ಅಡ್ಡಹೊಳೆಯತ್ತ |
ವನ್ಯ ಸಂವರ್ಧನೆಯ ಪ್ರಥಮಾವಶ್ಯಕತೆ ಮನುಷ್ಯ ನಿರುದ್ಯೋಗಿ ಆಗುವುದರಲ್ಲಿದೆ. ಹಿಂಬಾಲಿಸುವ ತತ್ತ್ವ ಕನಿಷ್ಠ ಹಸ್ತಕ್ಷೇಪದಿಂದ ಗರಿಷ್ಠ ರಕ್ಷಣೆ. ಕಾಡಿನ ಯೋಗ್ಯತಾನುಸಾರವೇ ದಾರಿಯ ಜೀರ್ಣೋದ್ಧಾರವಿರಲಿ, ನವನಿರ್ಮಾಣವಿರಲಿ ವನನಾಶ ಕನಿಷ್ಠವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಅರಣ್ಯ ಇಲಾಖೆಯದು. ಆದರೆ ಈಚಿನ ದಿನಗಳಲ್ಲಿ ವನ್ಯದ ನಡುವಣ ಅಕ್ರಮ ದಾರಿಗಳನ್ನು, ರಚನೆಗಳನ್ನು ಸಾಮಾಜಿಕ ಸೋಗಿನಲ್ಲಿ ಅರಣ್ಯ ಇಲಾಖೆ (ಅಥವಾ ವನ್ಯ ಇಲಾಖೆಯೂ) ಸಮರ್ಥಿಸಿಕೊಳ್ಳತೊಡಗಿರುವುದು ಸರಿಯಲ್ಲ. ಹಾಗೇ ವಿಸ್ತರಣೆ, ನವೀಕರಣಗಳನ್ನು ವೈಜ್ಞಾನಿಕ ವಿವೇಚನೆಯಿಂದ ಹೊರಗಿಟ್ಟಿರುವುದು ತೀರಾ ಅಪಾಯಕಾರಿ. (ಕೆಲವೇ ವರ್ಷಗಳ ಹಿಂದೆ ನಡೆದ ‘ಗುಂಡ್ಯ-ಸುಬ್ರಹ್ಮಣ್ಯ’ ರಸ್ತೆ ವಿಸ್ತರಣ ಕಾಲದಲ್ಲಿ ಯೋಜನೆಯಂತೆ ಉರುಳುವ ಮರಗಳ ಲೆಕ್ಕ ಸುಮಾರು ಮೂವತ್ತರಲ್ಲಿದ್ದರೆ ವಾಸ್ತವದಲ್ಲಿ ನೂರಕ್ಕೂ ಮಿಕ್ಕು ಉರುಳಿದ್ದರ ಜಾಡು ಹಿಡಿದವರೇ ಇಲ್ಲ) ಈ ನಿಟ್ಟಿನಲ್ಲಿ ಅರಣ್ಯದೊಳಗಿನ ಮನುಷ್ಯ ಕಲಾಪಗಳ ನಾಡಿ ಹಿಡಿಯುವಲ್ಲಿ ತನಿಖಾ ಠಾಣೆಗಳು (ಚೆಕ್ ಪೋಸ್ಟ್ ಅಥವಾ ಫಾರೆಸ್ಟ್ ಗೇಟ್) ತುಂಬಾ ಮುಖ್ಯವಾದವು. ಅವನ್ನು ಉಪೇಕ್ಷಿಸಿ ಏನೆಲ್ಲಾ ಕಾಮಗಾರಿಗಳಲ್ಲಿ ಇಲಾಖೆ ಅಬ್ಬರದಲ್ಲಿ ತೊಡಗಿಕೊಳ್ಳುವುದಕ್ಕೆ ಕೆಲವು ಗಟ್ಟಿ ಉದಾಹರಣೆಗಳನ್ನು ಬಿಸಿಲೆ ದಾರಿಯಲ್ಲೂ ಕಾಣಬಹುದು.
ಬಿಸಿಲೆ ಗೇಟು |
ದಕವಲಯದಲ್ಲಿ ಬಿಸಿಲೆ ದಾರಿ ಪ್ರಾರಂಭವಾಗುವ ಕುಳ್ಕುಂದದಲ್ಲಿ ಮೂರು ದಾರಿ ಸೇರಿ ಒಂದು ಅರಣ್ಯ ತನಿಖಾಠಾಣೆ ಇತ್ತು. ಬಿಸಿಲೆ ದಾರಿ ಅನೂರ್ಜಿತವಿರುವಾಗ ಆ ದಿಕ್ಕಿನ ಗೇಟ್ ಖಾಯಂ ಮುಚ್ಚಿರುತ್ತಿತ್ತು. ಆಗ ನಾವು ತಮಾಷೆ ಮಾಡಿದ್ದಿದೆ - ವಾಹನಗಳೇ ಓಡಾಡಲಾಗದ ದಾರಿಗೆ ಮುಚ್ಚಿದ ಗೇಟು. ಅಂದರೆ ಗೇಟು ಅರಣ್ಯ ಇಲಾಖೆಯದೋ ರಸ್ತೆ ಇಲಾಖೆಯದೋ! ದಾರಿ ಅರೆಬರೆ ಜೀರ್ಣೋದ್ಧಾರವಾಗಿ ವಾಹನ ಸಂಚಾರ ತೊಡಗಿದ ಹೊಸತರಲ್ಲಿ ಅತ್ತ ಬಿಸಿಲೆ ಸೇರಿದಂತೆ ಎರಡೂ ಕೊನೆಗೆ ಒಂದೊಂದು ಗೇಟ್, ತೆರೆದು ಮುಚ್ಚುವ ಸಿಬ್ಬಂದಿ ವ್ಯವಸ್ಥೆಯಾದದ್ದೂ ನಾವು ನೋಡಿದ್ದೇವೆ. ಇವು ತೋರಿಕೆಗೆ ತನಿಖಾ ಠಾಣೆಯಾಗಿದ್ದವು. ಹೆಚ್ಚೇನಾದರೂ ಮಾಡಲು ಇವರಿಗೆ ಜನಬಲ, ಆಯುಧ ಬಲ, ಸಂಪರ್ಕ ಸಾಧನ ಮತ್ತು ಅಧಿಕಾರ ಬಲವೂ ಇಲ್ಲ ಎನ್ನುವುದನ್ನು ಇಲ್ಲೇ ನನ್ನ ಹಿಂದಿನ ಕಥನಗಳಲ್ಲಿ ನೀವೇ ಓದಿದ್ದೀರಿ. (ಮುಖ್ಯ ಉದಾ: ಬಿಸಿಲೆಯಲ್ಲಿ ನಮ್ಮ ತಂಡವೊಂದು ಕಳ್ಳಬೇಟೆಗಾರರೊಡನೆ ಸಿಕ್ಕಿಬಿದ್ದ ಕಥನ) ಇನ್ನೊಂದು ವ್ಯಂಗ್ಯವನ್ನೂ ಇಲ್ಲೇ ಹೇಳಿಬಿಡುತ್ತೇನೆ: ನಮ್ಮೊಬ್ಬ ಪರ್ವತಾರೋಹಿ ಮಿತ್ರ ಗೇಟೊಂದರಲ್ಲಿ ನಮ್ಮ ತಂಡವನ್ನು ಕಾದು ನಿಂತಿದ್ದ. ಇಲಾಖೆಯ ಕಾವಲುಗಾರ ಗೇಟ್ ತೆರೆದಿಟ್ಟು ಊಟಕ್ಕೇನೋ ಹೋಗಿದ್ದ ಸಮಯ. ಟಿಂಬರ್ ಖಾಲಿ ಮಾಡಿ ಬಂದ ಲಾರಿಯೊಂದು ನಮ್ಮವನ ಬಳಿ ನಿಧಾನಿಸಿ, ಕೈಗೊಂದು ನೋಟು (ಐವತ್ತರದಿರಬೇಕು) ತುರುಕಿ ಮುಂದುವರಿಯಿತು!
ಕುಳ್ಕುಂದದ ಗೇಟ್ ಇಂದು ಬೂದಿಚೌಡಿ ಸ್ಥಾನಕ್ಕೆ ವರ್ಗಾವಣೆಗೊಂಡು ಪೂರ್ತಿ ನಿರ್ವೀರ್ಯವಾಗಿದೆ. ಗೇಟು ಹಾರುಹೊಡೆದಿಟ್ಟು, ಅಕ್ರಮ ಪೂಜಾ ಕಾರ್ಯಗಳಿಗೆ, ಭಕ್ತಾದಿಗಳ ಕನಿಷ್ಠ ಆವಶ್ಯಕತೆಗಳಿಗೆ ಸೌಕರ್ಯ ಕಲ್ಪಿಸುವಲ್ಲಿ ಶ್ರದ್ಧೆಯಿಂಡ ಕೈಂಕರ್ಯ ನಡೆಸಿದೆ! ಬಿಸಿಲೆ ಗೇಟ್ ಇಪ್ಪತ್ನಾಲ್ಕು ಗಂಟೆಯೂ ಏಕವ್ಯಕ್ತಿ ನಿರ್ವಹಣೆಯಲ್ಲಿತ್ತು! ಆದರೆ ಇಲಾಖೆ ಅಲ್ಲಿನ ಕಟ್ಟೋಣದ ನವೀಕರಣ, ಹಳೆಯ ಕಗ್ಗಲ್ಲಿನ ಕಟ್ಟಡ ಬಿಚ್ಚಿ ರಂಗುರಂಗಿನ ಹೊಸ ಸಿಬ್ಬಂದಿ ವಸತಿ ನಿರ್ಮಾಣ ಇತ್ಯಾದಿಗಳಲ್ಲಿ ವಾಸ್ತವ ಮರೆತೇ ಬಿಟ್ಟಂತಿದೆ!
ಪರಿಸರ ಶಿಕ್ಷಣವೆಂಬ ದಿವ್ಯ ಮಂತ್ರ
ಕುಳ್ಕುಂದದಿಂದ ಬೂದಿಚೌಡಿಯವರೆಗೆ ಹೆಚ್ಚು ಕಡಿಮೆ ಸಮತಟ್ಟಲ್ಲೇ ದಾರಿ ಹಾವಾಡುತ್ತದೆ. ಮೊದಲ ಕಿಮೀ ಮಾತ್ರ ಹಳ್ಳಿಯ ಪರಿಸರ. ಮುಂದೆ ಬಿಸಿಲೆ ಗೇಟಿನವರೆಗೂ ಮನುಷ್ಯ ನೆಲೆಗಳಿಲ್ಲದ ಶುದ್ಧ ವನ್ಯ. ಮಟ್ಟಸ ವಲಯದಲ್ಲಿ ಆಕಾಶ ಗುಡಿಸುವ ಭಾರೀ ಬಿದಿರು ಹಿಂಡಿಲು, ಭಾರೀ ಮರ, ಬುಡ ತುಂಬುವ ಓಟೆ, ಪೊದರುಗಳ ನಡುವಣ ಓಟ. ಅದರಲ್ಲು ಸುಮಾರು ಆರು ಕಿಮೀ ಅಂದರೆ, ದಕ ವಲಯದುದ್ದಕ್ಕೆ ಈಚೆಗೆ ಕನ್ನೆ ಕದಪಿನ ಡಾಮರು ಹಾಸಿ ಕುಡಿದ ನೀರು ಕುಲುಕದ ಪಕ್ಕಾ ವಿಹಾರ. ಹಾಸನ ಜಿಲ್ಲೆಯತ್ತಣ ದಾರಿ ಮಾತ್ರ ಗುಂಡಿ ಗುಳುಪು, ಓಟ ದಡಬಡಾ. ಪ್ರತಿ ತಿರುವಿನಾಚಿನ ಅಗೋಚರದಲ್ಲಿ ಬಿದಿರು ಸಿಗಿಯುವ ಮಹಾಕಾಯನ ನಿರೀಕ್ಷೆ. ಬಲಕ್ಕೆ ಕಾಡಮರೆಯಲ್ಲಿದ್ದರೂ ಅನತಿ ದೂರದಿಂದಲೇ ತನ್ನ ಇಳಿಯೋಟದ ಸಂಭ್ರಮವನ್ನು ಸಶಬ್ದ ಹಂಚಿಕೊಳ್ಳುವ ಕುಮಾರಧಾರೆ. ಮುಂದುವರಿದಂತೆ ಅಡ್ಡಹೊಳೆ, ಅವುಗಳ ಅಸಂಖ್ಯ ಉಪ-ತೊರೆ ಮತ್ತು ಟಿಸಿಲುಗಳ ನಿರಂತರ ಘೋಷ ಪರಿಸರದ ನಿಗೂಢತೆಯನ್ನು ಹೆಚ್ಚಿಸುತ್ತಲೇ ಇರುತ್ತದೆ. ಸುಯ್ಯುವ ಗಾಳಿಯೊಡನೆ ಅಪ್ರತ್ಯಕ್ಷವಾದರೂ ಗಿಡಗಂಟಿಗಳ ಕೊರಳಾಗಿ ಮತ್ತದೆಷ್ಟು ಜೀರ್, ಕುಕಿಲು, ವಟರು, ಕರೆ, ಅರಚು, ಗುಟುರು. ಋತುಮಾನ ವೈವಿಧ್ಯದಲ್ಲಿ ಚಿಗುರು - ಉದುರು, ಹೂ - ಹಣ್ಣುಗಳಲ್ಲಿ ಅದೆಷ್ಟು ಬಣ್ಣಗಳು ಅದೆಷ್ಟು ಪರಿಮಳಗಳು. ದಾರಿ ಬಿಟ್ಟು ನಡಿಗೆಗಿಳಿದರಂತೂ ಹೆಜ್ಜೆಗೆ ನಾಲ್ಕು ಪಟ್ಟಿಮಾಡಿ ಮುಗಿಯದ ವಿಸ್ಮಯ. ಇದನ್ನು ತಿಳಿದುಕೊಳ್ಳುವಲ್ಲಿ ಆಧುನಿಕ ಮನಸ್ಸು ವಿಜ್ಞಾನ, ಇತಿಹಾಸ, ಸಾಹಿತ್ಯವೇ ಮೊದಲಾದ ಕಲಿಕಾ ಶಿಸ್ತುಗಳು ಒಟ್ಟುಗೂಡಿಸಿ ಪರಿಸರ ಶಿಕ್ಷಣವನ್ನೇನೋ ರೂಪಿಸಿವೆ. ಆದರೆ ಇದರ ಮೌಲಿಕತೆಯನ್ನು ಸಾರ್ವಜನಿಕಕ್ಕೆ ಕೊಡುವಲ್ಲಿ ಸರಕಾರೀ ಯಂತ್ರ ಔಚಿತ್ಯವರಿತು ನಡೆದ ಸಂದರ್ಭಗಳು ತುಂಬಾ ಕಡಿಮೆ ಎನ್ನುವುದನ್ನು ವಿಷಾದಪೂರ್ವಕವಾಗಿಯೇ ದಾಖಲಿಸಬೇಕಾಗುತ್ತದೆ.
ಅರಣ್ಯ ಗೇಟು (ಮೇಲೆ ವಸತಿ) |
ಬಿಸಿಲೆಯಲ್ಲಿ ಶರತ್ ಕಾಲ ಅಂದರೆ, ಈ ವಲಯದ ಅರಣ್ಯ ಇಲಾಖೆಯ ಪರಿಸರ ಪ್ರೇಮದ ಉಚ್ಛ್ರಾಯದ ಋತು. ಹಾಗೆಂದ ಮಾತ್ರಕ್ಕೆ ಶರತ್ ಒಂದು ಕಾಲಘಟ್ಟವಲ್ಲ, ವ್ಯಕ್ತಿ - ಬಿ.ಕೆ. ಶರತ್ ನನ್ನ ಉರಗಪ್ರಿಯ ಗೆಳೆಯ. ಸುಮಾರು ಹತ್ತು ವರ್ಷಗಳ ಹಿಂದೆ ಆತ ಬಿಸಿಲೆ ವಲಯದಲ್ಲಿ ಹಾವಿನ ಬಗ್ಗೆ ಹೆಚ್ಚಿನ ಕ್ಷೇತ್ರ ಕಾರ್ಯ ನಡೆಸಿದ್ದ. ಆಗ ಊರ ಕೆಲವರಿಗೂ ಇಲಾಖೆಯ ಅಧಿಕಾರಿಗಳಿಗೂ ‘ಪರಿಸರಪ್ರೇಮ’ ಶಬ್ದ ಕಲಿಸಿದ್ದ. ಆಗ ಅಲ್ಲಿ ಹಲವರು ‘ಅದೂ ರುಸುಮು ಕೊಡುತ್ತದೆ’ (it also pays) ಎಂದು ಕಂಡುಕೊಂಡಿರಬೇಕು. ಪರಿಸರ ಪ್ರೇಮವೋ ಪ್ರದರ್ಶನ ಚಟವೋ ಏನಲ್ಲದಿದ್ದರೂ ಆರ್ಥಿಕ ವಹಿವಾಟಿನ ಆಕರ್ಷಣೆಯೋ ಅಥವ ಎಲ್ಲವೂ ಸೇರಿ, ಆ ಕಾಲಕ್ಕೆ ಇಲ್ಲಿ ತುಂಬಾ ಪರಿಸರ ‘ಕೆಲಸ’ ಆಗಿದೆ! ಸಮೀಪದ ಶಾಲಾಮಕ್ಕಳನ್ನು ಹಿಡಿದು ಜಾಥಾ ನಡೆಸಿದ್ದರು. (ಅವರು ಕುಡಿದೆಸೆದಿರಬಹುದಾದ ಬಿಸಿಲೇರಿ ಬಾಟಲಿಗೂ ನಮ್ಮ ಬಿಸಿಲೆಗೂ ಏನೂ ಸಂಬಂಧವಿಲ್ಲ ಎಂದು ಮೊದಲೇ ಹೇಳಿಬಿಡುತ್ತೇನೆ) ಬಿಸಿಲೆ ದಾರಿಯಲ್ಲಿ ಸಣ್ಣ ಚಾರಣಾನುಭವ, ಶಿಬಿರವಾಸ ಎಲ್ಲಾ ಕೊಟ್ಟಿದ್ದರು. ಎಲ್ಲಕ್ಕೂ ಮಿಕ್ಕು ಅರಣ್ಯ ಇಲಾಖೆ ಮೂರು ದೊಡ್ಡ ಅಭಿವೃದ್ಧಿ ಕೆಲಸ ಮಾಡಿತು.
ಪ.ಶಿ ಸ್ವಾಗತ ಕೊಠಡಿ (ಜಿಗಣೆ ಸುಬ್ಬ) |
೧. ಬೂದಿಚೌಡಿ ಮತ್ತು ಅಡ್ಡೊಳೆ ಸಂಕದ ಸುಮಾರು ಮಧ್ಯಂತರದಲ್ಲಿ ಕಾಡಿನ ಲೆಕ್ಕಾಚಾರದಲ್ಲಿ ಎಲ್ಲೂ ಅಲ್ಲದಲ್ಲಿ, ದಾರಿ ಬದಿಯಲ್ಲೊಂದು ಬೋರ್ಡು ಸಹಿತ ಪರಿಸರ ಶಿಬಿರಕ್ಕೊಂದು (= ಪಶಿ) ಸ್ವಾಗತ ಕೊಠಡಿ ಕಟ್ಟಿದರು. ಮತ್ತಲ್ಲೇ ಕಣಿವೆಗೆ ಇಳಿಯಲು ನೇರ, ಸ್ಪಷ್ಟ ಕಾಲುದಾರಿ ಕಡಿದು ಹಾಕಿದರು. ಸುಮಾರು ಇನ್ನೂರು ಮೀಟರ್ ಅಂತರದಲ್ಲಿ ಅಡ್ಡಹೊಳೆಯೇ ಇಡಿಕಿರಿದ ಬಂಡೆ ಗುಂಡುಗಳೆಡೆಯಲ್ಲೂ ಸಕಲ ಸಂಭ್ರಮದೊಡನೆ ಪ್ರತ್ಯೇಕ ಸ್ವಾಗತಿಸುತ್ತಿತ್ತು. ಮಳೆಗಾಲ ಅಭಿಷೇಕ ಮಾಡಿ ತಲೆ ಶುಭ್ರವಾಗಿದ್ದ ಪ್ರತಿ ಬಂಡೆಗೂ ವನ ಪತ್ರ ಪುಷ್ಪಗಳ ವೃಷ್ಟಿಯಾಗಿತ್ತು. ಪಕ್ಷಿ ಗಂಧ ಪೂಸಿತ್ತು. ವೈವಿಧ್ಯಮಯ ಕಾಡ ಕಾಯಿ, ಹಣ್ಣು, ಬೀಜಗಳು ಇಲ್ಲಿ ಕೇವಲ ನಿವಾಳಿಸುವ (ಇಟ್ಟು ತೆಗೆಯುವ) ನೈವೇದ್ಯವಲ್ಲ, ಪೂರ್ಣ ಸಮರ್ಪಣೆ! ಹೊಳೆಯ ನಿತ್ಯಜಾತ್ರೆಯನ್ನು ದಂಡೆಯುದ್ದಕ್ಕೂ ಬೇರೂರಿ ನಾಮುಂದು ತಾಮುಂದು ಎಂದೊತ್ತಿ ಬಳುಕುವ ಹಸಿರು, ಇಲ್ಲ ಬರಿಯ ಹಸುರಲ್ಲ, ವೈವಿಧ್ಯಮಯ ವರ್ಣಗಳ ರಚನೆಗಳ ಜರಿಪೊದರುಗಳ ನಿಬಿಡ ಸಭೆ. ಇತ್ತಿಂದತ್ತ ಭಾರೀ ಮರಗಳಿಗೆ ಜೋತುಬಿದ್ದು ತೋರಣ ಮಾಲೆಗಳಂತೆಯೇ ಉಯ್ಯಾಲೆಯಾಡುವ ಬಳ್ಳಿಗಳೆಷ್ಟು, ನಿಟಿಕೆಮುರಿದು ದೃಷ್ಟಿ ತೆಗೆವ ಬಿದಿರ ಹಿಂಡೇನು, ಹತ್ತಿರ ಸುಳಿಯಲಾಗದ ಸಂಕಟಕ್ಕೆ ಞರಕುತ್ತ ಕೊಂಬೆಗೈ ಹೊಸೆಯುವ ಮರಗಳ ಪರಿಯೇನು ಹೇಳಿ ಮುಗಿಯದು. ಸಾಮಾನ್ಯರು ಇಲ್ಲೆಲ್ಲ ಒಣ ತಿಂಗಳುಗಲ್ಲಷ್ಟೇ ಕಲ್ಲುಮೆಟ್ಟಿ, ಕೋಲು ಮುರಿದು, ಬಳ್ಳಿತೊಡರಿ ನೀರಿಗಿಳಿಯಬಹುದು. ಮತ್ತೂ ಒಂದು ಜಾರುಬಂಡೆಯ ನೆತ್ತಿ ಮೆಟ್ಟುವಲ್ಲಿ, ಸ್ಫಟಿಕ ನಿರ್ಮಲತೆಯ ಆಳ ಗ್ರಹಿಸುವಲ್ಲಿ ಅಂದಾಜು ತಪ್ಪಿದರೆ ತಳಬುಳಂಕೆನ್ನಿಸಿ ಸಚೇಲ ಸ್ನಾನವಾಗಬಹುದು; ಪರಿಶುದ್ಧ ನೀರು ಕುಡಿಯುವುದನ್ನು ನಿರಂತರ ಸಾಧಿಸಬಹುದು! ಇಂಥ ಬವಣೆಯೆಲ್ಲವನ್ನು ‘ಸಾರ್ವಕಾಲಿಕವಾಗಿ’ ನಿವಾರಿಸುವಂತೆ ಇಲಾಖೆ ತೂಗು ಸೇತುವೆ ಸಜ್ಜುಗೊಳಿಸಿತು. ಕೊನೆಯದಾಗಿ ಎದುರು ದಂಡೆಯಲ್ಲಿ ಪಶಿ ಅಧ್ಯಯನಕ್ಕೆ ಆಧುನಿಕ ವಸತಿ ಸೌಕರ್ಯ; ಡಾರ್ಮಿಟರೀಸ್.
ಗೋಲ ಚತ್ರಿ |
೨. ದಾರಿ ಸಾಮಾನ್ಯ ಘಟ್ಟ ಏರಿ ಮುಗಿಯುವಾಗ ಕುಮಾರಧಾರಾ ಹೊಳೆ ಅಷ್ಟೇ ಕಣಿವೆಯಾಳ ಸೇರಿರುತ್ತದೆ. ಅಲ್ಲೊಂದೆಡೆ ದಾರಿ ಮರಪೊದರುಗಳನ್ನು ಮೀರಿ ನೇರ ಕಣಿವೆಯಂಚಿಗೆ ಸರಿದು ಎಡಕ್ಕೆ ಹೊರಳುವಲ್ಲಿ ಬಲಕ್ಕೆ ಕುಮಾರ ಪರ್ವತದೆತ್ತರದವೆರೆಗೂ ದಿಗಂತ ತೆರೆದಿಟ್ಟ ಸನ್ನಿವೇಶ. ದೃಷ್ಟಿ ಎಡಕ್ಕೆ ತಿರುಗಿದರೂ ಕನ್ನಡಿಕಲ್ಲಿನ ದಿಟ್ಟಚಿತ್ರ. ಇಲ್ಲಿ ದಾರಿ ಸಾಕಷ್ಟು ವಿಸ್ತಾರವಿದೆ, ಬಹುತೇಕ ಹಾದುಹೋಗುವ ವಾಹನಗಳು ಮಿನಿಟುಗಳ ಕಾಲ ನಿಂತು “ಓಹ್! ವಾವ್!!” ಉದುರಿಸುವುದರಲ್ಲೇ ತೃಪ್ತಿ ಪಡುತ್ತವೆ. ಆದರೆ ಇಲಾಖೆಗೆ ಇಲ್ಲೂ ಪಶಿ ಪಸರಿಸುವ ತವಕ. ಎಡದ ಪುಟ್ಟ ದರೆಯ ಮೇಲೇರಲು ಓರೆಯಲ್ಲಿ ಮೆಟ್ಟಿಲ ಸಾಲು ಕಟ್ಟಿದರು. ಮೇಲೆ ಏಣಿನ ಗೋಣನ್ನು ಸುಮಾರು ಮೂವತ್ತಡಿ ವ್ಯಾಸದಷ್ಟು ತಟ್ಟು ಮಾಡಿ, ಗೋಲಾಕಾರದಲ್ಲಿ ಸಿಮೆಂಟ್ ಶೀಟಿನ ಛತ್ರಿ, ಮೋಟು ಗೋಡೆ, ಸಿಮೆಂಟ್ ಬೆಂಚುಗಳನ್ನೆಲ್ಲಾ ಒಟ್ಟು ಮಾಡಿದ್ದಾರೆ. ಮತ್ತೆ ಅಂಚಿನ ನೆಲದ ‘ಕಾಡು ಕಸ’ ಎಲ್ಲ ಚೊಕ್ಕಮಾಡಿ, ಲಂಟಾನಾ, ಕ್ರೋಟನ್‌ಗಳಿಂದ ಅಲಂಕರಿಸಿದ್ದಾರೆ. (ಯಾರಿಗ್ಗೊತ್ತು, ಹಸಿರು ಹುಲ್ಲ ಹಾಸು - ಲಾನ್‌ಗೂ ಬಿಲ್ಲಾಗಿರಬಹುದು)
೩. ಈ ವಲಯದಲ್ಲಿ ಸುತ್ತಿದವರಿಗೆಲ್ಲಾ ಇಂದು ‘ಬೀಟಿ ಸ್ಪಾಟ್’ ಜಗತ್ ಪ್ರಸಿದ್ಧ! ಮೊದಲು ಅದರ ಪ್ರಾಕೃತಿಕ ಸ್ಥಿತಿಯ ಅನಾವರಣ. ೧೯೮೩ರ ಸುಮಾರಿಗೆ ನಮ್ಮ ಒಂದು ಮಳೆಗಾಲದ ಕೊನೆಯ ಬೈಕ್ ಯಾತ್ರೆ. ನಾವು ಬಿಸಿಲೆ ಗೇಟಿನ ಧ್ಯಾನದಲ್ಲಿದ್ದಂತೆ ದಾರಿ ಬಲಕ್ಕೊಂದು ಹಡ್ಲು, ಎಡಕ್ಕೆ ‘ಕಲ್ಲುಗುಡ್ಡ’ದ ಏಣುಗಳ ಕೊನೆ ತೋರುತ್ತಾ ಸುಳಿದೇರುತ್ತಿತ್ತು. ಗೇಟಿಗಿನ್ನೇನು ಸುಮಾರು ಒಂದು ಕಿಮೀ ಎನ್ನುವಾಗ ಬಲಕ್ಕೊಂದು ಪುಟ್ಟದಿಬ್ಬವೆದ್ದಂತಿತ್ತು. ಅದರ ಸಂದಿನಲ್ಲಿ ನುಸುಳಿ, ಎದುರಾಗುವ ಕಣಿವೆಯಂಚಿನಲ್ಲಿ ತೀವ್ರ ಎಡ ಹೊರಳುತ್ತದೆ. ಅಲ್ಲೇ ತಿರುಗಾಸಿನಲ್ಲಿ, ಬಲಕ್ಕೆ ದಿಬ್ಬವೇರುವ ಸವಕಲು ಜಾಡನ್ನು ಕಂಡೆವು. ಬೈಕ್ ಬಿಟ್ಟು ನಡೆದು ಅನುಸರಿಸಿದ್ದೂ ಆಯ್ತು. ಚದುರಿದ ಪುಟ್ಟ ಪೊದರುಗಳಂತೇ ಇದ್ದ ಆದರೆ ಪ್ರಾಯ ಸಂದ ವಿರಳ ಮರಗಳೆಲ್ಲಾ ವರ್ಷಗಟ್ಟಳೆ ಪರಿಸರಕ್ಕೆ ಪಳಗಿ ಗಿಡ್ಡಕ್ಕೂ ಗಂಟುಗಂಟಾಗಿಯೂ ಬೆಳೆದಿದ್ದವು. ಭೋರ್ಗಾಳಿ, ದಟ್ಟಮಂಜು, ಆಗೊಂದು ಈಗೊಂದು ದಪ್ಪ ಹನಿಗಳ ಹೊಡೆತಕ್ಕೆ ಅವೆಲ್ಲಾ ದಪ್ಪದಪ್ಪ ಹಾವಸೆಯ ಸ್ವೆಟ್ಟರ್ ಹಾಕಿದ್ದವು. ಚಳಿಗೆ ಪರ್ವತರಾಯರ ನಿಮಿರಿದ ರೋಮದಂತೆ ಮೊಣಕಾಲೆತ್ತರದ ಹುಲ್ಲು ಸರಭರ ಸದ್ದುಮಾಡುತ್ತಲೇ ಇತ್ತು. ಅಲ್ಲಲ್ಲಿ ಕೊರಕಲು ಕೊರಕಲಾಗಿ ಮಣ್ಣು ಮೀರುತ್ತಿದ್ದ ಬಂಡೆ ಮೊಳಕೆಗಳನ್ನು ಹುಶಾರಾಗಿ ದಾಟುತ್ತಾ ಸುಮಾರು ಇನ್ನೂರು ಮೀಟರ್‌ವರೆಗೂ ನಾವು ಮುಂದುವರಿದು ವಿಫಲ ಹುಡುಕು ನೋಟ ಹರಿಸಿದ್ದೆವು. ಕರಾವಳಿಯ ವಿಸ್ತಾರದಿಂದ ನೂಕಿಬರುತ್ತಿದ್ದ ಗಾಳಿಮೋಡಕ್ಕೆಲ್ಲಾ ಘಟ್ಟ ಪಾರುಗಾಣುವ ಸಂದು ಅದೊಂದೇ ಇದ್ದಂತಿತ್ತು! ಚೂರುಪಾರು ದರ್ಶನದಲ್ಲಿ ಭಾರೀ ಕೊಳ್ಳ, ವಿಸ್ತಾರ ಕಣಿವೆ ಅಂದಾಜಿಸುವುದಷ್ಟೇ ಸಾಧ್ಯವಾಗಿತ್ತು. ಮುಂದೆ ಗೇಟಿನ ಬಳಿ ಸಿಕ್ಕವರು ಯಾರೋ “ಅಲ್ಲೇ ಪುಟ್ಟಣ್ಣಾ ಎಡಕಲ್ಲು ಗುಡ್ಡದ ಮೇಲೆ ಸಿನ್ಮಾ ಶೂಟಿಂಗ್ ಮಾಡಿದ್ರು” ಅಂತ ಹೇಳಿದ ಮೇಲೆ ನಮ್ಮ ತಮಾಷೆ ಲೆಕ್ಕಕ್ಕದು ‘ಎಡಕಲ್ಲು ಗುಡ್ಡ.’ ಕುಮಾರಧಾರಾ ಕೊಳ್ಳದ ಸಮಗ್ರ ಚಿತ್ರ ಕೊಡುವ, ಅತ್ತ ಹೋದಾಗೆಲ್ಲಾ ನೋಡಲೇಬೇಕಾದ ಪುಣ್ಯಸ್ಥಳ.
ಬಿಟಿ ಸ್ಪಾಟ್! |
ಪಶಿ ಯೋಜನೆಯಲ್ಲಿ ನಮ್ಮ ‘ಎಡಕಲ್ಲುಗುಡ್ಡೆ’ಯದು ಸಿಂಹಪಾಲೇ ಇರಬೇಕು. ಹಂತಹಂತವಾಗಿ ಇದನ್ನು ‘ಅಭಿವೃದ್ಧಿ’ ಪಡಿಸುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಇಂದು ಅದು ಜನಪದರ ಬಾಯಲ್ಲಿ ‘ಬೀಟೀಸ್ಪಾಟ್’; Beauty Spot ಎಂದು ಇಂಗ್ಲಿಷಿನಲ್ಲೂ ಸೌಂದರ್ಯ ಠಾಣೆ ಎಂದು ಕನ್ನಡದಲ್ಲೂ ನಿಸ್ಸಂದೇಹವಾಗಿ ಬೋರ್ಡು ಹಾಕಿದ್ದಾರೆ. ದಾರಿ ಬದಿಯಲ್ಲೇ ಸಾರ್ವಜನಿಕ ತೃಷೆ ಹಿಂಗಿಸಲು ಪಂಪ್ ಸಹಿತ ತೂತು ಬಾವಿ ಹಾಕಿದ್ದಾರೆ. ಪುಟ್ಟ ದಿಬ್ಬವನ್ನು ಸುತ್ತುವರಿದಂತೆ ತಂತಿ ಜಾಲರಿಯ ಬಲವಾದ ಬೇಲಿ ಮತು ಜನಕ್ಕೆ ಮಾತ್ರ ಪ್ರವೇಶ ಸಾಧ್ಯವಾಗುವಂತೆ ತಿರುಗು ಗೇಟು. ಯಾತ್ರಿಗಳಿಗೆ ವನ್ಯಮೃಗಗಳಿಂದ, ‘ಅಭಿವೃದ್ಧಿಪಡಿಸಿದ ಸೌಂದರ್ಯಕ್ಕೆ’ ಬಿಸಿಲೆ ಹಳ್ಳಿಯ ಜಾನುವಾರುಗಳಿಂದ ಏಕಕಾಲದ ರಕ್ಷಣೆ. ಒಳಗೆ ಎರಡು ಮೀಟರ್ ಅಗಲದ, ಆರಾಮ ಏರಿನ ಕಾಂಕ್ರೀಟ್ ಸೋಪಾನಗಳು. ಅಂಚಿಗೆ ಅಲಂಕಾರಿಕ ಮೋಟು ಹಸುರು ಬೇಲಿ. ಕೊನೆಯಲ್ಲಿ ಒಂದು ಮಾಳಿಗೆಯಿರುವ ಭರ್ಜರಿ ವೀಕ್ಷಣಾ ಕಟ್ಟೆ ಸೇರಿದಂತೆ ಮೂರು ಹಂತದ ಮೊಸಾಯಿಕ್ ನೆಲ. ವೀಕ್ಷಣಾ ಕಟ್ಟೆಯ ತಲೆಗೆ ಗೋಲಾಕಾರದ, ಅಲಂಕಾರಿಕವಾಗಿಯೂ ಕಾಣುವ ಸಿಮೆಂಟ್ ಶೀಟಿನ ಮಾಡು, ಒಳಗೆಲ್ಲಾ ಕಾಂಕ್ರೀಟಿನ ಆರಾಮ ಆಸನಗಳು, ಸುಸಜ್ಜಿತ ‘ಯೂಸ್ ಮೀ’ಗಳು. ನಡೆದಾರಿ ನೇರ ಮಹಡಿಗೆ ಏರುವಂತೆ ಸೇತುಮಾರ್ಗ ಕಲ್ಪಿಸಿದ್ದಾರೆ. ಅದರ ಮುಂಚೂಣಿಯ ಕುಂದಗಳ ಮೇಲೆ ಇಕ್ಕೆಲಗಳಲ್ಲಿ ಪ್ರಕೃತಿಪ್ರೇಮಿಗಳಿಗೆ ನಜರೊಪ್ಪಿಸಲು ಎರಡು ಪುಟ್ಟ (ಸಿಮೆಂಟ್) ಆನೆಗಳನ್ನೇ ಸಜ್ಜುಗೊಳಿಸಿದ್ದಾರೆ. ಅಲ್ಲೇ ಪಕ್ಕದಲ್ಲಿ ಭಾರೀ ಸಿಮೆಂಟ್ ಫಲಕವೊಂದನ್ನು ನಿಲ್ಲಿಸಿ, ಅಲ್ಲಿನ ದೃಶ್ಯಕ್ಕೆಲ್ಲಾ (ಭೂಪಟಗಳಲ್ಲಿರುವವೇ) ಹೆಸರು, ಎತ್ತರಗಳ ವಿವರಗಳನ್ನು ದಾಖಲಿಸಿದ್ದಾರೆ. ವಠಾರದ ಮರಗಳೆಲ್ಲಾ ಉದ್ಯಾನದ ಶಿಸ್ತಿಗೊಳಪಟ್ಟು (ಕ್ಷೌರ, ಕಳೆನಿವಾರಣೆ ಇತ್ಯಾದಿ) ತಂತಮ್ಮ ಜಾತಿ ಸೂಚಕ ಫಲಕಗಳನ್ನು ಹೊತ್ತಿವೆ. ಎಂಥ ಭವ್ಯ ಪರಂಪರೆಯ ವಾರೀಸುದಾರ ನಮ್ಮ ಅರಣ್ಯ ಇಲಾಖೆ!
***
ಬಿದಿರು ಮೆಳೆಯೆಡೆಯಲ್ಲಿ ನಡೆ |
೧೯೭೮ರ ಸುಮಾರಿಗೆ ಗೆಳೆಯ ಡಾ| ರಾಘವೇಂದ್ರ ಉರಾಳರ ಮಗ, ಪುಟ್ಟ ಸುಬ್ರಹ್ಮಣ್ಯನಿಗೆ ನನ್ನೊಡನೆ ಒನಕೆ ಅಬ್ಬಿಗೆ ಹೋದ ನೆನಪು. ಹೆಜ್ಜೆಗೆ ಎಂಟು ಜಿಗಣೆ ಮೆಟ್ಟಿ, ಹೌಹಾರಿ, ನನ್ನ ಭುಜಕ್ಕೇರಿದವ ಅಂದು ಇಳಿದೇ ಇರಲಿಲ್ಲ! ದೊಡ್ಡವನಾದ ಮೇಲೆ ಅವನು ಸ್ವತಂತ್ರವಾಗಿ ಸಾಕಷ್ಟು ಕಾಡು ಬೆಟ್ಟ ಸುತ್ತಿದವನೇ. ಈಗ ಆತ ದುಬೈ ಇಂಜಿನಿಯರ್. ಕಳೆದ ಮಳೆಗಾಲದಲ್ಲಿ ರಜೆಮೇಲೆ ಬಂದವ, ಮುಖವೆಲ್ಲಾ ಹಲ್ಲಾಗುವಂತೆ (ಕರ್ನಾಟಕದ ಮಾನ್ಯ ಮುಮಂಯಂತೆ?) ನಗುತ್ತಾ “ನಿಂ ಬಿಸ್ಲೆ ಜಿಗಣಿ ‘ಲೆಕ್ಕ ಹಾಕಕ್ಕ್’ ಬರ್ತೆ” ಎಂದ. ಅಲ್ಲಿ ಅವನ ಕಣ್ಣಿಗೆ ಮೊದಲು ಬಿದ್ದದ್ದು ಅನಾಥ ಕಳೆಯ ಪಶಿ ಸ್ವಾಗತ ಕೊಠಡಿ; ಪಕ್ಕಾ ತಾರಸಿ, ಸಿಮೆಂಟ್ ಗ್ರಿಲ್ಲಿನ ಕಿಟಕಿ ಹೊತ್ತ ಅ-ಪರಿಸರ ಪ್ರೇಮಿ ರಚನೆ. ನಾನು ಆತನಿಗೆ ಜಿಗಣೆ ನೆನಪಿಸಿದೆ. ದಾರಿ ಬದಿಗೆ ಮುಚ್ಚಿದ ಪೊದರು ಸರಿಸಿ ಹಳೇ ಜಾಡು ಹುಡುಕಿ, ಹೊಳೆ ಕರೆಗೆ ಕಷ್ಟದಲ್ಲಿ ಇಳಿದೆವು. ಬಳ್ಳಿ, ಬೀಳಲೆಂದು ಆತುಕೊಂಡರೆ ತೂಗುಬಿದ್ದ ತುಂಡು ತಂತಿ. ಕಲ್ಲು ಕೋಲು ದರಗಿನ ನಡುವೆ ಚದುರಿದ ರಾಡು ನಟ್ಟು ಬೋಲ್ಟು. ಅಣಬೆ ಸಾಲಂಟಿದ ಕುಂಬು ಮರಕ್ಕೊರಗಿದ ಒಡಕಲು ಸಿಮೆಂಟ್ ಸ್ಲ್ಯಾಬು. ಆಕಾಶವನ್ನು ಮೇಲೇ ಉಳಿಸಿದ ಮಹಾ ಮರದ ಬುಡದ ಕಾಂಡದೊಳಗೇ ಸೇರಿಹೋಗುತ್ತಿತ್ತು ದಪ್ಪ ಲೋಹದ ಮಿಣಿಯ ಉರುಳು. ಇನ್ನು ಭೋರ್ಗರೆವ ಹೊಳೆಯಾಚಿನ ವಸತಿ ಸೌಕರ್ಯ ನೋಡಿದಂತೇ ಎಂದು ಮತ್ತೆ ದಾರಿ ಸೇರಿದೆವು. ಸುಬ್ರಹ್ಮಣ್ಯ ಥತ್, ಹತ್ ಎಂದು ಕೈ ಕೊಡಹುತ್ತಾ ನಾಲ್ಕೆಂಟು ಇಂಬುಳ ಕಿತ್ತೆಸೆದಿದ್ದ. ಆದರೆ ಎರಡು ಜಾಗದಲ್ಲಿ ಜಿಗಣೆ ಇಲ್ಲದೇ ರಕ್ತ ಜಿನುಗುತ್ತಿದ್ದದ್ದಕ್ಕೆ ಅವನದು ಆಶ್ಚರ್ಯದ ಮತ್ತು ಜೀವವಿಜ್ಞಾನದ ಪ್ರಶ್ನೆ, “ಈ ಎರಡು ಯಾಕೆ ಹೀಗೆ?” “ಹೊಟ್ಟೆ ತುಂಬಿದ ಮೇಲೆ ಕಳಚಿಕೊಳ್ತಾವೆ. ಪ್ರಕೃತಿ ಅದರಷ್ಟಕ್ಕೆ ಅದರದೇ ಕಾಲದಲ್ಲಿ ಗುಣ ಕಂಡುಕೊಳ್ಳಬೇಕು,” ನನ್ನದು ಸಮಾಜವಿಜ್ಞಾನ ಬೆರೆಸಿದ ಪ್ರಕೃತಿಪಾಠ. (ಮೊನ್ನೆಮೊನೆ ಖಯಾಲಿ ಮೇಲೆ ಬಿಸಿಲೆಯುದ್ದಕ್ಕೆ ಬುಲೆಟ್ ಸವಾರಿ ಮಾಡಿ ಬಂದ ಇನ್ನೋರ್ವ ಮಿತ್ರ ರವಿ ಹೇಳಿದ “ನಿಮ್ಮ ಪಶಿ ಸ್ವಾಗತ ಕೊಠಡಿಗೆ ಮೊನ್ನೆ ಸುಣ್ಣಬಣ್ಣ ಆಗಿದೆ. ಜನ ಮತ್ತು ಬಳಕೆಯ ಲಕ್ಷಣ ಮಾತ್ರ ಇಲ್ಲ.”) ಸುಬ್ರಹ್ಮಣ್ಯ ಪಾಕೆಟ್ ಡೈರಿ ತೆಗೆದು, ಕಾಗದದ ಚೂರು ಮಾಡಿ, ಗಾಯಗಳಿಗೆ ಅಂಟಿಸಿದ; ಮೇಲಿಂದ ಮೇಲೆ ಸೋರಿಕೆ ನಿಂತ ಸಂತೋಷ. “ಮುಂದೇನು” ನನ್ನ ಜಾಲತಾಣದ ಬಹುಚರ್ಚಿತ ಬಿಸಿಲೆ ಘಾಟಿಯ ಎಲ್ಲ ಮಗ್ಗುಲುಗಳನ್ನು ಅನುಭವಿಸುವ ಉತ್ಸಾಹ ಅವನದು.
ತಳಬುಳಂಕ್! |
ಜಿಗಣೆ ಲೆಕ್ಕದ ಸವಾರಿ ಗೋಲಛತ್ರಿಗೆ ಹೋಯ್ತು. ಮೆಟ್ಟಿಲ ಸಾಲಿನ ಪಕ್ಕದ ದರೆ ಕುಸಿದು ಬಿದ್ದಿತ್ತು. ಮೇಲೇರುವ ಅಭದ್ರತೆಯನ್ನು ನಿರಾಕರಿಸಿ ದಾರಿಯ ಬದಿಯಲ್ಲೇ ನಿಂತೆವು. ತುಸು ಬಿಳಿ, ಬೂದು, ಕಪ್ಪುತುಪ್ಪುಳಗಳ ರಕ್ಕಸ ಕುರಿಹಿಂಡು ಕುಮಾಧಾರಾ ಕಣಿವೆ ತುಂಬಿ ಅನೂಹ್ಯ ಗುರಿಗಳಿಗೆ ಧಾವಿಸಿತ್ತು. ಈ ಮೋಡ ಸೇನೆ ಎಬ್ಬಿಸಿದ ದೂಳೀಮಂಡಲದಂತೆ ಮಂಜು ಹಿನ್ನೆಲೆಯಲ್ಲಿ ಮೆರೆಯುವ ಶಿಖರ ಸಾಲನ್ನು ಮರೆಮಾಡಿತ್ತು. ಆಗೀಗ ಬಿದ್ದ ಕಿಂಡಿ ಕನಕನದ್ದೇ ಆಗಿ ವಿಶ್ವದರ್ಶನವಾದೀತೇ ಎಂಬ ಹಪಹಪಿಕೆ ನಮ್ಮದು. ಅಷ್ಟರಲ್ಲಿ ಮಾಯಾಲೋಕದಿಂದ ಬಂದಂತೆ ತೀರಾ ಅನಿರೀಕ್ಷಿತವಾಗಿ ಮಂಜಿನ ಪರದೆಯೊಳಗಿಂದ ಒಂದು ಪುಟ್ಟ ಕಾರು ಬಂತು. ಸಕಲಕ್ಲೇಶಪುರದಲ್ಲಿ ಯಾರೋ ಕುಕ್ಕೇಸ್ವಾಮಿ ದರ್ಶನಕ್ಕೆ ಹತ್ತಿರದ ದಾರಿ ಎಂದು ತೋರಿಸಿ ಈ ದಾರಿಗಿಳಿಸಿದ್ದರಂತೆ. ಬಯಲಿನಲ್ಲಿ ವಿರಳಗೊಳ್ಳುತ್ತಾ ಹೋದ ಕೃಷಿ, ಹಳ್ಳಿ ನೋಡುತ್ತಾ ‘ಜಗತ್ತಿನ ಕೊನೆ’ ಮುಟ್ಟುತ್ತೇವೆಯೇ ಎಂಬ ಸಂಶಯ ಬರುತ್ತಾ ಇತ್ತಂತೆ. ಬಿಸಿಲೆ ಗೇಟ್ ಬಿಟ್ಟ ಮೇಲಂತೂ ಪೂರ್ತಿ ನಿರ್ಜನ, ಕಾಡು, ಮಳೆಗಾಳಿಯ ಅಬ್ಬರ, ಎಲ್ಲಾ ಮೀರಿ ದಾರಿಯ ಅವ್ಯವಸ್ಥೆಯಲ್ಲಿ ಅವರಿಗೆ ಅರ್ಧ ಜೀವವೇ ಹೋದ ಅನುಭವ. ಈ ಅನೂಹ್ಯ ಸ್ಥಿತಿಯಲ್ಲಿ ನಮ್ಮನ್ನು ಬಂಧಮುಕ್ತಿಯ ಆದೇಶ ಹಿಡಿದ ಜೈಲ್ ವಾರ್ಡನ್ ಎಂದೇ ಗ್ರಹಿಸಿದರೋ ಏನೋ ದಡಬಡಿಸಿ ಕೇಳಿದರು, “ಇನ್ನೆಷ್ಟು ಹೊತ್ತು ಈ ದಾರೀ?” ಕಾರ್ ಇಂಜಿನ್ ಆರಿಸಿದ್ದರು. ಒಳಗಿದ್ದ ಮಂದಿ ಹೆದರಿ ಮೂಕರೇ ಆಗಿದ್ದರು. ಆದರೂ ಅಲ್ಲೇ ಎಲ್ಲೋ ಬಿಟ್ಟು ಬಿಟ್ಟು ಪಟ ಪಟ ಶಬ್ದ ಕೇಳುತ್ತಿತ್ತು. ಅದು ಪ್ರಾಕೃತಿಕವಲ್ಲ. ಅಲ್ಲಿ ನಮ್ಮನ್ನು ಬಿಟ್ಟರೆ ಮನುಷ್ಯ ಇಲ್ಲ ಎನ್ನುವ ಸ್ಥಿತಿ. ಕೆಲವೇ ಮಿನಿಟುಗಳಲ್ಲಿ ಪತ್ತೆ ಮಾಡಿದೆವು, ಗೋಲಛತ್ರಿಯ ಮಾಡಿನ ಯಾವುದೋ ಭಾಗ ಗಾಳಿ ಹೊಡೆತಕ್ಕೆ ನಟ್ಟುಬೋಲ್ಟು ಕಿತ್ತುಕೊಂಡು ಚಡಪಡಿಸುತ್ತಿತ್ತು - (ಗಾಳಿ ಸವಾರಿಗೆ) ಇನ್ನೆಷ್ಟು ಹೊತ್ತು, ಇನ್ನೆಷ್ಟು ಹೊತ್ತು? ಕರಣೆಗಟ್ಟಿದ್ದ ಜಿಗಣೆಗಾಯವನ್ನ ಸುಬ್ರಹ್ಮಣ್ಯ ಕುಡಿನೀರ ಅಂಡೆಯಿಂದ ಸ್ವಲ್ಪ ನೀರು ಬಳಸಿ ತೊಳೆದಿದ್ದ. ಬಗ್ಗಿ ನೋಡ್ತಾನೆ, ಮತ್ತೆ ಜಿನುಗುತ್ತಿದೆ. ಅವನಿಗೆ ಗೊತ್ತಿಲ್ಲದ್ದೇನೂ ಅಲ್ಲ. ಸಮಾಧಾನದಲ್ಲೇ ಆದರೆ ದೃಢವಾಗಿ ಹೇಳಿದ “ಹಾಂ, ಇನ್ನೂ ಸ್ವಲ್ಪ ಹೊತ್ತು.”
ಸೇತುಭಂಗ |
ಇನ್ನಾದರೂ ಬಿಸಿಲೆ ದಾರಿಯನ್ನು ಅಭಿವೃದ್ಧಿ ಇಲಾಖೆಗಳು ತುರಿಸದೇ ಬಿಟ್ಟಾವೇ?
I use this road many times just for the thrill of driving through it.
ReplyDeletealways I wanted this road to be upgraded.
but when I saw the changes of traffic pattern on the well paved roads and associated activities surrounding it now i'm not so sure about the idea of upgrading this road.
How to find a balance between essential road connectivity and civilised behaviour of the user public? Probably we need to educate the user population at large.and pray the so called development agencies to be sensible in what they do !.
I too had an blood donating experience with the BISILE leaches !!! about 15 year back though ..wonderful memory ..
ReplyDelete