28 April 2012

ಶುಭ ನುಡಿಯೇ ಓಂಗಿಲೇ


(ದಂಡಯಾತ್ರೆ ಎರಡನೇ ಹಾಗೂ ಅಂತಿಮ ಭಾಗ)
ನೆನಪುಗಳ ಹೊರೆಯಲ್ಲದಿನ್ನೊಂದ ಒಯ್ಯದಿರು
ನಿನ್ನನಡೆಯಚ್ಚಲ್ಲದಿನ್ನೊಂದ ಉಳಿಸದಿರು
ಡಾ| ಮಂಟಪ ರತ್ನಾಕರ ಉಪಾಧ್ಯರ ಬಹುಮುಖೀ ಹವ್ಯಾಸ ಮತ್ತು ಸಾಮಾಜಿಕ ಕೆಲಸಗಳಿಂದ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ (ಹೆಸರು ಬೇಡ) ಆತ್ಮೀಯ ಪರಿಚಯ ಬೆಳೆದಿತ್ತು. ಪರಿಚಯ ಒಡನಾಟಕ್ಕೆ ಬೆಳೆದು ಕೆಲವು ಪ್ರಾಕೃತಿಕ ವೈಶಿಷ್ಟ್ಯ ಅನಾವರಣ ಯಾತ್ರೆಗಳನ್ನು ಇವರ ಅನೌಪಚಾರಿಕ ಮಿತ್ರಮಂಡಳಿ ನಡೆಸಿದ್ದೂ ಇತ್ತು. ಹಾಗೇ ಈಚೆಗೆ ರೂಪುಗೊಂಡಿತ್ತು ಕುಳಗಿ ಕೇಂದ್ರಿತವಾದ ದಾಂಡೇಲಿ-ಅಣಶಿ ವ್ಯಾಘ್ರಧಾಮದ ಭೇಟಿ. ನಾವು (ನಾನು ಮತ್ತು ಹೆಂಡತಿ ದೇವಕಿ) ಸ್ವತಂತ್ರವಾಗಿ ಬೆಳಿಗ್ಗೆ ಬೈಕೇರಿ ಮಂಗಳೂರು ಬಿಟ್ಟದ್ದು ಮತ್ತು ಪಯಣದ ವಿವರ ಕಳೆದ ವಾರ ಹೇಳಿದ್ದೇನಷ್ಟೆ. (ಅವರಿನ್ನೂ ಸಂಜೆ ಟೆಂಪೋದಲ್ಲಿ ಸಂಜೆ ಶಿವಮೊಗ್ಗ ಬಿಡಬೇಕಿತ್ತು)


ನಾವು ಯಲ್ಲಾಪುರ ಘಾಟಿ ಹತ್ತುತ್ತಿದ್ದಂತೇ ದಾಂಡೇಲಿ ಅರಣ್ಯಕ್ಕೆ ಸೇರಿಹೋದ ಭಾವ ಬಂತು. ಅಲ್ಲೊಂದೆರಡು ಕಡೆ ಬೆಟ್ಟದ ಅಂಶಗಳಲ್ಲಿ, ಬಹುತೇಕ ಕುರುಚಲು ಕಾಡಿಗೆ ಬೆಂಕಿ ಬಿದ್ದಿತ್ತು. ಮರಕ್ಕೆ ಮರ ಉಜ್ಜಿ ಏಳುವ ಬೆಂಕಿ, ವನ್ಯಮೃಗಗಳ ಧಾವಂತದಲ್ಲಿ ಬೆಣಚುಕಲ್ಲುಗಳು ಘಟ್ಟಿಸಿ ಕಿಡಿ ಕಿಚ್ಚಾಗುವುದು ಇತ್ಯಾದಿ ಕಾಳ್ಗಿಚ್ಚು ಪುರಾಣದ ರಮ್ಯ ಕಥೆಗಳು! ಆಸುಪಾಸಿನ ಕೃಷಿಕರು ಮೃಗಬಾಧೆ ನಿವಾರಣೆಗೋ ವನೋತ್ಪತ್ತಿ ಸಂಗ್ರಾಹಕರು ತತ್ಕಾಲೀನ ಲಾಭದ ವಿವಿಧ ಕಾರಣಗಳಿಗೋ ಸಾರ್ವಜನಿಕರ ಬೇಜವಾಬ್ದಾರಿತನದಿಂದಲೋ ಕೊನೆಗೆ ಕೇವಲ ಕಿಡಿಗೇಡಿಗಳಿಂದಲೋ ಕಾಳ್ಗಿಚ್ಚು ಉಂಟಾಗುತ್ತದೆ. ನಾವು ನೋಡಿದಲ್ಲಿ ಅರಣ್ಯ ಇಲಾಖೆಯ ನೌಕರರು ಇದ್ದರಾದ್ದರಿಂದ (ನಿಯಂತ್ರಕ ಕಾರ್ಯಾಚರಣೆ ಇರಬಹುದೆಂದು) ನಾವು ವಿಶೇಷ ಕುತೂಹಲ ತಾಳಲಿಲ್ಲ. 

ಯಲ್ಲಾಪುರದಿಂದ ಮುಂದುವರಿದಂತೆ ನಾವು ಸ್ಪಷ್ಟವಾಗಿ ವನಧಾಮದೊಳಗೇ ಸಂಚರಿಸುತ್ತಿದ್ದೆವು. ಆಯಕಟ್ಟಿನ ಜಾಗಗಳಲ್ಲಿ ಇಲಾಖೆ ಕಳ್ಳಬೇಟೆಯ ನಿರೋಧಕ್ಕೆ ಮಾಡಿಕೊಂಡ ತತ್ಕಾಲೀನ ಜೋಪಡಿಗಳು ಮತ್ತು ಕೆಲವಲ್ಲಿ ಪಾಳಿ ಮೇಲಿನ ಕಾವಲುಗಾರ ಕಾಣಿಸಿದ್ದೂ ಇತ್ತು. ಅಲ್ಲಲ್ಲಿ ಸಿಗುತ್ತಿದ್ದ  ತನಿಖಾ ಗೇಟುಗಳು ಮುಖ್ಯ ದಾರಿಗೆ ಮುಕ್ತವಾಗಿದ್ದರೂ ಕೆಲವೆಡೆ ಕವಲಾಗುವ ಕಚ್ಚಾ ದಾರಿಗಳಲ್ಲಿ ಅಡ್ಡಬಿದ್ದು, ಸ್ಪಷ್ಟ ಬೀಗವನ್ನೇ ಪ್ರದರ್ಶಿಸಿತ್ತು. ಕಾಳಿ ನದಿಯನ್ನು ಪಕ್ಕದಲ್ಲೇ ಇಟ್ಟುಕೊಂಡು ಓಡುವ ಈ ದಾರಿಯಲ್ಲಿ ಆನೆಗಳ ಬಗ್ಗೆ ನಮಗೆ ಎಚ್ಚರ ಹೇಳಿದವರು ಹಲವರು. ಆದರೆ ಎಲ್ಲೂ ಆನೆ ಸಂಚಾರದ ಲಕ್ಷಣಗಳು ನಮಗೆ ಕಾಣಿಸಲಿಲ್ಲ (ಸಿಗಿದ ಬಿದಿರು, ಲದ್ದಿ ಗುಪ್ಪೆ ಇತ್ಯಾದಿ). ಹಾಗೆಂದು ನಾವು ಎಚ್ಚರ ಕಳೆದದ್ದಿಲ್ಲ, ಬೈಕ್ ಸದ್ದಲ್ಲದೆ ಪ್ರತ್ಯೇಕ ಗದ್ದಲ ಮಾಡಿದ್ದಿಲ್ಲ. ಇಂಥಲ್ಲೆಲ್ಲಾ ಉಲ್ಲಾಸ್ ಹೇಳಿದ ಮಾತು ನೆನಪಿಗೆ ಬರುತ್ತಲೇ ಇರುತ್ತದೆ. “ವಾಹನದ ಸದ್ದಿಗೆ ಈಚೆಗೆ ಸಾಮಾನ್ಯವಾಗಿ ವನ್ಯ ಜೀವಿಗಳು ಉದಾಸೀನ ತೋರುತ್ತವೆ. ಆದರೆ ಅದೆಷ್ಟು ಕೆಳಸ್ತರದಲ್ಲೇ ಆದರೂ ಮನುಷ್ಯನ ಸದ್ದುಗಳಿಗೆ ಅವು ತೀವ್ರ ಸ್ಪಂದಿಸುತ್ತವೆ. ನಡೆಯಲ್ಲಿ ಒಣಕಡ್ಡಿ ಮುರಿಯುವ, ತರಗೆಲೆ ಪುಡಿಗುಟ್ಟುವ, ಅಸಡ್ಡಾಳ ಹೆಜ್ಜೆಹಾಕಿ ಸದ್ದೆಬ್ಬಿಸುವ ಕ್ರಿಯೆಗಳೆಲ್ಲ ವನ್ಯಪ್ರಿಯನಿಗೆ ಹೇಳಿದ್ದಲ್ಲ. ಎಂಥದ್ದೇ ತುರ್ತಿದ್ದರೂ ವನ್ಯವಲಯದಲ್ಲಿ (ಶಿಬಿರದಲ್ಲೂ) ಮಾತು ಪಿಸುನುಡಿಯನ್ನು ಮೀರದಿರಬೇಕು.” ಇದರ ಫಲವೋ ಎಂಬಂತೆ ಅಸಂಖ್ಯ ಕಾಡುಕೋಳಿ, ನವಿಲು, ಕೆಂಜಳಿಲು ಅಲ್ಲದೇ ಒಂದೆಡೆ ಐದು ಕಡವೆಗಳು ನಮ್ಮ ಎದುರೇ ದಾರಿ ದಾಟುವುದನ್ನೂ ಕಂಡೆವು. ತಮಾಷೆ ಎಂದರೆ ನಮ್ಮ ಮೂರುದಿನದ ‘ವನವಾಸ’ದಲ್ಲಿ (ಕರಿಮುಸುಡ ಮಂಗ ಬಿಡಿ) ಅನಿರೀಕ್ಷಿತವಾಗಿ ಒದಗಿದ ಏಕೈಕ ‘ಮಹಾದರ್ಶನ’ ಈ ಸ್ತನಿಗಳು! (ಸ-ಸ್ತನಿ, ‘ಅಜಗಜಾಂತರ ವ್ಯತ್ಯಾಸ’ ಎಂದಷ್ಟೇ ತಪ್ಪು ಪ್ರಯೋಗ)

 ದಾಂಡೇಲಿಯ ರಕ್ಷಿತ ಅರಣ್ಯಗಳು ಎಕ್ರೆವಾರು ವ್ಯಾಪ್ತಿಯಲ್ಲಿ ಇಂದು ರಾಜ್ಯದಲ್ಲೇ ದೊಡ್ಡದಿರಬಹುದು. ಆದರೆ ಇಲ್ಲಿನ ಬಹುತೇಕ ಸಸ್ಯ ಸಂಪತ್ತು ಸಾಗುವಾನಿಯ ಏಕಬೆಳೆಯನ್ನೇ ಪ್ರದರ್ಶಿಸುವ ನೆಡುತೋಪು. ಅಂದರೆ ಸ್ಪಷ್ಟವಾಗಿ ಸಹಜ ಕಾಡು ಮನುಷ್ಯನ ಆಸೆಗಳಿಗೆ ಬಲಿಯಾಗಿ ಹೆಚ್ಚಿನ ಆಸೆಗಳಿಗೆ ವ್ಯವಸ್ಥಿತವಾಗಿ ನೆಟ್ಟು, ಪೋಷಿಸಿದ ಮರಗಳು. ವನ್ಯದ ಪರಿಕಲ್ಪನೆಗಳು ಬದಲಾಗುತ್ತಾ ಬಂದಂತೆ ಸಹಜವಾಗಿ ಬಂದ ಇತರ ಸಸ್ಯ ವರ್ಗದಿಂದಲೂ ವ್ಯಾಘ್ರಧಾಮದ ಒತ್ತು ಸಿಕ್ಕಮೇಲೆ ವನ್ಯೋತ್ಪನ್ನ ಸಂಗ್ರಹಿಸುವ ಭ್ರಮೆಗಳಿಂದ ಕಳಚಿಕೊಳ್ಳುತ್ತಲೂ ಪ್ರಾಕೃತಿಕ ಸ್ಥಿತಿಗೆ ತುಂಬಾ ನಿಧಾನವಾಗಿ ಮರಳುತ್ತಿದೆ. ಶುದ್ಧ ವನ್ಯದ ಕಲ್ಪನೆ ಕಣ್ಣುತೆರೆಯುವ ಎಷ್ಟೋ ಮೊದಲಿನಿಂದಲೂ ಇದರ ಉದ್ದಗಲಕ್ಕೆ ಬಹಳ ದೊಡ್ಡ ಸಂಖ್ಯೆಯಲ್ಲೇ ಜನಜೀವನ (ಹಳ್ಳಿಗಳು) ರೂಢಿಸಿ ಹೋಗಿದೆ. ಹಾಗಾಗಿ ಮುಖ್ಯ ದಾರಿಗಳಲ್ಲಿ ಇಂದಿಗೂ ಸಂಚಾರ ನಿಯಂತ್ರಣವನ್ನು ಹೇರುವುದು ಇಲಾಖೆಗೆ ಸಾಧ್ಯವಾಗುತ್ತಿಲ್ಲ. ನಾವು ಶಿಬಿರದಲ್ಲಿದ್ದಂತೆ ಅಪರಾತ್ರಿಯಲ್ಲೂ ಹಳ್ಳಿಗರು ಬೈಕೋ ಕಾರಿನಲ್ಲೋ ಹಾದು ಹೋಗುವ ಸದ್ದು ಕೇಳಬಹುದಿತ್ತು. ಹಳ್ಳಿಗರ ಜಾನುವಾರು ಅಲ್ಲಲ್ಲಿ ಮೇವರಸಿ ಅಡ್ಡಾಟ ನಡೆಸುವುದನ್ನೂ ಕಾಣಬಹುದು. ಎಲ್ಲೋ ಒಂದು ಕಡೆ ಕೃಷಿಭೂಮಿಗೆ ವಿದ್ಯುತ್ ಬೇಲಿ ಮತ್ತು ಆನೆಕಂದಕದ ರಕ್ಷಣೆ ಕೊಟ್ಟಿರುವುದನ್ನು ಕಂಡೆವಾದರೂ ಗದ್ದೆ ತೋಟಗಳಲ್ಲಿ ಅದಕ್ಕೂ ಮಿಕ್ಕ ರಾತ್ರಿ ಪಾರದ ಅಟ್ಟಳಿಗೆಗಳನ್ನು ಕಂಡೆವು. ‘ವನ್ಯದೊಂದಿಗೆ ಸಹಜೀವನ’ ಎನ್ನುವುದು ‘ಅಕ್ಕಿ ಮೇಲಾಸೆ ನೆಂಟರ ಮೇಲೆ ಪ್ರೀತಿ’ಯಷ್ಟೇ ನಿಜ.

ಅರಣ್ಯದ ಹೃದಯಭಾಗ ಎನ್ನುವಂಥ (ನಾವು ನಿಂತ ಜಾಗ) ಕುಳಗಿ ಶಿಬಿರದಲ್ಲೂ ವನಸಂಚಾರಕ್ಕೆ ನಿಯಮಗಳನ್ನು ಹೇಳುವವರಿಲ್ಲ! ನಮಗಲ್ಲಿ ಚರವಾಣಿ ರೇಂಜ್ ಇಲ್ಲವೆಂದ ಕೂಡಲೇ ಕಾಡಿನೊಳಗೆ ಒಂದು ಕಿಮೀ ಮುಂದಿನ ವೀಕ್ಷಣ ಕಟ್ಟೆ ಸೂಚನೆ ಕೊಟ್ಟದ್ದೇ ಇಲಾಖಾ ನೌಕರ. (ನಾಗರಹೊಳೆಯಲ್ಲಿ ನಾವು ವನ್ಯಜೀವಿ ಗಣತಿಗೆ ಹೋದ ‘ವಿಶೇಷ ಜನ’ಗಳೇ ಆದರೂ ಮುಂಜಾನೆ ಮತ್ತು ಸಂಜೆಯ ನಿಯತ ಕಾಲ ಮತ್ತು ಜಾಡು ಬಿಟ್ಟು ವಾಸಸ್ಥಾನದ ಹೊರಗೆ ಓಡಾಡುವಂತಿಲ್ಲ) ಆದರೆ ಕುಳಗಿಯಲ್ಲಿ ಪ್ರಕೃತಿ ಶಿಬಿರಕ್ಕೂ ಒತ್ತಿನ ಹಳ್ಳಿಯ ನಡುವೆಯೂ ಯಾವುದೇ ತಡೆಯಿರಲಿಲ್ಲ. (ಬೈಕ್ ಕಲಿಯುತ್ತಿದ್ದ ಹಳ್ಳಿ ಪೋರನೊಬ್ಬ ಎರಡು ಬಾರಿ ನಮ್ಮ ಶಿಬಿರದೆದುರೇ ತಿರುಗಿಕೊಂಡು ಹೋದದ್ದನ್ನು ನಾನು ನೋಡಿದೆ.) ಇಲಾಖೆಯ ಕಟ್ಟಡದ ಪಕ್ಕದಲ್ಲೇ ಒಂದು ಜೋಪಡಿ ಸುಂದರ (ಇಂಗ್ಲಿಶಿನಲ್ಲೇ) ಬ್ಯೂಟೀ ಪಾರ್ಲರ್ ಬೋರ್ಡು ತಗುಲಿಸಿಕೊಂಡಿರುವುದಂತು ಎಲ್ಲರೂ (ಭಾಷೆ, ಶಿಕ್ಷಣ, ಸಾಮಾಜಿಕ, ಸಾಂಸ್ಕೃತಿಕ ಇತ್ಯಾದಿ) ಚಿಂತಿಸಬೇಕಾದ ವಿಷಯವೇ ಸರಿ. ಶಿಬಿರದ ವಠಾರದೊಳಗೆ ವಾಹನಸಂಚಾರ ಇರಬಾರದೆಂಬಂತೆ ದಾರಿಯ ಇನ್ನೊಂದು ಮಗ್ಗುಲಿಗೆ ಹರಕು ಬೇಲಿ ಮಾಡಿ ತಂಗುದಾಣ ನಿರ್ದೇಶಿಸಿದ್ದಾರೆ. ನಾನು ಬೈಕ್ ಅಲ್ಲೇ ಬಿಟ್ಟಿದ್ದೆ. ಸಂಜೆ ಶಿಬಿರಪಾಲಕ “ಸಾರ್, ಬೈಕ್ ಲಾಕ್ ಮಾಡಿ, ಹೆಲ್ಮೆಟ್ ಒಳಗಿಟ್ಟುಕೊಳ್ಳಿ” ಎನ್ನಬೇಕಾದ ಸ್ಥಿತಿ ತೀರಾ ಅನಿರೀಕ್ಷಿತ. ಅಲ್ಲಿನ ನೌಕರರು ವರದಿಮಾಡಿದ ‘ವಾರದ ಹಿಂದೆ ಡೈನಿಂಗ್ ಹಾಲಿನ ಪಕ್ಕದಲ್ಲಿ ಕಾಣಿಸಿದ ಗೌರ್ (ಕಾಡೆಮ್ಮೆ)’, ‘ತಿಂಗಳ ಹಿಂದೆ ಸಂತ್ರಸ್ತ ಜಿಂಕೆಗಳ ಆವರಣದ ಹೊರಗೆ ದರ್ಶನ ಕೊಟ್ಟ ಕರಿಚಿರತೆ’ ನನ್ನ ಲೆಕ್ಕಕ್ಕೆ ಕೇವಲ ಸುಲಭ ಆಹಾರ ಹುಡುಕಾಟದ ಸಂಕಟವೇ ಹೊರತು ಸಹಜ ಸಂಚಾರವಲ್ಲ.

ಭಾಗವತಿಯಿಂದ ಬಂದ ದಾರಿ ನೇರ ಗಣೇಶಗುಡಿಗೂ ಬಲಕ್ಕೆ ದಾಂಡೇಲಿಗೂ ಕವಲಾಗುವ ಜಾಗ ಕುಳಗಿ ಹಳ್ಳಿ. ನಾಲ್ಕು ಅಂಗಡಿ ಹತ್ತು ಮನೆಯ ಪೇಟೆ ಕಳೆದು ನೇರ ದಾರಿಯಲ್ಲೇ ಮುಂದುವರಿದರೆ ವಿಶೇಷ ಗಡಿ ಬೇಧವಿಲ್ಲದಂತೆ  ಅರಣ್ಯ ಇಲಾಖೆಯ ವಠಾರ ತೊಡಗುತ್ತದೆ. ಮೊದಮೊದಲಿರುವ ಕಛೇರಿ, ನೌಕರರ ವಸತಿಗಳ ಲೆಕ್ಕ ನಾನು ಕೆದಕುವುದಿಲ್ಲ. ಆ ಸರಣಿಯ ಕೊನೆಯ ನಾಗರಿಕ ರಚನೆಯಾಗಿಯೂ ಪ್ರಾಥಮಿಕ ವಸತಿ ಸೌಕರ್ಯವಾಗಿಯೂ ಇದೆ ‘ಕುಳಗಿ ಪ್ರಕೃತಿ ಶಿಬಿರ’. ಇಲ್ಲಿನ ಸ್ವಾಗತ ಕಮಾನು, ಬೋರ್ಡುಗಳು ಮತ್ತವುಗಳಲ್ಲಿನ ಉಪದೇಶಗಳು, ಉಕ್ತಿಗಳು (ಹೇಳುವುದು ಶಾಸ್ತ್ರ ಎನ್ನುವಂತೆ) ಎಂದಿನಂತೆ ಅದ್ದೂರಿಯಾಗಿಯೂ ಪ್ರಾಕೃತಿಕಕ್ಕೆ ದೂರವಾಗಿಯೂ ಇವೆ. ಆವರಣದ ಒಳಗೆ ಹಲವು ಖಾಯಂ ಸ್ವರೂಪದ ಗುಡಾರ ನಿಲ್ಲಿಸಿದ್ದು ಕಾಣಬಹುದು. ಖಾಯಂ ಅಂದರೆ, ಭದ್ರ ಕಾಂಕ್ರೀಟ್ ಅಡಿಪಾಯ ಮತ್ತು ನೆಲದ ಮೇಲೆ ನಿಲ್ಲಿಸಿದ ಜಿಂಕ್ ಶೀಟ್ ಮಾಡಿನ ರಕ್ಷಣೆಯೊಳಗೆ ಗುಡಾರಗಳನ್ನು ನಿಲ್ಲಿಸಿದ್ದಾರೆ. ಹಲವು ಕಡೆ ಇಲಾಖೆಯ ಈ ವ್ಯವಸ್ಥೆಯನ್ನು ನೋಡಿದ ಅನುಭವದಲ್ಲಿ ಹೇಳಬಲ್ಲೆ ಇದರ ಹಿತ್ತಲಿನಲ್ಲಿ ಖಾಯಂ ಕಕ್ಕೂಸ್, ಬಚ್ಚಲುಗಳೂ ಸೇರಿದಂತೆ ವಿದ್ಯುತ್, ನಲ್ಲಿನೀರುಗಳೂ ಸಜ್ಜಾಗಿರುತ್ತವೆ. ಸರಳವಾಗಿ ಹೇಳುವುದಾದರೆ ಸರಳತೆಗೂ ಇಲ್ಲಿ ಸಾಕಷ್ಟು ಹಣ ತೊಡಗಿದೆ (ಮತ್ತು ವಸೂಲೂ ಆಗಲೇಬೇಕು). ಬಹುತಾರಾ ಹೋಟೆಲಿನ ಒಳಗೆ ಭರ್ಜರ್ ಚಪ್ಪರಿಸಿ, ಕೋಕ್ ಸೀಪುತ್ತಾ ಬರಗಾಲದ ಚಿಂತನೆ ನಡೆಸಿದಷ್ಟೇ ಚಂದ ಮತ್ತು ಅರ್ಥಪೂರ್ಣವಾಗಿದೆ ಪ್ರಕೃತಿ ಶಿಬಿರ. ದೊಡ್ಡ ಸಂಖ್ಯೆಗಳಲ್ಲಿ ಬರಬಹುದಾದ ಶಿಕ್ಷಣ ಸಂಸ್ಥೆಗಳ ಪ್ರವಾಸಕ್ಕೆ ಇವು ಬಳಕೆಯಾದದ್ದಿರಬಹುದು. ಇಲ್ಲೊಂದು ನಾಗಝರಿ ಹೆಸರಿನ ಸಭಾಭವನವೂ ಆಧುನಿಕ ವಿದ್ಯುನ್ಮಾನ ಸಲಕರಣೆಗಳೊಡನೆ ಸಜ್ಜುಗೊಂಡಿರುವುದೂ ಕಾಣಬಹುದು. ಆದರೆ ಯಾವುದರಲ್ಲೂ ಇಲಾಖೆಯ ನೌಕರರನ್ನುಳಿದು ಇತರ ಜೀವ ಸ್ಪಂದನ ಸದ್ಯ ಆದ ಲಕ್ಷಣಗಳು ಕಾಣಿಸಲಿಲ್ಲ.

ಮುಖ್ಯದಾರಿಯಲ್ಲೇ (ಕೊನೆಯಿಂದ) ಎರಡನೆಯ ಆವರಣ ಪ್ರಕೃತಿ ನಿರೂಪಣಾ ಕೇಂದ್ರದ ಕಟ್ಟಡ. ಈ ವಲಯದ ಒಂದಷ್ಟು ಚಿಟ್ಟೆ ಮತ್ತು ಹುಳಗಳ ಸಂಗ್ರಹ, ಹಲವು ಚಿತ್ರಗಳು, ಕೆಲವು ಧ್ವನಿಗಳು (ಹುಲಿ ಗರ್ಜನೆ, ವಿವಿಧ ಕಪ್ಪೆಗಳ ವಟರು), ಪುಸ್ತಕಗಳು, ಮರಗಳ ಸೀಳು ಮಾದರಿಗಳು ಇಲ್ಲಿ ಪ್ರದರ್ಶನಕ್ಕಿವೆ. ಆದರೆ ಎಲ್ಲಾ ಸರಕಾರೀ ವ್ಯವಸ್ಥೆಗಳಂತೆ ಇಲ್ಲೂ ಆರಂಭ ಶೂರತ್ವ; ಅವನ್ನು ಉಳಿಸಿ, ನಡೆಸುವುದರಲ್ಲಿಲ್ಲ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳು ಕಾಣಿಸಿದವು. ನಾನು ಅಖಿಲ ಭಾರತ ಮಟ್ಟದಲ್ಲಿ ಸಾಕಷ್ಟು ವನಧಾಮಗಳನ್ನು ನೋಡಿದ ಅನುಭವದಲ್ಲಿ ಹೇಳುತ್ತೇನೆ - ಸಾಕ್ಷಾತ್ ವನ್ಯವೇ ಎದುರಿರುವಲ್ಲಿ, ‘ಮಾದರಿ’ ನೋಡುವ ತಾಳ್ಮೆ ಮತ್ತು ಸಮಯ ಹೆಚ್ಚಿನವರಿಗೆ ಇರುವುದಿಲ್ಲ. ಬದಲು ಖಾಸಗಿ ರೆಸಾರ್ಟ್ಗಳು ಸಾರ್ವಜನಿಕರಿಗೆ ಸೀಮಿತ ಸಲಕರಣೆಗಳೊಡನೆ ನುರಿತ ಜೀವಶಾಶ್ತ್ರಜ್ಞನ ಜೊತೆಮಾಡುವುದನ್ನು ಅನುಸರಿಸಿದರೆ ತುಂಬಾ ಉಪಯುಕ್ತ. ಆದರೆ ಒಂದು ಸಲದ ದೊಡ್ಡ ಹೂಡಿಕೆಯಲ್ಲಷ್ಟೇ ಆಸಕ್ತವಾದ ಸರಕಾರೀ ಇಲಾಖೆಗಳಿಗೆ ಇಂಥಾ ದೂರದೃಷ್ಟಿ ಇಲ್ಲ. ದೈನಂದಿನ ಕಡತಗಳ ವಹಿವಾಟು ಮೀರಿ ಯೋಚಿಸುವ ಸಂಸ್ಕಾರವೂ ಇಲ್ಲ (careeristಗಳು ಇರುವಷ್ಟು professionalistಗಳು ಕಾಣುತ್ತಿಲ್ಲ. ಸರಳವಾಗಿ, ವೃತ್ತಿಯನ್ನು ಪ್ರವೃತ್ತಿಯೊಡನೆ ಸಮೀಕರಿಸುವುದು ಅಪರಾಧ ಎನ್ನುವವರೇ ಜಾಸ್ತಿ!). ಇನ್ನೂ ದೊಡ್ಡ ದುರಂತವೆಂದರೆ ಅಂಥವನ್ನೆಲ್ಲಾ ರೂಢಿಸಿಕೊಂಡು ಬೆಳೆಯುವ ಇಲಾಖೆಯ ‘ಅಲ್ಪಸಂಖ್ಯಾತ’ರ ಕುರಿತು ಸಹನೆಯೂ ಬಹುಸಂಖ್ಯಾತರಿಗೆ ಇಲ್ಲವೇ ಇಲ್ಲ! ಇಲಾಖೆಗಳು ತಮ್ಮ ನಗರ ಕಛೇರಿಗಳ ಆವರಣದಲ್ಲೋ ಅದಕ್ಕೂ ಮುಖ್ಯವಾಗಿ ಅರಣ್ಯ/ವನ್ಯಶಾಸ್ತ್ರ ಬೋಧಿಸುವ ಕಾಲೇಜಿನಲ್ಲಿ ಜ್ಞಾನ ವಿಸ್ತರಣೆಯ ನೆಲೆಯಲ್ಲಿ, ಇಲಾಖೆಯ ಹೊಸ ನೌಕರರಿಗೋ ಪ್ರಕೃತಿ ಆಸಕ್ತ ಗುಂಪುಗಳಿಗೋ ತರಬೇತಿ ಅಥವಾ ಶಿಬಿರ ಇತ್ಯಾದಿಗಳನ್ನು ನಡೆಸುವ ಖಾಯಂ ವ್ಯವಸ್ಥೆಯಾಗಿ ಇಂಥವನ್ನು ಸಜ್ಜುಗೊಳಿಸುವುದು ಅರ್ಥಪೂರ್ಣ ಮತ್ತು ಉಳಿತಾಯದ ಕ್ರಮವೂ ಆಗಬಲ್ಲುದು (ಕೇಳುವವರಿದ್ದಾರಾ?).

ನಿರೂಪಣಾ ಕೇಂದ್ರದ ಹೊರಗೂ ಹಲವು ಪ್ರದರ್ಶಿಕೆಗಳಿವೆ. ಈ  ಕೇಂದ್ರಕ್ಕೂ ಪಕ್ಕದ ಪ್ರಕೃತಿ ಶಿಬಿರಕ್ಕೂ ನಡುವೆ ಸಣ್ಣ ತೊರೆಯೊಂದು ಹರಿಯುತ್ತದೆ. ವಠಾರದಿಂದ ಹತ್ತು ಹೆಜ್ಜೆ ಹೊರಗೆ ಡಾಮರು ದಾರಿಯಲ್ಲಿ ಯಾರೂ ಯಾವುದೂ ಆಚೀಚೆ ಓಡಾಡಬಹುದು. ಆದರೆ ಇಲ್ಲಿ ಒಳಗಿಂದೊಳಗೆ ಪ್ರತ್ಯೇಕ ಅಲಂಕೃತ ಕಾಂಕ್ರೀಟ್ ಕಾಲು ಸೇತುವೆ ಮಾಡಿದ್ದಾರೆ (ಗಮನಿಸಿ, ಇದು ಡಾಮರು ಮಾರ್ಗ, ಸೇತುವೆಗಿಂತ ಹಳೆಯದಲ್ಲ). ಕೇಂದ್ರಕ್ಕೆ ಬಿದಿರಿನಂತೆ ತೋರುವ ಬೇಲಿಗಳು, ಒರಟು ಮರಗಳ ಕಂಬ ಕೊಟ್ಟು ನಿಲ್ಲಿಸಿದಂತೇ ತೋರುವ ಕಾಲು ಮತ್ತು ಮೇಲೆ ಅಡ್ಡ ಹಲಿಗೆಯಂತೇ ಕಾಣುವ ನಾಮ ಫಲಕಗಳು, ಹೆಚ್ಚೇಕೆ ನಾವು ಕಾಡಿನೊಳಗೆ ಹೋದಲ್ಲೆಲ್ಲಾ ಇರುವ ಹಲವು ವೀಕ್ಷಣಾ ಕಟ್ಟೆಗಳು, ವಿರಾಮ ಮಂಚಗಳು ಎಲ್ಲಾ ಕಾಂಕ್ರಿಟಿನವು. (ನಿಜ ಮರದ್ದು ಗೆದ್ದಲು ಹಿಡಿಯುತ್ತದೆ ಇತ್ಯಾದಿ ನನಗರಿವಿದೆ. ಅದನು ಮೀರಿ ಕೇಳುತ್ತೇನೆ,) ವನ್ಯದೊಳಗೆ ಆವಶ್ಯಕತೆಗಳ ವಿವೇಚನೆಯಲ್ಲಿ ಇವೆಲ್ಲಾ ಉತ್ತೀರ್ಣವಾಗುತ್ತದೆಯೇ? ಕಬ್ಬಿಣಯುಕ್ತ ಕಾಂಕ್ರೀಟ್ ವಾಸ್ತವದಲ್ಲಿ ಮರುಸೃಷ್ಟಿಗೆ ಸಿಗದ ಪ್ರಾಕೃತಿಕ ಸಂಪತ್ತಿನಿಂದಾಗುತ್ತಿದೆ. ಅರ್ಥಾತ್ ಪರಿಸರ ಸ್ನೇಹಿಯಲ್ಲ ಎಂಬ ಸತ್ಯ ಈ ವೈಭವಗಳಿಗೆ ತೊಡಗುವಾಗ ಯಾರಿಗೂ ಹೊಳೆಯಲಿಲ್ಲವೇ? ಅದಕ್ಕೂ ಮಿಗಿಲಾಗಿ ನಿರೂಪಣಾ ಕೇಂದ್ರದ ಇನ್ನೊಂದು ಮಗ್ಗುಲಲ್ಲಿ ಅಪ್ಪಟ ಹಳ್ಳಿಮನೆಯ ಸವಿವರ ಕಲಾಪಗಳನ್ನು ಕಾಂಕ್ರೀಟ್ ನಿಜಜೀವ ಗಾತ್ರದ ಗೊಂಬೆಗಳಲ್ಲಿ ಮಾಡಿದ್ದಾರೆ! ಮೇಯಲು ಹೊರಟ ಎಮ್ಮೆಗಳು, ಗೋವಳಿಗರು, ಕಾವಲಿನ ನಾಯಿ, ಹೇನು ಹೆಕ್ಕುವ ಕೊಕ್ಕರೆ, ಜೋಪಡಿ, ಒಳಗೆ ಗೃಹಕೃತ್ಯ ನಿರತ ಹೆಂಗಸರು, ಮಕ್ಕಳು ಇತ್ಯಾದಿ ಏನು ಹೇಳಹೊರಟಿದ್ದಾರೆ? ಇದು ಮೂಲವಾಸಿಗಳ ಸರಳತೆಯನ್ನು ನಿರೂಪಿಸುವುದಕ್ಕೂ ಮಿಗಿಲಾಗಿ ಅವರ ದಾರಿದ್ರ್ಯದ ಅಣಕದಂತೆ ಭಾಸವಾಗುತ್ತದೆ. ವನ್ಯ ಇಲಾಖೆಗೆ ಸಂಬಂಧಿಸಿದಂತೆ ಇದರ ಔಚಿತ್ಯ ಬಲುದೊಡ್ಡ ಪ್ರಶ್ನೆ ಗುರುತಾಗಿಯೇ ಉಳಿಯುತ್ತದೆ.

ಪ್ರಕೃತಿ ನಿರೂಪಣಾ ಕೇಂದ್ರದ ಒತ್ತಿನ ಸುವಿಸ್ತಾರ ಪ್ರದೇಶದಲ್ಲಿ, ಪರಸ್ಪರ ಸುಮಾರು ಹದಿನೈದು ಅಡಿಯಂತರದಲ್ಲಿ ಹತ್ತು-ಹನ್ನೆರಡು ಕಾಟೇಜುಗಳು (ಪುಟ್ಟ ಮನೆ) ಕಟ್ಟಿ ಹಾಕಿದ್ದೇ ನಮ್ಮ ವಾಸಸ್ಥಳ - ಕುಳಗಿ ಟಿಂಬರ್ ಟ್ರೇಲ್ಸ್ ಕ್ಯಾಂಪ್ (ಇದಕ್ಕೆ ಇನ್ನೂ ಕನ್ನಡ ಹೆಸರು ಸಿಕ್ಕಿದಂತಿಲ್ಲ). ಎರಡು ಹಾಸಿಗೆಯುಕ್ತ ಮಂಚ, ಫ್ಯಾನ್, ದೀಪ, ಧಾರಾಳ ನಲ್ಲಿನೀರಿನ ಸೌಕರ್ಯದ ಒಟ್ಟಾರೆ ಮೂರು ಕೋಣೆ ಮತ್ತು ಪುಟ್ಟ ಜಗಲಿಯ ಮನೆಗೆ ದಿನ ಒಂದರ ಬಾಡಿಗೆ ಕೇವಲ ಸಾವಿರದಿನ್ನೂರು ರೂಪಾಯಿ. ಊಟ ಕಾಫಿ ಪ್ರತ್ಯೇಕ. ಕಿರು ಬಾಣೆಯ ಅರೆ ಮೇಲ್ಸುತ್ತಿನಲ್ಲಿ ಮನೆಗಳು, ಕೇಂದ್ರದಂತಿರುವ ತಗ್ಗಿನಲ್ಲಿ ಕಿಚನ್ ಯಾನೆ ಅಡುಗೆಮನೆ. ಮನೆಗಳ ಒಂದಂಚಿನಲ್ಲಿ ಹೊರಗೋಡೆಗಳಿಲ್ಲದ ಆದರೆ ಎತ್ತರಿಸಿದ ನೆಲ ಮತ್ತು ಮಾಡಿನ ಗೋಲಾಕಾರದ ಡೈನಿಂಗ್ ಹಾಲ್ ಉರುಫ್ ಭೋಜನಶಾಲೆ. ಇಡೀ ಬಾಣೆಯನ್ನು ಹುಲ್ಲಹಾಸು ಮಾಡಿದ್ದ ಕುರುಹುಗಳಿವೆ. ಎಲ್ಲ ರಚನೆಗಳನ್ನು ಶಿಸ್ತಾಗಿ ಸಂಪರ್ಕಿಸುವ ಕಲ್ಲಹಾಸಿನ ಪುಟ್ಟಪಥ, ಅವಕ್ಕೆ ರಾತ್ರಿಯಲ್ಲಿ ಅಣಕು ಲಾಂದ್ರದ (ವಿದ್ಯುತ್ತಿನ) ಬೀದಿದೀಪ. ಮನೆಯ ಒಳ ವೈಭವದ ವಿವರ ಹೇಳಿ ನಿಮ್ಮ ತಲೆ ತಿನ್ನುವುದಿಲ್ಲ. ತೋರಿಕೆಯ ಅಂದಕ್ಕಾಗಿ ಉರಿಬಿಸಿಲಿನಲ್ಲಿ ಇಟ್ಟ ಈ ಗೂಡುಗಳಿಗೆ ಸಹಜ ವಾತಾಯನ ಇಲ್ಲದೆ ಹಗಲಂತೂ ನಾವು ಅಕ್ಷರಶಃ ಬೆಂದುಹೋದೆವು! ಕಾಫಿ, ಊಟ ಅಡ್ಡಿಯಿಲ್ಲ. ಈ ಆವರಣಕ್ಕೊಂದು ಭರ್ಜರಿ ಸ್ವಾಗತ ಕಛೇರಿ, ಒಂದಷ್ಟು ಮಕ್ಕಳ ಹೊರಾಂಗಣ ಆಟದ ವ್ಯವಸ್ಥೆ ಎಲ್ಲಾ ನೋಡುವಾಗ ಕದ್ರಿ ಪಾರ್ಕಿನ ನೆನಪಾಯ್ತು. ಪುಟಾಣಿ ರೈಲು, ಡೊಂಬರ ತೊಟ್ಟಿಲು, ಜಾರಂಗಳ, ಈಜುಕೊಳ ಮುಂತಾದವೆಲ್ಲ ವ್ಯಾಘ್ರಧಾಮದ ಅಭಿವೃದ್ಧಿಯ ಯೋಜನಾ ಪಟ್ಟಿಯಲ್ಲಿರಬಹುದು!

ಶುಕ್ರವಾರ ಸಂಜೆಯೇ ತಲಪಿದ ನಮ್ಮಿಬ್ಬರಿಗೆ ಮುಕ್ತವಾಗಿ ತಿರುಗುವುದೊಂದೇ ಅಲ್ಲಿ ಇಲಾಖೆ ಕೊಡಬಹುದಾದ ಕಾರ್ಯಕ್ರಮ. ಕನಿಷ್ಠ ಕಾಡು ಸುತ್ತಲು ದಿಢೀರ್ ವ್ಯವಸ್ಥೆ ಕೂಡಾ ಅವರಲ್ಲಿರಲಿಲ್ಲ. ಶಿವಮೊಗ್ಗದ ಮಿತ್ರಮಂಡಳಿ ಅಪರಾತ್ರಿಯಲ್ಲಿ ಬಂದರೂ ಪೂರ್ವ ನಿಗದಿತ ಮರುದಿನದ ಕಲಾಪಗಳಿಗೆ ಎಲ್ಲೂ ತಡಮಾಡಲಿಲ್ಲ. ನಮಗಂದು ಮೂರು ಕಲಾಪಗಳಿದ್ದವು. ಮೊದಲು ಕೇವಲ ಹಾಸಿಗೆ ಚಾದೊಂದಿಗೆ ಪಕ್ಷಿವೀಕ್ಷಣಾ ಚಾರಣ. ಇಲಾಖೆ ಓರ್ವ ಸಾಮಾನ್ಯ ಮಾರ್ಗದರ್ಶಿಯನ್ನು ಕೊಟ್ಟಿದ್ದರು. ಶಿಬಿರವಲಯದಲ್ಲಿ ಮೂರು ದಿನಗಳಿಂದ ಮೋಡ ಬರಿದೇ ಕಟ್ಟಿ, ಚದುರುತ್ತಿತ್ತು. ತಣಿಸುವ ಹನಿ, ಬೀಸುವ ಗಾಳಿಯಿಲ್ಲದೆ ಜೀವಿಗಳೆಲ್ಲಾ ಜಡವಾಗಿದ್ದ ದಿನವದು. (ಇದಕ್ಕೆ ನಾನು ಇಲಾಖೆಯನ್ನು ದೂರುವುದಿಲ್ಲ!) ಸುಮಾರು ಒಂದೂವರೆ ಗಂಟೆಯ ಅವಧಿಯಲ್ಲಿ ಸುಮಾರು ಎರಡು ಕಿಮೀ ನಡಿಗೆ. ಕಿಲೋಮೀಟರಿನ ಅಂಶಗಳನ್ನೂ ತೋರುವ ಕಲ್ಲುಗಳು ಹಾಕಿದ, ತೆರವು ಮಾಡಿಟ್ಟ ಜಾಡು. ಅಲ್ಲಲ್ಲಿ ಕಾಂಕ್ವುಡ್ಡಿನ ಪ್ರಕೃತಿಪರ ಘೋಷಣೆಗಳ ಫಲಕಗಳು, ಸುಂದರ ಹಕ್ಕಿಚಿತ್ರಗಳು, ಎರಡು ಕಾಂಕ್ರೀಟಿನ ಅಟ್ಟಳಿಗೆಗಳೂ ನೋಡಿಕೊಂಡು ಬಂದೆವು. ಪಾಪ ಪಕ್ಷಿಗಳಿಗೇನು ಗೊತ್ತು, ವಿಶೇಷ ಹಣ್ಣು ಹೂವಿಲ್ಲದ ತೇಗದವನದಲ್ಲಿ ತಮ್ಮ ಅಭಿಮಾನಿಗಳು ಗಸ್ತು ಹಾಕುತ್ತಾರೇಂತ. ಮಾರುದ್ದದ, ಹಂಡೆ ದಪ್ಪದ ಕ್ಯಾಮರಾಗಳು, ಬೆನ್ನಚೀಲ ಬಿರಿದು ಹೆಚ್ಚಿನ ಚೀಲದಲ್ಲೂ ಸೇರಿದ್ದ ನೂರೆಂಟು ಲೆನ್ಸ್, ಫಿಲ್ಟರ್ ವಗೈರೆಗಳೊಡನೆ ಮಿತ್ರ ಮಂಡಳಿ ಸಜ್ಜಾಗಿತ್ತು. ಮಂಗಟ್ಟೆ ಪಕ್ಷಿಗಿಂತ (ಹಾರ್ನ್ ಬಿಲ್) ಸಣ್ಣದು ಬೇಡಾ ಪ್ಯಾರಡೈಸ್ ಫ್ಲೈಕ್ಯಾಚರಿಗಿಂತ (ಸ್ವರ್ಗೀಯ ನೊಣಬಾಕ) ಗಿಡ್ಡದ್ದು ಲೆಕ್ಕಕ್ಕಿಲ್ಲಾಂತೆಲ್ಲಾ ಹೇಳಿಕೊಂಡರೂ ನುಸಿ ನುಸುಳಿದರೂ ಸಂಭ್ರಮಿಸಿದೆವು. ಕೊನೆಯಲ್ಲಿ “ಸವಿ ನೆನಪುಗಳು ಬೇಕು” ಎಂದು ಗುನುಗುನಿಸುತ್ತಿದ್ದಂತೆ ಎಲ್ಲೋ ಎಂದೋ ನೋಡಿದ ವಿಶಿಷ್ಟ ಪಕ್ಷಿಗಳು, ಅವನ್ನು ಒಳಗೆ ಹಾಕಲು ಪಟ್ಟಪಾಡುಗಳೆಲ್ಲಾ ನಮ್ಮ ಸಾಂತ್ವನಕ್ಕೆ ಒದಗಿದವು. ಶಿಬಿರದ ಎದುರು ಮಗ್ಗುಲಿನ ವಾಹನ ನಿಲ್ದಾಣದಿಂದ ತೊಡಗಿದವರು ಲಾಳಾಕೃತಿಯಲ್ಲಿ ಸುತ್ತು ಹೊಡೆದು ಚರವಾಣಿ ಸಂಪರ್ಕಕ್ಕೆ ಬಳಸಿದ್ದ ವೀಕ್ಷಣಾ ಕಟ್ಟೆಯಲ್ಲಿ ಮುಗಿಸಿ ಬಂದಿದ್ದೆವು. (ಇಲ್ಲಿ ಬಳಸಿದ ಮಂಗಟ್ಟೆ ಅಥವಾ ಓಂಗಿಲೆ ಚಿತ್ರಗ್ರಾಹಿ: ಗೆಳೆಯ ಡಾ| ಕೃಷ್ಣಮೋಹನ್, ಕುದುರೆಮುಖ ಪಟ್ಟಣದೊಳಗೆ ತೆಗೆದದ್ದು. ಹೆಚ್ಚಿನ ವಿವರಗಳಿಗೆ ಅವರದೇ ಜಾಲತಾಣ: www.drkrishi.com)

ತಿಂಡಿಯಾದ ಮೇಲೆ ಟಿಂಬರ್ ಟ್ರಯಲ್ ಅಥವಾ ವೃಕ್ಷಪರಿಚಯದ ಚಾರಣ. ಇದು ಶಿಬಿರದ ಹಿಂದೆ ಮತ್ತದೇ ಹಕ್ಕಿ ಜಾಡಿನಂತದ್ದೇ ಒಂದೆರಡು ಕಿಮೀ ದೂರದ ನಿಗದಿತ ಸುತ್ತು. ಈ ಉದ್ದದಲ್ಲಿ ಹೆಸರಿಸಬಹುದಾದ ಮರಗಳ ಉದರಕ್ಕೇ ಕಾಂಕ್ವುಡ್ಡಿನ ಭರ್ಚಿ ಹೊಡೆದು, ಮರದ ಹೆಸರು ಜಾತಕ ಎಲ್ಲಾ ಬರೆದು ನೇತು ಹಾಕಿಬಿಟ್ಟಿದ್ದರು. ನನಗಂತೂ ಮೊಳೆ ಜಡಿದ ಏಸು ಕ್ರಿಸ್ತನದೇ ನೆನಪು. (ಕ್ಷಮಿಸಿ, ಅವರಿಗೆ ತಾವೇನು ಮಾಡುತ್ತಿದ್ದೇವೆ ಎಂದು ತಿಳಿದಿಲ್ಲ!) ಕೆಲವು ಭರ್ಚಿಗಳು ಕಿತ್ತು ಬಂದಿದ್ದವು, ಬೋರ್ಡುಗಳು ಕಳಚಿ ಬಿದ್ದಿದ್ದವು; ಹನುಮನ ಜಾಣ್ಮೆಯರಿಯದ ರಕ್ಕಸರು ಸುತ್ತಿದ್ದ ಬಂಧರಜ್ಜುಗಳಂತೆ. ಇಲ್ಲಿ ಮಧ್ಯಂತರದಲ್ಲೆಲ್ಲೋ ಚದುರಿದಂತೆ ನಾಲ್ಕೈದು ಕಾಂಕ್ವುಡ್ ಆಸನಗಳನ್ನು ಹಾಕಿಸಿದ್ದರು - ವಿಶ್ರಾಂತಿಗೆ! ಆ ದಿನ ವಾತಾವರಣದ ಬಿಸಿಯಲ್ಲಿ ನಾವು ತಲೆ ಮೇಲೆ ಪಂಖಾ, ಎಳೆದು ಕುಡಿಯಲು ಕ್ರೇಟ್ ತುಂಬಾ ಕೋಲ್ಡ್ ಡ್ರಿಂಕ್ಸ್ ಇಟ್ಟಿದ್ದರೂ ಬೇಡಾ ಎನ್ನುತ್ತಿರಲಿಲ್ಲ. ಆದರೆ ಇದು ಸರಿಯೇ?

ಟಿಂಬರ್ ಟ್ರೈಲಿನ ಕೊನೆ ನಮ್ಮ ಭೋಜನಶಾಲೆಯ ಹಿತ್ತಲಿಗೇ ಬರುತ್ತಿತ್ತು. ಅಲ್ಲಿ ಗಟ್ಟಿ ತಂತಿ ಬಲೆಯ ಆವರಣ ಮಾಡಿ, ಕಾಡಿನಲ್ಲಿ ಅನಾಥ ಮರಿಯಾಗಿಯೋ ಗಾಯಾಳುವಾಗಿಯೋ ಸಿಕ್ಕ ಒಂದೆರಡು ಜಿಂಕೆ ಕಡವೆಗಳನ್ನು ಬಿಟ್ಟಿದ್ದರು. ಲೆಕ್ಕಕ್ಕಿದು ವನ್ಯ ಸಸ್ಯಾಹಾರಿಗಳ ಪುನಶ್ಚೇತನ ಶಿಬಿರ. (ಪ. ಬಂಗಾಳದಲ್ಲಿ ಹೀಗೇ ಮಾಂಸಾಹಾರಿಗಳದ್ದೂ ಇರುವುದನ್ನು ನಾನು ಹದಿನೈದು ವರ್ಷಗಳ ಹಿಂದೆಯೇ ನೋಡಿದ್ದೆ.) ಗಮನಿಸಿ, ಇವು ಸಾರ್ವಜನಿಕ ‘ಮನರಂಜನೆಗೆ’ ಇರುವ ಪ್ರಾಣಿ ಸಂಗ್ರಹಾಲಯ ಅಥವಾ ಜೂ ಅಲ್ಲ. ಬಂಧಿ ಶೀಘ್ರ ದೃಢವಾಗಿ ವನ್ಯ ಸೇರುವಂತಾಗಬೇಕಾದದ್ದು ಆಶಯ. ಆದರೆ ಒಳಗಿನ ಬಡಕಲು ಜೀವಗಳು ಸಾಕುಪ್ರಾಣಿಗಳಂತೇ ನಾವು ಒಡ್ದುವ ಗರಿಕೆ, ಹಸಿ ಎಲೆಗೆ ದೇಹಿ ಎಂದು ಕತ್ತು ಚಾಚುವುದು ನೋಡಿದರೆ ವಿಷಾದವಾಯ್ತು. ಬಲೆ ತಪ್ಪಿಸಿ ನನ್ನ ಚಿತ್ರ ಸಂಗ್ರಹಕ್ಕೆ ಇವನ್ನು ವ್ಯಾಘ್ರಧಾಮದ ಪ್ರತಿನಿಧಿಗಳನ್ನಾಗಿ ಸೇರಿಸಿಕೊಳ್ಳಲು ಮನಸ್ಸಾಗಲಿಲ್ಲ.

ನಮ್ಮ ಸಮಯ ಕಳೆಯುವ ಅನಿವಾರ್ಯತೆಗೆ ರತ್ನಾಕರರ ಬಳಿ ಆಕರ್ಷಕ ಹೆಸರುಗಳ ಪಟ್ಟಿಯೇನೋ ಇತ್ತು. ಕವಳೆಯ ಗುಹೆ, ಸಿಂಥೇರಿ ಬಂಡೆ, ದಾಂಡೇಲಿಯ ಮೊಸಳೆವನ, ಅಲ್ಲೇ ಮೋಪು ಸಂಗ್ರಹದ ವಿಸ್ತಾರದಲ್ಲೂ ಬದುಕಿರುವ (!) ಮರಗಳಲ್ಲಿ ಕಾಣಸಿಗುವ ಮಂಗಟ್ಟೆ ಹಕ್ಕಿ ಇತ್ಯಾದಿ. ಇಲಾಖೆಯ ವಿಚಿತ್ರಗಳಲ್ಲಿ ಕವಳೆಗೆ ಬೆಳಗ್ಗಿನ ಆರುಗಂಟೆಯ ಸುಮಾರಿಗೆ ಮಾತ್ರ ಸಂದರ್ಶನಾವಕಾಶವೆಂದು ತಿಳಿದು ಕೈಬಿಟ್ಟೆವು. ನಮ್ಮೊಡನಿದ್ದ ಇಲಾಖೆಯ ಮಾರ್ಗದರ್ಶಿ ಅವರಿವರನ್ನು ಕೇಳಿ ಅಸ್ಪಷ್ಟವಾಗಿಯೇ ಮೊಸಳೆವನ, ಮಂಗಟ್ಟೆ ಹಕ್ಕಿ ದರ್ಶನದ ಸೂಚನೆ ಕೊಟ್ಟ. ಸರಿ, ಇಪ್ಪತ್ತು ಕಿಮೀ ದೂರದ ದಾಂಡೇಲಿಗೆ ನಮ್ಮ ಟೆಂಪೋ ಓಡಿಸಿದೆವು. ಅಲ್ಲಿ ಪೇಟೆಯೊಳಗಿನ ಗಲ್ಲಿ ದಾರಿಯೊಂದರಲ್ಲಿ ಕ್ರಿಸ್ತಪೂರ್ವದಲ್ಲಿ ಶೋಕಚಕ್ರವರ್ತಿ ಹಾಕಿಸಿದ್ದ ಡಾಮರು ದಾರಿಯಲ್ಲಿ ದಡಬಡಿಸಿ ದಾಂಡೇಲಪ್ಪನ ದೇವಳದ ಅಂಗಳಕ್ಕೇ ವ್ಯಾನ್ ಒಯ್ದೆವು. ದೇವಳದ ಸ್ವಲ್ಪ ಆಚೆಗೆ ಆಶ್ಚರ್ಯಕರವಾಗಿ ತುಂಬು ಪ್ರವಾಹದ ಹೊಳೆಯೊಂದು ಹರಿದಿತ್ತು. ನಮ್ಮ ಹೆಚ್ಚಿನ ಆಶ್ಚರ್ಯಕ್ಕೆ ಅಲ್ಲಿನೊಂದು ಅನಾಮಧೇಯ ಡಬ್ಬಾ ಹೋಟೆಲಿನ ಒತ್ತಿನ ಮುರುಕಲು ಗೇಟೇ(ಬೋರ್ಡಿಲ್ಲ, ಕೂಗಿ ಕರೆಯುವವರು ಮೊದಲೇ ಇಲ್ಲ) ಮೊಸಳೆವನದ ಪ್ರವೇಶದ್ವಾರ. ಆದರೂ ಅಧಿಕೃತ ಪ್ರವೇಶದರವನ್ನು ವಸೂಲು ಮಾಡುವ ವ್ಯವಸ್ಥೆ ಅಲ್ಲಿ ಸರಿಯಾಗಿತ್ತು. ಪರಿಸರ ಕೇಳಬೇಡಿ - ದುರ್ನಾತದೊಂದಿಗೆ ಅಲ್ಲಿನ ಅಂಗಡಿ ಮುಂಗಟ್ಟಿನ ತಿಪ್ಪೆ, ಯಾವುದೋ ಭಾರೀ ಒಲೆಯ ಬೂದಿ ಮಸಿಕರಿ ಮೆಟ್ಟಿಕೊಂಡೇ ಹೊಳೆಯಂಚಿಗೆ (ದೃಢ ನೆಲ, ಮೆಟ್ಟಿಲು ಎಲ್ಲಾ ಕೇಳಬೇಡಿ) ಜಾರಿದೆವು. 

ಒಂದೆರಡು ಪೇರಳೆ ಮರವೇ ನೆರಳು. ಕುಂಬು ಕಂಬ, ಒಡಕಲು ಬಿದಿರಡ್ಡದ ಮುರುಕಲು ಬೇಲಿ ರಕ್ಷಣೆ. ಆಚೆಗೆ ಒಂದಷ್ಟು ಬಾಳೆಬುಡ, ಕುರುಚಲು ಗಿಡ, ಅಸ್ಪಷ್ಟ ಗೊಸರು ನೆಲ. ಅದೆಲ್ಲಿ ಮುಗಿಯುತ್ತದೆ, ಹೊಳೆ ಎಲ್ಲಿ ತೊಡಗುತ್ತದೆ, ಆಳ ಎಷ್ಟು, ಒಯ್ಲೇನು, ಸುಳಿಯ ಬಲ ಹೇಗೆ ಎಂದು ಅಂದಾಜಿಸುವುದು ಕಷ್ಟ. ಮುರುಕು ಬೇಲಿ ಮೆಟ್ಟಿ ಕತ್ತು ಉದ್ದ ಮಾಡಿದೆವು. ಹೊಳೆಗೆ ಅದೇನೋ ಅಸಹಜ ಬಣ್ಣ; ಅಕ್ಕಿ ತೊಳೆದ ನೀರಿನಂತೆ. ಮತ್ತೇನೋ ರಾಸಾಯನಿಕದ ವಿಚಿತ್ರ ವಾಸನೆ ತಿಪ್ಪೇ ವಾಸನೆ ಮೀರುತ್ತಿತ್ತು. ಕಾಗದ ಕಾರ್ಖಾನೆ ಬಳಸಿ, ‘ಪರಿಸರಸ್ನೇಹಿ’ಯಾಗಿ ಬಡಕಲು ತೊರೆಯ ಒಡಲು ತುಂಬಿದ ಪರಿಣಾಮ! ಸುಮಾರು ಐವತ್ತಡಿ ಅಗಲಕ್ಕೆ ಹರಿದಿತ್ತು. ನಡುವೆಯೆಲ್ಲೋ ದಿಬ್ಬವಿದ್ದಿರಬೇಕು, ಒಂದು ಪೊದರು. ಅದರ ಈಚಿನ ಬುಡದಲ್ಲೊಂದು ಆಚಿನ ಅಂಚಿನಲ್ಲೊಂದು ಬೂದುಬಣ್ಣದ ಭಾರೀ ಮರದ ಬೊಡ್ಡೆ ಬಿದ್ದುಕೊಂಡಿತ್ತು. ಅಲ್ಲಾ ಅದು ಬಂಡೆಯೇ ಇರಬಹುದೋ ಎಂದು ನಾವು ಸಂಶಯದಲ್ಲೇ ದೃಷ್ಟಿ ಕೀಲಿಸಿದಾಗ ತಿಳಿಯಿತು, ಸಾಕ್ಷಾತ್ ಮಕರ ಮಹಾಶಯರು ಅಲ್ಲಿ ವಿರಮಿಸಿದ್ದರು. ಹೊಳೆಯ ಆಚಿನ ದಂಡೆಯಲ್ಲೂ ಒಂದರ ಮೇಲಿನ್ನೊಂದು ಮುಸುಡು ಚಾಚಿದಂತೆ ಎರಡು ಮೊಸಳೆ. ಅಷ್ಟರಲ್ಲಿ ನಮಗೆ ಟಿಕೆಟ್ ಮಾರಿದಾತ ಪಿಸುಧ್ವನಿಯಲ್ಲಿ ನಮ್ಮ ಪಕ್ಕದ ಬಾಳೆಬುಡದತ್ತ ಗಮನ ಸೆಳೆದ. ನನ್ನ ಕಣ್ಣು ಚೆನ್ನಾಗಿಯೇ ಗ್ರಹಿಸಿತು, ಆದರೆ ಕ್ಯಾಮರಾ ಮಾತ್ರ ಗಳಿಗೆಗಳಲ್ಲಿ ಹಿಂದೆಬಿದ್ದು ಚಿತ್ರ ತಪ್ಪಿಹೋಯ್ತು. ಅಲ್ಲೊಂದು ಭಾರೀ ಮೊಸಳೆ ತನ್ನರ್ಧ ದೇಹವನ್ನೇ ದಂಡೆಗೆ ಚಾಚಿ ಬಿಸಿಲು ಕಾಯಿಸುತ್ತಾ ಬಿದ್ದಿತ್ತು. ಅದು ನಮ್ಮ ಕಳ್ಳಹೆಜ್ಜೆಯನ್ನು ಗ್ರಹಿಸಿ, ಕೋಪದಲ್ಲೆಂಬಂತೆ ಒಮ್ಮೆ ದೊಡ್ಡದಾಗಿ ಬಾಯಿ ತೆರೆದು, ಸರಸರನೆ ಹಿಂಜರಿದು ನೀರಿನಲ್ಲಿ ಮಾಯವಾಯ್ತು. ಇತಿಹಾಸ ಪೂರ್ವದ ಈ ಜೀವಿಗಳು ನಮ್ಮ ಸ್ವಾರ್ಥದ ಹೊಳೆಯಲ್ಲಿ ಹೀಗೇ ಪೂರ್ಣ ಕಣ್ಮರೆಯಾಗಿ ಹೋದಾವೇ ಎಂಬ ವಿಷಾದದೊಡನೆ ವ್ಯಾನಿಗೆ ಮರಳಿದೆವು. 

ದಾಂಡೇಲಿ ಅರಣ್ಯ ಇಲಾಖೆಯ ವಿಸ್ತಾರ ವಠಾರದಲ್ಲಿ ಭಾರೀ ಮೋಪಿನ ಸಂಗ್ರಹ ಹರಡಿತ್ತು (ಭೂಭುಜರ ಶವಪ್ರದರ್ಶನ?). ಅಲ್ಲಿ ಹಾಗೇ ವಿರಳವಾಗಿ ಒಂದಷ್ಟು ಮರ ಸಜೀವವಾಗಿಯೂ ನಿಂತಿದ್ದವು. ಇಲ್ಲಿತ್ತು, ಆ ಮರದಲ್ಲಿ ಗ್ಯಾರಂಟೀ, ಐದೇ ಮಿನಿಟಿನಲ್ಲಿ ಗುಟುಕು ಕೊಡಲು ಈ ಪೊಟರೆಗೆ ಬರಲೇ ಬೇಕೆಂದೆಲ್ಲಾ ನಮ್ಮನ್ನು ನಾವೇ ಸಂತೈಸಿಕೊಳ್ಳುತ್ತಾ ಅರ್ಧ ಮುಕ್ಕಾಲು ಗಂಟೆ ಉರಿ ಬಿಸಿಲಲ್ಲಿ ತಪಸ್ಸು ಮಾಡಿದ್ದು ವ್ಯರ್ಥವಾಯ್ತು. ಅಲ್ಲಿ ‘ಸತ್ತು ಮಲಗಿದ್ದ’ ಎಷ್ಟೋ ಮಹಾಕಾಯರು ಇಂಥಾ ಎಷ್ಟೋ ಕುಟುಂಬಗಳನ್ನು ಸಲಹಿದ್ದಿರಬಹುದಲ್ಲವೇ. ಅಥವಾ ಮೋಪಾಗುವ ಕಾಲಕ್ಕೆ ತನ್ನೊಳಗೇ ಉಳಿಸಿಕೊಂಡು ಅನಿವಾರ್ಯವಾಗಿ ದುರ್ಮರಣಕ್ಕೂ (ಮನೆಯೇ ಶವಪೆಟ್ಟಿಗೆ) ಕಾರಣವಾಗಿರಬಹುದಲ್ಲವೇ ಎಂದೆಲ್ಲಾ ಯೋಚಿಸುತ್ತಾ ವಾಪಾಸಾದೆವು. (ವಿಶ್ವ ಭೂದಿನದ ನೆಪದಲ್ಲಿ ಏಪ್ರಿಲ್ ೨೨ರ ಸುಧಾ ಮುಖಪುಟ ಲೇಖನದಲ್ಲಿ ಸುಮಂಗಲಾ ಎಸ್. ಮುಮ್ಮಿಗಟ್ಟಿ ಹೀಗೇ ಒಂದು ಓಂಗಿಲೆ ಕುಟುಂಬದ ದುರಂತ ಕಥನ ಕೊಟ್ಟಿದ್ದಾರೆ.) ಗಂಟೆ ಹನ್ನೆರಡು ಕಳೆದ ಪ್ರಖರತೆಯಲ್ಲಿ ಮತ್ತೆ ಹತ್ತಿಪ್ಪತ್ತು ಕಿಮೀ ದೂರ ಪಯಣಿಸಿ ಸಿಂಥೇರಿ ಬಂಡೆ ನೋಡುವ ಉತ್ಸಾಹ ಯಾರಲ್ಲೂ ಉಳಿದಿರಲಿಲ್ಲ. ಕುಳಗಿ ಮರಳಿ, ಮಿತ್ರಮಂಡಳಿಗೆ ಬಾಕಿಯಿದ್ದ ಪ್ರಕೃತಿ ನಿರೂಪಣಾ ಶಿಬಿರದಲ್ಲಷ್ಟು ಕಾಲಾಡಿಸಿ, ಗೂಡು ಸೇರಿದೆವು. ವಿಶ್ರಾಂತಿ,  ಊಟ ಮತ್ತೆ ವಿಶ್ರಾಂತಿ.

ಮೂರೂ ಮುಕ್ಕಾಲರವರೆಗೆ ಅತ್ತ ನಿದ್ರೆಯೂ ಅಲ್ಲ ಇತ್ತ ಸ್ವಯ ತಪ್ಪಿದ್ದೂ ಅಲ್ಲ ಎನ್ನುವ ಸ್ಥಿತಿ - ನಮ್ಮ ಉಬ್ಬೆ ಮನೆಯೊಳಗೆ! ಮತ್ತೆ ಪರಿಶುದ್ಧ ಅಸ್ಸಾಂ ಗಿರಿಶ್ರೇಣಿಗಳಿಂದ ಬಂದ ಮೂಲಿಕಾ ಕಷಾಯದಿಂದ (ಚಾ!) ಅಲ್ಪಚೇತನರಾಗಿ ನಮ್ಮ ವ್ಯಾನೇರಿದೆವು. ನಾಲ್ಕೈದು ಕಿಮೀ ದೂರದ ಪನಸೋಳಿಯಲ್ಲಿ ಅಧಿಕೃತ ಇಲಾಖೆಯ ವಾಹನ ಏರಿ ವನ್ಯವೀಕ್ಷಣೆ ಅಥವಾ ಸಫಾರಿ. (ಇದಕ್ಕೆ ಪ್ರತ್ಯೇಕ ಕಾಸು ಕೊಡಬೇಕು.) ಒಟ್ಟು ಸುಮಾರು ಎರಡು ಗಂಟೆಯ, ಮಣ್ಣದಾರಿಯ ನಿಧಾನ ಸವಾರಿ. ಅಗತ್ಯವಿದ್ದಲ್ಲಿ ಸಣ್ಣ ನಿಲುಗಡೆ, ವಿಶ್ರಾಂತಿ (?), ಹಳೆಯ ಸಣ್ಣ ಮ್ಯಾಂಗನೀಸ್ ಗಣಿ ದರ್ಶನ, ಮತ್ತೊಂದು ವೀಕ್ಷಣಾ ಕಟ್ಟೆಯ ಭೇಟಿ ಎಲ್ಲಾ ಮುಗಿಸಿತು. ನಿವ್ವಳ ಆದಾಯ ಒಂದು ಶ್ಯಾಮ ಎನ್ನುವ ಹಕ್ಕಿ, ಎರಡು ಕೆಂಜಳಿಲು ಬಾಲ(ದರ್ಶನ) ಮಾತ್ರ! (ಹಕ್ಕಿ ನೋಡುವ ಗಡಿಬಿಡಿಯಲ್ಲಿ ಲಡ್ಡು ವ್ಯಾನಿನ ಯಾವುದೋ ಹರಕು ನನ್ನ ಹಿಮ್ಮಡಿ ಕೊಯ್ದದ್ದಕ್ಕೆ, ಊರಿಗೆ ಬಂದ ಮೇಲೊಂದು ಆಂಟೀ ಟಿಟನಸ್ ಇಂಜಕ್ಷನ್ ವೈಯಕ್ತಿಕ ಗೆಯ್ಮೆ!)  

ವನಧಾಮಗಳು ಪ್ರಾಣಿ ಸಂಗ್ರಹಾಲಯಗಳಲ್ಲ. ಒಂದು ಭೇಟಿ, ಒಂದು ಋತುಮಾನದ ದರ್ಶನ ಅಲ್ಲಿನೆಲ್ಲವನ್ನು ಬಿಟ್ಟುಕೊಡಬೇಕೆಂದು ನಿರೀಕ್ಷಿಸುವುದು ಶುದ್ಧ ಅಜ್ಞಾನ. ಯಾವುದೇ ಇಲಾಖೆಯಲ್ಲ (ಹಾಗೊಂದು ಇದ್ದರೆ) ಸಾಕ್ಷಾತ್ ವನದೇವತೆ ಸಂಕಲ್ಪಿಸಿದರೂ ಅದಾಗದು. ಆದರೆ ಎರಡು ದಿನಗಳ ನಮ್ಮ ಸುತ್ತಾಟ ವ್ಯರ್ಥವಾಗುತ್ತದೆಂಬ ಹತಾಶೆಯಲ್ಲಿ ಮಿತ್ರಮಂಡಲಿ ಮಂತ್ರಾಲೋಚನೆ ನಡೆಸಿತು. ಮರುದಿನ ಬೆಳಿಗ್ಗೆ ಸುಮಾರು ಮೂವತ್ತು ಕಿಮೀ ದೂರದ ಗಣೇಶಗುಡಿಗೆ ಹೋಗಿ ಮಧ್ಯಾಹ್ನದವರೆಗೆ ಅಲ್ಲಿನೊಂದು ರೆಸಾರ್ಟಿನಲ್ಲಿ ಮಂಗಟ್ಟೆ ಹಕ್ಕಿಯ ಖಾತ್ರಿ ದರ್ಶನ ಪಡೆದು, ನದಿಯ ನಡುಗಡ್ಡೆಯೊಂದಕ್ಕೆ (ದ್ವೀಪ) ಭೇಟಿ ನೀಡಿ, ಉಳಿದ ಸಮಯದಲ್ಲಿ ದೋಣಿಚಾಲನೆ ಗಟ್ಟಿ ಮಾಡಿದರು. ಏನಿದ್ದರೂ ಇಲ್ಲದಿದ್ದರೂ ಮಧ್ಯಾಹ್ನದ ಊಟ ಮುಗಿಸಿ ಅವರವರೂರು ಎರಡನೇ ಭಾಗ. ನಮಗಿಬ್ಬರಿಗೆ ಆ ಹಕ್ಕಿಯ ದರ್ಶನ, ದೋಣಿಚಾಲನೆ ಹೊಸತೇನಲ್ಲ. ಅವಕ್ಕಾಗಿ ಮರುಪಯಣಕ್ಕೆ ಹೆಚ್ಚುವ ದೂರ ಮತ್ತು ಸಮಯದಲ್ಲಿನ ಕಡಿತ ಅವಗುಣವಾಗಿ ಕಾಣಿಸಿತು. ಬೆಳಕು ಹರಿದದ್ದೇ ಮಿತ್ರಮಂಡಳಿಗೆ ವಿದಾಯ ಹೇಳಿ ಮಂಗಳೂರ ದಾರಿ ಹಿಡಿದೆವು. ಅತ್ತ ಮಿತ್ರಮಂಡಳಿಗೆ ಓಂಗಿಲೆ ದರ್ಶನವೇನೋ ದಕ್ಕಿತಂತೆ. (ಇಲ್ಲಿ ನೋಡಿ) ಉಳಿದಂತೆ ಅವರೂ ನಿರಾಶರೇ.

ದಾಂಡೇಲಿ-ಅಣಶಿಯ ಅರಣ್ಯ ಹಿಂದೇನೇ ಕಾರಣಕ್ಕೆ ಊರ್ಜಿತಗೊಂಡದ್ದಿರಬಹುದು. ಆದರೆ ಈಗ ವನ್ಯ ಇಲಾಖೆ ಇದು ಹುಲಿ ರಕ್ಷಣಾಧಾಮವಾಗಿರುವುದನ್ನು ಮತ್ತೆ ಮತ್ತೆ ಜ್ಞಾಪಿಸಿಕೊಂಡು, (ಟಿಂಬರ್ ಟ್ರೈಲ್ ಕಳಚಿಕೊಂಡು,) ಪ್ರವಾಸೀಧಾಮದ ಅಮಲು ಅಳಿಸಿಕೊಂಡು ಕನಿಷ್ಠ ನಾವು ಕಂಡ ಪಕ್ಷಿ ಸಮೂಹದ ಪರಿಸರಕ್ಕಾಗಿಯಾದರೂ ದುಡಿಯುವಂತಾಗಲಿ.
ಈ ಅಧ್ಯಾಯದ ನಾಂದಿಪದವಾಗಿ ಹಾಕಿದ ಸಾಲೆರಡರ ಮೂಲ ಸಾಹಿತ್ಯ
Take nothing but memories
Leave nothing but foot prints
ಭೂತಾನಿನ ಅಭಯಾರಣ್ಯದ ಈ ಜಾಹೀರಾತು ಫಲಕದ ಚಿತ್ರವನ್ನು ಗೆಳೆಯ ವಿಶ್ವಯಾನಿ ಗೋವಿಂದ ನನಗೆ ದೂಡಿದ್ದ. ಅದರ ಸರಳ ಸುಂದರ ಭಾವವನ್ನು ನನ್ನದೇ ಕುಶಿಯಲ್ಲಿ ಹಾಗೊಮ್ಮೆ ಹಾಡಿಕೊಂಡೆ. ಮತ್ತೆ
ಒಯ್ಯುವುದಿದ್ದರೆ ಸ್ಮೃತಿ ಮಾತ್ರ
ಉಳಿಸುವುದಿದ್ದರೆ ಪದಹತಿ ಮಾತ್ರ
. . . . ಹೀಗೂ ಗುನುಗಿಕೊಂಡೆ.
ಇಲ್ಲೇ ಇದ್ದು ಮೂಲ ಕೇಳಿಸಿಕೊಂಡ ಜಿಂಕೆ ಸುಬ್ಬನ ಮಗಳು ಶ್ರುತಿ
ಕೇವಲ ಸವಿನೆನಪುಗಳನ್ನಲ್ಲದೆ ಇನ್ನೇನನ್ನೂ ಒಯ್ಯದಿರು
ಕೇವಲ ಹೆಜ್ಜೆಗುರುತನ್ನಲ್ಲದೆ ಇನ್ನೇನನ್ನೂ ಬಿಡದಿರು
ಹೀಗಾಗಬಹುದೇ ಎಂದಳು.
ನೀವೇನಂತೀರೀ ಪದ್ಯಕ್ಕೆ?
ಇಡೀ ಬರಹದ ಆಶಯಕ್ಕೆ?

8 comments:

  1. You have expressed it all .... brought out the deficiencies in our approach to nature conservation very well...I wish some concerned authorities will have a close look at it....!!

    ReplyDelete
  2. ಮಿತ್ರ ಅಶೋಕ ವರ್ಧನರಿಗೆ, ವಂದೇಮಾತರಮ್.
    ನಿಮ್ಮ ಈ ಕೆಳಗಿನ ಸಾಲುಗಳು ತುಂಬಾ ಪ್ರತಿಭಾವಂತವಾಗಿವೆ. ನಮ್ಮ ಋಶಿ ಮುನಿಗಳು ಕಾಡಿನ ಸ್ಮೃತಿಗಳಿಂದ ಪ್ರಬಾವಿತರಾಗಿ ಉದ್ಗ್ರಂಥಗಳನ್ನು ಬರೆದು ನಮಗೆ ಬಿಟ್ಟು ಹೋದರು. ಅವರ ಹೆಜ್ಜೆ ಕಾಡಿನಲ್ಲಿ ಮಾತ್ರವಲ್ಲ ಪ್ರತಿಯೊಬ್ಬ ಭಾರತೀಯನ ಹೃದಯಾಂತರಾಳಗಳಲ್ಲೂ ಶಾಶ್ವತವಾಗಿ ಉಳಿದಿದೆ.


    Take nothing but memories
    Leave nothing but foot prints
    ಭೂತಾನಿನ ಅಭಯಾರಣ್ಯದ ಈ ಜಾಹೀರಾತು ಫಲಕದ ಚಿತ್ರವನ್ನು ಗೆಳೆಯ ವಿಶ್ವಯಾನಿ ಗೋವಿಂದ ನನಗೆ ದೂಡಿದ್ದ. ಅದರ ಸರಳ ಸುಂದರ ಭಾವವನ್ನು ನನ್ನದೇ ಕುಶಿಯಲ್ಲಿ ಹಾಗೊಮ್ಮೆ ಹಾಡಿಕೊಂಡೆ. ಮತ್ತೆ
    ಒಯ್ಯುವುದಿದ್ದರೆ ಸ್ಮೃತಿ ಮಾತ್ರ
    ಉಳಿಸುವುದಿದ್ದರೆ ಪದಹತಿ ಮಾತ್ರ
    . . . . ಹೀಗೂ ಗುನುಗಿಕೊಂಡೆ.
    ಇಲ್ಲೇ ಇದ್ದು ಮೂಲ ಕೇಳಿಸಿಕೊಂಡ ಜಿಂಕೆ ಸುಬ್ಬನ ಮಗಳು ಶ್ರುತಿ
    ಕೇವಲ ಸವಿನೆನಪುಗಳನ್ನಲ್ಲದೆ ಇನ್ನೇನನ್ನೂ ಒಯ್ಯದಿರು
    ಕೇವಲ ಹೆಜ್ಜೆಗುರುತನ್ನಲ್ಲದೆ ಇನ್ನೇನನ್ನೂ ಬಿಡದಿರು
    ಹೀಗಾಗಬಹುದೇ ಎಂದಳು.
    ನೀವೇನಂತೀರೀ ಪದ್ಯಕ್ಕೆ?
    ಇಡೀ ಬರಹದ ಆಶಯಕ್ಕೆ?
    ಆದರೆ ಇಂದು ಕಾಡಿಗೆ ಹೋಗಿ ಪಹತಿ ಬಿಟ್ಟು ಸ್ಮೃತಿ ಮಾತ್ರ ತರಬೇಕು ಎಂದರೂ ಪರಿಸ್ಥಿತಿಯ ಒತ್ತಡಕ್ಕೆ ಗುರಿಯಾದ ನಾವು ಬರಿಕೈಯಲ್ಲಿ ಬರುವಂತಿಲ್ಲ. ಪಕ್ಕದ ಮನೆಯಲ್ಲಿ ಇರುವ ಸವಲತ್ತುಗಳೆಲ್ಲಾ ನಮಗೆ ಬೇಕು.
    ಪ್ರಕೃತಿ ದತ್ತವಾದ ವಸ್ತುಗಳ ನಾಶಕ್ಕೆ ಒಂದು ಬಲವಾದ ಕಾರಣ ಅವಿಭಕ್ತ ಕುಟುಂಬದ ಅವನತಿ. ಅದು ಇಂದು ಎಲ್ಲಿಯ ತನಕವೆಂದರೆ, ಗಂಡ ಹೆಂಡತಿ ಸೇರಿ ಇದ್ದರೆ, ಅದು ಅವಿಭಕ್ತ ಕುಟುಂಬ. ಗಂಡ ಬೆಂಗಳೂರಿನಲ್ಲಿ, ಹೆಂಡತಿ ಮಂಗಳೂರಿನಲ್ಲಿ, ಮಗ ಹೈದರಾಬಾದಿನಲ್ಲಿ, ಮಗಳು ಚೆನ್ನೈಯಲ್ಲಿ; ನಾಲ್ವರಿಗೆ ನಾಲ್ಕು ಮನೆ. ಇದಕ್ಕೆಲ್ಲಾ ಮುಡಿಸರಕುಗಳು/ ಪರಿಕರಗಳು ಎಲ್ಲಿಂದ ಬರಬೇಕು? ನೆಹ್ರೂ ಇದ್ದಿದ್ದರೆ ಈಗ ಕೆಳಗಿನ ಸಾಲುಗಳ ವಿಶ್ಲೇಷಣೆ ಹೇಗೆ ಮಾಡಿತ್ತಿದ್ದರೋ?
    The woods are lovely, dark, and deep,
    But I have promises to keep,
    And miles to go before I sleep,
    And miles to go before I sleep.

    By. Robert Frost

    Jai Hind,
    K C Kalkura B.A, B.L

    ReplyDelete
  3. ಅಶೋಕವರ್ಧನರವರಿಗೆ ವಂದನೆಗಳು. ನಿಮ್ಮ ಲೇಖನ ಚೆನ್ನಾಗಿ ಮೂಡಿ ಬಂದಿದೆ. ಎರಡು ದಿನದ ಪ್ರವಾಸ ನಿಮ್ಮ ಅನುಭವ ,ನೀವು ನೋಡಿದ ರೀತಿ ನಮಗೆ ಮಾರ್ಗದರ್ಶಿ ಎನಿಸುತ್ತಿದೆ. ನಿಮ್ಮೊಡನೆ ಮತ್ತೊಮ್ಮೆ ಪ್ರವಾಸ ಹೋಗಲು ನಾವು ಉತ್ಸುಕರಾಗಿದ್ದೇವೆ .ಮತ್ತೆ ಭೇಟಿಯಾಗೋಣ.
    ಶ್ರೀಕಾಂತ ಹೆಗಡೆ ,ಶಿವಮೊಗ್ಗ

    ReplyDelete
  4. ಕಾಡಿನಲ್ಲಿಯೂ ಕಾಂಕ್ರೀಟ್ ಕಟ್ಟೆ, ಫಲಕ, ಕಾಲು ದಾರಿಗಳನ್ನು ಮತ್ತು ಗ್ರಾಮ ಜೀವನದ ಮಾದರಿಗಳನ್ನು ಅರಣ್ಯ ಇಲಾಖೆ ನಿರ್ಮಿಸುವುದರ ಔಚಿತ್ಯ ಅರ್ಥವಾಗುವುದಿಲ್ಲ. ಕುಳಗಿ ಪ್ರಕೃತಿ ಶಿಬಿರದ ವಿವರ ತಿಳಿದು ಬೇಸರವೆನ್ನಿಸಿತು. ಲೇಖನ ಚೆನ್ನಾಗಿದೆ.

    ReplyDelete
  5. Wonderful sir. Aadare a boardina bagge barediddare Chennagittu.

    ReplyDelete
    Replies
    1. ಯಾವ ಬೋರ್ಡಣ್ಣಾ? ದಾಂಡೇಲಿಯಲ್ಲಂತೂ ಬೋರ್, ಬೋರ್ಡ್, ಬೋರ್ಡಂಗಳಿಗೆ ವ್ಯತ್ಯಾಸವೇ ಇರಲಿಲ್ಲ. ಎಲ್ಲಕ್ಕೂ ಮುಖ್ಯವಾಗಿ ನನ್ನ ಧಾಟಿ ನಿನಗೆ ಹಿಡಿಸಿದೆ ಎಂದ ಮೇಲೆ, ನನ್ನಷ್ಟೇ ನೀನೂ ಅಲ್ಲಿದ್ದೀ ಎಂದಾದಮೇಲೆ ಅದೇ ಎಳೆ ಹಿಡಿದು ನೀನೇ ಅದ್ಯಾವ ಬೋರ್ಡಿದ್ದರೂ ಇಲ್ಲೇ ವಿಸ್ತರಿಸಿಬಿಡು. ಓದುಗರಿಗೂ ಹೊಸಗಾಳಿ ಬೀಸಿದ ಅನುಭವವಾಗುತ್ತೆ. ನನಗೂ ನನ್ನದೇ ಮಾತು ಕೇಳಿ ಕೇಳಿ ಬೋರಾಗಿದೆ :-(
      ಅಶೋಕವರ್ಧನ

      Delete
  6. ನಮಸ್ಕಾರ
    ಚೆನ್ನಾಗಿ ಬರೆದಿದ್ದೀರಿ. ಈ ಹಿಂದೆ ನಾವೂ ದಾಂಡೇಲಿ ಅಣಶಿ ಕಾಡಿನಲ್ಲಿ ಚಾರಣ ಕೈಗೊಂಡಿದ್ದೆವು. ಅದು ಮಾತ್ರ ನಗರವಾಸಿಗಳ “ಜಸ್ಟ್ ಫಾರ್ ಎ ಚೇಂಜ್” ದಂಡಯಾತ್ರೆ ಯಾಗಿತ್ತು. ಒಂದೇ ಒಂದು ವನ್ಯಪ್ರಾಣಿಯ ದರ್ಶನವೂ ಆಗಿರಲಿಲ್ಲ. ಈಗಲೂ ಅಲ್ಲಿ ಸಫಾರಿ ಮತ್ತು ನೈಟ್ ಸಫಾರಿ ಅನ್ನುವ ವಾಣಿಜ್ಯ ವ್ಯವಹಾರಗಳು ನಡೆಯುತ್ತಲೇ ಇವೆ. ಗೈಡ್ ಗಳಿಗೆ ಅರಣ್ಯ ದಲ್ಲಿನ ದಾರಿಯ ಹೊರತಾಗಿ ಹೆಚ್ಚೇನೂ ಗೊತ್ತಿದ್ದಂತಿಲ್ಲ.
    ಗಿರೀಶ್, ಬಜಪೆ.

    ReplyDelete
  7. Laxminarayana Bhat P09 May, 2012 12:26

    ಕಾಡಿನ ನಿಗೂಢತೆ, ಗಹನತೆ 'ಚಂದಮಾಮಾ'ದ ಕಥೆಗಳಲ್ಲಿ ಕಳೆದುಹೋಗಿದೆ! ಉಳಿದಿರುವುದು ಬರಿ ತರಗೆಲೆ ಮಾತ್ರ!

    ReplyDelete