿಕ ಅಂಶಗಳ ಉದ್ಧರಣೆಯೊಡನೆ ಸಂಶಯ ಪರಿಹಾರ ನಡೆಸುತ್ತಿದ್ದರು. ತೀರಾ ಕೆಲವು ಮೂಢನಂಬಿಕೆಗಳು, ಇಂದು ಸ್ಪಷ್ಟ ನೆನಪಿಗೆ ಬಾರದಷ್ಟು ಸಣ್ಣ ಸಂಖ್ಯೆಯಲ್ಲಿ ಉಡಾಫೆಗಳನ್ನು ಬಿಟ್ಟರೆ ಎಲ್ಲಿಂದೆಲ್ಲಿಗೂ ನಮಗೆ ಉತ್ತೇಜನಕಾರಿ ಸ್ಪಂದನವೇ ಸಿಕ್ಕಿತು, ನಮ್ಮಲ್ಲಿ ಧನ್ಯತೆ ಮೂಡಿಸಿತು. ಇಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸಲೇಬೇಕಾದ ಒಂದು ಸಭೆ ಸುಬ್ರಹ್ಮಣ್ಯ ಮಠದ್ದು!

ಹೌದು, ಅಂದಿನ ಮಠಾಧೀಶ (ಸಂನ್ಯಾಸಿ) ವಿದ್ಯಾಭೂಷಣರು ನಮಗೆ ಗೆಳೆಯ ಬಾಲಚಂದ್ರ ಕರ್ಣಿಕರ (ಅಲ್ಲಿನ ಪದವಿಪೂರ್ವ ಕಾಲೇಜಿನ ಅಧ್ಯಾಪಕ) ಮೂಲಕ ಒತ್ತಾಯದ ಕರೆ ಕಳಿಸಿದರು. ನನ್ನ ಸಣ್ಣ ನಿರಾಕರಣೆಯನ್ನು ವಾಪಾಸು ತೆಗೆದುಕೊಂಡು ನಾವು ಮೂರುಜನ ಎರಡು ಬೈಕಿನಲ್ಲಿ ಹೋದೆವು. (ನನ್ನ ಜೊತೆಗೆ ದೇವಕಿ ಇದ್ದಳು. ಕೃಶಿ ಆಗಿನ್ನೂ 'ಕನ್ಯಾಕಾಂಕ್ಷಿ ಯೋಗ್ಯ ವರ’ ಮಾತ್ರ) ಅದು ಮಠಾಧೀಶರೆಲ್ಲಾ ಗೋರಕ್ಷಣೆ ಬಗ್ಗೆ ಉದ್ದುದ್ದ ಮಾತಾಡುತ್ತಿದ್ದ ಕಾಲ. ಅಂದು ಅಲ್ಲಿ ಸುಬ್ರಹ್ಮಣ್ಯಶ್ರೀಗಳೊಡನೆ ಬಾಳಿಗಾರು ಶ್ರೀಗಳೂ ಚಾತುರ್ಮಾಸ್ಯದಲ್ಲಿದ್ದರು. ನಾವು ಪ್ರಾಸಂಗಿಕವಾಗಿ ಜೀವವೈವಿಧ್ಯದ ಉಳಿವಿಗಾಗಿ ಅನಿರ್ಬಂಧಿತ ಗೋಸಂರಕ್ಷಣೆ ಕೂಡದು ಎಂದಿತ್ಯಾದಿ ಹೇಳಬೇಕಾದ ಮಾತುಗಳನ್ನೆಲ್ಲಾ ಯಾವ ಮುಲಾಜೂ ಇಟ್ಟುಕೊಳ್ಳದೇ ಹೇಳಿದೆವು. ಸಂವಾದದಲ್ಲಿ, ಆ ಕಾಲಕ್ಕೆ ಬೆಂಗಳೂರಿನಲ್ಲಿ ಬರಲಿದ್ದ ಯಾಂತ್ರಿಕ ಕಸಾಯಿಖಾನೆಯ ಉಲ್ಲೇಖವೂ ಬಂತು. ನಾನು ಕಸಾಯಿಖಾನೆಯನ್ನು ಬೆಂಬಲಿಸಿ ಅದಕ್ಕೂ ಹಿಂದೆಯೇ ಉದಯವಾಣಿಯಲ್ಲಿ ಬರೆದಿದ್ದ ಪತ್ರವನ್ನೇ ಜ್ಞಾಪಿಸಿ ಮತ್ತೊಮ್ಮೆ ಸಮರ್ಥಿಸಿಕೊಂಡೆ. ಎರಡೂ ಸ್ವಾಮಿಗಳು ನಿರುದ್ವಿಗ್ನರಾಗಿ ಕೇಳಿಸಿಕೊಂಡರು. ಕೊನೆಯಲ್ಲಿ ವಿದ್ಯಾಭೂಷಣರು ಹೇಳಿದರು “ನಮ್ಮ ಸ್ಥಾನಪ್ರಭಾವಕ್ಕೆ ಸಂಕೋಚಿಸಿ, ಯಾರೂ ಪ್ರಸ್ತಾಪಿಸದ ವಿವರಗಳನ್ನು ಹೇಳಿ ಉಪಕರಿಸಿದಿರಿ. ದಯವಿಟ್ಟು ಮುಂದೂ ಬರುತ್ತಿರಿ, ಇದೇ ಸತ್ಯನಿಷ್ಠುರತೆಯನ್ನು ನಮ್ಮಲ್ಲಿ ನಡೆಸಿಕೊಡಿ.”

ಅಶೋಕವನ

ಉಲ್ಲಾಸರ ವನ್ಯಪರ ಚಟುವಟಿಕೆಗಳಿಗೆ ಈ ವಲಯದಲ್ಲಿ ಸಹಜ ನೇತಾರನಾಗಿ ಒದಗಿಬಂದ ತರುಣ ನಿರೇನ್ ಜೈನ್. ನಾನು ಪ್ರಾಯದಲ್ಲಿ ಮತ್ತು ಸಹಜವಾಗಿ ಕಾಡು ಸುತ್ತಿದ ದಿನಮಾನದಲ್ಲಿ ಹಿರಿಯನಾದರೂ ನನ್ನ ವೃತ್ತಿಯ ಮಿತಿಯಲ್ಲಿ ‘ವನ್ಯ’ದ ಚಟುವಟಿಕೆಗಳಿಗೆ ಪೂರ್ಣ ಒದಗಿದ್ದು ಕಡಿಮೆ. ಆದರೆ ವೃತ್ತಿಯಲ್ಲಿ ಆರ್ಕಿಟೆಕ್ಟ್ ಆದರೂ ಕೆಲವು ಕಾಲ ಚಿಣ್ಣಪ್ಪ ಮತ್ತು ಉಲ್ಲಾಸರ ಜೊತೆ ಪೂರ್ಣಾವಧಿ ಹುರಿಗೊಂಡ ನಿರೇನ್, ಕೆಲವೊಮ್ಮೆ ವಾರಕ್ಕೆ ನಾಲ್ಕೂ ದಿನ ವನ್ಯರಕ್ಷಣೆಗಾಗಿ ತೀವ್ರ ಅಧ್ಯಯನ ಸಹಿತವಾದ ಓಡಾಟವನ್ನೂ ನಡೆಸಿದರು. ನಿರೇನ್ ಒಡನಾಟದಲ್ಲಿ ನಾನು ಗಳಿಸಿದ ವೈಚಾರಿಕ ಹದ ದೊಡ್ಡದು. 

ಪ್ರಜಾಸತ್ತೆಯಲ್ಲಿ ಇಲಾಖೆಗಳು ಹೇಗೇ ಇರಲಿ, ಅವು ನಮ್ಮವು. ಅವನ್ನು ಹೊರಗಿನಿಂದ ಟೀಕಿಸುವುದಲ್ಲ. ಪ್ರಜೆಗಳು ಅವುಗಳೊಡನೆ ಗುರುತಿಸಿಕೊಂಡು ಸಾಮಾಜಿಕ ಹಿತಕ್ಕೆ ದುಡಿಸಬೇಕು. ಆ ನಿಟ್ಟಿನಲ್ಲಿ ನಮ್ಮ ಬಳಗದ ಆದ್ಯತೆ ಸಹಜವಾಗಿ ಅರಣ್ಯ ಇಲಾಖೆಯಿಂದ ಪ್ರತ್ಯೇಕಗೊಂಡ ವನ್ಯ ಇಲಾಖೆಯ ಮೇಲೆ ಕೇಂದ್ರಿತವಾಯ್ತು. ಇಲಾಖೆಯ ಅವಗುಣಗಳನ್ನು (ತಪ್ಪಿಯೂ ಸಮರ್ಥಿಸಲಿಲ್ಲ) ಅವಗಣಿಸಿ, ಅದು ಸಾಮಾಜಿಕ ಆಶಯಗಳತ್ತ ಹೆಚ್ಚು ಸಮರ್ಥವಾಗಿ ದುಡಿಯುವಂತೆ ಮಾಡಲು ನಮ್ಮ ದೈಹಿಕ, ಮಾನಸಿಕ ಮತ್ತು  ಆರ್ಥಿಕ (ಸಾಂಘಿಕವೂ ಇತ್ತು, ವೈಯಕ್ತಿಕವೂ ಇತ್ತು) ಒತ್ತಾಸೆಗಳನ್ನು ಕೊಟ್ಟೆವು. ಇಲಾಖೆಯಲ್ಲಿ ತೀರಾ ಅತಂತ್ರ ಸ್ಥಿತಿಯಲ್ಲಿರುವ (ಹೌದು, ಇಂದಿಗೂ) ಕೆಳಸ್ತರದ ನೌಕರರಿಗೆ ಸಮವಸ್ತ್ರ, ವಿಮೆ, ಪ್ರೋತ್ಸಾಹಕ ಬಹುಮಾನಗಳನ್ನು ಕೊಡಿಸಿದೆವು. ಓಬೀರಾಯನ ಕಾಲದ ಜೀಪು ಓಡಿದರೆ ಮಾತ್ರ ದುರ್ಗಮ ಸ್ಥಳಗಳಿಗೆ ಭೇಟಿ ಎನ್ನುವಲ್ಲಿಗೆ ಜಿಪ್ಸಿ, ಮುಟ್ಟಲಾಗದ ಮೂಲೆಗಳಿಗೆ ನಿಸ್ತಂತು ಸಂಪರ್ಕ ಜಾಲ ಕಟ್ಟಿಕೊಟ್ಟು ಮತ್ತದಕ್ಕೆ ತರಬೇತಿ ಕೊಡುವವರೆಗೂ ನಮ್ಮ ಬಳಗ ಸಹಕರಿಸಿತು. ವನ್ಯ ವಲಯದೊಳಗಿನ ಅಕ್ರಮ ವಸಿತರು, ಅಧಿಕೃತ ಪುನರ್ವಸತಿ ಬಯಸುವವರಿಗೆ ಗೌರವಪೂರ್ಣ ನೆಲೆ ಕಾಣಿಸುವುದಂತೂ ನಮ್ಮ ಚಟುವಟಿಕೆಗಳಲ್ಲಿ ಮುಖ್ಯ ಸ್ಥಾನವನ್ನೇ ಹೊಂದಿತ್ತು. ಆದರೆ ಅಧಿಕಾರಶಾಹಿ ತನ್ನ ಕರ್ತವ್ಯಪ್ರಜ್ಞೆಯಿಂದ ಗಳಿಸಬಹುದಾದ ಕೀರ್ತಿಶ್ರೀಗಿಂತ ಅಪಕೃತ್ಯವಾದರೂ ಸರಿ, ಗಳಿಸುವ ಧನಶ್ರೀಯನ್ನು ಮೋಹಿಸಿತು. ಪ್ರಜಾಸತ್ತೆಯ ಮೌಲ್ಯಗಳಿಗಿಂತ ಪದನಿಮಿತ್ತ ಒದಗಿದ ಸಾರ್ವಭೌಮತೆಯನ್ನು ಪ್ರೀತಿಸಿದ್ದರಿಂದ ನಮ್ಮ ಸಹಯೋಗ ದೀರ್ಘಾಯುಷಿಯಾಗಲಿಲ್ಲ!

ವನ್ಯ ಇಲಾಖೆ ಅನಿರೀಕ್ಷಿತ ಪ್ರಮಾಣದಲ್ಲೇ ನಮ್ಮ ಮೇಲೆ ತಿರುಗಿಬಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ, ನಿರೇನ್ ಕಛೇರಿಯ ಮೇಲೆ ಅಕ್ರಮ ವನೋತ್ಪತ್ತಿ ಸಂಗ್ರಹದ (ಪತ್ರೆ, ಮರ, ಚರ್ಮ, ಕೊಂಬು ಇತ್ಯಾದಿ) ಹೆಸರಿನಲ್ಲಿ ತನಿಖಾದಾಳಿ ನಡೆಯಿತು. ಕೇವಲ ಕಡತ, ಗಣಕಗಳನ್ನು ವಶಪಡಿಸಿಕೊಂಡು ಅಮೂಲ್ಯ ಮಾಹಿತಿಗಳ ಅವಹೇಳನ ನಡೆಯಿತು. ತೋಳ ಕುರಿಮರಿ ನ್ಯಾಯದಲ್ಲಿ ನಿರೇನ್ ಮೇಲಂತೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಎಲ್ಲಾ ನ್ಯಾಯಾಲಯಗಳಲ್ಲೂ ವ್ಯಾಜ್ಯಹೂಡಿ ಹಣಿಯುವ ಯತ್ನ ನಡೆಯಿತು. (ನಿರೇನ್ ಮತ್ತು ಒಟ್ಟು ಬಳಗದ ವ್ಯಾಜ್ಯ ವಿವರಗಳನ್ನು ಇಲ್ಲಿ ವಿಸ್ತರಿಸುವುದು ಅಪ್ರಸ್ತುತ ಮತ್ತು ನನ್ನ ವ್ಯಾಪ್ತಿ ಮೀರಿದ ವಿಷಯ, ಕ್ಷಮಿಸಿ.) ಎಲ್ಲಾ ಬಿಟ್ಟು ಕೇವಲ ವನ್ಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ನನ್ನ ಪತ್ರಿಕಾ ಲೇಖನವೊಂದನ್ನು ಉದ್ಧರಿಸಿ, ವನ್ಯ ಇಲಾಖೆಯ ಮುಖ್ಯಸ್ಥೆ ವೈಯಕ್ತಿಕ ಮಾನಹಾನಿ ವ್ಯಾಜ್ಯವನ್ನೂ ಹಾಕುವವರೆಗೆ ನಡೆಯಿತು. ವ್ಯಾಜ್ಯವನ್ನು ಆಕೆ ಕಾರ್ಕಳದಿಂದ ತೊಡಗಿ, ಉಡುಪಿ ಜಿಲ್ಲಾ ಮೂಲಕ ರಾಜ್ಯದ ಉನ್ನತ ನ್ಯಾಯಾಲಯದವರೆಗೂ ‘ಅಧಿಕೃತ’ವಾಗಿ (ಇಲಾಖೆಯ ಸಿಬ್ಬಂದಿ, ಸಮಯ ಮತ್ತು ಸವಲತ್ತುಗಳನ್ನು ಬಳಸಿದ್ದು ಗಮನಿಸಿದ್ದೇನೆ) ಬೆಳೆಸಿದ್ದಳು. ನಾನು ಸ್ವಂತ ಖರ್ಚಿನಲ್ಲಿ (ಸುಮಾರು ರೂಪಾಯಿ ಇಪ್ಪತ್ತು ಸಾವಿರದವರೆಗೆ ಖರ್ಚು ಮತ್ತು ಸಮಯ, ಓಡಾಟ) ಅನುಸರಿಸಿ ಮುಕ್ತನಾದೆ. ನ್ಯಾಯಾಲಯಗಳು ವ್ಯಾಜ್ಯಕ್ಕೆ ಸ್ವೀಕಾರಾರ್ಹತೆಯೇ ಇಲ್ಲವೆಂದು ತಳ್ಳಿಹಾಕಿದವು! ನಾನು ಅವನ್ನು ಅಧಿಕಾರಿಣಿಯ ವ್ಯಕ್ತಿದೋಷಕ್ಕಷ್ಟೇ ಸೀಮಿತಗೊಳಿಸಿ, ವಿಮರ್ಶಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸದೇ ದುಡಿಯುವ ದಿಕ್ಕನ್ನು ಬದಲಿಸಿದೆ. 

ನಾನು ಮೊದಲೇ ಹೇಳಿದ ನಮ್ಮದೇ ‘ಅಭಯಾರಣ್ಯ’ದಲ್ಲಿ ಹೆಂಡತಿ ದೇವಕಿಯೊಡನೆ ಹೆಚ್ಚು ತೊಡಗಿಕೊಂಡೆ. ಅಭಯಾರಣ್ಯದ ವಿಸ್ತೀರ್ಣ (ಕೇವಲ ಒಂದೆಕ್ರೆ) ತಿಳಿದ ಮೇಲೂ “ಏನೇನು ಪ್ರಾಣಿ ಬಿಟ್ಟಿದ್ದೀರಿ” (ಸಿಂಹ, ಜಿರಾಫೆಗಳವರೆಗೂ ಕಲ್ಪನಾಸಿರಿ ಬೆಳೆಸಿದ ಬೃಹಸ್ಪತಿಗಳಿದ್ದಾರೆ) ಎಂದು ಕೇಳುವವರನ್ನು ಸಮಾಧಾನಿಸಿದ್ದೇವೆ. ವಾಣಿಜ್ಯಬೆಳೆ (ಅಡಿಕೆ, ರಬ್ಬರ್ ಇತ್ಯಾದಿ), ಮೋಪಿಗೊದಗುವ ತೋಪು (ಸಾಗುವಾನಿ, ಗಾಳಿಮರ ಇತ್ಯಾದಿ), ಔಷಧೀವನ, ಅಲಂಕಾರಿಕ, ಧ್ಯಾನ, ವಿಹಾರ ಉದ್ಯಾನವನಗಳೇ ಮುಂತಾದ ಯಾವುದೇ ಕೃಷಿ ಇಲ್ಲಿಲ್ಲ ಎಂದು ಕುತೂಹಲಿಗಳಿಗೆ (ಕುಹಕಿಗಳಿಗೂ) ಮನದಟ್ಟಾಗಿಸುವುದೂ ಇಲ್ಲಿ ಶಿಕ್ಷಣವೇ ಎಂದು ತಿಳಿದು ನಡೆಸಿದ್ದೇವೆ. ನಾವಿಬ್ಬರು ಇಲ್ಲಿ ಯಜಮಾನರೆಷ್ಟೋ ಕೂಲಿಕಾರರೂ ಅಷ್ಟೇ (ಸಂಬಳದವರನ್ನು ಪ್ರಯೋಗಕಾರ್ಯದ ಚಟುವಟಿಕೆಗಳಿಗೆ ಬಳಸಿಕೊಳ್ಳಲಿಲ್ಲ). ಆ ಜಾಗದ ಹಿಂದಿನವರು ಮುರಕಲ್ಲಿನ ಮೇಲೂ ಕಷ್ಟಪಟ್ಟು ಕೆಲವು ತೆಂಗು, ಗೇರು, ಅಕೇಸಿಯಾ ಮತ್ತು ಗಾಳಿಮರಗಳನ್ನು ರೂಢಿಸಿದ್ದರು. ಸಹಜವಾಗಿ ಬರುತ್ತಿದ್ದ ಮುಳಿ, ಕುಂಟಾಲ, ಎಂಜಿರವೇ ಮುಂತಾದ ಸಸ್ಯಾವಳಿ ಇದ್ದೇ ಇತ್ತು. ಯಾವವನ್ನೂ ಉತ್ತೇಜಿಸದೇ ಅಥವಾ ತೆಗೆಯದೆ ನೆಲದ ಸಾವಯವ ಸತ್ತ್ವ ಹೆಚ್ಚಿಸುವುದು, ಪರೋಕ್ಷವಾಗಿ ಜಲಸಂಚಯನ ಹೆಚ್ಚಿಸುವುದು, ಅಂತಿಮವಾಗಿ ಸಹಜ ಜೀವ ವಿಕಾಸಕ್ಕೆ ಹೆಚ್ಚಿನವಕಾಶ ಒದಗಿಸುವುದು ನಮ್ಮ ಗುರಿ. ಸಾಂಪ್ರದಾಯಿಕವಾಗಿ ತೆಂಗಿನ ಬುಡ ಬಿಡಿಸಲಿಲ್ಲ, ನೀರು ಗೊಬ್ಬರವೆಂದು ಗದ್ದಲ ಮಾಡಲಿಲ್ಲ (ಕ್ರಿಮಿನಾಶಕದ ಮಾತೇ ಇಲ್ಲಿ ನಿಷಿದ್ಧ), ಗೇರು ಮರಗಳನ್ನಾವರಿಸಿ ಫಸಲು ಕುಂಠಿಸುವ ಬಳ್ಳಿಗಳನ್ನು ಕಳೆಯಲಿಲ್ಲ, ಬುಡದ ದರಗು ಒತ್ತರೆ ಮಾಡಲಿಲ್ಲ. ಮುಳಿ ಹೆರೆದು, ಸೊಪ್ಪು ಕಡಿದು, ಕೋಲುಕಟ್ಟಿಗೆಗಳ ಸೌದೆ ಗುಡ್ಡೆ ಹಾಕಲಿಲ್ಲ. ಪಕ್ಕದ ಹಾಳುಬಿದ್ದ ಕಲ್ಪಣೆಯ ಆಳದಿಂದ ಅಗೆದು, ಬುಟ್ಟಿಯಲ್ಲಿ ಹೊತ್ತು ತಂದ ಸೇಡಿ ಮತ್ತು ಮುರಮಣ್ಣಿನಲ್ಲಿ ಜಮೀನಿನ ಅಡ್ಡಕ್ಕೆ ಅಲ್ಲಲ್ಲಿ ಸಪುರದಂಡೆಗಳನ್ನು ಮಾಡಿದ್ದೇವೆ. ಅವು ವಿಸ್ತರಿಸುವ ಬೇರುಗಳಿಗೆ ನೆಲೆಯೂ ಹೌದು, ಮಳೆಗಾಲದ ಹರಿನೀರಿಗೆ ತಡೆಯೂ ಹೌದು. ಸಸ್ಯ ವೈವಿಧ್ಯ ಹೆಚ್ಚುವಂತೆ ಮಳೆಗಾಲದಲ್ಲಿ ನಾವು ಈ ನೆಲಕ್ಕೆ ಸಹಜವಾದ ಹಲವು ಗಿಡ ನೆಟ್ಟದ್ದುಂಟು, ಬೀಜಗಳನ್ನು ತೂರಿದ್ದುಂಟು. ಅವುಗಳಲ್ಲಿ ಉಳಿದ, ಮೊಳೆತ ಜೀವಗಳಿಗೆ ಮೊದಲ ಬೇಸಗೆಯಲ್ಲಿ ವಾರಕ್ಕೊಮ್ಮೆ ನೀರೂಡಿಸಿದ್ದುಂಟು (ನಲ್ವತ್ತಡಿ ಆಳದ ಬಾವಿಯಿಂದ, ಸೇದಿ, ಹೊತ್ತು ಹಾಕಿದ್ದು. ಕೆಲವೊಂದು ವಾರಗಳಲ್ಲಿ ಐವತ್ತು ಕೊಡಪಾನಕ್ಕೂ ಮಿಕ್ಕು ನೀರು ವಿಲೇವಾರಿ ಮಾಡಿದ ಕೊನೆಯಲ್ಲಿ ಹೊತ್ತ ನೀರು ಹೆಚ್ಚೋ ಹರಿದ ಬೆವರು ಹೆಚ್ಚೋ ಎನ್ನುವ ಸಂಶಯ ಬರುತ್ತಿತ್ತು!).


ಪ್ರಾಕೃತಿಕ ವಿಕಾಸಕ್ಕೆ  ನಮ್ಮ ಹದಿಮೂರು ವರ್ಷ (೧೯೯೯ರಿಂದ) ಒಂದು ಸಮಯವೇ ಅಲ್ಲ. ಆದರೆ ನಮ್ಮ ಸಮಾಜ ನ್ಯಾನೋ ಸೆಕೆಂಡುಗಳ ಗಣನೆಯಲ್ಲಿ ನಿರತವಾಗಿರುವಾಗ ನಾವು ವನ್ಯ ಸಂರಕ್ಷಣೆಗೆ ಅನ್ಯ ಸಾಧ್ಯತೆಗಳನ್ನು ಶೋಧಿಸುವುದೂ ನಡೆದಿತ್ತು. ಆಧುನಿಕ ತಂತ್ರಜ್ಞಾನ ಇಂದು ಅಭಿವೃದ್ಧಿಗೆ ಮತಿಯನ್ನು ಕಡಿಮೆ ಮಾಡಿ ಹಸಿವನ್ನು ಅತಿ ಮಾಡಿದೆ. ಪರಿಣಾಮದಲ್ಲಿ ಪ್ರತಿ ಕ್ಷಣವೂ ಪರೋಕ್ಷವಾಗಿಯೇ ಆದರೂ ಪ್ರಾಕೃತಿಕ ವಿನಾಶಕ್ಕೆ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಲೇ ಬಂದಿದೆ. ಪಶ್ಚಿಮ ಘಟ್ಟದ ಸಹಜಾರಣ್ಯದಲ್ಲಿ ಆಗುತ್ತಿರುವ ಪ್ರಾಕೃತಿಕ ಅನಾಚಾರಗಳನ್ನು ಕೇವಲ ಪಟ್ಟಿ ಮಾಡಿದರೂ ಅದು ಪುಟಗಟ್ಟಳೆ ಹರಿಯುವ ಸಾಧ್ಯತೆಯಿದೆ. ತೀರಾ ಈಚಿನವುಗಳನ್ನು ಹೆಸರಿಸುವುದೇ ಆದರೆ ಕಿರು ಜಲವಿದ್ಯುತ್, ಪೆಟ್ರೋ-ವಿದ್ಯುತ್ ಜಾಡುಗಳು, ನದಿ ತಿರುಗಿಸುವುದು, ಗಣಿಗಾರಿಕೆ, ಪ್ರವಾಸೋದ್ಯಮ ಇತ್ಯಾದಿ. ಇವನ್ನು ನಿಯಂತ್ರಿಸುವಲ್ಲಿ ಪ್ರಥಮವಾಗಿ ತನ್ನ ಹುಟ್ಟು ಮತ್ತು ಹೆಸರಿನ ಅರ್ಥಕ್ಕೆ ದುಡಿಯದ ವನ್ಯ ಇಲಾಖೆ (ಪರೋಕ್ಷವಾಗಿ ಅರಣ್ಯ ಇಲಾಖೆಯೂ ಸೇರಿದಂತೆ), ಮತ್ತೆ ಉನ್ನತ ಜ್ಞಾನ ಕೇಂದ್ರಗಳೆನ್ನಿಸಿಕೊಂಡ ವಿಶ್ವವಿದ್ಯಾನಿಲಯಗಳು, ಕೊನೆಯಲ್ಲಿ ಅಬೋಧ ಪ್ರಜಾವರ್ಗಗಳ (ಅಯ್ಯೋ ನಮಗ್ಯಾಕೆ ಎನ್ನುವ ರೋಗಗ್ರಸ್ತ ಬಹುಸಂಖ್ಯಾತರು) ಸೋಲು ತೀರಾ ವಿಷಾದನೀಯ. ಅರ್ಥ ಕಳೆದುಕೊಂಡ ಸಂಕೇತಗಳಾದ ದೇವರ ಕಾಡುಗಳನ್ನು ಆದರ್ಶವಾಗಿ ಬಿಂಬಿಸುವುದು, ಪ್ರಯೋಗಾರಣ್ಯಗಳನ್ನು ರೂಢಿಸುವುದು ಸಹಜಾರಣ್ಯಕ್ಕೆ ಖಂಡಿತಾ ಪರ್ಯಾಯವಲ್ಲ. ಬದಲಿಗೆ ಸಾಮಾಜಿಕ ರೂಢಿಗಳಲ್ಲಿನ ಬದಲಾವಣೆಯಿಂದ ನಾಶವನ್ನು ನಿರುತ್ತೇಜನಗೊಳಿಸಲು ನಮ್ಮ ಮಿತ್ರಬಳಗ ಖಾಸಗಿ ಸಹಜಾರಣ್ಯದ ಒಕ್ಕೂಟ ರಚನೆಗೆ ಇಳಿದಿದ್ದೇವೆ.    

ಪಶ್ಚಿಮಘಟ್ಟದ ಬಹುತೇಕ ಸಹಜಾರಣ್ಯ ಸರಕಾರೀ ಸ್ವಾಮ್ಯದಲ್ಲುಂಟು. ಅವುಗಳ ಎಡೆಯಲ್ಲಿ ಚದುರಿದಂತೆ ಉಳಿದಿರುವ ಹಲವು ಖಾಸಗಿ ನೆಲಗಳೂ (ಕೆಲವೆಡೆಗಳಲ್ಲಿ ಕೃಷಿ ಸೋತು) ಸಹಜಾರಣ್ಯ ಉಳಿಸಿಕೊಂಡಿವೆ. ನಮ್ಮ ಅರಣ್ಯೇತರ ಯೋಜನಾಬ್ರಹ್ಮರು ಈ ಕಾಡುಗಳನ್ನು ವ್ಯರ್ಥ ಕಾಡೆಂದೇ ನಂಬಿಸಿದ್ದು ಹೆಚ್ಚು. ಹುಲ್ಲುಗಾವಲುಗಳನ್ನಂತೂ ಬರಡುಭೂಮಿ ಎಂದೇ ಪ್ರಚುರಿಸಿದರು. ಸಾಲ, ಅನುದಾನ, ದಾನಗಳ ಮಾಯಾಜಾಲವನ್ನೇ ಹರಡಿದರು. ವೃತ್ತಿ ಮತ್ತು ತರಬೇತಿಯಿಂದ ರಕ್ಷಕರಾಗಬೇಕಾದ ಇಲಾಖೆಗಳವರೂ ಇಂಥ ಹುಚ್ಚುಗಳನ್ನು ಹಿಡಿಸಿಕೊಂಡದ್ದಕ್ಕೆ ಎಷ್ಟೂ ವನಧಾಮಗಳು ಸಾಕ್ಷಿನುಡಿಯುತ್ತವೆ (ಇಲ್ಲೇ ಹಿಂದಿನ ಲೇಖನ - ದಾಂಡೇಲಿ ದಂಡಯಾತ್ರೆ ನೋಡಿ). ಇವೆಲ್ಲ ನಾಗರಿಕ ಪರಿಸರವನ್ನು ವನ್ಯದ ಮೇಲೆ ಹೇರುತ್ತವೆ. ಇವು ವನ್ಯ ಮೃಗಸಂದೋಹಕ್ಕಂತೂ ನಿಶ್ಚಿತ ಎಡವುಗಲ್ಲು. ಶಿಕ್ಷಣ, ಪ್ರಚಾರ, ಕೊನೆಗೆ ಕಾನೂನೂ ನಿಶ್ಚಿತ ಫಲ ನೀಡದ ಸ್ಥಿತಿಯಲ್ಲಿ ಅಂಥ ಜಾಗಗಳನ್ನು ಕೊಂಡು ತೀರಾ ಖಾಸಗಿಯಾಗಿ ಕಾಪಾಡುವ ಯೋಜನೆ ನಮ್ಮದು.  
                                                                                                                                                                                                                                                                                                                 
ಅತ್ತ ಪುಷ್ಪಗಿರಿ ವನಧಾಮ, ಇತ್ತ ಯಸಳೂರು ವಲಯದ ಕಾಯ್ದಿಟ್ಟ ಅರಣ್ಯ. ಬಾನಚಪ್ಪರಕ್ಕೆ ಇಟ್ಟ ಬೋದಿಗೆಗಳಂಥ ಮರಗಳು, ಆಗಸದ ನೀಲಿಮೆಗೆ ಪ್ರತಿಸ್ಪರ್ಧಿಯೆನ್ನುವಂತೆ ನೆಲಮುಚ್ಚಿದ ಅಖಂಡ ಹಸಿರು. ಝರಿತೊರೆಗಳ ಕುಸುರಿಯ ನಡುವೆ, ಕುಳ್ಕುಂದದಿಂದ ಬಿಸಿಲೆ ಹಳ್ಳಿವರೆಗೆ ಹರಿಯುವ ಸುಮಾರು ಇಪ್ಪತ್ಮೂರು ಕಿಮೀ ಉದ್ದದ ದಾರಿಯನ್ನು ಬಿಟ್ಟರೆ ಯಾವುದೇ ಮನುಷ್ಯ ಚಟುವಟಿಕೆಗಳಿಲ್ಲದ (ನನ್ನ ಹಿಂದಿನ ಬರಹಗಳಲ್ಲಿ ವಿವರಿಸಿದೆಲ್ಲಾ ಉತ್ಪಾತಗಳು ವನ್ಯದ ಉತ್ಕರ್ಷಕ್ಕಾಗಿ ಅಧಿಕೃತರು  ಮಾಡಿದ ಆವಶ್ಯಕ ಕ್ರಮಗಳು ಎಂದು ತಿಳಿಯತಕ್ಕದ್ದು!) ಪರಿಸರ. ಆದರೆ ಸುಮಾರು ಆರು ವರ್ಷಗಳ ಹಿಂದೆ ಇಲ್ಲೂ ಖಾಸಗಿ ಹಿಡುವಳಿ ಇದೆ. ಮತ್ತದು ಪ್ರವಾಸೀ ಉದ್ದಿಮೆದಾರರನ್ನು ಆಕರ್ಷಿಸುವ ಅಪಾಯವೂ ಇದೆ ಎಂದು ತಿಳಿದಾಗ ಗೆಳೆಯ ಡಾ| ಕೃಷ್ಣಮೋಹನ ಪ್ರಭು (ಕೃಶಿ) ಮತ್ತು ನಾನು ಆ ಹದಿನೈದು ಎಕ್ರೆ ‘ಏಲಕ್ಕಿ ಮಲೆ’ (ವಾಸ್ತವದಲ್ಲಿ ಸಹಜಾರಣ್ಯ)ಯನ್ನು ಖರೀದಿ ಮಾಡಿದೆವು. ಇದಕ್ಕೆ ಬೇಲಿ, ಕಂದಕ, ನಾಮಫಲಕಾದಿ ಯಾವುದೇ ಖಾಸಾ ಪ್ರತ್ಯೇಕೀಕರಣ ಮಾಡಿಲ್ಲ. (ದಯವಿಟ್ಟು ಕುತೂಹಲದಲ್ಲಿ ನೋಡಲು ಬರಬೇಡಿ) ಇಲ್ಲಿನ ಯಾವುದೇ ‘ಬೆಳೆ’ (ವನೋತ್ಪತ್ತಿ) ಆರ್ಥಿಕ ಆದಾಯಕ್ಕಾಗಿ ಹೊರಗೆ ಹೋಗವು. ಹಾಗೇ ನಾಗರಿಕ ಜಾನುವಾರಿನ ಮೇಯುವ ನೆಲವೂ ಇದಾಗದಂತೆ ನೋಡಿಕೊಳ್ಳಲು ಮುಂದೆ (ಈ ಕಾರ್ಯಕ್ರಮ ವಿಸ್ತರಿಸಿದಾಗ) ನಮ್ಮದೇ ಸಹಕಾರೀ ಕಣ್ಗಾವಲು ತರುವ ಅಂದಾಜಿದೆ. ಇಲ್ಲಿನ ಕರಡ, ವಾಟೆ, ಹಸಿರೆಲ್ಲಾ ಆನೆ, ಕಾಟಿ, ಕಡವೆಯಾದಿ ಸಹಜ ಓಡಾಟದ ಸಸ್ಯಾಹಾರಿಗಳಿಗೆ ಮೀಸಲು. ಹೂವು ಜೇನು, ಚಿಟ್ಟೆ ನೊಣಗಳ ಸೊತ್ತು. ಹಣ್ಣು ಬೀಜಗಳಿಗೋ ಹಕ್ಕಿ ಮಂಗಗಳದ್ದೇ ಉಸ್ತುವಾರಿ. ಗೆಡ್ಡೆ ಗೊಸರುಗಳಿಗಂತೂ ಕಾಡ ಹಂದಿಗಳೇ ಸೈ. ಈ ಎಲ್ಲವುಗಳ ಸಂಖ್ಯಾನಿಯಂತ್ರಕರಾದ ಹುಲಿ, ಚಿರತೆಯಾದಿ ಮಾಂಸಾಹಾರಿಗಳಿಗೆ ನಮ್ಮ ನಿರಾಕ್ಷೇಪಣಾ ಪತ್ರ ಜ್ಯಾರಿಗೊಳಿಸಿದ್ದೇವೆ. ಉದುರಿದ ಸೊಪ್ಪು, ಬಿದ್ದ ಮರ ಕೊಳೆತು, ಕುಂಬಾಗಿ ವನ್ಯದಲ್ಲಿ ಲೀನವಾಗಬೇಕೇ ಹೊರತು ಯಾವುದೋ ಕೃಷಿಭೂಮಿಗೆ ಗೊಬ್ಬರವಲ್ಲ, ಬಿಸಿನೀರ ಹಂಡೆಗೆ ಉರುವಲೂ ಅಲ್ಲ. ನಮ್ಮ ಬಳಗದ ಹೆಸರು ವೈಲ್ಡ್ ಲೈಫ್ ಫಸ್ಟ್! ನಾವು ಕೊಂಡ ನೆಲದಲ್ಲೂ ಅದೇ ಲಕ್ಷ್ಯ - ವನ್ಯಕ್ಕಿಲ್ಲಿ ಆದ್ಯತೆ! ವನ್ಯಕ್ಕಿಲ್ಲಿ ಶೋಕ ಇಲ್ಲ ಎಂಬರ್ಥದಲ್ಲಿ ಇದರ ಹೆಸರು ಅಶೋಕವನ. 

ಅಶೋಕವನದ ಕುರಿತ ನನ್ನ ಮೇಲಿನ ಬರಹ, ತುಸು ಭಿನ್ನರೂಪದಲ್ಲಿ,  ೨-೭-೨೦೦೬ರ ಉದಯವಾಣಿಯಲ್ಲಿ ಪ್ರಕಟವಾಯ್ತು. ಅದರ ಕೊನೆಯಲ್ಲಿ ನಾನು “ಕೃಶಿ, ನಾನು ಕೇವಲ ಹದಿನೈದು ಎಕ್ರೆ ಕೊಂಡಿದ್ದೇವೆ. ಸಮಾನಾಸಕ್ತರು ಮುಂದೆ ಬಂದು ತಂತಮ್ಮ ‘ಪಾಲು’ ಕೊಳ್ಳಬೇಕು” ಎಂದು ಆಶಿಸಿದ್ದೆ. ನನ್ನನ್ನು ತುಂಬಾ ಜನರೇನೋ ಸಂಪರ್ಕಿಸಿದರು. ಬೆಂಗಳೂರಿನ ಓರ್ವ ಸನದು ಲೇಖಾಪಾಲರು (ಗಡಿಬಿಡಿಯಾಯ್ತೇ - ಚಾರ್ಟರ್ಡ್ ಅಕೌಂಟೆಂಟ್ ಅನ್ನಿ), ನನಗೆ ಪೂರ್ತಿ ಅಪರಿಚಿತರು- ತನಗೂ ಒಂದು ಮಿತಿಯಲ್ಲಿ ‘ಪಾಲು’ ಪಡೆಯುವ ಆಸೆಯಿದೆ. ಜಾಗ ನೋಡಬೇಕಿಲ್ಲ, ಚೆಕ್ ಎಷ್ಟರದ್ದು ತರಬೇಕು ಮತ್ತೆ ಎಂದು, ಯಾವ ನೋಂದಣಿ ಕಛೇರಿಗೆ ಬರಬೇಕು ಎಂದಷ್ಟೇ ತಿಳಿಸಿದರೆ ಸಾಕು ಎನ್ನುವಷ್ಟೂ ನಮ್ಮ ಮೇಲೆ ವಿಶ್ವಾಸದ ಹೊರೆ ಹೊರಿಸಿದರು. ಆದರೆ ನಮ್ಮಲ್ಲಿ ಯಾರಿಗೂ ವನ್ಯದ ಅಂಚಿನಲ್ಲಿರುವ ಅಸಂಖ್ಯ ಸಣ್ಣ ಹಿಡುವಳಿಗಳನ್ನು ಹುಡುಕಿ, ಜನಗಳನ್ನು ಸಂಪರ್ಕಿಸಿ, ದಾಖಲೆಗಳನ್ನು ಶುದ್ಧಮಾಡಿಸಿ ವಹಿವಾಟು ಕುದುರಿಸಲು ಸಮಯವಿರಲಿಲ್ಲ. ವಾಸ್ತವದಲ್ಲಿ ಅದು ಕನಿಷ್ಠ ಒಬ್ಬ ವ್ಯಕ್ತಿಗೆ ಪೂರ್ಣಾವಧಿ ಕೆಲಸ. ಈಗ ನಾನು ವೃತ್ತಿಯಿಂದ ನಿವೃತ್ತನಾಗಿರುವುದರಿಂದ ಅದನ್ನು ಕೈಗೆತ್ತಿಕೊಳ್ಳುವ ಉತ್ಸಾಹದಲ್ಲಿದ್ದೇನೆ. ಅದಕ್ಕೆ ಪೂರ್ವಭಾವಿಯಾಗಿ ನನ್ನ ಇದುವರೆಗಿನ ಈ ವಲಯದ ಅನುಭವಗಳ ಕಥನವನ್ನು ಸದ್ಯ ಇಲ್ಲಿಗೆ ನಿಲ್ಲಿಸಿ, (ಅನುಕೂಲವಾದರೆ ಅನ್ಯರಿಗೆ ಪ್ರೇರಣೆ ಕೊಡುವ ಉದ್ದೇಶದಿಂದ ಪುಸ್ತಕ ರೂಪದಲ್ಲಿ ಪ್ರಕಟಿಸಿ) ಮುಂದೆ ಹೊಸದೇ ಬೆಳಕಿನಲ್ಲಿ ನಿಮ್ಮನ್ನು ಕುಮಾರಪರ್ವತದ ಆಸುಪಾಸಿಗೆ ಒಯ್ಯುತ್ತೇನೆ.

6 comments:

  1. ಪ್ರಿಯ ಅಶೋಕರೆ,
    ನಿಮ್ಮ ಲೇಖನ(ಭಾಗಶಃ ಹಿಂದೆ ಓದಿರಬಹುದು) ಮತ್ತು ಅದರೊಟ್ಟಿಗಿನ ದೃಶ್ಯ ತುಣುಕುಗಳ ಸಂಗ್ರಹ ನೋಡಿ ತುಂಬ ಸಂತೋಷಪಟ್ಟೆ. ಕಳೆದ ಬಾರಿ ನಾನು ಮಂಗಳೂರಿಗೆ ಬಂದಿದ್ದಾಗ ನಿಮ್ಮ ತಂಡದ ಗೆಳೆಯರನ್ನು ಭೇಟಿಯಾಗಲಿಲಲ್ವೆಂಬ ಕೊರತೆ ಕಾಡುತ್ತಿದೆ. ಜೂಲೈ ಕಳೆದು ಮತ್ತೊಮ್ಮೆ ಬರುವೆ. ಸಿಂಹಗಳಿಗೆ ಅಭಯ ವನ, ವನ್ಯಗಳಿಗೆ ಅ-ಶೋಕ ಧ್ಯೇಯವನ್ನೇ ಉಸಿರಾಡುವ ನಿಮಗೆ ನಿಮ್ಮ ಬಳಗಕ್ಕೆ ಏನೆಂದು ವಂದಿಸಲಿ!
    ಪ್ರೀತಿಯಿಂದ
    ಪಂಡಿತಾರಾಧ್ಯ

    ReplyDelete
  2. chennaada prayathna. abhinandanegalu mattu thanks. ajakkala girisha

    ReplyDelete
  3. ಇನ್ನು ಮುಂದೆ ಹುಲಿಗಳನ್ನು ಬರಿ ಚಿತ್ರದಲಿ ನೋಡುವ ಕಾಲ ಬರಬಹುದು, ನಿಮ್ಮಿಬ್ಬರ ಕೆಲಸ ಮೆಚ್ಚುವಂತದ್ದು.
    ಸತ್ಯಜಿತ್ ಕೆ.

    ReplyDelete
  4. ಪ್ರೀತಿಯ ಅಶೋಕ ವರ್ಧನರೇ!
    ನನಗೊಬ್ಬ ೭೦ ವರ್ಷದ ಮಿತ್ರ ಇದ್ದಾರೆ. ಅವರ ಪ್ರಕಾರ ಹುಲಿ ಹಾವುಗಳೆಂಬ ದುಷ್ಟ ಪ್ರಾಣಿಗಳು ಈ ಜಗತ್ತಿನಿಂದ ನಿರ್ನಾಮ ಆಗಬೇಕು.

    ಒಬ್ಬ ಐ.ಟಿ. ಸೊಸೆಗೆ ವಾರಾಂತ್ಯದಲ್ಲಿ ಕಾಡಿಗೆ ಹೋಗಿ ಹುಲಿಯ ಭಾವ ಚಿತ್ರ ತೆಗೆಯುವ ಆಸೆ! ಆಕೆಯ ಬಳಿ ಒಳ್ಳೆಯ ನೊಕಾನ್ ಇದೆಯಂತೆ!

    ಇನ್ನೊಬ್ಬ ಹದಿಹರೆಯದ ಮಹಾನುಭಾವ ಇದ್ದಾನೆ. ಅವನಿಗೆ ಒಂಟಿಯಾಗಿ ಕಾಡಿನಲ್ಲಿ ಸುತ್ತುತ್ತಾ ಕಾಡು ಹಣ್ಣು, ಜೇನು ಮತ್ತು ಗೆಡ್ಡೆ ಗೆಣಸು ತಿನ್ನುತ್ತಾ ಅಲ್ಲೇ ರಾತ್ರೆಗಳನ್ನು ಮರದ ಅಡಿಯಲ್ಲಿ ಮಲಗಿರುತ್ತಾ ಮೂರು ದಿನ ಕಳೆಯುವ ಆಸೆ!!
    ಆತನಿಗೆ ಚೂರಿ ಮುಳ್ಳಿನ ಗಿಡ ಯಾವುದು? ಕುಂಟಾಲ ಹಣ್ನಿನ ಗಿಡ ಯಾವುದು ಎಂತ ಗೊತ್ತಿಲ್ಲ!

    ಇನ್ನು ಒಂದು ತಂಡ ಇದೆ! ಅದಕ್ಕೆ ತಮ್ಮ ಅಶೋಕವನದಲ್ಲಿ ಕ್ಯಾಂಪ್ ಫಯರ್ ಮಾಡಿ
    ಬಾರ್ಬೆಕ್ಯೂ ಪಾರ್ಟಿ ಇಟ್ಟು ಕೊಳ್ಳುವ ಆಸೆ! ( ಹೇಗೂ Go ಮಾಂಸಕ್ಕೆ ತಮ್ಮ ಅಡ್ಡಿ ಇಲ್ಲವಲ್ಲ!)

    ಇಂಥಹಾ ಮಹಾನುಭಾವರ ತಂಡಗಳಿಗೆ ನಾನು ಏನು ಉತ್ತರ ಕೊಡಲಿ?

    "ನೋಡ್ರಪ್ಪಾ! ಕಾಡು ಎಂದರೆ ಸಿನೆಮಾದ ಕಾಡು ಅಲ್ಲ. ಕಾಡು ಎಂದೂ ಪಿಕ್ನಿಕ್ ಸ್ಪಾಟ್ ಅಲ್ಲ! ಹೆಚ್ಚಿನ ವಿವರಗಳು ಬೇಕಿದ್ರೆ ನಮ್ಮ ಅಶೋಕ ವರ್ಧನ ಅವರ ಬ್ಲಾಗಿಗೆ ಪ್ರಶ್ನೆ ಎಸೆಯಿರಿ" ಅಂತ ಅಂದೆ......
    ಪ್ರೀತಿ ಇರಲಿ,
    ಪೆಜತ್ತಾಯ

    ReplyDelete
  5. ಹುಲಿ ಸಂರಕ್ಷಣೆ ಅಥವಾ ವನ್ಯಮೃಗ ಸಂರಕ್ಷಣೆಯ ವಿಷಯಗಳು ಪತ್ರಿಕೆಗಳಲ್ಲಿ ಬಂದಾಗ ಬೆಂಬಲಿಸುವವರು ಅನೇಕರಿದ್ದಾರೆ (ಅಸಂಖ್ಯಾತರೆನ್ನಬಹುದು). ಆದರೆ ವಾಸ್ತವ ವಿಷಯಕ್ಕೆ ಬಂದಾಗ ಬೆಂಬಲಿಸುವವರು ಅತ್ಯಲ್ಪ (ಅಲ್ಪಸಂಖ್ಯಾತರೆನ್ನಬಹುದು...!). ಪೆಜತ್ತಾಯರು ಹೇಳಿರುವ ವಿಷಯ ನೂರಕ್ಕೆ ನೂರು ಸತ್ಯ. ಅರಣ್ಯದ ಬೇರನ್ನೇ ಅಡಿಮೇಲುಗೊಳಿಸಬಲ್ಲ ಬಲವಾಗಿ ಬೇರೂರಿರುವ “ಅರಣ್ಯವ್ಯವಸ್ಥೆ (ಕಾಟು ವ್ಯವಸ್ಥೆ...)” ಯನ್ನು ಸರಿಪಡಿಸುವುದು ಸುಲಭದ ಕಾರ್ಯವಲ್ಲ. ತಮ್ಮ ಮಿತಿಯಲ್ಲಿ ಶಿಸ್ತು ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿರುವ ತಮಗೆ ಶುಭ ಹಾರೈಕೆಗಳು.
    ಗಿರೀಶ್, ಬಜಪೆ.

    ReplyDelete
  6. ಕಾಡು ಕೊಂಡು ಎಸ್ಟೇಟು-ರೇಸಾರ್ಟು ಮಾಡಬೇಕೆನ್ನವವರ ನಡುವೆ ಅದನ್ನು ಸಹಜ ರೀತಿ ಉಳಿಸಬೇಕೆಂಬ ನಿಮ್ಮ ನಿರ್ಧಾರ ಬಲು ಬಲು ಅಪರೂಪ. ಶ್ಲಾಘನೀಯ. ಹುಲಿ ಸಂರಕ್ಷಣೆ ನಿಟ್ಟಿನಲ್ಲಿ ನೀವು ಕೈಗೊಂಡ ಪ್ರಚಾರಾಂದೋಲನ ಮಹತ್ವದ್ದು.

    ReplyDelete