26 February 2012

ಉತ್ತರಕ್ರಿಯೆ!


ಅತ್ರಿ ಮುಚ್ಚುಗಡೆಯ ವಿಚಾರ ಸಾರ್ವಜನಿಕಕ್ಕೆ ಭಾರೀ ವಿಷಯವಾಗಬೇಕಿಲ್ಲ. ಆದರೆ ತಿಳಿಸುವ ಕರ್ತವ್ಯ ನನ್ನದು. ಸುಮಾರು ಮೂರು ವರ್ಷದ ಹಿಂದೆಯೇ ನಿರೇನ್ ಈ ವಲಯದಲ್ಲಿ ಏಕಾಂಗವೀರನಾಗಿ ವನ್ಯಸಂರಕ್ಷಣೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಾಗ, “ನನಗೆ ಅರುವತ್ತಾದಾಗ ಅತ್ರಿ ಮುಚ್ಚಿ, ಪೂರ್ಣಾವಧಿ ತೊಡಗಿಕೊಳ್ಳುತ್ತೇನೆ” ಎಂದಿದ್ದೆ. ಮತ್ತೆ ಈಗ ಜಾಲತಾಣದ ಮೂಲಕ ನನಗೊಂದು ಸಮರ್ಪಕ ಮಾಧ್ಯಮವೂ ಇದೆ ಎಂಬ ಅರಿವಿನಲ್ಲಿ ಕೀಲಿಮಣೆ ಕುಟ್ಟತೊಡಗಿದೆ. ಆದರೆ ಇದು ದಪ್ಪ ಧ್ವನಿಯ ‘ಕ್ರೈಂ ನ್ಯೂಸ್ (ನೋಯ್ಸ್?)’  ಅಥವಾ ‘ಹೀಗೂ ಉಂಟೇ’ ಥರಾ ಅಪ್ಪಳಿಸಬಾರದು ಎನ್ನುವುದಕ್ಕೆ ಮೊದಲು, ಅಂದರೆ ಹಲವು ತಿಂಗಳ ಹಿಂದೆಯೇ ಪ್ರಕಾಶನ ಮುಚ್ಚಿದ್ದನ್ನು ಘೋಷಿಸಿದೆ. ಕೆಲವರು ‘ಅಂಗಡಿಯೇ ಮುಚ್ಚಿಹೋಯ್ತು’ ಎನ್ನುವಂತೆ ಕಳವಳ ವ್ಯಕ್ತಪಡಿಸಿದಾಗ ಸಣ್ಣ ನಗೆಯಷ್ಟನ್ನೇ ಕೊಟ್ಟು ಸುಧಾರಿಸಿದೆ. ಇಲ್ಲೇ ನಾನು ದೇಶಕಾಲದ ಮುಚ್ಚುಗಡೆಯನ್ನು (ಅವರು ಅನಿರ್ದಿಷ್ಟ ವಿರಾಮ ಎಂದೇನೇ ಹೇಳಿಕೊಳ್ಳಲಿ) ಪರೋಕ್ಷವಾಗಿ ಸಮರ್ಥಿಸುವ ಲೇಖನದ ಕೊನೆಯಲ್ಲಿ ಸ್ಪಷ್ಟ ಸೂಚನೆಯನ್ನೇ ಕೊಟ್ಟೆ - ‘ಮುಂದಿನ ಲೇಖನ ಅತ್ರಿ ಮುಚ್ಚುಗಡೆ.’ ಮತ್ತೆ ಅಂಗಡಿಗೆ ಬಂದ ಪರಿಚಿತರಲ್ಲಿ ಸಾಂದರ್ಭಿಕವಾಗಿ ಸಣ್ಣದಾಗಿ ಹೇಳುತ್ತಲೇ ಬಂದೆ. ಆದರೆ ಅವಕ್ಕೆ ಪ್ರತಿಕ್ರಿಯಿಸುವಲ್ಲಿ ಆತ್ಮೀಯರು ಸ್ವಲ್ಪ ಹೆಚ್ಚೇ ಎನ್ನುವಂತೆ ಆತಂಕಿತರಾದರು. ನನ್ನ ದೈಹಿಕ ಕ್ಷಮತೆ ಬಗ್ಗೆ ವಿಶ್ವಾಸ, ವ್ಯಾಪಾರದ ಸ್ಥಿರತೆಯ ಕುರಿತು ಅರಿವು ಚೆನ್ನಾಗಿದ್ದ ಹಲವು ಆತ್ಮೀಯರು ವ್ಯಾಪಾರರಂಗದಲ್ಲಿ ನನ್ನ ಅನಿರ್ದಿಷ್ಟ (ಆಜನ್ಮ?) ಮುಂದುವರಿಕೆ ಮತ್ತೆ ನನ್ನ ಕುಟುಂಬ (ಅಂದರೆ ಮುಖ್ಯವಾಗಿ ಮಗ - ಅಭಯಸಿಂಹ) ಮುಂದುವರಿಯುವುದನ್ನೇ ನಿರೀಕ್ಷಿಸಿದ್ದೂ ತಪ್ಪಲ್ಲ. [ಅಭಯನ ಮಾವ - ಮಣಿಮುಂಡ ಭಾಸ್ಕರ ಉಪಾಧ್ಯಾಯರು ಕೇವಲ ತಮಾಷೆಗೆ ಹೇಳಿಯೂ ಹೇಳಿದರು. “ಮಗಳಿಗೆ ಅಭಯನ ಸಂಬಂಧ ಪರಿಗಣಿಸುವ ಕಾಲದಲ್ಲಿ ‘ಮಾಣಿಗೆ ಅಸ್ಥಿರ ಆದಾಯದ ಸಿನಿಮಾರಂಗ ಕೈಕೊಟ್ಟರೂ ಒಳ್ಳೆಯ ವ್ಯಾಪಾರವಿರುವ ಪುಸ್ತಕ ಮಳಿಗೆಯಿದೆ’ ಎಂದು ನಾವು ನಾವೇ ಅಂದುಕೊಂಡದ್ದು ಈಗ ಹೋಗುತ್ತಿದೆ!”]


ಅಭಯ ನನಗಿಂತಲು ಎಷ್ಟೆಷ್ಟೋ ಪಾಲು ಹೆಚ್ಚು ಸಾರ್ವಜನಿಕ ಒಲವಿನ (ಸಿನಿಮಾ) ರಂಗದವನಾದ್ದರಿಂದ ಅವನಿಗೆ ಹುಬ್ಬು ಮೇಲೇರಿಸಿದವರ ‘ಹೌದೇ’ ಕರೆಗಳೂ ಕಿರು ಸಂದೇಶ, ಚಾಟ್, ಮಿಂಚಂಚೆಗಳಲ್ಲಿ ಮೂವತ್ತರ ಗಾತ್ರದ ಗಾಢಶಾಯಿಯ ‘ಛೇ’ ಒಕ್ಕಣೆಗಳೂ ಕಾಡತೊಡಗಿದವು. ಅವನು ಸುಲಭ ಮಾರ್ಗವಾಗಿ ಅವನ ಫೇಸ್ ಬುಕ್‌ನಲ್ಲೇ ಚುಟುಗಾಗಿ ‘ಹೌದು, ಅತ್ರಿ ಬುಕ್ ಸೆಂಟರ್ ಮುಚ್ಚುತ್ತಿದೆ. ವಿವರಗಳಿಗೆ ಅಪ್ಪನದೇ ಲೇಖನ ನಿರೀಕ್ಷಿಸಿ’ ಎಂಬರ್ಥದಲ್ಲೇನೋ ನಾಲ್ಕು ಸಾಲು ಏರಿಸಿಬಿಟ್ಟ. (ನಾನು ಜಾಲತಾಣದಿಂದಾಚೆ ಹೋದವನಲ್ಲ) ಉಷ್! ದಿನದಲ್ಲೇ ಸಾವಿರದ ಮೇಲೆ ಹಿಟ್ಟುಗಳು!! (ಪೂರಾ ಪೊಡಿಪೊಡಿ ಮಾರಾಯ್ರೇ) ನನಗೂ ಅಸಂಖ್ಯ ದೂರವಾಣಿ ಕರೆಗಳು. ಹಿಂದೂ ಪತ್ರಿಕೆಯ  ಸ್ಥಳೀಯ ಮುಖ್ಯಸ್ಥ ಗೋವಿಂದನ್ ಪ್ರತಿನಿಧಿ ಅನಿಶಾರನ್ನು ಕಳಿಸಿ ಸಂದರ್ಶನ ಪಡೆದು ಕೊಂಡರು. ಆದರವರು ಗ್ರಹಿಕೆಯಲ್ಲಿ ತಪ್ಪಾಗಿ, ನಾನು ಪುಸ್ತಕ ಉದ್ಯಮದ ಅವನತಿಯನ್ನು ಕುರಿತಾಡಿದ ಮಾತನ್ನು ನನ್ನ ವ್ಯಾಪಾರದ ಸೋಲೆಂಬಂತೆ ಬಿಂಬಿಸಿ ಬಿಟ್ಟರು. ಈ ವರದಿಯ ಛಾಯಾನುವಾದವನ್ನು ಪ್ರಕಟಿಸಿದ ಕರಾವಳಿ ಅಲೆ ನನ್ನನ್ನು ಇನ್ನಷ್ಟು ಅನುಕಂಪೆಯಿಂದ ನೋಡಿತು (ಬಚ್ಚಲಲ್ಲಿ ನಿಜ ಬಾಲ್ದಿ ಒದ್ದವನನ್ನು kicked the bucket ಮಾಡಿ, ಮರಣ ಅಂಕಣದಲ್ಲಿ ತಂದಂತೆ)! ಹೆಚ್ಚಿನ ಹಾನಿ ತಡೆಯುವುದಕ್ಕೆ ನಾನು ಶನಿವಾರಕ್ಕೆಂದು ಕಾಲನಿಗದಿ ಮಾಡಿಟ್ಟಿದ್ದ ‘ಅತ್ರಿ ಮುಚ್ಚಿ, ವಾನಪ್ರಸ್ಥಕ್ಕೆ’ ಲೇಖನವನ್ನು ಶುಕ್ರವಾರವೇ ಜಾಲತಾಣದಲ್ಲಿ ಬೆಳಕು ಕಾಣಿಸಿಬಿಟ್ಟೆ.

ಜಾಲತಾಣದಲ್ಲಿ ಭೇಟಿ ಕೊಟ್ಟವರ ಸಂಖ್ಯೆ, ಪ್ರತಿಕ್ರಿಯಿಸಿದವರ ಸಂಖ್ಯೆ ಅಪೂರ್ವ ದಾಖಲೆಯೇ ಸರಿ! ವಿಮರ್ಶೆಯ ಮಾನದಂಡಗಳನ್ನೆಲ್ಲ ಮರೆತಂತೆ, ಮೂವತ್ತಾರು ವರ್ಷದ ಇರುವಿಕೆಯಿಂದಲೇ ಅತ್ರಿಗೆ ಅಮರತ್ವ ಕಲ್ಪಿಸಿದ್ದವರ ಭಾವಪ್ರವಾಹಕ್ಕೆ ನನ್ನಲ್ಲಿ ಉತ್ತರವೇ ಇರಲಿಲ್ಲ. ನಾನೇನೂ ಅಂದಾಜಿಸದೇ ಬಂದ ದ ಹಿಂದೂ, ಕರಾವಳಿ ಅಲೆಗಳ ಸುದ್ದಿಯ ಬೆನ್ನಿಗೇ ಉದಯವಾಣಿಯ ಮನೋಹರಪ್ರಸಾದ್ ದೂರವಾಣಿಸಿದರು. ನನ್ನಲ್ಲಿಗೆ ‘ಅತ್ರಿ ಮುಚ್ತೀರಂತೇ’ ಎಂದು ಸಖೇದ ಕೇಳಿ ಬರುವ, ಕರೆಮಾಡುವವರಂತೇ ಅವರ ಪತ್ರಿಕಾ ಕಛೇರಿಗೂ ವಿಚಾರಣೆಗಳು ಅಸಂಖ್ಯವಾಗಿತ್ತು. ನನ್ನನ್ನು ಮಾತಾಡಿಸಿ, ಬ್ಲಾಗ್ ಬರಹ ಓದಿ, ಅವರೂ ಒಂದು ವರದಿ ಹಾಕಿಬಿಟ್ಟರು. ಸಾಲದೆಂಬಂತೆ ಮಾರಣೇ ದಿನವೇ ತನ್ನ ವಾರದ ಅಂಕಣ ಲೇಖನವನ್ನು ಇಡೀ ಅತ್ರಿಗೆ ವಿದಾಯ ಹೇಳಲು ಗೆಳೆಯ ನಿರಂಜನವಾನಳ್ಳಿ ಮೀಸಲಿಟ್ಟರು. ಮೂರ್ನಾಲ್ಕು ವರ್ಷಗಳ ಹಿಂದೆ ತಂದೆ - ಜಿಟಿನಾ ಅವರ ಆತ್ಮಕಥೆ - ‘ಮುಗಿಯದ ಪಯಣ’ ಪುಸ್ತಕದ ಲೋಕಾರ್ಪಣಾ ಕಾರ್ಯಕ್ರಮದಂದು ಮೊಂತೇರೋ ಎನ್ನುವವರು ತಂದೆಯನ್ನು ಸಂದರ್ಶಿಸಿ, ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಪ್ರಸ್ತುತ ಸನ್ನಿವೇಶದಲ್ಲಿ ಮೊಂತೇರೋ ಅದೇ ಲೇಖನವನ್ನು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಮರುಪ್ರಕಟಿಸುವುದರೊಡನೆ ಹಿಂದೆ ಮುಂದೆ ಒಂದೊಂದು ಸಾಲಿನಲ್ಲಿ ‘ಅತ್ರಿಯ ಭವ್ಯ ಹಿನ್ನೆಲೆ’ಗೆ ಚರಮಾಂಜಲಿ (?) ಹಾಡಿ ಕೈಮುಗಿದರು! ಪ್ರಜಾವಾಣಿಯಲ್ಲಿ ಕಾವ್ಯನಾಮದಲ್ಲಿ ನನಗಪರಿಚಿತ - ವ್ಯಾಸಸುತ, ಹಾಯ್ ಬೆಂಗಳೂರಿನಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮತ್ತೆ (ನನ್ನರಿವಿಗೆ ಬಂದಂತೆ) ಕೊನೆಗೆ ಲಂಕೇಶ್ ಪತ್ರಿಕೆಯಲ್ಲೂ ಒಂದು ಅಂಕಣ ಪೂರ್ತಿ ಅತ್ರಿ ಮುಚ್ಚುವ ಬಗ್ಗೆ ತಮ್ಮ ಕಾಳಜಿ, ಆತಂಕಗಳನ್ನು ಹೇಳಿಕೊಂಡರು. 

ಹುಟ್ಟಿದ್ದಕ್ಕೆ, ಪ್ರಾಯ (ಒಂದರಿಂದ ನೂರರವರೆಗೂ!) ತುಂಬಿದ್ದಕ್ಕೆ, ಮದುವೆಗೂ ಮರಣಕ್ಕೂ ಸಾಲ ಮಾಡಿಯಾದರೂ ಪತ್ರಿಕೆಗಳಲ್ಲಿ ಜಾಹೀರಾತು ಕೊಡುವುದು ಈ ವಲಯದ ಫ್ಯಾಶನ್! ಅಂಥವರ ನಡುವೆ ನಾನು ಬೊಬ್ಬೆ ಹೊಡೆಯದೇ ಪೈಸೆ ಬಿಚ್ಚದೇ ‘ಒಳ್ಳೇ ಪಬ್ಲಿಸಿಟಿ’ ಪಡೆದದ್ದು ಹಲವರಿಗೆ ಭಯಂಕರ ಕುಶಿಯಾದದ್ದನ್ನು (ಕೆಲವರು ಸಣ್ಣದಾಗಿ ಕರುಬಿದ್ದನ್ನೂ) ನಾನೇನೆಂದು ವಿವರಿಸಲಿ! ಆತಂಕಿತ ದೂರವಾಣಿ ಕರೆಗಳು, ನೆನಪಿನ ಕಡತದ ಬಿಡಿ ಉಲ್ಲೇಖಗಳು, ಶುಭ ಕೋರುವ ಕೈಕುಲುಕು, ವಾಟಂಕಲ್, ಮಿಸ್ಯೂ ಅಂಕಲ್ಗಳೂ (ಅವರು ಬಯಸಿ, ದುಡ್ಡುಕೊಟ್ಟು ಕೊಂಡ ಪುಸ್ತಕಗಳ ಮೇಲೆ ನನ್ನ) ಹಸ್ತಾಕ್ಷರ ಕೋರುವುದು ಇತ್ಯಾದಿ ಒಪ್ಪಿಕೊಂಡೆ. ವಿದಾಯದ ಔತಣ, ಸಾರ್ವಜನಿಕ ವೇದಿಕೆಯಲ್ಲಿ ಅತಿಥಿಯಾಗಿ ಸಮ್ಮಾನ ಸ್ವೀಕಾರಕ್ಕೆ ಕರೆ, ಹುಸಿಮುನಿಸು ಇತ್ಯಾದಿಗಳನ್ನು ಅಗತ್ಯ ಮೀರಿದ ಬಾಳೆಕುರುಳೆಗಳನ್ನು ಮೆಟ್ಟಿ ಕಳೆಯುವಂತೆ ನಿರಾಕರಿಸುತ್ತಿದ್ದೇನೆ. ಇದರಲ್ಲಿ ಗರ್ವ, ಒರಟುತನ, ಅನುಕಂಪರಾಹಿತ್ಯ ಇತ್ಯಾದಿ ಏನೂ ಇಲ್ಲ; ನಾನು ಒಪ್ಪಿಕೊಂಡ ಜೀವನ ಶೈಲಿಗೆ ಅವು ಹೊಂದುವುದಿಲ್ಲ, ಅಷ್ಟೆ. ನನಗಿಂತಲೂ ಮೊದಲು ಈ ವಲಯದವರಿಗೆ ಪುಸ್ತಕಗಳು ಸಿಗುತ್ತಿದ್ದವು, ಮುಂದೆಯೂ ಕೊಡುವವರು ಇದ್ದೇ ಇದ್ದಾರೆ. ಮಧ್ಯೆ ಸಂದ ಕೇವಲ ಮೂವತ್ತಾರು ವರ್ಷಗಳಲ್ಲಿ ನಾನಂತೂ ಗೌರವಪೂರ್ಣ ಜೀವನ ಕಟ್ಟಿಕೊಂಡೆ ಎನ್ನುವ ವಾಸ್ತವ ಮರೆಯದೆ ಕೃತಜ್ಞತೆಗಳನ್ನು ಮಾತ್ರ ಹೇಳುತ್ತಾ ಬಂದೆ.

ನಿವೃತ್ತ ಅಧ್ಯಾಪಿಕೆ, ಬಹುಮುಖೀ ಆಸಕ್ತಿಗಳ ಬಿ.ಎಂ ರೋಹಿಣಿಯವರು ತಮ್ಮ ದೈಹಿಕ ಸಮಸ್ಯೆಗಳ ದೆಸೆಯಿಂದ ನನ್ನನ್ನು ಬಂದು ಕಾಣಲಾಗದಿದ್ದರೂ ವಾನಳ್ಳಿಯವರ ಲೇಖನ ಕಂಡ ದಿನವೇ ನಾಲ್ಕು ಪುಟದುದ್ದಕ್ಕೆ ಆತ್ಮೀಯ ಪತ್ರ ಬರೆದರು (ಇದರ ಸಂಗ್ರಹರೂಪವನ್ನು ಅವರ ಹೆಸರಿನಲ್ಲೇ ನನ್ನ ಜಾಲಲೇಖನದ ಪ್ರತಿಕ್ರಿಯಾ ಅಂಕಣದಲ್ಲಿ ಕಾಣಬಹುದು). ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನದಿಂದ ತಿರುಮಲೇಶ್ವರ ಭಟ್ಟರು, ಭಾರತ ದರ್ಶನ ಪ್ರಕಾಶನದಿಂದ ಸಂಪಾದಕ ಮಾನ್ಯರು, ಹಲಹಲವು ಲೇಖಕ-ಪ್ರಕಾಶಕರು, ಮಿತ್ರರು ತಮಗೆ ಅತ್ರಿಯ ವ್ಯಾಪಾರ ಸಂಬಂಧದಲ್ಲಿ ಮತ್ತು ಹಾಗೇ ತಾವು ಅನುಭವಿಸಿದ ಸಂತೋಷವನ್ನು ದೀರ್ಘ ಪತ್ರಗಳಲ್ಲಿ, ಅವರದೇ ಮಾಧ್ಯಮಗಳಲ್ಲಿ ಬರೆದು, ಹೇಳಿ ನನ್ನನ್ನು ಸಮ್ಮಾನಿಸಿದ್ದಾರೆ. ಅವೆಲ್ಲವನ್ನು ಇಲ್ಲಿ ಯಥಾಪ್ರತಿ ನಕಲಿಸದೆ ಮತ್ತೆ ಭಾವಕ್ಕೆ ಶರಣು ಎನ್ನುವುದಷ್ಟೇ ನನಗುಳಿದಿದೆ. ಹಿರಿಯ ಅರ್ಥದಾರಿ, ನನ್ನ ಒಳ್ಳೆಯ ಕೊಂಡು-ಓದುಗರಲ್ಲಿ ಒಬ್ಬರು, (ಕೃಷಿಕ,) ಬಿ. ರಾಮಭಟ್ಟರು ಅವರ ಯಕ್ಷಪ್ರೀತಿಯನ್ನೂ ಕಸಿಮಾಡಿ ಭಾಮಿನಿಯಲ್ಲಿ ಎಂಟು ಖಂಡಗಳನ್ನೂ ವನಮಾಲೀ ವೃತ್ತದಲ್ಲಿ ಆರು ಖಂಡಗಳನ್ನೂ ಕೇವಲ ಸ್ವಾಂತಸುಖಕ್ಕೆಂದೇ ಬರೆದು ನನಗೊಪ್ಪಿಸಿದ್ದನ್ನು ಇಲ್ಲಿ ಅವರ ಶ್ರಮ ಮತ್ತು ಅದರ ವೈಶಿಷ್ಟ್ಯಕ್ಕಾಗಿ ಹಂಚಿಕೊಳ್ಳ ಬಯಸುತ್ತೇನೆ. ಅವರ ಭಾವಕೋಶದಲ್ಲಿ ನನ್ನ ಹೆಸರಿನ ತಪ್ಪು ಅಚ್ಚು ಉಳಿದಿರುವುದನ್ನು (‘ವರ್ಧನ’ದ ಜಾಗದಲ್ಲಿ ‘ಪಟವರ್ಧನ’) ಪ್ರೀತಿಗಪಚಾರವಾದೀತೆಂಬ ಎಚ್ಚರದಲ್ಲಿ ನಾನವರಿಗೆ ತಿಳಿಸಲೂ ಇಲ್ಲ ತಿದ್ದಲೂ ಇಲ್ಲ.

|| ಭಾಮಿನಿ ಷಟ್ಪದಿ ||

ತ್ರಿಯೆಂಬ ಮಹರ್ಷಿ ಈ ಧ
ರಿತ್ರಿಯಲಿ ಮೊದಲಿದ್ದನೆಂಬರು
ಸರ್ತಿ ಸರ್ತಿಯೊಳೀ ಚರಣವಾಸ್ವಾದಿಸುತ ಮನದ
ಭಿತ್ತಿಯೊಳು ನೋಡಿದರು ಕಾಣದೆ
ವ್ಯರ್ಥ ಹುಡುಕಾಟಕ್ಕೆ ಈ ಮನ
ವಾಯ್ತೆನುತ ಹಲುಬಲ್ಕೆ ಹೃದಯಾಳದಲ್ಲಿ ಪಿಸುಗುಟ್ಟೆ ||೧||

ಶೋಕಿಸುವೆ ಯಾಕಿದಕೆ ಸಮಯವ
ನೂಕಿ ವ್ಯರ್ಥಾಲಾಪಗೆಯ್ಯುವೆ
ಬೇಕುಬೇಕಾದಖಿಳ ಪುಸ್ತಕ ತರಿಸಿ ವಿತರಿಸುವ
ನೂಕಲರಿಯನು ವ್ಯರ್ಥ ದಿನವನು
ಸಾಕಲರಿಯನು ‘ನಂಜು’ ಬೊಡ್ಡೆಯ
ಏಕರೂಪಿ ಅಶೋಕ ಪಟ ವರ್ಧನನ ನೋಡೆಂದ ||೨||

ಟಕಿಯಾಡದೆ ಸತ್ಯವನು ನುಡಿ
ಕುಟುಕದಿರು ತೆರೆಮರೆಯೊಳೀತೆರ
ನಟನೆ ಬಿಟ್ಟೆನ್ನೊಡನೆ ನೀನಾರೆಂದು ಪೇಳೆನಲು
ದಿಟವ ನೀನೋಡೆನುತ ಹೃದಕ
ವಾಟವನು ತೆರೆಯಲ್ಕೆ ಕವಿತೆಯು
ಸ್ಫಟಿಕದಂತೆಸೆಯಲ್ಕೆ ಹರಿಯಿತು ಕಾವ್ಯ ರಸಧಾರೆ ||೩||

ರಿಪರಿಯ ಸಾಹಿತ್ಯವೆಲ್ಲವ
ನರೆದು ಮೈಗೂಡಿಸಿದ ಮೇಧಾ
ವರನು ಕುಟಿಲವನರಿಯದಾತನು ಸದ್ಗುಣಾನ್ವಿತನು
ಹರಿತದಿಂ ಹದವರಿತು ವಿಷಯದ
ತಿರುಳನೆಳೆವುತ ಸಾಣೆಗಿಕ್ಕುತ
ಬರೆದು ಪಂಡಿತ ಹುಂಬರನು ಛೇಡಿಸುವ ನಿರ್ದಯದಿ ||೪||

ಕ್ಕು ಠೌಳಿಯನರಿಯದಾತನು
ಚೊಕ್ಕ ಶುಚಿ ರುಚಿ ಶಿಸ್ತು ಪಾಲನೆ
ಗಿಕ್ಕುವನು ತನ್ಮನವ ತಿಳಿಗೊಳದಂತೆ ಶುದ್ಧಾತ್ಮ
ಯಕ್ಷಗಾನದ ಬಣ್ಣಗೆಡಿಸುವ
ದಕ್ಷರಾವೆಂದೆನುವ ಗರ್ವಕೆ
ಕುಕ್ಕುವನ ಲೇಖನಿಯ ಮೂಲಕ ಸೊಕ್ಕ ಬಿಡಿಸುವನು ||೫||

ರದೆ ವಾಣಿಯನುಗ್ರಹನು ಸ
ತ್ಪುರುಷರೊಳಗಿವನಗ್ರ ಮಾನ್ಯನು
ಸರುವಥಾ ಸಾಹಿತ್ಯರಾಜಿಯೊಳೀತನೊಳಗಿಲ್ಲ
ತೆರೆಮರೆಯ ಭಂಡಾಟವಿಲ್ಲದೆ
ಮೆರೆವ ‘ಮಡಿ’ವಂತರನು ಛೇಡಿಸಿ
ಬರೆದನಾದರೆ ಲೇಖನಿಯು ಬ್ರಹ್ಮಾಸ್ತ್ರದಂತಿಹುದು ||೬||

ರ್ಧ ಧರ್ಮವಿರಲಾಚಾರವೆಂಬುದು
ಕರ್ಮವೆಂದೇ ಕರೆವರದನು
ಒಮ್ಮತದಿ ಜೊತೆಯಿಂದಲಾಚರಿಸಿದರೆ ಜೀವನವ
ಹಮ್ಮಿದವ ಪಟವರ್ಧನನು ಪರ
ಬೊಮ್ಮ ವಂಶೋದ್ಭವ ವಿಲಾಸನು
ಒಮ್ಮತದಿ ‘ಶೋಕ’ ವ ‘ಅಶೋಕ’ವ ಸ್ವೀಕರಿಸುವವನು ||೭||

ರನ ರೂಪದಿ ಬಂದು ವಿಬುಧರ
ನೆರವಿಯಲಿ ಸಂಜನಿಸಿ ಲೋಕದ
ಹರವಿಯಲಿ ಸಾಹಿತ್ಯ ದೇವಿಯ ಮುಕುಟದಂತಿಹನು
ಪರಮ ಹರುಷೋಲ್ಲಾಸ ವಾಣಿಯ
ವರ ಮಹಾ ಮಂದಿರಕೆ ಪೋದರೆ
ಬರುವ ದಾರಿಯು ಕಾಣದಾ ‘ಅಶೋಕ’ ಮಂದಿರದಿ ||೮||

||ವನಮಾಲಾ ವೃತ್ತ||

ಕೋವಿಕೈಯೊಳಗಿಲ್ಲವಾದರೂ ವೀರಪ್ಪ (ವೀರರ ಅಪ್ಪ)
ಕಾವಿಬಟ್ಟೆಯನುಡದ ಸ‘ನ್ಯಾಸ’ ಜೀವನನು (ಸಾಲ ಕೊಡದವನು)
ಆವನಿವ ಎಲ್ಲಿಯವನೆಂದು ಚಿಂತಿಸುವೆಯಾ
ಠಾವೆ ಬಲ್ಮಠವೃತ್ತ ಹತ್ತಿರದಿ ಕಾಣುವನು
ಯಾರಿವನು?
ಆರಡಿಯ ಮೇಲೆತ್ತರಕೆ ಬೆಳೆದ ಭೂಪತಿಯು
ಆರಾದರಿವನ ನೋಡಿದರೆ ‘ಗರ’ ಹೊಡೆದಂತೆ
ಮೂರಿವನ ಹೃದಯ ಬಟ್ಟಲಿನಲ್ಲಿ ತಿರುಗುತಿವೆ (ಸಾತ್ವಿಕ, ತಾಮಸ, ರಾಜಸ)
ದೂರಿದರೆ ಯಮಯಾತನೆಯ ಸಿಡಿಸುವನು ಬಿಡದೆ
ಯಾರಿವನು?
ಒಳಹೊಕ್ಕು ನೋದುತಿಹ ಕಣ್ಣುಗಳ ತೀಕ್ಷಣತೆ
ಒಳಗಿಲ್ಲ ಹೊರಗಿಲ್ಲ ತಲೆಯಲ್ಲೆ ತುಂಬಿಹುದು
ಬಲವೆಲ್ಲ ಛಲದಲ್ಲಿ ಬಲುಹು ಸಾಹಿತ್ಯದಲಿ
ನಳನಳಿಸಿ ಹಣೆಯ ರೇಖೆಗಳೆಲ್ಲ ಕಾಣುವುದು
ಯಾರಿವನು?
ಸುರುಳಿ ಸುತ್ತಿದ ಮೀಸೆ ಮುಟ್ಟಿದರೆ ಬಿಗಿವಾಸೆ
ತರಳರಿಬ್ಬರ ಸುತ್ತಿ ‘ಗಿರಕಿ’ ಹೊಡೆವುದಕಾಸೆ
ಕರುಣೆ ತುಂಬಿರುವ ಮುಖ ಕೆರಳಿದರಗ್ನಿಮುಖ
ಅರಿಯರೀತನ ಹೆಜ್ಜೆ ಕೌರವನ ನಡೆಯಂತೆ
ಯಾರಿವನು?
ಭದ್ರ ಸಿಂಹಾಸನದಿ ಕುಳಿತನೆಂದರೆ ಸಾಕು
ಭದ್ರಮಾನಸನಾಗಿ ಸಿಂಹಾವಲೋಕನನು
ಕದ್ದುಮುಚ್ಚಿಡುವುದಕ್ಕಿಲ್ಲ ಭಂಡಾರದಲಿ
ಸದ್ಯಕಿವನೊಬ್ಬನೇ ಸಾಹಿತ್ಯ ಕೇಸರಿಯು
ಯಾರಿವನು?
ಅವನೇ ಅಶೋಕಪಟವರ್ಧನ ಪ್ರವರ್ಧನನು
**
ಮುಚ್ಚುವುದೆ ಅತ್ರಿ ಎಂದೆನುವ ಮಂದಿಗಳೆಷ್ಟೊ
ಬಿಚ್ಚುವುದನೆಲ್ಲ ಬಿಟ್ಟಿಹನೆಂಬ ಜನರೆಷ್ಟೊ
ಮುಚ್ಚಿದರು ಬಿಚ್ಚಿದರು ಅತ್ರಿ ಕುಳಿತಾಸನವ
ಇಚ್ಛೆಯಂದದಿ ನಡೆಸಲಾಗ ಕಚ್ಚುವನತ್ರಿ
**
ಪ್ರೀತಿಮೂಲವಾಗಿ, ಛಂದೋಮಿತಿಗಾಗಿ ರಾಮ ಭಟ್ಟರು ಹೊಸೆದ ಕಾವ್ಯದ ಭಾವಕ್ಕೆ ನಾನು ಶರಣು ಆದರೆ ಅರ್ಥಕ್ಕೆ ನಾನು ಬಾಧ್ಯನಲ್ಲ ಎಂದು ಸವಿನಯ ಹೇಳಲೇಬೇಕು. 

ನನ್ನ ಜಾಲತಾಣಕ್ಕೆ ಮೊದಲ ದಿನವಂತೂ ಅಕ್ಷರಶಃ ಸಾವಿರದ ಮೇಲೆ ವೀಕ್ಷಕರು (ಎಲ್ಲರೂ ಪೂರ್ಣ ಓದಿದ್ದಾರೆಂಬ ಭ್ರಮೆ ನನಗೇನೂ ಇಲ್ಲ), ಅದರಲ್ಲೂ ಅರವತ್ತರ ಮೇಲೆ ಸ್ಪಷ್ಟ ಬರೆದು ಪ್ರೀತಿ, ಕಳವಳ ತೋರಿದವರದ್ದೆಲ್ಲ ಒಂದು ತೂಕ. ಅವಧಿ, ದಟ್ಸ್ ಕನ್ನಡ, ದಾಯ್ಜೀ ವರ್ಲ್ಡ್, ಪ್ರದಕ್ಷಿಣೆ ಮೊದಲಾದ ಕೆಲವು ಜಾಲತಾಣಗಳೂ ಇನ್ನೂ ಕೆಲವು ಫೇಸ್ ಬುಕ್ ಸದಸ್ಯರೂ ನನ್ನ ಯಾವ ವಿಶೇಷ ಸೂಚನೆಯೂ ಇಲ್ಲದೆ ನನ್ನ ನೀವೇದನೆಯನ್ನೇ ಬೇರೆ ಬೇರೆ ರೂಪಗಳಲ್ಲಿ ಬಳಸಿಕೊಂಡವು. ವಿವೇಕ ರೈ, ರಾಮಚಂದ್ರ ದೇವ, ಸಂವರ್ಥರೇ ಮೊದಲಾದ ಸ್ವತಂತ್ರ ಜಾಲತಾಣ ಹೊಂದಿದವರು (ವೈಯಕ್ತಿಕ) ಸ್ವಂತ ಅನುಭವಗಳ ಆಧಾರದಲ್ಲಿ ವಿಸ್ತಾರ ಲೇಖನಗಳ ಮೂಲಕವೂ ಸ್ಪಂದಿಸಿದರು. (ಆಸಕ್ತರು, ಇವೆಲ್ಲವುಗಳ ಸೇತುಗಳನ್ನು ನನ್ನ ಹಿಂದಿನ ಲೇಖನದ ಕೊನೆಯಲ್ಲಿ ಕೊಟ್ಟಿರುವುದನ್ನು ಗಮನಿಸಬಹುದು.) ಪುಣ್ಯ ತುಂಬಿ ಬರುವುದೆಂದರೆ ಹೀಗೇ ಇರಬೇಕೆಂದು ಈಗ ನನ್ನ ನಾಸ್ತಿಕ ಮಂಡೆಯೊಳಗೆ ಬೆಳಕಿನ ಬುರುಡೆ ಹತ್ತಿಕೊಂಡಿದೆ. ಇವ್ಯಾವವೂ ನನ್ನ ಮುಂದಿನ ನಡೆಗೆ ಕಾಲಕೋಳಗಳಾಗದ ಎಚ್ಚರ ಉಳಿಸಿಕೊಳ್ಳಬೇಕಾಗಿದೆ. ನನ್ನಪ್ಪನ ನೈತಿಕ ಬಲ, ಅವರು ಗಳಿಸಿದ ಜನರ ಪ್ರೀತಿ ಇಂದಿಗೂ ಎಷ್ಟೋ ಬಾರಿ ನನ್ನರಿವಿಗು ಬಾರದೇ ನನ್ನ ನಡೆಯನ್ನು ಹಸನುಗೊಳಿಸುತ್ತಿರುತ್ತದೆ. ಹಾಗೇ ನಾನು ಗಳಿಸಿದ ಒಲವು ನಿಷ್ಠುರಗಳನ್ನು ನಾನು ಉದ್ದೇಶಪಡದೆ ಜೀವಿತಾವಧಿಯಲ್ಲೇ ಅತ್ರಿ ಮುಚ್ಚುವ ನೆಪದಲ್ಲಿ ಒರೆಗೆ ಹಚ್ಚಿಕೊಂಡಂತಾಗಿದೆ! ಇವು ನಮ್ಮ ಮಗ, ಸೊಸೆಯರ ಭವಿಷ್ಯತ್ತಿಗೆ ಪ್ರಭಾವಶಾಲೀ ಆದೀತು, ಅಲ್ಲದಿದ್ದರೂ ಕಂಟಕವಾಗದು ಎಂಬ ಧೈರ್ಯ ನನ್ನದು. ವಿರಮಿಸುವ ಮುನ್ನ ಒಂದು ಕವನ. ಕವಿ,  ನಾಟಕಕಾರ, ಉತ್ತಮ ಶಾಲಾಶಿಕ್ಷಕ, ಸೌಮ್ಯ ಮಾತಿನ ಗೆಳೆಯ - ಬಂಟ್ವಾಳದ ರಾಧೇಶ ತೋಳ್ಪಾಡಿ, ಈಚೆಗೆ ಎಂದಿನಂತೆ ಬಂದು ಅದು ಇದು ಪುಸ್ತಕ ಆಯ್ದರು. ಪಾವತಿ ಕೊಟ್ಟು ಹೋಗುವ ಮುನ್ನ ತೀರಾ ಸಂಕೋಚದಲ್ಲಿ ನನ್ನ ಹೆಸರಿಗೆ ಬರೆದ ಒಂದು ತೆಳು ಲಕೋಟೆಯನ್ನು ಕೊಟ್ಟು “ನಾನು ಹೋದ ಮೇಲೆ ಓದಿ ಸಾರ್” ಎಂದು ಜಾಗ ಖಾಲಿ ಮಾಡಿದರು. ಈಗ ಅದರೊಳಗೆ ಇದ್ದ ಪತ್ರದ ಯಥಾಪ್ರತಿ:

ಯಾಕತ್ರಿ ಅನುವವರಿಗೇನು ಹೇಳುವುದು?

ಕೊನೆಯಿರದ ಪ್ರವಾಹದಲ್ಲೊಂದು ನಡುಗಡ್ಡೆ ಇದು
ಆಲಿಬಾಬನ ಗುಹೆ ತೆರಕೊಂಡಾಗ ಆ ಹುಡುಗ
ಚಪ್ಪಾಳೆ ತಟ್ಟಿ ಕೇಕೆ ಹಾಕಿದ್ದು ಇಲ್ಲೇ

ಇದರ ಕಿರುದಾರಿ, ಓಣಿಗಳಲ್ಲೇ ಗೋಚರಿಸಿದ್ದು
ಅಲ್ಲಮನ ಬಯಲು, ಎಷ್ಟೊಂದು ಮುಗಿಲು, ನಕ್ಶತ್ರ
ಚಂದ್ರಲೋಕದ ತಾಯಿ ಬೆಳದಿಂಗಳು.
ನಾಯಿಗುತ್ತಿ, ಸರಸೋತಿ, ಪಾರೋತಿಯರೆಲ್ಲ ಸಿಕ್ಕದ್ದು ಇಲ್ಲೇ.
ಇಲ್ಲೇ ಆ ಮಹಾವಟವೃಕ್ಷ, ಅದರ ಹರೆಯದಲ್ಲಿ ಗೋವಿಂದ
ಕೊಳಲನೂದುತ್ತ,
ಕೇಳಬಹುದಾಗಿತ್ತು ಬಗೆಬಗೆಯ ಹಕ್ಕಿಗಳ ಒಡಲಿನುಲಿ, ನಾಡಿಮಿಡಿತ.

ಯಾಕತ್ರಿ ಅನುವವರಿಗೇನು ಹೇಳುವುದು?
ಉಪಮೆ-ಅಲಂಕಾರ ಬಿಟ್ಟು ಹೇಳುವುದಾದರೆ
ಮಳೆ ಬಂದಾಗ ನೀಡಿದ್ದು ಇದೇ ತಲೆಯ ಮೇಲೊಂದು ಸೂರು.
ಮೆಟ್ಟಲುಗಳನ್ನೇರಿ ಹೋದವರಿಗಂತೂ ಅದು ಅವರದೇ ಬಾನಂಗಳ!
ಚತುರ್ವಿಧದ ರಸ್ತೆಗಳೂ ಸಂಧಿಸುವ ಒಂದು ಸಾರ್ವಜನಿಕ ಸ್ಥಳ
ಪ್ರತಿಯೊಬ್ಬರ ಖಾಸಗಿ ಭಾಗವಾದದ್ದೊಂದು ಪವಾಡ!

ಏನು ಬೇಸರವೋ ಈ ನಡುಗಡ್ಡೆಗೆ, ನೀರಿಕಿಳಿದವನೆ ಬಲ್ಲ!
ಅಮುಕಿ ಹಿಡಿದವೆ ಬಾಯಿಯೇ ದೇಹವಾಗಿರುವ ಮಕರಾಕ್ಷ ಬಳಗ?
ಎಲ್ಲಿ ಹುಡುಕುವುದಿನ್ನೆಲ್ಲಿ ತಡಕಾಡುವುದು
ಆ ಹಸಿರು ಹೊಲ ಬಿದಿರು ಮೆಳೆ ಕೊಳಲ?
ತಂತಮ್ಮ ತಾರೆಗಳ ಕೂಡೆ ಪಿಸುನುಡಿಯ ಆಡಗೊಟ್ಟವರ?
***
(೩೧ ಮಾರ್ಚ್ ೨೦೧೨ಕ್ಕೆ ಮುಚ್ಚಲ್ಪಡುವ ಮಂಗಳೂರಿನ ಅತ್ರಿ ಬುಕ್ ಸೆಂಟರ್ ಕುರಿತು)
ರಾಧೇಶ್ ತೋಳ್ಪಾಡಿ ಎಸ್, ಉಪಾಧ್ಯಾಯರು, ನರಿಕೊಂಬು ಅಂಚೆ ಮತ್ತು ಗ್ರಾಮ, ಬಂಟ್ವಾಳ, ದಕ
***

ಇವಕ್ಕೆಲ್ಲಾ ಇನ್ನೂ ಬರುತ್ತಿರುವವಕ್ಕೆಲ್ಲಾ ನಾನಾದರೂ ಏನನ್ನಲಿ?

3 comments:

  1. ಪ್ರೀತಿಯ ಅಶೋಕ ವರ್ಧನರೇ! ತಮ್ಮ ಸ್ವಂತ ನಿರ್ಧಾರವನ್ನು ಗೌರವಿಸುವ ನನಗೆ, ತಮ್ಮ ಅತ್ರಿಯ ಮುಚ್ಚುವಿಕೆಯ ಬ್ಲಾಗ್ ಲೇಖನಗಳು ಒಂದು ರೀತಿಯ ಮನೋರಂಜನೆ ನೀಡುತ್ತಾ, ತಮ್ಮ 'ವ್ಯಕ್ತಿ ಚಿತ್ರಣವನ್ನು ' ನೀಡುತ್ತಾ ಇವೆ.
    ತಮ್ಮನ್ನು ಚಿಕ್ಕ ಬಾಲಕ ಆಗಿದ್ದಾಗ ಕೊಟ್ಟ ಮುಡಿಯ ಎನ್. ಸಿ. ಸಿ .ಕ್ಯಾಂಪಿನಲ್ಲಿ ಮಾನ್ಯ ಜಿ.ಟಿ.ಎನ್ ಅವರ ಜತೆ ಮೊದಲಬಾರಿ ಕಂಡಿದ್ದೆ. ಆನಂತರ ತಮ್ಮನ್ನು ನಾನು ಕಂಡದ್ದು ಕಳೆದ ವರ್ಷ ಕೆಲ ನಿಮಿಷಗಳ ಮಟ್ಟಿಗೆ ಮಾತ್ರ.
    ತಮ್ಮ ಹತ್ತಿರದ ಪರಿಚಯ ನನಗೆ ಇಲ್ಲ. ಇನ್ನು ಮುಂದಕ್ಕೂ ಇಂಥ ಲೇಖನಗಳನ್ನು ಮರೆಯದೆ ಪ್ರಕಟಿಸುತ್ತಾ ಇರಿ. ತಮ್ಮ ಬಹುಮುಖ ಪ್ರತಿಭೆ ಮತ್ತು ತಮ್ಮ ಸಾತ್ವಿಕತನ ಮತ್ತು ಸಾತ್ವಿಕ ಸಿಟ್ಟು ಇವುಗಳ ಅರಿವೂ ನಮಗಾಗುತ್ತದೆ.
    ತಮಗೆ ಸರಕಾರೀ ವಲಯದವರು " ನಿಷ್ಟುರ ವರ್ಧನ" ಎಂಬ ಅಡ್ಡ ಹೆಸರು ಇಟ್ಟಿದ್ದಾರಂತೆ - ಹೌದೇ?
    ಪ್ರೀತಿಯಿಂದ
    ಪೆಜತ್ತಾಯ

    ReplyDelete
  2. ಉತ್ತರಕ್ರಿಯೆಗೆ ಬರಲು ಸಾಧ್ಯವಾಗುತ್ತಿಲ್ಲ!
    ಮಾಲಾ

    ReplyDelete
  3. ಬಿ ರಾಮಭಟ್ಟರ, ರಾಧೇಶ್ ತೋಳ್ಪಾಡಿಯವರ
    ಅತ್ರಿ ಕುರಿತ ಚರಮ ಗೀತೆಗಳು ಚರ್ಮ ದಪ್ಪಗಿರುವವರನ್ನೂ ಕಲಕಿವೆ.
    ಪ್ರೀತಿಯ ಅಭಿವ್ಯಕ್ತಿಗೆ ಎಷ್ಟೊಂದು ಮುಖಗಳು!

    ReplyDelete